ಉತ್ತರ ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಯ ಉದ್ದೇಶದಿಂದ ೧೯೩೩ನೆಯ ಇಸವಿಯಲ್ಲಿ , ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಬೆಳಗಾವಿಯಲ್ಲಿ ಪ್ರಾರಂಭವಾಯಿತು. ಅನೇಕ ವರ್ಷಗಳವರೆಗೆ ಈ ಪತ್ರಿಕೆಯು ತನ್ನ ಆದರ್ಶ ಮತ್ತು ಧ್ಯೇಯಗಳಿಗೆ ಅನುಸಾರವಾಗಿ ಅತ್ಯುತ್ತಮ ಕೆಲಸವನ್ನು ಮಾಡಿತು. ಈ ಪತ್ರಿಕೆಯ ಪೂರ್ವಕಾಲದ ಸಂಪಾದಕರಾದ ಮೊಹರೆ ಹಣಮಂತರಾಯರು, ಹ.ರಾ.ಪುರೋಹಿತರು ಹಾಗು ಸಂಪಾದಕವರ್ಗದಲ್ಲಿದ್ದ ಪಾ.ವೆಂ.ಆಚಾರ್ಯರು ಇವರೆಲ್ಲ ತಮ್ಮ ಶ್ರದ್ಧೆ ಹಾಗು ನಿಷ್ಠೆಯ ಪರಿಶ್ರಮದಿಂದ ಪತ್ರಿಕೆಯನ್ನು ಉನ್ನತ ಮಟ್ಟಕ್ಕೆ ತಲುಪಿಸಿದರು.
ಕನ್ನಡದಲ್ಲಿ ಪತ್ರಿಕೆಗಳು ಬಳಸಬಹುದಾದ ಪ್ರಮಾಣಿತ ಪದಗಳು ಇನ್ನೂ ಇರದಂತಹ ಆ ಸಮಯದಲ್ಲಿ ‘ಸಂಯುಕ್ತ ಕರ್ನಾಟಕ’ವು ಇಂತಹ ಪತ್ರಿಕಾಪದಗಳನ್ನು ಅಂದರೆ standard journalistic terminologyಯನ್ನು ರೂಪಿಸಿತು. ಇದು ಪತ್ರಿಕಾಭಾಷೆಗೆ ‘ಸಂಯುಕ್ತ ಕರ್ನಾಟಕ’ವು ನೀಡಿದ ದೊಡ್ಡ ಕೊಡುಗೆಯಾಗಿದೆ.
ಒಂದು ಕಾಲದಲ್ಲಿ ಪತ್ರಿಕೋದ್ಯಮವು ಲೋಕಶಿಕ್ಷಣದ ಸಾಧನವಾಗಿತ್ತು. ಇಂದು ಅದು ದೊಡ್ಡ ಉದ್ದಿಮೆಯಾಗಿದೆ. ಈ ಉದ್ದಿಮೆಯಲ್ಲಿ ಭಾಷೆಗೆ, ವ್ಯಾಕರಣಕ್ಕೆ ಅಥವಾ ಕಾಗುಣಿತಕ್ಕೆ ಏನೂ ಬೆಲೆ ಇಲ್ಲವೇನೋ ಎನ್ನುವ ಕಳವಳವು ‘ಸಂಯುಕ್ತ ಕರ್ನಾಟಕ’ದ ಓದುಗರನ್ನು ಬಾಧಿಸುತ್ತದೆ. ‘ಸಂಯುಕ್ತ ಕರ್ನಾಟಕ’ದ ನಿಯಮಿತ ಓದುಗನಾದ ನನಗೆ, ಈ ನನ್ನ ಪ್ರಿಯ ಪತ್ರಿಕೆಯಲ್ಲಿ ಐದು ನಮೂನೆಯ ತಪ್ಪುಗಳು ಕಂಡು ಬರುತ್ತಿವೆ. ಇವುಗಳನ್ನು ‘ಪತ್ರಿಕಾಪ್ರಪಂಚದ ಪಂಚ ಮಹಾಪಾತಕ’ಗಳು ಎಂದು ಕರೆದರೆ ತಪ್ಪಿಲ್ಲ. ಇದರಿಂದ ದುಃಖಿತನಾದ ನಾನು ನನ್ನ ಚಡಪಡಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನನ್ನ ತಿಳಿವಳಿಕೆಯಲ್ಲಿಯೇ ತಪ್ಪಿದ್ದರೆ, ದಯವಿಟ್ಟು ನನ್ನನ್ನು ತಿದ್ದಲು ಕೋರಿಕೊಳ್ಳುತ್ತೇನೆ.
(೧) ಕಾಗುಣಿತದ ತಪ್ಪುಗಳು:
ಕಾಗುಣಿತದ ತಪ್ಪುಗಳು ಅತ್ಯಂತ ಪ್ರಾಥಮಿಕ ತಪ್ಪುಗಳು. ಅಚ್ಚುಮೊಳೆಗಳನ್ನು ಜೋಡಿಸಿ ಪತ್ರಿಕೆಗಳನ್ನು ಮುದ್ರಿಸುವ ಕಾಲವೊಂದಿತ್ತು. ಅಂತಹ ಸಮಯದಲ್ಲಿಯೂ ಸಹ ಮುದ್ರಣದೋಷಗಳು ವಿರಳವಾಗಿದ್ದವು. ಗಣಕಯಂತ್ರದ ಬಳಕೆ ಮಾಡುವ ಈ ಕಾಲದಲ್ಲಿ ಕಾಗುಣಿತದ ತಪ್ಪುಗಳು ಹೇರಳವಾಗಿ ಕಂಡುಬರುವದು ಆಘಾತಕರವಾಗಿದೆ. ಒಂದು ಪರಿಚ್ಛೇದದಲ್ಲಿ ಅಥವಾ ಒಂದು ಪುಟದಲ್ಲಿ ಕಾಗುಣಿತದ ಎಷ್ಟು ತಪ್ಪುಗಳು ಕಂಡು ಬರಬಹುದು? ‘ಸಂಯುಕ್ತ ಕರ್ನಾಟಕ’ದ ಒಂದೇ ಪುಟದಲ್ಲಿ ನಾನು ಸ್ವೈಚ್ಛಿಕ ಅವಲೋಕನ ಮಾಡಿದಾಗ ಹನ್ನೊಂದು ತಪ್ಪುಗಳು ಕಂಡು ಬಂದವು. ಇವು ಅಚ್ಚಿನ ದೋಷಗಳಲ್ಲ ; ಆದರೆ ಕಾಗುಣಿತದ ತಪ್ಪುಗಳು ಎನ್ನುವ ಸಂಗತಿಯನ್ನು ನಾನು ವಿಷಾದಪೂರ್ವಕವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ನಾನು ತಿಳಿದಂತಹ ಕೆಲವು ತಪ್ಪುಗಳನ್ನು ಉದಾಹರಣೆಗೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ. Standard News Paper ಎಂದು ಭಾವಿಸಲಾದ ಪತ್ರಿಕೆಯಲ್ಲಿ ಇಷ್ಟು ತಪ್ಪುಗಳು ಕಾಣಬಾರದು, ಅಲ್ಲವೆ?
ದಿನಾಂಕ ತಪ್ಪು ಒಪ್ಪು
೨೩--೯-೦೯ ಸ್ಕೈಐವಿಂಗ್ ಸ್ಕೈಡೈವಿಂಗ್
೨೩--೯-೦೯ ಶೀಖರ ಶಿಖರ
೨೬-೯-೦೯ ವಿಶಿಷ್ಠ ವಿಶಿಷ್ಟ
೨೬-೯-೦೯ ದಿಕ್ಷಿತಲು ದೀಕ್ಷಿತರು
೨೬-೯-೦೯ ಪ್ರೀಟಿ ಪ್ರೀತಿ
೨೬-೯-೦೯ ನಿಗಧಿತ ನಿಗದಿತ
೨೬-೯-೦೯ ಸ್ಕಂಧ್ ಸ್ಕಂದ
೨೬-೯-೦೯ ಮಾಲಿದ್ದಾರೆ ಮಾಡಲಿದ್ದಾರೆ
೨೬-೯-೦೯ ಎದು ಎಂದು
೨೬-೯-೦೯ ಪ್ರೊಬೆಷನರಿ ಪ್ರೊಬೇಷನರಿ
೨೬-೯-೦೯ ಪರಿಶಿಷ್ಠ ಪರಿಶಿಷ್ಟ
೨೭-೯-೦೯ ದಿಗ್ಭಂದನ ದಿಗ್ಬಂಧನ
೨೭-೯-೦೯ ಹಲ್ಯೆಯನ್ನು ಹಲ್ಲೆಯನ್ನು
೨೭-೯-೦೯ ಪರೀಶಿಲಿಸಿ ಪರಿಶೀಲಿಸಿ
೨೭-೯-೦೯ ಘಂಟೇಪ್ಪನವರ ಘಂಟೆಪ್ಪನವರ
೨೭-೯-೦೯ ಅದಿಕಾರಿಗಳಲ್ಲಿ ಅಧಿಕಾರಿಗಳಲ್ಲಿ
೨೭-೯-೦೯ ವಿಶ್ವಬ್ಯಾಂಕನಂಥ ವಿಶ್ವಬ್ಯಾಂಕನಂತಹ
೨೯-೯-೦೯ ಬ್ರೀಜ್ ಬ್ರಿಜ್
೨೯-೯-೦೯ ಮಥ ಮೃತ
೨೯-೯-೦೯ ಹರ್ಷೋದ್ಘಾರ ಹರ್ಷೋದ್ಗಾರ
೨೯-೯-೦೯ ಸ್ತಬ್ದ ಸ್ತಬ್ಧ
೨೯-೯-೦೯ ಕೈಗೂಳ್ಳುವದಾಗಿ ಕೈಗೊಳ್ಳುವದಾಗಿ
೨೯-೯-೦೯ ಅನಿಷ್ಠಾನ ಅನುಷ್ಠಾನ
೨೯-೯-೦೯ ಅಂಕೀತ ಅಂಕಿತ
೨೯-೯-೦೯ ಹರಿಸಿದ್ದಾರೆ ಹರಸಿದ್ದಾರೆ.
