Saturday, January 21, 2017

ಪ್ರಾಣಿಹಿಂಸಾಕ್ರೀಡೆಗಳ ಸಾಧಕಬಾಧಕಗಳು



ಪ್ರಾಣಿಹಿಂಸೆಯನ್ನು ಒಳಗೊಂಡ ಕ್ರೀಡೆಗಳ ಪರವಾಗಿ ಹಾಗು ವಿರೋಧವಾಗಿ ಆವೇಶಭರಿತ ಚರ್ಚೆಗಳು ಹಾಗು ಹೋರಾಟಗಳು ನಡೆಯುತ್ತಲೇ ಇವೆ. ಇವೆರಡೂ ಪಕ್ಷಗಳಲ್ಲಿ ಇರುವ ಸಾಧಕ-ಬಾಧಕ ಅಂಶಗಳನ್ನು ಈ ರೀತಿಯಾಗಿ ಸಂಕಲಿಸಿ, ಉಚಿತ ನಿರ್ಣಯಕ್ಕೆ ಬರಬಹುದು.

(೧) ಕ್ರೀಡೆಯಲ್ಲಿ ಭಾಗಿಯಾಗುತ್ತಿರುವ ಪ್ರಾಣಿಗೆ ದೈಹಿಕ ಹಿಂಸೆಯಾಗದಿದ್ದರೆ ಅದು ಪ್ರಾಣಿಹಿಂಸೆ ಅಲ್ಲ.
(೨) ಪ್ರಾಣಿಹಿಂಸೆ ಮನುಕುಲದ ಪ್ರಗತಿಗೆ ಅನಿವಾರ್ಯವಾಗಿದೆ.
(೩) ಈ ಕ್ರೀಡೆಯು ನಮ್ಮ ಸಂಸ್ಕೃತಿಯ, ಸಂಪ್ರದಾಯದ ಭಾಗವಾಗಿದೆ.
(೪) ಮೇಲ್ತರಗತಿಯವರ ಹಿಂಸಾಕ್ರೀಡೆಗಳನ್ನು ಪ್ರತಿಬಂಧಿಸದೆ, ಕೆಳತರದವರ ಕ್ರೀಡೆಗಳನ್ನು ಮಾತ್ರ ಪ್ರತಿಬಂಧಿಸಬೇಕೆ?
(೫) ದೇಶರಕ್ಷಣೆಯು ಅತ್ಯಂತ ಮಹತ್ವದ ವಿಷಯವಾಗಿದೆ. ದೇಶರಕ್ಷಕನಾದ ಸೈನಿಕನಲ್ಲಿ, ಶತ್ರುಗಳ ವಿರುದ್ಧ ಹೋರಾಡುವ ಕಟುತ್ವವನ್ನು ತರಲು ಹಿಂಸಾಕ್ರೀಡೆಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

(೧) ಕ್ರೀಡೆಯಲ್ಲಿ ಭಾಗಿಯಾಗುತ್ತಿರುವ ಪ್ರಾಣಿಗೆ ದೈಹಿಕ ಹಿಂಸೆಯಾಗದಿದ್ದರೆ ಅದು ಪ್ರಾಣಿಹಿಂಸೆ ಅಲ್ಲ ಎನ್ನುವುದು ಕ್ರೀಡೆಗಳ ಪರವಾಗಿ ಇರುವವರ ವಾದವಾಗಿದೆ. ಇದಕ್ಕೆ ವಿರೋಧವಾಗಿರುವರು ಹೇಳುವುದು ಹೀಗೆ: ಒಂದು ಪ್ರಾಣಿಯನ್ನು ಉದಾಹರಣೆಗೆ ಎತ್ತನ್ನು ಓಡಿಸಿ,ಅದನ್ನು ಹಿಡಿದು, ಕಟ್ಟಿಹಾಕಲು ಅನೇಕ ಜನರು ಗುಂಪುಗೂಡಿದಾಗ, ಆ ಪ್ರಾಣಿಯು ಬೆದರುತ್ತದೆ, ಜೀವಭಯಕ್ಕೆ ಒಳಗಾಗುತ್ತದೆ. ಇದು ದೈಹಿಕ ಹಿಂಸೆ ಅಲ್ಲದಿದ್ದರೂ ಸಹ ಮಾನಸಿಕ ಹಿಂಸೆಯಂತೂ ಹೌದು. ಓಡುವ ಭರದಲ್ಲಿ ಕೆಲವು ಪ್ರಾಣಿಗಳು ಬಿದ್ದು ಕಾಲು ಮುರಿದುಕೊಳ್ಳುವ ಸಾಧ್ಯತೆ ಇದ್ದೇ ಇದೆ. ಎಂತಹ ವೈದ್ಯಕೀಯ ಉಪಚಾರವನ್ನು ಕೊಟ್ಟರೂ ಸಹ ಈ ಪ್ರಾಣಿಯು ಶಾಶ್ವತವಾಗಿ ಅಂಗವಿಕಲವಾಗಬಹುದು.

