`ಶುಭ ನುಡಿಯೆ ಶಕುನದ ಹಕ್ಕಿ’ ಕವನವು ಬೇಂದ್ರೆಯವರ ನಾದಲೀಲೆ ಕವನಸಂಕಲನದಲ್ಲಿ ಅಡಕವಾಗಿದೆ. ಕಳವಳದಲ್ಲಿ ಮುಳುಗಿದ ಮನಸ್ಸಿನ ಸ್ಥಿತಿಯನ್ನು ಬೇಂದ್ರೆಯವರು ಈ ಕವನದಲ್ಲಿ ವರ್ಣಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನ ಬಾಳಿನಲ್ಲಿಯೂ ಕಷ್ಟದ ಅನೇಕ ಪ್ರಸಂಗಗಳು ಬರುತ್ತವೆ. ಪುರುಷಪ್ರಯತ್ನವೆಲ್ಲವೂ ಸೋತಾಗ, ಮನುಷ್ಯನು ದೈವದ ಮೊರೆ ಹೋಗುತ್ತಾನೆ. ತಾನು ನಂಬಿದ ದೈವ ತನ್ನ ಕೈಹಿಡಿಯುವುದೊ, ಕೈ ಬಿಡುವುದೊ ಎಂದು ಅರಿಯದೆ, ಮನುಷ್ಯನು ತಳಮಳಿಸುತ್ತಾನೆ. ತನ್ನ ದೈವವನ್ನು ಊಹಿಸಲು ಆತನು ದೈವೀ ಸಂಕೇತಗಳಿಗೆ ಅಂದರೆ ಶಕುನಗಳಿಗೆ ಶರಣಾಗುತ್ತಾನೆ. ಆತನ ತಾರ್ಕಿಕ ಬುದ್ಧಿಯು ಸೋತು ಹೋಗಿ, ನಿಗೂಢತೆಗೆ ಅವನ ಮನಸ್ಸು ಒಲಿಯುತ್ತದೆ. ಇದು ಈ ಕವನದಲ್ಲಿಯ ಭಾವ.
ಕವನದ ಪೂರ್ಣಪಾಠ ಹೀಗಿದೆ:
.....................................................................................................
ಶುಭ ನುಡಿಯೆ ಶಕುನದ ಹಕ್ಕಿ
(ರಾಗ : ಸಾವೇರಿ--ಏಕತಾಳ)
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ |
ಶುಭ ನುಡಿಯೆ || ಪಲ್ಲ ||
ಮುಂಗಾಳು ಕವಿಯುವಾಗ
ಹಸುಗೂಸಿಗೆ ಕಸಿವಿಸಿಯಾಗಿ
ಕಕ್ಕಾವಿಕ್ಕಿಬಡುತ ಪಾಪ
ಕಿರಿ ಕಿರಿ ಅಳುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಇರುಳು ಗಾಳಿ ಬೀಸುವಾಗ
ಹಣತಿಸೊಡರು ಹೆದರಿದಂತೆ
ತಾನು ತಣ್ಣಗಾದೇನೆಂದು
ಚಿಳಿ ಚಿಳಿ ನಡುಗುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ನಿದ್ದೆ ಬಳಲಿ ಬಳಿಯಲಿ ಬಂದು
ಕೂಡಿದೆವೆಗಳಾಸರೆಯಲ್ಲಿ
ಮೆsಲ್ಲಗೆ, ಒರಗುವ ಅದನು
ಒಂಟಿ ಸೀನು ಹಾರಿಸುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಕತ್ತಲೆಯ ಕೆಸರಿನ ತಳಕೆ
ಮಿನಮಿನಗುವ ಹರಳುಗಳಂತೆ
ಚಿಕ್ಕೆ ಕೆಲವು ತೊಳಗುತಲಿರಲು
ಗಳಕನೊಂದು ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಉಸಿರು ತೂಗು-ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಳಗಿನಾವ ಚಿಂತೆಯ ಎಸರೋ
ತಂತಾನೆ ಕನವರಿಸುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ನಟ್ಟಿರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸು ಕಾಣುವಾಗ
ಗೂಗೆಯೊಂದು ಘೂಕ್ಕೆನುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಎಚ್ಚರಾದ ಪೆಚ್ಚು ಮನವು
ಹುಚ್ಚೆದ್ದು ಹರಿಯುತಿರಲು
ನಿದ್ದೆಯಿಲ್ಲ ಆಕಳಿಸಿದರೂ
ಹಲ್ಲಿಯೊಂದು ಲೊಟಗುಡತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಬೆಳಗಿನ ತಂಗಾಳಿ ಬಂದು
ನಸುಕು ಮಸುಕು ಮೂಡುತಲಿರಲು
ಚಿಲೀ ಪಿಲೀ ಚಿಲಿಪಿಲಿ ಎಂದು
ಹಾಲಕ್ಕಿ ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ನಿನ್ನ ಸೊಲ್ಲ ನಂಬಿ ಎದ್ದೆ
ಮೈಯೆಲ್ಲ ನಡುಕವಿದ್ದು
ನೀನೆ ಶುಭ ನುಡಿಯುವಾಗ
ಏನಿದ್ದೇನು? ಎಲ್ಲಾ ಶುಭವೇ !
