Saturday, March 11, 2017

ನನ ಹೇಣ್ತೆ ನನ ಹೇಣ್ತೆ…………ಶಿಶುನಾಳ ಶರೀಫರು



ನನ ಹೇಣ್ತೆ ನನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ                  ||ಪಲ್ಲ||

ಘನ ಪ್ರೀತೀಲೆ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ             ||ಅನುಪಲ್ಲ||

ಮೊದಲಿಗೆ ತಾಯ್ಯಾದಿ ನನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನ ಹೇಣ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ ಹೇಣ್ತೆ                         ||||

ಅತ್ತಿಗಿ ನಾದುನಿ ನನ ಹೇಣ್ತೆ
ನಮ್ಮತ್ಯಾಗಿ ನಡಿದೀಯೆ ನನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದಿ ನನ ಹೇಣ್ತೆ                         ||||

ಚಿಕ್ಕಮ್ಮನ ಸರಿ ನೀ ನನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ ಹೇಣ್ತೆ                          
ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡದೆಲ್ಲ ನೀ ನನ ಹೇಣ್ತೆ                 ||||

ಬಾಳೊಂದು ಚೆಲ್ವಿಕೆ ನನ ಹೇಣ್ತೆ
ಆಳಾಪಕೆಳಿಸಿದೆ ನನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ ಹೇಣ್ತೆ                       ||||

ಮಂಗಳರೂಪಳೆ ನನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ ಹೇಣ್ತೆ                          ||||

ಕುಶಲದಿ ಕೂಡಿದೆ ನನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ               ||||


ಶಿಶುನಾಳ ಶರೀಫರು ತಮ್ಮ ಹೆಂಡತಿಯನ್ನು ಮೆಚ್ಚಿ ಬರೆದ ಅದ್ಭುತ ಗೀತೆಯಿದು.   ಗೀತೆ ಶರೀಫರ ವೈಯಕ್ತಿಕ ಗೀತೆಯಾಗಿದ್ದರೂ ಸಹ ಭಾರತದ ಎಲ್ಲ ಸಾಧ್ವಿ ಹೆಣ್ಣುಮಕ್ಕಳಿಗೂ ಅನ್ವಯಿಸುವಂತಹ ಸಾರ್ವತ್ರಿಕ ಗೀತೆಯಾಗಿದೆ. ಶರೀಫರು ಗೀತೆಯ ಮೊದಲಲ್ಲಿ, ‘ನಿನ್ನ ಹೆಸರೇನ್ಹೇಳಲಿ ಗುಣವಂತೆಎಂದು ತಮ್ಮ ಹೆಂಡತಿಯನ್ನು ಕೇಳುತ್ತಿದ್ದಾರೆ. ಬಹುಶಃ ಇದೇನೂ ಮದುವೆಯ ಸಮಯದಲ್ಲಿ ನಡೆದಉರುಟಣೆಗೀತೆಯಾಗಿರಲಿಕ್ಕಿಲ್ಲ.  ಮದುವೆಯಾದ ಅನತಿ ಕಾಲದ ನಂತರ, ಒಂದು ಸಮಾರಂಭದ ಸಂದರ್ಭ ಒದಗಿ ಬಂದಿರಬಹುದು. ಸಮಯದಲ್ಲಿ ಅಲ್ಲಿ ನೆರೆದವರೆಲ್ಲ ಹೆಣ್ಣಿಗೆ ತನ್ನ ಗಂಡನ ಹೆಸರನ್ನು ಹೇಳಲು ಹಾಗು ಗಂಡಿಗೆ ತನ್ನ ಹೆಂಡತಿಯ ಹೆಸರನ್ನು  ಹೇಳಲು ಚೇಷ್ಟೆ ಮಾಡುತ್ತಿರಬಹುದು. ಶರೀಫರು ತಮ್ಮ ಹೆಂಡತಿಯ ಬಗೆಗೆ ಹೇಳಿದ ಅಭಿಮಾನದ ಮಾತುಗಳನ್ನು ನೋಡಿದರೆ, ಮದುವೆಯಾಗಿ ಸ್ವಲ್ಪ ಕಾಲವಾದರೂ ಸಂದಿರಬೇಕು, ಈ ಅವಧಿಯಲ್ಲಿ ಅವರಿಗೆ ತಮ್ಮ ಹೆಂಡತಿಯ ಸದ್ಗುಣಗಳ ಪರಿಚಯವಾಗಿರಬೇಕು ಎಂದು ಭಾಸವಾಗುವುದು.

