ವಸುಧೇಂದ್ರರು ತಮ್ಮ ಸಣ್ಣ ಕತೆಗಳ ಮೂಲಕ ಈಗಾಗಲೇ ಕನ್ನಡ ಓದುಗರಿಗೆ ಸುಪ್ರಿಯರಾಗಿದ್ದಾರೆ. “ಹರಿಚಿತ್ತ ಸತ್ಯ” ಇದು ವಸುಧೇಂದ್ರರ ಮೊದಲ ಕಾದಂಬರಿ ; ‘ದೇಶ ಕಾಲ ವಿಶೇಷ ’ (೨೦೧೦) ಸಂಚಿಕೆಯಲ್ಲಿ ಇದು ಪ್ರಕಟವಾಗಿದೆ.
ಸಣ್ಣ ಕತೆಗಳ ರಚನಾ ವಿಧಾನಕ್ಕೂ, ಕಾದಂಬರಿಯ ರಚನಾವಿಧಾನಕ್ಕೂ ತುಂಬ ಅಂತರವಿದೆ. ಸಣ್ಣ ಕತೆಗಳಲ್ಲಿ ಕಥಾನಕದ ಬೆಳವಣಿಗೆ ಕ್ಷಿಪ್ರವಾದದ್ದು. ಕಾದಂಬರಿಯಲ್ಲಿ ಸಂಯಮದ ಹಾಗು ತಾಳ್ಮೆಯ ಬರವಣಿಗೆಯ ಅಗತ್ಯವಿದೆ. ಸಣ್ಣ ಕತೆಗಳು ಸಂಕೀರ್ಣವಾಗಿರುವದು ವಿರಳ. ಹೀಗಾಗಿ ಸಣ್ಣ ಕತೆಗಳಲ್ಲಿ focus ನಿರ್ಮಿಸುವದು ಸುಲಭ. ಆದರೆ ಕಾದಂಬರಿಗಳ ವಿಸ್ತಾರ ಹಾಗು ಸಂಕೀರ್ಣತೆಯನ್ನು ಗಮನಿಸಿದಾಗ, ಕಾದಂಬರಿಗೊಂದು focus ನಿರ್ಮಿಸುವದು ಹಾಗು ಬೆಳವಣಿಗೆಯಲ್ಲಿ ಸಮತೋಲನ ಕಾಯ್ದುಕೊಂಡು ಹೋಗುವದು ಕಷ್ಟದ ಕೆಲಸ. ಸಣ್ಣ ಕತೆಗಳ ರಚನೆಯಲ್ಲಿ ಪರಿಣತರಾದ ವಸುಧೇಂದ್ರರು ತಮ್ಮ ಮೊದಲ ಕಾದಂಬರಿಯ ರಚನೆಯಲ್ಲಿ ಯಶಸ್ವಿಯಾಗಿದ್ದಾರೆಯೆ?
“ಹರಿಚಿತ್ತ ಸತ್ಯ” ಕಾದಂಬರಿಯಲ್ಲಿ ಎರಡು ಸಮಾಂತರ ಕತೆಗಳಿವೆ. ಪ್ರವಾಹದಲ್ಲಿ ಸಿಲುಕಿದ ಕಟ್ಟಿಗೆಯ ಎರಡು ತುಂಡುಗಳು ಒಂದನ್ನೊಂದು ತಾಕುವ ಹಾಗು ಬೇರೆಯಾಗುವ ತರಹದಲ್ಲಿ ಈ ಎರಡೂ ಕತೆಗಳಲ್ಲಿಯ ಪಾತ್ರಧಾರಿಗಳ ವಿಯೋಗ, ಸಂಯೋಗವಿದೆ. ಆದರೆ ವಸುಧೇಂದ್ರರಿಗೆ ಕಥಾನಕವೇ ಮುಖ್ಯವಲ್ಲ. ತಮ್ಮ ಕೃತಿಗಳ ಮೂಲಕ ವಸುಧೇಂದ್ರರು ಅನೇಕ ವಿಷಯಗಳನ್ನು ಓದುಗರ ಕಣ್ಣೆದುರಿಗೆ ತರುತ್ತಾರೆ.
ಒಂದು ಸಂಪ್ರದಾಯನಿಷ್ಠ ಸಮಾಜದ ವಿವರಗಳು, ಆ ಸಮಾಜದ ಕಠಿಣವಾದ ಚೌಕಟ್ಟಿನಲ್ಲಿ ಬದುಕಬೇಕಾದ ಜೀವಿಗಳ ತೊಳಲಾಟ, ಆ ಮೂಲಕ ಅವರು ರೂಪಿಸಿಕೊಂಡ ವ್ಯಕ್ತಿತ್ವ ಹಾಗು ಸಮಾಜದ ಸಡಿಲಾಗುತ್ತಿರುವ ನಿಯಮಗಳು ಇವೆಲ್ಲವನ್ನು ಓದುಗರಿಗೆ ತಲುಪಿಸುವದು ವಸುಧೇಂದ್ರರ ಮುಖ್ಯ ಆಸಕ್ತಿಯಾಗಿದೆ.
