‘ಮಹಾಂತ!’
ನನ್ನ ಬೆನ್ನ ಹಿಂದಿನಿಂದ ಒಂದು ಹೆಣ್ಣು ಧ್ವನಿ ಕೇಳಿ ಬಂದಿತು. ಪರಿಚಯದ
ಧ್ವನಿಯೇ ಹೌದು. ಆದರೆ ಆ ಧ್ವನಿಯನ್ನು ಕೇಳಿ ನಾಲ್ಕು ವರ್ಷಗಳೇ ಕಳೆದಿದ್ದಾವು. ಸುಭಾಸ ರಸ್ತೆಯಲ್ಲಿ
ಸಂಜೆಯ ಅಲೆದಾಟ ಮಾಡುತ್ತಿದ್ದವನು ಹಿಂತಿರುಗಿ ನೋಡಿದೆ, ಪುಳಕಿತನಾದೆ. ಸರಳಾ ನಗುತ್ತ ನಿಂತಿದ್ದಳು.
ಸರಳಾ ನಗುತ್ತಿರುವದನ್ನು ನೋಡಿದಾಗಲೆಲ್ಲ ನನಗೆ ಕ. ವೆಂ. ರಾಜಗೋಪಾಲರ ಕವನದ ಸಾಲೊಂದು ನೆನಪಿಗೆ ಬರುತ್ತಿತ್ತು:
‘ಕಾಲೇಜು ಹುಡುಗಿಯರ ನಗೆಯಂತೆ ಹರಡುತಿದೆ ವಿದ್ಯುದ್ವಳ್ಳಿವೆಳಗು.’
ನಮ್ಮ ಬಿ.ಬಿ.ಏ. ಕಾಲೇಜಿನಲ್ಲಿ ಸರಳಾ ಉತ್ಸಾಹದ ಬುಗ್ಗೆಯಾಗಿದ್ದಳು. ಸ್ನೇಹಜೀವಿಯಾದ
ಅವಳಿಗೆ ಅನೇಕ ಹುಡುಗರ ಹಾಗು ಹುಡುಗಿಯರ ಗೆಳೆತನವಿತ್ತು. ಅವಳು ನನಗಿಂತ ಎರಡು ವರ್ಷ ಸೀನಿಯರ್ ಆಗಿದ್ದರೂ
ಸಹ ಅವಳ ಸ್ನೇಹವೃಂದದಲ್ಲಿ ನನಗೂ ಒಂದು ಸ್ಥಾನವಿತ್ತು.
‘ಸರಳಾ, ಎಷ್ಟು ವರ್ಷಗಳಾದವು ನಿನ್ನ ನೋಡಿ! ನಿನ್ನ ಕೂಡ ಭಾಳ ಮಾತಾಡೋದು
ಅದ. ಇಲ್ಲೇ ಪಾರ್ಕ್ ರೆಸ್ಟೋರೆಂಟಿನಾಗ ಚಹಾ ಕುಡಿದು, ಅಝಾದ ಪಾರ್ಕಿನ್ಯಾಗ ಮಾತಾಡಕೋತ
ಕೂಡೋಣಲ್ಲಾ?’, ಸರಳಾನ ಎದುರಿಗೆ ಒಂದು ಪ್ರಸ್ತಾಪವನ್ನಿಟ್ಟೆ.
ಹರಟೆ ಹೊಡೆಯೋದಕ್ಕೆ ಸರಳಾ ಯಾವಾಗಲೂ ಗೇಮ್. ‘ಬಾರೊ ತಮ್ಮಾ, ಎಮ್ಮೆ ತಮ್ಮಾ’
ಅಂತ ಛೇಡಿಸುತ್ತ, ನನಕಿಂತ ಮುಂದಾಗಿ ರೆಸ್ಟೋರೆಂಟಿನಾಗ ಹೊಕ್ಕಳು. ಸರಳಾನ್ನ
ಭೆಟ್ಟಿಯಾದ ಖುಶಿಯಲ್ಲಿ ‘ಎಸ್.ಕೆ.ಟೀ’ ತರಿಸಿದೆ. ಅಲ್ಪೋಪಹಾರ ಮುಗಿಸಿ, ಆಝಾದ ಪಾರ್ಕಿನ ಒಂದು ಶಿಲಾಸನದ
ಮ್ಯಾಲೆ ಇಬ್ಬರೂ ಕುಳತಿವಿ.
