ಮೃಚ್ಛಕಟಿಕಮ್ ನಾಟಕವನ್ನು ಬರೆದ ಕವಿಯು
ತನ್ನನ್ನು ಶೂದ್ರಕ ಎನ್ನುವ ಬ್ರಾಹ್ಮಣ ರಾಜ ಎಂದು ಹೇಳಿಕೊಂಡಿದ್ದಾನೆ. ನಾಟಕದಲ್ಲಿ ಬರುವ ವಿಸಂಗತಿಯು
ಬಹುಶಃ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಈ ಕವಿಯು ಬ್ರಾಹ್ಮಣನಾಗಿದ್ದರೆ, ಇವನ ಹೆಸರು ‘ಶೂದ್ರಕ’
ಹೇಗಾಯಿತು? ಅಲ್ಲದೆ, ನಾಟಕದಲ್ಲಿ ರಾಜಪ್ರಭುತ್ವದ
ಹಾಗು ರಾಜನ ಸಂಬಂಧಿಗಳ ಅವಹೇಳನೆ ಇದೆ. ಪ್ರಭುತ್ವದ ವಿರುದ್ಧ ದಂಗೆ ಎದ್ದ ಬಡ ಜನತೆಯು ರಾಜನ ಕೊಲೆ ಮಾಡಿ, ಪ್ರಭುತ್ವವನ್ನು
ಕಿತ್ತೆಸೆಯುತ್ತಾರೆ. ರಾಜನ ಹೆಂಡತಿಯ ತಮ್ಮನು ದುರ್ಮಾರ್ಗದಲ್ಲಿ ನಡೆಯುತ್ತಿರುತ್ತಾನೆ ಹಾಗು ರಾಜ್ಯದ
ಶಾಸನಕ್ಕೆ ಕವಡೆಕಾಸಿನಷ್ಟು ಬೆಲೆ ಕೊಡುತ್ತಿರಲಿಲ್ಲ ಎನ್ನುವುದು ನಾಟಕದಲ್ಲಿಯ ಪ್ರಮುಖ ವಿಷಯವಾಗಿದೆ.
ಶೂದ್ರಕನು ರಾಜನಾಗಿದ್ದರೆ, ಹೀಗೆ ಬರೆಯಬಹುದಿತ್ತೆ? ನಾಟಕದ ನಾಂದಿ ಪದ್ಯದಲ್ಲಿ ಈ ಕವಿಯು (ರಾಜನು) ನೂರುಹತ್ತು ವರುಷ ಬದುಕಿ, ಅಗ್ನಿಪ್ರವೇಶವನ್ನು
ಮಾಡಿ ದೇಹತ್ಯಾಗ ಮಾಡಿದನು ಎಂದು ಹೇಳಲಾಗಿದೆ. ತಾನು ದೇಹತ್ಯಾಗ ಮಾಡಿದ ವಿಷಯವನ್ನು ಕವಿ ತಾನೇ ಬರೆಯಬಹುದೆ?
ಕವಿಗೆ ಸಂಬಂಧಿಸಿದ ಈ ಎಲ್ಲ ಹೇಳಿಕೆಗಳು ಉದ್ದೇಶಪೂರ್ವಕವಾದ ಕಾಲೆಳತಗಳು ಎಂದು ಭಾವಿಸಲು ಆಸ್ಪದ ಮಾಡಿಕೊಡುತ್ತವೆ.
ಶೂದ್ರಕನಿಗಿಂತ ಮೊದಲು ನಾಟಕಗಳನ್ನು
ರಚಿಸಿದ ಭಾಸ ಮತ್ತು ಕಾಲೀದಾಸ ಮೊದಲಾದವರು ರಾಜಾಸ್ಥಾನಕ್ಕಾಗಿ ಹಾಗು ಅಂತಃಪುರವಿನೋದಕ್ಕಾಗಿ ನಾಟಕಗಳನ್ನು
ರಚಿಸುತ್ತಿದ್ದರು. ಇವರ ನಾಟಕಗಳು ರಾಜನನ್ನು ಧೀರೋದಾತ್ತ ನಾಯಕನನ್ನಾಗಿ ಬಿಂಬಿಸುತ್ತಿದ್ದವು. ಮೃಚ್ಛಕಟಿಕಮ್
ನಾಟಕದಲ್ಲಿ ಬಡತನದಲ್ಲಿ ಕಾಲಯಾಪನೆ ಮಾಡುತ್ತಿರುವ ಧೀಮಂತ ಬ್ರಾಹ್ಮಣನೊಬ್ಬನು ನಾಯಕನಾಗಿದ್ದಾನೆ. ರಾಜನ
ಶ್ಯಾಲಕನು (ಹೆಂಡತಿಯ ತಮ್ಮನು) ಖಳನಾಯಕನು. ನಗರದ ಖ್ಯಾತ ಗಣಿಕೆಯು ನಾಯಕಿಯು. ಎಂತಹ ವಿರೋಧಾಭಾಸ ಅಲ್ಲವೆ
ಇದು?
ಭಾಸನ ನಾಟಕಗಳಲ್ಲಿ ಕೆಲವು ನಾಟಕಗಳು
ಕೇವಲ ಒಂದು ಗಂಟೆಯ ನಾಟಕಗಳು. ಆತನ ‘ಸ್ವಪ್ನವಾಸವದತ್ತಾ’ ನಾಟಕವು ಆರು ಅಂಕಗಳ ನಾಟಕವಾಗಿದೆ. ಆದರೆ,
‘ಮೃಚ್ಛಕಟಿಕಮ್’ ನಾಟಕವು ಹತ್ತು ಅಂಕಗಳ ನಾಟಕವಾಗಿದೆ. ಇಷ್ಟು ದೀರ್ಘವಾದ ನಾಟಕವನ್ನು ಹಳ್ಳಿಯ ದೊಡ್ಡಾಟ,
ಬಯಲಾಟಗಳಂತೆ ಇಡೀ ರಾತ್ರಿ ಆಡಬೇಕಾಗುತ್ತಿತ್ತೇನೊ? ಅರ್ಥಾತ್ ಇದರ ಪ್ರೇಕ್ಷಕರು ಜನಸಾಮಾನ್ಯರು! ಬಹುಶಃ
ಈ ಎಲ್ಲ ಸಂಗತಿಗಳು ನಮಗೆ ಸೂಚಿಸುವದೇನೆಂದರೆ, ಈ ನಾಟಕವು ಆ ಸಮಯದಲ್ಲಿ ಒಂದು ವಿಭಿನ್ನವಾದ ನಾಟಕವಾಗಿತ್ತು,
ಒಂದು ವ್ಯವಸ್ಥಾವಿರೋಧೀ ನಾಟಕವಾಗಿತ್ತು!
