Saturday, June 20, 2015

ನಾನು ಕೇಳಿದ ಬೇಂದ್ರೆಯವರ ಮೊದಲ (ಹಾಗು ಕೊನೆಯ) ಭಾಷಣ!



ದ.ರಾ.ಬೇಂದ್ರೆಯವರಿಗೆ ೧೯೫೬ರಲ್ಲಿ ೬೦ ವರ್ಷಗಳು ತುಂಬಿದವು. ೧೯೫೮ರಲ್ಲಿ ಅವರ ‘ಅರಳು ಮರಳು’ ಎನ್ನುವ ಕವನಸಂಕಲನವು ಪ್ರಕಟಿತವಾಯಿತು. ಆ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವೂ ದೊರೆಯಿತು. ಈ ಎರಡೂ ಕಾರಣಗಳಿಂದ ಬೇಂದ್ರೆಯವರಿಗೆ ಕರ್ನಾಟಕದ ಅನೇಕ ಕಡೆ ಸನ್ಮಾನಸಮಾರಂಭಗಳು ಜರಗುತ್ತಿದವು. ೧೯೫೯ರಲ್ಲಿ ನಾನು ಸವದತ್ತಿಯ ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದೆ. ನಮ್ಮ ಶಾಲೆಯಲ್ಲೂ ಸಹ ಅವರಿಂದ ಒಂದು ಉಪನ್ಯಾಸವನ್ನು ಏರ್ಪಡಿಸಿ, ಅವರಿಗೆ ಸತ್ಕರಿಸಲು ನಿಶ್ಚಯಿಸಲಾಗಿತ್ತು.

ನಿಶ್ಚಿತ ದಿನದಂದು ಬೇಂದ್ರೆ ನಮ್ಮಲ್ಲಿಗೆ ಬಂದರು. ಅತಿ ಸಾದಾ ಧೋತರ, ಕೋಟು ಹಾಗು ರುಮಾಲನ್ನು ಧರಿಸಿದ ಅವರನ್ನು ವರಕವಿ ಎಂದು ಗುರುತಿಸುವುದು ಅಸಾಧ್ಯದ ಸಂಗತಿಯಾಗಿತ್ತು. ಆದರೆ ಅವರ ಭಾಷಣವನ್ನು ಕೇಳುತ್ತಿರುವಂತೆ, ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಮಂತ್ರಮುಗ್ಧರಾದರು.

ಬೇಂದ್ರೆಯವರು ವಿದ್ಯಾರ್ಥಿಗಳಿಗಾಗಿ ಭಾಷಣ ಮಾಡಬೇಕಾಗಿತ್ತಷ್ಟೆ. ತಮ್ಮ ಕೋಟಿನಿಂದ ಚಿಕ್ಕದೊಂದು ಗ್ಲೋಬ್‍ಅನ್ನು ಬೇಂದ್ರೆ ಹೊರತೆಗೆದು ವಿದ್ಯಾರ್ಥಿಗಳಿಗೆ ತೋರಿಸಿದರು. ಕರ್ನಾಟಕ ಹಾಗು ಭಾರತ ಇವು ಈ ವಿಶಾಲವಾದ ಪೃಥ್ವಿಯ ಒಂದು ಭಾಗ ಎಂದು ಹೇಳುತ್ತ, ‘ಕರ್ನಾಟಕದ ವಿಸ್ತಾರವೇನು?’ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ‘ಕಾವೇರಿಯಿಂದ ಗೋದಾವರಿಯವರೆಗೆ’ ಎಂದು  ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಕೂಗಿದರು. ಬೇಂದ್ರೆಯವರು ನಸುನಕ್ಕರು. ‘ನಿಮಗ ಇತಿಹಾಸ ಗೊತ್ತದ, ಭೂಗೋಲ ಗೊತ್ತಿಲ್ಲ’, ಎಂದು ಚೇಷ್ಟೆ ಮಾಡಿದರು. ಆ ಬಳಿಕ ‘ಅರಳು ಮರಳು’ ಕವನಸಂಕಲನದಲ್ಲಿದ್ದ ಒಂದು ಕವನದ ನುಡಿಯೊಂದನ್ನು ನಮ್ಮೆದುರಿಗೆ  ಗಾನಿಸಿದರು:
’ಕನ್ನಡ ನುಡಿದಿತು ಕನ್ನಡ ಹಕ್ಕಿ
ಕನ್ನಡವೆಂದಿತು ಆ-ಗೋದೆ
ಕಾವೇರಿಯು ತಂಪಾಯಿತು, ಕನ್ನಡ
ಗಾಳಿಯು ಉಸಿರಿತು ಈ ಬೋಧೆ.’

