Friday, August 29, 2008

ಗಂಗಾವತರಣ..........ದ.ರಾ.ಬೇಂದ್ರೆ

ಭಗೀರಥನ ಕಠಿಣ ಪ್ರಯತ್ನದಿಂದ ಸ್ವರ್ಗದಲ್ಲಿರುವ ಗಂಗಾನದಿ ಧರೆಗಿಳಿದಳು. ಹಿಮಾಲಯದಲ್ಲಿ ಧುಮ್ಮಿಕ್ಕಿ, ಬಯಲಲ್ಲಿ ಭೋರ್ಗರೆದು, ಭಗೀರಥನ ಪೂರ್ವಜರಿಗೆ ಪ್ರೇತಲೋಕದಿಂದ ಮುಕ್ತಿ ನೀಡಿದಳು.
ಗಂಗಾನದಿಯ ದರ್ಶನವು ಬೇಂದ್ರೆಯವರಿಗೆ ಕಾಶಿಯಲ್ಲಿ ಆಯಿತು.
ಅಂಬಿಕಾತನಯದತ್ತರು ಪ್ರಕೃತಿಯ ಆ ಮಹಾಚೈತನ್ಯದೆದುರಿಗೆ ಮೂಕವಿಸ್ಮಿತರಾದರು. ಬೇಂದ್ರೆಯವರ ಮನೋಲೋಕದಲ್ಲಿ ಧುಮ್ಮಿಕ್ಕಿದ ಈ ಗಂಗೆಯನ್ನು , ಸ್ವರ್ಗದಿಂದ ಧರೆಗಿಳಿಯಲು ಅವರು ಮತ್ತೊಮ್ಮೆ ಆಹ್ವಾನಿಸುತ್ತಾರೆ.

ಗಂಗಾದೇವಿಯನ್ನು ಆಹ್ವಾನಿಸುವ ಈ ಪ್ರಾರ್ಥನೆಯು ಸಂಕೀರ್ಣವಾದ ಕವಿತೆಯಾಗಿದೆ.
ಮೊದಲನೆಯದಾಗಿ, ೧೯೪೩ರಲ್ಲಿ ಬಿದ್ದ ಬರಗಾಲದಿಂದ ಭಾರತ ದೇಶವು ವಿಶೇಷತಃ ಬಂಗಾಲವು ಕಂಗೆಟ್ಟಿತ್ತು. ೧೯೪೪ರಲ್ಲಿ ಬೇಂದ್ರೆ ಈ ಕವನವನ್ನು ರಚಿಸಿದರು.
ಗಂಗೆ ಭಾರತದ ಎಲ್ಲ ನದಿಗಳ ಪ್ರಾತಿನಿಧಿಕ ನದಿ. ಭಾರತದಲ್ಲಿ ಕಾಲಕಾಲಕ್ಕೆ ಮಳೆಯಾಗಿ, ಎಲ್ಲ ನದಿಗಳು ತುಂಬಿ ಹರಿಯಲಿ, ಭಾರತ ಸಸ್ಯಶ್ಯಾಮಲೆಯಾಗಲಿ ಎನ್ನುವದು ಈ ಪ್ರಾರ್ಥನೆಯ ಒಂದು ಉದ್ದೇಶ.

ಎರಡನೆಯದಾಗಿ, ಗಂಗೆ ಕೇವಲ ಭೌತಿಕ ಪ್ರವಾಹವಲ್ಲ. ಅವಳು ಪುಣ್ಯವಾಹಿನಿ, ಜ್ಞಾನದಾಯಿನಿ. ಅವಳು ತನಗೆ ಹಾಗು ತನ್ನ ನಾಡಿಗರಿಗೆ ಜ್ಞಾನವನ್ನು , ಸುಜ್ಞಾನವನ್ನು ಪ್ರಸಾದಿಸಲಿ ಎನ್ನುವದು ಈ ಪ್ರಾರ್ಥನೆಯ ಎರಡನೆಯ ಉದ್ದೇಶ.

ಕವನದ ಪೂರ್ತಿಪಾಠ ಹೀಗಿದೆ :
……………………………………………………….
ಇಳಿದು ಬಾ ತಾಯಿ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ
ಶಿವಶುಭ್ರ ಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು , ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ
ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ.

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ ಬಾ.

ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಮೈ ತಳೆದು ಬಾ
ಕೈ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯದತ್ತನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.
……………………………………………………………………

ಗಂಗಾನದಿ ಹುಟ್ಟಿದ್ದು ಹರಿಯ ಪಾದಗಳಲ್ಲಿ. ಆದರೆ ಗಂಗಾಎಂದೊಡನೆ ನಮಗೆಲ್ಲರಿಗೂ ನೆನಪಾಗುವದು
`ಶಿವ-ಜಟಾ-ಬಂಧನ. ಇದೊಂದು ರೋಮಾಂಚಕ ಪ್ರಸಂಗ. ಪ್ರಳಯದೇವಿಯಂತೆ ಧುಮ್ಮಿಕ್ಕುತ್ತಿರುವ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಬಂಧಿಸಿ ಇಟ್ಟ ಬಳಿಕ, ಭಗೀರಥ ಶಿವನನ್ನು ಮತ್ತೆ ಪ್ರಾರ್ಥಿಸಿ ಅವಳನ್ನು ಬಿಡುಗಡೆಗೊಳಿಸುತ್ತಾನೆ.
ಅವಳು ಆರು ಚಿಕ್ಕ ಧಾರೆಗಳಲ್ಲಿ ಹರಿಯುತ್ತ ಮುಂದುವರೆಯುತ್ತಾಳೆ. ತನ್ನ ಕುಟೀರದತ್ತ ಧಾವಿಸುತ್ತಿರುವ ಈ ಗಂಗೆಯನ್ನು ಜಹ್ನು ಋಷಿ ಆಪೋಶನ ತೆಗೆದುಕೊಳ್ಳುತ್ತಾನೆ. ಭಗೀರಥ ಮತ್ತೆ ಪ್ರಾರ್ಥಿಸಿದ ಬಳಿಕ, ಆತ ಗಂಗಾನದಿಯನ್ನು ತನ್ನ ತೊಡೆಯ ಮೂಲಕ ಹೊರಬಿಡುತ್ತಾನೆ. ಹೀಗಾಗಿ ಗಂಗಾನದಿ ಜಹ್ನು ಋಷಿಯ ಮಗಳಾದಳು ; ‘ಜಾಹ್ನವಿಎನ್ನುವ ಹೆಸರು ಪಡೆದಳು.
ಸಕಲ ಜೀವಿಗಳಿಗೆ ಪೋಷಣೆ ಕೊಡುವ ಇವಳು ನಮ್ಮೆಲ್ಲರ ತಾಯಿ.
ಅಂತೆಯೇ ಬೇಂದ್ರೆಯವರು ಈ ಮಾತೃರೂಪಿಣಿಯನ್ನು ಧರೆಗಿಳಿಯಲು ಭಕ್ತಿಯಿಂದ ಪ್ರಾರ್ಥಿಸುತ್ತಾರೆ :

