Friday, May 8, 2015

ಕನ್ನಡ-ಪ್ರಾಕೃತ-ಸಂಸ್ಕೃತ....ಕೆಲವು ವಿವರಣೆಗಳು



‘ಸಲ್ಲಾಪ’ ಬ್ಲಾ^ಗ್‍ನಲ್ಲಿ ನಾನು ಬರೆದ  ಕನ್ನಡ-ಸಂಸ್ಕೃತ’ ಎನ್ನುವ ಲೇಖನವನ್ನು ಜಲನಯನರು ಪದಾರ್ಥ ಚಿಂತಾಮಣಿಯಲ್ಲಿ ಹಂಚಿಕೊಂಡಿದ್ದಾರೆ. ಈ ಲೇಖನಕ್ಕೆ ಶ್ರೀ ವ್ಹಿ.ಕೆ.ಪೆರ್ಲ, ಮಂಗಳೂರು ಇವರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅಲ್ಪ ಸಮಯದಲ್ಲಿಯೆ ನನ್ನ ಲೇಖನವನ್ನು ಹಾಗು ಅವರ ಪ್ರತಿಕ್ರಿಯೆಯನ್ನು ತೆಗೆದು ಹಾಕಿದ್ದರಿಂದ, ಪದಾರ್ಥ ಚಿಂತಾಮಣಿಯಲ್ಲಿ ಪೆರ್ಲರ ಪ್ರತಿಕ್ರಿಯೆಗೆ ಉತ್ತರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದುದರಿಂದ ಅವರು ಎತ್ತಿದ ಅಂಶಗಳಿಗೆ ಉತ್ತರಗಳನ್ನು ‘ಸಲ್ಲಾಪ’ದಲ್ಲಿಯೇ  ನೀಡುತ್ತಿದ್ದೇನೆ.

ಪೆರ್ಲರ ಪ್ರತಿಕ್ರಿಯೆ :
ಈ ಅಭಿಪ್ರಾಯದಲ್ಲಿರುವ ಹಲವಾರು ಅಂಶಗಳನ್ನು ಸಂಸ್ಕರಿಸಬೇಕಾಗಿದೆ:
೧). ಪ್ರಾಕೃತ ಎಂಬುದು ಪ್ರಕೃತ ಎಂಬುದರಿಂದ ಬಂದಿದೆ. ಪ್ರಕೃತ ಎಂದರೆ ನೆಲಮೂಲವಾದದ್ದು, ಉತ್ತರ ಭಾರತದಲ್ಲಿ ಅದಾಗಲೇ ಇದ್ದ ಭಾಷೆ. ಜನರಾಡುತ್ತಿದ್ದ ಭಾಷೆ.
೨).‘ಸಂಸ್ಕೃತ’ ಎಂದರೆ ಈಗಿನ ‘ಶಿಷ್ಟ’ ಎಂಬುದಕ್ಕೆ ಸಂವಾದಿಯಾಗಿರುವ ಪದ. ‘ಶಿಷ್ಟ’ ಎಂದರೆ ಸಾಹಿತ್ಯ ಸೃಷ್ಟಿಯಾಗಿರುವ ಗ್ರಾಂಥಿಕ ಭಾಷೆ ಎಂದು ಅರ್ಥ. ಶ್ರುತಿ, ಸ್ಮೃತಿ, ಪುರಾಣಗಳು ಸಂಸ್ಕೃತ ಭಾಷೆಯಲ್ಲಿ ರಚನೆಯಾದುದರಿಂದ ಅದು ‘ಶಿಷ್ಟ’ ಎಂದು ಕರೆಸಿಕೊಂಡಿತು. (ಜನರಾಡುವ ಇತರ ಭಾಷೆಗಳಲ್ಲಿ ಆಗ ಸಾಹಿತ್ಯ ಸೃಷ್ಟಿಯಾಗಿರಲಿಲ್ಲ.) ಜನರಿಗೆ ಸುಲಭವಾಗಿ ಅರ್ಥವಾಗಲೆಂಬ ಉದ್ದೇಶದಿಂದ ಗೌತಮ ಬುದ್ಧ ತನ್ನ ‘ಧಮ್ಮ’ಗಳನ್ನು ಪ್ರಾಕೃತ ಭಾಷೆಯಲ್ಲಿ ಹೇಳಿದ.
೩). ಆರ್ಯಮೂಲದವು, ದ್ರಾವಿಡಮೂಲದವು ಎಂದು ಭಾಷಾವಿಜ್ಞಾನಿಗಳು ಈಗಾಗಲೇ ಬೇರ್ಪಡಿಸಿರುವದರಿಂದ ಮರಾಠೀ ಹಾಗು ಗುಜರಾಥೀ ಭಾಷೆಗಳು ಕನ್ನಡ ಭಾಷೆಯ ತಳಪಾಯದ ಮೇಲೆ ನಿಂತಿವೆ ಎಂಬ ಮಾತು ಅಸಂಬದ್ಧ. ಹೀಗೆಲ್ಲ ಬರೆಯುವುದು ಅಪಚಾರವಾಗುತ್ತದೆ. ತಪ್ಪು ಮಾಹಿತಿಗಳನ್ನು ಹರಡಬಾರದು.
೪). ಕನ್ನಡದ ಚರಿತ್ರೆ ಸುಮಾರು ೧೫೦೦-೧೬೦೦ ವರ್ಷಗಳ ಈಚಿನದು. ದ್ರಾವಿಡರ ಜೊತೆಗೆ ಆರ್ಯರ ಮುಖಾಮುಖಿ ಆಯಿತು ಅನ್ನಬೇಕೇ ಹೊರತು ‘ಕನ್ನಡಿಗರ’ ಜೊತೆಗೆ ಆರ್ಯರ ಮುಖಾಮುಖಿ ಆಯಿತು ಅನ್ನಬಾರದು.
೫). ಕೆಲವು ಪದಗಳು ಸಾಂಸ್ಕೃತಿಕ-ಸಾಮಾಜಿಕ ಕೊಡುಕೊಳೆಯ ಸಂದರ್ಭದಲ್ಲಿ ಇತ್ತಿಂದತ್ತ ಅತ್ತಿಂದಿತ್ತ ಆಗಬಹುದೇ ಹೊರತು ಕನ್ನಡ ಭಾಷೆಯಿಂದ ಆ ಭಾಷೆಯ ಪದಗಳು ಜನ್ಯವಾಗಿವೆ ಅನ್ನುವಂತಿಲ್ಲ.
ಈ ಬರವಣಿಗೆಯನ್ನು ನಿರ್ಲಕ್ಷಿಸಿ ಬಿಡಬಹುದಾಗಿತ್ತು. ಅದರೆ AzadIS ಅದನ್ನು ಪ.ಚಿಂ. ಗೋಡೆಗೆ ತಂದಿರುವುದರಿಂದ ಅನಿವಾರ್ಯವಾಗಿ ಪ್ರತಿಕ್ರಿಯಿಸಬೇಕಾಯಿತು.

ಮುಂದುವರೆದ ಪ್ರತಿಕ್ರಿಯೆಯಲ್ಲಿ ಪೆರ್ಲರು ಹೀಗೆ ಹೇಳಿದ್ದಾರೆ:
ಹೊಸ ವಿಚಾರಗಳನ್ನು ಬರೆಯುವಾಗ ‘ನನಗೆ ಹಾಗೆ ತೋರುತ್ತದೆ’, ‘ಹೀಗಿರಬಹುದೇ?’ ‘…ಎಂದು ನನ್ನ ಸಂಶಯ’ ಎಂಬಿತ್ಯಾದಿಯಾಗಿ ಬರೆಯಬೇಕೇ ಹೊರತು, ‘ಇದಮಿತ್ಥಂ’ ಎಂದು ತೀರ್ಮಾನ ಕೊಡುವಂತೆ ಬರೆಯುವುದು ಸರಿಯಾದ ಕ್ರಮವಲ್ಲ. ಹಾಗೆ ಬರೆದರೆ, ತಿಳಿದವರು ಅಂಥವರ ಅಜ್ಞಾನದ ಬಗೆಗೆ ಮರುಕ ಪಡುವರು ಮತ್ತು ತಿಳಿಯದವರು ಆ ತಪ್ಪು ಮಾಹಿತಿಗಳನ್ನು ಪರಮಸತ್ಯ ಎಂದು ನಂಬಿ ಬಿಡುವ ಅಪಾಯವಿದೆ!

ಪೆರ್ಲರ ಪ್ರತಿಕ್ರಿಯೆಗೆ ನನ್ನ ವಿವರಣೆ ಹೀಗಿದೆ:
ಪೆರ್ಲರ ಹೇಳಿಕೆ (೧):  ಪ್ರಾಕೃತ ಎಂಬುದು ಪ್ರಕೃತ ಎಂಬುದರಿಂದ ಬಂದಿದೆ. ಪ್ರಕೃತ ಎಂದರೆ ನೆಲಮೂಲವಾದದ್ದು, ಉತ್ತರ ಭಾರತದಲ್ಲಿ ಅದಾಗಲೇ ಇದ್ದ ಭಾಷೆ. ಜನರಾಡುತ್ತಿದ್ದ ಭಾಷೆ.

ನನ್ನ ವಿವರಣೆ: ಪ್ರಾಕೃತ ಎನ್ನುವ ಪದವು ಪ್ರಕೃತಿ ಎನ್ನುವ ಪದದಿಂದ ಬಂದಿದೆ ಎಂದು ಮೋನಿಯರ್-ವಿಲಿಯಮ್ಸ್ ಕೋಶದಲ್ಲಿ ಕೊಡಲಾಗಿದೆ. ಪ್ರಾಕೃತ ಪದವು ‘ಪ್ರಕೃತ’ದಿಂದ ಹುಟ್ಟಿರಲಿ ಅಥವಾ ‘ಪ್ರಕೃತಿ’ಯಿಂದ ಹುಟ್ಟಿರಲಿ, ‘ಸಾಮಾನ್ಯ ಜನರ ಆಡುಭಾಷೆ’ ಎಂದಷ್ಟೇ ಇದರ ಅರ್ಥವಾಗುತ್ತದೆ. ನಾನೂ ಸಹ ಅದನ್ನೇ ಹೇಳುತ್ತಿದ್ದೇನೆ. ಪೆರ್ಲರು ಯಾವ ಕಾರಣದಿಂದ ನನ್ನ ಹೇಳಿಕೆಯಲ್ಲಿ ಭಿನ್ನತೆಯನ್ನು ಕಾಣುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ.

ಪ್ರಾಕೃತವು ಅದಾಗಲೇ  ಉತ್ತರ ಭಾರತದಲ್ಲಿ ಇದ್ದ ಭಾಷೆ  ಎಂದು ಪೆರ್ಲರು ತಿಳಿಸುತ್ತಿದ್ದಾರೆ. ‘ಅದಾಗಲೇ’ ಎಂದರೆ ಯಾವಾಗ? ಇದೊಂದು ಅಸ್ಪಷ್ಟ ಹೇಳಿಕೆ! ನಾನಾದರೂ ಸಹ ಸಂಸ್ಕೃತವು ಸಾಮಾನ್ಯ ಜನರ ಆಡುನುಡಿ ಅಲ್ಲ ಎಂದೇ ಹೇಳಿದ್ದೇನೆ; ಆರ್ಯರ ಆಡುನುಡಿಯ ಮೇಲೆ, ಮೂಲನಿವಾಸಿಗಳ ಆಡುನುಡಿಯ ಪ್ರಭಾವವಾದುದರಿಂದ ಪ್ರಾಕೃತವು ರೂಪಗೊಂಡಿತು ಎಂದು ನಾನು ಹೇಳಿದ್ದನ್ನು ಬಹುಶಃ ಪೆರ್ಲರು ಒಪ್ಪುತ್ತಿರಲಿಕ್ಕಿಲ್ಲ. ಈ ಸಂದರ್ಭದಲ್ಲಿ ಒಂದು ಸಮಾನಾಂತರ ಉದಾಹರಣೆಯನ್ನು ಗಮನಿಸಿರಿ; ತುರುಕರ ಆಕ್ರಮಣದ ನಂತರ, ಉತ್ತರ ಭಾರತದಲ್ಲಿ ಆ ಸಮಯದಲ್ಲಿ ಬಳಕೆಯಲ್ಲಿದ್ದ ಪ್ರಾಕೃತ ಭಾಷೆಯ ಜೊತೆಗೆ ಪರ್ಶಿಯನ್ ಭಾಷೆಯ ಬೆರಕೆಯಾಗಿದ್ದರಿಂದಲೇ ಉರ್ದೂ ಭಾಷೆ ಹುಟ್ಟಿತು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಅದರಂತೆಯೆ ಆರ್ಯ ಅತಿಕ್ರಾಮಿಗಳ ಆಡುನುಡಿಯ ಜೊತೆಗೆ ಮೂಲನಿವಾಸಿಗಳ ಆಡುನುಡಿ ಮಿಲನಗೊಂಡಿದ್ದರಿಂದಲೇ ಪ್ರಾಕೃತವು ಜನಿಸಿತು. ಅತಿಕ್ರಾಮಿಗಳ ಪ್ರಭುತ್ವದಿಂದಾಗಿ, ಪ್ರಾಕೃತದ ಮೇಲೆ ಆರ್ಯ-ಛಾಪು ವಿಶೇಷವಾಗಿದ್ದರಲ್ಲಿ ಆಶ್ಚರ್ಯವಿಲ್ಲ.

