Wednesday, June 9, 2010

ಕನ್ನಡ ಸಮಾಚಾರ ಪತ್ರಿಕೆಗಳು------ ಒಂದು ಅವಲೋಕನ

ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳು ಜನ್ಮ ತಳೆದದ್ದು ರಾಜಕೀಯ ಹಾಗು ಸಾಮಾಜಿಕ ಜಾಗೃತಿಯ ಉದ್ದೇಶದಿಂದ. ೧೯೩೩ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಪ್ರಾರಂಭವಾದ ಸಂಯುಕ್ತ ಕರ್ನಾಟಕ ಪತ್ರಿಕೆಯು, ಹೆಸರೇ ಸೂಚಿಸುವಂತೆ, ಕರ್ನಾಟಕ ಏಕೀಕರಣಕ್ಕಾಗಿ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗಾಗಿ ಹಾಗೂ ಸಮಾಜ ಸುಧಾರಣೆಗಾಗಿ ದುಡಿದಿದೆ. ತಾಯಿನಾಡು ಹಾಗು ಪ್ರಜಾವಾಣಿ ಪತ್ರಿಕೆಗಳು ಈ ಕಾರ್ಯವನ್ನು ಮೈಸೂರು ಪ್ರಾಂತದಲ್ಲಿ ಮಾಡಿದವು. ಈ ಪತ್ರಿಕೆಗಳು ನಾಡು ಕಟ್ಟಲು ದುಡಿದಂತೆ, ನುಡಿಯನ್ನು ಬೆಳೆಸಲೂ ದುಡಿದವು. ಅಲ್ಲಿಂದ ಇಲ್ಲಿಯವರೆಗೆ ಕನ್ನಡ ಪತ್ರಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೆಲವೊಂದು ಬದಲಾವಣೆಗಳು ಹೆಮ್ಮೆ ಪಡುವಂತಹವು ; ಕೆಲವೊಂದು ದುಃಖ ಪಡುವಂತಹವು.

ಕರ್ನಾಟಕದಲ್ಲಿ ಅತಿ ಹೆಚ್ಚು ಓದುಗರನ್ನು ಪಡೆದ ಐದು ಕನ್ನಡ ಸಮಾಚಾರ ಪತ್ರಿಕೆಗಳ ಪ್ರಸಾರ ಸಂಖ್ಯೆ  ಅಂದಾಜು ಹೀಗಿದೆ :
(೧) ವಿಜಯ ಕರ್ನಾಟಕ:……೫,೪೧,೪೬೬
(೨) ಪ್ರಜಾವಾಣಿ :……… .೪,೭೩,೮೧೮
(೩) ಉದಯವಾಣಿ :……. ೧,೮೫,೨೪೭
(೪) ಕನ್ನಡ ಪ್ರಭಾ :…….. ೧,೭೬,೬೦೧ 
(೫) ಸಂಯುಕ್ತ ಕರ್ನಾಟಕ :.. ೧,೩೬,೯೩೬

ಈ ಪತ್ರಿಕೆಗಳು ಕನ್ನಡ ನಾಡಿಗೆ, ಕನ್ನಡ ನುಡಿಗೆ ಹಾಗು ಕನ್ನಡ ಓದುಗರಿಗೆ ಸಮರ್ಪಕವಾದ ಹಾಗು ತಾವು ವಿಧಿಸುತ್ತಿರುವ ಶುಲ್ಕಕ್ಕೆ ಸಮುಚಿತವಾದ ಸೇವೆಯನ್ನು ಸಲ್ಲಿಸುತ್ತಿವೆಯೆ? ಈ ವಿಷಯವನ್ನು ಗ್ರಹಿಸಲು ಕೆಳಗಿನ ಅಂಶಗಳನ್ನು  ಪರಾಮರ್ಶಿಸುವದು ಅವಶ್ಯವಾಗಿದೆ :

(೧) ಕನ್ನಡ ಪತ್ರಿಕೆಗಳು ಕನ್ನಡ ನುಡಿಯನ್ನು ಕಟ್ಟುವ ಕಾರ್ಯವನ್ನು ಮಾಡುತ್ತಿವೆಯೆ?
(೨) ಕನ್ನಡ ಓದುಗರಿಗೆ ಸಕಾಲಿಕ ಸಮಾಚಾರವನ್ನು ಪಕ್ಷಪಾತವಿಲ್ಲದೆ ಒದಗಿಸುತ್ತಿವೆಯೆ?
(೩) ಸಮಾಚಾರದ ಹೊರತಾಗಿ, ರಾಜಕೀಯ, ಸಾಂಸ್ಕೃತಿಕ ಹಾಗು ವೈಜ್ಞಾನಿಕ ಮಾಹಿತಿಯನ್ನು ಓದುಗರಿಗೆ ಪೂರೈಸುತ್ತಿವೆಯೆ?
(ಉದಯವಾಣಿ ಪತ್ರಿಕೆಯ ಹೊರತಾಗಿ, ಉಳಿದ ನಾಲ್ಕು ಪತ್ರಿಕೆಗಳ ಅವಲೋಕನ ಇಲ್ಲಿದೆ.)

(೧) ಕನ್ನಡ ಪತ್ರಿಕೆಗಳು ಕನ್ನಡ ನುಡಿಯನ್ನು ಕಟ್ಟುವ, ಬೆಳೆಸುವ ಕಾರ್ಯವನ್ನು ಮಾಡುತ್ತಿವೆಯೆ?
ಕನ್ನಡ ಪತ್ರಿಕೆಗಳ ಪ್ರಸಾರಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆದ ‘ವಿಜಯ ಕರ್ನಾಟಕ’ಕ್ಕೆ ಕನ್ನಡ ಪತ್ರಿಕೆ ಎಂದು ಕರೆಯಬಹುದೇ ಎನ್ನುವ ಸಂದೇಹ ನನಗಿದೆ. ‘ಕನ್ನಡಾಂಗ್ಲೋ’ ಪತ್ರಿಕೆ ಎನ್ನುವ ಅಭಿಧಾನವೇ ಇದಕ್ಕೆ ಹೆಚ್ಚು ಸರಿಯಾದೀತು. ಇನ್ನು ಕೆಲವು ದಿನಗಳಲ್ಲಿ ಇದು ‘ಕಂಗ್ಲಿಶ್’ ಪತ್ರಿಕೆಯಾಗಿ ಬದಲಾದರೂ ಆಶ್ಚರ್ಯವಿಲ್ಲ. ಮೆಕಾಲೆಯ ನಂತರ ಭಾರತದಲ್ಲಿ ಅಂದರೆ ಕರ್ನಾಟಕದಲ್ಲಿ ಇಂಗ್ಲೀಶಿನ ಪ್ರಸಾರಕ್ಕೆ ‘ವಿಜಯ ಕರ್ನಾಟಕ’ ನೀಡುತ್ತಿರುವ ಕೊಡುಗೆ ಅತಿ ಹೆಚ್ಚಿನದು. ‘ಇದರಲ್ಲಿ ಏನು ತಪ್ಪಿದೆ?’ ಎಂದು ಕೆಲವರು ಕೇಳಬಹುದು. ಜನರು ತಮ್ಮ ಆಡುಮಾತಿನಲ್ಲಿ ಬಳಸುವ ಭಾಷೆಯನ್ನೇ ಪತ್ರಿಕೆಗಳಲ್ಲಿ  ಬಳಸಿದರೆ, ಆ ಪತ್ರಿಕೆ ಹೆಚ್ಚೆಚ್ಚು ಜನಪ್ರಿಯವಾಗುವದಲ್ಲವೆ? ಇದೇ ಕುತರ್ಕವನ್ನು ನಮ್ಮ ಸಿನೆಮಾ ನಿರ್ಮಾಪಕರೂ ಮುಂದಿಡುತ್ತಿದ್ದಾರೆ . “ಜನರು ಬಯಸುವದು ಮಚ್ಚು, ಲಾಂಗು ಹಾಗು ಬತ್ತಲೆ ಕುಣಿತ, ಹಾಗಾಗಿ ನಾವು ಅಂತಹ ಸಿನೆಮಾಗಳನ್ನೇ ನಿರ್ಮಿಸುತ್ತೇವೆ”, ಎನ್ನುತ್ತಾರವರು. ಆದರೆ ಇದೊಂದು ವಿಷಚಕ್ರವೆನ್ನುವದು ಎಲ್ಲರಿಗೂ ತಿಳಿದ ಮಾತೇ. ಅರಿಯದ ಮಗುವಿಗೆ ದಿನವೂ ಸೆರೆ ಕುಡಿಸುತ್ತ ಹೋದರೆ, ಆ ಮಗು ಅದನ್ನೇ ಬಯಸತೊಡುಗುತ್ತದೆ.

ವಿಜಯ ಕರ್ನಾಟಕದ ದಿ: ೧-೬-೨೦೧೦ರ ಹುಬ್ಬಳ್ಳಿ ಆವೃತ್ತಿಯ ಸಂಚಿಕೆಯ ೧೦ನೆಯ ಪುಟದಲ್ಲಿಯ ವರದಿಯ ತಲೆಬರಹವನ್ನು ನೋಡಿರಿ. ಈ ಸುದ್ದಿಯ ಸಂಪಾದಕರು ಕನ್ನಡ ಪತ್ರಿಕೆಯ ಸಂಪಾದಕರೆಂದು ಅನಿಸುವದೆ?‘ಎನ್‌ಡಬ್ಲುಕೆ‍ಆರ್‌ಟಿಸಿ‘ ಎಂದು ಕಷ್ಟಪಟ್ಟು ದೀರ್ಘವಾಗಿ ಬರೆಯುವ ಬದಲು ‘ವಾಕರಸಾಸಂಸ್ಥೆ’ ಎಂದು ಮುದ್ದಾಗಿ ಬರೆಯಲು ಬರುತ್ತಿರಲಿಲ್ಲವೆ? ಓದುಗರಿಗೆ ಯಾವುದು ತಟ್ಟನೆ ಅರ್ಥವಾಗುತ್ತದೆ? ಆಂಗ್ಲವ್ಯಾಮೋಹಿ ವಿಜಯ ಕರ್ನಾಟಕವನ್ನು `ನವ ಮೆಕಾಲೆ’ ಎಂದು ಬಣ್ಣಿಸಿದರೆ ತಪ್ಪೇನಿದೆ? ಶಾಲೆಯ ವಿದ್ಯಾರ್ಥಿಗಳು ಈ ಪತ್ರಿಕೆಯನ್ನು ನಿಯತವಾಗಿ ಓದುತ್ತಿದ್ದರೆ, ಇಂಗ್ಲಿಶ್ ಪದಗಳನ್ನೇ ಕನ್ನಡ ಪದಗಳೆಂದು  ತಪ್ಪಾಗಿ ಗ್ರಹಿಸುವ ಸಾಧ್ಯತೆ ಇದೆ.

ಓದುಗರನ್ನು ಚಿತ್ರವಿಚಿತ್ರ ಭಾಷೆಯ ಮೂಲಕ ಮರಳುಗೊಳಿಸಬಹುದು ಎನ್ನುವ ಭಾವನೆಯಿಂದ ವಿಜಯ ಕರ್ನಾಟಕವು ಈಗಾಗಲೇ ಬಳಕೆಯಲ್ಲಿರುವಂತಹ ಕನ್ನಡ ಪದಗಳ ಬದಲಾಗಿ, ಇಂಗ್ಲಿಶ್ ಪದಗಳನ್ನು ಬಳಸುತ್ತಿದೆ. ಉದಾಹರಣೆಗೆ, ಸರ್ವೋಚ್ಚ ನ್ಯಾಯಾಲಯದ ಆದೇಶ  ಎನ್ನುವ ಬದಲಾಗಿ ಸುಪ್ರೀಂ ಆದೇಶ ಎಂದು ಬರೆದು ಬಿಡುತ್ತದೆ. ಸ್ಥಳಮಿತಿಯೇ ಇದರ ಕಾರಣವೆನ್ನುವ  ನೆವ ಬೇರೆ. ಇದು ಪೊಳ್ಳು ನೆವ ಎನ್ನುವದು ಮುಂದಿನ ಪರಾಮರ್ಶೆಯಲ್ಲಿ ಬಯಲಾಗುತ್ತದೆ..

