Monday, October 24, 2016

ಬಾರೊ ಸಾಧನಕೇರಿಗೆ.......................ಬೇಂದ್ರೆ



ಬಾರೊ ಸಾಧನಕೇರಿಗೆ |
            ಮರಳಿ ನಿನ್ನೀ ಊರಿಗೆ ||

            ಮಳೆಯು ಎಳೆಯುವ ತೇರಿಗೆ
            ಹಸಿರು ಏರಿದೆ ಏರಿಗೆ
            ಹಸಿರು ಸೇರಿದೆ ಊರಿಗೆ
            ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
            ನೋಟ ಸೇರದು ಯಾರಿಗೆ? || ಬಾರೊ….

            ಮಲೆಯ ಮೊಗವೇ ಹೊರಳಿದೆ
            ಕೋಕಿಲಕೆ ಸವಿ ಕೊರಳಿದೆ
            ಬೇಲಿಗೂ ಹೂಬೆರಳಿದೆ
            ನೆಲಕೆ ಹರೆಯವು ಮರಳಿದೆ
ಭೂಮಿತಾಯ್ ಒಡಮುರಿದು ಎದ್ದಳೊ
            ಶ್ರಾವಣದ ಸಿರಿ ಬರಲಿದೆ || ಬಾರೊ

            ಮೋಡಗಳ ನೆರಳಾಟವು
            ಅಡವಿ ಹೂಗಳ ಕೂಟವು
            ಕೋಟಿ ಜೇನ್ನೊಣಕೂಟವು
            ಯಕ್ಷಿ ಮಾಡಿದ ಮಾಟವು
ನೋಡು ಬಾ ಗುಂಪಾಗಿ ಪಾತರ-
            ಗಿತ್ತಿ ಕುಣಿಯುವ ತೋಟವು || ಬಾರೊ

            ಮರವು ಮುಗಿಲಿಗೆ ನೀಡಿದೆ
            ಗಿಡದ ಹೊದರೊಳು ಹಾಡಿದೆ
            ಗಾಳಿ ಎಲ್ಲೂ ಆಡಿದೆ
            ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
            ತೆರೆದ ನೋಟವ ನೋಡಿದೆ? || ಬಾರೊ

………………………………………………………

ಬಾರೊ ಸಾಧನಕೇರಿಗೆ |
            ಮರಳಿ ನಿನ್ನೀ ಊರಿಗೆ ||

ಬೇಂದ್ರೆಯವರ ಬದುಕು ಬಹುಕಾಲದವರೆಗೆ ಸ್ಥಿರವಾದ ಬದುಕಾಗಿರಲಿಲ್ಲ. ಸಮಯದಲ್ಲಿ ಅವರು ಧಾರವಾಡವನ್ನು ನೆನೆಸಿಕೊಂಡು ಬರೆದ ಕವನಗಳು ಅನೇಕ. ನಾವು ಹೋಗ್ತೇವಿನ್ನ ತಾಯಿ, ನಂ ನಮಸ್ಕಾರ ನಿಮಗ ಎನ್ನುವುದು ಅವರು ಧಾರವಾಡವನ್ನು ಬಿಟ್ಟು ಹೋಗುವಾಗ ಹಾಡಿದ ಕವನ. ಮಲ್ಲಾಡದ ಗಿಣಿಯೆ ನೀಎನ್ನುವುದು ಧಾರವಾಡದ ವಿರಹದಲ್ಲಿ ಬರೆದ ಕವನ. ಬಂದಿರುವೆನಿದೊ ತಾಯಿ, ಧಾರವಾಡದ ಮಾಯಿ, ಸರ್ವಮಂಗಳೆ ನಿನ್ನ ಭಾಗ್ಯದುಡಿಗೆಎನ್ನುವುದು ಅವರು ಧಾರವಾಡಕ್ಕೆ ಮರಳಿದಾಗ ಹಾಡಿದ ಪದ. ನಿನ್ನ  ಕಣ್ಣ-ಕಡೆಗೋಲಿಂದ ನನ್ನಹೃದಯ ಕಡೆಯೇ ತಾಯಿ ಎನ್ನುವುದು ಅವರ ಧಾರವಾಡದ ರಕ್ಷಕ ದೇವತೆಯಾದ ಕೋಟೆಯ ದುರ್ಗಾದೇವಿಗೆ ಸಲ್ಲಿಸಿದ ನಮನ.