ಪೆರ್ಲರ ಹೇಳಿಕೆ (೨): ‘ಸಂಸ್ಕೃತ’ ಎಂದರೆ ಈಗಿನ ‘ಶಿಷ್ಟ’ ಎಂಬುದಕ್ಕೆ ಸಂವಾದಿಯಾಗಿರುವ ಪದ. ‘ಶಿಷ್ಟ’ ಎಂದರೆ ಸಾಹಿತ್ಯ ಸೃಷ್ಟಿಯಾಗಿರುವ ಗ್ರಾಂಥಿಕ ಭಾಷೆ ಎಂದು ಅರ್ಥ. ಶ್ರುತಿ, ಸ್ಮೃತಿ, ಪುರಾಣಗಳು ಸಂಸ್ಕೃತ ಭಾಷೆಯಲ್ಲಿ ರಚನೆಯಾದುದರಿಂದ ಅದು ‘ಶಿಷ್ಟ’ ಎಂದು ಕರೆಸಿಕೊಂಡಿತು. (ಜನರಾಡುವ ಇತರ ಭಾಷೆಗಳಲ್ಲಿ ಆಗ ಸಾಹಿತ್ಯ ಸೃಷ್ಟಿಯಾಗಿರಲಿಲ್ಲ.) ಜನರಿಗೆ ಸುಲಭವಾಗಿ ಅರ್ಥವಾಗಲೆಂಬ ಉದ್ದೇಶದಿಂದ ಗೌತಮ ಬುದ್ಧ ತನ್ನ ‘ಧಮ್ಮ’ಗಳನ್ನು ಪ್ರಾಕೃತ ಭಾಷೆಯಲ್ಲಿ ಹೇಳಿದ.

ನನ್ನ ವಿವರಣೆ: ಶಿಷ್ಟ ಸಾಹಿತ್ಯಕ್ಕಿಂತ ಎಷ್ಟೋ ಮೊದಲೇ ಜನಪದ ಸಾಹಿತ್ಯವು ಮೈದಾಳಿದೆ. ಈ ಜನಪದರ ಸಾಹಿತ್ಯವನ್ನು ಕುರಿತೇ ನಮ್ಮ ನೃಪತುಂಗನು ‘ಕುರಿತೋದುದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂದು ಹೊಗಳಿದ್ದು. ಆದರೆ ಜನಪದ ಸಾಹಿತ್ಯವು ತನ್ನ ಪ್ರದೇಶಕ್ಕಷ್ಟೇ ಸೀಮಿತವಾಗಿರುತ್ತಿತ್ತು.  ಆಡುನುಡಿಗಳನ್ನು ಸಂಸ್ಕರಿಸುವ ಅಗತ್ಯವನ್ನು ಅರಿತದ್ದರಿಂದಲೇ, ನಮ್ಮ ವೈಯಾಕರಣಿಗಳು ಪ್ರಾಕೃತವನ್ನು ಸಂಸ್ಕರಿಸಿದರು. ಅದೇ  ‘ಸಂಸ್ಕೃತ’ವಾಯಿತು, ಹಾಗು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಸಮಗ್ರ ಭಾರತದಲ್ಲಿ (ಅಂದರೆ ಪಂಡಿತರಲ್ಲಿ) ಜ್ಞಾನವಿನಿಮಯದ ಸಾಧನವಾಯಿತು. ಆದುದರಿಂದ ಇದು ಶಿಷ್ಟ ಭಾಷೆಯಾಯಿತು. ಅನೇಕ ದಾಕ್ಷಿಣಾತ್ಯರು ಭಾರತೀಯ ಜ್ಞಾನಭಂಡಾರವನ್ನು ಹಿಗ್ಗಿಸಿದ್ದು ಸಂಸ್ಕೃತದ ಮೂಲಕವೇ. ಆದಿ ಶಂಕರಾಚಾರ್ಯರು ಕೇರಳದಿಂದ ಕಾಶ್ಮೀರದವರೆಗೆ ಅದ್ವೈತ ಮತವನ್ನು ಸ್ಥಾಪಿಸಿದ್ದು ಸಂಸ್ಕೃತದ ಮೂಲಕ. ಆರ್ಯಭಟನ ‘ಸ್ಥಳಮೌಲ್ಯ ಸಿದ್ಧಾಂತವು’ ಸ್ಥಾಪಿತವಾದದ್ದು ಸಂಸ್ಕೃತದ ಮೂಲಕ. ಕರ್ನಾಟಕದ ಮಿತಾಕ್ಷರನ ನ್ಯಾಯಸಂಹಿತೆಯನ್ನು ಭಾರತದ ಅನೇಕ ಪ್ರದೇಶಗಳಲ್ಲಿ ಅನುಸರಿಸಲು ಸಾಧ್ಯವಾಗಿದ್ದಕ್ಕೆ ಸಂಸ್ಕೃತವೇ ಕಾರಣ. ಇವರೆಲ್ಲರಿಗೆ ಸಮಗ್ರಭಾರತ-ವ್ಯಾಪ್ತಿ ಸಿಕ್ಕಿದ್ದು ಸಂಸ್ಕೃತದ ಮೂಲಕವೇ. ಅದು ಪ್ರಾಕೃತಗಳ ಮೂಲಕ ಹೇಗೆ ಸಾಧ್ಯವಾದೀತು? ನಾವು ವಿಜ್ಞಾನದ ಗ್ರಂಥವೊಂದನ್ನು ‘ಹವ್ಯಕರ ಆಡುನುಡಿ’ಯಲ್ಲಿ ಅಥವಾ ‘ಕುಸುಮಬಾಲೆ’ಯ ಆಡುನುಡಿಯಲ್ಲಿ ಬರೆದರೆ, ಅದು ಕರ್ನಾಟಕದ ವಿಜ್ಞಾನವಿದ್ಯಾರ್ಥಿಗಳಿಗೆ ಅರ್ಥವಾದೀತೆ? ಆದುದರಿಂದ ಈ ಆಡುನುಡಿಗಳನ್ನು ಸಂಸ್ಕರಿಸಿ, ಕನ್ನಡದ ಗ್ರಾಂಥಿಕ ಭಾಷೆಯನ್ನು ಸಿದ್ಧಪಡಿಸಲಾಗಿದೆ.

ಒಂದು ವ್ಯಾವಹಾರಿಕ ಉದಾಹರಣೆಯನ್ನು ಕೊಡಬಹುದಾದರೆ:
‘ಮನ್ಯಾಗ ಕುಂದ್ರೋ’ ಎನ್ನುವುದು ಆಡುಭಾಷೆ ಅರ್ಥಾತ್ ಪ್ರಾಕೃತವಿದ್ದಂತೆ (=ಪ್ರಕೃತಿಸಹಜವಾದದ್ದು). ‘ಮನೆಯಲ್ಲಿ ಕುಳಿತುಕೊಳ್ಳು’ ಎನ್ನುವುದು ಸಂಸ್ಕರಿತ ಗ್ರಾಂಥಿಕ ಭಾಷೆ, ಸಂಸ್ಕೃತವಿದ್ದಂತೆ.

ಗೌತಮ ಬುದ್ಧನಿಗೆ ತನ್ನ ಸಿದ್ಧಾಂತಗಳನ್ನು ತನ್ನ ಸುತ್ತಲಿನ ಸಾಮಾನ್ಯ ಜನರಿಗೆ ತಿಳಿಸುವುದು ಬೇಕಾಗಿತ್ತು. ಅದಕ್ಕೆಂದೇ ಆತ ಪಾಲಿ ಭಾಷೆಯಲ್ಲಿ ಉಪದೇಶವನ್ನು ನೀಡಿದ. ನಮ್ಮ ಬಸವೇಶ್ವರರೂ ಸಹ ಕನ್ನಡದಲ್ಲಿಯೇ ವಚನಗಳನ್ನು ಹೇಳಲಿಲ್ಲವೆ? ಆದರೆ, ಶಂಕರಾಚಾರ್ಯರರಿಗೆ ಬುದ್ಧ ಧರ್ಮದ ವಿರುದ್ಧ ಸನಾತನ ಧರ್ಮದ ಪುನರುತ್ಥಾನವನ್ನು ಮಾಡಬೇಕಾಗಿತ್ತು. ಆದುದರಿಂದ ಅವರಿಗೆ ಸಮಗ್ರ ಭಾರತದಲ್ಲಿ ಸಂಚರಿಸುತ್ತ, ಸಮಗ್ರ ಭಾರತದ ಪಂಡಿತರ ಭಾಷೆಯಾದ ಸಂಸ್ಕೃತವನ್ನು ಬಳಸುವುದು ಅನಿವಾರ್ಯವಾಯಿತು.

ಪೆರ್ಲರ ಹೇಳಿಕೆ (೩) :  ಆರ್ಯಮೂಲದವು, ದ್ರಾವಿಡಮೂಲದವು ಎಂದು ಭಾಷಾವಿಜ್ಞಾನಿಗಳು ಈಗಾಗಲೇ ಬೇರ್ಪಡಿಸಿರುವದರಿಂದ ಮರಾಠೀ ಹಾಗು ಗುಜರಾಥೀ ಭಾಷೆಗಳು ಕನ್ನಡ ಭಾಷೆಯ ತಳಪಾಯದ ಮೇಲೆ ನಿಂತಿವೆ ಎಂಬ ಮಾತು ಅಸಂಬದ್ಧ. ಹೀಗೆಲ್ಲ ಬರೆಯುವುದು ಅಪಚಾರವಾಗುತ್ತದೆ.  ತಪ್ಪು ಮಾಹಿತಿಗಳನ್ನು ಹರಡಬಾರದು.

