Thursday, February 25, 2016

ಕಸ್ತೂರಿಯ ಕಂಪು..........ಪಾ. ವೆಂ. ಆಚಾರ್ಯರು



ಬಹುಶಃ ೧೯೬೬ನೆಯ ಇಸವಿ ಇರಬಹುದು. ಕರ್ನಾಟಕದ ಉತ್ತರ, ಪಶ್ಚಿಮ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲು, ಮರಾಠಿಗರು ಜೋರು ಚಳುವಳಿಯನ್ನು ನಡೆಸಿದ್ದರು. ಬೆಳಗಾವಿಯಿಂದ ಹೊರಡುತ್ತಿದ್ದ ‘ತರುಣ ಭಾರತ’, ಮರಾಠಿ ದಿನಪತ್ರಿಕೆಯಂತೂ ಪ್ರತಿದಿನವೂ ಉದ್ರೇಕಕಾರಿ ಲೇಖನಗಳನ್ನು ಪ್ರಕಟಿಸುತ್ತಿತ್ತು. ಗದಗ ಜಿಲ್ಲೆಯ ನರಗುಂದದಲ್ಲಿ ಮಳೆಯಾದ ಸುದ್ದಿಯನ್ನು, ‘ಒಂದು ಕಾಲಕ್ಕೆ ಮರಾಠೀ ಸಂಸ್ಥಾನವಾಗಿದ್ದ ನರಗುಂದದಲ್ಲಿ ಮಳೆಯಾಗಿದೆ’ ಎನ್ನುವ ರೀತಿಯಲ್ಲಿ ‘ತರುಣಭಾರತ’ವು ಪ್ರಕಟಿಸಿತ್ತು.

ಈ ಸಮಯದಲ್ಲಿ ನಾನು ಸುರತ್ಕಲ್ಲಿನಲ್ಲಿ ಇರುವ ಇಂಜನಿಯರಿಂಗ ಕಾ^ಲೇಜಿನಲ್ಲಿ ಕಲಿಯುತ್ತಿದ್ದೆ. ಈ ಹುಚ್ಚು ಸುದ್ದಿಯನ್ನು ಓದಿ, ನಾನೂ ವಿಚಲಿತನಾಗಿದ್ದೆ.  ಮುಂದೆ ಕಾ^ಲೇಜಿಗೆ ರಜೆ ಬಂದಾಗ, ನಾನು ಹಾಗು ನನ್ನ ಗೆಳೆಯ ರಾಮಚಂದ್ರ ಭಟ್ಟ ಇಬ್ಬರೂ ಹುಬ್ಬಳ್ಳಿಗೆ ಹೋಗಿ, ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಾರ್ಯಾಲಯದಲ್ಲಿ ಶ್ರೀ ಪಾ. ವೆಂ. ಆಚಾರ್ಯರನ್ನು ಭೆಟ್ಟಿಯಾದೆವು.

ಕನ್ನಡದ ಪ್ರಮುಖ ಪತ್ರಿಕೆಯಾದ ‘ಸಂಯುಕ್ತ ಕರ್ನಾಟಕ’ವು, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವಿದ್ದಂತಹ ಈ ಪತ್ರಿಕೆಯು ಮರಾಠಿ ಪತ್ರಿಕೆಗಳಿಗೆ ತಿರುಗೇಟು ಕೊಡುವ ರೀತಿಯಲ್ಲಿ ಏಕೆ ಬರೆಯುವದಿಲ್ಲ ಎನ್ನುವುದು ಆಚಾರ್ಯರಲ್ಲಿ ನಮ್ಮ ಸವಾಲಾಗಿತ್ತು. ‘ಮರಾಠಿಗರು ಒಂದು ಕಲ್ಲು ಒಗೆದರೆ, ನಾವು ಎರಡು ಕಲ್ಲು ಒಗೆಯಬೇಕು’ ಎನ್ನುವುದು ನಮ್ಮ ಅಭಿಪ್ರಾಯವಾಗಿತ್ತು.

ಪಾ. ವೆಂ. ಆಚಾರ್ಯರು ಈ ಅನುನಭವಿ, ಅವಿವೇಕಿ ಹುಡುಗರನ್ನು ಪ್ರೀತಿಯಿಂದ ಮಾತನಾಡಿಸಿದರು. ತಮ್ಮ ಬಿಡುವಿಲ್ಲದ ಸಂಪಾದಕೀಯ ಕಾರ್ಯದ ನಡುವೆಯೂ ನಮ್ಮೊಡನೆ ತಮ್ಮ ಸಮಯವನ್ನು ಹಂಚಿಕೊಂಡರು. ನಮ್ಮ ಹುಚ್ಚು  ಬಡಬಡಿಕೆಯನ್ನು ಅವರು ನಗುತ್ತಲೆ ಕೇಳಿಕೊಂಡರು. ಆ ಬಳಿಕ ಅವರು ಹೇಳಿದ ಒಂದು ಮಾತು ನನ್ನ ಕಿವಿಯಲ್ಲಿ ಇನ್ನೂ ನಿನಾದಿಸುತ್ತಿದೆ:
“ಸಂಯುಕ್ತ ಕರ್ನಾಟಕಕ್ಕೆ ಹಿರಿಯ ಪರಂಪರೆ ಇದೆ. ಇದು ಹುಚ್ಚಾಟದ ಪತ್ರಿಕೆಯಲ್ಲ!”