ಪುಣೆಯಲ್ಲಿ ಇದ್ದಂತಹ ಬೇಂದ್ರೆಯವರ ಕಕ್ಕ ಬಂಡೋಪಂತ ಬೇಂದ್ರೆಯವರು ೧೯೨೯ರಲ್ಲಿ ಸಾಧನಕೇರಿಯಲ್ಲಿ ಒಂದು ಮನೆಯನ್ನು ಬೇಂದ್ರೆಯವರಿಗೆ ಉಡುಗೊರೆಯಾಗಿ ನೀಡಿದರು. ಇಡೀ ಧಾರವಾಡವೇ ಆಗ ಒಂದು ಕಾಡಿನಂತಿತ್ತು. ಊರಿನಿಂದ ದೂರವಿದ್ದ ಸಾಧನಕೇರಿಯಂತೂ ದಟ್ಟ ಕಾಡೇ ಸೈ! ಆದರೆ ಬೇಂದ್ರೆಯವರಿಗೆ ನಿಸರ್ಗರಮ್ಯ ನಿವಾಸ ಅನೇಕ ರೀತಿಗಳಲ್ಲಿ ಒಂದು ವರದಾನ! ಧಾರವಾಡಕ್ಕೆ ಮರಳಿ ಬರುವ ಸನ್ನಿವೇಶದಲ್ಲಿ ಬೇಂದ್ರೆ ಬಾರೊ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ ಎನ್ನುವ ಗೀತೆಯನ್ನು ಹಾಡಿದ್ದಾರೆ.  ಮಳೆಯಲ್ಲಿ ನೆನೆಯುವ ಸಾಧನಕೇರಿಯನ್ನು ನೆನೆಸಿಕೊಳ್ಳುತ್ತಿರುವುದು ಗೀತೆಯ ವೈಶಿಷ್ಟ್ಯವಾಗಿದೆ.

ಬಾರೊ ಸಾಧನಕೇರಿಗೆ |
            ಮರಳಿ ನಿನ್ನೀ ಊರಿಗೆ ||
           
            ಮಳೆಯು ಎಳೆಯುವ ತೇರಿಗೆ
            ಹಸಿರು ಏರಿದೆ ಏರಿಗೆ
            ಹಸಿರು ಸೇರಿದೆ ಊರಿಗೆ
            ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
            ನೋಟ ಸೇರದು ಯಾರಿಗೆ? || ಬಾರೊ….

ಧಾರವಾಡವು ಮಲೆನಾಡ ಸೆರಗಿನಲ್ಲಿರುವ ಊರು. ಇಲ್ಲಿ ಉದ್ಭವಿಸುವ ಶಾಲ್ಮಲೆಯು ಮುಂದೆ ಸಾಗಿದಂತೆ ಬೇಡ್ತಿ ಹಾಗು ಗಂಗಾವಳಿ ಎನ್ನುವ ಹೊಸ ಹೆಸರುಗಳನ್ನು ಹೊತ್ತುಕೊಂಡು ಪಶ್ಚಿಮ ಸಮುದ್ರವನ್ನು ಸೇರುತ್ತಾಳೆ. ಇಲ್ಲಿಯ ಬೆಣ್ಣಿಹಳ್ಳವು ಪೂರ್ವಕ್ಕೆ ಸಾಗಿ ಮಲಪ್ರಭಾ ನದಿಯನ್ನು ಸೇರುತ್ತದೆ.
ಇಲ್ಲಿಯ ಮಳೆಯ ವರ್ಣನೆಯನ್ನು ಜಾನಪದ ಗೀತೆಯಲ್ಲಿ,--
ಧಾರವಾಡದ ಮ್ಯಾಗ, ಏರಿ ಬಂದಾವ ಮೋಡ
ದೊರೆಯೆ ನೋಡಪ್ಪ ಕಮಕಾಳ ಕಟ್ಟೀ ಮ್ಯಾಲೆ
ಭೋರ್ಯಾಡತಾನ ಮಳೆರಾಯ
--ಎಂದು ಬಣ್ಣಿಸಲಾಗಿದೆ.