ಇಂದು ಕನಿಷ್ಠ ಪ್ರಸಾರ ಹೊಂದಿದ ‘ಸಂಯುಕ್ತ ಕರ್ನಾಟಕ’ ಒಂದು ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಆದರ್ಶ ಪತ್ರಿಕೆಯಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ, ಜನಜಾಗೃತಿಯ ಉದ್ದೇಶದಿಂದ ಜನ್ಮ ತಳೆದ ಈ ಪತ್ರಿಕೆಯ ಸಂಪಾದಕರು ಆ ಉದ್ದೇಶಕ್ಕೆ ಬದ್ಧರಾಗಿದ್ದರು. ಅಲ್ಲದೆ ಅವರು ಕನ್ನಡ ಭಾಷೆಯನ್ನು ತಿಳಿದಂತಹ ಕನ್ನಡ ಪ್ರೇಮಿಗಳಾಗಿದ್ದರು. ಹೀಗಾಗಿ  ಕನ್ನಡದ ಪತ್ರಿಕಾ ಭಾಷೆಯನ್ನು ರೂಪಿಸುವಲ್ಲಿ ‘ಸಂಯುಕ್ತ ಕರ್ನಾಟಕ’ದ ಕೊಡುಗೆ ಅಪಾರವಾಗಿದೆ. ಅದೇ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಇಂದು ‘ವಿಜಯ ಕರ್ನಾಟಕ’ವನ್ನು ನಕಲು ಮಾಡುವ ಭರದಲ್ಲಿ ತನ್ನತನವನ್ನು ಕಳೆದುಕೊಳ್ಳುತ್ತಲಿದೆ. ‘ವಿಜಯ ಕರ್ನಾಟಕ’ವು ಇಂಗ್ಲಿಶ್ ಪದಗಳನ್ನು ಬಳಸಿದರೆ, ‘ಸಂಯುಕ್ತ ಕರ್ನಾಟಕ’ವು ಇಂಗ್ಲೀಶಿನ ಪದಪುಂಜಗಳನ್ನೇ ಬಳಸುತ್ತಿದೆ. ( ಉದಾ: “ವಿಧಾನಸೌಧದಲ್ಲಿ  ಫಾರ್ ಎ ಚೇಂಜ್ ಅಧಿಕಾರಿಗಳು ಇರಲಿಲ್ಲ.”)

ಕನ್ನಡ ಪ್ರಭಾ ಪತ್ರಿಕೆಯು ಸಹ ಇಂಗ್ಲಿಶ್ ಪದಗಳನ್ನು ನಿರ್ಯೋಚನೆಯಿಂದ ಬಳಸುತ್ತಿದೆ. ಪ್ರಜಾವಾಣಿಯೊಂದೇ  ಕನ್ನಡತನವನ್ನು ಕಾಯ್ದುಕೊಂಡ ಬಂದ ಪತ್ರಿಕೆಯಾಗಿದೆ ಎನ್ನಬಹುದು. ವಿಜಯ ಕರ್ನಾಟಕ ಹಾಗು ಸಂಯುಕ್ತ ಕರ್ನಾಟಕ ಇವೆರಡೂ ‘ಸಿ.ಎಂ.’ ಎನ್ನುವ ಆಂಗ್ಲ ಪದವನ್ನೇ ಬಳಸುತ್ತಿರುವಾಗ ‘ಮುಖ್ಯ ಮಂತ್ರಿ’ ಎನ್ನುವ ಕನ್ನಡ ಪದವನ್ನೂ ಸಹ ಬಳಸುತ್ತಿರುವ ಶ್ರೇಯಸ್ಸು ಪ್ರಜಾವಾಣಿ ಪತ್ರಿಕೆಗೆ ಇದೆ.
ವಿಜಯ ಕರ್ನಾಟಕವು ಕನ್ನಡಾಂಗ್ಲೊ ಭಾಷೆಯನ್ನು ಒಂದು fashion ತರಹ  ಬಳಸುತ್ತಿದೆ. ಆದರೆ ಒಳ್ಳೆಯ ಪತ್ರಿಕೆಗೆ ಬೇಕಾದದ್ದು fashion ಅಲ್ಲ; passion !

ಪತ್ರಿಕೆಯ ವ್ಯಕ್ತಿತ್ವ:
ಒಂದು ಪತ್ರಿಕೆಗೆ ‘ತನ್ನತನ’ ಎನ್ನುವದು ಬೇಕು. ಪಾ.ವೆಂ. ಆಚಾರ್ಯರು ‘ಸಂಯುಕ್ತ ಕರ್ನಾಟಕ’ದ ಸಂಪಾದಕ ಮಂಡಲಿಯಲ್ಲಿದ್ದ ಕಾಲವದು. ಆ ಸಮಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ರಂಗೇರಿತ್ತು. ಮರಾಠಿ ಪತ್ರಿಕೆಗಳು ಭಂಡಶೈಲಿಯಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿದ್ದವು. ನಾನು ಪಾ.ವೆಂ. ಅವರನ್ನು ಪತ್ರಿಕೆಯ ಕಚೇರಿಯಲ್ಲಿ ಭೆಟ್ಟಿಯಾದಾಗ, ಈ ವಿಷಯವನ್ನು ಪ್ರಸ್ತಾಪಿಸಿ, “ಸಂಯುಕ್ತ ಕರ್ನಾಟಕವು ಸಭ್ಯವಾಗಿ ಬರೆಯುವದೇಕೆ?”ಎಂದು ಕೇಳಿದ್ದೆ. ಪಾ.ವೆಂ. ನಸುನಕ್ಕು ಹೇಳಿದರು: “ಸಂಯುಕ್ತ ಕರ್ನಾಟಕಕ್ಕೆ ದೀರ್ಘವಾದ ಒಂದು ಸತ್ಸಂಪ್ರದಾಯವಿದೆ !”

ಆ ಸತ್ಸಂಪ್ರದಾಯ ಇಂದು ಎತ್ತ ಹೋಗಿದೆಯೋ ಅಥವಾ ಸತ್ತೇ ಹೋಗಿದೆಯೋ ತಿಳಿಯದು ! ಸಂಯುಕ್ತ ಕರ್ನಾಟಕದ ಭಾಷೆ, ಕಾಗುಣಿತಗಳ ತಪ್ಪು ಹಾಗು ವರದಿಯ ಶೈಲಿಯನ್ನು ನೋಡಿದಾಗ, ಈ ಪತ್ರಿಕೆಗೆ ಇಂದು ಕೋಡಂಗಿಯ ವ್ಯಕ್ತಿತ್ವ ಬಂದಿದೆ ಎಂದು ಭಾಸವಾಗುವದು.

ಪ್ರಜಾವಾಣಿಗೆ ಒಂದು ಪತ್ರಿಕಾ ವ್ಯಕ್ತಿತ್ವವಿದೆ. ಅದು ವಿಶ್ವಾಸಾರ್ಹತೆಯ ವ್ಯಕ್ತಿತ್ವ. ಅಬ್ಬರವಿಲ್ಲದ, ನಿಷ್ಪಕ್ಷಪಾತ ವರದಿಯ, ಸಭ್ಯತೆಯ ವ್ಯಕ್ತಿತ್ವ. ಪ್ರಜಾವಾಣಿ ಪತ್ರಿಕೆಯ ಸಂಪಾದಕರ ವ್ಯಕ್ತಿತ್ವವು ಯಾವಾಗಲೂ ಪತ್ರಿಕೆಯ ವ್ಯಕ್ತಿತ್ವದ ಹಿಂದೆ ನಿಲ್ಲುತ್ತದೆ, ನಾಟಕದ ಸೂತ್ರಧಾರನ ಹಾಗೆ. ಪ್ರಜಾವಾಣಿಯ ಸಂಪಾದಕರು ರಂಗದ ಮೇಲೆ  ನಟರ ಹಾಗೆ ಬರುವದಿಲ್ಲ. ಆದರೆ, ವಿಜಯ ಕರ್ನಾಟಕದಲ್ಲಿ ಸಂಪಾದಕರದೇ ಅಬ್ಬರ. ಪತ್ರಿಕೆಯ ಮೂಲಕ ಅವರು ತಮ್ಮ ವ್ಯಕ್ತಿತ್ವವನ್ನು ವೈಭವೀಕರಿಸಿಕೊಳ್ಳುತ್ತಿದ್ದಾರೆ ಎನ್ನುವ ಭಾವನೆ ಓದುಗನಿಗೆ ಬರದೇ ಇರದು. ಈ ಸ್ವ-ವೈಭವೀಕರಣದ ಹುಚ್ಚು ಇತ್ತೀಚೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಗೂ ತಾಕಿದೆ. ಶ್ರೀ ಜಿ.ಎಮ್.ಪಾಟೀಲರು ಲೋಕಶಿಕ್ಷಣ ವಿಶ್ವಸ್ಥ ಮಂಡಲಿಯ ಅಧ್ಯಕ್ಷರಾಗಿದ್ದಾಗ, ಅವರ ಫೋಟೋ ಹಾಗು ಸುದ್ದಿ ಸಂಯುಕ್ತ ಕರ್ನಾಟಕದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದವು. ಶ್ರೀ ಅಶೋಕ ಹಾರನಹಳ್ಳಿಯವರು ಇದೀಗ ಲೋಕಶಿಕ್ಷಣ ವಿಶ್ವಸ್ಥ ಮಂಡಲಿಯ ಅಧ್ಯಕ್ಷರು. ಈಗ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇವರದೇ ಫೋಟೋ ಹಾಗು ಸುದ್ದಿ!

(೨) ಕನ್ನಡ ಓದುಗರಿಗೆ ಸಕಾಲಿಕ ಸಮಾಚಾರವನ್ನು ಈ ಪತ್ರಿಕೆಗಳು ಪಕ್ಷಪಾತವಿಲ್ಲದೆ ಒದಗಿಸುತ್ತಿವೆಯೆ?
ಯಾವ ಭಾಷೆಯನ್ನೇ ಬಳಸಲಿ, ಈ ಪತ್ರಿಕೆಗಳು ಓದುಗನಿಗೆ  ವಿಧಿಸುತ್ತಿರುವ ಶುಲ್ಕಕ್ಕೆ  ತಕ್ಕ ಸೇವೆಯನ್ನು ಸಲ್ಲಿಸುತ್ತಿವೆಯೆ ಎನ್ನುವದು ಮುಖ್ಯವಾದದ್ದು. ಈ ಪತ್ರಿಕೆಗಳಲ್ಲಿ ಸುದ್ದಿಗೆ ಎಷ್ಟು ಭಾಗವನ್ನು ನೀಡಲಾಗಿದೆ ಹಾಗು ಇತರ ವಿಷಯಗಳಿಗೆ ಮೀಸಲಾದ ಭಾಗವೆಷ್ಟು ಎನ್ನುವದನ್ನು ಗಮನಿಸೋಣ. ಮೇಲಿನ ಐದು ಪತ್ರಿಕೆಗಳಲ್ಲಿ  ಉದಯವಾಣಿ ಪತ್ರಿಕೆಯನ್ನು ಹೊರತು ಪಡಿಸಿ ಉಳಿದ ನಾಲ್ಕು ಪತ್ರಿಕೆಗಳ ‘ಹುಬ್ಬಳ್ಳಿ ಆವೃತ್ತಿ’ಗಳನ್ನಷ್ಟು ಪರೀಕ್ಷೆಗೆ ಒಡ್ಡೋಣ: ಈ ಪತ್ರಿಕೆಗಳ ೧-೬-೨೦೧೦ರ ಸಂಚಿಕೆಗಳ ವಿವರ ಈ ರೀತಿಯಾಗಿದೆ:


ಈ ಲೆಕ್ಕಾಚಾರದ ಮೇರೆಗೆ ಓದುಗರಿಗೆ ಗರಿಷ್ಠ ಸಮಾಚಾರಭಾಗವನ್ನು ನೀಡುವ ಪತ್ರಿಕೆ: ಕನ್ನಡ ಪ್ರಭಾ ; ಕನಿಷ್ಠ ಸಮಾಚಾರಭಾಗವನ್ನು ನೀಡುವ ಪತ್ರಿಕೆ : ವಿಜಯ ಕರ್ನಾಟಕ.