ನಮ್ಮ ಕಣ್ಣಿಗೆ ಕವಿದಿದ್ದ ಪೊರೆಯನ್ನು ತೆಗೆದಂತೆ ನಮಗೆ ಭಾಸವಾಯಿತು. ವರಕವಿ ಬೇಂದ್ರೆಯವರ ಕವನದ ಸಾಲುಗಳು ನೆನಪಾದವು:
‘ಕನ್ನಡ ನುಡಿದಿತು ಕನ್ನಡ ಹಕ್ಕಿ
ಕನ್ನಡವೆಂದಿತು ಆ ಗೋದೆ.
ಕಾವೇರಿಯು ತಂಪಾಯಿತು ಕನ್ನಡ ಗಾಳಿಯು
ಉಸಿರಿತು ಈ ಬೋಧೆ.’

ಇದಕ್ಕೂ ಮೊದಲೂ ಸಹ ನಾನು ಪಾ.ವೆಂ. ಅವರಿಗೆ ಒಂದು ಮೂರ್ಖ ಪತ್ರವನ್ನು ಬರೆದಿದ್ದೆ. ಕಸ್ತೂರಿಯ ‘ಇದುವೇ ಜೀವ, ಇದು ಜೀವನ’ ವಿಭಾಗದಲ್ಲಿ ಪ್ರಕಟವಾದ ಒಂದು ಲೇಖನದ ಮನಃಶಾಸ್ತ್ರೀಯ ವಿಶ್ಲೇಷಣೆಯನ್ನು ಆ ಪತ್ರದಲ್ಲಿ ಮಾಡಿದ್ದೆ.  ಅವರು ಅದಕ್ಕೆ ಉತ್ತರ ನೀಡುತ್ತ, ಎಷ್ಟು ಚೆನ್ನಾಗಿ ನನ್ನ ಕಾಲು ಎಳೆದಿದ್ದರು ಎಂದು ನೆನೆಸಿಕೊಂಡರೆ, ನಗು ಬರುತ್ತದೆ.

ಪಾ. ವೆಂ. ಅವರ ಪರಿಚಯ ನನಗಾಗಿದ್ದದ್ದು ‘ಲಾಂಗೂಲಾಚಾರ್ಯ’ರೆಂದು, ‘ಸಂಯುಕ್ತ ಕರ್ನಾಟಕ’ದ ರವಿವಾರದ ಪುರವಣಿಯಲ್ಲಿ ಬರುತ್ತಿದ್ದ ಅವರ ಹರಟೆಯ ಮೂಲಕ. ಅವರ ಕೆಲವು ಹರಟೆಗಳು ಇನ್ನೂ ನನ್ನ ನೆನಪಿನಲ್ಲಿವೆ. ಕಸ್ತೂರಿ ಮಾಸಪತ್ರಿಕೆ ಪ್ರಾರಂಭವಾದ ಬಳಿಕ, ಅಲ್ಲಿ ಪ್ರಕಟವಾಗುತ್ತಿದ್ದ ‘ನಿಮ್ಮ ಶಬ್ದಸಂಪತ್ತು ಹೆಚ್ಚಲಿ’ ಎನ್ನುವುದು ನಮ್ಮೆಲ್ಲರ ಮೆಚ್ಚಿನ ಪುಟವಾಗಿತ್ತು. ಭಾರತದ ಇತರ ಭಾಷೆಗಳಿಂದ ಅನುವಾದಿತವಾಗಿ ಪ್ರಕಟವಾಗುತ್ತಿದ್ದ ಕಥೆ ಹಾಗು ಲೇಖನಗಳು ಸ್ವಾರಸ್ಯಪೂರ್ಣವಾಗಿರುತ್ತಿದ್ದವು. ಕೆಲವು ಯುರೋಪಿಯನ್ ಕ್ಲಾಸಿಕ್ ಸಾಹಿತ್ಯವನ್ನೂ ಸಹ ಕಸ್ತೂರಿ ನಮಗೆಲ್ಲರಿಗೆ ನೀಡುತ್ತಿತ್ತು.  ( ಫ್ಯೋದೋರ್ ದೋಸ್ತೋವ್ಸ್ಕಿ ಬರೆದ ‘ಕಾರ್ಮಾಝೋವ ಸೋದರರು’ ಹಾಗು ‘ಅಪರಾಧ ಮತ್ತು ಶಿಕ್ಷೆ’, ಅಲ್ಲದೆ ಸರ್ವಾಂಟೆಸ್ ಬರೆದ ‘ಡಾ^ನ್ ಕ್ವಿಕ್ಝೋಟ್’ ಇವುಗಳಲ್ಲಿ ಕೆಲವು.) ಕೊನೆಕೊನೆಯಲ್ಲಿ ಪಾ.ವೆಂ. ಅವರ ಪದಾರ್ಥ ಚಿಂತಾಮಣಿಯಂತೂ ತಾನೇ ಒಂದು ಕ್ಲಾಸಿಕ್ ಆಗಿತ್ತು.

ಪಾ.ವೆಂ. ಹುಟ್ಟಿದ್ದು ಫೆಬ್ರುವರಿ ೫, ೧೯೧೫ರಂದು, ನಿಧನರಾದದ್ದು ೧೯೯೨, ಎಪ್ರಿಲ್ ೪ರಂದು.
ತಮ್ಮ ಬರಹಗಳ  ಮೂಲಕ ಕನ್ನಡಿಗರಿಗೆ ಸಾಹಿತ್ಯ ಹಾಗು ಜ್ಞಾನವನ್ನು ನೀಡಿದ ಪಾ. ವೆಂ. ತಮ್ಮ ಅಸಂಖ್ಯ ಅಭಿಮಾನಿಗಳ ಹೃದಯದಲ್ಲಿ ಇನ್ನೂ ಪರಿಮಳಿಸುತ್ತಿದ್ದಾರೆ, ಕಸ್ತೂರಿಯ ಕಂಪಿನಂತೆ.