Wednesday, February 27, 2008

ಕರಗಿದ ಕನಸಲ್ಲಿ . .

ಶ್ರೀಮತಿ ಎಸ್. ಅರುಂಧತಿ ಇವರು ಉತ್ತರ ಕನ್ನಡ ಜಿಲ್ಲೆಯ ನವ್ಯೋತ್ತರ ಕವಯಿತ್ರಿ. ’ಉಳಿದ ತಂತು’ ಹಾಗು ’ಹರಿಯುತ್ತಿರಲಿ ನದಿ’ ಇವು ಇವರ ಪ್ರಕಟಿತ ಕವನ ಸಂಕಲನಗಳು. ’ಹರಿಯುತಿರಲಿ ನದಿ’ ಸಂಕಲನದಿಂದ ಒಂದು ಕವನವನ್ನು ಆಯ್ದು ಇಲ್ಲಿ ಕೊಡಲಾಗಿದೆ.



ಕರಗಿದ ಕನಸಲ್ಲಿ . .

ಎದುರಲ್ಲಿ ಸುಳಿದ ಚಲುವ
ಕನಸಲ್ಲಿ ಬಂದೇ ಬಿಟ್ಟ
ಚಂದ್ರ ನಕ್ಷತ್ರಗಳ ದಿಬ್ಬಣ ತಂದೇ ಬಿಟ್ಟ
ಮೈ ತುಂಬ ಹುಣ್ಣಿಮೆಯ ಹರಿಸಿದ
ತಂಗಾಳಿಯಾಗಿ ತೀಡಿ
ನೈದಿಲೆಯ ಕೆನ್ನೆಗೆ ಸವರಿ
ಸಾಕೆ? ಇನ್ನೂ ಬೇಕೆ? ಎಂದ
ಬೇಕೆನಲು ಬಿಗಿದಪ್ಪಿ ಮುತ್ತಿಟ್ಟ
ಬೆಳಕು ಹರಿಯಲು ಚಲುವ
ಕಣ್ಣಲ್ಲೇ ಕರಗಿ ಹೋಗಿ ಬಿಟ್ಟ

Saturday, February 23, 2008

ಪಾತರಗಿತ್ತಿ ಪಕ್ಕಾ

’ಪಾತರಗಿತ್ತಿ ಪಕ್ಕಾ’ ಇದು ಬೇಂದ್ರೆಯವರ ಒಂದು ಅದ್ಭುತ ಕವನ. ಪಾತರಗಿತ್ತಿಯ ಸುಳಿದಾಟವನ್ನು ಗಮನಿಸಿರಿ. ನಿಮ್ಮ ಕಣ್ಣೆದುರಿಗೇ ಅದು ಸುತ್ತಾಡಿದರೂ ಸಹ ಅದರ ಸುಳಿದಾಟವನ್ನು trace ಮಾಡುವದು ಅಸಾಧ್ಯವಾಗುತ್ತದೆ.

