Monday, July 10, 2017

ವಚನಗಳ ಮೂಲಕ ಬಸವೇಶ್ವರರ ದರ್ಶನ



ಬಸವಣ್ಣನವರ ವ್ಯಕ್ತಿತ್ವವು ಸಾಮಾನ್ಯ ಅರಿವಿಗೆ ಮೀರಿದಂತಹದು. ಅನಂತವಾದ ಆಕಾಶವನ್ನು ಅಥವಾ ತಳವಿಲ್ಲದ ಸಮುದ್ರವನ್ನು ಅರಿತುಕೊಳ್ಳುವುದು ಸುಲಭವೆ? ಬಸವಣ್ಣನವರನ್ನು ಗುರುತಿಸಲು ಮಾಡುವ ಪ್ರಯತ್ನವು ಕುರುಡರು ಐರಾವತವನ್ನು ಗುರುತಿಸಿದ ಹಾಗಾಗುತ್ತದೆ. ಹಾಗಿದ್ದರೂ ಸಹ ಬಸವಣ್ಣನವರ ವಚನಗಳ ಮೂಲಕ ಆ ಮಹಾಪುರುಷನು ನಡೆದ ಹೆಜ್ಜೆಯ ಗುರುತುಗಳನ್ನು ಕೆಲ ಮಟ್ಟಿಗಾದರೂ ಕಾಣಬಹುದು. ಬಸವಣ್ಣನವರ ಸಾಧನೆಗಳ ಮೂರು ಮುಖಗಳನ್ನು ಗುರುತಿಸುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆ ಮೂರು ಮುಖಗಳು ಹೀಗಿವೆ:
() ಸಾಮಾಜಿಕ ಕ್ರಾಂತಿ
() ವಚನಸಾಹಿತ್ಯನಿರ್ಮಾಣ
() ಆಧ್ಯಾತ್ಮಿಕ ಸಾಧನೆ


ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಐದು ಘಟ್ಟಗಳನ್ನು ನಾವು ಈ ರೀತಿಯಾಗಿ ಅರ್ಥೈಸಿಕೊಳ್ಳಬಹುದು:
() ಸನಾತನ ಸಂಪ್ರದಾಯದ ಹಾಗು ವಾಮಮಾರ್ಗಗಳ ತಿರಸ್ಕಾರ
() ಹೊಸ ಮಾರ್ಗದ ನಿರ್ಮಾಣ
() ಹೊಸಮಾರ್ಗದ ನೀತಿಸಂಹಿತೆಯ ನಿರ್ಮಾಣ
() ಸಾಮಾಜಿಕ ಮೇಲುಕೀಳು ಭಾವನೆಯನ್ನು ನಿರ್ಮೂಲನೆ.
() ತತ್ವದರ್ಶನ

() ಸನಾತನ ಸಂಪ್ರದಾಯದ ತಿರಸ್ಕಾರ:
ಬಸವಣ್ಣನವರ ಕಾರ್ಯವನ್ನು ಕ್ರಾಂತಿ ಎಂದು ಕರೆಯಬಹುದೆ ಅಥವಾ ಸಮಾಜಸುಧಾರಣೆ ಎಂದು ಕರೆಯಬಹುದೆ? ಇದೊಂದು ಅತಿ ನವೀನ ಮಾರ್ಗ. ತಳವರ್ಗದವರಿಗೆ ದೇವಾಲಯಗಳಲ್ಲಿ ಪ್ರವೇಶವಿಲ್ಲವೆ? ಸರಿ, ಉಚ್ಚಕುಲದವರು ಎಂದು ಹೊಗಳಿಕೊಳ್ಳುತ್ತಿರುವ ಅಧಮರ ಡಂಭಾಚಾರದ ದೇವಾಲಯಗಳೇ ನಮಗೆ ಬೇಡ; ನಮ್ಮ ದೇಹವನ್ನೇ ದೇವಾಲಯ ಎಂದು ಭಾವಿಸೋಣ, ದೇವಾಲಯಕ್ಕೆನನ್ನ ಕಾಲೇ ಕಂಭ, ಶಿರವೇ ಹೊನ್ನ ಕಳಸವಯ್ಯಾ; ಇಲ್ಲಿರುವ ಶಿವನನ್ನೇ ಪೂಜಿಸೋಣ’, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ,……. ಎನ್ನುವುದು ಬಸವ-ಮಾರ್ಗ!

ಕಲ್ಲುಮಣ್ಣಿನಲ್ಲಿ ಕಟ್ಟಿದ ದೇವಾಲಯಗಳು ಇಂದಿಲ್ಲ ನಾಳೆ ಬಿದ್ದು ಹೋದಾವು, ಆದರೆನನ್ನ ದೇಹವಿರುವವರೆಗೆ ನನ್ನ ದೇಗುಲ ಇದ್ದೇ ಇರುತ್ತದೆ. ನನ್ನ ದೇವರು ದೇಹದಲ್ಲಿಯೇ ಇರುತ್ತಾನೆಎಂದು ಬಸವಣ್ಣನವರು ಸಾರಿದರು. ಜಂಗಮ ಪದಕ್ಕೆ ಚಲಿಸುತ್ತಿರುವ ಎನ್ನುವ ಅರ್ಥವಿರುವಂತೆಯೇ, ‘ವೀರಶೈವ ಶರಣರುಎನ್ನುವ ಅರ್ಥವೂ ಇದೆ. ಜಂಗಮರು ಸರ್ವತ್ಯಾಗಿಗಳಾಗಿ ಸಂಚಾರ ಮಾಡುತ್ತಿರುವವರು, ಲಿಂಗದೀಕ್ಷೆ ಕೊಡುವಂಥವರು, ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲವರು. ರೀತಿಯಾಗಿ ಬಸವಣ್ಣನವರು ದೇವಾಲಯಸಂಸ್ಕೃತಿಯನ್ನು ಹಾಗು ಅರ್ಚಕಪಾರಮ್ಯವನ್ನು ತಿರಸ್ಕರಿಸಿದರು.  ಗಾಂಧೀಜಿ, ಅಂಬೇಡಕರ ಮೊದಲಾದವರದೇವಾಲಯ ಪ್ರವೇಶಚಳುವಳಿಗಿಂತ ಭಿನ್ನವಾದ ವಿಧಾನವಿದು. ಇದು ಸಂಘರ್ಷದ ಮಾರ್ಗವಲ್ಲ, ಸ್ವತಂತ್ರ ನಡೆಯ ಮಾರ್ಗ!

ಸ್ವತಂತ್ರ ನಡೆಯ ಮೊದಲ ಹೆಜ್ಜೆಯಾಗಿ ಸನಾತನಿಗಳ ಮೂಢನಂಬಿಕೆಗಳನ್ನು ಬಸವಣ್ಣನವರು ತಿರಸ್ಕರಿಸಿದ ರೀತಿಯನ್ನು ನೋಡಿರಿ:
ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ!

