Tuesday, December 30, 2008

ಅತಿ-ಗಂಡಸ್ತನ-ಭ್ರಮಾವಿಲಾಸ

’Super-male-fantasy’ ಎನ್ನುವ ಪದಕ್ಕೆ ಶ್ರೀ ಕೇಶವ ಕುಲಕರ್ಣಿಯವರು ’ಅತಿ-ಗಂಡಸ್ತನ-ಭ್ರಮೆ’ ಎನ್ನುವ ಪರ್ಯಾಯ ಕನ್ನಡ ಪದವನ್ನು ನೀಡಿದ್ದಾರೆ.
Fantasy ಎನ್ನುವ ಇಂಗ್ಲಿಶ್ ಪದಕ್ಕೆ ಸರಿಯಾದ ಪದ ಹೊಳೆಯದೆ ಇದ್ದುದರಿಂದ ನಾನು ಆ ಆಂಗ್ಲ ಪದವನ್ನೇ ಬಳಸುತ್ತ ಬಂದಿದ್ದೆ.
ಅವರ ಕೊಡುಗೆಗೆ ಧನ್ಯವಾದಗಳು.
ಆದರೆ, ಭ್ರಮೆ ಎನ್ನುವದು illusion ಪದಕ್ಕೆ ಸರಿಹೋಗುವದು.
Fantasy ಪದಕ್ಕೆ ’ಭ್ರಮಾವಿಲಾಸ’ ಎನ್ನುವ ಪದಪುಂಜ ಸರಿಯಾಗಬಹುದೆಂದು ಈಗ ಹೊಳೆಯುತ್ತಿದೆ.
ಆದುದರಿಂದ ಮುಂದಿನ ಭಾಗದಲ್ಲಿ ನಾನು ‘ಭ್ರಮಾವಿಲಾಸ’ ಎನ್ನುವ ಪದವನ್ನು fantasy ಪದಕ್ಕೆ ಪರ್ಯಾಯವಾಗಿ ಬಳಸುತ್ತೇನೆ.

ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ಈ ‘ಅಗಂಭ್ರವಿ’ ಬಗೆಗೆ ಹಿಂದಿನ ಲೇಖನದಲ್ಲಿ ಬರೆದ ಬಳಿಕ, ಸಹೃದಯ ಸ್ನೇಹಿತರು ಈ ವಿಷಯವನ್ನು ವಿವಿಧ ಕೋನಗಳಲ್ಲಿ ಪರೀಕ್ಷಿಸಿದ್ದಾರೆ.
ವಿಷಯದ ಪರವಾಗಿ ಹಾಗೂ ವಿರೋಧವಾಗಿ ಅನೇಕ ಟಿಪ್ಪಣಿಗಳು ಮೂಡಿವೆ.
ಈ ಟಿಪ್ಪಣಿಗಳನ್ನು ಸಮರ್ಪಕವಾಗಿ ಜೋಡಿಸಿಕೊಂಡು, ಸಮೀಕ್ಷಿಸುವ ಅವಶ್ಯಕತೆ ಕಂಡುಬರುತ್ತಿದೆ.

ಟಿಪ್ಪಣಿಗಳನ್ನು ಈ ರೀತಿಯಲ್ಲಿ ಜೋಡಿಸಿಕೊಳ್ಳಬಹುದು:
(೧) ರತಿಕ್ರಿಯೆಯ ವರ್ಣನೆ ಅನೇಕ ಸಾಹಿತಿಗಳ ಸಾಹಿತ್ಯದಲ್ಲಿ ಕಂಡುಬರುತ್ತದೆ. ಇದು ಕೇವಲ
ಭೈರಪ್ಪನವರ specialty ಅಲ್ಲ.
(೨) ಭೈರಪ್ಪನವರ ಸಾಹಿತ್ಯದಲ್ಲಿ ಕಂಡುಬರುವ ರತಿಕ್ರೀಡಾ ವರ್ಣನೆಯು ಸಂದರ್ಭಕ್ಕೆ ಉಚಿತವಾಗಿರುತ್ತದೆ. ಅದರಲ್ಲಿ ತಪ್ಪಿಲ್ಲ.
(೩) ಭೈರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡದೆ, ಈ ರೀತಿಯ ನಿರ್ಣಯಕ್ಕೆ ಬರುವದು ತಪ್ಪು.

ಈ ಟಿಪ್ಪಣಿಗಳಿಗೆ ನನ್ನ ಮರುಟಿಪ್ಪಣಿಗಳು ಈ ರೀತಿಯಾಗಿವೆ:
(೧) ರತಿಕ್ರೀಡೆಯ ವರ್ಣನೆ ಭೈರಪ್ಪನವರ ಕಾದಂಬರಿಗಳಲ್ಲಿ explicit ಆಗಿ ಕಂಡುಬರುವಷ್ಟು ಬೇರೆ ಯಾವದಾದರೂ ಕನ್ನಡ ಕಾದಂಬರಿಯಲ್ಲಿ ಕಂಡು ಬರುತ್ತಿದ್ದರೆ, ದಯವಿಟ್ಟು ತಿಳಿಸಬೇಕು. (except in porno literature).
ನನಗೆ ಗೊತ್ತಿರುವ ಮಟ್ಟಿಗೆ ಕುವೆಂಪು ಬರೆದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ರತಿಕ್ರೀಡೆಯ explicit ವರ್ಣನೆ ಇದೆ.
(ಓದಬಯಸುವವರು ಮೋಟುಗೋಡೆಯ ಮರೆಯಲ್ಲಿ ನೋಡಿರಿ.)
ಆದರೆ, ಈ ವರ್ಣನೆ ‘ಅತಿ-ಗಂಡಸ್ತನ-ಭ್ರಮಾವಿಲಾಸ’ದ ವರ್ಣನೆ ಅಲ್ಲ.
On the contrary, ಗಂಡು ಹೆಣ್ಣುಗಳ ಸಮಾನತೆಯನ್ನು, ಸಮಾನ ಆಸಕ್ತಿಯನ್ನು, ಕಾಮದ ಸಹಜತೆಯನ್ನು ತೋರಿಸುವ ವರ್ಣನೆ ಇದಾಗಿದೆ.
ಭೈರಪ್ಪನವರ ರತಿವರ್ಣನೆಗಳಲ್ಲಿ ಕಂಡುಬರುವ ವೈಶಿಷ್ಟ್ಯವೆಂದರೆ ‘ಅಗಂಭ್ರವಿ’.
ಇದರ ಅನೇಕ ಉದಾಹರಣೆಗಳನ್ನು ನಾನು ಹಿಂದಿನ ಲೇಖನದಲ್ಲಿ ಕೊಟ್ಟಿದ್ದೇನೆ.
ಅವರ ಒಂದು ಕಾದಂಬರಿಯಲ್ಲಿ (‘ಅನ್ವೇಷಣೆ’) ಬರುವ ಸಂದರ್ಭವನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬಯಸುತ್ತೇನೆ.

ಕಾದಂಬರಿಯ ನಾಯಕನ ಗುರುವಾದ ಒಬ್ಬ ಸಾಧುಬಾಬಾ, ನಾಯಕನ ಹಾಗೆ ತಾನೂ ರತಿಸುಖವನ್ನು ಸವಿದು, ಜೀವನದಲ್ಲಿ ಅದರ ಮೌಲ್ಯ ಗುರುತಿಸುವ ಬಯಕೆಯೊಂದಿಗೆ, ಮುಂಬಯಿಯಲ್ಲಿ ಸೂಳೆಯೊಬ್ಬಳ ಬಳಿಗೆ ಹೋಗುತ್ತಾನೆ.
ಸರಿ, ಓದುಗನಿಗೆ ಇದರಲ್ಲಿ ಎಂತಹ ತಪ್ಪೂ ಕಾಣುವದಿಲ್ಲ.

ಸಾಮಾನ್ಯ ಗಂಡಸಿನ ತರಹ ಒಂದು ನಿರ್ದಿಷ್ಟ ಅವಧಿಯವರೆಗೆ, ಆ ಸಾಧುಬಾಬಾ ಕ್ರೀಡಿಸಿದ್ದರೆ ಹಾಗೂ ರತಿಸುಖ ಪಡೆಯುವದರಲ್ಲಿ ತಪ್ಪಿಲ್ಲ ಎನ್ನುವ ನಿರ್ಣಯಕ್ಕೆ ಬಂದಿದ್ದರೆ, ಅದಕ್ಕೆ ಏನೂ ಆಕ್ಷೇಪಣೆ ಇರುತ್ತಿರಲಿಲ್ಲ.
ಆದರೆ, ಭೈರಪ್ಪನವರ ವರ್ಣನೆಯ ಮೇರೆಗೆ ಆ ಸಾಧುಬಾಬಾ ೪ ದಿನಗಳವರೆಗೆ ನಿರಂತರವಾಗಿ ಅವಳಲ್ಲಿ ಕ್ರೀಡಿಸಿದ!

ಓದುಗನು ಅದನ್ನೂ ಸಹ ಒಪ್ಪಿಕೊಂಡಾನು.
ಬಹುಶಃ ಭೈರಪ್ಪನವರು Guinnes Record ಸಾಧಿಸುವ ಉದ್ದೇಶದಿಂದ ಹಾಗೆ ಬರೆದಿದ್ದಾರು ಎಂದುಕೊಳ್ಳೋಣ.
ಆದರೆ, ಈ ಮುಂದಿನ ವಾಕ್ಯವನ್ನು ಗಮನಿಸಿ:
ಅವಳು ಬಳಲಿದ್ದಳು. ನಾನು ಏನೂ ಬಳಲಿರಲಿಲ್ಲ.
ಈ ವಾಕ್ಯವು ರತಿಸುಖದ ಮೌಲ್ಯಮಾಪನೆಗೆ ಅವಶ್ಯಕವೆ?
Does it not smack of super-male-fantasy?

ಕನ್ನಡದ ಇತರ ಸಾಹಿತಿಗಳ ಸಾಹಿತ್ಯದಲ್ಲಿ ಕಂಡುಬಂದಿರಬಹುದಾದ ರತಿವರ್ಣನೆಯು ‘ಅಗಂಭ್ರವಿ’ ಅಲ್ಲ. ಅದು ಕೇವಲ ರತಿಕ್ರೀಡೆಯ ಸರಳ ವರ್ಣನೆಯಷ್ಟೇ.

(೨) ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ರತಿಕ್ರೀಡಾ ವರ್ಣನೆಯು ಸಂದರ್ಭಜನ್ಯವಾಗಿರುತ್ತದೆ ಎನ್ನುವದು ಮತ್ತೊಂದು ಟಿಪ್ಪಣಿ.
ಅನೇಕ ಕನ್ನಡ ಹಾಗೂ ಹಿಂದಿ ಸಿನೆಮಾಗಳಲ್ಲಿ, ನಾಯಕ ಹಾಗೂ ನಾಯಕಿ ವನದಲ್ಲಿ ಅಥವಾ ಉಪವನದಲ್ಲಿ ತಿರುಗಾಡುತ್ತಿರುವಾಗ ಧಾರಾಕಾರವಾಗಿ ಮಳೆ ಹುಯ್ಯಲು ಪ್ರಾರಂಭವಾಗುತ್ತದೆ. ನಾಯಕ ಹಾಗೂ ನಾಯಕಿ ಸಂದರ್ಭಕ್ಕೆ ಉಚಿತವಾಗಿಯೇ (!) ಮಿಲನಗೊಳ್ಳುತ್ತಾರೆ.
EXACTLY ಇದೇ ರೀತಿಯಲ್ಲಿ, ‘ಗ್ರಹಣ’ ಕಾದಂಬರಿಯ ನಾಯಕರಾದ ಸ್ವಾಮೀಜಿಯವರು ನಾಯಕಿಯೊಡನೆ ಮಿಲನಗೊಂಡರು.
ತಪ್ಪೇನಿಲ್ಲ ಬಿಡಿ; ಸಂದರ್ಭವೇ ಹಾಗಿದೆ ಎಂದು ಒಪ್ಪಿಕೊಳ್ಳೋಣ.
ಆದರೆ ಈ ರತಿಕ್ರೀಡೆಯು ಸ್ವಾಮೀಜಿಯವರ ’ಅತಿಮಾನುಷಪೌರುಷ’ದ ವರ್ಣನೆಯಾಗುವದರ ಔಚಿತ್ಯವೇನು; ಕಾದಂಬರಿಯ ಕಥಾನಕಕ್ಕೆ ಇದು ಯಾವ ರೀತಿಯಲ್ಲಿ ಪೂರಕ ಎನ್ನುವದಷ್ಟೇ ನನ್ನ ಪ್ರಶ್ನೆ.

(೩) ಭೈರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡದೆ, ಈ ರೀತಿಯ ನಿರ್ಣಯಕ್ಕೆ ಬರುವದು ತಪ್ಪು:

ಭೈರಪ್ಪನವರು ಈವರೆಗೆ ಬರೆದ ೨೦ ಕಾದಂಬರಿಗಳ ಪೈಕಿ ೧೨ ಕಾದಂಬರಿಗಳಿಂದ ಈ ಲೇಖನದಲ್ಲಿ ನಾನು quote ಮಾಡಿದ್ದೇನೆ. ಇವರ ಎಲ್ಲಾ ಕಾದಂಬರಿಗಳಿಂದ ನಾನು quote ಮಾಡಿದ್ದರೆ, ಲೇಖನವು ಅನವಶ್ಯಕವಾಗಿ ದೀರ್ಘವಾಗುತ್ತಿತ್ತು.
ಭೈರಪ್ಪನವರ ಆತ್ಮಚರಿತ್ರೆ ಹಾಗೂ ವಿಮರ್ಶಾಗ್ರಂಥಗಳನ್ನು ನಾನು ಬಿಟ್ಟಿದ್ದಕ್ಕೆ ಆಕ್ಷೇಪಣೆ ಬಂದಿದೆ.
ಅಲ್ರೀ, ಆತ್ಮಚರಿತ್ರೆಯಲ್ಲಿ ಯಾರಾದರೂ ‘ಅಗಂಭ್ರವಿ’ಯನ್ನು ಬರೆಯುತ್ತಾರೆಯೆ?!
………………………………………………………………………………
ಉಳಿದ ಸಾಹಿತಿಗಳಿಗೆ ಹೋಲಿಸಿದಾಗ ಭೈರಪ್ಪನವರು ಎಲ್ಲಿ ನಿಲ್ಲುತ್ತಾರೆ?
ಕನ್ನಡದ ಕೆಲವು ನಾಮಾಂಕಿತ ಕಾದಂಬರಿಕಾರರನ್ನು ತೆಗೆದುಕೊಳ್ಳೋಣ:
ಶಿವರಾಮ ಕಾರಂತರು ಕನ್ನಡದ ಉದ್ದಾಮ ಸಾಹಿತಿಗಳು.
ಅವರ ಅನೇಕ ಕಾದಂಬರಿಗಳನ್ನು ಓದಿದವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೋಚರವಾಗುತ್ತದೆ:
ಸಾಮಾನ್ಯ ಮಾನವನ ಬಗೆಗಿರುವ ಗೌರವ, ಸಹಕಂಪ ಹಾಗೂ ಮಾನವಪ್ರಯತ್ನದಲ್ಲಿರುವ ವಿಶ್ವಾಸ ಇವು ಕಾರಂತರ ಸಾಹಿತ್ಯದ ಮೂಲ ಆಶಯಗಳಾಗಿವೆ.

ಈಗ ತ್ರಿವೇಣಿಯವರನ್ನು ತೆಗೆದುಕೊಳ್ಳೋಣ.
ಕನ್ನಡದ ಖ್ಯಾತ ವಿಮರ್ಶಕರಾದ (ದಿ.) ಕೀರ್ತಿನಾಥ ಕುರ್ತಕೋಟಿಯವರು ತ್ರಿವೇಣಿಯವರ ಕಾದಂಬರಿಗಳನ್ನು ಅರೆಬೆಂದ ಕನಸುಗಳು ಎಂದು ವಿಮರ್ಶಿಸುವ ಮೂಲಕ ಈ ಲೇಖಕಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ.
ತ್ರಿವೇಣಿಯವರ ಎಲ್ಲಾ ಕಾದಂಬರಿಗಳಲ್ಲಿ ಕಂಡು ಬರುವ ಮೂಲ ಆಶಯವೆಂದರೆ: Woman’s aspirations.
ಹೆಣ್ಣಿಗೂ ಸಹ ಗಂಡಿನಂತೆಯೇ ಆಕಾಂಕ್ಷೆಗಳಿರುತ್ತವೆ, ಅವಳಿಗೂ ಮನಸ್ಸೆಂಬುದು ಒಂದಿದೆ, ಗಂಡು ಹಾಗು ಹೆಣ್ಣು ಪರಸ್ಪರ ಪ್ರೇಮಿಗಳೇ ಹೊರತು ಪ್ರತಿಸ್ಪರ್ಧಿಗಳಲ್ಲ ಎನ್ನುವದು ಅವರ ಸಾಹಿತ್ಯದ ಮೂಲ ಆಶಯ.