ನನ ಹೇಣ್ತೆ ನನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ          
ಶರೀಫರು ತಮ್ಮ ಹೆಂಡತಿಯು ಒಂದು ಸಾಮಾನ್ಯ ಹೆಸರಿನಿಂದ ಕರೆಯಬಹುದಾದ ಸಾಮಾನ್ಯೆ ಅಲ್ಲ ಎಂದು ತಿಳಿದಿದ್ದಾರೆ; ಅವಳನ್ನು ನಾಮಮಾತ್ರಳಾಗಿಮಿತಿಗೊಳಿಸಲುಅವರಿಗೆ ಮನಸ್ಸಿದ್ದಂತಿಲ್ಲ. ಆದುದರಿಂದ ಸದ್ಗುಣಶೀಲೆಯಾದ ತಮ್ಮ ಹೆಂಡತಿಯನ್ನು ಅವರುಗುಣವಂತೆಎಂದು ಸಂಬೋಧಿಸುತ್ತಿದ್ದಾರೆ. ಶರೀಫರು ಮಹತ್ವ ಕೊಡುವುದು ಅವಳ ಗುಣಗಳಿಗೆ ಎನ್ನುವುದು ಸಂಬೋಧನೆಯಿಂದ ಸ್ಪಷ್ಟವಾಗುತ್ತದೆ. ಅವಳಲ್ಲಿರುವ ಸದ್ಗುಣಗಳನ್ನುಶರೀಫರು ಮುಂದಿನ ನುಡಿಗಳಲ್ಲಿ ಮನಸೋಕ್ತವಾಗಿ ವರ್ಣಿಸಿದ್ದಾರೆ.   

ಶರೀಫರಿಗೆ ತಮ್ಮಹೆಂಡತಿಯು ಕೇವಲ ಪ್ರಾಪಂಚಿಕ ವ್ಯವಹಾರಕ್ಕಾಗಿ ಹಾಗು ಲೌಕಿಕ ಸುಖಕ್ಕಾಗಿ ಬೇಕಾದವಳಲ್ಲ. ಅವರಿಗೆ ಅವಳು ಪಾರಮಾರ್ಥಿಕ ಪ್ರಯಾಣದ ಜೊತೆಗಾತಿಯೂ ಹೌದು. ಈ ಮಾತನ್ನು ಅವರು ಗೀತೆಯ ಮೊದಲಿಗೇ ಸ್ಪಷ್ಟ ಪಡಿಸುತ್ತಾರೆ:

ಘನ ಪ್ರೀತೀಲೆ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ
ಶರೀಫರುತನುತ್ರಯದೊಳುಎಂದು ಹೇಳುತ್ತಿದ್ದಾರೆ. ಯಾವವು ಈ ತನುತ್ರಯಗಳು? ಪ್ರತಿಯೊಂದು ಆತ್ಮವು ಇಹಲೋಕವನ್ನು ಪ್ರವೇಶಿಸುವಾಗ  ಮೂರು ದೇಹಗಳನ್ನು ಧರಿಸುತ್ತದೆ: () ಸ್ಥೂಲ ಶರೀರ, () ಸೂಕ್ಷ್ಮ ಶರೀರ, () ಕಾರಣ ಶರೀರ.

ಕಾರಣಶರೀರ ಎಂದರೆ ಆತ್ಮವು ದೇಹವನ್ನು ಪಡೆಯಲು ಬೇಕಾಗುವ ಮೂಲಕಾರಣ. ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳ ಸಂಯೋಗವು ಈ ಕಾರಣಶರೀರದಲ್ಲಿರುತ್ತದೆ. ತನ್ನ ಅಳಿದುಳಿದ ವಾಸನೆಗಳಿಂದ ಹಾಗು ಪ್ರಾರಬ್ಧ ಕರ್ಮಗಳಿಂದ ಆತ್ಮಕ್ಕೆ ಸೂಕ್ಷ್ಮಶರೀರವು ಪ್ರಾಪ್ತವಾಗುತ್ತದೆ. ಈ ಸೂಕ್ಷ್ಮಶರೀರವು ಇಹಲೋಕದಲ್ಲಿ ಆತ್ಮವು ಅನುಭವಿಸಬೇಕಾದ ಸುಖ,ದುಃಖಗಳಿಗೆ ಅನುಗುಣವಾದ  ಸ್ಥೂಲಶರೀರವನ್ನು ಪಡೆಯುತ್ತದೆ.