ರೀತಿಯಾಗಿ ಶುಭಮುಹೂರ್ತ, ಶುಭಲಗ್ನ ಎನ್ನುವ ಭ್ರಮೆಗಳನ್ನು ಬಸವಣ್ಣನವರು ತಿರಸ್ಕರಿಸಿದ್ದೇ ಅಲ್ಲದೆ, ಜನಸಾಮಾನ್ಯರಿಗೆ ವೈಚಾರಿಕತೆಯ ಮಾರ್ಗವನ್ನು ತೆರೆದು ತೋರಿಸಿದರು; ಶತಮಾನಗಳಿಂದ ರೂಢವಾದ ಸಾಂಪ್ರದಾಯಕ ಮೂಢನಂಬಿಕೆಗಳನ್ನು ಹೀಗಳೆದರು.  ಇದಕ್ಕೊಂದು ಉದಾಹರಣೆಯಾಗಿ ಅವರ ಮತ್ತೊಂದು  ವಚನವನ್ನು ನೋಡಬಹುದು:
ಕಲ್ಲ ನಾಗರ ಕಂಡರೆ ಹಾಲನೆರೆಯಂಬರು,
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ!
ಉಂಬ ಜಂಗಮ ಬಂದರೆ ನಡೆಯೆಂಬೆರು,
ಉಣ್ಣದ ಲಿಂಗಕ್ಕೆ ಬೋನವ ಎಡೆ ಹಿಡಿಯೆಂಬರಯ್ಯಾ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನ ಮಾಡಿದರೆ,
ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ.

ಪಾಪಪುಣ್ಯಗಳೆಂಬ ಹೆದರಿಕೆಯನ್ನು ಹುಟ್ಟಿಸುವ ಅರ್ಚಕವೃಂದಕ್ಕೆ ಪ್ರತಿಯಾಗಿ ಬಸವಣ್ಣನವರು ಹೀಗೆ ಹೇಳುತ್ತಾರೆ:
ದೇವಲೋಕ, ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ,
ಸತ್ಯವ ನುಡಿವುದೇ ದೇವಲೋಕ,
ಮಿಥ್ಯವ ನುಡಿವುದೇ ಮರ್ತ್ಯಲೋಕ;
ಆಚಾರವೇ ಸ್ವರ್ಗ, ಅನಾಚಾರವೇ ನರಕ.
ಕೂಡಲಸಂಗಮದೇವಾ, ನೀವೇ ಪ್ರಮಾಣು.

ಸ್ವರ್ಗ ಎನ್ನುವ ಕಲ್ಪನೆಯೆ ಒಂದು ಭ್ರಮೆ. ಇಲ್ಲದ ಸ್ವರ್ಗಕ್ಕಾಗಿ ದೇಹದಂಡನೆಯಿಂದ  ಅಥವಾ
ಮನಃಶುದ್ಧಿಯಿಲ್ಲದೆ ಮಾಡುತ್ತಿರುವ ವ್ರತೋಪವಾಸಗಳಿಂದ ಫಲವಿಲ್ಲ ಎಂದು ಜನಸಾಮಾನ್ಯರಿಗೆ ತಿಳಿ ಹೇಳಿದರು:
ಹುತ್ತವ ಬಡಿದರೆ ಹಾವು ಸಾಯಬಲ್ಲುದೆ ಅಯ್ಯಾ?
ಅಘೋರ ತಪವ  ಮಾಡಿದೊಡೇನು?
ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮ ದೇವ?
(ಸನಾತನ ಸಂಪ್ರದಾಯದಲ್ಲಿ ಹಾವು ಎನ್ನುವ ಪ್ರತಿಮೆಯನ್ನು ಮೂಲಾಧಾರದಲ್ಲಿ ಮಲಗಿರುವಕುಂಡಲಿನಿಗೆ ಹೋಲಿಸಲಾಗುತ್ತದೆ. ಬಸವಣ್ಣನವರು ಇದನ್ನು ಕಾಮ(lust)ಕ್ಕೆ ಹೋಲಿಸುತ್ತಿದ್ದಾರೆ. ಇದು ಆಧುನಿಕ ಮನೋವಿಜ್ಞಾನಿ ಫ್ರಾ^ಯ್ಡನ ಕಲ್ಪನೆಗೆ ಹೊಂದುತ್ತದೆ.)

ಅರ್ಚಕರಿಂದಲೇ ದೇವರ ಪೂಜೆಯನ್ನು ಮಾಡಿಸಬೇಕು, ಭಕ್ತರು ದೂರ ನಿಂತು ನೋಡಬೇಕು ಎನ್ನುವ ಸಂಪ್ರದಾಯವನ್ನು ಬಸವಣ್ಣನವರು ದೂರವಿಡುವುದು ರೀತಿಯಲ್ಲಿ:
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು
ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವವರಲ್ಲದೆ
ನಿಮ್ಮನೆತ್ತ ಬಲ್ಲರು, ಕೂಡಲಸಂಗಮದೇವಾ?

ಭಕ್ತಿಯ   ಕೈಂಕರ್ಯವು ಶ್ರದ್ಧಾಪೂರ್ವಕವಾಗಿರಬೇಕು; ದಾನಧರ್ಮಗಳು ಪೊಳ್ಳು ಆಚರಣೆಗಳಾಗಬಾರದು ಎನ್ನುವುದನ್ನು ಬಸವಣ್ಣನವರು ಹೀಗೆ ಹೇಳುತ್ತಾರೆ:
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ!
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

ಬಸವಣ್ಣನವರು ಕೇವಲ ವೈದಿಕ ಸಂಪ್ರದಾಯವನ್ನು ಧಿಕ್ಕರಿಸಿದರು ಅಂತಲ್ಲ. ಕಾಲದಲ್ಲಿ ಕಾಳಾಮುಖ ಮೊದಲಾದ ಪಂಥಗಳ ಪ್ರಭಾವವು ಅವೈದಿಕರ ಮೇಲೆ ಗಾಢವಾಗಿತ್ತು. ಬಸವಣ್ಣನವರು ಜನಸಾಮಾನ್ಯರನ್ನು ಪಂಥಗಳಿಂದ ವಿಮುಖರಾಗಿಸಲು ಸಹ ಪ್ರಯತ್ನಪಟ್ಟರು. ದಯೆಯಿಲ್ಲದ ಧರ್ಮವಾವುದಯ್ಯಾ ಎನ್ನುವ ಅವರ ವಚನವು ವಾಮಾಚಾರ ಮಾರ್ಗಗಳಲ್ಲಿ ಅಡಗಿರುವ ಪ್ರಾಣಿಹಿಂಸೆಯ ವಿರುದ್ಧವಾಗಿದೆ. ಸಕಲ ಜೀವಿಗಳಲ್ಲಿ ಲೇಸನೆ ಬಯಸುವ ನಮ್ಮ ಕೂಡಲ ಸಂಗಮ ದೇವಎಂದು ಹೇಳುವ ಮೂಲಕ ಬಸವಣ್ಣನವರು ಪ್ರಾಣಿಬಲಿಯನ್ನು ತಿರಸ್ಕರಿಸಿದ್ದಾರೆ. ಬಸವಣ್ಣನವರ ವಚನವನ್ನೂ ನೋಡಿರಿ:
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿ ಮಸಣಿಯ ಭಕ್ತೆ!
ಗಂಡ ಕೊಂಬುದು ಪಾದೋದಕ ಪ್ರಸಾದ,
ಹೆಂಡತಿ ಕೊಂಬುದು ಸುರೆ, ಮಾಂಸ!
ಭಾಂಡ, ಭಾಜನ ಶುದ್ಧವಿಲ್ಲದ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ!
ಕೂಡಲಸಂಗಮದೇವಾ.

