Friday, December 13, 2013

ಅಪಾಯಕಾರಿ ಸ್ವೇಚ್ಛಾಚಾರ



ಸಮಾಜ ಹಾಗು ವ್ಯಕ್ತಿ ಇವುಗಳ ನಡುವಿನ ಸಂಬಂಧದ ಚರ್ಚೆ ಇಂದು ನಿನ್ನೆಯದಲ್ಲ. ವ್ಯಕ್ತಿಯ ಸ್ವಾತಂತ್ರ್ಯ ಅಪರಿಮಿತವಾದದ್ದೊ ಅಥವಾ ಸಮಾಜದ ಅಧಿಕಾರ ಹೆಚ್ಚಿನದೊ ಎನ್ನುವ ತಿಕ್ಕಾಟ ನಡದೇ ಇದೆ. ಸಮಾಜವನ್ನು ತಲ್ಲಣಗೊಳಿಸಿ, ಸಾಮಾಜಿಕ ಸಂಸ್ಥೆಗಳನ್ನು ಛಿದ್ರಗೊಳಿಸುವ ವ್ಯಕ್ತಿಸ್ವಾತಂತ್ರ್ಯವನ್ನು ಅಪಾಯಕಾರಿ ಸ್ವೇಚ್ಛಾಚಾರ ಎಂದೇ ಕರೆಯಬೇಕಾಗುವುದು.

ಸಂತಾನಾಭಿವೃದ್ಧಿಯೇ ರತಿಕ್ರೀಡೆಯ ನೈಸರ್ಗಿಕ ಉದ್ದೇಶ. ಇದು ಸೃಷ್ಟಿಯ ಎಲ್ಲ ಜೀವಿಗಳಿಗೂ ಅನ್ವಯಿಸುತ್ತದೆ. ಆದುದರಿಂದಲೇ ರತಿಕ್ರೀಡೆಯು ಪೂರಕಲಿಂಗಿಗಳಲ್ಲಿ ಮಾತ್ರ ನಡೆಯುತ್ತದೆ. ಇದಕ್ಕೆ ವಿರುದ್ಧವಾದ ರತಿಕ್ರೀಡೆಯು ಅನೈಸರ್ಗಿಕವಾದದ್ದು. ನಿಸರ್ಗದಲ್ಲಿರುವ ಕೆಳ ತರಗತಿಯ ಜೀವಿಗಳಲ್ಲಿ ಸಲಿಂಗರತಿಯನ್ನು ಕಾಣಲು ಸಾಧ್ಯವೇ ಇಲ್ಲ. ಮಾನವ ಪರಿಸರವು ಸಮತೋಲನದ ಬದುಕಿನಿಂದ ದೂರ ಸರಿದಂತೆಲ್ಲ, ಮನೋರೋಗಗಳು ಹೆಚ್ಚಾಗತೊಡಗಿದವು. ಸಲಿಂಗಕಾಮ, ಪಶುರತಿ, ಅತ್ಯಾಚಾರ ಇವೆಲ್ಲ ಮನೋರೋಗದ ಉದಾಹರಣೆಗಳೇ. ಆದುದರಿಂದಲೇ ನಮ್ಮ ಧರ್ಮಶಾಸ್ತ್ರಗಳು ಹಾಗು ನಮ್ಮ ವಿಧಾಯಕರು ಇವನ್ನೆಲ್ಲ ಅಪರಾಧಗಳು ಎಂದು ಸಾರಿದ್ದು.

ಪಾಶ್ಚಾತ್ಯ ದೇಶಗಳಲ್ಲಿ ಸಂಪತ್ತು ತುಂಬಿ ತುಳುಕಾಡುತ್ತಿದೆ ಮತ್ತು ಅಲ್ಲಿಯ ಸಾಮಾಜಿಕ ಕಟ್ಟುಪಾಡುಗಳು ಶಿಥಿಲವಾಗಿವೆ. ಅಲ್ಲಿಯ ನಿವಾಸಿಗಳು ತಮ್ಮ ಆಚಾರವಿಚಾರಗಳೇ ಶ್ರೇಷ್ಠ ಎಂದು ನಂಬಿದ್ದಾರೆ. ಆದುದರಿಂದ ತಮ್ಮಂತೆಯೇ ಇತರ ದೇಶಗಳೂ ಆಚರಿಸಬೇಕು ಎನ್ನುವ ಅಹಮ್ಮು ಅವರಿಗಿದೆ. ಅದಲ್ಲದೆ ತಮ್ಮ ದೇಶವಾಸಿಗಳು ಪರದೇಶಗಳಿಗೆ ಪ್ರವಾಸ ಕೈಗೊಂಡಾಗ, ಸಲಿಂಗಕಾಮದ ಅಪರಾಧದಲ್ಲಿ ಸಿಲುಕಬಾರದು ಎನ್ನುವ ದುರುದ್ದೇಶವೂ ಅವುಗಳಿಗೆ ಇದೆ. ಆದುದರಿಂದ ‘ಮಾನವ ಹಕ್ಕುಗಳು’ ಎನ್ನುವ ಸೋಗಿನಲ್ಲಿ ಇತರ ದೇಶಗಳ ಮೇಲೆ ಅವು ಅನೈಸರ್ಗಿಕ ರತಿಯನ್ನು ಹೇರುತ್ತಿವೆ. ಆದುದರಿಂದಲೇ ಬಡದೇಶಗಳಿಗೆ ನೆರವು ನೀಡುವ ಸಂದರ್ಭದಲ್ಲಿ ಈ ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳು  ‘ಮಾನವ ಹಕ್ಕುಗಳ ಪಾಲನೆ’ಯನ್ನು ಒಂದು ಶರತ್ತನ್ನಾಗಿ ಮಾಡುತ್ತಿವೆ. ಮಾನವ ಹಕ್ಕುಗಳ ಪಾಲನೆಯಲ್ಲಿ ಸಲಿಂಗಕಾಮವನ್ನೂ ಸಹ ಅವು ಸೇರಿಸಿವೆ. ಆಫ್ರಿಕಾ ಖಂಡದಲ್ಲಿರುವ ಮಾಲವಿ ಎನ್ನುವ ಬಡರಾಷ್ಟ್ರಕ್ಕೆ ಇಂಗ್ಲಂಡ ತಾನು ಕೊಡಮಾಡುತ್ತಿದ್ದ ೧೯ ಮಿಲಿಯನ್ ಪೌಂಡ್ ನೆರವನ್ನು ಇಂತಹ ಮಾನವ ಹಕ್ಕುಗಳ ನೆವದಲ್ಲಿಯೇ ನಿರಾಕರಿಸಿತು.

 ಇದೇ ಉದ್ದೇಶದಿಂದಲೇ ೧೯೭೩ನೆಯ ಇಸವಿಯಲ್ಲಿ  ಅಮೇರಿಕಾದ ಮನೋರೋಗ ವಿಜ್ಞಾನಿಗಳ ಮಂಡಳಿಯು ತನ್ನ ಕೈಪಿಡಿಯಿಂದ ಸಲಿಂಗಕಾಮವನ್ನು ತೆಗೆದು ಹಾಕಿತು. ಆದರೆ ಅಲ್ಲಿಯ ಅನೇಕ ಮನೋರೋಗವಿಜ್ಞಾನಿಗಳು ಗುಟ್ಟಿನಲ್ಲಿಯೇ ಆಗಲಿ, ಸಲಿಂಗಕಾಮವನ್ನು ಮನೋರೋಗವೆಂದೇ ಪರಿಗಣಿಸುತ್ತಾರೆ ಹಾಗು ಆ ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ.

ಈ ಸಲಿಂಗಕಾಮಿಗಳಿಗೆ ‘ಅಲ್ಪಸಂಖ್ಯಾತರು’ ಎನ್ನುವ ನಾಮಕರಣ ಮಾಡಿ, ಆ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳು ಎಂದು ವಿಶ್ಲೇಷಿಸುವ ಬುದ್ಧಿವಂತಿಕೆಯೊಂದು ಪ್ರಾರಂಭವಾಗಿದೆ. ಸ್ವಾಮಿ, ನಿಜವಾದ ಅಲ್ಪಸಂಖ್ಯಾತರ ಒಳ್ಳೆಯ ವೈಶಿಷ್ಟ್ಯಗಳನ್ನು ಉಳಿಸಿ, ಬೆಳೆಯಿಸುವ ಉದ್ದೇಶದಿಂದ ಅವರಿಗೆ ವಿಶೇಷ ಸೌಲಭ್ಯ ನೀಡಬೇಕೆ ಹೊರತು, ದುರಾಚಾರಗಳನ್ನು ಹರಡುವದಕ್ಕಾಗಿ ಅಲ್ಲ. ಈ ತರ್ಕವನ್ನೇ ಮುಂದುವರೆಸಿದರೆ, ಕಳ್ಳರು, ಸುಳ್ಳರು, ಅತ್ಯಾಚಾರಿಗಳು, ಲಂಚಬಡಕರು ಎಲ್ಲರೂ ಅಲ್ಪಸಂಖ್ಯಾತರೇ ಆಗುವರು.  (ಹೌದೆ?)

ವ್ಯಕ್ತಿಸ್ವಾತಂತ್ರ್ಯದ ಪರಮಾಧಿಕಾರವನ್ನು ಸಾರುವ ಬುದ್ಧಿಜೀವಿಗಳು ಹೆರಯಿನ್ ಮೊದಲಾದ ಮಾದಕದ್ರವ್ಯಗಳ ಸೇವನೆಯನ್ನೂ ಸಹ ವ್ಯಕ್ತಿಸ್ವಾತಂತ್ರ್ಯ ಎಂದು ಹೇಳಬೇಕಲ್ಲವೆ?  ಪಾಶ್ಚಾತ್ಯ ರಾಷ್ಟ್ರಗಳಿಗೆ ಈ ಮಾದಕದ್ರವ್ಯಗಳ ಸೇವನೆ ಬೇಡವಾಗಿದೆ. ಅಲ್ಲಿ ಅವುಗಳನ್ನು ನಿಷೇಧಿಸಿದ ಕಾರಣದಿಂದಲೇ, ನಮ್ಮಲ್ಲಿಯ ಬುದ್ಧಿಜೀವಿಗಳು ಈ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರುವದು.
ಅಂದರೆ ಅಲ್ಲಿ ಸಲ್ಲುವುದು ಮಾತ್ರ ಇಲ್ಲಿ ಸಲ್ಲುವುದು ಎಂದಂತಾಯಿತಲ್ಲವೆ?

ಈ ವಿಷಯದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ವಿರುದ್ಧ ಈ ‘ಅಲ್ಪಸಂಖ್ಯಾತ’ರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ರಾಜಕಾರಣಿಗಳೂ ಸಹ ಸರ್ವೋಚ್ಚ ನ್ಯಾಯಾಲಯವು ತಪ್ಪು ಮಾಡಿದೆ ಎನ್ನುವ ಹೇಳಿಕೆ ಕೊಟ್ಟು ‘ದೊಡ್ಡ ಮನುಷ್ಯ’ರಾಗುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವು “ಸಲಿಂಗಕಾಮವನ್ನು ಸಕ್ರಮಗೊಳಿಸುವ ಶಾಸನವನ್ನು ಮಾಡುವ ಅಧಿಕಾರ ತನಗಿಲ್ಲ. ಅದನ್ನು ಲೋಕಸಭೆ ಮಾಡಬಹುದು” ಎಂದಷ್ಟೇ ಹೇಳಿದೆ. ಹಾಗಿದ್ದಾಗ, ‘ಅಲ್ಪಸಂಖ್ಯಾತ’ರು ಹಾಗು ಕೆಲವು ರಾಜಕಾರಣಿಗಳು (ಜನಪ್ರಿಯತೆಗಾಗಿ) ಸರ್ವೋಚ್ಚ ನ್ಯಾಯಾಲಯವನ್ನು ಹೀಗಳೆಯುತ್ತಿರುವುದು ತಪ್ಪಲ್ಲವೆ? 