 ಬೇಂದ್ರೆಯವರಂತೂ ಶ್ರಾವಣಪ್ರಿಯರು. ಆದುದರಿಂದಲೇ ಈ ಕವನವು ಪ್ರಾರಂಭವಾಗುವುದುಮಳೆಯು ಎಳೆಯುವ ತೇರಿಗೆಎಂದು ಸಾಧನಕೇರಿಯನ್ನು ವರ್ಣಿಸುವ ಮೂಲಕ.

ಮತ್ತೊಂದು ವಿಷಯವನ್ನು ಗಮನಿಸಿರಿ. ತೇರು ಎನ್ನುವುದು ದೇವರ ರಥ. ಮಳೆಯು ದೈವದತ್ತವಾದದ್ದು. ಶ್ರಾವಣ ಮಾಸದಲ್ಲಿಯೇ ಶ್ರೀಕೃಷ್ಣ ಹಾಗು ಮಹರ್ಷಿ ಅರವಿಂದರು ಹುಟ್ಟಿದ್ದರಿಂದ, ಮಳೆಮಾಸದ ಬಗೆಗಿನ ಬೇಂದ್ರೆಯವರ ಪ್ರೀತಿಯಲ್ಲಿ ಭಕ್ತಿಯೂ ಬೆರೆತಿದೆ. ಆದುದರಿಂದ ಇಲ್ಲಿ ಮಳೆಯು ಎಳೆಯುತ್ತಿರುವ ರಥವು ಕೇವಲ ವಾಹನವಲ್ಲ; ಇದು ದೇವರತೇರು’. (ತಮ್ಮಮತ್ತೊಂದು ಕವನದಲ್ಲಿ ಬೇಂದ್ರೆಯವರು ಮಳೆಯಲ್ಲಿ ತೊಯ್ದ ಬೆಟ್ಟಗಳನ್ನು ಗುಡ್ಡ ಆಗ್ಯಾವ  ಸ್ಥಾವರಲಿಂಗ ಎಂದು ಬಣ್ಣಿಸಿದ್ದಾರೆ.) ಮಳೆಯು ಯಾವ ತೇರನ್ನು ಎಳೆಯುತ್ತಿದೆ ಎನ್ನುವದನ್ನು ಬೇಂದ್ರೆಯವರು ಹೇಳಿಲ್ಲ. ಆದರೆ ಅದು ಪ್ರಕೃತಿದೇವಿಯ ತೇರು ಎನ್ನುವುದು ಅಂತರ್ನಿಹಿತವಾಗಿದೆ. ತೇರು ಹಲಬಗೆಯ ಸಸ್ಯಸಂಕುಲದಿಂದ ಶೋಭಿತವಾಗಿದೆ. ಆದುದರಿಂದ ಕವನ ಪ್ರಾರಂಭವಾಗುವುದು ದೈವಿಕ ದರ್ಶನದೊಡನೆ!