ಮೊದಲನೆಯ ಅಂಕ:
ನಾಟಕದ ಮೊದಲನೆಯ ಅಂಕದಲ್ಲಿಯೇ ನಾಟಕಕಾರನು
ನಾಯಕನಾದ ಚಾರುದತ್ತನನ್ನು, ಖಳನಾಯಕನಾದ ಶಕಾರನನ್ನು ಹಾಗು ನಾಯಿಕೆ ವಸಂತಸೇನೆಯನ್ನು ರಂಗದ ಮೇಲೆ ತರಬಯಸುತ್ತಾನೆ. ಅರ್ಥಾತ್ ಚಾರುದತ್ತನ ಧೀಮಂತಿಕೆಯ, ಶಕಾರನ ದೌರ್ಜನ್ಯದ ಹಾಗು
ವಸಂತಸೇನೆಯ ಸೌಶೀಲ್ಯ ಮತ್ತು ಅಸಹಾಯಕತೆಯ ಪರಿಚಯವು ನಾಟಕದ ಮೊದಲನೆಯ ಅಂಕದಲ್ಲಿ ಆಗುತ್ತದೆ. ಇದನ್ನು
ಸಾಧಿಸಲು ನಾಟಕಕಾರನು ಸೂತ್ರಧಾರನನ್ನು ಹಾಗು ಚಾರುದತ್ತನ ಗೆಳೆಯನಾದ ಮೈತ್ರೇಯನನ್ನು ಬಳಸಿಕೊಂಡಿದ್ದಾನೆ.
ಸಂಸ್ಕೃತ ನಾಟಕಗಳಲ್ಲಿ ಸೂತ್ರಧಾರನ ಮಾತುಗಳು
ವಿನೋದದಿಂದ ಕೂಡಿರುತ್ತವೆ. ಮೃಚ್ಛಕಟಿಕಮ್ ನಾಟಕದ
ಪ್ರಾರಂಭದಲ್ಲಿ ಸೂತ್ರಧಾರನು ತನ್ನ ಗೃಹಿಣಿಯೊಂದಿಗೆ ನಡೆಸುವ ಸರಸ ಸಂಭಾಷಣೆಯು ‘ರಾಮಾಶ್ವಮೇಧ’ದ ಮುದ್ದಣ,
ಮನೋರಮೆಯರ ಸಂಭಾಷಣೆಯನ್ನು ನೆನಪಿಗೆ ತರುತ್ತದೆ.
ನಾಟಕ ಪ್ರಾರಂಭವಾಗುತ್ತಿರುವಂತೆಯೆ,
ಸೂತ್ರಧಾರನಿಗೆ ತನ್ನ ಹಸಿವೆಯನ್ನು ತಣಿಸುವುದು ಮುಖ್ಯವಾದ ವಿಷಯವಾಗಿದೆ. ಆದುದರಿಂದ ತನ್ನ ಭೋಜನಕ್ಕಾಗಿ
ಏನೆಲ್ಲವನ್ನು ಸಿದ್ಧಪಡಿಸಿರುವೆ ಎಂದು ಆತನು ತನ್ನ ಪತ್ನಿಯನ್ನು ಕೇಳುತ್ತಾನೆ. ಅವನ ಪತ್ನಿಯು, ಅವನಿಗೆ
ಇಷ್ಟವಾದ ಖಾದ್ಯಗಳ ಒಂದು ಉದ್ದವಾದ ಪಟ್ಟಿಯನ್ನೇ ಹೇಳುತ್ತಾಳೆ. ಸೂತ್ರಧಾರನು ಸಂತುಷ್ಟನಾಗುತ್ತಾನೆ.
ಈ ಎಲ್ಲ ಖಾದ್ಯಗಳನ್ನು ಬಡಿಸಲು ಪತ್ನಿಗೆ ಹೇಳಿದಾಗ, ‘ಇವೆಲ್ಲ ಖಾದ್ಯಗಳು ಅಡುಗೆ ಮನೆಯಲ್ಲಿ ಇಲ್ಲ,
ಆದರೆ ಶೆಟ್ಟರ ಅಂಗಡಿಗಳಲ್ಲಿ ಇವೆ’ ಎಂದು ಅವನ ಹೆಂಡತಿಯು ಹಾಸ್ಯ ಮಾಡುತ್ತಾಳೆ. ಈ ಹಾಸ್ಯ ಸನ್ನಿವೇಶಕ್ಕೆ
ಎರಡು ಉದ್ದೇಶಗಳಿವೆ. ಮೊದಲನೆಯದಾಗಿ ಉಜ್ಜಯಿನಿಯಲ್ಲಿ ಹರಡಿದ ಜನಸಾಮಾನ್ಯರ ಬಡತನಕ್ಕೆ ನಾಟಕದಲ್ಲಿ ಈ ರೀತಿಯಲ್ಲಿ ಅಭಿವ್ಯಕ್ತಿಯನ್ನು ನೀಡಲಾಗಿದೆ.
ಎರಡನೆಯದಾಗಿ ನಾಟಕದ ನಾಯಕನು ಬಡತನದಲ್ಲಿ ಬಾಳುತ್ತಿದ್ದಾಗ, ಸೂತ್ರಧಾರನದೂ ಅದೇ ಸ್ಥಿತಿ ಎಂದು ಹೇಳುವ
ಮೂಲಕ ನಾಟಕಕ್ಕೆ ಒಂದು ಸಾಮಾನ್ಯ ಹಿನ್ನೆಲೆ ನೀಡಲಾಗಿದೆ.
ಈ ಅಪಹಾಸ್ಯದಿಂದ ಕೋಪಗೊಂಡ ಸೂತ್ರಧಾರನ
ಕೋಪವನ್ನು ಪರಿಹರಿಸಲು, ಅವನ ಪತ್ನಿಯು ಒಂದು ಉಪಾಯವನ್ನು
ಹೂಡುತ್ತಾಳೆ. ತನಗೆ ಒಳ್ಳೆಯ ಗಂಡನನ್ನು ಪಡೆಯಲು ತಾನು
ಉಪವಾಸ ವ್ರತವನ್ನು ಮಾಡುತ್ತಿದ್ದೇನೆ. ಈ ವ್ರತದ ಅಂಗವಾಗಿ ಓರ್ವ ಬ್ರಾಹ್ಮಣನನ್ನು ತಾನು ಭೋಜನಕ್ಕಾಗಿ
ಕರೆಯಬೇಕಾಗಿದೆ ಎಂದು ಹೇಳುತ್ತಾಳೆ. ಅಲ್ಲಿ ಇಲ್ಲಿ ನೋಡಿದ ಸೂತ್ರಧಾರನು, “ಆಶ್ಚರ್ಯ!
ಇಷ್ಟು ಸಂಪನ್ನವಾದ ಉಜ್ಜಯಿನಿಯಲ್ಲಿ ನಮ್ಮ ಅಂತಸ್ತಿಗೆ ಯೋಗ್ಯನಾದ ಒಬ್ಬ ಬ್ರಾಹ್ಮಣನನ್ನು ಹುಡುಕೋ
ಹಾಗಾಯಿತಲ್ಲ.” ಎಂದು ಉದ್ಗರಿಸುತ್ತಾನೆ. ಓದುಗರು ಇಲ್ಲಿರುವ ವಿಡಂಬನೆಯನ್ನು ಗಮನಿಸಬೇಕು.