ಕೊನೆಯದಾಗಿ ಹೇಳಬೇಕೆಂದರೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ, ಆರೋಗ್ಯವಂತರಾದ ಬಹುಸಂಖ್ಯಾತರು ಬೇಕಾಗುವರೇ ಹೊರತು ಅಲ್ಪಸಂಖ್ಯಾತರ ಸೋಗಿನ ಮನೋರೋಗಿಗಳಲ್ಲ. ಇಂತಹವರನ್ನು ಕರುಣೆಯಿಂದ ನೋಡಿ, ಇವರ ಮನೋರೋಗಕ್ಕೆ ಚಿಕಿತ್ಸೆ ನೀಡುವುದೇ ಒಳ್ಳೆಯದು.

Friday, December 6, 2013

ಇಲಸ್ಟ್ರೇಟೆಡ್ ವೀಕ್ಲಿ ಆ*ಫ್ ಇಂಡಿಯಾ……..ನೆನಪುಗಳು



ಭಾರತ ಆಂಗ್ಲಭಾಷಾ ಪತ್ರಿಕೆಗಳಲ್ಲಿ The Illustrated Weekly of Indiaಕ್ಕೆ ಮಹತ್ವದ ಸ್ಥಾನವಿದೆ. ೧೮೯೦ರಿಂದ Times of India ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಾಗಿ ಪ್ರಕಟವಾಗುತ್ತಿದ್ದ ಈ ಪತ್ರಿಕೆ, The Illustrated Weekly of India ಎನ್ನುವ ಹೆಸರನ್ನು ಪಡೆದದ್ದು ೧೯೨೩ರಲ್ಲಿ. ೧೯೯೩ರಲ್ಲಿ ಈ ಪತ್ರಿಕೆ ಮುಚ್ಚಿತು. ಆ ಕಾಲದಲ್ಲಿ  ಇಂಗ್ಲಿಶ್ ಪತ್ರಿಕೆಗಳ ಸಂಖ್ಯೆಯೇ ವಿರಳವಾದದ್ದರಿಂದ ಈ ಪತ್ರಿಕೆ ಸುಮಾರಾಗಿ ಜನಪ್ರಿಯವಾಗಿತ್ತು ಹಾಗು ಇಂಗ್ಲಿಶ್ ಓದುಗರಿಗೆ ಅನಿವಾರ್ಯವಾದ ಪತ್ರಿಕೆಯಾಗಿತ್ತು. ಈ ಪತ್ರಿಕೆಯಲ್ಲಿ ಪ್ರಕಟವಾದ ಕೆಲ ಲೇಖನಗಳು ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿವೆ. ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ:

(೧) ಮುಂಬಯಿಯ ಕೊಳೆಗೇರಿಗಳ ನಿವಾಸಿಗಳನ್ನು ಸಂಘಟಿತ ಗುಂಡಾಗಳು ಶೋಷಿಸುವುದು ಹೊಸತೇನಲ್ಲ. ಪ್ರಧಾನಿ ಇಂದಿರಾ ಗಾಂಧಿಯವರು  ಫಕರುದ್ದೀನ ಅಲಿ ಅಹಮದ ಇವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದಾಗಲೂ ಸಹ (೧೯೭೪- ೧೯೭೭) ಈ ಶೋಷಣೆ ನಡೆಯುತ್ತಲೇ ಇತ್ತು. ಅದಕ್ಕಾಗಿ ಯಾರನ್ನೂ ನಾನು ದೂರುತ್ತಿಲ್ಲ. ಆದರೆ ಈ ಅವಧಿಯಲ್ಲಿ ಸಾಮಾಜಿಕ ಒಳಿತಿಗೆ ಬದ್ಧಳಾದ ಓರ್ವ ಅಮಾಯಕ ಯುವತಿಯ ಬರ್ಬರ ಹತ್ಯೆಯ ಬಗೆಗೆ ಓದಿದ ಬಳಿಕ ನನ್ನ ಜೀವ ಹಿಂಡಿ ಹೋಯಿತು. ಈ ಪ್ರಕರಣದಲ್ಲಿ ನಾವು ಯಾರನ್ನು ದೂರಬೇಕು ಎನ್ನುವುದೇ ತಿಳಿಯುವದಿಲ್ಲ.  The Illustrated Weekly of Indiaದಲ್ಲಿ ಪ್ರಕಟವಾದ ಆ ಪ್ರಕರಣ ಹೀಗಿದೆ:

ಸಮಾಜಶಾಸ್ತ್ರ ವಿಷಯದಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ಓರ್ವ ಹುಡುಗಿಗೆ ತನ್ನ ಅಧ್ಯಯನದ ಕಾರಣಗಳಿಂದಾಗಿ ಸಂಘಟಿತ ಗುಂಡಾಗಳ ಬಗೆಗೆ ಒಂದಿಷ್ಟು ಮಾಹಿತಿ ದೊರೆಯುತ್ತದೆ.  ದೊರೆತ ಮಾಹಿತಿಯನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಸುಮ್ಮನೆ ಕೂತಿದ್ದರೆ ಈ ಹುಡುಗಿ ಜಾಣಳಾಗುತ್ತಿದ್ದಳು. ಆದರೆ ಈ ದಡ್ಡ ಹುಡುಗಿ ಭಾರತದ ರಾಷ್ಟ್ರಪತಿಗಳಿಗೆ ಒಂದು ‘ರಹಸ್ಯ ಪತ್ರ’ವನ್ನು ಬರೆಯುತ್ತಾಳೆ. ಮುಂದೆ ಏನಾಯಿತು, ಅಂತೀರಾ? ಆ ಗುಂಡಾಗಳನ್ನು ಬಂಧಿಸಲು ರಾಷ್ಟ್ರಪತಿಯವರು ಆದೇಶ ಕಳುಹಿಸಿದರೆ? ಆ ಗುಂಡಾ ಧಂಧೆ ಬಂದಾಗಿ ಹೋಯಿತೆ? No… ಈ ‘ರಹಸ್ಯ ಪತ್ರ’ ಬರೆದ ಕೆಲವೇ ದಿನಗಳಲ್ಲಿ ಆ ಹುಡುಗಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಯಿತು. ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಈ ಹುಡುಗಿಯ ಮೊದಲಿನ ಫೋಟೋ ಹಾಗು ಚಿತ್ರಹಿಂಸೆಯ ನಂತರದ ಫೋಟೋವನ್ನು ಅಕ್ಕಪಕ್ಕದಲ್ಲಿ ಪ್ರಕಟಿಸಲಾಗಿತ್ತು. ಕರಳು ಹಿಂಡುವ ದೃಶ್ಯ.

ವಿಷಯ ಅದಲ್ಲ. ‘ರಹಸ್ಯ ಪತ್ರ’ದಲ್ಲಿದ್ದ ಮಾಹಿತಿ ಗುಂಡಾಗಳಿಗೆ ತಕ್ಷಣದಲ್ಲಿ ತಿಳಿದದ್ದು ಹೇಗೆ? ರಾಷ್ಟ್ರಪತಿಯವರ ಅಧಿಕಾರಿಗಳು ಇದನ್ನು ಬಯಲು ಮಾಡಿದರೆ? ಹಾಗಿದ್ದರೆ, ರಾಷ್ಟ್ರಪತಿಗಳು ಆ ನೀಚರ ಮೇಲೆ ಕ್ರಮ ಕೈಗೊಂಡರೆ? ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಇದರ ಬಗೆಗೆ ಏನೂ ಮಾಹಿತಿ ಇರಲಿಲ್ಲ. ಆ ಎರಡು ಫೋಟೋಗಳನ್ನು ನೆನಸಿಕೊಂಡಾಗ, ಈಗಲೂ ನನಗೆ ಕಣ್ಣೀರು ಬರುವುದು ನಿಂತಿಲ್ಲ.

(೨) ಭಾರತವು ಧರ್ಮನಿರಪೇಕ್ಷ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ
            (ಅ) ಭಾರತೀಯ ಶಾಸನಗಳು ಧರ್ಮನಿರಪೇಕ್ಷವಾಗಿವೆ.
            (ಆ) ಭಾರತೀಯ ನ್ಯಾಯದಾನವು ಧರ್ಮನಿರಪೇಕ್ಷವಾಗಿದೆ.
ಎಲ್ಲಾ ದೇಶಗಳಲ್ಲಿ ನಾವು ಇಂತಹ ಸ್ಥಿತಿಯನ್ನು ಕಾಣುವದಿಲ್ಲ. ಇಲಸ್ಟ್ರೇಟೆಡ್ ವೀಕ್ಲಿಯು ಪ್ರಕಟಿಸಿದ ಒಂದು ಲೇಖನವು ಕೊಲ್ಲಿ ದೇಶಗಳ ಶಾಸನ ಹಾಗು ನ್ಯಾಯದಾನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

ಕೊಲ್ಲಿ ದೇಶದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕನ ಮೇಲೆ, ಅಕಸ್ಮಾತ್ತಾಗಿ ವಾಹನವೊಂದು ಚಲಿಸಿ, ಆ ಕಾರ್ಮಿಕ ಸಾವನ್ನಪ್ಪುತ್ತಾನೆ. ನ್ಯಾಯಾಲಯವು “ಈತ ಭಾರತೀಯನಾದುದರಿಂದ ಇಷ್ಟೇ ಪರಿಹಾರ ಸಾಕು” ಎನ್ನುವ ತೀರ್ಪನ್ನು ನೀಡುತ್ತದೆ. ಅಷ್ಟರಲ್ಲಿಯೇ ಈತನು ಹಿಂದು ಧರ್ಮದವನು ಎನ್ನುವುದು ಗೊತ್ತಾದಾಗ, ಪರಿಹಾರದಲ್ಲಿ ಮತ್ತೆ ಒಂದು ಮೂರಾಂಶವನ್ನು ಕಡಿತಗೊಳಿಸಲಾಗುತ್ತದೆ.

