ಯಾರಿಗೆ ತನ್ನ ಇತಿಹಾಸ ಗೊತ್ತಿರುವದಿಲ್ಲವೊ, ಅವನಿಗೆ ಭವಿಷ್ಯವೂ ಇರುವದಿಲ್ಲ ಎಂದು ಹೇಳಬಹುದು. ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಈ ಮಾತು ಸರಿಯಾಗಿ ಅನ್ವಯಿಸುತ್ತದೆ. ದೇಶದ ಒಳಿತಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಅನೇಕ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದೂ ನಮಗೆ ಅದರ ಅರಿವೇ ಇಲ್ಲದವರಂತೆ ನಾವು ಬದಕುತ್ತಿದ್ದೇವೆ.
ಶ್ರೀ ಕೃಷ್ಣ ಗೋಪಾಳ ಜೋಶಿಯವರನ್ನು ನಾನು ಮೊದಲ ಸಲ ನೋಡಿದ್ದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ೧೪ ವರ್ಷಗಳ ಬಳಿಕ. ಆಗ ಇವರು ೫೨ ವರ್ಷದವರು. ಧಾರವಾಡದ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾಗಿದ್ದರು. ಸುಮಾರು ಆರಡಿ ಎತ್ತರದ ದೃಢಕಾಯ, ತಲೆಗೆ ಗಾಂಧಿ ಟೊಪ್ಪಿಗೆ, ಶಿಸ್ತು ಹಾಗೂ ಮಮತೆಗಳನ್ನು ಸೂಸುವ ಮುಖಭಾವ.
ಈ ವ್ಯಕ್ತಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವ್ಯಕ್ತಿ ಎಂದು ಆ ಶಾಲೆಯ ವಿದ್ಯಾರ್ಥಿಗಳಿಗಾಗಲೀ, ಅಲ್ಲಿಯ ಅನೇಕ ಶಿಕ್ಷಕರಿಗಾಗಲೀ ಗೊತ್ತೇ ಇರಲಿಲ್ಲ.
ಕೃಷ್ಣ ಗೋಪಾಳ ಜೋಶಿಯವರು ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಸಾಮಾನ್ಯ ಶಕೆ ೧೯೦೯ರಲ್ಲಿ ಜನಿಸಿದರು. ಏಳನೆಯ ಇಯತ್ತೆಯಲ್ಲಿ ತೇರ್ಗಡೆಯಾದ ಬಳಿಕ, ಇವರು ವೈದಿಕೀ ವೃತ್ತಿ ಮಾಡಿಕೊಂಡಿರಲಿ ಎನ್ನುವದು ಇವರ ಹಿರಿಯರ ಅಭಿಪ್ರಾಯವಾಗಿತ್ತು. ಆದರೆ ಕೃಷ್ಣ ಜೋಶಿಯವರದು ಬಾಲ್ಯದಿಂದಲೂ ಸಾಹಸದ ಸ್ವಭಾವ. ಮನೆ ಬಿಟ್ಟು ವಿಜಾಪುರಕ್ಕೆ ಓಡಿ ಹೋದರು. ಮಲ ಅಕ್ಕನ ಮನೆಯಲ್ಲಿ ಇದ್ದುಕೊಂಡು, ವಾರಾನ್ನ ಹಚ್ಚಿಕೊಂಡು ವಿದ್ಯಾಭ್ಯಾಸ ಸಾಗಿಸಿದರು.
ವಿಜಾಪುರದಲ್ಲಿ ಇವರ ಪಾಲಕರು ತೀರಿಕೊಂಡಿದ್ದರಿಂದ ಮಲ ಅಕ್ಕನ ಜೊತೆಗೆ ಇವರೆಲ್ಲ ಧಾರವಾಡಕ್ಕೆ ಬರಬೇಕಾಯಿತು. ಅಲ್ಲಿ ಕರ್ನಾಟಕ ಹಾಯ್ ಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಇದು ಜೋಶಿಯವರ ಜೀವನದಲ್ಲಿಯ turning point.
