ಶ್ರೀ ವ್ಯಾಸರಾಯರು (೧೪೪೭-೧೫೩೯) ವಿಜಯನಗರದ ರಾಜರಿಗೆ ಗುರುಸ್ಥಾನದಲ್ಲಿ ಇದ್ದವರು. ಭಕ್ತಿಪಂಥದ ದಾಸಕೂಟಕ್ಕೆ ಇವರು ಅಧ್ವರ್ಯರು. ಇಂತಹ ಉಚ್ಚ ತರಗತಿಯ ದಾಸಕೂಟದಲ್ಲಿ ಮೋಕ್ಷ ಪಡೆಯುವ ಯೋಗ್ಯತೆ ಇದ್ದವರು ಕೆಲವರಾದರೂ ಇದ್ದಿರಬಹುದಲ್ಲವೆ? ವ್ಯಾಸರಾಯರು ತಮ್ಮ ಶಿಷ್ಯರೆದುರಿಗೆ ಈ ಪ್ರಶ್ನೆಯನ್ನು ಇರಿಸುತ್ತಾರೆ: ‘ನಮ್ಮಲ್ಲಿ ವೈಕುಂಠಕ್ಕೆ ಯಾರು ಹೋಗಬಹುದು?’ ಉತ್ತರ ಹೇಳುವ ಧೈರ್ಯ ಕನಕದಾಸರನ್ನು ಬಿಟ್ಟರೆ ಯಾರಿಗೂ ಇರುವದಿಲ್ಲ.
ಕನಕದಾಸರು ಉತ್ತರಿಸುತ್ತಾರೆ: ‘ನಾನು ಹೋದರೆ ಹೋಗಬಹುದು!’
ಕನಕದಾಸರ ಉತ್ತರದ ಒಳಾರ್ಥವನ್ನು ತಿಳಿದವರು ಅದನ್ನು ನಮಗೂ ತಿಳಿಸಿದ್ದಾರೆ. ‘ನಾನು’ ಎಂದರೆ ಮನುಷ್ಯನ ಅಹಂಭಾವ. ಅಹಂಭಾವ ನಾಶವಾಗುವದೇ ಮೋಕ್ಷ ಇತ್ಯಾದಿ. ಅಹಂಭಾವಕ್ಕೆ arrogance ಎನ್ನುವ ಅರ್ಥ ಇದ್ದಂತೆಯೇ self identity ಅಥವಾ ego ಎನ್ನುವ ಅರ್ಥವೂ ಇದೆ. ಕನಕದಾಸರು ‘ನಾನು’ ಎನ್ನುವ ಪದವನ್ನು arrogance ಎನ್ನುವ ಅರ್ಥದಲ್ಲಿ ಬಳಸಿಲ್ಲ. ಅವರು ಅದನ್ನು self identity ಎನ್ನುವ ಅರ್ಥದಲ್ಲಿ ಬಳಸಿದ್ದಾರೆ. ಈ self identity ಎನ್ನುವ ಆಂಗ್ಲ ಪದಕ್ಕೆ ಕನ್ನಡದಲ್ಲಿ ‘ಅಹಂಸಂಜ್ಞೆ’, ‘ಅಹಂಪ್ರಜ್ಞೆ’ ಅಥವಾ ‘ಅಹಮಿಕೆ’ ಎನ್ನುವ ಪದವನ್ನು ಬಳಸಬಹುದು. ಅಲ್ಲಮಪ್ರಭುಗಳು self identityಗೆ ‘ಕುರುಹು’ ಎನ್ನುವ ಪದವನ್ನು ಬಳಸಿದ್ದಾರೆ. ‘ಅಸ್ಮಿತೆ’ ಎನ್ನುವ ಪದವೂ ಬಳಕೆಯಲ್ಲಿದೆ. ನವೋದಯ ಕಾಲದ ಮಹಾನ್ ಚಿಂತಕರಾದ ಕುವೆಂಪು ಅವರು “ಓ ನನ್ನ ಚೇತನಾ, ಆಗು ನೀ ಅನಿಕೇತನಾ!’ ಎನ್ನುವಾಗ ತಮ್ಮ ಅಪರಿಮಿತ ಚೈತನ್ಯಕ್ಕೆ ಯಾವುದೇ ಪರಿಮಿತ ಅಹಂಸಂಜ್ಞೆ ಬೇಡ ಎಂದೇ ಹೇಳುತ್ತಾರೆ.