ಧಾರವಾಡವು ( ಕಾಲದಲ್ಲಿ) ಅನೇಕ ಮಡ್ಡಿಗಳಿಂದ,  ಕೊಳ್ಳಗಳಿಂದ ಕೂಡಿತ್ತು. ಆದುದರಿಂದ ಮಳೆಯು ಧಾರವಾಡಕ್ಕೆ ಢಿಕ್ಕಿ ಹೊಡೆದಾಗ, ಕಣ್ಣಿಗೆ ಮೊದಲು ಬೀಳುವುದು ಜನವಸತಿಯಿಂದ ದೂರದಲ್ಲಿರುವ ಏರಿಯ ಮೇಲಿರುವ ಹಸಿರು! ತನ್ನಂತರ ಸಿಗುವುದು ಕೆಳಭಾಗದಲ್ಲಿರುವ ಜನನಿಬಿಡ  ಊರು. ಊರಿನಲ್ಲಿಯೂ ಸಹ ಹಸಿರು ಸೇರಿಕೊಂಡಿದೆ. ಊರಿನ ದಾರಿಯ ಇಕ್ಕೆಲಗಳಲ್ಲಿ ಹಸಿರುಚಾಚಿಕೊಂಡಿದೆ’. ( ಕಾಲದಲ್ಲಿ ಧಾರವಾಡದ ರಸ್ತೆಗಳೆಲ್ಲ ಮಣ್ಣು, ಕಲ್ಲುಗಳ ರಸ್ತೆಗಳಾಗಿದ್ದವು.)
ಆದುದರಿಂದ ಈ ವರ್ಣನೆಯಲ್ಲಿ ಕ್ರಮಬದ್ಧತೆ ಹಾಗು ವಾಸ್ತವ ಸಂಗತಿಗಳ ದಾಖಲಾತಿ ಇರುವುದು ಗಮನಾರ್ಹವಾಗಿದೆ. ಇದು ಬೇಂದ್ರೆಯವರ ಎಲ್ಲ ಕವನಗಳ ವೈಶಿಷ್ಟ್ಯವೂ ಆಗಿದೆ.

 ಕವಿಗೇನ ಬೇಕ? ಹೂತ ಹುಣಸಿಮರ ಸಾಕ ಎಂದು ಹಾಡಿದ ಕವಿಗೆ, ಹಸಿರು ತುಂಬಿದ ನೋಟವು ಹೇಗೆ ಕಂಡಿರಬಹುದು? ಸ್ವರ್ಗಸದೃಶವಾಗಿಯೆ?....ಊಹೂಂ,  ಆ ನಂದನದ ಒಂದು ತುಣುಕೇ, ಕಳಚಿಕೊಂಡು ಧರೆಯ ಮೇಲೆ ಇಳಿದಿದೆ ಎಂದು ಬೇಂದ್ರೆಯವರಿಗೆ ಭಾಸವಾಗುತ್ತಿದೆ.

ಧಾರವಾಡದ ಭೌಗೋಲಿಕ ಪ್ರಾಕೃತಿಕತೆಯನ್ನು ವರ್ಣಿಸಿದ ಕವಿ ಇದೀಗ ಧಾರವಾಡದ ಜೀವಸಂಕುಲದ ಕಡೆಗೆ, ಈ ಜೀವಸಂಕುಲವನ್ನು ಹೊತ್ತ ಧರಿತ್ರಿಯ ಕಡೆಗೆ ತಮ್ಮ ಗಮನವನ್ನು ಹರಿಸುತ್ತಾರೆ. ಇಲ್ಲಿಯೂ ಸಹ ಮೊದಲು ಭೂವೈಶಿಷ್ಟ್ಯ, ಬಳಿಕ ಪಕ್ಷಿವೈಶಿಷ್ಟ್ಯ, ತನ್ನಂತರ ಸಸ್ಯವೈಶಿಷ್ಟ್ಯ ಇವು ವರ್ಣನೆಯ ಮಜಲುಗಳಾಗಿವೆ.

ಮಲೆಯ ಮೊಗವೇ ಹೊರಳಿದೆ
            ಕೋಕಿಲಕೆ ಸವಿ ಕೊರಳಿದೆ
            ಬೇಲಿಗೂ ಹೂಬೆರಳಿದೆ
            ನೆಲಕೆ ಹರೆಯವು ಮರಳಿದೆ
ಭೂಮಿತಾಯ್ ಒಡಮುರಿದು ಎದ್ದಳೊ
            ಶ್ರಾವಣದ ಸಿರಿ ಬರಲಿದೆ || ಬಾರೊ

ಧಾರವಾಡವು ಪಶ್ಚಿಮಘಟ್ಟಗಳ ಕೊನೆಯಲ್ಲಿದೆ. ಆದುದರಿಂದ ಇಲ್ಲಿಮಲೆಯಮೊಗವೇ ಹೊರಳಿದೆ.’ ಇನ್ನು ಧಾರವಾಡವು ಯಾವ ಕಾಲದಲ್ಲೂ ಮಾವಿನ ಕಾಡುಗಳ ನೆಲೆಯಾಗಿತ್ತು. ಇಂತಹ ಮಾವಿನ ಕಾಡುಗಳಲ್ಲಿ ಕೋಗಿಲೆಗಳಿಗೇನು ಕೊರತೆ? ಅವುಗಳ ಇಂಚರಕ್ಕೇನು ಕೊರತೆ?

ಪಂಪನುಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್, ಬನವಾಸಿ ದೇಶದೊಳ್ಎಂದು ಹಾಡಿದ್ದಾನೆ. ಕನ್ನಡಕವಿಪರಂಪರೆಯ ಬೇಂದ್ರೆಯವರೂ ಸಹ ಕೋಗಿಲೆಯನ್ನುಸವಿ ಕೊರಳಿನಕೋಗಿಲೆ ಎಂದು ಮುದ್ದಿಸುವುದರಲ್ಲಿ ಆಶ್ಚರ್ಯವಿಲ್ಲ. ಕೋಗಿಲೆಗಳು ಚೈತ್ರಮಾಸದಲ್ಲಿ ಕುಕಿಲುವಂತಹ ಹಕ್ಕಿಗಳು, ಅಂದರೆ ಶ್ರಾವಣ ಮಾಸದ ಪೂರ್ವಭಾವಿ ಹರಿಕಾರರು. ನಿಸರ್ಗದ ಎಲ್ಲ ಹಕ್ಕಿಗಳ ಪ್ರತಿನಿಧಿಯಾಗಿ ಕೋಗಿಲೆಯು ಇಲ್ಲಿ ಮೂಡಿ ಬಂದಿದೆ.

ಹಾಡುವ ಹಕ್ಕಿಗಳಷ್ಟೇ ಬೇಂದ್ರೆಯವರಿಗೆ ಪ್ರಿಯವೇನು?  ಮಾತಿಲ್ಲದೆ ನಿಸರ್ಗಕ್ಕೆ ಶೋಭೆಯನ್ನು ತರುವ ಸಸ್ಯಸಂಕುಲವೂ ಅವರಿಗೆ ಇಷ್ಟವಾದದ್ದೇ.  ಮನೆಯ ಸುತ್ತಲಿನ ಸಾದಾ ಬಳ್ಳಿಯ ಬೇಲಿಯನ್ನು ಅವರು ಕಾಣುವ ಬಗೆ ಹೇಗೆ? ಬೇಲಿಗೂ ಹೂಬೆರಳಿದೆ !’
(ಆ ಕಾಲದಲ್ಲಿ ಬಹಳಷ್ಟು ಮನೆಗಳ ಸುತ್ತಲೂ ಇಟ್ಟಂಗಿಯ ಆವರಣದ ಬದಲು ಬಳ್ಳಿಗಳ ಬೇಲಿಗಳು, ವಿಶೇಷತಃ, tubular ಹೂವುಗಳ ಬಳ್ಳಿಗಳು ಇರುತ್ತಿದ್ದವು. ಆದುದರಿಂದ ಇಲ್ಲಿ documentation ಸಹ ಇದೆ.)

ಬೇಲಿಯು ಮನೆಯ ಕಾವಲುಗಾರ. ಇದರ ಕೆಲಸವೆಂದರೆ ಮನೆಯನ್ನು ಕಾಯುವುದು,  ಒಳನುಗ್ಗುವ ಆಕ್ರಮಣಕಾರಿಗಳನ್ನು ಹೊರಗಿಡುವುದು. ಆದುದರಿಂದಲೇ ಬೇಲಿಗೆ ಮುಳ್ಳುಗಳು ಇರುತ್ತವೆ.  The job of the fence is defense , sometimes with thorny offense; ಆದರೆ ಇಲ್ಲಿ ನಾವು ನೋಡುತ್ತಿರುವುದು reception with mense! ಧಾರವಾಡದಲ್ಲಿಯ  ಬೇಲಿಗಳು ತಮ್ಮ ಹೂಬೆರಳುಗಳಿಂದ ನಿಮ್ಮನ್ನು ಸ್ವಾಗತಿಸುತ್ತಿವೆ, ಸ್ವಾಗತಕಾರಿಣಿಯಂತೆ! ಅರ್ಥಾತ್, ಇಲ್ಲಿಯ ನಿವಾಸಿಗಳು ಸಹೃದಯರು, ಅತಿಥಿಸತ್ಕಾರಪ್ರಿಯರು ಎಂದು ಬೇಂದ್ರೆ ಹೇಳುತ್ತಿದ್ದಾರೆ.  ಅರ್ಥಾಂತರ ಅಲಂಕಾರಕ್ಕೆ ಇದೊಂದು ಸುಂದರ ಉದಾಹರಣೆಯಾಗಿದೆ.