ನೋಡಲು ಸರಳವಾಗಿ ಕಾಣುತ್ತಿರುವ ಈ ನುಡಿಯನ್ನು ಅವರು ವಿವರಿಸಿದಾಗಲೇ, ಅದರ ಅರ್ಥ ನಮಗೆ ಹೊಳೆದದ್ದು. ಆ ಸಮಯದಲ್ಲಿ ಅವರು ಹೇಳಿದ ಪೂರ್ಣ ವಿವರಣೆ ನನಗೆ ಈಗ ನೆನಪಿಲ್ಲ. ಆದರೆ ಅದರ ಮುಖ್ಯ ಭಾಗ ಹೀಗಿದೆ:
ಗೋದಾವರಿ ನದಿಯ ದಂಡೆಯ ಮೇಲೆ ‘ಕನ್ನಡ’ ಎನ್ನುವ ಹೆಸರಿನ ಒಂದು ಹಳ್ಳಿ ಇದೆ. ಅಲ್ಲಿಯ ಜನರು ಮಾತನಾಡುವುದು ಕನ್ನಡವನ್ನೇ. ಒಂದು ಕಾಲದಲ್ಲಿ ಕನ್ನಡ ನಾಡು ‘ಕಾವೇರಿಯಿಂದ ಗೋದಾವರಿಯವರೆಗೆ’ ಹರಡಿತ್ತು. ಈಗ ಕನ್ನಡದ ಮರ್ಯಾದೆ ಕುಗ್ಗಿದೆ. ಅದು ಪುನಃ ‘ಆಗೋದೆ!’ ಎನ್ನಬೇಕು; ರಾಜಕೀಯವಾಗಿ ಅಲ್ಲದಿದ್ದರೂ ಸಾಂಸ್ಕೃತಿಕವಾಗಿ ಆಗಬೇಕು. ಈ ಹುಮ್ಮಸ್ಸು ಕನ್ನಡಿಗರಲ್ಲಿ ಬೇಕು. ಆದರೆ ಕನ್ನಡಿಗರ ಸ್ವಭಾವ ಹೇಗಿದೆ ಎಂದರೆ, ‘ಕಾವೇರಿಯು ತಂಪಾಯಿತು’; ಅವರಿಗೆ ತತ್‍ಕ್ಷಣಕ್ಕೆ ಕಾವು ಏರುತ್ತದೆ, ಹಾಗೆಯೇ ಇಳಿದೂ ಬಿಡುತ್ತದೆ.  ಕಾವಿನಲ್ಲಿ ಹುಚ್ಚಾಟ ಮಾಡಬಾರದು ಎನ್ನುವದು ಕನ್ನಡ ಜನತೆಯ ಸ್ವಾಭಾವಿಕ ತಿಳಿವು ಆಗಿದೆ.

ಸ್ವತಃ ವರಕವಿಯ ಬಾಯಿಯಿಂದಲೇ ಅವರ ಕವನದ ವಿವರಣೆಯನ್ನು ಕೇಳಿದ್ದು ನಮ್ಮೆಲ್ಲರ ಭಾಗ್ಯವಾಗಿತ್ತು. ಬೇಂದ್ರೆಯವರ ಕವನಗಳನ್ನು  ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದರ ಮೊದಲ ಪಾಠವೂ ಇದಾಗಿತ್ತು.