ಸಮಾಚಾರ ಭಾಗದಲ್ಲಿ ಸುದ್ದಿಗಳಲ್ಲದೇ ಸುದ್ದಿ ವಿಶ್ಲೇಷಣೆ, ವಿವಿಧ ವಿಷಯಗಳ ಮೇಲಿನ ಲೇಖನಗಳು, ಹಿತೋಕ್ತಿ, ಅಗ್ರಲೇಖನ, ಪೇಟೆಯ ಧಾರಣಿ ಇವೆಲ್ಲ ಸೇರಿವೆ. ಇತರ ಭಾಗದಲ್ಲಿ ಜಾಹೀರಾತುಗಳು, ಪತ್ರಿಕೆಗಳ ಮುಖಪುಟದ ಶಿಖರಭಾಗ, ವ್ಯಂಗ್ಯಚಿತ್ರಗಳು, ಜ್ಯೋತಿಷ್ಯ ಹಾಗು ಪುಟ್ಟ ಜಾಗದಲ್ಲಿ ಪತ್ರಿಕೆಗಳು ಸೇರಿಸುವ fill-in ಸೇರಿವೆ. ಬಹುತೇಕ ಓದುಗರು ಈ ಜಾಹೀರಾತುಗಳನ್ನಾಗಲೀ, fill-inಗಳನ್ನಾಗಲೀ, ಹಿತೋಕ್ತಿಗಳನ್ನಾಗಲೀ ಓದುವದೇ ಇಲ್ಲ. ಅಷ್ಟೇ ಏಕೆ, ಅಗ್ರಲೇಖನಗಳನ್ನು ಓದುವವರೂ ಸಹ, ಆ ವಿಷಯಕ್ಕಿರುವ ಮಹತ್ವವನ್ನು ಗಮನಿಸುತ್ತಾರೆ ; ಲೇಖನದ ಶೈಲಿಯನ್ನು ಗಮನಿಸುತ್ತಾರೆ. ಇವೆರಡೂ ಸರಿ ಬರದಿದ್ದರೆ, ಆ ಪುಟವನ್ನು ತಿರುವಿ ಮುಂದೆ ಹೋಗುತ್ತಾರೆ.

ಒಳಗಿನ ಹೂರಣ:
ಇದೆಲ್ಲ ಈ ಪತ್ರಿಕೆಗಳ ಸುದ್ದಿ ವಿನ್ಯಾಸದ ವಿಶ್ಲೇಷಣೆಯಾಯಿತು. ಇನ್ನು ಈ ಪತ್ರಿಕೆಗಳ ಒಳಗಿನ ಹೂರಣವನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸೋಣ:
೧-೬-೨೦೧೦ರ ಸಂಚಿಕೆಗಳಲ್ಲಿ ಈ ಪತ್ರಿಕೆಗಳು ಎಷ್ಟೆಲ್ಲ ಸುದ್ದಿಗಳನ್ನು ಪ್ರಕಟಿಸಿವೆ, ಈ ಸುದ್ದಿಗಳಿಗೆ ಕೊಟ್ಟ ಸ್ಥಳಾವಕಾಶ ಎಷ್ಟು, ಸುದ್ದಿಗಳಲ್ಲಿ ಇರುವ ಹುರುಳೆಷ್ಟು ಎನ್ನುವದನ್ನು ನೋಡೋಣ.  ಸುದ್ದಿಗಳ ಸಂಖ್ಯೆಯನ್ನು  ಲೆಕ್ಕಿಸುವಾಗ ಚಿಲ್ಲರೆ ಸುದ್ದಿಗಳನ್ನು  ಪರಿಗಣಿಸಲಾಗಿಲ್ಲ. ನಾಲ್ಕೂ ಪತ್ರಿಕೆಗಳಲ್ಲಿ ಪ್ರಕಟವಾದ, ಸುಮಾರಾಗಿ ಮಹತ್ವವುಳ್ಳ ವಿಭಿನ್ನ ಸುದ್ದಿಗಳ ಒಟ್ಟು ಸಂಖ್ಯೆ : ೭೧. ಅವುಗಳಲ್ಲಿ ಅತಿ ಹೆಚ್ಚು ಸುದ್ದಿಗಳನ್ನು ಪ್ರಕಟಿಸಿದ ಪತ್ರಿಕೆ ವಿಜಯ ಕರ್ನಾಟಕ. ನಂತರದ ಸ್ಥಾನ ಪ್ರಜಾವಾಣಿಯದು. ಸಂಯುಕ್ತ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ಮೂರನೆಯ ಹಾಗು ಕೊನೆಯ ಸ್ಥಾನವನ್ನು ಪಡೆದಿವೆ :
ಸುಮಾರಾಗಿ ಮಹತ್ವವಿರುವ ವಿಭಿನ್ನ ಸುದ್ದಿಗಳಲ್ಲಿ ಅತಿ ಹೆಚ್ಚು ಸುದ್ದಿಗಳನ್ನು ವಿಜಯ ಕರ್ನಾಟಕ ಪತ್ರಿಕೆ ನೀಡಿದೆ. ಪ್ರಜಾವಾಣಿ ಒಂದೇ ಒಂದು ಕಡಿಮೆ ಸುದ್ದಿಯೊಂದಿಗೆ ಪಕ್ಕದಲ್ಲಿಯೇ ನಿಂತಿದೆ. ಸಂಯುಕ್ತ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ಹಿಂದಿನ ಸಾಲಿನಲ್ಲಿ ಜೊತೆಯಾಗಿ ನಿಂತಿವೆ ! ಇವುಗಳಲ್ಲಿ ಯಾವ ಪತ್ರಿಕೆಯೂ ಸುಮಾರಾಗಿ ಮಹತ್ವವಿರುವ ೭೧ ಸುದ್ದಿಗಳ ಅರ್ಧದಷ್ಟನ್ನೂ ಸಹ ಓದುಗರಿಗೆ ವರದಿ ಮಾಡಿಲ್ಲ ಎನ್ನುವದನ್ನು ಗಮನಿಸಬೇಕು.

ಈ ಪತ್ರಿಕೆಗಳು ತಮ್ಮ ಜಾಹೀರಾತಿನ ಅಥವಾ ಸಮಾಚಾರೇತರ ಭಾಗದ ಇನ್ನು ಸ್ವಲ್ಪ ಭಾಗವನ್ನು ಸುದ್ದಿ ಭಾಗಕ್ಕೆ ನೀಡಿದರೆ, ಇನ್ನಷ್ಟು ಹೆಚ್ಚು ಸುದ್ದಿಗಳನ್ನು ಅಂದರೆ ಒಟ್ಟು ಸುದ್ದಿಗಳ ಶೇಕಡಾ ೬೦ರಷ್ಟನ್ನಾದರೂ ಓದುಗರಿಗೆ ಕೊಡಬಹುದಾಗಿದೆ.

ತಲೆಬರಹ :
ದಿ: ೧-೬-೨೦೧೦ರ ಅತಿ ಮುಖ್ಯ ಸುದ್ದಿ ಎಂದರೆ ಮೇಲ್ಮನೆ ಚುನಾವಣೆ. ವಿಜಯ ಕರ್ನಾಟಕವು ಈ ಸಮಾಚಾರಕ್ಕೆ  ಹೆಚ್ಚಿನ ಪ್ರಾಶಸ್ತ್ಯ ನೀಡಿ, ಮೊದಲ ಪುಟದಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟಿಸಿದೆ. ಪತ್ರಿಕೆಯ ಅಡ್ಡಳತೆಯ ಮುಕ್ಕಾಲು ಭಾಗವನ್ನು ಇದು ವ್ಯಾಪಿಸಿದೆ . ತಲೆಬರಹ ಈ ರೀತಿಯಾಗಿದೆ :
ಈ ತಲೆಬರಹದ ಮೂಲಕ ಮೇಲ್ಮನೆ ಚುನಾವಣೆಗೆ ಸಂಬಂಧಿಸಿದ ಎರಡು ನಿರ್ದಿಷ್ಟ ಅಂಶಗಳು ಓದುಗನಿಗೆ ತಿಳಿದು ಬರುವವು. (೧) ಮುಕ್ತಾಯ ದಿನಾಂಕ (೨) ಅಭ್ಯರ್ಥಿಗಳ ಸಂಖ್ಯೆ. ಆದುದರಿಂದ ಈ ತಲೆಬರಹಕ್ಕೆ ಅತ್ಯುತ್ತಮ ತಲೆಬರಹ ಎನ್ನಬಹುದು.

ಪ್ರಜಾವಾಣಿ ಪತ್ರಿಕೆಯ ತಲೆಬರಹಕ್ಕೆ ಎರಡನೆಯ ಸ್ಥಾನವನ್ನು ನೀಡಬಹುದು :

ಈ ತಲೆಬರಹದಲ್ಲಿ ನಾಮಪತ್ರಿಕೆಯ ಸಲ್ಲಿಸುವ ದಿನಾಂಕ ಮುಗಿದುದರ ಬಗೆಗೆ ಅರಿವಾಗುವದಿಲ್ಲ.
ಆದರೆ ದಳ ಹಾಗು ಕಾಂಗ್ರೆಸ್ ಪಕ್ಷಗಳ ಭಿನ್ನಾಭಿಪ್ರಾಯದ ಬಗೆಗೆ ನಿರ್ದಿಷ್ಟವಾದ ಮಾಹಿತಿ ಇದೆ. ಅಲ್ಲದೆ, ಮುಂದುವರಿದ  ಸಮಾಚಾರದಲ್ಲಿ  ಈ ಭಿನ್ನಾಭಿಪ್ರಾಯದ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ
ಮಾಹಿತಿಯನ್ನು ಇತರ ಪತ್ರಿಕೆಗಳು ನೀಡಿಲ್ಲ.

ಮೂರನೆಯ ಸ್ಥಾನವನ್ನು ಕನ್ನಡ ಪ್ರಭಾ ಪತ್ರಿಕೆಗೆ ನೀಡಬಹುದು.

