ಫಜಾರಗಟ್ಟೀ ಮುಟ್ಟೋಣು ಬಾ
ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ ||ಪಲ್ಲ||
ಇದs ಇದs ಅಂತ ಎದೀ ಅನ್ನತದ
ಅದs ಅಲ್ಲಿ ಮನಿ ಕಟ್ಟೋಣು ಬಾ |
ನೆಲೀ ಮ್ಯಾಲ ನೆಲಿ ಅಲ್ಲ ಸಂಗಿ, ಅದು
ಅದs ನಿಜದ ನೆಲ ಮುಟ್ಟೋಣು ಬಾ ||೧||
ಅಂಗಲಿಂಗದ ಜೋಡಿ ಕೂಡಿ ಹೊಸ
ಗಿಣೀ-ಗೆಣೆತನs ನೋಡೋಣು ಬಾ |
ಮನಾ ಎಂಬೋ ಹೊಸ ಬನಾ ತೆರೆದರs
ಜನಾ ಕಂಡು ಅದ ಕೂಡೋಣು ಬಾ ||೨||
ಪುಂಡರೀಕ ನಾ, ಮಹಾಶ್ವೇತೆ ನೀ
ಆದ್ಹಾಂಗಿತ್ತು ಅದ ನೆನಸೋಣ ಬಾ |
ತುಂಬೂರ ನಾನಾಗಿ ರಂಭೆ ನೀನಾದಾಗ
ಹಚ್ಚೀದ ಬಳ್ಳಿಗೆ ಹಣಿಸೋಣ ಬಾ ||೩||
ಗುರುವಿನಂಗಳದ ಗಿಡಾ ಬಳ್ಳಿಯಾಗಿ
ಹೊಸಾ ಹೂವು ನಾವು ಸುರಿಸೋಣ ಬಾ |
ತಾಯಿ ಪಾದದಾನಂದ ಗಂಧ ಉಂಡು
ಬೆಂದವರ ಜೀವ ಬೆರಸೋಣ ಬಾ ||೪||
..................................................................................
ಫಜಾರಗಟ್ಟೀ ಮುಟ್ಟೋಣು ಬಾ
ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ
ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ಥ ಹಾಗು ಸನ್ಯಾಸ ಇವು ಸನಾತನ ಭಾರತೀಯ ಸಂಸ್ಕೃತಿಯು ವಿಧಿಸುವ ನಾಲ್ಕು ಆಶ್ರಮಗಳು. ಧರ್ಮ, ಅರ್ಥ, ಕಾಮ ಹಾಗು ಮೋಕ್ಷ ಇವು ಜೀವನದ ನಾಲ್ಕು ಪುರುಷಾರ್ಥಗಳು. ಇವುಗಳಲ್ಲಿ ಮೊದಲ ಮೂರು ಪುರುಷಾರ್ಥಗಳನ್ನು ಅಂದರೆ ಧರ್ಮ, ಅರ್ಥ ಹಾಗು ಕಾಮ ಇವುಗಳನ್ನು ಗೃಹಸ್ಥಾಶ್ರಮದಲ್ಲಿ ಸಾಧಿಸಬೇಕು. ಈ ಪುರುಷಾರ್ಥಗಳು ವೈಯಕ್ತಿಕ ಸಿದ್ಧಿಗಷ್ಟೇ ಅಲ್ಲ, ಸಮಾಜದ ರಕ್ಷಣೆಗಾಗಿಯೂ ಅವಶ್ಯವಾಗಿವೆ. ಆದುದರಿಂದ ಇವು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಹೊಣೆಗಾರಿಕೆಯೂ ಆಗಿವೆ. ಸನಾತನ ಧರ್ಮದ ಮೇರೆಗೆ ವಿವಾಹವು ಗಂಡು ಹಾಗು ಹೆಣ್ಣಿನ ನಡುವಿನ ಒಪ್ಪಂದವಾಗಿರದೆ, ಒಂದು ಧಾರ್ಮಿಕ ವಿಧಿಯಾಗಿದೆ. ನಾಲ್ಕನೆಯ ಪುರುಷಾರ್ಥವಾದ ಮೋಕ್ಷವನ್ನು ಸಾಧಿಸಲು ಸನ್ಯಾಸವನ್ನು ಸ್ವೀಕರಿಸುವದು ಪ್ರಶಸ್ತವಾದ ಕ್ರಮವಾಗಿದೆ.
