Thursday, December 15, 2016

ಕರಿಮರಿನಾಯಿ...................................ದ.ರಾ.ಬೇಂದ್ರೆ

ಕರಿಮರಿನಾಯಿ ಕುಂಯಿಗುಡುತಿತ್ತು
ಭಟ್ಟರ ಬಾಯಿ ಒಟಗುಡತಿತ್ತು.

ಸರಭರ ಮಳೆಯು ಸುರಿಯುತಲಿತ್ತು
ಕಾಲುವೆ ನೀರದು ಹರಿಯುತಲಿತ್ತು.

ಭೋರನೆ ಗಾಳಿಯು ಬೀಸುತಲಿತ್ತು
ತಬ್ಬಲಿ ಕುನ್ನಿಯು ಈಸುತಲಿತ್ತು.

ಬೆಚ್ಚನ ಮನೆಯಾ ಹೊಚ್ಚಲದೊಳಗೆ
ನಿಂತರು ಭಟ್ಟರು ಹಣಕುತ ಹೊರಗೆ.

ಮೆಟ್ಟಲನೇರಲು ಕುನ್ನಿಯು ಅತ್ತ
ಹವಣಿಸೆ, ಬಾಗಿಲು ಮುಚ್ಚಿತು ಇತ್ತ.

ಭಪ್ಪರೆ ಭಪ್ಪರೆ ಭಲರೆ ! ಭಟ್ಟರೋ
ಕಾಯ್ದರು ಮನೆಯನು ಏನು ದಿಟ್ಟರೋ !

ಕುನ್ನಿಯು ಒಳಗೇ ಬಂದೇನೆಂದಿತು;
ಭಟ್ಟರು, ಬಂದರೆ ಕೊಂದೇನೆಂದರು.

ಬೇಂದ್ರೆಯವರು ಬರೆದ ಏಳೇ ನುಡಿಗಳ ಪುಟ್ಟ ಕವನದಲ್ಲಿ ಕೇವಲ ನಲವತ್ತೆಂಟು ಪದಗಳಿವೆ. ಆದರೆ ಇದರಲ್ಲಿ ಹುದುಗಿದ ವ್ಯಂಗ್ಯ ಮಾತ್ರ ಪದಗಳನ್ನು ಮೀರಿದ ವ್ಯಂಗ್ಯವಾಗಿದೆ. ಒಂದು ಅಸಹಾಯಕ ನಾಯಿಕುನ್ನಿ ಹಾಗು ಓರ್ವ ಸುರಕ್ಷಿತ, ಸುಸ್ಥಾಪಿತ ಗೃಹಸ್ಥ ಇವರ ನಡುವೆ ನಡೆದ ಮಾತಿಲ್ಲದ ಹೋರಾಟ ಕವನದ ವಸ್ತುವಾಗಿದೆ. ಕವನವನ್ನು ಓದುತ್ತಿದ್ದಂತೆ, ಕರಿಮರಿನಾಯಿಯು ಕವನದಲ್ಲಿ ದಮನಿತರ ಪ್ರತೀಕವಾಗಿದೆ ಎನ್ನುವ ಭಾವನೆ ಬರುತ್ತದೆ. ಮಾತನ್ನು ಓರ್ವ ಓದುಗರು ಬೇಂದ್ರೆಯವರಿಗೆ ಕೇಳಿದ್ದರಂತೆ. ಬೇಂದ್ರೆ ಸಿಟ್ಟಿನಿಂದ, ‘ನಾನು ಮನುಷ್ಯನನ್ನು ನಾಯಿಗೆ ಹೋಲಿಸುವೆನೆ?’ ಎಂದು ಓದುಗರನ್ನು ಬೈದರಂತೆ ! ಏನೆ ಇರಲಿ, ಭಾವನೆ ಕವನದಲ್ಲಿ ದಟ್ಟವಾಗಿ ಹರಡಿರುವುದು ಮಾತ್ರ ಸತ್ಯ.