‘ಸರಳಾ, ನೀವು ಧಾರವಾಡದಾಗs ಇರತೀರೇನು?’ ಅಂತ ಒಂದು ಸಹಜ ಪ್ರಶ್ನಿಯನ್ನು
ಒಗದೆ.
‘ನೀವು ಅಂದರ ಯಾರಪಾ? ನಾ ಅಂತೂ ಧಾರವಾಡದಾಗ ಇರತೇನಿ ನೋಡು’.
ಸರಳಾಳ ಉತ್ತರದಿಂದ ಸ್ವಲ್ಪ ಗಲಿಬಿಲಿಯಾಯಿತು.
‘ಅಲ್ಲವಾ, ಕುಮಾರ ಅಂದರ ನಿನ್ನ ಗಂಡ ಮತ್ತ ನಿನ್ನ
ಮಕ್ಕಳು? ಅವರೆಲ್ಲಿ ಇರತಾರ?’
‘ಓಹೋ ಮಹಾಂತ, ಅತಿ ಸರ್ವತ್ರ ವರ್ಜಯೇತ್ ಅಂತ ಕೇಳಿ ಇಲ್ಲೊ? ಹಂಗs ಪತಿ
ಸರ್ವತ್ರ ವರ್ಜಯೇತ್ ಅನ್ನೋದನ್ನೂ ತಿಳಕೋ ಏನಪಾ. ಅವನ ಜೋಡಿ ನಾ ಈಗ ಇರೂದುಲ್ಲ.’
ನನಗ ಶಾಕ್ ಆತು. ಹೆಂಗೋ ಸಂಬಾಳಿಸಿಕೊಂಡು ಕೇಳಿದೆ.
‘ಆದರ ಸರಳಾ. ಕಾ^ಲೇಜಿನ್ಯಾಗ ನೀವು ಎಷ್ಟು ಅನ್ಯೋನ್ಯ ಇದ್ದಿರಿ. ವಿವಾಹದಾಗ
ಏಳು ಪ್ರಕಾರ ಇರತಾವ, ನಮ್ಮದು ಗಾಂಧರ್ವ ವಿವಾಹ ಅಂತ ಚ್ಯಾಷ್ಟಿ ಮಾಡತಿದ್ದಿ. ಮತ್ತ ಈಗ ಹಿಂಗ ಯಾಕ
ಆತು?’
‘ನೋಡು ತಮ್ಮಾ, ಮದುವಿ ಅನ್ನೋದು ಕಾಮನ ಬಿಲ್ಲು ಇದ್ಧಾಂಗ. ಕಾಮನ ಬಿಲ್ಲು
ಖರೇನ ಇರತದ ಏನು? ಅದು ದೃಶ್ಯಭ್ರಮಾ ಮಾತ್ರ ಹೌದಲ್ಲೊ? ’
‘ಹೌದು. ಆದರ…?’
‘ಹೌದು! ….ಕುಮಾರ ನನ್ನ ಕನಸಿನ ಹೀರೋ ಆಗಿದ್ದ.
ಕಾಲೇಜಿನ್ಯಾಗ ಇದ್ದಾಗನ ತನ್ನ ಬೈಕಿನ ಮ್ಯಾಲೆ ನನ್ನ ತಿರುಗಾಡತಸತಿದ್ದ, ಕ್ಯಾಂಟೀನದೊಳಗ ತಿನಸತಿದ್ದ,
ಐಶ್ ಕರೇಂಗೆ ಅಂತ ನಗಸತಿದ್ದ.’
‘ಮುಂದ ಏನಾತು? ಕುಮಾರ ಬದಲಾದನ?’
‘ಹಂಗಲ್ಲೊ ಮಹಾಂತ. ಮದುವಿ ಆದ ಮ್ಯಾಲ ಗಂಡು ಹೆಣ್ಣಿನ ನಡುವಿನ ಸಮೀಕರಣ
ಬದಲಾಗ್ತಾವ, ಏನಪಾ. ಮೊದಲೆಲ್ಲಾ ‘ನಿನ್ನ ಪಾದಾ ನೆಲದ ಮ್ಯಾಲ ಇಡಬ್ಯಾಡ, ಅವು ಹೊಲಸು ಆದಾವು’ ಅಂತ
ಪಾಕೀಜಾ ಸಿನೆಮಾದ ಡಾಯಲಾಗ್ ಹೊಡೀತಿದ್ದ. ಮದುವಿ ಆದ ಮ್ಯಾಲ, ‘ಕಸಾ ಹೊಡೀಲಿಕ್ಕೆ ಎಷ್ಟೊತ್ತು ಮಾಡತಿ,
ಭಾಂಡೇ ತಿಕ್ಕಲಿಕ್ಕೆ ನಿಮ್ಮಪ್ಪ ಆಳ ಇಟ್ಟಾನೇನು ಇಲ್ಲೆ? ನೀ ನೌಕರಿಗೆ ಹೋಗೋ ಅಗತ್ಯ ಏನು?’ ಅಂತೆಲ್ಲಾ
ಅನ್ನಲಿಕ್ಕೆ ಸುರು ಮಾಡಿದಾ!’