ನನ್ನ ವಿವರಣೆ: ‘ಮರಾಠೀ ಹಾಗು ಗುಜರಾಥೀ ಭಾಷೆಗಳು ಆರ್ಯಮೂಲ ಭಾಷೆಗಳು ಅಲ್ಲ’ ಎಂದು ನಾನು ಹೇಳಿಲ್ಲ. ಆದರೆ ಈ ಭಾಷೆಗಳ ತಳಪಾಯ ಕನ್ನಡ ನುಡಿ ಎಂದಷ್ಟೇ ಹೇಳಿದ್ದೇನೆ.  ಇದೇನೂ ನನ್ನ ಸ್ವಂತ ಸಂಶೋಧನೆಯಲ್ಲ.
ಸ್ಟೆನ್ ಕೊನೊ ಎನ್ನುವ ಸಂಶೋಧಕರು ಈ ರೀತಿಯಾಗಿ ಹೇಳಿದ್ದಾರೆ:
The substratum over which the Marathi and Gujarati have spread was Dravidian.
(Linguistic survey of India, vol I, part I)

ಮಿ.ಏ.ಮಾಸ್ಟರ, I.C.S. ಇವರು ಮರಾಠಿ ಮತ್ತು ಗುಜರಾಥಿ ಭಾಷೆಗಳಲ್ಲಿ ಕನ್ನಡದ ಅಂಶ ಉಂಟೆಂಬುದನ್ನು ಹಲವು ಉದಾಹರಣೆಗಳೊಂದಿಗೆ ಸಿದ್ಧಪಡಿಸಿದ್ದಾರೆ.(Some parallelisms in Indo-Aryan and Dravidian with special reference to Marathi, Gujarati and Kanarese—JBRAS Vols V and VIII)

ಲೋಕಮಾನ್ಯ ತಿಲಕರೂ ಸಹ ಮಹಾರಾಷ್ಟದಲ್ಲಿ ಇದ್ದದ್ದು ಕನ್ನಡ ಭಾಷೆ ಎಂದು ಅತಿ ಸ್ಪಷ್ಟವಾಗಿ ಹೇಳಿದ್ದಾರೆ:
“ಮಹಾರಾಷ್ಟ್ರ ಅಣಿ ಕರ್ನಾಟಕ ನಿರಾಳೇ ನನ್ಹೇತ. ದೋಘಾಂ ಮಧ್ಯೇಹೀ ಏಕಚ ರಕ್ತ ಖೇಳತ ಆಹೇ. ದೋಘಾಂಚೀ ಭಾಷಾ ಏಕಚ ಮ್ಹಣಜೇ ಕಾನಡೀ ಹೀ ಹೋತಿ.” (=ಮಹಾರಾಷ್ಟ್ರ ಮತ್ತು ಕರ್ನಾಟಕ ವಿಭಿನ್ನವಲ್ಲ. ಎರಡರಲ್ಲೂ ಒಂದೇ ರಕ್ತ ಹರಿಯುತ್ತಿದೆ; ಎರಡರ ಭಾಷೆ ಒಂದೇ ಅಂದರೆ, ಕನ್ನಡವೇ ಆಗಿದೆ.)
(ಶ್ರೀ ಆಲೂರು ವೆಂಕಟರಾಯರು ರಚಿಸಿದ ‘ಕರ್ನಾಟಕದ ಗತ ವೈಭವ’ದಲ್ಲಿ ಉದ್ಧರಿಸಿದ ಲೋಕಮಾನ್ಯ ತಿಲಕರ ಗುರ್ಲಹೊಸೂರಿನಲ್ಲಿಯ ಭಾಷಣ)

ಆದುದರಿಂದ ನಾನು ಬರೆದದ್ದು ಅಪಚಾರವೂ ಅಲ್ಲ, ತಪ್ಪು ಮಾಹಿತಿಯೂ ಅಲ್ಲ. ತಮ್ಮ ಪೂರ್ವಗ್ರಹಿಕೆಗಳಿಂದ ಹೊರಬರಲಾರದ ಪೆರ್ಲರು ವಿಷಯಜ್ಞಾನವಿಲ್ಲದೆ ಪ್ರತಿಕ್ರಿಯಿಸುತ್ತಿದ್ದಾರೆ ಅಷ್ಟೆ.

ಪೆರ್ಲರ ಹೇಳಿಕೆ ( ೪). ಕನ್ನಡದ ಚರಿತ್ರೆ ಸುಮಾರು ೧೫೦೦-೧೬೦೦ ವರ್ಷಗಳ ಈಚಿನದು. ದ್ರಾವಿಡರ ಜೊತೆಗೆ ಆರ್ಯರ ಮುಖಾಮುಖಿ ಆಯಿತು ಅನ್ನಬೇಕೇ ಹೊರತು ‘ಕನ್ನಡಿಗರ’ ಜೊತೆಗೆ ಆರ್ಯರ ಮುಖಾಮುಖಿ ಆಯಿತು ಅನ್ನಬಾರದು.

ನನ್ನ ವಿವರಣೆ:  ಪೆರ್ಲರು ಕನ್ನಡದ ಮಾರ್ಗ ಸಾಹಿತ್ಯ-ಚರಿತ್ರೆಯನ್ನು ಕನ್ನಡಿಗರ ಚರಿತ್ರೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಕನ್ನಡದ ಪ್ರಥಮ ಮಾರ್ಗ ಸಾಹಿತ್ಯವಾದ ‘ಕವಿರಾಜ ಮಾರ್ಗ’ವು  ಸಾಮಾನ್ಯ ಶಕೆ ೮೫೦ರ ಸುಮಾರಿಗೆ ರಚಿತವಾಯಿತು. ಆದರೆ ಇದಕ್ಕಿಂತ ಮೊದಲಿನಿಂದಲೂ ಜನಪದ  ಸಾಹಿತ್ಯವು ಕನ್ನಡಿಗರ ಬಾಯಲ್ಲಿ ನಲಿದಾಡುತ್ತಲೇ ಇತ್ತು. ಕನ್ನಡದಲ್ಲಿ ‘ಶಿಷ್ಟ ಸಾಹಿತ್ಯ’ದ ರಚನೆ ಇದಕ್ಕೂ ಮೊದಲೇ ಆಗದಿರಲು ಕಾರಣವೆಂದರೆ, ಕನ್ನಡಿಗರು ಆರ್ಯರ ಜೊತೆಗಿನ ಮುಖಾಮುಖಿಯಲ್ಲಿ ಸೋಲು ಕಂಡಿದ್ದು.

ದ್ರಾವಿಡರು ಎನ್ನುವ ಪದವನ್ನು ಬಳಸದೆ ನಾನು ಕನ್ನಡಿಗರು ಎನ್ನುವ ಪದವನ್ನು ಬಳಸುವ ಕಾರಣ ಹೀಗಿದೆ:
ಕನ್ನಡಿಗರು ಎಷ್ಟು ಪ್ರಾಚೀನರು ಎನ್ನುವುದು ಕನ್ನಡಿಗರಿಗೇ ತಿಳಿಯದೇ ಇರುವುದು ದುರ್ದೈವದ ಸಂಗತಿ. ಇದಕ್ಕೆ ಕಾರಣವೆಂದರೆ ‘ದ್ರವಿಡ’ರೊಡನೆ ಕನ್ನಡಿಗರ ಸಮೀಕರಣ. ತಮಿಳು ಹಾಗು ಕನ್ನಡ ಇವೆರಡೂ ಭಾಷೆಗಳು ಯಾವುದೋ ಒಂದು ಕಾಲಕ್ಕೆ ಒಂದೇ ರೂಪದಲ್ಲಿದ್ದವು. ತಮಿಳಿನಲ್ಲಿ ಪ್ರಾಚೀನ ರೂಪದ ಪದಗಳನ್ನು ಕಾಣುವುದರಿಂದ ಅದೇ ಹಳೆಯದು ಹಾಗು ಕನ್ನಡದಲ್ಲಿ ಈ ಪದಗಳು ಬದಲಾಗಿದ್ದರಿಂದ ಕನ್ನಡವು ತಮಿಳಿಗಿಂತ ಇತ್ತೀಚಿನದು ಎನ್ನುವ ಭ್ರಮೆಯು ಅನೇಕರಲ್ಲಿದೆ. ಕನ್ನಡ ಭಾಷೆಯು ಸತತವಾಗಿ ಬದಲಾಗುತ್ತ ಬಂದಿದೆ. ಇದಕ್ಕೆ ಅನೇಕ ಕಾರಣಗಳಿವೆ. ಆರ್ಯರ ಜೊತೆಗಿನ ಸಂಪರ್ಕವು ಒಂದು ಕಾರಣವಾಗಿರಬಹುದು.

ಏನೇ ಇರಲಿ, ಆರ್ಯರು ಭಾರತಕ್ಕೆ ಬಂದ ಕಾಲಘಟ್ಟದಲ್ಲಿ, ಕನ್ನಡವು ಆಗಲೇ ರೂಪಗೊಳ್ಳುತ್ತಲಿತ್ತು, ಪ್ರಾಚೀನ ರೂಪದಿಂದ ಭಿನ್ನವಾಗತೊಡಗಿತ್ತು. ಕನ್ನಡಿಗರಿಗೆ ತಮಿಳರಿಗಿಂತ ಪ್ರತ್ಯೇಕವಾದ ಅಸ್ಮಿತೆ ಮೂಡಿತ್ತು. ಆದುದರಿಂದ ಆರ್ಯರೊಡನೆ ಮುಖಾಮುಖಿಯಾದ ಜನಾಂಗವು ‘ಕನ್ನಡವಿಶೇಷ ಜನಾಂಗ’ ಎನ್ನುವುದಕ್ಕೆ ಇರುವ ಸಾಕ್ಷಿಗಳನ್ನು ಗಮನಿಸೋಣ. ಈ  ಸಾಕ್ಷಿಗಳನ್ನು (೧)ಜನಾಂಗಸಾಕ್ಷಿ ಹಾಗು (೨)ಭಾಷಾಸಾಕ್ಷಿ ಎಂದು ವಿಂಗಡಿಸಬಹುದು.

(೧) ಜನಾಂಗಸಾಕ್ಷಿ
ಆರ್ಯರಿಗಿಂತಲೂ ಮೊದಲು ಭಾರತದಲ್ಲಿ ಸಿಂಧೂ ಕೊಳ್ಳದ ಸಂಸ್ಕೃತಿಯು ಉತ್ಕರ್ಷದಲ್ಲಿತ್ತು. ಈ ಸಂಸ್ಕೃತಿಯ ಜನರು ಕನ್ನಡ ಹಾಗು ತಮಿಳಿನ ಮೂಲರೂಪದ ಭಾಷೆಯನ್ನು ಮಾತನಾಡುವ ಜನಾಂಗವಾಗಿರಬಹುದೆಂದು ಸಂಶೋಧಕರು ಭಾವಿಸುತ್ತಾರೆ. ವಾಸ್ತವದಲ್ಲಿ ಈ ಕಾಲಘಟ್ಟದಲ್ಲಿಯೇ ಕನ್ನಡಿಗರು ತಮಿಳರಿಂದ ಬೇರ್ಪಟ್ಟಿರಬಹುದು. ಫಾ^ದರ ಹೆರಾಸರ ಸಂಶೋಧನೆಯು ಈ ಊಹೆಗೆ ಪುಷ್ಟಿಯನ್ನು ಕೊಡುತ್ತದೆ:

‘ಕರ್ನಾಟಕ ಮತ್ತು ಮೊಹೆಂಜೊದಾರೊ’ ಎನ್ನುವ ಲೇಖನದಲ್ಲಿ ಅವರು ಬರೆಯುವದೇನೆಂದರೆ:
“….The people of Karnatak are apparently referred to in one of the seal inscriptions of Mohenjo Daro as one of the ancient tribes of the land. The sign used to mention them is a symbol to denote an eye. The main (similar) sign is also found in the Sumerian tablets of Jemdet Nasar…thus it means `eye’. Therefore in the proto-Dravidian language of Mohenjo Daro it will read Kan, `eye’ ……thus the complete sign will read Kananir….The ancient word Kannadigas by which the people of modern Karnataka are mentioned, seems to be a Sanskrit modification of Kananir.

ಫಾ^ದರ ಹೆರಾಸರು ಓದಿದ ಚಿತ್ರಲಿಪಿಯ ಅರ್ಥದ ಬಗೆಗೆ ಮತಮತಾಂತರಗಳು ವಿಪರೀತವಾಗಿವೆ. ಆದುದರಿಂದ ಅವರು ಓದಿದುದನ್ನು ಈಗಲೇ ಪ್ರಮಾಣವೆಂದು ಹೇಳಲಿಕ್ಕಾಗದು. ಆದರೂ ಹೆರಾಸರ ಈ ಊಹೆಗೆ ಮನುಸ್ಮೃತಿ ಮತ್ತು ಮತ್ಸ್ಯಪುರಾಣಗಳ ಬೆಂಬಲವು ದೊರೆಯುತ್ತಿರುವದರಿಂದ, ಹೆರಾಸರ ಓದು ಸರಿ ಇರಬಹುದು ಎನ್ನಲು ಅವಕಾಶವಿದೆ.