“ಹರಿಚಿತ್ತ ಸತ್ಯ” ಕಾದಂಬರಿಯ ನಾಯಕ ಮತ್ತು ನಾಯಕಿ ಯಾರು? ಔಪಚಾರಿಕ ನಾಯಕ ಮತ್ತು ನಾಯಕಿ ಅಲ್ಲದೆ, ಈ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳೂ ಇಲ್ಲಿ ಅಷ್ಟೇ ಮಹತ್ವದ್ದಾಗಿವೆ. ಇವರನ್ನು ಬಂಧಿಸಿರುವ ವ್ಯವಸ್ಥೆಯೂ ಇಲ್ಲಿ ನಿರ್ಣಾಯಕ ಪಾತ್ರ ವಹಿಸುವದರಿಂದ, ಈ ವ್ಯವಸ್ಥೆಯನ್ನೂ ನಾಯಕ ಎನ್ನಬಹುದು. ಆದರೆ ಈ ಕಾದಂಬರಿಯ ನಿಜವಾದ ನಾಯಕನೆಂದರೆ ‘ವಿಧಿ’! ಅಂತಲೇ “ಹರಿಚಿತ್ತ ಸತ್ಯ” ಎನ್ನುವ ಹೆಸರು ಈ ಕಾದಂಬರಿಗೆ ಯಥಾರ್ಥವಾಗಿದೆ.
ವಸುಧೇಂದ್ರರ “ಹರಿಚಿತ್ತ ಸತ್ಯ” ಕಾದಂಬರಿಯ ಅವಲೋಕನಕ್ಕೂ ಮೊದಲಿಗೆ, ಕನ್ನಡ ಕಾದಂಬರಿಕಾರರು ತಮ್ಮ ಕಾದಂಬರಿಗಳ ರಚನೆಯಲ್ಲಿ ಬಳಸುವ ಕೆಲವು ವಿಧಾನಗಳನ್ನು ಗಮನಿಸೋಣ. ಕನ್ನಡದ ಮೊದಲ ಕಾದಂಬರಿಗಳಲ್ಲಿ ಲೇಖಕನ ನೇರ ಕಥನವಿರುತ್ತಿತ್ತು. ಅನಕೃ, ತರಾಸು, ಕಾರಂತ, ಮಾಸ್ತಿ,ಕುವೆಂಪು ಮೊದಲಾದವರು ಈ ವಿಧಾನವನ್ನು ಬಳಸಿದ ಲೇಖಕರು. ಶ್ರೀರಂಗರು ತಮ್ಮ ಕಾದಂಬರಿಗಳ ರಚನೆಗೆ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿದ್ದಾರೆ. ನಾಯಕಿಯ first person ಕಥನ ಹಾಗು ಪೋಷಕ ಪಾತ್ರದ first person ಕಥನವನ್ನು ತ್ರಿವೇಣಿಯವರು ತಮ್ಮ “ಮೊದಲ ಹೆಜ್ಜೆ” ಕಾದಂಬರಿಯಲ್ಲಿ ಬಳಸಿದ್ದಾರೆ. ಈ ವಿಧಾನ ಬಳಸಿದವರಲ್ಲಿ ಬಹುಶ: ತ್ರಿವೇಣಿಯವರೇ ಮೊದಲಿಗರಿರಬಹುದು. ಕಣ್ಣಿಗೆ ಕಾಣುವ ಸತ್ಯವನ್ನು ಕಣ್ಣಿಗೆ ಕಾಣುವಂತೆ ಹೇಳಲು ಮುಜುಗರ ಪಟ್ಟ ದೇವನೂರು ಮಹಾದೇವರು “ಕುಸುಮ ಬಾಲೆ”ಗೆ ಆಡುನುಡಿಯ ಮುಸುಕನ್ನು ಹಾಕಿದರು ಹಾಗು mystic realism ವಿಧಾನ ಬಳಸಿದರು. ಇದೇ ಉದ್ದೇಶದಿಂದ ಕುಂ.ವೀರಭದ್ರಪ್ಪನವರು ತಮ್ಮ “ಅರಮನೆ” ಕಾದಂಬರಿಗೆ ಪೌರಾಣಿಕ ಆಕೃತಿ ಬಳಸಲು ಹೋಗಿ ಸೋತುಬಿಟ್ಟರು. ಇವಲ್ಲದೆ flash back, ಪ್ರಯತ್ನಪೂರ್ವಕ ಸರಳತೆ ಅಥವಾ ಸಂಕೀರ್ಣತೆ ಇವೆಲ್ಲ ಕಾದಂಬರಿಯ ರಚನಾವಿಧಾನಗಳು. ವಸುಧೇಂದ್ರರ ಕಾದಂಬರಿಯ ರಚನಾವಿಧಾನ ಎಂತಹದು?