() ಹೊಸ ಮಾರ್ಗದ ನಿರ್ಮಾಣ:
ಸನಾತನ ಸಂಪ್ರದಾಯವನ್ನು ತಿರಸ್ಕರಿಸುವುದು ಸರಿಯೇ. ಆದರೆ ಇದಕ್ಕೆ ಪ್ರತಿಯಾಗಿ ವೈಯಕ್ತಿಕವಾಗಿ ಹಾಗು ಸಾರ್ವಜನಿಕವಾಗಿ ಹಿತಕರವಾದ ಒಂದು ಹೊಸ ಮಾರ್ಗವನ್ನು ತೋರಿಸುವುದು ಅತಿ ಮುಖ್ಯ. ಅಂತರಂಗದ ಪೂಜೆ ಸರಿಯೇ, ಆದರೆ ಬಹಿರಂಗದ ಪ್ರತೀಕವೂ ಒಂದು ಬೇಕಲ್ಲವೆ? ಲಿಂಗಧಾರಣೆಯೇ ಇದಕ್ಕಿರುವ ಉಪಾಯ. ಬ್ರಹ್ಮಾಂಡಗಳನ್ನು ಮೀರಿದ ಪರಮಾತ್ಮನನ್ನು  ಚುಟುಕೀಕರಿಸಿ, ಹೃದಯದ ಮೇಲೆ ಧರಿಸುವುದೇ ಉಪಾಯ. ದೇಹವೆನ್ನುವ ದೇವಾಲಯದ ಒಳಗಿರುವವನು ಶಿವ, ದೇಹದ ಮೇಲಿರುವುದು ಲಿಂಗ. ಎಂತಹ ಭಾವಾವೇಶದಿಂದ ಬಸವಣ್ಣನವರು ಶಿವನನ್ನು ನೆನೆಯುತ್ತಿದ್ದಾರೆ ನೋಡಿರಿ:
ಜಗದಗಲ  ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತ ನಿಮ್ಮ ಶ್ರೀಮುಕುಟ!
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲ ಸಂಗಮ ದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!

ಲಿಂಗವೆನ್ನುವುದು ಕೇವಲ ಪ್ರತಿಮೆಯಲ್ಲ; ಅದು ನಿಜವಾಗಿಯೂ ಶಿವನೇ ಎನ್ನುವ ಭಕ್ತಿಪಾರಮ್ಯವನ್ನು ನಾವು ವಚನದಲ್ಲಿ ಕಾಣಬಹುದು.
ಅಂತರಂಗದೊಳಗಿರ್ದ ನಿರವಯವಲಿಂಗವನು
ಸಾವಯವ ಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು;
ಮೂಲಚೈತನ್ಯವೆ ಭಾವಲಿಂಗವು
ಇದನರಿದು ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನುದಾದಲ್ಲದೆ, ಇದಿರಿಟ್ಟು ತೋರುವದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ,
ಕೂಡಲಸಂಗಮದೇವಾ.

ನನ್ನ ಕೈಯಲ್ಲಿರುವ ಲಿಂಗವಷ್ಟೇ ದೇವರೆ? ಇಡೀ ವಿಶ್ವವೇ ಆ ಚೈತನ್ಯದ ಅಭಿವ್ಯಕ್ತಿ ಎನ್ನುವ ಅರಿವನ್ನು ಭಕ್ತರಲ್ಲಿ ಮೂಡಿಸುವ ಉದ್ದೇಶದಿಂದ ಬಸವಣ್ಣನವರು ಭಕ್ತರಿಗೆ ದೇವನ ವಿಶ್ವರೂಪದರ್ಶನವನ್ನೂ ಮಾಡಿಸುತ್ತಾರೆ:
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲ ವಿಸ್ತಾರದ ರೂಹು ನೀನೇ ದೇವಾ,
ವಿಶ್ವತಶ್ಚಕ್ಷುನೀನೇ ದೇವಾ,
ವಿಶ್ವತೋಮುಖನೀನೇ ದೇವಾ,
ವಿಶ್ವತೋಬಾಹುನೀನೇ ದೇವಾ,
ವಿಶ್ವತಃಪಾದನೀನೇ ದೇವಾ, ಕೂಡಲಸಂಗಮದೇವಾ.

ದೇವಾಲಯಗಳನ್ನು, ಈ ದೇವರುಗಳನ್ನು ತಮ್ಮ ಖಾಸಗಿ ಆಸ್ತಿಯಂತೆ ಉಪಭೋಗಿಸುತ್ತಿರುವ ಅರ್ಚಕವೃಂದವನ್ನು ತಿರಸ್ಕರಿಸಿದ್ದು ಮೊದಲ ಹೆಜ್ಜೆಯಾದರೆ, ಈ ಅರ್ಚಕವೃಂದದ ವೃಥಾಚರಣೆಗಳನ್ನು ಬಯಲಿಗೆಳೆಯುವುದು ಮತ್ತೊಂದು ಹೆಜ್ಜೆ.
ಹಾರುವನ ಭಕ್ತಿ ಓಡಿನೊಳಗೆ ಅಗೆಯ ಹೊಯ್ದಂತೆ
ಕೆಳಕೆ ಬೇರೂರದು, ಮೇಲೆ ಫಲವಾಗದು.
ಪ್ರಾಣಲಿಂಗದ ಪ್ರಸಾದವ ಮುಂದಿಟ್ಟುಕೊಂಡು
ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ,
ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾಎಂಬ
ಕರ್ಮಿಗಳನೇನೆಂಬೆ ಕೂಡಲಸಂಗಮದೇವಾ?

() ಹೊಸ ಮಾರ್ಗದ ನೀತಿಸಂಹಿತೆಯ ನಿರ್ಮಾಣ:
ಹೊಸ ಮಾರ್ಗದ ನಿರ್ಮಾಣವಾದರೆ ಸಾಲದು.  
ಈ ಮಾರ್ಗದಲ್ಲಿ ನಡೆಯುವ ಶರಣರಿಗೆ ಒಂದು ನೀತಿಸಂಹಿತೆ ಬೇಕು.  
ಬಸವಣ್ಣನವರು ಶರಣರಿಗೆ ಹಾಕಿಕೊಡುವ ನೀತಿಸಂಹಿತೆ ಹೀಗಿದೆ:
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ.
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಮೂಗು ಮುಚ್ಚಿಕೊಂಡು ನೀರಿನಲ್ಲಿ ಮುಳುಗುವದರಿಂದ ಕಾಯಶುದ್ಧಿಯಾಗುವುದಿಲ್ಲ; ಅಂತರಂಗ ಹಾಗು ಬಹಿರಂಗಶುದ್ಧಿಗಾಗಿ ನಮ್ಮ ವೈಯಕ್ತಿಕ ಸಾಧನೆ ಏನಿರಬೇಕು ಎನ್ನುವುದನ್ನು ಬಸವಣ್ಣನವರು ಮೇಲಿನ ವಚನದಲ್ಲಿ ಹೇಳಿದ್ದಾರೆ. ಇನ್ನು ಶರಣರ  ನಡತೆ ಹೇಗಿರಬೇಕು ಎನ್ನುವುದನ್ನು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ:

ಛಲ ಬೇಕು ಶರಣಂಗೆ ಪರಧನವನೊಲೆನೆಂಬ
ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ
ಛಲ ಬೇಕು ಶರಣಂಗೆ ಪರದೈವನೊಲೆನೆಂಬ
ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೆಂಬ
ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ.

