Bliss was it in that
dawn to be alive,
But to be
young was very heaven!
-ವಿಲಿಯಮ್
ವರ್ಡ್ಸವರ್ಥ (ಫ್ರೆಂಚ ರಾಜ್ಯಕ್ರಾಂತಿಯ ಬಗೆಗೆ)
ಬೇಂದ್ರೆಯವರ ತಾರುಣ್ಯದ ಕಾಲವು ರಾಷ್ಟ್ರೀಯ ನವೋದಯದ ಕಾಲವಾಗಿತ್ತು. ಕನ್ನಡ
ತರುಣರಿಗೆ ಒಂದೆಡೆ ಸ್ವಾತಂತ್ರ್ಯಸಮರದಲ್ಲಿ ಧುಮುಕುವ ಹುಮ್ಮಸ್ಸು, ಇನ್ನೊಂದೆಡೆ ಕನ್ನಡತಾಯಿಯ ಸೇವೆಯ
ಹಂಬಲ, ಮಗುದೊಂದೆಡೆಗೆ ಆಧ್ಯಾತ್ಮದ ಒಲವು. ಬೇಂದ್ರೆಯವರ ಕಾವ್ಯದಲ್ಲಿ ಈ ಎಲ್ಲ ಆದರ್ಶಗಳ ಕನಸುಗಳನ್ನು
ನೋಡಬಹುದು. ಅವರ ‘ನರಬಲಿ’ ಕವನವಂತೂ ಅವರನ್ನು ಸೆರೆಮನೆಗೆ ಅಟ್ಟಿತು. ಮೇಲಾಗಿ ಅವರಿಗೆ ಆರು ವರ್ಷಗಳವರೆಗೆ
ನೌಕರಿ ಕೊಡಕೂಡದೆನ್ನುವ ಸರಕಾರೀ ಕಟ್ಟಾಜ್ಞೆ ಬೇರೆ. ಈ ಸಂಕಟಗಳಲ್ಲಿ ಬೇಂದ್ರೆ ಬೆಂದರು, ಬೇಂದ್ರೆಕಾವ್ಯವು
ರಸಪಾಕವಾಯಿತು.
ನವೋದಯ ಕಾಲದಲ್ಲಿ ಬೇಂದ್ರೆಯವರು ದೇಶಪ್ರೇಮದ ಹಾಗು ಕನ್ನಡಸೇವೆಯ ಕನಸುಗಳನ್ನು
ಕಂಡರು. ಅನೇಕ ಸಲ ಇವು ಅವರು ನಿಜವಾಗಿಯೂ ಕಂಡ ಕನಸುಗಳೇ ಆಗಿರುವುದು ವರಕವಿಯ ವೈಶಿಷ್ಟ್ಯವಾಗಿದೆ.
ಅವರ ಆಧ್ಯಾತ್ಮಸಾಧನೆಯೂ ಸಹ ಈ ಕನಸುಗಳಲ್ಲಿ ಪ್ರತಿಬಿಂಬಿತವಾಗಿದೆ.
ಇದರಲ್ಲಿ ಅಚ್ಚರಿಪಡುವಂತಹದೇನೂ
ಇಲ್ಲ. ಮಾನವಜೀವಿಯ ನಿದ್ರಾವಸ್ಥೆಯನ್ನು ವಿಜ್ಞಾನಿಗಳು ಲಘುನಿದ್ರಾವಸ್ಥೆ , ಗಾಢ ನಿದ್ರಾವಸ್ಥೆ ಹಾಗು
ಮತ್ತೊಮ್ಮೆ ಲಘುನಿದ್ರಾವಸ್ಥೆ ಎಂದು ಮೂರು ಭಾಗಗಳಲ್ಲಿ
ವಿಭಜಿಸಿದ್ದಾರೆ. ಗಾಢನಿದ್ರಾವಸ್ಥೆಯ ನಂತರದ ಲಘುನಿದ್ರಾವಸ್ಥೆಯಲ್ಲಿ ಮಾನವಜೀವಿಯು ಎಚ್ಚರಕ್ಕೆ ಹತ್ತಿರವಾಗಿ
ಇರುವದರಿಂದ,ಆ ಅವಧಿಯ ಕನಸುಗಳು ಅವನ ನೆನಪಿನಲ್ಲಿ ಉಳಿಯುವುದು ಸಹಜವಾಗಿದೆ. ಈ ಸ್ಥಿತಿಯಲ್ಲಿ ಸಾಧಕನು
ತನ್ನ ಆದರ್ಶಗಳ ಹಾಗು ಸಾಧನೆಯ ಕನಸುಗಳನ್ನು ಕಾಣಬಹುದು ಮತ್ತು ಕವಿಯು ತನ್ನ ಕಾವ್ಯರಚನೆಯ ಹೊಳಹುಗಳನ್ನು
ಕಾಣಬಹುದು.