೨೯-೯-೦೯ ಶುಭಾಷಯ ಶುಭಾಶಯ
೨೯-೯-೦೯ ವಿಜಯದಶಿಮಿ ವಿಜಯದಶಮಿ
೨೯-೯-೦೯ ಅವ್ವಾಹತವಾಗಿ ಅವ್ಯಾಹತವಾಗಿ
೨೯-೯-೦೯ ಪುನಶ್ಛೇತನ ಪುನಶ್ಚೇತನ
೨೯-೯-೦೯ ವಿಶಿಷ್ಠ ವಿಶಿಷ್ಟ
೩೦-೯-೦೯ ಅನುಷ್ಟಾನ ಅನುಷ್ಠಾನ
೩೦-೯-೦೯ ಮಧ್ಯಾನ್ಹದಿಂದ ಮಧ್ಯಾಹ್ನದಿಂದ
೩೦-೯-೦೯ ಕಾಲ್ಕಿತಿತ್ತು ಕಾಲ್ಕಿತ್ತಿತು
(೨) ವ್ಯಾಕರಣದೋಷಗಳು:
ಕಾಗುಣಿತದ ತಪ್ಪುಗಳನ್ನು ಅಚ್ಚಿನ ದೋಷಗಳೆಂದು ಹೇಳಿ ಪಾರಾಗಬಹುದು. ಆದರೆ ವ್ಯಾಕರಣದ ತಪ್ಪುಗಳಿಗೆ ಯಾರು ಹೊಣೆ? ತಮ್ಮಲ್ಲಿ ಪರಿಶೀಲನೆಗೆ ಬಂದಂತಹ ವರದಿಗಳನ್ನು ಸಂಪಾದಕರು ಕಣ್ಣು ಮುಚ್ಚಿಕೊಂಡು ಓದುತ್ತಾರೆಯೆ? ಅಥವಾ ಕನ್ನಡ ವ್ಯಾಕರಣವನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿರುವಾಗ ಇವರಿಗೆ ಏನೂ ನೋವಾಗುವದಿಲ್ಲವೆ? ಇದು ಸಂಪಾದಕರ ಹೊಣೆಗಾರಿಕೆ ಅಲ್ಲವೆ? ವ್ಯಾಕರಣದ ಮೃಗಯಾವಿಹಾರದ ಕೆಲವೊಂದು ಉದಾಹರಣೆಗಳು ಹೀಗಿವೆ:
೨೬-೯-೦೯
(೧)ತಪ್ಪು: ಮಳೆಗೆ ಕೋಟ್ಯಂತರ ಆಸ್ತಿ ನಷ್ಟ
ಒಪ್ಪು: ಮಳೆಯಿಂದ ಕೋಟ್ಯಂತರ ಆಸ್ತಿ ನಷ್ಟ
(೨) ತಪ್ಪು: ಮಿಷಿನ್ ಗಳ
ಒಪ್ಪು: ಮಶೀನುಗಳ
೨೭-೯-೦೯
(೧) ತಪ್ಪು: ಸೂಕ್ತ ಆರೋಪಿಗಳನ್ನು
ಒಪ್ಪು: ನೈಜ ಅಪರಾಧಿಗಳನ್ನು
(ಟಿಪ್ಪಣಿ: ಸೂಕ್ತ ಎಂದರೆ ವಿಧಿ-ವಿಧಾನಗಳಲ್ಲಿ ಹೇಳಿದ ಮೇರೆಗೆ ಎಂದು ಅರ್ಥ.
ಆರೋಪಿಗಳು ಅಪರಾಧಿಗಳಾಗಿರಬೇಕಿಲ್ಲ.)
(೨) ತಪ್ಪು: ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿತ್ತು.
ಒಪ್ಪು: ಬೆಳಗಿನ ಸಮಯದಲ್ಲಿ ನಿಲ್ದಾಣಕ್ಕೆ ಆಗಮಿಸಿತ್ತು.
(೩) ತಪ್ಪು: ಅಂತಾರಾಷ್ಟ್ರೀಯ (=inland)
ಒಪ್ಪು: ಅಂತರರಾಷ್ಟ್ರೀಯ (=international)
೨೯-೯-೦೯
(೧) ತಪ್ಪು: ಪೋಲೀಸ ಠಾಣೆ ಸಂಪರ್ಕಿಸಲು
ಒಪ್ಪು: ಪೋಲೀಸ ಠಾಣೆಯನ್ನು ಸಂಪರ್ಕಿಸಲು
(೨) ತಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿದರು
ಒಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿತು (ಅಥವಾ, ಜನರು .....ಆಚರಿಸಿದರು.)
(೩) ತಪ್ಪು: ಶುಭ್ರವರ್ಣದ ಹೊಸ ಬಟ್ಟೆಗಳನ್ನು
ಒಪ್ಪು: ಶುಭ್ರವಾದ ಹೊಸ ಬಟ್ಟೆಗಳನ್ನು
(ಟಿಪ್ಪಣಿ: ಶುಭ್ರ=ಸ್ವಚ್ಛ. ವರ್ಣ ಶುಭ್ರವಾಗಿರುವದೊ ಅಥವಾ ಬಟ್ಟೆ ಶುಭ್ರವಾಗಿರುವದೊ?)
(೩) ಭಾಷೆಯ ತಪ್ಪುಗಳು:
ವ್ಯಾಕರಣವು ಸಂಪಾದಕರಿಗೆ ಮಹತ್ವದ ವಿಷಯವೆಂದು ಅನ್ನಿಸಿರಲಿಕ್ಕಿಲ್ಲ ಎಂದು ಭಾವಿಸೋಣ. ಆದರೆ ಭಾಷೆಯ ತಪ್ಪು ಮಾತ್ರ ಒಂದು ಪತ್ರಿಕೆಯು ಎಂದೂ ಮಾಡಬಾರದ ತಪ್ಪು. ಓದುಗರನ್ನು ಸುಶಿಕ್ಷಿತರನ್ನಾಗಿ ಮಾಡುವದು ಯಾವುದೇ ಪತ್ರಿಕೆಯ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಪತ್ರಿಕೆಯ ಭಾಷೆಯನ್ನು ಪ್ರಮಾಣಿತ ಭಾಷೆ ಎಂದು ಗ್ರಹಿಸಿಕೊಳ್ಳುವ ಓದುಗರು ಭಾಷಾದೋಷಗಳನ್ನು ಅರಿಯದೇ ಅಂತರ್ಗತಗೊಳಿಸಿಕೊಳ್ಳುತ್ತಾರೆ. ಆ ತಪ್ಪುಗಳನ್ನು ತಾವೂ ಎಲ್ಲೆಡೆ ಹರಡುತ್ತಾರೆ. ಇದರಿಂದ ಾಷಾದೋಷವು ಸರ್ವವ್ಯಾಪಿಯಾಗಿ ಬಿಡುತ್ತದೆ. ‘ಸಂಯುಕ್ತ ಕರ್ನಾಟಕ’ದಲ್ಲಿಯ ಕೆಲವು ಭಾಷಾದೋಷಗಳನ್ನು ಗಮನಿಸೋಣ:
"ಸಾರ್ವಜನಿಕ ಸ್ಥಳದಲ್ಲಿ ಗುಡಿ ನಿರ್ಮಾಣಕ್ಕೆ ಸುಪ್ರೀಂ ನಿರ್ಬಂಧ" ಎನ್ನುವ ಈ ವರದಿಯನ್ನು ನೋಡಿರಿ. ಸಂಯುಕ್ತ ಕರ್ನಾಟಕವು ಹಾಗೂ ಇತರ ಪತ್ರಿಕೆಗಳು ಅನೇಕ ವರ್ಷಗಳಿಂದ ‘ಸರ್ವೋಚ್ಚ ನ್ಯಾಯಾಲಯ’ ಎನ್ನುವ ಪದವನ್ನು ಬಳಸುತ್ತಲೇ ಬಂದಿವೆ. ಈ ಪದವು ಕನ್ನಡ ಓದುಗರಿಗೆ ಅರ್ಥವಾಗುವಂತಹ ಪದವೇ ಆಗಿದೆ. ಏಕಾಏಕಿಯಾಗಿ ಈ ಪದಕ್ಕೆ ಬದಲಾಗಿ ‘ಸುಪ್ರೀಂ ಕೋರ್ಟ’ ಎನ್ನುವ ಆಂಗ್ಲ ಪದ ಬಳಸುವ ಅನಿವಾರ್ಯತೆಯನ್ನು ಸಂಪಾದಕರೇ ಹೇಳಬೇಕು! ಸರಿ ಬಿಡಿ, ಯಾವುದೋ ಗಡಿಬಿಡಿಯಲ್ಲಿ ಸಂಪಾದಕರು ಕನ್ನಡ ಪದ ನನಪಾಗದೇ ಆಂಗ್ಲ ಪದವನ್ನು ಉಳಿಸಿಕೊಂಡರು ಎಂದುಕೊಳ್ಳೋಣ. ಆದರೆ ಕನ್ನಡ ವಾಕ್ಯದ ಮಧ್ಯಭಾಗದಲ್ಲಿ ಆಂಗ್ಲ ಪದಪುಂಜವನ್ನು ಬಳಸಿಕೊಳ್ಳುವದರ ಕಾರಣವೇನು? ಮನೋರಮೆಯು ಮುದ್ದಣನಿಗೆ ಹೇಳುವಂತೆ ಇದು ಮುತ್ತಿನ ಸರದಲ್ಲಿ ಮೆಣಸನ್ನು ಪೋಣಿಸಿದಂತೆ ಅಲ್ಲವೆ? ಉದಾಹರಣೆಯನ್ನು ನೋಡಿರಿ:
"ಸದಾ ಮಂತ್ರಿಗಳ ಕಾರುಬಾರಿನಲ್ಲಿದ್ದ ವಿಧಾನಸೌಧ ಇಂದು ಫಾರ್ ಎ ಚೇಂಜ್ ಅಧಿಕಾರಿಗಳ ದರ್ಬಾರಿನಲ್ಲಿ ಕಾಲ ಕಳೆಯುವಂತಾಗಿತ್ತು."
ಸಂಪಾದಕರು ಓದುಗರೊಡನೆ ಹರಟೆ ಹೊಡೆಯುವ ಧಾಟಿಯಲ್ಲಿ ಸುದ್ದಿಯನ್ನು ಹೇಳುತ್ತಿದ್ದಾರೆಂದರೆ, ಈ ಶೈಲಿಯನ್ನು ಒಪ್ಪಿಕೊಳ್ಳಬಹುದು. ಆದರೆ ಗಂಭೀರ ವರದಿಗೆ ಇದು ತಕ್ಕ ಧಾಟಿಯೆನಿಸುವದಿಲ್ಲ.
ಅಕ್ಟೋಬರ ೧೧ರಂದು ಪ್ರಕಟವಾದ ವರದಿಯ ಭಾಷೆ ಇನ್ನೂ ವಿಚಿತ್ರವಾಗಿದೆ:
ಈ ವರದಿಯ ಮೊದಲನೆಯ ದೋಷವೆಂದರೆ ‘ಸವದತ್ತಿ’ಯನ್ನು ‘ಸೌಂದತ್ತಿ’ ಎಂದು ಗ್ರಾಮ್ಯವಾಗಿ ಬರೆದಿದ್ದು. ಈ ವರದಿಯ ಪರಿಚ್ಛೇದ ಒಂದರ ಕೊನೆಯ ಸಾಲು ಹೀಗಿದೆ:
"ಇತ್ತೀಚೆಗೆ ಸುರಿದ ದಾರಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತು ನಿರ್ಲಕ್ಷಿಸಿ ಪ್ರತಿದಿನ ಸ್ಥಳದಲ್ಲಿ ಮಲಗಿಕೊಂಡಿದ್ದರೆ ಆತನ ಕುಟುಂಬಕ್ಕೆ ಇಂದು ಬೆಳಕು ಕಾಣುತ್ತಿರಲಿಲ್ಲ."
