Tuesday, June 2, 2015

ಪದವಿನೋದ-೩ನೆಯ್ ಎನ್ನುವ ಪದದಿಂದ ನೆಯ್ಕಾರ ಎನ್ನುವ ಪದವು ಬಂದಿದೆ ಎನ್ನುವದು ನಮಗೆಲ್ಲರಿಗೂ ಗೊತ್ತಿದೆ. ಆದರೆ ನೆಯ್ ಪದದ ಅರ್ಥವು weave ಎನ್ನುವದಕ್ಕಷ್ಟೇ ಸೀಮಿತವಾಗಿಲ್ಲ. ಇನ್ನೂ ಕೆಲವು ಅರ್ಥಗಳು ನೆಯ್ ಪದಕ್ಕೆ ಇವೆ. ಉದಾಹರಣೆಗೆ ‘ಎಣ್ಣೆ’ ಎನ್ನುವ ಪದವನ್ನು ಪರಿಶೀಲಿಸಿರಿ. ಎಣ್ಣೆ ಪದವು ‘ಎಳ್+ನೆಯ್’ ಪದಗಳ ಸಂಯುಕ್ತ ರೂಪವಾಗಿದೆ. ಎಳ್ಳನ್ನು ಹಿಂಡಿ ಎಣ್ಣೆಯನ್ನು ತೆಗೆಯುವದು ಬಹಳ ಹಳೆಯ ಪದ್ಧತಿ. ಕಾಲಕ್ರಮೇಣ ಯಾವುದೇ ಪದಾರ್ಥವನ್ನು ಹಿಂಡಿ ತೆಗೆದರೂ ಅದಕ್ಕೆ ಎಣ್ಣೆ ಎಂದೇ ಕರೆಯುವದು ರೂಢಿಯಾಯಿತು. ಉದಾಹರಣೆಗೆ ಕೊಬ್ಬರಿ ಎಣ್ಣೆ, ಕುಸುಬಿ ಎಣ್ಣೆ, ಸೇಂಗಾ ಎಣ್ಣೆ ಇತ್ಯಾದಿ. ಆದುದರಿಂದ ಇಲ್ಲಿ ನೆಯ್ ಪದವನ್ನು ಹಿಂಡು ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಇದರಂತೆ ‘ಬೆಣ್ಣೆ’ ಎನ್ನುವ ಪದವು ‘ಬೆಳ್+ನೆಯ್’ ಎನ್ನುವುವರ ಸಂಯುಕ್ತ ರೂಪವಾಗಿದೆ. ಇಲ್ಲಿ ನೆಯ್ ಪದದ ಅರ್ಥ ‘ಕಡೆಯುವುದು’ ಎಂದಾಗುತ್ತದೆ.  ಕನ್ನಡದ ಬೆಣ್ಣೆಯು ತಮಿಳಿನಲ್ಲಿ ವೆಣ್ಣೆಯಾಗಿಯೇ ಉಳಿದಿದೆ. ಈ ವೆಣ್ ಅಥವಾ ‘ವೆಳ್’ದ ವ್ಯಾಪಾರಿಗಳೇ ವೆಳ್ಳರು. ತಮಿಳುನಾಡಿನಲ್ಲಿರುವ ವೆಳ್ಳೂರು (Vellore) ಇದು ಒಂದು ಕಾಲದಲ್ಲಿ ಬೆಣ್ಣೆ ವ್ಯಾಪಾರಿಗಳ ಊರು! ನಮ್ಮ ಬೆಳಗಾವಿಯೂ ಸಹ ‘ವೆಳಗಾವಿ’ಯೇ. ತಮಿಳಿನಲ್ಲಿ ‘ಊರು’ ಪದವೇ ಉಳಿದುಕೊಂಡಿದ್ದರೆ, ಕನ್ನಡದಲ್ಲಿ ಊರು ಪದದ ಬದಲಾಗಿ ‘ಗಾವಿ (=ಗ್ರಾಮ)’ ಪದವು ಬಂದಿದೆ. ಇದು ಆರೇ (=ಆರ್ಯ) ಜನಾಂಗದ ಸಂಪರ್ಕದ ಪರಿಣಾಮ. ಆದರೇನು, ಸಂಸ್ಕೃತಾಭಿಮಾನಿ ಪಂಡಿತರು ಬೆಳಗಾವಿಗೆ ‘ವೇಣುಗ್ರಾಮ’ ಎನ್ನುವ ನಿರುಕ್ತಿಯನ್ನು ಎಳೆದಾಡಿ ಹಚ್ಚುತ್ತಾರೆ!
(ಟಿಪ್ಪಣಿ: ರಾಮಪ್ರಸಾದರು ತಮ್ಮ ಪ್ರತಿಕ್ರಿಯೆಯಲ್ಲಿ Vellore ಇದರ ಸರಿಯಾದ ಹೆಸರು ವೇಲೂರು ಎಂದೂ, ಇದು ವೇಲಾಯುಧನಾದ ಮುರುಗನ್ ಮೂಲಕ ಬಂದಿದೆ ಎಂದೂ ತಿಳಿಸಿದ್ದಾರೆ. ಅವರಿಗೆ ಧನ್ಯವಾದಗಳು. ಆದರೆ ನನ್ನ ಅಭಿಪ್ರಾಯವು ರೂಪಿತವಾಗಿರುವ ಕಾರಣ ಹೀಗಿದೆ:

ನನ್ನ ಅಭಿಪ್ರಾಯವು ಶಂ.ಬಾ. ಜೋಶಿಯವರು ಹೇಳುವ ಸಿದ್ಧಾಂತದ ಮೇಲೆ ರೂಪಿತವಾಗಿದೆ. ಜೋಶಿಯವರ ಹೇಳಿಕೆ ಹಿಗಿದೆ:
“ಮೂಲ ಹಾಲುಮತದವರಲ್ಲಿ ವಿಳ್-ವೆಳ್ಳರೆಂದೂ ನೆಯ್‍ಯವರು ನೆಯ್ಕಾರರೆಂದೂ ಎರಡೂ ಪಂಗಡಗಳಿಗೆ ಹೆಸರು ಬರಲು ಅವರು ಮಾಡಿಕೊಂಡ ವಿಳುದು ಮತ್ತು ನೆಯ್ ವ್ಯಾಪಾರ-ವ್ಯವಹಾರದ ವೈಶಿಷ್ಟ್ಯವೇ ಕಾರಣವಾಗಿರಬೇಕೆಂದು ತೋರುತ್ತದೆ……ವಿಳ್‍ದ ವ್ಯಾಪಾರಿಗಳು ವಿಳ್ಳರು-ವೆಳ್ಳರು; ಇವರೇ ತಮಿಳುನಾಡಿನ ಅಡಿಗಲ್ಲು…”
ಆದುದರಿಂದ ವಿಳ್‍ದ ಮೂಲಕ ವೇಳೂರು = ವೇಲೂರು ಬಂದಿರಬಹುದು. ಅಥವಾ ಇದು ವೇಲಾಯುಧನ ಮೂಲಕವೂ ಬಂದಿರುವ ಸಾಧ್ಯತೆ ಇದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ರಾಮಪ್ರಸಾದರಿಗೆ ಧನ್ಯವಾದಗಳು.) 