ಹೆರಾಸರು ಉಲ್ಲೇಖಿಸುವ ಕಣ್ಣ(ಕನ್ನ)ರನ್ನೇ ಸಂಸ್ಕೃತ ಸಾಹಿತ್ಯದಲ್ಲಿ ‘ಕರ್ಣ’ ಎಂದು ಸಂಸ್ಕೃತೀಕರಿಸಲಾಗಿದೆ. ಮನುಸ್ಮೃತಿಯಲ್ಲಿ ಕರಣರೊಡನೆ ಝಲ್ಲ, ಮಲ್ಲ, ದ್ರವಿಡರ ಉಲ್ಲೇಖವಿದೆ. ಇವರೆಲ್ಲ ವ್ರಾತ್ಯಕ್ಷತ್ರಿಯರೆನ್ನಲಾಗಿದೆ.  ಕರಣ , ಝಲ್ಲ ಹಾಗು ಮಲ್ಲರನ್ನು ದ್ರವಿಡರ ಜೊತೆಗೆ ಸೇರಿಸದೆ ಪ್ರತ್ಯೇಕವಾಗಿ ಉಲ್ಲೇಖಿಸಿದ್ದನ್ನು ಗಮನಿಸಬೇಕು. ‘ದ್ರವಿಡ’ ಪದವು ‘ದ್ರಮಿಳ (=ತಮಿಳ)’ ಎನ್ನುವ ಪದದಿಂದ ಬಂದಿದ್ದನ್ನು ಗಮನಿಸಿದರೆ, ‘ಕರಣ+ನಾಟ=ಕರ್ಣಾಟ’ರು ಮನುಸ್ಮೃತಿಯ ಸಮಯದಲ್ಲಿಯೇ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.  ಶ್ರೀ ವಿಶ್ವನಾಥ ಕಾಶೀನಾಥ ರಾಜವಾಡೆಯವರ ಅಭಿಪ್ರಾಯದ ಮೇರೆಗೆ ಕರಣರು ಮತ್ತು ನಟರು ಸೇರಿ ಒಂದೇ ಜನಾಂಗವಾಗಿ, ಅದುವೆ ಕರ್ಣಾಟವಾಯಿತು. ನಾಟ್ಟರೆ ನಾಡವರು. (ಜೈನ ತೀರ್ಥಂಕರ ಮಹಾವೀರನಿಗೆ ‘ನಟ್ಟಪುತ್ತ’ ಎಂದು ಕರೆಯಲಾಗಿದೆ.) ಮನುಸ್ಮೃತಿಯಲ್ಲಿ ಉಲ್ಲೇಖಿತರಾದ ಕರಣರು ಹಾಗು ಮತ್ಸ್ಯಪುರಾಣದ ಕರ್ಣರು ಬೇರೆಯಲ್ಲ. ಮತ್ಸ್ಯಪುರಾಣದಲ್ಲಿ ಇವರನ್ನು ತುರ್ವಸುವಿನ ಪೀಳಿಗೆಯವರೆಂದು ಕರೆಯಲಾಗಿದೆ.

ಆರ್ಯರು ಬರುವ ಮೊದಲು ಸಿಂಧ-ಪಂಜಾಬಗಳಲ್ಲಿ ಹಟ್ಟಿಗಳನ್ನು ಕಟ್ಟಿಕೊಂಡು ಯದು-ತುರ್ವರೂ, ಕುರುವರೂ, ಪಣಿಗಳೂ ನೆಲೆಸಿದ್ದರು. (ಋಗ್ವೇದದಲ್ಲಿ ಇವರ ಉಲ್ಲೇಖವಿದೆ.) ಇವರು ಹಡಪ್ಪಾ, ಮೊಹೆಂಜೊದಾರೊಗಳ ನಿವಾಸಿಗಳಾಗಿರುವ ಸಂಭವವಿದೆ. ಋಗ್ವೇದದ ೨ನೆಯ ಮಂಡಲದಿಂದ ಏಳನೆಯ ಮಂಡಲದವರೆಗಿನ ಆರು ಮಂಡಲಗಳು ಅತಿ ಪುರಾತನ ಕಾಲದವು (ಕ್ರಿ.ಪೂ.೨೫೦೦ರಿಂದ ೫೦೦೦ರವರೆಗೆ). ಇವುಗಳಲ್ಲಿ ಬರುವ ವರ್ಣನೆಗಳಲ್ಲಿ ಆರ್ಯರ ಹಾಗು ಯದು-ತುರ್ವರ ವೈರವು ವಿಶೇಷವಾಗಿ ಕಂಡು ಬರುವುದು. ಬಳಿಕ ರಚಿತವಾದ ಒಂದನೆಯ ಹಾಗು ಎಂಟರಿಂದ ಹತ್ತನೆಯ ಮಂಡಲಗಳಲ್ಲಿ ಈ ವೈರವು ಕಡಿಮೆಯಾಗುತ್ತ ಹೋಗಿದೆ. ಯದು-ತುರ್ವಶು ಇದು ಆರ್ಯರು ‘ಹಟ್ಟಿಕಾರ’ ಜನಾಂಗಕ್ಕೆ ಕೊಟ್ಟ ಹೆಸರು, ಭಾರತೀಯರನ್ನು ಪಾಶ್ಚಾತ್ಯರು Indians ಎಂದು ಕರೆದ ಹಾಗೆ.


ಕಣ್ಣ (ಕಣ್ನ) ಶಬ್ದವು ಕೃಷ್ಣ ಇದರ ತದ್ಭವವೆಂಬ ರೂಢಕಲ್ಪನೆಯನ್ನು ವಿರೋಧಿಸಿ ಡಾ^. ಲುಡರ್ಸರು ಬರೆಯುವದೇನೆಂದರೆ :
As the combination of a dental and lingual `n’ in the interior of a word is absolutely impossible, this must be a mistake for either ಕಣ್ಣೇಶ್ವರ or ಕನ್ನೇಶ್ವರ and the name of the kind would, therefore be either ಕನ್ನ or ಕಣ್ಣ. As far as I know, neither of these forms can be considered as derived from Sanskrit ಕೃಷ್ಣ, the common Prakrit form being ಕಣ್ಹ and the Kanarese equivalent ಕನ್ನರ whereas both ಕನ್ನ and ಕಣ್ಣ represent the Sanskrit ಕರ್ಣ.
(Castes and tribes of South India, Vol III, p. 62-63; and Vol V P.25)

ಈ ಸಂದರ್ಭದಲ್ಲಿ ತುರುವಸುವಿನ ಪೀಳಿಗೆಯಲ್ಲಿ ಮತ್ಸ್ಯಪುರಾಣವು ಹೇಳುವ ‘ಕರ್ಣ’ ಎಂಬ ಜನಾಂಗದ ಹೆಸರಿನ ನೆನಪು ಆಗದೆ ಇರದು. ಆದುದರಿಂದ, ಕಣ್ಣೇಶ್ವರ=ಕರ್ಣೇಶ್ವರ. ಕರ್ಣೇಶ್ವರ ಎಂದರೆ ‘ಕರ್ಣ’ ಎಂಬ ಜನಾಂಗದ ಈಶ್ವರನು, ಅಧಿದೇವತೆಯು, ಆತನೇ ಶಿವನು, ಎಂಬೀ ಬಗೆಯ ವಿಚಾರಗಳಿಗೆ ಇನ್ನಿಷ್ಟು ಬಲವು ಬರುವುದು ಅನಿವಾರ್ಯವಾಗಿದೆ.
(ಶಂ.ಬಾ.ಜೋಶಿ  ಕೃತಿಸಂಪುಟ ೨, ಪುಟ ೭೭)

ಈ ಕನ್ನ(ಣ್ಣ)ರು ಪಟ್ಟಿಗಳನ್ನು ಕಟ್ಟಿಕೊಂಡು ಜೀವಿಸುತ್ತಿದ್ದರು. ಯಜುರ್ವೇದದಲ್ಲಿ ಇವರ ಉಲ್ಲೇಖವಿದೆ. ಇವರೇ ‘ಹಟ್ಟಿಕಾರರು’. ಹಟ್ಟಿಕಾರರು ಗೋವಳರು (ಹಟ್ಟಿ ಎಂದರೆ ದನದ ಕೊಟ್ಟಿಗೆ ಎನ್ನುವ ಅರ್ಥವಿರುವದನ್ನು ಗಮನಿಸಿರಿ); ಋಗ್ವೇದದ ಯದು-ತುರ್ವಶರೂ ಆರ್ಯೇತರರಾದ ಗೋವಳರು; ಅಂದರೆ ಗೌಳರು (ಗೌಡರು). ಹಟ್ಟಿಕಾರರು ಹಾಗು ಗೋವಳರು ಎರಡಲ್ಲ, ಒಂದೇ. ಗಂಗಾ-ಯಮುನಾ ತೀರದಲ್ಲಿ ನೆಲೆಸಿದ ಯದು-ತುರ್ವಶರು ಬೇಗನೇ ಆರ್ಯೀಕರಣ ಹೊಂದಿದರು. ಅಲ್ಲಿ ಇರಲಾರದ ಕೆಲವರು ತೆಂಕಣಕ್ಕೆ ತೆರಳಿದರು. ಇವರು ತಮ್ಮನ್ನು ಗಂಗಾಮತದವರು ಎಂದೇ ಕರೆದುಕೊಳ್ಳುತ್ತಾರೆ. ಕರ್ನಾಟಕದಲ್ಲಿ ಇರುವ ಗಂಗವಾಡಿ, ಗಂಗೂರು ಮೊದಲಾದ ಸ್ಥಳಗಳು ಇವರ ನಿವಾಸಗಳಾದವು. ದಕ್ಷಿಣದಲ್ಲಿ ಗಂಗರಾಜ್ಯದ ಸ್ಥಾಪನೆಯನ್ನು ಮಾಡಿದವರೂ ಇವರೇ.

ಕರ್ನಾಟಕದಲ್ಲಿಯ ಗಂಗರಾಜರು ತುರ್ವಸು ವಂಶೀಯರಾಗಿದ್ದರು.  ಆರ್. ನರಸಿಂಹಾಚಾರ್ಯರು ೧೯೨೪ನೆಯ ಇಸವಿಯ ಕರ್ಣಾಟಕ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಗಂಗರ ವಂಶಪರಂಪರೆಯ ಬಗೆಗೆ ಲೇಖನವನ್ನು ಪ್ರಕಟಿಸಿದ್ದಾರೆ. ‘ತುರ್ವಶು’ ಎನ್ನುವ ಪದವನ್ನು ವಿಶ್ಲೇಷಿಸುವುದು ಈ ಸಂದರ್ಭದಲ್ಲಿ ಅಗತ್ಯವೆನಿಸುತ್ತದೆ. ತುರು ಎನ್ನುವುದು ಕನ್ನಡ ಪದ. ಇದರ ಅರ್ಥ ಆಕಳು. ವಶಾ ಎನ್ನುವ ಸಂಸ್ಕೃತ ಪದದ ಅರ್ಥವೂ ಸಹ ಆಕಳು ಎಂದೇ ಆಗುತ್ತದೆ. ಆದುದರಿಂದ ತುರ್ವಶು ಎನ್ನುವುದು ಕನ್ನಡ-ಸಂಸ್ಕೃತಗಳ ಜೋಡುಪದವಾಗಿದೆ. ವೇದಗಳಲ್ಲಿಯ ತುರ್ವಶುಗಳು ಮಹಾಭಾರತದಲ್ಲಿ ತುರ್ವಸುಗಳಾಗಿದ್ದಾರೆ. ಈ ವಸು ಪದವೇ ಕಾಲಾಂತರದಲ್ಲಿ ‘ಪಶು’ ಮತ್ತು ‘ಹಸು’ ಆಗಿದೆ.

