‘ಆನಂದಕಂದ’ ಕಾವ್ಯನಾಮದಿಂದ
ಸಾಹಿತ್ಯ ರಚಿಸಿದ ಬೆಟಗೇರಿ ಕೃಷ್ಣಶರ್ಮರನ್ನು ಸಂಪೂರ್ಣ ದೇಸೀಯ ಪ್ರತಿಭೆ ಎಂದು ಕರೆಯಬಹುದು.
ತೀವ್ರ ಬಡತನದಿಂದಾಗಿ ಇವರ ವಿದ್ಯಾಭ್ಯಾಸವು ಮುಲ್ಕಿ (೭ನೆಯ ತರಗತಿಯ) ಪರೀಕ್ಷೆಗೆ ಕೊನೆಗೊಂಡಿತು.
ಆದರೆ ತೀಕ್ಷ್ಣ ಬುದ್ಧಿಮತ್ತೆಯ ಕೃಷ್ಣಶರ್ಮರ ಅಧ್ಯಯನಕ್ಕೆ ಹಾಗು ಸಾಹಿತ್ಯರಚನೆಗೆ ಇದು
ತೊಡಕಾಗಲಿಲ್ಲ.
ನವೋದಯ ಕಾಲದ ಇತರ ಸಾಹಿತಿಗಳಾದ ಬೇಂದ್ರೆ, ರಾಜರತ್ನಂ ಮೊದಲಾದವರು
ಗ್ರಾಮೀಣ ಆಡುನುಡಿಯಲ್ಲಿ ಕಾವ್ಯರಚನೆಯನ್ನು ಮಾಡಿದ್ದಾರೆ. ಹೀಗಿದ್ದರೂ ಆ ಕವನಗಳಲ್ಲಿ
ಸಂಕೀರ್ಣವಾದ ಸಾಂಸ್ಕೃತಿಕ ಪ್ರಜ್ಞೆಯಿದೆ. ಕೃಷ್ಣಶರ್ಮರ ‘ನಲ್ವಾಡುಗಳು’ ನೂರಕ್ಕೆ ನೂರರಷ್ಟು
‘ಹಳ್ಳಿಯ ಹಾಡುಗಳು’. ಕೃಷ್ಣಶರ್ಮರ ಕೆಲವು ನಲ್ವಾಡುಗಳನ್ನು ತ್ರಿವೇಣಿಯವರ blog ‘ತುಳಸೀವನ’ದಲ್ಲಿ ನೋಡಬಹುದು. ಈ ಹಾಡುಗಳನ್ನು ಓದಿದಾಗ, ವಿಶೇಷತಃ ಕೇಳಿದಾಗ,
ಹಳ್ಳಿಯ ಕವಿ ಅಥವಾ ಗರತಿಯರು ಕಟ್ಟಿ ಹಾಡಿರಬಹುದಾದ ಹಾಡುಗಳಿವು
ಎಂದು ಭಾಸವಾಗುತ್ತದೆ. ಇವು ಜಾನಪದ ಹಾಡುಗಳೆಂದೇ ಅನೇಕರ ಭಾವನೆಯಾಗಿದೆ. ಅಚ್ಚರಿಯ ಮಾತೆಂದರೆ, ಈ
ಹಾಡುಗಳನ್ನು ಬರೆದ ಕೃಷ್ಣಶರ್ಮರೇ, ಮಾರ್ಗ ಶೈಲಿಯ ಕಾವ್ಯರಚನೆಯನ್ನೂ ಮಾಡಿದ್ದಾರೆ. ನಾನು
ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಕೃಷ್ಣಶರ್ಮರ ‘ನೋಡು ಬರುವ ಸುಗ್ಗಿಯಾಟ!’ ಕವನವು ನಮ್ಮ
ಪಠ್ಯದಲ್ಲಿತ್ತು. ಆ ಕವನವನ್ನು ಓದುತ್ತಿದ್ದಂತೆಯೇ ನಾನು ಕೃಷ್ಣಶರ್ಮರ ಅಭಿಮಾನಿಯಾದೆ. ಇದು
‘ಮಾರ್ಗ’ ಶೈಲಿಯ ಕವನವಾಗಿದ್ದು, ಕೃಷ್ಣಶರ್ಮರು ‘ಹಳ್ಳಿಯ ಧಾಟಿ’ಯಲ್ಲಿ ಹಳ್ಳಿಗರನ್ನೂ ಮೀರಿಸಿ
ಬರೆಯುತ್ತಾರೆ ಎಂದು ನನಗೆ ಆಗ ಗೊತ್ತಿರಲಿಲ್ಲ! ಇತ್ತೀಚೆಗೆ ಇವರ ಸಮಗ್ರ ಕವನಸಂಕಲನವು ‘ಬೆಳುವಲದ
ಸುಗ್ಗಿ’ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಯಿತು. ಆ ಸಂಕಲನದಲ್ಲಿ ನನ್ನ ನೆಚ್ಚಿನ ಕವನ ನನಗೆ
ಮತ್ತೆ ಲಭಿಸಿತು.