Tuesday, June 2, 2015

ಪದವಿನೋದ-೩



ನೆಯ್ ಎನ್ನುವ ಪದದಿಂದ ನೆಯ್ಕಾರ ಎನ್ನುವ ಪದವು ಬಂದಿದೆ ಎನ್ನುವದು ನಮಗೆಲ್ಲರಿಗೂ ಗೊತ್ತಿದೆ. ಆದರೆ ನೆಯ್ ಪದದ ಅರ್ಥವು weave ಎನ್ನುವದಕ್ಕಷ್ಟೇ ಸೀಮಿತವಾಗಿಲ್ಲ. ಇನ್ನೂ ಕೆಲವು ಅರ್ಥಗಳು ನೆಯ್ ಪದಕ್ಕೆ ಇವೆ. ಉದಾಹರಣೆಗೆ ‘ಎಣ್ಣೆ’ ಎನ್ನುವ ಪದವನ್ನು ಪರಿಶೀಲಿಸಿರಿ. ಎಣ್ಣೆ ಪದವು ‘ಎಳ್+ನೆಯ್’ ಪದಗಳ ಸಂಯುಕ್ತ ರೂಪವಾಗಿದೆ. ಎಳ್ಳನ್ನು ಹಿಂಡಿ ಎಣ್ಣೆಯನ್ನು ತೆಗೆಯುವದು ಬಹಳ ಹಳೆಯ ಪದ್ಧತಿ. ಕಾಲಕ್ರಮೇಣ ಯಾವುದೇ ಪದಾರ್ಥವನ್ನು ಹಿಂಡಿ ತೆಗೆದರೂ ಅದಕ್ಕೆ ಎಣ್ಣೆ ಎಂದೇ ಕರೆಯುವದು ರೂಢಿಯಾಯಿತು. ಉದಾಹರಣೆಗೆ ಕೊಬ್ಬರಿ ಎಣ್ಣೆ, ಕುಸುಬಿ ಎಣ್ಣೆ, ಸೇಂಗಾ ಎಣ್ಣೆ ಇತ್ಯಾದಿ. ಆದುದರಿಂದ ಇಲ್ಲಿ ನೆಯ್ ಪದವನ್ನು ಹಿಂಡು ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಇದರಂತೆ ‘ಬೆಣ್ಣೆ’ ಎನ್ನುವ ಪದವು ‘ಬೆಳ್+ನೆಯ್’ ಎನ್ನುವುವರ ಸಂಯುಕ್ತ ರೂಪವಾಗಿದೆ. ಇಲ್ಲಿ ನೆಯ್ ಪದದ ಅರ್ಥ ‘ಕಡೆಯುವುದು’ ಎಂದಾಗುತ್ತದೆ.  ಕನ್ನಡದ ಬೆಣ್ಣೆಯು ತಮಿಳಿನಲ್ಲಿ ವೆಣ್ಣೆಯಾಗಿಯೇ ಉಳಿದಿದೆ. ಈ ವೆಣ್ ಅಥವಾ ‘ವೆಳ್’ದ ವ್ಯಾಪಾರಿಗಳೇ ವೆಳ್ಳರು. ತಮಿಳುನಾಡಿನಲ್ಲಿರುವ ವೆಳ್ಳೂರು (Vellore) ಇದು ಒಂದು ಕಾಲದಲ್ಲಿ ಬೆಣ್ಣೆ ವ್ಯಾಪಾರಿಗಳ ಊರು! ನಮ್ಮ ಬೆಳಗಾವಿಯೂ ಸಹ ‘ವೆಳಗಾವಿ’ಯೇ. ತಮಿಳಿನಲ್ಲಿ ‘ಊರು’ ಪದವೇ ಉಳಿದುಕೊಂಡಿದ್ದರೆ, ಕನ್ನಡದಲ್ಲಿ ಊರು ಪದದ ಬದಲಾಗಿ ‘ಗಾವಿ (=ಗ್ರಾಮ)’ ಪದವು ಬಂದಿದೆ. ಇದು ಆರೇ (=ಆರ್ಯ) ಜನಾಂಗದ ಸಂಪರ್ಕದ ಪರಿಣಾಮ. ಆದರೇನು, ಸಂಸ್ಕೃತಾಭಿಮಾನಿ ಪಂಡಿತರು ಬೆಳಗಾವಿಗೆ ‘ವೇಣುಗ್ರಾಮ’ ಎನ್ನುವ ನಿರುಕ್ತಿಯನ್ನು ಎಳೆದಾಡಿ ಹಚ್ಚುತ್ತಾರೆ!
(ಟಿಪ್ಪಣಿ: ರಾಮಪ್ರಸಾದರು ತಮ್ಮ ಪ್ರತಿಕ್ರಿಯೆಯಲ್ಲಿ Vellore ಇದರ ಸರಿಯಾದ ಹೆಸರು ವೇಲೂರು ಎಂದೂ, ಇದು ವೇಲಾಯುಧನಾದ ಮುರುಗನ್ ಮೂಲಕ ಬಂದಿದೆ ಎಂದೂ ತಿಳಿಸಿದ್ದಾರೆ. ಅವರಿಗೆ ಧನ್ಯವಾದಗಳು. ಆದರೆ ನನ್ನ ಅಭಿಪ್ರಾಯವು ರೂಪಿತವಾಗಿರುವ ಕಾರಣ ಹೀಗಿದೆ:

ನನ್ನ ಅಭಿಪ್ರಾಯವು ಶಂ.ಬಾ. ಜೋಶಿಯವರು ಹೇಳುವ ಸಿದ್ಧಾಂತದ ಮೇಲೆ ರೂಪಿತವಾಗಿದೆ. ಜೋಶಿಯವರ ಹೇಳಿಕೆ ಹಿಗಿದೆ:
“ಮೂಲ ಹಾಲುಮತದವರಲ್ಲಿ ವಿಳ್-ವೆಳ್ಳರೆಂದೂ ನೆಯ್‍ಯವರು ನೆಯ್ಕಾರರೆಂದೂ ಎರಡೂ ಪಂಗಡಗಳಿಗೆ ಹೆಸರು ಬರಲು ಅವರು ಮಾಡಿಕೊಂಡ ವಿಳುದು ಮತ್ತು ನೆಯ್ ವ್ಯಾಪಾರ-ವ್ಯವಹಾರದ ವೈಶಿಷ್ಟ್ಯವೇ ಕಾರಣವಾಗಿರಬೇಕೆಂದು ತೋರುತ್ತದೆ……ವಿಳ್‍ದ ವ್ಯಾಪಾರಿಗಳು ವಿಳ್ಳರು-ವೆಳ್ಳರು; ಇವರೇ ತಮಿಳುನಾಡಿನ ಅಡಿಗಲ್ಲು…”
ಆದುದರಿಂದ ವಿಳ್‍ದ ಮೂಲಕ ವೇಳೂರು = ವೇಲೂರು ಬಂದಿರಬಹುದು. ಅಥವಾ ಇದು ವೇಲಾಯುಧನ ಮೂಲಕವೂ ಬಂದಿರುವ ಸಾಧ್ಯತೆ ಇದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ರಾಮಪ್ರಸಾದರಿಗೆ ಧನ್ಯವಾದಗಳು.) 

ನಮ್ಮ ಹಟ್ಟಿಕಾರರು (ಅಂದರೆ ಆರ್ಯಪೂರ್ವ ಕನ್ನಡಿಗರು) ಆಕಳನ್ನು ಹಾಗು ಕುರಿಗಳನ್ನು ಸಾಕುತ್ತಿದ್ದರಷ್ಟೆ. ಇವುಗಳ ಹಾಲಿನಿಂದ ಬೆಣ್ಣೆಯನ್ನು ಕಡೆದು ತೆಗೆಯುವುದು ಇವರ ಪ್ರಥಮ ಉದ್ಯೋಗವಾಗಿರಬಹುದು. ಈ ಸಂಶೋಧನೆಯನ್ನು ಮಾಡಿದವರು ಹೆಣ್ಣುಮಕ್ಕಳೇ ಆಗಿರುವುದು ಸಹಜವಾಗಿದೆ. ಗಂಡುಗಳು ಬೇಟೆಗಾಗಿ ಅಡವಿಯಲ್ಲಿ ಸಂಚರಿಸುತ್ತಿದ್ದಾಗ, ತಮ್ಮ ಗೂಡುಗಳ ಎದುರಿನಲ್ಲಿ ತೋಟಗಾರಿಕೆಯನ್ನು ಪ್ರಾರಂಭಿಸಿದವರೂ ಸಹ ಹೆಣ್ಣುಮಕ್ಕಳೇ. ಇವರು ಇಳೆಯನ್ನು (=ಭೂಮಿಯನ್ನು) ಕಡೆದು ಅಲ್ಲಿ ಗಡ್ಡೆಗಳನ್ನು ನೆಟ್ಟು ತೋಟಗಾರಿಕೆಯನ್ನು ಪ್ರಾರಂಭಿಸಿದರು. (ಇಳೆ ಪದವು ಸಂಸ್ಕೃತ ಪದವಲ್ಲ, ಇದು ಕನ್ನಡ ಪದ ಎನ್ನುವುದು ನಿಮ್ಮ ಗಮನದಲ್ಲಿರಲಿ.) ಆದುದರಿಂದಲೇ ವರಕವಿ ಬೇಂದ್ರೆಯವರು ತಮ್ಮ ‘ಗೃಹಿಣಿ’ ಎನ್ನುವ ಕವನದಲ್ಲಿ “ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ”ಎಂದು ಹಾಡಿದ್ದಾರೆ. ತೋಟಗಾರಿಕೆಯ ಮುಂದಿನ ಭಾಗವಾಗಿ ಒಕ್ಕಲುತನ ಪ್ರಾರಂಭವಾದಾಗ ನೆಲವನ್ನು ಕಡೆಯಲು ‘ನೇಗಿಲಿ’ನ ಅವಶ್ಯಕತೆ ಕಂಡು ಬಂದಿತು. ‘ನೇಗಿಲು’ ಪದವು ‘ನೆಯ್+ಇಲ್’ ಅಂದರೆ ‘ಇಳೆ(=ಭೂಮಿ)ಯನ್ನು ಕಡೆ’ ಎನ್ನುವ ಅರ್ಥವನ್ನು ಧರಿಸಿದೆ.