Brevity; ಇದು ಪಾತರಗಿತ್ತಿಯ ಸುಳಿದಾಟದ ಮೋಹಕ ಲಕ್ಷಣ.
ಈ ಲಕ್ಷಣವನ್ನು ಕವನದ metreನಲ್ಲಿ ಅತಿ ಸಹಜವಾಗಿ ಅಳವಡಿಸಿದ್ದಾರೆ ಬೇಂದ್ರೆ. ಬೇಂದ್ರೆಯವರು ಕಂದ, ಷಟ್ಪದಿ, ಸುನೀತ, ಮುಕ್ತಛಂದಸ್ಸು ಮೊದಲಾದ ಎಲ್ಲ ಕಾವ್ಯಛಂದಸ್ಸುಗಳನ್ನೂ ಬಳಸಿಕೊಂಡಿದ್ದಾರೆ. ಕಾವ್ಯವೆನ್ನುವ ಆತ್ಮಕ್ಕೆ ಛಂದಸ್ಸು ಎನ್ನುವ ಶರೀರ ಸಹಜವಾಗಿರಬೇಕು: ಇದು ಬೇಂದ್ರೆ ಕಾವ್ಯದ ಲಕ್ಷಣ.
ಪಾತರಗಿತ್ತಿಯ ಸುಳಿದಾಟದಲ್ಲಿ ಕ್ಷಿಪ್ರತೆ (ಅಥವಾ brevity) ಇರುವಂತೆಯೇ ದಣಿವರಿಯದ ಹಾರಾಟವೂ ಇರುತ್ತದೆ. ನಿಮ್ಮ ಮನೆಯ ಮುಂದೆಯೇ ಅದು ಮೈಲುಗಟ್ಟಲೆ ಸುಳಿದಾಡಿರಬಹುದು. ತನ್ನ ದಿನದ ಸುಳಿದಾಟದಲ್ಲಿ ಇಡೀ ಅಡವಿಯನ್ನೇ ಅದು ತಿರುಗಿರಬಹುದು. ಪಾತರಗಿತ್ತಿಯ ಸುಳಿದಾಟದಷ್ಟೇ ದೀರ್ಘ ಹಾಗು ಸ್ವಾರಸ್ಯಕರವಾಗಿದೆ ಬೇಂದ್ರೆಯವರ ಈ ಕವನ. ಪಾತರಗಿತ್ತಿ ಮುಟ್ಟಿದ ಎಲ್ಲ ಹೂವುಗಳನ್ನೂ ಬೇಂದ್ರೆ ಮುಟ್ಟಿದ್ದಾರೆ. ಆ ಕಾಲದಲ್ಲಿ ಧಾರವಾಡದ ಪರಿಸರದಲ್ಲಿ ಅರಳುತ್ತಿರುವ ಎಲ್ಲ ಹೂವುಗಳೂ ಈ ಕವನದಲ್ಲಿ ಬಂದಿವೆ. ಸೂರ್ಯಪಾನ, ತುರುಬಿ, ಕಳ್ಳಿ, ರುದ್ರಗಂಟಿ, ವಿಷ್ಣುಗಂಟಿ, ಮದಗುಣಕಿ, ಸೀಗಿ, ಗೊರಟಿಗೆ, ಮಾಲಿಂಗನ ಬಳ್ಳಿ, ಗುಲಬಾಕ್ಷಿ, ಅಡವಿ ಮಲ್ಲಿಗಿ ಅಂತೂ ಸರಿಯೆ; ಹೇಸಿಗೆ ಹೂವನ್ನೂ ಸಹ ಬಿಟ್ಟಿಲ್ಲ.
’ಹೇಸಿಗೆ ಹೂವಿನ ಬಳಿಗೆ
ಹೋಗಿ ಒಂದs ಗಳಿಗೆ’ ಎಂದು ಆ ಹೂವಿಗೂ ಸಹ ತಕ್ಕ ಮನ್ನಣೆ ತೋರಿಸಿದ್ದಾರೆ.
ನಾಯಿ ಛತ್ತರಿಗಿ ಹಾಗೂ ಗುಬ್ಬಿ ಬೆಳಸಿಗೂ ಸಹ ಈ ಪಾತರಗಿತ್ತಿ ಸಂದರ್ಶನ ನೀಡಿದೆ.

ಬೇಂದ್ರೆಯವರ ಕವನದಲ್ಲಿ ವಾಸ್ತವತೆ ಒಡೆದು ಕಾಣುವ ಲಕ್ಷಣವೆನ್ನಲು , ಈ ಕೆಳಗಿನ ಸಾಲುಗಳನ್ನು ನೋಡಬಹುದು:
“ಹಡಿಯೆ ಬೀಜ ಗಂಡು
ಹಾರ ಹರಿಕಿ ಅಂದು”
ದ್ವಿಲಿಂಗಿ ಸಸ್ಯಗಳಿಗೆ ಪಾತರಗಿತ್ತಿ ’ಗಂಡು ಹಡೆ’ ಎಂದು ಹಾರೈಸುತ್ತದೆ.