ಅರ್ಥವಾಯಿತೆ? ಸ್ವಲ್ಪ ತಿಣುಕಾಡಿದರೆ ಅರ್ಥ ಮಾಡಿಕೊಳ್ಳುವದು ಕಷ್ಟವೇನಲ್ಲ. ಆದರೆ ಸರಿಯಾದ ವಾಕ್ಯ ಹೀಗಿರಬೇಕಿತ್ತು:
"ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತನ್ನು ನಿರ್ಲಕ್ಷಿಸಿ ಪ್ರತಿ ದಿನದಂತೆಯೆ ಮಲಗಿಕೊಂಡಿದ್ದರೆ, ಆತನ ಕುಟುಂಬವು ಇಂದು ಬೆಳಕನ್ನು ಕಾಣುತ್ತಿರುತ್ತಿಲ್ಲ."
(೪) ವರದಿಯ ದೋಷಗಳು:
ವರದಿಯ ದೋಷಗಳಿಗಾಗಿ ಈ ವರದಿಗಳನ್ನು ನೋಡಬಹುದು:
ಮೊದಲನೆಯ ವರದಿ ‘ಸಂಯುಕ್ತ ಕರ್ನಾಟಕ’ದಲ್ಲಿ ಸಪ್ಟಂಬರ ೩೦ರಂದು ಮೂರನೆಯ ಪುಟದಲ್ಲಿ ಪ್ರಕಟವಾಗಿದೆ. ಒಳ್ಳಯ ವರದಿಗೆಬೇಕಾದ ನಿಖರತೆ ಹಾಗೂ ಸಂಕ್ಷಿಪ್ತತೆಯ ಬದಲಾಗಿ ಜೊಳ್ಳು ಜೊಳ್ಳಾದ ವರ್ಣನೆ ಇಲ್ಲಿದೆ ಎಂದು ನನ್ನ ಅನಿಸಿಕೆ.
"ಜಿಲ್ಲೆಯಾದ್ಯಂತ ಇಂದು ಮಧ್ಯಾನ್ಹದಿಂದ ಬಿಟ್ಟುಬಿಡದೇ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲೆಡೆ ನೀರೇ ನೀರು." ಎಂದು ಈ ವರದಿ ಪ್ರಾರಂಭವಾಗುತ್ತದೆ.
ಧಾರವಾಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಕಲಘಟಗಿಯಂತಹ ಮಲೆನಾಡು ಹಾಗೂ ನವಲಗುಂದದಂತಹ ಬಯಲಸೀಮೆ ಈ ಜಿಲ್ಲೆಯಲ್ಲಿವೆ. ಇವುಗಳ ನಡುವಿನ ನೇರ ಅಂತರವು ಸುಮಾರು ೬೦ ಕಿಲೊಮೀಟರುಗಳಷ್ಟಾದರೂ ಇದ್ದೀತು. ’ಇಲ್ಲೆಲ್ಲಾ ಮಳೆ ಇಂದು ಮಧ್ಯಾಹ್ನವೇ ಪ್ರಾರಂಭವಾಯಿತೆ’, ಎನ್ನುವ ಸಂದೇಹ ಓದುಗನಿಗೆ ಬಾರದಿರದು. ಪತ್ರಿಕೆಯು ಇಂತಹ ಸಂದರ್ಭಗಳಲ್ಲಿ ಸಂದಿಗ್ಧ ಭಾಷೆಯನ್ನು ಬಳಸಬಾರದು. ಎರಡನೆಯದಾಗಿ ಮಳೆ ಸುರಿದದ್ದು ಹಿನ್ನೆಲೆಯಾಗುವದಿಲ್ಲ, ಕಾರಣವಾಗುತ್ತದೆ. ಈಗ ಈ ವಾಕ್ಯದ ವ್ಯಾಕರಣದ ತಪ್ಪುಗಳನ್ನಷ್ಟು ಗಮನಿಸಿರಿ: ‘ಮಧ್ಯಾಹ್ನ’ ಪದವನ್ನು ‘ಮಧ್ಯಾನ್ಹ’ ಎಂದು ಬರೆಯಲಾಗಿದೆ. ’ಬಿಟ್ಟೂಬಿಡದೆ’ ಎನ್ನುವದನ್ನು ‘ಬಿಟ್ಟುಬಿಡದೇ’ ಎಂದು ಬರೆಯಲಾಗಿದೆ.
ಈ ಒಂಟಿ ಸಾಲಿನ ಮುಂದಿನ ಪರಿಚ್ಛೇದವನ್ನು ಈಗ ಗಮನಿಸಿರಿ:
"ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ನಂತರ ಮಧ್ಯಾನ್ಹ 2ರ ಸುಮಾರಿಗೆ ಸಣ್ಣಗೆ ಸುರಿಯುತ್ತಿದ್ದ ಮಳೆ ಒಮ್ಮಿಂದೊಮ್ಮೆಲೇ ಜೋರಾಗಿ ಸುರಿಯಲು ಪ್ರಾರಂಭಿಸಿತು. ಮಳೆ ಬೀಳುವ ಸಂದರ್ಭದಲ್ಲಿ ಗಾಳಿಯೂ ಬೀಸುತ್ತಿರಲಿಲ್ಲ."
ಮೊದಲನೆಯದಾಗಿ, ವರದಿಗಾರರು ಜಿಲ್ಲೆಯನ್ನು ಬಿಟ್ಟುಕೊಟ್ಟು ಧಾರವಾಡ ಶಹರಕ್ಕೆ ಜಿಗಿದಂತೆ ಭಾಸವಾಗುತ್ತದೆ. ಎರಡನೆಯದಾಗಿ ಸಾಮಾನ್ಯ ಓದುಗನಿಗೆ ನಿಖರವಾದ ಹಾಗೂ ಸಂಕ್ಷಿಪ್ತವಾದ ಮಾಹಿತಿ ಬೇಕಾಗಿರುತ್ತದೆ. ಸಂತೆಯಲ್ಲಿ ಭೆಟ್ಟಿಯಾದ ಜನರು ತಮ್ಮತಮ್ಮಲ್ಲಿ ವಿನಿಮಯ ಮಾಡಿಕೊಳ್ಳುವಂತಹ ಜೊಳ್ಳು ಮಾತಿನಲ್ಲಿ ಅವನಿಗೆ ಆಸಕ್ತಿ ಇರುವದಿಲ್ಲ. ಮಳೆ ಒಮ್ಮಿಂದೊಮ್ಮೆಲೆ ಜೋರಾಯಿತೊ ಅಥವಾ ಕಾಲಕ್ರಮೇಣ ಜೋರಾಯಿತೊ ; ಮಳೆ ಬೀಳುವ ಸಂದರ್ಭದಲ್ಲಿ ಗಾಳಿ ಬೀಸುತ್ತಿತ್ತೊ ಇಲ್ಲವೊ ಎನ್ನುವ ಮಾಹಿತಿ ಓದುಗನಿಗೆ ಅನವಶ್ಯಕವಾಗಿದೆ. ಇಂತಿಷ್ಟು ಮಿಲಿಮೀಟರ ಮಳೆ ಆಗಿದೆ ಎಂದು ತಿಳಿಯುವದಷ್ಟೇ ಅವನಿಗೆ ಬೇಕಾಗಿರುತ್ತದೆ.
ಇದರ ಮುಂದಿನ ಪರಿಚ್ಛೇದದಲ್ಲಿ ಅಸ್ಪಷ್ಟತೆ ಇನ್ನೂ ಹೆಚ್ಚಾಗಿದೆ:
"ಸಂಜೆ 4ರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು. ನಂತರ ಐದು ನಿಮಿಷಗಳ ಕಾಲ ಮಳೆ ನಿಂತಿತಾದರೂ ಮತ್ತೆ ಸುರಿಯಲು ಪ್ರಾರಂಬಿಸಿತು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಳ್ಳ ತುಂಬಿದ ವರದಿಗಳು ಬಂದಿವೆ. ನಗರದ ತಗ್ಗು ಪ್ರದೇಶಗಳಾದ ಬಾವಿಕಟ್ಟಿ ಪ್ಲಾಟ್, ಜನ್ನತ್ ನಗರ ಮತ್ತು ಲಕ್ಷ್ಮಿಸಿಂಗನ ಕೆರೆಯಲ್ಲಿ ನೀರು ತುಂಬಿವೆಯಾದರೂ ಅನಾಹುತಗಳು ಸಂಭವಿಸಿಲ್ಲ. ನಗರದ ಗಟಾರುಗಳು ತುಂಬಿದ್ದು ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿಯೂ ಮಳೆ ಬಿದ್ದ ವರದಿಯಾಗಿವೆ. ಹೊಲಗಳಲ್ಲಿ ನೀರು ಹರಿದಿವೆ. ಹಳ್ಳಗಳಲ್ಲಿ ನೀರು ಬಂದಿವೆಯಾದರೂ ಸಂಚಾರಕ್ಕೆ ಅಡ್ಡಿಯಾಗಿಲ್ಲ."
ವರದಿಯ ಪ್ರಕಾರ ಮೋಡ ಕವಿದ ವಾತಾವರಣ ಮುಂಜಾನೆಯಿಂದಲೇ ಇದೆ. ಮಳೆಯೂ ಸಹ ಬಿಟ್ಟೂಬಿಡದೇ ಬೀಳುತ್ತಿದೆ. ಅಂದ ಮೇಲೆ ಸಂಜೆ ನಾಲ್ಕರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೆಯ ಮೋಡಗಳು ಗೋಚರಿಸುತ್ತಿದ್ದವು ಎಂದು ಹೇಳುವದರ ಔಚಿತ್ಯವೇನು? ಅಲ್ಲದೆ, "ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು" ಎನ್ನುವದು ವ್ಯಾಕರಣದ ಕೊಲೆಯಲ್ಲವೆ?
"ಐದು ನಿಮಿಷಗಳ ನಂತರ ಮಳೆ ಸುರಿಯಲಾರಂಭಿಸಿತು" ಅಂದರೆ, ನಾಲ್ಕು ಹೊಡೆದು ಐದು ನಿಮಿಷಕ್ಕೆ ಮಳೆ ಪ್ರಾರಂಭವಾಯಿತೆ?
ಈ ಸಮಯವು ಇಡೀ ಧಾರವಾಡ ಜಿಲ್ಲೆಗೆ ಅನ್ವಯಿಸುವದೊ ಅಥವಾ ಧಾರವಾಡ ನಗರಕ್ಕೆ ಅನ್ವಯಿಸುವದೊ? ಧಾರವಾಡ ನಗರದಲ್ಲಿಯೇ ಒಂದೆಡೆ ಮಳೆ ಬೀಳುತ್ತಿದ್ದಾಗ, ಇನ್ನೊಂದೆಡೆ ಮಳೆ ಇರುವದಿಲ್ಲ. ಬಹುಶ: ಈ ಮಳೆ ವರದಿಗಾರರ ಮನೆಯ ಮೇಲೆ ಬೀಳುತ್ತಿತ್ತೇನೊ?!
