ಒಂದು ಕಾಲವಿತ್ತು. ಆ ಕಾಲದಲ್ಲಿ ಚಿಕ್ಕ ಮಕ್ಕಳಿಗೆ ಶುದ್ಧಬರಹವು
ಪಠ್ಯಕ್ರಮದ ಅನಿವಾರ್ಯ ಭಾಗವಾಗಿತ್ತು. ಕಲಿಸುವ ಶಿಕ್ಷಕರೂ ಸಹ ಕನ್ನಡವನ್ನು ಚೆನ್ನಾಗಿ ತಿಳಿದವರೇ
ಆಗಿರುತ್ತಿದ್ದರು. ಆದುದರಿಂದ ಬರಹದಲ್ಲಿ ಕಾಗುಣಿತದ ತಪ್ಪುಗಳು ಕಂಡು ಬರುತ್ತಿರಲಿಲ್ಲ. ಈಗ
ಕರ್ನಾಟಕದಿಂದ ಕನ್ನಡವೇ ಮಾಯವಾಗತೊಡಗಿದೆ. ಟೀವಿ ಹಾಗು ಆಕಾಶವಾಣಿಯ ಪ್ರಸಾರಗಳಲ್ಲಿ ಕನ್ನಡದ
ಪದಗಳನ್ನು ಇಂಗ್ಲೀಶ ಪದಗಳು ಒದ್ದೋಡಿಸುತ್ತಿವೆ. ಶಿಕ್ಷಕರಿಗೇ ಶುದ್ಧ ಕನ್ನಡ ತಿಳಿದಿಲ್ಲ. ಹೀಗಿರಲು ಕನ್ನಡ ಬರಹದಲ್ಲಿ ಕಾಗುಣಿತಕ್ಕೆ ಬೆಲೆ ಎಲ್ಲಿಯದು ಎನ್ನುವ ಪ್ರಶ್ನೆ ಸಹಜವಾದದ್ದೇ!
ಆದರೂ ಸಹ ಕನ್ನಡವನ್ನು ಉಳಿಸಬೇಕಾದ, ಬೆಳಸಬೇಕಾದ ಸಂಸ್ಥೆಗಳೇ ಕಾಗುಣಿತದ ತಪ್ಪುಗಳನ್ನು
ಮಾಡಬಾರದು. ಅದು ಮಹಾ ಅಪರಾಧ. ಅಂತಹ ಅಪರಾಧವನ್ನು ಶಿವಮೊಗ್ಗಿಯಲ್ಲಿಯ ನಮ್ಮ ಕುವೆಂಪು ವಿಶ್ವವಿದ್ಯಾಲಯವು
ಮಾಡಿದೆ. ಈ ವಿಶ್ವವಿದ್ಯಾಲಯದ ಕಟ್ಟಡದ ಮೇಲಿನ ಲಾಂಛನವನ್ನು ಗಮನಿಸಿರಿ.
ಈ ಲಾಂಛನದ ಒಳಗೆ ಬರೆದ ಧ್ಯೇಯವಾಕ್ಯವನ್ನು ಓದಿರಿ. ಅದು ಹೀಗಿದೆ:
‘ಮನುಜಮತ * ವಿಶ್ವಪಥ * ಸರ್ವೋದಯ * ಸಮನ್ವಯ * ಪೂರ್ಣದೃಷ್ಠಿ’
ಈ ಧ್ಯೇಯವಾಕ್ಯವು ರಾಷ್ಟ್ರಕವಿ ಕುವೆಂಪುರವರ ಜೀವನದ ಆದರ್ಶವೇ ಆಗಿದೆ.