ಪತ್ರಿಕೆಯ ಮೊದಲ ಪುಟದ ಅಗ್ರಭಾಗದಲ್ಲಿ ವೃದ್ಧರೊಬ್ಬರ ಸಾಧನೆಯ ವರ್ಣನೆಯನ್ನು ಮಾಡಲಾಗಿದೆ. ಈ ವರ್ಣನೆಯು  ಮಹತ್ವವುಳ್ಳ ದೈನಂದಿನ ಸಮಾಚಾರವಾಗಲಾರದು ಎನ್ನುವ ಅರಿವು ಪತ್ರಿಕೆಯ ಸಂಪಾದಕರಿಗೆ ಇದ್ದಂತಿಲ್ಲ. ಇದನ್ನು ಎರಡನೆಯ ಪುಟದ ಮೇಲ್ಭಾಗದಲ್ಲಿ ನೀಡಬಹುದಾಗಿತ್ತು. ಇದರ ಕೆಳಭಾಗದಲ್ಲಿ ಎಡಗಡೆಗೆ ಶ್ರೀ ಶ್ರೀರವಿಶಂಕರ ಗುರೂಜಿಯವರ ಹತ್ಯೆಯ ಸಮಾಚಾರದ ವಿಶ್ಲೇಷಣೆ ಇದೆ. ಇದಕ್ಕೆ ನೀಡಿದ ತಲೆಬರಹದ ಭಾಗ ಬಹಳಷ್ಟು ಜಾಗವನ್ನು ಆಕ್ರಮಿಸಿಕೊಂಡಿದೆ. ಈ ವಿಶ್ಲೇಷಣೆಯು ನಿನ್ನೆ ಜರುಗಿದ ಘಟನೆಯ ವಿಶ್ಲೇಷಣೆ. ನಿನ್ನೆಯೇ ಇದರ ಬಗೆಗೆ ಸಾಕಷ್ಟು ವಿವರಗಳನ್ನು ನೀಡಲಾಗಿದ್ದು, ಮುಖಪುಟದಲ್ಲಿ ಮತ್ತೊಮ್ಮೆ ಇಷ್ಟು ದೀರ್ಘ ವಿಶ್ಲೇಷಣೆಯ ಅವಶ್ಯಕತೆ ಇರಲಿಲ್ಲ. ಈ ಸುದ್ದಿಯ ಬಲಭಾಗದಲ್ಲಿ ಮೇಲ್ಮನೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಚಾರ ಕೊಡಲಾಗಿದೆ. ಇದರ ತಲೆಬರಹ ಸಂದಿಗ್ಧವಾಗಿದೆ. ಈ ತಲೆಬರಹದಿಂದ ತಿಳಿಯುವ ಅಂಶವೆಂದರೆ ದಳ ಹಾಗು ಕಾಂ^ಗ್ರೆಸ್ ಪಕ್ಷಗಳ ನಡುವೆ ತಾತ್ಕಾಲಿಕ ಭಿನ್ನಾಭಿಪ್ರಾಯವಿದ್ದು, ಅದು ಕೊನೆಗೊಳ್ಳಬಹುದು.  ಈ ಎಲ್ಲ ಅಂಶಗಳನ್ನು ಗಮನಿಸಿದರೆ ಕನ್ನಡ ಪ್ರಭಾ ಪತ್ರಿಕೆಯು ಮುಖಪುಟದ ಸಮಾಚಾರಗಳಿಗೆ ಹಾಗು ತಲೆಬರಹಕ್ಕೆ ಸಾಕಷ್ಟು ಗಮನ ನೀಡುತ್ತಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

ತಲೆಬರಹಕ್ಕೆ ಸಂಬಂಧಿಸಿದಂತೆ ಸಂಯುಕ್ತ ಕರ್ನಾಟಕ ಪತ್ರಿಕೆಯದು ಕೊನೆಯ ಸ್ಥಾನ. ಅಷ್ಟೇ ಅಲ್ಲ, ಒಂದು ಸಮಾಚಾರ ಪತ್ರಿಕೆಗೆ ಇರಬೇಕಾದ ಸಾಮಾನ್ಯ ಜ್ಞಾನವು ತನಗಿಲ್ಲ ಎನ್ನುವದನ್ನು ಈ ಪತ್ರಿಕೆಯು ಬಿನ್ ದಾಸ್ ಶೈಲಿಯಲ್ಲಿ ತೋರಿಸಿಕೊಳ್ಳುತ್ತದೆ.
ಮುಖಪುಟದ ಅಗ್ರಭಾಗದಲ್ಲಿ ಶ್ರೀ ಶ್ರೀರವಿಶಂಕರ ಗುರೂಜಿಯವರು ತಾವು ಅಪರಾಧಿಯನ್ನು ಕ್ಷಮಿಸಿರುವದಾಗಿ ತಿಳಿಸಿರುವ ಸಮಾಚಾರವಿದೆ.  ಸಾಮಾನ್ಯವಾಗಿ ಎಲ್ಲ ಸಂತರೂ ಹೇಳುವಂತಹ ಮಾತಿದು. ಇದನ್ನು  ಇಷ್ಟು ದೊಡ್ಡದಾಗಿ, ಅಗ್ರಭಾಗದಲ್ಲಿ ನೀಡುವ ಅವಶ್ಯಕತೆ ಇರಲಿಲ್ಲ.
ಇದರ ಕೆಳಗೆ ದೊಡ್ಡಕ್ಷರಗಳಲ್ಲಿ ನೀಡಲಾದ ಸುದ್ದಿ ಹೀಗಿದೆ:

ಈ ತಲೆಬರಹದ ಅರ್ಥವೇ ಆಗಲಾರದಂತಿದೆ. ಜ್ಞಾನೇಶ್ವರಿ ಯಾರು? ಯಾರ ಗುರಿ ತಪ್ಪಿತು? ಯಾಕೆ ತಪ್ಪಿತು? ಇವು ಓದುಗನಲ್ಲಿ ಮೊದಲು ಮೂಡುವ ಪ್ರಶ್ನೆಗಳು. ಸಮಾಚಾರವನ್ನು ಪೂರ್ತಿ ಓದಿದಾಗಲೇ, ನಕ್ಸಲರು ಗೂಡ್ಸ ಗಾಡಿಯನ್ನು ಹಳಿ ತಪ್ಪಿಸಲು ಬಯಸಿದ್ದರು ; ಆದರೆ ಅಜ್ಞಾನವಶಾತ್ ಜ್ಞಾನೇಶ್ವರಿ ಎನ್ನುವ ಪ್ರಯಾಣಿಕರ ರೇಲವೆ ಗಾಡಿಯ ಅಪಘಾತಕ್ಕೆ ಕಾರಣರಾದರು ಎನ್ನುವ ಅಂಶ ತಿಳಿದು ಬರುತ್ತದೆ. ಇದು ಮುಖ್ಯ ಸುದ್ದಿಯಾಗುವ ಅರ್ಹತೆಯನ್ನು ಪಡೆದಿಲ್ಲ. ಆದರೂ ಇದಕ್ಕಾಗಿ ಮುಖಪುಟದ ೧೩೨ ಚಸೆಂಮೀ ಜಾಗವನ್ನು ವ್ಯಯಿಸಲಾಗಿದೆ. ಮುಖ್ಯ ಸುದ್ದಿಯಾಗಬೇಕಾಗಿದ್ದ ಮೇಲ್ಮನೆ ಚುನಾವಣೆಯ ಬಗೆಗೆ ಮುಖಪುಟದ ಕೆಳ ಭಾಗದಲ್ಲಿ ಕೇವಲ ೧೧೨ ಚಸೆಂಮೀಯಷ್ಟು ಸ್ಥಳವನ್ನು ನೀಡಲಾಗಿದೆ. ಮೇಲ್ಮನೆಗೆ ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವಾಗ, ಎಂಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಈ ಸುದ್ದಿಯಲ್ಲಿ ತಿಳಿಸುವ ಮೂಲಕ ಓದುಗರಿಗೆ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. ಜೊತೆಗೆ ತಮ್ಮ ಅಜ್ಞಾನದ ಹಾಗು ಬೇಜವಾಬುದಾರಿಯ ಪರಮಾವಧಿಯನ್ನು ತೋರಿಸಿದ್ದಾರೆ. ಬಲ ಭಾಗದಲ್ಲಿ ಪೋಲೀಸ ಅಧಿಕಾರಿಯ ಹೇಳಿಕೆಯಲ್ಲಿ ‘ಆರ್ಟ ಆಫ್ ಲೀವಿಂಗ್’ ಎನ್ನುವ ಪದವನ್ನು ಬಳಸಿದ್ದಾರೆ, ಅದೂ ಎರಡು ಸಲ. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಮಂಡಲಿಗೆ ಇಂಗ್ಲಿಶ್ ಭಾಷೆಯ ಜ್ಞಾನ ಇಲ್ಲ ಎನ್ನುವ ಸಂದೇಹ ಓದುಗರಿಗೆ ಮೊದಲಿನಿಂದಲೂ ಇದೆ. ‘ಸಿಇಟಿ ಕೌನ್ಸೆಲಿಂಗ್’ ಅನ್ನುವ ಪದಪುಂಜವನ್ನು ಯಾವಾಗಲೂ ಸಿಇಟಿ ಕೌನ್ಸಿಲಿಂಗ್’ ಎಂದೇ ಬರೆಯುತ್ತ ಬಂದಿದೆ ಈ ಪತ್ರಿಕೆ. ‘ಕೌನ್ಸೆಲ್’ ಹಾಗು ‘ಕೌನ್ಸಿಲ್’ ಪದಗಳ ಅರ್ಥಭೇದವನ್ನೇ ತಿಳಿಯದ ಈ ಸಂಪಾದಕ ಮಂಡಲಿಯು ಓದುಗರನ್ನು, ವಿಶೇಷತಃ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುತ್ತಿರುವದು ವಿಷಾದದ ಸಂಗತಿ.

ತಲೆಬರಹಗಳ ಬಳಿಕ, ಈಗ ಮುಖ್ಯ ಸುದ್ದಿಗಳನ್ನಷ್ಟು  ಅವಲೋಕಿಸೋಣ. ಒಂದು ಪತ್ರಿಕೆಗೆ ರಾಶಿ ರಾಶಿ ಸುದ್ದಿ ಬಂದು ಬೀಳುತ್ತವೆ. ಅವುಗಳಲ್ಲಿ ಪ್ರಮುಖವಾದುವಗಳನ್ನು ಆರಿಸುವದು ಹೇಗೆ? ಓದುಗನಾಗಿ ನನ್ನ ಅಭಿಪ್ರಾಯ ಹೀಗಿದೆ:
ಮೊದಲನೆಯದಾಗಿ ಸುದ್ದಿ ತಾಜಾ ಇರಬೇಕು. ಆ ಬಳಿಕ ಅವುಗಳ ಸ್ಥಾನಮಾನ ಈ ರೀತಿಯಾಗಿ ಇರಬೇಕು:
(೧) ಭಾರತವು ಭಾಗವಹಿಸಿದ ಅಂತರರಾಷ್ಟೀಯ ಸುದ್ದಿಗಳು
(೨) ಭಾರತದ  ಮೇಲೆ ಮಹತ್ವದ ಪರಿಣಾಮ ಬೀರುವ ಅಂತರರಾಷ್ಟ್ರೀಯ ಸುದ್ದಿಗಳು
(೩) ಕರ್ನಾಟಕದ ಮಹತ್ವದ ಸುದ್ದಿಗಳು
(೪) ಸ್ಥಳೀಯ ಮಹತ್ವದ ಸುದ್ದಿಗಳು

(೧) ಮೇಲ್ಮನೆ ಚುನಾವಣೆಯು ಮಹತ್ವದ ವಿಷಯವಾಗಿದ್ದರಿಂದ ಈ ನಾಲ್ಕೂ  ಪತ್ರಿಕೆಗಳು, ಈ ಸುದ್ದಿಯನ್ನು ಮೊದಲ ಪುಟದಲ್ಲಿಯೇ ಪ್ರಕಟಿಸಿವೆ. ವಿಜಯ ಕರ್ನಾಟಕ (೪೮೪ ಚಸೆಂಮೀ) ಹಾಗು ಪ್ರಜಾವಾಣಿ (೩೨೦ ಚಸೆಂಮೀ) ಈ ಸುದ್ದಿಗೆ ಅಗ್ರ ಪ್ರಾಶಸ್ತ್ಯ ನೀಡಿವೆ. ಕನ್ನಡ ಪ್ರಭಾ ಪತ್ರಿಕೆಯು ವೃದ್ಧನೊಬ್ಬನ ಸಮಾಜ ಸೇವೆಯನ್ನು ಮೇಲ್ಭಾಗದಲ್ಲಿ ಪ್ರಕಟಿಸಿದೆ. ಶ್ರೀ ಶ್ರೀರವಿಶಂಕರರಿಗೆ ಎರಡನೆಯ ಪ್ರಾಶಸ್ತ್ಯ. ಕೊನೆಯ ಪ್ರಾಶಸ್ತ್ಯ ಮೇಲ್ಮನೆ ಚುನಾವಣೆಗೆ (೪೬೩ ಚ.ಸೆಂಮೀ). ಈ ಸಮಾಚಾರವನ್ನು ಸಂಯುಕ್ತ ಕರ್ನಾಟಕವು ಮುಖಪುಟದ ನಡುಭಾಗದಲ್ಲಿ ಪ್ರಕಟಿಸಿದೆ ಹಾಗು ಕನಿಷ್ಠ ಸ್ಥಳಾವಕಾಶ ನೀಡಿದೆ (೧೨೦ ಚಸೆಂಮೀ).