ಕರ್ನಾಟಕ ಹಾಯ್‍ಸ್ಕೂಲ ಎಂದರೆ ಸ್ವಾತಂತ್ರ್ಯ ಹೋರಾಟಗಾರರ ಕಮ್ಮಟವಾಗಿತ್ತು. ಶಿನೋಳಿಕರ ಎನ್ನುವ ತರುಣ ವಿಜ್ಞಾನಿ ಬೆಂಗಳೂರಿನಲ್ಲಿಯ ತಾತಾ ವಿಜ್ಞಾನ ಕೇಂದ್ರದಲ್ಲಿಯ ತಮ್ಮ ಆಕರ್ಷಕ ವೈಜ್ಞಾನಿಕ ಹುದ್ದೆಯನ್ನು ತ್ಯಜಿಸಿ, ಈ ಶಾಲೆಯ ಮುಖ್ಯಾಧ್ಯಾಪಕರಾಗಲು ಬಂದಿದ್ದರು. ಇದಲ್ಲದೆ ಧಾರವಾಡದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಡಾ^. ಕಬ್ಬೂರ, ಶ್ರೀ ದ.ಪ. ಕರಮರಕರ (--ಇವರು ಸ್ವಾತಂತ್ರ್ಯಾನಂತರ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು--), ಶ್ರೀ ಮುಧೋಳಕರ ಇವರೆಲ್ಲ ಈ ಸಂಸ್ಥೆಯ ಕಾರ್ಯಕರ್ತರು. “ಗುದ್ಲಿ ಪಾರ್ಟಿ” ಎನ್ನುವ ಗುಂಪೊಂದನ್ನು ನಿರ್ಮಿಸಿಕೊಂಡು ಇವರೆಲ್ಲ ತಮ್ಮ ಕೈಗಳಿಂದಲೇ ಶಾಲೆಗೆ ಅವಶ್ಯಕವಿರುವ ಕಾರ್ಯಗಳನ್ನು ನಿರ್ವಹಿಸಿದ್ದಾರೆ. (ಖ್ಯಾತ ಸಾಹಿತಿ ಹಾಗೂ ಕೇಂದ್ರ ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಶ್ರೀ ಗಂಗಾಧರ ಚಿತ್ತಾಳರು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದರು. ಅವರೂ ಸಹ ಇಂತಹ ಸಾಂಸ್ಕೃತಿಕ-ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೇ. ಶ್ರೀ ಚಿತ್ತಾಳರು ಆಗಿನ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ಉತ್ತೀರ್ಣರಾದರು.)
ಕೃಷ್ಣ ಗೋಪಾಳ ಜೋಶಿಯವರು ಈ ಧುರೀಣರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ೧೯೨೮ರಲ್ಲಿ ಡಾ^. ನಾ.ಸು. ಹರ್ಡೀಕರರ ಸೇವಾದಳ ಕಾರ್ಯಕರ್ತರಾಗಿ ಸೇವಾದಳ ಶಿಬಿರದಲ್ಲಿ ಭಾಗವಹಿಸಿದರು.
ಎಪ್ರಿಲ್ ೧೯೩೦ರಲ್ಲಿ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು. ಜೋಶಿಯವರು ಹಾಗೂ ಹೋರಾಟಕ್ಕಿಳಿದ ಇತರ ತರುಣರು ಸುಮಾರು ೪೦ ಕಿಲೊಮೀಟರ ದೂರದ ಬೆಣ್ಣಿಹಳ್ಳಕ್ಕೆ ಹೋಗಿ, ಉಪ್ಪು ತಯಾರಿಸಿ ತಂದು ಧಾರವಾಡದಲ್ಲಿ ಹಂಚಿದರು.
೧೯೩೧ರಲ್ಲಿ ಅಸಹಕಾರ ಚಳುವಳಿ ತಾರಕಕ್ಕೇರಿತು. ತಮ್ಮ ಜೊತೆಗಾರರೊಂದಿಗೆ ವಿದೇಶಿ ವಸ್ತ್ರಗಳ ವಿರುದ್ಧ ಪಿಕೆಟಿಂಗ್ ಪ್ರಾರಂಭಿಸಿದರು. ಅದೇ ಕಾಲದಲ್ಲಿ ಸೆರೆ-ಸಿಂದಿ ಅಂಗಡಿಗಳಿಗೆ ಬಹಿಷ್ಕಾರ ಹಾಕಲಾಯಿತು. ಜೋಶಿಯವರು ಹಾಗೂ ಜೊತೆಗಾರರು ಸಿಂದಿ ಅಂಗಡಿಗಳ ಎದುರಿಗೆ ಪಿಕೆಟಿಂಗ ಚಾಲೂ ಮಾಡಿದರು. ಅಷ್ಟೇ ಅಲ್ಲದೆ, ಶಿಂದಿಯ ಉತ್ಪಾದನೆಯನ್ನೇ ನಿಲ್ಲಿಸುವ ಉದ್ದೇಶದಿಂದ ಸಿಂದಿ ಮರಗಳನ್ನು ಕಡಿದು ಹಾಕತೊಡಗಿದರು. ಧಾರವಾಡದ ಜಕ್ಕಣಿ ಬಾವಿಯ ಬಳಿಯಲ್ಲಿ ನಡೆದ ಪಿಕೆಟಿಂಗ ಸಮಯದಲ್ಲಿ ಜರುಗಿದ ಪೋಲೀಸ್ ಗೋಳೀಬಾರಿನಲ್ಲಿ ಮಲಿಕಸಾಬ ಎನ್ನುವ ಹುಡುಗನ ಬಲಿದಾನವಾಯಿತು.