ಈ `ನಾನು’ ಅಥವಾ ಅಹಂಪ್ರಜ್ಞೆಯು ವಿಕಸಿಸುವ ಬಗೆ ಹೇಗೆ? ಗರ್ಭಸ್ಥ ಭ್ರೂಣ ಹಾಗು ನವಜಾತ ಶಿಶುವಿನಲ್ಲಿ ಇರುವ ಅಹಂಪ್ರಜ್ಞೆಯು ಜೈವಿಕ ಅಹಂಪ್ರಜ್ಞೆ ಅಥವಾ biological identity. ಹುಟ್ಟಿದ ಶಿಶುವು ಮಾಡುವ ಮೊದಲನೆಯ ಕೆಲಸವೆಂದರೆ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ. ಇದು ಅದರ ಜೈವಿಕ ಅವಶ್ಯಕತೆ. ಈ ಜೈವಿಕ ಅಹಂಪ್ರಜ್ಞೆಯು ಎಲ್ಲ ಜೀವಿಗಳಿಗೆ ಒಂದೇ ತೆರನಾಗಿರುತ್ತದೆ. ಕೆಲವೇ ತಿಂಗಳುಗಳಲ್ಲಿ ಆ ಶಿಶುವು ದೈಹಿಕ ಅಹಂಪ್ರಜ್ಞೆ ಅಥವಾ physiological identityಯನ್ನು ಬೆಳೆಯಿಸಿಕೊಳ್ಳುತ್ತದೆ. ತಾನು ದೈಹಿಕವಾಗಿ ಯಾವ ತರಹದ ಪ್ರಾಣಿ ಎನ್ನುವದನ್ನು ಆ ಜೀವಿ ಅರಿಯಲಾರಂಭಿಸುತ್ತದೆ. ಮೂರು ವರ್ಷದ ಬಾಲರಿಗೆ ಲಿಂಗ-ಕುರುಹು ಅಥವಾ gender identity ತಿಳಿದಿರುತ್ತದೆ ಎಂದು ಹೇಳುತ್ತಾರೆ. ತನ್ನ ತಾಯಿಯ ಜೊತೆಗಿರುವ ತನ್ನ ಸಂಬಂಧವನ್ನು ಗುರುತಿಸುವದು ಅದರ ಮೊದಲ ಸಾಮಾಜಿಕ ಅಹಂಸಂಜ್ಞೆ ಅಥವಾ social identity. ಇದೇ ರೀತಿಯಾಗಿ ಮನುಷ್ಯನ(ಳ) ‘ಕುರುಹು’ಗಳು ಬೆಳೆಯುತ್ತ ಹೋಗುತ್ತವೆ.
‘ನಾನು ಹೋದರೆ ಹೋಗಬಹುದು’ ಎಂದು ಹೇಳುವಾಗ ಕನಕದಾಸರಿಗೆ ಇದ್ದಂತಹ ಅಹಂಸಂಜ್ಞೆಗಳು ಯಾವವು?
ಕನಕದಾಸರು ಶಿಗ್ಗಾವಿ ತಾಲೂಕಿನಲ್ಲಿರುವ ಬಂಕಾಪುರದ ಹತ್ತಿರ ಇರುವ ‘ಬಾಡ’ ಹಳ್ಳಿಯಲ್ಲಿ ಹುಟ್ಟಿದವರು. ಬೀರನಾಯಕ ಎನ್ನುವದು ಇವರ ಮೊದಲಿನ ಹೆಸರು. ಇವರು ಪಾಳೆಯಗಾರಿಕೆಯ ವಂಶದವರು. ದಾಯಾದಿಕಲಹದಲ್ಲಿ ಇವರಿಗೆ ಪಾಳೆಯಗಾರಿಕೆ ದಕ್ಕುವದಿಲ್ಲ. ಆಗ ಇವರು ವಿಜಯನಗರದ ಫೌಜಿನಲ್ಲಿ ದಣಾಯಕರಾಗಿ ಸೇರ್ಪಡೆಯಾಗುತ್ತಾರೆ. ಸೇನೆಯಲ್ಲಿ ಇವರಿಗೆ ಒಳ್ಳೆಯ ಹೆಸರು ಹಾಗು ಅಧಿಕಾರ ದೊರೆತಿದ್ದವು. ಆ ಸಮಯದಲ್ಲಿ ಸಾಕಷ್ಟು ಸಂಪತ್ತನ್ನೂ ಸಂಪಾದಿಸಿದ ಇವರಿಗೆ ‘ಕನಕನಾಯಕ’ ಎನ್ನುವ ಹೆಸರು ಬಂದಿತು. ಈ ರೀತಿಯಾಗಿ ಸಂಪತ್ತಿನ ಹಾಗು ಅಧಿಕಾರದ ದರ್ಪ ಇವರಲ್ಲಿ ಒಂದುಗೂಡಿದವು. ಇದು ಅವರಲ್ಲಿದ್ದ ದೊಡ್ಡ ಅಹಂಸಂಜ್ಞೆ. ತಮ್ಮ ಕೀರ್ತನೆಯೊಂದರಲ್ಲಿ ತಮ್ಮ ಪೂರ್ವಜೀವನದ ಶೌರ್ಯದ ವರ್ಣನೆಯನ್ನು ಹಾಗು ತಮ್ಮ ಬಿಲ್ಲುಗಾರಿಕೆಯ ಪ್ರಶಂಶೆಯನ್ನು ಅವರು ಈ ರೀತಿಯಾಗಿ ಮಾಡಿದ್ದಾರೆ:
(೧) “ಕನಕ ದಳದಲಿ ಬಂದು, ಕಲೆತನೆಂದರೆ ಫೌಜು
ಕನಕುಮನಕಾಗುವದು ಹರಿಯೆ.”