(೨) ಹೊರನಾಡ ಕನ್ನಡಿಗರ ಸಮ್ಮೇಳನವು ಧಾರವಾಡದಲ್ಲಿ ಜರುಗಿತು. ಈ ಸಮ್ಮೇಳನದಲ್ಲಿ ಭಾರತದ ಎಲ್ಲೆಡೆಯ ಕನ್ನಡ ಸಂಘಗಳು ಭಾಗವಹಿಸಿದ್ದವು. ಅನೇಕ ಮಹತ್ವದ ವಿಷಯಗಳ ಬಗೆಗೆ ಚರ್ಚೆ ನಡೆಯಿತು. ಇದು ರಾಜಕೀಯವಾಗಿ ಮಹತ್ವದ ವಿಷಯವಾಗಿರಲಿಕ್ಕಿಲ್ಲ. ಆದರೆ ಸಾಂಸ್ಕೃತಿಕವಾಗಿ ತುಂಬ ಮಹತ್ವದ ವಿಷಯವಾಗಿತ್ತು. ಈ ಸಮಾಚಾರಕ್ಕೆ ಮೂರನೆಯ ಪುಟದಲ್ಲಿ ಸ್ಥಾನ ಹಾಗು ಉತ್ತಮ ಸ್ಥಳಾವಕಾಶ ಸಿಗಬೇಕಾಗಿತ್ತು.  ಸಂಯುಕ್ತ ಕರ್ನಾಟಕ ಪತ್ರಿಕೆಯು ಈ ಸಮಾಚಾರವನ್ನು ೪ನೆಯ ಹಾಗು ೧೨ನೆಯ ಪುಟಗಳಲ್ಲಿ ಪ್ರಕಟಿಸಿದೆ. ಒಟ್ಟು ೧೦೫೨ ಚಸೆಂಮೀ ಸ್ಥಳವನ್ನು ನೀಡಿದೆ. ಕನ್ನಡ ಪ್ರಭಾ ಪತ್ರಿಕೆಯು ಅತಿ ಹೆಚ್ಚು ಸ್ಥಳವನ್ನು ಅಂದರೆ ೧೦೮೯ ಚಸೆಂಮೀ ಸ್ಥಳವನ್ನು ನೀಡಿದ್ದರೂ ಸಹ ೯ನೆಯ ಪುಟದಲ್ಲಿ ಪ್ರಕಟಿಸಿ, ಸಮಾಚಾರವನ್ನು ಅಪಮೌಲ್ಯಗೊಳಿಸಿದೆ. ಪ್ರಜಾವಾಣಿ ಪತ್ರಿಕೆಯು ಈ ಪತ್ರಿಕೆಗಳು ನೀಡಿದ ಸ್ಥಳದ ಸುಮಾರು ಅರ್ಧದಷ್ಟು ಸ್ಥಳವನ್ನು  ಅಂದರೆ ೫೪೯ ಚಸೆಂಮೀ ಸ್ಥಳವನ್ನು ನೀಡಿದೆ. ೪ನೆಯ ಹಾಗು ೮ನೆಯ ಪುಟಗಳಲ್ಲಿ  ಈ ಸಮಾಚಾರವನ್ನು ಪ್ರಕಟಿಸಿದೆ. ೪ನೆಯ ಪುಟದಲ್ಲಿಯೇ ಪ್ರಕಟಿಸಿದರೂ ಸಹ ಕನಿಷ್ಠ ಸ್ಥಳವನ್ನು ನೀಡಿದ ಕೀರ್ತಿ ವಿಜಯ ಕರ್ನಾಟಕಕ್ಕೆ ಸಲ್ಲಬೇಕು. ೫೨೯ ಚಸೆಂಮೀ ಸ್ಥಳ ಮಾತ್ರ ಈ ಮಹತ್ವದ ಸುದ್ದಿಗೆ ಸಾಕು ಎನ್ನುವದು ವಿಜಯ ಕರ್ನಾಟಕದ ಅಭಿಪ್ರಾಯವಾಗಿದೆ. ಕನ್ನಡ ನುಡಿಗೇ ಮಹತ್ವ ಕೊಡದ ವಿಜಯ ಕರ್ನಾಟಕವು, ಹೊರನಾಡ ಕನ್ನಡಿಗರ ಸಮ್ಮೇಳನಕ್ಕೆ ಏನು ಮಹತ್ವ ಕೊಟ್ಟೀತು?

ಉಳಿದ ಸುದ್ದಿಗಳಲ್ಲಿ ಅನೇಕ ಸ್ಥಳೀಯ ಮಹತ್ವದ ಸುದ್ದಿಗಳಿವೆ:
(೧) ನೂತನ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಮಾವೇಶವು ಧಾರವಾಡದಲ್ಲಿ ಜರುಗಿದ್ದು , ಪಂಚಾಯತ ರಾಜ ಇಲಾಖೆಯ ಮಂತ್ರಿ ಶ್ರೀ ಶೆಟ್ಟರರು ಅಲ್ಲಿ ಭಾಷಣ ಮಾಡಿದ್ದಾರೆ. ಮಂತ್ರಿಗಳ ಭಾಷಣದ ಸಾರವನ್ನು ವಿವಿಧ ಪತ್ರಿಕೆಗಳು ವರದಿ ಮಾಡಿದ ಪರಿ ಹೀಗಿದೆ :

ಸಂಯುಕ್ತ  ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ‘ಉದ್ಯೋಗ ಖಾತ್ರಿ ಯೋಜನೆಗಾಗಿ ೪೬೦೦ ಕೋಟಿ ರೂ. ಬಿಡುಗಡೆ’ ಎನ್ನುವ ತಲೆಬರಹವನ್ನು ನೀಡಿವೆ. ವಿಜಯ ಕರ್ನಾಟಕ ಪತ್ರಿಕೆಯು  ‘ನಿರುದ್ಯೋಗ ನಿವಾರಣೆಗೆ ಶ್ರಮಿಸಿ’ ಎನ್ನುವ ತಲೆಬರಹ ನೀಡಿದೆ.  ‘ಕ್ರಾಂತಿಕಾರಕ ಬದಲಾವಣೆ ಮಾಡಿರಿ: ಶೆಟ್ಟರ್ ಸಲಹೆ’ ಎನ್ನುವ ಅತ್ಯಂತ ಮೂರ್ಖ ತಲೆಬರಹವನ್ನು ಪ್ರಜಾವಾಣಿ ಪತ್ರಿಕೆ ನೀಡಿದೆ.

ಮಂತ್ರಿಗಳ ಭಾಷಣದಲ್ಲಿ ಯಾವ ಅಂಶಕ್ಕೆ ವಾಸ್ತವಿಕತೆಯ ಬೆಂಬಲವಿರುತ್ತದೆಯೊ ಅದನ್ನು ತಲೆಬರಹಕ್ಕಾಗಿ ಬಳಸಿಕೊಳ್ಳಬೇಕು. ಕೇಂದ್ರದಿಂದ ೪೬೦೦ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಒಂದು ವಾಸ್ತವ ಘಟನೆ. ಆದುದರಿಂದ ಈ ತಲೆಬರಹಕ್ಕೆ ವಾಸ್ತವತೆಯ ಬೆಂಬಲವಿದೆ.  ನಿರುದ್ಯೋಗ ನಿವಾರಣೆ ಮಾಡುವದು ಅಧಿಕಾರಿಗಳ ಕೈಯಲ್ಲಿ ಇರುವದಿಲ್ಲ. ಆದರೂ ಸಹ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಅನುದಾನ ಬಿಡುಗಡೆಯಾಗುತ್ತಿರುವದರಿಂದ, ‘ನಿರುದ್ಯೋಗ ನಿವಾರಣೆಗೆ ಶ್ರಮಿಸಿ’ ಎನ್ನುವ ತಲೆಬರಹವನ್ನೂ ಒಪ್ಪಿಕೊಳ್ಳಬಹುದು.

ಇನ್ನು ಮಂತ್ರಿಗಳು ತಮ್ಮ ಭಾಷಣದಲ್ಲಿ ಅನೇಕ ವಿಷಯಗಳನ್ನು ಹೇಳುತ್ತಾರೆ. ಕೆಲವೊಮ್ಮೆ ಅದು ಕೇವಲ public imageಗಾಗಿ ಇರುತ್ತದೆ. ‘ಕ್ರಾಂತಿಕಾರಕ ಬದಲಾವಣೆ ಮಾಡಿರಿ’ ಎನ್ನುವದು ಇಂತಹ ಒಂದು ವೀರಾವೇಶದ ಹೇಳಿಕೆಯಾಗಿರಬಹುದು. ಅಥವಾ ಅವರ ಪಕ್ಷದ ಆಶಯವಾಗಿರಬಹುದು. ಒಟ್ಟಿನಲ್ಲಿ ಶೆಟ್ಟರು ಮಾಡಿದ ಭಾಷಣದಲ್ಲಿ ಇದು ಮಹತ್ವದ ಅಂಶವಂತೂ ಅಲ್ಲ. ಆದುದರಿಂದ ಈ ತಲೆಬರಹವನ್ನು ನೀಡುವದರ ಮೂಲಕ ಪ್ರಜಾವಾಣಿಯು ತನ್ನ ದಡ್ಡತನವನ್ನು ತೋರಿದೆ.

ಅಧಿಕಾರಿಗಳಿಗೆ ಲ್ಯಾಪ್ ಟಾ^ಪ್ ಹಾಗು ಮೋಬೈಲ್ ಸಿಮ್ ಕೊಡುವ ವಿಷಯವನ್ನು ಮತ್ತು ಮಂತ್ರಿ ಶೆಟ್ಟರರು ಪ್ರತಿಜ್ಞಾವಿಧಿಯನ್ನು ಬೋಧಿಸಿದ ವಿಷಯವನ್ನು  ವಿಜಯ ಕರ್ನಾಟಕ, ಪ್ರಜಾವಾಣಿ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ವರದಿ ಮಾಡಿವೆ. ಸಂಯುಕ್ತ ಕರ್ನಾಟಕವು ಈ ವರದಿ ಮಾಡದಿರುವದು ಎದ್ದು ಕಾಣುವ ಲೋಪವಾಗಿದೆ.

ತಲೆಬರಹ ಹಾಗು ಸಮಾಚಾರ-ಲೋಪದ ಉದಾಹರಣೆಯನ್ನು ನೋಡಿದಂತಾಯಿತು. ಇನ್ನು ಕೆಲವೊಂದು ಪತ್ರಿಕೆಗಳಲ್ಲಿ ವರದಿಯಾಗದೇ ಇರುವ ಕೆಲವು ಮಹತ್ವದ ಸುದ್ದಿಗಳನ್ನು ನೋಡೋಣ;

(೧) ಭಾರತದಲ್ಲಿ ಮೊದಲ ಬಾರಿಗೆ ನಡೆದ ಪೋಲೋ ಕಪ್ ಇಂಡಿಯಾ ಚಾಂಪಿಯನ್ ಶಿಪ್ ಪಂದ್ಯದ ವರದಿ ಕೇವಲ ವಿಜಯ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳಲ್ಲಿ ಮಾತ್ರ ಬಂದಿದೆ. ಸಂಯುಕ್ತ ಕರ್ನಾಟಕ ಹಾಗು ಪ್ರಜಾವಾಣಿ ಪತ್ರಿಕೆಗಳು ಈ ಮಹತ್ವದ  ಸಮಾಚಾರವನ್ನು ವರದಿ ಮಾಡದೆ ಇದ್ದದ್ದು ದೊಡ್ಡ ಲೋಪವಾಗಿದೆ.

 (೨) ಮುಜಾಹಿದೀನ್ ಸಂಘಟನೆಯ ಮುಖಂಡನ ಹತ್ಯೆಯು ಪ್ರಮುಖ ಸುದ್ದಿಯಾದರೂ ಸಹ ಕೇವಲ ಪ್ರಜಾವಾಣಿಯಲ್ಲಿ ಮಾತ್ರ ವರದಿಯಾಗಿದೆ.

(೩) ಜಾಗತಿಕ ಹೂಡಿಕೆದಾರರ ಸಮ್ಮೇಳನದ ವರದಿಯು ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ವರದಿಯಾಗಿಲ್ಲ.