ಕವನದ ಪೂರ್ಣಪಾಠ ಹೀಗಿದೆ:
೧
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸತೋಟ!
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ;
ಚೆನ್ನೇ ಚೆನ್ನೆನಿತು ಈ ಕೂಟ....?
೨
ಮಾಗಿಯ ಕೊರೆತಕ್ಕೆ ಮೈ ಬರಲಾಗಿರೆ
ಮರ-ಬಳ್ಳಿ ಮರುಗಿ ಸಾಯುವವೆ?
ಸಾಗಿ ಬಹುದು ಸುಗ್ಗಿಯೆಂಬ ನಲವಿನಲಿ
ಕಾಲವ ತುಳಿದು ಬಾಳುವವೆ!
೩
ಹದ್ದು-ಹಾಲಕ್ಕಿಯು ಹಾರಾಡುತಿಹವೇನೆ?
ಕೂಗುತಿಹವೆ ಕಾಗೆ-ಗೂಗೆ?
ಹೆದರಿಕೆ ಬಿಡುಬಿಡು, ಅವುಗಳಾಟವ ನೋಡು,
ಹುದುಗಿಹುದಲ್ಲಿಯು ಸೊಬಗೆ!
೪
ಬಾಳಿನ ತೋಟಕೆ ಬರಲಿದೆ ಹೊಸ ಸುಗ್ಗಿ
ನಳನಳಿಸುವದಂದು ತಳಿತು;
ಹಣ್ಣು ಬಿಡುವೆ ನಾನು, ಹೂವ ಹೊರುವೆ ನೀನು,
ದಿಟ ದಿಟ ನಂಬು ಈ ಮಾತು!
೫
ಹಣ್ಣಗೊನೆಯ ಹೊತ್ತು ಜೀವಜಂಗುಳಿಗಿತ್ತು
ಹಸಿವಿನುರಿಯ ನಾ ಹಿಂಗಿಸುವೆ;
ಹೂವಿನ ಹುರುಳಿಂದೆ ಹೃದಯವನರಳಿಸಿ,
ರಸಿಕಕುಲವ ನೀ ರಂಗಿಸುವೆ!
೬
ಕಳಿವಣ್ಣಗಳನುಂಡು ಕೋಗಿಲೆ-ಗಿಳಿವಿಂಡು
ಕಲಕಲ ನುಡಿಯನಾಡುವವೆ!
ಹೂವಿನೈಸಿರಿ ಕಂಡು ಮರಿದುಂಬಿಗಳ ದಂಡು
ಇನಿದನಿವೆರಸಿ ಹಾಡುವುವೆ!
೭
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸ ತೋಟ;
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ
ನೋಡು ಬರುವ ಸುಗ್ಗಿಯಾಟ!
................................................................................................
೧
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸತೋಟ!
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ;
ಚೆನ್ನೇ ಚೆನ್ನೆನಿತು ಈ ಕೂಟ....?