ವಸುಧೇಂದ್ರರು ತಮ್ಮ ಕಾದಂಬರಿಯ ನೆಯ್ಗೆಯಲ್ಲಿ ವಿನೋದ ಹಾಗೂ ಮರುಕ ಇವುಗಳನ್ನು ಹಾಸು ಮತ್ತು ಹೊಕ್ಕುಗಳಂತೆ ಬಳಸಿಕೊಳ್ಳುತ್ತಾರೆ. ಇಡೀ ಕಾದಂಬರಿಯಲ್ಲಿ ಹೆಜ್ಜೆ ಹೆಜ್ಜೆಗೂ ತೆಳು ವಿನೋದವು ಹೊಮ್ಮುತ್ತಿದೆ. ಕೆಲವೊಂದು ಸಂದರ್ಭಗಳಂತೂ ತುಂಬ delightful ಮತ್ತು hilarious ಆಗಿವೆ. ಅಲ್ಲದೆ ಈ ನೆಯ್ಗೆಯ ಮೇಲೆ caricatureದ ಕಸೂತಿ ಬೇರೆ. ಆದರೆ ಓದುಗನನ್ನು ನಗಿಸುವದಷ್ಟೇ ಈ ವಿನೋದದ ಸೀಮಿತ ಉದ್ದೇಶವಲ್ಲ. ಇಲ್ಲಿರುವ caricature ಸಮಾಜವನ್ನು target ಮಾಡಿದ ವ್ಯಂಗ್ಯವೇ ಹೊರತು ಪಾತ್ರಗಳ ಅವಹೇಳನವಲ್ಲ.
ವಿನೋದ ಅಥವಾ ಹಾಸ್ಯವನ್ನು ಬಳಸಿ ಮರುಕವನ್ನು ಸೃಷ್ಟಿಸಿದ ಪೂರ್ವಸೂರಿಗಳು ಕನ್ನಡ ಸಾಹಿತ್ಯದಲ್ಲಿ ಈ ಮೊದಲೂ ಇದ್ದರು. ಬೀchiಯವರು ಈ ಮಾತಿಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. (ಬೀchiಯವರು ಸಹ ಬಳ್ಳಾರಿಯವರೇ ಆಗಿದ್ದದು ಕಾಕತಾಳೀಯವೆ?) ಆದರೆ ಬೀchiಯವರ ಹಾಸ್ಯ ಸ್ವಲ್ಪ ಕಟುತರವಾದದ್ದು. ವಸುಧೇಂದ್ರರ ವಿನೋದ ಎಳೆ ಮಗುವಿನ ನಗೆಯಂತಹದು. ಅವರ ವಿನೋದದ ಕೆಲವು sampleಗಳನ್ನು ಇಲ್ಲಿ ನೋಡಬಹುದು:
ವಿಧವೆ ರಂಗಮ್ಮ ತನ್ನ ಮಗಳು ಪದ್ಮಾವತಿಯನ್ನು ಕನ್ಯಾಪರೀಕ್ಷೆಗೆಂದು ಕರೆದುಕೊಂಡು ಹೊರಟಿದ್ದಾಳೆ. ಕಾಡು ಜಾಗದ ನಡುವೆ ಬಸ್ಸು ಕೆಟ್ಟು ನಿಲ್ಲುತ್ತದೆ. ಪ್ರಯಾಣಿಕರೆಲ್ಲ ಕೆಳಗಿಳಿದ ಮೇಲೆ ಗಂಡಸರೆಲ್ಲ ಮೂತ್ರವಿಸರ್ಜನೆಗೆ ರಸ್ತೆ ಬದಿಗೆ ಸಾಗುತ್ತಾರೆ. ಆಗ ರಂಗಮ್ಮ ಮಾಡುವ ಟೀಕೆಯನ್ನು ಕೇಳಿ:
[“ಈ ದರಿದ್ರ ಬಿಸಿಲಿಗೆ ಸ್ನಾನ ಮಾಡೋ ಹಂಗೆ ಬೆವರು ಇಳೀತಾ ಅದೆ. ಈ ರಂಡೇಗಂಡರಿಗೆ ಅದೆಲ್ಲಿಂದ ಉಚ್ಚಿಗೆ ಅವಸರ ಆಗಿದ್ದೀತು ಹೇಳೆ ಪದ್ದಿ? ನೆಪ ಸಿಕ್ಕರೆ ಸಾಕು, ಬಿಚ್ಚಿ ನಿಂತುಗೊಳ್ಳೋ ಚಟ ನೋಡು ಇವಕ್ಕೆ.” ]