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
-----------------------------------------------------------------------------------------------
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ |
ಶುಭ ನುಡಿಯೆ || ಪಲ್ಲ ||
ಕವನದ ಮೊದಲಿಗೆ ಬೇಂದ್ರೆಯವರು `ಶುಭ ನುಡಿಯೆ’ ಎಂದು ಶಕುನದ ಹಕ್ಕಿಯನ್ನು ಪ್ರಾರ್ಥಿಸುತ್ತಾರೆ. ಹಾಗು ಈ ಪ್ರಾರ್ಥನೆಯನ್ನು ಕವನದ ಪಲ್ಲವನ್ನಾಗಿ ಮಾಡಿದ್ದಾರೆ. ಯಾವುದೇ ಒಂದು ಶಕುನವು ಉದಾಹರಣೆಗೆ ಹಲ್ಲಿ ಲೊಚಗುಟ್ಟುವದು ಕಿವಿಗೆ ಬಿದ್ದಾಗ, ದೇವರನ್ನು ಸ್ಮರಿಸಬೇಕು ಅಥವಾ `ಒಳಿತು’ ಎಂದು ಅನ್ನಬೇಕು. ಇದು ಹಿರಿಯರು ಹೇಳುವ ಮಾತು. ನಮ್ಮ ದೈವ ನಮಗೆ ಅಮಂಗಳವನ್ನು ತರದಿರಲಿ ಎನ್ನುವದು ಈ ಮಾತಿನ ಅರ್ಥ. ಈ ಪ್ರಾರ್ಥನೆಯೇ ಈ ಕವನದಲ್ಲಿ ಮತ್ತೆ ಮತ್ತೆ ಮರುಕಳಿಸುವ ಆಶಯವಾಗಿದೆ.
ಮೊದಲ ನುಡಿ:
ಮುಂಗಾಳು ಕವಿಯುವಾಗ
ಹಸುಗೂಸಿಗೆ ಕಸಿವಿಸಿಯಾಗಿ
ಕಕ್ಕಾವಿಕ್ಕಿಬಡುತ ಪಾಪ
ಕಿರಿ ಕಿರಿ ಅಳುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಕವನದ ಮೊದಲ ನುಡಿಯು ಕತ್ತಲೆ ಕವಿಯುತ್ತಿರುವ ಮುಸ್ಸಂಜೆಯ ಕಾಲವನ್ನು ಸೂಚಿಸುವ ಮೂಲಕ ಪ್ರಾರಂಭವಾಗುತ್ತದೆ. ಆದರೆ ಬೇಂದ್ರೆಯವರು ಈ ಕಾಲವನ್ನು ‘ಮುಸ್ಸಂಜೆ’ ಎಂದು ಕರೆಯದೆ ‘ಮುಂಗಾಳು’ ಎಂದು ಕರೆದಿದ್ದಾರೆ. ಕಾಳು ಎಂದರೆ ಕಪ್ಪು ಎಂದೂ ಅರ್ಥವಾಗುತ್ತದೆ, ಕಾಲ ಎಂದೂ ಅರ್ಥವಾಗುತ್ತದೆ. ಒಟ್ಟಿನಲ್ಲಿ ಇದು ಅಶುಭದ ಭಯವನ್ನು ಸೂಚಿಸುವ ಪ್ರಯೋಗವಾಗಿದೆ. ಈ ಭಯಕ್ಕೆ ಕಾರಣವೇನು? ಇದು ಅನಿಶ್ಚಿತತೆಯಿಂದ ಹಾಗು ಅಸಹಾಯಕತೆಯಿಂದ ಹುಟ್ಟಿದ ಭಯ. ಹಸುಗೂಸಿಗೆ ಕಸಿವಿಸಿಯಾದಾಗ ಅದರ ಕಾರಣವನ್ನು ಊಹಿಸುವದು ಯಾರಿಗೂ ಸಾಧ್ಯವಾಗದು. ಕೂಸು ಕಕ್ಕಾವಿಕ್ಕಿಯಾಗಿ, ಭೋರೆಂದು ಅಳುತ್ತದೆ; ಕಿರಿಕಿರಿ ಮಾಡುತ್ತದೆ. ಹಿರಿಯರು ದಿಕ್ಕುಗಾಣದವರಾಗುತ್ತಾರೆ. ಕೊನೆಗೆ ತಾಯಿಯು ಕೂಸಿನ ಮುಖಕ್ಕೆ ‘ದೃಷ್ಟಿ ತೆಗೆಯುತ್ತಾಳೆ’. ಎಲ್ಲ ಕೆಟ್ಟ ದೃಷ್ಟಿಗಳು ಹೋಗಲಿ ಎಂದು ದೈವಕ್ಕೆ ಬೇಡಿಕೊಳ್ಳುತ್ತಾಳೆ.