ಪುಣ್ಯಕ್ಕೆ ನಮ್ಮಲ್ಲಿ ಹಾಗಿಲ್ಲ. ಭಾರತೀಯ ನ್ಯಾಯವ್ಯವಸ್ಥೆಯು ದೇಶ ಹಾಗು ಧರ್ಮಗಳ ಆಧಾರದ ಮೇಲೆ ಭೇದವನ್ನು ಮಾಡುವುದಿಲ್ಲ. ಇನ್ನು ಮುಂದೆಯೂ ಸಹ ಅದು ಹಾಗೆ ಉಳಿದೀತೆ? ಈ ಸಂದೇಹಕ್ಕೆ ಕಾರಣವೇನೆಂದರೆ ಕೇಂದ್ರಸರಕಾರವು ಪ್ರಸ್ತಾವಿಸುತ್ತಿರುವ ‘ಜಾತೀಯ ಹಿಂಸಾಚಾರದ ಮಸೂದೆ.’ ಬಹುಶಃ ಇದು ಚುನಾವಣಾ-ಡೊಂಬರಾಟ ಇರಬಹುದು ಎಂದುಕೊಳ್ಳೋಣ. ಒಂದು ವೇಳೆ ಇದು ಶಾಸನವಾದರೆ, ನಮ್ಮ ಜಾತ್ಯತೀತತೆಯು ಅಲ್ಲಿಗೆ ಶಾಸನಬದ್ಧವಾಗಿ ಅಂತ್ಯಗೊಂಡಂತೆ!

(೩) ಯೇಶು ಕ್ರಿಸ್ತನ ಜನನದ ಬಗೆಗೆ ‘ವೀಕ್ಲಿ’ಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಕೆಲವು ಸಂಶೋಧಕರು ಯೇಶು ಯಹೂದಿ ವೇಶ್ಯೆಯೊಬ್ಬಳಿಗೆ ರೋಮನ್ ನಾವಿಕನಲ್ಲಿ ಹುಟ್ಟಿದ ಮಗ ಎಂದು ಬರೆದದ್ದನ್ನು ಅಲ್ಲಿ ಪ್ರಸ್ತಾವಿಸಲಾಗಿತ್ತು. ಆ ಲೇಖನದ ವಿರುದ್ಧ ಭಾರತದಲ್ಲೇ ಅಗಲಿ, ಯುರೋಪ ಅಥವಾ ಅಮೆರಿಕಾದಲ್ಲಿಯೇ ಆಗಲಿ, ಆ ಸಮಯದಲ್ಲಿ ಯಾವುದೇ ಪ್ರತಿಭಟನೆ ಆಗಲಿಲ್ಲ. ಈಗಲಾದರೋ ಎಂತೆಂಥಾ ಕಾರಣಗಳಿಗಾಗಿ ನಮ್ಮ ಜನ ಪ್ರತಿಭಟನೆ ಮಾಡುತ್ತಿದ್ದಾರೆ! ಬಂಜಗೆರೆಯವರು ಬಸವಣ್ಣನ ಬಗೆಗೆ ಬರೆದ ಸಂಶೋಧನಾ ಲೇಖನದ ವಿರುದ್ಧ, ಗಣಪತಿಯ ಅನಾರ್ಯತ್ವದ ವಿರುದ್ಧ, ಡ್ಯಾನ್ ಬ್ರೌನನ ‘ಡಾ ವಿಂಚಿ ಕೋಡ್’ ಕಾದಂಬರಿಯ ವಿರುದ್ಧ….!

ಹದಿನೆಂಟನೆಯ ಶತಮಾನದಲ್ಲಿ ಬದುಕಿದ್ದ ಫ್ರೆಂಚ ಸಾಹಿತಿ ವೋಲ್ಟೇರನ ವಿಚಾರವನ್ನು ಪ್ರಜ್ಞಾವಂತ ಭಾರತೀಯರೇ (ಜ್ಞಾನಪೀಠಿಗಳನ್ನು ಒಳಗೊಂಡು) ಮರೆಯುತ್ತಿರುವುದು ಸೋಜಿಗದ ಸಂಗತಿ: “ನೀನು ಹೇಳುವುದನ್ನು ನಾನು ಒಪ್ಪುವುದಿಲ್ಲ. ಆದರೆ ಹಾಗೆ ಹೇಳಲು ನಿನಗಿರುವ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ.”
ಈಗಿನ ನಮ್ಮ ಭಾರತೀಯ ‘ನಾಗರಿಕರು’ ವಿರೋಧಿಗಳ ಜೀವ ತೆಗೆಯುವುದನ್ನೇ ಇಷ್ಟಪಡುತ್ತಾರೆ! (ಗಿರೀಶ ಕಾರ್ನಾಡರು ಮುಂಬಯಿಯ ಅಂತರರಾಷ್ಟ್ರೀಯ ಸಾಹಿತ್ಯಮೇಳದಲ್ಲಿ ಸಲ್ಮಾನ ರಶ್ದಿಯ ವಿರುದ್ಧ ಕೆಂಡ ಕಾರಿದ್ದನ್ನು ನೆನಪಿಸಿಕೊಳ್ಳಿರಿ.)

ಈ ಸಂದರ್ಭದಲ್ಲಿ ನಮ್ಮ ಸಂವೇದನೆಗಳು ಸೀಮಿತವಾಗುತ್ತಿರುವುದನ್ನೂ ಸಹ ನಾವು ಲಕ್ಷಿಸಬೇಕು. ಯಾವುದೋ ಒಂದು ಧರ್ಮದ ಪ್ರಾರ್ಥನಾ ಮಂದಿರವನ್ನು ಕಿಡಿಗೇಡಿಗಳು ಹಾನಿಗೊಳಿಸಿದಾಗ, ಕೇವಲ ಆ ಸಮುದಾಯದವರಷ್ಟೇ ಪ್ರತಿಭಟನಾ ಮೆರವಣಿಗೆಯನ್ನು ಮಾಡುತ್ತಾರೆ. ಹೀಗೇಕೆ? ಇಂತಹ ದುರುಳ ಕೃತ್ಯವು ಇತರರಲ್ಲಿ ಅಸಮಾಧಾನವನ್ನು ಏಕೆ ಹುಟ್ಟಿಸಬಾರದು? ನಾಗರಿಕರೆನ್ನಿಸಿಕೊಳ್ಳುವವರೆಲ್ಲ ಒಟ್ಟಾಗಿ ಏಕೆ ಪ್ರತಿಭಟಿಸಬಾರದು?

(೪) ಇಲಸ್ಟ್ರೇಟೆಡ್ ವೀಕ್ಲಿಯು ಪ್ರಕಟಿಸಿದ ಒಂದು ನಗೆಹನಿಯು ಅನೇಕ ವರ್ಷಗಳ ಬಳಿಕ ವಿಪರ್ಯಾಸವಾಗಿ ರೂಪಾಂತರಗೊಂಡಿದ್ದು ಆಶ್ಚರ್ಯದ ಸಂಗತಿಯಾಗಿದೆ. ಆ ನಗೆಹನಿ ಹೀಗಿದೆ:
ರಶಿಯಾದಲ್ಲಿ ಮಹಾಕ್ರಾಂತಿ ಜರುಗಿದ ನಂತರ ಕಮ್ಯುನಿಸ್ಟ ಅಧಿಕಾರಿಯೊಬ್ಬನು ಓರ್ವ ಪ್ರಜೆಗೆ ಪ್ರಶ್ನೆ ಕೇಳುತ್ತಿದ್ದಾನೆ.
ಅಧಿಕಾರಿ: ರಶಿಯದ ಮಹಾಕ್ರಾಂತಿ ಜರುಗುವ ಮೊದಲು ನೀನು ಯಾವ ಊರಿನಲ್ಲಿದ್ದಿ?
ಪ್ರಜೆ: ಸೇಂಟ ಪೀಟರ್ಸಬರ್ಗನಲ್ಲಿದ್ದೆ, ಸ್ವಾಮಿ.
ಅಧಿಕಾರಿ: ಕ್ರಾಂತಿ ಜರಗುವ ಅವಧಿಯಲ್ಲಿ?
ಪ್ರಜೆ: ಪೆಟ್ರೋಗ್ರ್ಯಾಡ್‍ನಲ್ಲಿ, ಸ್ವಾಮಿ.
ಅಧಿಕಾರಿ: ಕ್ರಾಂತಿಯ ನಂತರ?
ಪ್ರಜೆ: ಲೆನಿನ್‍ಗ್ರ್ಯಾಡ್‍ನಲ್ಲಿ ಇದ್ದೇನೆ, ಸ್ವಾಮಿ.
ಅಧಿಕಾರಿ: ಈ ಮೂರು ಶಹರಗಳಲ್ಲಿ ನಿನಗೆ ಅತಿ ಮೆಚ್ಚಿಗೆಯಾಗುವ ಊರು ಯಾವುದು?
ಪ್ರಜೆ: ಸೇಂಟ ಪೀಟರ್ಸಬರ್ಗ, ಸ್ವಾಮಿ!
(ಟಿಪ್ಪಣಿ: ಸೇಂಟ ಪೀಟರ್ಸಬರ್ಗ ಎನ್ನುವ ಪಟ್ಟಣದ ಹೆಸರನ್ನು ೧೯೧೪ರಲ್ಲಿ ಪೆಟ್ರೋಗ್ರ್ಯಾಡ್‍ ಎಂದು ಬದಲಾಯಿಸಲಾಯಿತು. ೧೯೨೪ರಲ್ಲಿ ಲೆನಿನ್‍ಗ್ರ್ಯಾಡ್‍ ಎಂದು ಬದಲಾಯಿಸಲಾಯಿತು. !)

ವೀಕ್ಲಿ ಈ ನಗೆಹನಿಯನ್ನು ಪ್ರಕಟಿಸಿ ಸುಮಾರು ೨೦-೨೫ ವರ್ಷಗಳ ನಂತರ ರಶಿಯಾ ದೇಶ glasnost ಹಾಗು perestroikaದ ಪರಿಣಾಮದಿಂದ ಒಡೆದು ತುಂಡಾಯಿತು. ಲೆನಿನ್‍ಗ್ರ್ಯಾಡ್ ಎನ್ನುವ ಹೆಸರನ್ನು ೧೯೯೧ರಲ್ಲಿ ಮತ್ತೊಮ್ಮೆ ಸೇಂಟ ಪೀಟರ್ಸಬರ್ಗ ಎಂದು ಬದಲಾಯಿಸಲಾಯಿತು.
ಎಂತಹ ವಿಪರ್ಯಾಸ!

Friday, October 25, 2013

ನಾಲ್ಕು ಪುಸ್ತಕಗಳ ಬಿಡುಗಡೆ.

ಪ್ರಿಯ ಸ್ನೇಹಿತರೆ,
ನಮ್ಮ ನೆಚ್ಚಿನ ಬ್ಲಾಗರ್ ಶ್ರೀ ಪ್ರಕಾಶ ಹೆಗಡೆ ಹಾಗು ದೇಸಿ ಪ್ರಕಾಶನದ ಒಡೆಯರಾದ ಶ್ರೀ ಸೃಷ್ಟಿ ನಾಗೇಶ ಇವರ ಪರಿಶ್ರಮದ ಫಲವಾಗಿ, ಇದೇ ದಿನಾಂಕ ೩ ನವ್ಹೆಂಬರದಂದು ನಾಲ್ಕು ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ನಿಮಗೆ ಆದರದ ಆಮಂತ್ರಣವನ್ನು ನೀಡುತ್ತಿದ್ದೇನೆ. ದಯವಿಟ್ಟು ಆಗಮಿಸಿ ಸಂತೋಷದ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಬಿನ್ನವಿಸುತ್ತೇನೆ.