(೨) ಪ್ರಾಣಿಹಿಂಸೆ ಮನುಕುಲದ ಪ್ರಗತಿಗೆ ಅನಿವಾರ್ಯವಾಗಿದೆ:
ಹಿಂಸೆ ಇರದಿದ್ದರೆ ಮನುಕುಲದ ಪ್ರಗತಿಯಾಗುತ್ತಿರಲಿಲ್ಲ . ಸ್ವರಕ್ಷಣೆಗಾಗಿ ಹಾಗು ಚಿಕ್ಕ ಪುಟ್ಟ ಪ್ರಾಣಿಗಳ ಬೇಟೆಯಾಡುವ ಉದ್ದೇಶದಿಂದ ಬಳಸಲಾದ ಶಿಲಾಯುಧಗಳ ಆವಿಷ್ಕಾರವೇ ಮನುಕುಲದ ಪ್ರಗತಿಯ ಮೊದಲ ಘಟ್ಟವಾಗಿದೆ. ಪ್ರಾಣಿಗಳನ್ನು ಪಳಗಿಸಿ, ವಾಹನಗಳಂತೆ ಹಾಗು ಭಾರವಾಹಕಗಳಂತೆ ಬಳಸಲು ಪ್ರಾರಂಭಿಸಿದ್ದು ಪ್ರಗತಿಯ ಎರಡನೆಯ ಘಟ್ಟವಾಗಿದೆ. ನಮ್ಮ ಪುರಾಣಗಳಲ್ಲಿಯೇ ಇದರ ಅನೇಕ ನಿದರ್ಶನಗಳು ದೊರೆಯುತ್ತವೆ.

ಸನಾತನ ಧರ್ಮದ ಒಬ್ಬ ಪ್ರಮುಖ ದೇವನಾದ ಶಿವನ ವಾಹನವು ಹೋರಿ. ಮಾನವನ ಹಾಗು ಹೋರಿಯ ಗೆಳೆತನವೂ ಬಹಳ ಹಳೆಯದೇ. ಕಾಡಿನಲ್ಲಿ ಸ್ವತಂತ್ರವಾಗಿ ತಿರುಗುತ್ತಿದ್ದ, ಗೋವುಗಳ ಹಿಂಡಿಗೆ ರಕ್ಷಕನಾದ ಹಾಗು ವೀರ್ಯದಾನಿಯಾದ ಹೋರಿಯನ್ನು ಮಾನವನು ಹಿಡಿದು, ಕೆಡೆದು, ಪಳಗಿಸಿ ತನ್ನ ವಾಹನವನ್ನಾಗಿ ಮಾಡಿಕೊಂಡ. ಹೋರುವ ಹೋರಿಯ ಬೀಜಗಳನ್ನು ಕ್ರೂರವಾಗಿ ಒಡೆದು ಎಳೆಯುವ ಎತ್ತನ್ನಾಗಿ ಮಾಡಿದ. ಮಾನವ-ನಾಗರಿಕತೆಯ ಬೆಳವಣಿಗೆಯ ಮೆಟ್ಟಲುಗಳು ಇವು. ಇವನ್ನೇ ನಾವು ನಮ್ಮ ಸಂಸ್ಕೃತಿ ಹಾಗು ಸಂಪ್ರದಾಯಗಳೆಂದು ವೈಭವೀಕರಿಸುತ್ತಿದ್ದೇವೆ. ಆದರೆ ಈ ಎಲ್ಲ  ಹಿಂಸಾಕಾಂಡ ಘಟಿಸಿರದಿದ್ದರೆ, ಮನುಕುಲದ ಪ್ರಗತಿ ಆಗುತ್ತಿರಲಿಲ್ಲ. ಆದುದರಿಂದ ಮನುಕುಲದ ಪ್ರಗತಿಗೆ ಪ್ರಾಣಿಹಿಂಸೆಯು ಅನಿವಾರ್ಯವಾಗಿದೆ.