ಶರೀಫರುಘನ ಪ್ರೀತೀಲೆ ದಿನವೂ ಅನುಗೂಡುನುಎನ್ನುತ್ತಿದ್ದಾರೆ. ದಾಂಪತ್ಯದ ಸೂಕ್ಷ್ಮವನ್ನು ಇಲ್ಲಿ ಕಾಣಬಹುದು. ಸಾರ್ಥಕ ದಾಂಪತ್ಯಕ್ಕೆ ಬೇಕಾದದ್ದುಅನ್ಯೋನ್ಯವಾದ ಪರಮ ಪ್ರೀತಿ’.  ಇಬ್ಬರಿಗೂ ಸುಖವಾಗುವಂತೆ, ಇಬ್ಬರಿಗೂ ಅನುಕೂಲವಾಗುವಂತೆ ಈ ಸಾಮರಸ್ಯವನ್ನು ದಿನದಿನವೂ ಅನುಭವಿಸೋಣ ಎಂದು ಶರೀಫರು ತಮ್ಮ ಹೆಂಡತಿಗೆ ಹೇಳುತ್ತಿದ್ದಾರೆ. ಆದರೆ ಸಾಮರಸ್ಯವು ಕೇವಲ ಸ್ಥೂಲಶರೀರದ ಲೌಕಿಕ ಸುಖಕ್ಕೆ ಸಂಬಂಧಿಸಿದಂತಹದಲ್ಲ, ಪಾರಮಾರ್ಥಿಕ  ಉನ್ನತಿಗೂ ಇದು ಕಾರಣವಾಗಬೇಕು. ಆದುದರಿಂದಲೇ ಶರೀಫರು ತನುತ್ರಯದೊಳುಎಂದು ಸ್ಪಷ್ಟಪಡಿಸಿದ್ದಾರೆ.

ಸಂದರ್ಭದಲ್ಲಿ ಬೇಂದ್ರೆಯವರಫಜಾರಗಟ್ಟಿ ಮುಟ್ಟೋಣ ಬಾಎನ್ನುವ ಕವನವು ನೆನಪಾಗುತ್ತದೆ.
ನಾವು ಲೌಕಿಕ ಸುಖ,ದುಃಖಗಳನ್ನು ಜೊತೆಯಾಗಿ ಅನುಭವಿಸಿದ್ದೇವೆ. ನಮ್ಮ ಸಂಬಂಧವು ಕೇವಲ ಒಂದು ಜನ್ಮದ್ದಲ್ಲ. ಜನ್ಮಜನ್ಮಾಂತರಗಳಲ್ಲಿ ದಂಪತಿಗಳಾಗಿದ್ದೇವೆ.  ಇದೀಗ, ನಾವುಫಜಾರಗಟ್ಟಿ ಮುಟ್ಟಬೇಕುಅಂದರೆ ಪಾರಮಾರ್ಥಿಕ ಕೊನೆಯನ್ನುತಲುಪಬೇಕುಎನ್ನುವುದು ಬೇಂದ್ರೆಯವರು ತಮ್ಮ ಹೆಂಡತಿಗೆ ಹೇಳುವ ಮಾತು. ಶರೀಫರ ಗೀತೆಯಲ್ಲಿ ಹಾಗು ಬೇಂದ್ರೆಯವರ ಕವನದಲ್ಲಿ ಕಾಣುವ ಸಾಮ್ಯವು ಮನನೀಯವಾಗಿದೆ!

ಶರೀಫರನ್ನು ಮದುವೆಯಾಗಿ ಅತ್ತೆಯ ಮನೆಗೆ ಬಂದ ಹೊಸ ವಧು, ಮನೆಯಲ್ಲಿ ಏನೇನುಅವತಾರಗಳನ್ನುತಾಳಿದಳು/ತಾಳಬೇಕು ಎನ್ನುವುದನ್ನು ಶರೀಫರು ಇದೀಗ ಹೇಳುತ್ತಾರೆ:

ಮೊದಲಿಗೆ ತಾಯ್ಯಾದಿ ನನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನ ಹೇಣ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ ಹೇಣ್ತೆ                    

ಶರೀಫರು ತಮ್ಮ ಹೆಂಡತಿಯನ್ನು ಕಾಣುವ ದೃಷ್ಟಿಯೇ ಬೇರೆ. ಸಾಮಾನ್ಯನು ತನ್ನ ಹೆಂಡತಿಯನ್ನು ಭೋಗವಸ್ತು ಎಂದು ನೋಡಿದರೆ, ಶರೀಫರು ಅವಳನ್ನು ಮೊದಲು ಕರೆಯುವದೇತಾಯಿಎಂದು. ಮದುವೆಯ ಸಂದರ್ಭದಲ್ಲಿ ಹೇಳುವ ಮಂತ್ರಗಳೂ ಸಹ ಇದೇ ಮಾತನ್ನು ಹೇಳುತ್ತವೆ: ‘ವಧುವೆ, ನಿನ್ನ ಗಂಡನು ನಿನಗೆ ೧೧ನೆಯ ಮಗನಾಗಲಿ’!   ಅದೂ ಅಲ್ಲದೆ, ಮನೆಯಲ್ಲಿರುವ ಎಲ್ಲ ಚಿಕ್ಕವರಿಗೂ ಇವಳು ತಾಯಿಯ ಅಕ್ಕರತೆಯನ್ನು ತೋರಿಸಬೇಕು ಎನ್ನುವುದು ಇಲ್ಲಿ ಸೂಚ್ಯವಾಗಿದೆ.