ಇಲ್ಲಿ ಕೂಸು ಅಸಹಾಯಕ ಜೀವಿಯ ಸಂಕೇತವಾದರೆ, ಮುಂಗಾಳು ಕಠಿಣ ಪರಿಸ್ಥಿತಿಯ ಅನಿಶ್ಚಿತ ಪರಿಣಾಮದ ಸಂಕೇತವಾಗಿದೆ. ಈ ಪರಿಸ್ಥಿತಿಯನ್ನು ನಿರ್ವಹಿಸುವದು ಪುರುಷಪ್ರಯತ್ನದ ಮೂಲಕ ಅಸಾಧ್ಯವಾದಾಗ, ವ್ಯಕ್ತಿಯು ದೈವದ ಮೊರೆ ಹೋಗುತ್ತಾನೆ. ದೈವವನ್ನು ಅರಿತುಕೊಳ್ಳಲೆಂದು ‘ದೈವೀ ಸಂಕೇತ’ಗಳಲ್ಲಿ ಅಂದರೆ ಶಕುನಗಳಲ್ಲಿ ನಂಬಿಕೆ ಇರಿಸುತ್ತಾನೆ. ನಿಸರ್ಗಜೀವಿಗಳಾದ ಗೂಗೆ, ಹಾಲಕ್ಕಿ ಹಾಗು ಹಲ್ಲಿಯಂತಹ ಜೀವಿಗಳು ಹೊರಡಿಸುವ ಧ್ವನಿಯನ್ನು ಶಕುನವೆಂದು ಭಾವಿಸಿ ಒಳ್ಳೆಯ ಶಕುನಗಳಿಗಾಗಿ ಪ್ರಾರ್ಥಿಸುತ್ತಾನೆ.
ಆ ಮೂಲಕ ದೈವೀ ಸಹಾಯ ಬರಬಹುದೆಂದು ನಂಬುತ್ತಾನೆ.
ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಇರುಳು ಗಾಳಿಯ ಹಾಗು ಹಣತಿಯ ಸೊಡರಿನ ಪ್ರತಿಮೆಗಳನ್ನು ಬಳಸುತ್ತಾರೆ.
