ಭಾರತೀಯರಿಗೆ ತತ್ವಜ್ಞಾನವು ರಕ್ತಗತವಾಗಿ ಬಂದಿದೆ. ಧರ್ಮಗ್ರಂಥಗಳನ್ನು ಓದದೇ ಇರುವ ಭಾರತೀಯರು ಸಹ ಪುನರ್ಜನ್ಮಗಳಲ್ಲಿ ನಂಬಿಕೆ ಇಡುತ್ತಾರೆ. ಭಗವದ್ಗೀತೆಯ ತಿರುಳನ್ನು ಭಾರತೀಯರು ಬಾಲ್ಯಸಂಸ್ಕಾರದ ಮೂಲಕವೇ ಬಲ್ಲರು. ಆ ಗ್ರಂಥದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶದಲ್ಲಿ ಪುನರ್ಜನ್ಮದ ವ್ಯಾಖ್ಯೆ ಈ ರೀತಿಯಾಗಿ ಬಂದಿದೆ:
“ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾ-
ನ್ಯನ್ಯಾನಿ ಸಂಯಾತಿ ನವಾನಿ ದೇಹೀ”
(=ಮನುಷ್ಯರು ಹಳೆಯ ಬಟ್ಟೆಗಳನ್ನು ತೆಗೆದುಬಿಟ್ಟು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುವಂತೆ, ಜೀವಿಗಳು ಹಳೆಯ ದೇಹವನ್ನು ತ್ಯಜಿಸಿ, ಹೊಸ ದೇಹಗಳನ್ನು ಪಡೆಯುತ್ತಾರೆ.)
ಇದೇ ತತ್ವಜ್ಞಾನವನ್ನು ಶಿಶುನಾಳ ಶರೀಫರು ತಮ್ಮ “ಅಗ್ಗದರವಿ ತಂದು…” ಎನ್ನುವ ಗೀತೆಯಲ್ಲಿ ಸರಳವಾಗಿ ಹಾಡಿದ್ದಾರೆ. ಈ ಗೀತೆಯ ಪೂರ್ಣಪಾಠ ಹೀಗಿದೆ:
ಅಗ್ಗದರವಿ ತಂದು
ಹಿಗ್ಗಿ ಹೊಲಸಿದೆನಂಗಿ
ಹೆಗ್ಗಣ ವೈತವ್ವ ತಂಗೀ ಈ ಅಂಗೀ ||ಪಲ್ಲ||
ಅಗಣಿತ ವಿಷಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿತವ್ವ ತಂಗೀ ಈ ಅಂಗೀ ||೧||
ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ ||೨||
ಕಳೆದೆನೀಪರಿ ರಾತ್ರಿ
ಬೆಳಗಾಗೊ ಸಮಯದಿ
ಚೆಲುವ ಶಿಶುನಾಳಾಧೀಶ-
ನುಳುವಿ ಕೊಟ್ಟಾನವ್ವ ತಂಗೀ ಈ ಅಂಗೀ ||೩||
ಈ ಗೀತೆಯ ಪಲ್ಲವನ್ನು ಗಮನಿಸೋಣ :
ಅಗ್ಗದರವಿ ತಂದು
ಹಿಗ್ಗಿ ಹೊಲಸಿದೆನಂಗಿ
ಹೆಗ್ಗಣ ವೈತವ್ವ ತಂಗೀ ಈ ಅಂಗೀ||ಪಲ್ಲ||