ಬೇಂದ್ರೆಯವರು ಗೃಹಸ್ಥಾಶ್ರಮವನ್ನು ಸ್ವೀಕರಿಸಿದ ಬಳಿಕ, ಬದುಕಿನಲ್ಲಿ ಸುಖವನ್ನು, ದುಃಖವನ್ನು ಹಾಗು ಅನೇಕ ಸಂಕಟಗಳನ್ನು ಅನುಭಸಿದರು. ಅಂತಹದರಲ್ಲಿಯೇ ಈ ದಂಪತಿಗಳು ಧರ್ಮಸಾಧನೆಯನ್ನು ಮಾಡಿದರು. ದೈವ ಕೊಟ್ಟಷ್ಟು ಅರ್ಥಸಾಧನೆಯನ್ನು ಮಾಡಿದರು. ಕಾಮ ಅಂದರೆ ಸಂತಾನಕಾಮ. ಜೀವನದ ಮುಂದುವರಿಕೆಗಾಗಿ ಸೃಷ್ಟಿನಿಯಮದಂತೆ ಸಂತಾನವನ್ನೂ ಪಡೆದರು. ಗೃಹಸ್ಥಾಶ್ರಮದಲ್ಲಿ ಸಾಧಿಸಬೇಕಾದ ಮೂರೂ ಪುರುಷಾರ್ಥಗಳನ್ನು ಈ ರೀತಿಯಾಗಿ ಸಾಧಿಸಿದರು. ಕೊನೆಯ ಪುರುಷಾರ್ಥವಾದ ಮೋಕ್ಷವನ್ನು ಗಂಡನಾಗಲೀ, ಹೆಂಡತಿಯಾಗಲೀ ವೈಯಕ್ತಿಕವಾಗಿ ಸಾಧಿಸಬೇಕಾಗುತ್ತದೆ. ಆದರೂ ಸಹ ಈ ಸಾಧನಾಮಾರ್ಗದಲ್ಲಿ ಅವರು ಪರಸ್ಪರ ನೆರವು ನೀಡುತ್ತ ಜತೆಯಾಗಿ ನಡೆಯಬಹುದು.
ಕಣ್ಣು ಮುಚ್ಚಾಟದಲ್ಲಿ ಫಜಾರಗಟ್ಟಿಯನ್ನು ಮುಟ್ಟಿದವರು ಪಾರಾದಂತೆ. ಅದರಂತೆ ಜೀವನದಲ್ಲಿ ಧರ್ಮ,ಅರ್ಥ ಹಾಗು ಕಾಮವೆನ್ನುವ ಪುರುಷಾರ್ಥಗಳನ್ನು ಸಾಧಿಸಿದವರು ಜೀವನದ ಫಜಾರಗಟ್ಟಿಯನ್ನು ಮುಟ್ಟಿದಂತೆ. ಬೇಂದ್ರೆಯವರು ತಮ್ಮ ಹೆಂಡತಿಗೆ ಫಜಾರಗಟ್ಟಿಯನ್ನು ಮುಟ್ಟಲು ಕರೆಯುತ್ತಿದ್ದಾರೆ. ಅಂದರೆ ಗೃಹಸ್ಥಾಶ್ರಮದ ಮೂರು ಪುರುಷಾರ್ಥಗಳನ್ನು ತಾವಿಬ್ಬರೂ ಜೊತೆಯಾಗಿ ಸಾಧಿಸಿದ್ದೇವೆ, ಇನ್ನು ಇದಕ್ಕೆ ಕೊನೆ ಹೇಳಿ ಮುಂದಿನ ಆಟವನ್ನು ಆಡೋಣ ಬಾ ಎಂದು ಸೂಚಿಸುತ್ತಿದ್ದಾರೆ. ‘ಮುಂದಿನ ಆಟ’ವೆಂದರೆ ಏನು? ಕಣ್ಣುಮುಚ್ಚಾಟದಲ್ಲಿ ತಾಯಿಯು ಮಕ್ಕಳ ಕಣ್ಣು ಕಟ್ಟಿ ಆಟಕ್ಕೆ ಬಿಡುವಂತೆ, ಮಾಯೆಯು ಜೀವಿಗಳ ಕಣ್ಣು ಕಟ್ಟಿ ಸಂಸಾರಕ್ಕೆ ಕಳಿಸುತ್ತಾಳೆ. ಒಂದು ಆಟವನ್ನು ಮುಗಿಸಿದ ಬಳಿಕ, ಮುಂದಿನ ಆಟವನ್ನು ಆಡಬೇಕು. ಇದು ಮುಂದಿನ ಜನ್ಮದ ಆಟವಾಗಬಹುದು ಅಥವಾ ಇದೇ ಜನ್ಮದಲ್ಲಿ, ನಾಲ್ಕನೆಯ ಪುರುಷಾರ್ಥವಾದ ಮೋಕ್ಷಕ್ಕೆ ಕರೆದೊಯ್ಯುವ ದೈವಸಾಧನೆಯ ಆಟವಾಗಬಹುದು.
