Wednesday, October 4, 2017

ಬಸವರಾಜ ಕಟ್ಟೀಮನಿ...ಬದುಕು, ಬರಹ...ಭಾಗ ೧



ಕನ್ನಡ ಕಾದಂಬರಿಸಾಹಿತ್ಯದ ನವೋದಯ ಕಾಲದಲ್ಲಿ ಅನಕೃ, ತರಾಸು, ನಿರಂಜನ, ಶಿವರಾಮ ಕಾರಂತ, ಬಸವರಾಜ ಕಟ್ಟೀಮನಿ ಮೊದಲಾದವರು ಪ್ರಮುಖ ಲೇಖಕರಾಗಿದ್ದರು. ಲೇಖಕರಲ್ಲಿ ಅನಕೃ ಹಾಗು ಅವರ ಶಿಷ್ಯರಾದ ತರಾಸು ಇವರು ಸರಳ ಶೈಲಿಯ ವ್ಯಕ್ತಿಕೇಂದ್ರಿತ, melodramatic ಕಥೆಗಳನ್ನು ಕಾದಂಬರಿಯ ರೂಪದಲ್ಲಿ ಬರೆದರೆ, ಆನಂತರದ ಅನೇಕ ಲೇಖಕರು (ಉದಾಹರಣೆಗೆ ತ್ರಿವೇಣಿ, ಎಮ್,ಕೆ. ಇಂದಿರಾ, ಆರ್ಯಾಂಬ ಪಟ್ಟಾಭಿ ಮೊದಲಾದವರು) ಇದೇ ಸಿದ್ಧಶೈಲಿಯಲ್ಲಿ ತಮ್ಮ ಕಾದಂಬರಿಗಳನ್ನು ರಚಿಸಿದರು. ಶಿವರಾಮ ಕಾರಂತರು ಮಾತ್ರ ಯಾವುದೇ ಅಲಂಕಾರವನ್ನು ಬಯಸದ ಭವ್ಯ ಗೊಮ್ಮಟೇಶ್ವರನಂತಹ ಶೈಲಿಯಲ್ಲಿ ಅನೇಕ ಕಾದಂಬರಿಗಳನ್ನು ರಚಿಸಿದರು. ಕಾರಂತರ ಕಾದಂಬರಿಗಳು ಮಾನವಪ್ರಯತ್ನ ಹಾಗು ಮಾನವೀಯತೆಯನ್ನು ಆದರ್ಶಗಳನ್ನಾಗಿ ಬಿಂಬಿಸಿದರೂ ಸಹ ಇವೂ ಸಹ ವ್ಯಕ್ತಿಕೇಂದ್ರಿತ ಕಾದಂಬರಿಗಳೇ. (ಒಬ್ಬ ವ್ಯಕ್ತಿಯ ಕಥೆಯನ್ನು ಕಾದಂಬರಿಯಾಗಿ ರೂಪಿಸಿ ಬರೆದರೂ ಸಹ, ಅದು ವ್ಯಕ್ತಿಕೇಂದ್ರಿತವಾಗಿರದೆ, ಮಾನವಪ್ರತೀಕವಾಗಿರುವ ಕಾದಂಬರಿಯ ಉದಾಹರಣೆಯಾಗಿ ಅರ್ನೆಸ್ಟ ಹೆಮಿಂಗ್ವೇಯ ‘The Oldman and the Sea’ಯನ್ನು ನೋಡಬಹುದು.)

ಇಂತಹ ವಾತಾವರಣದಲ್ಲಿ ಬಸವರಾಜ ಕಟ್ಟೀಮನಿಯವರು ಮಾತ್ರ ಕನ್ನಡದಲ್ಲಿ ಮೊಟ್ಟಮೊದಲಿಗರಾಗಿ thematic ಕಾದಂಬರಿಗಳನ್ನು ಬರೆದಿದ್ದಾರೆ. ಕಟ್ಟೀಮನಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ, ಗೋಕಾವಿ ತಾಲೂಕಿನ ಮಲಾಮರಡಿ ಎನ್ನುವ ಹಳ್ಳಿಯಲ್ಲಿ. ಈ ಹಳ್ಳಿಯು ಇವರ ತಾಯಿಯ ತವರೂರು. ಇವರ ಕಾದಂಬರಿಗಳೂ ಸಹ ಇದೇ ಪ್ರದೇಶದಲ್ಲಿ, ಇದೇ ಜವಾರಿ ಭಾಷೆಯಲ್ಲಿ ರೂಪುಗೊಂಡಿವೆ. ಅಲ್ಲದೆ, ಸಮಾಜದ ಭ್ರಷ್ಟತೆಯನ್ನು ಇವರಷ್ಟು ವಾಸ್ತವವಾಗಿ ನಿರೂಪಿಸಿದ ಕಾದಂಬರಿಕಾರರು ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಕಾರಣಗಳಿಂದ ಕನ್ನಡದಲ್ಲಿ ಇವರ ಕಾದಂಬರಿಗಳಿಗೆ ವಿಶಿಷ್ಟವಾದ, ಅನನ್ಯವಾದ ಸ್ಥಾನವಿದೆ.