ಶರೀಫರು ಹೊಸದೊಂದು ಜನ್ಮ ಪಡೆಯುವದನ್ನು ಹೊಸ ಅಂಗಿಯನ್ನು ಹೊಲೆಯಿಸಿಕೊಳ್ಳುವದಕ್ಕೆ ಹೋಲಿಸುತ್ತಿದ್ದಾರೆ. ಆದರೆ ಈ ಹೊಸ ಅಂಗಿಗಾಗಿ ಅವರು ಉತ್ತಮ ಬಟ್ಟೆಯನ್ನು ಖರೀದಿಸಿಲ್ಲ. ಅಗ್ಗದ ಅರವಿಯನ್ನು ತಂದಿದ್ದಾರೆ. ಅಗ್ಗದ ಬಟ್ಟೆ ಎಂದರೇನು? ಅಗ್ಗದ ಬಟ್ಟೆ ಒರಟು ಒರಟಾಗಿರುತ್ತದೆ ; ಇದಕ್ಕೆ ಒಳ್ಳೆಯ ಗುಣಗಳು ಇರುವದಿಲ್ಲ. ಬಟ್ಟೆಗೆ ಒಳ್ಳೆಯ ಗುಣಗಳು ಬರಬೇಕಾದರೆ, ಆ ಬಟ್ಟೆಯನ್ನು ಸರಿಯಾಗಿ ಸಂಸ್ಕರಿಸಬೇಕಾಗುತ್ತದೆ. ಅದರಂತೆ ಒಳ್ಳೆಯ ಜನäವನ್ನು ಪಡೆಯಲು ಒಳ್ಳೆಯ ಸಂಸ್ಕಾರ, ಒಳ್ಳೆಯ ಕರ್ಮಗಳ ನೆರವು ಬೇಕಾಗುತ್ತದೆ. ಆದರೆ ಅರಿವೆ ಎಂತಹದೇ ಇರಲಿ, ಹೊಸ ಅಂಗಿ ತೊಡುವದೇ ಹುರುಪಿನ ವಿಷಯವಾಗಿರುತ್ತದೆ. ಹಳೆಯ ಜನä ತ್ಯಜಿಸಿದ ಆತ್ಮವು ಹೊಸ ಜನäಕ್ಕಾಗಿ ಮಿಡುಕಾಡುತ್ತಲೇ ಇರುತ್ತದೆ. ತನ್ನ ಪೂರ್ವಕರ್ಮಗಳಿಗೆ ಹಾಗು ಪೂರ್ವಸಂಸ್ಕಾರಗಳಿಗೆ ತಕ್ಕಂತಹ ಹೊಸ ಜನä ದೊರೆತ ತಕ್ಷಣ ಅದು ಹಿಗ್ಗುತ್ತದೆ. ಇದನ್ನೇ ಶರೀಫರು ಹೊಸದಾದ ಅಂಗಿಯನ್ನು ಹಿಗ್ಗಿನಿಂದ ಹೊಲಿಸಿದೆ ಎಂದು ಹೇಳುತ್ತಾರೆ.
ಶರೀಫರೇನೊ ತಮ್ಮ ಕರ್ಮಗಳಿಗೆ ಹಾಗು ಸಂಸ್ಕಾರಕ್ಕೆ ಅನುಗುಣವಾದ ಅಗ್ಗದ ಅರಿವೆಯನ್ನು ಪಡೆದುಕೊಂಡರು. ದೈವವು ಅವರಿಗೆ ಹೊಸ ಅಂಗಿಯನ್ನು ಹೊಲೆದು ಕೊಟ್ಟಾಗ, ಶರೀಫರು ಹಿಗ್ಗಿದರು. ಆದರೆ ಈ ಅಂಗಿಯನ್ನು ಜೋಪಾನವಾಗಿ ಇಟ್ಟುಕೊಳ್ಳಲು ಅವರಿಂದ ಆಗಲಿಲ್ಲ. ಈ ಅಂಗಿಯನ್ನು ಹೆಗ್ಗಣವೊಂದು ಒಯ್ದು ಬಿಟ್ಟಿತಂತೆ. ಹೆಗ್ಗಣವು ಬಹಳ ಚಾಲಾಕು ಪ್ರಾಣಿ. ರಾತ್ರಿಯ ಸಮಯದಲ್ಲಿ ಯಜಮಾನನು ನಿದ್ರೆಯಲ್ಲಿರುವಾಗ ಹೆಗ್ಗಣವು ಮನೆಯ ಗೋಡೆಗೆ ಕನ್ನ ಹಾಕಿ, ಮನೆಯಲ್ಲಿಟ್ಟ ಪದಾರ್ಥಗಳನ್ನು ಹಾಳು ಮಾಡುವದು. ಹೆಗ್ಗಣದ ಉಪದ್ರವ ತಪ್ಪಿಸಬೇಕಾದರೆ, ಯಜಮಾನನು ತನ್ನ ಮನೆಯನ್ನು ಭದ್ರವಾಗಿಟ್ಟುಕೊಳ್ಳಬೇಕು. ಹೆಗ್ಗಣವು ಗುದ್ದು ತೋಡಿ ಒಳಗೆ ಬರದಂತೆ ಕಾಯಬೇಕು. ಅಂದರೆ ಮಾತ್ರ ಆತನು ತನ್ನ ಪ್ರೀತಿಯ ಅಂಗಿಯನ್ನು ಕಾಯಬಲ್ಲನು.