ಕರಿಮರಿನಾಯಿ ಕುಂಯಿಗುಡುತಿತ್ತು, ಭಟ್ಟರ ಬಾಯಿ ಒಟಗುಡತಿತ್ತು.’ ಎನ್ನುವ ಮೊದಲ ನುಡಿಯನ್ನು ನೋಡಿರಿ. ಕುಂಯಿಗುಡುತ್ತಿರುವುದು ನಾಯಿಮರಿ. ಅರ್ಥಾತ್ ಇದು ಬೆಳೆದು ಬಲಶಾಲಿಯಾದ ನಾಯಿಯಲ್ಲ. ಮಾನವನ ನೆರವನ್ನು ಬಯಸುತ್ತಿರುವ ಅಸಹಾಯಕ ಕುನ್ನಿ. ಜೋರಾಗಿ ಬೊಗಳಲು ಸಾಧ್ಯವಿಲ್ಲದ ದುರ್ಬಲ ಮರಿ ಇದು. ನಾಯಿಕುನ್ನಿಗೆ ಬೇಂದ್ರೆಯವರುಕರಿಎನ್ನುವ ವಿಶೇಷಣವನ್ನು ಬೇರೆ ಸೇರಿಸಿದ್ದಾರೆ. ಬಿಳಿಯರು ಏಶಿಯನ್ನರ ಹಾಗು ಆಫ್ರಿಕನ್ನರ ಮೇಲೆ ಮತ್ತು ಭಾರತೀಯ ಸವರ್ಣೀಯರು ಇಲ್ಲಿಯ ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ, ‘ಕರಿಎನ್ನುವ ವಿಶೇಷಣವು ಅರ್ಥಪೂರ್ಣವಾಗಿರಬೇಕಲ್ಲವೆ? ಆದರೆ ಸ್ವತಃ ಬೇಂದ್ರೆಯವರೆ ಇದನ್ನು ನಿರಾಕರಿಸಿದ್ದಾರೆ!

ಇನ್ನು ಭಟ್ಟರ ಬಾಯಿ ಒಟಗುಡತಿತ್ತುಎನ್ನುವ ಸಾಲು ಏನನ್ನು ಹೇಳುತ್ತದೆ? ಭಟ್ಟರು ಎನ್ನುವ ಪದವೇ, ಮನುಷ್ಯನು ಸಮಾಜದಲ್ಲಿ ಪ್ರತಿಷ್ಠಿತನು, ಸುರಕ್ಷಿತನು ಎನ್ನುವ ಅಭಿಪ್ರಾಯವನ್ನು ಮೂಡಿಸುತ್ತದೆ. ಇಂಥವನಿಗೆ ಯಾವದರಲ್ಲೂ ತೃಪ್ತಿ ಇಲ್ಲ. ‘ತನಗೆ ಇನ್ನಷ್ಟು ಸಿಗಬೇಕಾಗಿತ್ತುಎನ್ನುವುದು ಈತನ ಕೊರಗು. ಆದುದರಿಂದಲೇ ಈತನು ಯಾವಾಗಲೂ ಒಟಗುಡತ್ತಿರುತ್ತಾನೆ. ‘ಒಟಗುಡುವುದಕ್ಕೆಇನ್ನೂ ಒಂದು ಅರ್ಥವನ್ನು ಹೇಳಬಹುದು. ಮಂತ್ರ ಹೇಳುವಾಗ, ಅರ್ಥ ಹಾಗು ಲಕ್ಷ್ಯವಿಲ್ಲದೆ ಹೇಳುತ್ತಿದ್ದರೆ ಅದು ಒಟಗುಡುವಿಕೆಯಾಗುತ್ತದೆ. ಸದಾ ಮಂತ್ರವನ್ನು ಹೇಳುತ್ತಿರುವ ಭಟ್ಟರು ಅದನ್ನೇ ಮಾಡುತ್ತಿದ್ದಾರೆ
.