ಇಳಿದು ಬಾ ತಾಯಿ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
………………………………………….
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಸುರನದಿಯಾದ ನೀನು ದೇವತೆಗಳ ಬಾಯಾರಿಕೆಯನ್ನೂ ತಣಿಸಿ ಬಾ’. ಎಂದು ಬೇಂದ್ರೆ ಗಂಗೆಯನ್ನು ಕೇಳಿಕೊಳ್ಳುತ್ತಾರೆ. ದೇವತೆಗಳಿಗೆಂತಹ ಬಾಯಾರಿಕೆ ಎನ್ನುವ ಸಂದೇಹ ನಮ್ಮಲ್ಲಿ ಮೂಡಬಹುದು. ಭಗವಚ್ಚಿಂತನೆಯೊಂದೇ ದೇವತೆಗಳಿಗಿರುವ ಬಾಯಾರಿಕೆ. ಹರಿಯ ಅಡಿಯಲ್ಲಿ ಜನಿಸಿದ ಗಂಗೆಯ ತೀರ್ಥವನ್ನು ಬಾಯಲ್ಲಿ ಹಾಕಿಕೊಂಡಾಗ, ದೇವತೆಗಳಲ್ಲಿರುವ ಭಗವಚ್ಚಿಂತನೆಯ ಬಾಯಾರಿಕೆಯು ತಣಿಯುವದು ಸಹಜವೇ. (ಮರಣಸಮಯದಲ್ಲಿ,ಗಂಗೋದಕವನ್ನು ಬಾಯಲ್ಲಿ ಹಾಕುವದು ಇದೇ ಕಾರಣಕ್ಕಾಗಿ ; ಮರಣಾಸನ್ನನಿಗೆ ಭಗವಂತನ ಸನ್ನಿಧಿಯು ದೊರೆಯಲು.)

ಸ್ವರ್ಗದಿಂದ ಕೆಳಗಿಳಿಯುತ್ತಿರುವಾಗ, ಈ ವ್ಯೋಮವ್ಯಾಪಿ ಗಂಗಾ ಅಷ್ಟದಿಕ್ಕುಗಳಿಗೆ ನೀರಿನ ಸೇಚನೆ ಮಾಡದಿರುವಳೆ? ಅದು ಮಳೆಯ ರೂಪದಲ್ಲೂ ಇರಬಹುದು. ಈ ಸೇಚನೆಯಿಂದಾಗಿ ಸಕಲ ಪ್ರಕೃತಿಯು ನೀರುಣ್ಣುವದು. ಬೇಂದ್ರೆಯವರು ಹೇಳುತ್ತಿರುವದು ಸಲಹೆ-ಸೂಚನೆ ಅಲ್ಲ. ಅದು ಗಂಗೆಯ ಕಾರ್ಯ, ಅವಳ ಪರಮೋದ್ದೇಶ.. ಅದನ್ನೆ ಅವರು ಚರಾಚರಗಳಿಗೆ ಉಣಿಸಿ ಬಾಎಂದು ಬಣ್ಣಿಸುತ್ತಿದ್ದಾರೆ.
ಮೊದಲು ದೇವಲೋಕ, ಬಳಿಕ ದಿಗಂತ ಅಂದರೆ ದೇವಲೋಕ ಹಾಗು ಭೂಲೋಕಗಳ ನಡುವಿನ ಕ್ಷಿತಿಜ, ಬಳಿಕ ಚರಾಚರಗಳು ಇರುವ ಭೂಲೋಕಗಳನ್ನು ಕವಿಯು ಕ್ರಮಬದ್ಧವಾಗಿ ಬಣ್ಣಿಸಿದ್ದಾನೆ.
ಸಕಲ ಚರಾಚರಗಳಲ್ಲಿ ಈ ಕವಿಯೂ ಇದ್ದಾರೆ. ಗಂಗೆಯ ದೈವಿಕತೆ ಇವರಿಗೆ ಗೊತ್ತು. ಅದಕ್ಕೇ ಇವರು ಧರೆಗಿಳಿಯುತ್ತಿರುವ ಈ ಗಂಗೆಯನ್ನು ಪೊಡಮಟ್ಟು ಅಂದರೆ ಸಾಷ್ಟಾಂಗ ನಮಸ್ಕಾರದೊಂದಿಗೆ ಬರಮಾಡಿಕೊಳ್ಳುತ್ತಾರೆ.

ಈ ಗಂಗೆಯನ್ನೇ ತಮ್ಮ ಉಡುಗೆಯನ್ನಾಗಿ ಮಾಡಿಕೊಳ್ಳಲು ಅವರು ಬಯಸುತ್ತಾರೆ. ಏನು ಹಾಗೆಂದರೆ?
ಓರ್ವ ಮನುಷ್ಯನ ಬೆಲೆಯನ್ನು ಕಟ್ಟುವದು ಅವನ ಉಡುಗೆಯಿಂದ. ಆದರೆ ಕವಿಗೆ ಇಂತಹ ಮೋಸದುಡುಗೆ ಬೇಕಾಗಿಲ್ಲ. ಲೌಕಿಕದ ಈ ವಸ್ತ್ರವಿಲಾಸವನ್ನು ಬಿಸಾಕಿ, ಅವರು ಗಂಗೆಯಲ್ಲಿ ಮೀಯಬಯಸುತ್ತಾರೆ. ಪವಿತ್ರ ಗಂಗೆಯನ್ನೇ ತನ್ನ ಉಡುಗೆಯನ್ನಾಗಿ ಮಾಡಬಯಸುತ್ತಾರೆ.