ಮಹಾಭಾರತದ ಶಂತನುವಿನ ಹೆಂಡತಿ ಗಂಗಾದೇವಿಯು ತನ್ನ ಏಳು ಮಕ್ಕಳನ್ನು ಗಂಗಾನದಿಯಲ್ಲಿ ಮುಳುಗಿಸಿದಳು ಎಂದು ಕೇಳುತ್ತೇವೆ. ವಾಸ್ತವಿಕವಾಗಿ ಗಂಗೆಯು ತನ್ನ ಏಳು ಮಕ್ಕಳನ್ನು ತನ್ನ ‘ಗಂಗಾಸಮಾಜ’ಕ್ಕೆ ಕಳುಹಿಸಿದಳು. ಎಂಟನೆಯವನೆ ದೇವವ್ರತ ಅಥವಾ ಭೀಷ್ಮ. ಈತನು ತನ್ನ ತಂದೆಯ ಸಮಾಜದಲ್ಲಿ ಉಳಿದು ರಾಜಪಟ್ಟಕ್ಕೆ ಅರ್ಹನಾಗಿದ್ದನು.

ಆರ್ಯರು ಭಾರತಕ್ಕೆ ಕಾಲಿಟ್ಟ ಕಾಲದಲ್ಲಿ, ಇಲ್ಲಿ ಇದ್ದಂತಹ ಮೂಲನಿವಾಸಿಗಳನ್ನು ‘ದ್ರಾವಿಡರು’ ಎಂದು ಕರೆದಿಲ್ಲ. ಆರ್ಯಾವರ್ತದ ಸೀಮಾಪ್ರದೇಶದಲ್ಲಿದ್ದು ಆರ್ಯರನ್ನು ಮೇಲಿಂದ ಮೇಲೆ ಪೀಡಿಸುತ್ತಿದ್ದ ಅನಾರ್ಯರ ತಂಡಗಳ ಉಲ್ಲೇಖಗಳು  ವೇದಗಳಲ್ಲಿ ಬೇಕಾದಷ್ಟಿವೆ. ವೇದಕಾಲದಿಂದ ಸಂಸ್ಕೃತ ಶಬ್ದಭಾಂಡಾರದಲ್ಲಿ ಕಣ್ಣಿಗೆ ಬೀಳುವ ದಸ್ಯು, ಅಸುರ, ಶಬರ, ನಿಷಾದ, ವಾನರ, ಕಿನ್ನರ, ಆಂಧ್ರ  ಮೊದಲಾದ ನುಡಿಗಳೇ ಇದಕ್ಕೆ ನಿದರ್ಶನ. ಆರ್ಯಾವರ್ತವನ್ನು ಬಿಟ್ಟು ಹೊರಗೆ ಹೋದ ಆರ್ಯನು ವ್ರಾತ್ಯನು, ಅನಾರ್ಯನಿಗೆ ಸಮಾನನು. ಇವನನ್ನು ಮರಳಿ ಆರ್ಯನನ್ನಾಗಿ ಮಾಡಿಕೊಳ್ಳಲು ವ್ರಾತ್ಯಸ್ತೋಮವೆಂಬ ವೈದಿಕ ವಿಧಿ ವಿಧಾನವಾಗಬೇಕು.

ಇಲ್ಲಿ ಬರುವ ಆಂಧ್ರ  ಎನ್ನುವ ಪದವು ಈಗಿನ ತೆಲಗು ಆಂಧ್ರಕ್ಕೆ ಸಮಾನವಾದ ಪದವಲ್ಲ. ಅಂಧಸ್ ಪದದ ರೂಪಾಂತರವಾಗಿ ಇಲ್ಲಿ ಬಳಸಲ್ಪಟ್ಟಿದೆ. ‘ವಿಷ್ಣುಸಹಸ್ರನಾಮ’ದಲ್ಲಿ ‘ಆಂಧ್ರನಿಷೂದನ’ ಎನ್ನುವುದು ವಿಷ್ಣುವಿನ ಒಂದು ಹೆಸರಾಗಿದ್ದುದನ್ನು ಗಮನಿಸಬೇಕು. ತೆಲಗು ಭಾಷೆಯು ಹತ್ತನೆಯ ಶತಮಾನದಲ್ಲಿ ಕನ್ನಡದ ಕೂಸಾಗಿ ಬೆಳೆದಿದೆ. ಆದುದರಿಂದ ಪ್ರಾಚೀನ ಆಂಧ್ರವು ಈಗಿನ ತೆಲಗು ಭಾಷಿಕರ ಆಂಧ್ರವಲ್ಲ.

ಆರ್ಯಾವರ್ತದ ದಕ್ಷಿಣಕ್ಕಿರುವ ಎಲ್ಲ ನಾಡಿಗೆ, ಅಂದರೆ ದಕ್ಷಿಣಾಪಥಕ್ಕೆ ಕಗ್ಗತ್ತಲೆಯ ನಾಡು, ಅಂಧರ್-ಆಂಧ್ರಲೋಕ ಎಂದು ಸಾಮಾನ್ಯವಾಗಿ ಆರ್ಯರು ಹೇಳುತ್ತಿದ್ದರು (“ಅಸುರ್ಯಾನಾಮ ತೇ ಲೋಕಾಃ ಅಂಧೇನ ತಮಸಾವೃತಾಃ”).  ಗ್ರೀಕರ ಸಮುದ್ರಯಾನ ಸೂಚಿಕೆಯಲ್ಲಿ (periplus) ಆಂಧ್ರ ಶಬ್ದವು ದಕ್ಷಿಣಾಪಥವೆಂಬರ್ಥದಲ್ಲಿಯೆ ನಿಸ್ಸಂಗದಿಗ್ಧವಾಗಿ ಉಪಯೋಗಿಸಲ್ಪಟ್ಟಿದೆ. ಅಂಧ(ಕಾ) ಅಸುರನನ್ನು ಸಂಹರಿಸಿ ಆರ್ಯರು ದಕ್ಷಿಣಾಪಥಕ್ಕೆ ಅಡಿಯಿಟ್ಟುದರ ಕುರುಹು ನರ್ಮದಾ ತೀರದಲ್ಲಿದೆ. ರೇವಾ (ನರ್ಮದಾ) ಖಂಡದ ಮಹಾತ್ಮೆಯಲ್ಲಿ ಇದರ ವರ್ಣನೆ ಇದೆ.  

ದಾಕ್ಷಿಣಾತ್ಯರನ್ನು ಸೂಚಿಸುವ ‘ಆಂಧ್ರ’ ಪದವು ಐತರೇಯ ಬ್ರಾಹ್ಮಣದಲ್ಲಿದೆ; ದ್ರವಿಡ ಶಬ್ದವನ್ನು ಆ ತರುವಾಯದ ಲೇಖನಗಳಲ್ಲಿ ಅಂದರೆ ಬೌದ್ಧರ ಗ್ರಂಥಗಳಲ್ಲಿ ಪುರಾಣಗಳಲ್ಲಿ ಮಾತ್ರ ಕಾಣಬಹುದು. ಆದರೆ ಬಳಕೆ ಹೆಚ್ಚಾಗಿ ಒಳಭೇದಗಳ ಬೇರೆ ಬೇರೆ ಜನಾಂಗಗಳ ಪರಿಚಯವಾದ ಹಾಗೆ ಸಾಮಾನ್ಯವಾದ ಆಂಧ್ರ ಶಬ್ದವು ಹಿಂದೆ ಬಿದ್ದು ಕರ್ಣಾಟ, ದ್ರವಿಡ ಎಂಬ ಹೊಸ ಶಬ್ದಗಳು ಆ ಕಾಲದ ಸಾಹಿತ್ಯದಲ್ಲಿ ಮೆಲ್ಲಮೆಲ್ಲನೆ ತಲೆಯೆತ್ತಿದುದು ಸ್ವಾಭಾವಿಕ.

ಕನ್ನಡರೂ ತಮಿಳರೂ ಆರ್ಯರು ಇಟ್ಟ ಆಂಧ್ರರೆಂಬ ಹೆಸರನ್ನು ಮನ್ನಿಸಲಿಲ್ಲ. ಆರ್ಯರು ತಮ್ಮ ಮೂಲಸ್ಥಾನವನ್ನು ಆರ್ಯಾವರ್ತವೆನ್ನುತ್ತಿದ್ದಂತೆ ಈ ಜನಾಂಗದವರು (ಕನ್+ನಾಡು) ಕನ್ನಡ, ಕರ್ಣಾಟ; (ತಮ್ಮ+ವೀಡು, ತಮ್ ವೀಡು, ತಂವಿಡು) ತ(೦)ಮಿಳು ಎಂದು ತಮ್ಮ ದೇಶಗಳನ್ನು ಹೇಳುತ್ತಿರಬೇಕು. ಈ ಶಬ್ದಗಳೆ ಕರ್ಣಾಟ ಮತ್ತು (ದ್ರಮಿಡ, ದ್ರವಿಳ) ದ್ರವಿಡ ಎಂಬ ರೂಪಿನಿಂದ ಸಂಸ್ಕೃತ ಸಾಹಿತ್ಯದಲ್ಲಿ ಸೇರಿಕೊಂದಿವೆಯೆಂದು ಊಹಿಸಲು ಅವಕಾಶವಿದೆ. ಆದುದರಿಂದ ದ್ರಾವಿಡರು ಎನ್ನುವ ಪದವನ್ನು ಬಳಸುವಾಗ ಅದರಲ್ಲಿ ದಟ್ಟವಾದ ತಮಿಳು ಛಾಯೆ ಮೂಡುತ್ತದೆ. ಆರ್ಯರು ಭಾರತಕ್ಕೆ ಪ್ರವೇಶಿಸಿದಾಗ, ತಮಿಳರು ಹಾಗು ಕನ್ನಡಿಗರು ಏಕರೂಪರಾಗಿರಲಿಲ್ಲ. ತಮಿಳರಲ್ಲಿ ಹಾಗು ಕನ್ನಡಿಗರಲ್ಲಿ ವಿಭಿನ್ನತೆ ಅದಾಗಲೇ ಮೂಡಿತ್ತು.

ದಕ್ಷಿಣಾಪಥ ಎನ್ನುವುದು ಈ ನಾಡಿಗೆ ವೈದಿಕರು ನೀಡಿದ ಹೆಸರು. ಆದರೆ ಪಟ್ಟಿ ಅಥವಾ ಪಾಡಿ ಎನ್ನುವುದೇ ಈ ಭಾಗದ ನಿಜವಾದ ಹೆಸರು. ವರಹಟ್ಟ (ವರಾಡ), ಕರಹಟ್ಟ (ಕರಾಡ), ಮರಹಟ್ಟ (ಮರಾಡ) ಮೊದಲಾದ ಹೆಸರುಗಳು ದಕ್ಷಿಣಾಪಥವು ಮೊದಲು ಪಟ್ಟಿ (=ಪಾಡಿ, ಹಾಡಿ) ಆಗಿತ್ತು ಎನ್ನುವುದನ್ನು ಸಿದ್ಧಪಡಿಸುತ್ತವೆ. ಸಪ್ತಾರ್ಥ ಲಕ್ಷ ರಟ್ಟಪಾಡಿಯ ಪ್ರಾಚೀನ ಉಲ್ಲೇಖವಿದೆ. ಇದು ಸುಮಾರಾಗಿ ನರ್ಮದೆಯಿಂದ ಕಾವೇರಿಯವರೆಗಿನ ನಾಡನ್ನು ಒಳಗೊಳ್ಳುತ್ತದೆ. ಮೈಸೂರಿನ ಭಾಗವು ಗಂಗವಾಡಿ ಎಂದು ಪ್ರಸಿದ್ಧವಾಗಿತ್ತು. ಪಾಡಿ ನಾಲ್ಕು ನಾಡು ಎಂದು ಕೊಡಗಿನಲ್ಲುಂಟು.