ವಂದನೆಗಳು,
ಸುನಾಥ

Sunday, September 22, 2013

ಕವನದಿಂದ ಕವನ ಹುಟ್ಟುವ ಪರಿ

“ ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ | ”

ವಾಲ್ಮೀಕಿಋಷಿಗಳು ಪ್ರಾತಃಕಾಲದಲ್ಲಿ ಸ್ನಾನ, ಆಹ್ನಿಕಾದಿಗಳನ್ನು ಮುಗಿಸಿಕೊಂಡು ನದೀತಟದಿಂದ ಮರಳುವಾಗ, ಬೇಡನೋರ್ವನು ಕ್ರೌಂಚಪಕ್ಷಿಗಳ ಜೋಡಿಗೆ ತನ್ನ ಬಾಣದಿಂದ ಹೊಡೆಯುವದನ್ನು ನೋಡುತ್ತಾರೆ. ಆ ಜೋಡಿಯಲ್ಲಿ ಒಂದು ಪಕ್ಷಿಯು ಜೀವ ಕಳೆದುಕೊಂಡು ಕೆಳಗೆ ಬೀಳುತ್ತದೆ. ಇನ್ನೊಂದು ಪಕ್ಷಿಯು ತನ್ನ ಜೊತೆಯ ಪಕ್ಷಿಯ ಸುತ್ತಲೂ ವಿಲಪಿಸುತ್ತ ಸುತ್ತುತ್ತದೆ.

ವಾಲ್ಮೀಕಿ ಋಷಿಗಳು ಈ ಘಟನೆಯಿಂದ ಉದ್ವಿಗ್ನರಾದಾಗ ಅವರ ಮುಖದಿಂದ ಒಂದು ಉದ್ಗಾರ ಹೊರಡುತ್ತದೆ:
“ಬೇಡನೆ, ಕಾಮಮೋಹಿತವಾದ ಈ ಜೋಡಿಯಲ್ಲಿ ಒಂದನ್ನು ಹತ್ಯೆ ಮಾಡಿದ ನಿನಗೆ ಎಂದಿಗೂ ಶಾಂತಿ ಸಿಗಲಾರದು.” ಭಾರತದ ಆದಿಕವಿ ವಾಲ್ಮೀಕಿಯವರಿಂದ ಹೊರಹೊಮ್ಮಿದ ಪ್ರಥಮ ಶ್ಲೋಕವಿದು. ‘ಶೋಕವೇ ಶ್ಲೋಕರೂಪವನ್ನು ಪಡೆಯಿತು’ ಎಂದು ಈ ನುಡಿಯನ್ನು ವರ್ಣಿಸಲಾಗಿದೆ. ಗೋಪಾಲಕೃಷ್ಣ ಅಡಿಗರೂ ಸಹ “ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು” ಎಂದು ಭಾರತದ ಮೊದಲ ಮಹಾಕಾವ್ಯ ರಾಮಾಯಣವನ್ನು ಬಣ್ಣಿಸಿದ್ದಾರೆ.

ಅನಂತರ ಅನೇಕ ಕವಿಗಳು ರಾಮಾಯಣವನ್ನು ತಮ್ಮದೇ ಆದ ನೋಟದಲ್ಲಿ  ಹಾಗು ತಮ್ಮದೇ ಅದ ಧಾಟಿಯಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ತೊರವೆ ರಾಮಾಯಣದಿಂದ, ಮೊಯಿಲಿರಾಮಾಯಣದವರೆಗೆ ಈ ಸರಣಿ ಸಾಗಿದೆ. ‘ತಿಣಿಕಿದನು ಫಣಿರಾಯ ರಾಮಾಯಣದ ಭಾರದಲಿ’ ಎಂದು ಸಾರಿದ ಕುಮಾರವ್ಯಾಸನು ತನ್ನ ಪೂರ್ವಕವಿಗಳ ಮಾರ್ಗದಲ್ಲಿಯೇ ‘ಮಹಾಭಾರತ’ವನ್ನು ರಚಿಸಿದ್ದಾನೆ.

ಹಾಗಿದ್ದರೆ, ಈ ಕವಿಗಳು ರಚಿಸಿದ ರಾಮಾಯಣ ಅಥವಾ ಮಹಾಭಾರತ ಕಾವ್ಯಗಳು ಅನುಕರಣೆಗಳೆ? ಖಂಡಿತವಾಗಿಯೂ ಅಲ್ಲ! ಬಂಗಾರದ ತುಂಡಿನಿಂದ ಒಬ್ಬ ಅಕ್ಕಸಾಲಿಗನು ಜೋಡೆಳೆಯ ಸರವನ್ನು ಮಾಡಿದರೆ, ಮತ್ತೊಬ್ಬ ಅಕ್ಕಸಾಲಿಗನು ಅದೇ ಬಂಗಾರದ ತುಂಡಿನಿಂದ ಕಮಲಹಾರವನ್ನು ರಚಿಸಬಹುದು. ಮೊದಲನೆಯ ಅಕ್ಕಸಾಲಿಗನು ಎರಡನೆಯವನಿಗೆ ಪ್ರೇರಣೆಯನ್ನು ನೀಡುತ್ತಾನೆ, ಅಷ್ಟೇ. ಇದುವೇ ಕವನದಿಂದ ಕವನ ಹುಟ್ಟುವ ಪರಿ.

ಇಂತಹ ಪ್ರೇರಣೆಯನ್ನು ಪಡೆದ ಕನ್ನಡ ಕವಿಗಳಲ್ಲಿ ವರಕವಿ ಬೇಂದ್ರೆಯವರು ಅಗ್ರಗಣ್ಯರು. ಬೇಂದ್ರೆಯವರದು ಬಹಳ ವಿಸ್ತಾರವಾದ ಹಾಗು ಆಳವಾದ ಅಧ್ಯಯನ. ಈ ಅಧ್ಯಯನದ ಪ್ರಭಾವವನ್ನು ಅವರು ತಮ್ಮ ಅನೇಕ ರಚನೆಗಳಲ್ಲಿ ತೋರಿಸಿದ್ದಾರೆ. ಈ ರೀತಿಯಿಂದ ತಮ್ಮ ಮೇಲೆ ಪ್ರಭಾವ ಬೀರಿದ ಪೂರ್ವಕವಿಗಳನ್ನು ಅಪ್ರತ್ಯಕ್ಷವಾಗಿ ಸ್ಮರಿಸುತ್ತಾರೆ.

ಅವರ ಕವನವೊಂದು ಸರ್ವಜ್ಞನ ಈ ವಚನದಿಂದ ಪ್ರೇರಿತವಾಗಿರುವದನ್ನು ಗಮನಿಸಬಹುದು:
“ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು |
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ |
ನಡುವೆ ಎತ್ತಣದು?  ಸರ್ವಜ್ಞ ||”

ಸರ್ವಜ್ಞನು ಕುಲಭೇದವನ್ನು ಖಂಡಿಸಿ ರಚಿಸಿದ ವಚನವಿದು. ಈಗ ಬೇಂದ್ರೆಯವರ ಕವನವೊಂದನ್ನು (ಬೈರಾಗಿಯ ಹಾಡು) ಗಮನಿಸಿರಿ:
“ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ || ಇಕೋ ನೆಲ…..”

ಸರ್ವಜ್ಞನ ವಚನವು ತ್ರಿಪದಿಯ ಧಾಟಿಯಲ್ಲಿದೆ, ಬೇಂದ್ರೆಯವರ ಕವನದಲ್ಲಿ ಎಂಟು ಸಾಲುಗಳಿವೆ. ಈ ಕಾರಣದಿಂದಾಗಿ ಬೇಂದ್ರೆಯವರ ಕವನದಲ್ಲಿ ಮೂಲ ತಿರುಳಿನ ವಿಸ್ತಾರವಿದೆ. ಆದರೆ ಎರಡೂ ರಚನೆಗಳಲ್ಲಿ, ಭೂಮಿತಾಯಿ ಹಾಗು ಜೀವಜಲ ಇವು ಎಲ್ಲರಿಗೂ ಸಮಾನ ಎನ್ನುವ ಆಶಯವಿದೆ. ಸರ್ವಜ್ಞನು ಕುಲಭೇದವನ್ನು ಪ್ರತ್ಯಕ್ಷವಾಗಿ ಖಂಡಿಸಿದ್ದಾನೆ. ಬೇಂದ್ರೆಯವರು ಮಾನವರೆಲ್ಲರೂ ಒಂದೇ ಎಂದಿದ್ದಾರೆ. ಸರ್ವಜ್ಞನ ಕಾಣ್ಕೆಯನ್ನು ಹಾಗು ಅವನದೇ ಕೆಲವು ಪದಗಳನ್ನು ಬಳಸಿಕೊಂಡು ಬೇಂದ್ರೆಯವರು ಮಾಡಿದ ಬಂಗಾರದ ಒಡವೆಯಿದು! ಇದು ತಮ್ಮ ಪೂರ್ವಕವಿಗಳನ್ನು ಬೇಂದ್ರೆಯವರು ಸ್ಮರಿಸುವ ರೀತಿಯೂ ಹೌದು.

ಭಾರತೀಯ ಕವಿಗಳಷ್ಟೇ ಬೇಂದ್ರೆಯವರಿಗೆ ಈ ರೀತಿಯ ಪ್ರೇರಣೆ ಕೊಟ್ಟಿದ್ದಾರೆ ಎಂದಲ್ಲ. ಆಂಗ್ಲ ನಾಟಕಕಾರ ಶೇಕ್ಸಪಿಯರನ ‘ಕಿಂಗ ಲಿಯರ’ ಎನ್ನುವ ನಾಟಕದಲ್ಲಿ ಪುಟ್ಟದೊಂದು ಹಾಡು ಬರುತ್ತದೆ:
Under the greenwood tree
Who wants to lie with me
Come hither, come hither, come hither.
Here shall he see
No enemy
But winter and rough weather.

ಈಗ ಬೇಂದ್ರೆಯವರ ಕವನವೊಂದನ್ನು ಗಮನಿಸಿರಿ:
“ಮಳೆ ಬರಲಿ, ಚಳಿ ಇರಲಿ, ಬಿಸಿಲು ಕುದಿಸುತಲಿರಲಿ, ಮಂಜು ಸುರಿಯುತಲಿರಲಿ,
ಮುಮ್ಮುಖದ ಋತುಮಾನ ಹೇಗು ಇರಲಿ;  
ನಗುತ ಒಲಿವೆವು ನಾವು, ನಗುತ ಒಲಿಸುವೆವು.”

ಶೇಕ್ಸಪಿಯರನ ಕವನದ ಮನೋಧರ್ಮಕ್ಕೂ, ಬೇಂದ್ರೆಯವರ ಕವನದ ಮನೋಧರ್ಮಕ್ಕೂ ಏನಾದರೂ ಭಿನ್ನತೆ ಇದೆಯೆ?
ಶೇಕ್ಸಪಿಯರನು ತನ್ನ ಕವನದಲ್ಲಿ ಸಾಮರಸ್ಯವನ್ನು ಸೂಚಿಸಲು ನಿಸರ್ಗದ ಪ್ರತೀಕವನ್ನು ಬಳಸಿಕೊಂಡಂತೆ, ಬೇಂದ್ರೆಯವರೂ ತಮ್ಮ ಕವನದಲ್ಲಿ ಋತುಮಾನದ ಪ್ರತೀಕವನ್ನು ಬಳಸಿಕೊಂಡಿದ್ದಾರಲ್ಲವೆ?

