Sunday, June 19, 2016

ಮೃಚ್ಛಕಟಿಕಮ್, ಶಾಕುಂತಲಮ್ ಹಾಗು ಸ್ವಪ್ನವಾಸವದತ್ತಾ



ಶೂದ್ರಕನು ರಚಿಸಿದ ಮೃಚ್ಛಕಟಿಕಮ್ ಒಂದು ಅದ್ಭುತವಾದ ಸಂಸ್ಕೃತ ನಾಟಕ. ಈ ನಾಟಕಕ್ಕೆ ಸಂಸ್ಕೃತ ನಾಟಕ ಎಂದು ಕರೆಯಬಹುದೆ, ಎನ್ನುವ ಪ್ರಶ್ನೆ ಉದ್ಭವಿಸದೆ ಇರಲಾರದು. ಏಕೆಂದರೆ ಈ ನಾಟಕದಲ್ಲಿ ವಿವಿಧ ಪ್ರಾಕೃತಗಳನ್ನಾಡುವ ಅನೇಕ ಪಾತ್ರಗಳು ಬರುತ್ತವೆ. ಒಟ್ಟು ಹದಿನೆಂಟು ಬಗೆಯ ಪ್ರಾಕೃತಗಳನ್ನು ಇಲ್ಲಿ ಆಡಲಾಗಿದೆ ಎಂದು ಹೇಳಲಾಗುತ್ತದೆ. ನಾಟಕದ ಒಂದು ಪಾತ್ರವು ಕರ್ನಾಟಕದ ಪಶ್ಚಿಮಘಟ್ಟದಿಂದ ಬಂದಂತಹ ವ್ಯಕ್ತಿಯದೂ ಆಗಿದೆ. ಬಹುಶಃ ಉಜ್ಜಯಿನಿ ನಗರವು ಆ ಕಾಲದಲ್ಲಿ ಒಂದು ಅತಿ ದೊಡ್ಡ ಸಾಂಸ್ಕೃತಿಕ ಹಾಗು ವ್ಯಾಪಾರೀ ಕೇಂದ್ರವಾಗಿರಬಹುದು. ಭಾರತದ ವಿವಿಧ ಭಾಗಗಳಿಂದ ಉಜ್ಜಯಿನಿಗೆ ಜನರು ವಿದ್ಯಾಭ್ಯಾಸಕ್ಕಾಗಿ, ವ್ಯಾಪಾರಕ್ಕಾಗಿ, ಉದ್ಯೋಗವನ್ನು ಅರಸಿಕೊಂಡು ಅಥವಾ ಸುಖಭೋಗಕ್ಕಾಗಿ ಬರುತ್ತಿರಬಹುದು! ಇಂತಹ ಜನಸಮೂಹವನ್ನು ಬಳಸಿಕೊಂಡೇ ಶೂದ್ರಕನು ಒಂದು ಸಂಕೀರ್ಣವಾದ ನಾಟಕವನ್ನು ರಚಿಸಿದ್ದಾನೆ. ಹಾಗಿದ್ದರೂ ಸಹ ಈ ಮಹಾನಾಟಕದಲ್ಲಿ ಬರುವ ಎಲ್ಲ ಪಾತ್ರಗಳು, ಎಲ್ಲ ಘಟನೆಗಳು ,ಎಲ್ಲ ಸಂಭಾಷಣೆಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ, ಯಾವುದೂ ಇದರಲ್ಲಿ ಅನವಶ್ಯಕವೆನ್ನುವಂತಹದು ಇಲ್ಲ. ರಚನಾವಿಧಾನ, ಕಥಾನಕದ ಸಂಕೀರ್ಣತೆ, ರಂಗಕ್ರಿಯೆ ಹಾಗು ಪುಟ್ಟ ಪಾತ್ರಗಳಿಗೂ ಸಹ ಈ ನಾಟಕದಲ್ಲಿ ಬರುವ ಮಹತ್ವ ಇವೆಲ್ಲವನ್ನೂ ಗಮನಿಸಿದರೆ, ವಿಶ್ವನಾಟಕಗಳಲ್ಲಿಯೇ ಇಂತಹ ನಾಟಕವು ಬೇರಾವುದೂ ಇಲ್ಲವೆಂದು ಹೇಳಬಹುದು.

ಮೇಲ್ನೋಟಕ್ಕೆ ಈ ನಾಟಕದ ನಾಯಕನು ಚಾರುದತ್ತ ಎನ್ನುವ ಬ್ರಾಹ್ಮಣನು. ಮೊದಲು ಸಿರಿವಂತನಾಗಿದ್ದವನು ತನ್ನ ಉದಾರಬುದ್ಧಿಯಿಂದಾಗಿ ಸಂಪತ್ತನ್ನೆಲ್ಲ ಕಳೆದುಕೊಂಡು ಇದೀಗ ಬಡವನಾಗಿದ್ದಾನೆ. ಇವನ ಸದ್ಗುಣಗಳಿಗಾಗಿ ಉಜ್ಜಯಿನಿಯ  ಸಮಸ್ತ ಜನತೆ ಇವನನ್ನು ಆದರಿಸುತ್ತದೆ. ವಸಂತಸೇನೆ ಉಜ್ಜಯಿನಿಯ ಪ್ರಮುಖ ಗಣಿಕೆ. ಇವಳ ರೂಪಕ್ಕೆ ಲೋಭಗೊಂಡ, ಉಜ್ಜಯಿನಿಯ ರಾಜನ ಭಾವನಾದ ಭಂಡ ಶಕಾರನು ಇವಳ ಬೆನ್ನು ಹತ್ತಿದ್ದಾನೆ. ಆದರೆ ವಸಂತಸೇನೆಯು ಚಾರುದತ್ತನಿಗೆ ಮನಸೋತಿದ್ದಾಳೆ. ಶಕಾರನು ಈ ನಾಟಕದ ಖಳನಾಯಕ. ವಸಂತಸೇನೆಯ ಮೇಲೆ ಹಲ್ಲೆ ಮಾಡಿ, ಚಾರುದತ್ತನ ಮೇಲೆ ಕೊಲೆಯ ಆರೋಪವನ್ನು ಹೊರಿಸುತ್ತಾನೆ. ಆದರೆ ಕೊನೆಯಲ್ಲಿ ಶಕಾರನ ಆಟವು ಬಯಲಿಗೆ ಬಂದು ಚಾರುದತ್ತ ಹಾಗು ವಸಂತಸೇನೆ ಒಂದಾಗುತ್ತಾರೆ. ಇದಿಷ್ಟೇ ಮೃಚ್ಛಕಟಿಕಮ್ ನಾಟಕದ ಸರಳ ಕಥೆ.

ಈ ಸರಳ ಕಥೆಯ ಮೂಲಕ, ನಾಟಕಕಾರನು ತನ್ನ ಕಾಲದ ಉಜ್ಜಯಿನಿಯ ಜನಜೀವನವನ್ನೇ ಬಿಚ್ಚಿಟ್ಟಿದ್ದಾನೆ. ಉಜ್ಜಯಿನಿಯ ಸಮಾಜವ್ಯವಸ್ಥೆ ಹೇಗಿತ್ತು, ಆಡಳಿತವ್ಯವಸ್ಥೆ  ಹಾಗು ನ್ಯಾಯವ್ಯವಸ್ಥೆಗಳು ಹೇಗಿದ್ದವು ಎನ್ನುವುದೇ ಈ ನಾಟಕದ ಮುಖ್ಯ ವಿಷಯಗಳಾಗಿವೆ. ತನ್ನ ಕಾಲದ ಕೊಳೆತುಹೋದ ಗಣ್ಯರ ಸಮಾಜಕ್ಕೆ, ಭ್ರಷ್ಟ ನ್ಯಾಯವ್ಯವಸ್ಥೆಗೆ ಹಾಗು ಅನೈತಿಕ  ರಾಜಕಾರಣಕ್ಕೆ ಶೂದ್ರಕನು ಈ ನಾಟಕದ ಮೂಲಕ ಕನ್ನಡಿ ಹಿಡಿದಿದ್ದಾನೆ. ಆದುದರಿಂದ, ಗರತಿಯಾಗುವ ಬದಲು ‘ಘರವಾಲಿ’ಯಾದ ಉಜ್ಜಯಿನಿ ನಗರವೇ ಈ ನಾಟಕದ ನಿಜವಾದ ನಾಯಕ ಹಾಗು ಖಳನಾಯಕ! ‘ಇವಳ ಹೊಟ್ಟೆ ಚರಂಡಿಗಾರು ಕುಕ್ಕಿದರಯ್ಯ ಕಳ್ಳಬಸುರಿನ ಯಾವ ಜಾಣ ರಂಭೆ’ ಎನ್ನುವ ಗೋಪಾಲಕೃಷ್ಣ ಅಡಿಗರ ‘ಭೂಮಿಗೀತೆ’ಯ ಸಾಲು ಇಲ್ಲಿ ಅನ್ವಯಿಸುತ್ತದೆ ಎನ್ನಬಹುದು.

ಈ ಕೊಳೆಯನ್ನು ತೋರಿಸುವದಕ್ಕಷ್ಟೇ ಶೂದ್ರಕನು ಸಂತೃಪ್ತನಾಗಿಲ್ಲ. ತಳಮಟ್ಟದ ಜನತೆಯು ಒಂದುಗೂಡಿ, ಬಂಡೆದ್ದು ಪ್ರಭುತ್ವವನ್ನು ಕಿತ್ತೊಗೆಯುವಲ್ಲಿ ನಾಟಕವು ಕೊನೆಗಾಣುತ್ತದೆ. ಇಷ್ಟೆಲ್ಲ ಕಠೋರ ಒಳತಿರುಳನ್ನು ಹೊಂದಿದ ಈ ನಾಟಕಕ್ಕೆ, ಶೂದ್ರಕನು ಕೋಮಲ ಪ್ರೇಮದ ನಯವಾದ ಹೊದಿಕೆಯನ್ನು ಹೊಚ್ಚಿದ್ದಾನೆ.                  (ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು.’-ಗೋಪಾಲಕೃಷ್ಣ ಅಡಿಗ)

 ಮೃಚ್ಛಕಟಿಕಮ್ದಲ್ಲಿ ಲೋಪದ ಭಾಸ ಇಲ್ಲ ಅಂತಲ್ಲ. ಕೊನೆಯಲ್ಲಿ ಸಾತ್ವಿಕತೆಗೆ ಸಿಗುವ ಜಯವು ಸಪ್ಪೆಯಾಗಿದೆ ಎಂದು ಭಾಸವಾಗುತ್ತದೆ. ಶಕಾರನಿಗೆ ಹಾಗು ಆತನ ಭಾವನಾದ ರಾಜನಿಗೆ ತಕ್ಕ ಶಿಕ್ಷೆ ದೊರೆಯಿತು ಎಂದು ಪರದೆಯ ಹಿಂದೆಯಾದರೂ ತೋರಿಸಿದ್ದರೆ, ಪ್ರೇಕ್ಷಕರಲ್ಲಿ ಮೂಡಿದ್ದ ಉದ್ವಿಗ್ನತೆಗೆ  ಒಂದಷ್ಟು ಸಮಾಧಾನವಾಗುತ್ತಿತ್ತು. (ಫ್ರೆಂಚ್ ಕ್ರಾಂತಿಯಲ್ಲಿ ಗಣ್ಯರನ್ನು ಗಲ್ಲುಕತ್ತಿಗೆ ಬಲಿಕೊಟ್ಟ ಮೇಲೆಯೇ,  ರೊಚ್ಚಿಗೆದ್ದ ಜನತೆಗೆ ಸಮಾಧಾನವಾಗಲಿಲ್ಲವೆ?) ಆದರೆ ಭಾರತೀಯ ಪರಂಪರೆಯಲ್ಲಿ ನಾಟಕವು ದುಃಖಾಂತವಾಗಲು ಅವಕಾಶವಿಲ್ಲ. ಅಲ್ಲದೆ ತಿತಿಕ್ಷೆಯು ಭಾರತೀಯರ ಆದರ್ಶವಾಗಿದೆ. ಆದುದರಿಂದ ಚಾರುದತ್ತನ ಕ್ಷಮಾಗುಣವನ್ನು ತೋರಿಸಿದಾಗಲೇ, ಸಾತ್ವಿಕತೆಗೆ ಜಯ ದೊರಕಿತು ಎನ್ನುವ ತರ್ಕ ಮೆರೆಯುತ್ತದೆ. ಆದುದರಿಂದ ಮೇಲ್ನೋಟದ ಈ ಆಭಾಸವು  ನಿಜವಾದ ಲೋಪವಲ್ಲ.