ಕನ್ನಡದ ಕಥಾಬ್ರಹ್ಮರೆಂದು ಹೆಸರು ಪಡೆದ ಮಾಸ್ತಿಯವರ ಸಾಹಿತ್ಯದ ಮೂಲ ಆಶಯವೇನು?
ಮಾನವನ ಆದರ್ಶ, ಘನತೆ, ಸ್ತ್ರೀಯರ ಬಗೆಗೆ ಔದಾರ್ಯ ಇವು ಮಾಸ್ತಿಯವರ ಸಾಹಿತ್ಯದ ಮೂಲ ಆಶಯಗಳು.
(ಈ ಎಲ್ಲ ಅಂಶಗಳನ್ನು ಒಳಗೊಂಡ ಅವರ ಅತ್ಯುತ್ತಮ ಕತೆ ಎಂದರೆ ‘ವೆಂಕಟಿಗನ ಹೆಂಡತಿ’.)

ಕಥಾಸಾಹಿತ್ಯದಲ್ಲಿ ಮಾಸ್ತಿಯವರಷ್ಟೇ ಶ್ರೇಷ್ಠರಾದ ಪಿ. ಲಂಕೇಶರ motif ಮಾತ್ರ ಬೇರೆಯಾಗಿತ್ತು.
ಇವರು ಪರಿಸರದ ಅನಿವಾರ್ಯತೆಯಿಂದ ಉಂಟಾದ ಮನುಷ್ಯನ ಕ್ಷುದ್ರತೆಯನ್ನು ತೋರಿಸಿದರು.
ಇದರ ಉದಾಹರಣೆಯಾಗಿ ಕನ್ನಡದ ಶ್ರೇಷ್ಠ ಕವನಗಳಲ್ಲೊಂದಾದ ಅವರ ‘ಅವ್ವ’ ಕವನವನ್ನೇ ನೋಡಬಹುದು.
ಇಲ್ಲಿ ಅವರು ತಮ್ಮ ಅವ್ವನನ್ನು ‘ಬನದ ಕರಡಿ’ ಎಂದು ಬಣ್ಣಿಸುತ್ತಾರೆ.
ತನ್ನ ಗಂಡನ ಲಂಪಟತನ, ಬೇಜವಾಬ್ದಾರಿ ವರ್ತನೆ, ಮಕ್ಕಳನ್ನು ತಾನೇ ಸಾಕಬೇಕಾದ ಹೊಣೆಗಾರಿಕೆ ಇವೇ ಅವಳನ್ನು ಕರಡಿಯನ್ನಾಗಿ ಪರಿವರ್ತಿಸಿದ ಕಾರಣಗಳು.
ಅವರ ‘ಮೈಲಿ ಮುಖದ ಹಜಾಮ’ ಸಹ ಒಬ್ಬ ಮನುಷ್ಯನು ಮತ್ತೊಬ್ಬ ಮನುಷ್ಯನನ್ನು ನಂಬಲಾರದಂತಹ ಮಾನವ ಪರಿಸರವನ್ನು ತೋರಿಸುತ್ತದೆ.

ವಿಶ್ವಸಾಹಿತ್ಯದಲ್ಲಿ ಸ್ಥಾನ ಪಡೆಯುವಂತಹ ಕತೆಗಳನ್ನು ಬರೆದ ದೇವನೂರು ಮಹಾದೇವ ಇವರ ಮೂಲ ಆಶಯಗಳೇನು?
ಶೋಷಣೆಯ ಸ್ಥಿತಿಯು ಯಾವ ರೀತಿಯಲ್ಲಿ ಮನುಷ್ಯನನ್ನು compromise ಮಾಡಿಸುತ್ತದೆ ಎನ್ನುವದು ದೇವನೂರರ motif.

ನಮ್ಮ ಸಮಾಜದಲ್ಲಿ ಹೆಣ್ಣು ಪಡುವ ಯಾತನೆಯನ್ನು, ಅವಳ ಅಸಹಾಯಕತೆಯನ್ನು ಭೈರಪ್ಪನವರಷ್ಟು ಚೆನ್ನಾಗಿ ಯಾರೂ ತೋರಿಸಿಲ್ಲ.
ಇದು ಭೈರಪ್ಪನವರ ಸಾಹಿತ್ಯದ ಮೂಲ ಆಶಯ.
ಆದರೆ ಇದರ ಜೊತೆಗೇ ‘ಅಗಂಭ್ರವಿ’ಯ motif ಸೇರಿಕೊಂಡಿರುವದು ಅವರ ದುರದೃಷ್ಟ.
ಅಥವಾ ಇದು ಕನ್ನಡಿಗರ ದುರದೃಷ್ಟವೆ?
………………………………………………………………………………………
ಸಹೃದಯರಿಗೆಲ್ಲ ಹೊಸ ವರ್ಷದ ಶುಭಾಶಯಗಳು!

Saturday, December 20, 2008

ಭೈರಪ್ಪನವರು ಹಾಗು super-male-fantasy

ಎಸ್.ಎಲ್.ಭೈರಪ್ಪನವರು ಕನ್ನಡದ ಜನಪ್ರಿಯ ಸಾಹಿತಿಗಳು.
ಸಾಧಾರಣವಾಗಿ ಅವರ ಕಾದಂಬರಿಗಳಲ್ಲಿ ಮೂರು ಮುಖ್ಯ ಲಕ್ಷಣಗಳನ್ನು ಗುರುತಿಸಬಹುದು:
(೧) passionate ಬರವಣಿಗೆ.
(೨) ತತ್ವಜಿಜ್ಞಾಸೆ.
(೩) obsession with sex.

ಭೈರಪ್ಪನವರ ಪಾತ್ರಗಳು, ವಿಶೇಷತ: ನಾಯಕರು ಛಲವಾದಿಗಳು, ತೀವ್ರವಾದ ತಳಮಳದಲ್ಲಿ ತೊಳಲಾಡುವಂಥವರು.
ನಾಯಕ ಹಾಗೂ ನಾಯಕಿಯಲ್ಲದೆ, ಇತರ ಪಾತ್ರಗಳೂ ಸಹ ನಿರ್ಣಾಯಕ ಸಮಯದಲ್ಲಿ ಭಯಂಕರ ತತ್ವಜಿಜ್ಞಾಸೆಯಲ್ಲಿ ತೊಡಗಿಕೊಳ್ಳುವಂಥವರು. ಇದು ಬರವಣಿಗೆಯಲ್ಲಿ passion ತುಂಬಲು ಸಹಾಯಕವಾಗಿದೆ.
ಇದೆಲ್ಲದರ ಹಿಂದೆ, ಕೆಲವೊಮ್ಮೆ ಮುಕ್ತವಾಗಿ, ಕೆಲವೊಮ್ಮೆ ಗುಪ್ತವಾಗಿ ಮತ್ತೊಂದು ವಿಶೇಷತೆಯನ್ನು ಕಾಣಬಹುದು.
ಈ ವಿಶೇಷತೆಗೆ ನಾವು super- male- fantasy ಎಂದು ಕರೆಯಬಹುದು.

ಬಹುಶಃ ಎಲ್ಲ ಗಂಡಸರು ತಾವು ಹೆಣ್ಣಿಗಿಂತ ಎಲ್ಲ ವಿಧದಲ್ಲಿಯೂ ಹೆಚ್ಚಿನವರು, ವಿಶೇಷತ: sexually ಹೆಚ್ಚು ಸಾಮರ್ಥ್ಯವುಳ್ಳವರು ಎಂದು ಕಲ್ಪಿಸಿಕೊಳ್ಳುತ್ತಾರೆ.
ಆದರೆ, ನಿಸರ್ಗದ ಯೋಜನೆ ಅಥವಾ ವಿಧಾನ ಹಾಗಿಲ್ಲ.
ಮಾನವಕುಲದಲ್ಲಿ ಗಂಡು ಹಾಗೂ ಹೆಣ್ಣುಗಳ ಪ್ರಮಾಣ ಸುಮಾರಾಗಿ ಸರಿಸಮವಾಗಿದೆ.
ಮಾನವಕುಲದಲ್ಲಿ ಹೆಚ್ಚಿಗೆ ಸಂತಾನವಾಗಬೇಕಾದರೆ, ರತಿಕ್ರಿಯೆಯಲ್ಲಿ ತೊಡಗಿದ ಗಂಡಸಿನ ಕ್ರಿಯೆ ಶೀಘ್ರಮುಕ್ತಾಯ ಕಾಣಬೇಕು ; ಹಾಗೂ ಹೆಣ್ಣಿನಲ್ಲಿ ರತಿಕ್ರಿಯೆ ಬಲಶಾಲಿ ಹಾಗೂ ನಿಧಾನವಾಗಿರಬೇಕು so that she can receive more & more males.
ಇದು ನಿಸರ್ಗದ ಸಂವಿಧಾನ.

ಆದರೆ ಮಾನವಕುಲದ ಅಹಂಕಾರಿ ಗಂಡುಜಾತಿಗೆ ಈ ನಿಸರ್ಗಯೋಜನೆ ಅಪಥ್ಯವಾಗಿದೆ.
ಆದುದರಿಂದ ಆತ ಪ್ರಕೃತಿಯ ಈ ವಿಧಾನವನ್ನು ಮನಸಾ ಒಪ್ಪಿಕೊಳ್ಳಲಾರದೆ ತೊಳಲಾಡುತ್ತಾನೆ.
ರತಿಕ್ರಿಯೆಯನ್ನು ದೀರ್ಘಗೊಳಿಸಲು ಕೃತ್ರಿಮ ವೈದ್ಯಕೀಯ ವಿಧಾನಗಳಿಗೆ ಶರಣಾಗುತ್ತಾನೆ.
ಅದು ಸಾಧ್ಯವಾಗದಾಗ ತನ್ನ ಸಾಮರ್ಥ್ಯವನ್ನು fantasyಯಲ್ಲಿ ಕಾಣಬಯಸುತ್ತಾನೆ.
ಈ fantasyಯು ಕೇವಲ ವೈಯಕ್ತಿಕ ಹಗಲುಗನಸುಗಳಿಗೆ ಸೀಮಿತವಾಗದೆ, ಸಾಹಿತ್ಯದಲ್ಲಿಯೂ ಸಹ ವ್ಯಕ್ತಗೊಳ್ಳುತ್ತಲೇ ಇದೆ.
ಸಾಹಿತ್ಯದಲ್ಲಿ ವ್ಯಕ್ತವಾಗುವ ಇಂತಹ fantasyಯನ್ನು super- male- fantasy ಎಂದು ಕರೆಯಬಹುದು.

ಸಾಮಾನ್ಯವಾಗಿ super- male- fantasy ಯಲ್ಲಿ ಎರಡು categoryಗಳನ್ನು ಮಾಡಬಹುದು:
(೧) ಜಾಗತಿಕವಾಗಿ ಅಥವಾ ಸಾರ್ವತ್ರಿಕವಾಗಿ applicable ಆಗುವಂತಹ super- male- fantasy ಹಾಗೂ
(೨) ಭಾರತೀಯರಿಗೇ ವಿಶಿಷ್ಟವಾಗಿರುವ super- male- fantasy.

ಸಾರ್ವತ್ರಿಕ super- male- fantasy ಯ ಎರಡು ಲಕ್ಷಣಗಳು ಹೀಗಿವೆ:
(೧) ಹೆಣ್ಣು ಗಂಡಿನ ದಾಸಿಯಂತೆ ವರ್ತಿಸುವದು.
(೨) ಹೆಣ್ಣನ್ನು ಗಂಡು ರತಿಕ್ರಿಯೆಯಲ್ಲಿ ಸೋಲಿಸುವದು !

ಭಾರತೀಯರು ಸಾಮಾನ್ಯವಾಗಿ ದೃಢವಾದ ನೈತಿಕ ಬುದ್ಧಿಯುಳ್ಳವರು. ಇವರು ತಮ್ಮ fantasyಯಲ್ಲಿ ಸಹ ನೈತಿಕ ಹಾಗೂ ಧಾರ್ಮಿಕ ಕಟ್ಟಳೆಗಳನ್ನು ಉಲ್ಲಂಘಿಸಲಾರರು.
ಆದುದರಿಂದ ಭಾರತೀಯರಿಗೆ ವಿಶಿಷ್ಟವಾದ super- male- fantasy ಯ ವಿಶೇಷ ಲಕ್ಷಣಗಳನ್ನು ಹೀಗೆ ಗುರುತಿಸಬಹುದು:

(೧) ತಾನು ಹೆಣ್ಣಿಗೆ ಸೋಲದ ನಿಷ್ಠಾವಂತ ಬ್ರಹ್ಮಚಾರಿಯಾಗಿರಬೇಕು.
(೨) ಒಂದು ವೇಳೆ ಅಕಸ್ಮಾತ್ ಹೆಣ್ಣಿಗೆ ಸೋತು ರತಿಕ್ರಿಯೆ ಸಂಭವಿಸಿದರೆ, ಅದು compulsive circumstancesದಲ್ಲಿ ಆಗಿರಬೇಕೇ ಹೊರತು, ಅದರಲ್ಲಿ ಒಳಗೊಂಡವರ ಕಾಮದ ಬಯಕೆಯಿಂದ ಸಂಭವಿಸಿರಕೂಡದು.
ಅಂದರೆ ತಾನು ಹಾಗೂ ಆ ಹೆಣ್ಣು ಅಕ್ರಮ ರತಿಕ್ರಿಯೆಯೆ ನಂತರವೂ innocent ಹಾಗೂ virtuous ಆಗಿಯೇ ಉಳಿದಿರಬೇಕು.

Indian super- male- fantasy ಯ ಕತೆಗಳು ಭಾರತದಲ್ಲಿ ಪುರಾಣಕಾಲದಿಂದಲೂ ಚಾಲ್ತಿಯಲ್ಲಿವೆ.
ಮಹಾಭಾರತದ ಭೀಷ್ಮನು ಅಖಂಡ ಬ್ರಹ್ಮಚಾರಿಯಾಗಿ ಉಳಿದುಕೊಂಡು ಈ super-fantasyಯ super hero ಆಗಿ ಖ್ಯಾತಿ ಪಡೆದ.
ಭೀಷ್ಮನ ಮಲತಾಯಿಯಾದ ಮತ್ಸ್ಯಗಂಧಿಯೊಡನೆ ಪರಾಶರ ಮುನಿಗಳು ಡೋಣಿಯಲ್ಲಿ ಹೋಗುವಾಗ ನದಿಯ ಮಧ್ಯದಲ್ಲಿ ಅವರೀರ್ವರ ಮಿಲನವಾಯಿತು.
ಅವರು ಮುನಿಗಳಾಗಿದ್ದರಿಂದ ಅವರಿಗೆ ನೈತಿಕತೆಯ ಬಂಧನವಿಲ್ಲ.
ಮುನಿಗೆ ಮೈಕೊಟ್ಟಿದ್ದರಿಂದ ಅವಳ ನೈತಿಕತೆಗೂ ಧಕ್ಕೆಯಿಲ್ಲ.
ಅಲ್ಲದೆ ಅವಳಿಗೆ ಮತ್ತೆ ಕನ್ಯತ್ವವನ್ನು ಪ್ರಸಾದಿಸುವ ಮೂಲಕ ಅವಳ virtueಅನ್ನು ಅವರು restore ಮಾಡಿದರು.
ಇಂತಹ ಶಕ್ತಿ ಇದ್ದುದರಿಂದ ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಘನತೆ ದೊರೆಯಿತೇ ಹೊರತು, ಅವರ ನೈತಿಕತೆ ಅಪಮೌಲ್ಯಕ್ಕೊಳಗಾಗಲಿಲ್ಲ.