‘ಸರಳಾ, ಕಾಲೇಜಿನ್ಯಾಗ ನಾವೆಲ್ಲ ನಿಮ್ಮ ಜೋಡೀಗೆ ಗಂಡಭೇರುಂಡ ಪಕ್ಷಿ ಅಂತಿದ್ದಿವಿ.’
‘ನೋಡು ತಮ್ಮಾ. ಮೊದಲು ಗಂಡಭೇರುಂಡ ಪಕ್ಷಿ ಹಂಗ ಎರಡು ಜೀವಾ, ಒಂದು ದೇಹಾ
ಅನ್ನೋ ಥರಾನ ಇದ್ದವಿ. ಆದರ ಗಂಡಭೇರುಂಡಕ್ಕ ಎರಡು ಮುಖಾ ಇರತಾವ ನೋಡು; ಒಂದು ಎಡಕ್ಕ ಮಾರಿ ಮಾಡಿದ್ದರ,
ಮತ್ತೊಂದು ಬಲಕ್ಕ ಮಾರಿ ಮಾಡಿರತದ; ಹಂಗ ಆತು ನಮ್ಮ ಬಾಳೇ! ಅದನ್ನೆಲ್ಲಾ ಎರಡು ವರ್ಷ ನಾ ಸಹಿಸೀದೆ.
ಸದ್ಯಕ್ಕ ನ್ಯಾಯಾಲಯದ ಆದೇಶದ ಪ್ರಕಾರ ಗಂಡ ಹೆಂಡತಿ ಪ್ರತ್ಯೇಕವಾಗಿ ಇದ್ದೇವಿ.’
‘ಮತ್ತ ಮಕ್ಕಳು?’
‘ಅದs ಮುಖ್ಯ ಕಾರಣ. ಅವನಿಂದ ಮಕ್ಕಳು ಆಗಲಿಲ್ಲಂತನ, ಆತನ್ನ ಬಿಟ್ಟೆ.’
ನನಗ ಮತ್ತೊಂದು ಶಾಕ್.
‘ವೈದ್ಯಕೀಯ ತಪಾಸಣಿ ಮಾಡಿಸಿದ್ದಿರೋ ಇಲ್ಲೊ?’
‘ಅದೂ ಆತು. ಕುಮಾರನದ ದೋಷ ಅಂತ ನಿರ್ಣಯ ಆತು.
ಆವಾಗ ನಾ ಅವಗ ಹೇಳಿದೆ. ನನ್ನ ಗರ್ಭ ಒಂದು ಕೂಸಿನ್ನ ಬೇಡತದ. ನಾನು ಕೃತಕ ಗರ್ಭಧಾರಣೆ ಮಾಡಿಸಿಕೋತೀನಿ.
ಅವಾ ಒಪ್ಪಲಿಲ್ಲ. ‘ಮಕ್ಕಳು ಬ್ಯಾಡ ಬಿಡು; ನನ್ ಈಜ್ ಫನ್’ ಅಂತಂದ, ‘ಅದು ಹಾದರ’ ಅಂತ ಅಂದ. ನಾ ಹೇಳಿದೆ:
‘ಕುಮಾರ, ಎಸ್ಕಿಮೋ ಪದ್ಧತಿ ನಿನಗ ಗೊತ್ತದ ಏನು? ಆ ಶೀತ ಪ್ರದೇಶದಾಗ
ಸಂತಾನ ವಿರಳ. ಅದಕ್ಕಂತ ಅಲ್ಲಿ ಗಂಡಸರು ತಮ್ಮ ಮನಿಗೆ ಬಂದ ಅತಿಥಿಗಳನ್ನ ತಮ್ಮ ಹೆಂಡಂದರ ಜೋಡಿ ಮಲಗಸತಾರ.
ಮತ್ತ ಭಾರತದಾಗೂ ನಿಯೋಗ ಪದ್ಧತಿ ಇರಲಿಲ್ಲೇನು? ಸಂತಾನ ಆಗೋದು ಮುಖ್ಯ ಹೊರತು ಪಾತಿವ್ರತ್ಯ ಮುಖ್ಯ
ಅಲ್ಲ.’