ಮದುವೆಯಾದ ತಕ್ಷಣವೇ ಗಂಡಹೆಂಡಿರು ಬೇರೇ ಮನೆಯನ್ನು ಮಾಡುವುದು ಇದೀಗ ಸಾಮಾನ್ಯವಾಗಿದೆ. ಆದರೆ ಮೊದಲೆಲ್ಲ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಕಾಲದಲ್ಲಿ ಹೊಸ ವಧುಅತ್ತೆಯ ಮನೆಗೆಬರುತ್ತಿದ್ದಳೇ ಹೊರತು, ಗಂಡನ ಮನೆಗಲ್ಲ. ಆದುದರಿಂದ ಶರೀಫರು ತನ್ನ ಹೆಂಡತಿಯನ್ನುಸದನಕ ಸೊಸಿಯಾದಿ, ನನ ಹೇಣ್ತೆಎಂದು ಬಣ್ಣಿಸುತ್ತಿದ್ದಾರೆ.

ಇನ್ನು ಹೊಸ ಗಂಡ ಹೆಂಡಿರ ಸಂಬಂಧ ಎಂತಹದು? ಅವನೇನೋ ಇವಳನ್ನು ಮೋಹಿಸಿ ಮದುವೆಯಾಗಿದ್ದಾನೆ. ಆದರೆ ಅವಳು ಇವನ ಮೇಲೆ ಪೂರ್ಣ ಅವಲಂಬಿತಳು. ಹೀಗಾಗಿ ತಂದೆಯಾದವನು ಮಗಳನ್ನು ಎಷ್ಟು ಕಾಳಜಿಯಿಂದ ಸಂಬಾಳಿಸಬೇಕೊ, ಅದೇ ರೀತಿಯಲ್ಲಿ ಶರೀಫರು ತಮ್ಮ ಹೆಂಡತಿಯನ್ನು ಸಂಬಾಳಿಸುತ್ತಾರೆ: ಮುದದಿಂದ ಮೋಹಿಸಿ ಮದುವ್ಯಾದವನಿಗೆ ಮಗಳೆಂದೆನಿಸಿದೆ ನನ ಹೇಣ್ತೆ. ತಾಯಿ, ಸೊಸೆ ಹಾಗು ಮಗಳು…. ಸಂಬಂಧಗಳಲ್ಲಿರುವ ಕ್ರಮಬದ್ಧತೆಯನ್ನು ಗಮನಿಸಿರಿ.                  


ಅತ್ತಿಗಿ ನಾದುನಿ ನನ ಹೇಣ್ತೆ
ನಮ್ಮತ್ಯಾಗಿ ನಡಿದೀಯೆ ನನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದಿ ನನ ಹೇಣ್ತೆ                         
ಕೂಡುಮನೆಯಲ್ಲಿ ಗಂಡಹೆಂಡಿರಲ್ಲದೆ, ಉಳಿದೆಲ್ಲ ಸಂಬಂಧಿಗಳೂ ಇರುತ್ತಾರಲ್ಲವೆ? ಅವರೊಡನೆ ಇವಳ ಸಂಬಂಧ ಎಂತಹದು? ಪ್ರೀತಿಯ ಅತ್ತಿಗೆ, ನಾದಿನಿ ಇವೆಲ್ಲ ರೂಪಗಳನ್ನು ಅವಳು ಧರಿಸುತ್ತಾಳೆ. ತನ್ನ ಗಂಡನಿಗೆ ಕೆಲವೊಮ್ಮೆಅತ್ತೆಯಾಗಿಸಂಸಾರವನ್ನು ನಿರ್ವಹಿಸುತ್ತಾಳೆ. ಅತ್ತೆಯು ಬುದ್ಧಿ ಹೇಳುವ ಕೆಲಸವನ್ನು ಗೌರವಪೂರ್ವಕವಾಗಿ, ಆದರೆ
ದೂರದಿಂದಲೇ ಮಾಡುತ್ತಾಳೆ ಎನ್ನುವದನ್ನು ಗಮನಿಸಿರಿ. ಏಕೆಂದರೆ ಕಾರ್ಯವು ಪ್ರೀತಿಯಿಂದ ಆಗಬೇಕಾದ ಕಾರ್ಯ. ಕಾಲೀದಾಸನು ಇಂತಹ ಪತ್ನಿಗೆನರ್ಮ ಸಚಿವಾಎಂದು ಕರೆದಿದ್ದಾನೆ. ಆದರೆ ಪತ್ನಿಯ ಅತಿ ಮುಖ್ಯವಾದ ಕಾರ್ಯ ಯಾವುದು? ಗಂಡನಿಗೆ ಹೆತ್ತವ್ವನ ಮಮತೆಯನ್ನು ನೀಡಿ, ಬಾಯಿತುತ್ತು ನೀಡಿ ಪೋಷಿಸುವವಳು ಹೆಂಡತಿ. ಮಾತನ್ನು ಶರೀಫರು ಪ್ರೀತಿಯಿಂದ ನೆನೆಯುತ್ತಾರೆ.