ತನ್ನ ವ್ಯಕ್ತಿತ್ವವನ್ನು ಆವರಿಸುವ ಉಡುಗೆ ಶುದ್ಧವಾಗಿರಲಿ, ನಿಷ್ಕಲ್ಮಶವಾಗಿರಲಿ, ಪುಣ್ಯಕರವಾಗಿರಲಿ ಎನ್ನುವದು ಅವರ ಬಯಕೆ. ಯಾಕೆಂದರೆ ಇಂತಹ ನಿರ್ಮಲ ವ್ಯಕ್ತಿಯೇ ತಾನಾಗಲು ಅವರು ಬಯಸುತ್ತಾರೆ.
ಇದು ಗಂಗಾಂಬರವೆನ್ನುವ ಪುಣ್ಯಾಂಬರವನ್ನು ಉಟ್ಟುಕೊಳ್ಳಲು ಬಯಸುವ ಬೇಂದ್ರೆಯವರ ಒಳಮನದ ಹಾರೈಕೆ.
ಅದಕ್ಕೇ ಬೇಂದ್ರೆ ಹೇಳುತ್ತಾರೆ :

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ

ಅವಳು ಉದಾರಳಾಗಿ ತನ್ನ ಮೇಲೆ ಸುರಿಯಲಿ, ಈ ಚರಾಚರ ಪ್ರಕೃತಿಯ ಯಾವುದೇ ಕಣವೂ ಅವಳ  ಸ್ಪರ್ಶವಂಚಿತವಾಗದಿರಲಿ ಎನ್ನುವ ಉದ್ದೇಶದಿಂದ ಕವಿ ಹೇಳುತ್ತಾರೆ :

ಏಕೆ ಎಡೆತಡೆವೆ   
ಸುರಿದು ಬಾ

ಕವಿ ಇರುವದು ಭೂಮಿಯ ಮೇಲೆ. ಆ ಸುರನದಿ ಗಂಗಾದೇವಿ ಭೂಮಿಗೆ ಬಂದಾಳೆ? ಕವಿಯ ಮೊರೆಯನ್ನು ಪುರಸ್ಕರಿಸುವಳೆ? ಹೀಗೆಂದು ಅವನೇನೂ ಸಂಶಯ ಪಡುತ್ತಿಲ್ಲ. ಆದರೂ ಸಹ ಮೇಲ್ಮಟ್ಟದಲ್ಲಿರುವ ಪುಣ್ಯಗಂಗೆಯನ್ನು ಕೆಳಮಟ್ಟದಲ್ಲಿರುವ ನಮ್ಮ ಉದ್ಧಾರಕ್ಕೆ ಇಳಿ ಎಂದು ಹೇಳಬೇಕಾದರೆ, ಪ್ರಾರ್ಥಿಸುವ ಅವಶ್ಯಕತೆ ಇದೆ, ಅಲ್ಲವೆ? ಅದಕ್ಕೆ ಕವಿ ಹೇಳುತ್ತಾರೆ :

ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ಸ್ವರ್ಗಲೋಕವನ್ನು ತೊರೆದ ಮೇಲೆ ಅವಳು ಬಯಲಲ್ಲಿ ಅಂದರೆ ಅವಕಾಶದಲ್ಲಿ ಜರೆಯಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಅವಳ ಅವತರಣಕ್ಕೆ ಯಾವುದೇ ಘರ್ಷಣೆ ಇರುವದಿಲ್ಲ. ನೆಲವನ್ನು ತಲುಪಿದ ಬಳಿಕ ಅವಳು ಹರಿಯಬೇಕಾಗುತ್ತದೆ.
ಜರೆ ಎನ್ನುವ ಪದಕ್ಕೆ ನಿಂದಿಸು ಎನ್ನುವ ಅರ್ಥವೂ ಇದೆ. ಸ್ವರ್ಗವನ್ನೇ ತೊರೆದ ಗಂಗೆ, ಆಕಾಶದಲ್ಲಿ ನಿಂತಾಳೆಯೆ? ಧರೆಯೇ ಅವಳ ಗಮ್ಯ. ಆದುದರಿಂದ ಆಕಾಶವನ್ನು ಜರೆದು ಅಂದರೆ ತಿರಸ್ಕರಿಸಿ ಅವಳು ಭೂಮಿಗಿಳಿಯುವಳು ಎನ್ನುವ ಶ್ಲೇಷೆ ಇಲ್ಲಿದೆ.)

ಇಲ್ಲಿಯವರೆಗೆ ಗಂಗಾದೇವಿಯನ್ನು ಭೌತಿಕರೂಪದಲ್ಲಿ, ಪ್ರವಾಹರೂಪದಲ್ಲಿ ಆಹ್ವಾನಿಸಿದ ಕವಿ, ಈಗ ಅವಳ ಅಂತರ್-ರೂಪವನ್ನು ನೋಡುತ್ತಿದ್ದಾನೆ. ಅವಳು ಜ್ಞಾನಗಂಗೆಯೂ ಹೌದು, ಆಧ್ಯಾತ್ಮಗಂಗೆಯೂ ಹೌದು. ಅವಳಿಂದಲೇ ತನ್ನ ಉದ್ಧಾರ ಆಗಬೇಕು. ಬ್ರಹ್ಮಾಂಡದಲ್ಲಿ ಇಳಿದ ಅವಳು ಈಗ ಈ ಪಿಂಡಾಂಡದಲ್ಲಿ ಇಳಿಯಬೇಕು:

ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ

ತಾಯೆ, ಗಂಗಾದೇವಿ, ನಿನ್ನ ಎದುರಿಗೆ ನಾನು ತಲೆಬಾಗಿ ನಿಂತಿದ್ದೇನೆ. ನನ್ನ ತಲೆಯೊಳಗೆ ಅಂದರೆ ನನ್ನ ಚಿತ್ತದೊಳಗೆ, ನನ್ನ ಬುದ್ಧಿಯೊಳಗೆ ಇಳಿದು ಶುದ್ಧಗೊಳಿಸು. ಮಸ್ತಕದಿಂದ ಕೆಳಗಿಳಿದು, ನನ್ನ ಬೆನ್ನಹುರಿಯಲ್ಲಿ ಹರಿದು, ನನ್ನ ಒಳ್ಳೆಯ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲು. ನನ್ನ ಒಳಗೆ, ನನ್ನ ಕೆಳಗೆ ಇಳಿ. ಅಂದರೆ ನನ್ನ ಭೌತಿಕ ಬಯಕೆಗಳನ್ನು, ನನ್ನ ಆದಿಮ ಅಪೇಕ್ಷೆಗಳನ್ನು ತೊಳೆದು ಹಾಕು. ನನ್ನಲ್ಲಿ ಆಧ್ಯಾತ್ಮಿಕ ಹಂಬಲವೇ ಉದ್ದೀಪನವಾಗಲಿ. ನನ್ನ ಕಣ್ಣ ಕಣವನ್ನು ತೊಳೆ ಅಂದರೆ ನನ್ನ ನೋಟವನ್ನು ಸ್ವಚ್ಛಗೊಳಿಸು, ನನ್ನ ಒಳ ಉಸಿರನ್ನು ಎಳೆದು ಪ್ರಾಣಾಯಾಮದಲ್ಲಿ ವಿಲೀನಗೊಳಿಸು. ನನ್ನಲ್ಲಿ ನುಡಿಯ ಅಂದರೆ ಓಂಕಾರದ ಸಸಿಯನ್ನು ನೀರುಣ್ಣಿಸಿ ಮೊಳೆಯಿಸು.
(ನುಡಿಯ ಸಸಿ ಅಂದರೆ ಕಾವ್ಯಸಸಿ ಎನ್ನುವ ಅರ್ಥವೂ ಬರುತ್ತದೆ.)