ಶೂದ್ರಕನಿಗಿಂತ ಮೊದಲಿನ ನಾಟಕಕಾರರಾದ ಭಾಸ ಹಾಗು ಕಾಲೀದಾಸರು ಸಂಸ್ಕೃತದ ಶ್ರೇಷ್ಠ ನಾಟಕಕಾರರು ಎನ್ನುವುದು ನಿಜ. ಆದರೆ ಅವರ ನಾಟಕಗಳು ಪುರಾಣ ಮತ್ತು ಇತಿಹಾಸಗಳನ್ನು ಆಧರಿಸಿದ ರಾಜಮಹಾರಾಜರ ರಮ್ಯ ಕಥೆಗಳಾಗಿವೆ. ನಿತ್ಯಜೀವನದ ಕಟು ವಾಸ್ತವತೆಯ ಬಗೆಗೆ ಬರೆದ ಶ್ರೇಯಸ್ಸು ಶೂದ್ರಕನಿಗೆ ಮಾತ್ರ ಸಲ್ಲುತ್ತದೆ.

ಹಾಗೆಂದ ಮಾತ್ರಕ್ಕೆ ಕಾಲೀದಾಸ ಹಾಗು ಭಾಸರ ನಾಟಕಗಳನ್ನು ಕಡೆಗಾಣಿಸಿದಂತಲ್ಲ. ಕಾಲೀದಾಸನ ಅಭಿಜ್ಞಾನಶಾಕುಂತಲಮ್ಹಾಗು ಭಾಸನ ಸ್ವಪ್ನವಾಸವದತ್ತಾಇವು ವಿಶ್ವದ ಶ್ರೇಷ್ಠ ನಾಟಕಗಳೇ ಆಗಿವೆ. ಮೃಚ್ಛಕಟಿಕಮ್ ಒಂದು ಸಂಕೀರ್ಣವಾದ ಹಾಗು ವಾಸ್ತವ ಜನಜೀವನದ ನಾಟಕವಾಗಿದ್ದರೆ, ‘ಅಭಿಜ್ಞಾನಶಾಕುಂತಲಮ್ಒಂದು ಸರಳವಾದ, ರಮ್ಯವಾದ ನಾಟಕವಾಗಿದೆ. ಆದರೆ ಇಲ್ಲಿಯೂ ಸಹ ನಗರಜೀವನದ ಡಾಂಭಿಕತೆಯನ್ನು ಹಾಗು ಆಶ್ರಮಜೀವನದ ಮುಗ್ಧತೆಯನ್ನು ಅಕ್ಕಪಕ್ಕದಲ್ಲಿಟ್ಟು ತೋರಿಸಲಾಗಿದೆ. ಶಾಕುಂತಲಮ್ ಪ್ರಾರಂಭವಾಗುವುದು ಕಣ್ವಾಶ್ರಮದ ಪರಿಸರದಲ್ಲಿ, ಕೊನೆಯಾಗುವುದು ಮಾರೀಚಾಶ್ರಮದಲ್ಲಿ.  ನಡುವೆ ಅಲ್ಪಕಾಲದವರೆಗೆ ಕಾಣುವುದು ನಾಗರೀಕ ಜೀವನದ ಬೆರಗು-ಬುರುಗು.

ಮೃಗಯಾವಿನೋದಕ್ಕಾಗಿ ಕಾಡನ್ನು ಹೊಕ್ಕ ದುಷ್ಯಂತ ಮಹಾರಾಜನು ಕಣ್ವಾಶ್ರಮದ ಸನಿಹಕ್ಕೆ ಬಂದಿದ್ದಾನೆ. ಹಿಂಸ್ರ ಮೃಗಗಳನ್ನು ಬೇಟೆಯಾಡುವ ಬದಲು ಆತನು ಆಶ್ರಮದ ಚಿಗರಿಗಳ ಮೇಲೆ ಬಾಣದ ಗುರಿಯನ್ನಿಟ್ಟಿದ್ದಾನೆ. ಇದು ವಿವೇಚನಾಶೂನ್ಯವಾದ ರಾಜಧರ್ಮವನ್ನು ತೋರಿಸುತ್ತದೆ. ಅತಿಕ್ರಮಿಸು, ಕೊಲ್ಲು, ಅಪಹರಿಸುಇದು ಎಲ್ಲಕಾಲದ ರಾಜಧರ್ಮವಾಗಿದೆ. ಇದರ ವಿರುದ್ಧವಾಗಿರುವುದು ಆಶ್ರಮಧರ್ಮ. ದುಷ್ಯಂತನು ಮೃಗಯಾವಿನೋದಕ್ಕಾಗಿ ಕಾಡಿನಲ್ಲಿಯ ಪ್ರಾಣಿಗಳನ್ನು ಬೇಟೆಯಾಡುತ್ತ ಹೊರಟಿರುವುದು ನಾಟಕದ ಮೊದಲ ಅಂಕದಲ್ಲಿದ್ದರೆ, ಆತನ ಮಗನಾದ ಪುಟ್ಟ ಬಾಲಕ ಭರತನು ಸಿಂಹದ ಮರಿಯನ್ನು ಪಳಗಿಸಿ, ಅದರ ಜೊತೆಗೆ ಆಟವಾಡುತ್ತಿರುವುದು ಕೊನೆಯ ಅಂಕದಲ್ಲಿದೆ. ಇದೇ ನಿಜವಾದ ರಾಜಧರ್ಮ ಎನ್ನುವುದು ಕಾಲೀದಾಸನ ಸಂದೇಶವಾಗಿದೆ. ಇದಲ್ಲದೆ, ಶಕುಂತಲೆಯೂ ಸಹ ನಿಸರ್ಗಧರ್ಮದ ಸಾಕಾರಮೂರ್ತಿಯೇ ಆಗಿದ್ದಾಳೆ. ಕಣ್ವಾಶ್ರಮದಲ್ಲಿ ಅವಳು ಸಾಕುಪ್ರಾಣಿಗಳನ್ನಷ್ಟೇ ಅಲ್ಲ, ತಾನು ಬೆಳೆಸಿದ ಹೂಬಳ್ಳಿಗಳನ್ನೂ ಸಹ ಪ್ರೀತಿಸುತ್ತಿದ್ದಳು. ಕಣ್ವಾಶ್ರಮವನ್ನು ಬಿಟ್ಟು, ದುಷ್ಯಂತನ ಅರಮನೆಗೆ ಹೋಗುವ ಸಂದರ್ಭದಲ್ಲಿ, ತಾನು ಬೆಳೆಸಿದ ಹೂಬಳ್ಳಿಗಳನ್ನು ಜೋಪಾನ ಮಾಡಲು ಅವಳು ತನ್ನ ಸಖಿಯರಿಗೆ ಹೇಳಿ ಹೋಗುತ್ತಾಳೆ. ಮಾರೀಚಾಶ್ರಮದಲ್ಲಿ ದುಷ್ಯಂತನ ಭೆಟ್ಟಿಯಾದಾಗ, ಪಶ್ಚಾತ್ತಾಪದಗ್ಧನಾದ ಅವನನ್ನು, ಶಕುಂತಲೆ ಉದಾರವಾಗಿ ಕ್ಷಮಿಸಿ ಸ್ವೀಕರಿಸುತ್ತಾಳೆ. ಇದು ಮಾನವಧರ್ಮ. ‘ಅಭಿಜ್ಞಾನಶಾಕುಂತಲಮ್’ ಎನ್ನುವ ಸರಳ ನಾಟಕದ ಮೂಲಕ ಕಾಲೀದಾಸನು ಬದುಕಿಗೆ ಯಾವುದು ಹಿತವಾದದ್ದು ಎನ್ನುವ ಸತ್ಯವನ್ನು ತೋರಿಸುತ್ತಿದ್ದಾನೆ.