ಚಿಕ್ಕಮ್ಮನ ಸರಿ ನೀ ನನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ ಹೇಣ್ತೆ                           
ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡದೆಲ್ಲ ನೀ ನನ ಹೇಣ್ತೆ                 
ಶರೀಫರ ಕಾಲದಲ್ಲಿ ಸಂಬಂಧಗಳು ಗಾಢವಾಗಿರುತ್ತಿದ್ದವು. ಸಂಬಂಧಿಗಳ ಭೆಟ್ಟಿ ಪದೇ ಪದೇ ಆಗುತ್ತಲೇ ಇರುತ್ತಿತ್ತು. ಪ್ರೀತಿ, ವಾತ್ಸಲ್ಯಗಳ ವಿನಿಮಯ ಸಹಜ ಹಾಗು ಸದಾಕಾಲ ಜರಗುತ್ತಿತ್ತು. ಅವರೆಲ್ಲರನ್ನು ಶರೀಫರು ನೆನೆಸುತ್ತ, ತಮ್ಮ ಹೆಂಡತಿಯು ಅವರೆಲ್ಲರ ವಾತ್ಸಲ್ಯವನ್ನು ತನಗೆ ಹಣಿಸುತ್ತಿದ್ದಾಳೆ ಎಂದು ಉದ್ಗರಿಸುತ್ತಿದ್ದಾರೆ. ಚಿಕ್ಕಮ್ಮ, ಅಕ್ಕ ಇವರೆಲ್ಲ ತಾಯಿಯ ನಂತರ ಬರುವ ಸಂಬಂಧಗಳು. ಇವರು ಶರೀಫರಿಗೆ ಅವ್ಯಾಜ ಅಂತಃಕರಣವನ್ನು ತೋರಿಸಿದವರು, ತೋರಿಸುವವರು. ತಮ್ಮ ಹೆಂಡತಿಯ ಪ್ರೀತಿಯ ವಿವಿಧ ಮುಖಗಳನ್ನು ಶರೀಫರು ಈ ರೀತಿಯಾಗಿ ಇಲ್ಲಿ ನೆನೆಯುತ್ತಿದ್ದಾರೆ.

ಗಂಡನು ತನ್ನ ಹೆಂಡತಿಯನ್ನು ಪ್ರೀತಿಸುವದಕ್ಕೆ ಒಂದೇ ಮುಖವಿರುತ್ತದೆ. ಆದರೆ ಹೆಂಡತಿಯು ತನ್ನ ಗಂಡನನ್ನು ಅನೇಕ ಮುಖಗಳಿಂದ, ಅನೇಕ ರೂಪಗಳಿಂದ ಪ್ರೀತಿಸುತ್ತಾಳೆ.  ಎಲ್ಲ ರೂಪಗಳನ್ನು ಶರೀಫರು ಅನುಭವಿಸಿ, ಸುಖಪಟ್ಟು, ಸುಖಕ್ಕೆ ಕಾರಣಳಾದ ತಮ್ಮ ಹೆಂಡತಿಯ ಪ್ರೀತಿಯನ್ನು ಬಣ್ಣಿಸಿದ್ದಾರೆ. ಸಂದರ್ಭದಲ್ಲಿ ವರಕವಿ ಬೇಂದ್ರೆಯವರು ಗಂಡಸು ಹೆಂಗಸಿಗೆ  ಎನ್ನುವ ತಮ್ಮ ಕವನದಲ್ಲಿ ಹೆಣ್ಣಿನ ಪ್ರೀತಿಯ ವಿವಿಧ ಮುಖಗಳನ್ನು ವರ್ಣಿಸುವ ನುಡಿ ನೆನಪಾಗುತ್ತದೆ:
ತಾಯಿ ಕನಿಮನೆಯೆ ನೀ ಅಕ್ಕ ಅಕ್ಕರತೆಯೆ
ಬಾ ಎನ್ನ ತಂಗಿ ಬಾ ಮುದ್ದು ಬಂಗಾರವೇ
ನೀ ಎನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
          ಮಗಳೊ ನನ್ನೆದೆಯ ಮುಗುಳೊ?

ಮುಂದಿನ ನುಡಿಯಲ್ಲಿ ಶರೀಫರು, ತಮ್ಮ ಹೆಂಡತಿಯ ಸಹಯೋಗದಿಂದ ತಮ್ಮ ಬಾಳ್ವೆಯು ಒಂದು ಉಲ್ಲಾಸಪಯಣವಾಗಿದೆ ಎಂದು ಹೇಳುತ್ತಾರೆ. ದಾಂಪತ್ಯಪ್ರೀತಿಗೆ ನುಡಿಯು ಒಂದು ಉತ್ತಮ ಉದಾಹರಣೆಯಾಗಿದೆ:
ಬಾಳೊಂದು ಚೆಲ್ವಿಕೆ ನನ ಹೇಣ್ತೆ
ಆಳಾಪಕೆಳಿಸಿದೆ ನನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ ಹೇಣ್ತೆ             