ನಮ್ಮ ಹಟ್ಟಿಕಾರರು (ಅಂದರೆ ಆರ್ಯಪೂರ್ವ ಕನ್ನಡಿಗರು) ಆಕಳನ್ನು ಹಾಗು ಕುರಿಗಳನ್ನು ಸಾಕುತ್ತಿದ್ದರಷ್ಟೆ. ಇವುಗಳ ಹಾಲಿನಿಂದ ಬೆಣ್ಣೆಯನ್ನು ಕಡೆದು ತೆಗೆಯುವುದು ಇವರ ಪ್ರಥಮ ಉದ್ಯೋಗವಾಗಿರಬಹುದು. ಈ ಸಂಶೋಧನೆಯನ್ನು ಮಾಡಿದವರು ಹೆಣ್ಣುಮಕ್ಕಳೇ ಆಗಿರುವುದು ಸಹಜವಾಗಿದೆ. ಗಂಡುಗಳು ಬೇಟೆಗಾಗಿ ಅಡವಿಯಲ್ಲಿ ಸಂಚರಿಸುತ್ತಿದ್ದಾಗ, ತಮ್ಮ ಗೂಡುಗಳ ಎದುರಿನಲ್ಲಿ ತೋಟಗಾರಿಕೆಯನ್ನು ಪ್ರಾರಂಭಿಸಿದವರೂ ಸಹ ಹೆಣ್ಣುಮಕ್ಕಳೇ. ಇವರು ಇಳೆಯನ್ನು (=ಭೂಮಿಯನ್ನು) ಕಡೆದು ಅಲ್ಲಿ ಗಡ್ಡೆಗಳನ್ನು ನೆಟ್ಟು ತೋಟಗಾರಿಕೆಯನ್ನು ಪ್ರಾರಂಭಿಸಿದರು. (ಇಳೆ ಪದವು ಸಂಸ್ಕೃತ ಪದವಲ್ಲ, ಇದು ಕನ್ನಡ ಪದ ಎನ್ನುವುದು ನಿಮ್ಮ ಗಮನದಲ್ಲಿರಲಿ.) ಆದುದರಿಂದಲೇ ವರಕವಿ ಬೇಂದ್ರೆಯವರು ತಮ್ಮ ‘ಗೃಹಿಣಿ’ ಎನ್ನುವ ಕವನದಲ್ಲಿ “ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ”ಎಂದು ಹಾಡಿದ್ದಾರೆ. ತೋಟಗಾರಿಕೆಯ ಮುಂದಿನ ಭಾಗವಾಗಿ ಒಕ್ಕಲುತನ ಪ್ರಾರಂಭವಾದಾಗ ನೆಲವನ್ನು ಕಡೆಯಲು ‘ನೇಗಿಲಿ’ನ ಅವಶ್ಯಕತೆ ಕಂಡು ಬಂದಿತು. ‘ನೇಗಿಲು’ ಪದವು ‘ನೆಯ್+ಇಲ್’ ಅಂದರೆ ‘ಇಳೆ(=ಭೂಮಿ)ಯನ್ನು ಕಡೆ’ ಎನ್ನುವ ಅರ್ಥವನ್ನು ಧರಿಸಿದೆ.

ಆದುದರಿಂದ ಒಂದು ‘ನೆಯ್’ ಪದವು ನೆಯ್ಕಾರರಿಗೆ, ಬೆಣ್ಣೆ ಮಾರಾಟ ಮಾಡುವವರಿಗೆ ಹಾಗು ನೇಗಿಲಯೋಗಿ ಒಕ್ಕಲಿಗರಿಗೆ ಜನ್ಮ ಕೊಟ್ಟಿದೆ. ನೇಗಿಲಿಗೆ ಹಲ ಎಂದೂ ಕರೆಯುತ್ತಾರೆ. ನೇಗಿಲನ್ನು ಹೆಗಲ ಮೇಲೆ ಹೊತ್ತ ಬಲರಾಮನು ಹಲಾಯುಧನಾದ. ನಮ್ಮ ಕೃಷ್ಣ-ಕನ್ನಯ್ಯನ ಅಣ್ಣನಾದ ಈ ಬಲರಾಮನು ರೇವಾ(=ಈಗಿನ ನರ್ಮದಾ) ನದಿಯ ದಂಡೆಯ ಮೇಲಿದ್ದ ರೇವಾಪಟ್ಟಣದ ಅರಸುಕುವರಿ ರೇವತಿಯನ್ನು ಮದುವೆಯಾದ. ಕನ್ನಡ ನಾಡು ನರ್ಮದೆಯಿಂದ ಕಾವೇರಿಯವರೆಗೂ ಹಬ್ಬಿತ್ತು ಎನ್ನುವುದನ್ನು ಮುಳಿಯ ತಿಮ್ಮಪ್ಪಯ್ಯ ಹಾಗು ಶಂ. ಬಾ. ಜೋಶಿಯವರು ಸಿದ್ಧ ಪಡಿಸಿದ್ದಾರೆ.