ಶಾಕುಂತಲಮ್ ನಾಟಕದ ಪ್ರಾರಂಭ, ಮಧ್ಯಭಾಗ ಹಾಗು ಕೊನೆ ಈ ಮೂರು ಭಾಗಗಳಲ್ಲಿ ನಾವು ವಾಸ್ತವತೆಯನ್ನು ಮೀರಿದ, ರಮ್ಯ fantasyಯ ಸಂದರ್ಭಗಳನ್ನು ಕಾಣಬಹುದು. ಶಕುಂತಲೆಯ ಸುತ್ತಲೂ ಸುತ್ತುತ್ತಿದ್ದ ಭ್ರಮರವನ್ನು ಓಡಿಸುವ ಮೂಲಕ, ದುಷ್ಯಂತನು ತಾನೇ ಭ್ರಮರವಾಗಿ ಅವಳನ್ನು ಪ್ರೇಮಜಾಲದಲ್ಲಿ ಸಿಲುಕಿಸುತ್ತಾನೆ. ಶಕುಂತಲೆ ಕಮಲದ ಎಲೆಯ ಮೇಲೆ ತನ್ನ ಕಣ್ಣಿನ ಕಾಡಿಗೆಯಿಂದ ಪ್ರೇಮಪತ್ರವನ್ನು ಬರೆದು ತೊರೆಯಲ್ಲಿ ತೇಲಿಬಿಡುತ್ತಾಳೆ.  ಕೊನೆಯ ಅಂಕದಲ್ಲಿ ಭರತನು ಸಿಂಹದ ಮರಿಯ ಜೊತೆಗೆ ಆಟವಾಡುತ್ತಿದ್ದಾನೆ(ಬಾಯಿ ತೆರೆ ಸಿಂಹವೆ, ನಿನ್ನ ಹಲ್ಲುಗಳನ್ನು ಎಣಿಸುತ್ತೇನೆ’). ಆತನನ್ನು ಕಂಡ ದುಷ್ಯಂತನಲ್ಲಿ ಆಪತ್ಯಪ್ರೇಮ ಸ್ಫುರಣವಾಗುತ್ತದೆ. ಈ ಎರಡು ರಮ್ಯ fantasyಗಳ ನಡುವೆ ಶಕುಂತಲೆಗೆ ದುಷ್ಯಂತನು ಕೊಟ್ಟ ಮುದ್ರಿಕೆ ಕಳೆದು ಹೋಗುವುದು ಹಾಗು ದೂರ್ವಾಸ ಶಾಪದಿಂದಾಗಿ ದುಷ್ಯಂತನಿಗೆ ಶಕುಂತಲೆಯ ನೆನಪು ಹೋಗುವುದು ಎನ್ನುವಂತಹ ವಿಧಿನಿಯಮಿತ ವಿಪರ್ಯಾಸ ಘಟನೆಗಳು ನಡೆಯುತ್ತವೆ. ಹೀಗಾಗಿ ದುಷ್ಯಂತನಿಂದ ಪರಿತ್ಯಕ್ತಳಾದ ಶಕುಂತಲೆಯು ಭೂಗರ್ಭವನ್ನು ಸೇರಿಕೊಳ್ಳುತ್ತಾಳೆ. ಇವೆಲ್ಲವೂ ವಾಸ್ತವತೆಯನ್ನು ಮೀರಿದ ಘಟನೆಗಳು. ಹಾಗೆ ನೋಡಿದರೆ, ಶಕುಂತಲೆಯು ಸಹ ಭೂಲೋಕದ ತಂದೆ ಹಾಗು ದೇವಲೋಕದ ತಾಯಿಗೆ ಹುಟ್ಟಿದವಳಾಗಿ, ಶಕುಂತ ಪಕ್ಷಿಗಳಿಂದ ಪಾಲಿತಳಾದ ಶಿಶುವಾಗಿ ರಮ್ಯ fantasyಯನ್ನು ಮೈಗೂಡಿಸಿಕೊಂಡವಳೇ! ಈ ರಮ್ಯತೆ ಹಾಗು ಈ fantasyಗಳ ಮೂಲಕ, ಹಾಗು ಕೆಲವು ಅವಾಸ್ತವ ಘಟನೆಗಳ ಮೂಲಕ ಕಾಲೀದಾಸನು ವಾಸ್ತವದ  ಬದುಕು ಸುಮುಖವಾಗಿರಲು ಹೇಗಿರಬೇಕು ಎನ್ನುವುದನ್ನು ಬಿಂಬಿಸುತ್ತಿದ್ದಾನೆ.

ಸಂಸ್ಕೃತದ ಎರಡು ಶ್ರೇಷ್ಠ ನಾಟಕಗಳಾದ ಅಭಿಜ್ಞಾನಶಾಕುಂತಲಮ್ಹಾಗು ಮೃಚ್ಛಕಟಿಕಮ್ನಾಟಕಗಳು ಎಷ್ಟು ವಿಭಿನ್ನವಾಗಿವೆ ಎನ್ನುವದನ್ನು ಈ ರೀತಿಯಲ್ಲಿ ನಾವು ನೋಡಬಹುದು: ಮೊದಲನೆಯದು ವಾಸ್ತವತೆಯನ್ನು ಮೀರಿದ ನಾಟಕವಾದರೆ, ಎರಡನೆಯದು, ಕಟುವಾಸ್ತವತೆಯ ನಾಟಕವಾಗಿದೆ.

(ಕಾಲೀದಾಸನ ಪ್ರಖ್ಯಾತ ಕಾವ್ಯವಾದ ಮೇಘದೂತವೂ ಸಹ ಯಕ್ಷಲೋಕದ ಕಾವ್ಯವಾಗಿದೆ. ಶಾಪಗ್ರಸ್ತನಾಗಿ ಭೂಲೋಕಕ್ಕೆ ಇಳಿದ ಯಕ್ಷನು ಆಷಾಢದ ಮೊದಲ ಮೋಡವನ್ನು ನೋಡಿ, ಅದರೊಡನೆ ತನ್ನ ಕೆಳದಿಗೆ ಕಳುಹಿಸುವ ಸಂದೇಶವೂ ಸಹ ಒಂದು ರಮ್ಯವಾದ fantasy ಅಲ್ಲವೆ?)

ಕಾಲೀದಾಸನು ಶೂದ್ರಕನಿಗಿಂತ ಮೊದಲಿನವನು. ಭಾಸನು ಕಾಲೀದಾಸನಿಗಿಂತ ಮೊದಲನೆಯವನು. ನಾಟಕೀಯತೆಯಲ್ಲಿ ಭಾಸನನ್ನು ಮೀರಿಸಿದವರು ಬಹುಶಃ ಯಾರೂ ಇಲ್ಲ. ಭಾಸನು ಬರೆದ ಪ್ರತಿಮಾಗೃಹ, ಮಧ್ಯಮವ್ಯಾಯೋಗ ಹಾಗು ಸ್ವಪ್ನವಾಸವದತ್ತಾ ಇವು ನಾಟಕೀಯತೆಯ ಅತ್ಯುತ್ತಮ ಉದಾಹರಣೆಗಳಾಗಿವೆ.

ಪ್ರತಿಮಾಗೃಹದ ಕಥಾನಕ ಹೀಗಿದೆ:
ರಾಮಚಂದ್ರನು ಅಯೋಧ್ಯೆಯನ್ನು ತೊರೆದು ವನವಾಸಕ್ಕೆ ಹೋಗಿದ್ದಾನೆ. ಭರತನಿಗೆ ತಕ್ಷಣವೇ ಅಯೋಧ್ಯೆಗೆ ಬರಲು ಕರೆ ಹೋಗುತ್ತದೆ. ಆದರೆ ಆತನಿಗೆ ತನ್ನ ತಂದೆ ದಶರಥನು ಮರಣ ಹೊಂದಿದ ವಿಷಯ ತಿಳಿದಿಲ್ಲ. ಅಯೋಧ್ಯೆಯ ಹೊರವಲಯದವರೆಗೆ ಭರತ ಬಂದಿದ್ದಾನೆ. ಅಲ್ಲಿ ಕ್ಷಣ ಕಾಲದವರೆಗೆ ವಿಶ್ರಮಿಸಿಕೊಳ್ಳುವ ವಿಚಾರದಿಂದ, ಅಲ್ಲಿಯೇ ಇದ್ದ ಪ್ರತಿಮಾಗೃಹಕ್ಕೆ ಭರತ ಹಾಗು ಆತನ ರಥದ  ಸಾರಥಿ ಬರುತ್ತಾರೆ. ಪ್ರತಿಮಾಗೃಹದಲ್ಲಿ ರಘುವಂಶದ ರಾಜರ ಪುತ್ಥಳಿಗಳನ್ನು ಇಡಲಾಗಿದೆ. ಎಲ್ಲವನ್ನೂ ನೋಡುತ್ತ ಬಂದ ಭರತನಿಗೆ, ಕೊನೆಯಲ್ಲಿ ತನ್ನ ತಂದೆಯಾದ  ದಶರಥನ ಪ್ರತಿಮೆ ಕಾಣುತ್ತದೆ. ಚಕಿತನಾದ ಭರತನು ಇಲ್ಲಿ ಜೀವಂತವಿರುವ ರಾಜರ ಪುತ್ಥಳಿಗಳನ್ನೂ ಇಡಲಾಗುತ್ತದೆಯೆ’, ಎಂದು ಅಲ್ಲಿಯ ಮೇಲ್ವಿಚಾರಕನಿಗೆ ಕೇಳುತ್ತಾನೆ. ಇಲ್ಲ, ಇಲ್ಲಿ ಕೇವಲ ನಿಧನರಾದ ರಾಜರ ಪುತ್ಥಳಿಗಳನ್ನು ಮಾತ್ರ ಇಡಲಾಗುತ್ತದೆಎನ್ನುವುದು ಮೇಲ್ವಿಚಾರಕನ ಉತ್ತರ. ಭರತನಿಗೆ ಇದರಿಂದ ಬರಸಿಡಿಲು ಬಡಿದಂತಾಗುತ್ತದೆ.