ಇದು ಯಾವ ಹೆಗ್ಗಣ? ಬಲಿಷ್ಠವಾದ ಅರಿಷಡ್ವರ್ಗಗಳ ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗು ಮತ್ಸರಗಳ ಸಮೂಹಕ್ಕೆ ಶರೀಫರು ಹೆಗ್ಗಣ ಎಂದು ಕರೆಯುತ್ತಾರೆ. ಮನಸ್ಸು ಎನ್ನುವ ಮನೆಗೆ ಈ ಅರಿಷಡ್ವರ್ಗಗಳು ಕಳ್ಳತನದಿಂದ ಕನ್ನ ಕೊರೆಯುತ್ತವೆ. ಆಗ ಮನಸ್ಸಿನಲ್ಲಿಯ ಒಳ್ಳೆಯ ಗುಣಗಳು ಹಾಗು ಉತ್ತಮ ಸಂಸ್ಕಾರಗಳು ನಾಶವಾಗುತ್ತವೆ. ನೀಚ ಕರ್ಮಗಳು ಘಟಿಸುತ್ತವೆ. ಈ ಜನ್ಮವೆಂಬ ಅಂಗಿಯನ್ನು ಈ ಅರಿಷಡ್ವರ್ಗಗಳು ಹೊತ್ತೊಯ್ದು ಹಾಳು ಮಾಡುತ್ತವೆ. ಹಾಲು ಉಕ್ಕಿದ ಮೇಲೆ ಹಳಹಳಸಿದಂತೆ, ‘ಹೆಗ್ಗಣವು ಈ ಅಂಗಿಯನ್ನು ಒಯ್ದಿತಲ್ಲ’ ಎಂದು ಶರೀಫರು ವ್ಯಥೆ ಪಡುತ್ತಾರೆ.ಇದೇ ಮಾತನ್ನು ಪುರಂದರದಾಸರೂ ಸಹ ಹೀಗೆ ಹೇಳಿದ್ದಾರೆ :
“ಮಾನವ ಜನ್ಮ ಬಲು ದೊಡ್ಡದು
ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ!”
ಮೊದಲನೆಯ ನುಡಿ ಹೀಗಿದೆ:
ಅಗಣಿತ ವಿಷಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿತವ್ವ ತಂಗೀ ಈ ಅಂಗೀ||೧||
ಆರು ಗೇಣಿನ ಕವಚ ಎಂದರೆ ಸ್ಥೂಲ ದೇಹ. ಈ ಸ್ಥೂಲ ದೇಹಕ್ಕೆ ಸುಖ ಕೊಡುವ ವಿಷಯಗಳನ್ನಷ್ಟೇ ಮಾನವನು ಬಯಸುತ್ತಾನೆ. ಉದಾಹರಣೆಗೆ ಪರಿಶ್ರಮದಿಂದ ದುಡಿದು ತಿನ್ನುವದು ಮನುಷ್ಯನಿಗೆ ಬೇಡ. ಸೋಮಾರಿತನವೇ ಆತನ ದೇಹಕ್ಕೆ ಸುಖ ನೀಡುತ್ತದೆ. ಮಾದಕ ಪದಾರ್ಥಗಳ ಸೇವನೆಯು ಕೆಟ್ಟದ್ದೆಂದು ಗೊತ್ತಿದ್ದರೂ ಸಹ ದೇಹವು ಅದನ್ನು ಬಯಸುತ್ತದೆ. ಲೆಕ್ಕವಿಲ್ಲದಷ್ಟಿರುವ ಇಂತಹ ದೈಹಿಕ ಬಯಕೆಗಳಿಗೆ ಶರೀಫರು ‘ಅಗಣಿತ ವಿಷಯ’ ಎನ್ನುತ್ತಾರೆ. ಕೇವಲ ವಿಷಯಸುಖಕ್ಕೇ ಮನಸ್ಸು ನೀಡಿದರೆ, ಅದು ದೇಹವನ್ನು ಬೇಕಾರ ಮಾಡುತ್ತದೆ. ಶರೀಫರು ಅದನ್ನು ಬಗಲಿನಿಂದ ಬರುವ ಬೆವರಿಗೆ ಹೋಲಿಸುತ್ತಾರೆ. ಈ ಬಗಲ ಬೆವರು ಅರ್ಥಾತ್ ಕೊಳೆಯಾದ ಬಯಕೆಗಳು ಈ ಅಂಗಿಯನ್ನು ಕಡಿದು ಹಾಕುತ್ತವೆ. ನಮಗೆ ದೊರೆತ ಅಂಗಿಯ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೇ ನಾವು ‘ಸಿಗದೇ ಹೋಯಿತವ್ವ ತಂಗೀ’ ಎಂದು ವ್ಯಥೆ ಪಡಬೇಕಾಗುತ್ತದೆ.
ಎರಡನೆಯ ನುಡಿ ಹೀಗಿದೆ :
ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ ||೨||
ಈ ರೀತಿಯಾಗಿ ಜೀವಿಯು ಪ್ರಾಪಂಚಿಕ ವಿಷಯಸುಖಗಳಲ್ಲೇ ಮಗ್ನವಾದಂತಹ ಕಾಲವನ್ನು ರಾತ್ರಿಗೆ ಹೋಲಿಸಲಾಗುತ್ತದೆ. ಬುದ್ಧಿವಂತ ಮಾನವನು ರಾತ್ರಿಯಲ್ಲಿ ನಿದ್ರಿಸಬೇಕು ಎಂದು ಶರೀಫರು ಹೇಳುತ್ತಾರೆ. ಇದರರ್ಥವೆಂದರೆ ಮಾನವನು ಪ್ರಾಪಂಚಿಕ ಸುಖಗಳನ್ನು ಬಯಸಬಾರದು. ಆದರೆ ಇದಕ್ಕೆ ವಿಪರೀತವಾಗಿ, ಬುದ್ಧಿಗೇಡಿ ಮಾನವನು ರಾತ್ರಿಯ ವ್ಯವಹಾರಗಳಲ್ಲಿ ಮುಳುಗುತ್ತಾನೆ. ನಿದ್ರೆಯನ್ನು ಕೆಡಸಿಕೊಳ್ಳುತ್ತಾನೆ. ಅಂದರೆ ಆಧ್ಯಾತ್ಮಿಕ ವ್ಯವಹಾರದ ಬದಲಾಗಿ ಪ್ರಾಪಂಚಿಕ ವ್ಯವಹಾರದಲ್ಲಿ ಮುಳುಗುತ್ತಾನೆ. ಬೆಳಗಾದ ಬಳಿಕ ಅಂದರೆ ಹೊಸ ಜನ್ಮ ಪಡೆಯುವ ಸಮಯದಲ್ಲಿ, ಅವನಿಗೆ ತನ್ನ ಕರ್ಮಫಲ ಕಾಣಿಸುವದಿಲ್ಲ. ಅದು ಅವನ ಮನೆಯ ಮೂಲೆಯಲ್ಲಿ ಗುದ್ದು ಮಾಡಿಕೊಂಡು, ಅಡಗಿಕೊಂಡು ಕೂತಿರುತ್ತದೆ. ಆತನು ಹೊಸ ಜನ್ಮವನ್ನು ಪಡೆಯಲು ಸಿದ್ಧನಾದಾಗ, ಅವನ ಪೂರ್ವಜನ್ಮದ ಈ ಕರ್ಮವು ಆತನನ್ನು ಬೆಂಬತ್ತಿ ಬರುತ್ತದೆ. (ಈ ಕರ್ಮಕ್ಕೆ ‘ಪ್ರಾರಬ್ಧ ಕರ್ಮ’ವೆನ್ನುತ್ತಾರೆ.)