೧೯೩೧ರಲ್ಲಿ, ಶ್ರೀ ಕರಮರಕರರು ಅಂಕೋಲಾ ತಾಲೂಕಿನಲ್ಲಿ ಕರನಿರಾಕರಣೆ ಚಳುವಳಿಯನ್ನು ಸಂಘಟಿಸಿದರು. ಜೋಶಿಯವರು ಅಲ್ಲಿ ಅವರ ಸಹಾಯಕರಾಗಿ ಕೆಲಸ ಮಾಡಿದರು. ಅಂಕೋಲಾ ತಾಲೂಕಿನ ಈ ಕರನಿರಾಕರಣ ಚಳುವಳಿಯನ್ನು ಸರದಾರ ವಲ್ಲಭಭಾಯಿ ಪಟೇಲರು ಬಾರ್ಡೋಲಿಯಲ್ಲಿ ಸಂಘಟಿಸಿದ ಚಳುವಳಿಗೆ ಹೋಲಿಸಲಾಗುತ್ತದೆ. ಅಂಕೋಲಾ ತಾಲೂಕಿನ ಭೂಮಾಲೀಕರು ಹಾಗೂ ಗೇಣಿದಾರರು ಒಟ್ಟಾಗಿಯೇ ಈ ಚಳುವಳಿಯಲ್ಲಿ ಭಾಗವಹಿಸಿದರು. ಪೋಲೀಸರಿಂದ ಕ್ರೂರ ಅತ್ಯಾಚಾರಗಳು ಜರುಗಿದವು. ಆದರೆ ಅಂಕೋಲೆಯ ಜನತೆ ಎಲ್ಲವನ್ನೂ ಸಹಿಸಿಕೊಂಡು, ಕೆಚ್ಚಿನಿಂದ ಬ್ರಿಟಿಶರ ವಿರುದ್ಧ ಹೋರಾಡಿತು.
ಧಾರವಾಡದಿಂದ ದ.ಪ.ಕರಮರಕರ, ಭಾಲಚಂದ್ರ ಘಾಣೇಕರ, ಕೆ.ಜಿ.ಜೋಶಿಯವರು ಕಾರ್ಯಕರ್ತರಾಗಿ ಬಂದಿದ್ದರು. ಇವರೊಡನೆ ಸೂರ್ವೆಯ ಬೊಮ್ಮಣ್ಣ ನಾಯಕರು, ಕಣಗಿಲದ ಬೊಮ್ಮಾಯ ತಿಮ್ಮಣ್ಣ ನಾಯಕರು, ಹಿಚಕಡದ ಹಮ್ಮಣ್ಣ ನಾಯಕರು ಮತ್ತು ಬೀರಣ್ಣ ನಾಯಕರು ಕೈಗೂಡಿಸಿದ್ದರು. ಕೊನೆಗೊಮ್ಮೆ ಜೋಶಿಯವರ ಹಾಗೂ ಶ್ರೀ ಕರಮರಕರರ ಬಂಧನವಾಯಿತು. ಜೋಶಿಯವರಿಗೆ ೧೧ ತಿಂಗಳ ಸಶ್ರಮ ಶಿಕ್ಷೆಯಾಯಿತು. ಅಹ್ಮದನಗರದ ವಿಸಾಪುರ ಜೇಲಿನಲ್ಲಿ ಇವರನ್ನು ಇಡಲಾಯಿತು.