ಕಾವ್ಯರೂಪವನ್ನು ಪಡೆದ ಬೇಂದ್ರೆಯವರ ಇಂತಹ ಕನಸುಗಳಲ್ಲಿ ಕೆಲವನ್ನು ನಾವು
ಇಲ್ಲಿ ಗಮನಿಸಬಹುದು:
(೧) ತೇಲಾಡುವಾಗ (‘ಗಂಗಾವತರಣ’ ಕವನಸಂಕಲನ, ಪುಟ೧೬)
(೨) ಕನಸಿನ ಕಥೆ (‘ಗಂಗಾವತರಣ’ ಕವನಸಂಕಲನ, ಪುಟ೨೫)
(೩) ಬಾ ಕೈ ತಾ ( ‘ಸಖೀಗೀತ’ ಕವನಸಂಕಲನ..ಪುಟ ೫೬ )
(೪) ಏಳು ಕನ್ನಿಕೆಯರು ( ‘ನಾದಲೀಲೆ’ ಕವನಸಂಕಲನ.. ಪುಟ೬)
(೧) ತೇಲಾಡುವಾಗ:
ನಿದ್ರಾವಸ್ಥೆಯ ಕೊನೆಯ ಭಾಗದ ಅಂದರೆ REM (Rapid Eye
Movement = ತೀವ್ರ ಅಕ್ಷಿ ಸಂಚಲನ) ಅವಧಿಯ ಸ್ಥಿತಿಯನ್ನು ಬೇಂದ್ರೆ ತಮ್ಮ‘ತೇಲಾಡುವಾಗ’ ಕವನದಲ್ಲಿ
ಈ ರೀತಿಯಾಗಿ ಅನುಭವಿಸಿದ್ದಾರೆ:
“ ತೇಲಾಡುವಾಗ ಮನಸು
ಮೇಲಾಡತಾವ ಕನಸು
ತಾಕಾಡುವಾಗ ಇತ್ತ
ತೇಕಾಡತಾವ
ಚಿತ್ತ ”
(ಮನಸ್ಸು ಕೆಳಪಾತಳಿಯಿಂದ ಮೇಲ್‍ಪಾತಳಿಗೆ ಸರಿದಾಗ, ಕನಸುಗಳು ಮೇಲಾಡುತ್ತವೆ
ಎನ್ನುವುದು ಮನೋವೈಜ್ಞಾನಿಕ ವಾಸ್ತವವಾಗಿರುವದನ್ನು ಗಮನಿಸಿರಿ.) ಇಂತಹ ತಮ್ಮ ಕನಸುಗಳಲ್ಲಿ ಬೇಂದ್ರೆಯವರು
ಕವನಗಳನ್ನು ‘ಕಾಣು’ತ್ತಾರೆ. ಎಚ್ಚರಕ್ಕೆ ಬಂದಾಗ ಈ ಕವನಗಳ ಕೆಲಭಾಗವಾದರೂ ಅವರಿಗೆ ಲಭ್ಯವಾಗುತ್ತದೆ.