ಆಧುನಿಕ ಕಾಲದಲ್ಲಿ ಇಂತಹ ಋಷಿ-ಮುನಿಗಳು ಸಿಗುವದು ಸಾಧ್ಯವಿಲ್ಲ.
ಆದುದರಿಂದ ಆಧುನಿಕ ಸಾಹಿತ್ಯದಲ್ಲಿ ಹಾಗೂ ಸಿನೆಮಾಗಳಲ್ಲಿ ನಾಯಕ ಹಾಗು ನಾಯಕಿಯರ ಆತ್ಮನಿಯಂತ್ರಣವನ್ನು ಮುರಿದು ಹಾಕುವಂತಹ ನೈಸರ್ಗಿಕ ಘಟನೆಗಳು ( compulsive circumstances) ಅವಶ್ಯವಾಗುತ್ತವೆ.

ಅನೇಕ ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲಿ ನಾಯಕ ಹಾಗೂ ನಾಯಕಿಯರ ಮಿಲನದ ದೃಶ್ಯವು ಹೀಗಿರುತ್ತದೆ:
ಧಾರಾಕಾರವಾಗಿ ಮಳೆ ಬೀಳುತ್ತಿದೆ; ನಾಯಕ ಹಾಗೂ ನಾಯಕಿ ಇಬ್ಬರೂ ಅಡವಿಯ ನಡುವಿನ ಪಾಳು ಗುಡಿಸಿಲಿನಲ್ಲಿ ಸಿಕ್ಕುಬಿದ್ದಿದ್ದಾರೆ.
ನಾಯಕಿಯ ಅಲ್ಪಸ್ವಲ್ಪ ಬಟ್ಟೆ ಸಹ ತೊಯ್ದು ತೊಪ್ಪಡಿಯಾಗಿವೆ.
ಇಂತಹ ಕಠಿಣ(!) ಪರಿಸ್ಥಿತಿಯಲ್ಲಿ ಅವರ ಸಂಯಮದ ಕಟ್ಟೆ ಸಡಿಲಾಗುತ್ತದೆ.
ಆದುದರಿಂದ ಅದು ಕ್ಷಮ್ಯ.
ಅವರ ನೈತಿಕತೆಗೆ ಅದರಿಂದ ಧಕ್ಕೆ ಇಲ್ಲ.
ಇದು Indian movies’ formula.

ಪುರಾಣಗಳ ನಂತರ ಹಾಗೂ Indian ಸಿನೆಮಾಗಳ ನಂತರ, ಈ Indian super- male- fantasyಯನ್ನು ತಮ್ಮ ಕಾದಂಬರಿಗಳ ಮೂಲಕ ಮುಂದುವರೆಸಿಕೊಂಡು ಬಂದಂತಹ ಸಾಹಿತಿಗಳೆಂದರೆ ಶ್ರೀ ಭೈರಪ್ಪನವರು ಎಂದು ಧಾರಾಳವಾಗಿ ಹೇಳಬಹುದು.
ಆದರೆ ಅವರು ತಮ್ಮ ಕಾದಂಬರಿಗಳಲ್ಲಿ compulsive circumstancesದಂತಹ ಕೀಳು formula ಬಳಸಲಾರರು. ಇದು ಅವರಿಗೆ ಶೋಭಿಸುವಂತಹದಲ್ಲ.

ಭೈರಪ್ಪನವರ ಕಾದಂಬರಿಗಳಲ್ಲಿ ಭಾರತದ ಸಾಂಪ್ರದಾಯಕ ಮೌಲ್ಯಗಳಿಗೆ ವಿಶೇಷ ಗೌರವ ಕಂಡುಬರುತ್ತದೆ.
ಸಾಂಪ್ರದಾಯಕ ಹಾಗೂ ಆಧುನಿಕ ಮೌಲ್ಯಗಳ ತಿಕ್ಕಾಟವೇ ಅವರ ೫ನೆಯ ಕಾದಂಬರಿ ‘ವಂಶವೃಕ್ಷ’ದ ಕಥಾವಸ್ತುವಾಗಿದೆ.
ಈ ಕಾದಂಬರಿಯ ಘನತೆವೆತ್ತ ಪಾತ್ರವಾದ ಶ್ರೋತ್ರಿಗಳ ಜೀವನದಲ್ಲಿಯೂ ಸಹ ಒಂದು ಸೂಕ್ಷ್ಮ ಪ್ರಸಂಗ ಬರುತ್ತದೆ.
Indian super- male- fantasyಯ ನಿಷ್ಠಾವಂತ ಬ್ರಹ್ಮಚರ್ಯದ ಆ fantasy ಹೀಗಿದೆ:
ಶ್ರೋತ್ರಿಗಳ ಹೆಂಡತಿಯು ತನ್ನ ಗಂಡನಿಗೆ ಶರೀರಸುಖವನ್ನು ಕೊಡಲು ಅಸಮರ್ಥಳಾಗಿದ್ದಾಳೆ.
ಹೀಗಾಗಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಓರ್ವ ಹೆಣ್ಣುಮಗಳನ್ನು ತನ್ನ ಬದಲಿಯಾಗಲು ಒಪ್ಪಿಸುತ್ತಾಳೆ.
ಶ್ರೋತ್ರಿಗಳು ಮೊದಲು ಒಪ್ಪಿಕೊಂಡರೂ ಸಹ, ಮಿಲನದ ರಾತ್ರಿಯಂದು ತಮ್ಮ ಮನಸ್ಸಿನಲ್ಲಿಯೇ ಭಯಂಕರ ತತ್ವಜಿಜ್ಞಾಸೆಯನ್ನು ಮಾಡಿ, ಬಳಿಗೆ ಬಂದ ಹೆಣ್ಣನ್ನು ದೂರೀಕರಿಸುತ್ತಾರೆ.
ಅವರ ಮನ ನಿರಾಳವಾಗುತ್ತದೆ.
ನಿಷ್ಠಾವಂತ ಬ್ರಹ್ಮಚರ್ಯದ Indian super- male- fantasy ಯ ಹೀರೋನಿಗೆ ಜಯ ಲಭಿಸುತ್ತದೆ!

ಈಗ Indian super- male- fantasyಯ ಎರಡನೆಯ ಲಕ್ಷಣವಾದ compulsive circumstances ಅನ್ನು ನೋಡೊಣ:
ನಾಯಕನು ಜಾರುವಂತಹ ಪ್ರಸಂಗವಿದ್ದಾಗ ಏನು ಮಾಡಬೇಕು?
ಸಾಮಾನ್ಯವಾಗಿ ಅನೇಕ ಲೇಖಕರು Compulsive circumstances ಅನ್ನುವ formula ಬಳಸುತ್ತಾರೆ.
ಆದರೆ ಭೈರಪ್ಪನವರು ಇದಕ್ಕಿಂತಲೂ ಹೆಚ್ಚಿನ ಒಂದು super formulaವನ್ನು ಹುಡುಕಿದ್ದಾರೆ.
ಅದು Inborn innocence ಎನ್ನುವ formula.

ಅವರ ೭ನೆಯ ಕಾದಂಬರಿಯಲ್ಲಿ (‘ನಾಯಿ ನೆರಳು’) ಇಂತಹ ಒಂದು ಸಂದರ್ಭವಿದೆ.
ಈ ಕಾದಂಬರಿಯ ನಾಯಕನಿಗೆ ಪೂರ್ವಜನ್ಮದ ಸ್ಮೃತಿ ಬಂದಿದೆ.
ಇವನ ಪೂರ್ವ ಜನ್ಮದ ತಂದೆ, ತಾಯಿ ಹಾಗೂ ಹೆಂಡತಿ ಇವನನ್ನು ಒಪ್ಪಿಕೊಂಡಿದ್ದಾರೆ.
ಪೂರ್ವ ಜನ್ಮದ ಹೆಂಡತಿಯೊಡನೆ ಇವನು ಮಲಗಿಕೊಳ್ಳುತ್ತಿದ್ದಾನೆ.
ಸಹಜವಾಗಿಯೇ ಅವಳು ಇವನ ದುಪ್ಪಟ್ಟು ವಯಸ್ಸಿನವಳು.
ಆದರೇನಾಯಿತು, ತನ್ನ ಗಂಡ ತನಗೆ ಜನ್ಮಾಂತರದಲ್ಲಿಯಾದರೂ ಸಿಕ್ಕಿದ್ದು ತನ್ನ ಪುಣ್ಯವೆಂದು ಆ ಮುತ್ತೈದೆ ಭಾವಿಸಿಕೊಂಡು ತನ್ನನ್ನು ಅವನಿಗೆ ಒಪ್ಪಿಸಿಕೊಳ್ಳುತ್ತಿದ್ದಾಳೆ.
(=formula of devotion and innocence!)

ಈ ನಾಯಕ ಒಮ್ಮೆ ತೋಟದ ಕಡೆಗೆ ನಡೆದಾಗ ಅಲ್ಲಿ ಒಬ್ಬಳು ತರುಣ ಕೆಲಸದಾಕೆಯನ್ನು ನೋಡುತ್ತಾನೆ.
ಇವನ ಮನಸ್ಸಿನಲ್ಲಿ ಅವಳನ್ನು ಕೂಡಬೇಕು ಎನ್ನುವ ಭಾವನೆ ಅತ್ಯಂತ ಸಹಜವಾಗಿ ಹುಟ್ಟುತ್ತದೆ.
ಇದು ಸಾಮಾನ್ಯ ಮಾನವರ ಮನದಲ್ಲಿ ಮೂಡುವ ನೀಚಕಾಮವಲ್ಲ!
ನಿಸರ್ಗದ ಮಕ್ಕಳ ಹಾಗೆ ಅವರು ಅತ್ಯಂತ ಸಹಜವಾಗಿ ಕೂಡುತ್ತಾರೆ.
ಮತ್ತೊಮ್ಮೆ formula of innocenceದ ವಿಜಯವಾಗುತ್ತದೆ!

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಗಂಡು ಹೆಣ್ಣು ಬೆರೆಯುವದಕ್ಕೆ ಯಾವುದೇ ನೈತಿಕ ಪ್ರತಿಬಂಧ ಉಳಿದಿಲ್ಲ.
ಹೀಗಾಗಿ ಅಲ್ಲಿಯ ಕಾದಂಬರಿಕಾರರಿಗೆ ಇಂತಹ formulaಗಳ ಅವಶ್ಯಕತೆ ಬರುವದಿಲ್ಲ.

Indian-super-male-fantasyಯ ಉದಾಹರಣೆಗಳನ್ನು ಪುರಾಣಗಳಲ್ಲಿ, ಸಿನೆಮಾಗಳಲ್ಲಿ ಹಾಗೂ ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ನೋಡಿದ್ದಾಯ್ತು.
ಇದೀಗ ಸಾರ್ವತ್ರಿಕ super-male-fantasyಯ ಲಕ್ಷಣಗಳು ಭೈರಪ್ಪನವರ ಕಾದಂಬರಿಗಳಲ್ಲಿ ವ್ಯಕ್ತವಾದ ಬಗೆಯನ್ನು ನೋಡೋಣ:
ಈ fantasyಯ ಮೊದಲ ಗುರುತು ಎಂದರೆ ‘ಹೆಣ್ಣು ಗಂಡಿನ ದಾಸಿ ಅಥವಾ ಆರಾಧಕಿಯಂತೆ’ ವರ್ತಿಸುವದು.
ಭೈರಪ್ಪನವರ ೪ನೆಯ ಕಾದಂಬರಿ ‘ಮತದಾನ’ದ ಪುಟ ೧೬೯ರಲ್ಲಿ ಕಾದಂಬರಿಯ ನಾಯಕಿ ರಂಗಲಕ್ಷ್ಮಿಯು ನಾಯಕನಿಗಾಗಿ ಹಪಾಪಿಸುವದನ್ನು ಓದಿರಿ:
“ ತಾನು ಯಾರ ಬಗ್ಗೆ ಅತ್ಯಂತ ಗೌರವ ತಳೆದು,ಯಾರಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ಎರಡು ವರ್ಷಗಳ ಹಿಂದೆ ತವಕಪಡುತ್ತಿದ್ದಳೊ ಅವರು ಈ ದಿನ ತನ್ನ ಎದುರು ಕುಳಿತು, ‘ನಾವಿಬ್ಬರು ಒಂದಾಗೋಣ ಬಾ’ ಎಂದು ಕರೆಯುತ್ತಿದ್ದಾರೆ. ಅವರ ಸ್ವಭಾವ, ಉಚ್ಚ ಆದರ್ಶ ಮತ್ತು ಪ್ರಾಮಾಣಿಕ ಜೀವನಗಳು ಅವಳಿಗೆ ತಿಳಿದಿವೆ. ಅವುಗಳಿಗೆ ತನ್ನ ಜೀವನದ ಶಕ್ತಿಯನ್ನು ಬೆರಸಿ ಬೆಳೆಸುವದಕ್ಕಿಂತ ಸಾರ್ಥಕವಾದ ಜೀವನವಿಲ್ಲ.”
ಭೈರಪ್ಪನವರ ನಾಯಕಿಯರ ಅತ್ಯುಚ್ಚ ಸಾಧನೆ ಹಾಗೂ ಆದರ್ಶ ಅಂದರೆ, ನಾಯಕನ ಛಾಯಾನುವರ್ತಿಯಾಗಿ ವರ್ತಿಸುವದು!

‘ದೂರ ಸರಿದರು’ ಇದು ಬೈರಪ್ಪನವರ ಮೂರನೆಯ ಕಾದಂಬರಿ.
ಈ ಕಾದಂಬರಿಯಲ್ಲಿ ಕಾಲೇಜೊಂದರ ವಿದ್ಯಾರ್ಥಿನಿ ಉಮಾ ಎನ್ನುವವಳು ತನ್ನ ಮುಂದಿನ ಕ್ಲಾಸಿನಲ್ಲಿರುವ ವಸಂತ ಎನ್ನುವ ವಿದ್ಯಾರ್ಥಿಯನ್ನು ಪ್ರೀತಿಸುತ್ತಾಳೆ.
ತತ್ವಶಾಸ್ತ್ರದ ವಿದ್ಯಾರ್ಥಿನಿಯಾದ ಇವಳು ತನ್ನಲ್ಲಿ ಪ್ರೀತಿ ಹುಟ್ಟುವವರೆಗೂ ಗಂಡು ಹೆಣ್ಣು ಸಮಾನರು ಎಂದು ತಿಳಿದವಳು.
ಆದರೆ, ತನ್ನ senior ವಿದ್ಯಾರ್ಥಿಯೊಬ್ಬನಲ್ಲಿ ಪ್ರೀತಿ ಹುಟ್ಟಿದ ಬಳಿಕ ಹೆಣ್ಣು ಗಂಡಿನ ಸಮಾನಳಲ್ಲ ಎಂದು ತಿಳಿದುಕೊಂಡು ಬಿಡುತ್ತಾಳೆ !
ಆ ಕಾದಂಬರಿಯ ೮೭ನೆಯ ಪುಟದಲ್ಲಿ ಆಕೆ ತನ್ನಲ್ಲಿ ಮೂಡುವ ಭಾವನೆಗಳನ್ನು ತನ್ನ ಪ್ರಿಯಕರನಿಗೆ ಈ ರೀತಿಯಾಗಿ ಹೀಗೆ ಹೇಳುತ್ತಾಳೆ:
“…ಸಮಾನತೆ ಎನ್ನುವದರಲ್ಲೂ ಹುರುಳು ಕಾಣುತ್ತಿಲ್ಲ. ನಾನು ನಿಮಗಿಂತ ಚಿಕ್ಕವಳು, ವಯಸ್ಸಿನಲ್ಲಿ ಮಾತ್ರವಲ್ಲ-ಬುದ್ಧಿಯಲ್ಲಿ, ಭಾವದಲ್ಲಿ-ಎಲ್ಲದರಲ್ಲಿ ಚಿಕ್ಕವಳು ಅನಿಸುತ್ತಿತ್ತು. ನಿಮ್ಮೆದುರಿಗೆ ನನ್ನ ಸ್ವತಂತ್ರ ವ್ಯಕ್ತಿತ್ವವೆಂದರೆ ಅದು ನನಗೆ ಬೇಡವಾದ ಒಂದು ಶತ್ರು ಅನಿಸುತ್ತಿತ್ತು”