ಈ ವಿಧವೆಗೆ ಜೊತೆಗಾರರಾಗಿ ಹೊರಟ ದಂಪತಿಗಳು ಸುಭದ್ರಮ್ಮ ಹಾಗು ಶ್ರೀಪತಿ. ಬಸ್ಸು ಕೆಟ್ಟು ನಿಂತದ್ದು ರಂಗಮ್ಮನಿಗೆ ಆತಂಕದ ವಿಷಯವಾದರೆ, ರಂಗಮ್ಮನ ಆತಂಕವು ಇತರರಿಗೆ ನಗೆಚಾಟಿಕೆಯ ವಿಷಯವಾಗುತ್ತದೆ. ರಂಗಮ್ಮನ ಜೊತೆಗಾರ ಶ್ರೀಪತಿಯಂತೂ ಈ ಕಾಡಿನಲ್ಲಿ ಹನುಮಂತನ ಗುಡಿಯನ್ನು ಹುಡುಕುತ್ತ ಹೊರಟು ಬಿಟ್ಟಿದ್ದಾನೆ. ’ಕಂಡ ಕಂಡ ದೇವರಿಗೆ ಕೈ ಮುಗಿಯುವ ಶ್ರೀಪತಿ’ ಎನ್ನುವ ಅವನ ಖ್ಯಾತಿ ವರನ ಊರಿಗೂ ಸಹ ತಲುಪಿ ಬಿಟ್ಟಿದೆ. ಕನ್ಯಾಪರೀಕ್ಷೆಯ ಘಟನೆಯಂತೂ ವಿನೋದೋಲ್ಲಾಸದ ಪರಮಶಿಖರವನ್ನು ಮುಟ್ಟಿದೆ. ಆದರೆ…! ಅಲ್ಲಿಯೂ ಸಹ ಈ ಸಮಾಜದ ರಿವಾಜುಗಳನ್ನು ವಿಮರ್ಶೆಯ ಕಣ್ಣಿನಿಂದ ನೋಡುವದೇ ಮುಖ್ಯ ಉದ್ದೇಶವಾಗಿದೆ. ಈ ಉದಾಹರಣೆ ನೋಡಿ:
[ಸಾಲಿನ ಕೊನೆಯಲ್ಲಿದ್ದ ಪೂಜೆ ಮಾಡುತ್ತಿರುವ ಮಹನೀಯರ ಫೋಟೋಕ್ಕೆ ಭಕ್ತಿಯಿಂದ ಕೈಮುಗಿದ ಶ್ರೀಪತಿ ‘ಇವರು ಯಾವ ಮಠದ ಸ್ವಾಮಿಗಳು?’ ಎಂದು ಕೇಳಿದ. ಅತ್ಯಂತ ಸಾವಧಾನದ ದನಿಯಲ್ಲಿ ರಾಮರಾಯರು ‘ಅವರು ನಮ್ಮಪ್ಪ. ಮೂರು ಸಲ ಮದುವಿ ಆಗಿದ್ದರು. ಎಲ್ಲಾ ಸೇರಿ ಹತ್ತು ಮಕ್ಕಳು. ನಾನು ಕಡಿಯಾಕಿ ಮಗ’ ಎಂದರು.]
ಕಥಾನಾಯಕ ರಾಘವೇಂದ್ರನ ಹಸುಗೂಸು ಸರಿರಾತ್ರಿಯಲ್ಲಿ ಎಚ್ಚರಾಗಿ ಅಳುತ್ತಿದೆ. ಅದನ್ನು ಸಮಾಧಾನಪಡಿಸಲು ಆತ ಸಂಡೂರಿನ ಓಣಿ ಓಣಿಗಳಲ್ಲಿ ಠಿಕಾಣಿ ಹೂಡಿರುವ ಹಂದಿಗಳನ್ನು ಹಾಗು ನಾಯಿಗಳನ್ನು ತೋರಿಸಲು ಹೋಗುತ್ತಾನೆ! ಅವನ ಶೈಲಿಯನ್ನಷ್ಟು ನೋಡಿರಿ:
[“ಅಗೋ ಅಲ್ಲಿ ದೊಡ್ಡ ಹಂದಿ ಅದೆ ನೋಡು. ಎಷ್ಟು ಮಕ್ಕಳವಮ್ಮಾ ಹಂದೀಗೆ? ಒಂದು,ಎರಡು, ಮೂರು…..
ಅಬ್ಬಬ್ಬಾ, ಏಳು ಪುಟ್ಟಮ್ಮ ಮಕ್ಕಳು ಅವೇ ನೋಡೆ ನಮ್ಮ ಹಂದೀಗೆ………..”]