ಸೂತ್ರಧಾರನೇ ಉಪವಾಸ ಬೀಳುತ್ತಿರುವಾಗ, ಇವನ ಅಂತಸ್ತಿಗೆ ತಕ್ಕ ಬ್ರಾಹ್ಮಣ ಎಂಥವನು? ಇಲ್ಲಿ ಮತ್ತೂ
ಒಂದು ಒಳಧ್ವನಿ ಇದೆ: ಉಜ್ಜಯಿನಿಯ ಬ್ರಾಹ್ಮಣರು ಅಧ್ಯಯನ,ಅಧ್ಯಾಪನ, ಪೌರೋಹಿತ್ಯ ಮೊದಲಾದ ಬ್ರಾಹ್ಮಣಕರ್ಮಗಳನ್ನು
ಬಿಟ್ಟು ಧರ್ಮಭ್ರಷ್ಟರಾಗಿದ್ದಾರೆ. (ಸ್ವತಃ ನಾಟಕದ ನಾಯಕ ಚಾರುದತ್ತನೇ ತಲೆತಲಾಂತರಗಳಿಂದ ವ್ಯಾಪಾರೀವೃತ್ತಿಯನ್ನು
ಅವಲಂಬಿಸಿದ್ದಾನೆ.)
ಆ ಸಮಯದಲ್ಲಿ ಸೂತ್ರಧಾರನು ಅಲ್ಲಿ ಬರುತ್ತಿರುವ ಬ್ರಾಹ್ಮಣನೊಬ್ಬನನ್ನು ನೋಡಿ, ಭೋಜನಕ್ಕೆ
ಆಹ್ವಾನಿಸಿದಾಗ, ಆ ಬ್ರಾಹ್ಮಣನು ಸೂತ್ರಧಾರನ ಆಹ್ವಾನವನ್ನು ತಿರಸ್ಕರಿಸುತ್ತಾನೆ. ಈತನು ನಾಟಕದ ನಾಯಕನಾದ ಚಾರುದತ್ತನ ನಿಷ್ಠಾವಂತ
ಮಿತ್ರನಾದ ಮೈತ್ರೇಯನು. ಚಾರುದತ್ತನ ಔದಾರ್ಯವನ್ನು
ಕೊಂಡಾಡುತ್ತ, ಅವನು ಬಡವನಾದ ಬಳಿಕ, ತನಗೆ
ಎಷ್ಟು ಕಷ್ಟವಾಗಿದೆ ಎಂದು ಹೇಳಿಕೊಳ್ಳುತ್ತ ಬರುತ್ತಿದ್ದಾನೆ. ಬ್ರಾಹ್ಮಣನನ್ನು ಭೋಜನಕ್ಕೆ
ಕರೆಯುವ ನೆವದಲ್ಲಿ, ಕವಿಯು ಒಂದು ಮುಖ್ಯ ಪಾತ್ರದ ಪರಿಚಯವನ್ನು ಇಲ್ಲಿ ಮಾಡಿಸುತ್ತಾನೆ. ನಾಟಕದಲ್ಲಿ
ಬರುವ ತಿರುವುಗಳಿಗೆ ಹಾಗು ಸಂಕಟಗಳಿಗೆ ಈ ಪ್ರಾಮಾಣಿಕ ಸಜ್ಜನನು ತನ್ನ ಎಡವಟ್ಟುತನದಿಂದಾಗಿ ಕಾರಣೀಭೂತನಾಗಿದ್ದಾನೆ.
ಚಾರುದತ್ತನ ಮತ್ತೊಬ್ಬ ಗೆಳೆಯನು, ಚಾರುದತ್ತನ ಹೆಸರನ್ನು
ಬರೆಯಿಸಿದ ಒಂದು ಶಾಲನ್ನು ಚಾರುದತ್ತನಿಗಾಗಿ ಮೈತ್ರೇಯನ ಜೊತೆಯಲ್ಲಿ ಕಳುಹಿಸಿದ್ದಾನೆ. ಈ ಶಾಲಿನ ಮಹತ್ವವು
ಎರಡನೆಯ ಅಂಕದಲ್ಲಿ ಅರಿವಾಗುತ್ತದೆ. ಇದೀಗ ರಂಗದ ಮೇಲೆ ಚಾರುದತ್ತನ ಪ್ರವೇಶವಾಗುತ್ತದೆ.
ಧರ್ಮನಿಷ್ಠನಾದ ಚಾರುದತ್ತನು ಮನೆಯ ದೇವತೆಗಳಿಗೆ ಸಂಧ್ಯಾಕಾಲದ ಬಲಿಯನ್ನು ಅರ್ಪಿಸಿ ರಂಗದ ಮೇಲೆ ಬರುತ್ತಿರುವುದನ್ನು ಮೈತ್ರೇಯನು
ಕಾಣುತ್ತಾನೆ. ತನ್ನ ಆರ್ಥಿಕ ಪರಿಸ್ಥಿತಿಯಿಂದಾಗಿ ಮನೆಯ ದೇವತೆಗಳಿಗೆ ಸಮರ್ಪಕವಾದ ಬಲಿಯನ್ನು ಅರ್ಪಿಸಲು ಸಹ
ತನ್ನಿಂದ ಸಾಧ್ಯವಾಗುತ್ತಿಲ್ಲವಲ್ಲ ಎಂದು ಹಳಹಳಿಸುತ್ತ ಚಾರುದತ್ತನು ಪ್ರವೇಸಿಸುತ್ತಿದ್ದಾನೆ.
ಚಾರುದತ್ತ ಹಾಗು ಮೈತ್ರೇಯರ
ನಡುವೆ ನಡೆದ ಮಾತುಕತೆಯಲ್ಲಿ, ಚಾರುದತ್ತನು ತನ್ನ ಸಂಪತ್ತು ನಷ್ಟವಾಗಿದ್ದಕ್ಕಾಗಿ ತನಗೆ ದುಃಖವಾಗುತ್ತಿಲ್ಲ,
ಆದರೆ ತನ್ನ ಗೆಳೆಯರನೇಕರು ತನ್ನಿಂದ ದೂರವಾದರಲ್ಲ ಎಂದು ದುಃಖವಾಗುತ್ತಿದೆ ಎನ್ನುತ್ತಾನೆ.
ಆಬಳಿಕ ಚಾರುದತ್ತನು ಮೈತ್ರೇಯನಿಗೆ ಮಾತೃಬಲಿಯನ್ನು ಕೊಡಲೆಂದು ಬೀದಿಯ ಚೌಕಕ್ಕೆ ಹೋಗು ಎನ್ನುತ್ತಾನೆ.
ಮೈತ್ರೇಯನು ಹೋಗಲು ನಿರಾಕರಿಸುತ್ತಾನೆ.
ಅವನು ಕೊಡುವ ಕಾರಣವೆಂದರೆ, ‘ಈ ಸಮಯದಲ್ಲಿ
ರಾಜಬೀದಿಯಲ್ಲಿ ಸೂಳೆಯರು, ವಿಟರು ಹಾಗು ರಾಜನಿಗೆ ಬೇಕಾದವರು ತಿರುಗುತ್ತಿರುತ್ತಾರೆ!’
