ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?
ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!
ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!
ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!
ಪುರಂದರದಾಸರ ಜನಪ್ರಿಯ ಗೀತೆಯಿದು. ಈ ಗೀತೆಯಲ್ಲಿ ದಾಸರು ಮನುಷ್ಯನ ಮನಸ್ಸನ್ನು ನಾಯಿಯ ಡೊಂಕು ಬಾಲಕ್ಕೆ ಹೋಲಿಸಿದ್ದಾರೆ. ‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಅದೇ ತರಹ, ಮನುಷ್ಯನ ಮನಸ್ಸೂ ಸಹ ಮತ್ತೆ ಮತ್ತೆ ವಿಷಯಭೋಗಗಳ ಕಡೆಗೇ ಹರಿಯುತ್ತದೆ. ಕಣಕದ ಅಥವಾ ಹುಗ್ಗಿಯ ವಾಸನೆಯನ್ನು ಹಿಡಿದು ಹೋದ ನಾಯಿಗೆ ಒನಕೆಯ ಅಥವಾ ಸವಟಿನ ಪೆಟ್ಟು ತಪ್ಪಿದ್ದಲ್ಲ. ಅದೇ ರೀತಿ ವಿಷಯವಾಸನೆಯನ್ನು ಹಿಡಿದು ಹೋಗುವ ಮನುಷ್ಯನಿಗೂ ಸಹ ವಿಧಿಯ ಪೆಟ್ಟು ತಪ್ಪಿದ್ದಲ್ಲ. ಈ ಪೆಟ್ಟೇ ಮನುಷ್ಯನಿಗೆ ಸಿಗುವ ಊಟ ಅಥವಾ ಕರ್ಮಫಲ! ಇದು ದಾಸರ ಸಂದೇಶ. ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ಮನುಷ್ಯನನ್ನೇ ಸಂಪೂರ್ಣವಾಗಿ ದೂರುವಂತಿಲ್ಲ. ಮನುಷ್ಯನು ಭಗವಂತನ ಸೂತ್ರದ ಗೊಂಬೆ. ಆದುದರಿಂದ ಪುರಂದರ ವಿಠ್ಠಲನು ತೋರಿದ ಆಟಗಳನ್ನು ಈ ಗೊಂಬೆ ಆಡುತ್ತಿದೆ ಎನ್ನುವದು ದಾಸರು ಕೊಡುವ ಸಮಾಧಾನ.
ಪುರಂದರದಾಸರ ಗೀತೆಗಳೆಲ್ಲವೂ ಸರಳ ಗೀತೆಗಳು. ಅವುಗಳಲ್ಲಿಯ ಸಂದೇಶ ಅಥವಾ ನೀತಿಬೋಧೆ ಸರಳವಾಗಿಯೇ ಇರುತ್ತದೆ. ಆದರೆ ‘ಡೊಂಕು ಬಾಲದ ನಾಯಕರೆ’ ಎನ್ನುವ ಈ ಗೀತೆಯಲ್ಲಿ ಒಂದು ಸ್ವಾರಸ್ಯಕರವಾದ ಶ್ಲೇಷೆ ಇದೆ. ಅದೇ ಈ ಗೀತೆಗೆ ವಿಶೇಷ ಅರ್ಥವನ್ನು ಕೊಡಲು ಕಾರಣವಾಗಿದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು:
“ನಾಯಕಾ, ನೀನು ವೈರಾಗ್ಯವೃತ್ತಿಯನ್ನು ತಾಳಿ ದಾಸನಾದೆ ಎಂದು ಹೇಳಿಕೊಳ್ಳುತ್ತೀಯಾ. ಆದರೆ ನಿನ್ನ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಇದೆ. ಮತ್ತೆ ಮತ್ತೆ ನಿನ್ನ ಮನಸ್ಸು ಸಂಸಾರದ ಸುಖಗಳ ಕಡೆಗೆ ಹರಿಯುತ್ತದೆ. ಇದನ್ನು ನಿಯಂತ್ರಿಸದಿದ್ದರೆ, ನೀನು ಮತ್ತೆ ಮತ್ತೆ ಪೆಟ್ಟು ತಿನ್ನುತ್ತೀಯಾ!