ನಗರದಲ್ಲಿ ಬೀಳುತ್ತಿದ್ದ ಮಳೆಯ ವರದಿ ಒಮ್ಮೆಲೆ ಹಳ್ಳಿಗಳಿಗೆ ಜಿಗಿದು, ಅಲ್ಲಿ ಹಳ್ಳಗಳು ತುಂಬಿದ್ದನ್ನು ಅವಲೋಕಿಸಿ, ಮತ್ತೆ ನಗರದಲ್ಲಿ ನೀರು ತುಂಬಿದ ಭಾಗಗಳ ವರ್ಣನೆಗೆ ಮರಳುತ್ತದೆ! ಇದರ ಮುಂದಿನ ಪರಿಚ್ಛೇದವಂತೂ ಕನ್ನಡ ಸಾಲೆಯ ಹುಡುಗನ ನಿಬಂಧ(--’ಒಂದು ಮಳೆಗಾಲದ ದಿನ’--)ದಂತೆ ಭಾಸವಾಗುತ್ತದೆ:
"ಇಂದು ಸಂಜೆ ಜನರು ಕೊಡೆ ಹಿಡಿದುಕೊಂಡೇ ಅಡ್ಡಾಡುವ ದೃಶ್ಯ ಸಾಮಾನ್ಯವಾಗಿತ್ತು. ನಗರದಲ್ಲಿ ವಾಹನಗಳು ಪಕ್ಕಕ್ಕೆ ಹಾಯ್ದು ಹೋದರೆ ಅಲ್ಲಿ ನೀರಿನ ಸ್ನಾನ ಮಾಡಿಸುವದಂತೂ ಸತ್ಯವಿತ್ತು."
ವರದಿಯ ಕೊನೆಯ ಸಾಲಿನಲ್ಲಿ ‘ರವಿ ಕರಲಿಂಗಣ್ಣವರ’ ಎಂದು ಬಿಡಿಸಿ ಬರೆಯದೆ, ‘ರವಿಕರಲಿಂಗಣ್ಣವರ’ ಎಂದು ಕೂಡಿಸಿ ಬರೆಯಲಾಗಿದೆ.
ಇದೇ ದಿನಾಂಕದ ಮತ್ತೊಂದು ಪುಟದಲ್ಲಿರುವ ವರದಿ ಹೀಗಿದೆ:
"ಬರಗಾಲ ಪೀಡಿತ ಎಂದು ಘೋಷಿಸಲಾಗಿದ್ದ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನಲ್ಲಿ ಅಂಕಿ ಅಂಶಗಳ ಪ್ರಕಾರ ಉತ್ತಮವಾಗಿ ಮಳೆ ಸುರಿಯುತ್ತಿದೆ."
"ಅಂಕಿ ಅಂಶಗಳ ಪ್ರಕಾರ ಮಳೆ ಸುರಿಯುತ್ತಿದೆ" ಎಂದು ಹೇಳಿದರೆ, ವಾಸ್ತವದಲ್ಲಿ ಹಾಗಿಲ್ಲ ಎನ್ನುವ ಅರ್ಥ ಹೊಮ್ಮುವದಿಲ್ಲವೆ? ಎರಡನೆಯದಾಗಿ ಅಂಕಿ ಅಂಶಗಳು ಪತ್ರಿಕೆಯನ್ನು ತಲುಪಿದಾಗ ಮಳೆ ಸುರಿದು ಮುಗಿದಿರುತ್ತಿದೆ. ಆದುದರಿಂದ ‘ಮಳೆ ಸುರಿಯುತ್ತಿದೆ’ ಎಂದು ವರ್ತಮಾನಕಾಲದಲ್ಲಿ ಹೇಳಬಾರದು. ಮೂರನೆಯದಾಗಿ ಈ ಮಳೆ ಜನರಿಗೆ ಬೇಕಾಗಿರಲಿಲ್ಲ. ಆದುದರಿಂದ ‘ಉತ್ತಮವಾಗಿ’ ಎಂದು ವರ್ಣಿಸಬಾರದು ; ‘ಜೋರಾಗಿ’ ಎಂದು ಹೇಳಬಹುದಿತ್ತು.
ಅಕ್ಟೋಬರ ೮ನೆಯ ದಿನಾಂಕದ ೫ನೆಯ ಪುಟದಲ್ಲಿ, ರಸಾಯನ ಶಾಸ್ತ್ರದಲ್ಲಿ ನೋಬೆಲ್ ಪದಕವನ್ನು ಪಡೆದ ಶ್ರೀ ರಾಮಕೃಷ್ಣನ್ ವೆಂಕಟರಾಮನ್ ಅವರನ್ನು "ಅಮೆರಿಕ ಮೂಲದ ಭಾರತೀಯ ವಿಜ್ಞಾನಿ" ಎಂದು ಬರೆಯಲಾಗಿದೆ. ಈ ವ್ಯತ್ಯಸ್ತ ವರ್ಣನೆಯನ್ನು ರೋಚಕ ಪ್ರಮಾದವೆಂದು ಭಾವಿಸಿ ಸಮಾಧಾನಪಟ್ಟುಕೊಳ್ಳಬೇಕಷ್ಟೆ!
(೫) ಮಾಹಿತಿಯ ತಪ್ಪುಗಳು:
ಅಕ್ಟೋಬರ ೧೩ನೆಯ ದಿನಾಂಕದ ‘ಸಂಯುಕ್ತ ಕರ್ನಾಟಕ’ದ ‘ರಸಪ್ರಶ್ನೆ’ ವಿಭಾಗದಲ್ಲಿ ಕೇಳಲಾದ ಪ್ರಶ್ನೆ ಹಾಗೂ ಕೊಡಲಾದ ಉತ್ತರ ಹೀಗಿವೆ:
ಪ್ರಶ್ನೆ: ‘ಸಂಸ್ಕಾರ’ ಚಲನಚಿತ್ರದ ನಿರ್ದೇಶಕರು ಯಾರು?
ಕೊಟ್ಟ ಉತ್ತರ: ಗಿರೀಶ್ ಕಾರ್ನಾಡ್.
ಇದು ತಪ್ಪು ಉತ್ತರ. ‘ಸಂಸ್ಕಾರ’ ಚಲನಚಿತ್ರವನ್ನು ನಿರ್ದೇಶಿಸಿದವರು ಪಟ್ಟಾಭಿ ರೆಡ್ಡಿಯವರು. ಅವರ ಹೆಂಡತಿ ಸ್ನೇಹಲತಾ ರೆಡ್ಡಿಯವರು ಈ ಚಿತ್ರದ ಮುಖ್ಯ ಸ್ತ್ರೀ ಪಾತ್ರದಲ್ಲಿ ಹಾಗು ಗಿರೀಶ ಕಾರ್ನಾಡರು ಮುಖ್ಯ ಪುರುಷಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದಲ್ಲಿ ಕಾರ್ನಾಡರ ಪಾಲು ಇದ್ದಿರಬಹುದು. ಆದರೆ ಚಿತ್ರದ ಶೀರ್ಷಿಕೆಗಳ ಪ್ರಕಾರ ಪಟ್ಟಾಭಿಯವರೇ ನಿರ್ದೇಶಕರು.
ಎಪ್ಪತ್ತಾರು ವರ್ಷಗಳ ಇತಿಹಾಸವಿರುವ ‘ಸಂಯುಕ್ತ ಕರ್ನಾಟಕ’ ಯಾಕೆ ಈ ರೀತಿ ಎಡವುತ್ತ ನಡೆಯುತ್ತಿದೆ?
Wednesday, October 14, 2009
Tuesday, October 6, 2009
‘ನಾ ಕಂಡ ಕರ್ನಾಟಕ’------ಲೇ: ಕೃಷ್ಣಾನಂದ ಕಾಮತ
ಕೃಷ್ಣಾನಂದ ಕಾಮತರು (೧೯೩೪-೨೦೦೨) ಬಹುಮುಖ ಪ್ರತಿಭೆಯ ಅದ್ಭುತ ವ್ಯಕ್ತಿ. ನ್ಯೂಯಾರ್ಕ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಕಾಮತರ ಆಸಕ್ತಿಯ ವ್ಯಾಪ್ತಿ ವಿಸ್ತಾರವಾದದ್ದು. ಸಾಹಿತ್ಯ, ಚಿತ್ರಕಲೆ, ಫೋಟೊಗ್ರಾಫಿ ಇವೆಲ್ಲ ವಿಷಯಗಳಲ್ಲೂ ಅವರ ಸಾಧನೆ ಹೆಮ್ಮೆ ಪಡುವಂತಹುದು.
ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ೫೦ ಕೃತಿಗಳನ್ನು ಹೊರತಂದಿದೆ. ಕೃಷ್ಣಾನಂದ ಕಾಮತರ ‘ನಾ ಕಂಡ ಕರ್ನಾಟಕ’ ಎನ್ನುವ ಕೃತಿಯು ಈ ಐವತ್ತು ಕೃತಿಗಳಲ್ಲಿ ಒಂದು. ಈ ಕೃತಿಯಲ್ಲಿ ೨೦ ಬಿಡಿ ಲೇಖನಗಳಿವೆ. ಇವುಗಳಲ್ಲಿ ‘ಕರ್ನಾಟಕದ ಚಿಕಣಿ ಚಿತ್ರಗಳು’ ಎನ್ನುವ ಒಂದು ಲೇಖನವನ್ನು ಬಿಟ್ಟರೆ, ಉಳಿದೆಲ್ಲ ಲೇಖನಗಳು ಈಗಾಗಲೇ ಪತ್ರಿಕೆಗಳಲ್ಲಿ ಮುದ್ರಣ ಕಂಡಂತಹ ಲೇಖನಗಳೇ. ಈ ಗ್ರಂಥದಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ಮೊದಲ ಭಾಗದ ಹೆಸರು ‘ಕಲಾಪ್ರಪಂಚ’. ‘ಕಲಾಪ್ರಪಂಚ’ದಲ್ಲಿರುವ ಹತ್ತೂ ಲೇಖನಗಳು ಚಿತ್ರಕಲೆಗೆ ಸಂಬಂಧಿಸಿದ ಲೇಖನಗಳು. ಎರಡನೆಯ ಭಾಗದ ಹೆಸರು ‘ಜನಜೀವನ’. ಇದರಲ್ಲಿರುವ ಲೇಖನಗಳು ಮಲೆನಾಡಿನ ಬಗೆಗೆ ಇರುವ ಲೇಖನಗಳು.
ವಿಶಾಲ ಕರ್ನಾಟಕದ ವಿವಿಧ ಸ್ಥಳಗಳಲ್ಲಿರುವ ದೇವಾಲಯಗಳಲ್ಲಿ ಹಾಗು ಮೈಸೂರು ಅರಮನೆಯ ಒಳಾಂಗಣದಲ್ಲಿ ರಚಿಸಲಾದ ಚಿತ್ರಗಳ ಸಮಗ್ರ ದರ್ಶನಕ್ಕೆ ಮೊದಲ ಭಾಗದ ಲೇಖನಗಳು ಮೀಸಲಾಗಿವೆ. ಕಾಮತರು ತಮ್ಮ ಲೇಖನಗಳಲ್ಲಿ ದೇವಾಲಯದ ಇತಿಹಾಸ, ದೇವಾಲಯದಲ್ಲಿಯ ಚಿತ್ರಗಳ ಇತಿಹಾಸ, ಚಿತ್ರಗಳ ರಚನೆಯ ತಂತ್ರ, ಚಿತ್ರಪರಂಪರೆ, ಚಿತ್ರವಿಮರ್ಶೆ, ಚಿತ್ರಗಳ ಮೂಲಕ ಕಲ್ಪಿಸಬಹುದಾದ ಆ ಕಾಲದ ಸಾಮಾಜಿಕ ಹಾಗು ರಾಜಕೀಯ ಸ್ಥಿತಿ ಇವೆಲ್ಲವುಗಳನ್ನು ತಿಳಿಯಾದ ಭಾಷೆಯಲ್ಲಿ ಬಣ್ಣಿಸುತ್ತಾರೆ. ಈ ಚಿತ್ರಗಳ ಸದ್ಯದ ಪರಿಸ್ಥಿತಿ, ಈ ಗ್ರಾಮಗಳಲ್ಲಿ ವೀಕ್ಷಕರಿಗೆ ಸಿಗಬಹುದಾದ ಅಥವಾ ಸಿಗಲಾರದ ಸೌಲಭ್ಯಗಳನ್ನೂ ಸಹ ಓದುಗರ ಅರಿವಿಗೆ ತಂದಿದ್ದಾರೆ.