ಹೋರಿಯ ಜೊತೆಗೇ ಗೋವುಗಳ ದಾಸ್ಯವೂ ಪ್ರಾರಂಭವಾಗಿರಬೇಕು. ಮಾನವವಿಜ್ಞಾನಿಗಳ ಪ್ರಕಾರ, ಹತ್ತುಸಾವಿರ ವರುಷಗಳಿಗೂ ಹಿಂದೆಯೇ ಇಥಿಯೋಪಿಯಾದಲ್ಲಿ ಗೋವುಗಳನ್ನು ಸಾಧು ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು. ಈ ಪ್ರಾಗೈತಿಹಾಸಿಕ ಕಾಲದಿಂದ ಇಲ್ಲಿಯವರೆಗೂ ಮಾನವನು ಗೋವುಗಳ ಹಾಲನ್ನು ಅವುಗಳ ಕರುಗಳಿಗೆ ಕುಡಿಯಲು ಬಿಡದೆ ತಾನೇ ಕುಡಿಯುತ್ತಿದ್ದಾನೆ. ಹೋರಿಗಳನ್ನು ಎತ್ತುಗಳನ್ನಾಗಿ ಪರಿವರ್ತಿಸಿ, ಭಾರ ಹೊರಲು, ಎಳೆಯಲು ಬಳಸುತ್ತಿದ್ದಾನೆ. ಆನೆ ಹಾಗು ಕುದುರೆಗಳದೂ ಇದೇ ಕಥೆ. ಕಾಡಿನಲ್ಲಿ ಸ್ವತಂತ್ರವಾಗಿ ಜೀವಿಸುತ್ತಿದ್ದ ಈ ಪ್ರಾಣಿಗಳು, ಮಾನವನ ವಾಹನಗಳೂ ಆದವು; ಅವನ ಭಾರಗಳನ್ನೂ ಹೊತ್ತವು ಹಾಗು ಅವನ ಯುದ್ಧಗಳಲ್ಲಿ ಭಾಗಿಗಳಾಗಿ ಕ್ರೂರ ಹಿಂಸೆಗೆ ಈಡಾದವು. ಒಟ್ಟಿನಲ್ಲಿ ಈ ಎಲ್ಲ ಪ್ರಾಣಿಗಳು ಮಾನವಕುಲದ ಪ್ರಗತಿಯ ಸಾಧನಗಳಾದವು. ಅಂದರೆ, ಪ್ರಾಣಿಹಿಂಸೆಯು ಪ್ರಗತಿಯ ಅನಿವಾರ್ಯ ಭಾಗವಾದಂತಾಯಿತು.

ಇದಕ್ಕೆ ವಿರೋಧವಾಗಿರುವವರ ಉತ್ತರ ಹೀಗಿದೆ:
ಮಾನವನ ಉತ್ಕ್ರಾಂತಿಯು ಕೇವಲ ಭೌತಿಕ ಪ್ರಗತಿಯೆ? ಮಾನಸಿಕ ಉನ್ನತಿಯು ಉತ್ಕ್ರಾಂತಿಯ ಭಾಗವಲ್ಲವೆ? ಬುದ್ಧ, ಬಸವಣ್ಣ ಮೊದಲಾದ ಮಹಾಪುರುಷರ ಬೋಧನೆಗಳು ನಮ್ಮ ಸಂಸ್ಕೃತಿಯ ಭಾಗಗಳಲ್ಲವೆ? ಈಗಂತೂ ಮಾನವಕುಲದ ಪ್ರಗತಿಗೆ ಪ್ರಾಣಿಹಿಂಸೆಯು ಅವಶ್ಯಕವಾಗಿ ಉಳಿದಿಲ್ಲ. ಆದುದರಿಂದ ಇಂತಹ ಕ್ರೀಡೆಗಳನ್ನು ನಿಲ್ಲಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ.ಈ ವಿಚಾರದಿಂದಲೇ ಕೆಲವು ನಾಗರಿಕ ಸಂಸ್ಥೆಗಳು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಯಾಚಿಕೆಯನ್ನು ಮನ್ನಿಸಿದ ನ್ಯಾಯಾಲಯವು ಇಂತಹ ಕ್ರೀಡೆಗಳನ್ನು ನಿರ್ಬಂಧಿಸುವ ನಿರ್ಣಯವನ್ನು ನೀಡಿತು.