“ಇಷ್ಟು ಎಲ್ಲಾ ಮಾಡಿ
ಸಪ್ಪಳಿಲ್ಲದಾಡಿ”
ಈ ವಾಸ್ತವತೆ ಬೇಂದ್ರೆಯವರನ್ನು ಬೆರಗುಗೊಳಿಸುತ್ತದೆ.

ಪಾತರಗಿತ್ತಿ ಎಷ್ಟೆ ದೂರ ಸುಳಿದಾಡಲಿ, ಅದರ ಜೀವನ ಕ್ಷಣಿಕ. ಈ ವಾಸ್ತವತೆ ಸಹ ಈ ಕವನದ ಕೊನೆಯ ಸಾಲುಗಳಲ್ಲಿ ಅದ್ಭುತವಾಗಿ ವ್ಯಕ್ತವಾಗಿದೆ:
“ಕಾಣದೆಲ್ಲೊ ಮೂಡಿ
ಬಂದು ಗಾಳಿಗೂಡಿ

ಇನ್ನು ಎಲ್ಲಿಗೋಟ?
ನಂದನದ ತೋಟ!”

೩೯ ದ್ವಿಪದಿಗಳ “ಪಾತರಗಿತ್ತಿ ಪಕ್ಕಾ” ಒಂದು ಅದ್ಭುತ ಕವನ.

Friday, February 22, 2008

ಬೇಂದ್ರೆ ಶೈಲಿ

“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತ: ಪಿತರೌ ವಂದೇ ಪಾರ್ವತೀಪರಮೇಶ್ವರೌ.”
ಕಾಲಿದಾಸನ ಕಾವ್ಯದ ನಾಂದೀವಾಕ್ಯವಿದು.ಇದು ಕಾವ್ಯಲಕ್ಷಣಸೂತ್ರವೂ ಅಹುದು. ಈ ಕಾವ್ಯಲಕ್ಷಣ ಬೇಂದ್ರೆಯವರ ಕವನಗಳ ಲಕ್ಷಣವೂ ಆಗಿದೆ. ಬೇಂದ್ರೆಯವರ ಕಾವ್ಯ ತೋರಿಕೆಗೆ ಅತಿ ಸರಳ. ಅದರಲ್ಲಿ ಅಡಗಿರುವ ಅರ್ಥ ಹಾಗೂ ಭಾವ ಮಾತ್ರ ಸಂಕೀರ್ಣವಾದದ್ದು. ಬಾಲ ಕೃಷ್ಣ ತಾಯಿ ಯಶೋದೆಗೆ ತನ್ನ ಬಾಯಲ್ಲಿಯೇ ಬ್ರಹ್ಮಾಂಡವನ್ನು ತೋರಿಸಿದಂತೆ, ಬೇಂದ್ರೆ ಓದುಗರಿಗೆ ತಮ್ಮ ಬಿಡಿಕವನಗಳಲ್ಲಿ ಬ್ರಹ್ಮಾಂಡವನ್ನೇ ತೋರಿಸುತ್ತಾರೆ.
“ಕರಡಿ ಕುಣಿತ” ಇದು ಬೇಂದ್ರೆಯವರ ಒಂದು ಸರಳ ಕವಿತೆ. ಆ ಕವಿತೆಯ ಈ ಸಾಲುಗಳನ್ನು ಗಮನಿಸಿ:
“ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ;
’ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಎಂದಾನೊ.”