ಮಧ್ಯಮವ್ಯಾಯೋಗವಂತೂ ನಾಟಕೀಯತೆಯ ಶಿಖರಸ್ಥಾನದಲ್ಲಿದೆ. ಪಾಂಡವರು ಮೊದಲೊಮ್ಮೆ ಅರಗಿನ ಅರಮನೆಯಿಂದ ಪಾರಾಗಿ, ಅಡವಿಯಲ್ಲಿ ಹಾಯ್ದು ಹೋಗುವಾಗ, ಭೀಮಸೇನನು ಹಿಡಿಂಬನನ್ನು ಕೊಂದು, ಅವನ ತಂಗಿಯಾದ ಹಿಡಿಂಬಿಯನ್ನು ಮದುವೆಯಾಗಿದ್ದನಷ್ಟೇ. ಇದೀಗ ಪಾಂಡವರು ಮತ್ತೊಮ್ಮೆ ಅಡವಿಯಲ್ಲಿ ಹಾಯ್ದು ಹೊರಟಿದ್ದಾರೆ. ಭೀಮಸೇನ ಹಾಗು ಹಿಡಂಬಿಯ ಮಗನಾದ ಘಟೋತ್ಕಚನು ತರುಣನಾಗಿ ಬೆಳೆದಿದ್ದಾನೆ. ತನ್ನ ತಾಯಿಯ ಆಣತಿಯ ಮೇರೆಗೆ, ಅವಳ ಭಕ್ಷಣೆಗಾಗಿ ಓರ್ವ ಮನುಷ್ಯನನ್ನು ಹುಡುಕುತ್ತ ಘಟೋತ್ಕಚನು ಅಡವಿಯಲ್ಲಿ ಸಂಚರಿಸುತ್ತಿದ್ದಾನೆ. ಆ ಸಮಯದಲ್ಲಿ ಓರ್ವ ಬ್ರಾಹ್ಮಣ,ಅವನ ಹೆಂಡತಿ ಹಾಗು ಅವರ ಮೂವರು ಗಂಡುಮಕ್ಕಳು ಸಹ ಅಡವಿಯ ಮೂಲಕ ಸಾಗುತ್ತಿದ್ದಾರೆ. ತಂದೆ, ತಾಯಿಯರಿಗೆ ನೀರಡಿಕೆಯಾದಾಗ, ನಡುವಿನ ಮಗನು ನೀರನ್ನು ಹುಡುಕುತ್ತ ಹೋಗಿದ್ದಾನೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಘಟೋತ್ಕಚನು, ಅಲ್ಲಿರುವ ಇಬ್ಬರು ಹುಡುಗರಲ್ಲಿ ಒಬ್ಬನು ತನ್ನ ತಾಯಿಯ ಭಕ್ಷಣೆಗಾಗಿ ಬೇಕಾಗಿದ್ದಾನೆ ಎಂದು ಗದರಿಸುತ್ತಾನೆ. ಮೊದಲಿನ ಮಗನನ್ನು ಕೊಡಲು ತಂದೆಗೆ ಮನಸ್ಸಿಲ್ಲ, ಕೊನೆಯ ಮಗನನ್ನು ಕೊಡಲು ತಾಯಿಗೆ ಮನಸ್ಸಿಲ್ಲ. ಆದುದರಿಂದ ನಡುವಿನ ಮಗನನ್ನು ಕೊಡಲು ಅವರು ಒಪ್ಪಲೇ ಬೇಕಾಗುತ್ತದೆ. ಆ ಮಗನನ್ನು ಕರೆಯಲು ಘಟೋತ್ಕಚನು ಆ ದಂಪತಿಗಳಿಗೆ ಸೂಚಿಸುತ್ತಾನೆ. ಮೃತ್ಯುಮುಖದಲ್ಲಿ ಹೋಗಲು ಬಾಎಂದು ಕರೆಯುವಾಗ, ತಮ್ಮ ಮಗನ ಹೆಸರು ಹಿಡಿದು ಕರೆಯಲು ಸಹ್ಯವಾಗದ ಬ್ರಾಹ್ಮಣನು, ‘ಮಧ್ಯಮಾ ಬಾಎಂದು ಕೂಗುತ್ತಾನೆ. ಅದೇ ಸಮಯದಲ್ಲಿ, ಅನತಿ ದೂರದಲ್ಲಿದ್ದ, ಮಧ್ಯಮಪಾಂಡವನಾದ ಭೀಮಸೇನನು ಮಧ್ಯಮಾಎಂದರೆ ತಾನೇ ಎಂದು ಅರ್ಥೈಸಿಕೊಂಡು ಅಲ್ಲಿಗೆ ಬರುತ್ತಾನೆ. ಆ ಕುಟುಂಬವನ್ನು ರಾಕ್ಷಸನಿಂದ ರಕ್ಷಿಸುವುದು ತನ್ನ ಕರ್ತವ್ಯವೆಂದು ಭಾವಿಸಿದ ಭೀಮಸೇನನು ಘಟೋತ್ಕಚನೊಡನೆ ಹೋರಾಡುತ್ತಾನೆ. ಘಟೋತ್ಕಚನಿಗೆ ಈತನು ತನ್ನ ತಂದೆ ಭೀಮಸೇನ ಎಂದು ಗೊತ್ತಿಲ್ಲ. ಆದರೆ ಘಟೋತ್ಕಚನ ಮಾತಿನಿಂದಾಗಿ ಭೀಮಸೇನನಿಗೆ ಈತನು ತನ್ನ ಮಗನು ಎನ್ನುವುದು ಗೊತ್ತಾಗುತ್ತದೆ. ಆತನ ಶೌರ್ಯವನ್ನು ನೋಡಿ ಸಂತೋಷವೂ ಆಗುತ್ತದೆ. ಕೊನೆಗೊಮ್ಮೆ ಭೀಮನು ಸೋತಂತೆ ನಟಿಸಿ, ಘಟೋತ್ಕಚನ ಬಂಧಿಯಾಗುತ್ತಾನೆ. ಘಟೋತ್ಕಚನು ಭೀಮಸೇನನನ್ನು ತನ್ನ ತಾಯಿಯ ಬಳಿಗೆ ಎಳೆದೊಯ್ಯುತ್ತಾನೆ. ಹಿಡಂಬಿಯು ಆಶ್ಚರ್ಯವನ್ನು ನಟಿಸಿ, ಬಳಿಕ ಇವನು ನಿನ್ನ ತಂದೆ, ಭೀಮಸೇನನುಎಂದು ಘಟೋತ್ಕಚನಿಗೆ ಹೇಳುತ್ತಾಳೆ. ಹಿಡಂಬಿಯು ಭೀಮಸೇನನ ಕಿವಿಯಲ್ಲಿ ಏನೋ ಉಸುರುತ್ತಾಳೆ. ಪ್ರೇಕ್ಷಕರಿಗೆ ಅದು ಕೇಳಲಾರದು. ಆದರೆ ಭೀಮಸೇನನು, ‘ಹಿಡಿಂಬೆ, ನೀನು ರಾಕ್ಷಸಕುಲದಲ್ಲಿ ಹುಟ್ಟಿದ್ದರೂ ಸಹ ಆರ್ಯಸ್ತ್ರೀಯಂತೆಯೇ ಇರುವಿಎನ್ನುತ್ತಾನೆ. ಈಗ ಬರುವ ಪ್ರಶ್ನೆ: ಹಿಡಿಂಬಿಯ ಭೀಮಸೇನನ ಕಿವಿಯಲ್ಲಿ ಏನನ್ನು ಪಿಸುಗುಟ್ಟಿದಳು? ಇದು ಪ್ರೇಕ್ಷಕರ ಊಹೆಗೆ ಬಿಟ್ಟಿದ್ದು. ಈ ರೀತಿಯಾಗಿ ಕೊನೆಗೊಳ್ಳುವ ನಾಟಕ ಬೇರೆಲ್ಲೆಯಾದರೂ ಸಿಕ್ಕೀತೆ?

ಈ ಕೊನೆಯ ಕ್ಷಣದಲ್ಲಿ ಪ್ರೇಕ್ಷಕನಿಗೆ ಹೊಳೆಯುವ ಸತ್ಯವೇನೆಂದರೆ: ಪಾಂಡವರು ಅರ್ಥಾತ್ ಭೀಮಸೇನನು ಅಡವಿಯಲ್ಲಿ ಬರುತ್ತಿರುವ ಸಂಗತಿಯು ಹಿಡಿಂಬಿಗೆ ಗೊತ್ತಾಗಿತ್ತು. ದೀರ್ಘವಿರಹದ ನಂತರ ಅವನನ್ನು ಸಂಧಿಸಲು ಅವಳು ಕಾತುರಳಾಗಿದ್ದಳು. ಆದರೆ ಆ ಪ್ರದೇಶದ ರಾಣಿಯಾದ ಅವಳು ತಾನೇ ಅವರಲ್ಲಿಗೆ ಹೋಗುವುದು ಶಿಷ್ಟಾಚಾರವಲ್ಲ ಎಂದು ಭಾವಿಸಿ, ತನ್ನ ಮಗ ಘಟೋತ್ಕಚನಿಗೆ ಒಂದು ನೆವ ಹೇಳಿ ಅಲ್ಲಿಗೆ ಕಳುಹಿಸಿದಳು. ಈ ರೀತಿಯಲ್ಲಿ ತಂದೆ ಮಕ್ಕಳ ಭೆಟ್ಟಿಯನ್ನು ಸಹ ಮಾಡಿಸಿದಳು. (ಭೀಮಸೇನ ಹಾಗು ಘಟೋತ್ಕಚರ ಹಣಾಹಣಿಯೂ ಸಹ ತುಂಬ ನಾಟಕೀಯವಾಗಿದೆ.) ಆ ಬಳಿಕ, ಹಿಡಿಂಬಿಯು ಭೀಮಸೇನನ ಜೊತೆಗೆ ಏಕಾಂತಮಿಲನದ ತನ್ನ ಕಾತುರತೆಯನ್ನು ಅವನ ಕಿವಿಯಲ್ಲಿ ಪಿಸುಗುಟ್ಟಿರಬಹುದು! 

ಇಡೀ ‘ಮಧ್ಯಮ ವ್ಯಾಯೋಗ’  ನಾಟಕವು ಒಂದೇ ಪರಿಸರದಲ್ಲಿ ಹಾಗು ಒಂದೇ ಕಾಲದಲ್ಲಿ ಜರಗುತ್ತದೆ. ನಾಟಕದಲ್ಲಿಯ ಮುಖ್ಯ ಕ್ರಿಯೆಯೂ ಒಂದೇ ಆಗಿದೆ. ಆದುದರಿಂದ ಗ್ರೀಕ್ ನಾಟಕಶಾಸ್ತ್ರದಲ್ಲಿ ಹೇಳಲಾದ, ‘ಸ್ಥಳೈಕ್ಯ’ ‘ಕಾಲೈಕ್ಯ’ ಹಾಗು ‘ಕ್ರಿಯೈಕ್ಯ’ಗಳು ಈ ನಾಟಕದಲ್ಲಿ ಕಂಡುಬರುವ ವಿಶೇಷತೆಗಳಾಗಿವೆ.

ಸ್ವಪ್ನವಾಸವದತ್ತಾಅಂತೂ ಭ್ರಮಾವಿಲಾಸದ ರಮ್ಯ ನಾಟಕವಾಗಿದೆ. ಒಂದು ಸಣ್ಣ ರಾಜ್ಯದ ರಾಜನಾದ ಉದಯನನಿಗೆ ತನ್ನ ಹೆಂಡತಿ ವಾಸವದತ್ತೆಯಲ್ಲಿ ಅತೀವ ಪ್ರೀತಿ ಇದೆ. ಉದಯನನ ಮುಖ್ಯ ಮಂತ್ರಿಯಾದ ಯೌಗಂಧರಾಯಣನಿಗೆ, ರಾಜಕೀಯ ಕಾರಣಗಳಿಗಾಗಿ ಉದಯನನಿಗೆ ನೆರೆಯ ರಾಜ್ಯದ ರಾಜಕುಮಾರಿಯ ಜೊತೆಗೆ ಎರಡನೆಯ ಮದುವೆ ಮಾಡಿಸುವ ವಿಚಾರವಿದೆ. ಆದರೆ ವಾಸವದತ್ತೆ ಇರುವವರೆಗೆ ಉದಯನನು ಎರಡನೆಯ ಮದುವೆಗೆ ಒಪ್ಪಲು ಸಾಧ್ಯವಿರಲಿಲ್ಲ. ಆ ಕಾರಣಕ್ಕಾಗಿ ಆತನು ವಾಸವದತ್ತೆಯು ಅಗ್ನಿಅವಘಡದಲ್ಲಿ ಮೃತಳಾದಳು ಎನ್ನುವ ಸುಳ್ಳನ್ನು ಹಬ್ಬಿಸಿ, ಅವಳನ್ನು ನೆರೆರಾಜ್ಯದ ರಾಜಕುಮಾರಿಯ ಆಶ್ರಯದಲ್ಲಿ ಅನಾಮಿಕಳನ್ನಾಗಿ ಇಡುತ್ತಾನೆ. ಉದಯನನು ಆನೆಯನ್ನು ಹಿಡಿಯಲು ಕಾಡಿಗೆ ಹೋದಾಗ, ಕೃತಕ ಆನೆಯನ್ನು ನಿಲ್ಲಿಸಿದ್ದ ಪಕ್ಕದ ರಾಜ್ಯದ ಸೈನಿಕರು ಈತನನ್ನು ಬಂಧಿಸಿ, ತಮ್ಮ ರಾಜ್ಯಕ್ಕೆ ಒಯ್ಯುತ್ತಾರೆ. ಅಲ್ಲಿಯ ರಾಜಕುಮಾರಿಯು ಇವನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಉದಯನನಿಗೆ ಹಗಲಿರುಳೂ ವಾಸವದತ್ತೆಯದೇ ಕನವರಿಕೆ. ಒಮ್ಮೆ ಉದಯನನು ಉಪವನದ ವಿಶ್ರಾಂತಿಗೃಹದಲ್ಲಿ ಮಲಗಿಕೊಂಡಿರುವಾಗ, ವಾಸವದತ್ತೆ ಅಲ್ಲಿಗೆ ಬರುತ್ತಾಳೆ. ಉದಯನನನ್ನು ನೋಡುತ್ತಾಳೆ. ಪ್ರೀತಿಯಿಂದ ಅವನನ್ನು ನೇವರಿಸಿ, ಥಟ್ಟನೆ ಮಾಯವಾಗುತ್ತಾಳೆ. ಎಚ್ಚತ್ತ ಉದಯನನು ಇದು ನನ್ನ ಭ್ರಮೆಯಲ್ಲ, ಸ್ವತಃ ವಾಸವದತ್ತೆಯೇ ನನ್ನನ್ನು ಮುಟ್ಟಿದ್ದಳುಎಂದುಕೊಳ್ಳುತ್ತಾನೆ. ಈ ಸನ್ನಿವೇಶವನ್ನು ಭಾಸನು ಅತ್ಯಂತ ನಾಟಕೀಯವಾಗಿ, ರಮ್ಯವಾಗಿ ನಿರೂಪಿಸಿದ್ದಾನೆ.