ಬೇಂದ್ರೆಯವರು ತಮ್ಮ ಕವನಗಳಲ್ಲಿ ಯಾರದೇ ಅನುಕರಣೆಯನ್ನು ಮಾಡಿಲ್ಲ. ಆದರೆ ಅವರ ಪ್ರತಿಭೆಯು ತಾನು ಕಂಡದ್ದನ್ನು, ಹಾಗು ತಾನು ಉಂಡದ್ದನ್ನು ಅರಗಿಸಿಕೊಂಡು, ಮತ್ತೊಂದು ಪ್ರಸಂಗದಲ್ಲಿ, ತನ್ನದೇ ರೀತಿಯಲ್ಲಿ ಮರುಸೃಷ್ಟಿಸಿ ಕನ್ನಡಿಗರಿಗೆ ನೀಡಿದೆ. ಇದನ್ನೇ ಕವನದಿಂದ ಕವನ ಹುಟ್ಟುವ ಪರಿ ಎಂದು ಹೇಳಬಹುದು.

ಯೇಟ್ಸ ಕವಿಯ “Crazy Jane talks with the Bishop” ಎನ್ನುವ ಕವನಕ್ಕೂ ಬೇಂದ್ರೆಯವರ ಕವನವೊಂದಕ್ಕೂ ಇರುವ ಸಾಮ್ಯ, ವೈಷಮ್ಯಗಳನ್ನು ಗಮನಿಸಿರಿ. ಯೇಟ್ಸನ ಕವನವನ್ನು ಇಲ್ಲಿ ನೋಡಬಹುದು. ಇನ್ನು ಬೇಂದ್ರೆಯವರ ಕವನದ ಮೊದಲ ಸಾಲುಗಳು ಹೀಗಿವೆ:
“ಗುಡಿಯ ಮಡಿಯ ಪೂಜಾರರಣ್ಣ ನರ್ತಕಿಗೆ ನುಡಿದ ನೊಂದು
‘ಎಲೆ ದುಷ್ಟೆ, ನಷ್ಟೆ, ನೀ ಪ್ರಾಯದವರನು ಬೇಟೆಯಾಡುವೆಯೆ’ ಎಂದು.
‘ಹೌದು ದೊರೆಯೆ, ನಾ ಬಿಚ್ಚುಮೊಗ್ಗೆ, ನನಗಿಲ್ಲ ಸೆರಗು ಮುಚ್ಚು,
ತೆರೆದ ಪುಸ್ತಕವು ನನ್ನ ಬಾಳು, ನಿಮಗೇನೊ ಬೇರೆ ಹುಚ್ಚು!’”

ಯೇಟ್ಸನ ಕವನದಲ್ಲಿ ವೇಶ್ಯೆಯೋರ್ವಳಿಗೆ ಬಿಶಪ್ ಹೇಳುವ ಮಾತುಗಳು ಹಾಗು ಬೇಂದ್ರೆಯವರ ಕವನದ ಪೂಜಾರಿಯು ನರ್ತಕಿಗೆ ಹೇಳುವ ಮಾತುಗಳು ಒಂದೇ ಆಗಿವೆ. ಯೇಟ್ಸನ ವೇಶ್ಯೆ ಹಾಗು ಬೇಂದ್ರೆಯವರ ನರ್ತಕಿ ಇವರು ಕೊಡುವ ಉತ್ತರಗಳ ತಿರುಳು ಒಂದೇ. ಆದರೆ ಯೇಟ್ಸನ ವೇಶ್ಯೆಯ ಉತ್ತರದಲ್ಲಿ ಆಕ್ರೋಶವಿದೆ. ಬೇಂದ್ರೆಯವರ ನರ್ತಕಿಯ ಉತ್ತರದಲ್ಲಿ resignation ಇದೆ. ಯೇಟ್ಸನ ವೇಶ್ಯೆಯು “.... love has pitched his mansion in the place of excrement” ಎಂದು ಕೊನೆಯಲ್ಲಿ ಹೇಳುವಾಗ ಸ್ಫೋಟಿಸುತ್ತಾಳೆ. ಬೇಂದ್ರೆಯವರ ನರ್ತಕಿಯು “ತೆರೆದ ಪುಸ್ತಕವು ನನ್ನ ಬಾಳು, ನಿಮಗೇನೊ ಬೇರೆ ಹುಚ್ಚು!’” ಎಂದು ಉಸುರುವಾಗ, “ನನ್ನದು ಬಹಿರಂಗವಾದ ಕಾಮವ್ಯಾಪಾರವಾದರೆ, ನಿಮ್ಮದು ಅಂತರಂಗದಲ್ಲಿರುವ ಕಾಮವ್ಯಾಪಾರ” ಎಂದು ಮುಸುಕಿನ ಗುದ್ದು ಕೊಡುತ್ತಾಳೆ!

ಯೇಟ್ಸ ಕವಿಯ ಇದೇ ಕವನದಿಂದ ಪ್ರೇರಣೆ ಪಡೆದು ರಚಿಸಿದ ಒಂದು ಕವನವು ಇಲ್ಲಿದೆ. ಇದನ್ನು ರಚಿಸಿದವರು ಸ್ವರ್ಣಾ. ಅವರ ಕವನ ಇಲ್ಲಿದೆ: http://subbajji.blogspot.in/2013/08/blog-post_29.html

Sunday, September 15, 2013

`ನ ಹನ್ಯತೆ’……….ಮೈತ್ರೇಯಿದೇವಿ



ಪ್ರಸ್ತಾವನೆ:
ಮೈತ್ರೇಯಿದೇವಿಯವರು (೧೯೧೪-೧೯೯೦) ಬಂಗಾಲದ ಸುಪ್ರಸಿದ್ಧ ಲೇಖಕಿ. ಇವರು ಹದಿನೈದು ವರ್ಷದವರಿದ್ದಾಗಲೆ ಇವರ ಮೊದಲ ಕವನಸಂಕಲನ ‘ಉದಿತಾ’ದ ಪ್ರಕಟಣೆಯಾಯಿತು. ಈ ಕವನಸಂಕಲನಕ್ಕೆ ರವೀಂದ್ರನಾಥ ಠಾಕೂರರು ಮುನ್ನುಡಿಯನ್ನು ಬರೆದಿದ್ದಾರೆ. ಇದಲ್ಲದೆ ಚಿತ್ತಛಾಯಾ, ಹಿರಣ್ಮಯೀ ಪಾಖೀ (ಕವನಸಂಕಲನಗಳು), ಅಚೇನಾ ಚೀನ, ಚೀನೆ ಓ ಜಪಾನೆ, ಮಹಾಸೋವಿಯತ್ (ಪ್ರವಾಸಕಥನ), ಮೈತ್ರೇಯಿದೇವೀರ ಗಲ್ಪ (ಕಥಾಸಂಕಲನ) ಇವು ಇವರ ಪ್ರಸಿದ್ಧ ಕೃತಿಗಳು. ರವೀಂದ್ರನಾಥರ ಬಗೆಗೆ ಇವರು ಬರೆದಿರುವ ಕುಟೀರಬಾಸಿ ರವೀಂದ್ರನಾಥ, ಸ್ವರ್ಗೇರ್ ಕಾಚಾಕಾಚಿ, ರವೀಂದ್ರನಾಥ ಗೃಹೆ ಓ ವಿಶ್ವೆ ಇವು ಇವರ ಜನಪ್ರಿಯ ಕೃತಿಗಳು.

ಮೈತ್ರೇಯಿದೇವಿಯವರ ತಂದೆ ಸುರೇಂದ್ರನಾಥ ದಾಸಗುಪ್ತರು (೧೮೮೭-೧೯೫೨) ಕೋಲಕತ್ತಾ ಹಾಗು ಕೇಂಬ್ರಿಜ್ ವಿಶ್ವವಿದ್ಯಾಲಯಗಳಿಂದ ಡಾ*ಕ್ಟರೇಟ್ ಪದವಿಯನ್ನು ಹಾಗು ರೋಮ್ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದವರು. ಅನೇಕ ಅಂತರರಾಷ್ಟ್ರೀಯ ಧಾರ್ಮಿಕ ಹಾಗು ತತ್ವಶಾಸ್ತದ ಸಮ್ಮೇಳನಗಳಲ್ಲಿ ಭಾಗವಹಿಸಿದವರು. ರವೀಂದ್ರನಾಥ ಠಾಕೂರರಿಗೆ ತುಂಬ ಹತ್ತಿರದವರು ಹಾಗು ರವೀಂದ್ರ-ಸಾಹಿತ್ಯದಲ್ಲಿ ನಿಷ್ಣಾತರು ಎಂದು ಗಣಿಸಲ್ಪಟ್ಟವರು.

೧೯೩೦ರಲ್ಲಿ ಮಿರ್ಚಾ ಇಲಿಯೇಡ (೧೯೦೭-೧೯೮೬) ಎನ್ನುವ ರೋಮಾನಿಯದ ತತ್ವಶಾಸ್ತ್ರದ ವಿದ್ಯಾರ್ಥಿ ದಾಸಗುಪ್ತರಲ್ಲಿ ಸಂಸ್ಕೃತ ಹಾಗು ಭಾರತೀಯ ತತ್ವಶಾಸ್ತ್ರದ ಅಧ್ಯಯನ ಮಾಡಲು ಬರುತ್ತಾನೆ. ದಾಸಗುಪ್ತರು ಅವನಿಗೆ ತಮ್ಮ ಮನೆಯಲ್ಲಿ ವಸತಿಯನ್ನು ಕಲ್ಪಿಸಿಕೊಟ್ಟರಲ್ಲದೆ, ತಮ್ಮ ಮನೆಯಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟರು. ೧೬ ವರುಷದ ಮೈತ್ರೇಯಿ ಹಾಗು ೨೩ ವರುಷದ ಮಿರ್ಚಾ ಜೊತೆಗೂಡಿ, ದಾಸಗುಪ್ತರ ವಾಚನಾಲಯದ ಪುಸ್ತಕಗಳ ಗ್ರಂಥಸೂಚಿಯನ್ನು ತಯಾರಿಸುತ್ತಿದ್ದರು. ಯುರೋಪಿಯನ್ ನಾಗರಿಕತೆಯ ಮಿರ್ಚಾನು ಮೈತ್ರೇಯಿಯ ನಿಕಟ ಸಂಪರ್ಕವನ್ನು ಬಯಸಿದ್ದರಲ್ಲಿ ಅಚ್ಚರಿಯಾಗಲಿಕ್ಕಿಲ್ಲ. ಆಗ ತಾನೇ ತರುಣಾವಸ್ಥೆಯಲ್ಲಿ ಕಾಲಿಡುತ್ತಿದ್ದಂತಹ ಮೈತ್ರೇಯಿಗೆ ಮಿರ್ಚಾನ ಮೇಲೆ ದ್ವಂದ್ವಭಾವವು ಮೂಡಿದ್ದರಲ್ಲಿಯೂ ಅಚ್ಚರಿಯಾಗಲಿಕ್ಕಿಲ್ಲ. ಮೈತ್ರೇಯಿ, ಅವಳ ತಂಗಿ ಹಾಗು ಮಿರ್ಚಾ ಒಮ್ಮೆ ಕೆರೆಯ ದಂಡೆಯ ಮೇಲೆ ತಿರುಗಾಡಲು ಹೋದಾಗ, ಮಿರ್ಚಾ ಅವಳನ್ನು ಬರಸೆಳೆದಪ್ಪಿ ಮುದ್ದಿಸಿದ. ಈ ಪ್ರಸಂಗವು ಬಯಲಾದ ಕ್ಷಣವೇ ದಾಸಗುಪ್ತರು ಮಿರ್ಚಾನನ್ನು ಮನೆಯಿಂದ ಹೊರಗೆ ಕಳಿಸಿದರು. ಆದರೆ ಆಕರ್ಷಣೆ ಹಾಗು ವಿಕರ್ಷಣೆಗಳ ನಡುವೆ ಸಿಲುಕಿದ ಬಾಲೆ ಮೈತ್ರೇಯಿದೇವಿ ಮಾತ್ರ ಈ ಘಟನೆಯಿಂದಾಗಿ ನಲುಗಿ ಹೋದಳು.