ಕ್ರೀಡಾಪರರ ಮಾರುತ್ತರ ಹೀಗಿದೆ:
ಸರ್ವೋಚ್ಚ ನ್ಯಾಯಾಲಯದ ನಿರ್ಬಂಧದ  ಪರಿಣಾಮವೇನಾಯಿತು? ಸರ್ಕಸ್ಸಿನಲ್ಲಿ ಆನೆ, ಕುದುರೆ, ಒಂಟೆ ಮೊದಲಾದ ಪ್ರಾಣಿಗಳ ಶೋಷಣೆಯೇನೋ ತಪ್ಪಿತು. ಆದರೆ ಸರ್ಕಸ್ ಕಂಪನಿಗಳು ದಿವಾಳಿಯಾದವು. ಸರ್ಕಸ್ ಕಲಾವಿದರು ನಿರುದ್ಯೋಗಿಗಳಾದರು. ಅಷ್ಟೇ ಏಕೆ, ಮಂಗನಾಟ, ಕರಡಿಯಾಟ ಹಾಗು ಕವಲೆತ್ತುಗಳ ಆಟಗಳನ್ನು ಆಡಿಸುವ ಬಡಪಾಯಿಗಳಿಗೂ ಈ ಆದೇಶ ಅನ್ವಯಿಸುವದರಿಂದ ಅಂಥವರೂ ಸಹ ಬೀದಿಗೆ ಬಿದ್ದರು. ಇವರೆಲ್ಲರ ಬದುಕಿಗೆ ಅನ್ಯ ಮಾರ್ಗಗಳನ್ನು ಒದಗಿಸುವುದು ಸಮಾಜದ ಕರ್ತವ್ಯವಲ್ಲವೆ? ಆದರೆ ನಾಗರಿಕ ಸಂಸ್ಥೆಗಳು, ನ್ಯಾಯಾಲಯಗಳು ಹಾಗು ಆಡಳಿತವು ಇದು ತನಗೆ ಸಂಬಂಧಿಸಿದ ವಿಷಯವಲ್ಲ ಎಂದು ಝಾಡಿಸಿಕೊಳ್ಳುತ್ತವೆ.