ಭಾಸ, ಕಾಲೀದಾಸ ಹಾಗು ಶೂದ್ರಕ ಈ ತ್ರಿಮೂರ್ತಿಗಳು ಸಂಸ್ಕೃತದ ಶ್ರೇಷ್ಠ ನಾಟಕಕಾರರು. ಭಾರತೀಯ ಸಾಹಿತ್ಯದ ಕೋಡುಗಳಾದ ಇವರಿಗೆ ನನ್ನ ವಿನೀತ ಪ್ರಣಾಮಗಳು.

Friday, June 10, 2016

ಮೃಚ್ಛಕಟಿಕಮ್-೧೧



ಹತ್ತನೆಯ ಅಂಕವು ಮೃಚ್ಛಕಟಿಕಮ್ ನಾಟಕದ ಕೊನೆಯ ಅಂಕವಾಗಿದೆ. ಈ ಅಂಕವು ದಾರುಣತೆಯಿಂದ ತುಂಬಿದೆ. ವಧಾಸ್ಥಾನಕ್ಕೆ ಕರೆದೊಯ್ಯುತ್ತಿರುವ ಚಾರುದತ್ತನಿಗೆ ಕೆಂಪು ಬಟ್ಟೆ ಹಾಗು ಕೆಂಪು ಕಣಗಿಲ ಹೂವುಗಳ ಮಾಲೆಯನ್ನು ತೊಡಿಸಿದ್ದಾರೆ. ಈರ್ವರು ಕೊಲೆಗಡುಕರು ಡೋಲನ್ನು ಬಾರಿಸುತ್ತ, ಚಾರುದತ್ತನ ಅಪರಾಧವನ್ನು ಹಾಗು ರಾಜಾಜ್ಞೆಯನ್ನು ಘೋಷಿಸುತ್ತಿದ್ದಾರೆ. ಈ ಕೊಲೆಗಡುಕರಿಗೂ ಸಹ ಚಾರುದತ್ತನ ಬಗೆಗೆ ಗೌರವ ಭಾವನೆ ಇದೆ. ಆದುದರಿಂದಲೇ ಅವರು, ‘ಒಳ್ಳೆಯ ವ್ಯಕ್ತಿಗಳ ಸಾವನ್ನು ನೋಡಬಾರದುಎಂದು ಸಾರ್ವಜನಿಕರಲ್ಲಿ ಬಿನ್ನವಿಸಿಕೊಳ್ಳುತ್ತಿದ್ದಾರೆ. ಚಾರುದತ್ತನಿಗೆ ಒದಗಿದ ಸ್ಥಿತಿಯನ್ನು ಕಂಡ ಹೆಣ್ಣುಮಕ್ಕಳು ಕಣ್ಣೀರು ಸುರಿಸುತ್ತಿದ್ದಾರೆ.

ಈ ಸಮಯದಲ್ಲಿ ಮೈತ್ರೇಯ ಹಾಗು ರೋಹಸೇನರು ಜನರ ನಡುವೆ ಬರುತ್ತಿದ್ದಾರೆ. ಚಾರುದತ್ತನು ನನ್ನ ಮಗನ ಮುಖವನ್ನು ಕೊನೆಯ ಸಮಯದಲ್ಲೊಮ್ಮೆ ನೋಡುವೆ.  ಅವಕಾಶ ಮಾಡಿ ಕೊಡಿಎಂದು ಕೊಲೆಗಡುಕರಲ್ಲಿ ಪ್ರಾರ್ಥಿಸುತ್ತಾನೆ. ಬಾಲಕ ರೋಹಸೇನ ಹಾಗು ಗೆಳೆಯ ಮೈತ್ರೇಯರು ಚಾರುದತ್ತನ ಬಳಿಗೆ ಬರುತ್ತಾರೆ. ಬರುತ್ತಿರುವಂತೆ ಮೈತ್ರೇಯನು ರೋಹಸೇನನಿಗೆ ಅವನ ತಂದೆಗೊದಗಿದ ಸ್ಥಿತಿಯ ಬಗೆಗೆ ಹೇಳುತ್ತಾನೆ. 

ರಿಕ್ತಹಸ್ತನಾದ ಚಾರುದತ್ತನು ಕೊನೆಯ ಗಳಿಗೆಯಲ್ಲಿ ತನ್ನ ಮಗನಿಗೆ ಏನು ಕೊಟ್ಟಾನು? ರೋಹಸೇನನಿಗೆ ಉಪನಯನವನ್ನು ಮಾಡುವುದು ಚಾರುದತ್ತನ ಕರ್ತವ್ಯವಾಗಿತ್ತು. ಅವನು ಕರ್ತವ್ಯಚ್ಯುತನಾಗಿದ್ದಾನೆ. ಆದುದರಿಂದ ದೀಕ್ಷಾಪ್ರದಾನದ ಬದಲಾಗಿ, ತನ್ನ ಜನಿವಾರವನ್ನೇ ತೆಗೆದು ತನ್ನ ಮಗನಿಗೆ ಕೊಡುತ್ತಾನೆ. ಬಂಗಾರಕ್ಕಿಂತಲೂ ಹೆಚ್ಚಿನದಾದ ಈ ಒಡವೆಯು ದೇವತೆಗಳಿಗೆ ಹಾಗು ಪಿತೃಗಳಿಗೆ ತರ್ಪಣ ನೀಡಲು ಸಾಧನವಾಗಿದೆಎಂದು ಚಾರುದತ್ತನು ತನ್ನ ಮಗನಿಗೆ ಹೇಳುತ್ತಾನೆ. ಈ ಮಾತಿನಲ್ಲಿ ಅಡಗಿದ ಗೂಢಾರ್ಥವನ್ನು ನೋಡಿರಿ. ಈ ಬಾಲಕನಿಗೆ ವಿಧ್ಯುಕ್ತವಾಗಿ ಉಪನಯನವಾದ ಬಳಿಕ, ತನ್ನ ಮೃತ ತಂದೆಗೆ ತರ್ಪಣ ನೀಡುವದೇ ಆತನ ಪ್ರಥಮ ಕರ್ತವ್ಯವಾಗಿದೆ!

ರೋಹಸೇನನು ತಂದೆಗೆ ತಕ್ಕ ಮಗನೇ ಅಲ್ಲವೆ? ಆದುದರಿಂದ ತನ್ನ ತಂದೆಯ ಬದಲಾಗಿ ತನ್ನನ್ನೇ ಶೂಲಕ್ಕೇರಿಸಿರಿ ಎಂದು ಕೊಲೆಗಡುಕರಲ್ಲಿ ಮನವಿ ಮಾಡಿಕೊಳ್ಳುತ್ತಾನೆ. ಮೈತ್ರೇಯನೂ ಸಹ ತನ್ನ ಗೆಳೆಯನ ಬದಲಾಗಿ ತನ್ನನು ಶೂಲಕ್ಕೇರಿಸಲು ಕೊಲೆಗಡುಕರಲ್ಲಿ ಪ್ರಾರ್ಥಿಸುತ್ತಾನೆ.

ಶಕಾರನು ತನ್ನ ಸೇವಕನಾದ ಸ್ಥಾವರಕನನ್ನು ಒಂದು ಮಾಳಿಗೆಯಲ್ಲಿ ಬಂಧಿಸಿ ಇಟ್ಟದ್ದನ್ನು ನೆನಪಿಸಿಕೊಳ್ಳಿ. (ಎಂಟನೆಯ ಅಂಕ). ಆತನು ಮಾಳಿಗೆಯಿಂದಲೇ ಇದನ್ನೆಲ್ಲ ನೋಡುತ್ತಾನೆ ಹಾಗು ವಾಸ್ತವವಾಗಿ ಏನಾಯಿತು ಎನ್ನುವುದನ್ನು ಕೂಗಿ, ಕೂಗಿ ಹೇಳುತ್ತಾನೆ. ಆದರೆ ಆತನ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ. ಆದುದರಿಂದ ಸ್ಥಾವರಕನು ಮಾಳಿಗೆಯಿಂದ ಕೆಳಗೆ ಜಿಗಿಯುತ್ತಾನೆ. ಆ ಸಮಯದಲ್ಲಿ ಶಕಾರನು ಆತನಿಗೆ ಹಾಕಿದ ಕೋಳಗಳು ತುಂಡಾಗುತ್ತವೆ. ಸ್ಥಾವರಕನು ಕೊಲೆಗಡುಕರಿಗೆ ನೈಜ ಸ್ಥಿತಿಯನ್ನು ತಿಳಿಸಿ, ಚಾರುದತ್ತನನ್ನು ಬಿಡಲು ಹಾಗು ಶಕಾರನನ್ನು ಶೂಲಕ್ಕೇರಿಸಲು ಕೇಳಿಕೊಳ್ಳುತ್ತಾನೆ.

ಶಕಾರನು ಸ್ಥಾವರಕನ ಈ ಕೃತ್ಯವನ್ನು ಸುಮ್ಮನೆ ನೋಡುತ್ತ ನಿಲ್ಲಬಹುದೆ? ಆತನು ಸ್ಥಾವರಕನನ್ನು ಒಂದು ಕಡೆಗೆ ಎಳೆದುಕೊಂಡೊಯ್ದು, ಅವನಿಗೆ ತನ್ನ ಬಂಗಾರದ ಕಡಗವನ್ನು ಲಂಚವಾಗಿ ಕೊಡಲು ಪ್ರಯತ್ನಿಸುತ್ತಾನೆ. ಅವನು ಒಪ್ಪದಿದ್ದಾಗ, ಅವನನ್ನು ಬೇರೆಡೆಗೆ ಎಳೆದು ಒಯ್ಯುತ್ತಾನೆ. ಅಪರಾಧೀ ಪ್ರವೃತ್ತಿಯ ಜನರಲ್ಲಿ ಸಾವಿರ ಅಪರಾಧೀ ಉಪಾಯಗಳಿರುತ್ತವೆ.