ಬೇಂದ್ರೆ ಇಲ್ಲಿ ಯೋಗದ ಪರಿಭಾಷೆಯನ್ನು ಉಪಯೋಗಿಸಿಕೊಂಡಿದ್ದಾರೆ.
ನನ್ನ ತಲೆಯೊಳಗೆ ಅಂದರೆ ಸಹಸ್ರಾರ ಚಕ್ರದೊಳಗೆ ;
ನನ್ನ ಬೆಂಬಳಿಗೆ ಅಂದರೆ ಸಹಸ್ರಾರ ಹಾಗು ಇತರ ಆರು ಚಕ್ರಗಳಲ್ಲಿ ಹಾಯ್ದು ಹೋಗುವ ಸುಷುಮ್ನಾ ನಾಡಿಯೊಳಗೆ ;
ನನ್ನ ಒಳಕೆಳಗೆ ಅಂದರೆ ಮೂಲಾಧಾರ ಚಕ್ರದೊಳಗೆ ;
ದೇವಗಂಗೆಯೆ ಅಂದರೆ ಕುಂಡಲಿನಿ ಶಕ್ತಿಯೆ ನುಗ್ಗಿ ಬಾಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ.
(ಬ್ರಹ್ಮಾಂಡದಲ್ಲಿರುವ ಚೈತನ್ಯ ಹಾಗೂ ಪಿಂಡಾಂಡದಲ್ಲಿರುವ ಚೈತನ್ಯ ಎರಡೂ ಒಂದೇ. ಆದುದರಿಂದ ಸುರಗಂಗೆ ಹಾಗು ಕುಂಡಲಿನಿ ಬೇರೆ ಬೇರೆ ಅಲ್ಲ.)
ಹಿಗ್ಗಿ ಬಾಅಂದರೆ ದೈವೀ ಆನಂದವನ್ನು ನೀಡುತ್ತ ಬಾಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ.


ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಯೋಗದ ಭಾಷೆಯಲ್ಲಿ ಎದೆಯ ನೆಲೆ ಅಂದರೆ ಅನಾಹತ ಚಕ್ರ,
ಜೀವಜಲ ಅಂದರೆ ಮಣಿಪೂರ ಚಕ್ರ ಹಾಗೂ
ಮೂಲಹೊಲ ಅಂದರೆ ಮೂಲಾಧಾರ ಚಕ್ರ ಎನ್ನುವ ಅರ್ಥವಾಗುತ್ತದೆ.
ಹೃದಯದಲ್ಲಿ ರವಿ ಇರುತ್ತಾನೆ. ಆದುದರಿಂದ ಎದೆ ಅಂದರೆ ತೇಜ, ಜೀವಜಲ ಅಂದರೆ ಅಪ್, ಮೂಲಹೊಲ ಅಂದರೆ ಪೃಥ್ವಿ ;
ಆದುದರಿಂದ ಪಂಚಮಹಾಭೂತಗಳಲ್ಲಿಯ ಮೂರು ಮಹಾಭೂತಗಳಾದ ಪೃಥ್ವಿ, ಅಪ್ ಹಾಗೂ ತೇಜಗಳನ್ನು ಇಲ್ಲಿ ನಿರ್ದೇಶಿಸಿ, ಪಿಂಡಾಂಡದಲ್ಲಿರುವ ಈ ಮೂರು ಮಹಾಭೂತಗಳನ್ನು (ಹಾಗು ಅರ್ಥವ್ಯಾಪ್ತಿಯ ಮೂಲಕ ಎಲ್ಲ ಪಂಚಮಹಾಭೂತಗಳನ್ನು) ಶುದ್ಧೀಕರಿಸು ಎಂದು ಕವಿ ಬಿನ್ನವಿಸುತ್ತಾನೆ.
ಅಲ್ಲದೆ, ಎದೆಯ ನೆಲೆ ಎನ್ನುವದು ಕವಿಯ ವೈಯಕ್ತಿಕ ಆಕಾಂಕ್ಷೆಗಳನ್ನು, ಜೀವ ಜಲ ಎನ್ನುವದು ಕವಿಯ ಶಾರೀರಕ ಆಕಾಂಕ್ಷೆಗಳನ್ನು ಹಾಗೂ ಮೂಲ ಹೊಲ ಎನ್ನುವದು ಕವಿಯ ಆದಿಮ ಆಕಾಂಕ್ಷೆಗಳನ್ನು ಸೂಚಿಸುತ್ತವೆ.

ಒಮ್ಮೆ ಧರೆಗಿಳಿದ ಗಂಗೆ ನಿರಂತರವಾಗಿ ಪ್ರವಹಿಸುತ್ತಿರಲು ಏನು ಮಾಡಬೇಕು? ಅವಳೇ ಮೋಡವಾಗಿ, ಆಕಾಶಕ್ಕೇರಿ, ಮತ್ತೆ ಮಳೆಯ ರೂಪದಲ್ಲಿ ಧರೆಗಿಳಿಯಬೇಕಲ್ಲವೆ?
ಕವಿ ಅದನ್ನು ಹೀಗೆ ಬಣ್ಣಿಸುತ್ತಾರೆ :

ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ

ಕಂಚುಮಿಂಚಾಗಿ ಕಾಣುವದು ಅಂದರೆ to appear suddenly in a flash. ಗಂಗಾದೇವಿ ಮತ್ತೆ ಮತ್ತೆ ಈ ಜಲಚಕ್ರದ ಮೂಲಕ ಧರೆಯ ಮೇಲಿರುವ ಚರಾಚರಗಳನ್ನು ತಣಿಸುತ್ತಿರಬೇಕು. ಅವಳ ಕರುಣೆಯಿಲ್ಲದೇ ಹೋದರೆ, ಈ ಭೂಜೀವಿಗಳು ದಯೆಯನ್ನು ಕಾಣದ ದೀನರಾಗುವರು, ಪ್ರಾಯದ ಚೈತನ್ಯವಿಲ್ಲದಂತಹ ಹೀನರಾಗುವರು, ನೀರಿಲ್ಲದ ಮೀನಿನಂತಾಗುವರು.

ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.

(ಈ ಕವನರಚನೆಯನ್ನು ಮಾಡುವ ಸಮಯದಲ್ಲಿ ಬೇಂದ್ರೆಯವರು ಮಧ್ಯವಯಸ್ಕರಾಗಿದ್ದರು. ಆ ಕಾರಣಕ್ಕಾಗಿಯೇ ಅವರು ಹರೆಯಳಿದ ಹೀನ ಎಂದು ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ. ಅಲ್ಲದೆ, ಆ ಕಾಲಾವಧಿಯಲ್ಲಿ ಭಾರತೀಯರೂ ಸಹ, ಶಕ್ತಿಹೀನರಾಗಿ, ದಯೆಯನ್ನು ಅಪೇಕ್ಷಿಸುವ ದೀನರಾಗಿ ತೋರುತ್ತಿದ್ದರು. )

ತಮ್ಮ ಮರುಕದ ಸ್ಥಿತಿಯನ್ನು ಬಣ್ಣಿಸಿದ ಕವಿ, ಗಂಗಾದೇವಿಯ ಮಮತೆಯ ಘನತೆಯನ್ನು ಬಣ್ಣಿಸುತ್ತಾರೆ.
ತಾಯಿಗೆ ತನ್ನ ಮಕ್ಕಳ ಬಗೆಗಿನ ಮಾತೃವಾತ್ಸಲ್ಯದ ಬಗೆಗೆ ಸಂದೇಹವೇ ಬೇಡ :

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ

ತಾನು ಸಲಹುವ ಜೀವಿಗಳ ಪೋಷಣೆ ಮಾಡುವಲ್ಲಿ, ಗಂಗಾದೇವಿಯು ವಹಿಸುವ ಮೂರು ಹಂತಗಳನ್ನು ಬೇಂದ್ರೆ ಸೂಚಿಸಿದ್ದಾರೆ. ಮೊದಲನೆಯ ಹಂತದಲ್ಲಿ ಅವಳು ತನ್ನ ಕರುವನ್ನು ಕಂಡ ಗೋವಿನಂತೆ ವಾತ್ಸಲ್ಯಭರಿತಳಾಗುವಳು.
ಎರಡನೆಯ ಹಂತದಲ್ಲಿ ಮಗುವಿನ ಮನಸ್ಸನ್ನು ತಿಳಿದು ಮಗುವಿಗೆ ಮುದ್ದು ಮಾಡುವ ಮರುಳ ತಾಯಿ ಅವಳು. ಮೂರನೆಯ ಹಂತದಲ್ಲಿ ಅವಳು ಉದ್ದಂಡ ಅರುಳೆ ; ಅಂದರೆ ಸ್ವತಃ ಪೂರ್ಣ ಜ್ಞಾನವನ್ನು ಹೊಂದಿದ, ಮಗುವಿಗೆ ಶಿಕ್ಷೆ ಕೊಡುತ್ತಲೇ ಶಿಕ್ಷಣ ನೀಡಬಲ್ಲ ಶಿಕ್ಷಕಿ. ಈ ದೇವಿಯನ್ನು ಬೇಂದ್ರೆ ಸುಳಿ ಸುಳಿದು ಬಾ’, ಅಂದರೆ ದೂರ ಹೋಗದಿರು, ಸುತ್ತಲೇ ಸುತ್ತುತ್ತ ಇರು ಎಂದು ಬೇಡಿಕೊಳ್ಳುತ್ತಾರೆ.

ಈ ರೀತಿಯಾಗಿ ಜೀವಿಗಳ ಉದ್ಧಾರ ಮಾಡುವ ಕೃಪಾಭಾವ ಗಂಗಾದೇವಿಗೆ ಇರುವ ಕಾರಣವೇನು? ಇಲ್ಲಿ ಗಂಗಾದೇವಿಯ ಪಾರಮಾರ್ಥಿಕ ಸ್ವರೂಪವನ್ನು ಬೇಂದ್ರೆ ಬಣ್ಣಿಸುತ್ತಾರೆ. ಅವಳು ಸಾಕ್ಷಾತ್ ಶಿವನ ಶುಭ್ರ ಕರುಣಾಭಾವ.
ಈ ಏಕೈಕ ಕರುಣಾಭಾವದಲ್ಲಿ ಬೇರೆ ಭಾವಗಳು ಎಳ್ಳಷ್ಟೂ ಮಿಳಿತವಾಗಿಲ್ಲ. ಅವಳು ವಾತ್ಸಲ್ಯಭಾವದಿಂದ ಮಾತ್ರ ಆವರಿಸಲ್ಪಟ್ಟವಳು.(ವಾತ್ಸಲ್ಯವರಣೆ). ಆದುದರಿಂದಲೇ ಅವಳು ಜೀವಿಗಳ ಉದ್ಧಾರದಲ್ಲಿ ತಾರತಮ್ಯವಿಲ್ಲದೇ ಸದಾ ಮಗ್ನಳಾಗಿರುವವಳು.

ಶಿವಶುಭ್ರ ಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

[ಹಾಗಿದ್ದರೆ ಈ ಶುಭ್ರಕರುಣೆಯು ಕಿಂಚಿತ್ ಅರುಣೆಯಾಗಿ ಕಾಣುವದೇಕೆ? ಈ ಅತಿ ಸ್ವಲ್ಪ ಕೆಂಪು ವರ್ಣಾಂಶವು ಎಲ್ಲಿಂದ ಬಂದಿತು? ಅದಕ್ಕೆ ಉತ್ತರವು ಶ್ರೀ ಶಂಕರಾಚಾರ್ಯರ ಸೌಂದರ್ಯಲಹರಿಯಲ್ಲಿದೆ.