ದೈವಸಾಧನೆಗಾಗಿ ತಾವು ತುಳಿಯುತ್ತಿರುವ ಪಥವು ಸರಿಯಾದದ್ದು ಎನ್ನುವದನ್ನು ತಿಳಿಯುವದು ಹೇಗೆ? ಹೃದಯಕ್ಕೆ ಇದರ ಅರಿವು ತಾನಾಗಿಯೇ ಆಗುವದು. ಅದಕ್ಕೆಂದೇ ಬೇಂದ್ರೆಯವರು ಹೇಳುತ್ತಾರೆ:
ಇದs ಇದs ಅಂತ ಎದೀ ಅನ್ನತದ
ಅದs ಅಲ್ಲಿ ಮನಿ ಕಟ್ಟೋಣು ಬಾ |
ನೆಲೀ ಮ್ಯಾಲ ನೆಲಿ ಅಲ್ಲ ಸಂಗಿ, ಅದು
ಅದs ನಿಜದ ನೆಲ ಮುಟ್ಟೋಣು ಬಾ ||
ಇದೇ ತಮ್ಮ ಸರಿಯಾದ ಪಥ, ಇದೇ ತಾವು ತಲುಪಬೇಕಾದ ತಾಣ ಎಂದು ಹೃದಯವು ಹೇಳುತ್ತಿದೆ. ಆದುದರಿಂದ ನಾವು ಈ ಸ್ಥಾನದಲ್ಲಿ ನಮ್ಮ ಮನೆಯನ್ನು ಕಟ್ಟೋಣ; ಇದೇ ತಮ್ಮ ನೆಲೆಯಾಗಿದೆ, ಹೊಸ ಬಾಳನ್ನು ಇಲ್ಲಿ ಪ್ರಾರಂಭಿಸೋಣ ಎಂದು ಬೇಂದ್ರೆಯವರು ತಮ್ಮ ಸಖಿಗೆ ಹೇಳುತ್ತಿದ್ದಾರೆ.
ನೆಲದ ಮೇಲಿನ ನೆಲೆ ಅಂದರೆ ಐಹಿಕ ಲೋಕದ ನೆಲೆ. ಇಲ್ಲಿ ಐಹಿಕ ಆಸೆಗಳು ಹಾಗು ವಿಕಾರಗಳು ಇರುತ್ತವೆ. ಹೊಸ ಸ್ಥಾನವು ವಿಕಾರಮುಕ್ತವಾದ ನೆಲೆಯಾಗಿದೆ. ಈ ಸೂಚನೆಯನ್ನು ‘ಸಂಗಿ’ ಎಂದು ಕರೆಯುವದರ ಮೂಲಕ ಬೇಂದ್ರೆಯವರು ಸೂಚಿಸುತ್ತಾರೆ. ಸಂಗಿ ಎಂದರೆ ಗೆಳತಿ. ಹೆಂಡತಿಯು ಗೆಳತಿಯೇ ಹೌದು. ಆದರೆ ಅವಳು ‘ನಿಸ್ಸಂಗ’ದ ಅಂದರೆ ವಿಕಾರಮುಕ್ತವಾದ ಸತ್ಸಂಗದ ಗೆಳತಿಯಾಗಿದ್ದಾಳೆ. ಇಂತಹ ಗೆಳತಿಗೆ ಬೇಂದ್ರೆಯವರು ‘ಅದು ಅದs’ ಎಂದು ತೋರಿಸುತ್ತಿದ್ದಾರೆ. ‘ಅದು ಅದs’ ಎಂದರೆ ‘ಭಗವಚ್ಚೈತನ್ಯವು ಇದೆ’ ಎನ್ನುವ ಶ್ರದ್ಧೆ. ಅದೇ ನಿಜದ ನೆಲ, ನೆಲೆ. ಇಲ್ಲಿಯವರೆಗಿನ ಆಟವೆಲ್ಲ ಮಿಥ್ಯೆಯ ನೆಲದ ಮೆಲಿನ ಆಟ. ಸತ್ ಎಂದರೆ ನಿಜ, ಅಸತ್ ಎಂದರೆ ಮಿಥ್ಯೆ. ಮಿಥ್ಯೆಯ ಲೋಕದ ಆಟವನ್ನು ಮುಗಿಸಿ, ಈಗ ಸತ್‍ಲೋಕವನ್ನು ಮುಟ್ಟೋಣ ಎಂದು ಬೇಂದ್ರೆಯವರು ತಮ್ಮ ಸಖಿಯನ್ನು ಕರೆಯುತ್ತಿದ್ದಾರೆ.