ಇತ್ತ ಕೊಲೆಗಡುಕರಿಗೆ. ತ್ವರೆ ಮಾಡಿ. ಚಾರುದತ್ತನ ಜೊತೆಗೆ, ಅವನ ಮಗನನ್ನೂ ಸಹ ಶೂಲಕ್ಕೇರಿಸಿಎಂದು ಶಕಾರನು ಒತ್ತಾಯಿಸುತ್ತಾನೆ.  ಚಾರುದತ್ತನಿಗೂ ಸಹ ತನ್ನ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಹಾಗು ರಾಜಾಜ್ಞೆಯನ್ನು ಘೋಷಿಸಲು, ಶಕಾರನು ಹೇಳುತ್ತಾನೆ. ಅಪಮಾನಕ್ಕೆ ಈಡು ಮಾಡುವ ಈ ನಾಟಕವನ್ನು ಬೇಗನೇ ಮುಕ್ತಾಯಗೊಳಿಸಿ, ಮರಣ ಹೊಂದುವುದೇ ಲೇಸೆಂದು ಭಾವಿಸಿದ ಚಾರುದತ್ತನು ಅದೇ ಪ್ರಕಾರವಾಗಿ ಘೋಷಿಸುತ್ತಾನೆ. ಓರ್ವ ಮನುಷ್ಯನು ಎಷ್ಟರ ಮಟ್ಟಿಗೆ ನೀಚನಾಗಬಹುದು ಎನ್ನುವುದನ್ನು ನಮ್ಮ ನಾಟಕಕಾರನು ಶಕಾರನ ಪಾತ್ರದ ಮೂಲಕ ಹಾಗು ಎಷ್ಟರ ಮಟ್ಟಿಗೆ ಅಸಹಾಯಕನಾಗಬಹುದು ಎನ್ನುವುದನ್ನು ಚಾರುದತ್ತನ ಪಾತ್ರದ ಮೂಲಕ ತೋರಿಸಿದ್ದಾನೆ.

ಅಲ್ಲಿರುವ ಇಬ್ಬರು ಕೊಲೆಗಡಕರಲ್ಲಿ ಚಾರುದತ್ತನನ್ನು ಶೂಲಕ್ಕೇರಿಸಬೇಕಾದ ಕೊಲೆಗಡುಕನು ಯಾರು ಎಂದು ನಿರ್ಧರಿಸಬೇಕಲ್ಲವೆ? ಅದನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಯಿತು. ಆದರೆ ಆ ಕೊಲೆಗಡುಕನು ತಕ್ಷಣವೇ ತನ್ನ ಕಾರ್ಯವನ್ನು ಮುಗಿಸಲು ಸಿದ್ಧನಾಗಲಿಲ್ಲ. ಅಪರಾಧಿಯನ್ನು ರಕ್ಷಿಸುವಂತಹ ಯಾವುದಾದರೂ ಘಟನೆ ನಡೆದೀತು. ಆದುದರಿಂದ, ನಿನ್ನ ಕಾರ್ಯವನ್ನು ಸ್ವಲ್ಪ ವಿಳಂಬಿಸುಎಂದು ಅವನ ತಂದೆ ಅವನಿಗೆ ಹೇಳಿದ್ದನಂತೆ! ಕೊಲೆಗಡುಕರೂ ಕೂಡ ಚಾರುದತ್ತನ ಬಗೆಗೆ ಸದ್ಭಾವನೆಯನ್ನೇ ಹೊಂದಿದ್ದರು! ಆ ವಿಳಂಬಕಾಲವೂ ಮುಗಿದ ಬಳಿಕ, ಅನಿವಾರ್ಯವಾಗಿ, ಕೊಲೆಗಡುಕರು ಚಾರುದತ್ತನನ್ನು ಶೂಲಕ್ಕೇರಿಸುವ ತೆಂಕಣ ದಿಕ್ಕಿನ ಸ್ಮಶಾನಭೂಮಿಯನ್ನು ತೋರಿಸುತ್ತಾರೆ.

ಈ ನಡುವೆ, ಬೌದ್ಧ ಭಿಕ್ಷುವಿನಿಂದ ರಕ್ಷಿತಳಾದ ವಸಂತಸೇನೆಯು ಚಾರುದತ್ತನ ಮನೆಗೆ ಹೋಗಲು, ಆ ಭಿಕ್ಷುವಿನೊಡನೆ ರಂಗದ ಮೇಲೆ ಪ್ರವೇಶಿಸುತ್ತಾಳೆ. ಚಾರುದತ್ತನ ಮೇಲೆ ಮಾಡಲಾದ ಆರೋಪ ಹಾಗು ಆತನಿಗೆ ನೀಡಲಾದ ಮರಣದಂಡನೆಯ ವಿಷಯವು ವಸಂತಸೇನೆಗೆ ತಿಳಿದಿಲ್ಲ. ಅವಳಿಗೆ ಚಾರುದತ್ತನನ್ನು ಭೆಟ್ಟಿಯಾಗುವ ಆತುರ. ಆದರೆ ಆ ಭಿಕ್ಷುವು ಅವಳನ್ನು ರಾಜಮಾರ್ಗದಲ್ಲಿಯೇ ಕರೆದುಕೊಂಡು ಹೋಗುತ್ತಿದ್ದಾನೆ. ಚಾರುದತ್ತನನ್ನು ಶೂಲಕ್ಕೇರಿಸಲು ಕೊಲೆಗಡುಕರು ಐದನೆಯ ಸಲ ಮಾಡುತ್ತಿರುವ ಘೋಷಣೆಯನ್ನು ಭಿಕ್ಷುವು ಕೇಳಿ ವಸಂತಸೇನೆಗೆ ತಿಳಿಸುತ್ತಾನೆ: ವಸಂತಸೇನೆ, ನಿನ್ನನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ಚಾರುದತ್ತನನ್ನು ಶೂಲಕ್ಕೇರಿಸಲಾಗುತ್ತಿದೆ.

ಕೊಲೆಗಡುಕನು ಚಾರುದತ್ತನಿಗೆ ಸಿದ್ಧನಾಗಲು ಹೇಳಿ, ತನ್ನ ಕತ್ತಿಯನ್ನು ಅವನ ಕುತ್ತಿಗೆಯ ಮೇಲೆ ಬೀಸುತ್ತಾನೆ. ಆದರೆ, ಕತ್ತಿಯು ಕೈಜಾರಿ ಕೆಳಗೆ ಬೀಳುತ್ತದೆ. ಅದನ್ನು ಶುಭಶಕುನವೆಂದೇ ತಿಳಿದ ಆ ಕೊಲೆಗಡುಕನು ತನ್ನ ಕುಲದೇವಿಯಾದ ಸಹ್ಯಪರ್ವತವಾಸಿನಿಯನ್ನು ಪ್ರಾರ್ಥಿಸುತ್ತಾನೆ: ತಾಯಿ, ಚಾರುದತ್ತನನ್ನು ರಕ್ಷಿಸು ಹಾಗು  ಆ ಮೂಲಕ ನನ್ನ ವಂಶವನ್ನು
ಕಾಪಾಡು’. ಓರ್ವ ಕೊಲೆಗಡುಕನಿಗೂ ಕೂಡ, ಚಾರುದತ್ತನು ನಿರಪರಾಧಿ ಎನ್ನುವ ವಿಶ್ವಾಸವಿದೆ! (ಸಹ್ಯಾದ್ರಿವಾಸಿನಿಯಾದ ದೇವಿಯು ಈ ಕೊಲೆಗಡುಕನ ಕುಲದೇವಿ ಎಂದರೆ, ಇವನು ಕರ್ನಾಟಕದ ಘಟ್ಟಪ್ರದೇಶದಿಂದ ಉಜ್ಜಯಿನಿಗೆ ವಲಸೆ ಹೋಗಿದ್ದನೆ?)

ಇದು ಮತ್ತೋರ್ವ ಕೊಲೆಗಡುಕನನ್ನು ಕಾರ್ಯಪ್ರವೃತ್ತನಾಗಲು ಪ್ರೇರೇಪಿಸುತ್ತದೆ. ಆತನು ಚಾರುದತ್ತನ ಕೊರಳಿಗೆ ನೇಣಿನ ಹಗ್ಗವನ್ನು ಹಾಕುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಓಡುತ್ತ ಬಂದ ವಸಂತಸೇನೆಯು, ‘ತಡೆಯಿರಿ, ನಿಲ್ಲಿಸಿರಿ. ಯಾರ ಕೊಲೆಗಾಗಿ ನೀವು ಇವರನ್ನು ಶೂಲಕ್ಕೆ ಏರಿಸುತ್ತಿದ್ದೀರೋ, ಆ ದುರ್ಭಾಗಿನಿ ನಾನೇಎನ್ನುತ್ತಾಳೆ.

ಚಕಿತರಾದ ಕೊಲೆಗಡುಕರು ಚಾರುದತ್ತನಿಗೆ ಬಿಗಿದ ನೇಣನ್ನು ತೆಗೆದು ಬಿಡುತ್ತಾರೆ. ವಸಂತಸೇನೆಯನ್ನು ಕಂಡ ಶಕಾರನು ಓಡಿ ಹೋಗಲು ಪ್ರಾರಂಭಿಸುತ್ತಾನೆ. ಆದರೆ ಕೊಲೆಗಡುಕರು ಅವನನ್ನು ಬೆನ್ನಟ್ಟುತ್ತಾರೆ. ವಸಂತಸೇನೆಯನ್ನು ಹೊಡೆದುರುಳಿಸಿದವರನ್ನು ಶೂಲಕ್ಕೇರಿಸಿರಿ ಎನ್ನುವದು ರಾಜಾಜ್ಞೆಯಾಗಿದೆ. ಆದುದರಿಂದ ರಾಜನ ಮೈದುನನನ್ನೇ ಶೂಲಕ್ಕೇರಿಸುತ್ತೇವೆಎನ್ನುತ್ತ ಅವರು ಅವನನ್ನು ಹಿಡಿಯುತ್ತಾರೆ.

ವಸಂತಸೇನೆಯು ಜೀವಂತವಾಗಿರುವದನ್ನು ಕಂಡ ಚಾರುದತ್ತನು ಸಂತೋಷಾಶ್ಚರ್ಯಭರಿತನಾಗಿ, ಭಾವಾತಿರೇಕದಿಂದ  ಆಕೆಗೆ ಹೇಳುತ್ತಾನೆ:
ನೋಡು ಪ್ರಿಯೆ,
ನನಗೆ ತೊಡಿಸಲಾದ ಈ ಕೆಂಪು ಬಟ್ಟೆ ಹಾಗು ಕೆಂಪು ಮಾಲೆಯು ಮದುಮಗನ ಸಿಂಗಾರದಂತೆ ಶೋಭಿಸುತ್ತಿವೆ.
ಮೃತ್ಯುಸೂಚಕವಾದ ಈ ಡೋಲಿನ ಧ್ವನಿಯು ವಿವಾಹದ ಮಂಗಲನಾದದಂತೆ ಕೇಳುತ್ತಿದೆ.