ವಿಸಾಪುರದಿಂದ ಬಂದ ಬಳಿಕ ಜೋಶಿಯವರು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮತ್ತೆ ವಿದ್ಯಾರ್ಥಿಯಾಗಿ ಸೇರಿಕೊಂಡರು. ೧೯೩೪ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೩೮ರಲ್ಲಿ ಕರ್ನಾಟಕ ಕಾ^ಲೇಜಿನಿಂದ ಬಿ.ಏ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಬಳಿಕ ಕಾಂದೀವಲಿಯ ಶಾರೀರಕ ಶಿಕ್ಷಣ ಕಾ^ಲೇಜಿನಲ್ಲಿ ಒಂದು ವರ್ಷ ಕಲಿತು, ೧೯೩೯ರಲ್ಲಿ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಾರೀರಕ ಶಿಕ್ಷಕರೆಂದು ಕೆಲಸ ಮಾಡಹತ್ತಿದರು.
೧೯೪೨ರಲ್ಲಿ ಗಾಂಧೀಜಿಯವರ “Quit India” ಘೋಷಣೆ ಹೊರಬಿದ್ದಿತು. ಜೋಶಿಯವರು ಮತ್ತೇ ಅಂಕೋಲೆಗೆ ಮರಳಿದರು.
ಅಲ್ಲಿ ಶ್ರೀ ದಯಾನಂದ ಪ್ರಭು ಹಾಗೂ ಬೀರಣ್ಣ ನಾಯಕರ ಜೊತೆಗೆ ಹೋರಾಟದ ರೂಪು ರೇಷೆಗಳು ಸಿದ್ಧವಾದವು. ಬ್ರಿಟಿಶ ಆಡಳಿತದ ಸಂಪರ್ಕಜಾಲವನ್ನು ಕಡಿದು ಹಾಕುವ ಉದ್ದೇಶದಿಂದ ತಂತಿ ಸಂಪರ್ಕವನ್ನು ನಾಶಪಡಿಸಲಾಯಿತು. ಸಣ್ಣ ಪುಟ್ಟ ರಸ್ತೆ ಸೇತುವೆಗಳು ವಿಧ್ವಸ್ತವಾದವು.
ಇದಾದ ಬಳಿಕ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿದ್ಧಪಡಿಸಲಾಯಿತು :
ಉತ್ತರ ಕನ್ನಡ ಜಿಲ್ಲೆಯ ಕಾಡಿನ ಸಂಪತ್ತೆಲ್ಲವನ್ನೂ ಬ್ರಿಟಿಶರು ಕೊಳ್ಳೆ ಹೊಡೆಯುತ್ತಿದ್ದರು. ಇಲ್ಲಿಯ ತೇಗಿನ ಮರದ ಹಾಗೂ ಇತರ ಮರಗಳ ಮರಮಟ್ಟುಗಳನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ, ಪರದೇಶಗಳಿಗೂ ಸಹ ಸಾಗಿಸಿ ಮಾರಲಾಗುತ್ತಿತ್ತು. ಮರಗಳನ್ನು ಕಡಿಯುವ ಗುತ್ತಿಗೆದಾರರು ಈ ಮರಗಳನ್ನು ಕಡಿದು, ಜಂಗಲ್‍ಗಳ ಮೂಲಕ ಬಂದರುಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ ಅವುಗಳನ್ನು ಹಡಗುಗಳ ಹಿಂಬದಿಗೆ ಕಟ್ಟಿದರೆ, ಅವು ಅನಾಯಾಸವಾಗಿ ಪರದೇಶ ಪ್ರಯಾಣ ಮಾಡುತ್ತಿದ್ದವು. ಇಂಗ್ಲಂಡಿನಲ್ಲಿರುವ ಬಕಿಂಗ್‍ಹ್ಯಾಮ ಅರಮನೆಯ ಕಿಟಕಿ, ಬಾಗಿಲು ಹಾಗೂ ಇತರ ಕಟ್ಟಿಗೆಯ ಉತ್ಪಾದನೆಗಳು ಈ ರೀತಿ ಪುಕ್ಕಟೆ ಪ್ರಯಾಣ ಮಾಡಿದ “ದಾಂಡೇಲಿ ತೇಗಿನ ಮರ”ದಿಂದಾಗಿವೆ. (ದಾಂಡೇಲಿ ತೇಗು ಉತ್ಕೃಷ್ಟತೆಗಾಗಿ ಜಗತ್ಪ್ರಸಿದ್ಧವಾದ ತೇಗು.)