ಆದಿಮಾನವರ ಸರಳ ಗುಂಪುಗಳು ಯಾವರೀತಿಯಲ್ಲಿ ಸಂಕೀರ್ಣ ಸಮಾಜವ್ಯವಸ್ಥೆಯಾಗಿ ರೂಪುಗೊಂಡುವು ಹಾಗು fuedal ಸಮಾಜ ವ್ಯವಸ್ಥೆ ಯಾವ ರೀತಿಯಲ್ಲಿ ಅಕೃತ್ರಿಮ ಮಾನವರ ಶೋಷಣೆ ಮಾಡುತ್ತದೆ ಎನ್ನುವದನ್ನು ಈ ನಾಲ್ಕು simple ಸಾಲುಗಳು ಹೇಳುವಷ್ಟು ಚೆನ್ನಾಗಿ ಯಾವ ಸಮಾಜವಿಜ್ಞಾನಿಯೂ ವರ್ಣಿಸಲಾರ. ಈ ಶೋಷಣೆಯ ಮತ್ತೊಂದು ಮುಖ ಅವರ “ಕರಿಮರಿ ನಾಯಿ” ಕವನದಲ್ಲಿದೆ.
“ಕರಿಮರಿ ನಾಯಿ ಕುಂಯಿಗುಡತಿತ್ತು,
ಭಟ್ಟರ ಬಾಯಿ ಒಟಗುಡತಿತ್ತು.”
ದಲಿತರ ಹಾಗು ಮೇಲ್ವರ್ಗದವರ ನಡುವಿನ ಸಂಕೀರ್ಣ ಶೋಷಣಾ ವ್ಯವಸ್ಥೆಯನ್ನು ಇಷ್ಟು ಚೆನ್ನಾಗಿ ಯಾವ ಕನ್ನಡ ಲೇಖಕನೂ ಹೇಳಿರಲಾರ.

೧೯೪೨ನೆಯ ಸಾಲಿನಲ್ಲಿ ಭಾರತ (-ಮುಖ್ಯವಾಗಿ ಬಂಗಾಲ-) ಅನುಭವಿಸಿದ ಬರಗಾಲಕ್ಕೆ “ಡೌಗಿ ಬರ” ಎಂದು ಕರೆಯಲಾಗುತ್ತದೆ. ಭಾರತದ ರೈತರು ಬೆಳೆದ ಅಕ್ಕಿಯನ್ನು ಜಾಗತಿಕ ಯುದ್ಧದಲ್ಲಿ ತೊಡಗಿದ ಮಿತ್ರರಾಷ್ಟ್ರದ ಸೈನಿಕರಿಗೆ ಕಳುಹಿಸಲಾಗುತ್ತಿತ್ತು. ಹೀಗಾಗಿ ಬಂಗಾಲದಲ್ಲಿ ಅನೇಕ ರೈತರು ಹೊಟ್ಟೆಗಿಲ್ಲದೆ ಸತ್ತರು. ಇವರ ಶವಗಳನ್ನು ಯುರೋಪಿನ ವೈದ್ಯಕೀಯ ವಿದ್ಯಾಲಯಗಳಿಗೆ smuggle ಮಾಡಲಾಗುತ್ತಿತ್ತು.[ಹೆಚ್ಚು ವಿವರಗಳು ಬೇಕಾದರೆ, “ಹುಲಿ ಸವಾರಿ” ಎನ್ನುವ ಕಾದಂಬರಿಯನ್ನು ಓದಬಹುದು. ಭವಾನಿ ಭಟ್ಟಾಚಾರ್ಯರ ಬಂಗಾಲಿ ಕಾದಂಬರಿಯನ್ನು ಗೀತಾ ಮೋಹನ ಮುರಲಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.] ಸರಕಾರದ ಈ ಜನವಿರೋಧಿ ಧೋರಣೆಯನ್ನು ಹಾಗು ಅದರ ಪರಿಣಾಮದ artificial scarcityಯನ್ನು ಬೇಂದ್ರೆ ಐದೇ ಸಾಲುಗಳಲ್ಲಿ ಸರಳವಾಗಿ ತೋರಿಸಿದ್ದಾರೆ:
“ಕಿಕ್ಕಿರಿ ತುಂಬಿದೆ ಭೂಮಿಯ ಕಣಜ,
ಕಕ್ಕಸ ಬಡುತಿದೆ ಬೊಕ್ಕಸದೊಡಲು,
ಬಾಳಿಗಿಂತಲೂ ಕೂಳೇ ಮೇಲೊ?
ಬರಿದೊ ಬರಿದು, ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲ.”