ಭಗವಂತಾ, ವಿಠ್ಠಲಾ! ನನ್ನ ಮನಸ್ಸಿನ ಆಟಗಳೆಲ್ಲಕ್ಕೂ ನೀನೆ ಹೊಣೆ. ನೀನು ಆಡಿಸಿದಂತೆ ನಾನು ಆಡುತ್ತಿದ್ದೇನೆ.”
ಆದುದರಿಂದ ‘ನಾಯಕರೆ’ ಎಂದು ಹೇಳುವ ಮೂಲಕ, ದಾಸರು ಈ ಹಾಡನ್ನು ಕೇವಲ ಪರರಿಗೆ ನೀತಿಬೋಧೆಯನ್ನು ಮಾಡಲು ಹಾಡಿಲ್ಲ, ತಮಗೆ ತಾವೇ ಆತ್ಮಬೋಧೆಗಾಗಿ ಹಾಡಿದ್ದಾರೆ ಎಂದೆನಿಸುವದು.
ಪುರಂದರದಾಸರ ಪರಿವರ್ತನೆಯ ಬಗೆಗಿರುವ ಜನಜನಿತ ಕತೆಯಿಂದಾಗಿ ಅವರ ವ್ಯಕ್ತಿತ್ವದ ಅನೇಕ ಆಯಾಮಗಳು ಮಸುಕಾಗಿ ಹೋಗಿವೆ. ಶ್ರೀನಿವಾಸ ನಾಯಕರು ಪುರಂದರದಾಸರಾಗಿ ಬದಲಾಗುವದಕ್ಕಿಂತ ಮೊದಲಿನಿಂದಲೂ ಸಂಗೀತವಿದ್ವಾಂಸರು, ಅಧ್ಯಯನಶೀಲರು, ಬಹುಶ್ರುತರು ಹಾಗು ದೇವಭಕ್ತರು ಆಗಿರಬೇಕು. ಅವರ ಕೀರ್ತನೆಗಳಲ್ಲಿ ಬರುವ ಕೆಲವು ಸಾಲುಗಳನ್ನು ಗಮನಿಸಿರಿ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ಹೂವ ತರುವರ ಮನೆಗೆ ಹುಲ್ಲ ತರುವ’, ‘ಉದರವೈರಾಗ್ಯವಿದು’,‘ದಾರಿ ಯಾವುದಯ್ಯಾ ವೈಕುಂಠಕೆ’, ‘ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ’ ಇಂತಹ ಅನೇಕ ಸಾಲುಗಳಲ್ಲಿ, ಗೀತೆಗಳಲ್ಲಿ ದಾಸರ ಸಾಹಿತ್ಯಪ್ರತಿಭೆ ವ್ಯಕ್ತವಾಗುತ್ತದೆ.
ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗುತ್ತಿದೆ. ದಾಸರಾಗುವ ಮೊದಲೂ ಸಹ ಅವರಿಗೆ ಸಾಹಿತ್ಯದಲ್ಲಿ ಹಾಗು ಸಂಗೀತದಲ್ಲಿ ಪರಿಣತಿ ಇರಲೇ ಬೇಕಲ್ಲವೆ? ಇಲ್ಲದೆ ಹೋದರೆ, ಅವರು ತಮ್ಮ ನೂರಾರು ಕೀರ್ತನೆಗಳನ್ನು ರಾಗಬದ್ಧವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ದಾಸರಾಗುವ ಪೂರ್ವದಲ್ಲಿ ಶ್ರೀನಿವಾಸ ನಾಯಕರ ಐಹಿಕ ಆಸೆಗಳು ಏನೇ ಇರಲಿ, ಈ ಲೌಕಿಕಕ್ಕೆ ಅವರ ಮನಸ್ಸು ಎಷ್ಟೇ ಕಟ್ಟು ಬಿದ್ದಿರಲಿ, ತಮ್ಮ ಮನೆಯಲ್ಲಿ, ತಮ್ಮ ಮನದಲ್ಲಿ ಅವರು ದೇವರನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುತ್ತಿರಬಹುದು. ಆ ಸಮಯದಲ್ಲಿ ಸಂಗೀತದ ಮೂಲಕ ದೇವರನ್ನು ಭಜಿಸುತ್ತಿರಬಹುದು. ಅವರ ಕೀರ್ತನೆಯೊಂದನ್ನು ಗಮನಿಸಿದರೆ ಅವರಿಗಿರುವ ಅಪಾರ ಸಂಗೀತಜ್ಞಾನದ ಕಲ್ಪನೆಯಾಗುತ್ತದೆ:
“ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು
ಪಾಡಿ ಮಲ್ಹಾರಿ ಭೈರವಿ ಸಾರಂಗಿ ದೇಸಿ
ಗುಂಡಕ್ರಿಯೆ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಘಣ ಘಣ್ ಘಣಿರೆಂದು ಹಿಡಿದು ಕುಣಿಸುವರು”
ಅವರು ಲೌಕಿಕರಿದ್ದಾಗ ದೇವರ ಪೂಜೆಯನ್ನು ಬಲು ಆಡಂಬರದಿಂದ ನೆರವೇರಿಸುತ್ತಿರಬಹುದು. ಜ್ಞಾನೋದಯವಾದ ಬಳಿಕ ಈ ಆಡಂಬರದ ವ್ಯರ್ಥತೆಯನ್ನು ಅರಿತ ಅವರು ‘ಉದರವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ’ ಎಂದು ಹಾಡಿರಬಹುದು. ಅಷ್ಟೇ ಏಕೆ, ತಾವೇ ಮೊದಲು ಮಾಡುತ್ತಿರಬಹುದಾದ ‘ಮಡಿ ಆಚರಣೆ’ ವ್ಯರ್ಥವೆಂದು ಅರಿತುಕೊಂಡೇ ಅವರು ‘ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ’ ಎಂದು ‘ಮಡಿವಂತ’ರನ್ನು ಹೀಯಾಳಿಸಿರಬಹುದು.
ಈ ಆಡಂಬರ, ಈ ಮಡಿ ‘ಈ ಆನೆ, ಕುದುರೆ, ಒಂಟೆ ಎಲ್ಲಾ’ ಲೊಳಲೊಟ್ಟೆ ಎಂದು ಶ್ರೀನಿವಾಸ ನಾಯಕರಿಗೆ ಅರಿವಾದದ್ದು ಹೇಗೆ? ಜನಪ್ರಿಯ ಕತೆಯು ಹೇಳುವಂತೆ ಶ್ರೀನಿವಾಸ ನಾಯಕರು ಜಿಪುಣಾಗ್ರೇಸರರು. ತಮ್ಮ ಹೆಂಡತಿಯು ತನ್ನ ಮೂಗುತಿಯನ್ನು ದಾನವಾಗಿ ಕೊಟ್ಟಿರಬಹುದು ಎನ್ನುವ ಸಂದೇಹದಿಂದ ಅವಳನ್ನು ಪರೀಕ್ಷಿಸುತ್ತಾರೆ. ವಿಷ ತೆಗೆದುಕೊಳ್ಳಲು ಹೋದ ಅವಳಿಗೆ ವಿಷದ ಬಟ್ಟಲಿನಲ್ಲಿ ಮೂಗುತಿ ದೊರೆತುದರಿಂದ, ಆ ವಿಷಮ ಸನ್ನಿವೇಷದಿಂದ ಅವಳು ಪಾರಾಗುತ್ತಾಳೆ. ಇದು ನಾಯಕರ ಮನಃಪರಿವರ್ತನೆಗೆ ಕಾರಣವಾಗುತ್ತದೆ. ಈ ಪವಾಡವು ನಿಜವೆ? ನಿಜವಾಗಿಯೂ ಏನಾಯಿತು ಎನ್ನುವದನ್ನು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಇದರ ಸಂಭಾವ್ಯತೆಗಳನ್ನು ಹೀಗೆ ಊಹಿಸಬಹುದು:
(೧) ಇದು ನಿಜವಾಗಿಯೂ ಆದಂತಹ ಪವಾಡ.