ಇದೇ ಕಾದಂಬರಿಯ ಮತ್ತೊಂದು ಪಾತ್ರವಾದ ವಿನತೆ ಎನ್ನುವವಳ fantasyಯನ್ನು ನೋಡಿರಿ (ಪುಟ೨೨೧):
“…ಅವರ ವೃದ್ಧ ತಾಯಿಗೆ ತಾನು ಸೊಸೆಯಾಗಿ ಅವರ ಸೇವೆ ಮಾಡುತ್ತಿರುವಂತೆ ಅವಳು ಮನಸ್ಸಿನೊಳಗೇ ಚಿತ್ರಿಸಿಕೊಳ್ಳುವಳು. ಮುಂಜಾವಿನಿಂದ ಸಂಜೆಯವರೆಗೂ ಓದಿ ಅವನಿಗೆ ಆಯಾಸವಾದಾಗ, ತಾನು ಅವನ ಮನಸ್ಸನ್ನು ಅರಳಿಸಿ ಉಪಚರಿಸುವ ಕನಸನ್ನೂ ಕಾಣುವಳು. ಅವನು ಓದುವ ಪುಸ್ತಕಗಳ ಟಿಪ್ಪಣಿ ಬರೆದುಕೊಡುವದು, ಅವನ ಬರಹಗಳ ಉತ್ತಮ ಪ್ರತಿ ಮಾಡುವದು, ಅವನ ಬಟ್ಟೆಬರೆಗಳನ್ನು ಒಗೆದು ಮನೆಗೆಲಸ ಮಾಡುವದು, ಮೊದಲಾದವುಗಳಲ್ಲಿ ಕಾಲ ಕಳೆಯುವಂತೆ ಭಾವಿಸುವಳು……”

So, ಭೈರಪ್ಪನವರ ನಾಯಕಿಯರು ಭಾರತೀಯ ಪತಿವ್ರತಾ ನಾರಿಯರ ಅಪರಾವತಾರಗಳು.
ಹೆಣ್ಣು ಗಂಡಸಿನ ದಾಸಿ ಅಥವಾ ಆರಾಧಕಿಯಾಗಿರಬೇಕೆನ್ನುವ ಜಾಗತಿಕ male-fantasyಯನ್ನು ನಾವು ೫೦ ವರ್ಷಗಳ ಹಿಂದಿನ ಇಂಗ್ಲಿಶ ಕಾದಂಬರಿಗಳಲ್ಲೂ ಕಾಣುತ್ತೇವೆ.
ಈ ಧೋರಣೆಯನ್ನು ಕನ್ನಡದಲ್ಲಿ ಭೈರಪ್ಪನವರು emphatically ಮುಂದುವರಿಸಿಕೊಂಡು ಬರುತ್ತಿದ್ದಾರೆ.

‘ಭೀಮಕಾಯ’ ಇದು ಭೈರಪ್ಪನವರ ಮೊದಲನೆಯ ಕಾದಂಬರಿ.
ಈ ಕಾದಂಬರಿಯ ನಾಯಕ ಒಬ್ಬ ತರುಣ ಭೀಮಕಾಯ ಜಟ್ಟಿ.
ಈತ ಅನೇಕ ಮಹಾಜಟ್ಟಿಗಳನ್ನು ಚಿತ್ ಮಾಡಿ ಒಗೆದಿದ್ದಾನೆ.
ಇವನನ್ನು ಓರ್ವ ತರುಣ ವೇಶ್ಯೆಯೇ ಮೋಹಿಸುತ್ತಾಳೆ.
ಭೀಮಕಾಯನೂ ಅವಳನ್ನು ಮೋಹಿಸಿದ ಎಂದು ಬರೆದರೆ, ಅವನ ನೈತಿಕತೆ ಹಾಳಾದಂತಲ್ಲವೆ?
ಆದುದರಿಂದ, ಭೈರಪ್ಪನವರು plot ಒಂದನ್ನು ಹೆಣೆಯುತ್ತಾರೆ.
ತನ್ನ ವಿರೋಧಿಗಳ ಕುತಂತ್ರದಿಂದಾಗಿ, ಈ ಭೀಮಕಾಯ ಆ ತರುಣಿಯ ಬಲೆಯಲ್ಲಿ ಬೀಳುತ್ತಾನೆ.
ಆದರೇನು, ಆ ವೇಶ್ಯೆ ಇವನನ್ನು ಮನಸಾ ಆರಾಧಿಸುತ್ತಾಳೆ.
ಆದುದರಿಂದ ಇವನಿಂದ ದುಡ್ಡು ತೆಗೆದು ಕೊಳ್ಳುವದಿಲ್ಲ ; ಇವನಿಂದ ಮಗುವನ್ನು ಪಡೆಯುತ್ತಾಳೆ.
ಈ ಭೀಮಕಾಯನಿಗೆ ಓರ್ವ ಬಾಲಿಕೆಯೊಡನೆ ಮದುವೆ ನಿಶ್ಚಯವಾದಾಗ ಆ ಹುಡುಗಿಯನ್ನು ಮದುವೆಯಾಗಲು ಅವನಿಗೆ ಬುದ್ಧಿ ಹೇಳುತ್ತಾಳೆ.

ಆ ವೇಷ್ಯೆಗಷ್ಟೆ ಇಂತಹ ಆರಾಧನಾ ಭಾವ ಇತ್ತು ಎಂದಲ್ಲ.
ತಮ್ಮ ಪ್ರಥಮ ರಾತ್ರಿಯಂದು, ಭೀಮಕಾಯನು ತನ್ನ ಬಾಲಿಕಾ ವಧುವಿಗೆ ಎಲ್ಲ ಸಂಗತಿಯನ್ನು ತಿಳಿಸುತ್ತಾನೆ.
ಇಡೀ ರಾತ್ರಿ ತನ್ನ ಗಂಡನ ವೇಷ್ಯಾಪುರಾಣ ಕೇಳಿದ ಅವಳೂ ಸಹ ತನ್ನ ಹೊಸ ಪತಿಯ ಬಗೆಗೆ ಅಷ್ಟೇ ಆರಾಧನಾ ಭಾವನೆಯನ್ನು ತೋರಿಸುತ್ತಾಳೆ.
ತನ್ನ ಗಂಡನ ಮನಸ್ಸನ್ನು ಗೆದ್ದ ಆ ವೇಷ್ಯೆಯ ಮನೆಗೆ ತಕ್ಷಣವೇ ಗಂಡನೊಡನೆ ತೆರಳಿ, ಅವಳ ಆಶೀರ್ವಾದ ಪಡೆಯುತ್ತಾಳೆ, ಚುಮುಚುಮು ನಸುಕಿನಲ್ಲಿ !
Indian-super-male-fantasyಯ “ದಾಸಿ-ಒಡೆಯ-ಆರಾಧನಾ-syndrome”ದ ಉತ್ಕಟ ಉದಾಹರಣೆ ಅಲ್ಲವೆ ಇದು?

Compulsive circumstances formulaಅನ್ನು ಭೈರಪ್ಪನವರು ತಮ್ಮ ‘ಗ್ರಹಣ’ ಕಾದಂಬರಿಯಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.
ಇದು ಭೈರಪ್ಪನವರ ೧೧ನೆಯ ಕಾದಂಬರಿ.
ಇಲ್ಲಿ ಆಧುನಿಕ ವಿಚಾರಗಳಿರುವ ಹಾಗೂ ಉಚ್ಚ ಧ್ಯೇಯಗಳಿರುವ ಸ್ವಾಮಿಗಳು ಕಾದಂಬರಿಯ ನಾಯಕರು. ಅಂತಹದೇ ವಿಚಾರಗಳ ಹಾಗೂ ಡಾಕ್ಟರ ವೃತ್ತಿಯ ನಾಯಕಿ ಇವನ ಆರಾಧಕಳು.
ಒಮ್ಮೆ ಭಯಂಕರ ಮಳೆ ಬೀಳುತ್ತದೆ.ನಾಯಕ ಹಾಗೂ ನಾಯಕಿ ತೊಯ್ದು ತೊಪ್ಪಡಿಯಾಗಿದ್ದಾರೆ.
ನಾಯಕ ಹಾಗೂ ನಾಯಕಿ ಅವನ ಗುಡಿಸಲಿಗೆ ಓಡಿ ಬರುತ್ತಾರೆ.
ಗುಡಿಸಲೂ ಸಹ ಸೋರುತ್ತಿದೆ. (ಸೋರುತಿಹದು ಮನೆಯ ಮಾಳಿಗೆ!)
ನಾಯಕನ ಸಂಯಮ ಕುಸಿದು, ಆತ ನಾಯಕಿಯ ಮೇಲೆ ಎರಗುತ್ತಾನೆ.
ನಾಯಕಿ ಆತನನ್ನು ತುಂಬು ಮನಸ್ಸಿನಿಂದ ಸ್ವೀಕರಿಸುತ್ತಾಳೆ!

Compulsive circumstances ಹಾಗೂ ಆರಾಧನಾ ಭಾವ ಅನ್ನುವ ಎರಡು ಲಕ್ಷಣಗಳಲ್ಲದೆ, Indian-super-male-fantasyಯ ಮೂರನೆಯ ಲಕ್ಷಣ ಸಹ ಈ ಕಾದಂಬರಿಯಲ್ಲಿದೆ.
ಅದು ನಾಯಕನ ರತಿಸಾಮರ್ಥ್ಯ!

ಇದೇ (‘ಗ್ರಹಣ’) ಕಾದಂಬರಿಯ ೧೦೫ನೆಯ ಪುಟದದಲ್ಲಿ ನಾಯಕಿ ವರ್ಣಿಸುವ ನಾಯಕನ ರತಿಸಾಮರ್ಥ್ಯದ ವೈಭವವನ್ನಷ್ಟು ಓದಿರಿ:
“……..ಅವರ ಕೈ, ತೋಳು, ಎದೆ, ಕುತ್ತಿಗೆ, ಕಾಲಿನ ಕಂಬ, ಮೀನಖಂಡಗಳೆಲ್ಲವೂ ಇನ್ನೂ ಬಿಗಿಯಾಗಿಯೇ ಇವೆ. ತನ್ನ ತೋಳು ಸೋತು ಮಲಗಿರುವಾಗ ಅವರ ಬಾಹುಗಳು ಮೊದಲಿಗಿಂತ ಗಟ್ಟಿಯಾಗುತ್ತಿವೆ. ಇನ್ನು ಸಾಕೆಂದು ಅವರಿಗೆ ಹೇಗೆ ಹೇಳುವದು?
ತಾನು ವೈದ್ಯಶಾಸ್ತ್ರವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿರುವ ಹೆಂಗಸು. ಪ್ರಥಮ ಘಟನೆ, ಸ್ತ್ರೀಯ ಅನುಭವ, ಉದ್ದೀಪನ, ಪುರುಷನ ಧಾರಣ, ಕಾಲಾವಧಿ, ಸಾಪೇಕ್ಷ ಶಕ್ತಿಗಳ ಬಗೆಗೆ ತಿಳಿದುಕೊಂಡಿದ್ದವಳು. ಆದರೆ ಇದು ತನ್ನ ಕಲ್ಪನೆಯನ್ನೇ ಕುಸಿಸಿ ಮುಳುಗಿಸುತ್ತಿದೆ. ಇವರ ಧಾರಣಶಕ್ತಿ ಪ್ರಚಂಡವಾದದು. ಪ್ರಥಮ ಅನುಭವದಲ್ಲೇ ತನ್ನನ್ನು ರತಿಯ ತಲಾತಲಗಳಿಗೆ ತಲುಪಿಸಿದ್ದಾರೆ. ಪೌರುಷವೇ ಸಾಕ್ಷಾತ್ಕಾರವಾಗಿ ಚಲಿಸುವ ಇವರಿಗೆ ನಾನೊಬ್ಬಳಲ್ಲ, ನನ್ನಂತಹ ಹಲವು ಸ್ತ್ರೀಯರಾದರೂ ಸಾಲದೇನೋ!”

ಇದೇ (‘ಗ್ರಹಣ’) ಕಾದಂಬರಿಯ ೧೩೧ನೆಯ ಪುಟದಲ್ಲಿ, ಸ್ತ್ರೀಯ ಮೇಲೆ ಪುರುಷನ ವಿಜೃಂಭಣೆಯ ಮತ್ತೊಂದು ಪ್ರಕಾರವನ್ನು ಕಾಣಬಹುದು:
“ಸರೋಜ ಮಾತನಾಡದೆ ನಿಂತುಕೊಂಡಳು. ಆದರೆ ದೃಷ್ಟಿಯನ್ನು ಕೆಳಗೆ ಮಾಡದೆ ಕುತ್ತಿಗೆಯನ್ನು ಹಿಂದಕ್ಕೆ ತಿರುಗಿಸಿ, ಮಂಚದ ಮೇಲೆ ಮಲಗಿ ಕೈಕಾಲು ಅದರಿಸುತ್ತಿದ್ದ ರೋಗಿಯನ್ನು ನೋಡುತ್ತಿದ್ದಳು.
ತಮ್ಮ ಎಡಗಾಲನ್ನು ಮೇಲೆ ಎತ್ತಿ ಸ್ವಾಮಿಗಳು, ‘ಹೇಡಿ’ ಎಂದು ಅವಳ ಸೊಂಟಕ್ಕೆ ಒದೆದು ತೋಳನ್ನು ಬಿಟ್ಟರು. ಅವಳು ಉರುಳಿ ಕೆಳಗೆ ಬಿದ್ದಳು.
ಅವರು ಅವಳನ್ನು ತಿರುಗಿ ನೋಡಲಿಲ್ಲ. ಕಲ್ಲುಚಪ್ಪಡಿಯ ಮೆಟ್ಟಲನ್ನು ಇಳಿದರು.”

ಅದೇ (‘ಗ್ರಹಣ’) ಕಾದಂಬರಿಯ ೧೪೨ನೆಯ ಪುಟದಲ್ಲಿ ನಾಯಕಿಗೆ ಮತ್ತೆ ನಾಯಕನ ಪೌರುಷದ ಸ್ಮರಣೆಯಾಗುವ ಬಗೆಯನ್ನು ಓದಿರಿ:
“ಅಂಗಳದ ಭಾಗವನ್ನು ನೋಡುತ್ತಿದ್ದಾಗ, ತಾನು ಇಲ್ಲಿಗೆ ಬಂದಿದ್ದ ಕೊನೆಯ ದಿನದ ಮನಃಸ್ಥಿತಿ ಮತ್ತು ಅನುಭವಗಳ ನೆನಪಾಯಿತು. ಅದೆಂತಹ ಪೌರುಷ ಅವರದು! ಗಟ್ಟಿ ತೋಳಗಳು, ಕಸುವಿನ ಎದೆಕಟ್ಟು, ತಾನು ಸೋತು, ಬಳಲಿ, ನರನರಗಳೂ, ಸ್ನಾಯುಗಳೂ ಸಡಿಲವಾದಂತಾಗಿ ನಿಶ್ಚೇತನಳಾದ, ಮಾದಕತೆಯಿಂದ ಕಣ್ಣುಗತ್ತಲೆ ಬಂದಂತಹ ಅನುಭವ.”