ಕರಗಿ ಹೋದ ಸುಖದ ದಿನಗಳನ್ನು ನೆನೆಸಿಕೊಂಡಾಗ, ಬಾಳು ಒಂದು ಕನಸಿನಂತೆ
ಭಾಸವಾಗುವುದು ಸಹಜ. ಕಣ್ಣೆದುರಿಗಿರುವ ದುಃಖವನ್ನು ಅನುಭವಿಸುತ್ತಿರುವಾಗ, ಬಾಳು ‘ಗೋಳಿನ
ತಿನಿಸು’ ಎನಿಸುವುದೂ ಸಹಜ. ‘ಆನಂದಕಂದ’ ಎನ್ನುವ ಕಾವ್ಯನಾಮವನ್ನು ಧರಿಸಿದ ಕೃಷ್ಣಶರ್ಮರು
ಎದುರಿಸಿದ ಸಂಕಟಗಳು ಅನೇಕ. ಆದರೂ ಸಹ ಈ ಬಾಳು ಸುಖದ ಕನಸೂ ಅಲ್ಲ, ದುಃಖದ ತಿನಿಸೂ ಅಲ್ಲ ಎಂದು
ಕೃಷ್ಣಶರ್ಮರು ತಮ್ಮ ಪತ್ನಿಗೆ ಹೇಳುತ್ತಿದ್ದಾರೆ. ಹಾಗಿದ್ದರೆ, ಈ ಬಾಳು ಏನು? ಕೃಷ್ಣಶರ್ಮರ
ಅನುಭವದಲ್ಲಿ, ಅವರಿಗೆ ಹೊಳೆದ ದರ್ಶನದಲ್ಲಿ, ಇದು ಹಿಗ್ಗಿನ ಹೊಸ ತೋಟ! ಕೃಷ್ಣಶರ್ಮರು ‘ಹಿಗ್ಗು’
ಎನ್ನುವ ಪದವನ್ನು ಬಳಸಿರುವುದನ್ನು ಗಮನಿಸಿರಿ. ಆತ್ಮಸಂತುಷ್ಟನಾದ, ಸಮಾಧಾನಚಿತ್ತನಾದ ಮನುಷ್ಯನು
ಈ ‘ಹಿಗ್ಗಿ’ನಲ್ಲಿಯೇ ಯಾವಾಗಲೂ ಇರುವನು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಸುಖದುಃಖೇ ಸಮೇ
ಕೃತ್ವಾ, ಲಾಭಾಲಾಭೌ, ಜಯಾಜಯೌ’ ಎಂದು ಹೇಳಿದ್ದರೆ, ನಮ್ಮ ಕೃಷ್ಣಶರ್ಮರು ಒಂದು ಹೆಜ್ಜೆ ಮುಂದೆ
ಹೋಗಿದ್ದಾರೆ. ಅವರಿಗೆ ಈ ಬಾಳು ಹಿಗ್ಗು ತುಂಬಿದ ಹೊಸ ತೋಟದಂತೆ ಕಾಣುತ್ತದೆ! ಇದು ಲಡ್ಡು ಹಿಡಿದ
ಹಳೆಯ ಮರಗಳು ತುಂಬಿದ ತೋಟವಲ್ಲ, ಇದು ಹೊಸ ಹೊಸ ಸಸ್ಯಗಳ ತೋಟ. ಅರ್ಥಾತ್, ಭವಿಷ್ಯದ ಕಡೆಗೆ ಮುಖ
ಮಾಡಿದ ಪ್ರಕೃತಿ, looking forward to the future! ಇಂತಹ ನಳನಳಿಸುವ ನಂದನವನದಲ್ಲಿ, ಕೃಷ್ಣಶರ್ಮರು ತಮ್ಮನ್ನು ಒಂದು
ಮಾವಿನ ಮರಕ್ಕೆ ಹಾಗು ತಮ್ಮ ಪತ್ನಿಯನ್ನು ಮಲ್ಲಿಗೆಯ ಬಳ್ಳಿಗೆ ಹೋಲಿಸುತ್ತಿದ್ದಾರೆ. ಇದೀಗ ‘ಮಾರ್ಗ’ ಶೈಲಿ. ಅಭಿಜಾತ ಸಾಹಿತ್ಯದಲ್ಲಿ ಮಲ್ಲಿಗೆಯ ಬಳ್ಳಿಯು ಮಾಮರವನ್ನು ಆಶ್ರಯಿಸಿರುತ್ತದೆ.