ಈ ಕರ್ಮಬಂಧನದ ಚಕ್ರದಿಂದ ಬಿಡುಗಡೆ ಇಲ್ಲವೆ? ಇದಕ್ಕೆ ಉತ್ತರ ಕೊನೆಯ ನುಡಿಯಲ್ಲಿದೆ.
ಕಳೆದೆನೀಪರಿ ರಾತ್ರಿ
ಬೆಳಗಾಗೊ ಸಮಯದಿ
ಚೆಲುವ ಶಿಶುನಾಳಾಧೀಶ-
ನುಳುವಿ ಕೊಟ್ಟಾನವ್ವ ತಂಗೀ ಈ ಅಂಗೀ||೩||
ಕೇವಲ ಒಂದು ಜನ್ಮದಲ್ಲಿ ಅಲ್ಲ, ಇಂತಹ ಅನೇಕ ಜನ್ಮಗಳಲ್ಲಿ ಪ್ರಾಪಂಚಿಕ ಆಮಿಷಗಳಿಗೆ ಕೆಲವೊಮ್ಮೆ ಬಲಿಯಾಗುತ್ತ, ಕೆಲವೊಮ್ಮೆ ಈ ಆಮಿಷಗಳ ವಿರುದ್ಧ ಹೋರಾಡುತ್ತ ಶರೀಫರು ರಾತ್ರಿ ಎನ್ನುವ (=ಪ್ರಪಂಚದಲ್ಲಿ ಇರುವ ) ಅವಧಿಯನ್ನು ಕಳೆದಿದ್ದಾರೆ. ಈ ಹೋರಾಟದ ಫಲವಾಗಿ, ಈಗ ಪರಮಾತ್ಮನ ಅನುಗ್ರಹವಾಗುವ ಸಮಯ ಬಂದಿದೆ. ಇಂತಹ ಅನುಗ್ರಹ ಮಾಡುವ ಪರಮಾತ್ಮನು ನಿಷ್ಕಲಂಕನಾದವನು, ಹೀಗಾಗಿ ಆತನಲ್ಲಿ ದಿವ್ಯ ಸೌಂದರ್ಯವಿದೆ. ಆದುದರಿಂದಲೇ ಆತನು ‘ಚೆಲುವ’ನು. ಇಂತಹ ಚೆಲುವ ಶಿಶುನಾಳಾಧೀಶನು ಶರೀಫರ ಶ್ರದ್ಧೆಯಿಂದ ಪ್ರೀತನಾಗಿ ಅವರಿಗೆ ಅನುಗ್ರಹಿಸಿದ್ದಾನೆ. ಅವರಿಗೆ ಲಭ್ಯವಾದ ಈ ಅಂಗಿಯು (=ಜನ್ಮವು) ಹಾಳಾಗದಂತೆ ಅದನ್ನು ಅವರಿಗೆ ಪರಮಾತ್ಮನು ಉಳುವಿ (=ಉಳಿಸಿ) ಕೊಟ್ಟಿದ್ದಾನೆ. ಈ ಅಂಗಿಯು ವಿಕಾರಗಳಿಂದ ಕೂಡಿದ ಸ್ಥೂಲ ಶರೀರವಲ್ಲ. ಅರಿಷಡ್ವರ್ಗಗಳೆನ್ನುವ ಹೆಗ್ಗಣದಿಂದ ಬಾಧೆ ಪಡುತ್ತಿರುವ ಶರೀರವಲ್ಲ. ಪರಮಾತ್ಮನಲ್ಲಿಯೇ ಮಗ್ನವಾದ ಸೂಕ್ಷ ಶರೀರವಿದು.