ಶಿಶಿರಋತುವಿನಲ್ಲಿ  ಯೋಗನಿದ್ರೆಯಲ್ಲಿ ಲೀನಳಾದ ಭೂತಾಯಿಯು, ಶ್ರಾವಣಮಾಸದ ಆಗಮನದಿಂದ ಎಚ್ಚತ್ತುಕೊಳ್ಳುತ್ತಾಳೆ, ಮತ್ತೆ ಹರೆಯದವಳಾಗುತ್ತಾಳೆ. ಅವಳ ಮೈಕೈಯು ಹಸಿರಿನಿಂದ ತುಂಬಿಕೊಳ್ಳುತ್ತದೆ.   ಜಾಗ್ರತಿಗೆ ಮರಳಿದ ಅವಳು, ಈಗ ಮೈಕೈಗಳನ್ನು ಝಾಡಿಸಿಕೊಂಡು ಉತ್ಸಾಹದಿಂದ, ಉಲ್ಲಾಸದಿಂದ ಎದ್ದೇಳುತ್ತಾಳೆ. ಇದು ಸಮೃದ್ಧ ಶ್ರಾವಣದ ಆಗಮನದ ಸೂಚಕವಾಗಿದೆ. ಇಂತಹ ಧಾರವಾಡದ ಮಳೆಗಾಲವನ್ನು ಅನುಭವಿಸಲು ಬೇಂದ್ರೆಬಾರೊ ಸಾಧನಕೇರಿಗೆಎಂದು ಕರೆಯುತ್ತಾರೆ. ಬೇಂದ್ರೆಯವರು ಯಾರನ್ನು ಕರೆಯುತ್ತಿದ್ದಾರೆ? ‘ಮರಳಿ ನಿನ್ನೀ ಊರಿಗೆಎನ್ನುವ ಉದ್ಗಾರವು ಅವರು ತಮ್ಮನ್ನೇ ಕರೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ‘ಶ್ರಾವಣದ ಸಿರಿ ಬರಲಿದೆಎನ್ನುವ ಅವರ ಉದ್ಗಾರವು ಸಮೃದ್ಧವಾದ ವರ್ಷಾಕಾಲದ ಹರ್ಷಕ್ಕಾಗಿ ಅವರು ಉತ್ಸುಕತೆಯಿಂದ ಕಾಯುತ್ತಿರುವದನ್ನು ಸೂಚಿಸುತ್ತದೆ. (ತಮ್ಮ ಮತ್ತೊಂದು ಕವನದಲ್ಲಿ ಬೇಂದ್ರೆಯವರು ಮಳೆಗಾಲದ ಭೂಮಿತಾಯಿಯನ್ನು  ಹೂವ ಹಡಲಿಗೆಯನು ಹೊತ್ತ / ಭೂಮಿತಾಯಿ ಜೋಗಿತಿಎಂದು ಕರೆದಿದ್ದಾರೆ. ಬೇಂದ್ರೆಯವರ ಪಾಲಿಗೆ ಭೂತಾಯಿ ಕೇವಲ ಕಲ್ಲು ಮಣ್ಣಲ್ಲ; ಅವಳು ಸಜೀವ ದೇವಿ. ಆದುದರಿಂದಲೇ  ಭೂಮಿತಾಯ್ ಒಡಮುರಿದು ಎದ್ದಳೊಎನ್ನುವುದು ಅವರು ಅಂತಃಕರಣದಲ್ಲಿ ಕಂಡ ದರ್ಶನವಾಗಿದೆ.)