ಗಂಡಹೆಂಡಿರ ಅನ್ಯೋನ್ಯ ದಾಂಪತ್ಯದ ಪರಿ ಇದು.
‘ಇಂತಹ ಕೆಳೆತನ ಹಿತಕರವಲ್ಲವೇನೆ?’ ಎಂದು ಕವಿ ತನ್ನ ಪತ್ನಿಗೆ ಸಮಾಧಾನಿಸುತ್ತಿದ್ದಾನೆ.
‘ನನ್ನಿ’ ಪದವನ್ನು ಗಮನಿಸಿರಿ. ಈ ಪದಕ್ಕೆ ‘Indeed, Pleasant’ ಎನ್ನುವ ಅರ್ಥಗಳು ಇರುವಂತೆಯೇ, ‘ನನ್ನ+ಈ’ ಎನ್ನುವ ಅರ್ಥವನ್ನೂ
ಹೊಂದಿಸಬಹುದು.
೨
ಮಾಗಿಯ ಕೊರೆತಕ್ಕೆ ಮೈ ಬರಲಾಗಿರೆ
ಮರ-ಬಳ್ಳಿ ಮರುಗಿ ಸಾಯುವವೆ?
ಸಾಗಿ ಬಹುದು ಸುಗ್ಗಿಯೆಂಬ ನಲವಿನಲಿ
ಕಾಲವ ತುಳಿದು ಬಾಳುವವೆ!
ಕೃಷ್ಣಶರ್ಮ ದಂಪತಿಗಳ
ಬಾಳಿನಲ್ಲಿ ಈಗ ಮಾಗಿಯ ಕಾಲ ಪ್ರವೇಶಿಸಿದೆ. (ಅವರ ಬಾಳು ಆರ್ಥಿಕವಾಗಿ ಯಾವಾಗಲೂ ಮಾಗಿಯ ಕಾಲವೇ
ಆಗಿತ್ತು!) ಚಳಿಗಾಲದಲ್ಲಿ ಸಸ್ಯಗಳು ಎಲೆಗಳನ್ನು ಕಳಚಿಕೊಂಡು ಬರಲಾಗುವುವು. ಹಾಗೆಂದು ಅದನ್ನೇ
ದುಃಖದ ಕಾರಣವಾಗಿ ಮಾಡಿಕೊಂಡು ಮರಗುತ್ತ ಸಾಯಬಹುದೆ? ಮಾಗಿಯ ನಂತರ, ಸುಗ್ಗಿ ಬಂದೇ ಬರುವುದು. ಆ
ಒಂದು ನಿರೀಕ್ಷೆಯೇ ಸದಾಕಾಲದ ನಲವಿಗೆ ಕಾರಣವಾಗಬೇಕು ಎನ್ನುತ್ತಾರೆ ಕೃಷ್ಣಶರ್ಮರು.
ಇಂಗ್ಲಿಶ್ ಕವಿ
ಶೆಲ್ಲಿಯೂ ಸಹ `If winter comes can spring be far
behind?’ ಎಂದು ಹಾಡಿದ್ದಾನೆ.
ಕೃಷ್ಣಶರ್ಮರು ಶೆಲ್ಲಿಗಿಂತ ಅನೇಕ ಹೆಜ್ಜೆ ಮುಂದೆ ಹೋಗಿದ್ದಾರೆ. ಶೆಲ್ಲಿಯಲ್ಲಿ ಕಾಣಿಸುವುದು
ವಸಂತದ ಭರವಸೆ ಮಾತ್ರ. ‘ಕಾಲವ ತುಳಿದು ಬಾಳುವವೆ!’ ಎಂದು ಹೇಳುವಾಗ ಕೃಷ್ಣಶರ್ಮರಲ್ಲಿ ಕಾಣಿಸುವುದು ಬದುಕನ್ನು
ಎದುರಿಸುವ ಕೆಚ್ಚು!