ಬ್ರಹ್ಮಚಾರಿಯ ಬದುಕು ಬರಡು ಬದುಕು. ಅದನ್ನೊಂದು ನಂದನವನವನ್ನಾಗಿ ಮಾಡುವವಳೇ ಹೆಣ್ಣು. ಕಾರ್ಯದಲ್ಲಿ ಹೆಣ್ಣು ಗಂಡನ್ನು ತನ್ನೆಡೆಗೆ ಸೆಳೆಯುತ್ತಾಳೆ, ತಿದ್ದುತ್ತಾಳೆ, ಸಂಸ್ಕೃತೀಕರಿಸುತ್ತಾಳೆ. ತನ್ನ ಹಾಗು ತನ್ನ ಗಂಡನ ಸಂಬಂಧವನ್ನು, ಬದುಕನ್ನು ಸುಮಧುರ ಸಂಗೀತವನ್ನಾಗಿ ಪರಿವರ್ತಿಸುತ್ತಾಳೆ. ಮಾತನ್ನುಆಳಾಪಕೆಳಿಸಿದೆ, ನನ ಹೇಣ್ತೆಎಂದು ಶರೀಫರು ಹೇಳುತ್ತಾರೆ. ಇದು ಕೇವಲ ಮುಖಸ್ತುತಿಯ ಜಾಳ ಮಾತಲ್ಲ ಎನ್ನುತ್ತಾರೆ ಶರೀಫರು.

ಬೇಂದ್ರೆಯವರೂ ಸಹ ತಮ್ಮಗೃಹಿಣಿಎನ್ನುವ ಕವನದಲ್ಲಿ, ಕಾಡುಮಾನವನ ಬದುಕಿಗೆ ನಾಗರಿಕತೆಯನ್ನು, ಸಂಸ್ಕೃತಿಯನ್ನು, ಮಾರ್ದವತೆಯನ್ನು ತಂದವಳೇ ಹೆಣ್ಣು ಎಂದು ಹೇಳುತ್ತಾರೆ.

ಗಂಡ ಹೆಂಡಿರ ಸಂಬಂಧವು ಕೇವಲ ಅಂತರಂಗದ್ದಷ್ಟೇ ಆಗಿರುತ್ತದಯೆ? ಈರ್ವರು ಮಾನಸಿಕವಾಗಿ ಅತಿ ಹತ್ತಿರ ಬಂದಾಗ, ಅವರು ದೈಹಿಕವಾಗಿಯೂ ಅತಿ ಹತ್ತಿರ ಬರುವುದು ಸಹಜವಷ್ಟೇ. ಸಮಯದಲ್ಲಿ ಗಂಡು ಹಾಗು ಹೆಣ್ಣು, ಶರೀರಸೌಖ್ಯದ ಪರಮಾವಧಿ ಕೊಡುಕೊಳ್ಳುವಿಕೆಯನ್ನು ಮಾಡಿ, ಸಂತೃಪ್ತರಾಗಬೇಕಷ್ಟೆ? ಅದನ್ನು ಶರೀಫರುಸೂಳೆ ಎಂದೆನಿಸಿದೆ ನನ ಹೇಣ್ತೆಎನ್ನುವ ಮೂಲಕ ಹೇಳುತ್ತಿದ್ದಾರೆ. ಸಂದರ್ಭದಲ್ಲಿ ಸಂಸ್ಕೃತ ಶ್ಲೋಕವೊಂದರ ನೆನಪು ಬಾರದೆ ಇರದು. ಹೆಂಡತಿಯಲ್ಲಿ ಇರಬೇಕಾದ ಆರು ಗುಣಗಳನ್ನು ಶ್ಲೋಕವು ವರ್ಣಿಸುತ್ತದೆ:
ಕಾರ್ಯೇಷು ದಾಸೀ, ಕರಣೇಷು ಮಂತ್ರೀ,
ರೂಪೇ ಲಕ್ಷ್ಮೀ, ಕ್ಷಮಯಾ ಧರಿತ್ರೀ,
ಭೋಜ್ಯೇಷು ಮಾತಾ, ಶಯನೇಷು ವೇಶ್ಯಾ
ಷಟ್ಕರ್ಮಯುಕ್ತಾ ಕುಲಧರ್ಮಪತ್ನೀ

ಶ್ಲೋಕವು ಪುರುಷಪ್ರಧಾನ ಛಾಯೆಯನ್ನು ಹೊಂದಿರುವದರಿಂದ, ನಾನು ಶ್ಲೋಕಕ್ಕೆ ಸಮ್ಮತಿಸುವದಿಲ್ಲ. ಹೆಣ್ಣು ಹೀಗಿರಬೇಕೆಂದು ಗಂಡು ಬಯಸುವದಾದರೆ, ಗಂಡಿನಲ್ಲಿ ಹೆಣ್ಣು ಬಯಸುವ ಗುಣಗಳಿಗೂ ಸಮಾನ ಸ್ಥಾನಮಾನವನ್ನು ಕೊಡಬೇಕಲ್ಲವೆ?