ಉಜ್ಜಯಿನಿಯು ಎಷ್ಟು ನೀತಿಭ್ರಷ್ಟವಾಗಿದೆ ಹಾಗು ರಾಜ್ಯಾಡಳಿತವು ಎಷ್ಟು ಶಿಥಿಲವಾಗಿದೆ ಎನ್ನುವುದು
ಈ ಮಾತಿನ ಮೂಲಕ ಅರಿವಾಗುತ್ತದೆ.
ಹಾಗೆಂದು ಈ ಸೂಳೆಯರಿಗೆ ತಮ್ಮ ಕಸಬನ್ನು ಸುಸೂತ್ರವಾಗಿ ಸಾಗಿಸಿಕೊಂಡು ಹೋಗಲು
ಸಾಧ್ಯವಾಗಿದೆ ಎಂದಲ್ಲ. ಇವರನ್ನು
ಶೋಷಿಸುವ ಗಣ್ಯಾತಿಗಣ್ಯರು ಇದ್ದೇ ಇದ್ದಾರೆ. (ಅವರಲ್ಲಿ ಊರ ರಾಜನ ಮೈದುನನಾದ
ಶಕಾರನು ಮುಖ್ಯನು.) ಇನ್ನು ಮೈತ್ರೇಯನು ಚಾರುದತ್ತನ
ಮಾತನ್ನು ಕೇಳದೆ ಇರುವುದು ಮುಂದಿನ ಘಟನೆಗಳಿಗೆ ಅವಶ್ಯವಾದಂತಹ ಸಂಗತಿಯಾಗಿದೆ.
ಕವಿಯು ಮೊದಲ ಅಂಕದ ಪ್ರಾರಂಭದಲ್ಲಿ
ನಾಟಕದ ನಾಯಕನಾದ ಚಾರುದತ್ತನನ್ನು ಹಾಗು ಆತನ ಆಪ್ತಮಿತ್ರನಾದ ಮೈತ್ರೇಯನನ್ನು ನೋಡುಗರಿಗೆ ಪರಿಚಯಿಸಿದಂತಾಯಿತು. ಜೊತೆಗೇ,
ಚಾರುದತ್ತನ ಕುಲೀನ ಸ್ವಭಾವದ ಪರಿಚಯವೂ ಸಹ ನೋಡುಗರಿಗೆ
ಆದಂತಾಯಿತು. ಇನ್ನೂ ಎರಡು ಮುಖ್ಯ ಪಾತ್ರಗಳು ಇದೇ ಅಂಕದಲ್ಲಿ ಪ್ರೇಕ್ಷಕರ ಎದುರಿಗೆ ಬರುತ್ತವೆ.
ಈ ದೃಶ್ಯವು ಉದ್ವಿಗ್ನಕಾರಿಯಾದ ದೃಶ್ಯವಾಗಿದೆ.
ಚಾರುದತ್ತನ ಮನೋಧರ್ಮಕ್ಕೆ ವಿರುದ್ಧವಾದ ಶಕಾರನ ಸ್ವೈರವೃತ್ತಿಯನ್ನು ಹಾಗು ನಾಚಿಕೆಗೇಡಿತವನ್ನು ತೋರಿಸುವದರ
ಜೊತೆಗೇ, ಗಣಿಕೆ ವಸಂತಸೇನೆಯ ಸುಶೀಲ ಮನೋಧರ್ಮವನ್ನು ಸಹ ಈ ದೃಶ್ಯದಲ್ಲಿ ತೋರಿಸಲಾಗಿದೆ.
ಚಾರುದತ್ತ ಹಾಗು ಮೈತ್ರೇಯರ
ಮಾತುಕತೆ ಮುಗಿಯುತ್ತಿರುವಂತೆಯೇ ಪರದೆಯ ಹಿಂದಿನಿಂದ ಧ್ವನಿಗಳು ಕೇಳುತ್ತವೆ. ಶಕಾರ, ಅವನ ಗೆಳೆಯ ಹಾಗು ಒಬ್ಬ ಅನುಚರ ಇವರು
ವಸಂತಸೇನೆಯ ಬೆನ್ನು ಹತ್ತಿದ್ದಾರೆ. ಮಹಾ ಹುಂಬನಾದ, ವಿದ್ಯಾವಿಹೀನನಾದ ಹಾಗು ಪಶುಸಮಾನನಾದ ಶಕಾರನು ವಸಂತಸೇನೆಯ ಬಗೆಗೆ ಆಡುವ ಮಾತುಗಳನ್ನು ಗಮನಿಸಿ:
‘ಇವಳು ಶೂಳೆಯ ಮಗಳು
ಶೂಳೆಗೇರಿಯ ಚೆಲುವೆ
ವೇಶ್ಯೆ—ಬೆಲೆವೆಣ್ಣು
ಈ ಹತ್ತು ನಾಮಾವಳಿಯನಿವಳಿಗಿಟ್ಟಿರುವೆ
ಆದರೂ ಇವಳೆನ್ನ ಬಯಶುತಿಲ್ಲ!’
‘ರಾವಣನ ಕೈಯಲ್ಲಿ ಕುಂತಿ ಶಿಕ್ಕಂತೆ
………………………….
ರಾಮನಿಗೆ ಹೆದರುವ ದ್ರೌಪದಿಯಂತೆ
…………………………..
ವಿಶ್ವಾವಶುವಿನಕ್ಕ ಶುಂದರಿ
ಶುಭದ್ರೆಯನು
ಹನುಮಂತ ಹಾರಿ ಹಿಡಿದಂತೆ!’
..............................................
…………………………………
‘ಕಾಡಿನಲಿ ಹೆಣ್‍ನರಿಯ ಬೆನ್ನು ಹತ್ತಿರುವಂಥ
ಬೇಟೆನಾಯಿಗಳಂತೆ
ನಾವು ಜೋರಾಗಿಯೇ ಬೆನ್ನು
ಹತ್ತಿರುವೆವು’.
ಈ ಶಕಾರನ ಸಹಚರನಾದ ವಿಟನು
ಶಕಾರನಿಗಿಂತ ಸ್ವಲ್ಪ ಉತ್ತಮನೆಂದು ಕಾಣುತ್ತಾನೆ. ವಸಂತಸೇನೆಗೆ ಇವನು ಹೇಳುವ ಮಾತನ್ನು ಗಮನಿಸಿರಿ:
‘ಓರೆ ನೋಟವ ಬೀರಿ
ಕಣ್ತುಂಬ ಗಾಬರಿಯ ಸೂಸುತ್ತ
ಬೇಡ ಬೆನ್ನಟ್ಟಿರುವ ಹೆಣ್‍ಜಿಂಕೆಯಂತೆ
ಏಕೆ ಓಡುವೆ ಹೆಣ್ಣೆ ಭಯಭೀತಳಾಗಿ?’
ಈ ಶಕಾರನ ಸೇವಕನು ಹೇಳುವ
ಮಾತು ಕೇಳಿರಿ. ಇವು ಸೇವಕನಿಗೆ ತಕ್ಕ ಮಾತುಗಳಾಗಿವೆ:
‘ರಾಜರಿಗೆ ಬೇಕಾದ
ದೊಡ್ಡ ಜನ ಇವರು
ಇವರ ಮನವೊಲಿಸಿದರೆ ನಿಮಗು
ಗಮ್ಮತ್ತು
ಮೀನು-ಮಾಂಸದ ಅಡಿಗೆ ಎರಡು
ಹೊತ್ತು.’