ಹಾಗಾದರೆ ಈ ಸಾಮಾಜಿಕ ಸಮಸ್ಯೆಗೆ ಪರಿಹಾರವನ್ನು ಒದಗಿಸುವುದು ಯಾರ ಹೊಣೆ? ಇದನ್ನು ನಿರ್ಧರಿಸಲು ಸಮಾಜದ ಪ್ರಾಥಮಿಕ ರಚನೆಯನ್ನು ತಿಳಿದುಕೊಳ್ಳುವುದು  ಸ್ವಲ್ಪ ಮಟ್ಟಿಗೆ ಅವಶ್ಯವೆನಿಸುತ್ತದೆ. ಒಂದು ಕಾಲದಲ್ಲಿ ಸರ್ವತಂತ್ರ ಸ್ವತಂತ್ರನಾದ ಕಾಡುಮಾನವನು ಎಲ್ಲಿ ಬೇಕಾದಲ್ಲಿ, ತಿರುಗುತ್ತಿದ್ದನು ಹಾಗು ತನಗೆ ಬೇಕಾದಂತಹ ಆಹಾರವನ್ನು ಕಾಡಿನಿಂದ ಸಂಗ್ರಹಿಸುತ್ತಿದ್ದನು. ಆದರೆ ತನ್ನ ರಕ್ಷಣೆಗಾಗಿ ಆತನಿಗೆ ಗುಂಪನ್ನು ಕಟ್ಟಿಕೊಳ್ಳುವುದು ಅನಿವಾರ್ಯವಾಯಿತು. ಈ ಗುಂಪು ತನ್ನ ಸ್ಥಿರತೆಗಾಗಿ ಹಾಗು ಸದಸ್ಯರ ಸಂಘಟಿತ ಬದುಕಿಗಾಗಿ ಕೆಲವೊಂದು ನಿಯಮಗಳನ್ನು ರೂಢಿಸಿತು. ಈ ನಿಬಂಧನೆಗಳ ಮೇರೆಗೆ ಸದಸ್ಯಮಾನವನು ತನ್ನ ಕೆಲವು ಸ್ವಾತಂತ್ರ್ಯಗಳನ್ನು ಬಿಟ್ಟುಕೊಟ್ಟನು. ಇದರ ಬದಲಾಗಿ ಸದಸ್ಯಮಾನವನಿಗೆ ಗುಂಪಿನಿಂದ ಕೆಲವು ಸವಲತ್ತುಗಳು ದೊರಕಿದವು. ಇದೇ ಮಾನವನ ಪ್ರಾಥಮಿಕ ಸಮಾಜ. ಈ ಸಮಾಜವು ಸಂಕೀರ್ಣವಾಗಿ ಬೆಳೆದು ಈಗಿನ ರೂಪವನ್ನು ತಳೆದಿದೆ. ಹಾಗಿದ್ದಾಗ, ನಮ್ಮ ಸಮಾಜದ ಕೆಲವು ಸದಸ್ಯರನ್ನು ನಾವು ನಿರುದ್ಯೋಗಿಗಳನ್ನಾಗಿ ಮಾಡಿದಾಗ, ಅವರ ಎಲ್ಲ ತರಹದ ಅವಶ್ಯಕತೆಗಳನ್ನು ಪೂರೈಸುವುದು ಸಮಾಜದ ಹೊಣೆಗಾರಿಕೆಯಲ್ಲವೆ? ಆದರೆ ಸದ್ಯದ ಸಮಾಜವು ಹೊಣೆಗಾರ ಸಮಾಜವಾಗಿಯೂ ಉಳಿದಿಲ್ಲ; ನ್ಯಾಯಯುತ ಸಮಾಜವಾಗಿಯೂ ಉಳಿದಿಲ್ಲ. ಹಾಗಿದ್ದರೆ, ನಾವೇ ನಿರುದ್ಯೋಗಿಗಳನ್ನಾಗಿ ಮಾಡಿದ ಈ ಅಸಹಾಯಕರ ಕೈಯಲ್ಲಿ ಬಂದೂಕುಗಳನ್ನು ಕೊಟ್ಟು, ಕಾಡಿನಲ್ಲಿ ಬಿಟ್ಟು ಬಿಡೋಣ. ಸಾಮಾಜಿಕ ನಿಬಂಧನೆಗಳಿಲ್ಲದ ಮೂಲವಾಸಿಗಳಂತೆ ಈ ಮಾನವರು ಕಾಡಿನಲ್ಲಿ ಬೇಟೆಯಾಡುತ್ತ ಬದುಕಿಕೊಳ್ಳಲಿ. ಆದರೆ ನಮ್ಮ ಸರಕಾರವು ಆ ಒಂದು ಸೌಲಭ್ಯವನ್ನೂ ಸಹ ಈ ಬಡಪಾಯಿಗಳಿಗೆ ನೀಡುವುದಿಲ್ಲ. ಭಿಕ್ಷೆ ಬೇಡುತ್ತ, ನವೆದು, ನವೆದು ಸಮಾಜದಲ್ಲಿಯ ಉಳ್ಳವರಿಂದ ತಿರಸ್ಕಾರಕ್ಕೆ ಒಳಗಾಗುತ್ತ, ಕೊನೆಗೊಮ್ಮೆ ನಾಯಿನರಿಗಳಿಗೆ ತುತ್ತಾಗುವುದೇ ಇವರ ಹಣೆಬರಹವಾಗಬೇಕೆ? ಸಮಾಜದ ಸದಸ್ಯರಿಗೆ ಹಕ್ಕುಗಳಿದ್ದಂತೆಯೇ ಕರ್ತವ್ಯಗಳೂ ಇವೆ ಎಂದು ಬೋಧಿಸುವ ಸಮಾಜವು ತನಗೂ ಸಹ ಹೊಣೆಗಾರಿಕೆ ಇದೆ ಎಂದು ಅರಿತುಕೊಳ್ಳುವುದು ಯಾವಾಗ? ಈ ಸಮಸ್ಯೆಯನ್ನು ಬಿಡಿಸದ ಹೊರತು, ಪ್ರಾಣಿಗಳನ್ನು ಅವಲಂಬಿಸಿರುವ  ಬಡಪಾಯಿಗಳ ಬದುಕನ್ನು ಕಸಿದುಕೊಳ್ಳುವ ಅಧಿಕಾರ ಸಮಾಜಕ್ಕೆ ಎಲ್ಲಿದೆ? ಆದುದರಿಂದ ಇಂತಹ ಕ್ರೀಡೆಗಳನ್ನು ನಿಷೇಧಿಸಬಾರದು.