ಕನ್ನಡ ನಾಡಿನಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೬೬ ಊರುಗಳಿವೆ. ಉದಾಹರಣೆಗೆ ಹಲಕೂರು, ಹಲಗತ್ತಿ, ಹಲಕುಂಡಿ, ಹಲಗೇರಿ, ಹಲಗಾ, ಹಲಸಂಗಿ, ಹಲಗಣಿ ಇತ್ಯಾದಿ. ಈ ಹಲಗಣಿ ಎನ್ನುವ ಊರಿನ ಹೊರಗೆ ಹನುಮಂತ ದೇವರ ಒಂದು ಗುಡಿಯಿದೆ. (ಊರು ಬೆಳೆದ ಮೇಲೆ ಅದೀಗ ಊರ ಒಳಗೇ ಬಂದಿದೆ.) ಈತನಿಗೆ ‘ಹಲಗಣೀಶ (=ಹಲಗಣಿ ಊರಿನ ಈಶ)’ ಎನ್ನುವ ಅಭಿಧಾನವಿದೆ. ಅನೇಕರು ಹಲಗಣೀಶನನ್ನು ‘ಹಲಗಣೇಶ’ ಎಂದು ತಪ್ಪಾಗಿ ಭಾವಿಸಿ ಹಣಮಪ್ಪನನ್ನು ಗಣಪ್ಪನನ್ನಾಗಿ ಮಾಡಿದ್ದಾರೆ! ಈ ಊರುಗಳು ನೇಗಿಲಿನ ತಯಾರಿಕೆಗೆ ಪ್ರಸಿದ್ಧವಾಗಿರಬಹುದು ಎನ್ನುವ ಕಾರಣದಿಂದ, ಅವುಗಳಲ್ಲಿ ‘ಹಲ’ ಪದವು ಇರಬಹುದೇನೊ?

ಇಂಗ್ಲೀಶಿನಲ್ಲಿ furlong ಎನ್ನುವ ಅಳತೆ ಇದೆಯಷ್ಟೆ. ನೇಗಿಲಿನಿಂದ ಒಂದು furrow ಮಾಡುವಾಗ ಉಂಟಾಗುವ ಅಳತೆಯೇ furlong=furrow+long. ಇದರಂತೆ, ನಮ್ಮಲ್ಲಿ ಹರದಾರಿ ಅಂದರೆ ಒಂದು ದಿನದಲ್ಲಿ ಹರಗಬಹುದಾದ ದಾರಿ ಎನ್ನುವ ಕಾರಣದಿಂದ ಬಂದಿರಬಹುದೆ? (ಒಂದು ಹರದಾರಿ=೪ಕಿಮೀ ಸುಮಾರಾಗಿ). ತಿಳಿದವರು ದಯವಿಟ್ಟು ಈ ವಿಷಯದ ಮೇಲೆ ಬೆಳಕು ಚೆಲ್ಲಲು ವಿನಂತಿಸುತ್ತೇನೆ.