ಸರ್ವಜ್ಞನೂ ಸಹ ಇಂತಹದೇ ಪುರುಷಪ್ರಧಾನ ಕನಸನ್ನು ತನ್ನ ವಚನವೊಂದರಲ್ಲಿ ಹೇಳಿದ್ದಾನೆ:
ಬೆಚ್ಚನಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯಾನರಿವ ಸತಿಯಿರಲು, ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ.”
ಇಚ್ಛೆಯಾನರಿವ ಸತಿ ಬೇಕು, ಇಚ್ಛೆಯಾನರಿವ ಪತಿ ಬೇಡವೆ?
ಇರಲಿ, ಮುಖ್ಯವಾಗಿ, ಶರೀಫರು ತಮ್ಮ ಪತ್ನಿಯಿಂದ ಎಲ್ಲ ರೀತಿಯಿಂದಲೂ ಸಂತೃಪ್ತರಾಗಿದ್ದರು ಎನ್ನುವದನ್ನು ನಾವು ಇಲ್ಲಿ ತಿಳಿಯಬಹುದು.

ಶರೀಫರು ಪತ್ನಿಯ ವಿವಿಧ ರೂಪಗಳನ್ನು ಬಣ್ಣಿಸಿದರು. ಇನ್ನು ಅವಳ ಪ್ರಧಾನ ರೂಪವಾದ ಪತ್ನಿಯ ರೂಪದಲ್ಲಿ ಅವಳನ್ನು ಹೇಗೆ ಕಾಣುತ್ತಿದ್ದಾರೆ? ಅದರ ಉತ್ತರ ಇಲ್ಲಿದೆ:
ಮಂಗಳರೂಪಳೆ ನನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ ಹೇಣ್ತೆ       

ತಮ್ಮ ಪತ್ನಿಯ ಲೌಕಿಕ ರೂಪಗಳನ್ನು ಬಣ್ಣಿಸಿದ ಶರೀಫರು, ‘ಮಂಗಳರೂಪಳೆ ನನ ಹೇಣ್ತೆಎನ್ನುವ ಮೂಲಕ ಅವಳಿಗೆ ಒಂದು ಶ್ರೇಷ್ಠ ಆಧ್ಯಾತ್ಮಿಕ ರೂಪವೂ ಇದೆ ಎನ್ನುವುದನ್ನು ಹೇಳುತ್ತಿದ್ದಾರೆ. ಶರೀಫರ ಆಧ್ಯಾತ್ಮಿಕ ಸಾಧನೆಗೆ ಸರಿಸಮಳಾದ ಅವಳು ಅವರಿಗೆ ಅರ್ಧಾಂಗಿನಿಯಾಗಿದ್ದಾಳೆ. ( ಸಂದರ್ಭದಲ್ಲಿ ರಾಮಕೃಷ್ಣ ಪರಮಹಂಸರನ್ನು ಹಾಗು ಶಾರದಾದೇವಿಯವರನ್ನು ನೆನಸಬಹುದು.) ಅರ್ಧಾಂಗಿನಿಯಾದವಳು ಶೃಂಗಾರಭಾವವನ್ನು ಉಣಿಸುವುದು ಸರಿಯೇ. ಆದರೆ ಉಳಿದಂತೆ ಇವಳು ಅವರನ್ನು ಸದಾ ಅನುಸರಿಸುವ ಸತತ ಒಡನಾಡಿ. ಆದುದರಿಂದಲೇ ಶರೀಫರು ಅವಳಿಗೆತಂಗೆಂದೆನಬೇಕ ನನ ಹೇಣ್ತೆಎಂದೆನ್ನುತ್ತಿದ್ದಾರೆ.                            

ದಾಂಪತ್ಯವು ಜನ್ಮಜನ್ಮಗಳ ಸಹಯೋಗ ಎಂದು ಶರೀಫರು ಭಾವಿಸುತ್ತಾರೆ. (ಬೇಂದ್ರೆಯವರಫಜಾರಗಟ್ಟಿ ಮುಟ್ಟೋಣ ಬಾಕವನದ ಉಲ್ಲೇಖವನ್ನು ನಾವು ಈಗಾಗಲೇ ನೋಡಿದ್ದೇವೆ.) ಸಂಬಂಧವನ್ನು ಕೂಡಿಸಿದವರಾರು? ವಿಧಿಯೇ ತಾನೆ?  ಆದುದರಿಂದ ಶರೀಫರು ಹೇಳುತ್ತಾರೆ: ‘ಕುಶಲದಿ ಕೂಡಿದೆ ನನ ಹೇಣ್ತೆ’. ಕುಶಲದಿ ಕೂಡಿದೆ ಎಂದು ಹೇಳುವಾಗ ತನ್ನ ಹೆಂಡತಿಯು ತನಗೆ ಎಲ್ಲ ರೀತಿಯಿಂದಲೂ ತಕ್ಕವಳು ಎನ್ನುವುದು ಸೂಚಿತವಾಗಿದೆ.