ಭೈರಪ್ಪನವರ ೧೩ನೆಯ ಕಾದಂಬರಿ “ಅನ್ವೇಷಣೆ”ಯಲ್ಲಿ ಬರುವ ಒಬ್ಬ ಸನ್ಯಾಸಿಯು ಮುಂಬಯಿಯ ಸೂಳೆಯೊಬ್ಬಳಲ್ಲಿ ತೋರಿಸುವ ರತಿಸಾಮರ್ಥ್ಯದ ವರ್ಣನೆ ಹೀಗಿದೆ:
“ಅವರು ನಾಲ್ಕು ದಿನ ಆ ಮಹಡಿಯಿಂದ ಕೆಳಗೆ ಇಳಿಯಲಿಲ್ಲ. ತನಗೂ ಅವಳಿಗೂ ಅಲ್ಲಿಗೇ ಊಟ ಬರುತ್ತಿತ್ತು. ಐದನೆಯ ಬೆಳಗ್ಗೆ ಕೆಳಗಿಳಿದು ಬಾಂಬೆ ಸೆಂಟ್ರಲ್ ಸ್ಟೇಶನ್ನಿನ ಅದೇ ಜಾಗಕ್ಕೆ ಹೋಗಿ ಕುಳಿತಾಗ ಅನ್ನಿಸಿತು:
ಒಳ್ಳೆಯ ಹುಡುಗಿ. ಅಖಂಡ ಸುಖ ಕೊಟ್ಟಳು. ನನ್ನಲ್ಲಿ ಇಷ್ಟು ಶಕ್ತಿ ಇದೆ ಅಂತ ನನಗೇ ಗೊತ್ತಿರಲಿಲ್ಲ. ನಾಲ್ಕು ಹಗಲು ನಾಲ್ಕು ರಾತ್ರಿ. ಅವಳು ಎಷ್ಟು ಬಳಲಿದಳೋ! ನನಗೇನೂ ಬಳಲಿಕೆ ಇಲ್ಲ.”


ಭೈರಪ್ಪನವರ ೧೬ನೆಯ ಕಾದಂಬರಿ ‘ಸಾಕ್ಷಿ’ಯಂತೂ Super-male-fantasyಯ ಪರಮೋಚ್ಚ ಉದಾಹರಣೆ ಎನ್ನಬಹುದು.
ಈ ಕಾದಂಬರಿಯ (ಖಳ)ನಾಯಕ ಮಂಜಯ್ಯನೆನ್ನುವನು ಒಬ್ಬ Casanova.
ಈತ ೧೭ ವರ್ಷದವನಿರುವಾಗಲೇ ೩೫ ವರ್ಷದ ಪತಿವ್ರತಾ ಹೆಂಗಸೊಬ್ಬಳನ್ನು ತನ್ನ ಬಲೆಯಲ್ಲಿ ಅತಿ ಸುಲಭವಾಗಿ ಬೀಳಿಸುತ್ತಾನೆ. (ಹೆಣ್ಣಿನಲ್ಲಿರುವ ಆರಾಧನಾ ಗುಣದ ಮೂಲಕ!)
ತನಗೆ ೫೧ ವರ್ಷ ವಯಸ್ಸಾದಾಗ ಅದೇ ಸ್ತ್ರೀಯ ೧೭ ವರ್ಷದ ಹೆಣ್ಣು ಮಗಳನ್ನು ಅದೇ ರೀತಿಯಲ್ಲಿ ಬಲೆಗೆ ಕೆಡವಿಕೊಳ್ಳುತ್ತಾನೆ.
ಆಕೆ ತನ್ನ ಅಪ್ಪನ ವಿರೋಧವಿದ್ದಾಗಲೂ ಈತನನ್ನು ಮದುವೆಯಾಗುತ್ತಾಳೆ.
ಆಬಳಿಕ ಈ ಮಂಜಯ್ಯನು ಆ ಊರಿನ ಕೂಲಿಯೊಬ್ಬನನ್ನು ಕೊಂದು ಹಾಕಿ, ಅವನ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಂಡು ಅವಳ ಜೊತೆಗೆ ಅಕ್ರಮ ಸಂಬಂಧ ಸ್ಥಾಪಿಸುತ್ತಾನೆ.
ಆಬಳಿಕ ಅವಳ ಮಗಳನ್ನೂ ಸಹ ಬುಟ್ಟಿಗೆ ಬೀಳಿಸಿಕೊಳ್ಳುತ್ತಾನೆ.
SUPER CASANOVA !
ಈಗ ಈ Casanovaನ ಸಾಮರ್ಥ್ಯವನ್ನಷ್ಟು ನೋಡಿರಿ:
(ತನ್ನ ಗಂಡನ ಕೊಲೆಗಾರನಾದ ಮಂಜಯ್ಯನ ಬಗೆಗೆ ಮೋಹ ತಳೆದ ಲಕ್ಕಿ ಎನ್ನುವ ಹೆಂಗಸಿನ ವಿಚಾರವನ್ನು ಅರಿಯಲು ಈ ‘ಸಾಕ್ಷಿ’ ಕಾದಂಬರಿಯ ೩೫ನೆಯ ಪುಟವನ್ನು ನೋಡಿರಿ:)

“……ತಾನು ಈ ವಯ್ಯನನ್ನು ಕೂಡಿರುವದು ಈಗ ಎರಡನೆಯ ದಫ. ಮೊದಲನೆ ದಫ ಗ್ಯಾಪಿಸಿಕೊಂಡರೆ ಯವ್ವೇ ಎದೆ ಜಲ್ ಅಂತದೆ. ನಂಗೇ ಗೊತ್ತಿಲ್ಲದ್ಹಂಗೆ ಈವಯ್ಯ ಮಂತ್ರ ಹಾಕಿ, ಎಂಗಸೆಂದರೆ ಸೋತ ಎಣ್ಣು ನಾಯಿ ಮಾಡಿಬಿಡ್ತಾನೆ. ಕ್ವಾಟೆ ಬೀದಿ ನಾಗೀನ ಒಂದು ಸಲ ನಾನು ಕೇಳಿದ್ದಕ್ಕೆ ಅದೇನು ಕಂಡು ಆವಯ್ಯಂಗೆ ಗಂಟು ಬಿದ್ದೀದೀಯಮ್ಮಿ? ಅಂತ, ಯಕ್ಕಾ ಒಂದು ದಫಾ ಆವಯ್ಯನನ್ನು ಕೂಡಿಬಿಟ್ಟರೆ ಸಾಕು ಮುಂದೆ ಏಳೇಳು ಜನ್ಮಕ್ಕೂ ಅವನ ಜೀತದ ಆಳಾಗಿಯಾದರೂ ಅವನ ತಾವವೇ ಇರಬೇಕು ಅನ್ನಿಸ್ತದೆ ಅಂದಿದ್ದಳು, ಆಗ ನಂಗೆ ತಿಳಿದಿರಲಿಲ್ಲ ಹಿಂಗಿರ್ತದೆ ಅಂತ………”

ಇವರಿಬ್ಬರ ಮೊದಲ ಸಂಗಮದ ವರ್ಣನೆಯನ್ನಷ್ಟು ನೋಡಿರಿ:
“……..ಅವಳಿಗೆ ಅರ್ಥವಾಗುವ ಮೊದಲೇ, ಅರ್ಥ ಮಾಡಿಕಳುಕ್ಕೆ ಅವಕಾಶವನ್ನೇ ಕೊಡದೆ ತಬ್ಬಿ ಉರುಳಿಸಿಕೊಂಡು ಮೇಲೆ ಬಂದು, ಪ್ರವೇಶಿಸಿ ಕೊಸರಾಡದ ಹಾಗೆ ಪಟ್ಟು ಹಾಕಿ, ‘ಬ್ಯಾಡ ಕಣಯ್ಯಾ ಬ್ಯಾಡ ಕಣಯ್ಯಾ, ಇನ್ನೂ ಸೂತಕ ಕಣಯ್ಯಾ,’ ಅನ್ನುತ್ತಿದ್ದ ಬಾಯಿಗೆ ನನ್ನ ಬಾಯಿ ಕೊಟ್ಟು ಮುಚ್ಚಿಸಿಬಿಟ್ಟೆ ಎಂದುಕೊಂಡಾಗ ಮಂಜಯ್ಯ ಎಡಕ್ಕೆ ತಿರುಗಿ ನೋಡಿದ……ಶುರುವಿನಲ್ಲಿ ಮೆಟ್ಟಿಕೊಂಡು ಕೊಸರಾಟವನ್ನು ಹತೋಟಿಗೆ ತರಬೇಕಾದರೂ ನಿಧಾನವಾಗಿ ಇವಳು ಕೊಸರುವದನ್ನು ಬಿಟ್ಟು ಸಡಿಲಗೊಂಡು ಒಪ್ಪಿಸಿಕೊಂಡು ಕೊನೆಗೆ ಇವಳ ನಾಡಿಗಳನ್ನು ಕಂಡು ಹಿಡಿದು ಮಿಡಿದು ವರಸೆ ವೈಖರಿಗಳನ್ನು ಪ್ರಯೋಗಿಸಿದ ಮೇಲೆ ತಾನೂ ತೆವಲೇರಿ ನರಳುಕ್ಕೆ ಶುರು ಮಾಡಿದಳಲ್ಲ………”

ಈಗ ಈ ಮಂಜಯ್ಯ ಎನ್ನುವ ೫೧ ವಯಸ್ಸಿನ ಪಾತ್ರ, ತನ್ನನ್ನು ಬಿಟ್ಟು ಹೋಗಿ, ತನ್ನಿಂದ ೧೭ವರ್ಷಗಳ ವರೆಗೆ ದೂರವಾಗಿ ಉಳಿದ ತನ್ನ ೩೪ ವಯಸ್ಸಿನ ಹೆಂಡತಿಯ ಮೇಲೆ ಅತ್ಯಾಚಾರ ಎಸಗುವ ವರ್ಣನೆ ಹಿಗಿದೆ:
“…ತಡ ಮಾಡದೆ ಅವನು ಎವೆಯಿಕ್ಕುವದರೊಳಗೆ, ‘ಸಾವಿತ್ರಿ, ನಿನ್ನ ಕೈಲಿ ಮಾತಾಡಬೇಕು. ಇಲ್ಲಿ ಕೇಳು’ ಎನ್ನುತ್ತಾ ಬಾಗಿಲು ಮುಚ್ಚಿ ಅವಳ ಹತ್ತಿರಕ್ಕೆ ಹಾರಿ ಒಂದೇ ಅಪ್ಪಳಿಕೆಗೆ ಅವಳನ್ನು ತಬ್ಬಿ ಹಿಡಿದು ಬಾಯಿಯ ಮೇಲೆ ಕೈಇಟ್ಟು ಕಾಲಿಗೆ ಟಾಂಗು ಕೊಟ್ಟು ಕೆಡವಿಕೊಂಡು ಹೊರಳಾಡಲು ಬಿಡಿಸಿಕೊಳ್ಳಲು ಆಗದಂತೆ ಪಟ್ಟುಹಾಕಿ ಬಾಯಲ್ಲಿ ನನ್ನ ಮಾತು ಕೇಳು ನನ್ನ ಮಾತು ಕೇಳು ಎಂದು ಅನುನಯಿಸುತ್ತಾ ತೆಕ್ಕೆಬಿದ್ದು ಆಕ್ರಮಿಸಿಬಿಟ್ಟ. ಸರೋಜಾಕ್ಷಿಯೊಡನೆ ಮಾಡಿದ ತಪ್ಪು ಮಾಡದೆ ಆಕ್ರಮಣವು ಸಂಪೂರ್ಣವಾದ ನಂತರವೂ ಅವಳಿಗೆ ಕಿರುಚಿಕೊಳ್ಳಲು ಅವಕಾಶ ಕೊಡದಂತೆ ಬಾಯಿ ಮುಚ್ಚಿಸಿ ತನ್ನ ದೇಹದ ಎಲ್ಲ ಲಂಪಟ ಭಾಗಗಳಿಂದಲೂ ಅವಳನ್ನು ಉದ್ದೀಪಿಸತೊಡಗಿದ. ಅವಳು ವಿರೋಧಿಸುತ್ತಿದ್ದಳು. ಹೊರಳಲು, ಕೆಡವಲು, ನುಣುಚಿಕೊಳ್ಳಲು ಹೆಣಗಿದಳು. ದೈಹಿಕವಾಗಿ ಅವಾವುವೂ ಸಾಧ್ಯವಾಗದ ಹಿಡಿತವನ್ನು ಬಿಗಿಮಾಡುತ್ತಲೇ ನಡೆದಂತೆ ಬಿಡಿಸಿಕೊಳ್ಳುವದು ಅಸಾಧ್ಯವೆಂದರಿತ ಅವಳು ಸೋತು ಸುಮ್ಮನಾದಳು……………..”

ಈ ಅತ್ಯಾಚಾರದ ಕೊನೆಯಲ್ಲಿ ಅವಳಲ್ಲಿ ಉಕ್ಕಿದ ಭಾವನೆಗಳು ಹೀಗಿವೆ:
“…………ಅವನು ಮಾಡಿದ ಅತ್ಯಾಚಾರದ ಕೊನೆಕೊನೆಗೆ ನಾನು ಸೋತಿದ್ದೆ. ಭಾಗಿಯಾಗಿದ್ದೆ. ಅದು ಅವನಿಗೆ ಅರ್ಥವಾಗಿದೆ. ನನ್ನ ಸೋಲು,ನನ್ನ ನಾಚಿಕೆಯ ಅಂಶ ಅದು .”

ಇದೆಲ್ಲ super-fantasyಯ ಭಾಗವಾದ ರತಿಸಾಮರ್ಥ್ಯದ ಲಕ್ಷಣವಾಯಿತು. ಈಗ ಇನ್ನೊಂದು ಲಕ್ಷಣವನ್ನು ನೋಡಿರಿ.
ಅಂದರೆ ಹೆಣ್ಣನ್ನು ಆಳಬಯಸುವ ಮನೋಭಾವವನ್ನು ಇಲ್ಲಿ ವ್ಯತ್ಯಸ್ತವಾಗಿ ಹೇಳಲಾಗಿದೆ.
ಅರ್ಥಾತ್, ಹೆಣ್ಣೇ ಗಂಡಸಿನಿಂದ ಆಳಿಕೊಳ್ಳಲು ಬಯಸುತ್ತಾಳೆ ಎಂದು ಹೇಳುವ ಮೂಲಕ ವರ್ಣಿಸಲಾಗಿದೆ.

ಇದೇ (‘ಸಾಕ್ಷಿ’) ಕಾದಂಬರಿಯಲ್ಲಿಯ ಸರೋಜ ಎನ್ನುವ ಪಾತ್ರ ತನ್ನ ಗಂಡನ ಬಗೆಗೆ ಹೇಳುವ ಮಾತುಗಳು ಹೀಗಿವೆ:
“…ಎಂಥ ಗಂಡ ಈತ! ಕೆಟ್ಟವರಲ್ಲ. ಕೇಡಿಗರಲ್ಲ. ಸತ್ವಹೀನ, ಯಾರನ್ನೂ ಏನನ್ನೂ ಆಳಲಾರದವ…..ಇಂಥ ವಿಧೇಯತೆಯನ್ನು ಕಳೆಸಿ ಇವರನ್ನೊಬ್ಬ ಸಮರ್ಥ ಗಂಡಸನ್ನಾಗಿ ಮಾಡಬೇಕೆಂದು ಎಷ್ಟು ವಿಧದಲ್ಲಿ ಪ್ರಯತ್ನಿಸಿದೆ? ಹೆಂಗಸು ಮೆಚ್ಚುವ ಗಂಡಸಿನ ಗುಣಲಕ್ಷಣಗಳನ್ನು ಎಷ್ಟು ಆಪ್ತವಾಗಿ ಬಿಡಿಸಿ ಹೇಳಿದೆ?.........”

‘ಸಾಕ್ಷಿ’ ಕಾದಂಬರಿಯಲ್ಲಿ ಉದ್ದಕ್ಕೂ ಲಂಪಟತನವಿದೆ ; explicit ರತಿವರ್ಣನೆ ಇದೆ.
ಇವೆಲ್ಲವನ್ನೂ ಸಂಭಾವಿತವಾಗಿ cover ಮಾಡುವ ಉದ್ದೇಶದಿಂದ ಪುಟಗಟ್ಟಲೆ ಬರೆದ ಸೋಗಲಾಡಿ ತತ್ವಜಿಜ್ಞಾಸೆ ಇದೆ. ಭೈರಪ್ಪನವರು ತಮ್ಮ ನೈಜ ಉದ್ದೇಶವನ್ನು ಮರೆಮಾಚಲು ಈ ಕಾದಂಬರಿಯಲ್ಲಿ ಬಲು ವಿಚಿತ್ರವಾದ ತಂತ್ರವನ್ನು ಬಳಸಿದ್ದಾರೆ. ಅದು ಹಿಗಿದೆ:

ಯಮಧರ್ಮರಾಯನ ಆಸ್ಥಾನದಲ್ಲಿ ವಿಚಾರಣೆ ನಡೆಯುತ್ತಿದೆ.
ಯಮಧರ್ಮನಿಗೆ ಹಾಗೂ ಚಿತ್ರಗುಪ್ತರಿಗೆ ಸತ್ಯದ ಪೂರ್ಣ ಅರಿವಿದೆ.
ಆದರೂ ಸಹ ಅಲ್ಲಿ ನಿಂತಿರುವ ಆತ್ಮಕ್ಕೆ ತನ್ನ ಸಮರ್ಥನೆಯನ್ನು ಹೇಳಲು ಒಂದು ಅವಕಾಶ ಕೊಟ್ಟಿದ್ದಾರೆ.
ಅಲ್ಲಿಂದ ಕಾದಂಬರಿಯ flashback ಪ್ರಾರಂಭವಾಗುತ್ತದೆ.