(೩) ಈ ಕ್ರೀಡೆಯು ನಮ್ಮ ಸಂಸ್ಕೃತಿಯ, ಸಂಪ್ರದಾಯದ ಭಾಗವಾಗಿದೆ ಎನ್ನುವುದು ಕ್ರೀಡಾಪರರ ವಾದವಾಗಿದೆ. ಇದಕ್ಕೆ ವಿರೋಧವಾಗಿರುವವರ ಪ್ರತಿವಾದ ಹೀಗಿದೆ:
ನಾವು ಕಾಡುಮಾನವರಾಗಿದ್ದಾಗ, ಇದು ನಮ್ಮ ಸಂಸ್ಕೃತಿಯ ಭಾಗವಾಗಿತ್ತು. ಆ ಘಟ್ಟವನ್ನು ನಾವು ದಾಟಿದ್ದೇವೆ. ಬುದ್ಧ, ಬಸವಣ್ಣ ಹಾಗು ಭಗವದ್ಗೀತೆ ಇವು ನಮ್ಮ ಸಂಸ್ಕೃತಿಯ ಆದರ್ಶಗಳಲ್ಲವೆ? ಒಂದು ಕಾಲದಲ್ಲಿ ದೇವದಾಸಿ ಪದ್ಧತಿ, ನರಬಲಿ ಹಾಗು ಸಹಗಮನಗಳೂ ಸಹ ನಮ್ಮ ಸಂಪ್ರದಾಯದ ಭಾಗವಾಗಿದ್ದವು. ಆ ಪದ್ಧತಿಗಳನ್ನು ನಾವು ಶಾಸನದ ಮೂಲಕ ನಿಲ್ಲಿಸಿಲ್ಲವೆ? ಅದರಂತೆಯೇ ಪ್ರಾಣಿಹಿಂಸೆಯಾಗಬಹುದಾದ ಕ್ರೀಡೆಗಳನ್ನು ಪ್ರತಿಬಂಧಿಸುವದು ನಮ್ಮ ನಾಗರಿಕ ಸಮಾಜದ ಕರ್ತವ್ಯವೇ ಆಗಿದೆ.

(೪)ಮೇಲ್ತರಗತಿಯವರ ಹಿಂಸಾಕ್ರೀಡೆಗಳನ್ನು ಪ್ರತಿಬಂಧಿಸದೆ, ಕೆಳತರದವರ ಕ್ರೀಡೆಗಳನ್ನು ಮಾತ್ರ ಪ್ರತಿಬಂಧಿಸುವುದು ಸರಿಯಾದ ಕ್ರಮವಲ್ಲ. ನಮ್ಮ ಸಮಾಜವು ವಿಷಮ ಸಮಾಜವೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಈ ಸಮಾಜದಲ್ಲಿ ಮೇಲ್ತರಗತಿಯಲ್ಲಿರುವ ವ್ಯಕ್ತಿಗಳಿಗೆ ತಮ್ಮ ಮಾನಸಿಕ ಉದ್ವೇಗವನ್ನುಪರಿಹರಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಇವರು ನೈಟ್‍ಕ್ಲಬ್‍ಗಳಲ್ಲಿ ಮಜಾ ಮಾಡಬಹುದು, ಕುದುರೆಜೂಜುಗಳಲ್ಲಿ ತಮ್ಮ ಖಿನ್ನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಕೆಳತರಗತಿಯ ವ್ಯಕ್ತಿಯ ಮನದಲ್ಲಿ ಹುದುಗಿದ ಕೋಪ, ತಾಪ, ಉದ್ವೇಗ, ಖಿನ್ನತೆ, ಸಂಕಟ ಇವೆಲ್ಲವುಗಳ ಪರಿಹಾರಕ್ಕೆ ಅವಕಾಶ ಎಲ್ಲಿದೆ?