ಈ ಪದಗಳಲ್ಲಿ ಕಾಗುಣಿತದ ತಪ್ಪೆಸುಗುವುದು ಕುವೆಂಪುರವರಿಗೆ ಮಾಡುವ ಅಪಚಾರವಲ್ಲವೆ? ಹೀಗಿದ್ದರೂ
ಕುವೆಂಫು ವಿಶ್ವವಿದ್ಯಾಲಯವು ಈ ಅಪರಾಧವನ್ನು ಎಸಗಿದೆ. ‘ಪೂರ್ಣದೃಷ್ಟಿ’ ಎಂದು ಬರೆಯುವ
ಬದಲು ‘ಪೂರ್ಣದೃಷ್ಠಿ’ ಎಂದು ಬರೆಯಲಾಗಿದೆ.
೧೯೮೭ರಲ್ಲಿ ಈ ವಿಶ್ವವಿದ್ಯಾಲಯವು ಪ್ರಾರಂಭವಾಯಿತು. ಅಲ್ಲಿಂದ
ಇಲ್ಲಿಯವರೆಗೆ ೬ ಜನ ಉಪಕುಲಪತಿಗಳು ಈ ವಿಶ್ವವಿದ್ಯಾಲಯವನ್ನು ಆಳಿದರು. ಈಗಿರುವವರು ಏಳನೆಯವರು.
ಇವರ್ಯಾರೂ ಈ ತಪ್ಪನ್ನು ಗಮನಿಸಲಿಲ್ಲವೆ? ಕಟ್ಟಡದ ಮೇಲಿನ ಲಾಂಛನವು ಇವರ ಕಣ್ಣಿಗೆ
ಬಿದ್ದಿರಲಿಕ್ಕಿಲ್ಲ ಎಂದು ಇಟ್ಟುಕೊಳ್ಳೋಣ. ಆದರೆ ಉಪಕುಲಪತಿಗಳು ಬರೆಯುವ ನೂರಾರು ಪತ್ರಗಳ ಮೇಲೆ
ಹಾಗು ದಾಖಲೆಗಳ ಮೇಲೆ ಈ ಲಾಂಛನ ಇದ್ದೇ ಇರುತ್ತದೆಯಲ್ಲವೆ? ಅಲ್ಲಿಯೂ ಸಹ ಇವರ ಗಮನ ಹರಿಯಲಿಲ್ಲವೆ?
ಅಶಿಕ್ಷಿತರಿಗೆ ಹಾಗು ಅರೆಶಿಕ್ಷಿತರಿಗೆ ಈ ತಪ್ಪಿನ
ಅರಿವಾಗಲಿಕ್ಕಿಲ್ಲ. ಆದರೆ ಉಪಕುಲಪತಿಗಳು ಹಾಗು ವಿಶ್ವವಿದ್ಯಾಲಯದ ಕನ್ನಡ ಮತ್ತು ಸಂಸ್ಕೃತ
ಇಲಾಖೆಯ ಪ್ರಾಧ್ಯಾಪಕರು ಉಚ್ಚ ಶಿಕ್ಷಣ ಪಡೆದವರಾಗಿರುತ್ತಾರೆ. ಈ ತಪ್ಪನ್ನು ಗಮನಿಸಿಯೂ, ತೆಪ್ಪಗೆ
ಕುಳಿತರೆ ಇದು ಕುವೆಂಪುರವರಿಗೆ ಹಾಗು ಕನ್ನಡಮ್ಮನಿಗೆ
ಎಸಗುವ ಘೋರ ಅನ್ಯಾಯ. ಕುರುಡರು ತಾವಷ್ಟೇ ದಾರಿ ತಪ್ಪುತ್ತಾರೆ. ಆದರೆ ಕಣ್ಣಿದ್ದ ಈ
ಕುರುಡರು ಈ ವಿಶ್ವವಿದ್ಯಾಲಯದಲ್ಲಿ ಕಲಿತ ಹಾಗು ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನೂ ಈ
ವಿಷಯದಲ್ಲಿ ಹಾದಿಗೆಡಿಸುತ್ತಿದ್ದಾರೆ. ಸಂಚಿ ಹೊನ್ನಮ್ಮನ ಕವನದ ಸಾಲೊಂದನ್ನು ಎರವಲು ಪಡೆದು
ಹೇಳುವುದಾದರೆ, ಇವರು ’ಕಣ್ಣು ಕಾಣದ ಗಾವಿಲರು!’