(೨) ಮನೋಚಲನ ಶಕ್ತಿ ಎನ್ನುವದು ಒಂದು ಇದೆ ಎನ್ನುವದನ್ನು ಪರಾಮನೋವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಮೂಗುತಿಯು ಬಟ್ಟಲಿನಲ್ಲಿ ಬಂದಿದ್ದು ಹಾಗು ಮರಳಿ ನಾಯಕರ ತಿಜೋರಿಗೆ ಹೋಗಿದ್ದು ಅವರ ಸಾಧ್ವಿ ಹೆಂಡತಿಯ ಮನೋಚಲನ ಶಕ್ತಿಯಿಂದ ಆಗಿರಬಹುದು.
(೩) ವಿಷಪ್ರಾಶನ ಮಾಡಲು ಉದ್ಯುಕ್ತಳಾದ ಅಥವಾ ಮಾಡಿದಂತಹ ಹೆಂಡತಿಯನ್ನು ಕಂಡು, ನಾಯಕರ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗಿ ಅವರು ಬದಲಾಗಿರಬಹುದು.
ಏನೇ ಆಗಿರಲಿ, ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯ ಪರಿಣಾಮವಾಗಿ ಅವರ ಮೊದಲಿನ ವ್ಯಾವಹಾರಿಕ ನಂಬಿಕೆಗಳು ಅಳಿದು, ಅವರಲ್ಲಿ ಆಧ್ಯಾತ್ಮಿಕ ನಂಬಿಕೆಗಳು ಮೂಡಿವೆ. ಈ ತರಹದ ಪರಿವರ್ತನೆಯನ್ನು ರಶಿಯದ ಖ್ಯಾತ ವರ್ತನಾವಿಜ್ಞಾನಿ ಪಾವ್ಲೋವ್(೧೮೪೯-೧೯೩೬) ಗಮನಿಸಿದ್ದಾನೆ. ಆತನ ಪ್ರಯೋಗಶಾಲೆಗೆ ಒಮ್ಮೆ ಪ್ರವಾಹದ ನೀರು ನುಗ್ಗಿದಾಗ, ಅಲ್ಲಿದ್ದ ನಾಯಿಗಳಲ್ಲಿ ಕೆಲವು ಸತ್ತೇ ಹೋದವು. ಬದುಕುಳಿದ ನಾಯಿಗಳಲ್ಲಿದ್ದ ‘ಸಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ(=strong conditioned reflexes) ನಶಿಸಿ, ದುರ್ಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ (= weak conditioned reflexes) ಮೇಲೆದ್ದವು’ ಎಂದು ಪಾವ್ಲೋವ್ ದಾಖಲಿಸಿದ್ದಾನೆ.