ಬೇಂದ್ರೆಯವರ ಕವನಗಳನ್ನು ಒಂದು ಕಾರಣಕ್ಕಾಗಿ ಪುರಂದರದಾಸರ ಹಾಡುಗಳಿಗೆ ಹೋಲಿಸಬಹುದು. ಅದು ತೋರಿಕೆಯ ಸರಳ ಶೈಲಿ. ಬೇಂದ್ರೆಯವರ ಕವನಗಳಲ್ಲಿ ಇರುವಂತೆಯೇ ಪುರಂದರದಾಸರ ಸರಳ ಕೀರ್ತನೆಗಳಲ್ಲಿ ಸಹ ಸಂಕೀರ್ಣ ಅರ್ಥ ಅಡಗಿದೆ. ಪುರಂದರದಾಸರ ಅತ್ಯಂತ ಸರಲವಾದ ಪದ್ಯ: “ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ?” ಮೇಲ್ನೋಟದಲ್ಲಿ ಈ ಪದ್ಯ ಮನುಜನ ಮನಸ್ಸು ನಾಯಿ ಬಾಲದಂತೆ ಡೊಂಕು ಎನ್ನುವ ಅರ್ಥವನ್ನಷ್ಟೇ ಹೇಳುತ್ತದೆ. ಪುರಂದರದಾಸರ ಪೂರ್ವಾಶ್ರಮದ ಹೆಸರು ’ಶ್ರೀನಿವಾಸ ನಾಯಕ’ ಎನ್ನುವದನ್ನು ಗಮನಿಸಿದಾಗ, ದಾಸರು ಈ ಪ್ರಶ್ನೆಯನ್ನು ತಮ್ಮ ಮನಸ್ಸಿಗೇ ಕೇಳಿಕೊಳ್ಳುತ್ತಿರುವ ಅರ್ಥ ಹೊಳೆಯುತ್ತದೆ.

ಸಂಕೀರ್ಣ ಅರ್ಥವನ್ನು ಹೊಳೆಯಿಸಲು ಬೇಂದ್ರೆಯವರು ವಿರೋಧಾಭಾಸವನ್ನು ಬಳಸುತ್ತಾರೆ. ಈ ಸಾಲನ್ನು ನೋಡಿರಿ:
“ಅಮೃತಂತ ಬಾಯಿ ಚಪ್ಪರಿಸತಾವ,
ಕೇಳಿ ಕಣ್ಣು ಮಿಟಕತದ ರಾತ್ರಿ.”
ನಲ್ಲ, ನಲ್ಲೆಯರು ಪರಸ್ಪರರ ಚುಂಬನ ಅಮೃತಸಮಾನವೆಂದು ಭಾವಿಸುತ್ತಿದ್ದಾರೆ; ಈ ಚಪ್ಪರಿಕೆಯನ್ನು ಕೇಳಿದ ರಾತ್ರಿ ಕಣ್ಣು ಮಿಟಕಿಸುತ್ತದೆ” ಎನ್ನುವದು ತೋರಿಕೆಯ ಅರ್ಥ. ಪ್ರೇಮಿಗಳಿಗೆ ಇದು ಅ-ಮೃತ, everlasting ಎಂದು ತೋರಬಹುದು. ಆದರೆ ಇದು ಕಣ್ಣು ಮಿಟುಕಿಸುವ ಅವಧಿ, slips into timeless oblivion ಎನ್ನುವದು ಬೇಂದ್ರೆಯವರು ತಮ್ಮ ಒದುಗರಿಗೆ ಕೊಡಮಾಡುವ ಎರಡನೆಯ ಅರ್ಥ.