ಈ ವಿಷಯದಲ್ಲಿ ಒಂದು ಸರಳ ಸೂತ್ರವನ್ನು ಇಲ್ಲಿ ಉಲ್ಲೇಖಿಸಿದರೆ,
ಉಪಯುಕ್ತವಾದೀತು. ಅದು ಹೀಗಿದೆ:
ಸಂಸ್ಕೃತದಲ್ಲಿ ಕ್ರಿಯಾಪದಗಳಿಂದ ಸಾಧಿತವಾದ ನಾಮಪದಗಳು ಅಥವಾ
ವಿಶೇಷಣಗಳ ಕೊನೆಯ ಅಕ್ಷರವು ಅಲ್ಪಪ್ರಾಣವಾಗಿರುತ್ತದೆ.
ಉದಾಹರಣೆಗಳು:
ಉದಾಹರಣೆಗಳು:
ಪುಷ್ (=ಪೋಷಣೆ ಪಡೆ) ... ಪುಷ್ಟಿ... ಪುಷ್ಟ
ದೃಷ್ (=ನೋಡು) .......... ದೃಷ್ಟಿ... ದೃಷ್ಟ
ತುಷ್ (=ಆನಂದಿಸು) .........ತುಷ್ಟಿ... ತುಷ್ಟ
ಇಷ್ (=ಬಯಸು) ............ ಇಷ್ಟಿ ....ಇಷ್ಟ ಇತ್ಯಾದಿ.
ತಾರತಮ್ಯಸೂಚಕ ಪದಗಳ ಅಂತವು superlative ಪದಗಳಲ್ಲಿ ಮಹಾಪ್ರಾಣವಾಗಿರುತ್ತದೆ. ಉದಾಹರಣೆಗಳು:
ಪಾಪೀ......... positive
ಪಾಪೀಯಸೀ.. comparative
ಪಾಪಿಷ್ಠ........superlative
ಕನೀ......... positive
ಕನೀಯಸೀ.. comparative
ಕನಿಷ್ಠ........superlative
ವರೀ......... positive
ವರೀಯಸೀ...comparative
ವರಿಷ್ಠ........superlative
ಗರೀ...........positive
ಗರೀಯಸೀ....comparative
ಗರಿಷ್ಠ........ superlative
ಇತ್ಯಾದಿ.
ಆದರೆ ನಮ್ಮ ವಿಶ್ವವಿದ್ಯಾಲಯಗಳು ಅಲ್ಪಪ್ರಾಣ ಕಾಗುಣಿತವನ್ನು
ಮಹಾಪ್ರಾಣಕ್ಕೂ ಹಾಗು ಮಹಾಪ್ರಾಣ ಕಾಗುಣಿತವನ್ನು ಅಲ್ಪಪ್ರಾಣಕ್ಕೂ ಬದಲಾಯಿಸಬಲ್ಲ
ಚತುರಮತಿಗಳಾಗಿವೆ.
ಕುವೆಂಪು ನಮ್ಮ ರಾಷ್ಟ್ರಕವಿ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ
ಗೌರವವನ್ನು ತಂದುಕೊಟ್ಟ ಮೊದಲ ಲೇಖಕರು. ಅವರ
ಹೆಸರನ್ನು ಹೊತ್ತ ವಿಶ್ವವಿದ್ಯಾಲಯದಲ್ಲಿ ಈ ಮಟ್ಟದ ಅಜ್ಞಾನದ ಪ್ರದರ್ಶನವಾಗಬಾರದು. ಇದನ್ನು
ವಿಶ್ವವಿದ್ಯಾಲಯದ ಉಪಕುಲಪತಿಗಳ ಗಮನಕ್ಕೆ ತರುವುದು ಕನ್ನಡಿಗನಾದ ನನ್ನ ಕರ್ತವ್ಯ. ಹೀಗೆಂದುಕೊಂಡು
ಅವರಿಗೆ ಓಲೆಯೊಂದನ್ನು ಬರೆದಿದ್ದೇನೆ. ಅದನ್ನು ಕೆಳಗೆ ನೀಡುತ್ತಿದ್ದೇನೆ. ಸಿರಿಗನ್ನಡಂ ಗೆಲ್ಗೆ
ಎಂದರೆ ಸಾಲದು, ಸರಿಗನ್ನಡಂ ಗೆಲ್ಗೆ ಸಹ ನಮಗೆ ಬೇಕು ಎನ್ನುವುದನ್ನು ನಾವೆಲ್ಲರೂ ಅರಿಯಬೇಕಲ್ಲವೆ?