(೨)“ಮೊನೆಗಾರತನವೆಂಬ ಶನಿ ಬಿಡಿಸಿ ತವ ಪಾದ
ವನಜವನು ಸೇರಿಸಿದೆ ಹರಿಯೆ.”
ತಮ್ಮ ಅಧಿಕಾರದರ್ಪದ ವರ್ಣನೆಯನ್ನು ಅವರು ಈ ರೀತಿಯಾಗಿ ಹಾಡಿದ್ದಾರೆ:
“ಸ್ವಾರಿ ಹೊರಡಲು ಛತ್ರ, ಭೇರಿ, ನಿಸ್ಸಾಳಗಳು
ಭೋರೆಂಬ ಭೋಂಕಾಳೆ ಹರಿಯೆ
ಧೀರ ರಾಹುತರಾಣ್ಮ ಭಾರಿ ಪರಿವಾರದಹಂ-
ಕಾರಭಾರವ ತೊರೆದೆ ಹರಿಯೆ”
ಸಂಪತ್ತು ಹಾಗು ಅಧಿಕಾರದ ಜೊತೆಗೆ ಕನಕದಾಸರಿಗೆ ಚೆಲುವಾದ ರೂಪವೂ ಇದ್ದಿರಬಹುದು. ಅವರ ಎರಡು ಕೀರ್ತನೆಗಳಲ್ಲಿ ಇದು ವ್ಯಕ್ತವಾಗುತ್ತದೆ:
(೧) “ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ ಮ್ಯಾ.”
(೨) “ಮದರೂಪು ಬಿಡಿಸಿ ಸನ್ಮುದರೂಪು ಧರಿಸೆಂದು
ಹೃದಯದೊಳು ನೀ ನಿಂತೆ ಹರಿಯೆ”.
ಇನ್ನು ಕನಕದಾಸರ ಕೀರ್ತನೆಗಳ ಶೈಲಿಯನ್ನು ಗಮನಿಸೋಣ. ಅವರ ಅನೇಕ ಕೀರ್ತನೆಗಳಲ್ಲಿ ಪಾಂಡಿತ್ಯ ಎದ್ದು ಕಾಣುತ್ತದೆ. ಪುರಂದರದಾಸರ ಕೀರ್ತನೆಗಳಲ್ಲಿ ಕಾಣುವ ಸರಳತೆ ಕನಕದಾಸರ ಕೀರ್ತನೆಗಳಲ್ಲಿ ಇಲ್ಲ. ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಇವುಗಳಂತೂ ಪಂಡಿತರಿಗಾಗಿಯೇ ರಚಿತವಾದ ಕೃತಿಗಳಂತಿವೆ. ಅರ್ಥಾತ್ ಕನಕದಾಸರಲ್ಲಿ ಪಾಂಡಿತ್ಯವಿತ್ತು. ಈ ಪಾಂಡಿತ್ಯದ ಅಹಮಿಕೆಯೂ ಅವರಲ್ಲಿ ಮನೆ ಮಾಡಿರಬಹುದು.