ಉಪದೇಶವನ್ನು ಇತರರಿಗೆ ಕೊಟ್ಟರೆ ಸಾಲದು. ಮೊದಲು ತಾನೇ ಅದರಂತೆ ನಡೆದು ತೋರಿಸಬೇಕು! ಅಪರಿಗ್ರಹ, ಅಸ್ತೇಯ ಇದು ಮೊದಲು ತಮ್ಮಜೀವನನೀತಿಯಾಗಬೇಕು.  ಬಸವಣ್ಣನವರು ಅದನ್ನು ತಮಗೂ ಅನ್ವಯಿಸಿಕೊಳ್ಳುತ್ತ ಹೀಗೆ ಹೇಳಿದ್ದಾರೆ :
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ!
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವಾ.
ತಮ್ಮಲ್ಲಿರುವ ಧನಸಂಪತ್ತಿಯಲ್ಲವೂ ಶರಣರಿಗೆ ಅರ್ಪಿತ, ಲೋಕಹಿತಕ್ಕಾಗಿ ಅರ್ಪಿತ ಎನ್ನುವ ಭಾವವನ್ನು ಬಸವಣ್ಣನವರು ವಚನದ ಮೂಲಕ ತೋರುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಇರುವ ಸಂಪತ್ತಿಗೆಲ್ಲ ಸಂಗಮನಾಥನೇ ಒಡೆಯ. ಆದುದರಿಂದ ಆತ ಕೊಟ್ಟದ್ದನ್ನು ಇಸಿದುಕೊಂಡು ಶರಣರಿಗಾಗಿ ವಿನಿಯೋಗಿಸುವುದೇ ಉಚಿತ ಎನ್ನುವುದನ್ನು ಬಸವಣ್ಣನವರು ವಚನದಲ್ಲಿ ಹೇಳುತ್ತಾರೆ:
ಒಡೆಯನ ಕಂಡರೆ ಕಳ್ಳನಾಗದಿರಾ, ಮನವೇ!
ಭವದ ಬಾಧೆಯ ತಪ್ಪಿಸಿಕೊಂಬರೆ
ನೀನು ನಿಯತನಾಗಿ, ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು ಮನವೇ!
ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋನುವಡೆ
ಕಿಂಕರನಾಗಿ ಬದುಕು ಮನವೇ!
(ಕಠೋಪನಿಷತ್ತಿನ ಒಂದು ವಾಕ್ಯವೂ ಇದೇ ಅರ್ಥವನ್ನು ಹೇಳುತ್ತದೆ: ಈಶಾವಾಸ್ಯಮಿದಂ ಸರ್ವಂ ಯತ್ಕಿಂಚದುರಿತಂ ಮಯಿ; ತೇನ ತ್ಯಕ್ತೇನ ಭುಂಜೀಥಾಃ ಮಾಗೃಧ  ಕಸ್ಯಸ್ವಿದ್ಧನಮ್|)

ಲಿಂಗಭಕ್ತಿಯಷ್ಟೇ ಸಾಲದು, ಜಂಗಮಭಕ್ತಿಯೂ ಬೇಕು. ಜಂಗಮರು ವಿರಾಗಿಗಳು; ಸನ್ನಡತೆಯನ್ನು, ಸದ್ಭಕ್ತಿಯನ್ನು ಸಾರುತ್ತ ಸಂಚರಿಸುವವರು. ಆದುದರಿಂದ ಲಿಂಗಪೂಜೆಗಿಂತ ಮೊದಲು ಜಂಗಮಪೂಜೆಯಾಗಬೇಕು.
ಜಂಗಮನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ
ಅಂಗವಣಿಯೆಂತೋ? ಶಿವ ಶಿವಾ!
ನಿಂದಿಸುವ ಪೂಜಿಸುವ ಪಾತಕವಿದು ಕೇಳಲಾಗದು.
ಗುರುವಿನ ಗುರು ಜಂಗಮ
ಇಂತೆಂದುದು ಕೂಡಲಸಂಗನ ವಚನ.

ಜಂಗಮಸೇವೆಯೆ ಗುರುಪೂಜೆಯೆಂದರಿದ,
ಜಂಗಮಸೇವೆಯೆ ಲಿಂಗಪೂಜೆಯೆಂದರಿದ,
ಜಂಗಮಸೇವೆಯೆ ತನ್ನಿರವೆಂದ,
ಜಂಗಮಸೇವೆಯೆ ತನ್ನ ನಿಜವೆಂದರಿದ,
ಜಂಗಮಸೇವೆಯೆ ಸ್ವಯವೆಂದರಿದ,
ಜಂಗಮಸೇವೆಯೆ ನಿತ್ಯಪದವೆಂದರಿದ,
ಇದು ಕಾರಣ, ನಮ್ಮ ಕೂಡಲಸಂಗಮದೇವರಲ್ಲಿ
ಜಂಗಮಪ್ರಾಣಿಯಾದ ಚಂದಯ್ಯನ ಹಳೆಮಗನಾಗಿ,
ಆತನ ಶ್ರೀಚರಣಕೆ ಶರಣೆಂದು ಶುದ್ಧನು,
ಮಹಾಮಹಿಮನ ಘನವ  ನಾನೆತ್ತ ಬಲ್ಲೆನಯ್ಯಾ, ಪ್ರಭುವೆ
ಕೂಡಲಸಂಗಮದೇವಾ?

ಅಕಸ್ಮಾತ್, ಜಂಗಮರು ಢೋಂಗಿ ಜಂಗಮರಾಗಿದ್ದರೆ? ಬಸವಣ್ಣನವರು ಜಂಗಮನನ್ನು ಅಳೆಯಲು ನಾನಾರು ಅಥವಾ ನೀವಾರು ಎಂದು ಕೇಳುತ್ತಾರೆ:
ಲಾಂಛನಕೆ ಶರಣೆಂಬೆ
ಅಂತರಂಗವ ನೀವೇ ಬಲ್ಲಿರಿ,
ಕೂಡಲಸಂಗಮದೇವಾ!
ಲಿಂಗಲಾಂಛನವನ್ನು ಧರಿಸಿದ ಜಂಗಮನು ಶಿವಸಮಾನನು. ಇದು ಬಸವಣ್ಣನವರ  ನಿಶ್ಚಿತವಾದ
ಅಭಿಮತ. ತನ್ನ ಸ್ವ-ಗುರು, ತನ್ನ ದೈವವಾದ ಲಿಂಗ ಹಾಗು ಸಮಾಜದ ಗುರುವಾದ ಜಂಗಮ ಇವರನ್ನು ಹೇಗೆ ಪೂಜಿಸಬೇಕೆಂದು ಬಸವಣ್ಣನವರು ವಚನದಲ್ಲಿ ಹೇಳಿದ್ದಾರೆ:
ತನುವ ಕೊಟ್ಟು ಗುರುವನೊಲಿಸಬೇಕು,
ಮನವ ಕೊಟ್ಟು ಲಿಂಗವನೊಲಿಸಬೇಕು,
ಧನವ ಕೊಟ್ಟು ಜಂಗಮನೊಲಿಸಬೇಕು.
ತ್ರಿವಿಧವ ಹೊರಗು ಮಾಡಿ,
ಹರೆಯ ಹೊಯಿಸಿ, ಕುರುಹು ಪೂಜಿಸುವವರ ಮೆಚ್ಚ
ಕೂಡಲಸಂಗಮದೇವ.