ಟಿಪ್ಪಣಿ :  ನಾನು ದ್ರವಿಡರು ಎನ್ನುವ ಪದವನ್ನು ಬಳಸದೆ, ‘ಆರ್ಯಪೂರ್ವ ಕನ್ನಡಿಗರು’  ಎನ್ನುವ ಪದವನ್ನು ಬಳಸುವುದಕ್ಕೆ ಕೆಲವರು ಹುಬ್ಬೇರಿಸಬಹುದು. ಈ ವಿಷಯಕ್ಕೆ ನನ್ನ ಸಮಾಧಾನ ಈ ರೀತಿಯಾಗಿದೆ:
ಒಂದು ಕಾಲದಲ್ಲಿ ಕನ್ನಡ ಹಾಗು ತಮಿಳು ಭಾಷೆಗಳು ಏಕರೂಪವಾಗಿದ್ದವು. ನಂತರ ಅವು ವಿಭಿನ್ನವಾಗತೊಡಗಿದವು. ಈ ಮೊದಲಿನ ಭಾಷೆಯು ಎರಡೂ ಭಾಷೆಗಳಿಗೆ ಅಂದರೆ ಕನ್ನಡ ಹಾಗು ತಮಿಳು ಭಾಷೆಗಳಿಗೆ ತಾಯಿ ಅಲ್ಲವೆ? ಕನ್ನಡ ಭಾಷೆಯು ಸಂಸ್ಕೃತದ ಸಂಪರ್ಕದಿಂದ ವಿಸ್ತಾರವಾಯಿತು, ಆಧುನಿಕವಾಯಿತು; ತಮಿಳು ಆಗಲಿಲ್ಲ. ಅಂದ ಮೇಲೆ ಆರ್ಯಪೂರ್ವ ಭಾಷೆಗೆ ದ್ರಾವಿಡ ಭಾಷೆ ಎನ್ನದೆ, ‘ಕನ್ನಡ ತಾಯಿ’ ಎಂದು ನಾನು ಕರೆಯುವದರಲ್ಲಿ ಏನು ತಪ್ಪಿದೆ?

8 comments:

Ramaprasad KV said...

ವೆಲ್ಲೂರಿನ ಬಗ್ಗೆ ನೀವು ಮಾಡಿರುವ ವ್ಯುತ್ಪತ್ತಿಗೆ ಇನ್ನೂ ಏನಾದರೂ ಆಧಾರವಿದೆಯೇ? ಮೊದಲನೆಯದಾಗಿ, ತಮಿಳಿನಲ್ಲಿ ಆ ಊರಿಗೆ ವೇಲೂರು ಎಂದು ಹೆಸರೇ ಹೊರತು, ಒತ್ತಕ್ಷರ ಕೂಡಿದ ವೆಲ್ಲೂರು ಅಲ್ಲ. ಮತ್ತೆ, ಲ ಕಾರದ ಬದಲಿಗೆ ಳಕಾರವನ್ನೂ, ಳಕಾರದ ಬದಲಿಗೆ ಲಕಾರವನ್ನೂ ಬಳಸುವುದು ಸಂಸ್ಕೃತಮೂಲದ ಪದಗಳು ಕನ್ನಡ/ಮರಾಠಿ/ತಮಿಳು ಮೊದಲಾದ ಭಾಷೆಗಳಿಗೆಬಂದಾಗ ಆಗುವುದು ಹೆಚ್ಚೇ ಹೊರತು (ಕಮಲ -> ಕಮಳ, ಜಲ -> ಜಳ, ಮಂಜುಲ ->ಮಂಜುಳ ಹೀಗೆ) ಕನ್ನಡದ್ದೇ/ತಮಿಳಿನದೇ ಪದಗಳು ಇದ್ದಾಗ ಹೀಗಾಗುವುದು ಕಡಿಮೆ (ಇಲ್ಲವೇ ಇಲ್ಲವೆಂದು ವಾದಿಸುತ್ತಿಲ್ಲ, ಏಕೆಂದರೆ ಅದಕ್ಕೆ ಇನ್ನೂ ಸ್ವಲ್ಪ ಯೋಚಿಸಬೇಕು!).

ಈ ಊರಿನ ಹೆಸರನ್ನು "ವೇಲ್" ಗೆ (ಅಂದರೆ ಮುರುಗನ ಕೈಯಲ್ಲಿರುವ ಶಕ್ತ್ಯಾಯುಧ) ಸಂಬಂಧ ಪಟ್ಟಂತೆ ಬಂದ ಹೆಸರು ವೇಲೂರು ಎಂದು ತಿಳಿಯುವ ಪರಿಪಾಠವಿದೆ. ಇನ್ನು ಹಳೆಯ ಶಾಸನಗಳಲ್ಲಿ ಈ ಊರಿಗೆ ಎಂದಾದರೂ ವೆಳ್ಳೂರು ಎಂಬ ಹೆಸರಿದ್ದಿದ್ದರ ಬಗ್ಗೆ ಮಾಹಿತಿ ಇದೆಯೇ? ಹಾಗೇನಾದರೂ ಇದ್ದಲ್ಲಿ ನಿಮ್ಮ ಹೈಪಾಥಿಸಿಸ್ ಗೆ ಸ್ವಲ್ಪ ಬಲ ಸಿಕ್ಕಬಹುದು.