ಕವನದ ಎರಡು ಮುಖ್ಯ ಪಾತ್ರಗಳ ಚಿತ್ರಣವನ್ನು ಕೊಟ್ಟ ಬೇಂದ್ರೆಯವರು, ಇನ್ನು ಅಲ್ಲಿಯ ಪರಿಸ್ಥಿತಿಯ ಚಿತ್ರಣವನ್ನು ಕೊಡುತ್ತಾರೆ:
ಸರಭರ ಮಳೆಯು ಸುರಿಯುತಲಿತ್ತು
ಕಾಲುವೆ ನೀರದು ಹರಿಯುತಲಿತ್ತು.
ಭೋರನೆ ಗಾಳಿಯು ಬೀಸುತಲಿತ್ತು
ತಬ್ಬಲಿ ಕುನ್ನಿಯು ಈಸುತಲಿತ್ತು.’

ಜೋರಾಗಿ ಬೀಳುತ್ತಿರುವ ಮಳೆಯಿಂದಾಗಿ ರಸ್ತೆಬದಿಯ ಚರಂಡಿ ತುಂಬಿ ಹರಿಯುತ್ತಲಿದೆ. ಅದೇ ಸಮಯದಲ್ಲಿ ಗಾಳಿಯೂ ಸಹ ಬಿರ್ರನೆ ಬೀಸುತ್ತಲಿದೆ. ಅಂತಹದರಲ್ಲಿ ಅನಾಥ ಮರಿಯು ಚರಂಡಿಯಲ್ಲಿ ಒದ್ದಾಡುತ್ತಿದೆ. ಕೆಲವು ಕವಿಸ್ವಭಾವದ ಓದುಗರು ಅಥವಾ ವಿಮರ್ಶಕರು ಸಾಲುಗಳು ಹೀಗಿದ್ದರೆ ಹೆಚ್ಚು ಸಮರ್ಪಕವಾಗಿರುತ್ತಿದ್ದವೇನೊ ಎಂದು ಕಲ್ಪಿಸುತ್ತಾರೆ:
 ಸರಭರ ಮಳೆಯು ಸುರಿಯುತಲಿತ್ತು,
ಭೋರನೆ ಗಾಳಿಯು ಬೀಸುತಲಿತ್ತು,
ಕಾಲುವೆ ನೀರದು ಹರಿಯುತಲಿತ್ತು,
ತಬ್ಬಲಿ ಕುನ್ನಿಯು ಈಸುತಲಿತ್ತು.’

ಹೀಗೆ ಮಾರ್ಪಡಿಸಿಕೊಂಡ ರಚನೆಯಲ್ಲಿ ಮೊದಲ ಮೂರು ಸಾಲುಗಳು ಸಂದರ್ಭದ ವಿವರಣೆಯನ್ನು ಕೊಟ್ಟರೆ, ನಾಲ್ಕನೆಯ ಸಾಲು ಕುನ್ನಿಯ ಪರಿಸ್ಥಿತಿಯನ್ನು ವಿವರಿಸುತ್ತದೆ ಎನ್ನುವುದು ಇವರ ಅಭಿಪ್ರಾಯ. ಆದರೆ, ಇದು ತಪ್ಪು ಅಭಿಪ್ರಾಯವೆನ್ನುವುದು ಸ್ಪಷ್ಟವಾಗಿದೆ. ಮಳೆ ಸುರಿಯುತ್ತಿರುವದರಿಂದಲೇ, ಚರಂಡಿಯು ತುಂಬಿ ಹರಿಯುತ್ತಿದೆ, ಹಾಗು ಕುನ್ನಿಯು ಪ್ರವಾಹದ ವಿರುದ್ಧ ಮಾತ್ರವಲ್ಲ, ಎದುರಿಸಲು ಅಸಾಧ್ಯವಾದ ಗಾಳಿಯ ವಿರುದ್ಧ ಈಸುತ್ತಿದೆ ಎನ್ನುವುದು
ಬೇಂದ್ರೆಯವರ ರಚನೆಯಲ್ಲಿ ಸ್ಪಷ್ಟವಾದಂತೆ, ಬದಲಾಯಿಸಿದ ರಚನೆಯಲ್ಲಿ ಆಗಲಾರದು. ವರಕವಿಯ ರಚನೆ ಹಾಗು ಸಾಂದರ್ಭಿಕ ಕವಿಗಳ ರಚನೆಗಳಲ್ಲಿ ಎಷ್ಟು ವ್ಯತ್ಯಾಸವಿರುತ್ತದೆ!