ಇರುಳು ಗಾಳಿ ಬೀಸುವಾಗ
ಹಣತಿಸೊಡರು ಹೆದರಿದಂತೆ
ತಾನು ತಣ್ಣಗಾದೇನೆಂದು
ಚಿಳಿ ಚಿಳಿ ನಡುಗುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಇರುಳ ಗಾಳಿ ಎಂದರೆ ಹೆಚ್ಚುತ್ತಿರುವ ಸಂಕಟಗಳು. ಪುರುಷಪ್ರಯತ್ನ ವ್ಯರ್ಥವಾದ ಬಳಿಕ ಮನುಷ್ಯನು ದೈವದ ಮೊರೆ ಹೋಗುತ್ತಾನೆ. ಕಷ್ಟದ ತಮಂಧದಲ್ಲಿ ಈ ನಂಬಿಕೆಯು ಪ್ರಣತಿಯ ಬೆಳಕಿನಂತೆ ಅವನನ್ನು ಮುನ್ನಡೆಸಬೇಕು. ಆದರೆ ಪರಿಸ್ಥಿತಿಯ ಕಾಠಿಣ್ಯ ಹೆಚ್ಚಿದರೆ, ಅವನಿಗೆ ದೈವದಲ್ಲಿಯ ನಂಬಿಕೆಯೂ ನಷ್ಟವಾಗಬಹುದು. ಮೊದಲ ನುಡಿಯಲ್ಲಿ ‘ಮುಂಗಾಳು’ ಎಂದರೆ ಕತ್ತಲೆಯ ಸಂಧಿಕಾಲವನ್ನು ಸೂಚಿಸಿದ ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಕಗ್ಗತ್ತಲ ರಾತ್ರಿಯಲ್ಲಿ ‘ಬಿರ್’ ಎಂದು ಬೀಸುತ್ತಿರುವ ಗಾಳಿಯ ಸಂಕೇತದ ಮೂಲಕ, ಪರಿಸ್ಥಿತಿಯ ಕಾಠಿಣ್ಯ ಹೆಚ್ಚಿರುವದನ್ನು ಸೂಚಿಸುತ್ತಿದ್ದಾರೆ. ಗಾಳಿ ಹೆಚ್ಚಾದರೆ ಹಣತಿಯಲ್ಲಿಯ ಸೊಡರು ತಾನು ‘ತಣ್ಣ’ಗಾದೇನೆಂದು ಅಂದರೆ ಸತ್ತೇ ಹೋಗುವೆನು ಎಂದು ಭಯಪಡುತ್ತದೆ. ಅರ್ಥಾತ್ ನಂಬುಗೆಯೇ ತನ್ನಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ ಎಂದು ಬೇಂದ್ರೆ ಹೇಳುತ್ತಾರೆ.
[ಟಿಪ್ಪಣಿ : ನೋಬೆಲ್ ಪ್ರಶಸ್ತಿ ವಿಜೇತ, ರಶಿಯನ್ ಸಾಹಿತಿ ಅಲೆಗ್ಝಾಂಡರ್ ಸೋಲ್ಝೆನಿತ್ಸಿನ್ ಅವರು ತಮ್ಮ Candle in the wind ಎನ್ನುವ ನಾಟಕದಲ್ಲಿ ‘ಮಾನವ-ವಿಶ್ವಾಸ’ದ ಹೆಗ್ಗಳಿಕೆಯನ್ನು ಬರೆದಿದ್ದಾರೆ. ಬಸವಣ್ಣನವರು ತಮ್ಮ ವಚನದಲ್ಲಿ ’ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?’ ಎಂದು ನುಡಿದಿದ್ದಾರೆ. ಆದರೆ ಗಾಳಿ ಬೀಸಿದರೆ, ಜ್ಯೋತಿಯೂ ನಿಲ್ಲಲಾರದು.]
ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮನುಷ್ಯನು ಅತಿಯಾಗಿ ಬಳಲಿದಾಗ, ನಿದ್ದೆಗೆ ಜಾರುವದು ಸಹಜ. ಆದರೆ, ನಿದ್ದೆಯೂ ಸಹ ಬರಲಾಗದೇ ಒದ್ದಾಡುತ್ತಿದೆ. ಅದೂ ಸಹ ಬಳಲಿ ಬೆಂಡಾಗಿ ಕೊನೆಗೊಮ್ಮೆ ಆಯಾಸದಿಂದ ಕಣ್ಣುರೆಪ್ಪೆಗಳು ಮುಚ್ಚಿಕೊಳ್ಳುತ್ತವೆ, ನಿದ್ರೆಯು ಆ ಮುಚ್ಚಿದ ರೆಪ್ಪೆಗಳಲ್ಲಿ ಆಸರೆಯನ್ನು ಪಡೆಯುತ್ತದೆ ಎಂದು ಬೇಂದ್ರೆ ಹೇಳುತ್ತಾರೆ. ಈ ರೀತಿಯಲ್ಲಿ ಮನುಷ್ಯನು ನಿದ್ರೆಗೆ ಜಾರಬಹುದು. ಆದರೆ ಅಪಶಕುನದ ಹೆದರಿಕೆಯಲ್ಲಿರುವ ಮನುಷ್ಯನ ಮನಸ್ಸು ಹೇಗೆ ವರ್ತಿಸುತ್ತದೆ ಎನ್ನುವದನ್ನು ಬೇಂದ್ರೆಯವರು ಮೂರನೆಯ ನುಡಿಯಲ್ಲಿ ಹೀಗೆ ಬಣ್ಣಿಸಿದ್ದಾರೆ :
ನಿದ್ದೆ ಬಳಲಿ ಬಳಿಯಲಿ ಬಂದು
ಕೂಡಿದೆವೆಗಳಾಸರೆಯಲ್ಲಿ
ಮೆsಲ್ಲಗೆ, ಒರಗುವ ಅದನು
ಒಂಟಿ ಸೀನು ಹಾರಿಸುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಒಂಟಿ ಸೀನು ಅಪಶಕುನದ ಸಂಕೇತ. ನಿದ್ದೆಗೆ ಜಾರುತ್ತಿರುವ ಮನುಷ್ಯನು ತನ್ನ ಒಂಟಿ ಸೀನಿನಿಂದ ಭಯಗೊಂಡು ತಾನೇ ಎಚ್ಚರಾಗಿ, ಅಪಶಕುನದ ಹೆದರಿಕೆಯಿಂದ ಮತ್ತೆ ಕಳವಳಕ್ಕೀಡಾಗುತ್ತಾನೆ.