ಸಂತೆ-ಪೇಟೆ ಎನ್ನುವ ಜೋಡುನುಡಿಯ ಪ್ರಯೋಗವು ಕನ್ನಡದಲ್ಲಿದೆ. ಕ್ರಿ.ಶ. ೧೨ನೆಯ ಶತಮಾನದ ‘ಜ್ಞಾನೇಶ್ವರಿ’ ಗ್ರಂಥದಲ್ಲಿ ಪೇಟಾ ಎನ್ನುವ ಪದವು ಸಿಗುತ್ತದೆ. ಸಾಂತಿ-ಪಾಟಕ ಎನ್ನುವ ಊರು ಬಂಗಾಲದಲ್ಲಿದೆ. ಬಾಜರ-ಹಾಟ ಹಾಟವಟಿ ಎನ್ನುವ ಜೋಡುನುಡಿಗಳು ಮರಾಠಿಯಲ್ಲಿವೆ.  ಹಾಟಿ-ಪೇಟಾ ಎನ್ನುವ ಊರು ವಿಶಾಖಾಪಟ್ಟಣ ಜಿಲ್ಲೆಯಲ್ಲಿದೆ.

ಪಟ್ಟ, ಪಟ್ಟಣ, ವಾಟ, ವಾಟಿಕಾ, ಹಟ್ಟಿ ಮೊದಲಾದವುಗಳು ಅಂದಿನ ಕನ್ನಾಡ ಪಟ್ಟಿಕಾರರು ಸಂಸ್ಕೃತದವರಿಗೆ ಕೊಟ್ಟ ತಮ್ಮ ಸಂಸ್ಕೃತಿಯ ವಿಶೇಷ ಕಾಣಿಕೆಯ ನಿಶ್ಚಿತ ಕುರುಹುಗಳಾಗಿವೆ. ಹಾಟಕ ಎನ್ನುವುದೂ ಸಹ ಕನ್ನಾಡು ಸಂಸ್ಕೃತಕ್ಕೆ ಸಲ್ಲಿಸಿದ ಬೆಲೆಯುಳ್ಳ ಕಾಣಿಕೆ.

ಪ್ರಾಚೀನ ಕಾಲದಲ್ಲಿ ಬಂಗಾಳದ ಒಂದು ಪ್ರದೇಶಕ್ಕೆ ಗೌಡ ಎನ್ನುವ ಹೆಸರಿತ್ತು. ಈ ಹೆಸರು ಬರಲು ಕಾರಣರಾದ ಗೌಳ(ಡ)ರು ಯಾರು?  ಬಂಗಾಲದಲ್ಲಿ ಪಟ್ಟಿ, ಪಾಡಾ, ಪಾರಾ, ಪಾಟಕ, ಹಟ್ಟಿ, ಊರು, ಸಂತಿ, ಕಂಡಿ, ಗಡ್ಡಾ, ಪೊಲ ಎನ್ನುವ ಗ್ರಾಮನಾಮಗಳಿಗೆ ಕಾರಣರಾದ ಪಟ್ಟಿಗಳು (ಪತ್ತಿಗಳು) ಎಂದರೆ ಹಟ್ಟಿಕಾರ ಗೋವಳರಿಂದಲೇ ಆ ನಾಡಿಗೆ ಗೌಡ ಎನ್ನುವ ಹೆಸರು ಬಂದಿರಬೇಕು.
ಬಂಗಾಲವನ್ನು ಆಳಿದ ಸೇನ ಬಲ್ಲಾಳರು ಕರ್ಣಾಟರು ಎನ್ನುವುದು ಗಮನಾರ್ಹವಾಗಿದೆ. ಆದುದರಿಂದ ಈ ಗೌಳರು ದ್ರವಿಡ(ತಮಿಳ)ರಾಗಿರುವ ಸಾಧ್ಯತೆಯು ಶೂನ್ಯವಾಗಿದೆ.

ಮಲೆಯರೆಂದು ಪರ್ವತೇಯರಿಗೆ ಹೆಸರು. ಎಲ್ಲ ಹಟ್ಟಿಕಾರರು ಇಂದ್ರನಿಗೆ ತಲೆವಾಗಲಿಲ್ಲ.  ಇಂತಹವರೊಡನೆ ಆದ ಕಲಹದ ಕತೆಯೆ ‘ಮಲ್ಲಾರಿ ಪುರಾಣ’ದಲ್ಲಿದೆ. ಮಲ್ಲಾಸುರನನ್ನು ಸಂಹರಿಸಿದ ಕತೆ ಅದರಲ್ಲಿದೆ. ‘ಮಲ್ಹಾರಿ’ ಎನ್ನುವುದು ಆರಿಯರ ಪರಂಪರೆಯಲ್ಲಿ ಇರುವ ಹೆಸರು. ಇದೇ ದೇವತೆಗೆ ಹಟ್ಟಿಕಾರರು ಮಲ್ಲಯ್ಯನೆಂದು ಕರೆಯುತ್ತಾರೆ. ಈ ಮಲ್ಲಾರಿ ದೇವತೆಯು ಶಿವನ ಅವತಾರವೆಂದು ಗ್ರಹಿಕೆ ಇದ್ದರೂ, ಆ ದೇವತೆಯ ವಾಹನಗಳನ್ನು ನೋಡಿದರೆ, ಅದರಲ್ಲಿ ಇಂದ್ರನ ಕುರುಹುಗಳೂ ಕಾಣುವುವು. ಹಟ್ಟಿಕಾರರಲ್ಲಿ ಕುರುವರು ಈ ದೇವತೆಯ ಉಪಾಸಕರು. ಮರಾಠರು ಮಲ್ಲಾರಿ ಅಥವಾ ಖಂಡೋಬನೆಂದು 
ದೇವತೆಯನ್ನು ಪೂಜಿಸುತ್ತಾರೆ. ಮೊಹೆಂಜೊದಾರೊದ ಅವಶೇಷಗಳಿಂದ ಆ ಕಾಲದಲ್ಲಿಯೂ ಈ ಸಂಪ್ರದಾಯವು ಇದ್ದಿತೆಂದು ತಜ್ಞರು ಹೇಳುತ್ತಾರೆ. ಮೊಹೆಂಜೊದಾರೊದಲ್ಲಿ ದೊರೆತ ಕಲ್ಲಿನ ಎರಡು ಅರ್ಧ ಪುತ್ತಳಿಗಳು ಧ್ಯಾನಮೂರ್ತಿಗಳಾಗಿವೆ ಎಂದು ಕೋಲಕತ್ತೆಯ ಆರ್ಕಿಯಾಲಾಜಿಕಲ ಮ್ಯೂಜಿಯಮ್ಮಿನ ಸುಪರಿಂಟೆಂಡಂಟರಾದ  ಚಂದಾ ಅವರು ಅಭಿಪ್ರಾಯಪಟ್ಟಿದ್ದಾರೆ. ಯೋಗಸಿದ್ಧರು, ಜಂಗಮ ಯತಿಗಳು ಮೊದಲಾದವು ವೇದಪೂರ್ವ ಪದ್ಧತಿಗಳಾಗಿವೆ. ಕನ್ನಾಡಿನಲ್ಲಿರುವ ಅನೇಕ ಊರುಗಳ ಹೆಸರುಗಳು ಈ ಸಿದ್ಧಪುರುಷರ ಪ್ರಭಾವಸೂಚಕವಾಗಿವೆ. ಕುರುವರು ವೀರಶಿವನ ಭಕ್ತರು. ಇವರು ವೀರ‘ನಾಯಕ’ರು. ಈ ವೀರನೇ ‘ಬೀರ’ನಾಗಿ ಮತ್ತೆ ಸಂಸ್ಕೃತರೂಪ ತಾಳಿ ಭೈರವೇಶ್ವರನಾಗಿರಬಹುದು. ಭೈರವೇಶ್ವರನು ಕ್ಷೇತ್ರಪಾಲಕ. ಅಂದರೆ ಊರ ಕಾವಲುಗಾರ, ಅಂದರೆ ಹಳಬ-ಕುರುಬ. ಮಹಾರಾಷ್ಟ್ರದಲ್ಲಿ ‘ಹಳಬ’ ಕುಲಗಳಿವೆ. ಇವರ ಕೆಲಸ ಊರ ಗೌಡರು ಹೇಳಿದ ಊರ ಕೆಲಸಗಳ ನಿರ್ವಹಣೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಹಳೆಪೈಕ’ರಿದ್ದಾರೆ. ಮೈಲಾರಗಳು ಬಹುತೇಕವಾಗಿ ಗುಡ್ಡದ ಮೇಲೆ ಅಥವಾ ಪಕ್ಕದಲ್ಲಿವೆ.  ಕಲ್ಲೇಶ, ಕಲ್ಲಿನಾಥ, ಕಲ್ಲೇಶ್ವರ ಇವು ನಿಜವಾಗಿಯೂ ‘ಕಳ್ಳು’ ಅಂದರ ‘ಹಾಲಿ’ಗೆ ಸಂಬಂಧಿಸಿದವು. ಕಲ್ಲಪ್ಪನೆಂದರೆ, ಕಳ್ಳಪ್ಪ ಅರ್ಥಾತ್ ಹಾಲಪ್ಪ.  ಕಲ್ಲಿನಾಥನ ದೇವಸ್ಥಾನಗಳಿಗೇ ಮೂಲಸ್ಥಾನದ ದೇವರು ಎನ್ನುವ ಪರ್ಯಾಯ ನಾಮವಿದ್ದದ್ದು ಅರ್ಥಪೂರ್ಣವಾಗಿದೆ.  ಕಳವರು ಈ ನಾಡ ಮೂಲಿಗರು. ಇದು ಅವರ ಮೂಲಸ್ಥಾನದ ದೇವರು.

ಕನ್ನಡಿಗರು ಉತ್ತರ ಭಾರತದ ಮೂಲಿಗರಾಗಿದ್ದರಿಂದಲೇ ಅವರ ಅವಶಿಷ್ಟ ಕುರುಹುಗಳು, ಪಳೆಯುಳಿಕೆಗಳು(!) ಆರ್ಯರ ಹಾಗು ಕನ್ನಡಿಗರ ಸಮ್ಮಿಲನದ ಶತಮಾನಗಳ ನಂತರವೂ ನಮಗೆ ದೊರೆಯುತ್ತಿವೆ.

(೨) ಭಾಷಾಸಾಕ್ಷಿ
ವೇದಗಳು ಹಾಗು ಉಪನಿಷತ್ತುಗಳು ಪುರಾಣಗಳಿಗಿಂತ ಹಳೆಯವು. ಛಾಂದೋಗ್ಯ ಉಪನಿಷತ್ತಿನಲ್ಲಿ ಮಿಡತೆಗಳ ಹಾವಳಿಯಿಂದ ಕುರುದೇಶದಲ್ಲಿ ದುರ್ಭಿಕ್ಷವಾದ ಸಂಗತಿಯ ಉಲ್ಲೇಖವಿದೆ. (‘ಮಟಚಿಹತೇಷು ಕುರುಷು’). ಮಟಚಿ ಇದು ಮಿಡತೆ ಎನ್ನುವ ಕನ್ನಡ ಪದದ ಸಂಸ್ಕೃತೀಕರಣವಾಗಿದ್ದು, ತಮಿಳಿನಲ್ಲಿ ಮಿಡತೆಗೆ ವೆಟ್ಟುಕ್ಕಿಳಿ, ವಿಟ್ಟಿಲ ಎನ್ನುವ ಪದಗಳಿವೆ. ಆದುದರಿಂದ ಉಪನಿಷತ್ತಿನ ಕಾಲದಲ್ಲಿಯೇ, ಆರ್ಯರು ಕನ್ನಡಿಗರೊಡನೆ  ಬೆರೆತಿದ್ದರು ಎನ್ನುವುದನ್ನು ಇದು ಸೂಚಿಸುತ್ತದೆ.