ಇಲ್ಲಿಯವರೆಗೆ, ನಿಸರ್ಗವಿಕೋಪದ ಹಾಗು ಎರಡು ಮುಖ್ಯ ಪಾತ್ರಗಳ ವರ್ಣನೆಯಾಯಿತು. ಇದೀಗ ಪಾತ್ರಗಳ ವರ್ತನೆಯ ವರ್ಣನೆಯನ್ನು ನೋಡುತ್ತೇವೆ:
ಬೆಚ್ಚನ ಮನೆಯಾ ಹೊಚ್ಚಲದೊಳಗೆ
ನಿಂತರು ಭಟ್ಟರು ಹಣಕುತ ಹೊರಗೆ.
ಮೆಟ್ಟಲನೇರಲು ಕುನ್ನಿಯು ಅತ್ತ
ಹವಣಿಸೆ, ಬಾಗಿಲು ಮುಚ್ಚಿತು ಇತ್ತ.’

ಭಟ್ಟರು ತಮ್ಮ ಭದ್ರಲೋಕದಲ್ಲಿ ನಿಂತಿದ್ದಾರೆ. ಅಧೋಲೋಕವನ್ನು ಅವರು ಕೇವಲ ಹಣಿಕಿ ಹಾಕಿ ನೋಡುತ್ತಾರೆ, ಅಷ್ಟೆ. ಲೋಕ ಅವರ ಅನುಕಂಪದ ವ್ಯಾಪ್ತಿಗೆ ಬರುವುದಿಲ್ಲ. ಆದುದರಿಂದಲೇ ಕುನ್ನಿಯು ಮಳೆಯ ಹೊಡೆತದಿಂದ ತಪ್ಪಿಸಿಕೊಳ್ಳಲು, ಭಟ್ಟರ ಕೋಟೆಯ ಒಳಗೆ ಸೇರಿಕೊಳ್ಳಲು ಪ್ರಯತ್ನಿಸಿದರೆ, ಭಟ್ಟರು ಧಡಾರನೆ ಬಾಗಿಲನ್ನು ಮುಚ್ಚುತ್ತಾರೆ!

ಕವನದ ಕೊನೆಯ ಎರಡು ನುಡಿಗಳಲ್ಲಿ ಕವಿಯು ಪರಿಸ್ಥಿತಿಯ ವ್ಯಂಗ್ಯವನ್ನು ತನ್ನ ವ್ಯಂಗ್ಯದ ಮೂಲಕ ವಿಶದೀಕರಿಸುತ್ತಾನೆ:
ಭಪ್ಪರೆ ಭಪ್ಪರೆ ಭಲರೆ ! ಭಟ್ಟರೋ
ಕಾಯ್ದರು ಮನೆಯನು ಏನು ದಿಟ್ಟರೋ !
ಕುನ್ನಿಯು ಒಳಗೇ ಬಂದೇನೆಂದಿತು;
ಭಟ್ಟರು, ಬಂದರೆ ಕೊಂದೇನೆಂದರು.’

ತನ್ನ ಸ್ವಾರ್ಥವನ್ನು ರಕ್ಷಿಸಿಕೊಳ್ಳುವ ಭಟ್ಟರಿಗೆ ಕವಿದಿಟ್ಟರುಎಂದು ಲೇವಡಿ ಮಾಡುತ್ತಿದ್ದಾನೆ. ಕರಿಮರಿನಾಯಿಯನ್ನು ತಮ್ಮ ಭದ್ರಲೋಕದ ಹೊರಗಿಡುವ ಪ್ರಯತ್ನದಲ್ಲಿ ಭಟ್ಟರು ಅದನ್ನು ಕೊಲ್ಲುವದಕ್ಕೂ
ಹೇಸುವವರಲ್ಲ ಎನ್ನುವಲ್ಲಿ ಕವನ ಕೊನೆಗೊಳ್ಳುತ್ತದೆ.

ಸರಳ ಪದಗಳ ಒಂದು ಪುಟ್ಟ ಕವನದಲ್ಲಿ ಏನೆಲ್ಲ ಅರ್ಥ ಹುದುಗಿದೆ, ಅಲ್ಲವೆ?