ಹಿಂದು ಸಮಾಜವು ರೂಢಿಸಿಕೊಂಡ ವಾತಾವರಣವು ಈ ರೀತಿಯಾಗಿ ಕೊಳೆತು ನಾರುತ್ತಿದ್ದರೆ, ಕ್ರಿಶ್ಚಿಯನ್ ಸಮಾಜದ ಶಿಕ್ಷಿತ ವ್ಯಕ್ತಿಗಳ ಆರೋಗ್ಯಕರ ಪರಿಸರದ ವರ್ಣನೆಯನ್ನು ಗಮನಿಸಿ:
[“…..ರಂಗಮ್ಮ ಮತ್ತು ಪದ್ದಿ ಇಬ್ಬರಿಗೂ ಭಯವಾಗಿತ್ತು. ಆದರೆ ರೂಮಿನ ಒಳಗೆ ಹೋದಾಗ ನಗುಮುಖದ
ಡಾಕ್ಟರರನ್ನು ಕಂಡು ಸ್ವಲ್ಪ ಗೆಲುವಾದರು. ಟೇಬಲಿನ ತುದಿಯಲ್ಲಿ ಕೋತಿಯೊಂದು ಮರದ ಟೊಂಗೆಗೆ ಜೋಕಾಲಿ ಆಡುವ ಫೋಟೋ ಇತ್ತು. ಆ ಚಿತ್ರದ ಕೆಳಗೆ ಮನಸ್ಸು ಮರ್ಕಟ ಎಂದು ಬರೆದ ಒಂದು ನಾಮಫಲಕವಿತ್ತು…………….
‘ತಾಯಿ ಹೇಳಿ, ಯಾರಿಗೆ ಕಾಯಿಲೆ ಆಗಿದೆ?’ ಎಂದು ವಿನಯಪೂರ್ವಕವಾಗಿ ಡಾಕ್ಟರ ಥಾಮಸ್ ಕೇಳಿದರು…..”]
ಆಧುನಿಕ ಶಿಕ್ಷಣವು ಡಾಕ್ಟರ್ ಥಾಮಸ್ ಅವರಿಗೆ ನೀಡಿದ ಆರೋಗ್ಯಕರ ಹಾಗು ವಿನಯಶೀಲ ವ್ಯಕ್ತಿತ್ವವನ್ನು ರೂಢಿನಿಷ್ಠ ಬ್ರಾಹ್ಮಣ ಸಮಾಜದ ಆಢ್ಯರ ವ್ಯಕ್ತಿತ್ವದೊಡನೆ ಹೋಲಿಸಿದಾಗ, ಈ ಸಮಾಜಗಳ contrast ಎದ್ದು ಕಾಣುವಂತಿದೆ.
ಹಳೆಯ ತಲೆಗಳ ಸಂಪ್ರದಾಯನಿಷ್ಠೆಗೆ ವಿರುದ್ಧವಾಗಿ ಹೊಸ ತಲೆಗಳು ಬದಲಾವಣೆಯ ಗಾಳಿಯನ್ನು ಹೆದರುತ್ತಲೆ ಸ್ವೀಕರಿಸುತ್ತಿವೆ. ಕಥಾನಾಯಕಿ ಪದ್ಮಾವತಿ ತನ್ನ ಗೆಳತಿ ಪಂಕಜಾಳೊಡನೆ ಸಿನೆಮಾಕ್ಕೆ ಹೋಗುವ ಸಂಭ್ರಮವನ್ನು ನೋಡಬೇಕು. ಪಂಕಜಾಳ ಗಂಡ ದುಬಾಯಿಯಿಂದ ಕಳಿಸಿದ ಸಲ್ವಾರ-ಕಮೀಜನ್ನು ಹಾಕಿಕೊಳ್ಳುವ ಧೈರ್ಯ ಸ್ವತಃ ಅವಳಿಗೇ ಇಲ್ಲ. ಅವಿವಾಹಿತೆಯಾಗಿದ್ದ ಪದ್ಮಾವತಿ ತಾನೇ ಆ ವೇಷವನ್ನು ಧರಿಸುತ್ತಾಳೆ. ಹೆದರುತ್ತಲೇ, ಎಲ್ಲರ ಕಣ್ಣು ತಪ್ಪಿಸುತ್ತಲೇ ಗೆಳತಿಯರಿಬ್ಬರೂ ಸಿನೆಮಾಗೆ ಹೋಗುತ್ತಾರೆ. ಹರೆಯದ ಈ ಗೆಳತಿಯರ ಮಾತುಗಳನ್ನು ಸಂಪ್ರದಾಯನಿಷ್ಠ ಹೆಂಗಸರು ಕನಸಿನಲ್ಲೂ ಆಡಲಾರರು!