ನವೋದಯ ಕಾಲದ ಕನ್ನಡ ಲೇಖಕರಲ್ಲಿ ಅತ್ಯಂತ ಹೋರಾಟದ ಬದುಕು ಎಂದರೆ ಬಸವರಾಜ ಕಟ್ಟೀಮನಿಯವರದು. ಇವರ ತಂದೆ ಬೆಳಗಾವಿ ಜಿಲ್ಲೆಯ ಸಶಸ್ತ್ರ ಪೋಲೀಸಪಡೆಯಲ್ಲಿ ಪೇದೆಯಾಗಿದ್ದರು. ಪ್ರಾಮಾಣಿಕತೆಯ ಫಲವಾಗಿ ಇವರಿಗೆ ಮೇಲಿಂದಮೇಲೆ, ಊರಿಂದ ಊರಿಗೆ ವರ್ಗವಾಗುತ್ತಿತ್ತು. ಹೀಗಾಗಿ ಕಟ್ಟೀಮನಿಯವರು ಬಡತನದಲ್ಲಿಯೇ ಬೆಳೆದರು. ಇವರ ಶಿಕ್ಷಣವೂ ಸಕ್ರಮವಾಗಿ ನಡೆಯಲಿಲ್ಲ. ಅಲ್ಲದೆ ಚಿಕ್ಕಂದಿನಿಂದಲೂ ಇವುರಿಗೆ ಅರೆಕಿವುಡತನ ಗಂಟು ಬಿದ್ದಿತ್ತು. ಇಷ್ಟಾದರೂ ಸಹ ಕಟ್ಟೀಮನಿಯವರು ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದಿರಲಿಲ್ಲ. ಶಾಲೆಯಲ್ಲಿದ್ದಾಗಲೇ ಕವನಗಳನ್ನು ರಚಿಸಿ, ಶಿಕ್ಷಕರಿಂದ ಮೆಚ್ಚುಗೆಯನ್ನು ಪಡೆದಿದ್ದರು.  

೧೫ನೆಯ ವರ್ಷದಲ್ಲಿಯೇ ಕಥೆಯನ್ನು ಬರೆಯಲು ಪ್ರಾರಂಭಿಸಿದ ಕಟ್ಟೀಮನಿಯವರು ತಮಗೆ ಹದಿನೆಂಟನೆಯ ವರ್ಷವಾದಾಗ, ಬಡತನದಿಂದಾಗಿ ಹೈಸ್ಕೂಲ ಶಿಕ್ಷಣವನ್ನು ತ್ಯಜಿಸಿ,  ೧೯೩೭ರಲ್ಲಿ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿಕೊಂಡರು. ಮರುವರ್ಷವೇ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದತರುಣ ಕರ್ನಾಟಕದಲ್ಲಿ ಉಪಸಂಪಾದಕರಾಗಿ ಸೇರಿಕೊಂಡರು. ಅದರಾಚೆಯ ವರ್ಷ ಅಂದರೆ ೧೯೩೯ರಲ್ಲಿ ಗದುಗಿನಕರ್ನಾಟಕ ಬಂಧುಪತ್ರಿಕೆಯಲ್ಲಿ ಇವರ ಉದ್ಯೋಗಪರ್ವ ಪ್ರಾರಂಭವಾಯಿತು.