ಶಿವನು ಕೇವಲ ಆತ್ಮಸ್ವರೂಪನು ; ಅವನಲ್ಲಿ ಯಾವುದೇ ಗುಣಗಳಿಲ್ಲ. ಆದರೆ ಅವನ ಶಕ್ತಿಯು ಸಕಲಗುಣಗಳನ್ನು ಒಳಗೊಂಡ ಅರುಣರೂಪದವಳು. ಅವನ ಕರುಣಾಭಾವವೂ ಅವಳೇ. ಆದುದರಿಂದ ಅವನ ಕರುಣಾಭಾವವೂ ಸಹ ಕೆಂಪು ವರ್ಣಾಂಶವನ್ನು ಹೊಂದಿರುವಂತೆ ಭಾಸವಾಗುತ್ತದೆ.
ಜಗತ್ತ್ರಾತುಂ ಶಂಭೋರ್ಜಯತಿ ಕರುಣಾ ಕಾಚಿದರುಣಾ”]

ಇಂತಹ ಗಂಗಾದೇವಿಯನ್ನು ಬಿಟ್ಟರೆ ತಮ್ಮ ಉದ್ಧಾರಕರು ಬೇರೆ ಯಾರೂ ಇಲ್ಲ ಎಂದು ಬೇಂದ್ರೆ ಆಕೆಗೆ ಹೇಳುತ್ತಾರೆ :

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು , ಅಲ್ಲ ಬಾ

ತನ್ನಲ್ಲಿಯೇ ಆಗಲಿ, ತನ್ನ ನಾಡಿನಲ್ಲಿಯೇ ಆಗಲಿ, ಕೊಳೆಯನ್ನು ತೊಳೆಯುವವರು ಯಾರೂ ಇಲ್ಲ. ಭೌತಿಕ ಕೊಳೆಯೇ ಆಗಲಿ, ಅಜ್ಞಾನದ ಕೊಳೆಯೇ ಆಗಲಿ ಅಥವಾ ನೈತಿಕ ಕೊಳೆಯೇ ಆಗಲಿ, ಇವೆಲ್ಲವನ್ನು ತೊಳೆಯಲು ಗಂಗಾದೇವಿಗೆ ಮಾತ್ರ ಸಾಧ್ಯ. ಬೇರೆ ಶಕ್ತಿಗಳಿಂದ ಅದು ಸಾಧ್ಯವಿಲ್ಲ. ಏಕೆಂದರೆ, ಇತರ ಶಕ್ತಿಗಳೆಂದರೆ ಮಾನವ ಶಕ್ತಿಗಳು, ಉದಾಹರಣೆಗೆ ಧನಶಕ್ತಿ. ಈ ಇತರ ಶಕ್ತಿಗಳು ಹೊಲ್ಲಅಂದರೆ ಮಲಿನಗೊಂಡ ಶಕ್ತಿಗಳು. ಆದುದರಿಂದ ಈ ನಿನ್ನ ಕರ್ತವ್ಯವನ್ನು ಮಾಡದಿರುವದು ನಿನಗೆ ತಕ್ಕದ್ದಲ್ಲ.

ಇಲ್ಲಿಯವರೆಗೆ ಮಾನವನ ವೈಯಕ್ತಿಕ ಉದ್ಧಾರವನ್ನು ಕೋರಿದ ಕವಿ ಈಗ ನಾಡಿನ ಉದ್ಧಾರಕ್ಕಾಗಿ ಪ್ರಾರ್ಥಿಸುತ್ತಾರೆ.

ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ

ನಮ್ಮ ನಾಡಿನಾಡಿಯಲ್ಲಿ ನಿನ್ನ ತುತ್ತನ್ನು ನೀಡು, ನಮ್ಮ ನಾಡನ್ನೆಲ್ಲ ಸುತ್ತಿ ನೀರುಣ್ಣಿಸು ಹಾಗು ಸತ್ತ ಜನರನ್ನು ಮೇಲೆತ್ತು. ನಿನ್ನ ಕರುಣೆಯಿಂದ ಈ ನಾಡು ಮತ್ತೆ ಹಸಿರು ಹಸಿರಾಗಲಿ, ಜನರಲ್ಲಿ ಮತ್ತೆ ಜೀವ ತುಂಬಲಿ ಎಂದು ಬೇಂದ್ರೆಯವರು ಗಂಗಾದೇವಿಯನ್ನು ಪ್ರಾರ್ಥಿಸುತ್ತಾರೆ. ಆದುದರಿಂದ ಗಂಗಾದೇವಿ ಕೇವಲ ಹಿಮಾಲಯದಿಂದ ಹರಿದು ಬಂಗಾಲ ಉಪಸಾಗರವನ್ನು ಸೇರುತ್ತಿರುವ ನದಿಯಾಗಿ ಉಳಿಯದೆ, ಭಾರತದಲ್ಲೆಲ್ಲ ಹರಿಯುವ ಪ್ರವಾಹಗಳ ಪ್ರತಿನಿಧಿಯಾಗುತ್ತಾಳೆ.

(ಭಾರತದಲ್ಲಿ ಹರಿಯುವ ನದಿಗಳೆಲ್ಲ ಭಾರತೀಯರ ಪಾಲಿಗೆ ಪುಣ್ಯನದಿಗಳೇ. ಗುರುಗ್ರಹವು ಪ್ರತಿ ಹದಿಮೂರು ತಿಂಗಳಿಗೊಮ್ಮೆ ರಾಶ್ಯಂತರ ಮಾಡುವಾಗ, ಗಂಗೆಯೂ ಸಹ ಒಂದೊಂದು ನದಿಯಲ್ಲಿ ಸಮಾವೇಶಗೊಳ್ಳುತ್ತಾಳೆ ಎನ್ನುವದು ಭಾರತೀಯರ ನಂಬಿಕೆ. ಉದಾಹರಣೆಗೆ, ಗುರು ಕನ್ಯಾ ರಾಶಿಯಲ್ಲಿ ಪ್ರವೇಶಿಸಿದಾಗ, ಗಂಗಾದೇವಿಯು ಕೃಷ್ಣಾ ನದಿಯಲ್ಲಿ ಸಮಾವಿಷ್ಟಳಾಗಿರುತ್ತಾಳೆ. ಆದುದರಿಂದ, ಕಾಲದಲ್ಲಿ ಪಿತೃಗಳಿಗೆ ಪಿಂಡಪ್ರದಾನವನ್ನು
ಕೃಷ್ಣಾನದಿಯಲ್ಲಿ ಮಾಡುವದು, ಗಂಗಾನದಿಯಲ್ಲಿ ಮಾಡುವಷ್ಟೇ ಫಲದಾಯಕವಾದದ್ದು.)