[“..ಆದರೆ ಇಬ್ಬರೂ ಒಂದು ವಿಷಯದಲ್ಲಿ ಒಮ್ಮತಕ್ಕೆ ಬಂದಿದ್ದರು. ‘ರಾಜ್ ಕುಮಾರ್ ಬರೀ ಮೈಲೆ ಕಾಣಿಸಿಕೊಂಡಾಗ ಅವನನ್ನ ಅಪ್ಪಿಗೊಂಡು ಅದೇ ಚಾದರದಾಗೆ ನಾನೂ ಅವನ ಜೋಡಿ ಮಲ್ಕೋಬೇಕು ಅನ್ನಿಸ್ತೇ’ ಎಂದು ಪಂಕಜ ಹೇಳಿದರೆ, ಪದ್ದಿ ಸೀಮೋಲ್ಲಂಘನೆ ಮಾಡಿ ’ಒಂದು ಸೀನಿನಾಗೆ ಆತ ಬಗ್ಗಿ ಪೆನ್ನು ಎತ್ತಿಗೊಳ್ತಾನೆ ನೋಡು, ಆಗ ನಂಗಂತೂ ಆತನ ಕುಂಡಿ ಸವರಬೇಕು ಅಂತ ಅನ್ನಿಸಿಬಿಡ್ತು’ ಎಂದಳು………”]
ವಿನೋದದ ಮುಖವಾಡ ಹೊತ್ತ ಈ ಕತೆಯ ಬೆಳವಣಿಗೆಯಲ್ಲಿ ವಿಧಿಯ ಪಾತ್ರವೇ ಮಹತ್ವದ್ದಾಗಿದೆ. ಈ ಕಾದಂಬರಿಯಲ್ಲಿ ವಿಧಿಯು ಆಡುವ ಕುವಾಡಗಳಿಗೆ ಲೆಕ್ಕವಿಲ್ಲ. ಈ ಕಾದಂಬರಿಯ ಉದ್ದೇಶವು ಕೇವಲ ಕತೆ ಹೇಳುವದಲ್ಲ ಎನ್ನುವ ಮಾತನ್ನು ಗಮನಿಸಿದಾಗ, ಓದುಗನು ಈ ವಿಧಿಯಾಟವನ್ನು ಸಮಚಿತ್ತದಿಂದ ಸ್ವೀಕರಿಸುತ್ತಾನೆ. ಇಂತಹ ವಿಧಿಲೀಲೆಗಳನ್ನು ಪಟ್ಟಿ ಮಾಡಿದರೆ, ಕಾದಂಬರಿಯ ಸ್ವಾರಸ್ಯ ಬಯಲಾಗುತ್ತದೆ. ಆದುದರಿಂದ, ಆ ಪಟ್ಟಿಯನ್ನು ಬದಿಗಿಟ್ಟುಬಿಡೋಣ.
ಇನ್ನು ಈ ಕಾದಂಬರಿಯ ಕೆಲವು ಪಾತ್ರಗಳನ್ನು ನೋಡೋಣ:
ವಸುಧೇಂದ್ರರ ಕತೆಗಳಲ್ಲಿ ಹಾಗು ಈ ಕಾದಂಬರಿಯಲ್ಲಿ ಹೆಂಗಸರು ಸಹಸಾ ಗಟ್ಟಿಗಿತ್ತಿಯರಾಗಿ ಹೊರಹೊಮ್ಮುತ್ತಾರೆ. ಕಥಾನಾಯಕಿ ಪದ್ಮಾವತಿ ಇನ್ನೂ ಎಂಟು ವರುಷದ ಚಿಕ್ಕ ಹುಡುಗಿ ಇರುವಾಗಲೆ ಅವಳ ತಾಯಿ ರಂಗಮ್ಮ ವಿಧವೆಯಾಗುತ್ತಾಳೆ. ಅವಳ ಹಿತೈಷಿಗಳು ತಲೆ ಬೋಳಿಸಿಕೊಳ್ಳುವದು ಬೇಡವೆಂದು ಹೇಳಿದರೂ ಸಹ, ಅವಳು ಕೇಶಮುಂಡನಕ್ಕೆ ಹಟ ಮಾಡುತ್ತಾಳೆ. ಅದರ ಕಾರಣವನ್ನಷ್ಟು ನೋಡಿರಿ:
[“ ‘ಮಡಿ ಆದರೆ ನಾಲ್ಕು ಮನಿ ಅಡಿಗಿ ಕೆಲಸ ಆದರೂ ಸಿಗ್ತದೆ. ಮಗಳು ದೊಡ್ಡೋಳು ಆಗೋ ತಂಕಾ ಹೆಂಗೋ ಹೊಟ್ಟಿ ಹೊರಕೋಬೇಕಲ್ಲ. ಕೂದಲಿಗೆ ಆಸಿ ಪಡ್ತೀನಿ ಅಂದ್ರೆ ಹೊಟ್ಟಿ ಸುಮ್ಮನಿರ್ತದೇನು?’ ಎಂದು ತಿಳಿಹೇಳಿದ್ದಳು.”]
ಎಂತಹ ಸಮಸ್ಯೆಗಳು ಬಂದು ಮುತ್ತಿಕೊಂಡಾಗಲೂ, ರಂಗಮ್ಮ ಧೈರ್ಯದಿಂದ ಸಂಭಾಳಿಸಿಕೊಂಡು, ಸಂಸಾರದ ಬಂಡಿಯನ್ನು ಸಾಗಿಸುತ್ತಾಳೆ. ಪದ್ಮಾವತಿ ಹಾಗು ಅವಳ ಗೆಳತಿ ಪಂಕಜರೂ ಸಹ ವಿಧಿಲೀಲೆಗೆ ಬಲಿಯಾದವರೇ. ಅವರೂ ಸಹ ಬಂದದ್ದನ್ನೆಲ್ಲ ಎದುರಿಸಿಯೇ ಮುಂದುವರಿದವರು.