ಸಂಪತ್ತು,ಅಧಿಕಾರ, ರೂಪ, ಪಾಂಡಿತ್ಯ ಹಾಗು ಯೌವನ ಇವೆಲ್ಲ ಒಂದುಗೂಡಿದ ವ್ಯಕ್ತಿಗೆ ಅಹಂಕಾರ ಬಾರದಿದ್ದೀತೆ? ಅಲ್ಲದೆ ಆ ಕಾಲದ ಸರ್ವಾಧಿಕಾರಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ, ಗಂಡಸಾಗಿರುವದೇ ಒಂದು ದೊಡ್ಡ ಅಹಮಿಕೆ. ಅಹಂಕಾರಕ್ಕೆ ಕಾರಣವಾಗಬಹುದಾದ ಈ ಎಲ್ಲ ಅಂಶಗಳು ಇದ್ದರೂ ಸಹ, ಕನಕನಾಯಕರ ಮನಸ್ಸು ಸಮಾಜದ ಉದ್ಧಾರಕ್ಕಾಗಿ ಮಿಡಿಯುತ್ತಿರಬಹುದು. ಅವರು ದಾಸರಾದ ಬಳಿಕ ರಚಿಸಿದ ಕೀರ್ತನೆಗಳಲ್ಲಿ ಕಾಣುವ ಸಾಮಾಜಿಕ ಕಳಕಳಿಯು ಅವರ ಪೂರ್ವಜೀವನದಲ್ಲಿಯೂ ಇದ್ದಿರಲೇಬೇಕು. ಇವೆಲ್ಲ ಅಂಶಗಳು ಅವರ ಒಟ್ಟು ಅಹಂಸಂಜ್ಞೆಯ ಭಾಗಗಳಾಗಿವೆ. ಇಷ್ಟೆಲ್ಲ ಸಂಕೀರ್ಣ ವ್ಯಕ್ತಿತ್ವವಿದ್ದ ಹಾಗು ಸಮಾಜದಲ್ಲಿ ಸಾಕಷ್ಟು ಬೆಲೆ ಇದ್ದ ಕನಕನಾಯಕರಿಗೆ ಅಹಂಸಂಜ್ಞೆಯ ಜೊತೆಗೆ ಕಿಂಚಿತ್ತಾದರೂ ಅಹಂಕಾರವಿದ್ದರೆ ಆಶ್ಚರ್ಯವಿಲ್ಲ.
ಪರಮಾತ್ಮನೆಂದರೆ ಒಂದು ಅನಂತಸಮುದ್ರವಿದ್ದಂತೆ. ಒಂದು ನೀರಗುಳ್ಳೆಯು ಎಷ್ಟು ಉಬ್ಬಿದರೇನು, ಅನಂತಸಮುದ್ರವಾಗಲು ಸಾಧ್ಯವಾದೀತೆ? ಸಮುದ್ರವಾಗಲು ಅರ್ಥಾತ್ ಮೋಕ್ಷ ಪಡೆಯಲು ಈ ನೀರಹನಿಗೆ ಒಂದೇ ಮಾರ್ಗವಿದೆ. ಸೀಮಿತವಾದ ತನ್ನತನವನ್ನು ತ್ಯಜಿಸಿ ಸೀಮೆಯಿಲ್ಲದ ಸಮುದ್ರದಲ್ಲಿ ಕರಗಿ ಹೋಗುವದೇ ಆ ಮಾರ್ಗ. ಅದಕ್ಕೆ ಭಗವಂತನ ಅನುಗ್ರಹವೂ ಅವಶ್ಯ. ಭಗವಂತನ ಅನುಗ್ರಹಕ್ಕೆ ಸ್ವಂತ ಸಾಧನೆಯೂ ಅತ್ಯವಶ್ಯ.ಆದರೆ ಭಗವಂತನ ಅನುಗ್ರಹವೆಂದರೆ ಲೌಕಿಕ ಸುಖದ ಹರಣವೆಂದೇ ಅರ್ಥ. ‘ನನ್ನ ಭಕ್ತರಿಂದ ನಾನು ಎಲ್ಲವನ್ನೂ ಅಪಹರಿಸುವೆ!’ ಎಂದು ಶ್ರೀಕೃಷ್ಣನೇ ಹೇಳಿಲ್ಲವೆ? ಕನಕನಾಯಕರನ್ನೂ ಸಹ ಶ್ರೀಕೃಷ್ಣನು ಅವಮಾನಕ್ಕೆ ಒಳಪಡಿಸಿದನು. ಅವರ ದರ್ಪ ಹಾಗು ಅಹಂಕಾರ ಚೂರು ಚೂರಾಗುವಂತಹ ಸನ್ನಿವೇಶವನ್ನು ತಂದನು. ರಣಶೂರರಾದ ಕನಕನಾಯಕರು ಕಾಳಗವೊಂದರಲ್ಲಿ ಪರಾಜಿತರಾದರು. ಅದರ ವರ್ಣನೆಯನ್ನು ಅವರು ಹೀಗೆ ಮಾಡಿದ್ದಾರೆ:
“ಅರಿಗಳೂ ದಂಡೆತ್ತಿ ಬರಲು ನಾನವರೊಡನೆ
ಪರಿಪರೀ ಹೋರಾಡುತಿರೆ ಹರಿಯೆ
ದುರುಳರೆನ್ನ ಜಯಿಸಿ, ಹರಿದಟ್ಟಿ ಬಂದೆನ್ನ
ಧರೆಗುರುಳಿಸಿದರೊ ಹರಿಯೆ.”