ಶರೀಫರ ಗೀತೆಗಳ ವೈಶಿಷ್ಟ್ಯ:
ಶರೀಫರ ಅನೇಕ ಗೀತೆಗಳು ಒಂದು ಭೌತಿಕ ದೃಶ್ಯದ ವರ್ಣನೆಯೊಂದಿಗೆ ಪ್ರಾರಂಭವಾಗುತ್ತವೆ. ‘ಗಿರಣಿ ವಿಸ್ತಾರ ನೋಡಮ್ಮ’, ‘ಬಿದ್ದೀಯಬೆ ಮುದುಕಿ’, ‘ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ’, ‘ತೋಟವ ನೋಡಿದ್ಯಾ’ ಹಾಗು ‘ಅಗ್ಗದರವಿ ತಂದು’ ಮೊದಲಾದ ಗೀತೆಗಳು ಈ ವರ್ಗಕ್ಕೆ ಸೇರಿದವು. ಗೀತೆ ಮುಂದುವರಿದಂತೆ ಭೌತಿಕ ವರ್ಣನೆಯು ಪಾರಭೌತಿಕ ವರ್ಣನೆಯಲ್ಲಿ ಬದಲಾಗುತ್ತದೆ.
ಶರೀಫರ ಗೀತೆಗಳ ಮತ್ತೊಂದು ವೈಶಿಷ್ಟ್ಯವೆಂದರೆ ಗ್ರಾಮೀಣ ಪದಗಳ ಬಳಕೆ. ಉಚ್ಚತಮ ತತ್ವಜ್ಞಾನವನ್ನೂ ಸಹ ಶರೀಫರು ಹಳ್ಳಿಯ ದಿನಬಳಕೆಯ ಪದಗಳಲ್ಲಿಯೇ ಹೇಳುತ್ತಾರೆ. ಹೀಗಾಗಿ ಈ ತತ್ವಜ್ಞಾನವು ಕೇಳುಗರ ಮನಸ್ಸನ್ನು ನೇರವಾಗಿ ಪ್ರವೇಶಿಸುತ್ತದೆ ಹಾಗು ಗಾಢ ಪರಿಣಾಮವನ್ನು ಮಾಡುತ್ತದೆ.
ಮೂರನೆಯದಾಗಿ ಶರೀಫರು ತಮ್ಮ ಅನೇಕ ಗೀತೆಗಳಲ್ಲಿ ‘ತಂಗಿ’ ಎಂದು ಸಂಬೋಧಿಸಿರುವದನ್ನು ಕಾಣಬಹುದು. ಇದರ ಕಾರಣಗಳನ್ನು ಹೀಗೆ ಊಹಿಸಬಹುದು:
ಗಂಡಸರಿಗಿಂತ ಹೆಣ್ಣು ಮಕ್ಕಳಿಗೆ ಪ್ರಪಂಚದ ಜೊಂಜಾಟ, ವ್ಯಾಪ ಜಾಸ್ತಿಯಾಗಿರುತ್ತದೆ. ಆದರೂ ಸಹ ದೈವಿಕತೆಯ ಬಗೆಗಿನ ಒಲವು ಗಂಡಸರಿಗಿಂತ ಹೆಣ್ಣುಮಕ್ಕಳಲ್ಲಿಯೇ ಜಾಸ್ತಿ. ಅಲ್ಲದೆ ಅಣ್ಣ ಹಾಗು ತಂಗಿಯರಲ್ಲಿ ಇರುವ ಸತ್ತೆ ಹಾಗು ಅಕ್ಕರೆ ಇತರರಲ್ಲಿ ಕಂಡು ಬರುವದಿಲ್ಲ. ಆದುದರಿಂದ ಶರೀಫರು ತತ್ವಬೋಧನೆಯ ಪದಗಳನ್ನು ‘ತಂಗಿ’ಗೆ ಸಂಬೋಧಿಸಿ ಹಾಡಿದ್ದಾರೆ.
(ಟಿಪ್ಪಣಿ: ಈ ಗೀತೆಯ ವ್ಯಾಖ್ಯಾನ ಬರೆಯುವಾಗ ಸಲಹೆ, ಸೂಚನೆ ನೀಡಿದ ನನ್ನ ಅರ್ಧಾ೦ಗಿನಿ ಶ್ರೀಮತಿ ವನಮಾಲಾ ಇವರಿಗೆ ನಾನು ಕೃತಜ್ಞನಾಗಿದ್ದೇನೆ.)