ನಾಲ್ಕು ವರ್ಷಗಳ ಬಳಿಕ ಮೈತ್ರೇಯಿಯ ಮದುವೆ ಅವಳಿಗಿಂತ ಹದಿನಾಲ್ಕು ವರ್ಷ ದೊಡ್ಡವರಾದ  ಮನಮೋಹನ ಸೇನ ಎನ್ನುವ ವೈದ್ಯರ ಜೊತೆಗೆ ಜರುಗುತ್ತದೆ. ತುಂಬ ತಿಳಿವಳಿಕೆಯುಳ್ಳ, ತುಂಬ ಒಳ್ಳೆಯವರಾದ ಹಾಗು ಮೈತ್ರೇಯಿಯನ್ನು ತುಂಬ ಪ್ರೀತಿಸುತ್ತಿದ್ದ ಗಂಡನ ಜೊತೆಗೆ ಮೈತ್ರೇಯಿಯ ದಾಂಪತ್ಯಜೀವನ ನಿರುದ್ವೇಗದಿಂದ ಸಾಗುತ್ತದೆ. ಮಕ್ಕಳು, ಮೊಮ್ಮಕ್ಕಳು ಅವಳ ಸಂಸಾರವನ್ನು ತುಂಬುತ್ತಾರೆ.

೧೯೭೨ರಲ್ಲಿ, ಅಂದರೆ ಮೈತ್ರೇಯಿದೇವಿಯವರಿಗೆ ೫೮ ವರ್ಷ ತುಂಬಿದ ಸಮಯದಲ್ಲಿ, ಕೋಲಕತ್ತಾದಲ್ಲಿ ಅಕಸ್ಮಾತ್ತಾಗಿ ಒಬ್ಬ ಯುರೋಪಿಯನ್ ವ್ಯಕ್ತಿಯ ಭೆಟ್ಟಿಯಾಗುತ್ತದೆ. “ಮಿರ್ಚಾ ಏಲಿಯೇಡ್ ಬರೆದ ಪುಸ್ತಕದಿಂದಾಗಿ  ನೀವು ಯುರೋಪ ಖಂಡದಲ್ಲೆಲ್ಲ ತುಂಬ ಪ್ರಸಿದ್ಧರಾಗಿದ್ದೀರಿ” ಎಂದು ಆತ ಹೇಳಿದಾಗ, ಮೈತ್ರೇಯಿದೇವಿಯವರಿಗೆ ಆಶ್ಚರ್ಯವಾಗುತ್ತದೆ.
ಮಿರ್ಚಾ ಎಲಿಯೇಡ್ ಬರೆದ ಪುಸ್ತಕದ ಹೆಸರು: ‘ಮೈತ್ರೇಯಿದೇವಿ’. ಇದನ್ನು ‘ಬಂಗಾಲದ ರಾತ್ರಿಗಳು’ ಎಂದೂ ಕರೆಯಲಾಗಿದೆ.

ಕಥೆ:
ದಾಸಗುಪ್ತರಿಂದ ಹೊರದೂಡಿಸಿಕೊಂಡ ಮಿರ್ಚಾ ಕೆಲವು ಕಾಲ ಹಿಮಾಲಯದಲ್ಲಿ ಸನ್ಯಾಸಿಯಂತೆ ತಿರುಗಾಡುತ್ತಾನೆ. ಈ ಸಮಯದಲ್ಲಿ ಅಲ್ಲಿಯ ಆಧ್ಯಾತ್ಮಕ ಸಾಧಕರ ಜೊತೆಗೆ ನಿಕಟ ಸಂಬಂಧವನ್ನು ಪಡೆಯುತ್ತಾನೆ. ಇದರಿಂದಾಗಿ ಯೋಗ ಹಾಗು ಭಾರತೀಯ ಧರ್ಮಕಲ್ಪನೆಯ ಮೇಲೆ ಕೃತಿಗಳನ್ನು ರಚಿಸಲು ಅವನಿಗೆ ಅನುಕೂಲವಾಗುತ್ತದೆ. ಇದೇನೇ ಆದರೂ ಮೈತ್ರೇಯಿದೇವಿಯ ಮೇಲೆ ಮನಸ್ಸಿಟ್ಟಿದ್ದ ಮಿರ್ಚಾ ‘ಮೈತ್ರೇಯಿದೇವಿ’ ಅಥವಾ ‘ಬಂಗಾಲದ ರಾತ್ರಿಗಳು’ ಎನ್ನುವ ತನ್ನ ಆತ್ಮಚರಿತ್ರೆಯ ರೂಪದ ಕಾದಂಬರಿಯನ್ನು ಬರೆಯುತ್ತಾನೆ. ವಾಸ್ತವಕ್ಕೆ ತೀರ ವಿರುದ್ಧವಾದ ಈ ಕಾದಂಬರಿಯಲ್ಲಿ, ಮೈತ್ರೇಯಿದೇವಿಯ ಬಗೆಗೆ ತನಗೆ ನಿಷ್ಕಾಮ ಪ್ರೇಮವಿತ್ತು, ಆದರೆ ಅವಳೇ ತನ್ನನ್ನು ಕಾಮಶಯ್ಯೆಗೆ ಸೆಳೆದಳು; ಅವಳು ಈ ಮೊದಲೂ ಸಹ ಕನ್ಯೆಯಾಗಿರಲಿಕ್ಕಿಲ್ಲ ಎಂದು ಬರೆದಿದ್ದಾನೆ. ಒಬ್ಬ ಯುರೋಪಿಯನ್ ಅಳಿಯನನ್ನು ಬಯಸುತ್ತಿದ್ದ ದಾಸಗುಪ್ತರು, ತನ್ನ ಮಗಳನ್ನು ಉತ್ತೇಜಿಸುತ್ತಿದ್ದರು ಎಂದೂ ಸಹ ಇದರಲ್ಲಿ ಸೂಚಿಸಲಾಗಿದೆ. ಮದುವೆಯನ್ನು ಅನಿವಾರ್ಯ ಮಾಡುವ ಉದ್ದೇಶದಿಂದ, ಬಸಿರಾಗ ಬಯಸಿದ ಮೈತ್ರೇಯಿ ಮತ್ತೊಬ್ಬ ಕೀಳು ಮನುಷ್ಯನೊಡನೆ ಸಂಗವನ್ನು ಮಾಡಿದಳು ಎಂದೂ ಮಿರ್ಚಾ ಆ ಕಾದಂಬರಿಯಲ್ಲಿ ಬರೆದಿದ್ದಾನೆ. ಸ್ಥಳೀಯ ಸಾಹಿತ್ಯಕ್ಕೆ ರಮ್ಯವಿಲಾಸಿ, ರಂಗೀನ ಕಾದಂಬರಿಯನ್ನು (Exotic novel) ಪರಿಚಯಿಸಿದವನೆಂದು ಮಿರ್ಚಾನಿಗೆ ವಿಮರ್ಶಕರ ಮನ್ನಣೆ ಸಿಗುತ್ತದೆ!

ವ್ಯಥೆ:
ಈ ಪುಸ್ತಕವು ಪ್ರಕಟವಾದ ಸುಮಾರು ೪೦ ವರ್ಷಗಳ ಬಳಿಕ, ಮೈತ್ರೇಯಿದೇವಿಯವರಿಗೆ ಇದು ಓದಲು ಲಭ್ಯವಾಯಿತು. ಅದನ್ನು ಓದಿದ ಮೈತ್ರೇಯಿದೇವಿಯವರು ತನ್ನ ಚಾರಿತ್ರ್ಯಹನನದಿಂದ ಹಾಗು ಆಮೂಲಕ ತನಗೆ ದೊರೆತ ಅಪಖ್ಯಾತಿಯಿಂದ ಆಘಾತಗೊಂಡರು. ಇದರಿಂದ ತುಂಬ ನೊಂದುಕೊಂಡ ಅವರು ೧೯೭೭ರಲ್ಲಿ (-ಅಂದರೆ ಅವರಿಗೆ ೬೩ ವರ್ಷಗಳಾದಾಗ-) ‘ನ ಹನ್ಯತೆ’ ಎನ್ನುವ ಕಾದಂಬರಿರೂಪದ ಕೃತಿಯನ್ನು ರಚಿಸಿದರು. ಆ ಕೃತಿಯಲ್ಲಿ ತನ್ನ ಹಾಗು ಮಿರ್ಚಾನ ನಡುವಿನ ಸಂಬಂಧವನ್ನು ಅವರು ವಿವರಿಸಿದ್ದಾರೆ. ಮಿರ್ಚಾನ ಮೇಲೆ ತನಗೆ ಹದಿಹರೆಯದ ಆಕರ್ಷಣೆ ಇದ್ದದ್ದು ನಿಜ, ಆದರೆ (ಸಾಂಪ್ರದಾಯಕ ಮನೆಯಲ್ಲಿ ಬೆಳೆದ) ತಾನು ಎಂದೂ ನೀತಿಮಾರ್ಗವನ್ನು ಅತಿಕ್ರಮಿಸಲಿಲ್ಲ, ಈಗಲಾದರೂ ಸಹ ಆತನ ಮೇಲೆ ತನಗೆ ಪ್ರೀತಿ ಇದೆ, ಇದು ಮಾನವಪ್ರೀತಿ ಎಂದು ಅವರು ಹೇಳುತ್ತಾರೆ. ಈ ಕಾದಂಬರಿಯಲ್ಲಿ ಮೈತ್ರೇಯಿದೇವಿಯವರು ತನ್ನ ಮನದ ತೊಳಲಾಟವನ್ನು ಬಗೆಬಗೆಯಲ್ಲಿ ಚಿತ್ರಿಸಿದ್ದಾರೆ. ಈ ಕೃತಿಯಲ್ಲಿ ವ್ಯಕ್ತವಾದ  ಅವರ ಭಾಷಾಪ್ರಭುತ್ವವು ಅಚ್ಚರಿ ಮೂಡಿಸುವಂತಹದಾಗಿದೆ.