ಕೊನೆಯಲ್ಲಿ ಮತ್ತೊಮ್ಮೆ ಯಮಧರ್ಮನ ಆಸ್ಥಾನದ ವರ್ಣನೆ, ಹಾಗೂ ಸತ್ಯದ proclamation ಆಗುತ್ತದೆ !
ಈ ತಂತ್ರಕ್ಕೆ ಹೊಂದುವಂತೆ, ಕಾದಂಬರಿಗೆ ‘ಸಾಕ್ಷಿ’ ಎಂದು ಹೆಸರಿಸಲಾಗಿದೆ.
ಭೈರಪ್ಪನವರು ಸತ್ಯಕ್ಕೆ ನಿಜವಾಗಿಯೂ ಬೆಲೆ ಕೊಡುತ್ತಿದ್ದರೆ, ಈ ಕಾದಂಬರಿಗೆ ‘ಒಬ್ಬ ಕಾಮಪಿಶಾಚಿಯ ಸಾಹಸಗಳು’ ಎನ್ನುವ ಶೀರ್ಷಿಕೆಯನ್ನು ಕೊಟ್ಟಿರುತ್ತಿದ್ದರು.

ಹಾಗಂತ, ಈ ಲೇಖನದಲ್ಲಿ ನಾನು ಭೈರಪ್ಪನವರ ಶೈಲಿಯ ಅಥವಾ ಇತರ ಉತ್ತಮ ಗುಣಗಳ ವಿಮರ್ಶೆಯನ್ನು ಮಾಡುತ್ತಿಲ್ಲ.
ಈ ಲೇಖನದ ಉದ್ದೇಶ ತುಂಬಾ limited ಆಗಿದೆ.
ಬಹಿರಂಗದಲ್ಲಿ ಕಾಣುವ ಕತೆ ಹಾಗೂ ಅಂತರಂಗದ stuff ಹೇಗೆ ಬೇರೆಯಾಗಿರಬಲ್ಲವು ಎಂದು ತೋರಿಸುವದಷ್ಟೇ ಈ ಲೇಖನದ ಸೀಮಿತ ಉದ್ದೇಶ.

ಭೈರಪ್ಪನವರ ಕಾದಂಬರಿಗಳ ಮುಖ್ಯ ಪಾತ್ರಗಳ ಕೆಲವು ಲಕ್ಷಣಗಳನ್ನು ಓದುಗರು ದಯವಿಟ್ಟು ಗಮನಿಸಬೇಕು.
(೧) ಈ ನಾಯಕರಲ್ಲಿ ಒಂದೋ ಬ್ರಹ್ಮಚರ್ಯದ ಬಗೆಗೆ ದೃಢವಾದ ಶ್ರದ್ಧೆ ಇರುತ್ತದೆ ಅಥವಾ ಅಗಾಧವಾದ ಕಾಮುಕ ಶಕ್ತಿ ಇರುತ್ತದೆ.
(೨) ನಾಯಕ ಮತ್ತು ನಾಯಕಿಯರಲ್ಲಿ ಸಾಮಾನ್ಯರಿಗೆ ಸಾಧ್ಯವಾಗದಷ್ಟು ತೀವ್ರವಾದ ತಳಮಳ ಹಾಗೂ ತತ್ವಜಿಜ್ಞಾಸೆ ಇರುತ್ತವೆ.

ಈ ಅಸಾಮಾನ್ಯ ಗುಣಗಳಿಗೆ ನನ್ನದೇನೂ ಆಕ್ಷೇಪಣೆ ಇಲ್ಲ. ಆದರೆ ಈ ಗುಣಗಳು ಅನೇಕ ಸಲ ಕಾದಂಬರಿಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಒಯ್ಯುವ ಅನುಕೂಲದ ಸಾಧನೆಗಳಾಗಿ ಹಾಗೂ ಲಂಪಟತನಕ್ಕೆ coverage ಆಗಿ ಬಳಕೆಯಾಗಿವೆಯೇ ಹೊರತು, ಪಾತ್ರಗಳ ಆಂತರಿಕ ಅವಶ್ಯಕತೆಯಿಂದಾಗಿ ಅಲ್ಲ.
ಇದರಿಂದ ದೊರೆಯುವ ಅನುಕೂಲವೆಂದರೆ, ಪಾತ್ರಗಳ ವರ್ತನೆಯನ್ನು ತತ್ವಜಿಜ್ಞಾಸೆಯಲ್ಲಿ ಮುಚ್ಚಿಹಾಕಬಹುದು.

ಇದಕ್ಕೆ ಉದಾಹರಣೆ ಎಂದು ಭೈರಪ್ಪನವರ ‘ಅಂಚು’ ಕಾದಂಬರಿಯನ್ನು ತೆಗೆದುಕೊಳ್ಳಬಹುದು.
ಈ ಕಾದಂಬರಿಯಲ್ಲಿ ಆರ್ಕಿಟೆಕ್ಟ ಆದ ನಾಯಕನಿಗೆ ಒಬ್ಬಳು neurotic ನಾಯಕಿಯೊಡನೆ ಭೆಟ್ಟಿಯಾಗುತ್ತದೆ.
ನಾಯಕನ ಹೆಂಡತಿ ಹಾಗೂ ಮಗ conveniently ನಾಲ್ಕು ವರ್ಷದ ಹಿಂದೆ ಸತ್ತಿದ್ದಾರೆ.
ನಾಯಕಿ, ತನ್ನ ಗಂಡನನ್ನು ಬಿಟ್ಟು, ಇಬ್ಬರು ಚಿಕ್ಕ ಮಕ್ಕಳೊಡನೆ ಮೈಸೂರಿನಲ್ಲಿ, conveniently ಒಬ್ಬಂಟಿಯಾಗಿ ವಾಸಿಸುತ್ತಿದ್ದಾಳೆ.

೩೫೦ ಪುಟಗಳ ಈ ಕಾದಂಬರಿಯಲ್ಲಿ ೪೪ನೆಯ ಪುಟದಲ್ಲಿ ನಾಯಕ ಹಾಗೂ ನಾಯಕಿಯರ ಸಂಗಮವಾಗುತ್ತದೆ.
ಆನಂತರ, ಓದುಗರಿಗೆ bore ಆಗುವಷ್ಟು ಸಲ ಸಂಗಮವು repeat ಆಗುತ್ತದೆ.
ನಾಯಕಿ neurotic ಇರುವದರಿಂದ, ರಿವಾಲ್ವರನಿಂದ ಗುಂಡು ಹೊಡೆದುಕೊಂಡು ಸಾಯಲು ಅನೇಕ ಸಲ ಪ್ರಯತ್ನಿಸುತ್ತಾಳೆ; ಚಾಮುಂಡಿ ಬೆಟ್ಟದಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲೂ ಸಹ ಅಷ್ಟೇ ಸಲ ಪ್ರಯತ್ನಿಸುತ್ತಾಳೆ.
ಆತ್ಮಹತ್ಯೆಯ ಪ್ರಯತ್ನದ ಮೊದಲು ಪ್ರತಿ ಸಲವೂ ಕನಿಷ್ಠ ಎರಡು ಪುಟದಷ್ಟು ತತ್ವಜಿಜ್ಞಾಸೆ(ಸ್ವಗತದಲ್ಲಿ) ಮಾಡುತ್ತಾಳೆ.
ಓದುಗನಿಗೆ ತಲೆಚಿಟ್ಟು ಹಿಡಿದು ಹೋಗುತ್ತದೆ.
ಯಾವಾಗ ಈ ನಾಯಕಿಯು ಆತ್ಮಹತ್ಯೆಯಲ್ಲಿ ಸಫಲಳಾಗಿ, ತನಗೆ ಮುಕ್ತಿ ಕೊಡುತ್ತಾಳೊ ಎಂದು ಓದುಗ ಕಾಯುತ್ತಾನೆ.
ಆದರೆ, ಅವಳು ಕೊನೆಗೂ ಸಾಯುವದಿಲ್ಲ!
ಭೈರಪ್ಪನವರು ಸುಖಾಂತ ಮಾಡಿ ಮುಗಿಸುತ್ತಾರೆ.
(ಅಂದರೆ, ಮುಗಿದದ್ದೇ ಒಂದು ಸುಖ ಅಂತ!)

ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ explicit sex ಇದೆ.
ಈ obsessionದ ಮನೋವೈಜ್ಞಾನಿಕ ಕಾರಣ ಏನು ಅಂತ ಹುಡುಕುವದು ನಮ್ಮ ಕೆಲಸವಲ್ಲ.
ಭೈರಪ್ಪನವರು ತತ್ವಜಿಜ್ಞಾಸೆಯನ್ನು cover ರೂಪದಲ್ಲಿ ಉಪಯೋಗಿಸಿಕೊಳ್ಳದಿದ್ದರೆ, ಈ ಕಾದಂಬರಿಗಳನ್ನು soft porn ಎಂದು ಕರೆಯಬಹುದಾದ ಮಟ್ಟಿಗೆ ಇಲ್ಲಿ sex ಇದೆ.

ಆದರೆ, ತತ್ವಜಿಜ್ಞಾಸೆಯನ್ನು ಓದುವದರಿಂದ ಓದುಗನಿಗೆ ಖುಶಿಯಾಗುತ್ತದೆ.
ತಾನು ಯಾವುದೋ ಒಂದು ಬೌದ್ಧಿಕ ಸಾಹಿತ್ಯವನ್ನು ಓದುತ್ತಿದ್ದೇನೆ ಎನ್ನುವ ಭ್ರಮೆ ಅವನಲ್ಲಿ ಹುಟ್ಟುತ್ತದೆ.
ಅದರ ಜೊತೆಗೆ ಓದುಗನ super-male-fantasyಯು ಸಹ ತೃಪ್ತವಾಗುತ್ತದೆ.
ದುರ್ದೈವದಿಂದ ಭಾರತೀಯ ಸ್ತ್ರೀಯರೂ ಸಹ ಈ super-male-fantasyಗೆ ಒಗ್ಗಿ ಹೋಗಿದ್ದಾರೆ.
(ಇದಕ್ಕೆ ಸಾವಿರಾರು ವರ್ಷಗಳ social conditioning ಕಾರಣವಾಗಿದೆ.)
ಅಲ್ಲದೆ soft pornದ ಖುಶಿ ಸಹ ಸಿಗುತ್ತದೆ.
(ಹಾಗೆಂದು ಈ ಕಾದಂಬರಿಗಳನ್ನು ಮುಚ್ಚಿ ಓದುವ ಕಾರಣವಿಲ್ಲ ; ಇದು ಗಂಭೀರ ಸಾಹಿತ್ಯ!)
ಈ ತಂತ್ರಗಳೇ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆಗೆ ಕಾರಣವಾಗಿವೆ ಎನ್ನಬಹುದು.

ಈ ಲೇಖನ ಭೈರಪ್ಪನವರ ಕಾದಂಬರಿಗಳ ವಿಮರ್ಶೆ ಅಲ್ಲ.
ಅವರ ಕಾದಂಬರಿಗಳಲ್ಲಿ ಕಂಡುಬರುವ ಕೆಲವು ಗುಣಲಕ್ಷಣಗಳನ್ನು ತೋರಿಸುವ ಪ್ರಯತ್ನ ಮಾತ್ರ.
ನಿಜ ಹೇಳಬೇಕೆಂದರೆ ಭಾರತೀಯ ಸಮಾಜದಲ್ಲಿಯ ಹೆಣ್ಣುಮಕ್ಕಳ ಬವಣೆಯನ್ನು , ಯಾತನೆಯನ್ನು ಅವರಷ್ಟು ಸಮರ್ಥವಾಗಿ ಹಾಗೂ ವಿಪುಲವಾಗಿ ಬೇರೆ ಯಾವ ಲೇಖಕನೂ ತೋರಿಸಿಲ್ಲ.

‘ಗೃಹಭಂಗ’ ಹಾಗು ‘ಸಾರ್ಥ’ ಇದಕ್ಕೆ ಉತ್ತಮ ಉದಾಹರಣೆಗಳು.
ಅದರಲ್ಲೂ ಸಹ, ‘ಸಾರ್ಥ’ವು ನನ್ನ ನೆಚ್ಚಿನ ಕಾದಂಬರಿ.
‘ಗೃಹಭಂಗ’ ಕಾದಂಬರಿಯಲ್ಲಿ super-male-fantasyಯ ಯಾವ ವರ್ಣನೆಯೂ ಇಲ್ಲ.
ಇಲ್ಲಿಯ ನಾಯಕ ಒಬ್ಬ ಹೇಪ್ಲ್ಯಾ ಹಾಗೂ ಅವಿವೇಕಿ ಗಂಡಸು.
ಅದಾಗ್ಯೂ ಸಹ ನಾಯಕಿಯು ಎಲ್ಲ ಸಂಕಷ್ಟಗಳನ್ನು ಎದುರಿಸುತ್ತಾ ಸಂಸಾರದ ಬಂಡಿಯನ್ನು ತಾನೇ ಎಳೆಯುತ್ತಾಳೆ.
‘ಸಾರ್ಥ’ ಕಾದಂಬರಿಯಲ್ಲಿ super-male-fantasyಯ ಒಂದು ಘಟನೆ ಇದ್ದರೂ ಸಹ, ಒಟ್ಟಾರೆ ಕಾದಂಬರಿಯಲ್ಲಿ ಆ ಘಟನೆ ಗೌಣವಾಗಿ ಬಿಡುತ್ತದೆ.
‘ಗೃಹಭಂಗ’ ಹಾಗು ‘ಸಾರ್ಥ’ ಕಾದಂಬರಿಗಳಲ್ಲಿ ಓದುಗರ ಮನಸ್ಸಿನಲ್ಲಿ ಕೊನೆಗೂ ನಿಲ್ಲುವವರು ಆ ಕಾದಂಬರಿಗಳ ನಾಯಕಿಯರೇ.

Saturday, December 6, 2008

ಗಿರಣಿ ವಿಸ್ತಾರ ನೋಡಮ್ಮ

ಶರೀಫರದು ವಿಮರ್ಶಾತ್ಮಕವಾದ ಹರಿತ ದೃಷ್ಟಿ.
ತಾವು ಹೋದಲ್ಲೆಲ್ಲ ತಮ್ಮ ಕಣ್ಣಿಗೆ ಬಿದ್ದ ವಸ್ತುಗಳ ಮೇಲೆ ಅವರದೊಂದು ವಿಮರ್ಶಾತ್ಮಕ ಗೀತೆ ಹೊರಬರುತ್ತಿತ್ತು.

ಹುಬ್ಬಳ್ಳಿಯಲ್ಲಿ ಆಗ ತಾನೇ ಹತ್ತಿಯನ್ನು ಹಿಂಜುವ ಗಿರಣಿ (ginning mill) ಪ್ರಾರಂಭವಾಗಿತ್ತು.
ಆ ಕಾಲದಲ್ಲಿ ಇಂತಹ ಯಾಂತ್ರಿಕ ಗಿರಣಿ ನಮ್ಮವರಿಗೆ ಸೋಜಿಗದ ವಸ್ತುವಾಗಿತ್ತು.
ಶರೀಫರೂ ಸಹ ಈ ಗಿರಣಿಯನ್ನು ಕಂಡು, ಬೆರಗಾಗಿ ಅದನ್ನು ತಮ್ಮ ಸಖಿಗೆ ವರ್ಣಿಸುತ್ತಿದ್ದಾರೆ.
ಅವರ ಕವನದ ಪೂರ್ತಿಪಾಠ ಹೀಗಿದೆ:
…………………………………………………………..
ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ ||ಪಲ್ಲ||

ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.||

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||೧||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||೨||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||೩||

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||೪||
............................................
ಶರೀಫರ ಹಾಡುಗಳ ಪದ್ಧತಿಯನ್ನು ಗಮನಿಸಿರಿ.
ಅವರ ಅನೇಕ ಹಾಡುಗಳು ಪ್ರಾರಂಭವಾಗುವದು ಒಬ್ಬ ಹೆಣ್ಣುಮಗಳು ತನ್ನ ಗೆಳತಿಗೆ ವಿಷಯವೊಂದನ್ನು ಬಣ್ಣಿಸುವ ರೀತಿಯಲ್ಲಿ.

