ಈಗಿನ ಭಾರತೀಯ ಸಮಾಜವು ಅತ್ಯಾಚಾರೀ ಸಮಾಜವಾಗಿದೆ. ಸ್ತ್ರೀಯರ ಮೇಲಿನ ದೌರ್ಜನ್ಯದ ಹಾಗು ಸಾರ್ವಜನಿಕ ಅಪಮಾನದ ಸಮಾಚಾರಗಳು ಪ್ರತಿದಿನವೂ ಪತ್ರಿಕೆಯಲ್ಲಿ ಬರುತ್ತಲೇ ಇವೆ. ಈ ದುಷ್ಕೃತ್ಯಗಳನ್ನು ಮಾಡುವ ನೀಚರನ್ನು ಗಲ್ಲಿಗೇರಿಸಬೇಕು ಎನ್ನುವ ಬೇಡಿಕೆಯು ಸರಿಯಾದದ್ದೇ. ಕೊಲೆಯಾದವನ ಯಾತನೆಯು ಒಂದೇ ಸಲಕ್ಕೆ ಮುಗಿಯುತ್ತದೆ. ಆದರೆ ಅತ್ಯಾಚಾರಕ್ಕೊಳಗಾದ ಸ್ತ್ರೀಯು ಪ್ರತಿದಿನವೂ ಮಾನಸಿಕ ಹಾಗು ಸಾಮಾಜಿಕ ಯಾತನೆಯನ್ನು ಅನುಭವಿಸುತ್ತಾಳೆ. ಆದುದರಿಂದ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಶಿಕ್ಷೆ ಸಮರ್ಪಕ ಶಿಕ್ಷೆಯಾಗಿದೆ. ಇಷ್ಟೇ ಸಾಲದು. ಅತ್ಯಾಚಾರಕ್ಕೊಳಗಾದ ಸ್ತ್ರೀಗೆ ಅಪರಾಧಿಯು ಭಾರೀ ಪರಿಹಾರವನ್ನು ನೀಡಬೇಕು. ಈ ಪರಿಹಾರವನ್ನು ನೀಡುವ ಆರ್ಥಿಕ ಸಾಮರ್ಥ್ಯ ಅವನಲ್ಲಿ ಇಲ್ಲದಿದ್ದರೆ, ಸರಕಾರವೇ ಆ ಮೊತ್ತವನ್ನು ಭರಿಸಬೇಕು.
ಒಂದು ಕೂಸು ಹುಟ್ಟಿದ
ಗಳಿಗೆಯಲ್ಲಿ, ಅದು ಸರ್ವತಂತ್ರ ಸ್ವತಂತ್ರ ಜೀವಿಯಾಗಿರುತ್ತದೆ. ಆದರೆ ಸಾಮಾಜಿಕ ಕಟ್ಟುಪಾಡುಗಳಿಗೆ
ಒಳಪಟ್ಟ ಕ್ಷಣದಿಂದ, ಆ ಜೀವಿಯ ಸ್ವಾತಂತ್ರ್ಯ ನಷ್ಟವಾಗುತ್ತದೆ. ಉದಾಹರಣೆಗೆ, ಸ್ವತಂತ್ರ ಜೀವಿಯು ಕಾಡಿಗೆ
ಹೋಗಿ, ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು. ತನ್ನನ್ನು ಕಾಡುವ ವೈರಿಗಳನ್ನು ಕೊಂದು ಹಾಕಬಹುದು.
ಆದರೆ, ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾಗುವ ಅನಿವಾರ್ಯತೆಯಿಂದಾಗಿ ಇಂತಹ ಸ್ವಾತಂತ್ರ್ಯ ಹೊರಟುಹೋಗುತ್ತದೆ.
ಅದರ ಬದಲಾಗಿ ಆ ಜೀವಿಗೆ ಕೆಲವೊಂದು ಹಕ್ಕುಗಳು ಲಭಿಸುತ್ತವೆ. ದುರಾಚಾರದಿಂದ ರಕ್ಷಣೆ ಪಡೆಯುವುದು ಪ್ರತಿಯೋರ್ವ
ಜೀವಿಯ ಹಕ್ಕು ಹಾಗು ರಕ್ಷಣೆ ಕೊಡುವುದು ಸರಕಾರದ ಹೊಣೆಗಾರಿಕೆ. ರಕ್ಷಣೆ ಸಾಧ್ಯವಾಗದಿದ್ದರೆ, ಸಮುಚಿತ
ಪರಿಹಾರವನ್ನು ಕೊಡಲೇಬೇಕು. ಅದು ಸರಕಾರದ ಕರ್ತವ್ಯ.