Swarna said...

ಶಬ್ದ ವ್ಯುತ್ಪತ್ತಿಯ ಬಗ್ಗೆ 'ನೇಯ್' ಬದುಕಿನಲ್ಲಿ ನೇಯ್ದುಕೊಂಡಿರುವ ಬಗೆಯನ್ನು ಸೋಗಸಾಗಿ ಹೇಳಿದ್ದಿರಿ.

sunaath said...

ರಾಮಪ್ರಸಾದರೆ,
ನೀವು ಹೇಳುವುದು ಸರಿ. ಮುರುಗನ್ ದೇವನು ತನ್ನ ಕೈಯಲ್ಲಿ ವೇಲ ಎನ್ನುವ ಆಯುಧವನ್ನು ಹಿಡಿದುಕೊಂಡು ಇಲ್ಲಿ ಪ್ರತ್ಯಕ್ಷನಾದನು ಎನ್ನುವ ಐತಿಹ್ಯವಿದೆ. ಆದುದರಿಂದ ಈ ಸ್ಥಳವು ವೇಲೂರು ಎನ್ನುವ ಹೆಸರನ್ನು ಪಡೆಯಿತು ಎಂದು ಹೇಳಲಾಗುತ್ತಿದೆ. ಆದರೆ ನಾನು ಪೌರಾಣಿಕ ಐತಿಹ್ಯಕ್ಕಿಂತಲೂ ಸಮಾಜಶಾಸ್ತ್ರೀಯ ಸಾಧ್ಯತೆಗಳಿಗೆ ಪ್ರಾಶಸ್ತ್ಯ ಕೊಡಲು ಬಯಸುತ್ತೇನೆ. ನನ್ನ ಅಭಿಪ್ರಾಯವು ಶಂ.ಬಾ. ಜೋಶಿಯವರು ಹೇಳುವ ಸಿದ್ಧಾಂತದ ಮೇಲೆ ರೂಪಿತವಾಗಿದೆ. ಜೋಶಿಯವರ ಹೇಳಿಕೆ ಹಿಗಿದೆ:
“ಮೂಲ ಹಾಲುಮತದವರಲ್ಲಿ ವಿಳ್-ವೆಳ್ಳರೆಂದೂ ನೆಯ್ಯವರು ನೆಯ್ಕಾರರೆಂದೂ ಎರಡೂ ಪಂಗಡಗಳಿಗೆ ಹೆಸರು ಬರಲು ಅವರು ಮಾಡಿಕೊಂಡ ವಿಳುದು ಮತ್ತು ನೆಯ್ ವ್ಯಾಪಾರ-ವ್ಯವಹಾರದ ವೈಶಿಷ್ಟ್ಯವೇ ಕಾರಣವಾಗಿರಬೇಕೆಂದು ತೋರುತ್ತದೆ……ವಿಳ್ದ ವ್ಯಾಪಾರಿಗಳು ವಿಳ್ಳರು-ವೆಳ್ಳರು; ಇವರೇ ತಮಿಳುನಾಡಿನ ಅಡಿಗಲ್ಲು…”
ಏನೇ ಇರಲಿ, ವೆಲ್ಲೂರು (=ವೇಲೂರು) ಇದು ವೇಲಾಯುಧನ ಮೂಲಕವೂ ಬಂದಿರುವ ಸಾಧ್ಯತೆ ಇದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ.
ನಿಮ್ಮ ಅಭಿಪ್ರಾಯವನ್ನು ಇದೀಗ ಮೂಲಲೇಖನದಲ್ಲಿ ಸೇರಿಸಿದ್ದೇನೆ. ಧನ್ಯವಾದಗಳು.

sunaath said...