ಶರೀಫರು ಶಿಶುನಾಳಧೀಶನಲ್ಲಿ ಪತ್ನೀಭಾವವನ್ನು ಇಟ್ಟುಕೊಂಡವರು.
ಆದುದರಿಂದ ಜೀವಾತ್ಮರೆಲ್ಲರೂ ಶಿಶುನಾಳಧೀಶನ ಪತ್ನಿಯರೇ.
ಹೀಗಾಗಿ ಅವರು ತಮ್ಮ ಆಪ್ತ ಗೆಳೆಯರನ್ನು ಸಖೀಭಾವದಲ್ಲಿ ನೋಡುವದು ಸಹಜವೇ ಆಗಿದೆ.

ಅದಲ್ಲದೆ, ಗೆಳತಿಯರ ನಡುವೆ ನಡೆಯುವ ಆಪ್ತಸಲ್ಲಾಪದಲ್ಲಿ ಯಾವುದೇ ಭಿಡೆ, ಸಂಕೋಚ, ದೊಡ್ಡಿಸ್ತನ ಇರುವದಿಲ್ಲ.
ಇದು ಒಂದು absolutely free inter-action.
ಇದೇ ಮಾತನ್ನು ಗೆಳೆಯರ ಬಗೆಗೆ ಹೇಳಲು ಆಗುವದಿಲ್ಲ.

ಆದುದರಿಂದ ಈ ಹಾಡಿನ ಮೊದಲಲ್ಲಿ ಶರೀಫರು ತಮ್ಮ ಗೆಳತಿಗೆ ‘ಶರಣಿ’ ಎಂದು ಕರೆಯುತ್ತಾರೆ.
ಅಂದರೆ ಈ ವ್ಯಕ್ತಿಯೂ ಸಹ ದೇವಭಕ್ತಳೇ ಆಗಿರಬೇಕಾಯಿತು.
ಈ ಆಪ್ತನನ್ನು ಶರೀಫರು ತಮ್ಮ ಬದಿಯಲ್ಲಿ ಕರೆದು ಕೂಡಿಸಿಕೊಂಡು, ಹುಬ್ಬಳ್ಳಿಯಲ್ಲಿ ಹೊಸದಾಗಿ ಪ್ರಾರಂಭವಾದ ಗಿರಣಿಯ ಬಗೆಗೆ ಕೌತುಕದಿಂದ ವರ್ಣಿಸಲು ಪ್ರಾರಂಭಿಸುತ್ತಾರೆ:

“ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ”

ಬ್ರಿಟಿಶರ ಆಳಿಕೆ ಭಾರತದಲ್ಲಿ ಪ್ರಾರಂಭವಾದದ್ದರಿಂದಲೇ ಯಾಂತ್ರಿಕ ಗಿರಣಿಗಳು ಇಲ್ಲಿ ಸ್ಥಾಪನೆಯಾದವು. ಈ ಹಿನ್ನೆಲೆಯನ್ನು ಶರೀಫರು ತಮ್ಮ ಹಾಡಿನ ಪ್ರಾರಂಭದಲ್ಲಿ ಹೇಳುತ್ತಾರೆ:

“ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ”

೧೮೫೭ರಲ್ಲಿ ನಡೆದ ಹೋರಾಟದ ಬಳಿಕ ವ್ಹಿಕ್ಟೋರಿಯಾ ರಾಣಿಯು ಭಾರತದ ಚಕ್ರವರ್ತಿನಿಯೆಂದು ಘೋಷಿಸಿಕೊಂಡಳು.
ಆ ಸಮಯದಲ್ಲಿ ಮರಾಠಾ ಸಾಮ್ರಾಜ್ಯವೆಲ್ಲ ಬ್ರಿಟಿಶರ ಆಡಳಿತಕ್ಕೊಳಪಟ್ಟು ಮುಂಬಯಿ ಪ್ರಾಂತವೆಂದು ಕರೆಯಲ್ಪಡುತ್ತಿತ್ತು.
೧೮೧೭ರಲ್ಲಿ (ಹಳೆ)ಹುಬ್ಬಳ್ಳಿಯನ್ನು ಸಾಂಗ್ಲಿ ಸಂಸ್ಥಾನಿಕರು ಬ್ರಿಟಿಶರಿಗೆ ಮಾರಿದರು.
೧೮೩೦ನೆಯ ಇಸವಿಯಲ್ಲಿ ಮುಂಬಯಿ ಪ್ರಾಂತದ ಭಾಗವಾಗಿ ಧಾರವಾಡ ಜಿಲ್ಲೆ ನಿರ್ಮಾಣವಾಯಿತು.
೧೮೮೮ರಲ್ಲಿ ಧಾರವಾಡದಲ್ಲಿ ರೇಲವೆ ಪ್ರಾರಂಭವಾಯಿತು.
ಆಬಳಿಕ ಅಮೆರಿಕದಿಂದ ಆಮದಾದ ಹತ್ತಿಯ ಬೀಜಗಳಿಂದ ಈ ಭಾಗದಲ್ಲಿ ಹೊಸ ತರದ ಹತ್ತಿಯನ್ನು ಬೆಳೆಯುವದು ಪ್ರಾರಂಭವಾಯಿತು.
ಹತ್ತಿಯನ್ನು ಹಿಂಜುವ ಕಾರಖಾನೆಗಳು ಪ್ರಾರಂಭವಾದವು.
ಸಾರ್ವಜನಿಕ ಶಾಲೆಗಳು ಪ್ರಾರಂಭವಾಗಿ ಸಾರ್ವತ್ರಿಕ ಶಿಕ್ಷಣ ಸುರುವಾಯಿತು.
ಇದರಿಂದ ಎಲ್ಲೆಡೆಯೂ ಹೊಸ ಗಾಳಿ ಬೀಸಲಾರಂಭಿಸಿತು.
ಬ್ರಿಟಿಶರು ತಮ್ಮ ಆರ್ಥಿಕ ಸ್ವಾರ್ಥಕ್ಕಾಗಿಯೇ ಭಾರತದಲ್ಲಿ ಆಧುನಿಕತೆಯನ್ನು ತಂದಿರಬಹುದು.
ಆದರೆ ಜನಸಾಮಾನ್ಯರಿಗೆ ಮಾತ್ರ ಇದು ಹೊಸ ಯುಗದ ಪ್ರಾರಂಭವೆನ್ನುವಂತೆ ತೋರುತ್ತಿತ್ತು.

ಆದುದರಿಂದ ಶರೀಫರು ಧರಣಿಪತಿಯಾದ, ಭೂಮಂಡಲದ ರಾಣಿಯಾದ, ಕರುಣಾಪೂರ್ಣಳಾದ ವ್ಹಿಕ್ಟೋರಿಯಾ ರಾಣಿ ತನ್ನ ಆಧೀನದಲ್ಲಿರುವ ಈ ರಾಜ್ಯಕ್ಕೆ ತರಿಸಿದ ಘನಚೋದ್ಯವಿದು ಎಂದು ಈ ಗಿರಣಿಯನ್ನು ಬಣ್ಣಿಸುತ್ತಾರೆ.
ಇಂತಹ ಒಂದು ಆಧುನಿಕ ಯಾಂತ್ರಿಕ ಸಾಧನವನ್ನು ಇಲ್ಲಿಯ ಸಾಮಾನ್ಯ ಜನತೆ ಈಮೊದಲು ನೋಡಿರಲಿಲ್ಲ. ಅವರಿಗೆ ಇದೊಂದು ಸೋಜಿಗದ ವಸ್ತು.
ಆದುದರಿಂದ ಶರೀಫರು ಇದನ್ನು ಘನಚೋದ್ಯವೆಂದು ಕರೆದಿದ್ದಾರೆ.

ಚೀನಾದಿಂದ ಸಹ ಆ ಕಾಲಕ್ಕೆ ಸಕ್ಕರೆ, ರೇಶಿಮೆ ಮೊದಲಾದ ವಸ್ತುಗಳು ಇಲ್ಲಿ ಆಮದಾಗುತ್ತಿದ್ದವು.
ಚೀನಾದ ಔದ್ಯೋಗಿಕ ಜಾಣ್ಮೆಯ ಬಗೆಗೆ ಭಾರತೀಯರಿಗೆ ಗೌರವವಿತ್ತು.
ಆದುದರಿಂದ ಈ ಗಿರಣಿಯನ್ನು ಚೀನಾದ ವಿದ್ಯೆಯಿರಬಹುದೆ ಎನ್ನುವ ಅನುಮಾನವನ್ನು ಶರೀಫರು ವ್ಯಕ್ತಪಡಿಸುತ್ತಾರೆ.

ಈ ಆಧುನಿಕ ಯಂತ್ರಸಾಧನೆಯು ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ವಿಸ್ಮಯವನ್ನು ಶರೀಫರು ಈಗ ತಮ್ಮ ಸಖಿಗೆ ಬಿಚ್ಚಿ ಹೇಳುತ್ತಾರೆ:

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||

ಕಲ್ಲಿದ್ದಲನ್ನು ಕಾಯಿಸಿ, ಬಾಯ್ಲರುಗಳ ಮುಖಾಂತರ ನೀರನ್ನು ಉಗಿಯನ್ನಾಗಿ ಪರಿವರ್ತಿಸಿ, ಚಕ್ರಗಳನ್ನು ತಿರುಗಿಸುವ ಈ ಯಂತ್ರವನ್ನು ಶರೀಫರು ಅರ್ಥ ಮಾಡಿಕೊಂಡಿರಬಹುದು.
ಆದುದರಿಂದಲೇ ಅವರು ಜಲ, ಅಗ್ನಿ, ವಾಯು ಒಂದಾಗಿ ಎಂದು ಬಣ್ಣಿಸುತ್ತಾರೆ.
ಗಿರಣಿಯ ಚಿಮಣಿಗಳಿಂದ ಹೊರಡುವ ಹೊಗೆಯ ಕಂಬವೂ ಸಹ ಅವರ ದೃಷ್ಟಿಗೆ ಚಲುವಾಗಿಯೇ ಕಂಡು ಬೆರಗನ್ನು ಉಂಟು ಮಾಡುತ್ತದೆ.

ಇದೇನೊ ಗಿರಣಿಯನ್ನು ಚಾಲಿಸುವ ಚೈತನ್ಯವಾಯಿತು.
ಗಿರಣಿಯ ಒಳಗಿರುವ ಚಮತ್ಕಾರ ಏನು ಎನ್ನುವದನ್ನು ಶರೀಫರು ಈಗ ತಮ್ಮ ಸಖಿಗೆ ಈ ರೀತಿಯಾಗಿ ಹೇಳುತ್ತಾರೆ:

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||

ಒಳಗಿನ ಚಕ್ರಕ್ಕೆ ಒಂಬತ್ತು ಹಲ್ಲುಗಳಿದ್ದು, ಅದರಲ್ಲಿ ನೂಲಿಗೆ ಆಧಾರವಾಗಿ (=ಸೂತ್ರಾಧಾರ) ಲಾಳಿ ಇದೆ. ಈ ಲಾಳಿಯಲ್ಲಿ ಮೂರು ಕೊಳವಿಗಳು ಇದ್ದು ಅವು ನೂಲಿನ ಎಳೆಯನ್ನು ತುಂಬುತ್ತಾ ಇವೆ.
ಶರೀಫರು ಹೇಳುವಂತೆ ಆ ಗಿರಣಿಯಲ್ಲಿ ಒಂಬತ್ತು ಹಲ್ಲುಗಳ ಚಕ್ರ ಹಾಗೂ ಮೂರು ಕೊಳವಿಗಳ ಲಾಳಿ ಇದ್ದವೊ ಇಲ್ಲವೊ ಎನ್ನುವದು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ.
ಆದರೆ, ಗಿರಣಿಯ ಪ್ರತೀಕದಲ್ಲಿ ಈ ವರ್ಣನೆಯನ್ನು ಶರೀಫರು ಜೀವಾತ್ಮನಿಗೆ ಹೋಲಿಸಿ ಹೇಳಿರುವದು ಮೇಲ್ನೋಟಕ್ಕೇ ತಿಳಿದು ಬಿಡುತ್ತದೆ.

ಜಲ, ಅಗ್ನಿ ಹಾಗೂ ವಾಯುಗಳು ಒಂದಾಗಿ ನೆಲದಿಂದ (=ಪೃಥ್ವಿ) ಗಗನಕ್ಕೆ ಮುಟ್ಟುತ್ತವೆ ಎಂದರೆ ಪಂಚಮಹಾಭೂತಗಳು (=ಪೃಥ್ವಿ,ಅಪ್,ತೇಜ,ಆಕಾಶ,ವಾಯು) ಒಂದಾಗಿ ಜೀವಿಗೆ ರೂಪ ಕೊಟ್ಟಿವೆ ಎನ್ನುವದು ಶರೀಫರ ಒಡಪಿನ ಮಾತು.
ಈ ಶರೀರದಲ್ಲಿ ಒಂಬತ್ತು ರಂಧ್ರಗಳು ಇರುವದಾಗಿ ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಶರೀಫರು ಅದನ್ನೇ ಒಂಬತ್ತು ದಳಗಳ ಚಕ್ರ ಅಂದರೆ ಯಂತ್ರಸಾಧನೆ ಎಂದು ಕರೆದಿರಬಹುದು.
ಈ ಯಂತ್ರದಲ್ಲಿ ಮೂರು ಕೊಳವಿಯ ಲಾಳಿಯು ಸೂತ್ರಾಧಾರವಾಗಿ ಅಥವಾ ಸೂತ್ರಧಾರನಾಗಿ ಎಳೆಯನ್ನು ತುಂಬುತ್ತಿದೆ.
ಎಳೆ ಅಂದರೆ ಶ್ವಾಸೋಛ್ವಾಸ.
ಎಳೆಯನ್ನು ತುಂಬುತ್ತದೆ ಅಂದರೆ ಜೀವನದ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತ ನಡೆಯಿಸುತ್ತಿದೆ.
ತುಂಬಾ ಮಹತ್ವದ ಲಾಳಿಯಾಯಿತು ಇದು!
ಇದರ ಮೂರು ಕೊಳಿವೆಗಳು ಯಾವವು?
ಇಡಾ, ಪಿಂಗಲಾ ಹಾಗೂ ಸುಷುಮ್ನಾ ಎನ್ನುವ ಮೂರು ನಾಡಿಗಳೇ ಈ ಮೂರು ಕೊಳಿವೆಗಳು.
ಈ ಮೂರು ನಾಡಿಗಳಲ್ಲಿ ಶ್ವಾಸವನ್ನು ನಿಯಂತ್ರಿಸುವದರ ಮೂಲಕ ಯೋಗಿಯು ಪ್ರಾಣಾಯಾಮದ ಸಿದ್ಧಿಯನ್ನು ಪಡೆಯುತ್ತಾನೆ.

ಆ ನಾಡಿಗಳಲ್ಲಿ ಸಂಚರಿಸಿದ ಶ್ವಾಸವು ಹಿಂಜಿ ಅಂದರೆ ಶುದ್ಧವಾಗಿ ಹಂಜಿಯಾಗುತ್ತದೆ.
ಹಂಜಿ ಅಂದರೆ ಹಿಂಜಲ್ಪಟ್ಟಂತಹ ಅರಳೆ.