ಡಾ^.ದೇವದತ್ತ ಭಾಂಡಾರಕರರು ತಮ್ಮ Charmichel Lecturesನಲ್ಲಿ ಹೇಳುವದೇನೆಂದರೆ:
“Matachi is a Sanskritised form of the well known Canarese word `midiche’…Scholors are unanimous that Chhandogya Upanishad is one of the earliest of the Upanishads. Nobody doubts that this Upanishad was put together in the north of India, specially in the Punjab….”

ಆಧುನಿಕ ಪ್ರಾಕೃತ ಭಾಷೆಯ ಹುಟ್ಟಿಗೆ, ಆರ್ಯೀಕರಣ ಹೊಂದಿದ ಹಟ್ಟಿಕಾರ ಜನರೆ ಅಂದರೆ ಕನ್ನಡಿಗರೆ ಕಾರಣರು. ಆರ್ಯರ ಪ್ರಭಾವಕ್ಕೆ, ಪ್ರಭುತ್ವಕ್ಕೆ ಒಳಗಾದ ಹಟ್ಟಿಕಾರರು ಅಂದರೆ ಕನ್ನಾಡವರ ಮೊದಲಿಗರಾದ ಯದು-ತುರ್ವರು ಆಳುವವರ ಆರ್ಯಭಾಷೆಗೆ ಶರಣಾದರು. (ತುರುಕರ ಆಕ್ರಮಣದ ನಂತರ, ನಮ್ಮವರು ಉರ್ದೂ ಭಾಷೆಯನ್ನು ತಮ್ಮದಾಗಿಸಿಕೊಂಡದ್ದನ್ನು ಹಾಗು ಆಂಗ್ಲರ ಆಕ್ರಮಣದ ನಂತರ ಇಂಗ್ಲೀಶ ಭಾಷೆಯು ಭಾರತೀಯರ ಶಿಷ್ಟ ಭಾಷೆಯಾಗಿದ್ದನ್ನು ನೆನಪಿಸಿಕೊಳ್ಳಿರಿ). ಕನ್ನಡಿಗರು ಆರ್ಯಭಾಷೆಯನ್ನು ತಮ್ಮದಾಗಿ ಮಾಡಿಕೊಳ್ಳುವಾಗ ವ್ರಜಭಾಷೆಯು ಹುಟ್ಟಿತು. ಇವರು ಕನ್ನಡಿಗರು ಎನ್ನುವುದಕ್ಕೆ ಸಾಕ್ಷಿ ಎಂದರೆ, ಉತ್ತರಭಾರತದಲ್ಲೆಲ್ಲ ‘ಖನ್ನಾ’ ಎನ್ನುವ ಅಡ್ಡ ಹೆಸರಿನ ಜನರಿದ್ದಾರೆ.  ಖನ್ನಾ ಇದು ‘ಕನ್ನ’ ಎನ್ನುವುದರ ರೂಪಾಂತರವಷ್ಟೇ. ಕನ್ನ ಎಂದರೆ ಕಾನ್ಹಾ, ಕನ್ನಯ್ಯ, ನಮ್ಮ ಕೃಷ್ಣ; ನಮ್ಮ ಕಣ್ಣಪ್ಪ. ಈ ಕನ್ನರ ದೇಶವೇ ಖಾನದೇಶ.
ಈ ಅವಧಿಯಲ್ಲಿ ಕನ್ನಡವು ತಮಿಳಿನಿಂದ ಭಿನ್ನವಾಗಿರದೇ ಇದ್ದರೆ, ಕನ್ನ ಎನ್ನುವ ಜನಾಂಗವೂ ಇರುತ್ತಿರಲಿಲ್ಲ; ಖಾನದೇಶವೂ ಇರುತ್ತಿರಲಿಲ್ಲ. ಪ್ರಾಕೃತ ಭಾಷೆಯ ಬೆಳವಣಿಗೆಗೆ ಈ ಕನ್ನರೇ ಅಂದರೆ ಕನ್ನಡಿಗರೇ ಕಾರಣರು ಎನ್ನುವುದಕ್ಕೆ ಅವರ ಭಾಷಾವೈಶಿಷ್ಟ್ಯದ ಉದಾಹರಣೆಗಳನ್ನು ಈ ರೀತಿಯಾಗಿ ಕೊಡಬಹುದು:

ಕನ್ನಡಿಗರು ಸಾಮಾನ್ಯವಾಗಿ ‘ಪ’ಕಾರವನ್ನು ಬಿಟ್ಟುಬಿಟ್ಟು, ಅದರ ಬದಲು ‘ಹ’ಕಾರವನ್ನು ಬಳಸಲು ಪ್ರಾರಂಭಿಸಿದರು. ಉದಾಹರಣೆಗಳೆಂದರೆ ಪಾವು=ಹಾವು, ಪಳ್ಳಿ=ಹಳ್ಳಿ, ಪಟ್ಟಿ=ಹಟ್ಟಿ, ಪಾಲು=ಹಾಲು, ಪುಲ್ಲು=ಹುಲ್ಲು ಇತ್ಯಾದಿ. ಹಿಂದೀ ಭಾಷೆಯ ‘ಹಲವಾ’ ಎನ್ನುವುದು ಎಲ್ಲರಿಗೂ ಪರಿಚಿತವಾದ ಪದವಾಗಿದೆ. ಇದು ‘ಹಾಲಿ’ನಲ್ಲಿ ಮಾಡಿದ ಸಿಹಿ ಪದಾರ್ಥ. ಅದರಂತೆ ‘ಹಲವಾಯಿ’ ಎನ್ನುವುದು ಸಿಹಿ ತಿಂಡಿಗಳನ್ನು ಮಾಡುವವರ ಹೆಸರು. ಇವು ಕನ್ನಡದಿಂದಲೇ ಹಿಂದಿಗೆ ಹೋದ ಪದಗಳು. ಇವು ತಮಿಳಿನಿಂದ ಅಥವಾ ‘ತಮಿಳು+ಕನ್ನಡ’ದ ಮೂಲಭಾಷೆಯಿಂದ ಜನಿಸಿದ ಪದಗಳಾಗಿದ್ದರೆ ಇವನ್ನು ‘ಪಲವಾ’, ‘ಪಲವಾಯಿ’ ಎಂದು ಕರೆಯುತ್ತಿದ್ದರಲ್ಲವೆ?

ಅದರಂತೆಯೆ, ಕನ್ನಡಿಗರೂ ಸಹ ಅನೇಕ ಆರ್ಯಮೂಲ ಪದಗಳನ್ನು ಸ್ವೀಕರಿಸಿದ್ದಾರೆ. ಪುಟ್ಟ ಮಕ್ಕಳನ್ನು ರಮಿಸುವಾಗ ಕನ್ನಡ ತಾಯಿ, ‘ನನಗೆ ಹತ್ತಾ ಮಾಡು’ ಎನ್ನುತ್ತಾಳೆ. ‘ಹತ್ತಾ’ ಪದವು ‘ಹಸ್ತ’ ಎನ್ನುವ ಸಂಸ್ಕೃತ ಮೂಲದ ಪ್ರಾಕೃತ ಪದದಿಂದ ಬಂದಿದೆ. (ಹಿಂದೀಯಲ್ಲಿ ಇದು ‘ಹಾಥ’ ಆಗಿದೆ.) ‘ಆಬೂ ಕುಡಿಯುತ್ತೀಯಾ’ ಎಂದು ತಾಯಿ ಮಗುವನ್ನು ಕೇಳುತ್ತಾಳೆ. ಆಬೂ ಇದು ‘ಆಪ್’(=ನೀರು) ಪದದ ರೂಪಾಂತರ. ಈ ವಿನಿಮಯಗಳು ನಡೆದದ್ದು ಆರ್ಯ ಹಾಗು ಕನ್ನಡ ಭಾಷಿಕರ ನಡುವೆ. ಇದರರ್ಥವೇನೆಂದರೆ, ಆರ್ಯರೊಡನೆ ಸಮ್ಮಿಲನ ಹೊಂದಿದ ಮೂಲನಿವಾಸಿಗಳು ಮುಖ್ಯವಾಗಿ  ಕನ್ನಡಿಗರಾಗಿದ್ದರು.

ಗುಜರಾತದ ದ್ವಾರಕೆಯಲ್ಲಿ ನೆಲೆಸಿದ ಕೃಷ್ಣನನ್ನು ಅಲ್ಲಿಯ ಭಕ್ತರು ‘ಕನ್ಹಯ್ಯ, ಕಾನ್ಹಾ’ ಎಂದೆಲ್ಲ ಸ್ತುತಿಸಿದ್ದಾರೆ ಎನ್ನುವುದನ್ನು ಗಮನಿಸಿದಾಗ, ಈ ಕನ್ನಯ್ಯನು, ನಮ್ಮ ಕಣ್ಣಪ್ಪ ಎಂದು ಸ್ಪಷ್ಟವಾಗದಿರುವುದೆ? ಯದು-ತುರ್ವಸುಗಳ ವಂಶದ ಕೃಷ್ಣನನ್ನು ಹಾಗು ಯಾದವರನ್ನು ಕನ್ನಡಿಗರು ಎಂದು ಕರೆಯದೆ, ದ್ರವಿಡರು ಎಂದು ಸಾಧಾರಣೀಕರಿಸುವುದು ಕನ್ನಡಿಗರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದಾರೆ ಎನ್ನುವುದನ್ನು ತೋರಿಸುವದಷ್ಟೆ! ಸೂರ್ಯಪ್ರಕಾಶದಷ್ಟು ನಿಚ್ಚಳವಾಗಿರುವ ಸತ್ಯವನ್ನು ನಂಬಲಾರದ ಈ ಕನ್ನಡಿಗರನ್ನು ನಾಚುಬುರಕರು ಎನ್ನಬೇಕೊ, ಮುಖಹೇಡಿಗಳು ಎನ್ನಬೇಕೊ ಎನ್ನುವುದು ತಿಳಿಯದು.

ದ್ರಾವಿಡ ಎನ್ನುವ ಪದವು ಜನಪ್ರಿಯವಾಗತೊಡಗಿದ್ದ ಸಮಯದಲ್ಲಿ, ಪಾಶ್ಚಾತ್ಯ ಹಾಗು ಭಾರತೀಯ ಸಂಶೋಧಕರು ಕನ್ನಡ ಭಾಷೆಯ ಪ್ರಭಾವವನ್ನು ಅರಿಯದೆ, ದ್ರಾವಿಡ ಭಾಷೆ ಎಂದು ಅಂದಿರುವುದು ಸಹಜವಾಗಿದೆ. ಅದಕ್ಕೇ ಜೋತು ಬಿದ್ದ ನಾವು ನಮ್ಮ ಇತಿಹಾಸವನ್ನು ಅರಿಯದ ಕುರುಡರಾಗಿದ್ದೇವೆ.

ಪೆರ್ಲರ ಹೇಳಿಕೆ  (೫). ಕೆಲವು ಪದಗಳು ಸಾಂಸ್ಕೃತಿಕ-ಸಾಮಾಜಿಕ ಕೊಡುಕೊಳೆಯ ಸಂದರ್ಭದಲ್ಲಿ ಇತ್ತಿಂದತ್ತ ಅತ್ತಿಂದಿತ್ತ ಆಗಬಹುದೇ ಹೊರತು ಕನ್ನಡ ಭಾಷೆಯಿಂದ ಆ ಭಾಷೆಯ ಪದಗಳು ಜನ್ಯವಾಗಿವೆ ಅನ್ನುವಂತಿಲ್ಲ.