ಅತ್ಯಾಚಾರಿಗಳಿಗೆ ಶಿಕ್ಷೆ
ಹಾಗು ದೌರ್ಜನ್ಯಪೀಡಿತರಿಗೆ ಪರಿಹಾರ ನೀಡುವದಷ್ಟೇ ಸಾಲದು. ಭಾರತೀಯ ಸಮಾಜದಲ್ಲಿ ಅತ್ಯಾಚಾರಗಳು ಏಕೆ
ಹೆಚ್ಚಾಗುತ್ತಿವೆ ಎನ್ನುವುದನ್ನು ಅರಿತು, ಆ ಸಮಸ್ಯೆಯನ್ನು ಬಗೆಹರಿಸುವುದು ಅವಶ್ಯಕವಾಗಿದೆ. ಸಮಸ್ಯೆಯ
ಕಾರಣವಂತೂ ಸ್ಪಷ್ಟವಾಗಿದೆ. ನಮ್ಮ ಸಮಾಜವು ತನ್ನ ತರುಣರಿಗೆ ತಪ್ಪು ಹಾದಿಯನ್ನು ತೋರಿಸುತ್ತಿದೆ. ನೈತಿಕ
ಹಾಗು ಸಾಮಾಜಿಕ ಆದರ್ಶಗಳು ಮಾಯವಾಗಿವೆ. ಟೀವಿ ಹಾಗು ಸಿನೆಮಾಗಳಲ್ಲಿ ಆಶ್ಲೀಲತೆ ಹಾಗು ಮಿತಿಮೀರಿದ
ಕ್ರೌರ್ಯದ ಪ್ರದರ್ಶನವಾಗುತ್ತಿದೆ. ನಮ್ಮ ಶಾಸಕರಲ್ಲಿ
ಶೇಕಡಾ ೩೦ರಷ್ಟು ಶಾಸಕರು ಒಂದಿಲ್ಲ ಒಂದು ನಮೂನೆಯ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ತಮ್ಮ ರಾಜಕೀಯ ಬಲದಿಂದಾಗಿ ಅನೇಕ ರಾಜಕಾರಣಿಗಳ ಅಪರಾಧಗಳು ಮುಚ್ಚಿ ಹೋಗುತ್ತಿವೆ. ಈ ನಾಯಕರೇ ನಮ್ಮ
ತರುಣರಿಗೆ ಮಾದರಿಯಾಗಿದ್ದಾರೆ! ಹೀಗಿದ್ದಾಗ ನಮ್ಮ ಸಮಾಜವು ಅತ್ಯಾಚಾರೀ ಸಮಾಜವಾಗಿ ಬದಲಾದದ್ದರಲ್ಲಿ
ಆಶ್ಚರ್ಯವೇನಿದೆ? ಯಥಾ ರಾಜಾ ತಥಾ ಪ್ರಜಾ!
ಗ್ಯಾಂಗ್‍ರೇಪ್‍ನಂತಹ
ಅತ್ಯಾಚಾರಗಳು ಕಣ್ಣಿಗೆ ಎದ್ದು ಕಾಣುವಂತಹ ದೌರ್ಜನ್ಯಗಳಾಗಿವೆ. ಆದರೆ ಸಾರ್ವಜನಿಕರ ನಜರಿಗೆ ಬಾರದಿರುವ
ದೌರ್ಜನ್ಯಗಳು ಇದರ ಸಾವಿರ ಪಟ್ಟಿನಷ್ಟಿವೆ. ಭಾರತದ ಮೆಟ್ರೋಗಳಲ್ಲಿ ದಿನವೂ ಅನೇಕ ಅಪಹೃತ ಬಾಲಿಕೆಯರ
ಮಾರಾಟವಾಗುತ್ತಿದೆ. ಎರಡು ವರ್ಷಗಳ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದು ಪತ್ರಿಕೆಗಳಲ್ಲಿ
ಬೆಳಕಿಗೆ ಬರುತ್ತಿದೆ. ಹೆಣ್ಣಾಗಿ ಹುಟ್ಟಿದ್ದೇ ಈ ಬಾಲಿಕೆಯರ ಹಾಗು ಶಿಶುಗಳ ಅಪರಾಧವೇ?
ಸರಕಾರಕ್ಕೆ ಇದು ಗೊತ್ತಿರದೆ
ಏನು? ಆದರೆ ಅಪರಾಧ ಮಾಫಿಯಾ ದೊಡ್ಡ ಸಂಘಟನೆಯಾಗಿದೆ. ಇವರು ಗಳಿಸುವ ಕೊಳಕು ಹಣದಲ್ಲಿ ಸಮಾಜರಕ್ಷಕರಿಗೂ
ಪಾಲಿರುತ್ತದೆ. ಸರಕಾರದ ಕನಿಷ್ಠ ಕರ್ಮಚಾರಿಯಿಂದ ಪ್ರಾರಂಭವಾಗಿ, ಸರಕಾರದ ವರಿಷ್ಠರವರೆಗೆ ಎಲ್ಲರಿಗೂ
ಈ ಅರಿಷ್ಟ ಹಣದಲ್ಲಿ ಪಾಲಿರುವದು ಒಂದು ಬಹಿರಂಗ ರಹಸ್ಯ!