ಹುಂಜದ ಕಾಳಗ, ಟಗರಿನ ಕಾಳಗ ಅಥವಾ ಜಲ್ಲಿಕಟ್ಟುಗಳಂತಹ ಹಿಂಸಾಕ್ರೀಡೆಗಳಲ್ಲಿ ಮಾತ್ರ ಅವರಲ್ಲಿ ಹುದುಗಿದ್ದ ರೊಚ್ಚು ಹೊರಬಿದ್ದು, ಅವರಿಗೆ ಮಾನಸಿಕ ಪರಿಹಾರ ದೊರೆಯಬೇಕಲ್ಲವೆ? ಇವುಗಳನ್ನು ಅವರಿಗೆ ನಿರಾಕರಿಸಿದರೆ, ಹೊರಬರಲು ಅವಕಾಶವಿಲ್ಲದ ಅವರ ಮಾನಸಿಕ ಸಂಕಟಗಳು, ಸಮಾಜವಿರೋಧಿ ಕೃತ್ಯಗಳಲ್ಲಿ ವ್ಯಕ್ತವಾಗಲಿಕ್ಕಿಲ್ಲವೆ? ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಕಳವು, ಕೊಲೆ, ಅತ್ಯಾಚಾರ ಮೊದಲಾದ ಅಪರಾಧಗಳಿಗೆ ಇದೂ ಕಾರಣವಲ್ಲವೆ? ಪ್ರಾಣಿಹಿಂಸೆ ಮತ್ತು ಸಾಮಾಜಿಕ ಅಸ್ವಾಸ್ಥ್ಯ ಇವೆರಡರಲ್ಲಿ ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ? ಪ್ರಾಣಿಹಿಂಸೆಗೆ ಅನುವು ಮಾಡಿಕೊಟ್ಟು ಸಾಮಾಜಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುತ್ತೀರೊ ಅಥವಾ ಪ್ರಾಣಿಹಿಂಸೆಗೆ ನಿರ್ಬಂಧ ವಿಧಿಸಿ ಸಾಮಾಜಿಕ ಅಸ್ವಾಸ್ಥ್ಯಕ್ಕೆ ದಾರಿ ಮಾಡಿ ಕೊಡುತ್ತೀರೊ?

ಪ್ರಾಣಿಹಿಂಸಾಕ್ರೀಡೆಗಳ ವಿರೋಧವಾಗಿರುವವರು ಹೇಳುವುದು ಹೀಗೆ: ಸಾಮಾಜಿಕ ವಿಷಮತೆಯ ಮೂಲಕಾರಣಗಳನ್ನು ತಿಳಿದು, ಅವುಗಳನ್ನು ನಿವಾರಿಸುವದು ನಿಜವಾದ ಅವಶ್ಯಕತೆಯಾಗಿದೆ. ಜನಸಂಖ್ಯಾಸ್ಫೋಟ, ಹೆಚ್ಚುತ್ತಿರುವ ನಿರುದ್ಯೋಗ, ನಗರೀಕರಣ, ಹಿಂಸೆ ಹಾಗು ಅಪರಾಧಗಳ ವೈಭವೀಕರಣಗಳು ಜನರಲ್ಲಿ ಮಾನಸಿಕ ಅಸ್ವಾಸ್ಥ್ಯಕ್ಕೆ ಕಾರಣವಾಗಿವೆ. ಇವುಗಳಿಂದಲೇ ವಿಷಮಸಮಾಜದ ನಿರ್ಮಾಣವಾಗಿದೆ. ಆದುದರಿಂದ ಈ ಮೂಲಕಾರಣಗಳ ನಿವಾರಣೆಯೇ ಇಂದಿನ ನಿಜವಾದ ಅವಶ್ಯಕತೆಯಾಗಿದೆ.