......................................................................
ಇವರಿಗೆ
ಉಪಕುಲಪತಿಗಳು,
ಕುವೆಂಪು ವಿಶ್ವವಿದ್ಯಾಲಯ,
ಶಿವಮೊಗ್ಗಿ
ಮಾನ್ಯರೆ,
ವಿಷಯ: ಕುವೆಂಪು ವಿಶ್ವವಿದ್ಯಾಲಯದ ಲಾಂಛನದಲ್ಲಿಯ ತಪ್ಪು ಕಾಗುಣಿತ
ದಿನಾಂಕ ೧೪-೮-೨೦೧೨ರ ‘ಸಂಯುಕ್ತ ಕರ್ನಾಟಕ’ ಸಮಾಚಾರ ಪತ್ರಿಕೆಯಲ್ಲಿ
ಛಾಪಿಸಲಾದ ವಿಶ್ವವಿದ್ಯಾಲಯದ ಲಾಂಛನದಲ್ಲಿಯ ಬರಹವನ್ನು ಓದಿ ಆಘಾತವಾಯಿತು. ಕನ್ನಡದ ಮೊದಲ
ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕುವೆಂಪುರವರ ಹೆಸರನ್ನು ಹೊತ್ತ ವಿಶ್ವವಿದ್ಯಾಲಯವು ತನ್ನ
ಲಾಂಛನದಲ್ಲಿ ಇಂತಹ ಕಾಗುಣಿತದ ತಪ್ಪನ್ನು ಮಾಡಬಹುದೆಂದು ಕಲ್ಪಿಸುವುದೂ ಸಾಧ್ಯವಿಲ್ಲ. ಇದು
ನಿಜವಾಗಿಯೂ ಲಾಂಛನಾಸ್ಪದ ವಿಷಯವಾಗಿದೆ. ನಿಮ್ಮ ಗಮನಕ್ಕಾಗಿ ಆ ಲಾಂಛನದ ಚಿತ್ರವನ್ನು ಕೆಳಗೆ
ಕೊಟ್ಟಿದ್ದೇನೆ:
ಉಪಕುಲಪತಿಗಳು ಲಾಂಛನದಲ್ಲಿಯ ಬರಹವನ್ನು ದಯವಿಟ್ಟು ಓದಬೇಕು.
‘ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ’ ಎಂದು
ಬರೆದಿರುವುದನ್ನು ಗಮನಿಸಬೇಕು. ಈ ಬರಹದಲ್ಲಿ ‘ಪೂರ್ಣದೃಷ್ಟಿ’ ಎಂದು ಬರೆಯುವುದರ
ಬದಲು ‘ಪೂರ್ಣದೃಷ್ಠಿ’ ಎಂದು
ಬರೆಯಲಾಗಿದೆ.