ಮೂರು ಕ್ರಿಯೆಗಳನ್ನು ಭಕ್ತಿಯಿಂದ ಮಾಡುವವರು ಇಲ್ಲಿಯೂ ಸಲ್ಲುತ್ತಾರೆ, ಅಲ್ಲಿಯೂ ಸಲ್ಲುತ್ತಾರೆ.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ,
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ.
ಕೂಡಲಸಂಗಮದೇವಾ.

ಹಾಗೆಂದು ಶರಣಪಥವು ಸುಲಭದ ಹಾದಿಯಲ್ಲ; ಇದು ಮುಳ್ಳಿನ ಹಾದಿ. ಕೂಡಲಸಂಗಮನು ತನ್ನ ಶರಣರನ್ನು ಕಾಡುವ ಪರಿಯನ್ನು ಬಸವಣ್ಣನವರು ಹೀಗೆ ಬಣ್ಣಿಸಿದ್ದಾರೆ:
ಅಯ್ಯಾ, ನೀ ಒಲಿದಡೆ ತಿರಿವಂತೆ ಮಾಡುವಿರಿ,
ತಿರಿದಡೆ ನೀಡದಂತೆ ಮಾಡುವಿರಿ,
ನೀಡಿದಡೆ ಅಕ್ಕಿ ಬೀಳುವಂತೆ ಮಾಡುವಿರಿ,
ಬಿದ್ದಡೆ ನಾಯಿ ತಿಂಬಂತೆ ಮಾಡುವಿರಿ,
ನಿಮ್ಮ ಧ್ಯಾನದಲ್ಲಿ ನಾನಿಪ್ಪಂತೆ ಮಾಡುವಿರಿ
ಕೂಡಲಸಂಗಮದೇವಾ.
 ( ಸಂದರ್ಭದಲ್ಲಿ ಶಿಶುನಾಳ ಶರೀಫರ ಇದೇ ಅರ್ಥ ಕೊಡುವ ಗೀತೆಯ ಎರಡು ನುಡಿಗಳನ್ನು ನೆನೆಸಿಕೊಳ್ಳುವುದು ಸಮಂಜಸವಾಗುತ್ತದೆ.
ಬಡತನವೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ

ಗಂಡಸ್ತನ ಇಲ್ಲದಂತಾಗಲಿ
ಹೆಂಡಿರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿಕುಂಡಿ ಸಾಲ್ದವರೊದೆಯಲಿ
ಬಂಡು ಮಾಡಿ ಜನರು ನಗಲಿ)

() ಸಮಾಜದಲ್ಲಿ ಬೇರೂರಿದ ಮೇಲುಕೀಳು ಭಾವನೆಯ ನಿರ್ಮೂಲನೆ:
ಬಸವಣ್ಣನವರು ಇಟ್ಟ ಹೆಜ್ಜೆಗಳಲ್ಲಿ ಇದು ಅತಿ ಮಹತ್ವದ ಹೆಜ್ಜೆಯಾಗಿದೆ. ಮನುಷ್ಯರೆಲ್ಲರೂ ಒಂದೇ; ಯಾರೂ ಮೇಲಲ್ಲ ಅಥವಾ ಕೀಳಲ್ಲ ಎನ್ನುವ ಸಂದೇಶವನ್ನು ಸಾರುವ ಸಲುವಾಗಿ ಬಸವಣ್ಣನವರು ತಮ್ಮನ್ನೇ ಮೊದಲು ಜರಿದುಕೊಳ್ಳುತ್ತಾರೆ:
ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ  ನೋಡಯ್ಯಾ,
ದಾಸಯ್ಯ ಶಿವದಾನವನೆರೆಯ  ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ
ಉನ್ನತಮಹಿಮಾ,
ಕೂಡಲಸಂಗಮದೇವಾ, ಶಿವಧೋ! ಶಿವಧೋ!

ಮುಂದುವರಿದು, ಕೀಳುಕುಲದವರೆಂದು ಕರೆಯಲಾಗುತ್ತಿದ್ದವರ ಮಗನು ತಾನೆಂದು ಹೇಳಿಕೊಳ್ಳುತ್ತಾರೆ:
ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರೂ ಹೊಲದಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವನ ಸಾಕ್ಷಿಯಾಗಿ.
( ವಚನದಲ್ಲಿ ಮತ್ತೊಂದು ತತ್ವ ಅಡಗಿದೆ. ಮದುವೆ ಎಂಬುದು ಆಡಂಬರದ ಆಚರಣೆಯಾಗಬೇಕಿಲ್ಲ. ನಿಸರ್ಗಸಹಜವಾದ ಒಲವಿನಿಂದ ಗಂಡು ಹಾಗು ಹೆಣ್ಣು ಬೆರೆಯುವುದು ಸಹ ವಿವಾಹವೇ.)

ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ.
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ?

ಆದುದರಿಂದ ಶರಣರೆಲ್ಲ ಒಂದೇ. ‘ಇವನಾರವ? ’ ಎಂದು ಕೇಳದಿರಿ.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವಎಂದೆನಿಸಯ್ಯಾ.
ಕೂಡಲಸಂಗಮದೇವಾ,
ನಿಮ್ಮ ಮನೆಯ ಮಗನೆಂದೆನಿಸಯ್ಯಾ!

(ಕನ್ನಮಾರಿ ಎನ್ನುವ ಕಳ್ಳನು ಬಸವಣ್ಣನವರ ಧನಸಂಪತ್ತನು ಅಪಹರಿಸಲು ಅವರ ಮನೆಗೆ ಜಂಗಮವೇಷಧಾರಿಯಾಗಿ ಬರುತ್ತಾನೆ. ಬಸವಣ್ಣನವರು ತಮ್ಮದೆಲ್ಲವನ್ನು ಅವನೆದುರಿಗೆ ತೆರೆದಿಟ್ಟದ್ದಲ್ಲದೆ, ಅವನನ್ನು ಹಿಡಿಯಲು ಬಂದ ಬಿಜ್ಜಳನ ಸೈನಿಕರಿಂದ ಅವನನ್ನು ರಕ್ಷಿಸುತ್ತಾರೆ. ಬಸವಣ್ಣನವರ ವ್ಯಕ್ತಿತ್ವಕ್ಕೆ ಬೆರಗಾದ ಕನ್ನಮಾರಿಯು, ನಿಜವಾದ ಶರಣನಾಗಿ ಪರಿವರ್ತಿತನಾಗುತ್ತಾನೆ. ಶ್ರೀ ವ್ಯಾಸ ದೇಶಪಾಂಡೆಯವರುಇವ ನಮ್ಮವಎನ್ನುವ ತಮ್ಮ ನಾಟಕದಲ್ಲಿ ಘಟನೆಯನ್ನು ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ.)

() ತತ್ವದರ್ಶನ
ಸನಾತನ ಸಂಪ್ರದಾಯದ ಹಿಡಿತದಲ್ಲಿ ಸಿಲುಕಿ ನರಳುತ್ತಿರುವ ತಳವರ್ಗದ ಜನರಿಗೆ ಬಸವಣ್ಣನವರು ಹೊಸ ಬಾಳನ್ನುಕೊಟ್ಟರು, ಬದುಕುವ ಹೊಸ ರೀತಿಯನ್ನು ತೋರಿಸಿದರು. ಬಸವಣ್ಣನವರಿಗಿಂತಲೂ ಮೊದಲು ಸಹ ಇಂತಹ ಪ್ರಯತ್ನಗಳು ನಡೆದಿರಲಿಲ್ಲವಂತಲ್ಲ. ಬಸವಣ್ಣನವರೇ ತಮ್ಮ ವಚನದಲ್ಲಿಆದ್ಯರ ವಚನವಿರಲುಎಂದು ಇಂತಹ ಕ್ರಾಂತಿಕಾರಿಗಳನ್ನು ನೆನೆದಿದ್ದಾರೆ.
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು,
ತವರಾಜದ ನೆರೆ ತೆರೆಯಂತೆ ಆದ್ಯರ ವಚನವಿರಲು,
ಬೇರೆ ಭಾವಿಯ ತೋಡಿ, ಉಪ್ಪನೀರನುಂಬುವ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲ ಸಂಗಮ ದೇವಾ.