ಇಂತಹ ಪುಣ್ಯನದಿಯಾದ ಗಂಗಾದೇವಿಯ ಮನಸ್ಸಿನ ರೂಪವೆಂತಹದು? ದೇವತೆಗಳ ಕನಸುಗಳ ಪ್ರತಿಬಿಂಬವು ಈ ಸುರನದಿಯಲ್ಲಿ ಬಿದ್ದಿತಂತೆ. ಆ ದಿವ್ಯಸ್ವಪ್ನದಿಂದ ಶುದ್ಧಜ್ಞಾನ ಪಡೆದ ನೀರೆ ಈ ಗಂಗಾದೇವಿ. ಅವಳೀಗ ಆಕಾಶದುದ್ದವನ್ನು ತುಂಬಿಕೊಂಡು ಧರೆಗಿಳಿಯಲಿದ್ದಾಳೆ.

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ.

ಸಿರಿವಾರಿ ಅಂದರೆ ಗಂಗಾದೇವಿ; ಅವಳ ನೀರುಂಡು ಬೆಳೆದದ್ದು ಪಾರಿಜಾತ ವೃಕ್ಷ. ಪಾರಿಜಾತದಲ್ಲಿ ಹುಟ್ಟಿದ ಹೂವುಗಳೇ ಆಕಾಶವನ್ನು ತುಂಬಿಕೊಂಡ ತಾರೆಗಳು. ಈ ತಾರೆಗಳ ಮಧ್ಯದಿಂದ ಕೆಳಗಿಳಿದು ಬರುತ್ತಿದ್ದಾಳೆ ಗಂಗಾದೇವಿ.
ಈ ರೀತಿಯಾಗಿ ಆಕಾಶದಿಂದ ಇಳಿಯುತ್ತಿರುವ ಗಂಗಾದೇವಿಯನ್ನು ಕವಿ ಭಕ್ತಿಯಿಂದ ವಂದಿಸುತ್ತಾರೆ:

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ.

ವೃಂದಾರವೆಂದರೆ ವೃಂದಾಹಾರ (=ತುಳಸಿಮಾಲೆ). ತುಳಸಿ ಭೂಮಿಯ ಮೇಲೆ ಬೆಳೆಯುವ ಪವಿತ್ರ ಸಸ್ಯ. ಮಂದಾರವೆಂದರೆ ಸ್ವರ್ಗದಲ್ಲಿ ಬೆಳೆಯುವ ವೃಕ್ಷ. ಗಂಗಾದೇವಿಯು ಭೂಮಿಯಲ್ಲಿ ಪವಿತ್ರಸಸ್ಯ ತುಳಸಿಯಿಂದ ಪೂಜಿಸಲ್ಪಡಬೇಕಾದವಳು. ಸ್ವರ್ಗದಲ್ಲಿ ಮಂದಾರಪುಷ್ಪಗಳಿಂದ ಪೂಜಿತಳಾಗಿ, ಆ ಸುವಾಸನೆಯನ್ನು ಹೊಂದಿದವಳು. ಈ ರೀತಿಯಾಗಿ ಭೂಮಿ ಹಾಗು ಸ್ವರ್ಗದಲ್ಲಿ ನೀನು ಪೂಜಿತಳಾಗಿದ್ದೀಯೆ. ಈ ಮಕ್ಕಳನ್ನು ವಾತ್ಸಲ್ಯದಿಂದ ಪೋಷಿಸಬೇಕಾದ ತಾಯಿ ಹಾಗು ತಂದೆ ನೀನೇ ಎಂದು ಕವಿ ಹೇಳುತ್ತಾನೆ.

ಇಂತಹ ಗಂಗಾದೇವಿಯನ್ನು ಕವಿ ಭಕ್ತಿಯಿಂದಲೇ ಆಹ್ವಾನಿಸುತ್ತಿದ್ದಾನೆ.
ನೀನು ಭಗವಂತಹ ಆನಂದರಸದಲ್ಲಿ ಜನಿಸಿದವಳು; ಆದುದರಿಂದ ನೀನು ಸತ್-ಚಿತ್-ಆನಂದ ಬ್ರಹ್ಮನ ಕನ್ಯೆ. ನಾವೂ ಸಹ ಆ ಸಚ್ಚಿದಾನಂದ ಬ್ರಹ್ಮನ ಸೃಷ್ಟಿಯೇ. ಆದುದರಿಂದ ನೀನು ನನಗೆ ಬೇರೆಯವಳಾಗಲು ಹೇಗೆ ಸಾಧ್ಯ?’
ಒಂದೇ ಒಂದು ಸಲ ನೀನು ಕೆಳಗಿಳಿದು ಬಾ. ನಿನ್ನನ್ನು ಕಾಣುತ್ತಿರುವ ನನ್ನ ಆನಂದದ ಅಶ್ರುಧಾರೆಯನ್ನು ತಡೆಯಬೇಡಎಂದು ಅವಳಿಗೆ ಬಿನ್ನಹ ಮಾಡುತ್ತಾನೆ.

ನೀನು ಕೆಳಗಿಳಿದು ಬಾ ತಾಯಿ, ಇದು ಅಧ:ಪತನವಲ್ಲ, ಇದು ಅಧ:ಪಾತ, ಇದು ಅವತರಣಎಂದು ಬೇಂದ್ರೆ ಹೇಳುತ್ತಾರೆ. ಪತನವೆಂದರೆ ಅಧೋಗತಿಗೆ ಇಳಿಯುವದು. ಆದುದರಿಂದ ಧಬಧಬೆಗೆ ಜಲಪತನವೆನ್ನುವದಿಲ್ಲ, ಜಲಪಾತವೆನ್ನುತ್ತಾರೆ.
ಅದೇ ರೀತಿಯಾಗಿ ಗಂಗೆ ಧರೆಗಿಳಿಯುವದು ಗಂಗಾಪತನವಲ್ಲ ; ಇದು ಗಂಗಾಪಾತ, ಇದು ಗಂಗಾವತರಣ !