ಆದುದರಿಂದ ಅಪರಾಧಿಗಳಲ್ಲಿ
ಹೆದರಿಕೆ ಹುಟ್ಟಿಸುವಂತಹ ಶಿಕ್ಷೆಯ ಜೊತೆಗೆ, ಭಾರತೀಯ ಸಮಾಜದಲ್ಲಿರುವ ಅನೈತಿಕ ಕೊಳಕನ್ನು ಗುಡಿಸುವ
ಕೆಲಸವೂ ಆಗಬೇಕು. ಶಾಲೆಗಳಲ್ಲಿ ನೈತಿಕ ಶಿಕ್ಷಣ ದೊರೆಯಬೇಕು. ಟೀವಿ ಹಾಗು ಸಿನೆಮಾಗಳಲ್ಲಿ ಅಶ್ಲೀಲತೆ
ಹಾಗು ಕ್ರೌರ್ಯದ ಪ್ರದರ್ಶನಗಳನ್ನು ಪ್ರತಿಬಂಧಿಸಬೇಕು. ಲಂಚಗುಳಿ ಹಾಗು ಲಂಪಟ ರಾಜಕಾರಣಿಗಳನ್ನು ಸಮಾಜವು
ತಿರಸ್ಕರಿಸಬೇಕು. ಅಲ್ಲಿಯವರೆಗೂ ಸ್ತ್ರೀಯರ ಹಾಗು ಬಾಲಿಕೆಯರ ಮೇಲಿನ ದೌರ್ಜನ್ಯವು ನಿಲ್ಲುವದಿಲ್ಲ.
ಸಾಮಾಜಿಕ ಅಪರಾಧಗಳಿಗೆ ಇನ್ನೂ ಒಂದು ಕಾರಣವಿದೆ. ಅನೇಕ ವರ್ಷಗಳ ಹಿಂದೆ, ಪ್ರಾಣಿವಿಜ್ಞಾನಿಗಳು ವಿಭಿನ್ನ ಪ್ರದೇಶಗಳ ಮಂಗಗಳ
ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ಈ ಪ್ರಾಣಿಗಳಲ್ಲಿ ಅವರು ಮೂರು ಗುಂಪುಗಳನ್ನು ಮಾಡಿದ್ದರು:
ಅತಿ ದಟ್ಟವಾದ ಸಂಖ್ಯೆಯುಳ್ಳ ಗುಂಪು, ವಿರಳ ಸಂಖ್ಯೆಯ ಗುಂಪು ಹಾಗು ಮಧ್ಯಮ ಪ್ರಮಾಣದ ಸಂಖ್ಯೆಯ ಗುಂಪು.
ಯಾವ ಗುಂಪಿನಲ್ಲಿ ಅತಿ ದಟ್ಟವಾದ ಪ್ರಾಣಿಸಂಖ್ಯೆ ಇದ್ದು, ನಾಯಕತ್ವವು ಬಲಹೀನವಾಗಿರುವಿದೋ, ಆ ಗುಂಪಿನ
ಪ್ರಾಣಿಗಳಲ್ಲಿ ಪರಸ್ಪರ ಕಚ್ಚಾಟ ಹಾಗು ಅಪರಾಧಗಳು ವಿಶೇಷ ಪ್ರಮಾಣದಲ್ಲಿ ಕಂಡು ಬಂದವು. ಪ್ರಾಣಿಗಳಲ್ಲಿ
ಸಾಧಾರಣವಾಗಿ ಕಂಡು ಬರದಂತಹ, ರೇಪ್ ಸಹ ಈ ಗುಂಪಿನಲ್ಲಿ ಕಂಡು ಬಂದಿತು. ಭಾರತದ ಸದ್ಯದ ಪರಿಸ್ಥಿತಿಯು
ಇದೇ ರೀತಿಯಾಗಿರುವುದು ಸ್ಪಷ್ಟವಿದೆ. ನಮ್ಮಲ್ಲಿ ಮಿತಿ ಮೀರಿದ ಜನಸಂಖ್ಯೆ ಇದ್ದು, ಬಲಶಾಲಿ ನಾಯಕತ್ವದ
ಅಭಾವವಿದೆ.