೩
ಹದ್ದು-ಹಾಲಕ್ಕಿಯು ಹಾರಾಡುತಿಹವೇನೆ?
ಕೂಗುತಿಹವೆ ಕಾಗೆ-ಗೂಗೆ?
ಹೆದರಿಕೆ ಬಿಡುಬಿಡು, ಅವುಗಳಾಟವ ನೋಡು,
ಹುದುಗಿಹುದಲ್ಲಿಯು ಸೊಬಗೆ!
ಕಾಗೆ, ಗೂಗೆ ಹಾಗು ಹಾಲಕ್ಕಿಗಳು ಅಪಶಕುನದ ಹಕ್ಕಿಗಳು. ಹದ್ದಂತೂ ಸತ್ತ
ಪ್ರಾಣಿಗಳನ್ನು ಭಕ್ಷಿಸಲು ಬರುವ ಪಕ್ಷಿ. ಇವೆಲ್ಲ ತಮ್ಮ ತಲೆಯ ಮೇಲೆಯೆ ಚೀರುತ್ತ
ಹಾರುತ್ತಿರುವಾಗ, ಬಾಳಿನಲ್ಲಿ ಭರವಸೆ ಹುಟ್ಟಲು ಸಾಧ್ಯವೆ ಎನ್ನುವುದು ಕೃಷ್ಣಶರ್ಮರ ಪತ್ನಿಯಲ್ಲಿ
ಮೂಡುವ ಸಂದೇಹ. ಈ ಪಕ್ಷಿಗಳೂ ಸಹ ನಿಸರ್ಗದ ಸೃಷ್ಟಿ. ಇವುಗಳಲ್ಲಿಯೂ ಸಹ ಸೊಬಗಿದೆ. ನಮ್ಮ
ಕಾರ್ಪಣ್ಯವನ್ನು ಮರೆಯೋಣ. ಸೃಷ್ಟಿಯ ಆಟದಲ್ಲಿ ನಾವೆಲ್ಲರೂ ಭಾಗಿಗಳು ಎನ್ನುವುದನ್ನು ಅರಿತು,
ಅಲ್ಲಿ ಅಡಗಿರುವ ಚೆಲುವನ್ನಷ್ಟೇ ಕಾಣೋಣ ಎನ್ನುವುದು ಕೃಷ್ಣಶರ್ಮರು ತಮ್ಮ ಹೆಂಡತಿಗೆ
ನೀಡುತ್ತಿರುವ ಸಮಾಧಾನ!
೪
ಬಾಳಿನ ತೋಟಕೆ ಬರಲಿದೆ ಹೊಸ ಸುಗ್ಗಿ
ನಳನಳಿಸುವದಂದು ತಳಿತು;
ಹಣ್ಣು ಬಿಡುವೆ ನಾನು, ಹೂವ ಹೊರುವೆ ನೀನು,
ದಿಟ ದಿಟ ನಂಬು ಈ ಮಾತು!