ಈ ಸಂಕಲನದ ಮೊದಲನೆಯ ಲೇಖನದಲ್ಲಿ ಬರುವ ಲೇಪಾಕ್ಷಿ ದೇವಾಲಯವು ಸದ್ಯದ ಕರ್ನಾಟಕದ ರಾಜಕೀಯ ಗಡಿಯ ಆಚೆಗಿದೆ, ಅಂದರೆ ಈಗಿನ ಆಂಧ್ರ ಪ್ರದೇಶದಲ್ಲಿದೆ. ಲೇಖನದಲ್ಲಿ ಲೇಪಾಕ್ಷಿ ದೇವಾಲಯದ ಈಗಿನ ಸ್ಥಾನಿಕ ವಿವರಗಳನ್ನು ನೀಡುವದಲ್ಲದೇ, ದೇವಾಲಯದ ನಿರ್ಮಾಣಕಾಲ, ಇದರ ಶಿಲ್ಪಿಗಳು, ಕರ್ತೃಗಳು, ಯಜಮಾನಿಕೆ ಇವೆಲ್ಲವುಗಳ ಸಮಗ್ರ ವಿವರಗಳನ್ನು ಲೇಖಕರು ನೀಡಿದ್ದಾರೆ.
ಚಿತ್ರಗಾರರು ಈ ದೇವಾಲಯದ ನಿರ್ಮಾಣದ ಸಮಯದಲ್ಲಿಯೇ ಹಸಿ ಗಾರೆಯ ಮೇಲೆ ಕಪ್ಪುಬಣ್ಣದಿಂದ ರೇಖಾಚಿತ್ರಗಳನ್ನು ಎಳೆದು ಅದರಲ್ಲಿ ಸ್ಥಳೀಯವಾಗಿ ಸಿಗುವ ಹರಳು, ಸಸ್ಯ ಇವುಗಳಿಂದ ಬಣ್ಣವನ್ನು ತುಂಬಿರಬೇಕು ಎಂದು ಲೇಖಕರು ಸಪ್ರಮಾಣವಾಗಿ ಊಹಿಸಿದ್ದಾರೆ. ಅದರಂತೆ ಸ್ಥಿತ ವ್ಯಕ್ತಿಗಳಿಗೆ ಚಲನೆ ಇದ್ದಂತೆ ತೋರಿಸಲು ಕಲಾವಿದರು ಅನುಸರಿಸಿದ ತಂತ್ರವನ್ನು ಲೇಖಕರು ಓದುಗರಿಗೆ ಬಿಚ್ಚಿ ತೋರಿಸುತ್ತಾರೆ.
ಲೇಪಾಕ್ಷಿ ದೇವಾಲಯದ ಚಿತ್ರಗಳು ಅಜಂತಾ, ತಂಜಾವೂರು ಮತ್ತು ವಿಜಯನಗರ ಕಲೆಗಳ ಅನುಕರಣೆಯೆಂದು ಕೆಲವು ಕಲಾತಜ್ಞರು ಸಾಧಿಸಲು ಪ್ರಯತ್ನಿಸಿರುವದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಲೇಖಕರು ಸಾಧಾರವಾಗಿ ಮಂಡಿಸುತ್ತಾರೆ.
ಲೇಪಾಕ್ಷಿ ದೇವಾಲಯದಲ್ಲಿ ರಚಿಸಲಾದ ಭಿತ್ತಿಚಿತ್ರಗಳನ್ನು ೮ ವರ್ಗಗಳಲ್ಲಿ ವಿಭಾಗಿಸಲಾಗಿದೆ:
(೧) ಧಾರ್ಮಿಕ ಚಿತ್ರಗಳು (೨) ವ್ಯಕ್ತಿ ಚಿತ್ರಗಳು (೩) ಸ್ತ್ರೀಯರ ಚಿತ್ರಗಳು (೪) ಪುರುಷರ ಚಿತ್ರಗಳು (೫) ಸಸ್ಯ-ಪ್ರಾಣಿ ಚಿತ್ರಣ (೬) ದೇವದೇವತೆಗಳು ಹಾಗು ಗಣಗಳು.
ಈ ಎಲ್ಲ ವರ್ಗಗಳಲ್ಲಿ ರಚಿಸಲಾದ ಚಿತ್ರಗಳ ವಿವರವಾದ ವರ್ಣನೆ ಹಾಗು ವೈಶಿಷ್ಟ್ಯಗಳನ್ನು ಕಾಮತರು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಜೊತೆಗೇ ಅನೇಕ ಸುಂದರ ಛಾಯಾಚಿತ್ರಗಳೂ ಇಲ್ಲಿವೆ.
ದುರ್ದೈವದಿಂದ ಈ ಚಿತ್ರಗಳ ರಕ್ಷಣೆಯು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಇವುಗಳ ರಕ್ಷಣೆಯ ಹೊಣೆಗಾರಿಕೆಯ ಬಗೆಗೆ ಕಾಮತರ ತಳಮಳ ಹಾಗು ಕನ್ನಡಿಗರಿಗೆ ಅವರು ಕೊಡುವ ಎಚ್ಚರಿಕೆ ಹೀಗಿದೆ:
“ಶತಕಗಳ ಅಲಕ್ಷ್ಯದಿಂದಾಗಿ ಕನ್ನಡಿಗರ ಈ ಕಲಾಸಿರಿ ಕಣ್ಮರೆಯಾಗುವದರಲ್ಲಿದೆ. ಕನ್ನಡ ಸಂಸ್ಕೃತಿ, ಕಲೆಗಳು ಎಲ್ಲಿಯೇ ಇದ್ದರೂ ಅವನ್ನು ಭಾವೀ ಪೀಳಿಗೆಗಾಗಿ ರಕ್ಷಿಸಿಡುವದು ಕರ್ನಾಟಕ ಲಲಿತ ಕಲಾ ಅಕಾಡೆಮಿಯಂಥ ಸಂಸ್ಥೆಗಳ ಹೊಣೆ. ಲೇಪಾಕ್ಷಿಯನ್ನು ಕರ್ನಾಟಕದಲ್ಲಿ ಸೇರಿಸುವದು ಅಸಾಧ್ಯವಾಗಿರಬಹುದು. ಆದರೆ ಕರ್ನಾಟಕದ ಸಂಸ್ಕೃತಿಯ ಪ್ರತೀಕಗಳಾದ ಚಿತ್ರ-ಸಿರಿಯನ್ನು ಛಾಯಾಚಿತ್ರಗಳಲ್ಲಿ, ವಿಡಿಯೋ ರೂಪದಲ್ಲಿ ಸಚಿತ್ರ ಗ್ರಂಥದಲ್ಲಿ ಕಾಯ್ದಿರಿಸುವ ಕೆಲಸ ತ್ವರಿತವಾಗಿ ಆಗಲೇಬೇಕಾಗಿದೆ.”
ಪಕ್ಷಿ ಹಾಗು ಪ್ರಾಣಿಗಳ ಶಿಲ್ಪ ಮತ್ತು ಚಿತ್ರಗಳು ನಮ್ಮ ದೇವಾಲಯಗಳ ವೈಶಿಷ್ಟ್ಯವೆನ್ನಬಹುದು. ಕಾಮತರ ಎರಡನೆಯ ಲೇಖನವು ಈ ರಚನೆಗಳ ಬಗೆಗಿದೆ. ಈ ಶಿಲ್ಪಗಳಲ್ಲಿ ಪ್ರಾಣಿಗಳ ನೈಸರ್ಗಿಕ ಚಿತ್ರಗಳಲ್ಲದೆ, ಚಮತ್ಕಾರಿಕ ಚಿತ್ರಗಳೂ ಇವೆ. ಇಂತಹ ಕೆಲವು ಚಿತ್ರಗಳ ಸುಂದರ ವಿವರಣೆ ಹಾಗೂ ಅವುಗಳ ತದ್ರೂಪ ಚಿತ್ರಗಳು ಇಲ್ಲಿವೆ.
ಕಾಮತರ ಮುಂದಿನ ಲೇಖನವು ಕರ್ನಾಟಕದಲ್ಲಿಯ ತಾಳೆಗರಿಯ ಚಿತ್ರಲೇಖನವನ್ನು ವರ್ಣಿಸುತ್ತದೆ. ತಾಳೆಗರಿಯ ಚಿತ್ರಲೇಖನವು ಕರ್ನಾಟಕದಲ್ಲಿ ಕ್ರಿಸ್ತಪೂರ್ವದಲ್ಲಿಯೇ ಹುಟ್ಟಿದರೂ ಸಹ ಸದ್ಯಕ್ಕೆ ಓಡಿಸಾದಲ್ಲಿ ಮಾತ್ರ ಜೀವಂತವಾಗಿದೆ. ತಾಳೆಗರಿಗಳ ಪೂರ್ವಸಿದ್ಧತೆ, ಚಿತ್ರರಚನೆ ಹಾಗು ಸಂರಕ್ಷಣೆಯ ವೈಜ್ಞಾನಿಕ ತಂತ್ರ ಇವುಗಳನ್ನು ಕಾಮತರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ. ಅಲ್ಲದೆ ತಾಳೆಗರಿಗಳ ಮೇಲೆ ಚಿತ್ರರೂಪದ ಅಕ್ಷರಗಳನ್ನು ಬರೆಯುವ ಪದ್ಧತಿಯು ಕರ್ನಾಟಕದಲ್ಲಿ ತನ್ನದೇ ವಿಧಾನದಲ್ಲಿ ಬಳಕೆಯಲ್ಲಿ ಇತ್ತೆಂಬುದಕ್ಕೆ ಪ್ರಮಾಣ ನೀಡಿದ್ದಾರೆ.