ಸ್ವರ್ಣಾ,
ನಿಮ್ಮ ಸ್ಪಂದನೆಗಾಗಿ ತುಂಬಾ ಧನ್ಯವಾದಗಳು.

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಪದ ವಿನೋದದಂತಹ ಒಂದು ಲೇಖನ ಬರೆಯುವದಿಕ್ಕೆ ನೀವು ಎಷ್ಟು ಅಧ್ಯಯನ ಮಾಡಿರಬಹುದು !
ನಿಮ್ಮ ಅವಿರತ ಶ್ರಮಕ್ಕೆ ಒಂದು ಶರಣು.

sunaath said...

ಅಪ್ಪ-ಅಮ್ಮ,
ಇದು ಹೆಚ್ಚಿನ ಅಧ್ಯಯನದ ಫಲ ಏನಲ್ಲ. ಅನೇಕ ದಿಕ್ಕುಗಳಿಂದ ಹಾರಿ ಬಂದ ತುಣುಕುಗಳ ಜೋಡಣೆ ಅಷ್ಟೆ!

Anonymous said...

ತೆಲುಗಿನಲ್ಲಿ ನೆಯ್ ಎಂದರೆ ತುಪ್ಪ. ಹಾಗಾಗಿ ಎಣ್ಣೆಯಲ್ಲಿನ ನೆಯ್ ಬಂದಿರುವುದು "ನೆಯ್" ಎನ್ನುವ ಕ್ರಿಯಾ ಪದದಿಂದ ಅಲ್ಲಾ ಅಂತ ನನ್ನ ಅನುಮಾನ. ನೆಯ್ ಪದದ ಮೂಲ ಅರ್ಥ "ಕೊಬ್ಬು" ಎಂದಿರಬಹುದೇನೋ..

ಅಂದ ಹಾಗೆ ಕನ್ನಡ ಮೇಷ್ಟ್ರಾಗಿದ್ದ ನಮ್ಮ ತಂದೆ ಹೇಳುತ್ತಿದ್ದ ವಿಷಯ ನೆನಪಾಯಿತು:

ಪ್ರಶ್ನೆ: ವ್ಯಾಕರಣಕ್ಕೆ ಸಂಬಂಧ ಪಟ್ಟಂತೆ ಎಣ್ಣೆಗೂ, ಬೆಣ್ಣೆಗೂ ಏನು ವ್ಯತ್ಯಾಸ ?
ಉತ್ತರ : ಎಣ್ಣೆ ( ಎಳ್ಳಿನ ನೆಯ್ ) ಷಷ್ಟಿ ತತ್ಪುರುಷ ಸಮಾಸ, ಬೆಣ್ಣೆ ( ಬಿಳಿಯಾದ ನೆಯ್ ) ವಿಶೇಷಣ ಪೂರ್ವಪದ ಕರ್ಮಧಾರೇಯ ಸಮಾಸ !

sunaath said...

Anonymusರೆ,
ನೀವು ಹೇಳುವುದು ಸರಿ ಇರಬಹುದು. ಎಣ್ಣೆ ಅಂದರೆ ಎಳ್ಳಿನ ಕೊಬ್ಬು ಹಾಗು ಬೆಣ್ಣೆ ಅಂದರೆ ಬಿಳಿಯ ಕೊಬ್ಬು ಅರ್ಥಾತ್ ಬೆಣ್ಣೆ ಎಂದು ಇರುವ ಸಂಭಾವ್ಯತೆ ಇದೆ. ಈ ವಿಷಯದಲ್ಲಿ ಹೆಚ್ಚಿನ ವಿಶ್ಲೇಷಣೆ ಆಗಬೇಕು. ನೀವು ಕೊಟ್ಟಿರುವ ಸಮಸ್ತಪದಗಳು ಸ್ವಾರಸ್ಯಪೂರ್ಣವಾಗಿವೆ.