ಕಾಲನಿಯಮ ಎನ್ನುವುದು ಒಂದಿದೆಯಲ್ಲ. ಇಂದೇನೊ ನಮ್ಮ ಬಾಳತೋಟ
ಬರಲಾಗಿರಬಹುದು. ನಮ್ಮಲ್ಲಿಗೂ ಸಹ ಹೊಸ ಸುಗ್ಗಿ ಬಂದೇ ಬರುವುದು. ಆ ದಿನದಂದು ಈ ತೋಟವು ಹೊಸ
ತಳಿರುಗಳನ್ನು ತುಂಬಿಕೊಂಡು ಚೆಲುವಾಗುವುದು. (‘ಅಂದು’ ಎಂದು ಹೇಳುವಾಗ, ಭವಿಷ್ಯದ ಕಡೆಗಿರುವ ಕೃಷ್ಣಶರ್ಮರ ನೋಟವನ್ನು ಗಮನಿಸಬೇಕು.) ಆ
ಕಾಲದಲ್ಲಿ ನಾನು (=ಮಾಮರವು) ಹಣ್ಣುಗಳನ್ನು
ಬಿಡುವೆನು; ಹಾಗು ನೀನು (=ಮಲ್ಲಿಕಾಲತೆಯು) ಹೂವುಗಳನ್ನು ಬಿಡುವೆ. ನಿಸರ್ಗಧರ್ಮವನ್ನು ಅನುಸರಿಸಿ
ನಮ್ಮ ಬಾಳೂ ಸಾಫಲ್ಯ ಪಡೆಯುವುದು.ಇದು ಭ್ರಮೆ ಎಂದು ಭಾವಿಸಬೇಡ; ಇದು ಪ್ರಕೃತಿಯ ಸತ್ಯ.
೫
ಹಣ್ಣಗೊನೆಯ ಹೊತ್ತು ಜೀವಜಂಗುಳಿಗಿತ್ತು
ಹಸಿವಿನುರಿಯ ನಾ ಹಿಂಗಿಸುವೆ;
ಹೂವಿನ ಹುರುಳಿಂದೆ ಹೃದಯವನರಳಿಸಿ,
ರಸಿಕಕುಲವ ನೀ ರಂಗಿಸುವೆ!
ಈ ಜೀವನಸಾಫಲ್ಯವು ಸ್ವಾರ್ಥಕ್ಕಾಗಿ ಅಲ್ಲ. ಮಾನವನು ಗಳಿಸುವದೆಲ್ಲವೂ
ಸ್ವಂತಕ್ಕಾಗಿ. ಆದರೆ ಸಸ್ಯಸಂಕುಲವು ಪಡೆಯುವ ಹೂವು ಹಾಗು ಹಣ್ಣುಗಳು ಪ್ರಾಣಿಸಂಕುಲದ ಸುಖಕ್ಕಾಗಿ
ಮೀಸಲಾಗಿವೆ. ಕೃಷ್ಣಶರ್ಮರು ತಮ್ಮ ಬದುಕಿನ ಬೇಗುದಿಯನ್ನು ಹೆಂಡತಿಯೊಡನೆ ಹಂಚಿಕೊಳ್ಳುತ್ತ ಬಂದಿದ್ದಾರೆ.
ಇನ್ನು ಮುಂದೆ ಸುಖದ ದಿನಗಳು ಬರುವವು ಎನ್ನುವ ಅದಮ್ಯ ನಿರೀಕ್ಷೆಯನ್ನು
ಇಟ್ಟುಕೊಳ್ಳುತ್ತಿದ್ದಾರೆ. ಆದರೆ ಈ ಸುಖವು ಕೇವಲ ಸ್ವಂತ ಭೋಗಕ್ಕಾಗಿ ಇರಬಾರದು ಎನ್ನುವ ಅರಿವು
ಅವರಿಗಿದೆ. ಹಸಿದವರ ಒಡಲ ಉರಿಯನ್ನು ಹಿಂಗಿಸುವುದು ತಮ್ಮ ಕರ್ತವ್ಯವೆಂದೇ ಅವರು ಭಾವಿಸುತ್ತಾರೆ.
ಅದಾದ ಬಳಿಕ ರಸಿಕಜನರ ಸಂತೋಷವು ಹೂಬಳ್ಳಿಯ ಧರ್ಮವಾಗಿದೆ. ಇದೇ ನಿಜವಾದ ಜೀವನಧರ್ಮ.