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||

ಹಿಂಜಿದ ಅರಳಿಯನ್ನು ದಾರದ ಎಳೆ ಮಾಡಲು ಎರಡು ಗಾಲಿಗಳು ಬೇಕಾಗುತ್ತವೆ.
ಮೂಲಬ್ರಹ್ಮ ಅಂದರೆ ಯಾವುದೇ ಗುಣಸ್ವಭಾವ ಇಲ್ಲದ ನಿರ್ಗುಣ ಬ್ರಹ್ಮ.
ನಿರ್ಗುಣ ಬ್ರಹ್ಮ ಅಂದರೆ ಶುದ್ಧವಾದ, ಹಿಂಜಿದ ಅರಳಿ.
ಇಡಾ ಹಾಗೂ ಪಿಂಗಳಾ ಎನ್ನುವ ಎರಡು ಗಾಲಿಗಳಲ್ಲಿ(= ನಾಡಿಗಳಲ್ಲಿ) ಸಂಚರಿಸಿ ಶುದ್ಧವಾದ ಶ್ವಾಸವು
ಹಿಂಜಿದ ಅರಳಿಯಂತೆ ಅಥವಾ ನಿರ್ಗುಣ ಬ್ರಹ್ಮನಂತೆ ಇರುತ್ತದೆ.
ಇದು ಸುಷುಮ್ನಾ ನಾಡಿಯಲ್ಲಿ ಸಂಚರಿಸಿದಾಗ ದಾರದ ಕುಕ್ಕಡಿ ತಯಾರಾಗುತ್ತದೆ.
ಕುಕ್ಕಡಿ ಅಂದರೆ ನೂಲಿನ ಅಳತೆ.
ಇದು ತಕಲಿ, ಚರಕಾ ಅಥವಾ ಯಂತ್ರದ ಕೊನೆಯಲ್ಲಿ ತಯಾರಾಗುವ ನೂಲಿನ ಗಂಟು.

ಇಲ್ಲಿಯವರೆಗೆ ನೂಲು ತಯಾರಾದಂತಾಯ್ತು.
ಇದರಿಂದ ತಯಾರಾದ ಅರಿವೆ ಎಂತಹದೆಂತೀರಿ?

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||

ಪಟ್ಟೆ ಅಂದರೆ ರೇಶಿಮೆ ಸೀರೆ.
ಇದು ಪರಮಾನ ಎನ್ನುವ ಪಟ್ಟೆ.
ಪರಮ ಅಂದರೆ ಶ್ರೇಷ್ಠ ಅಥವಾ ದಿವ್ಯ ಎನ್ನುವ ಅರ್ಥದಲ್ಲಿ ಶರೀಫರು ಹೇಳುತ್ತಿದ್ದಾರೆಯೆ?
ಅಲ್ಲದೆ ಫರ್ಮಾನ್ ಎನ್ನುವ ಉರ್ದು ಪದಕ್ಕೆ ರಾಜಾಜ್ಞೆ ಎನ್ನುವ ಅರ್ಥವಿದೆ.
ಈ ದಿವ್ಯವಾದ ರೇಶಿಮೆ ಸೀರೆಯ ಮೇಲೆ ಪರಮಾತ್ಮನ ರಾಜಾಜ್ಞೆಯನ್ನು ನೇಯಿಸಿ ಮಾರಾಟಕ್ಕೆ ಇಡಲಾಗಿದೆ ಎನ್ನುವ ಅರ್ಥ ಇಲ್ಲಿ ಇರಬಹುದು.
ಇಂತಹ ದಿವ್ಯವಾದ ಪಟ್ಟೆಯನ್ನು ಆಸ್ಥೆಯುಳ್ಳವರು ಯಾರಾದರೂ ಅಂದರೆ ಭಕ್ತರು ಕೊಳ್ಳಬಹುದು.

ವಿಶ್ವಕ್ಕೆ ನೇಯ್ಗೆಯನ್ನು ಕಲಿಸಿದವನು ದೇವಾಂಗ ಋಷಿ.
ಆ ದೇವಾಂಗ ಋಷಿಯಿಂದ(=ಪರಮಾತ್ಮನಿಂದ) ಈ ಹಚ್ಚಡ(= ಹೊದಿಕೆ) ನೇಯಲ್ಪಟ್ಟಿತು.
ಆದುದರಿಂದ ಇಡೀ ಲೋಕವೆ ಈ ಹಚ್ಚಡವನ್ನು ಮೆಚ್ಚಿಕೊಂಡಿದೆ.
ಪರಮಾತ್ಮನ ಆಣತಿಗಳನ್ನು ಪಾಲಿಸುವ ಭಕ್ತಜನರು ಅವನ ಕೃಪೆಯೆನ್ನುವ ಈ ಹಚ್ಚಡವನ್ನು ಹೊಚ್ಚಿಕೊಂಡು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬಹುದು ಎನ್ನುವುದು ಶರೀಫರ ಇಂಗಿತ.

ಈ ರೀತಿಯಾಗಿ ಗಿರಣಿಯ ಭೌತಿಕ ವರ್ಣನೆಯಿಂದ ಪ್ರಾರಂಭವಾದ ಈ ರಚನೆ, ಗಿರಣಿಯನ್ನು ಮಾನವನಿಗೆ ಹೋಲಿಸಿ, ಅವನ ಒಳಿತನ್ನು ಅವನಿಗೆ ನೆನಪಿಸುವದರೊಂದಿಗೆ ಮುಕ್ತಾಯವಾಗುತ್ತದೆ.

[ಟಿಪ್ಪಣಿ:
ಇಲ್ಲಿ ಶರೀಫರು ವ್ಹಿಕ್ಟೋರಿಯಾ ರಾಣಿಯನ್ನು ಕರುಣಾಮಯಿಯಾದ ಭೂಮಂಡಲ-ಚಕ್ರವರ್ತಿನಿ ಎಂದು ಕರೆದಿರುವದು ಒಂದು ಅನುಮಾನಕ್ಕೆ ಕಾರಣವಾಗಿದೆ.
ಶರೀಫರು ವಸಾಹತುವಾದಿ ಬ್ರಿಟಿಶ್ ಆಳಿಕೆಯ ಪರವಾಗಿದ್ದರೆ ಎನ್ನುವದೆ ಆ ಅನುಮಾನ.
ಈ ಅನುಮಾನದ ವಿಶ್ಲೇಷಣೆ ಮಾಡಲು ಭಾರತದ ಮೇಲಾದ ಪರಕೀಯ ಆಕ್ರಮಣಗಳನ್ನು ಗಮನಿಸಬೇಕು.
ಪರ್ಶಿಯನ್ನರು, ತುರುಕರು, ಮಂಗೋಲರು, ಮುಗಲರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು.
ಈ ಆಕ್ರಮಣದ ಬಗೆಗೆ ಭಾರತೀಯರಲ್ಲೆ ಎರಡು ಭಿನ್ನ ಅಭಿಪ್ರಾಯಗಳಿದ್ದವು.
“ಜಾಣ ಹಾಗು practical” ಅಭಿಪ್ರಾಯವೆಂದರೆ, ಪರಕೀಯರ ಜೊತೆಗೆ ಸಂಧಾನ ಮಾಡಿಕೊಂಡು, ರಾಜ್ಯದ ಅಮಾಯಕ ಜನತೆಯನ್ನು ಸಂಕಟಕ್ಕೆ ಒಳಪಡಿಸದಿರುವದು.
ಅಕಬರನ ಜೊತೆಗೆ ರಾಜಿಯಾದ ರಾಜಾ ಮಾನಸಿಂಗನು ಈ ಧೋರಣೆಯ ಅಧ್ವರ್ಯು.
ಪರಕೀಯರ ಪ್ರಭುತ್ವವನ್ನು ಒಪ್ಪಿಕೊಂಡು ಆತ್ಮಗೌರವ ಕಳೆದುಕೊಳ್ಳುವದಕ್ಕಿಂತ, ಹೋರಾಡಿ ಸಾಯುವದು ಮೇಲು ಎನ್ನುವ ಧೋರಣೆಯನ್ನು ವ್ಯಕ್ತಪಡಿಸಿದ ಏಕಾಕಿ ರಾಜನೆಂದರೆ ರಾಣಾ ಪ್ರತಾಪಸಿಂಹ.
ಅಕಬರನ ನಂತರದ ತುರುಕರ ಅತ್ಯಾಚಾರ ಅತಿಯಾದಾಗ, ಶಿವಾಜಿ ಇಲ್ಲಿಯ ನಾಡ ಮಕ್ಕಳಿಗಾಗಿ ಹೋರಾಡಿ, ಮರಾಠಾ ರಾಜ್ಯ ಸ್ಥಾಪನೆ ಮಾಡಿದ.
ಅದಕ್ಕೂ ಮೊದಲೇ ವಿಜಯನಗರ ರಾಜ್ಯ ಸ್ಥಾಪನೆಯಾಗಿತ್ತು.

ಅದಾಗ್ಯೂ ಸಹ ಭಾರತದ ಬಹುಭಾಗದಲ್ಲಿ ವಿದೇಶೀಯರ ಆಡಳಿತವೇ ಜಾರಿಯಲ್ಲಿತ್ತು.
ಭಾರತೀಯನಾಗಿ ಪರಿವರ್ತಿತನಾಗಿದ್ದನು ಎಂದು ಹೊಗಳಲ್ಪಟ್ಟ ಅಕಬರನ ಆಸ್ಥಾನದ ಒಂಬತ್ತು ಮುಖ್ಯರಲ್ಲಿ ಏಳು ಜನ ವಿದೇಶೀಯರೇ(=ಪರ್ಶಿಯನ್ನರು) ಇದ್ದರು ಎನ್ನುವದನ್ನು ಗಮನಿಸಿದರೆ, ಭಾರತದ ಆಡಳಿತವು ಪರಕೀಯರಿಂದ ನಿಯಂತ್ರಿತವಾಗುತ್ತಿತ್ತು ಹಾಗೂ ಭಾರತವು ಪರಕೀಯರ ಆಳಿಕೆಯನ್ನು ಒಪ್ಪಿಕೊಂಡಿತ್ತು ಎನ್ನುವದು ಸ್ಪಷ್ಟವಾಗುತ್ತದೆ.

ಅದರಂತೆಯೇ ಬ್ರಿಟಿಶ್ ಆಳಿಕೆಯನ್ನು ಸಹ ಭಾರತೀಯರು ಒಪ್ಪಿಕೊಂಡರು.
ತುರುಕರ ಆಳಿಕೆಗಿಂತ ಬ್ರಿಟಿಶರ ಆಳಿಕೆಯಲ್ಲಿ ಭಾರತದಲ್ಲಿ ಅನೇಕ ಮೂಲಭೂತ ಬದಲಾವಣೆಗಳು ಬಂದವು.
ಜನಸಾಮಾನ್ಯರು ಬಹುಶಃ ಇದನ್ನು ಸಂತೋಷದಿಂದ ಸ್ವಾಗತಿಸಿರಬಹುದು.
ಅಷ್ಟೇ ಏಕೆ, ಗೋಪಾಲಕೃಷ್ಣ ಗೋಖಲೆ, ಮೋತಿಲಾಲ ನೆಹರೂ ಮಹಾತ್ಮಾ ಗಾಂಧಿಯವರಂತಹವರೂ ಕೂಡ ಮೊದಲಲ್ಲಿ ಬ್ರಿಟಿಶ್ ಆಳಿಕೆಯನ್ನು ವಿರೋಧಿಸಿರಲಿಲ್ಲ ಎನ್ನುವದನ್ನು ಗಮನಿಸಬೇಕು.
ಬ್ರಿಟಿಶರು ಯಾವ ರೀತಿಯಲ್ಲಿ ಭಾರತದ ಆರ್ಥಿಕ ಶೋಷಣೆಯನ್ನು ಮಾಡಿದರು ಎನ್ನುವದು ಜನಸಾಮಾನ್ಯರಿಗೆ ಹೊಗಲಿ, ಪಂಡಿತರಿಗೇ ಅರ್ಥವಾಗಿರಲಿಲ್ಲ. ಇದರ ಒಂದು ಉದಾಹರಣೆ ಹೀಗಿದೆ:

ಬ್ರಿಟಿಶರು ಭಾರತವನ್ನು ವ್ಯಾಪಾರಕ್ಕೆಂದು ಪ್ರವೇಶಿಸಿದಾಗ, ಒಂದು ಪೌಂಡಿನ ಬೆಲೆ ಒಂದು ರೂಪಾಯಿಯ ಬೆಲೆಗಿಂತ ಕಮ್ಮಿಯಾಗಿತ್ತು. ಬ್ರಿಟಿಶರು ಇಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ತಮ್ಮ ಪಾರ್ಲಿಮೆಂಟಿನಲ್ಲಿ ಒಂದು ಶಾಸನ ಮಾಡಿ, ರೂಪಾಯಿ ಬೆಲೆಯ ಅಪಮೌಲ್ಯ ಮಾಡಿದರು.
ಇದರಿಂದಾಗಿ ಭಾರತದಿಂದ ಬ್ರಿಟನ್ನಿಗೆ ಹೋಗುವ ಸಾಮಗ್ರಿಗಳು ಸೋವಿಯಾದವು.
ಭಾರತಕ್ಕೆ ಬ್ರಿಟನ್ನಿನಿಂದ ಆಮದಾದ ವಸ್ತುಗಳು ದುಬಾರಿಯಾಗಿ ಬ್ರಿಟಿಶರಿಗೆ ಅಪಾರ ಲಾಭವಾಗತೊಡಗಿತು. ಇದನ್ನು ಅರ್ಥ ಮಾಡಿಕೊಂಡ ಏಕಮೇವ ವ್ಯಕ್ತಿಯಂದರೆ ಮೋತಿಲಾಲ ನೆಹರೂ.
ಅವರು ಅನೇಕ ಭಾರತೀಯ ಗಣ್ಯರಿಗೆ ಈ ಅನರ್ಥವನ್ನು ತಿಳಿಸಿ ಪತ್ರ ಬರೆದರು.
ಆದರೆ ಭಾರತೀಯ ಗಣ್ಯರಿಗೆ ಇದು ಅರ್ಥವಾಗಲೇ ಇಲ್ಲ.
(ಆಧಾರ :ಶ್ರೀ ಬಿ. ಆರ್. ನಂದಾರವರು ಬರೆದ ಪುಸ್ತಕ, The Nehrus.)

ಬ್ರಿಟಿಶರ ಬಹುಮುಖ ಶೋಷಣೆಯ ಮತ್ತೊಂದು ಉದಾಹರಣೆ ಹೀಗಿದೆ:
ಮೈಸೂರಿನಲ್ಲಿ ತಯಾರಾಗುತ್ತಿದ್ದ ಮೈಸೂರು ಸ್ಯಾಂಡಲ್ ಸೋಪ್ ನಿರ್ಮಾಣಕ್ಕೆ ಆಸ್ಟ್ರೇಲಿಯಾದಿಂದ ಕುರಿಗಳ ಕೊಬ್ಬು(=sheep tallow) ಆಮದಾಗುತ್ತಿತ್ತು!
ನಾವು ಸ್ವದೇಶಿ ನಿರ್ಮಿತಿ ಎಂದು ತಿಳಿದ ಸಾಬೂನಿನ ಬೆಲೆಯ ಬಹುಭಾಗವು ಬ್ರಿಟಿಶ್ ಕೊಲೊನಿ ಆಸ್ಟ್ರೇಲಿಯಾದ ಉದ್ಧಾರಕ್ಕಾಗಿ ಹೋಗುತ್ತಿತ್ತು ಎನ್ನುವದನ್ನು ಗಮನಿಸಿದಾಗ ಭಾರತದ ಆರ್ಥಿಕ ಶೋಷಣೆಯ ಕಲ್ಪನೆ ಬಂದೀತು.

ಇವೆಲ್ಲ ವಿಚಾರಗಳು ಆರ್ಥಿಕ ಪಂಡಿತರಿಗೇ ತಿಳಿದಿರಲಿಲ್ಲ.
ಅಲ್ಲದೆ ರಾಜಕಾರಣ ಹಾಗು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಘಟಾನುಘಟಿಗಳೂ ಸಹ ಬ್ರಿಟಿಶ್ ಪ್ರಭುತ್ವವನ್ನು ಒಪ್ಪಿಕೊಂಡಿದ್ದರು.
ಅಂದ ಮೇಲೆ ಶರೀಫರೂ ಸಹ ಅಂತಹದೇ ಅಭಿಪ್ರಾಯ ಹೊಂದಿದ್ದರೆ ಆಶ್ಚರ್ಯವಾಗಬಾರದು.]