ಆದುದರಿಂದ ಒಂದು ‘ನೆಯ್’ ಪದವು ನೆಯ್ಕಾರರಿಗೆ, ಬೆಣ್ಣೆ ಮಾರಾಟ ಮಾಡುವವರಿಗೆ ಹಾಗು ನೇಗಿಲಯೋಗಿ ಒಕ್ಕಲಿಗರಿಗೆ ಜನ್ಮ ಕೊಟ್ಟಿದೆ. ನೇಗಿಲಿಗೆ ಹಲ ಎಂದೂ ಕರೆಯುತ್ತಾರೆ. ನೇಗಿಲನ್ನು ಹೆಗಲ ಮೇಲೆ ಹೊತ್ತ ಬಲರಾಮನು ಹಲಾಯುಧನಾದ. ನಮ್ಮ ಕೃಷ್ಣ-ಕನ್ನಯ್ಯನ ಅಣ್ಣನಾದ ಈ ಬಲರಾಮನು ರೇವಾ(=ಈಗಿನ ನರ್ಮದಾ) ನದಿಯ ದಂಡೆಯ ಮೇಲಿದ್ದ ರೇವಾಪಟ್ಟಣದ ಅರಸುಕುವರಿ ರೇವತಿಯನ್ನು ಮದುವೆಯಾದ. ಕನ್ನಡ ನಾಡು ನರ್ಮದೆಯಿಂದ ಕಾವೇರಿಯವರೆಗೂ ಹಬ್ಬಿತ್ತು ಎನ್ನುವುದನ್ನು ಮುಳಿಯ ತಿಮ್ಮಪ್ಪಯ್ಯ ಹಾಗು ಶಂ. ಬಾ. ಜೋಶಿಯವರು ಸಿದ್ಧ ಪಡಿಸಿದ್ದಾರೆ.