ಅಂಗಲಿಂಗದ ಜೋಡಿ ಕೂಡಿ ಹೊಸ
ಗಿಣೀ-ಗೆಣೆತನs ನೋಡೋಣು ಬಾ |
ಮನಾ ಎಂಬೋ ಹೊಸ ಬನಾ ತೆರೆದರs
ಜನಾ ಕಂಡು ಅದ ಕೂಡೋಣು ಬಾ ||
ಬೇಂದ್ರೆಯವರು ವಿವಿಧ ಭಾರತೀಯ ದರ್ಶನಗಳನ್ನು ಅರಗಿಸಿಕೊಂಡಿದ್ದು, ಅದು ಅವರ ಕವನಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ‘ಅಂಗಲಿಂಗದ ಜೋಡಿ ಕೂಡಿ.....’ ಎಂದು ಹೇಳುವಾಗ ವೀರಶೈವ ದರ್ಶನದ ‘ಲಿಂಗಾಂಗ ಸಾಮರಸ್ಯ’ವನ್ನು ಅವರು ಸೂಚಿಸುತ್ತಿದ್ದಾರೆ.
ಇಲ್ಲಿಯವರೆಗಿನ ಬದುಕಿನಲ್ಲಿ ಈ ದಂಪತಿಗಳು ಧರ್ಮ, ಅರ್ಥ ಹಾಗು ಸಂತಾನಕಾಮದ ಸಾಧನೆಯನ್ನು ಗೈದರು. ಇದೀಗ ಮೋಕ್ಷಾರ್ಥಕ್ಕಾಗಿ ದೈವಸಾಧನೆಯನ್ನು ಮಾಡಬೇಕಾಗಿದೆ. ಇದರ ಸಿದ್ಧಿ ವೈಯಕ್ತಿಕವೇ ಆದರೂ ಸಹ, ಸಾಧನೆಯು ವೈಯಕ್ತಿಕವಾಗಿರಬೇಕಿಲ್ಲ. ವೀರಶೈವ ಕ್ರಮವಂತೂ ‘ಸತಿಪತಿಗಳಲಿ ಒಂದಾದ ಭಕ್ತಿ ಶಿವನಿಗೆ ಪ್ರಿಯ’ ಎಂದೇ ಹೇಳುತ್ತದೆ. ಆದುದರಿಂದ ಲಿಂಗಾಂಗ ಸಾಮರಸ್ಯದ ಭಕ್ತಿಪಥವನ್ನು ‘ಜೋಡಿ ಕೂಡಿ’ ಅಂದರೆ ಜೊತೆಯಾಗಿ ಕ್ರಮಿಸೋಣ ಎಂದು ಬೇಂದ್ರೆ ಹೇಳುತ್ತಿದ್ದಾರೆ.