ಸರಳಾನ ಉತ್ತರದಿಂದ ಅವಾಕ್ಕಾದೆ. ಆದರೆ ಅವಳು ಯಾವಾಗಲೂ ಹೀಗೆಯೇ. ಸರಳ ಮತ್ತು
ನೇರ. ಏನೂ ಮುಚ್ಚುಮರೆ ಇಟ್ಟುಕೊಳ್ಳದವಳು.
`ಕುಮಾರಗ ನೀ ರಾಜಕುಮಾರ ಅಂತ ಕರೀತಿದ್ದಿ.’,
ಸರಳಾಗ ನೆನಪು ಮಾಡಿ ಕೊಟ್ಟೆ.
‘ಹೌದು. ಆದರ ಈತ ರಾಜಕುಮಾರನಾದ ಕಪ್ಪೆ ಅಲ್ಲ; ಕಪ್ಪೆಯಾದ ರಾಜಕುಮಾರ! ಎಲ್ಲಾ
ಗಂಡಸರು ಹಿಂಗs. ಹೆಂಡತಿ ಅಂದರ ಮನೀ ಕೆಲಸಕ್ಕ ಬೇಕು. …ಆಕಿ ಮ್ಯಾಲ ಪ್ರೀತಿ ಮಾಡೋದು ಅಂದರ ಹಗ್ಸ್
ಮತ್ತು ಡಿಗ್ಸ್! ಇಷ್ಟs ಗೊತ್ತು ಇವರಿಗೆ! ಮದುವಿಕಿಂತ ಮೊದಲು ಇವಾ ಸಿನೆಮಾ ಹೀರೋ ಆಗಿದ್ದ; ಈಗ ವಿಲನ್
ಆಗ್ಯಾನ.’
‘ಸರಳಾ, ಬದುಕು ಮತ್ತು ಸಿನೆಮಾ
ಭಾಳ ಭಿನ್ನ ಅವ. ಸಿನೆಮಾದ ಹೀರೋ ಗಂಡಸ್ತನದ ಅಪರಾವತಾರ ಆದರ ಹೀರೋಯಿನ್ ಹೆಣ್ತನದ ಅಪರಾವತಾರ
ಆಗಿರ್ತಾಳ. ಅದಕ್ಕಂತ, ಮದುವಿ ಆದ ಮ್ಯಾಲೆ ಇಬ್ಬರಿಗೂ ನಿರಾಶಾ ಆಗ್ತದ. ಮತ್ತ ನಿಸರ್ಗದ ಕೈವಾಡನೂ ಇದರಾಗ
ಅದ ಅಂಬೋದು ನಿನಗ ಗೊತ್ತಿಲ್ಲೇನು? ಗಂಡಸು ಆದಷ್ಟು ಡೀಕಲೇ ಬೇಕಾಗತದ.’ ನನ್ನ ಪನ್ನಿಗೆ ನಾನೇ ನಕ್ಕೆ.
ಸರಳಾಳ ಜೊತೆಗೆ ಯಾರಿಗೂ ಇನ್ಹಿಬಿಶನ್ಸ್ ಅನ್ನೋದು ಇರತಿದ್ದಿಲ್ಲ.
‘ಮಹಾಂತ, ನಿನ್ನ ಮಾತು ಅರ್ಧ ಸತ್ಯ ಅದ. ಮೊದಲನೆಯದಾಗಿ ಕುಮಾರ ‘ಸ್ಲೋ ಟು
ಚಾರ್ಜ ಮತ್ತು ಕ್ವಿಕ್ ಟು ಡಿಸ್‍ಚಾರ್ಜ’ ಆಗಿದ್ದ.