ಜೋಶಿಯವರು, ಕಣಗಿಲ ಹಮ್ಮಣ್ಣ ನಾಯಕ, ಹಮ್ಮಣ್ಣ ಬೊಮ್ಮ ನಾಯಕ, ಸಗಡಗೇರಿಯ ವೆಂಕಟರಮಣ ನಾಯಕ, ಬೀರಣ್ಣ ನಾಯಕ ಹಾಗೂ ದಯಾನಂದ ಪ್ರಭುಗಳು ಇವರೆಲ್ಲ ಸೇರಿ “ಬ್ರಿಟಿಶರಿಗೆ ತೇಗಿನ ಉಡುಗೊರೆ” ಕೊಡಲು ನಿಶ್ಚಯಿಸಿ ಕೂರ್ವೆಯಲ್ಲಿ ಸೇರಿದರು. ಮರಮಟ್ಟು ಸಾಗಿಸುತ್ತಿರುವ ‘ಜಂಗಲ್’ ಹಾಗೂ ೪೦ ಜನ ಪೋಲಿಸರನ್ನು ಸಾಗಿಸುತ್ತಿದ್ದ ‘ಜಂಗಲ್’ ಇವರಿದ್ದಲ್ಲಿ ಬಂದ ತಕ್ಷಣ ಇವರೆಲ್ಲ ಪೋಲೀಸರ ಮೇಲೆ ಮುಗಿಬಿದ್ದು ಅವರನ್ನು ಕಟ್ಟಿ ಹಾಕಿ ನಿ:ಶಸ್ತ್ರಗೊಳಿಸಿದರು. ಆ ಬಳಿಕ ಕಟ್ಟಿಗೆಯ ಹೊರೆಗಳನ್ನು ಡೋಣಿಗಳಲ್ಲಿ ತುಂಬಿ, ಚಿಮಣಿ ಎಣ್ಣೆಯನ್ನು ಸುರುವಿ ಬೆಂಕಿ ಹಚ್ಚಿ ಹೊಳೆಯಲ್ಲಿ ದೂಡಲಾಯಿತು.
ಸುಮಾರು ೨೦ ಕಿಲೊಮೀಟರುಗಳಷ್ಟು ದೂರದವರೆಗೆ ಅಂದರೆ ಕಡಲು ಸೇರುವವರೆಗೂ ಧಗಧಗನೆ ಉರಿಯುವ ಆ ಮರಮಟ್ಟು ಬ್ರಿಟಿಶರಿಗೆ ಒಂದು ‘ಅಗ್ನಿಸಂದೇಶ’ವನ್ನು ನೀಡಿದವು: “ Quit India!”
ಅದರಂತೆ ಅದನ್ನು ನೋಡುತ್ತಿದ್ದ ಭಾರತೀಯ ತರುಣರಲ್ಲೂ ಅವು ಒಂದು ಕಿಚ್ಚನ್ನು ಹೊತ್ತಿಸುತ್ತಿದ್ದವು: “ಮಾಡು ಇಲ್ಲವೆ ಮಡಿ!”
ಈ ಘಟನೆಯಿಂದ ಅಂಕೋಲೆಗೆ ಹೋಗುವ ರಹದಾರಿ ಬಂದಾಯಿತು. ಕಾರ್ಯಕರ್ತರೆಲ್ಲರೂ ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಂಡರು. ಜೋಶಿಯವರು ಗೋಕರ್ಣಕ್ಕೆ ಹೋದರು. ಮರುದಿನ ಜಿಲ್ಲಾ ಪೋಲೀಸ ಅಧಿಕಾರಿ ನಾನಾವಟಿಯವರಿಂದ ಹಳ್ಳಿ ಹಳ್ಳಿಗಳಲ್ಲಿ ಅತ್ಯಾಚಾರ ಸತ್ರ ಪ್ರಾರಂಭವಾಯಿತು. ೩೯ ತರುಣರನ್ನು ಬಂಧಿಸಲಾಯಿತು. ರಾಮಚಂದ್ರ ನಾಯಕ ಸಗಡಗೇರಿ, ಮಂಜುಗೌಡ, ಗಣಪತಿ ರಾಮಕೃಷ್ಣ ನಾಯಕ, ಹಮ್ಮಣ್ಣ ಹಿಚಕಡ ಇವರನ್ನೆಲ್ಲ ಬಂಧಿಸಿ ಥಳಿಸಲಾಯಿತು. ರಾಮಾ ಬೀರಣ್ಣ ನಾಯಕರನ್ನು ಕೆಳಗೆ ಕೆಡವಿ ತುಳಿದಿದ್ದರಿಂದ ಅವರ ಹಲ್ಲುಗಳು ಮುರಿದು ಹೋದವು. ಆದರೆ ‘ದೋಶಿ’ (= ಜೋಶಿ)ಯವರ ಮಾಹಿತಿಯನ್ನು ಯಾರೂ ಬಿಟ್ಟು ಕೊಡಲಿಲ್ಲ.