ಬೇಂದ್ರೆಯವರ ಕಾವ್ಯದಲ್ಲಿ ‘ಗಿಣಿ’ ಎನ್ನುವ ಪ್ರತಿಮೆಯು ಸಖ್ಯದ ಹಾಗು ಆಪ್ತತೆಯ ಪ್ರತೀಕವಾಗಿದೆ. ಇಲ್ಲಿಯವರೆಗಿನ ತಮ್ಮ ದಾಂಪತ್ಯದಲ್ಲಿ ರೂಢಿಸಿಕೊಂಡಿದ್ದ ಪರಸ್ಪರ ಸಮೀಕರಣವನ್ನು ತ್ಯಜಿಸಿ, ಹೊಸ ಸಮೀಕರಣವನ್ನು ರೂಪಿಸಿಕೊಳ್ಳೋಣ; ಇದು ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎನ್ನುವ ವಿಷಮ ಸಮೀಕರಣವಲ್ಲ; ಇದು ಸಮಾನತೆಯ ಸಮೀಕರಣ; ಇದು ಇಹಲೋಕದ ಕೆಳೆತನವನ್ನು ಮೀರಿದ ಹೊಸ ಕೆಳೆತನ ಎಂದು ಹೇಳಲು ಬೇಂದ್ರೆಯವರು ‘ಹೊಸ ಗಿಣೀ-ಗೆಣೆತನ’ ಎನ್ನುವ ಪ್ರತೀಕವನ್ನು ಬಳಸಿದ್ದಾರೆ. ಈ ಹೊಸ ಸಾಂಗತ್ಯದ ವಿಹಾರಕ್ಕಾಗಿ ಲಭಿಸುವ ಉಪವನ ಯಾವುದು? ಮನವೆಂಬದೇ ಆ ಹೊಸ ಬನಾ! ಮನಸ್ಸಿನ ಸಾಧ್ಯತೆಗಳು ಅಗಾಧವಾಗಿವೆ. ಮನವನ್ನು ಸರಿಯಾಗಿ ರೂಢಿಸಬೇಕು. ಕಳೆ, ಕಲ್ಮಶಗಳನ್ನು ಕಿತ್ತು ಹಾಕಿ, ಸುಗಂಧ ಬೀರುವ ಹೂಬಳ್ಳಿಗಳನ್ನು ಬೆಳೆಸಬೇಕು. ಆವಾಗ ಅದು ಆಹ್ಲಾದಕರವಾದ ಉಪವನದಂತೆ ಶೋಭಿಸುವದು.
ಇದೆಲ್ಲವೂ ಒಂದೇ ಜನ್ಮದಲ್ಲಿ ಸಾಧ್ಯವಾಗಬಹುದಾದ ಸಿದ್ಧಿಯೆ? ಬೇಂದ್ರೆಯವರು ವಿವಾಹಜೀವನವನ್ನು ದಾಂಪತ್ಯಯೋಗ ಎಂದು ಕರೆಯುತ್ತಾರೆ. ಅನೇಕ ಜನ್ಮಗಳಿಂದಲೂ ದಂಪತಿಗಳು ಜೊತೆಯಾಗಿ ಸಾಧನಾಪಥವನ್ನು ಕ್ರಮಿಸುತ್ತಿರುತ್ತಾರೆ ಎನ್ನುವದು ಬೇಂದ್ರೆಯವರ ನಂಬುಗೆ.
ಪುಂಡರೀಕ ನಾ, ಮಹಾಶ್ವೇತೆ ನೀ
ಆದ್ಹಾಂಗಿತ್ತು ಅದ ನೆನಸೋಣ ಬಾ |
ತುಂಬೂರ ನಾನಾಗಿ ರಂಭೆ ನೀನಾದಾಗ
ಹಚ್ಚೀದ ಬಳ್ಳಿಗೆ ಹಣಿಸೋಣ ಬಾ ||