ಅದನ್ನು ಅವರು ಹೇಳುವುದು ಹೀಗೆ:
ಹಾಸಾದ ಮಿಂಚಿನಂದ
ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
ಉಳಿದಾವ ನಾಕು
ಸಾಲು
ಎಚ್ಚರದಲ್ಲಿಯ ಚಿಂತೆಗೆ ಹಾಗು ಚಿಂತನೆಗೆ ಬೆಳಗಿನ ಜಾವದ ಕನಸುಗಳಲ್ಲಿ ಉತ್ತರ
ಸಿಗುವುದು ಅನೇಕರಿಗೆ ಲಭಿಸಿದ ಅನುಭವವಾಗಿರಬಹುದು. ಇದರಲ್ಲಿ ವಿಶೇಷವೇನೂ ಇಲ್ಲ. (ಶಾಂತ ಅವಸ್ಥೆಯಲ್ಲಿ
ಹಾಗು ಧ್ಯಾನಾವಸ್ಥೆಯಲ್ಲಿ ಮಿದುಳಿನ ಕೆಲ ಆವರ್ತಗಳ ಕಂಪನವು ತೀವ್ರವಾಗುವುದರಿಂದ ಆ ಭಾಗದ ಮಿದುಳು
ಹೆಚ್ಚು ಕ್ರಿಯಾಶೀಲವಾಗುತ್ತದೆ.) ಇಂತಹ ಸಮಯದಲ್ಲಿ ವರಕವಿಗೆ ವರಕಾವ್ಯವೇ ಸ್ಫುರಿಸುವುದು ಸ್ವಾಭಾವಿಕವೇ
ಆಗಿದೆ.
‘ತೇಲಾಡುವಾಗ’ ಕವನದಲ್ಲಿ ಕಂಡು ಬರುವ ಮತ್ತೊಂದು ಅಂಶ ಹೀಗಿದೆ:
ಬೇಂದ್ರೆಯವರು ತಮ್ಮ ಕವನಗಳಲ್ಲಿ ಬಳಸುವ ಪದಗಳು ಸಾಮಾನ್ಯ ಆಡುನುಡಿಯ ಪದಗಳೇ
ಆಗಿರುತ್ತವೆ, ಆದರೆ ಅಲ್ಲಿ ಹುಟ್ಟುವ ಕವನಗಳು ಅಸಾಮಾನ್ಯವಾಗಿರುತ್ತವೆ. ಇದಕ್ಕೆ ನಿದರ್ಶನವಾಗಿ ಮೇಲಿನ ನುಡಿಯನ್ನೇ ನೋಡೋಣ.
ಹಾಸಾದ ಮಿಂಚು ಅಂದರೆ ವಿಸ್ತಾರವಾದ ಮಿಂಚು. ಈ ಮಿಂಚಿನ ಹರಹಿಗೆ ಮಿತಿ ಇಲ್ಲ. ಆದರೆ ಇದು ಮಿಂಚಾಗಿರುವುದರಿಂದ ನಮಗೆ ಇದರ ನೋಟ ಸಿಗುವುದು ಕ್ಷಣಕಾಲ ಮಾತ್ರ.
(ಟಿಪ್ಪಣಿ: ನೆಯ್ಗೆಯಲ್ಲಿ ಬರುವ ‘ಹಾಸು’ ಹಾಗು ‘ಹೊಕ್ಕು’ ಎನ್ನುವ ಪದಗಳನ್ನು
ಗಮನಿಸಿರಿ. ಮಿಂಚೇ ಇಲ್ಲಿ ‘ಹಾಸು’ ಆಗಿದೆ.)