ಇಲ್ಲಿ ಮತ್ತೊಂದು ಹೆಚ್ಚುಗಾರಿಕೆ ಇದೆ.
ಭಗವಂತನು ಭಕ್ತರ ಉದ್ಧಾರಕ್ಕಾಗಿ ಒಂಬತ್ತು ಅವತಾರಗಳನ್ನು ಎತ್ತಿದ್ದಾನೆ ಎಂದು ಹೇಳುತ್ತಾರೆ.
ಈ ಯಾವ ಅವತಾರಗಳಲ್ಲಿಯೂ ಆತ ತನ್ನ ಸ್ವಸ್ವರೂಪವನ್ನು ತೋರಿಸಿಲ್ಲ. ಮತ್ಸ್ಯ, ಕೂರ್ಮ, ವರಾಹ….ರಾಮ, ಕೃಷ್ಣ ಮೊದಲಾದ ರೂಪಗಳನ್ನು ಧರಿಸಿದ್ದಾನೆ.
ಆದರೆ ಗಂಗಾದೇವಿ ತನ್ನ ಸ್ವಸ್ವರೂಪದಲ್ಲಿಯೇ ಧರೆಗಿಳಿದಿದ್ದಾಳೆ. ಆದುದರಿಂದ ಇದು ಬರಿಯ ಅವತಾರವಲ್ಲ ; ಇದು ಸ್ವಸ್ವರೂಪದ ಅವತರಣ ! ಇದು ಗಂಗಾವತರಣ !

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ ಬಾ.

ಬೇಂದ್ರೆಯವರದು ಏನಾದರೂ ವೈಯಕ್ತಿಕ ಹರಕೆ ಇತ್ತೊ ಗೊತ್ತಿಲ್ಲ. ಆದರೆ ಭಗೀರಥನಿಗೆ ತನ್ನ ಪೂರ್ವಜರನ್ನು ಪ್ರೇತಲೋಕದಿಂದ ಬಿಡಿಸಬೇಕಾಗಿತ್ತು. ಗಂಗಾವತರಣದಿಂದ ಆ ಹರಕೆ ಪೂರ್ಣವಾಯಿತು. ಮತ್ತೊಮ್ಮೆ ಇದೀಗ ಗಂಗಾದೇವಿ ಮಮತಾಪೂರದಲ್ಲಿ ಮಿಂದವಳಂತೆ, ಮಹಾಪೂರದಲ್ಲಿ ಮೈ ತುಂಬಿಕೊಂಡು , ತಡ ಮಾಡದಂತೆ, ಎಗ್ಗಿಲ್ಲದೆ ದುಡುಕುತ್ತಮುನ್ನುಗ್ಗಬೇಕು. ತನ್ನ ಕಂದನ್ನ ಹುಡುಕಿಕೊಂಡು ಹೋಗಬೇಕು. ಇದು ಅವಳ ವಾತ್ಸಲ್ಯದ ಕರ್ತವ್ಯ!

ಅವಳು ಹರಿದಲ್ಲೆಲ್ಲ ಚರಾಚರಗಳು ಹೊಸವಾಗುತ್ತವೆ, ಹಸಿರಾಗುತ್ತವೆ. ಜೀವಕ್ಕಂಟಿಕೊಂಡ ಕಲ್ಮಶಗಳೆಲ್ಲ ತೊಳೆದು ಹೋಗಿ, ಬಾಳಿನಲ್ಲಿ ಹೊಸ ಬೆಳಕು ಮೂಡುತ್ತದೆ. ಆದುದರಿಂದ ತಾಯಿ, ಮೈ ತುಂಬಿಕೊಂಡು ಬಾಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ:

ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಮೈ ತಳೆದು ಬಾ
ಕೈ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯದತ್ತನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಶಿವನು ಕೇವಲ ಸತ್-ರೂಪನು ; ಶಕ್ತಿ ಅವನ ಚಿತ್-ರೂಪಳು. (ಬೇಂದ್ರೆಯವರು ಗಂಗಾದೇವಿಯನ್ನೆ ಶಕ್ತಿರೂಪೆಯಾಗಿ ಗ್ರಹಿಸಿ ಬರೆದಿದ್ದಾರೆ). ಆದುದರಿಂದ ಗಂಗೆಗೆ ಅವರು ಶಿವನ ಚಿತ್ತೆ ಎಂದು ಕರೆಯುತ್ತಾರೆ.
ಗಂಗಾದೇವಿಯು ದತ್ತ ನರಹರಿಗೆ ಮುತ್ತಜ್ಜಿಯಾಗಬೇಕು.
ಇಂತಹ ಗಂಗಾದೇವಿಯು ಅಂಬಿಕಾತನಯದತ್ತನತ್ತ ಬರಲಿ ಎಂದು ಕವಿ ಪ್ರಾರ್ಥಿಸುತ್ತಾರೆ.

ಬೇಂದ್ರೆಯವರು ಗಂಗಾದೇವಿಯನ್ನು ತಾವೊಬ್ಬರೇ ಪ್ರಾರ್ಥಿಸುತ್ತಿರುವಂತೆ ಕವನವನ್ನು ರಚಿಸಿದ್ದರೂ ಸಹ ಇದು ನಮ್ಮ ನಾಡಿನ ಕರೆ. ನಮ್ಮ ನಾಡು ಸಮೃದ್ಧವಾಗಬೇಕು, ಈ ನಾಡವರೆಲ್ಲರೂ ಜ್ಞಾನಸಂಪನ್ನರಾಗಬೇಕು, ಪವಿತ್ರರಾಗಬೇಕು ಎನ್ನುವದು ಈ ಕವನದ ಭಾವನೆ.

ಕವನವು ಬೆಳೆದ ಬಗೆಯನ್ನು ಓದುಗರು ಗಮನಿಸಬೇಕು:
ಕವನದ ಮೊದಲ ನಾಲ್ಕು ನುಡಿಗಳಲ್ಲಿ ಗಂಗಾನದಿಗೆ ಪ್ರಾರ್ಥನೆ ಇದೆ. ನಂತರದ ಎರಡು ನುಡಿಗಳಲ್ಲಿ ಗಂಗೆಯ ಮಮತೆಯ ವರ್ಣನೆ, ಅವಳ ಶಕ್ತಿವರ್ಣನೆ ಇವೆ. ಮೂರನೆಯ ನುಡಿಯಲ್ಲಿ ಅವಳ ದೈವತ್ವದ ವರ್ಣನೆ ಇದೆ. ಕೊನೆಯ ಎರಡು ನುಡಿಗಳಲ್ಲಿ ಗಂಗಾವತರಣದಿಂದ ಈ ಪ್ರಕೃತಿ ಹೊಸ ಜೀವದಿಂದ ತುಂಬಿಕೊಳ್ಳುವದೆನ್ನುವ ಭರವಸೆ ಇದೆ.