ಒಟ್ಟಿನಲ್ಲಿ ಶ್ರೀನಿವಾಸ ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ನಡೆಯಿತು. ಆಧ್ಯಾತ್ಮವನ್ನು ನಂಬದವರು ಈ ಘಟನೆಯು ಅವರ ಮೊದಲಿನ ನಂಬುಗೆಗಳನ್ನು ಅಂದರೆ ವ್ಯಾವಹಾರಿಕ ಮನೋಭಾವನೆಯನ್ನು ಬದಲಾಯಿಸಿತು ಎಂದು ಹೇಳಬಹುದು. ಆಧ್ಯಾತ್ಮಜೀವನದಲ್ಲಿ ನಂಬುಗೆ ಇದ್ದವರು ಈ ಘಟನೆಯಿಂದಾಗಿ ನಾಯಕರ ಕಣ್ಣು ತೆರೆಯಿತು ಎಂದು ಹೇಳಬಹುದು. ಏನೇ ಆಗಲಿ, ಈ ಆಘಾತಕಾರಿ ಘಟನೆಯಿಂದಾಗಿ ಕನ್ನಡಿಗರಿಗೆ ಓರ್ವ ಶ್ರೇಷ್ಠ ದಾರ್ಶನಿಕ ಮಾರ್ಗದರ್ಶಕರು ದೊರೆತರು, ಕರ್ನಾಟಕ ಸಂಗೀತ ಪಿತಾಮಹ ದೊರೆತರು. ಇದಕ್ಕೆಲ್ಲ ಕಾರಣಳಾದವರು ನಾಯಕರ ಹೆಂಡತಿ.
‘ಹೆಂಡತಿ ಸಂತತಿ ಸಾವಿರವಾಗಲಿ,
ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ದಾಸರೇ ತಮ್ಮ ಹೆಂಡತಿಯ ಉಪಕಾರವನ್ನು ಸ್ಮರಿಸಿದ್ದಾರೆ.
ಆ ಸಾಧ್ವಿಗೆ ಕನ್ನಡಿಗರು ಚಿರಕೃತಜ್ಞರು.
ಪ್ರತಿಯೊಬ್ಬ ಮಹಾನುಭಾವನ ಹಿಂದೆ ಒಬ್ಬ ಮಹಾನ್ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ಈ ಘಟನೆ ನಿದರ್ಶನವಾದೀತು. ಕೆಲವು ನಗೆಗಾರರು `ದಾರ್ಶನಿಕರಾಗಲು ಮದುವೆಯಾಗಬೇಕು’ ಎಂದು ಸಾಕ್ರೆಟೀಸನ ಉದಾಹರಣೆ ಕೊಟ್ಟು ಹಾಸ್ಯ ಮಾಡಲೂ ಬಹುದು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲನ್ನು ಓದಿದಾಗ ನನಗೆ ನೆನಪಾಗುವದು ಇಂಗ್ಲೀಶ ಕವನವೊಂದರ ಸಾಲು:
“Abou Ben Adhem
(may his tribe increase)”
ಲೀ ಹಂಟ್ ಎನ್ನುವ ಇಂಗ್ಲಿಶ್ ಕವಿ ಈ ಕವನವನ್ನು ಕ್ರಿ. ಶ. ೧೮೩೪ರಲ್ಲಿ ಬರೆದನು. ದಾಸರು ಕ್ರಿ.ಶ. ೧೪೮೪-೧೫೬೪ರಲ್ಲಿ ಬಾಳಿದವರು. ಇಬ್ಬರೂ ಬೇರೆ ಬೇರೆ ದೇಶ ಹಾಗು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೆಳೆದವರು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲಿಗೂ ‘may his tribe increase’ ಎನ್ನುವ ಸಾಲಿಗೂ ಎಂಥಾ ಸಾಮ್ಯತೆ ಇದೆಯಲ್ಲವೆ! ಕಾವ್ಯಕ್ಕೆ ಕಾಲ, ದೇಶ ಹಾಗು ಸಂಸ್ಕೃತಿಯ ಭೇದ ಇದ್ದೀತೆ?