ಈ ಸೆರಗಿನ ಒಡತಿ ಬೇಂದ್ರೆಯವರ ಕಾವ್ಯಪ್ರತಿಭಾದೇವಿ! ಅವಳು ಬೀಸಿದ ಅಂಬರವ್ಯಾಪಿ
ಸೆರಗಿನಿಂದ, ಬೇಂದ್ರೆಯವರು ಎಳೆದುಕೊಂಡದ್ದು ಎರಡು ಸಾಲು ಮಾತ್ರ! ಸಾಮಾನ್ಯ ಪದಗಳಲ್ಲಿ ಎಂತಹ ಅಸಾಮಾನ್ಯ
ಅನುಭವವನ್ನು ಬೇಂದ್ರೆಯವರು ಹುದುಗಿಸಿದ್ದಾರೆ ಎನ್ನುವುದನ್ನು ಗಮನಿಸಿದಾಗ, ಅವರ ಕಾವ್ಯಪ್ರತಿಭೆಯ
ಮಿಂಚು ನಮ್ಮ ದೃಗ್ಗೋಚರಕ್ಕೂ ಬರುವುದಷ್ಟೆ! (ಎರಡು
ನೂಲುಗಳನ್ನು ಮಾತ್ರ ಎಂದು ಬೇಂದ್ರೆಯವರು ಹೇಳಿಕೊಂಡಿದ್ದಾರೆ. ಆದರೆ ಅವರ ಕವನಗಳ ದೀರ್ಘತೆಯನ್ನು ಹಾಗು
ಅಪಾರ ಕಲ್ಪನಾಶಕ್ತಿಯನ್ನು ಕಂಡಾಗ, ಇವು ಎರಡು ನೂಲಲ್ಲ; ಇದು ಅಪಾರ ‘ಅಂಬರ’ ಎನ್ನುವ ಅರಿವು ನಮಗೆ
ಮೂಡುವುದು.
(೨) ಕನಸಿನ ಕಥೆ:
ಈ ಕವನದಲ್ಲಿ ಬೇಂದ್ರೆಯವರು
ತಾವು ಕಂಡ ಕನಸೊಂದನ್ನು ತಮ್ಮ ಮಗಳು ಮಂಗಳಾಗೆ ಹೇಳುತ್ತಿದ್ದಾರೆ:
“ ಮಗಳೆ ಮಂಗಳೆ, ಬಾರೆ
ಕೇಳು ಕಥೆಯ
ಹರುಷವೀಯುವುದು ಪರಿಹರಿಸಿ
ವ್ಯಥೆಯ ”
ಕವನದ ಕೊನೆಕೊನೆಯಲ್ಲಿ
ಬರುವ ನುಡಿ ಹೀಗಿದೆ:
“ಆಹಾ ಏನಿದು! ಎನುತ
ನಾನು ಎದ್ದೆ
ನಿನಗಾಗ ಸಕ್ಕರೆಜೊಂಪು
ನಿದ್ದೆ
ನಿನಗಾಗಿ ಈ ಕತೆಯ ನೆನಪು
ಇಟ್ಟೆ
ಹೇಳುವಾಗಲೆ ಮಾತು ಬಿಗಿದು
ಬಿಟ್ಟೆ.”
ತಮ್ಮ ಅಪ್ಪ ಹಾಡಿದ ಕಥೆಗೆ
ಮಗಳ ಮಂಗಳಶ್ಲೋಕ ಹೀಗಿದೆ:
“ ಕಥೆ ಆಯಿತೇ ಅಣ್ಣ,
ಬಹಳ ಸಣ್ಣ
ಕಥೆಯ ಮೈಗಿಂತ ಮಿಗಿಲಿದರ
ಬಣ್ಣ.”
(೩) ಬಾ ಕೈ ತಾ:
ಬೇಂದ್ರೆಯವರು ಆದರ್ಶಗಳ
ನಡುವೆ ಬದುಕಿದವರು ಎನ್ನುವುದನ್ನು ನೋಡಿದ್ದೇವೆ. ಈ ಆದರ್ಶಸಿದ್ಧಿಗೆ ಪರಮಾತ್ಮನ ಬೆಂಬಲವೂ ಬೇಕಷ್ಟೆ.