‘ಅಗ್ನಿಸಂದೇಶ’ ನಡೆದಾಗ, ಜೋಶಿಯವರು ತಲೆಗೆ ಕಟ್ಟಿಕೊಂಡ ಪಂಜೆ ಉಚ್ಚಿ ಕೆಳಗೆ ಬಿದ್ದಿತ್ತು. ಜೋಶಿಯವರ ತಲೆಕೂದಲು ಅಕಾಲದಲ್ಲೇ ಬೆಳ್ಳಗಾಗಿದ್ದವು. ಅಲ್ಲದೆ, ಆರಡಿ ಎತ್ತರದ ದೇಹ. ಇದರಿಂದಾಗಿ, ಆ ಸಮಯದಲ್ಲಿಯೇ ಪೋಲೀಸನೊಬ್ಬನು ಜೋಶಿಯವರನ್ನು ಗುರುತಿಸಿದ್ದನು. ‘ಬದಾಮಿ’ ಎನ್ನುವ ಈ ಪೋಲೀಸನು ಜೋಶಿಯವರ ಜೊತೆಗೆ ವಿಸಾಪುರ ಜೈಲಿನಲ್ಲಿ ರಾಜಕೀಯ ಕೈದಿಯಾಗಿದ್ದನು. ಆ ಬಳಿಕ ಪೋಲೀಸ ಕೆಲಸಕ್ಕೆ ಭರ್ತಿಯಾಗಿದ್ದನು! ಜೋಶಿಯವರು ಗೋಕರ್ಣದಿಂದ ಮುಂಡಗೋಡಕ್ಕೆ ಯಾತ್ರಿಕನ ವೇಷದಲ್ಲಿ ತೆರಳುತ್ತಿದ್ದಾಗ, ಈ ಪೋಲೀಸನು ವೇಷ ಮರೆಸಿಕೊಂಡು ಅದೇ ಬಸ್ಸಿನಲ್ಲಿ ಬರುತ್ತಿದ್ದನು. ಮುಂಡಗೋಡಿನಲ್ಲಿ ಇವರನ್ನು ಕೆಳಗೆ ಇಳಿಸಿ ಬಂಧಿಸಲಾಯಿತು.
ಕಾರವಾರದಲ್ಲಿ ಎಲ್ಲ ೩೯ ಕೈದಿಗಳ ವಿಚಾರಣೆ ನಡೆಯಿತು. ಎಲ್ಲಾ ಕೈದಿಗಳು ತಾವು ಬ್ರಿಟಿಶ್ ಸತ್ತೆಯನ್ನು ಮಾನ್ಯ ಮಾಡುವದಿಲ್ಲ ಎಂದು ಘೋಷಿಸಿದರು. ಜೋಶಿಯವರಿಗೆ ೫+೫ ವರ್ಷಗಳ ಸಶ್ರಮ ಶಿಕ್ಷೆ ಹಾಗೂ ೧೦೦ ರೂ. ದಂಡ, ತಪ್ಪಿದರೆ ಮತ್ತೆ ೧ ವರ್ಷದ ಶಿಕ್ಷೆಯನ್ನು ನೀಡಲಾಯಿತು.
ಇವರನ್ನೆಲ್ಲ ಮೊದಲು ಹಿಂಡಲಗಿ ಜೇಲಿನಲ್ಲಿ ಒಂದೂವರೆ ವರ್ಷ ಇಡಲಾಯಿತು. ಬಳಿಕ ಯರವಡಾ ಜೇಲಿಗೆ ಒಯ್ಯಲಾಯಿತು. ಅಲ್ಲಿಂದ ನಾಸಿಕ ಜೈಲಿಗೆ ವರ್ಗಾವಣೆ.
೧೯೪೭ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಜೋಶಿಯವರ ಬಿಡುಗಡೆಯಾಯಿತು.
ಜೋಶಿಯವರು ಮತ್ತೆ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಿಕ್ಷಕರಾಗಿ ದುಡಿಯಹತ್ತಿದರು.