ಒಂಟಿ ಸೀನಿನ ಅಪಶಕುನದಿಂದಾಗಿ, ಈ ಬಡಪಾಯಿಗೆ ಹತ್ತುತ್ತಿರುವ ನಿದ್ದೆಯೂ ಹಾರಿಹೋಯಿತು. ಕತ್ತೆತ್ತಿ ಮೇಲೆ ನೋಡಿದರೆ ಅಲ್ಲಿ ಕಾಣುವದೇನು? ಕಪ್ಪು ಆಕಾಶವು ಅವನಿಗೆ ಕತ್ತಲೆಯ ಕೆಸರಿನಂತೆ ಕಾಣುತ್ತಿದೆ. ಅಲ್ಲಿರುವ ಚಿಕ್ಕೆಗಳು ಈತನಿಗೆ ಕಾಣುವ ಪರಿಯನ್ನು ನಾಲ್ಕನೆಯ ನುಡಿಯಲ್ಲಿ ನೋಡಬಹುದು:
ಕತ್ತಲೆಯ ಕೆಸರಿನ ತಳಕೆ
ಮಿನಮಿನಗುವ ಹರಳುಗಳಂತೆ
ಚಿಕ್ಕೆ ಕೆಲವು ತೊಳಗುತಲಿರಲು
ಗಳಕನೊಂದು ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಚಿಕ್ಕೆಗಳೆಲ್ಲ ತಮ್ಮ ಪ್ರಕಾಶವನ್ನು ಕಳೆದುಕೊಂಡು ಕೆಸರಿನ ತಳದಲ್ಲಿ ಸಿಲುಕಿದ ಹರಳುಗಳಂತೆ ಮಿಣುಕುತ್ತಿವೆ. ಅಲ್ಲಿಂದ ಹೊರಬರಲು ಕೆಲವು ಚಿಕ್ಕೆಗಳು ತೊಳಲಾಡುತ್ತಿವೆ. ದೈವೀ ಭರವಸೆಯನ್ನು ಬಿಂಬಿಸಬೇಕಾದ ಈ ಚಿಕ್ಕೆಗಳೇ ತೊಳಲುತ್ತಿರುವಾಗ, ಮನುಷ್ಯ ಯಾರಲ್ಲಿ ನಂಬಿಕೆ ಇಡಬೇಕು? ಅಂತಹದರಲ್ಲಿಯೇ ಒಂದು ಚಿಕ್ಕೆ ಗಳಕ್ಕನೇ ಉಲಿದಂತೆ, ಈ ವ್ಯಕ್ತಿಗೆ ಭಾಸವಾಗುತ್ತದೆ. ಆದರೆ ಅದರ ಉಲಿವು ಶುಭಸೂಚಕ ಉಲಿವೊ, ಅಶುಭಸೂಚಕವೋ ಎನ್ನುವದು ಈತನ ಅರಿವಿಗೆ ಬರುತ್ತಿಲ್ಲ. ಕೆಸರಲ್ಲಿ ಸಿಲುಕಿದ ಚಿಕ್ಕೆಗಳಂತೆಯೇ ಈತನ ಮನಸ್ಸೂ ಸಹ ತೊಳಲಾಟದಲ್ಲಿ ಸಿಲುಕಿದೆ.