ಬೇಂದ್ರೆಯವರಂತೂ ಬಾಲ್ಯದಿಂದಲೇ ಶ್ರದ್ಧೆಯ ವಾತಾವರಣದಲ್ಲಿ ಬೆಳೆದವರು. ತಮ್ಮ ಆದರ್ಶಗಳನ್ನು ಪಾಲಿಸಲು
ಅವರು ಭಗವಂತನ ಸಹಾಯವನ್ನು ಯಾಚಿಸುತ್ತಾರೆ. ಅವರ ಭಕ್ತಿ ಸಖ್ಯರೂಪದ್ದು. ‘ಬಾ ಕೈ ತಾ’ ಕವನವು ಕನಸಿನಲ್ಲಿ
ಹೊಳೆದ ಕವನವಲ್ಲದಿದ್ದರೂ ಸಹ, ಬೇಂದ್ರೆಯವರ ಕನಸುಮನಸುಗಳಲ್ಲಿ ಭಗವಂತನ ಅನುಗ್ರಹದ ಯಾಚನೆ ಇದ್ದದ್ದನ್ನು,
ಈ ಕವನವು ಸ್ಪಷ್ಟಪಡಿಸುತ್ತದೆ:
೧
ಮನಸಿನಲ್ಲಿ ಹೊಳೆದವನೆ
ಕನಸಿನಲ್ಲಿ ಬೆಳೆದವನೆ
ಜೀವನವನೆ ತೊಳೆದವನೆ
ಎಲ್ಲಿರುವೆ ಬಾ!
ಚೆಲುವಿನಲ್ಲಿ ಮಾಗಿರುವೆ
ಒಲವಿನಲ್ಲಿ ಬಾಗಿರುವೆ
ಜಗದ ರೂಪವಾಗಿರುವೆ ಕೈಗೆ
ಕೈಯ ತಾ!
(೪) ಏಳು ಕನ್ನಿಕೆಯರು:
ಬೇಂದ್ರೆಯವರು ಆಧ್ಯಾತ್ಮ
ಸಾಧಕರು. ಅವರ ಸಾಧನೆಯ ತೀವ್ರತೆ ಎಷ್ಟಿತ್ತೆಂದರೆ, ಅವರ ಕನಸುಗಳೂ ಸಹ ಸಾಂಕೇತಿಕವಾಗಿರುತ್ತಿದ್ದವು.
ಈ ಕವನವು ಕನಸಿನಲ್ಲಿ ನಡೆದದ್ದನ್ನು ನೇರವಾಗಿಯೇ ಹೇಳುತ್ತದೆ:
ನಿದ್ದೆಗಡಲಿನಲ್ಲಿ ನಾನು
ಎದ್ದೇಳುತಲಿದ್ದೆನಾಗ
ಏಳು ಕನ್ನಿಕೆಯರು
ಬಂದು
ಏಳು ಎಂದು ಎಂದರೋ---
ಈ ಕನ್ನಿಕೆಯರು ಬಹುಶಃ
ಸಪ್ತಮಾತೃಕೆಯರು ಇರಬಹುದು ಅಥವಾ ಸಾಧನೆಯ ಹಾದಿಯಲ್ಲಿಯ ಸಹಾಯಕ ದೇವತೆಗಳಾಗಿರಬಹುದು. ಬೇಂದ್ರೆಯವರನ್ನು ಪರೀಕ್ಷಿಸಿದ ಈ ಕನ್ನಿಕೆಯರು ಅವರ ಸಾಧನೆಯು ಇನ್ನೂ ಪಕ್ವವಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಬೇಂದ್ರೆಯವರು ಹೆಚ್ಚಿನ ಸಾಧನೆಯ ಸಂಕಲ್ಪವನ್ನು ಮಾಡುತ್ತಾರೆ.
ಆದಿ ಶಂಕರಾಚಾರ್ಯರು ತಮ್ಮ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿ ‘ಸ್ವಪ್ನೇ
ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತಃ’ ಎಂದು ಪುರುಷನನ್ನು ಬಣ್ಣಿಸಿದ್ದಾರೆ. ಬೇಂದ್ರೆಯವರು
ಸ್ವಪ್ನದಲ್ಲಿ ಅಥವಾ ಜಾಗೃತಾವಸ್ಥೆಯಲ್ಲಿ ಲೋಕಮಾಯೆಯಿಂದ ಅಲ್ಲ, ಆದರೆ ಕಾವ್ಯಮಾಯೆಯಿಂದಆವೃತವಾದವರು!