ಇನ್ನು ಮತಬ್ಯಾಂಕನ್ನು ಓಲೈಸುವ ರಾಜಕಾರಣಿಗಳು ಜನಸಂಖ್ಯಾನಿಯಂತ್ರಣದ ಬಗೆಗೆ ಕ್ರಮ ತೆಗೆದುಕೊಳ್ಳುವದಂತೂ ಕನಸಿನ ಮಾತು. ಜನಸಂಖ್ಯೆ ಹೆಚ್ಚಿದಂತೆಲ್ಲ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಸಮಸ್ಯೆಗಳ ದುರ್ಲಾಭ ಪಡೆಯುವದೇ ರಾಜಕಾರಣಿಗಳ ನೀತಿಯಾಗಿದೆ. ಪರಿಸ್ಥಿತಿಯು ಇದೇ ರೀತಿಯಲ್ಲಿ ಮುಂದುವರೆದರೆ, ನಮ್ಮ ಭಾರತವು ಕೊಳಚೆಯ ಗೂಡಾಗುವದರಲ್ಲಿ ಸಂದೇಹವಿಲ್ಲ.
ನಮ್ಮ ನಾಯಕರು ಮಧ್ಯರಾತ್ರಿಯ
ಸಮಯದಲ್ಲಿ ನಿದ್ರಿಸುವ ಅಮಾಯಕ ಜನತೆಯ ಮೇಲೆ (--ಅವರಲ್ಲಿ ಅನೇಕರು ಮಹಿಳೆಯರು--) ಲಾಠೀಚಾರ್ಜ ಮಾಡಿಸುವ
ಮೂಲಕ ತಮ್ಮ ಬಲಪ್ರದರ್ಶನ ಮಾಡುತ್ತಿದ್ದಾರೆ. ರಾಮಲೀಲಾ ಬಯಲಿನಲ್ಲಿ ರಾಮದೇವರ ಶಿಷ್ಯರ ಮೇಲೆ ನಡಿಸಿದ
ಈ ದೌರ್ಜನ್ಯವು ಜಾಲಿಯಾನವಾಲಾ ಬಾಗಿನಲ್ಲಿ ಬ್ರಿಟಿಶರು ನಡೆಸಿದ ದೌರ್ಜನ್ಯಕ್ಕಿಂತ ಯಾವುದರಲ್ಲಿ ಕಡಿಮೆ
ಇದೆ? ಅದರಂತೆ ಜಂತರಮಂತರ ಹಾಗು ಇಂಡಿಯಾ ಗೇಟಿನ ಬಳಿ ವಿದ್ಯಾರ್ಥಿಗಳ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯವು
ಚೀನಾದಲ್ಲಿಯ ಟಿಯಾನಾನ್ಮನ್ ಚೌಕದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ನೆನಪಿಸುತ್ತದೆ. ನಮ್ಮ
ಸರಕಾರದ ನೀತಿಯೆಂದರೆ, ಚಳುವಳಿಗಾರರನ್ನು ಇದೇ ರೀತಿಯಲ್ಲಿ ಸತಾಯಿಸುತ್ತ ಇರಬೇಕು. ಕೊನೆಗೊಮ್ಮೆ ಅವರೇ
ದಣಿದು ತಮ್ಮ ಚಳುವಳಿಯನ್ನು ಸ್ಥಗಿತಗೊಳಿಸುತ್ತಾರೆ! ಇದಕ್ಕೆ ಬಲಶಾಲಿ ನಾಯಕತ್ವ ಎನ್ನುವುದಿಲ್ಲ. ಇದು
ಮಹಾಭಾರತದ ದುರ್ಯೋಧನನ ನೀತಿ. ನಮಗೆ ಬೇಕಾಗಿರುವುದು ಸುಭಾಷಚಂದ್ರ ಭೋಸ ಹಾಗು ವಲ್ಲಭಬಾಯಿ ಪಟೇಲರಂಥವರ
ಸ್ಥೈರ್ಯದ ಗುಣ!
ಇನ್ನು ಮತಬ್ಯಾಂಕನ್ನು ಓಲೈಸುವ ರಾಜಕಾರಣಿಗಳು ಜನಸಂಖ್ಯಾನಿಯಂತ್ರಣದ ಬಗೆಗೆ ಕ್ರಮ ತೆಗೆದುಕೊಳ್ಳುವದಂತೂ ಕನಸಿನ ಮಾತು. ಜನಸಂಖ್ಯೆ ಹೆಚ್ಚಿದಂತೆಲ್ಲ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಸಮಸ್ಯೆಗಳ ದುರ್ಲಾಭ ಪಡೆಯುವದೇ ರಾಜಕಾರಣಿಗಳ ನೀತಿಯಾಗಿದೆ. ಪರಿಸ್ಥಿತಿಯು ಇದೇ ರೀತಿಯಲ್ಲಿ ಮುಂದುವರೆದರೆ, ನಮ್ಮ ಭಾರತವು ಕೊಳಚೆಯ ಗೂಡಾಗುವದರಲ್ಲಿ ಸಂದೇಹವಿಲ್ಲ.