ಮಧ್ಯೆ ಸ್ವಾತಂತ್ರ್ಯಚಳುವಳಿಯಲ್ಲಿ ಭಾಗವಹಿಸಿ, ಜೇಲುವಾಸವನ್ನು ಅನುಭವಿಸಿದರು. ೧೯೪೨ರಲ್ಲಿ ಸೆರೆಮನೆಯಿಂದ ಬಿಡುಗಡೆಯಾದ ಬಳಿಕ, ಅಂದರೆ ತಮ್ಮ ೨೩ನೆಯ ವಯಸ್ಸಿನಲ್ಲಿ ಬಸವರಾಜ ಕಟ್ಟೀಮನಿಯವರು ಬೆಂಗಳೂರಿನಲ್ಲಿ, ‘ಉಷಾಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾಹಸದಲ್ಲಿ ಮೋಸ ಹೋದ ನಂತರ, ೧೯೪೬ರಲ್ಲಿಸ್ವತಂತ್ರಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾಕಷ್ಟು ಜನಪ್ರಿಯತೆಯನ್ನು ಪಡೆದರೂ ಸಹ ಹಣಕಾಸಿನ ಅಭಾವದಿಂದಾಗಿಸ್ವತಂತ್ರವನ್ನು ಮುಚ್ಚಬೇಕಾಯಿತು.  ೧೯೪೮ರಲ್ಲಿ ದಾವಣಗೆರೆಯ ಉದ್ಯೋಗಪತಿಗಳು ಪತ್ರಿಕೆಯ ಹೆಸರನ್ನು ಬಂಡವಳನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ, ‘ಸ್ವತಂತ್ರ ಲಿಮಿಟೆಡ್ಎನ್ನುವ ಕಂಪನಿಯನ್ನು ಸ್ಥಾಪಿಸಿ, ಕಟ್ಟೀಮನಿಯವರ ಸಂಪಾದಕತ್ವದಲ್ಲಿ  ಸ್ವತಂತ್ರಪತ್ರಿಕೆಯನ್ನು ಪ್ರಾರಂಭಿಸಿದರು. ಅಲ್ಲಿಯೂ ಸಹ ತಮ್ಮ ರಾಜಕೀಯ ನಿಲುವಿನಿಂದಾಗಿ, ಮಾಲಕರೊಂದಿಗೆ ಹೊಂದಾಣಿಕೆಯಾಗದ್ದರಿಂದ, ಉದ್ಯೋಗವನ್ನು ಬಿಡಬೇಕಾಯಿತು. 

೧೯೪೯ರಲ್ಲಿ ದಾವಣಗೆರೆಯನ್ನು ತ್ಯಜಿಸಿದ ಕಟ್ಟೀಮನಿಯವರು  ಧಾರವಾಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಸ್ವಾತಂತ್ರ್ಯ ಹೋರಾಟಗಾರ ಘಾಣೇಕರ ಅವರು ಹೊರಡಿಸುತ್ತಿದ್ದಸಮಾಜಮಾಸಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಪತ್ರಿಕೆ ನಿಂತುಹೋಗಿದ್ದರಿಂದ ಕಟ್ಟೀಮನಿಯವರ ಕೈಯಲ್ಲಿ ಯಾವ ಉದ್ಯೋಗವೂ ಉಳಿಯಲಿಲ್ಲ. ಕಟ್ಟೀಮನಿಯವರು ಸಾಹಿತ್ಯಕೃಷಿಯಿಂದಲೇ ಹೊಟ್ಟೆ ಹೊರೆಯುವ ನಿರ್ಧಾರ ಮಾಡಿದರು. ೧೯೫೦ರಲ್ಲಿ ಅಂದರೆ ತಮ್ಮ ೩೧ನೆಯ ವಯಸ್ಸಿನಲ್ಲಿ ಬಸವರಾಜ ಕಟ್ಟೀಮನಿಯವರು ತಾವು ಹುಟ್ಟಿದ ಹಳ್ಳಿಗೆ ಅಂದರೆ ಮಲಾಮರಡಿಗೆ ಮರಳಿದರು, ಹೆಂಡತಿ ಹಾಗು ಎರಡನೆಯ ಚಿಕ್ಕ ಮಗುವಿನೊಡನೆ.