ಕರ್ನಾಟಕದ ಕರಾವಳಿಯ ದೇವಾಲಯದಲ್ಲಿರುವ ಕಾವಿ ಚಿತ್ರಗಳು ರಚನೆ ಹಾಗೂ ಶೈಲಿಯಲ್ಲಿ ಇತರ ಚಿತ್ರಗಳಿಗಿಂತ ತುಂಬ ಭಿನ್ನವಾಗಿವೆ. ಇವುಗಳ ವರ್ಣನೆಯನ್ನು ನಾಲ್ಕನೆಯ ಲೇಖನದಲ್ಲಿ ಮಾಡಲಾಗಿದೆ. ಕರಾವಳಿಯ ಆರ್ದ್ರ ಹವೆಯಿಂದಾಗಿ ವರ್ಣಚಿತ್ರಗಳು ಬೇಗನೇ ಹಾಳಾಗಿ ಹೋಗುತ್ತವೆ. ಆ ಕಾರಣದಿಂದಾಗಿ ಕರಾವಳಿಯ ದೇವಾಲಯ ಹಾಗೂ ಇತರ ಕೆಲವೊಂದು ಕಟ್ಟಡಗಳಲ್ಲಿ ವರ್ಣಚಿತ್ರಗಳ ಬದಲಾಗಿ ಕಾವಿ ಚಿತ್ರಗಳನ್ನು ರಚಿಸಬೇಕಾಯಿತು ಎಂದು ಕಾಮತರು ವಿವರಿಸುತ್ತಾರೆ. ಕಲೆಗೆ ಸಂಬಂಧಿಸಿದಂತೆ ಕಾಮತರ ಸೂಕ್ಷ್ಮಗ್ರಹಣಶಕ್ತಿಯನ್ನು ಹಾಗು ಐತಿಹಾಸಿಕ ಜ್ಞಾನವನ್ನು ಅರಿಯಬೇಕಾದರೆ, ಆ ಲೇಖನದ ಈ ಪರಿಚ್ಛೇದಗಳನ್ನು ಗಮನಿಸಬೇಕು:
“ ಚಿತ್ರಕ್ಕಾಗಿ ಮೀಸಲಿಟ್ಟ ಸ್ಥಳವನ್ನು ಪೂರ್ಣವಾಗಿ ಸದುಪಯೋಗಿಸುವದು ಕಲಾಕಾರನ ಉದ್ದೇಶ. ಅಂತೆಯೇ ಚೂರೂ ಬಿಡದೆ ಗಿಡ-ಮರಗಳನ್ನು ಹೂ ಬಳ್ಳಿಗಳನ್ನು, ಗುಳೋಪು, ಪತಾಕೆ, ನಕ್ಷೆಗಳನ್ನು ಜೋಡಿಸುತ್ತಾನೆ. ಇವುಗಳಲ್ಲಿ ಛಾಯಾಚಿತ್ರಗಳ ವಿವರ ತುಂಬಿಸುವದಕ್ಕಿಂತ, ಸಾಂಕೇತಿಕವಾಗಿ ರೂಪಿಸುವದು ವಾಡಿಕೆ. ವರ್ತುಲ, ಅರೆವರ್ತುಲ, ಲಂಬವರ್ತುಲಗಳನ್ನು ಬಳಸಿ ನಿರ್ಮಿಸಿದ ಗೋಲಕ ಒಂದು ಹೂವನ್ನು ಪ್ರತಿನಿಧಿಸಿದರೆ, ಅದಕ್ಕೊಂದು ಬೊಡ್ಡೆ, ಎಲೆ, ಕಾಯಿ, ಹಣ್ಣು ಜೋಡಿಸಿದರೆ ಮರವಾಗಿ ಬಿಡುತ್ತದೆ….ಕರಾವಳಿಯಲ್ಲಿ ಕುದುರೆಗಳ ಬಳಕೆ ಇರದಿದ್ದರೂ, ಹಲವಾರು ಯೋಧರು, ಸೈನಿಕರು, ಸರದಾರರು ಅಶ್ವಾರೋಹಿಗಳಾಗಿ ಚಿತ್ರಿತವಾಗಿದ್ದಾರೆ. ಬಹುಶಃ ವಿಜಯನಗರದ ಆಳರಸರು ತಮ್ಮ ಸೈನ್ಯಕ್ಕೆ ಬೇಕಾಗುವ ಕುದುರೆಗಳನ್ನು ಅರಬಸ್ತಾನದಿಂದ ಕರಾವಳಿಯ ಈ ಬಂದರುಗಳ ಮೂಲಕವೇ ಆಮದು ಮಾಡಿಸಿಕೊಳ್ಳಲಾರಂಭಿಸಿದ ನಂತರ ಈ ಪರಂಪರೆ ಬೆಳೆದು ಬಂದಿರಬೇಕು.”
ಕೆಲವು ಕಲಾಸಂಶೋಧಕರು ಆತುರದಲ್ಲಿ ಎಸಗುವ ತಪ್ಪುಗಳು ಕಾಮತರ ಸೂಕ್ಷ್ಮ ದೃಷ್ಟಿಗೆ ಬೀಳದೆ ಇಲ್ಲ.ಅದೇ ಲೇಖನದ ಕೆಳಗಿನ ಪರಿಚ್ಛೇದವನ್ನು ಗಮನಿಸಿರಿ:
“ಜರ್ಮನಿಯ ಶಿಷ್ಯವೇತನ ಪಡೆದು ಗೋವಾದ ಕಲೆ ಅಭ್ಯಸಿಸಿದ ಸಂಶೋಧಕಿ ಗ್ರಿಟ್ಲಿ ಯು. ಮಿಟರ್ವಾಲನ್ಳು ಇದು ಮೂಲತಃ ಇಟಾಲಿಯ ಗ್ರಾಫಿಟಿ (ಗೀರುಚಿತ್ರ) ಚಿತ್ರಕಲೆಯಾಗಿದ್ದು, ಪೋರ್ಚುಗೀಜರು ಇದನ್ನು ಭಾರತಕ್ಕೆ ತಂದು, ಚರ್ಚುಗಳಿಗೆ ಹಸ್ತಾಂತರಿಸಿದರೆಂದೂ ಅನಂತರ ಹಿಂದೂಗಳು ಅದನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದಾರೆಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. ಇದೆಂತಹ ಸಂಶೋಧನೆ! ಪೋರ್ಚುಗೀಜರು ಗೋವಾದ ದೇವಾಲಯಗಳ ಧ್ವಂಸ ಕಾರ್ಯವನ್ನು ಪ್ರಾರಂಭಿಸುವ ಮೊದಲೇ ಅಲ್ಲಿಯ ಸಾರಸ್ವತರ ದೇವಾಲಯಗಳ ಮೇಲೆಲ್ಲ ಈ ಚಿತ್ರಗಳು ನಳನಳಿಸುತ್ತಿದ್ದವು. ಆ ಸಂಶೋಧಕಿ, ದಕ್ಷಿಣ ಕನ್ನಡ ನಾಡಿನ ಕರಾವಳಿಯಲ್ಲೂ ರಾರಾಜಿಸುತ್ತಿದ್ದ ಕಾವಿಚಿತ್ರಗಳನ್ನು ಅಭ್ಯಸಿಸಿದ್ದರೆ, ಇವುಗಳಲ್ಲಿರುವ ಮಣ್ಣಿನ ವಾಸನೆ ಅವಳಿಗೂ ಅರಿವಾಗದೇ ಇರುತ್ತಿರಲಿಲ್ಲ. ಆದರೆ ದುರ್ದೈವದಿಂದ ಅಭಿಮಾನ್ಯಶೂನ್ಯರಾದ ನಾವು ಅವುಗಳನ್ನು ಭರದಿಂದ ನಾಶ ಮಾಡಹತ್ತಿದ್ದೇವೆ. ಸರ್ವನಾಶವಾಗುವ ಮೊದಲೇ ಪುಣ್ಯಾತ್ಮ ಕಲಾಪ್ರೇಮಿಗಳು ಅವನ್ನು ಅಭ್ಯಸಿಸಿ, ಛಾಯಾಚಿತ್ರಗಳಲ್ಲಿ ಸೆರೆ ಹಿಡಿದು, ಗ್ರಂಥರೂಪದಲ್ಲಿ ಅವನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಿಡುವದರಿಂದ ಈ ಕಲೆಗೆ ಗೌರವ ಸಲ್ಲಿಸಬಹುದಾಗಿದೆ.”
ಕಾಮತರೇ ಇಂತಹ ಅನೇಕ ಚಿತ್ರಗಳನ್ನು ಛಾಯಾಚಿತ್ರಗಳಲ್ಲಿ ಸೆರೆ ಹಿಡಿದು ಕಲಾಸಂರಕ್ಷಣೆಯ ಪುಣ್ಯಕಾರ್ಯವನ್ನು ಮಾಡಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.
ಕಾಮತರ ಮುಂದಿನ ಲೇಖನ ಸೀಬಿ ಎನ್ನುವ ಕುಗ್ರಾಮದಲ್ಲಿಯ ನರಸಿಂಹ ದೇವಾಲಯದ ಭಿತ್ತಿಚಿತ್ರಗಳನ್ನು ವರ್ಣಿಸುತ್ತದೆ. ನರಸಿಂಹ ದೇವಾಲಯದ ಒಳಭಾಗದ ರಚನೆ ಹಾಗು ಹೊರಭಾಗದ ರಚನೆಗಳು ಬೇರೆ ಬೇರೆ ಕಾಲದ ನಿರ್ಮಾಣಗಳೆಂದು ಲೇಖಕರು ಊಹಿಸಿದ್ದಾರೆ. ಸೀಬಿಯ ಚಿತ್ರಗಳ ವರ್ಗೀಕರಣವನ್ನು ಈ ರೀತಿಯಾಗಿ ಮಾಡಲಾಗಿದೆ:
(೧) ಸಾಮಾಜಿಕ (೨) ನೈಸರ್ಗಿಕ (೩) ವ್ಯಕ್ತಿಗತ (೪) ಲೈಂಗಿಕ ಹಾಗು (೫) ಚಾರಿತ್ರಿಕ
ಸೀಬಿಯ ದೇವಾಲಯದ ಈ ಎಲ್ಲ ಚಿತ್ರಗಳನ್ನು ಅಭ್ಯಸಿಸಿ, ವಿವಿಧ ಅಂಶಗಳನ್ನು ಗುರುತಿಸಿದ ನಂತರ ಲೇಖಕರು ಈ ತರಹದ ನಿರ್ಣಯಕ್ಕೆ ಬರುತ್ತಾರೆ:
“……ಇಲ್ಲಿಯ ಕಲಾಶೈಲಿಯು ವಿಜಯನಗರ, ಮಹಾರಾಷ್ಟ್ರ ಮತ್ತು ಪಾಶ್ಚಾತ್ಯ ಪ್ರಭಾವಗಳಿಂದ ಬೆಳೆದು ಬಂದದ್ದು ಎಂದು ಪ್ರತಿಯೊಂದು ಚಿತ್ರವನ್ನು ಕೂಲಂಕಷವಾಗಿ ಅಭ್ಯಸಿಸಿದಾಗ ಅರಿವಾಗುವದು. ಬಹುಮಟ್ಟಿಗೆ ಕ್ರಿ.ಶ. ಸುಮಾರು ೧೭೯೦ರ ವೇಳೆಗೆ ಇವುಗಳು ಅಸ್ತಿತ್ವದಲ್ಲಿ ಬಂದವೆಂದು ಹೇಳಬಹುದು.”