ಶಕಾರ ಹಾಗು ಅವನ ಅನುಚರರು
ಓಡುತ್ತಿರುವ ವಸಂತಸೇನೆಯನ್ನು ಹಿಡಿದೇ ಬಿಡುತ್ತಾರೆ. ಶಕಾರನ ಅಹಂಕಾರದ ಮಾತುಗಳ ಜೊತೆಗೇ, ಅವನ ಸಹಚರನ ಹೀನಾಯದ ಮಾತುಗಳು ಹೀಗಿವೆ:
“ಯೋಚಿಸು,
ನೀನೂ ಒಬ್ಬಳು ಸೂಳೆಯೆ
ಬೀದಿಯ ಬದಿಯಲಿ ಬೆಳೆದಿಹ
ಬಳ್ಳಿ!
ಬೆಲೆ ತೆತ್ತವರಿಗೆ ಮಾರಲಿಕೆಂದೇ
ಇರುವುದು ನಿನ್ನ ಶರೀರ
ಬೇಕಾಗಿರಲಿ, ಬೇಡಾಗಿರಲಿ
ದುಡ್ಡು ತೆತ್ತವರನು ತಣಿಸಬೇಕು
………………….
ಸೂಳೆಯಾದ ನೀನೂ ಹಾಗೆಯೇ
……………………..
ಸೂಳೆ ಎಲ್ಲರ ಸೊತ್ತು.”
ಶಕಾರನ, ಅವನ ಸಹಚರನ ಹಾಗು ಅವನ ಅನುಚರನ
ಮಾತುಗಳು ಉಜ್ಜಯಿನಿಯ ಸಾಂಸ್ಕೃತಿಕ ಅಧಃಪತನವನ್ನು ಸೂಚಿಸುತ್ತವೆ. ಶಕಾರನು ತನ್ನ ಜೊತೆಗಾರರೊಂದಿಗೆ
ವಸಂತಸೇನೆಯನ್ನು ಬೆನ್ನಟ್ಟಿರುವ ಈ ದೃಶ್ಯವು ನಾಟಕದಲ್ಲಿ ರಭಸದ ಕ್ರಿಯೆಯನ್ನು ಹಾಗು ಉದ್ವೇಗವನ್ನು
ತುಂಬುತ್ತವೆ.
ವಸಂತಸೇನೆಯು ವೇಶ್ಯೆ. ಇವಳಿಗೆ ಬೇಡಿಕೆ
ಎಷ್ಟೇ ಇರಲಿ, ಇವಳಿಗೆ ಸಿಗುವ ಗೌರವ ಮಾತ್ರ ಸೊನ್ನೆ. ಓರ್ವ ವೇಶ್ಯೆಯು ಹೊಟ್ಟೆಪಾಡಿಗಾಗಿ ಹೀನರನ್ನು
ಓಲೈಸಲೇ ಬೇಕು, ಸಜ್ಜನರು ಇವಳಿಗೆ ಬೇಕಾಗಿಲ್ಲ. ಆದರೆ ಸುಶೀಲಳಾದ ವಸಂತಸೇನೆಯು ಚಾರುದತ್ತನ ಗುಣವರ್ಣನೆಗಳನ್ನು ಕೇಳಿ ಅವನೆಡೆಗೆ ಆಕರ್ಷಿತಳಾಗಿದ್ದಾಳೆ.
(ಈ ನಾಟಕದಲ್ಲಿ ಬರುವ ಕೆಳವರ್ಗದ ಅನೇಕ ಜನರು ಚಾರುದತ್ತನನ್ನು ಗೌರವಿಸುವರೇ ಆಗಿದ್ದಾರೆ.) ಒಂದು ಸಲ ಉದ್ಯಾನವನದಲ್ಲಿ ಚಾರುದತ್ತನನ್ನು ನೋಡಿ, ವಸಂತಸೇನೆಯು
ಅವನಿಗೆ ಮರುಳಾಗಿದ್ದಾಳೆ. ಆದರೆ ಚಾರುದತ್ತನು ವಸಂತಸೇನೆಯನ್ನು ಈವರೆಗೂ ನೋಡಿಲ್ಲ. ಇದೀಗ ಇವರೀರ್ವರ ಮುಖಾಮುಖಿಯು ಆಗುವದಿದ್ದು,
ನಾಟಕಕಾರನು ತುಂಬ ಚಾಣಾಕ್ಷತನದಿಂದ ಈ ಸನ್ನಿವೇಶವನ್ನು ಸಂಯೋಜಿಸಿದ್ದಾನೆ.
ಶಕಾರನಿಂದ ತಪ್ಪಿಸಿಕೊಳ್ಳಲು ವಸಂತಸೇನೆಯು
ಓಡಿ ಬರುತ್ತಿರುವಾಗ, ಚಾರುದತ್ತನ ಮನೆಯ ಸಮೀಪವೇ ಅವಳು ಬಂದಿದ್ದಾಳೆ. ಅದು ಅವಳಿಗೆ ಗೊತ್ತಿಲ್ಲ. ಆದರೆ,
ಶಕಾರನಿಗೆ ಚಾರುದತ್ತನ ಮನೆಯು ಅಲ್ಲಿಯೇ ಇರುವುದು ಗೊತ್ತು. ವಸಂತಸೇನೆಯು ಚಾರುದತ್ತನ ಮನೆಗೆ ಹೋಗಬಹುದೆಂದು
ಊಹಿಸಿ, ಮೂರ್ಖ ಶಕಾರನು, ‘ಚಾರುದತ್ತನ ಮನೆ ಇಲ್ಲಿಯೇ ಇದೆ, ಇವಳು ಅಲ್ಲಿ ನುಸುಳದಂತೆ ನೋಡಿಕೊ’ ಎಂದು
ತನ್ನ ಸಹಚರನಿಗೆ ಹೇಳುತ್ತಾನೆ. ಈ ಹುಂಬನ ಕೈಗೆ ಸಿಗುವುದಕ್ಕಿಂತ ವಸಂತಸೇನೆಯು ಚಾರುದತ್ತನ ಮನೆಗೆ
ಹೋಗುವುದೇ ಲೇಸೆಂದು ಬಗೆದ ಶಕಾರನ ಸಹಚರನು, ‘ಹೌದು, ಇಲ್ಲೇ ಎಡಗಡೆಗೆ ಇದೆ’ ಎಂದು ವಸಂತಸೇನೆಗೆ ತಿಳಿಯುವಂತೆ
ಸೂಚನೆ ಕೊಡುತ್ತಾನೆ.