(೪) ದರೋಡೆಕೋರರ ಇರಿತಕ್ಕೆ ಪೋಲೀಸನ ಬಲಿ ಎನ್ನುವ ವರದಿಯು ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ವರದಿಯಾಗಿಲ್ಲ.

(೫) ಕೇರಳ ಹಾಗು ಬಂಗಾಲದಲ್ಲಿ ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯದ ಶಾಖೆಗಳು ಪ್ರಾರಂಭವಾಗುವದು ಮಹತ್ವದ ಸಮಾಚಾರ. ಈ ಸುದ್ದಿ ಕೇವಲ ಕನ್ನಡ ಪ್ರಭಾ ಹಾಗು ವಿಜಯ ಕರ್ನಾಟಕಗಳಲ್ಲಿ ಪ್ರಕಟವಾಗಿದೆ.

(೬) ಧಾರವಾಡದಲ್ಲಿ ಅಖಿಲ ಭಾರತೀಯ ಹಾಶಮ್ ಪೀರ ಶಾಂತಿ ಪ್ರತಿಷ್ಠಾನದ ಉದ್ಘಾಟನೆಯಾದ ಸುದ್ದಿಯು ಕೇವಲ ಕನ್ನಡ ಪ್ರಭಾ ಪತ್ರಿಕೆಯಲ್ಲಿ ವರದಿಯಾಗಿದೆ.

(೭) ಧಾರವಾಡದಲ್ಲಿ ಆಯೋಜಿಸಲಾಗುತಿರುವ ಕ್ಷೇತ್ರವಾರು ಉದ್ಯೋಗ ಮೇಳದ ವರದಿಯನ್ನು ಪ್ರಜಾವಾಣಿ ಮಾತ್ರ ಮಾಡಿದೆ

 (೮) ಶಾಸಕ ಲಾಡ ಇವರ ಪ್ರಚಾರ ಭಾಷಣ ಹಾಗು ಮಂತ್ರಿ ಶೆಟ್ಟರರ ಭಾಷಣ ಕೇವಲ ವಿಜಯ ಕರ್ನಾಟಕದಲ್ಲಿ ವರದಿಯಾಗಿವೆ. 

 (೯) ಮಂಡ್ಯದಲ್ಲಿ ತಪ್ಪಿದ ರೇಲವೇ ದುರಂತದ ಸುದ್ದಿ ಕೇವಲ ಪ್ರಜಾವಾಣಿ ಹಾಗು ಸಂಯುಕ್ತ ಕರ್ನಾಟಕಗಳಲ್ಲಿ ಮಾತ್ರ ಬಂದಿದೆ.

(೧೦) ಮಣಿಪಾಲ ವಿಶ್ವವಿದ್ಯಾಲಯಕ್ಕೆ ಕುಲಪತಿಯ ನೇಮಕವಾದ ಸುದ್ದಿ ವಿಜಯ ಕರ್ನಾಟಕ ಹಾಗು ಕನ್ನಡ ಪ್ರಭಾಗಳಲ್ಲಿ ಮಾತ್ರ ವರದಿಯಾಗಿದೆ.

(೧೧) ಅಥಣಿಯಲ್ಲಿ ಸಾಂಸ್ಕೃತಿಕ ಸಂಘ ಆರಂಭವಾದ ಸುದ್ದಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮಾತ್ರ ಬಂದಿದೆ.

(೧೨) ಸಿಇಟಿ ಕೌನ್ಸೆಲಿಂಗಿನಲ್ಲಿ ಸಿಸಿಟಿವಿಯ ಬಳಕೆಯಾಗಲಿದೆ ಎನ್ನುವ ಉಪಯುಕ್ತ ಮಾಹಿತಿಯು ಕೇವಲ ಪ್ರಜಾವಾಣಿಯಲ್ಲಿ ವರದಿಯಾಗಿದೆ.

ಮೇಲಿನ ಲೋಪಗಳು ಕೇವಲ ಉದಾಹರಣೆಗೆ ಮಾತ್ರ. ಈ ತರಹದ ಇನ್ನೂ ಚಿಕ್ಕ ಪುಟ್ಟ ಆದರೆ ಮಹತ್ವದ ಅನೇಕ ಸುದ್ದಿಗಳನ್ನು ಈ ಪತ್ರಿಕೆಗಳು ವರದಿ ಮಾಡುವ ಮನಸ್ಸು ಮಾಡಿಲ್ಲ. ಆದರೆ, ಕೆಲಸಕ್ಕೆ ಬಾರದ ಸುದ್ದಿಗಾಗಿ ಹಾಗು ವಿಶ್ಲೇಷಣೆಗಾಗಿ ಅನವಶ್ಯಕ ಸ್ಥಳಾವಕಾಶ ಮಾಡುತ್ತವೆ.  ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಮೋಬೈಲ್ ವೇಶ್ಯಾವಾಟಿಕೆ ಎನ್ನುವದು ಒಂದು ಮೂರನೆಯ ದರ್ಜೆಯ ವರದಿ. ಇದಕ್ಕೆ ೧೪೪ ಚಸೆಂಮೀ ಸ್ಥಳ ಕೊಡಲಾಗಿದೆ.
ವೀರಪ್ಪನ್ ಹೂತಿಟ್ಟ ದಂತಕ್ಕಾಗಿ ಉತ್ಖನನ ಎನ್ನುವ ಸುದ್ದಿಗಾಗಿ ಕನ್ನಡ ಪ್ರಭಾ ಪತ್ರಿಕೆಯು ೨೮೬ ಚಸೆಂಮೀ ಸ್ಥಳವನ್ನು ವ್ಯಯಿಸಿದೆ.

ದಿನಾಂಕರೇಖೆ:
ಪತ್ರಿಕೆಗಳು ಸುದ್ದಿಯ ವರದಿಯ ಪ್ರಾರಂಭದಲ್ಲಿ ದಿನಾಂಕವನ್ನು ದಾಖಲಿಸಬೇಕು. ಹಾಗಿದ್ದಾಗ ಮಾತ್ರ ಸುದ್ದಿಯ ತಾಜಾತನ ತಿಳಿಯುತ್ತದೆ. ಸಂಯುಕ್ತ ಕರ್ನಾಟಕ ಹಾಗು  ಕನ್ನಡ ಪ್ರಭಾ ಪತ್ರಿಕೆಗಳು ತಾವು ಪ್ರಕಟಿಸಿದ ಬಹುತೇಕ ಸುದ್ದಿಗಳಿಗೆ ದಿನಾಂಕವನ್ನು ನಮೂದಿಸಿವೆ. ಆದರೆ ವಿಜಯ ಕರ್ನಾಟಕ ಹಾಗು ಪ್ರಜಾವಾಣಿ ಪತ್ರಿಕೆಗಳು ಮಾತ್ರ ಯಾವ ಸುದ್ದಿಗೂ ದಿನಾಂಕವನ್ನು ಕೊಟ್ಟಿಲ್ಲ. ತಾವು ಹಳಸಲು ಸುದ್ದಿಯನ್ನು ಪ್ರಕಟಿಸಿದಾಗ, ಓದುಗರಿಗೆ ಅದರ ಅರಿವಾಗಬಾರದೆನ್ನುವ ಠಕ್ಕತನವೆ ಇದಕ್ಕೆ ಕಾರಣವೇ?

ಉದಾಹರಣೆಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಎರಡು ಸುದ್ದಿಗಳನ್ನು ನೋಡಿರಿ:

ಮೊದಲನೆಯ ಸುದ್ದಿಯಲ್ಲಿ ರವಿವಾರ  ಎಂದು ದಿನವನ್ನು ಹೇಳಿದ್ದಾರೆಯೆ ಹೊರತು ಮೇ ೩೦ ಎನ್ನುವ ದಿನಾಂಕವನ್ನು ಹೇಳಿಲ್ಲ. ಮೇ ೩೦ರಂದು ಭಾರತೀಯರು ತ್ರಿನಿದಾದ ದೇಶಕ್ಕೆ  ವಲಸೆ ಹೋದ ದಿನವೆಂದು ಆಚರಿಸುತ್ತಾರೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ಇದು ಅಪೂರ್ಣ ವರದಿಯ ಉದಾಹರಣೆ.

ಎರಡನೆಯ ಸುದ್ದಿಯು ಇನ್ನಿಷ್ಟು ಕಳಪೆ ವರದಿಯ ನಿದರ್ಶನವಾಗಿದೆ. ಲಂಡನ್ನಿನಲ್ಲಿ ತೊಗಲು ಬೊಂಬೆಯಾಟ ಯಾವಾಗ ನಡೆಯಿತು ಎನ್ನುವದಕ್ಕೆ ಯಾವುದೇ ಸುಳಿವನ್ನು ಇಲ್ಲಿ ನೀಡಿಲ್ಲ. ಅಂತರಜಾಲ ಶೋಧನೆ ಮಾಡಿದರೂ ಸಹ ನನಗೆ ಯಾವುದೆ ಧನಾತ್ಮಕ ಪರಿಣಾಮ ಲಭಿಸಲಿಲ್ಲ. ಈ ಸುದ್ದಿಯನ್ನು ನಂಬುವದು ಹೇಗೆ? ಇದು ಮಿಥ್ಯಾ ಸುದ್ದಿ ಯಾಕಾಗಿರಬಾರದು? ಆದುದರಿಂದ ಪ್ರತಿಯೊಂದು ಸುದ್ದಿಯ ತುಣುಕಿಗೂ ಪತ್ರಿಕೆಯು ದಿನಾಂಕವನ್ನು ನಮೂದಿಸಲೇ ಬೇಕು.

ಭಾಷಾಶುದ್ಧಿ :
ಓರ್ವ ವ್ಯಕ್ತಿ ಭಾಷೆಯನ್ನು ಕಲಿಯುವದೇ ಪತ್ರಿಕೆಗಳ ಮೂಲಕ. ಪತ್ರಿಕೆಯಲ್ಲಿ ದಾಖಲಾದ ಕಾಗುಣಿತವೇ ತಪ್ಪಾದರೆ, ಈ ತಪ್ಪು ಲಕ್ಷಾನುಗಟ್ಟಲೆ ಓದುಗರ ಮೂಲಕ ಎಲ್ಲೆಡೆ ಹರಡಿ ಸಾರ್ವತ್ರಿಕವಾಗುತ್ತದೆ.

ದಿ: ೧-೬-೨೦೧೦ರಂದು ಪ್ರಕಟವಾದ ಈ ನಾಲ್ಕೂ ಪತ್ರಿಕೆಗಳ ಸಂಚಿಕೆಗಳಲ್ಲಿ ಝಾರಖಂಡ ಎನ್ನುವ ಪದವನ್ನು ಜಾರ್ಖಂಡ್  ಎಂದು ಬರೆಯಲಾಗಿದೆ. ಸ್ವಾಮಿ ಸಂಪಾದಕರೆ, ಇಂತಹ ಹೊಸ ಪದವೊಂದನ್ನು ನೀವು ನೋಡಿದಾಗ, ವರದಿ ಬರೆಯುವ ಮೊದಲೊಮ್ಮೆ, ಇಂಗ್ಲಿಶ್ ವಿಕಿಪೀಡಿಯಾದಲ್ಲಿ ಒಮ್ಮೆ ಶೋಧನೆ ಮಾಡಿರಿ. ಅಲ್ಲಿ ಈ ಪದದ ಉಚ್ಚಾರವನ್ನು ಬರೆದಿರುತ್ತಾರೆ. ಅಲ್ಲದೆ ಉಚ್ಚಾರವನ್ನು ಧ್ವನಿಸಿ ತೋರಿಸುವ ಸೌಲಭ್ಯವೂ ಅಲ್ಲಿದೆ. ಕರ್ನಾಟಕದ ಕೆಲವು ನವ-ವೈಯಾಕರಣಿಗಳು ‘ಕನ್ನಡದಲ್ಲಿ ಮಹಾಪ್ರಾಣದ ಉಚ್ಚಾರ ಇಲ್ಲ, ಆದುದರಿಂದ ನಾವು ಬರೆಯುವದು ಹೀಗೇ’ ಎನ್ನುವ ಹುಚ್ಚಾರವನ್ನು ಮಾಡುತ್ತಾರೆ. ಹಾಗಿದ್ದರೆ, ಜಾರ್ಕಂಡ್ ಎಂದು ಬರೆಯಬೇಕಿತ್ತಲ್ಲ! ‘ಭಾರತ’ ಪದವನ್ನು ‘ಬಾರತ’ ಎಂದು ನೀವು ಬರೆಯುತ್ತೀರಾ? ಝಾರಖಂಡ ಮಾತ್ರ ಜಾರ್ಕಂಡ್ ಏಕಾಗಬೇಕು? ಮರಾಠಿ ಬಾಷಿಕರು ‘ಕನ್ನಡ’ಕ್ಕೆ ‘ಕಾನಡಿ’ ಎಂದು ಕರೆದಾಗ ನಿಮ್ಮ ಮೈ ಉರಿಯುವದಿಲ್ಲವೆ? ಅಥವಾ ವಿಶ್ವೇಶ್ವರ ಭಟ್ಟರನ್ನು ಇಸ್ವೇಸ್ವರ ಬಟ್ಟ ಎಂದು ಬರೆದರೆ, ಭಟ್ಟರಿಗೆ ಬೇಜಾರಾಗುವದಿಲ್ಲವೆ? ಹಾಗಿದ್ದಾಗ ಝಾರಖಂಡಕ್ಕೆ  ಜಾರ್ಖಂಡ್ ಎಂದು ಬರೆದರೆ, ಝಾರಖಂಡ ನಿವಾಸಿಗಳ ಮನಸ್ಸು ನೋಯುವದಿಲ್ಲವೆ?