ಸಂಕಲನದ ಏಳನೆಯ ಲೇಖನದ ಶೀರ್ಷಿಕೆ: ‘ಮೈಸೂರು ಅರಸರ ಕಾಲದ ಚಿತ್ರಗಳಲ್ಲಿ ಒಳಾಂಗಣ ದೃಶ್ಯಗಳು’ ಎಂದಿದೆ. ಈವರೆಗಿನ ಪಾರಂಪರಿಕ ಚಿತ್ರಕಲೆಗೂ ಮೈಸೂರು ಒಳಾಂಗಣ ಚಿತ್ರಕಲೆಗೂ ಇರುವ ವ್ಯತ್ಯಾಸಗಳನ್ನು ಇಲ್ಲಿ ಗುರುತಿಸಲಾಗಿದೆ. ಅಲ್ಲದೆ ಈ ವ್ಯತ್ಯಾಸದ ಕಾರಣಗಳನ್ನೂ ಇಲ್ಲಿ ನೀಡಲಾಗಿದೆ. ಅವೆಲ್ಲವನ್ನು ಕಾಮತರ ಭಾಷೆಯಲ್ಲಿಯೇ ಓದೋಣ:
“…..ಸಾಂಪ್ರದಾಯಿಕವಾಗಿ ಬಳಸುವ ಕಲ್ಲು ಮತ್ತು ಕಾಡಿಗೆಗಳಿಂದ ತಯಾರಿಸಿದ ವರ್ಣಗಳ ಬದಲಾಗಿ ರಾಸಾಯನಿಕಗಳಿಂದ ಉತ್ಪಾದಿಸಿದ ಪಾಶ್ಚಾತ್ಯ ಬಣ್ಣಗಳನ್ನು ಬಳಸಿದ್ದರಿಂದ ಅವು ಮಳೆ,ಗಾಳಿ,ಬಿಸಿಲುಗಳಿಗೆ ತಮ್ಮತನ ಕಳೆದುಕೊಳ್ಳಲಾರಂಭಿಸಿದವು. ಇದನ್ನು ದಕ್ಷಿಣದ ಪ್ರವಾಸದ ಹೊತ್ತಿಗೆ ಕಂಡುಕೊಂಡ ಗವರ್ನರ ಜನರಲ್ ಡಾಲಹೌಸಿಯು, ಅವುಗಳ ನವೀಕರಣಕ್ಕೆ ಶಿಫಾರಸು ಮಾಡಿದ್ದ……….ಇಂದಿನ ಛಾಯಾಚಿತ್ರಕಾರರು ಕಲಾಕಾರರಾಗಲು ಯತ್ನಿಸಿದರೆ, ಅಂದಿನ ಚಿತ್ರಕಾರರು ಛಾಯಾಚಿತ್ರಗಾರರಾಗಲು ಯತ್ನಿಸಿದ್ದಾರೆ!”
ಮೈಸೂರು ಅರಮನೆಯ ಒಳಾಂಗಣ ಚಿತ್ರಗಳ ವಿವರಗಳನ್ನು ಅಂದರೆ ಆ ಕಾಲದ ವೇಷಭೂಷಣಗಳನ್ನು, ಅಧಿಕಾರಿಗಳನ್ನು-ಸೇವಕರನ್ನು, ಸಂಗೀತ ಉಪಕರಣಗಳನ್ನು ಕಾಮತರು ವಿವರವಾಗಿ ವರ್ಣಿಸಿದ್ದಾರೆ. ಅದರಂತೆ ಶ್ರವಣಬೆಳಗೊಳದ ಜೈನ ಮಠದ, ಮೈಸೂರಿನ ಪರಕಾಲ ಮಠದ ರಸ್ತೆಯಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯದ, ಮೈಸೂರಿನ ಅರಮನೆಯ ಆವಾರದಲ್ಲಿರುವ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯದ ಒಳಾಂಗಣ ಚಿತ್ರಗಳನ್ನು ಕಾಮತರು ವಿವರಿಸಿದ್ದಾರೆ. ಈ ಚಿತ್ರಗಳು ನಶಿಸಿ ಹೋಗುತ್ತಿರುವದನ್ನು ಗಮನಿಸಿದ ಕಾಮತರು ಎಚ್ಚರಿಕೆಯನ್ನೂ ನೀಡಿದ್ದಾರೆ:
“ಕರ್ನಾಟಕದಲ್ಲಿ ಶತಕಗಳ ಹಿಂದೆ ವಿರಚಿತವಾಗಿ ಅಳಿದುಳಿದ ಚಿತ್ರಗಳನ್ನೇ ಅಭ್ಯಸಿಸಿ ಗ್ರಂಥರೂಪದಲ್ಲಿ ಪ್ರಕಟಿಸದೇ ಇರುವದು ಅತ್ಯಂತ ಶೋಚನೀಯ. ಅವು ಸಂಪೂರ್ಣ ನಶಿಸಿ ಹೋಗುವ ಮೊದಲು ಈ ಕಾರ್ಯವಾಗಲೇಬೇಕು.”
“ಕರ್ನಾಟಕದ ಚಿಕಣಿ ಚಿತ್ರಗಳು” ಇದು ಈ ಸಂಕಲನದ ಎಂಟನೆಯ ಲೇಖನ. ಉತ್ತರ ಭಾರತದಲ್ಲಿ ಈ ಚಿತ್ರಕಲೆಯನ್ನು ಪ್ರಾರಂಭಿಸಿದವರು ರಜಪೂತರು. ಕರ್ನಾಟಕದಲ್ಲಿ ಅತಿ ಪುರಾತನ ಚಿಕಣಿ ಚಿತ್ರಗಳೆಂದರೆ ಮೂಡಬಿದಿರೆಯ ಜೈನ ಮಠದಲ್ಲಿರುವ ತಾಳೆಗರಿ ಗ್ರಂಥಗಳಲ್ಲಿರುವ ಚಿಕಣಿ ಚಿತ್ರಗಳು. (ಕ್ರಿ.ಶ.೧೧೨೦-೧೧೪೩). ಅದರಂತೆ ವಿಜಾಪುರದ ಸುಲ್ತಾನರ ಗ್ರಂಥಗಳಲ್ಲಿಯೂ ಚಿಕಣಿ ಚಿತ್ರಗಳಿದ್ದು, ಈ ಚಿತ್ರಗಳಲ್ಲಿ ಇರಾನದ ವರ್ಚಸ್ಸು ಕಾಣುತ್ತದೆ ಎನ್ನುವದು ಲೇಖಕರ ಅಭಿಪ್ರಾಯವಾಗಿದೆ.
ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರರು ಅಧಿಕಾರಕ್ಕೆ ಬಂದಬಳಿಕ ಸಾಂಪ್ರದಾಯಕ ಸಚಿತ್ರ ಗ್ರಂಥಗಳಿಗೆ ಪ್ರೋತ್ಸಾಹ ದೊರೆಯಿತು. ಅವರ ಕಾಲದಲ್ಲಿ ರಚಿತವಾದ ‘ತತ್ವನಿಧಿ’ ಎನ್ನುವ ಗ್ರಂಥದಲ್ಲಿ ೨೨೭೫ ಚಿಕಣಿ ಚಿತ್ರಗಳನ್ನು ಬರೆಯಲಾಗಿದೆಯಂತೆ! ಈ ಕೃತಿಯಲ್ಲಿಯ ‘ಗೃಹನಿಧಿ’ ಎನ್ನುವ ಭಾಗದಲ್ಲಿ ಹಕ್ಕಿಗಳಿಂದ ಹಿಡಿದು ಕೀಟಗಳವರೆಗೆ ಸಕಲ ಪ್ರಾಣಿಗಳನ್ನು ಚಿತ್ರಿಸಲಾಗಿದೆ.
ಕಾಮತರು ಈ ಚಿತ್ರಕೋಶವನ್ನು ದೊರಕಿಸಲು ಪ್ರಯತ್ನಪಟ್ಟು ವಿಫಲರಾದ ಕತೆಯನ್ನು ಅವರ ಮಾತಿನಲ್ಲಿಯೇ ಕೇಳಿರಿ:
“ ಈ ಚಿತ್ರಕೋಶವೂ ಮೈಸೂರಿನ ಒರಿಯಂಟಲ್ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರದಲ್ಲಿದ್ದು ಅದರ ಪ್ರಕಾಶನಕ್ಕೆ ಧನಸಹಾಯದ ಕೊರತೆಯ ಜೊತೆಗೆ ಗ್ರಂಥದ ಸ್ವಾಮಿತ್ವ ಯಾರಿಗೆ ಸೇರಿದ್ದು? ಎಂದು ನಿರ್ಧರಿಸಲಾರದೇ, ಕಲಾಪ್ರೇಮಿಗಳಿಗೆ ನಿಲುಕದೇ ಮೂಲೆಗುಂಪಾಗಿದೆ. ಅದನ್ನು ವೀಕ್ಷಿಸಲು ಕಷ್ಟಪಟ್ಟು ಅಪ್ಪಣೆ ಪಡೆದಾಗ ಕೆಲವೇ ಪುಟಗಳ ಮೇಲೆ ಕೆಲನಿಮಿಷ ಕಣ್ಣು ಓಡಿಸಲು ಮಾತ್ರ ಅನುವು ಮಾಡಿಕೊಟ್ಟರು. ಇದರ ಇನ್ನೊಂದು ಪ್ರತಿ ಮೈಸೂರಿನ ಯುವರಾಜ ಶ್ರೀಕಂಠದತ್ತ ಒಡೆಯರ ಒಡೆತನದಲ್ಲಿದೆ ಎಂದು ಅರಿತು,ಅವರಿಂದ ಮುಂಚಿತವಾಗಿ ಅನುಮತಿ ಪಡೆದೇ ಅರಮನೆಗೆ ಹೋದರೆ ಕೀಲಿಕೈಗಳಿಲ್ಲ ಎಂಬ ಕುಂಟ ನೆಪ ಮಾಡಿ ನುಣುಚಿಕೊಂಡರು…..”
ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ಇನ್ನಿತರ ಕೃತಿಗಳಾದ ‘ಸೌಗಂಧಿಕಾ ಪರಿಣಯ’ ‘ವೃಷಭೇಂದ್ರ ವಿಜಯ, ಹಾಗು ‘ಬಸವ ಪುರಾಣ’ ಈ ಕೃತಿಗಳ ಹಾಗೂ ಅವುಗಳಲ್ಲಿರುವ ಚಿತ್ರಗಳ ಪರಿಚಯವನ್ನೂ ಕಾಮತರು ಈ ಲೇಖನದಲ್ಲಿ ಮಾಡಿದ್ದಾರೆ. ಇದರಂತೆ ಅನೇಕ ಧಾರ್ಮಿಕ ವ್ಯಕ್ತಿಗಳ, ಉಚ್ಚ ಅಧಿಕಾರಿಗಳ ಹಾಗು ಮೈಸೂರು ಮಹಾರಾಜರ ಭಾವಚಿತ್ರಗಳ ಬಗೆಗೆ ಕಾಮತರು ವಿವರ ನೀಡಿದ್ದಾರೆ. ‘ಸೌಗಂಧಿಕಾ ಪರಿಣಯ’ದ ೧೦೪೩ನೆಯ ಪರಿಚ್ಛೇದದಿಂದ ೧೦೭೨ನೆಯ ಪರಿಚ್ಛೇದದವರೆಗೆ ಸಸ್ಯಶಾಸ್ತ್ರದ ಸಚಿತ್ರ ವಿವರಣೆಯಿರುವದಾಗಿ ಕಾಮತರು ತಿಳಿಸಿದ್ದಾರೆ. ಈ ವಿವರಣೆಗಳಲ್ಲಿ ತಿಳಿಸಲಾದ ಸಾಂಪ್ರದಾಯಿಕ ನಂಬಿಕೆಗಳಲ್ಲಿ ಗಟ್ಟಿ ಅಂಶವೆಷ್ಟು, ಟೊಳ್ಳೆಷ್ಟು ಎನ್ನುವದನ್ನು ನಮ್ಮ ಕೃಷಿಸಂಸ್ಥೆಗಳು ಹಾಗು ವಿಶ್ವವಿದ್ಯಾಲಯಗಳು ಸಂಶೋಧಿಸಬೇಕೆಂದು ಕಾಮತರು ಅಭಿಪ್ರಾಯ ಪಡುತ್ತಾರೆ.