ಚಾರುದತ್ತನ ಭಾವನೆಯಲ್ಲಿಯ ಬದಲಾವಣೆಯನ್ನು ಗಮನಿಸಿರಿ. ಇಲ್ಲಿಯವರೆಗೂ ವಸಂತಸೇನೆಯನ್ನು ಕೇವಲ ಪ್ರೇಯಸಿಯಂತ ನೋಡುತ್ತಿದ್ದ ಚಾರುದತ್ತನು ಆಕೆಯನ್ನು ಇದೀಗ ಮದುಮಗಳಂತೆ ನೋಡುತ್ತಿದ್ದಾನೆ. ಅರ್ಥಾತ್ ವಸಂತಸೇನೆಯ ಗಾಢ ಪ್ರೇಮದಿಂದ ಅವನಲ್ಲಿ ಈ ಬದಲಾವಣೆ ಆಗಿರಬಹುದು ಅಥವಾ ಒಂದು ಉತ್ಕಟ ಸನ್ನಿವೇಶದಲ್ಲಿ ಅವನಿಗೆ ತನ್ನ ಹಾಗು ವಸಂತಸೇನೆಯ ನೈಜ ಸಂಬಂಧವು ಹೊಳೆದಿರಬಹುದು.

ವಸಂತಸೇನೆಯು ಶಕಾರನ ದೌರ್ಜನ್ಯವನ್ನು ವಿವರಿಸಿದಳು ಹಾಗು ಬೌದ್ಧ ಭಿಕ್ಷುವು ತನ್ನನ್ನು ರಕ್ಷಿಸಿದ ಬಗೆಯನ್ನು ತಿಳಿಸಿದಳು. ಆಗ ಬೌದ್ಧ ಭಿಕ್ಷುವು ತಾನು ಒಂದು ಕಾಲಕ್ಕೆ ಚಾರುದತ್ತನ ಸೇವಕನಾಗಿದ್ದ ಸಂವಾಹಕನು ಎಂದು ಹೇಳಿದನು. ಚಾರುದತ್ತ ಹಾಗು ವಸಂತಸೇನೆ ಇವರು ದೊಡ್ಡ ಗಂಡಾಂತರದಿಂದ ಪಾರಾದರು. ಆದರೆ ಇವರನ್ನು ಆಪತ್ತಿಗೆ ನೂಕಿದವರಾರು? ಶಕಾರನೆ, ನ್ಯಾಯಾಧೀಶರೆ ಅಥವಾ ಮಹಾರಾಜನೆ?  ನಿಜ ಹೇಳಬೇಕೆಂದರೆ, ಉಜ್ಜಯಿನಿಯ ಕೊಳೆತು ಹೋದ ವ್ಯವಸ್ಥೆಯೆ ಇದಕ್ಕೆಲ್ಲ ಕಾರಣವಲ್ಲವೆ? ನಾಟಕದ ಕೊನೆಯಲ್ಲಿ ಅದಕ್ಕೆ ನಾವು ಪರಿಹಾರವನ್ನು ಕಾಣಬೇಕಷ್ಟೆ? ಇಗೋ, ಅದು ಇಲ್ಲಿದೆ:

ಆಗ ಇದ್ದಕ್ಕಿದ್ದಂತೆ ಶರ್ವಿಲಕನು ಬಂದು ‘ದುಷ್ಟ ರಾಜನಾದ ಪಾಲಕನ ಸಂಹಾರವಾಗಿದೆ. ಆರ್ಯಕನು ರಾಜನಾಗಿ ಅಭಿಷಿಕ್ತನಾಗಿದ್ದಾನೆ. ಅವನ ಆಣತಿಯಂತೆ ಚಾರುದತ್ತನ ಬಿಡುಗಡೆಯನ್ನು ಮಾಡಲು ನಾನು ಇಲ್ಲಿ ಬಂದಿದ್ದೇನೆ’ ಎಂದು ಹೇಳುತ್ತಾನೆ. ( ಮೂರನೆಯ ಅಂಕದಲ್ಲಿ ಇದೇ ಶರ್ವಿಲಕನು ಚಾರುದತ್ತನ ಮನೆಗೆ ಕನ್ನ ಹಾಕಿ, ವಸಂತಸೇನೆಯ ಆಭರಣಗಳನ್ನು ಕದ್ದೊಯ್ದಿದ್ದನು. ನಾಲ್ಕನೆಯ ಅಂಕದಲ್ಲಿ, ವಸಂತಸೇನೆಯು ಇವನ ಪ್ರೇಯಸಿ ಮದನಿಕೆಯನ್ನು ಉದಾರವಾಗಿ ಇವನಿಗೆ ಒಪ್ಪಿಸಿದ್ದಳು. ಆ ಸಮಯದಲ್ಲಿ ಆರ್ಯಕನನ್ನು ಬಂಧಿಸಲು ರಾಜಾಜ್ಞೆಯಾಗಿರುವದನ್ನು ಕೇಳಿದ ಶರ್ವಿಲಕನು ಮದನಿಕೆಯನ್ನು ತನ್ನ ಗೆಳೆಯನ ಮನೆಯಲ್ಲಿ ಬಿಟ್ಟು, ಆರ್ಯಕನ ನೆರವಿಗಾಗಿ ಧಾವಿಸಿದ್ದನು.)

ಮೊದಮೊದಲು ಚಾರುದತ್ತನಿಗೆ ತನ್ನ ಮುಖವನ್ನು ತೋರಿಸಲು ನಾಚಿಕೊಂಡ ಶರ್ವಿಲಕನು ತನ್ನ ಪರಿಚಯವನ್ನು ಮಾಡಿಕೊಟ್ಟು, ಆರ್ಯಕನು ಚಾರುದತ್ತನನ್ನು ಬಂಧಮುಕ್ತನನ್ನಾಗಿ ಮಾಡಿರುವದಾಗಿಯೂ, ಆತನಿಗೆ ತನ್ನ ಮೊದಲ ಕಾಣಿಕೆಯೆಂದು ಕುಶಾವತಿ ಪ್ರಾಂತವನ್ನು ನೀಡಿರುವದಾಗಿಯೂ ಹೇಳುತ್ತಾನೆ.

ನಿರಪರಾಧಿಯು ಬಂಧಮುಕ್ತನಾದನು. ಆದರೆ ನಿಜವಾದ ಅಪರಾಧಿಗೆ ಶಿಕ್ಷೆಯಾಗಬೇಕಲ್ಲವೆ? ಆದುದರಿಂದ ಶಕಾರನನ್ನು ಹಿಡಿದುಕೊಂಡ ಕೊಲೆಗಡುಕರು ಆತನನ್ನು ಅಲ್ಲಿಗೆ ಎಳೆದು ತರುತ್ತಾರೆ. ಈತನಿಗೆ ಏನು ಶಿಕ್ಷೆ ಕೊಡಬೇಕೆಂದು ಶರ್ವಿಲಕನು ಚಾರುದತ್ತನನ್ನು ಕೇಳುತ್ತಾನೆ. ಈ ಸಮಯದಲ್ಲಿ ಲಜ್ಜಾಹೀನನಾದ ಶಕಾರನು, ‘ಚಾರುದತ್ತನೇ, ನನ್ನನ್ನು ರಕ್ಷಿಸು’ ಎಂದು ಅವನ ಕಾಲಿಗೆ ಬೀಳುತ್ತಾನೆ.

‘ನಾನು ಹೇಳುವ ಶಿಕ್ಷೆಯನ್ನು ಈತನಿಗೆ ನೀಡುವಿರಲ್ಲವೆ?’ ಎಂದು ಚಾರುದತ್ತನು ಸದ್ಯಕ್ಕೆ ರಾಜಪ್ರತಿನಿಧಿಯಾದ ಶರ್ವಿಲಕನಿಗೆ ಕೇಳುತ್ತಾನೆ. ಶರ್ವಿಲಕನೂ ಅದಕ್ಕೆ ಒಪ್ಪುತ್ತಾನೆ. ಚಾರುದತ್ತನು ತನಗೆ ಗಂಟಲಗಾಣವಾಗಿದ್ದ ಶಕಾರನಿಗೆ ಏನು ಶಿಕ್ಷೆಯನ್ನು ಹೇಳುವನೋ ಎಂದು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ಕುಳಿತಿರುತ್ತಾರೆ. ‘ಶಕಾರನನ್ನು ಕ್ಷಮಿಸಿ ಬಿಡಿ’ ಎಂದು ಚಾರುದತ್ತನು ಹೇಳಿದಾಗ, ಎಲ್ಲರೂ ಆಶ್ಚರ್ಯಗೊಳ್ಳದಿರರೆ? ಆದರೆ ಇದು ಚಾರುದತ್ತನ ಉದಾರ ಗುಣವನ್ನೇ ತೋರಿಸುತ್ತದೆ.

ಇತ್ತ ಚಾರುದತ್ತನ ಧರ್ಮಪತ್ನಿಯಾದ ಧೂತಾದೇವಿಯ ಪರಿಸ್ಥಿತಿ ಏನು? ಶರ್ವಿಲಕನ ಮತ್ತೊಬ್ಬ ಜೊತೆಗಾರನಾದ ಚಂದನಕನು ಜನರನ್ನು ಸರಿಸುತ್ತ ಬಂದು, ‘ಧೂತಾದೇವಿಯು ಅಗ್ನಿಪ್ರವೇಶವನ್ನು ಮಾಡುತ್ತಿದ್ದಾಳೆ. ರೋಹಸೇನ ಹಾಗು ಮೈತ್ರೇಯರು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಸಹ ಅವಳು ಕೇಳುತ್ತಿಲ್ಲ’ ಎಂದು ಹೇಳುತ್ತಾನೆ. ನಾಟಕದಲ್ಲಿಯ ಸಂಕಟಗಳ ಸರಣಿ ಇನ್ನೂ ಮುಗಿದಿಲ್ಲ!

ಧೂತಾದೇವಿಯು ಬಾಲಕ ರೋಹಸೇನನಿಗೆ, ‘ಗಟ್ಟಿ ಮನಸ್ಸು ಮಾಡಿಕೊ, ಮಗು. ನಮಗೆ ಎಳ್ಳು ನೀರು ಬಿಡಲು ನೀನು ಬದುಕಿರಬೇಕು. ನಿನ್ನನ್ನು ಸಂತೈಸಲು ನಿನ್ನ ತಂದೆ ಇಲ್ಲಿಲ್ಲ.’ ಎಂದು ಹೇಳುತ್ತ ಅಗ್ನಿಯಲ್ಲಿ ಹಾರಿಕೊಳ್ಳುವ ಕ್ಷಣದಲ್ಲಿ ಚಾರುದತ್ತನು ಅಲ್ಲಿ ಪ್ರವೇಶಿಸುತ್ತಾನೆ. ಚಾರುದತ್ತನನ್ನು ಕಂಡ ಧೂತಾದೇವಿ ಹಾಗು ರೋಹಸೇನರು ಸಂತೋಷದಿಂದ ಭಾವಾವಿಷ್ಟರಾಗುತ್ತಾರೆ.