ಭಾರತೀಯ ಸಾಹಿತ್ಯದಲ್ಲಿ ಪುಂಡರೀಕ ಹಾಗು ಮಹಾಶ್ವೇತಾ ಇವರು ಚಿರಪ್ರಣಯಿಗಳು. ತಪಸ್ಸಿನಿಂದ ಒಬ್ಬರನ್ನೊಬ್ಬರು ಪಡೆದುಕೊಂಡವರು. ಜನ್ಮಜನ್ಮಾಂತರದ ಸಂಬಂಧ ಇವರದು. (ಕವಿ ಬಾಣನು ಏಳನೆಯ ಶತಮಾನದ ಸಂಸ್ಕೃತ ಕವಿ. ಇವನು ಬರೆದ ‘ಕಾದಂಬರಿ’ಯಲ್ಲಿ ಪುಂಡರೀಕ ಹಾಗು ಮಹಾಶ್ವೇತೆ ಇವರಿಗೆ ಸಮಾಂತರವಾಗಿ ಚಂದ್ರಾಪೀಡ ಹಾಗು ಕಾದಂಬರಿ ಇವರ ಜನ್ಮಾಂತರದ ಪ್ರಣಯಕಥೆಯೂ ಇದೆ.) ತಾವು ಆ ಕಲ್ಪನಾವಿಲಾಸದ, ಆ ಕಾಲಾಂತರದ ಪ್ರಣಯಿಗಳೇ ಇರಬಹುದೆ? ಈ ಮಾತು ಜಗದ ಎಲ್ಲ ದಂಪತಿಗಳಿಗೂ ಅನ್ವಯಿಸುತ್ತದೆ. ಯಾವ ದಾಂಪತ್ಯವೂ ಆಕಸ್ಮಿಕವಲ್ಲ. ಎಲ್ಲ ದಂಪತಿಗಳದೂ ಜನ್ಮಜನ್ಮಾಂತರದ ಸಖ್ಯ ಎಂದು ಬೇಂದ್ರೆ ನಂಬುತ್ತಾರೆ. ದಂಪತಿಗಳು ಈ ಚಿರಕಾಲದ ಸಖ್ಯವನ್ನು ನೆನಸಬೇಕು. ಆ ನೆನಕೆಯಿಂದ ಅರಿವು ಮೂಡುವುದು. ಆ ಅರಿವಿನಿಂದ ದೈವಯೋಗದ ಪಥದಲ್ಲಿ ನಡೆಯಲು ಸಾಧ್ಯವಾಗುವುದು. ಇಷ್ಟೆಲ್ಲ ಅರ್ಥವನ್ನು ಬೇಂದ್ರೆಯವರು ‘ಪುಂಡರೀಕ ನಾ, ಮಹಾಶ್ವೇತೆ ನೀ ಆಧ್ಹಾಂಗಿತ್ತು ಅದ ನೆನಸೋಣ ಬಾ’ ಎನ್ನುವ ಎರಡು ಸರಳ ಸಾಲುಗಳ ಮೂಲಕ ಸೂಚಿಸುತ್ತಾರೆ!
ತುಂಬುರನು ದೇವಲೋಕದ ಗಾಯಕ; ರಂಭೆ ಸ್ವರ್ಗದ ನರ್ತಕಿ. ತುಂಬುರನು ರಂಭೆಯ ಗುರು ಹಾಗು ಪ್ರಣಯಿ. ಈ ದೇವಪ್ರಣಯಿಗಳು ಹಚ್ಚಿದ ಬಳ್ಳಿ ಯಾವುದು? ಪ್ರೇಮ ಹಾಗು ಭಕ್ತಿಯೇ ಆ ಬಳ್ಳಿಯಾಗಿದೆ. ಅಮರಲೋಕದಲ್ಲಿ ಹಚ್ಚಿದ ಆ ಬಳ್ಳಿಯನ್ನು, ತಾವು ಇಹಲೋಕದಲ್ಲಿ, ಜನ್ಮಾಂತರಗಳಲ್ಲಿ ಪೋಷಿಸುತ್ತ ಬಂದಿರುವದಾಗಿ ಬೇಂದ್ರೆ ಹೇಳುತ್ತಾರೆ.