ಸೂಚನೆಯನ್ನು ಗ್ರಹಿಸಿದ ವಸಂತಸೇನೆಯು
ಚಾರುದತ್ತನ ಮನೆಯ ಕಡೆಗೆ ಹೋಗಲು ಉದ್ಯಮಿಸಿದಾಗ, ಶಕಾರನಿಗೆ ಅವಳ ಗೆಜ್ಜೆಯ ಸಪ್ಪಳದ ಮೂಲಕ, ಅವಳ ಗಮ್ಯ
ಗೊತ್ತಾಗುತ್ತದೆ. ಶಕಾರನ ಸಹಚರನು, ‘ವಸಂತಸೇನೆ, ನಿನ್ನ ಗೆಜ್ಜೆಗಳು ನಿನ್ನ ಇರವನ್ನು
ಬಯಲು ಮಾಡುತ್ತಿವೆ’ ಎಂದು ಜನಾಂತಿಕವಾಗಿ ಹೇಳುತ್ತಾನೆ. ವಸಂತಸೇನೆ,
ಗೆಜ್ಜೆಗಳನ್ನು ತೆಗೆದಿರಿಸಿಕೊಂಡು ಚಾರುದತ್ತನ
ಮನೆಗೆ ಹೋಗುತ್ತಾಳೆ ಹಾಗು ಬಾಗಿಲು ತೆಗೆಯಲು ಹೋಗುತ್ತಾಳೆ. ಆದರೆ ಬಾಗಿಲು ಮುಚ್ಚಿಕೊಂಡಂತಿದೆ.
ಆ ಸಮಯದಲ್ಲಿ ಚಾರುದತ್ತನು
ತನ್ನ ಜಪಾದಿಗಳನ್ನು ಮುಗಿಸಿಕೊಂಡು, ಹೊರಬಂದು ಗೆಳೆಯ ಮೈತ್ರೇಯನಿಗೆ ಮಾತೃಬಲಿಯನ್ನು ತೆಗೆದುಕೊಂಡು ಹೋಗಲು ಕೋರುತ್ತಾನೆ.
ಆದರೆ ಮೈತ್ರೇಯನು ಹೋಗಲು ಒಪ್ಪುವುದಿಲ್ಲ.
ಚಾರುದತ್ತನು ‘ಬಡವನ ಮಾತನ್ನು ಗೆಳೆಯನೂ ಕೇಳುವುದಿಲ್ಲವಲ್ಲ’
ಎಂದು ವಿಷಾದಿಸುತ್ತಾನೆ. ಆಗ ಮೈತ್ರೇಯನು ತನ್ನ ಜೊತೆಗೆ ದೀಪವನ್ನು ಹಿಡಿದುಕೊಂಡು
ರದನಿಕೆ ಎನ್ನುವ ಸೇವಿಕೆಯೂ ಬಂದರೆ ತಾನು ಹೋಗುವುದಾಗಿ ಹೇಳುತ್ತಾನೆ.
ಮೈತ್ರೇಯನು ರದನಿಕೆಯ ಕೈಯಲ್ಲಿ ಬಲಿದ್ರವ್ಯವನ್ನು ಕೊಟ್ಟು ಬಾಗಿಲು ತೆರೆಯುತ್ತಾನೆ.
ಈ ಸಂದರ್ಭದಲ್ಲಿ ವಸಂತಸೇನೆಯು ಚಾರುದತ್ತನ ಮನೆಯ ಒಳಗೆ ನುಸುಳುತ್ತಾಳೆ. ದೀಪದ ಬೆಳಕಿನಲ್ಲಿ ತಾನು
ಅಲ್ಲಿರುವದನ್ನು ಶಕಾರನು ನೋಡಿಯಾನು ಎನ್ನುವ ಭೀತಿಯಿಂದ, ತನ್ನ ಸೆರಗಿನಿಂದ ದೀಪವನ್ನಾರಿಸಿ
ಒಳಗೆ ಹೋಗುತ್ತಾಳೆ. ದೀಪವು ಆರಿದ್ದನ್ನು ಗಮನಿಸಿದ ಮೈತ್ರೇಯನು ದೀಪವನ್ನು
ಹಚ್ಚಿಕೊಂಡು ಬರಲು ಒಳಗೆ ಹೋಗುತ್ತಾನೆ.
ವಸಂತಸೇನೆಯು ಚಾರುದತ್ತನ ಮನೆಯಲ್ಲಿಯೇ
ನುಸುಳಿದ್ದಾಳೆ ಎನ್ನುವ ಸಂದೇಹದಿಂದ ಶಕಾರನು ಚಾರುದತ್ತನ ಮನೆಯಲ್ಲಿ
ತಾನೂ ನುಗ್ಗುತ್ತಾನೆ. ಕತ್ತಲಲ್ಲಿ ವಸಂತಸೇನೆ ಎಂದು ಭಾವಿಸಿ, ಮೂರ್ಖ
ಶಕಾರನು ರದನಿಕೆಯನ್ನು ಹಿಡಿದು, ಅವಳನ್ನು ಕೂದಲಿನಿಂದ ಎಳೆಯುತ್ತಿರುತ್ತಾನೆ. ಅಷ್ಟರಲ್ಲಿ,
ಅಲ್ಲಿಗೆ ಮೈತ್ರೇಯನು ದೀಪ ಹಚ್ಚಿಕೊಂಡು ಬರುತ್ತಾನೆ.
ಅಲ್ಲಿ ರದನಿಕೆಯ ಪಾಡನ್ನು ಕಂಡು ಆಗಂತುಕರ ಮೇಲೆ ಕೋಪಿಸಿಕೊಳ್ಳುತ್ತಾನೆ. ಶಕಾರನ
ಸಹಚರನು ಮೈತ್ರೇಯನನ್ನು ಸಮಾಧಾನಗೊಳಿಸುತ್ತಾನೆ. ಚಾರುದತ್ತನ ಸಜ್ಜನಿಕೆಯ ಬಗೆಗೆ ಸಹಚರನಿಗೂ ಸಹ ಗೌರವವಿದೆ.
‘ಇಲ್ಲಿಂದ ಹೊರಟು ಹೋಗೋಣ
ಬಾ’
ಎಂದು ಅವನು ಶಕಾರನಿಗೆ ಹೇಳುತ್ತಾನೆ. ಆದರೆ ಶಠ ಶಕಾರನು ‘ವಶಂತಶೇನೆಯನ್ನು ಹಿಡಿಯದೆ ನಾನು ಹೋಗೋದಿಲ್ಲ’ ಎಂದು
ಪಟ್ಟು ಹಿಡಿದು
ಅಲ್ಲಿಯೇ ನಿಲ್ಲುತ್ತಾನೆ. ಶಕಾರನು ತನ್ನ ಭಂಡ ಮಾತುಗಳಿಂದ ಮೈತ್ರೇಯನಿಗೆ ಬೆದರಿಕೆ ಹಾಕುತ್ತಾನೆ.
ವಸಂತಸೇನೆಯು ಕಾಮದೇವಾಲಯದ ಉದ್ಯಾನದಲ್ಲಿ ಚಾರುದತ್ತನಿಗೆ ಮರುಳಾದಳಲ್ಲ ಎನ್ನುವ ರೊಚ್ಚನ್ನು ಅವನು
ಮತ್ತೊಮ್ಮೆ ಆಡಿ ತೋರಿಸಿ, ಅಲ್ಲಿಂದ ತೆರಳುತ್ತಾನೆ.