(೫)ದೇಶರಕ್ಷಣೆಯು ಅತ್ಯಂತ ಮಹತ್ವದ ವಿಷಯವಾಗಿದೆ. ದೇಶರಕ್ಷಕನಾದ ಸೈನಿಕನಲ್ಲಿ, ಶತ್ರುಗಳ ವಿರುದ್ಧ ಹೋರಾಡುವ ಕಟುತ್ವವನ್ನು ತರಲು ಹಿಂಸಾಕ್ರೀಡೆಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಸೌಮ್ಯ ಸ್ವಭಾವದ ಸೈನಿಕರಿಂದ ಶತ್ರುಗಳನ್ನು ಕೊಲ್ಲಲು ಸಾಧ್ಯವಾದೀತೆ? ಮನಸ್ಸು ಕಟುಕವಾಗಿದ್ದರೆ ಮಾತ್ರ ಇದು ಸಾಧ್ಯವಾದೀತು. ಈ ಕಾರಣದಿಂದಲೇ ನಮ್ಮ ಮೊದಲಿನ ರಾಜಮಹಾರಾಜರು ‘ಮೃಗಯಾವಿಹಾರ’ ಎನ್ನುವ ನೆಪದಲ್ಲಿ ಬೇಟೆಯಾಡುತ್ತಿದ್ದರಲ್ಲವೆ? ಕಾಡುಮೃಗಗಳ ನಾಶದ ಜೊತೆಗೇ, ಮಾನವರ ವಾಸಸ್ಥಳವೂ ವಿಸ್ತಾರವಾಗುತ್ತಿತ್ತು. ಆದುದರಿಂದ ಹಿಂಸೆಗೆ ಹಿಂಜರಿಯದ ಮನಸ್ಸು ಇದ್ದರೆ ಮಾತ್ರ ಈಗಿನ ಪರಿಸ್ಥಿತಿಯಲ್ಲಿ ದೇಶರಕ್ಷಣೆ ಸಾಧ್ಯವಾದೀತು. ಆದುದರಿಂದ ಪ್ರಾಣಿಹಿಂಸೆಯು ನಮ್ಮ ನಾಗರಿಕತೆಯ ಅನಿವಾರ್ಯವಾದ ಭಾಗವಾಗಬೇಕಾಗಿದೆ.  

ಈ ವಾದಕ್ಕೆ ಹಿಂಸಾವಿರೋಧಿಗಳಲ್ಲಿ ಉತ್ತರವಿಲ್ಲ. ಆದುದರಿಂದ ಕೊನೆಯಲ್ಲಿ ನಮಗೆ ಹೊಳೆಯುವುದು ಇಷ್ಟೇ:
ಬದುಕಿನ ಕಠೋರ ಮುಖವು ಸದ್ಯದ ವಾಸ್ತವವಾಗಿದೆ. ವಿಶ್ವದ ಎಲ್ಲ ರಾಷ್ಟ್ರಗಳು ವೈರವನ್ನು ತ್ಯಜಿಸಿದಾಗ ಮಾತ್ರ ಪ್ರಾಣಿಹಿಂಸೆಯನ್ನು ಒಳಗೊಂಡ ಕ್ರೀಡೆಗಳನ್ನು ನಿಲ್ಲಿಸುವುದು ಸರಿಯಾದೀತು. ಅಲ್ಲಿಯವರೆಗೆ ಇದನ್ನೊಂದು ಅನಿವಾರ್ಯ ಕೇಡು ಎಂದು ನಾವು ಸಹಿಸಿಕೊಳ್ಳುವುದು ಉಚಿತವಾದೀತು. ವಿಶ್ವದ ಎಲ್ಲ ದೇಶಗಳು ಸುಭಿಕ್ಷವಾಗಲಿ, ದೇಶಗಳು ವೈರತ್ವವನ್ನು ಬಿಡಲಿ; ಪ್ರಜೆಗಳು ಹಾಗು ಪ್ರಾಣಿಗಳು ನೆಮ್ಮದಿಯಿಂದ ಬಾಳಲಿ ಎಂದು ಹಾರೈಸುವುದೆ ನಾವು ಇದೀಗ ಮಾಡಬಹುದಾದದ್ದು. ನಮ್ಮ ದೇಶವು ಚಿರಕಾಲದಿಂದಲೂ ಮಾಡುತ್ತಿರುವ ಈ ಪ್ರಾರ್ಥನೆಯು ಬೇಗನೇ ಫಲಿಸಲಿ:

ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ,
ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಭಾಗ ಭವೇತ್,
ಓಂ ಶಾಂತಿಃ ಶಾಂತಿಃ ಶಾಂತಿಃ