ಇಷ್ಟೇ ಅಲ್ಲ, ಕನಕನಾಯಕರು ಮೃತ್ಯುಮುಖವನ್ನೇ ಕಂಡರು:
“ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿ-
ರಣವನುತ್ತರಿಸಿ ಮರಣವ ತಾಳಿರೆ
ಪ್ರಣವಗೋಚರ ನೀನು ಗೋಚರಿಸಿ ಬಂದೆನ್ನ
ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ”
ಈ ಆಘಾತದಿಂದ ಕನಕನಾಯಕರಲ್ಲಿ ಇದ್ದ ಅಹಂಕಾರ, ಅಹಂಸಂಜ್ಞೆ ಎಲ್ಲವೂ ಕರಗಿ ಹೋದವು.
‘ತನು ನಿನ್ನದು, ಜೀವನ ನಿನ್ನದು, ರಂಗಾ’ ಎನ್ನುವದು ಅವರಿಗೆ ಹೊಳೆಯಿತು. ಆ ಅರಿವಿನಿಂದ ಕನಕನಾಯಕರು ಕನಕದಾಸರಾದರು; ಲೌಕಿಕದ ಪ್ರತಿಷ್ಠೆಯನ್ನು ಬಿಟ್ಟು ಅಲೌಕಿಕದ ಸಾಧನೆಗೆ ಹೊರಳಿದರು. (ರಶಿಯನ್ ವರ್ತನಾವಿಜ್ಞಾನಿ ಪಾವ್ಲೋವನ ಸಂಶೋಧನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು.)
ನವ್ಯಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ಭೂಮಿಗೀತೆ’ ಕವನದಲ್ಲಿ ಹೀಗೆ ಹೇಳಿದ್ದಾರೆ:
‘ತೆಗೆದುಕೋ ನೀ ಕೊಟ್ಟ ವಸ್ತ್ರವಿಲಾಸ,
ಈ ಶರಟು, ಈ ಶರಾಯಿ,
ಈ ಭಗ್ನ ಜೋಪಡಿಯೂ ನಿನ್ನದೇ,
ಬತ್ತಲಾಗದೆ ಬಯಲು ಸಿಕ್ಕದಿಲ್ಲಿ!’
ಕನಕನಾಯಕರು ತಮ್ಮ ರೂಪ, ಶೌರ್ಯ, ಸಂಪತ್ತು ಹಾಗು ಅಧಿಕಾರದ ವಸ್ತ್ರವಿಲಾಸವನ್ನು ಅಂದರೆ ಅಹಂಸಂಜ್ಞೆಗಳನ್ನು ಕಳೆದುಕೊಂಡು ದಾಸರಾದರು. ಬತ್ತಲಾದ ಅವರು ಬಯಲಿನಲ್ಲಿ ಅಡಗಿದ ಚೈತನ್ಯರೂಪನ ಹುಡುಕುವಿಕೆಯಲ್ಲಿ ನಿರತರಾದರು. ಆದರೆ ಅವರ ಎಲ್ಲ ಅಹಂಸಂಜ್ಞೆಗಳು ಕರಗಿ ಹೋದವೆ? ಕೆಲವು ಅಹಮಿಕೆಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವುಗಳಲ್ಲಿ ಒಂದು ಪಾಂಡಿತ್ಯದ ಅಹಮಿಕೆ.
‘‘ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು’” ಎನ್ನುವ ಅವರ ರಚನೆಯನ್ನು ಗಮನಿಸಿರಿ. ಇಲ್ಲಿ ‘ವರಕವಿ’ ಎಂದು ಅವರು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದಾರೆ.
ಎರಡನೆಯದಾಗಿ ಅವರಿಗೆ ಸಮಾಜಸುಧಾರಕ ಎನ್ನುವ ಅಹಂಪ್ರಜ್ಞೆ ಉಳಿದುಕೊಂಡಿರಬಹುದು.