ಮುಂದಿನ ದೃಶ್ಯದಲ್ಲಿ ಮೈತ್ರೇಯ ಹಾಗು ರದನಿಕೆಯರು ಬಲಿಯನ್ನು ಸಮರ್ಪಿಸಲು ಹೋಗುತ್ತಾರೆ.
ಆಗ ತಾನೇ ಹೊರಬಂದ ಚಾರುದತ್ತನಿಗೆ ವಸಂತಸೇನೆ ಒಳಬಂದಿರುವುದು ತಿಳಿದಿಲ್ಲ.
ಅವನು ವಸಂತಸೇನೆಯನ್ನೇ ರದನಿಕೆ ಎಂದು ಭಾವಿಸಿ, ‘ಹೊರಗೆ ಆಟ ಆಡುತ್ತಿರುವ ತನ್ನ ಮಗ ರೋಹಿತನಿಗೆ ಶೀತವಾಗದಿರಲು, ಈ ಶಾಲನ್ನು ಹೊದಿಸಿ, ಒಳಗೆ ಕರೆದುಕೊಂಡು ಬಾ’
ಎಂದು ಹೇಳುತ್ತಾನೆ. ಅಷ್ಟರಲ್ಲಿ ಮೈತ್ರೇಯನು ರದನಿಕೆಯೊಡನೆ ಮರಳಿ ಬರುತ್ತಾನೆ,
ನಡೆದದ್ದನ್ನೆಲ್ಲ ಹೇಳುತ್ತಾನೆ. ಚಾರುದತ್ತನು ವಸಂತಸೇನೆಯ ಕ್ಷಮೆ ಕೋರುತ್ತಾನೆ.
ವಸಂತಸೇನೆಯು, ‘ನಾನೇ ತಪ್ಪುಗಾರಳು’ ಎಂದು
ಚಾರುದತ್ತನ ಕ್ಷಮೆ ಕೋರುತ್ತಾಳೆ. ಮೈತ್ರೇಯನು ‘ಇವಳು ವಸಂತಸೇನೆ, ಉದ್ಯಾನದಲ್ಲಿ ನಿನ್ನನ್ನು ನೋಡಿ ಮರುಳಾದವಳು’ ಎಂದು ಹೇಳುತ್ತಾನೆ.
ಚಾರುದತ್ತನು, ‘ನನ್ನ ಸಂಪತ್ತೆಲ್ಲ ಕರಗಿದ ಮೇಲೆ,
ಇವಳು ನನ್ನೆದೆಯಲ್ಲಿ ಬಯಕೆಯನ್ನು ಬಿತ್ತಿದಳಲ್ಲ’ ಎಂದು
ನಿಟ್ಟುಸಿರು ಬಿಡುತ್ತಾನೆ. (ಈ ನಾಟಕವನ್ನು ಬರೆದ ಕಾಲಘಟ್ಟದಲ್ಲಿ ಸಜ್ಜನರ ವೇಶ್ಯಾಗಮನವನ್ನು
ಸಮಾಜವು ತಿರಸ್ಕರಿಸುತ್ತಿರಲಿಲ್ಲ ಎಂದು ಕಾಣುತ್ತದೆ. ಅದೇನೇ ಇರಲಿ, ಚಾರುದತ್ತನಿಗೆ ಚೆಲುವೆಯಾದ ವಸಂತಸೇನೆಯ
ಬಗೆಗೆ ಮೆಚ್ಚುಗೆ ಆಗಬಾರದು ಎಂದೇನಿಲ್ಲವಲ್ಲ. ಆದುದರಿಂದ ನಾಟಕಕಾರ ಶೂದ್ರಕನು ಚಾರುದತ್ತನ ಒಂದು ಮಾತಿನಿಂದ
ಈ ಆಕರ್ಷಣೆಯ ಸೂಚನೆಯನ್ನು ನೀಡಿದ್ದಾನೆ.)
ವಸಂತಸೇನೆಯು ತಾನಿನ್ನು
ಹೋಗುವುದು ಉಚಿತವೆಂದು ಭಾವಿಸುತ್ತಾಳೆ. ಆದರೆ ಇರುಳಿನ
ಈ ಸಮಯದಲ್ಲಿ ತನ್ನ ಒಡವೆಗಳನ್ನು ಸುರಕ್ಷಿತವಾಗಿ ಒಯ್ಯಬಹುದೆ ಎನ್ನುವ
ಹೆದರಿಕೆಯಿಂದ, ಆ ಆಭರಣಗಳನ್ನು ಚಾರುದತ್ತನ ಮನೆಯಲ್ಲಿ ಇಡಬಯಸುತ್ತಾಳೆ.
ಚಾರುದತ್ತನು ಒಡವೆಗಳನ್ನು ತಾನೇ ಕೈಮುಟ್ಟಿ ತೆಗೆದುಕೊಳ್ಳುವದಿಲ್ಲ. ಬದಲಾಗಿ ಮೈತ್ರೇಯನಿಗೆ ಒಡವೆಗಳನ್ನು ಸ್ವೀಕರಿಸು ಎಂದು ಹೇಳುತ್ತಾನೆ.
ವಸಂತಸೇನೆಯು ತಾನು ಮನೆ ಮುಟ್ಟುವವರೆಗೆ ತನ್ನ ಜೊತೆಗೆ ಚಾರುದತ್ತನು ಬಂದಿದ್ದರೆ ಚೆನ್ನಾಗಿರುವುದು
ಎಂದು ಹೇಳುತ್ತಾಳೆ. ಚಾರುದತ್ತನು ಮೈತ್ರೇಯನಿಗೆ ಹೋಗಲು
ಹೇಳುತ್ತಾನೆ.. ಮೈತ್ರೇಯನು ಚಾರುದತ್ತನಿಗೆ ನೀನೇ ಹೋಗುವುದು ಸರಿ ಎನ್ನುತ್ತಾನೆ. (ಚಾರುದತ್ತನು ದೀವಟಿಗೆಯನ್ನು ಹಚ್ಚಲು ತನ್ನ ಸೇವಕ ವರ್ಧಮಾನಕನಿಗೆ ಹೇಳುತ್ತಾನೆ. ಆದರೆ
ಅವನ ಮನೆಯಲ್ಲಿ ದೀವಟಿಗೆಯನ್ನು ಹಚ್ಚಲು ಎಣ್ಣೆಯೇ ಇರುವುದಿಲ್ಲ!)
ವಸಂತಸೇನೆಯನ್ನು ಅವಳ ಮನೆಗೆ ಕಳುಹಿ, ಚಾರುದತ್ತ
ಹಾಗು ಮೈತ್ರೇಯರು ಚಾರುದತ್ತನ ಮನೆಗೆ ಮರಳುತ್ತಾರೆ.
ಇದೀಗ ವಸಂತಸೇನೆಯ
ಒಡವೆಗಳನ್ನು ಕಾಯುವ ಕೆಲಸ ಚಾರುದತ್ತನ ಮೇಲೆ ಬಿದ್ದಿತಲ್ಲ. ಹಗಲು ಹೊತ್ತಿನಲ್ಲಿ ಚಾರುದತ್ತನ
ಸೇವಕನು ಹಾಗು ಇರುಳಿನಲ್ಲಿ ಮೈತ್ರೇಯನು ಆ
ಒಡವೆಗಳನ್ನು ಕಾಯಬೇಕೆಂದು ಚಾರುದತ್ತನು ಒಡವೆಗಳ ಭದ್ರತೆಯ ಹೊಣೆಯನ್ನು
ನಿಯೋಜಿಸುತ್ತಾನೆ.