ಈ ತೊಳಲಾಟವು ಮನುಷ್ಯನನ್ನು ಒಂದು ಅರೆಪ್ರಜ್ಞಾವಸ್ಥೆಯ ಜೊಂಪಿಗೆ ನೂಕುತ್ತದೆ. ಈ ಸ್ಥಿತಿಯನ್ನು ಬೇಂದ್ರೆ ಐದನೆಯ ನುಡಿಯಲ್ಲಿ ಹೀಗೆ ಬಣ್ಣಿಸುತ್ತಾರೆ:
ಉಸಿರು ತೂಗು-ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಳಗಿನಾವ ಚಿಂತೆಯ ಎಸರೋ
ತಂತಾನೆ ಕನವರಿಸುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಈ ಅರೆಪ್ರಜ್ಞಾವಸ್ಥೆಯಲ್ಲಿ ಮನುಷ್ಯನ ಉಳಿದೆಲ್ಲ ಐಚ್ಛಿಕ ಕ್ರಿಯೆಗಳು ಸ್ತಬ್ಧವಾಗಿ, ಕೇವಲ ಉಸಿರಾಟವಷ್ಟೆ ವ್ಯಕ್ತವಾಗುತ್ತಿರುತ್ತದೆ. ಒಳಉಸಿರು ಹಾಗು ಹೊರಉಸಿರುಗಳನ್ನು ಬೇಂದ್ರೆ ತೂಗುತೊಟ್ಟಿಲು ಎಂದು ಬಣ್ಣಿಸುತ್ತಾರೆ. ಈ ತೂಗುತೊಟ್ಟಿಲಿನಲ್ಲಿ ಜೀವಿ ಮೈಮರೆತು ಮಲಗಿಕೊಂಡಿರುತ್ತಿದೆ. ಇದು ಗಾಢನಿದ್ದೆಯ ಸ್ಥಿತಿ. ಬಳಲಿಕೆಯನ್ನು ಪರಿಹರಿಸಲು ಇಂತಹ ಗಾಢನಿದ್ರೆಯು ಮನುಷ್ಯನನ್ನು ಆವರಿಸುತ್ತದೆ. ಆದರೆ ಒಳಒಳಗೇ ಕುದಿಯುತ್ತಿರುವ ಚಿಂತೆಯು ಹೊರಗೆ ಉಕ್ಕಿ ಬರಲೇ ಬೇಕಲ್ಲ. ಅದನ್ನು ಬೇಂದ್ರೆಯವರು ‘ಚಿಂತೆಯ ಎಸರು’ ಎಂದು ಬಣ್ಣಿಸುತ್ತಾರೆ. ಈ ಎಸರು ಉಕ್ಕಿ ಹೊರಬಂದಾಗ ಮಲಗಿಕೊಂಡಿರುವ ಮನುಷ್ಯನು ಕನವರಿಸುತ್ತಾನೆ. ಈತನ ಕನವರಿಕೆಯ ಆಶಯ ಒಂದೇ: ‘ಶುಭ ನುಡಿಯೆ ಶಕುನದ ಹಕ್ಕಿ, ಶುಭ ನುಡಿಯೆ’!
ಆರನೆಯ ನುಡಿ ಹೀಗಿದೆ:
ನಟ್ಟಿರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸು ಕಾಣುವಾಗ
ಗೂಗೆಯೊಂದು ಘೂಕ್ಕೆನುತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಹಗಲು ಮನುಷ್ಯನನ್ನು ಹಿಂಡಬಹುದಾದ ಸಮಯವಾದರೆ, ಇರುಳು ಆತನಿಗೆ ನಿದ್ದೆಯ ನೆಮ್ಮದಿಯನ್ನು ಕೊಡುವ ಸಮಯ. ಅಂತಲೇ ಬೇಂದ್ರೆಯವರು ನಟ್ಟಿರುಳಿನ(=ನಡು ಇರುಳಿನ=ಮಧ್ಯ ರಾತ್ರಿಯ) ಸಮಯವನ್ನು ‘ನೆರಳು’ ಎಂದು ಬಣ್ಣಿಸುತ್ತಾರೆ. ನೊಂದ ಜೀವವು ಈ ನೆರಳಿನಲ್ಲಿ ನೆಮ್ಮದಿಯನ್ನು ಪಡೆದು ಸವಿಗನಸು ಕಾಣುತ್ತಿರುತ್ತದೆ. ಆದರೆ, ಮಧ್ಯರಾತ್ರಿಯು ಗೂಗೆಗೆ ಜಾಗರಣೆಯ ಸಮಯವಲ್ಲವೇ! ಹಾಗಾಗಿ ಇದೇ ಹೊತ್ತಿನಲ್ಲಿ ಗೂಗೆಯೊಂದರ ಘೂಕ್ ಎನ್ನುವ ಧ್ವನಿ ನೊಂದವನನ್ನು ಎಚ್ಚರಿಸಿ, ಅಪಶಕುನದ ಸೂಚನೆಯಾಗಿ ಮತ್ತೆ ಕಾಡುತ್ತದೆ.