ಹೊಸ ಪಂಥಕ್ಕೆ ತತ್ವವೊಂದರ ಅಡಿಪಾಯ ಬೇಕಷ್ಟೆ. ತತ್ವವು ಸನಾತನ ಪಂಥದ ವೇದೋಪನಿಷತ್ತುಗಳನ್ನು ಆಧರಿಸಿದ ತತ್ವವಲ್ಲ. ಬಸವಣ್ಣನವರಿಗಿಂತ ಮೊದಲಿದ್ದಆದ್ಯ ಬೋಧನೆಯು ತವರಾಜದ ನೊರೆತೆರೆಯಂತಿರಲು, ವೇದೋಪನಿಷತ್ತುಗಳ ಬೋಧನೆಯು ಉಪ್ಪುನೀರಿನಂತಿದೆ! ಬಸವಪೂರ್ವದ ಅನೇಕವಚನಕಾರರು ಸಾಮಾಜಿಕ ಅಸಮಾನತೆಯನ್ನು ಹೀಗಳೆದಿದ್ದಾರೆ. ‘ಕಾಯಕವೇ ಕೈಲಾಸಎಂದು ದುಡಿತದ ಮಹತ್ವವನ್ನು ಹೇಳಿದ್ದಾರೆ. ಬಸವಣ್ಣನವರೂ ಸಹ ಇದೇ ತತ್ವವನ್ನು ತಮ್ಮ ವಚನಗಳಲ್ಲಿ ಸಾರಿದ್ದಾರೆ. ಆದರೆ, ಇದಷ್ಟೇ ಸಾಲದು. ಭಗವಚ್ಚೈತನ್ಯದ ಗುಣಲಕ್ಷಣಗಳನ್ನು, ಪ್ರಕೃತಿನಿಯಮಗಳನ್ನು ಅರಿತುಕೊಳ್ಳಲು ಸಾಧಕನು ಬಯಸುವುದು ಸಹಜವಾಗಿದೆ. ಸನಾತನ ಸಂಪ್ರದಾಯಿಗಳು, ದೇವನು ನಿರ್ಗುಣನು ಅಥವಾ ಸಗುಣನು ಎನ್ನುವ ವಿಷಯಕ್ಕೆ ವಾದ ಮಾಡಿದ್ದಾರೆ. ದ್ವೈತ ಸರಿಯೋ ಅದ್ವೈತ ಸರಿಯೋ ಎಂದು ಚಿಂತನ ಮಾಡಿದ್ದಾರೆ. ಬಸವಣ್ಣನವರು ದೇವರ ಸಗುಣರೂಪವನ್ನು ಶರಣರ ಎದುರಿಗೆ ಇಟ್ಟರು. (ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ರಾಧಾಕೃಷ್ಣನ್ ಹೇಳಿದ ಮಾತನ್ನು ಇಲ್ಲಿ ನೆನೆಯಬೇಕು:
ಸೃಷ್ಟಿಗೆ ದೇವರು ಎಷ್ಟು ಅವಶ್ಯವೋ, ದೇವರಿಗೆ ಸೃಷ್ಟಿಯೂ ಸಹ ಅಷ್ಟೇ ಅವಶ್ಯವಾಗಿದೆ.’ ) ಇತರ ಧರ್ಮಗಳಲ್ಲಿ ದೇವನು ನಿರಾಕಾರನು. ಆದರೆ ಭಾರತೀಯ ಪಂಥಗಳಲ್ಲಿ ದೇವರು ಸಾಕಾರನಷ್ಟೇ ಅಲ್ಲ,  ದೇವರ ವೈಯಕ್ತೀಕರಣವೂ ಗಿದೆ. ಇಲ್ಲಿ ದೇವರು ಭಕ್ತನ ಮನೆಯ ಸೇವಕನೂ ಆಗಬಲ್ಲನು. (ಸಂತ ಸಖೂಬಾಯಿಯ ಕಥೆಯನ್ನೆ ನೆನೆಯಿರಿ.) ಒಡೆಯನೂ ಆಗಬಲ್ಲನು. ಪರಮ ಉದಾರನೂ ಆಗಬಲ್ಲನು. ಪೈಗೆ ಪೈ ಬಿಟ್ಟುಕೊಡದ ಶೆಟ್ಟಿಯೂ ಆಗಬಲ್ಲನು!
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಶೆಟ್ಟಿ,
ಒಮ್ಮನವಾದೊಡೆ ಒಡನೆ ನುಡಿವನು,
ಇಮ್ಮನವಾದೊಡೆ ನುಡಿಯನು.
ಕಾಣಿಯ ಸೋಲ, ಅದ್ದಗಾಣಿಯ ಗೆಲ್ಲ!
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ!
ದೇವರನ್ನು ನ್ಯಾಯಯುತ ಶೆಟ್ಟಿಗೆ ಹೋಲಿಸುವ ಮೂಲಕ ಬಸವಣ್ಣನವರು ಶರಣರನ್ನು ಎಚ್ಚರಿಸಿದ್ದಾರೆ. ಶರಣಪಥದಲ್ಲಿ ನಡೆಯುವುದು ಹಗ್ಗದ ಮೇಲಿನ ನಡಿಗೆಯಷ್ಟೇ ಕಠಿಣವಾಗಿದೆ!

ದೇವರ ಹಾಗು ಭಕ್ತನ ಸಂಬಂಧವು ಜನ್ಮದ್ದಲ್ಲ. ಇದು ಅನಾದಿಯಾದದ್ದು ಎಂದು ಬಸವಣ್ಣನವರು ತಮ್ಮ ವಚನದಲ್ಲಿಈ ರೀತಿಯಾಗಿ ಹೇಳಿದ್ದಾರೆ:
ಕಾಳಿಯ ಕಂಕಾಳದಿಂದ ಮುನ್ನ
ತ್ರಿಪುರಸಂಹಾರದಿಂದ ಮುನ್ನ
ಹರಿವಿರಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ, ಮುನ್ನ, ಮುನ್ನ,
ಗೆಳೆಯ ನೀನು ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವಾ!
ಶಿವನು ತನ್ನ ಗೆಳೆಯನಾದರೆ, ಭಕ್ತನೂ ಸಹ ಶಿವನಷ್ಟೇ ಹಳೆಯನು!
( ಸಂದರ್ಭದಲ್ಲಿ ಕೃಷ್ಣನು ಅರ್ಜುನನಿಗೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಹೇಳಿದ ಮಾತನ್ನು ಜ್ಞಾಪಿಸಿಕೊಳ್ಳಬಹುದು: ‘ಅರ್ಜುನಾ, ನಾನು ಹಾಗು ನೀನು ಇಬ್ಬರೂ ಅನೇಕ ಜನ್ಮಗಳನ್ನು ಎತ್ತಿದ್ದೇವೆ. ಎಲ್ಲ ಜನ್ಮಗಳನ್ನು ನಾನು ಬಲ್ಲೆ; ನೀನು ಅರಿಯೆ!)