ಕಾಗುಣಿತದ ತಪ್ಪುಗಳನ್ನು ಮಾಡುವಲ್ಲಿ ಸಂಯುಕ್ತ ಕರ್ನಾಟಕವು ಎಲ್ಲಕ್ಕೂ ಮುಂದಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿಯ ಕಾಗುಣಿತದ ತಪ್ಪುಗಳನ್ನು ನಾನು ಈ ಮೊದಲೂ ಎತ್ತಿ ತೋರಿಸಿದ್ದೆ. ಅವುಗಳನ್ನು ಇಲ್ಲಿ ಹಾಗು ಇಲ್ಲಿ ನೋಡಬಹುದು. 

ದಿನಾಂಕ ೧-೬-೨೦೧೦ರ ಸಂಚಿಕೆಯಲ್ಲಿ ಪ್ರಕಟವಾದ ಒಂದು ತಪ್ಪು ಹೀಗಿದೆ:

ವರದಿಯ ಕೊನೆಯವರೆಗೂ ‘ಬೇದಿ’ ಎನ್ನುವ ತಪ್ಪನ್ನು ಮತ್ತೆ ಮತ್ತೆ ಮಾಡಿದ್ದು ಪತ್ರಿಕೆಯ ಹೆಚ್ಚುಗಾರಿಕೆಯಾಗಿದೆ.


ಇಂಗ್ಲಿಶ್ ಪದಗಳು:

ಇಂಗ್ಲಿಶ್ ಪದಗಳನ್ನು ಬರೆಯುವಾಗ, ಸಂಯುಕ್ತ ಕರ್ನಾಟಕಕ್ಕೆ ಏನು ಸಮಸ್ಯೆ ಬರುವುದೋ ನನಗೆ ತಿಳಿಯದು. ಉಳಿದೆಲ್ಲ ಪತ್ರಿಕೆಗಳು ‘ಆರ್ಟ್ ಆಫ್ ಲಿವಿಂಗ್’ ಎಂದು ಬರೆದಾಗ, ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ‘ಆರ್ಟ್ ಆಫ್ ಲೀವಿಂಗ್’ ಎಂದು ಬರೆದಿದ್ದಾರೆ, (ಮೂರು ಸಲ). ಲಿವಿಂಗ್( = ಜೀವಿಸುವದು) ಬೇಡವಾದಾಗ ಮನುಷ್ಯನು ಲೀವಿಂಗ್ (= ಹೊರಡುವದು) ಮಾಡುತ್ತಾನೆ, ಅಲ್ಲವೆ?

ಜನಪ್ರಿಯತೆಯ ಗುಟ್ಟೇನು?
ಇಷ್ಟೆಲ್ಲ ಲೋಪದೋಷಗಳಿದ್ದರೂ ಸಹ ವಿಜಯ ಕರ್ನಾಟಕ ಪತ್ರಿಕೆಯು ಇಂದು ಜನಪ್ರಿಯತೆಯ ಶಿಖರದಲ್ಲಿದೆ. ಸಂಯುಕ್ತ ಕರ್ನಾಟಕವು ಕನಿಷ್ಠ ಮಟ್ಟದಲ್ಲಿದೆ. ಇದಕ್ಕೆ ಕಾರಣಗಳೇನು?

ಇಸವಿ ೨೦೦೦ದಲ್ಲಿ ವಿಜಯ ಕರ್ನಾಟಕವು ಪ್ರಾರಂಭವಾದ ಬಳಿಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ವಕ್ರ ಮಾರ್ಗವನ್ನು ಹಿಡಿಯಿತೆನ್ನಬಹುದು. ಪತ್ರಿಕೆಯ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಉಳಿದ ಪತ್ರಿಕೆಗಳ ತೊಡೆಯ ಮೇಲೆ ಗದಾಪ್ರಹಾರ ಮಾಡಿತು. ಸರಿ, ಉಳಿದ ಪತ್ರಿಕೆಗಳೂ ಸಹ ಬೆಲೆಯನ್ನು ಕಡಿತಗೊಳಿಸಿದವು. ಆಬಳಿಕ ವಿಜಯ ಕರ್ನಾಟಕವು ತನ್ನ ಹೊಚ್ಚ ಹೊಸ ಭಾಷಾಪ್ರಯೋಗಗಳ ಮೂಲಕ ಓದುಗರನ್ನು ಆಕರ್ಷಿಸಿತು. ತಲೆಬರಹವನ್ನು ಭಾಗಶಃ ತುಂಡರಿಸಿ, ವಿಶೇಷ ಅರ್ಥ ಬರುವಂತೆ ಮಾಡಿತು. ಈ ವಿಷಯದಲ್ಲಿ ವಿಜಯ ಕರ್ನಾಟಕದ ಸಂಪಾದಕರು ಪ್ರತಿಭಾಶಾಲಿಗಳು. ವಿಜಯ ಕರ್ನಾಟಕವನ್ನು ಅನುಕರಿಸ ಹೋದ ಸಂಯುಕ್ತ ಕರ್ನಾಟಕವು ನಗೆಗೀಡಾಗುವಂತಹ ತಲೆಬರಹಗಳನ್ನು ನಿರ್ಮಿಸಿದೆ. ಆದರೆ, ಪ್ರಜಾವಾಣಿ ಪತ್ರಿಕೆಯು ಮಾತ್ರ ತನ್ನ ಗಂಭೀರ, ಸಭ್ಯ ನಿಲುವನ್ನು ಉಳಿಸಿಕೊಂಡು ಬಂದಿದೆ.

ಎರಡನೆಯದಾಗಿ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುವ ಅಂಕಣ ಲೇಖನಗಳೇ ಈ ಪತ್ರಿಕೆಯ ಜನಪ್ರಿಯತೆಯ ನಿಜವಾದ ಕಾರಣವೆಂದು ಭಾಸವಾಗುತ್ತದೆ.
(೧) ಶ್ರೀ ಶ್ರೀವತ್ಸ ಜೋಶಿಯವರ ಸರಸ ಲೇಖನಮಾಲೆ: ಪರಾಗಸ್ಪರ್ಶ
(೨) ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಯವರ ತಿಳಿವು ನೀಡುವ ತಿಳಿಯಾದ ಲೇಖನಮಾಲೆ: ಬಿಸಿಲು ಬೆಳದಿಂಗಳು
(೩) ಶ್ರೀ ಪ್ರತಾಪ ಸಿಂಹರ ಅಂಕಣ: ಬತ್ತಲೆ ಜಗತ್ತು
(೪) ಶ್ರೀ ತ್ಯಾಗರಾಜರು ಬರೆಯುವ ರಾಜಕೀಯ ಒಳನೋಟದ ’ಒಳಸುಳಿ’
(೫) ಶ್ರೀ ಪ್ರಭಾಕರರು ಬರೆಯುವ ವಿನೋದಮಯ ಲೇಖನಮಾಲೆ: ‘ಟಾಂಗ್’
(೬) ಕೆಲವೊಮ್ಮೆ ಸ್ವಾರಸ್ಯಕರ ಮಾಹಿತಿ ನೀಡುವ ವಿಶ್ವೇಶ್ವರ ಭಟ್ಟರ ಸುದ್ದಿಮನೆ.

ಮೂರನೆಯದಾಗಿ ಕೆಲವು ರಾಜಕಾರಣಿಗಳ ಕೊಳಕನ್ನು ಬಯಲು ಮಾಡುವಲ್ಲಿ ವಿಜಯ ಕರ್ನಾಟಕವು ತೋರುವ ಅವಿಶ್ರಾಂತ ಪ್ರಯತ್ನವೂ ಸಹ ವಿಜಯ ಕರ್ನಾಟಕಕ್ಕೆ ಜನಪ್ರಿಯತೆಯನ್ನು ತಂದು ಕೊಟ್ಟಿದೆ.

ವಿಜಯ ಕರ್ನಾಟಕದ ದಾಳಿಗೆ ಸೊಪ್ಪು ಹಾಕದ ಪ್ರಜಾವಾಣಿಯು ತನ್ನ ಗಂಭೀರ ನಿಲುವನ್ನು ಉಳಿಸಿಕೊಂಡು ಬಂದಿದೆ. ಸುದ್ದಿಯ ಖಚಿತತೆ ಹಾಗು ಪರಿಪೂರ್ಣ ಮಾಹಿತಿ ನೀಡುವಲ್ಲಿ ಇದು ವಿಜಯ ಕರ್ನಾಟಕ ಪತ್ರಿಕೆಗಿಂತಲೂ ಮುಂದಿದೆ. ಈ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣಲೇಖನಗಳೂ ಸಹ ಉತ್ತಮ ಪ್ರಮಾಣದ್ದಾಗಿವೆ. ಅಲ್ಲದೆ ಚಿತ್ರವಿಚಿತ್ರ ಭಾಷಾಪ್ರಯೋಗಗಳ ಮೂಲಕ ಕನ್ನಡದ ಕೊರಳು ಕೊಯ್ಯುವ ಕೆಲಸವನ್ನು ಇದು ಮಾಡಿಲ್ಲ. ಆದರೆ ಈ ಪತ್ರಿಕೆಯ ಪ್ರಾದೇಶಿಕ ಆವೃತ್ತಿಯು ಪ್ರಾದೇಶಿಕತೆಯ ವೈಶಿಷ್ಟ್ಯವನ್ನು ತೋರಿಸದೆ ಇರುವದರಿಂದ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಲು ವಿಫಲವಾಗಿದೆ.

ಈ ಪತ್ರಿಕೆಗಳ ದೋಷಗಳೇನು?
ವಿಜಯ ಕರ್ನಾಟಕ :
(೧) ಈ ಪತ್ರಿಕೆಯು ಕನ್ನಡ ಪದಗಳನ್ನು ಬಳಸಲು ಕಲಿಯಬೇಕು. ಸಂಪಾದಕರು ಒಂದು ಇಂಗ್ಲಿಶ್-ಕನ್ನಡ ಪದಕೋಶವನ್ನು ಮೇಜಿನ ಮೇಲೆ ಇಟ್ಟುಕೊಂಡಿರುವದು ಉಪಯುಕ್ತವಾಗಬಹುದು.