ಆ ಸಂದರ್ಭದ ಮನೋಸ್ಥಿತಿಯನ್ನು ಬೇಂದ್ರೆಯವರು ಏಳನೆಯ ನುಡಿಯಲ್ಲಿ ಹೀಗೆ ಬಣ್ಣಿಸಿದ್ದಾರೆ:
ಎಚ್ಚರಾದ ಪೆಚ್ಚು ಮನವು
ಹುಚ್ಚೆದ್ದು ಹರಿಯುತಿರಲು
ನಿದ್ದೆಯಿಲ್ಲ ಆಕಳಿಸಿದರೂ
ಹಲ್ಲಿಯೊಂದು ಲೊಟಗುಡತಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಅಪಶಕುನದ ಧ್ವನಿಯಿಂದಾಗಿ ಎಚ್ಚರಾದ ಜೀವಿಯು ಏನು ಮಾಡುವದೆಂದು ತಿಳಿಯದೆ ಪೆಚ್ಚಾಗಿ ಕೂರುತ್ತಾನೆ. ಆತನ ಮನಸ್ಸಿಗೆ ಒಂದು ಗುರಿ ಇಲ್ಲದಂತಾಗಿ, ಅದು ಹುಚ್ಚೆದ್ದು ಎಲ್ಲೆಡೆಗೂ ಹರಿಯುತ್ತದೆ. ಆಕಳಿಕೆಗಳು ಬರುತ್ತಲೇ ಇರುತ್ತವೆ. ಆದರೆ ನಿದ್ದೆ ಮಾತ್ರ ಬಾರದು. ಇದೇ ಹೊತ್ತಿನಲ್ಲಿ ಗೋಡೆಯ ಮೇಲಿನ ಹಲ್ಲಿಯೊಂದು ಲೊಚಗುಡುತ್ತದೆ. ಇದು ಮತ್ತೊಂದು ಅಪಶಕುನ!
ಎಂಟನೆಯ ನುಡಿ ಹೀಗಿದೆ:
ಬೆಳಗಿನ ತಂಗಾಳಿ ಬಂದು
ನಸುಕು ಮಸುಕು ಮೂಡುತಲಿರಲು
ಚಿಲೀ ಪಿಲೀ ಚಿಲಿಪಿಲಿ ಎಂದು
ಹಾಲಕ್ಕಿ ಉಲಿಯುತಲಿತ್ತ
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಅಂತೂ ಇಂತೂ ಬೆಳಗು ಮೂಡುತ್ತದೆ. ಆದರೆ ನಸುಕು ಇನ್ನೂ ಮಸುಕಾಗಿಯೇ ಇದೆ. ಬೆಳಗಿನ ತಂಗಾಳಿಯು ಸ್ವಲ್ಪ ಮಟ್ಟಿಗಾದರೂ ಉಲ್ಲಾಸವನ್ನು ಮೂಡಿಸಬೇಕು. ಬದುಕಿನ ಸಂಕೇತಗಳಾದ ಹಕ್ಕಿಗಳು ಚಿಲಿಪಿಲಿಗುಟ್ಟುತಿವೆ. ಇವುಗಳ ಜೊತೆಗೇ ಅಪಶಕುನದ ಹಕ್ಕಿಯಂದೇ ಕರೆಯಲಾದ ಹಾಲಕ್ಕಿಯೂ ಸಹ ತನ್ನ ಧ್ವನಿಯನ್ನು ಈ ಚಿಲಿಪಿಲಿಗೆ ಸೇರಿಸಿದೆ! ಅಪಶಕುನಗಳು ಈ ರೀತಿ ಬೆಂಬತ್ತಿರುವಾಗ, ಮನುಷ್ಯನು ದೈವದಲ್ಲಿ ಹೇಗೆ ನಂಬಿಗೆ ಇಟ್ಟಾನು?