ಮಲಾಮರಡಿಯಲ್ಲಿ ಅವರಿಗೆ ವಸತಿಯಾಗಿ ಇದ್ದದ್ದು ತಮ್ಮ ತಾಯಿಯ ಒಂದು ಮುರುಕು ಮನೆ. ಇದೇ ಮುರುಕು ಮನೆಯಲ್ಲಿಯೇ ಅವರಿಗೆ ಖ್ಯಾತಿಯನ್ನು ತಂದುಕೊಟ್ಟ ಅವರ ಎರಡನೆಯ ಕಾದಂಬರಿಯಾದಮಾಡಿ ಮಡಿದವರುರಚನೆಯಾಯಿತು. ಮಲಾಮರಡಿಯಲ್ಲಿಯೇ ಒಂದು ಎಕರೆ ಭೂಮಿಯನ್ನು ಖರೀದಿ ಮಾಡಿದ ಕಟ್ಟೀಮನಿಯವರು, ತಮ್ಮ ಜಮೀನಿನಲ್ಲಿ ಸ್ವತಃ ರೈತರಂತೆಯೇ ಬೇಸಾಯ ಮಾಡಿದರು. ಅದರೊಂದಿಗೇ ಸಾಹಿತ್ಯಕೃಷಿಯೂ ಸತತವಾಗಿ ನಡೆದಿತ್ತು.

೧೯೫೦ರಿಂದ ೧೯೬೬ರವರೆಗಿನ ಹದಿನಾರು ವರ್ಷಗಳ ಅವಧಿಯಲ್ಲಿ ಅಂದರೆ ೧೯೬೬ರಲ್ಲಿ ಧಾರವಾಡದಲ್ಲಿ ವಸತಿ ಹೂಡುವವರೆಗೆ ಕಟ್ಟೀಮನಿಯವರು ಇದೇ ಹಳ್ಳಿಯ ಇದೇ ಮುರುಕು ಮನೆಯಲ್ಲಿ ೨೯ ಕಾದಂಬರಿಗಳನ್ನು ರಚಿಸಿದರು. ಭ್ರಷ್ಟ ಸಮಾಜಕ್ಕೆ ಆಘಾತ ನೀಡಿದ ಮೋಹದ ಬಲೆಯಲ್ಲಿ’, ‘ಜರತಾರಿ ಜಗದ್ಗುರುಸಹ ಇದೇ ಅವಧಿಯಲ್ಲಿ ರಚಿತವಾದ ಮೊದಲ ಕಾದಂಬರಿಗಳು. ೧೯೫೨ರಲ್ಲಿ ತಾವಿರುವ ಹಳ್ಳಿಯ ಸುಧಾರಣೆಗಾಗಿ ಜನರನ್ನು ಒಗ್ಗೂಡಿಸಿ, ಕಟ್ಟೀಮನಿಯವರು ಗ್ರಾಮಸುಧಾರಣಾ ಕಾರ್ಯಗಳನ್ನು ಕೈಕೊಂಡರು.

೧೯೬೮ರಲ್ಲಿ ತಮ್ಮ ೪೯ನೆಯ ವರ್ಷದಲ್ಲಿ ವಿಧಾನಪರಿಷತ್ತಿಗೆ ಕಟ್ಟೀಮನಿಯವರ ನಾಮಕರಣವಾಯಿತು. ೧೯೫೧ರಲ್ಲಿ ಅವರ ಮೂರನೆಯ ಕಾದಂಬರಿಯಾಗಿ ಪ್ರಕಟವಾದಜ್ವಾಲಾಮುಖಿಯ ಮೇಲೆಕಾದಂಬರಿಗೆ, ೧೯೬೮ರಲ್ಲಿ ಸೋವಿಯೆಟ್  ರಶಿಯಾದ ನೆಹರೂ ಪ್ರಶಸ್ತಿ ದೊರಕಿತು. ೧೯೬೯ರಲ್ಲಿ ಕಟ್ಟೀಮನಿಯವರು ರಶಿಯಾಯಾತ್ರೆಯನ್ನು ಮಾಡಿ ಬಂದರು. ೧೯೬೯ರಿಂದ ೧೯೭೨ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ೧೯೮೦ರಲ್ಲಿ ಬೆಳಗಾವಿಯಲ್ಲಿ ಜರುಗಿದ ಅಖಿಲಭಾರತ ೫೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಇವರಿಗೆ ಒಲಿದು ಬಂದಿತು.