ದ.ಪ.ಕರಮರಕರರು ಆಗ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು. ಜೋಶಿಯವರನ್ನು ದಿಲ್ಲಿಗೆ ಕರೆಯಿಸಿಕೊಂಡು ತಮ್ಮ ಆಪ್ತಸಹಾಯಕರನ್ನಾಗಿ ಮಾಡಿಕೊಂಡರು. ಆದರೆ, ಡಾ^. ಕಬ್ಬೂರರ ಒತ್ತಾಯದ ಮೇರೆಗೆ ಜೋಶಿಯವರು ಮತ್ತೆ ಕರ್ನಾಟಕ ಹಾಯ್‍ಸ್ಕೂಲಿಗೆ ಮರಳಿದರು. ೧೯೫೯ರಲ್ಲಿ ಜೋಶಿಯವರು ಮುಖ್ಯಾಧ್ಯಾಪಕರಾಗಿ ನಿಯುಕ್ತರಾದರು. ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಶಾರೀರಕ ಹಾಗೂ ನೈತಿಕ ಹೆಗ್ಗಳಿಕೆಯನ್ನು ತರಲು ಜೋಶಿ ಮಾಸ್ತರರು ಅಕ್ಷರಶ: ಹಗಲಿರುಳು ದುಡಿದರು.
ಕೆ.ಇ.ಬೋರ್ಡ ಸಂಸ್ಥೆಯ ಮೂರು ಶಾಲೆಗಳಾದ ಕರ್ನಾಟಕ ಹಾಯ್‍ಸ್ಕೂಲ, ವಿದ್ಯಾರಣ್ಯ ಹಾಯ್‍ಸ್ಕೂಲ ಹಾಗೂ ಕೆ.ಇ.ಬೋರ್ಡ ಹಾಯ್‍ಸ್ಕೂಲ ಇವು ಒಂದು ಘೋಷವಾಕ್ಯವನ್ನು ಹೊಂದಿವೆ:
“ತೇಜಸ್ವಿನಾವಧೀತಮಸ್ತು.”
ಈ ವಾಕ್ಯದ ಪೂರ್ಣಪಾಠ ಹೀಗಿದೆ:
“ ಓಂ ಸಹನಾವವತು, ಸಹನೌ ಭುನಕ್ತು, ಸಹವೀರ್ಯಮ್ ಕರವಾವ ಹೈ
ತೇಜಸ್ವಿನಾವಧೀತಮಸ್ತು, ಮಾ ವಿದ್ವಿಷಾವಹೈ, ಓಂ ಶಾಂತಿ:, ಶಾಂತಿ:, ಶಾಂತಿ:”
ಉಪನಿಷತ್ತಿನ ಈ ವಾಕ್ಯವನ್ನು ಗುರುವು ತನ್ನ ಶಿಷ್ಯನಿಗೆ ಹೇಳುತ್ತಿದ್ದಾನೆ:
“ನಾವಿಬ್ಬರೂ ಕೂಡಿಯೇ ಕಲಿಯೋಣ,
ನಾವಿಬ್ಬರೂ ಕೂಡಿಯೇ ಸೇವಿಸೋಣ,
ನಾವಿಬ್ಬರೂ ಕೂಡಿಯೇ ಶಕ್ತಿವಂತರಾಗೋಣ,
ನಾವಿಬ್ಬರೂ ಕೂಡಿಯೇ ತೇಜಸ್ವಿಗಳಾಗೋಣ,
ನಾವು ಪರಸ್ಪರರನ್ನು ದ್ವೇಷಿಸುವದು ಬೇಡ,
ನಮ್ಮಿಬ್ಬರ ಮನಸ್ಸು ಶಾಂತವಾಗಿರಲಿ!”
ಈ ಘೋಷವಾಕ್ಯವೇ ಜೋಶಿ ಮಾಸ್ತರರ ಬಾಳಿನ ಧ್ಯೇಯವಾಕ್ಯವಾಗಿತ್ತು. ಇದರಂತೆಯೇ ಬಾಳಿದ ಅವರ ಮುಖದಲ್ಲಿ ಯಾವಾಗಲೂ ಶಿಸ್ತು, ಮಮತೆ ಹಾಗೂ ತೇಜಸ್ಸು ಎದ್ದು ಕಾಣುತ್ತಿದ್ದವು.