ಕೊನೆಯ ನುಡಿಯಲ್ಲಿ ಬೇಂದ್ರೆಯವರು ದೈವಕ್ಕೆ ಶರಣು ಹೋಗದೇ, ಬೇರೆ ಮಾರ್ಗವಿಲ್ಲವೆಂದು ಹೇಳುತ್ತಾರೆ :
ನಿನ್ನ ಸೊಲ್ಲ ನಂಬಿ ಎದ್ದೆ
ಮೈಯೆಲ್ಲ ನಡುಕವಿದ್ದು
ನೀನೆ ಶುಭ ನುಡಿಯುವಾಗ
ಏನಿದ್ದೇನು? ಎಲ್ಲಾ ಶುಭವೇ !
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ದೇವರಲ್ಲಿ ವಿಶ್ವಾಸ ಇಟ್ಟೇ ಮನುಷ್ಯನು ಏಳಬೇಕಾಗುತ್ತದೆ, ಅಂದರೆ ತನ್ನ ಪ್ರಯತ್ನಗಳಿಗೆ ಸಿದ್ಧನಾಗಬೇಕಾಗುತ್ತದೆ. ಆ ಪ್ರಯತ್ನಗಳು ಫಲಿಸಲಿಕ್ಕಿಲ್ಲ ಎನ್ನುವ ಹೆದರಿಕೆಯನ್ನು ಬೇಂದ್ರೆ ‘ಮೈಯೆಲ್ಲ ನಡುಕವಿದ್ದು’ ಎಂದು ಹೇಳುವ ಮೂಲಕ ಸೂಚಿಸುತ್ತಾರೆ. ಅಪಶಕುನಗಳ ಸರಣಿಯೇ ಈ ಹೆದರಿಕೆಗೆ ಕಾರಣ. ಈ ಹೆದರಿಕೆಯನ್ನು ಮೆಟ್ಟಲು ಆತ ತನಗೆ ತಾನೆ ಅಂದುಕೊಳ್ಳುತ್ತಾನೆ: “ ದೇವರೆ, ನಾನು ನಿನಗೆ ಶರಣು ಬಂದಿರುವಾಗ, ಶುಭಶಕುನವನ್ನು ನೀನೇ ನುಡಿಯುವಿ. ಆ ಸಮಯದಲ್ಲಿ ಉಳಿದ ಅಪಶಕುನಗಳಿಗೆ ಬೆಲೆ ಎಲ್ಲಿದೆ?”
ದೇವರಲ್ಲಿ ಅಚಲ ನಂಬಿಕೆ ಇದ್ದಾಗೆ ಎಲ್ಲವೂ ಶುಭವೇ.
....................................................................................
ಕಳವಳದ ಕತ್ತಲಲ್ಲಿ ಮುಳುಗಿದ ಮನಸ್ಸು ಬೆಳಕಿನ ಕಿರಣ ಕಂಡೀತೇನೊ ಎಂದು ಹಂಬಲಿಸುತ್ತಿರುತ್ತದೆ. ಶುಭಶಕುನಗಳು ಬೆಳಕು ಬಂದೀತೆನ್ನುವ ಭರವಸೆಯಾಗಿವೆ. ಆದರೆ ಅಪಶಕುನಗಳೇ ಸುತ್ತಲೆಲ್ಲ ಮುತ್ತುತ್ತಿರುವಾಗ ಮನಸ್ಸು ಮತ್ತೆ ಮತ್ತೆ ತಳಮಳದಲ್ಲಿ ಮುಳುಗುತ್ತದೆ. ಶುಭಶಕುನಗಳಿಗಾಗಿ ಹಾತೊರೆಯುತ್ತದೆ. ಇಂತಹ ಮನೋಸ್ಥಿತಿಯ ಚಿತ್ರಣ ಈ ಕವನದಲ್ಲಿದೆ.
{ಟಿಪ್ಪಣಿ: ಕಳವಳಿಸುತ್ತಿರುವ ಮನಸ್ಸನ್ನು ಚಿತ್ರಿಸುವ ಕವನಗಳು ಕಡಿಮೆ. ಮನಸ್ಸು ನಿರಾಶೆಯಲ್ಲಿ ಸಿಲುಕಿದಾಗ, ಮತ್ತೆ ಮೇಲೆತ್ತುವಂತಹ ಕವನವನ್ನು ಶ್ರೀ ವಿವೇಕಾನಂದರು ಬರೆದಿದ್ದಾರೆ. `Hold on yet a while brave heart, the victory is sure to come’ ಎನ್ನುವ ಅವರ ಕವನವನ್ನು ಓದುವ ಕೊಂಡಿ ಇಲ್ಲಿದೆ.]