ಮೋಡಗಳ ನೆರಳಾಟವು
            ಅಡವಿ ಹೂಗಳ ಕೂಟವು
            ಕೋಟಿ ಜೇನ್ನೊಣಕೂಟವು
            ಯಕ್ಷಿ ಮಾಡಿದ ಮಾಟವು
ನೋಡು ಬಾ ಗುಂಪಾಗಿ ಪಾತರ-
            ಗಿತ್ತಿ ಕುಣಿಯುವ ತೋಟವು || ಬಾರೊ

ಮಳೆಗಾಲದ ಪರಿಸರದಲ್ಲಿ ಬೇಂದ್ರೆ ಒಬ್ಬ ಹುಡುಗನಂತೆ ಆಗಿದ್ದಾರೆ. ನಿಸರ್ಗದ ಪ್ರತಿಯೊಂದು ಮುಖವೂ ಅವರಲ್ಲಿ ಉಲ್ಲಾಸವನ್ನು ಹುಟ್ಟಿಸುತ್ತಿದೆ. ಆಗಸದಲ್ಲಿಯ ಮೋಡಗಳು ಸೂರ್ಯನ ಕೆಳಗೆ ಸರಿದು ಹೋಗುವಾಗ ಭೂಮಿಯ ಮೇಲೆ ಕಾಣುವ ಬಿಸಿಲು-ನೆರಳಿನ ಆಟ, ಎಲ್ಲೆಡೆಯೂ ಬಣ್ಣಬಣ್ಣಗಳನ್ನು ತುಂಬಿದ, ಹೆಸರಿಲ್ಲದ ನೂರಾರು ಹೂವುಗಳು, ಹೂವುಗಳನ್ನು ಮುತ್ತಿಕ್ಕುವ ಬಗೆಬಗೆಯ ಚಿಟ್ಟೆಗಳು ಹಾಗು ಜೇನ್ನೊಣಗಳು ಇವೆಲ್ಲ ಸೇರಿ, ಒಂದು ರಮ್ಯವಾದ ಯಕ್ಷಲೋಕವನ್ನು ಸೃಷ್ಟಿಸಿವೆ. ಮಾಟ ಅಂದರೆ ಜಾದೂ. ನಿಸರ್ಗರಮ್ಯತೆಯು ಯಾರೋ ಒಬ್ಬ ಯಕ್ಷಿಯು ಮಾಡಿದ ಜಾದೂದಂತೆ ಭಾಸವಾಗುತ್ತಿದೆ. ಮಳೆಯನ್ನು ನೀಡುವ ಆಕಾಶ ಹಾಗು ಜೀವಸಂಕುಲವನ್ನು ಸೃಷ್ಟಿಸುವ ಭೂಮಿ ಇವೆರಡೂ ಒಟ್ಟಾಗಿ ನಿರ್ಮಿಸುತ್ತಿರುವ ಮಾಯಾಲೋಕವಿದು.

(ಪಾತರಗಿತ್ತಿಗಳ ಬಗೆಗೆ ಬೇಂದ್ರೆಯವರಿಗೆ ಬಾಲಮೋಹವಿದೆ. ಆದುದರಿಂದಲೇ ಅವರು ಪಾತರಗಿತ್ತೀ ಪಕ್ಕಾ / ನೋಡೀದೇನs ಅಕ್ಕಾ!’ ಎಂದು ತಮ್ಮ ಅಕ್ಕನನ್ನು ಬೆರಗಿನಿಂದ ಕರೆಯಲು ಸಾಧ್ಯವಾಯಿತು. ಆದರೆ, ಬಾಲಮೋಹದ ವ್ಯಕ್ತಿಯಲ್ಲಿ ಅಸಾಮಾನ್ಯ ಕಲ್ಪನಾಸಾಮರ್ಥ್ಯದ ಕವಿಯೊಬ್ಬ ಹುದುಗಿಕೊಂಡಿದ್ದಾನೆ. ಆದುದರಿಂದಲೇಪಾತರಗಿತ್ತೀ ಪಕ್ಕಾಅವರ ಅಪ್ರತಿಮ ದೀರ್ಘ ಕವನಗಳಲ್ಲಿ ಒಂದಾಗಿದೆ.)