ಕನಕದಾಸರು ತಮ್ಮ ಸುತ್ತಲಿನ ಜನರಿಗೆ, ವಿಶೇಷತಃ ಸಾಮಾಜಿಕವಾಗಿ ಕೆಳಸ್ತರದಲ್ಲಿ ಬದುಕುತ್ತಿರುವ ಜನರಿಗೆ ಹತ್ತಿರವಾಗಿ, ಅವರನ್ನು ಮೇಲೆತ್ತಲು, ಅವರಲ್ಲಿ ಘನತೆಯನ್ನು ತುಂಬಲು ಪ್ರಯತ್ನಿಸಿದವರು, ಆ ಜನರ ಆಡುಮಾತಿನಲ್ಲಿಯೇ ಹಾಡಿದವರು. ಇದರ ಉದಾಹರಣೆ ಎಂದು ಒಂದು ಗೀತೆಯನ್ನು ಭಾಗಶಃ (ಅಂದರೆ ಒಂದು ನುಡಿಯನ್ನು ಮಾತ್ರ) ಗಮನಿಸೋಣ:
ದ್ಯಾವಿ ನಮ್ಮ ದ್ಯಾವರು ಬಂದರು ಬನ್ನಿರೆ ||ಪಲ್ಲ||
ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನನ್ನ ಕೊಂದಾನ್ ಮ್ಯಾ
ಗುಂಗಾಡಿ ಸೋಮನ ಕೊಂದು ವೇದವನು
ಬಂಗಾರದೊಡಲನಿಗಿತ್ತಾನ್ ಮ್ಯಾ
ಅಕ್ಕಿಯನ್ನು ಸವರ್ಣೀಯರಿಗೆ ಹಾಗು ರಾಗಿಯನ್ನು ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದವರಿಗೆ ಹೋಲಿಸಿ ಅವರು ಬರೆದ ಗೀತೆಯೂ ಸಹ ತುಂಬ ಪ್ರಸಿದ್ಧವಿದೆ. ‘ರಾಮಧಾನ್ಯ ಚರಿತೆ’ ಎನ್ನುವ ಈ ದೀರ್ಘ ಗೀತೆಯಲ್ಲಿ ಕಪ್ಪು ವರ್ಣದ ರಾಗಿಗೆ ಹಾಗು ಬಿಳಿಯ ವರ್ಣದ ಅಕ್ಕಿಗೆ ಶ್ರೇಷ್ಠತೆಯ ವಿಷಯವಾಗಿ ವಾಗ್ವಾದ ಜರಗುತ್ತದೆ. ಈ ವಾದವನ್ನು ಬಗೆಹರಿಸಲೆಂದು ಭಗವಂತನು ಅಕ್ಕಿ ಹಾಗು ರಾಗಿ ಇವೆರಡನ್ನು ಕೆಲ ಅವಧಿಗೆ ಮುಚ್ಚಿ ಇಟ್ಟಾಗ ಅಕ್ಕಿ ಹಾಳಾಗಿರುತ್ತದೆ, ರಾಗಿ ಸರಿಯಾಗಿಯೇ ಇರುತ್ತದೆ. ಇದು ರಾಗಿಯ ಅಂದರೆ ಕಪ್ಪು ವರ್ಣದ ವಿಜಯದ ಸಂಕೇತ. ಅಲ್ಲದೆ ‘ರಾಗಿ’ ಎನ್ನುವದು ‘ರಾಘವ’ನ (--ಅವನೂ ಶ್ಯಾಮಲಕಾಯನೇ!--) ಮೊಟಕು ಹೆಸರೂ ಹೌದು.
ಸಮಾಜಸುಧಾರಕರಷ್ಟೇ ಅಲ್ಲ, ಕನಕದಾಸರು ಸಾಮಾಜಿಕ ಆಂದೋಲನಕಾರರೂ ಆಗಿದ್ದರು. ೧೨ನೆಯ ಶತಮಾನದಲ್ಲಿ ಜರುಗಿದ ಶರಣಚಳುವಳಿಯು ಆಢ್ಯವ್ಯವಸ್ಥೆಯ ವಿರುದ್ಧ ಹೋರಾಡಿತು. ವಿಜಯನಗರದ ಕಾಲದಲ್ಲಿ ಇದೇ ಶರಣರು ತಾವೇ ಆಢ್ಯತೆಯ ಪೋಷಕರಾದರು. ಈ ಸಮಯದಲ್ಲಿ ಧಾರ್ಮಿಕ ಹಾಗು ಸಾಮಾಜಿಕ ಆಢ್ಯತೆಯ ವಿರುದ್ಧ ಕನಕದಾಸರು ಹೋರಾಟ ನಡೆಸಿದರು. “ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ?” ಎನ್ನುವ ಅವರ ಗೀತೆ ಅವರ ಹೋರಾಟಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಇದಕ್ಕೂ ಪೂರ್ವದಲ್ಲಿ ತಮಿಳುನಾಡಿನಲ್ಲಿ ಶ್ರೀ ರಾಮಾನುಜಾಚಾರ್ಯರೂ ಸಹ ಜಾತಿವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಇದರಿಂದಾಗಿ ಅವರು ತಮಿಳುನಾಡಿನಿಂದ ಕರ್ನಾಟಕಕ್ಕೆ ಓಡಿ ಬರಬೇಕಾಯಿತು. ರಾಮಾನುಜಾರ್ಯರ ಪ್ರಭಾವವೂ ಕನಕದಾಸರ ಮೇಲೆ ಆಗಿದೆ.