Saturday, February 16, 2008

ಬೇಂದ್ರೆ

“ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ” ಇದು ವರಕವಿ ಬೇಂದ್ರೆಯವರ ಒಂದು ಮನೋಜ್ಞವಾದ ಕವನ. ಈ ಕವಿತೆಯಲ್ಲಿ “ಬೇಲಿಗೂ ಹೂಬೆರಳಿದೆ” ಎನ್ನುವ ಒಂದು ಸಾಲು ಬರುತ್ತದೆ. ಬೇಲಿ ಮನೆಯ ಕಾವಲುಗಾರ. ಬೇಲಿಯನ್ನು ದಾಟಿ ಅತಿಕ್ರಮಣ ಮಾಡುವ ಧೈರ್ಯ ಅಪರಿಚಿತರಿಗೆ ಬರಲಾರದು. The job of fence is defence (against encroachers). ಇಂತಹ ಬೇಲಿಗೂ ಸಹ ಹೂಬೆರಳಿದೆ. ಮನೆಯ ಮಿತ್ರರನ್ನು ಈ ಬೇಲಿ ಹೂವುಗಳ ಹಸ್ತಲಾಘವದೊಂದಿಗೆ ಸ್ವಾಗತಿಸುತ್ತದೆ. ಇದು ಮೇಲ್ನೋಟಕ್ಕೆ ತೋರುವ ಅರ್ಥ. ಬೇಂದ್ರೆಯವರ ಅನೇಕ ಕವನಗಳಲ್ಲಿ ಇಂತಹ ವಿರೋಧಾಭಾಸದ ಅರ್ಥಚಮತ್ಕಾರ ಎದ್ದು ಕಾಣುತ್ತದೆ.
ಉದಾಹರಣೆಗೆ “ಎಲೆಗಳ ಮೇಲೆ ಹೂಗಳ ಒಳಗೆ ಅಮೃತದಾ ಬಿಂದು…..”.
ಒಂದು ಕ್ಷಣದಲ್ಲಿ ಕರಗಿ ಹೋಗುವ ಇಬ್ಬನಿಗೆ ಬೇಂದ್ರೆ “ಅ-ಮೃತದಾ ಬಿಂದು” ಎಂದು ಕರೆಯುತ್ತಾರೆ. ಆದರೆ, “ಬೇಲಿಗೂ ಹೂಬೆರಳಿದೆ” ಎನ್ನುವ ಮಾತಿನಲ್ಲಿ ಮತ್ತೂ ಒಂದು ಅರ್ಥವಿದೆ. ಬೇಂದ್ರೆಯವರ ಕಾಲದಲ್ಲಿ ಧಾರವಾಡದಲ್ಲಿಯ ಮನೆಗಳಿಗೆ ಕಲ್ಲಿನ ಅಥವಾ ಇಟ್ಟಂಗಿಯ ಅವರಣದ ಗೋಡೆಗಳು ಸಾಮಾನ್ಯವಾಗಿ ಇರುತ್ತಿರಲಿಲ್ಲ. ಕಾಂಕ್ರೀಟ್ ಅಂತೂ ಆಗ ಇರಲೇ ಇಲ್ಲ. ಸಾಧಾರಣವಾಗಿ ಎಲ್ಲ ಮನೆಗಳ ಆವರಣಗಳಿಗೆ ಬಿಳಿ ಅಥವಾ ನೀಲಿ ಬಣ್ಣದ tube shaped ಹೂವುಗಳ ಬೇಲಿಯದೇ ಆವರಣವಿರುತ್ತಿತ್ತು. ಇದು “ಬೇಲಿಗೂ ಹೂಬೆರಳಿದೆ” ಎನ್ನುವ ಸಾಲಿನ ವಾಸ್ತವ ಅರ್ಥ. ಈ ತರಹದ ವಾಸ್ತವತೆ ಬೇಂದ್ರೆಯವರ ಕಾವ್ಯದ ಒಂದು ವೈಶಿಷ್ಟ್ಯವಾಗಿದೆ. ಬೇಂದ್ರೆಯವರ ಕಲ್ಪನಾಶಕ್ತಿ ಅಗಾಧವಾದದ್ದು.ಆದರೆ ಅವರ ಕಲ್ಪನೆಯ ಕುದುರೆ ಎಂದೂ ವಾಸ್ತವತೆಯ ಗೆರೆ ದಾಟಲಿಲ್ಲ. ಸಾಮಾನ್ಯವಾಗಿ ಕಾಣುವ ಸಾಲಿನಲ್ಲಿಯೂ ಸಹ ಈ ವಾಸ್ತವತೆಯ ಜೋಡಣೆ ಮಾಡುವ ಕಲ್ಪಕಶಕ್ತಿ ವರಕವಿಗಳಿಗೆ ಮಾತ್ರ ಸಾಧ್ಯ.