‘ನ ಹನ್ಯತೇ’ ಇದು ಕಠೋಪನಿಷತ್ತಿನಲ್ಲಿ ಯಮಧರ್ಮನು ನಚಿಕೇತನಿಗೆ ಆತ್ಮದ ಬಗೆಗೆ ಹೇಳುವ ವರ್ಣನೆ:
ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ,
ನ ಹನ್ಯತೇ ಹನ್ಯಮಾನೇ ಶರೀರೇ.
ಶರೀರವು ನಾಶವಾದರೂ ಸಹ ಆತ್ಮವು ನಾಶವಾಗುವುದಿಲ್ಲ.
ಮೈತ್ರೇಯಿದೇವಿಯವರು ‘ಯಾವ ಘಟನೆಯೂ, ಯಾವ ಪ್ರೀತಿಯೂ ನಾಶವಾಗುವುದಿಲ್ಲ; ಅದು ನೆನಪಿನಲ್ಲಿ ಚಿರಸ್ಥಾಯಿ’ ಎನ್ನುವ ಅರ್ಥದಲ್ಲಿ, ಇಲ್ಲಿ ಇದನ್ನು ಶೀರ್ಷಿಕೆಯನ್ನಾಗಿ ಬಳಸಿಕೊಂಡಿದ್ದಾರೆ.

೧೯೮೮ರಲ್ಲಿ ಎಲಿಯೇಡನ ಕಾದಂಬರಿಯನ್ನು ‘Bengali Nights’ ಎನ್ನುವ ಚಲನಚಿತ್ರವನ್ನಾಗಿ ಮಾಡಲಾಯಿತು. ಹ್ಯೂ ಗ್ರ್ಯಾಂಟ ಈ ಚಲನಚಿತ್ರದ ನಾಯಕ ಹಾಗು ಸುಪ್ರಿಯಾ ಪಾಠಕ ನಾಯಕಿ. ಇದೊಂದು ಅಶ್ಲೀಲ ಚಲನಚಿತ್ರವೆಂದು ಪ್ರತಿಭಟನೆಗಳಾದಾಗ, ಭಾರತದಲ್ಲಿ ಇದನ್ನು ನಿಷೇಧಿಸಲಾಯಿತು.

ಕೊನೆಯ ಕಣ್ಣೀರು:
ಮೈತ್ರೇಯಿದೇವಿಯವರು ತಮ್ಮ ಸಾಹಿತ್ಯ ಹಾಗು ಪಾಂಡಿತ್ಯದ ಕಾರಣದಿಂದಾಗಿ ದೇಶವಿದೇಶಗಳ ಮನ್ನಣೆ ಹಾಗು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ನ ಹನ್ಯತೆ’ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

೧೯೭೧ರಲ್ಲಿ ಬಂಗ್ಲಾ ಯುದ್ಧದ ನಿರಾಶ್ರಿತ ಬಾಲಕರಿಗಾಗಿ ಇವರು ‘ಖೇಲಾಘರ’ ಸ್ಥಾಪಿಸಿದರು. ಅಲ್ಲದೆ ‘ಕ್ವೇಕರ್ಸ ಸೊಸಾಯಿಟಿ ಆ*ಫ್ ಫ್ರೆಂಡ್ಸ’ ಹಾಗು ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ಜೊತೆಗೂ ಇವರು ದುಡಿದಿದ್ದಾರೆ. ೧೯೭೭ರಲ್ಲಿ ಭಾರತ ಸರಕಾರವು ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನಿಸಿತು.

ಇತ್ತ ಮಿರ್ಚಾ ಏಲಿಯೇಡ ಸಹ ಯುರೋಪ ಖಂಡದಲ್ಲಿ ತನ್ನ ತಾತ್ವಿಕ ಹಾಗು ಸಾಹಿತ್ಯಕ ಕೃತಿಗಳಿಗಾಗಿ ಮನ್ನಣೆಯನ್ನು ಪಡೆದ. ಎರಡು ಸಲ ಮದುವೆಯನ್ನೂ ಆದ.

ವಾಸ್ತವದಲ್ಲಿ ಸಾಧ್ಯವಾಗದ ಬಯಕೆಗಳನ್ನು ವ್ಯಕ್ತಿಯು ಕನಸಿನಲ್ಲಿ ತೀರಿಸಿಕೊಳ್ಳುತ್ತಾನೆ ಎಂದು ಮನೋಶಾಸ್ತ್ರಜ್ಞ  ಫ್ರಾ*ಯ್ಡ ಹೇಳುತ್ತಾನೆ. ಏಲಿಯಡ್‍ ತನ್ನ ಕನಸುಗಳಲ್ಲಿ ಏನಾದರೂ ಮಾಡಿಕೊಳ್ಳಲಿ, ಆದರೆ ಮೈತ್ರೇಯಿದೇವಿಯ ಜೊತೆಗೆ ಶರೀರಸಂಪರ್ಕ ಸಾಧ್ಯವಾಗಲಿಲ್ಲ ಎನ್ನುವ ರೊಚ್ಚಿನಿಂದ ಅವಳ ಮೇಲೆ ಮಾನಸಿಕ  ಅತ್ಯಾಚಾರವನ್ನು ಹಾಗು ಸಾಹಿತ್ಯಕ ಅಪಪ್ರಚಾರವನ್ನು ಮಾಡಿದ್ದು ಅನ್ಯಾಯದ ಸಂಗತಿ. ಓರ್ವ ಅಮಾಯಕ ಸ್ತ್ರೀಯ ಚಾರಿತ್ರ್ಯಹನನವನ್ನು ಮಾಡಿದ ಮಿರ್ಚಾ ಏಲಿಯಡ್‌ನಿಗೆ ಧಿಕ್ಕಾರವಿರಲಿ!

ಟಿಪ್ಪಣಿ:
‘ನ ಹನ್ಯತೆ’ ಕೃತಿಯನ್ನು ಪ್ರಾಧ್ಯಾಪಕಿ ಗೀತಾ ವಿಜಯಕುಮಾರ ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಸಾಹಿತ್ಯ ಅಕಾಡೆಮಿ, ನವದೆಹಲಿಯಿಂದ ೨೦೦೮ರಲ್ಲಿ ಪ್ರಕಟವಾಗಿದೆ.

Sunday, August 25, 2013

ಹಿಂದs ನೋಡದs (ಒಂದು ಹಳೆಯ ಚಿತ್ರವನ್ನು ಕುರಿತು).......ಬೇಂದ್ರೆ



ಹಿಂದs ನೋಡದs
(ಒಂದು ಹಳೆಯ ಚಿತ್ರವನ್ನು ಕುರಿತು)

ಹಿಂದs ನೋಡದs | ಗೆಳತಿ
               ಹಿಂದs ನೋಡದs

ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…

ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…

ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
…………………………………………………………..

ಹದಿಹರೆಯವು ಪ್ರೇಮಾಕರ್ಷಣೆಯ ಕಾಲವಾಗಿದೆ. ಈ ಅನುಭವವು ಎಲ್ಲರಿಗೂ ಆಗಿರುವಂತಹದೆ. ಬೇಂದ್ರೆಯವರು ಸ್ವತಃ ಈ ಆಕರ್ಷಣೆಯ ಜಾಲದಲ್ಲಿ ಸಿಲುಕಿರಲಿಕ್ಕಿಲ್ಲ. ಅದರೆ ಅಂತಹ ಪ್ರಸಂಗಗಳನ್ನು ಅವರು ಕಂಡಿರಬಹುದು. ಅವರು ರಚಿಸಿದ ಇಂತಹ ಪ್ರೇಮಕವನಗಳು ಬಹುತೇಕವಾಗಿ ನಾಯಿಕಾ-ಪ್ರಧಾನವಾಗಿವೆಯೇ ಹೊರತು ನಾಯಕ-ಪ್ರಧಾನವಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ. ಇದಕ್ಕೆ ಕಾರಣವೇನಿರಬಹುದು? ಹುಡುಗಿಯರು ಹುಡುಗರಿಗಿಂತ ಹೆಚ್ಚು ಭಾವಜೀವಿಗಳು ಎನ್ನುವುದು ಅವರ ಅಭಿಪ್ರಾಯವಾಗಿರಬಹುದೆ? ‘ಹುಡುಗರ ಭಾವನೆಗಳಲ್ಲಿ ವರ್ಣಿಸಲಿಕ್ಕೆ ಏನಿದೆ ಮಣ್ಣು?’ ಎನ್ನುವುದು ಅವರ ಅನಿಸಿಕೆಯಾಗಿರಬಹುದೆ!?



‘ಹಿಂದs ನೋಡದs’ ಎನ್ನುವ ಕವನವು ಹದಿಹರೆಯದಲ್ಲಿ ಆಕರ್ಷಣೆಯ ಜಾಲಕ್ಕೆ ಮೊದಲ ಸಲ ಸಿಲುಕಿದ ಬಾಲೆಯೊಬ್ಬಳ ಭಾವಗೀತೆಯಾಗಿದೆ. ಆದರೆ ಈ ಅನುಭವದ ಅನೇಕ ವರ್ಷಗಳ ನಂತರ ಅವಳು ತನ್ನ ಸಖಿಯಲ್ಲಿ ಈ ಹಳೆಯ ಕತೆಯನ್ನು ಬಿಚ್ಚಿಡುತ್ತಿದ್ದಾಳೆ. ಆ ಕಾರಣದಿಂದಾಗಿಯೇ, ಕವನದ ಶೀರ್ಷಕದ ಕೆಳಗೆ `ಒಂದು ಹಳೆಯ ಚಿತ್ರವನ್ನು ಕುರಿತು’ ಎನ್ನುವ ಸೂಚನೆಯನ್ನು ವರಕವಿಗಳು ನೀಡಿದ್ದಾಳೆ. ಕಾಲವು ನೀರಿನಂತೆ ಹರಿದು ಹೋಗಿದೆ. ಆದರೆ  ಚಿಕ್ಕ ಮಕ್ಕಳು  ತಮ್ಮ ಪುಸ್ತಕದಲ್ಲಿ ನವಿಲುಗರಿಯನ್ನು ಪ್ರೀತಿಯಿಂದ ಇಟ್ಟುಕೊಳ್ಳುವಂತೆ ಈ ಹೆಣ್ಣುಮಗಳು ತನ್ನ ಮೊದಲ ಪ್ರೇಮಾನುಭವವನ್ನು ತನ್ನ ಹೃದಯದಲ್ಲಿ ಕಾಪಿಟ್ಟಿದ್ದಾಳೆ. ಆ ಅನುಭವವನ್ನು ವಾಸ್ತವ ದೃಷ್ಟಿಕೋನದಿಂದ ವಿಶ್ಲೇಷಿಸಿ ಹೇಳುವ ಪ್ರೌಢತೆ ಅವಳಿಗೆ ಈಗ ಬಂದಿದೆ.
……………………………………………………………
`ಹಿಂದs ನೋಡದs | ಗೆಳತಿ
               ಹಿಂದs ನೋಡದs’ ಎನ್ನುವ ಪದಪುಂಜವು ಈ ಕವನದಲ್ಲಿ ೫ ಸಲ ಉಕ್ತವಾಗಿದೆ. ಪ್ರತಿ ಸಲವೂ ಈ ಪದಪುಂಜಕ್ಕೆ ಬೇಂದ್ರೆಯವರು ವಿಭಿನ್ನ ಅರ್ಥವನ್ನೇ ನೀಡಿದ್ದಾರೆ. ‘ಹಿಂದೆ ನೋಡುವುದು’ ಎಂದರೆ ಹಳೆಯದನ್ನು ನೆನಪಿಸಿಕೊಳ್ಳುವುದು. ಸಖಿಯ ಜೊತೆಗೆ ತನ್ನ ಹಳೆಯ ಅನುಭವವನ್ನು ಹಂಚಿಕೊಳ್ಳುತ್ತಿರುವ ನಮ್ಮ ನಾಯಕಿಯು ‘ಹಿಂದs ನೋಡದs’ ಎಂದು ಹೇಳುವುದೇ ಒಂದು ವಿರೋಧಾಲಂಕಾರವಾಗಿದೆ.