ಮರವು ಮುಗಿಲಿಗೆ ನೀಡಿದೆ
            ಗಿಡದ ಹೊದರೊಳು ಹಾಡಿದೆ
            ಗಾಳಿ ಎಲ್ಲೂ ಆಡಿದೆ
            ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
            ತೆರೆದ ನೋಟವ ನೋಡಿದೆ? || ಬಾರೊ

ಬೇಂದ್ರೆಯವರ ಕಾಲದಲ್ಲಿ ಧಾರವಾಡವು (ವಿಶೇಷತಃ ಸಾಧನಕೇರಿ, ವಿಶ್ವವಿದ್ಯಾಲಯ ಮೊದಲಾದ ದೂರದೂರದ ಪ್ರದೇಶವು) ಕಾಡಿನಿಂದ ತುಂಬಿತ್ತು. ಬೂರಲ ಮರ, ಅತ್ತಿ ಮರ, ಆಲದ ಮರ ಮೊದಲಾದ ಎತ್ತರದ ಮರಗಳು ತಮ್ಮ ಅಸಂಖ್ಯ ಶಾಖೆಗಳಿಂದ ಮುಗಿಲಿಗೆ ಕೈ ನೀಡಿದಂತೆ ಕಾಣುತ್ತಿದ್ದವು. ಗಿಡಗಳ ಹೊದರುಗಳಲ್ಲಿ ಹಕ್ಕಿಗಳು ಮನೆ ಮಾಡಿಕೊಂಡಿರುತ್ತಿದ್ದವು. ಮೊನ್ನೆ ಮೊನ್ನೆಯವರೆಗೂ, ಧಾರವಾಡದ ಮಧ್ಯಭಾಗದಲ್ಲಿರುವ ಪೋಲೀಸ ಠಾಣೆಯ ಪಕ್ಕದಲ್ಲಿರುವ ವಿಶಾಲವಾದ ಮರವೊಂದರಲ್ಲಿ ಮನೆ ಮಾಡಿಕೊಂಡಿದ್ದ ನೂರಾರು ಹಕ್ಕಿಗಳು ಸಂಜೆಯಾದೊಡನೆ ಕಲರವವನ್ನು ಎಬ್ಬಿಸುತ್ತಿದ್ದವು. ಈ ಚಿಲಿಪಿಲಿ ಹಾಗು ಶಾಖೆಗಳ ನಡುವಿನಿಂದ ಬೀಸುವ ತಂಗಾಳಿಯು ಪೇಟೆಯ ಮಧ್ಯದಲ್ಲಿ ಓಡಾಡುವ ಜನರಲ್ಲಿ ಖುಶಿಯನ್ನು ತುಂಬುತ್ತಿತ್ತು. ಪ್ರಕೃತಿಯೊಡನೆ ಒಂದಾದ ಜನರ ಚಿಂತೆಗಳು ದೂರವಾಗಿ ಅವರು ಸಂತಸವನ್ನು ತಾಳುತ್ತಿದ್ದರು.  ಆದುದರಿಂದಲೇ ಬೇಂದ್ರೆಯವರು ಕೇಳುತ್ತಾರೆ: ಇಂತಹ ನೋಟವನ್ನು ಬೇರೆಲ್ಲಾದರೂ ಕಾಣಲು ಸಾಧ್ಯವೆ?
  ಆನಂದ ಅನುಭವಕ್ಕಾಗಿ ಒಂದೇ ಒಂದು ಮಾರ್ಗವಿದೆ. ಅದೆಂದರೆ:
ಬಾರೊ  ಸಾಧನಕೇರಿಗೆ,
          ಮರಳಿ ನಿನ್ನೀ ಊರಿಗೆ!