ನನ್ನ ವಿವರಣೆ: ಸಾಂಸ್ಕೃತಿಕ-ಸಾಮಾಜಿಕ ಕೊಡುಕೊಳೆಯ ಸಂದರ್ಭದಲ್ಲಿ ಕನ್ನಡ ಹಾಗು ಆರ್ಯಭಾಷೆಗಳಲ್ಲಿ ಅನೇಕ ಪದಗಳ ವಿನಿಮಯವಾಗಿದೆ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಅದಲ್ಲದೆ, ಅನೇಕ ಸಂಸ್ಕೃತ ಪದಗಳು ಕನ್ನಡದಿಂದ ಹುಟ್ಟಿವೆ ಅನ್ನುವುದೂ ಅಷ್ಟೇ ಸತ್ಯವಾಗಿದೆ. ಕೆಲವು ಉದಾಹರಣೆಗಳನ್ನು ನೊಡೋಣ:

ಮಟಚಿ ಎನ್ನುವ ಸಂಸ್ಕೃತ ಪದವು ಮಿಡತೆ ಪದದಿಂದ ಬಂದಿರುವುದನ್ನು ಮೇಲೆ ನೋಡಿದ್ದೇವೆ. ಆದುದರಿಂದ ಇದು ಕನ್ನಡಜನ್ಯ  ಸಂಸ್ಕೃತ ಪದವೇ ಹೌದು. ಅರಿವೆ ಅನ್ನುವ ಅರ್ಥದ ಪಟ ಅಥವಾ ಪಟ್ಟ ಶಬ್ದವು ಸಂಸ್ಕೃತದಲ್ಲಿದೆ. ಪಟ್ಟಜ ಎಂದೂ ಕರೆಯುತ್ತಾರೆ. ಅರ್ಥಾತ್ ಇದು ಪಟ್ಟಿಗಳಲ್ಲಿ (ಹಟ್ಟಿಗಳಲ್ಲಿ) ಹುಟ್ಟಿದ್ದು. ಈ ಕನ್ನಡ ಪಟ್ಟಿಯನ್ನು ಸಂಸ್ಕೃತದಲ್ಲಿ ಪತ್ತೀ, ಪತ್ತನ, ಪಟ್ಟಣ ಎಂದು ಬಳಸಿಕೊಳ್ಳಲಾಗಿದೆ. ಬಿಹಾರದ ಈಗಿನ ರಾಜಧಾನಿಯಾದ ‘ಪಾಟಣಾ’ ಇದು ‘ಪಟ್ಟಣ’ದ ರೂಪಾಂತರವೇ ಹೌದು. ಕನ್ನಡದ ‘ಪಟ್ಟಿಲ’ರೇ, ಕರ್ನಾಟಕ ಹಾಗು ಗುಜರಾತಗಳಲ್ಲಿ ಪಟೇಲರಾದರೆ, ಕರ್ನಾಟಕ ಹಾಗು ಮಹಾರಾಷ್ಟ್ರಗಳಲ್ಲಿ ಇವರು ಪಾಟೀಲರಾಗಿದ್ದಾರೆ.

ಕನ್ನಡ ಹಾಗು ಆರ್ಯಭಾಷೆಯ ಬೆರೆಯುವಿಕೆಯ ಸಂದರ್ಭದಲ್ಲಿ ಅನೇಕ ಜೋಡುಪದಗಳೂ ಹುಟ್ಟಿಕೊಂಡವು. ಒಂದು ಉದಾಹರಣೆ ಎಂದರೆ ಸಂಸ್ಕೃತದಲ್ಲಿರುವ ‘ಕರ್ಪಟ’ ಇದು ಸಂಸ್ಕೃತದ ಕರ ಹಾಗು ಕನ್ನಡದ ಪಟ ಇವುಗಳ ಸಮ್ಮಿಲನ. ಇದರ ಅರ್ಥ ಅರಿವೆ. ಇದೇ ಪದವು ಇಂದು ಹಿಂದೀಯಲ್ಲಿ ಕಪಡಾ ಆಗಿದೆ. ಅರಿವೆಯನ್ನು ಅಂದರೆ ಕಪಡಾವನ್ನು ಮಾರುವವನು ‘ಕಪಾಡಿಯಾ’!

ಈಜಿಪ್ತಿನಲ್ಲಿ ದೊರೆತ, ಸಾಮಾನ್ಯ ಶಕೆಯ ೨ನೆಯ ಶತಮಾನದ ಸುಮಾರಿನ ಗ್ರೀಕ್ ನಾಟಕದಲ್ಲಿ ದೊರೆತ ಕೆಲವು ಕನ್ನಡ ಮಾತುಗಳು ಹೀಗಿವೆ:
“ಬೇರೆ ಕೊಂಚ ಮಧುಪಾತ್ರಕ್ಕೆ ಹಾಕಿ;
ಪಾನಂ ಬೇರೆತ್ತಿ ಕಟ್ಟಿ ಮಧುವಂ ಬೆರೆತ್ತುವೆನ್”
ಈ ಮಾತಿನಲ್ಲಿ ಸಂಸ್ಕೃತ ಪದಗಳು ಬೆರೆತಿರುವದನ್ನು ಗಮನಿಸಿರಿ.
ಇನ್ನು ಪಿ.ಟಿ.ಶ್ರೀನಿವಾಸ ಅಯ್ಯಂಗಾರರ ಅಭಿಪ್ರಾಯದ ಮೇರೆಗೆ ತಮಿಳು ಭಾಷೆಯಲ್ಲಿ ಸಾಮಾನ್ಯ ಶಕೆ ೫ನೆಯ ಶತಮಾನದ ನಂತರವೇ ಸಂಸ್ಕೃತ ಪದಗಳಿಗೆ ಇಂಬು ದೊರೆತಿದೆ. ಇದರರ್ಥವೇನೆಂದರೆ, ಆರ್ಯರೊಡನೆ ಮೊದಲು ಮುಖಾಮುಖಿಯಾದವರು ಕನ್ನಡಿಗರೇ ಹೊರತು ತಮಿಳರಲ್ಲ (ಅಂದರೆ ದ್ರವಿಡರಲ್ಲ.)

(೬) ತಮ್ಮ ಮುಂದುವರೆದ ಪ್ರತಿಕ್ರಿಯೆಯಲ್ಲಿ ಪೆರ್ಲರು ಹೀಗೆ ಹೇಳಿದ್ದಾರೆ:
ಹೊಸ ವಿಚಾರಗಳನ್ನು ಬರೆಯುವಾಗ ‘ನನಗೆ ಹಾಗೆ ತೋರುತ್ತದೆ’, ‘ಹೀಗಿರಬಹುದೇ?’ ‘…ಎಂದು ನನ್ನ ಸಂಶಯ’ ಎಂಬಿತ್ಯಾದಿಯಾಗಿ ಬರೆಯಬೇಕೇ ಹೊರತು, ‘ಇದಮಿತ್ಥಂ’ ಎಂದು ತೀರ್ಮಾನ ಕೊಡುವಂತೆ ಬರೆಯುವುದು ಸರಿಯಾದ ಕ್ರಮವಲ್ಲ. ಹಾಗೆ ಬರೆದರೆ, ತಿಳಿದವರು ಅಂಥವರ ಅಜ್ಞಾನದ ಬಗೆಗೆ ಮರುಕ ಪಡುವರು ಮತ್ತು ತಿಳಿಯದವರು ಆ ತಪ್ಪು ಮಾಹಿತಿಗಳನ್ನು ಪರಮಸತ್ಯ ಎಂದು ನಂಬಿ ಬಿಡುವ ಅಪಾಯವಿದೆ!

ನನ್ನ ವಿವರಣೆ: ನಾನು ಯಾವುದೇ ಹೊಸ ವಿಚಾರವನ್ನು ಬರೆದಿಲ್ಲ. ನನ್ನ ಲೇಖನವು ವಿಶೇಷವಾಗಿ ಕೀರ್ತಿಶೇಷ ಶ್ರೀ ಶಂ.ಬಾ. ಜೋಶಿಯವರ ಸಂಶೋಧನೆಗಳನ್ನು ಆಧರಿಸಿ ಬರೆದದ್ದಾಗಿದೆ. ಇಲ್ಲಿಯ ಕೆಲವು ವಾಕ್ಯಗಳಂತೂ ಹೂಬೇಹೂಬ ಅವರ ವಾಕ್ಯಗಳ ನಕಲುಗಳಾಗಿವೆ. ಶಂ.ಬಾ. ಜೋಶಿಯವರು ಸತ್ಯನಿಷ್ಠ ಹಾಗು ಸತ್ಯನಿಷ್ಠುರ  ಸಂಶೋಧಕರು. ಅವರು ತಮ್ಮ ಗ್ರಂಥಗಳಲ್ಲಿ ನೀಡಿದ ಕನ್ನಡ, ಸಂಸ್ಕೃತ, ಮರಾಠಿ, ತಮಿಳು, ಇಂಗ್ಲಿಶ್ ಭಾಷೆಯ ಆಕರಗ್ರಂಥಗಳನ್ನು ನಾನು ಈ ಲೇಖನದಲ್ಲಿ ನೀಡಬಹುದಾಗಿತ್ತು. ಆದರೆ, ಅವೇ ಐವತ್ತು ಪುಟಗಳಾಗುವ ಹೆದರಿಕೆಯಿಂದ ಇಲ್ಲಿ ಕೊಟ್ಟಿಲ್ಲ, ಅಷ್ಟೇ.

ಇನ್ನೊಂದು ಮಾತು:
ಗೆಲಿಲಿಯೋನಿಗೆ ಒಂದು ಹೊಸ ವಿಚಾರ ಹೊಳೆದಿತ್ತು: ಭೂಮಿ ಸೂರ್ಯನ ಸುತ್ತಲೂ ತಿರುಗುತ್ತದೆಯೆ ಹೊರತು, ಸೂರ್ಯ ಭೂಮಿಯ ಸುತ್ತಲೂ ತಿರುಗುವದಿಲ್ಲ. ಪೆರ್ಲರ ಅಭಿಪ್ರಾಯದಲ್ಲಿ, ಅವನು ಇದಮಿತ್ಥಂ ಎಂದು ಹೇಳುವ ಬದಲು, ಹೀಗೆ ಹೇಳಬೇಕಾಗಿತ್ತು:
(೧) ನನಗೆ ಅನಿಸುವ ಪ್ರಕಾರ, ಭೂಮಿ ಸೂರ್ಯನ ಸುತ್ತಲೂ ತಿರುಗುತ್ತಿದೆ.
(೨) ಭೂಮಿ ಸೂರ್ಯನ ಸುತ್ತಲೂ ತಿರುಗುತ್ತಿರಬಹುದೆ?
(೩) ಭೂಮಿ ಸೂರ್ಯನ ಸುತ್ತಲೂ ತಿರುಗುತ್ತಿದೆ ಎನ್ನುವುದು ನನ್ನ ಸಂಶಯ.

ಆದರೆ ಗೆಲಿಲಿಯೋನ ಹೇಳಿಕೆಗಾಗಿ, ‘ತಿಳಿದವರು’ (ಅಂದರೆ ಚರ್ಚುಗಳ ಪಂಡಿತರು) ಅವನ ಅಜ್ಞಾನದ ಬಗೆಗೆ ಮರುಕ ಪಟ್ಟು,ಅವನಿಗೆ ಶಿಕ್ಷೆ ನೀಡಿದರು. ‘ತಿಳಿಯದವರು’ (ಅಂದರೆ ವಿಜ್ಞಾನಿಗಳು) ಅವನು ಹೇಳಿದ್ದೇ ಪರಮಸತ್ಯ ಎಂದು ನಂಬಿಬಿಟ್ಟರು! ನನ್ನ ಲೇಖನದಲ್ಲಿಯ ವಿಷಯವನ್ನು ಹೇಗೆ ಸ್ವೀಕರಿಸಬಹುದು ಎನ್ನುವುದು ತಿಳಿದವರಿಗೆ (!) ಹಾಗು ತಿಳಿಯದವರಿಗೆ (!) ಬಿಟ್ಟ ವಿಷಯ!
ಆನುಷಂಗಿಕವಾಗಿ ಮತ್ತೊಂದು ಮಾತನ್ನು ಇಲ್ಲಿ ಹೇಳಬೇಕು:
‘…ಎಂದು ನನ್ನ ಸಂಶಯ’ ಎನ್ನುವುದು ಸರಿಯಾದ ಪ್ರಯೋಗವಲ್ಲ. ‘….ನನ್ನ ಅನುಮಾನ’ ಎನ್ನುವುದು ಸರಿಯಾದ ಪ್ರಯೋಗ.