ಚಿಕಣಿ ಚಿತ್ರಗಳಲ್ಲಿ ಮುಖ್ಯವಾದವುಗಳು ರಾಗಮಾಲಾ ಚಿತ್ರಗಳು. ಬಿಜಾಪುರದ ಸುಲ್ತಾನನಾದ ಇಬ್ರಾಹಿಮ್ ಆದಿಲ್ ಶಹಾ ರಚಿಸಿದ ‘ಕಿತಾಬ್-ಏ-ನೌರಸ್’ದಲ್ಲಿರುವ ೯ ರಾಗ-ರಾಗಿಣಿಯರ ಚಿತ್ರಗಳ ವಿವರಗಳನ್ನು ಹಾಗು ‘ಶ್ರೀ ತತ್ವನಿಧಿ’ ಯಲ್ಲಿರುವ ೩೬ ರಾಗ-ರಾಗಿಣಿಯರ ಚಿತ್ರಗಳ ವಿವರಗಳನ್ನು ಕಾಮತರು ನೀಡಿದ್ದಾರೆ.
ಎರಡನೆಯ ಭಾಗವು ಮಲೆನಾಡಿನ ವಿಸ್ತೃತವಾದ ಪರಿಚಯಕ್ಕೆ ಮೀಸಲಾಗಿದೆ. ಈ ಭಾಗದಲ್ಲಿ ಲೇಖಕರು ಮಲೆನಾಡಿನ ಪ್ರಾಕೃತಿಕ ಸಂಪತ್ತಿನ ವಿವರಣೆ ನೀಡಿದ್ದಾರೆ. ಇಲ್ಲಿಯ ಘಟ್ಟಪ್ರದೇಶ, ನದಿಗಳು, ಅವುಗಳ ದ್ವೀಪಗಳು ಇವೆಲ್ಲವುಗಳ ವರ್ಣನೆ ಇಲ್ಲಿದೆ. ಹಾಗೆಂದು ಇದು ಬರಿ ಭೌಗೋಲಿಕ ವರ್ಣನೆ ಅಲ್ಲ! ಇದು ಪಶ್ಚಿಮ ಘಟ್ಟಗಳ ಅವಸಾನದ ಇತಿಹಾಸವೂ ಹೌದು. ಕಾಮತರು ತಾವು ಚಿಕ್ಕವರಿದ್ದಾಗ ಇಲ್ಲಿ ಇದ್ದಂತಹ ಪುಷ್ಟ ಪರಿಸರ ಹಾಗೂ ಈಗಿನ ನಷ್ಟಪರಿಸರವನ್ನು ಮರುಕದಿಂದ ವರ್ಣಿಸಿದ್ದಾರೆ. ಅದು ಈಗ ನಷ್ಟವಾಗುತ್ತಿರುವ ಬಗೆಯನ್ನೂ ವಿವರಿಸಿದ್ದಾರೆ. ಕೇವಲ ನಿಸರ್ಗವರ್ಣನೆಯಿಂದ ತೃಪ್ತರಾಗದ ಕಾಮತರು ಇಲ್ಲಿ ವಾಸಿಸುತ್ತಿರುವ ವಿವಿಧ ಜನಸಮೂಹಗಳ ವರ್ಣನೆಯನ್ನೂ ಮಾಡಿದ್ದಾರೆ. ಈ ಸಮುದಾಯಗಳ ವೈಶಿಷ್ಟ್ಯಗಳನ್ನೂ ವಿವರಿಸಿದ್ದಾರೆ.
ಈ ಭಾಗದ ಒಂದು ಲೇಖನವು ‘ಅಂಜದೀವ್’ ನಡುಗಡ್ಡೆಗೆ ಮೀಸಲಾಗಿದೆ. ಕಾಮತರ ಮೊದಲ ಕುತೂಹಲವೆಂದರೆ ಈ ನಡುಗಡ್ಡೆಗೆ ಅಂಜದೀವ್ ಎನ್ನುವ ಹೆಸರು ಹೇಗೆ ಬಂದಿತು ಎನ್ನುವದು. ಅವರ ಪ್ರಶ್ನೆ ಹೀಗಿದೆ:
“ಉತ್ತರ ಕನ್ನಡ ಜಿಲ್ಲೆಯ ಕರಾವಳಿಗುಂಟ ಇರುವ ಹಲವಾರು ದ್ವೀಪಗಳಿಗೆ ಸ್ಥಾನೀಯರು ‘ಕುರ್ವೆ’(ಮಾವಿನಕುರ್ವೆ, ಮಲ್ಲಿಕುರ್ವೆ, ಕುರುಕುರ್ವೆ, ಪಾವಿನಕುರ್ವೆ)ಗಳೆಂದು ಗುರುತಿಸುವದು ವಾಡಿಕೆ. ಅವುಗಳ ಮೇಲೆ ಕೋಟೆಯಿದ್ದರೆ “ದುರ್ಗ”ವೆಂದು ಕರೆಯುವರು. (ಬಸವರಾಜದುರ್ಗ). ಛತ್ರಪತಿ ಶಿವಾಜಿಯ ವರ್ಚಸ್ಸಿಗೆ ಒಳಗಾದ ಕಾರವಾರದ ತೀರದಲ್ಲಿಯ ಜಲದುರ್ಗಗಳಿಗೆ ‘ಗಡ’ ಎಂಬ ಪ್ರತ್ಯಯ ಜೋಡಿಸುವದು ಪರಿಪಾಠ. ದೇವಗಡ, ಕೂರ್ಮಗಡ, ಮಧುಲಿಂಗಗಡ ಮುಂತಾದವು ಈ ಗುಂಪಿಗೆ ಸೇರಿದವು. ಇವುಗಳ ಜೊತೆಯಲ್ಲೇ ಇದ್ದ ಈ ನಡುಗಡ್ಡೆಗೆ ‘ಅಂಜದೀವ್’ ಎಂಬ ವಿಶಿಷ್ಟ ಹೆಸರು ಯಾಕೆ? ಎಂಬ ಕುತೂಹಲ ಕೆರಳಿತು.”
ಈ ಕುತೂಹಲದ ಬೆನ್ನತ್ತಿ ಹೋದ ಕಾಮತರು ಅಂಜದೀವದ ಇತಿಹಾಸವನ್ನೆಲ್ಲ ಶೋಧಿಸಿದ್ದಾರೆ.
ಆರ್ಯದೇವಿಯ ಸ್ಮರಣಾರ್ಥವಾಗಿ ‘ಆರ್ಯದ್ವೀಪ’ವೆಂದು ಕರೆಯಲಾಗುತ್ತಿದ್ದ ಈ ನಡುಗಡ್ಡೆ ವಿದೇಶಿ ನಾವಿಕರ ಬಾಯಲ್ಲಿ ಅಂಜನಿದ್ವೀಪ ಎಂತಲೂ, ಅನಂತರದ ಮಾಪಿಳ್ಳೆ ನಿವಾಸಿಗಳು ಇದನ್ನು ಅಂಜಿದೀವಾ ಎಂದು ಕರೆದರೆಂದೂ ಕಾಮತರು ಟ್ರೇಸ್ ಮಾಡುತ್ತಾರೆ. ಪೋರ್ತುಗೀಜರು ಇಲ್ಲಿ ನೆಲೆ ಊರಿದಾಗ ಈ ಅಂಜಿದೀವಾವನ್ನು ಅಂಜದೀವ್ ಎಂದು ಮಾರ್ಪಡಿಸಿದರೆಂದು ಕಾಮತರು ವಿವರಿಸುತ್ತಾರೆ.
ಕೊನೆಯ ಭಾಗದಲ್ಲಿ ಕಾಮತರು ಪ್ರಗತಿ ಎನ್ನುವ ಮಾಯಾಮೃಗವು ನಿಸರ್ಗಸಂಪತ್ತಿನ ಮಲೆನಾಡನ್ನು ಹೇಗೆ ಬೋಳು ಮಾಡಿದೆ ಎಂದು ವಿಷಾದದಿಂದ ವಿವರಿಸಿದ್ದಾರೆ.
ಕಾಮತರು ಈ ಕೃತಿಯಲ್ಲಿ ಪ್ರಾಚೀನ ಕರ್ನಾಟಕದ ಕಲಾಪ್ರಪಂಚವನ್ನು, ಜನಜೀವನವನ್ನು ಹಾಗೂ ಆಧುನಿಕ ಕಾಲದ ಪರಿಸರ ನಾಶವನ್ನು ಒಬ್ಬ ಕಲಾರಸಿಕನಂತೆ, ಒಬ್ಬ ಸೌಹಾರ್ದ ಸ್ನೇಹಿತನಂತೆ ಆತ್ಮೀಯವಾಗಿ ವಿವರಿಸಿದ್ದಾರೆ. ಆದರೆ ಕೃತಿಯುದ್ದಕ್ಕೂ ಕಂಡು ಬರುವ ಅವರ ಐತಿಹಾಸಿಕ ಜ್ಞಾನ, ಕಲೆಯ ತಿಳುವಳಿಕೆ, ವಿವಿಧ ವಿಷಯಗಳ ಪಾಂಡಿತ್ಯ ,ಕೊನೆಯರಿಯದ ಪರಿಶ್ರಮ ಹಾಗು ಕಲಾರಕ್ಷಣೆಯ ಕಳಕಳಿ ಇವು ಅಚ್ಚರಿಗೊಳಿಸುವಂತಿವೆ.
ಕಾಮತರ ಬಿಡಿ ಲೇಖನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಸಂಕಲಿಸಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲಕ್ಕೆ ಪ್ರಕಟಣೆಗಾಗಿ ನೀಡಿದವರು ಶ್ರೀಮತಿ ಜ್ಯೋತ್ಸ್ನಾ ಕಾಮತ. ಇಂತಹ ಒಂದು ಸ್ವಾರಸ್ಯಕರ ಕೃತಿಯನ್ನು ಕನ್ನಡಿಗರಿಗೆ ನೀಡಿದ್ದಕ್ಕಾಗಿ ಅವರಿಗೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ.

Subscribe to:
Posts (Atom)