ಈ ಸಂದರ್ಭದಲ್ಲಿ ಸಂಸ್ಕೃತ ಸುಭಾಷಿತವೊಂದು ನೆನಪಿಗೆ ಬರುತ್ತಿದೆ:
ಪದ್ಮಾಕರಂ ದಿನಕರೋ ವಿಕಚೀಕರೋತಿ
ಚಂದ್ರೋ ವಿಕಾಸಯತಿ ಕೈರವ ಚಕ್ರವಾಲಮ್
ನಾಭ್ಯರ್ಥಿತೋsಪಿ ಜಲಧರೋ ಜಲಂ
ದದಾತಿ
ಸಂತಃ ಸ್ವಯಂ ಪರಹಿತೇಷು ಕೃತಾಭಿಯೋಗಾ:
೬
ಕಳಿವಣ್ಣಗಳನುಂಡು ಕೋಗಿಲೆ-ಗಿಳಿವಿಂಡು
ಕಲಕಲ ನುಡಿಯನಾಡುವವೆ!
ಹೂವಿನೈಸಿರಿ ಕಂಡು ಮರಿದುಂಬಿಗಳ ದಂಡು
ಇನಿದನಿವೆರಸಿ ಹಾಡುವುವೆ!
ಕೃಷ್ಣಶರ್ಮರ ಸಾತ್ವಿಕ ಅಪೇಕ್ಷೆಯನ್ನಷ್ಟು ನೋಡಿರಿ. ಇವರ ಬಾಳತೋಟದ
ಸಿಹಿಫಲಗಳನ್ನು ಕೋಗಿಲೆ ಹಾಗು ಗಿಳಿಗಳ ಹಿಂಡು ಉಣ್ಣಬೇಕು, ಇವರ ತೋಟದ ಕಂಪಿನ ಹೂವುಗಳಿಗೆ
ಆಕರ್ಷಿತವಾದ ದುಂಬಿಗಳು, ಅಲ್ಲಿ ನೆರೆದು, ಇಂಪಿನ ದನಿಯಲ್ಲಿ ಹಾಡಬೇಕು ಎನ್ನುವುದು ಕೃಷ್ಣಶರ್ಮರ
ರಸಿಕ ಬಯಕೆ. ಈ ಸಾಲುಗಳನ್ನು ಓದುವಾಗ, ಕನ್ನಡದ ಆದಿಕವಿ ಪಂಪನು ಹಾಡಿದ ‘ ಕೋಗಿಲೆಯಾಗಿ ಮೇಣ್ ಮರಿದುಂಬಿಯಾಗಿ
ಪುಟ್ಟುವುದು ನಂದನದೊಳ್, ಬನವಾಸಿ ದೇಶದೊಳ್’ ಎನ್ನುವ ರೋಮಾಂಚಕ ಕಾವ್ಯಭಾಗ ನೆನಪಾಗುವದಲ್ಲವೆ?
ತಮ್ಮ ಬದುಕಿನಲ್ಲಿ ಪ್ರವೇಶಿಸುವ ಸುಖವು ಈ ರೀತಿಯಾಗಿ ಸಾಂಸ್ಕೃತಿಕವಾಗಿಯೂ ಸಫಲವಾಗಲಿ ಎನ್ನುವುದು
ಕೃಷ್ಣಶರ್ಮರ ಸುಸಂಸ್ಕೃತ ಮನೋಧರ್ಮವನ್ನು ತೋರಿಸುತ್ತದೆ.
೭
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸ ತೋಟ;
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ
ನೋಡು ಬರುವ ಸುಗ್ಗಿಯಾಟ!
ಮೊದಲ ನುಡಿಯಲ್ಲಿ ‘ಚೆನ್ನೇ ಚೆನ್ನೆನಿತು ಈ ಕೂಟ...?’ ಎನ್ನುವ
ಸಂದೇಹದಿಂದ ಪ್ರಾರಂಭವಾಗುವ ಕವನವು ಅಂತ್ಯಗೊಳ್ಳುವುದು ಆತ್ಮವಿಶ್ವಾಸದ ಘೋಷಣೆಯೊಂದಿಗೆ: ‘ನೋಡು,
ಬರುವ ಸುಗ್ಗಿಯಾಟ!’