ಉದಾಹರಣೆಗೆ ಅವರ “ಕುಣಿ ಕುಣಿ ನವಿಲೆ, ಕುಣಿ ಕುಣಿ” ಕವನದಲ್ಲಿ “ಬೇಸಿಗೆ ಬಿಸಿಲಿಗೆ ಬಾಯ್ಬಿಡುತಿದೆ ಧರೆ” ಎನ್ನುವ ಸಾಲು ಬರುತ್ತದೆ. ಧರೆ ನೀರಡಿಸಿದೆ ಎನ್ನುವದು ಕಲ್ಪನೆಯ ಮಾತಾದರೆ, ಬಿಸಿಲಿನಿಂದಾಗಿ ಭೂಮಿಯಲ್ಲಿ ಕೊರೆ ಬೀಳುವದು ವಾಸ್ತವ ದೃಶ್ಯ. ಇದರಂತೆ “ಹಕ್ಕಿ ಹಾರುತಿದೆ ನೋಡಿದಿರಾ” ಕವನದಲ್ಲಿ “ಗಾವುದ ಗಾವುದ ಗಾವುದ ದೂರಕೆ, ಎವೆ ತೆರೆದಿಕ್ಕುವ ಹೊತ್ತಿನ ಒಳಗೆ” ಎನ್ನುವ ಸಾಲು ಬರುತ್ತದೆ. ಭಾರತೀಯ ಕಾಲಮಾನದಲ್ಲಿ ಕನಿಷ್ಠ ಮಾಪನವೆಂದರೆ “ನಿಮಿಷ”. ಕಣ್ಣುರೆಪ್ಪೆಯನ್ನು ಬಡೆಯುವ ಕಾಲಾವಧಿಗೆ “ನಿಮಿಷ”ವೆಂದು ಕರೆಯುತ್ತಾರೆ. (ದೇವತೆಗಳು ಕಣ್ಣು ಮುಚ್ಚುವದಿಲ್ಲವೆಂದೇ , ಅವರು ’ಅನಿಮೇಷ’ರು.) ಮಾನವಜೀವಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದಷ್ಟು, ಅವನನ್ನು ಬೆಚ್ಚಿ ಬೀಳಿಸುವಷ್ಟು ಕ್ಷಿಪ್ರವಾಗಿ ಕಾಲ ಸಾಗುತ್ತದೆ ಎನ್ನುವದನ್ನು ಹೇಳುತ್ತಲೆ, ಬೇಂದ್ರೆ ಕಾಲಮಾನದ ವಾಸ್ತವ ಪರಿಮಾಣವನ್ನು (ನಿಮಿಷ=ಎವೆ ತೆರೆದಿಕ್ಕುವ ಹೊತ್ತಿನ ಒಳಗೆ) ಬಳಸಿಕೊಳ್ಳುತ್ತಾರೆ.
ಇಂತಹ ಅನೇಕ ಉದಾಹರಣೆಗಳು ಅವರ ಕವನಗಳಲ್ಲೆಲ್ಲ ಕಾಣಸಿಗುತ್ತವೆ. “ಶರಪಂಜರ” ಚಲನಚಿತ್ರದಲ್ಲಿ ಬಳಸಿಕೊಳ್ಳಲಾದ ಅವರ ಕವನ “ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ” ಎನ್ನುವ ಕವನದಲ್ಲಿಯ ಈ ಸಾಲು ವಿಶ್ವ ಪ್ರಣಯವನ್ನು ಪ್ರತಿನಿಧಿಸುವಂತೆಯೆ, ಎರಡು ಧ್ರುವಗಳ ನಡುವೆ ಇರುವ magnetic force ಎನ್ನುವ ವಾಸ್ತವತೆಯನ್ನೂ ದರ್ಶಿಸುತ್ತದೆ.