ಇಂತಹ ದಾಂಪತ್ಯಯೋಗದ ಕೊನೆಯ ಮೆಟ್ಟಿಲು ಯಾವುದು? ಯಾವ ಭಾವವನ್ನು ತಾವು ಪೋಷಿಸುತ್ತ ಬಂದಿರುವೆಯೋ, ತಾವೇ ಆ ಭಾವವಾಗಿ ಮಾರ್ಪಾಡಾಗುವ ಸ್ಥಿತಿ. ಪ್ರೇಮ ಹಾಗು ಭಕ್ತಿಯ ಬಳ್ಳಿಯನ್ನು ಪೋಷಿಸುತ್ತ ಬಂದಿರುವ ತಾವೇ ಆ ಬಳ್ಳಿಯಾಗಬೇಕು. ಇದು ಸ್ಥಿತ್ಯಂತರದ ಕೊನೆಯ ಹಂತ. ಈ ಹಂತದ ಸಿದ್ಧಿಗಾಗಿ ಬೇಂದ್ರೆ ತಮ್ಮ ಸಖಿಗೆ ಕರೆಯನ್ನು ನೀಡುತ್ತಿದ್ದಾರೆ:
ಗುರುವಿನಂಗಳದ ಗಿಡಾ ಬಳ್ಳಿಯಾಗಿ
ಹೊಸಾ ಹೂವು ನಾವು ಸುರಿಸೋಣ ಬಾ |
ತಾಯಿ ಪಾದದಾನಂದ ಗಂಧ ಉಂಡು
ಬೆಂದವರ ಜೀವ ಬೆರಸೋಣ ಬಾ ||
ಈ ಭಕ್ತಿಲತೆಯು ಗುರುವಿನಂಗಳದಲ್ಲಿ ಮಾತ್ರ ಬೆಳೆಯುವ ಬಳ್ಳಿ. ಈವರೆಗಿನ ಜನ್ಮಾಂತರಗಳಲ್ಲಿ ಇವರ ದಾಂಪತ್ಯದ ಬಳ್ಳಿಯು ಸುರಿಸಿದ ಹೂವುಗಳು ಸಂಸಾರದ ಹೂವುಗಳು. ಇನ್ನು ಮುಂದೆ ಈ ಬಳ್ಳಿಯು ಹೊಸ ಹೂವುಗಳನ್ನು ಅಂದರೆ ಭಕ್ತಿ ಮತ್ತು ಪ್ರೇಮದ ಹೂವುಗಳನ್ನು ಸುರಿಸಬೇಕು ಎನ್ನುವದು ಬೇಂದ್ರೆಯವರ ಅಭೀಪ್ಸೆ. ಈ ದಾಂಪತ್ಯಸಖ್ಯದಲ್ಲಿ ಇವರಿಗೆ ಉಳಿದಿರುವ ಕಾರ್ಯ ಏನು? ಭಕ್ತಿಯ ಹೂವನ್ನು ದೇವಮಾತೆಯ ಪಾದಕ್ಕೆ ಅರ್ಪಿಸಿ, ಆ ಚರಣಭಕ್ತಿಯಿಂದ ಸಿಗುವ ಆನಂದವನ್ನು, ಪರಿಮಳವನ್ನು ಪಡೆಯುವುದು ಹಾಗು ನೊಂದ ಜೀವಿಗಳ ಜೊತೆ ಒಂದಾಗಿ ಅವರಿಗೆ ಸಾಂತ್ವನ ನೀಡುವದು ಇನ್ನು ಉಳಿದಿರುವ ಕಾರ್ಯ. ಪುರುಷಾರ್ಥಗಳನ್ನೆಲ್ಲ ಸಾಧಿಸಿದ ಬಳಿಕ, ಬದುಕಿರುವವರೆಗೆ ‘ಪರೋಪಕಾರಾರ್ಥಮಿದಂ ಜೀವನಮ್’ ಎನ್ನುವದೊಂದೇ ಉಳಿದಿರುವ ಧ್ಯೇಯ.
ಸಂಸಾರಕಾಮವು ಪ್ರೇಮವಾಗಿ ಹಾಗು ಭಕ್ತಿಯಾಗಿ ಅರಳಬೇಕು ಎನ್ನುವದು ಬೇಂದ್ರೆಯವರ ಕಾಣ್ಕೆಯಾಗಿದೆ. ಇದು ಪರಮ ಪುರುಷಾರ್ಥವನ್ನು ತಲುಪಿಸುವ ಜನ್ಮಜನ್ಮಾಂತರದ ದಾಂಪತ್ಯಯೋಗವಾಗಿದೆ. ಗಾಢವಾದ ತತ್ವವನ್ನು ಸರಳಗನ್ನಡದ ಆಡುನುಡಿಯಲ್ಲಿ ಹೇಳುವ ಬೇಂದ್ರೆಯವರ ಪ್ರತಿಭೆಗೆ ಈ ಕವನವು ಉತ್ತಮ ನಿದರ್ಶನವಾಗಿದೆ.
‘ಗಂಗಾವತರಣ’ ಕವನಸಂಕಲನದಲ್ಲಿ ಈ ಕವನವು ಅಡಕವಾಗಿದೆ.