ವಿಶ್ವವಿದ್ಯಾಲಯವು ಪ್ರಾರಂಭವಾದಾಗಿನಿಂದ, ಅಂದರೆ ೧೯೮೭ನೆಯ ಇಸವಿಯಿಂದ
ತಪ್ಪು ಕಾಗುಣಿತದ ಈ ಲಾಂಛನವು ವಿಶ್ವವಿದ್ಯಾಲಯದ ಕಟ್ಟಡದ ಮೇಲೆ ರಾರಾಜಿಸುತ್ತಿರಬಹುದು. ಬಹುಶಃ
ನೀವು ಹಾಗು ನಿಮ್ಮ ಮೊದಲಿನ ಯಾವ ಉಪಕುಲಪತಿಯೂ ತಮ್ಮ ಮುಖವನ್ನು ಮೇಲೆತ್ತಿ ಕಟ್ಟಡದ ಮೇಲೆ
ಕಂಗೊಳಿಸುತ್ತಿರುವ ಈ ಲಾಂಛನವನ್ನು ನೋಡಿರಲಿಕ್ಕಿಲ್ಲ ಎಂದುಕೊಳ್ಳೋಣ. ಆದರೆ ಉಪಕುಲಪತಿಗಳ ಎಲ್ಲ
ಓಲೆಗಳಲ್ಲಿ ಹಾಗು ವಿಶ್ವವಿದ್ಯಾಲಯದ ಎಲ್ಲ ದಾಖಲೆಗಳಲ್ಲಿ ಈ ಲಾಂಛನವು ಮುದ್ರಿತವಾಗಿರುವುದನ್ನು
ನೀವು ನೋಡಿರಲೇ ಬೇಕಲ್ಲವೆ? ಈವರೆಗೆ ವಿಶ್ವವಿದ್ಯಾಲಯದ ಈ ಎಲ್ಲ ಓಲೆಗಳು ಹಾಗು ದಾಖಲೆಗಳು ಅನೇಕ
ಸುಶಿಕ್ಷಿತರಿಗೆ ರವಾನೆಯಾಗಿರಬಹುದು. ಇದು ಎಂತಹ ಅವಮಾನ! ಸ್ವರ್ಗದಲ್ಲಿರುವ ಕುವೆಂಪುರವರ ಆತ್ಮವು
ತನ್ನ ಹೆಸರನ್ನು ಹೊತ್ತ ವಿಶ್ವವಿದ್ಯಾಲಯದಲ್ಲಿ ಕನ್ನಡಕ್ಕೆ ಆಗುತ್ತಿರುವ ಈ ಅಪಚಾರದಿಂದಾಗಿ
ದಿನವೂ ಕಣ್ಣೀರನ್ನು ಸುರಿಸುತ್ತಿರಬಹುದು!
ಮಾನ್ಯ ಉಪಕುಲಪತಿಗಳೆ,
ಇನ್ನೂ ಕಾಲ ಮಿಂಚಿಲ್ಲ. ಈ ತಪ್ಪನ್ನು ತ್ವರಿತವಾಗಿ ಸರಿಪಡಿಸುವ ಮೂಲಕ, ರಾಷ್ಟ್ರಕವಿ ಕುವೆಂಪುರವರ
ಆತ್ಮಕ್ಕೆ ಶೀಘ್ರವೇ ಶಾಂತಿಯನ್ನು ದೊರಕಿಸುವಿರಿ ಎಂದು ನಂಬಿದ್ದೇನೆ.
ಒಂದು ಸಾಲಿನ
ಉತ್ತರವನ್ನು ಹೊತ್ತ ನಿಮ್ಮ ಮಾರೋಲೆಯನ್ನು ನಾನು ನಿರೀಕ್ಷಿಸಬಹುದೆ?
.......................................................................................
ಪ್ರತಿಯನ್ನು ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ಹಾಗು ಉಪಕುಲಪತಿಗಳು,
ಕುವೆಂಪು ವಿಶ್ವವಿದ್ಯಾಲಯ ಇವರಿಗೆ ಅವಗಾಹನೆಗಾಗಿ ಹಾಗಿ ಸಮುಚಿತ ಕ್ರಮಕ್ಕಾಗಿ
ಸಮರ್ಪಿಸಲಾಗುತ್ತಿದೆ.
ಪ್ರತಿಯನ್ನು
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ, ಬೆಂಗಳೂರು ಇವರಿಗೆ ಅವಗಾಹನೆಗಾಗಿ
ಹಾಗು ಸಮುಚಿತ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ.
English copy of the letter is
forwarded with compliments to the VC, UGC, New Delhi for favour of information and suitable action.