ಶಿವನಷ್ಟೇ ಹಳೆಯನಾದ ಭಕ್ತನಿಗೆ ಶಿವನೊಡನೆ ಇದ್ದ ಸಂಬಂಧವೆಂತಹದು? ಅದನ್ನು ಬಸವಣ್ಣನವರು ವಚನದಲ್ಲಿ ಸ್ಪಷ್ಟ ಪಡಿಸುತ್ತಾರೆ:
ಅಯ್ಯಾ ನೀನು ನಿರಾಕಾರನಾಗಿರ್ದಲ್ಲಿ
ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ
ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ
ಅಯ್ಯಾ ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ
ಅಯ್ಯಾ ನೀನೆನ್ನ ಭವವ ಕೊಂದಿಹೆನೆಂದು
ಜಂಗಮಲಾಂಛನವಾಗಿ ಬಂದಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ
ಕೂಡಲಸಂಗಮದೇವಾ.

ವಚನದಲ್ಲಿ ಮೂರು ಮಾತುಗಳು ಸ್ಪಷ್ಟವಾಗಿವೆ:
() ದೇವನು ಅವ್ಯಕ್ತನೂ ಹೌದು ( ‘ಅಯ್ಯಾ, ನೀನು ನಿರಾಕಾರನಾಗಿರ್ದಲ್ಲಿ’).
() ಭಕ್ತನು ದೇವನ ವಾಹನ ಅರ್ಥಾತ್ ದೇವನಿಗೆ ವ್ಯಕ್ತರೂಪ ಪಡೆಯಲು ಭಕ್ತನು ಅವಶ್ಯಕ. (ಅಯ್ಯಾ ನೀನು ಆಕಾರವಾಗಿರ್ದಲ್ಲಿ)
() ‘ಭಕ್ತನು ಜ್ಞಾನವಾಹನ, ಚೈತನ್ಯವಾಹನ ಹಾಗು ವೃಷಭವಾಹನನಾಗಿದ್ದಾನೆಎನ್ನುವ ರೂಪಕಗಳು ಜ್ಞಾನಶಕ್ತಿ, ಇಚ್ಛಾಶಕ್ತಿ ಹಾಗು ಕ್ರಿಯಾಶಕ್ತಿ ಎನ್ನುವ ತ್ರಿವಿಧಶಕ್ತಿಗಳ ಪ್ರತೀಕಗಳಾಗಿವೆ. ಶಕ್ತಿಗಳು ಶಿವೆಯಲ್ಲಿ ಇವೆ ಎಂದು ಶಾಕ್ತದರ್ಶನಗಳು ಹೇಳುತ್ತವೆ. ಆದುದರಿಂದ ದೇವನು ಶಿವನಾದರೆ, ಭಕ್ತನು ಶಿವನ ಆರ್ಧಾಂಗಿನಿಯಾದ ಶಿವೆ!

ಅಲ್ಲಮಪ್ರಭುಗಳು ತತ್ವಜ್ಞಾನಿಗಳು. ಅವರು ನಿರಾಕಾರದಲ್ಲಿ ಬೆರೆತು ಹೋದವರು. ಆದರೆ ಬಸವಣ್ಣನವರು ಶರಣರಿಗೆ ಸುಲಭವಾಗಲೆಂದು ಸಾಕಾರಭಕ್ತಿಯನ್ನು ಪ್ರಚುರಗೊಳಿಸಿದವರು. ಅಲ್ಲಮಪ್ರಭುಗಳ ಒಂದು ವಚನದಲ್ಲಿ ಅವರು, ‘ಗುಹೇಶ್ವರ ಸತ್ತು, ನಾನುಳಿದೆಎನ್ನುತ್ತಾರೆ.

ಭಕ್ತ ಎನ್ನುವುದು ಒಂದು ಉಪಾಧಿಯಾದರೆ, ಶಿವ ಅಥವಾ ಗುಹೇಶ್ವರ ಎನ್ನುವುದೂ ಒಂದು ಉಪಾಧಿಯೇ. ಉಪಾಧಿಗಳು ಇರುವವರೆಗೆ, ಮೋಕ್ಷದ ಕೊನೆಯ ಮೆಟ್ಟಿಲು ಅಂದರೆ ಭಗವಚ್ಚೈನ್ಯದಲ್ಲಿ ಮುಳುಗಿ ಏಕರಸವಾಗುವುದು ಶಕ್ಯವಿಲ್ಲ. ಸಮರಸದ ಕ್ಷಣದಲ್ಲಿ ಉಳಿಯುವುದು ಸಚ್ಚಿದಾನಂದ ಭಾವ ಮಾತ್ರ. ಸತ್ ಅಂದರೆ ಇರುವಿಕೆ, ಚಿತ್ ಅಂದರೆ ಅರಿವು ಅರ್ಥಾತ್ ಇರುವಿಕೆಯ ಅರಿವು. ಅರಿವಿನಿಂದ ಉಂಟಾಗುವ ಆನಂದವೇ ಸಚ್ಚಿದಾನಂದವು. ಇದು ಅಲ್ಲಮಪ್ರಭುಗಳ ಅದ್ವೈತತತ್ವ.

ಬಸವಣ್ಣನವರು ವೈಯಕ್ತಿಕ ಮೋಕ್ಷವನ್ನು ಬೇಡಿದವರಲ್ಲ. ಶಿವಭಕ್ತಿಯಲ್ಲಿಯೇ ಸುಖ ಕಂಡವರು. ಸಮಾಜದ ಎಲ್ಲ ವರ್ಗದವರಿಗೂ ಶಿವನನ್ನು ತೋರಿಸಲು ಸಂಚಲಿಸಿದವರು. ಅದಕ್ಕಾಗಿ ಲಿಂಗಪೂಜೆ, ಜಂಗಮಪೂಜೆ, ಶಿವಭಕ್ತಿ ಎನ್ನುವ ಮಾರ್ಗವನ್ನು ತೋರಿಸಿದವರು. ಇದು ಬಸವಣ್ಣನವರ ದ್ವೈತ ತತ್ವ. ಸನಾತನ ಮಾರ್ಗದಲ್ಲಿ ವೈಯಕ್ತಿಕ ಸಾಧನೆಗೆ ಮಹತ್ವವಿದೆ. ಬಸವಣ್ಣನವರು ಸಮಷ್ಟಿಮಾರ್ಗದ ಸಾಧನೆಯ ಪಥವನ್ನು ತೋರಿಸಿದರು. ಇದಕ್ಕಾಗಿ ಅನುಭವಮಂಟಪವನ್ನು ರೂಪಿಸಿದರು.