ವಸುಧೇಂದ್ರರ ಕತೆಗಳಲ್ಲಿ ಗಂಡಸರು ಸಾಮಾನ್ಯವಾಗಿ ಅಸಹಾಯಕ ವ್ಯಕ್ತಿತ್ವವುಳ್ಳವರು. ಈ ಕಾದಂಬರಿಯ ನಾಯಕ ರಾಘವೇಂದ್ರನದೂ ಅಂತಹ ವ್ಯಕ್ತಿತ್ವವೇ. ಹಬ್ಬದಡುಗೆಗಾಗಿ ಹೂರಣವನ್ನು ರುಬ್ಬುತ್ತಲೇ, ತನಗೊಬ್ಬ ಕನ್ಯೆ ಸಿಗುತ್ತಿಲ್ಲವೆಂದು ಈತ ತನ್ನ ತಾಯಿಯೆದುರಿಗೆ ತಕರಾರು ಹೇಳುತ್ತಾನೆ. ಈತನಿಗೆ ಕೊನೆಗೊಮ್ಮೆ ಸಿಕ್ಕ ಕನ್ಯೆ ಸುಧಾ ಮಾತ್ರ ಧೈರ್ಯಸ್ಥ ಹೆಣ್ಣು. ಪ್ರಸಂಗ ಬಂದರೆ, ಓಡುತ್ತಿರುವ ರೈಲಿನಿಂದ ಕಾಲುವೆಗೆ ಜಿಗಿಯಬಲ್ಲ ಗಟ್ಟಿಗಿತ್ತಿ. ಹಸಿ ಬಾಣಂತಿಯಿದ್ದಾಗಲೇ, ಮತ್ತೆ ಬೀಜಾರೋಪಣ ಮಾಡಿದ ಗಂಡನಿಗೆ ಇವಳು ಸಮಾಧಾನ ಹೇಳುವ ಪರಿಯನ್ನು ನೋಡಿ:
[“ಅತ್ತ ವನಮಾಲಾಬಾಯಿ ಮಠಕ್ಕೆ ಹೋಗಿದ್ದೇ ಇತ್ತ ರಾಘವೇಂದ್ರ ಸುಧಾಳ ಬಳಿ ಹಗೂರಕ್ಕೆ ಬಂದ. ಅತ್ಯಂತ ಕಳವಳದಿಂದ ’ನಿಂಗೆ ಏನಾದ್ರೂ ಆಗ್ತದೆ ಅಂತಾಳಲ್ಲೇ ಅಮ್ಮ’ ಎಂದ. ಅದಕ್ಕೆ ಮುಸಿಮುಸಿ ನಕ್ಕ ಸುಧಾ ‘ಏನೂ ಆಗಲ್ಲ ಸುಮ್ಮನಿರಿ. ನಾನು ಗಟ್ಟಿಮುಟ್ಟ ಹೆಣ್ಣು. ಪ್ರತಿಭಾಳ ಹುಟ್ಟಿದ ಹಬ್ಬ, ಕೂಸಿನ ಹುಟ್ಟಿದ ಹಬ್ಬ ಒಂದೇ ದಿನ ಮಾಡೋಣಂತೆ’ ಎಂದು ಧೈರ್ಯ ತುಂಬಿದಳು. ರಾಘವೇಂದ್ರನಿಗೆ ಈಗ ಸಮಾಧಾನವಾಯ್ತು.”]
ಕಾದಂಬರಿಯಲ್ಲಿ ಬರುವ ಇತರ ಪಾತ್ರಗಳೂ ಸಹ ಮನಸ್ಸಿನಲ್ಲಿ ನಾಟುವಂತಿವೆ. ಈ ಪಾತ್ರಗಳು ಕ್ಷಣಿಕ ಪಾತ್ರಗಳಾಗಿರಬಹುದು; ಈ ಪಾತ್ರಗಳಿಗೆ ಮಹತ್ವವಿರಲಿಕ್ಕಿಲ್ಲ. ಆದರೂ ಸಹ ಪ್ರಮುಖ ಪಾತ್ರಗಳಷ್ಟೇ ಗಟ್ಟಿಯಾಗಿ ಈ ಪಾತ್ರಗಳೂ ಸಹ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುತ್ತವೆ. ಕನ್ಯಾಪರೀಕ್ಷೆಗಾಗಿ ಬರುತ್ತಿರುವ ಟೋಳಿಗೆ ಮಾರ್ಗದರ್ಶನ ಮಾಡಲು ಬಂದ ಹುಡುಗ ಸುಧೀಂದ್ರನೇ ಆಗಲಿ, ಜಾಗಂಟೆ ಬಾರಿಸುವ ಹುಡುಗ ವಾಜಿಯೇ ಆಗಲಿ ಓದುಗನ ಚಿತ್ತಾಪಹರಣ ಮಾಡದೆ ಬಿಡುವದಿಲ್ಲ. ಇದಕ್ಕೆ ಕಾರಣವೇನು? ನನಗೆ ಅನಿಸುವದು ಹೀಗೆ: ವಸುಧೇಂದ್ರರ basic ಅಸಕ್ತಿ ಇರುವದು ಮನುಷ್ಯಜೀವಿಗಳಲ್ಲಿ ; ಪ್ರತಿಯೊಂದು ವ್ಯಕ್ತಿಯ ಭಾವನೆಗಳ ಬಗೆಗೂ ಅವರಿಗೆ ಅಪಾರ ಕಳಕಳಿ. ಹೀಗಾಗಿ ಅವರ ಕತೆಗಳಲ್ಲಿ ಪಾತ್ರಗಳು ಬಹಳ ಮುಖ್ಯವಾಗಿ ಬಿಡುತ್ತವೆ. ಅವರ ಕತೆಗಳಿಗೆ Human panorama ಎಂದು ಕರೆಯಬಹುದೇನೊ! ಈ ಕಾದಂಬರಿಯಲ್ಲಂತೂ ಮಾನವಾಸಕ್ತಿಗೆ ವಿಪುಲ ಅವಕಾಶವಿದೆ. ಈ ಮಾನವಾಸಕ್ತಿಯೇ ಈ ಕಾದಂಬರಿಯ ಪ್ರಮುಖ ಗುಣವಾಗಿದೆ.