ಸೋದೆಮಠದ ವಾದಿರಾಜರು ಕನಕದಾಸರ ಗಾಢ ಸ್ನೇಹಿತರಾಗಿದ್ದು, ಕನಕದಾಸರಿಗಾಗಿ ಉಡುಪಿಯ ಶ್ರೀಕೃಷ್ಣಮಂದಿರದ ಹಿಂಭಾಗದಲ್ಲಿ ಒಂದು ಕುಟೀರವನ್ನು ಕಟ್ಟಿಸಿಕೊಟ್ಟಿದ್ದಾಗಿ ಹೇಳಲಾಗುತ್ತದೆ. ಕನಕದಾಸರು ಅಲ್ಲಿ ಕೃಷ್ಣದರ್ಶನಕ್ಕಾಗಿ ಮಾಡಿದ ಯತ್ನದ ಬಗೆಗೆ ಒಂದು ಮಾತನ್ನು ಹೇಳಬೇಕು. ಖ್ಯಾತ ನಾಟಕಕಾರ ಶ್ರೀ ವ್ಯಾಸ ದೇಶಪಾಂಡೆಯವರ ಅಭಿಮತದ ಮೇರೆಗೆ ಇದು ಕನಕದಾಸರ ವೈಯಕ್ತಿಕ ಯತ್ನ ಮಾತ್ರವಲ್ಲ ; ಇದು ಅವರ ‘ಮಂದಿರ ಪ್ರವೇಶ’ದ ಸಾಮಾಜಿಕ ಆಂದೋಲನದ ಒಂದು ಭಾಗವಾಗಿತ್ತು. ಶ್ರೀ ವ್ಯಾಸ ದೇಶಪಾಂಡೆಯವರು ಕನಕದಾಸರನ್ನು ಭಕ್ತ ಹಾಗು ಸಮಾಜಸುಧಾರಕ ಎನ್ನುವ ಎರಡೂ ನೋಟಗಳಿಂದ ಪರಿಗಣಿಸಿ “ಬಯಲು ಆಲಯ” ಎನ್ನುವ ನಾಟಕವನ್ನು ಬರೆದಿದ್ದಾರೆ. [ ಬಯಲು ಎಂದರೆ ಸಾಮಾನ್ಯ ಜನತೆ ಹಾಗು ಆಲಯ ಎಂದರೆ ವ್ಯವಸ್ಥೆ ಎನ್ನುವ ಶ್ಲೇಷೆ ಇಲ್ಲಿದೆ.]
ಕನಕದಾಸರದು ತುಂಬ ಸಂಕೀರ್ಣ ವ್ಯಕ್ತಿತ್ವ. ಅವರ ಬಾಹ್ಯಪ್ರಜ್ಞೆಯಲ್ಲಿ, ಅಂತಃಪ್ರಜ್ಞೆಯಲ್ಲಿ ಹಾಗು ಸುಪ್ತಪ್ರಜ್ಞೆಯಲ್ಲಿ ಅನೇಕ ಸೂಕ್ಷ್ಮ ಅಹಂಸಂಜ್ಞೆಗಳು ಕೂಡಿಕೊಂಡಿದ್ದವು. ಅವರಲ್ಲಿ ಪಾಂಡಿತ್ಯ ಹಾಗು ಸಮಾಜಸುಧಾರಣೆಯ ಸೂಕ್ಷ್ಮ ಅಹಮಿಕೆ ಉಳಿದುಕೊಂಡಿರಬಹುದು ಭಗವಂತನ ದರ್ಶನ ಲಭಿಸಬೇಕಾದರೆ ಅವರು ಇವುಗಳನ್ನು ದಾಟಿ ಹೋಗುವದು ಅವಶ್ಯವಾಗಿತ್ತು. ಅದನ್ನು ಅವರು ಸಾಧಿಸಿದರು. ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’ ಎಂದು ಕನಕದಾಸರು ಮೊರೆಯಿಟ್ಟಾಗ, ಭಗವಂತನ ಅನುಗ್ರಹವಾಗದೆ ‘ಅಂತರಂಗದ ಬಾಗಿಲು ತೆರೆಯುವದಿಲ್ಲ’, ಅದಕ್ಕಾಗಿ ತಾನು ತನ್ನೆಲ್ಲ ಅಹಂಸಂಜ್ಞೆಗಳನ್ನು ತೊರೆಯಬೇಕು ಎನ್ನುವದು ಕನಕದಾಸರಿಗೆ ಹೊಳೆದಿರಬೇಕು.