ನಾಟಕದಲ್ಲಿ ಇದು ಒಂದು ಮಹತ್ವದ ಸಂಗತಿಯಾಗಿದೆ. ಮೈತ್ರೇಯನು ಒಡವೆಗಳನ್ನು ಇಸಿದುಕೊಂಡು,
ಒಂದು ಗಂಟಿನಲ್ಲಿ ಕಟ್ಟಿಕೊಂಡು ತನ್ನ ಬಳಿಯಲ್ಲಿ ಇಟ್ಟುಕೊಂಡು ಮಲಗುತ್ತಾನೆ.
ಈ ಅಂಕದಲ್ಲಿ ಚಾರುದತ್ತನ
ಸಜ್ಜನಿಕೆಯನ್ನು, ಆ ಕಾರಣದಿಂದಾಗಿ ಅವನಿಗೆ ದೊರೆಯುತ್ತಿರುವ
ಗೌರವವನ್ನು, ಶಕಾರನ ಅನುಚರನೂ ಸಹ ಚಾರುದತ್ತನ ಬಗೆಗೆ ಗೌರವ ಹಾಗು ಭಯದಿಂದ ನಡೆದುಕೊಳ್ಳುವದನ್ನು ತೋರಿಸಲಾಗಿದೆ.
ವಸಂತಸೇನೆಯು ತನ್ನಲ್ಲಿ ಅನುರಕ್ತಳಾಗಿರುವಳು ಎನ್ನುವ ಶಕಾರನ ಮಾತನ್ನು ಮೈತ್ರೇಯನಿಂದ ತಿಳಿದರೂ ಸಹ, ಚಾರುದತ್ತನು ಅವಳನ್ನು ತುಂಬ ಗೌರವದಿಂದ ನೋಡಿಕೊಳ್ಳುತ್ತಾನೆ. ಅವಳಲ್ಲಿ ತನಗಾದ ಆಕರ್ಷಣೆಯನ್ನು ಅವಳೆದುರಿಗೆ ವ್ಯಕ್ತ ಪಡಿಸುವದಿಲ್ಲ. ಮೈತ್ರೇಯನನ್ನು ಜೊತೆ ಮಾಡಿಕೊಂಡು ವಸಂತಸೇನೆಯನ್ನು ಅವಳ ಮನೆಯವರೆಗೆ ಕಳುಹಿಸಿ ಬರುತ್ತಾನೆ.
ವಸಂತಸೇನೆಯು ತನ್ನಲ್ಲಿ ಅನುರಕ್ತಳಾಗಿರುವಳು ಎನ್ನುವ ಶಕಾರನ ಮಾತನ್ನು ಮೈತ್ರೇಯನಿಂದ ತಿಳಿದರೂ ಸಹ, ಚಾರುದತ್ತನು ಅವಳನ್ನು ತುಂಬ ಗೌರವದಿಂದ ನೋಡಿಕೊಳ್ಳುತ್ತಾನೆ. ಅವಳಲ್ಲಿ ತನಗಾದ ಆಕರ್ಷಣೆಯನ್ನು ಅವಳೆದುರಿಗೆ ವ್ಯಕ್ತ ಪಡಿಸುವದಿಲ್ಲ. ಮೈತ್ರೇಯನನ್ನು ಜೊತೆ ಮಾಡಿಕೊಂಡು ವಸಂತಸೇನೆಯನ್ನು ಅವಳ ಮನೆಯವರೆಗೆ ಕಳುಹಿಸಿ ಬರುತ್ತಾನೆ.
ಶಕಾರನ ಹುಂಬತನವನ್ನು, ವಿದ್ಯಾವಿಹೀನತೆಯನ್ನು ಹಾಗು ರಾಜ್ಯಶಾಸನಗಳ ಬಗೆಗೆ ಅವನಿಗೆ ಯಾವುದೇ ಹೆದರಿಕೆ ಇಲ್ಲದಿರುವುದನ್ನು ಈ ಅಂಕದಲ್ಲಿ
ತೋರಿಸಲಾಗಿದೆ. ಚಾರುದತ್ತನ ಮಗನಾದ ಬಾಲಕ ರೋಹಸೇನನು ಮನೆಯ ಹೊರಗಡೆ ಗೆಳೆಯರೊಡನೆ ಆಡುತ್ತಿರುತ್ತಾನೆ
ಎನ್ನುವ ಸೂಚನೆಯನ್ನು ಇಲ್ಲಿ ಕೊಡಲಾಗಿದೆ. ಇದು ಒಂದು ಮಹತ್ವದ ಸೂಚನೆ. ನಾಟಕದ ನಾಲ್ಕನೆಯ ಅಂಕದಲ್ಲಿ
ಈ ಸೂಚನೆಯ ಮಹತ್ವ ಗೊತ್ತಾಗುತ್ತದೆ.
ವಸಂತಸೇನೆಯ ಪಾತ್ರದ ಮೂಲಕ ವೇಶ್ಯಾವೃತ್ತಿಯು
ಉಜ್ಜಯಿನಿಯಲ್ಲಿ ಸಮಾಜಮಾನ್ಯವಾಗಿತ್ತು ಹಾಗು ವೇಶ್ಯೆಯರು ಕಾಮುಕರಿಂದ ಹೀನಾಯಕ್ಕೆ ಒಳಗಾಗುತ್ತಿದ್ದರು
ಎನ್ನುವುದನ್ನು ತೋರಿಸಲಾಗಿದೆ. ನಾಟಕದ ಕೊನೆಯಲ್ಲಿ ದುಷ್ಟ ರಾಜನ ಆಳಿಕೆಯು ಅಂತ್ಯವಾದ ಮೇಲೆ, ಆಡಳಿತದ
ಚುಕ್ಕಾಣಿ ಹಿಡಿದಂತಹ ದಂಗೆಖೋರರ ಮುಖಂಡನು ವಸಂತಸೇನೆಗೆ ಚಾರುದತ್ತನ ಸಹಚರಿ ಎನ್ನುವ ಗೌರವವನ್ನು ಪ್ರದಾನಿಸುತ್ತಾನೆ.
ಇದು ನಾಟಕದ ಆಶಯವನ್ನೂ ತೋರಿಸುತ್ತದೆ ಎನ್ನಬಹುದು.
ಮೊದಲ ಅಂಕವು ಇಲ್ಲಿಗೆ
ಸಮಾಪ್ತವಾಗುತ್ತದೆ.
(ಇಲ್ಲಿ ಬರುವ ಸಂಸ್ಕೃತಮೂಲದ ಗೀತೆಗಳ
ಕನ್ನಡ ಅನುವಾದಗಳನ್ನು ಬನ್ನಂಜೆ ಗೋವಿಂದಾಚಾರ್ಯರ ಭಾಷಾಂತರದಿಂದ ಪಡೆದಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು.)