ಇಲ್ಲಿಯವರೆಗೆ ಚಾರುದತ್ತ ಹಾಗು ವಸಂತಸೇನೆಯರ ಪ್ರೇಮಾಲಾಪವನ್ನು ಕೇಳಿದ್ದೇವೆ. ಚಾರುದತ್ತನಿಗೆ ತನ್ನ ಹೆಂಡತಿ ಧೂತಾದೇವಿಯ ಮೇಲೂ ಉತ್ಕಟ ಪ್ರೇಮ ಹಾಗು ಅಭಿಮಾನ ಇದ್ದವು ಎನ್ನುವುದು ನಾಟಕದ ಕೊನೆಯಲ್ಲಿ ವ್ಯಕ್ತವಾಗಬೇಕಷ್ಟೆ. ಆದುದರಿಂದ ನಮ್ಮ ನಾಟಕಕಾರನು ಚಾರುದತ್ತನಿಂದ ಹೇಳಿಸುವ ಈ ಮಾತುಗಳನ್ನು ಕೇಳಿರಿ:
‘ಓ ಪ್ರಿಯೆ, ನಿನ್ನ ಇನಿಯನು ಬದುಕಿರುವಾಗಲೇ ಇಂತಹ ಕಠಿಣವಾದ ನಿರ್ಧಾರವನ್ನು ಏಕೆ ಮಾಡಿದೆ? ಎಲ್ಲಿಯಾದರೂ ಸೂರ್ಯಾಸ್ತಕ್ಕಿಂತಲೂ ಮೊದಲೇ ತಾವರೆ ಬಳ್ಳಿಯು ಕಣ್ಣು ಮುಚ್ಚುವುದೆ?’

ಈ ಪ್ರಶ್ನೆಗೆ ಧೂತಾದೇವಿಯು ನೀಡುವ ಉತ್ತರವು ಹೃದಯಂಗಮವಾಗಿದೆ:
‘ಆರ್ಯಪುತ್ರ, ತಾವರೆ ಬಳ್ಳಿಯು ಜಡವಸ್ತುವಾಗಿದೆ’.
ಅರ್ಥಾತ್ ಧೂತಾದೇವಿಯು ಭಾವನೆಗಳಿಂದ ಪೂರ್ಣವಾದ ಚೇತನಳು, ತನ್ನ ಪತಿಯ ಬಗೆಗೆ ಅನನ್ಯವಾದ ಪ್ರೇಮವುಳ್ಳವಳು. ಅವಳು ತಾವರೆಯಂತೆ ಭಾವಶೂನ್ಯ ವಸ್ತುವಲ್ಲ.

ಬೆಂಕಿಯಲ್ಲಿ ಬೆಂದ ಚಿನ್ನವು ಹೊಳೆಯುವಂತೆ, ಸಂಕಟಗಳಲ್ಲಿ ಬೆಂದು, ಮೃತ್ಯುಮುಖದಿಂದ ಪಾರಾಗಿ ಬಂದ ಚಾರುದತ್ತನು ತನ್ನ ಮಿತ್ರನಾದ ಮೈತ್ರೇಯನನ್ನು ಹಾಗು ಸೇವಿಕೆಯಾದ ರದನಿಕೆಯನ್ನು ಸ್ವೀಕರಿಸುತ್ತಾನೆ. ಧೂತಾದೇವಿಯು ಹೊಸ ರಾಜನಾದ ಆರ್ಯಕನ ಪರವಾಗಿ ಶರ್ವಿಲಕ ಮತ್ತು ವಸಂತಸೇನೆಯನ್ನು ಸ್ವೀಕರಿಸುತ್ತಾಳೆ. ಹೊಸ ರಾಜನು ವಸಂತಸೇನೆಗೆ ಸದ್ಗೃಹಿಣಿಯ ಸ್ಥಾನವನ್ನು ದಯಪಾಲಿಸುತ್ತಾನೆ.

(ಈ ಕೃತ್ಯವನ್ನು ಎರಡು ಐತಿಹಾಸಿಕ ಘಟನೆಗಳೊಂದಿಗೆ ಹೋಲಿಸಬಹುದು:
ನರಕಾಸುರನ ವಧೆಯ ನಂತರ, ಶ್ರೀಕೃಷ್ಣನು, ಅಲ್ಲಿ ಬಂಧನದಲ್ಲಿದ್ದ ೧೬೦೦೦ ಹೆಣ್ಣುಮಕ್ಕಳನ್ನು ಮುಕ್ತಗೊಳಿಸಿ ಮದುವೆಯಾದನು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇದರ ಮರ್ಮವಿಷ್ಟೆ: ಈ ಹೆಣ್ಣುಮಕ್ಕಳಿಗೆ ಧರ್ಮಪತ್ನಿಯರು ಎನ್ನುವ ಶಾಸನಬದ್ಧ ಸ್ಥಾನವನ್ನು ಕೃಷ್ಣನು ನೀಡಿದನು. ಅವರಿಗೆ ಈಗಾಗಲೇ ಹುಟ್ಟಿದ ಹಾಗು ಇನ್ನು ಹುಟ್ಟಲಿರುವ ಮಕ್ಕಳು ಶಾಸನಬದ್ಧರಾಗಿ ಶ್ರೀಕೃಷ್ಣನ ಮಕ್ಕಳಾದರು.

ಎರಡನೆಯ ಘಟನೆ ಬಂಗ್ಲಾದೇಶದ್ದು. ಪಾಕಿಸ್ತಾನದಿಂದ ಮುಕ್ತಿ ಪಡೆದ ಬಂಗ್ಲಾದೇಶದಲ್ಲಿ ಸಾವಿರಾರು ಕನ್ಯಾಮಾತೆಯರಿದ್ದರು. ಸಾಮಾನ್ಯ ಕಾಯದೆಯ ಮೇರೆಗೆ ಅವರ ಮಕ್ಕಳು ಜಾರಜರು. ಬಂಗ್ಲಾದೇಶದ ಶಾಸನಸಭೆಯು ಅವರಿಗೆ ಶಾಸನೀಯ ಮನ್ನಣೆಯನ್ನಿತ್ತು, ಅವರ ಹುಟ್ಟಿನ ಅಪಮಾನವನ್ನು ತೊಡೆದು ಹಾಕಿತು.)

ಅನಂತರ ಚಾರುದತ್ತನ ಇಚ್ಛೆಯಂತೆ ಸ್ಥಾವರಕ, ಚಂದನಕ ಹಾಗು ಬೌದ್ಧ ಸನ್ಯಾಸಿ ಸಹ ಸಮ್ಮಾನಿಸಲ್ಪಟ್ಟರು, ಶಕಾರನೂ ಸಹ! ಚಾರುದತ್ತನು ತನಗೆ ಈಗಾಗಲೇ ಒಳ್ಳೆಯ ವಸ್ತುಗಳು ದೊರೆತಿವೆ ಎಂದು ಹೇಳುತ್ತಾನೆ. ತನ್ನ ಹಳೆಯ ದುಃಖಗಳನ್ನು ಮರೆತು ಹೊಸ ಸಂತೋಷದಲ್ಲಿ ಎಲ್ಲರೊಡನೆ ಭಾಗಿಯಾಗುವ ಸದ್ಗುಣವನ್ನು ಚಾರುದತ್ತನು ತೋರಿಸುತ್ತಾನೆ. ನಾಟಕವು ಚಾರುದತ್ತನ ಆಶಯದೊಂದಿಗೆ (ಭರತವಾಕ್ಯದೊಂದಿಗೆ) ಕೊನೆಯಾಗುತ್ತದೆ:

‘ಗೋವುಗಳು ಕ್ಷೀರಸಂಪನ್ನವಾಗಲಿ, ಭೂಮಿಯು ಸಸ್ಯಶಾಲಿನಿಯಾಗಲಿ. ಮೋಡಗಳು ಕಾಲಕಾಲಕ್ಕೆ ಮಳೆ ಸುರಿಸಲಿ, ತಂಗಾಳಿಯು ಎಲ್ಲರಿಗೂ ಸುಖವನ್ನು ನೀಡುತ್ತ ಬೀಸಲಿ. ಎಲ್ಲರ ಮನೆಯಲ್ಲೂ ಸಂತೋಷದ ಚಿಲುಮೆ ಇರಲಿ. ಬ್ರಾಹ್ಮಣರ ಸಜ್ಜನಿಕೆಗೆ ಬೆಲೆ ಇರಲಿ. ಹಗೆಗಳನ್ನು ನಾಶ ಮಾಡಿ ಸಿರಿವಂತರಾದ ಅರಸರು ಭೂಮಿಯನ್ನು ಧರ್ಮದಿಂದ ಪಾಲಿಸಲಿ.’

ಕೊನೆಯವರೆಗೂ ಕುತೂಹಲವನ್ನು ಕೆರಳಿಸುವ ಮೃಚ್ಛಕಟಿಕಮ್ ನಾಟಕವು ಭಾರತೀಯ ನಾಟ್ಯಪರಂಪರೆಗೆ ಅನುಗುಣವಾಗಿ ಸುಖಾಂತವಾಗಿ ಸಮಾಪ್ತವಾಗುತ್ತದೆ. ಭಾರತೀಯ ಪರಂಪರೆಯನ್ನು ಅರಿತ ಎಲ್ಲ ಲೇಖಕರು ಈ ಭರತವಾಕ್ಯವನ್ನು ತಮ್ಮ ಸಾಹಿತ್ಯದ ಕೊನೆಯಲ್ಲಿ ಹೇಳಿದ್ದಾರೆ. ಉದಾಹರಣೆಗೆ ಬೇಂದ್ರೆಯವರ ‘ಕುಣಿಯೋಣ ಬಾರಾ’ ಕವನವನ್ನು ನೋಡಬಹುದು. ಬದುಕಿನಲ್ಲಿ ಬೇಸತ್ತ ಕವಿಯು, ಬೇಸರದ ಪರಿಹಾರಾರ್ಥವಾಗಿ ತನ್ನ ಹೆಂಡತಿಗೆ ‘ಕುಣಿಯೋಣ ಬಾರಾ’ ಎಂದು ಕರೆಯುತ್ತಾನೆ. ತಮ್ಮ ಕುಣಿತವು ವಿಶ್ವನಿಯಾಮಕನ ಆನಂದನೃತ್ಯವೇ ಆಗಿದೆ ಎಂದು ಕೊನೆಯಲ್ಲಿ ಅರಿವಾದಾಗ, ಕವಿ ಹೇಳುವ ಭರತವಾಕ್ಯ ಹೀಗಿದೆ:

‘ಆ ಕ್ಷೀರ-
      ಸಾಗರ-
       ದಾನಂದದಾಗರ
                 ತೆರಿ ತೆರಿ ತೆರದರ |
       ಕುಣಿಯೋಣ ಬಾರಾ, ಕುಣಿಯೋಣ ಬಾ|
ಹದಿನಾಲ್ಕು ಲೋಕಕ್ಕ
        ಚಿಮ್ಮಲಿ ಈ ಸುಖ
                  ಹಿಗ್ಗಲಿ ಸಿರಿಮುಖ |
       ಕುಣಿಯೋಣ ಬಾರಾ, ಕುಣಿಯೋಣ ಬಾ|
           
ಸಂಸ್ಕೃತದ ಓರ್ವ ಶ್ರೇಷ್ಠ ನಾಟಕಕಾರ ಹಾಗು ಕನ್ನಡದ ಓರ್ವ ಶ್ರೇಷ್ಠ ಕವಿ ಇವರು ಆಶಿಸುವಂತೆ, ಸಮಸ್ತ ಜಗತ್ತಿಗೆ ಕಲ್ಯಾಣವಾಗಲಿ ಎಂದು ನಾವೂ ಆಶಿಸೋಣ!