ಉಳಿದೆಲ್ಲ ಅಹಂಪ್ರಜ್ಞೆಗಳು ಕರಗಿ ಹೋಗಿ ಕೊನೆಗೊಮ್ಮೆ ಅವರಲ್ಲಿ ದಾಸಪ್ರಜ್ಞೆ ಮಾತ್ರ ಉಳಿದುಕೊಂಡಿತು. ಇಲ್ಲಿಗೆ ಕನಕದಾಸರ ‘ನಾನು’ ಹೋಯಿತು. ಕನಕದಾಸರು ಕೃತಾರ್ಥರಾದರು.
[ಟಿಪ್ಪಣಿ:
(I) ಅಲ್ಲಮಪ್ರಭುಗಳ ವಚನವೊಂದರಲ್ಲಿ ‘ಗುಹೇಶ್ವರ ಸತ್ತು ನಾನು ಉಳಿದೆ’ ಎನ್ನುವ ಸಾಲು ಬರುತ್ತದೆ.
ತುಂಬ ಸ್ವಾರಸ್ಯಕರ ಮಾತಿದು. ದೇವರು ಹಾಗು ಭಕ್ತ ಎನ್ನುವ ಭೇದವು ಇರುವ ತನಕ ಇದು ದ್ವೈತ. ಈ ದ್ವೈತ ಅಳಿಸಿ ಹೋದಾಗ ‘ದೇವರು ಸಾಯುತ್ತಾನೆ’! ಭಕ್ತನಷ್ಟೇ ‘ನಾನು’ ಆಗಿ ಉಳಿದು ಕೊಳ್ಳುತ್ತಾನೆ.
ಇದು ‘ಸತ್-ಚಿತ್-ಆನಂದರೂಪ’ವಾದ ನಾನು!
(II) ಕನಕದಾಸರ ಪ್ರಾರ್ಥನೆಯನ್ನು ಮನ್ನಿಸಿದ ಶ್ರೀಕೃಷ್ಣನು ಗೋಡೆಯಲ್ಲಿ ಬಿರಿದ ಕಿಂಡಿಯೊಂದರ ಮೂಲಕ ಅವರಿಗೆ ದರ್ಶನವಿತ್ತನು ಎಂದು ಹೇಳಲಾಗುತ್ತದೆ. ಈ ಘಟನೆಯ ಬಗೆಗೆ ನಾಲ್ಕು ಸಂಭಾವ್ಯತೆಗಳಿವೆ:
(೧) ಈ ಘಟನೆ ನಡದೇ ಇಲ್ಲ. ಇದು ಕೇವಲ ದಂತಕಥೆ.
(೨) ಈ ಪವಾಡ ನಿಜವಾಗಿಯೂ ನಡೆಯಿತು.
(೩) ಕನಕದಾಸರ ಪರಾಮನೋಶಕ್ತಿಯ ಬಲದಿಂದ ಗೋಡೆಯಲ್ಲಿ ಕಿಂಡಿಯಾಯಿತು ಹಾಗು ಕೃಷ್ಣವಿಗ್ರಹವು ಆ ದಿಕ್ಕಿಗೆ ತಿರುಗಿತು.
(೪) ಕನಕದಾಸರು ಆ ಸಮಯದಲ್ಲಿ, ವ್ಯಾಸರಾಯರಿಂದ ಹಾಗು ವಾದಿರಾಜರಿಂದ ಮನ್ನಣೆ ಪಡೆದ ಗಣ್ಯ ಹರಿದಾಸರಾಗಿದ್ದರು. ಅವರಿಗೆ ಮಂದಿರದಲ್ಲಿ ಪ್ರವೇಶ ಕೊಡಲೂ ಆಗದೆ, ಬಿಡಲೂ ಆಗದೆ, ಮಠದ ಅಧಿಕಾರಿಗಳು ಮಧ್ಯದ ಮಾರ್ಗವೊಂದನ್ನು ಹುಡುಕಿದರು. ಅರ್ಥಾತ್, ಕನಕದಾಸರಿಗೆ ಕಿಂಡಿಯ ಮೂಲಕ ವಿಗ್ರಹದರ್ಶನ ಮಾಡಿಸಿದರು!
(III) ಕನಕದಾಸರ ಬಗೆಗೆ ಉಪಯುಕ್ತ ಮಾಹಿತಿ ನೀಡಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.]