ಜೋಶಿಯವರು ಸುಮಾರು ೯೦ ವರ್ಷಗಳವರೆಗೆ ಜೀವಿಸಿದರು. ವೃದ್ಧಾಪ್ಯ ಬಂದಂತೆ ಅವರ ಸ್ಮರಣಶಕ್ತಿ ಕುಂದಲಾರಂಭಿಸಿತು. ತಮ್ಮ ಪ್ರೀತಿಯ ವಿದ್ಯಾರ್ಥಿಗಳ ಗುರುತೂ ಅವರಿಗೆ ಆಗುತ್ತಿರಲಿಲ್ಲ. ಅವರ ಆರ್ಥಿಕ ಚೈತನ್ಯ ಮೊದಲಿನಿಂದಲೂ ಕಡಿಮೆಯೇ ಇತ್ತು. ಸ್ವಾತಂತ್ರ್ಯದ ನಂತರ ಕೆಲವು ಹೋರಾಟಗಾರರು ಸರಕಾರದ ಸವಲತ್ತುಗಳನ್ನು ಪಡೆದರು. ಕೆಲವರು ಗಾಂಧಿ ಟೋಪಿಯನ್ನು ಭಾರತಕ್ಕೇ ತೊಡಿಸಿದರು. ಜೋಶಿಯವರು ಮಾತ್ರ ಶಿಕ್ಷಣವೃತ್ತಿಗೇ ತಮ್ಮನ್ನು ಅರ್ಪಿಸಿಕೊಂಡರು. ನಿವೃತ್ತಿಯ ನಂತರವೂ ಅವರು ಅಧ್ಯಾಪನ ಮಾಡುತ್ತಲೇ ಇದ್ದರು.
“ನಿವೃತ್ತನಾದ ಮೇಲೆ, ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಾಗದಿದ್ದರೆ, ನಾನು ಕರ್ನಾಟಕ ಹಾಯ್‍ಸ್ಕೂಲಿನ ಅಂಗಳದ ಕಸ ಗುಡಿಸುತ್ತ ಬದುಕು ಸವೆಸುತ್ತೇನೆ” ಎಂದು ಅವರು ಒಮ್ಮೆ ಹೇಳಿದ್ದರು.
ನಾನು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಎರಡು ವರ್ಷಗಳ ಮಟ್ಟಿಗೆ ವಿದ್ಯಾರ್ಥಿಯಾಗಿದ್ದಾಗ, ಜೋಶಿ ಮಾಸ್ತರರು ನಮ್ಮ ಮುಖ್ಯಾಧ್ಯಾಪಕರಾಗಿದ್ದರು.
..................................................................................
[ಟಿಪ್ಪಣಿ:
ಮಾಧ್ಯಮಿಕ ಶಾಲೆಯಲ್ಲಿ ನಾವು ವಿದ್ಯಾರ್ಥಿಗಳಾಗಿದ್ದಾಗ ‘ಬೋಸ್ಟನ್ ಟೀ ಪಾರ್ಟಿ’ಯ ಬಗೆಗೆ ನಮಗೆ ರೋಮಾಂಚಕವಾಗಿ ಕಲಿಸಲಾಗುತ್ತಿತ್ತು. ಬ್ರಿಟನ್ ವಿರುದ್ಧ ಹೋರಾಡಲು ಅಮೆರಿಕನ್ ಜನತೆಗೆ ಹೇಗೆ ಈ ಘಟನೆ ಪ್ರೇರಕವಾಯಿತು ಎನ್ನುವದನ್ನು ಹೇಳಿಕೊಡಲಾಗುತ್ತಿತ್ತು.
ಬ್ರಿಟನ್ನಿನಿಂದ ಬಂದ ಚಹ ತುಂಬಿದ ಹಡಗುಗಳಲ್ಲಿಯ ಚಹದ ಪೆಟ್ಟಿಗೆಗಳನ್ನು ಬಂಡುಕೋರ ಅಮೆರಿಕನ್ ಯುವಕರು ಸಮುದ್ರದಲ್ಲಿ ಬಿಸಾಕಿದ ಕತೆಯಿದು.
ಈ ಘಟನೆಗಿಂತ ನೂರು ಪಟ್ಟು ರೋಮಾಂಚಕವಾದ ‘ಅಗ್ನಿಸಂದೇಶ’ಕ್ಕೆ ನಮ್ಮ ಇತಿಹಾಸದಲ್ಲಿ ಸ್ಥಾನವಿಲ್ಲ ಎನ್ನುವದು ವಿಚಿತ್ರ ಆದರೂ ಸತ್ಯ!]