ನಮ್ಮ ನಾಯಕಿಯನ್ನು ಈ ಪರಿ ಆಕರ್ಷಿಸಿದ ತರುಣನು ಅವಳಿಗೆ ಅಪರಿಚಿತ. ಅಕಸ್ಮಾತ್ತಾಗಿ ಅವಳಿಗೆ ಜಾತ್ರೆಯಲ್ಲಿ ಅಥವಾ ಒಂದು ಸಾರ್ವಜನಿಕ ಜಾಗದಲ್ಲಿ ಕಂಡವನು. ಅವನನ್ನು ನೋಡಿದ ತಕ್ಷಣ ನಮ್ಮ ನಾಯಕಿಯು ಅವನಿಗೆ ತನ್ನ ಹೃದಯವನ್ನು ಅರ್ಪಿಸಿದಳು. ಆತ ಯಾರು, ಆತನ ಕುಲಗೋತ್ರವೇನು ಇದಾವದನ್ನೂ ಅರಿಯದೆ ಅವನಿಗೆ ಮಾರು ಹೋದ ಹುಡುಗಿ ಇವಳು. ಆದುದರಿಂದಲೇ ತನ್ನ ಸಖಿಗೆ ಇವಳು  ‘ಹಿಂದೆ ಮುಂದೆ ನೋಡದೆ’ ಅವನಿಗೆ ಮರುಳಾದೆ ಎಂದು ಹೇಳುತ್ತಿದ್ದಾಳೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಮೊದಲನೆಯ ಅರ್ಥವಿದು.

ಇವಳ ನೋಟಕ್ಕೆ ಆ ತರುಣನ ಪ್ರತಿಕ್ರಿಯೆ ಏನು?
ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…
ಆತ ಇವಳ ಪ್ರೇಮಕಟಾಕ್ಷವನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಉತ್ತೇಜಿಸುವದಿಲ್ಲ. ಒಂದೇ ಸಲ ಇವಳನ್ನು ನೋಡುತ್ತಾನೆ. ಸಭ್ಯತೆಯ ಸಂಕೇತವೆಂಬಂತೆ ಒಂದು ಮುಗುಳುನಗೆಯನ್ನು ಬೀರಿ ಆತ ಮುನ್ನಡೆಯುತ್ತಾನೆ.  `ಹಾಂಗs ಬೀರಿ’ ಎನ್ನುವಾಗ ‘ತನಗೆ ಈ ಹುಡುಗಿಯೇನೂ ವಿಶೇಷವಲ್ಲ’ ಎನ್ನುವ ಭಾವನೆ ಇದೆ. ಆತ ಅಲ್ಲಿಯೇ ನಿಂತು ಇವಳೊಡನೆ ‘ಕಣ್ಣಾಟ’ವಾಡಬಹುದಾಗಿತ್ತು. ಆದರೆ ಅವನು ಅಂಥವನಲ್ಲ! ಹಾಗಾಗಿ ಆತನು ಹಿಂದೆ ತಿರುಗಿ ಸಹ ನೋಡುವದಿಲ್ಲ. ತನ್ನ ವಿಚಾರಗಳಲ್ಲಿಯೇ ಮಗ್ನನಾದ ಆತನು ಹಾಗೇ ಮುಂದೆ ಹೋಗಿ ಬಿಡುತ್ತಾನೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಎರಡನೆಯ ಅರ್ಥವಿದು.

ಆ ತರುಣನ ಇಂತಹ ಪ್ರತಿಕ್ರಿಯೆಯು ಅವನಲ್ಲಿ ಅವಳಿಗಿರುವ ಸೆಳೆತವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆತ ಕಾಣದಿದ್ದರೇನಾಯಿತು? ಅವಳ ಮನಸ್ಸು ಇಂದ್ರಿಯಾತೀತವಾಗಿ ಅವನ ಹಿಂದೆ ಹೋಗಿದೆಯಲ್ಲವೆ? ಅದನ್ನು ಅವಳು ಹೀಗೆ ಹೇಳುತ್ತಾಳೆ:
ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…
ಹೂವಿನ ಸುಗಂಧವು ಗಾಳಿಯ ಜೊತೆಗೆ ಬೆರೆತು, ಗಾಳಿ ಹೋದಲ್ಲೆಲ್ಲ ಹೋಗುತ್ತದೆ. ಗಾಳಿ ಬೀಸಿದಾಗ ಮೊದಲು ಅದರ ಸ್ಪರ್ಶದ ಅನುಭವ ಆಗುತ್ತದೆ. ಆಬಳಿಕ ಅದರ ಜೊತೆಗಿರುವ ಕಂಪಿನ ಅನುಭವ ಆಗುತ್ತದೆ. ಆದುದರಿಂದ ಸುಗಂಧವು ಗಾಳಿಯನ್ನು ಹಿಂಬಾಲಿಸುತ್ತದೆ.

‘ಹೆಜ್ಜೆ ಹಿಡಿದು ಹೋಗುವುದು’ ಎನ್ನುವುದಕ್ಕೆ ಇರುವ ಒಂದು ವಿಶೇಷ ಅರ್ಥವನ್ನೂ ಸಹ ಇಲ್ಲಿ ಗಮನಿಸಬೇಕು. ಬೇಟೆಗಾರನು ತನ್ನ ಬೇಟೆಯನ್ನು ಹಿಂಬಾಲಿಸುವದಕ್ಕೆ ‘ಹೆಜ್ಜೆ ಹಿಡಿಯುವುದು’ ಎನ್ನುತ್ತಾರೆ. ಅದರಂತೆ ನಮ್ಮ ನಾಯಕಿಯ ಪ್ರೇಮಿಯು ಎಲ್ಲಿಯೇ ಚಲಿಸುತ್ತಿರಲಿ, ಅವಳ ಮನಸ್ಸು ಆತನ ಹೆಜ್ಜೆಯನ್ನು ಕಂಡು ಹಿಡಿದು, ಅವನನ್ನು ಹಿಂಬಾಲಿಸುತ್ತಿದೆ. ಹಾಗೆಂದು ಅವಳ ಆಕರ್ಷಣೆಯ ಬಗೆಗೆ ತಪ್ಪು ತಿಳಿಯಬಾರದು. ಅದು ಸುಗಂಧಮಯ, ಅದು ಸುಮನಸ್ಸು. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಈ ಸುಗಂಧ ಚಲಿಸಲಾರದು. ಅದರ ದಾರಿಯು ನಿಶ್ಚಿತವಾಗಿದೆ. ಇದು ‘ಹಿಂದs ನೋಡದs’  ಎನ್ನುವ ಪದಪುಂಜದ ಮೂರನೆಯ ಅರ್ಥ.

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…
ಹೀಗೆ ಪರವಶಳಾಗಿ ಕುಳಿತಿರುವ ಹದಿಹರೆಯದ ಹುಡುಗಿಯನ್ನು ನೋಡಿದವರು ಏನಂದಾರು?
ಆದರೆ ತನ್ನ ಖಬರೇ ತನಗೆ ಇಲ್ಲದವಳು ಮಂದಿಯ ಮಾತಿಗೆ ಗಮನ ಕೊಡುವಳೆ?
ಅವಳ ಚಿತ್ತವು ಬಾಹ್ಯ ಪರಿಸರದತ್ತ ಗಮನ ಹರಿಸದೇ ತನ್ನ ಅಂತರಂಗದ ಭಾವದಲ್ಲಿಯೇ ತಲ್ಲೀನವಾಗಿ, ಸಮವೇಗದಲ್ಲಿ ನಡೆದಿದೆ. ಅವಳ ಮನಸ್ಸು ಪ್ರೇಮದ ದಾರಿಯಲ್ಲೇ ಮುನ್ನಡೆಯುವುದು. ಇದು ಈ ಪದಪುಂಜದ ನಾಲ್ಕನೆಯ ಅರ್ಥ.

ತನ್ನ ಪ್ರೇಮವು ತಾತ್ಪೂರ್ತಿಕ ಆಕರ್ಷಣೆಯಲ್ಲ. ತನ್ನ ಮನಸ್ಸು ಆ ತರುಣನಲ್ಲಿ ಶಾಶ್ವತವಾಗಿ ನೆಟ್ಟಿದೆ ಎಂದು ಅವಳು ಹೇಳುತ್ತಾಳೆ:
ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
ಸೂಜಿಯಲ್ಲಿ ಸಿಲುಕಿಸಿದ ದಾರವು ಸೂಜಿಯನ್ನೇ ಹಿಂಬಾಲಿಸುವುದು ಅನಿವಾರ್ಯ. ಕೊಳ್ಳದಲ್ಲಿ ಜಾರುವುದು ಒಂದು ಆಕಸ್ಮಿಕ. ಹಾಗೆ ಜಾರಿದ ವ್ಯಕ್ತಿ ಮತ್ತಿಷ್ಟು ಜಾರುತ್ತ ಹೋಗುವುದೇ ಸಹಜವಾದದ್ದು. ನಮ್ಮ ನಾಯಕಿಯ ಮನಸ್ಸು ಸಹ ಹಿಂದೆ ಬಾರದಂತೆ, ಅಂದರೆ ಬದಲಾಯಿಸಲು ಅಶಕ್ಯವಾದಂತೆ ಆ ತರುಣನಲ್ಲಿ ಸಿಲುಕಿದೆ. ನಮ್ಮ ನಾಯಕಿಯು ತನ್ನ ನಿರ್ಧಾರದಲ್ಲಿ ಹಾಗು ನಿಷ್ಠೆಯಲ್ಲಿ ಅಚಲಳಾಗಿದ್ದಾಳೆ. ಆದುದರಿಂದಲೇ ಅವಳು ‘ಹಿಂದs ನೋಡದs’ ಎಂದು ಹೇಳುತ್ತಿದ್ದಾಳೆ. ಇದು ಈ ಪದಪುಂಜದ ಐದನೆಯ ಅರ್ಥ.

ಮೊದಲ ಪ್ರೇಮದ ವಿವಿಧ ಸ್ಥಿತಿಗಳನ್ನು ಬೇಂದ್ರೆಯವರು ಸುಸಂಬದ್ಧವಾಗಿ ಇಲ್ಲಿ ವರ್ಣಿಸಿದ್ದಾರೆ. ಈ ಸುಸಂಬದ್ಧತೆ ಅವರ ಕವನಗಳ ವೈಶಿಷ್ಟ್ಯವೇ ಆಗಿದೆ. ಇನ್ನು ‘ಹಿಂದs ನೋಡದs’ ಎನ್ನುವ ಪದಪುಂಜವನ್ನು ವಿಭಿನ್ನಾರ್ಥಗಳಲ್ಲಿ ಬಳಸಿರುವುದು ಬೇಂದ್ರೆ-ಪ್ರತಿಭೆಯ ದ್ಯೋತಕವಾಗಿದೆ!

‘ಹಿಂದs ನೋಡದs’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿ ಅಡಕವಾಗಿದೆ.