(೨) ‘ಒಂದು ಪದವನು ಇವರು ಅಂದಗೆಡಿಸಿಹರಯ್ಯ!’
One word is too often profaned  ಎಂದು ಶೆಲ್ಲಿ ತನ್ನ ಕವನದಲ್ಲಿ ಹೇಳಿದ್ದಾನೆ. ವಿಜಯ ಕರ್ನಾಟಕದಲ್ಲಿ Too many words are too often profaned. ಒಂದು ಉದಾಹರಣೆ ಹೀಗಿದೆ:
‘ಬ್ರಾ’ ಎನ್ನುವ ಪದವನ್ನು ಎತ್ತಿ ತೋರಿಸುವ ಉದ್ದೇಶದಿಂದ ವಿಜಯ ಕರ್ನಾಟಕದ ಒಂದು ಹಳೆಯ ಪುರವಣಿಯಲ್ಲಿ ‘ದಿಗ್ಭ್ರಾಂತ’ ಪದದ ಬದಲಾಗಿ ದಿಗ್‘ಬ್ರಾಂ’ತ ಎನ್ನುವ ಪದವನ್ನು ಬಳಸಲಾಗಿದೆ. ಈ ತರಹ ಪದಗಳನ್ನು ವಿರೂಪಿಸುವದು ಕನ್ನಡದ ಕತ್ತು ಕುಯ್ಯುವ ಕೆಲಸವಲ್ಲವೆ?

(೩) ವಿಜಯ ಕರ್ನಾಟಕವು ‘ಸಭ್ಯಸಾಚಿ’ ಎನ್ನುವ ಹಿತೋಕ್ತಿಯನ್ನು ಓದುಗರಿಗೆ ನಿಯಮಿತವಾಗಿ ನೀಡುತ್ತಲಿದೆ. ಆದರೆ ತಾನೂ ಹಾಗಿರಬೇಕಾದದ್ದು ತನ್ನ ಪರಮ ಹೊಣೆಗಾರಿಕೆ ಎನ್ನುವದನ್ನು ಮರೆತು ಬಿಟ್ಟಿದೆ. ವಿಜಯ ಕರ್ನಾಟಕದ ಸಿನೆಮಾ ಪುರವಣಿಗಳಲ್ಲಿ ಬರೆಯುವವರು ನಟಿಯರ ಬಗೆಗೆ ಬರೆಯುವಾಗ ಗೌರವದ ಎಲ್ಲೆಯನ್ನು ಮೀರುತ್ತಾರೆ. ಉದಾಹರಣೆಗೆ ೨೮-೧೦-೨೦೧೦ರ ಪುರವಣಿಯಲ್ಲಿ ಬಂದ ಒಂದು ಲೇಖನದ ತಲೆಬರಹ ಹೀಗಿದೆ:
ರೋಡಿಗಿಳೀ ರೂಪಿಕಾ..”
ರೂಪಿಕಾ ಎನ್ನುವ ನಟಿಯ ಬಗೆಗಿನ ತಲೆಬರಹವಿದು.
ಬರಹದ ಕೊನೆಕೊನೆಗೆ ಏಕವಚನ ಪ್ರಾರಂಭವಾಯಿತು. “ರೂಪಿ ಟೆಂಥ್ ಪಾಸಾಗಿಲ್ಲ…..ಈಗಲೇ ಇವಳಿಗೆ ಇಷ್ಟು ಬಿಲ್ಡ್ ಅಪ್ಪು……..ಇವಳು ಅಮೂಲ್ಯಾ ಆಗಲು ಸಾಧ್ಯವಿಲ್ಲ…..”

ಯಾವುದೇ ಹೆಣ್ಣನ್ನಾದರೂ ಗೌರವದಿಂದ ಕಾಣಬೇಕು. ಅದು ಸಾಭ್ಯಸ್ಥಿಕೆ. ಬಹುಶಃ ಈ ಲೇಖನ ಬರೆದ ವರದಿಗಾರ ರೂಪಿಕಾರಿಂದ ಯಾವಾಗಲೊ ಒಮ್ಮೆ ಉಗಿಸಿಕೊಂಡಿರಬಹುದೆ? ಅದಕ್ಕಾಗಿಯೇ ಹೀಗೆಲ್ಲ ಹೀಯಾಳಿಸಿ ಬರೆದು ಸೇಡು ತೀರಿಸಿಕೊಂಡಿರಬಹುದೆ? ಅದೇನೆ ಇರಲಿ, ಸಭ್ಯಸಾಚಿತ್ವವನ್ನು ಪರರಿಗೆ ಉಪದೇಶಿಸುವ ಮುಖ್ಯ ಸಂಪಾದಕರು ಈ ಲೇಖನವನ್ನು ಕಣ್ಣು ತೆರೆದುಕೊಂಡು ಅಂಗೀಕರಿಸಿದರೊ ಅಥವಾ ಕಣ್ಣು ಮುಚ್ಚಿಕೊಂಡಿದ್ದರೊ?

ಸಂಯುಕ್ತ ಕರ್ನಾಟಕ :
(೧) ವಿಜಯ ಕರ್ನಾಟಕದ ನಕಲು ಮಾಡುವದನ್ನು ಬಿಡಬೇಕು.
(೨) ಈ ಮೊದಲು ತಾನೇ ಟಂಕಿಸಿದಂತಹ ಕನ್ನಡ ಪದಗಳನ್ನು ಬಳಸಬೇಕು.
(೩) ಸಂಯುಕ್ತ ಕರ್ನಾಟಕದ ಅಂಕಣ ಲೇಖನಗಳಲ್ಲಿ ಯಾವುದೇ ಸ್ವಾರಸ್ಯವಿಲ್ಲ, ತಾಜಾತನವೂ ಇಲ್ಲ. ಶ್ರೀ ಕೆ.ಎಸ್. ನಾರಾಯಣಾಚಾರ್ಯ ಎನ್ನುವ ಹಿರಿಯರು ಈ ಪತ್ರಿಕೆಯಲ್ಲಿ ನಿಯತವಾಗಿ ಬರೆಯುತ್ತಾರೆ. ಇವರ ಲೇಖನಗಳಲ್ಲಿ ಇರುವದು ಕೇವಲ ಪುರಾಣ ಮಂಥನ, ಪುರಾಣ ಚಿಂತನ. ಹಳೆಯದೆಲ್ಲ ಹೊನ್ನು ಎನ್ನುವದು ಇವರ ಚಿಂತನ ಸಾರ. ಶ್ರೀ ನವರತ್ನ ರಾಜಾರಾಯರು ವೈಚಾರಿಕ ಲೇಖನಗಳನ್ನು ಬರೆದರೂ ಸಹ ಅವುಗಳಲ್ಲಿ ವರ್ತಮಾನದ ತುರ್ತು ಇರುವದಿಲ್ಲ.  ಶ್ರೀ ಮನೋಜ ಪಾಟೀಲರು ವರ್ತಮಾನದ ತುರ್ತಿನ ಅಂಕಣಗಳನ್ನು ಬರೆದರೂ ಸಹ, ಅವುಗಳಲ್ಲಿ ಇನ್ನಷ್ಟು ಗಾಢತೆ ಬರಬೇಕು. ಇನ್ನು ವೈದ್ಯರ ಸುಬೋಧ ರಾಮಾಯಣವನ್ನು ಶ್ರೀರಾಮಚಂದ್ರನೇ ಓದಬೇಕು. ಎಲ್ಲದಕ್ಕೂ ಕನಿಷ್ಠ ಅಂಕಣವೆಂದರೆ ‘ಗೋವಿಂದಾ, ಗೋವಿಂದಾ’. ಇದು ನಿಜವಾಗಲೂ ‘ಗೋssವಿಂದಾ!’ ಸಂಯುಕ್ತ ಕರ್ನಾಟಕವು ಅಂಕಣಗಳಿಗಾಗಿ ಸ್ಥಳ ಹಾಳು ಮಾಡುವದರ ಬದಲಾಗಿ, ಇನ್ನಿಷ್ಟು ಸುದ್ದಿಗಳನ್ನು ಸೇರಿಸಿದರೆ, ಓದುಗ ವೃಂದವು ಹೆಚ್ಚಬಹುದು.

ಪ್ರಜಾವಾಣಿ:
ಹುಬ್ಬಳ್ಳಿ ಆವೃತ್ತಿಯಲ್ಲಿಯ ಸ್ಥಳೀಯ ಸುದ್ದಿಗಳಿಗೆ ಹುಬ್ಬಳ್ಳಿ ಭಾಷೆಯನ್ನು ಬಳಸಬೇಕು ; ಬೆಂಗಳೂರು ಭಾಷೆಯನ್ನು ಬಳಸಬಾರದು. ಆದುದರಿಂದ ಪ್ರಾದೇಶಿಕ ಭಾಷೆಯ / ರಿವಾಜಿನ ಅರಿವುಳ್ಳ ಸಂಪಾದಕರನ್ನು / ಉಪಸಂಪಾದಕರನ್ನು ನಿಯಮಿಸಿಕೊಳ್ಳಬೇಕು. ಒಂದು ಉದಾಹರಣೆ ಕೊಡುತ್ತೇನೆ :

‘ಹುರಕಡ್ಲಿ ಅಜ್ಜ’ ಎಂದು ಖ್ಯಾತರಾದ ಆಧ್ಯಾತ್ಮಿಕ ಸಾಧಕರೊಬ್ಬರು ನಿಧನರಾದಾಗ, ಪ್ರಜಾವಾಣಿಯ ಹುಬ್ಬಳ್ಳಿ ಆವೃತ್ತಿಯು ಅವರ ಹೆಸರನ್ನು ‘ಹುರಕಡ್ಲಿ ಅಜ್ಜನವರ್’ ಎಂದು ಬರೆದಿತ್ತು. ಬಹುಶ: ಪತ್ರಿಕಾ ಸಂಪಾದಕರು ‘ಅಜ್ಜನವರ್’ ಎನ್ನುವದು ಅವರ ಅಡ್ಡಹೆಸರು ಎಂದು ತಿಳಿದಿರಬಹುದು ! ಉತ್ತರ ಕರ್ನಾಟಕದಲ್ಲಿ ಹಿರಿಯರನ್ನು ಗೌರವದಿಂದ ‘ಅಜ್ಜ’ ಎಂದು ಕರೆಯುತ್ತಾರೆ ; ಅದು ಅವರ ಅಡ್ಡ ಹೆಸರಲ್ಲ! ಪ್ರಾದೇಶಿಕ ತಿಳಿವಳಿಕೆಯ ಅಭಾವದಿಂದ ಹೀಗಾಗುತ್ತದೆ.
………………………………………………………
ಏನೇ ಇರಲಿ, ಕನ್ನಡ ಪತ್ರಿಕೆಗಳು ನಮ್ಮ ಪತ್ರಿಕೆಗಳು. ಈ ಪತ್ರಿಕೆಗಳನ್ನು ಓದುವಾಗ ಸಮಾಚಾರದ ಖುಶಿಯ ಜೊತೆಗೇ ಭಾಷೆಯ ಖುಶಿಯೂ ಆಗುತ್ತಲಿದೆ. ಒಬ್ಬ ಓದುಗನಾಗಿ ಕನ್ನಡ ಪತ್ರಿಕೆಗಳ ಗುಣಾವಗುಣಗಳನ್ನು ನನಗೆ ತಿಳಿದಂತೆ ಪರಾಮರ್ಶಿಸಿ ನಿಮ್ಮೆದುರಿಗೆ ಇರಿಸಿದ್ದೇನೆ. ಕಣ್ತಪ್ಪಿನಿಂದ ಅನೇಕ ಲೋಪ ದೋಷಗಳು ಇಲ್ಲಿ ನುಸುಳಿರಬಹುದು. ಅಂತಹ ಪ್ರಸಂಗಗಳಲ್ಲಿ, ನಿಮ್ಮ ಕ್ಷಮೆ ಕೋರುತ್ತೇನೆ.

ನಮ್ಮ ಪತ್ರಿಕೆಗಳು ‘ಸಿರಿಗನ್ನಡಂ ಗೆಲ್ಗೆ’ ಎಂದು ಹೇಳಿದರೆ ಸಾಲದು; ‘ಸರಿಗನ್ನಡಂ ಗೆಲ್ಗೆ’ ಎಂದೂ ಹೇಳಬೇಕು.