ಕೆಲವು ಆಧುನಿಕರು ಬಸವಣ್ಣನನ್ನು ಬುದ್ಧನಿಗೆ ಹಾಗು ಮಾರ್ಕ್ಸನಿಗೆ ಹೋಲಿಸುತ್ತಾರೆ. ಬುದ್ಧನು ದೇವರ ಇರುವಿಕೆಯ ಬಗೆಗೆ ಏನೂ ಹೇಳಲಿಲ್ಲ. ಬಹುಶಃ ಆತನು ಅಜ್ಞೇಯವಾದಿಯಾಗಿರಬಹುದು. ಬಸವಣ್ಣನವರು ಪರಮ ಶಿವಭಕ್ತರು. ಬುದ್ಧನ ಅನುಯಾಯಿಗಳು ಭಿಕ್ಷುಗಳಾದರು. ಇದು ಸಮಾಜದ ಮೇಲೊಂದು ಭಾರ. ಆದರೆ ಬಸವಣ್ಣನವರ ಅನುಚರರು ಶರಣರಾದರು. ತಮ್ಮ ಕಾಯಕದಲ್ಲಿ ನಿಷ್ಠೆ ಉಳ್ಳವರಾದರು. ಇದು ಸಮಾಜದ ಸ್ಥೈರ್ಯದ ಹಾದಿ. (ಆದರೆ ಕ್ರಾಂತಿ ದುರಂತದಲ್ಲಿ ಕೊನೆಗೊಂಡಿದ್ದಕ್ಕಾಗಿ ಬೇರೆ ಕಾರಣಗಳಿವೆ.)

ಮಾರ್ಕ್ಸನು ಸಮತಾವಾದಿಯಾಗಿದ್ದರೂ ಸಹ ಆತನೂ ಸಹ ಧರ್ಮವನ್ನು ಹೀಗಳೆದವನೇ. ಆತನಿಂದ ಪ್ರಭಾವಿತವಾದ ಪ್ರಭುತ್ವಗಳಲ್ಲಿ ವ್ಯಕ್ತಿಗೌರವವಿಲ್ಲ. ಪ್ರತಿ ವ್ಯಕ್ತಿಯೂ ಸಮಾಜವೆನ್ನುವ ಒಂದು ಬೃಹತ್ ಯಂತ್ರದ ಒಂದು ಕ್ಷುಲ್ಲಕ ಭಾಗ ಮಾತ್ರ. ಆದುದರಿಂದ ಬಸವಣ್ಣನನ್ನು ಬುದ್ಧನಿಗಾಗಲೀ, ಮಾರ್ಕ್ಸನಿಗಾಗಲೀ ಹೋಲಿಸುವುದು ಸರಿಯಲ್ಲ.

ಇನ್ನು ಕೆಲಮಟ್ಟಿಗೆ ಶರಣಚಳುವಳಿಯನ್ನು ಯುರೋಪಿನಲ್ಲಿ ಜರುಗಿದ ಪ್ರೊಟೆಸ್ಟಂಟ ಚಳುವಳಿಗೆ ಹೋಲಿಸಬಹುದು. ಏಕೆಂದರೆ ಪ್ರೊಟೆಸ್ಟಂಟ ಚಳುವಳಿಯು ಚರ್ಚಿನ ವಿರುದ್ಧ ದೀನದಲಿತರ ಚಳುವಳಿಯಾಗಿತ್ತು. ಶರಣರ ಚಳುವಳಿಯು ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಗಳ ವಿರುದ್ಧ ಸಾಮಾನ್ಯರು ನಡೆಯಿಸಿದ ಚಳುವಳಿಯಾಗಿತ್ತು. ಬಸವಣ್ಣನವರು ಚಳುವಳಿಯ ಅಧ್ವರ್ಯುಗಳಾಗಿದ್ದರು.

ಏನೇ ಆದರೂ ನಮ್ಮ ಸಮಾಜವು ಇನ್ನೂ ಅಸಮ ಸಮಾಜವಾಗಿಯೇ ಉಳಿದಿದೆ. ಇಂತಹ ಸಂದರ್ಭದಲ್ಲಿತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’ ಎನ್ನುವ ಬಸವಣ್ಣನವರ ವಚನವು ನಮ್ಮಲ್ಲಿ ಧೈರ್ಯವನ್ನು ತುಂಬಬಲ್ಲ ಹಾಗು ಹೋರಾಟಕ್ಕಾಗಿ ಶಕ್ತಿಯನ್ನು ಪೂರೈಸಬಲ್ಲ ಸ್ಫೂರ್ತಿಯ ಸೆಲೆಯಾಗಿದೆ.

10 comments:

Mahantesh said...

Apologies writing in English.
I have few questions /clarification on basava/vachana movement.
1. Why this movement didn’t get as much as appreciation as other movements? Is it due all vachana’s were Kannada and no one able to translate them properly?
2. Now in Lingayat, all the traditions were fallowed were exactly same as that in Vaidic. So when and who modified all those true basava/Jangam philosophy? As you know, there are many castes exist in Lingayat which should be exactly opposite.
And finally, is there any book called Fa.Gu. Halakatti’s biography ?

Badarinath Palavalli said...

ತಡವಾದದ್ದಕ್ಕೆ ಕ್ಷಮೆ ಇರಲಿ ಸಾರ್.
ಸಾಧನೆಗಳ ಮೂರು ಮುಖಗಳು ವಿವರವಾಗಿ ಮನಮುಟ್ಟಿದವು.
ಶರಣಚಳುವಳಿಯು ಪ್ರೊಟೆಸ್ಟಂಟ ಚಳುವಳಿಯ ಜೊತೆ ಹೋಲಿಸಬಹುದೆನ್ನುವ ತಮ್ಮ ಮಾತು ಸರ್ವತ್ರ ನಿಜ.

prabhamani nagaraja said...

ಬಸವಣ್ಣನವರ ಸಾಧನೆಗಳನ್ನು ಅವರ ವಚನಗಳನ್ನು ಸಂದರ್ಭಾನುಸಾರ ಉದಾಹರಿಸುತ್ತಾ ಸುಧೀರ್ಘವಾಗಿ ಅರ್ಥಪೂರ್ಣವಾಗಿ ಮಂಡಿಸಿದ್ದೀರಿ ಸರ್.

sunaath said...

I too facing some problems writing in Kannada script! The Veerashaiva movement attracted even the king of Kashmir. So it was not a question of language barrier. In fact propagation of religious ideas also require royal patronage as has happened for Buddhism, Jainism and Vedic religion. Lingayat movement ended disastrously during the life of Basaveshwar himself. However it was revived by Lakkanna Dandanayaka, a minister in Vijayanagar empire. However it lost its original character and became a Church Religion, a religion of the ruling class. I

sunaath said...

Thank you, Badarinath.

sunaath said...

Thanks, madam.

Unknown said...

ತುಂಬಾ ಸಮಯದ ನಂತರ ನಿಮ್ಮ ಬ್ಲಾಗನ್ನು ಓದುತ್ತಿದ್ದೇನೆ.ಬಸವಣ್ಣನವರ ವಚನಗಳು ನನಗೆ ಇಷ್ಟ. ಸುದೀರ್ಘವಾಗಿ ಅರ್ಥಪೂರ್ಣವಾಗಿ ಬರೆದಿದ್ದೀರಿ.

sunaath said...

ಚಂದ್ರಶೇಖರರೆ,
ಬಸವಣ್ಣನವರರ ಬಗೆಗೆ ಎಷ್ಟು ಬರೆದರೂ ಕಡಿಮೆಯೆ! ನಿಮ್ಮ ಸ್ಪಂದನಕ್ಕಾಗಿ ಧನ್ಯವಾದಗಳು.

Unknown said...

Its not Veerashaiva It is Lingayath. Veerashaiva is just a cult in Old Dravadian Shaivism. Basavanna born in shaiva-brahmin family but opposed its rituals and beliefs to build a new way of beliefs called Lingayathism.

NaveenkumarMH said...

Yes true. ನಿಜ ಹೇಳಿದಿರಿ.