ವೈರಾಗ್ಯವನ್ನು ತಾಳಿ, ಸನ್ಯಾಸವನ್ನು ಸ್ವೀಕರಿಸಿದವರು ಅನೇಕರಿದ್ದಾರೆ. ಇವರೆಲ್ಲ ತಮ್ಮ ಸಂಪತ್ತನ್ನು ತಮ್ಮ ಹೆಂಡತಿ, ಮಕ್ಕಳಿಗೆ ಬಿಟ್ಟು ಸನ್ಯಾಸಿಯಾದವರು. ಆದರೆ ಪುರಂದರದಾಸರು ತಾವಷ್ಟೇ ದಾಸರಾಗಲಿಲ್ಲ. ಅವರ ಜೊತೆಗೆ ಅವರ ಹೆಂಡತಿ ಹಾಗು ಮಕ್ಕಳೂ ಸಹ ಗೋಪಾಳಬುಟ್ಟಿಯನ್ನು ಹಿಡಿದರು. ತಾವು ಕಂಡ ಸತ್ಯದ ದಾರಿಯನ್ನು ತಮ್ಮವರೂ ತುಳಿಯಬೇಕು ಎನ್ನುವದು ಸತ್ಯಪ್ರಜ್ಞರ ತಿಳಿವು. ದಾಸರ ಬಳಿಕ ಐದು ಶತಮಾನಗಳ ನಂತರ ಮತ್ತೊಬ್ಬ ಸಂತ ಇಂತಹ ಸತ್ಯನಿಷ್ಠೆಯನ್ನು ತೋರಿಸಿದ. ಆತ ಮೋಹನದಾಸ ಗಾಂಧೀ.
ಪುರಂದರದಾಸರ ಒಂದು ಕೀರ್ತನೆ ತುಂಬ ಜನಪ್ರಿಯವಾಗಿದೆ. ಪ್ರತಿ ಶುಕ್ರವಾರವೂ ಅನೇಕರು ಈ ಭಜನೆಯನ್ನು ಹಾಡುತ್ತಾರೆ:
“ಭಾಗ್ಯದಾ ಲಕ್ಷ್ಮೀ ಬಾರಮ್ಮಾ, ನಮ್ಮಮ್ಮಾ ನೀ ಸೌ-
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.”
ಲೌಕಿಕ ಸಂಪತ್ತೆನ್ನೆಲ್ಲ ಬಿಸುಟು ಹೋದ ದಾಸರು ಯಾವ ಭಾಗ್ಯಲಕ್ಷ್ಮಿಯನ್ನು ಕರೆಯುತ್ತಿರಬಹುದು?
“ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ”
ಈ ನುಡಿಯನ್ನು ನೋಡಿದಾಗ ದಾಸರು ಲೌಕಿಕ ಸಂಪತ್ತಿನ ಲಕ್ಷ್ಮಿಯನ್ನು ಕರೆಯುತ್ತಿರಬಹುದೆ ಎನ್ನುವ ಅನುಮಾನ ಬಾರದಿರದು. ಆದರೆ,
“ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ”
ಎನ್ನುವ ಸಾಲುಗಳನ್ನು ನೋಡಿದಾಗ, ದಾಸರು ಕರೆಯುತ್ತಿರುವದು ವೈರಾಗ್ಯಲಕ್ಷ್ಮಿಯನ್ನು ಎಂದು ಭಾಸವಾಗುತ್ತದೆ.
‘ಲಂಗೋಟಿ ಬಲು ದೊಡ್ಡದಣ್ಣ’ ಎಂದು ಹಾಡಿದ ದಾಸರು, ತಾವು ತ್ಯಜಿಸಿದ ಸಿರಿ ಸಂಪತ್ತನ್ನು ವಿಜೃಂಭಿಸಿ ಕೀರ್ತಿಸುವದು ಸಾಧ್ಯವಿಲ್ಲ. ಏನೇ ಆಗಲಿ, ಅವರವರ ಭಾವಕ್ಕೆ ತಕ್ಕಂತಹ ಫಲ ಅವರವರಿಗೆ ಲಭಿಸುತ್ತದೆ. ಆದುದರಿಂದ ಲೌಕಿಕ ಸಂಪತ್ತನ್ನು ಬಯಸುವವರು ದಾಸರ ಗೀತೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವದು ಶ್ರೇಯಸ್ಕರ:
ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?
ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!
ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!
ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!