ಅದೇನೂ ನನಗ ಕಿರಿಕಿರಿ ಅನಸಲಿಲ್ಲ. ನನ್ನ ಸಮಸ್ಯಾ ಅದಾಗಿರಲಿಲ್ಲ. ಇನ್ನು ಮದುವಿ ಆದ ತಕ್ಷಣ ಭಾರತೀಯ
ಹೆಣ್ಣು ತನ್ನ ಕೆಳಗಿನ ಅಂತಸ್ತನ್ನ ಒಪ್ಪಿಕೊಂಡು ಬಿಡತಾಳ. ಗಂಡು ಯಜಮಾನ ಆಗಿ ಮೆರೀತಾನ, ಹೆಣ್ಣು ಕೆಲಸದಾಕಿ
ಆಗ್ತಾಳ. ಆದರ ನಾ ಮಾತ್ರ ಗಂಡನ್ನ ಅನುಸರಿಸಿಕೊಂಡು ಇರೋ ಅಂಥಾ ಅರ್ಧಾಂಗಿನಿ ಅಲ್ಲ. ನನಗೂ ಸಾಕಷ್ಟು
ಕನಸು ಅವ. ಗಂಡನ ಕನಸುಗಳಿಗೆ ಹೆಣ್ಣು ಪೂರಕ ಆಗಬೇಕು ಖರೆ. ಹಂಗsನ ಹೆಂಡತಿಯ ಕನಸುಗಳಿಗೆ ಗಂಡನೂ ಬೆನ್ನೆಲಬು
ಆಗಿ ನಿಲ್ಲಬೇಕು!’
‘ನಮ್ಮ ಈಗಿನ ಸಮಾಜದಾಗ ಇದು ಸಾಧ್ಯ ಆದೀತ?’
‘ಸಮಾಜ ಅಂದರ ನಾವs ಅಲ್ಲೇನೊ, ಮಹಾಂತ? ನಿನ್ನ ದಾಂಪತ್ಯ ಹೆಂಗದ? ಯಾರು
ಯಾರನ್ನ ಅನುಸರಸತೀರಿ?’
‘ಸರಳಾ, ಒಂದು ಸಣ್ಣ ಬುಕ್‍ಸ್ಟೋರ್ ಮಾಲಕ ನಾನು. ನನಗ ಯಾರು ಕನ್ಯಾ ಕೊಡತಿದ್ದಾರು?
ಅದೂ ಅಲ್ಲದ, ಎರಡು ವರ್ಷದ ಹಿಂದ, ನನ್ನ ಅಪ್ಪ, ಅಮ್ಮ ಇಬ್ಬರೂ ರೇಲವೇ ದುರಂತದಾಗ ತೀರಿಕೊಂಡರು. ನನಗ
ಕನ್ಯಾ ನೋಡವರು ಯಾರೂ ಇಲ್ಲ ಈಗ.’
ಸರಳಾಳ ಮುಖದ ಮೇಲೆ ಒಂದು ತುಂಟ ನಗೆ ಕಾಣಿಸಿತು.
‘ಮಹಾಂತ, ಒಂದು ಪ್ರಸ್ತಾಪ ಮಾಡಲೇನು?’
‘ಏನು ಹೇಳು, ಸರಳಾ.’
‘ನಾನಂತೂ ಈಗ ಗಂಡನಿಂದ ಪ್ರತ್ಯೇಕ ಇದ್ದೇನಿ. ಇನ್ನೊಂದು ವರ್ಷದಾಗ ನನಗ
ಡೈವೋರ್ಸ ಸಿಗತದ. ನಾವಿಬ್ಬರೂ ಯಾಕ ಮದುವಿ ಆಗಬಾರದು?’
ಸರಳಾ ಕಾಲೇಜಿನೊಳಗ ನನ್ನ ಕನಸಿನ ಕನ್ಯೆ ಆಗಿದ್ದಳು. ಈಗ ತಾನಾಗೇ ಪ್ರಪೋಜ್
ಮಾಡತಿದ್ದಾಳ. ನನ್ನ ಸಂತೋಷಕ್ಕ ಮೇರೆ ಇಲ್ಲಧಂಗಾತು. ಹೆಬ್ಬಟ್ಟನ್ನು ಮೇಲೆ ಮಾಡಿ ‘ಯೆಸ್’ ಅಂದೆ. ಸರಳಾ
ಫಳಕ್ಕನ ನಕ್ಕಳು. ವಿದ್ಯುದ್ವಳ್ಳಿವೆಳಗು ಮಿಂಚಿದಂತಾಯಿತು. ಸರಳಾಳ ಕಣ್ಣಿನಲ್ಲಿ ಮತ್ತೆ ಕಾಮನಬಿಲ್ಲು
ಕುಣೀತು. ಅದು ನನ್ನ ಕಣ್ಣಿನೊಳಗ ಪ್ರತಿಫಲನ ಆತು. ಕಾಮನಬಿಲ್ಲು ದೃಶ್ಯಭ್ರಮಾ ಅಂತೀರೇನು? ಊಹೂ. ಕಾಮನಬಿಲ್ಲಿನಷ್ಟು
ವಾಸ್ತವವಾದದ್ದು ಯಾವುದೂ ಇಲ್ಲ!