ಕುಶಲದಿ ಕೂಡಿದೆ ನನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ       

ಆತ್ಮಗಳಿಗೆ ಲಿಂಗವಿಲ್ಲ. ಆದರೆ ಇಹಲೋಕಕ್ಕೆ ಬರುವಾಗ ಅವುಗಳನ್ನು ಗಂಡು, ಹೆಣ್ಣು ಎಂದು ಭಿನ್ನವಾಗಿಸಿ, ಜನ್ಮಜನ್ಮಗಳ ದೀರ್ಘ ಪಯಣಕ್ಕಾಗಿ ಗಂಟು ಹಾಕುವವನು ಬ್ರಹ್ಮನು. ಆತ್ಮಗಳಲ್ಲಿ ಒಂದು ಗಂಡಾಗುತ್ತದೆ, ಒಂದು ಹೆಣ್ಣಾಗುತ್ತದೆ. ಈ ಲಿಂಗಭೇದವಿರುವದು ಇಹಲೋಕದಲ್ಲಿ ಮಾತ್ರ. ಇಂತಹ ಪರಮಪ್ರಿಯ ಸಂಗಾತಿಯನ್ನು, ಸದ್ಗುಣಶೀಲಳನ್ನು ಶರೀಫರು ಏನೆಂದು ಹೆಸರಿಸಿಯಾರು? ‘ಗುಣವಂತೆಎಂದು ಹೇಳಬಹುದಷ್ಟೆ!

 ಸತಿಪತಿಯರೊಳೊಂದಾದ ಭಕ್ತಿಯು ಶಿವನಿಗೆ ಪ್ರೀತಿಎಂದು ಬಸವಣ್ಣನವರು ಹೇಳುತ್ತಾರೆ. ಬಸವಣ್ಣನವರ ಈರ್ವರು
ಪತ್ನಿಯರು ಸಹ ಲೌಕಿಕದಲ್ಲಿ ಹಾಗು ಆಧ್ಯಾತ್ಮಿಕದಲ್ಲಿ ಬಸವಣ್ಣನವರಿಗೆ ಸಮರಸ ಸಂಗಾತಿಯಾಗಿದ್ದರು. ಶರೀಫರಿಗೂ ಸಹ ಅಂತಹ ಸಂಗಾತಿಯೇ ದೊರೆತಿದ್ದಳು. ಆದರೆ, ಶರೀಫರ ವಿಷಯದಲ್ಲಿ ಸಂಗಾತವು ಅತ್ಯಲ್ಪಕಾಲೀನದ್ದಾಗಿದ್ದಿತು. ಮೊದಲನೆಯ ಹೆರಿಗೆಯಲ್ಲಿಯೇ, ಶರೀಫರ ಹೆಂಡತಿ ಅವರನ್ನು ಅಗಲಿದಳು. ಅವಳ ವಿಯೋಗದಿಂದ ದುಃಖಿತರಾದ ಶರೀಫರುಮೋಹದ ಹೆಂಡತಿ ಸತ್ತ ಬಳಿಕ, ಮಾವನ ಮನೆಯ ಹಂಗಿನ್ಯಾಕೋಎಂದು ಹಾಡಿದ್ದಾರೆ.

ಒಂದು ಕವನದ ಸಾಮರ್ಥ್ಯವು ಅದರ ಸಂವಹನದಲ್ಲಿ ಇರುತ್ತದೆ. ಶರೀಫರು ತಮ್ಮ ಸುತ್ತಲಿನ ಹಳ್ಳಿಗರಿಗಾಗಿ ಹಾಡಿದ ಸಹಜ ಕವಿ. ಅವರ ಗೀತೆಗಳು ಆಳವಾದ ಅರ್ಥವನ್ನು ಹೊಂದಿದ್ದರೂ ಸಹ, ಅವು ಪಾಮರರಿಗಾಗಿ ಹಾಡಿದ ಗೀತೆಗಳೇ ಹೊರತು, ಪಂಡಿತರರಿಗಾಗಿ ರಚಿಸಿದ ಗೀತೆಗಳಲ್ಲ. ತಮ್ಮ ಸಂವಹನಸಾಮರ್ಥ್ಯದಲ್ಲಿ ಶರೀಫರ ಗೀತೆಗಳು ಶಿಷ್ಟಸಾಹಿತ್ಯದ ಕವನಗಳನ್ನು ಮೀರಿ ನಿಲ್ಲುತ್ತವೆ ಎನ್ನುವುದನ್ನುನನ ಹೇಣ್ತೆಯಲ್ಲಿ ಕಾಣಬಹುದು.