೧೯೧೯ ಅಕ್ಟೋಬರ ೫ರಂದು ಮಲಾಮರಡಿಯಲ್ಲಿ ಜನಿಸಿದ ಬಸವರಾಜ ಕಟ್ಟೀಮನಿಯವರು ೧೯೮೯ ಅಕ್ಟೋಬರ ೨೩ರಂದು ಧಾರವಾಡದಲ್ಲಿ ನಿಧನರಾದರು. ಅವರ ಕೃಷಿಕ್ಷೇತ್ರ ಹಾಗು  ಸಾಹಿತ್ಯಕ್ಷೇತ್ರವಾದ ಮಲಾಮರಡಿಯಲ್ಲಿ ಅವರ ಸಮಾಧಿಯನ್ನು ಮಾಡಲಾಯಿತು.
(ವಿಷಯ ಹಾಗು ಚಿತ್ರಕ್ಕಾಗಿ ‘ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಇವರಿಗೆ ಕೃತಜ್ಞನಾಗಿದ್ದೇನೆ.)

5 comments:

sunaath said...

ಧನ್ಯವಾದಗಳು, ವಸಂತಕುಮಾರ!

ಜಲನಯನ said...

ಸುನಾಥಣ್ಣ ..ಬಸವರಾಜ ಕಟ್ಟಿಮನಿಯವರ ಪರಿಚಯ ಮಾಡಿಸಿದಿರಿ...ಅವರ ಕೃತಿಗಳನ್ನು ಹೆಚ್ಚು ಓದಿಲ್ಲವಾದರೂ ನಮಗೆ ಪಠ್ಯವಿಷಯಗಳಲ್ಲಿ ಅವರ ಕೃತಿ ಇದ್ದದ್ದು ನೆನಪಿದೆ. ಬಹುಶಃ ನಿಮ್ಮ ಸಮಯದಲ್ಲೂ ಇದ್ದಿರಬಹುದು... ಫೇಸ್ಬುಕ್ ವಾಟ್ಸಪ್ಪುಗಳು ಸೃಜನಶೀಲತೆಯನ್ನು ನುಂಗಿ ನೀರುಕುಡಿದಿರುವ ಈ ಸಮಯದಲ್ಲೂ ನಿಮ್ಮ ನಿರಂತರ ಕನ್ನಡ ಸಾಹಿತ್ಯ ಕುರಿತ ಚಿಂತನ ಮಂಥನಗಳು, ಲೇಖನಗಳು... ನಿಜಕ್ಕೂ ಲೇಖಕರಿಗೆ ಪಾಠವಾಗಬೇಕು. ಧನ್ಯವಾದ ಅಣ್ಣ....

sunaath said...

ಜಲನಯನ,
ಕನ್ನಡದಲ್ಲಿ ಎಂತೆಂತಹ ಲೇಖಕರು ಆಗಿ ಹೋಗಿಲ್ಲ! ಇವರೆಲ್ಲರ ಸಾಹಿತ್ಯಸುಧೆಯನ್ನು ಸವಿದ ಭಾಗ್ಯ ಕನ್ನಡ ಓದುಗರದು. Of course, ಇತರ ಭಾಷೆಗಳಲ್ಲಿಯೂ ಉತ್ಕೃಷ್ಟ ಸಾಹಿತ್ಯದ ರಚನೆಯಾಗಿದೆ. ಆದರೆ ತಮಿಳು, ತೆಲಗು ಹಾಗು ಮರಾಠಿ ಸಾಹಿತ್ಯದ ಕೆಲವೇ ಕೆಲವು ಅನುವಾದಿತ ಕೃತಿಗಳನ್ನು ಓದಿ ನಾನು ಸಂತೋಷ ಪಟ್ಟಿದ್ದೇನೆ. ಈ ಸವಿಯನ್ನು ಆದಷ್ಟು ಮಟ್ಟಿಗೆ ನಿಮಗೆ ಹಂಚದಿದ್ದರೆ, ನಾನು ಸ್ವಾರ್ಥಿಯಾದಂತಲ್ಲವೆ?

Unknown said...

ಬಸವರಾಜ ಕಟ್ಟೀಮನಿಯವರು ನಿಧನರಾಗಿದ್ದು ಅಕ್ಟೋಬರ್ ೨೩, ೧೯೮೯. ಇಲ್ಲಿ ೧೯೮೦ ಅಂತ ಇದೆ. ಇದು ತಪ್ಪು.
-ಶಿವಕುಮಾರ ಕಟ್ಟೀಮನಿ

sunaath said...

ಧನ್ಯವಾದಗಳು,ಕಟ್ಟೀಮನಿಯವರೆ. ಇದೀಗ ತಪ್ಪನ್ನು ಸರಿಪಡಿಸಿದ್ದೇನೆ.