“ಹರಿಚಿತ್ತ ಸತ್ಯ” ಕಾದಂಬರಿಯಲ್ಲಿ ಓದುಗನ ಮನಸ್ಸನ್ನು ವಿನೋದದ ಜೊತೆಗೇ ಉಲ್ಲಾಸದಿಂದ ತುಂಬುವ ಘಟನೆಗಳೂ ಇವೆ. ಕಥಾನಾಯಕ ರಾಘವೇಂದ್ರನು ತನ್ನ ಹೆಂಡತಿಯ ಮನೆ ಬಿಜಾಪುರಕ್ಕೆ ಹೋಗಿದ್ದು ಒಂದು ಅಂತಹ ಘಟನೆ. ಅವನಿಗೆ ಅಲ್ಲಿ ತನ್ನ ಹೆಂಡತಿಯ ಭೆಟ್ಟಿಯಾದ ಸಂದರ್ಭ ಮಾತ್ರ ಅವಿಸ್ಮರಣೀಯವಾಗಿದೆ!
ಕಾದಂಬರಿಯಲ್ಲಿ ಕೇವಲ ವಿನೋದ ತುಂಬಿದೆ ಎಂದಲ್ಲ. ಪಂಕಜಾ ಹಾಗು ಪದ್ಮಾವತಿಯ ಬಾಳಿಗೆ ತಿರುವು ಕೊಡುವ ಘಟನೆಗಳು ಕಳವಳವನ್ನು ಹಾಗು ಕನಿಕರವನ್ನು ಹುಟ್ಟಿಸುವಂತಿವೆ. ತಾಳ್ಮೆಯಿಂದ, ತಿಳಿವಳಿಕೆಯಿಂದ ಹಾಗು ಸೂಕ್ಷತೆಯಿಂದ ವಸುಧೇಂದ್ರರು ವರ್ಣಿಸಿದ ಈ ವಿವರಗಳನ್ನು ಓದುತ್ತಿದ್ದಂತೆ, ಈ ಲೇಖಕರ ಬಗೆಗೆ ಓದುಗನಲ್ಲಿ ಗೌರವ ಹಾಗು ಅಭಿಮಾನ ಹುಟ್ಟುತ್ತವೆ.
ಕಾದಂಬರಿಯ ಕಥಾನಕದ ಎಲ್ಲ ಹಂತಗಳನ್ನು ಅಥವಾ ವಿವರಗಳನ್ನು ಇಲ್ಲಿ ಕೊಡುವದು ಸರಿಯಲ್ಲ. ರಸಗುಲ್ಲಾದಲ್ಲಿ ಏನೇನನ್ನು ಬಳಸಿದ್ದಾರೆ ಎಂದು ಚರ್ಚಿಸುವದಕ್ಕಿಂತ ಸ್ವತಃ ಸವಿಯುವದೇ ಉತ್ತಮವಾದದ್ದು.
“ಹರಿಚಿತ್ತ ಸತ್ಯ” ಕಾದಂಬರಿಯನ್ನು ಈಗಾಗಲೇ ಓದಿದವರು ನನ್ನೊಡನೆ ಸಹಮತ ತಾಳುತ್ತಾರೆನ್ನುವ ನಂಬಿಕೆ ನನಗಿದೆ. ಇನ್ನೂ ಓದಬೇಕಾದವರಿಗೆ ಹೇಳುವದಿಷ್ಟೆ: Read and enjoy!
ವಸುಧೇಂದ್ರರು ಕನ್ನಡ ಓದುಗರಿಗೆ ಇನ್ನಷ್ಟು ಇಂತಹ ಕೃತಿಗಳನ್ನು ನೀಡಲಿ ಎಂದು ಹಾರೈಸೋಣ.