ಕನ್ನಡ ನಾಡಿನಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೬೬ ಊರುಗಳಿವೆ. ಉದಾಹರಣೆಗೆ ಹಲಕೂರು, ಹಲಗತ್ತಿ, ಹಲಕುಂಡಿ, ಹಲಗೇರಿ, ಹಲಗಾ, ಹಲಸಂಗಿ, ಹಲಗಣಿ ಇತ್ಯಾದಿ. ಈ ಹಲಗಣಿ ಎನ್ನುವ ಊರಿನ ಹೊರಗೆ ಹನುಮಂತ ದೇವರ ಒಂದು ಗುಡಿಯಿದೆ. (ಊರು ಬೆಳೆದ ಮೇಲೆ ಅದೀಗ ಊರ ಒಳಗೇ ಬಂದಿದೆ.) ಈತನಿಗೆ ‘ಹಲಗಣೀಶ (=ಹಲಗಣಿ ಊರಿನ ಈಶ)’ ಎನ್ನುವ ಅಭಿಧಾನವಿದೆ. ಅನೇಕರು ಹಲಗಣೀಶನನ್ನು ‘ಹಲಗಣೇಶ’ ಎಂದು ತಪ್ಪಾಗಿ ಭಾವಿಸಿ ಹಣಮಪ್ಪನನ್ನು ಗಣಪ್ಪನನ್ನಾಗಿ ಮಾಡಿದ್ದಾರೆ! ಈ ಊರುಗಳು ನೇಗಿಲಿನ ತಯಾರಿಕೆಗೆ ಪ್ರಸಿದ್ಧವಾಗಿರಬಹುದು ಎನ್ನುವ ಕಾರಣದಿಂದ, ಅವುಗಳಲ್ಲಿ ‘ಹಲ’ ಪದವು ಇರಬಹುದೇನೊ?

ಇಂಗ್ಲೀಶಿನಲ್ಲಿ furlong ಎನ್ನುವ ಅಳತೆ ಇದೆಯಷ್ಟೆ. ನೇಗಿಲಿನಿಂದ ಒಂದು furrow ಮಾಡುವಾಗ ಉಂಟಾಗುವ ಅಳತೆಯೇ furlong=furrow+long. ಇದರಂತೆ, ನಮ್ಮಲ್ಲಿ ಹರದಾರಿ ಅಂದರೆ ಒಂದು ದಿನದಲ್ಲಿ ಹರಗಬಹುದಾದ ದಾರಿ ಎನ್ನುವ ಕಾರಣದಿಂದ ಬಂದಿರಬಹುದೆ? (ಒಂದು ಹರದಾರಿ=೪ಕಿಮೀ ಸುಮಾರಾಗಿ). ತಿಳಿದವರು ದಯವಿಟ್ಟು ಈ ವಿಷಯದ ಮೇಲೆ ಬೆಳಕು ಚೆಲ್ಲಲು ವಿನಂತಿಸುತ್ತೇನೆ.

ಟಿಪ್ಪಣಿ :  ನಾನು ದ್ರವಿಡರು ಎನ್ನುವ ಪದವನ್ನು ಬಳಸದೆ, ‘ಆರ್ಯಪೂರ್ವ ಕನ್ನಡಿಗರು’  ಎನ್ನುವ ಪದವನ್ನು ಬಳಸುವುದಕ್ಕೆ ಕೆಲವರು ಹುಬ್ಬೇರಿಸಬಹುದು. ಈ ವಿಷಯಕ್ಕೆ ನನ್ನ ಸಮಾಧಾನ ಈ ರೀತಿಯಾಗಿದೆ:
ಒಂದು ಕಾಲದಲ್ಲಿ ಕನ್ನಡ ಹಾಗು ತಮಿಳು ಭಾಷೆಗಳು ಏಕರೂಪವಾಗಿದ್ದವು. ನಂತರ ಅವು ವಿಭಿನ್ನವಾಗತೊಡಗಿದವು. ಈ ಮೊದಲಿನ ಭಾಷೆಯು ಎರಡೂ ಭಾಷೆಗಳಿಗೆ ಅಂದರೆ ಕನ್ನಡ ಹಾಗು ತಮಿಳು ಭಾಷೆಗಳಿಗೆ ತಾಯಿ ಅಲ್ಲವೆ? ಕನ್ನಡ ಭಾಷೆಯು ಸಂಸ್ಕೃತದ ಸಂಪರ್ಕದಿಂದ ವಿಸ್ತಾರವಾಯಿತು, ಆಧುನಿಕವಾಯಿತು; ತಮಿಳು ಆಗಲಿಲ್ಲ. ಅಂದ ಮೇಲೆ ಆರ್ಯಪೂರ್ವ ಭಾಷೆಗೆ ದ್ರಾವಿಡ ಭಾಷೆ ಎನ್ನದೆ, ‘ಕನ್ನಡ ತಾಯಿ’ ಎಂದು ನಾನು ಕರೆಯುವದರಲ್ಲಿ ಏನು ತಪ್ಪಿದೆ?