ಬೇಂದ್ರೆ-ಕವನಗಳ ವಾಸ್ತವಿಕತೆ ಅನೇಕ ಸಲ documentationದ ಕಾರ್ಯವನ್ನೂ ಸಹ ನಿರ್ವಹಿಸುತ್ತದೆ.
“ಬೇಲಿಗೂ ಹೂಬೆರಳಿದೆ” ಎನ್ನುವ ಕಾವ್ಯೋಕ್ತಿ ಒಂದು ಕಾಲಾವಧಿಯಲ್ಲಿ ಧಾರವಾಡದ ಮನೆಯ ಆವರಣಗಳನ್ನು documentation ಮಾಡಿದಂತೆಯೆ, ಅವರ ಇನ್ನೊಂದು ಕವನ “ಹುಬ್ಬಳ್ಳಿಯಾಂವಾ” ಸಹ documentationದ ಒಂದು ಅತ್ಯುತ್ತಮ ಉದಾಹರಣೆ.
“ಭಾರಿ ಜರದ ವಾರಿ ರುಮಾಲಾ ಸುತ್ತಿಕೊಂಬಾವಾ, ತುಂಬ ಮೀಸಿ ತೀಡಿಕೋತ ಹುಬ್ಬ ಹಾರಿಸಾಂವಾ” ಎನ್ನುವ ಸಾಲು ಆ ಕಾಲಾವಧಿಯ ರಸಿಕರ ವಾಸ್ತವ ಚಿತ್ರಣ ನೀಡುತ್ತದೆ. ಇದಕ್ಕೂ ಮುಖ್ಯವಾಗಿ,
“ಕಸಬೇರ ಕಳೆದು, ಬಸವೇರ ಬಿಟ್ಟು ಬಂದೇನಂದಾಂವಾ,
ಜೋಗತೇರಿಗೆ ಮೂಗತಿ ಹಾಂಗ ನೀ, ನನಗಂದಾಂವಾ”,
ಸಾಲುಗಳಲ್ಲಿಯ ವೇಷ್ಯೆಯರ ಶ್ರೇಣೀಕರಣವನ್ನು ಗಮನಿಸಬೇಕು. ವೇಷ್ಯೆಯರಲ್ಲಿ ಅತಿ ಕೆಳಮಟ್ಟದವರು ’ಕಸಬೆ’ಯರು; ಅವರ ಮೇಲಿನವರು ’ಬಸವೆ’ಯವರು; ’ಜೋಗತಿ’ ಇವರೆಲ್ಲರಿಗೂ ಮೇಲ್ಮಟ್ಟದ ವೇಷ್ಯೆ.
ತಮ್ಮ ಕಾಲ ಹಾಗು ಸ್ಥಳಗಳ ವಾಸ್ತವತೆಯ documentation ಅನ್ನು ಬೇಂದ್ರೆಯವರಂತೆ ಕಾವ್ಯದಲ್ಲಿ ಜೋಡಿಸಿದ ಕವಿ ಮತ್ತೊಬ್ಬರಿಲ್ಲ.
ವಾಸ್ತವತೆ ಹಾಗು ಕಲ್ಪಕತೆ ಈ ಜೋಡು ಕುದುರೆಗಳ ಸಾರೋಟಿನ ಮೇಲೆ ಬೇಂದ್ರೆಯವರ ಕಾವ್ಯದೇವಿ ತ್ರಿಭುವನ ಪರ್ಯಟನ ಮಾಡಿದ್ದಾಳೆ ಎಂದರೆ ಅತಿಶಯೋಕ್ತಿಯಾಗಲಾರದು.

Saturday, February 2, 2008

Had you made me...........

Had you made me a tiger
Instead of a deer
Lord, I would not know
What is fear!

Had you made me a ruler
Instead of a fakir
Lord, I would not know
How to be sober!

Had you made me a hunter
Instead of a prey
Lord, I would not know
How to pray!