೧
ಬಲಗಾಲಲಿ ಬಿಡುಗಡೆಯನು ಮೆಟ್ಟಿ—ನಿಂತಿಹೆ ಎಲೆ ಕಾಳಿ !
ನಿನ್ನೆಡಗಾಲನು ನೆಕ್ಕುತಲಿಹುದು—ಶ್ವಾನ ಸೂಕರಾಳಿ !
ಭಯದಾಯಕ ಬಲಗೈಯನು ಚಾಚಿಹೆ !
ಶಾಪವ ಕೊಡಲೆಡಗೈಯನು ಎತ್ತಿಹೆ ಎಲೆಲೆ ರುದ್ರಕಾಳಿ !
ಮುಂದೆ ಬೀಸಿ ದುಃಶಾಸನ ಪಾಶವ
ಹಿಂದಿರಿಸಿಹೆ ದುರ್ಯೋಧನಾಂಕುಶವ ಅಹಹ ಮಹಾಕಾಳಿ !
ಮುಸುಕಿತು ಮುಸುಕಿತು ಮುಸುಕಿತು ನೋಡೇ
ನಿನ್ನ ಹೊಟ್ಟೆಯುರಿಂದಲೆದ್ದ ಹೊಗೆಯಿಂದ ನಿನ್ನ ಮೈಯು !
ಎಸೆವುದು ಎಸೆವುದು ಎಸೆವುದು ನೋಡೇ
ದಿಗಿಲುಗೊಳಿಸಿ ಭುಗಿಲೆಂದು ಎದ್ದ ಮೊಗದಲ್ಲಿ ಬಿಸಿಲ ಬೇಗೆ !
ಎದ್ದೆ ಎದ್ದೆ ನೀನೆದ್ದೆ !
ಜೀವ ತಿನ್ನುವಾ ಹಸಿವೆ ಮತ್ತೆ ನೆತ್ತರ ನೀರಡಿಕೆ
ಮೈಯ ತಾಳಿ ನೆಲದೆದೆಯ ಸೀಳಿ
ಎದ್ದಂತೆ ಪ್ರಳಯಕಾಳಿ !
ನಾಳಿನ ಬಲಿಗಳ ಗೋಳನು ಊಹಿಸೆ
ನಿನ್ನ ನಿನ್ನ ಆ ಉದ್ದ ಕಿವಿಗಳೂ ತಾವೇ ಬತ್ತಿದವು !
ಮುಂದಿನ ಸಾವಿನ ಗೊಂದಲ ಕಲ್ಪಿಸಿ
ನಿನ್ನ ನಿನ್ನ ಆ ಬಿರಿಗಣ್ಣುಗಳನು ನೀನೆ ಕಿತ್ತುಕೊಂಡೆ !
ಆರುವೆ ಎಂದು ? ಎಂದು ಆರುವೆ ?
ನೆಲದಗಲಕೆ ಮುಗಿಲುದ್ದಕೆ ಹೊತ್ತಿಹ ಎಲೆಲೆ ಬಂಜೆ ಬೆಂಕಿ !
ಪ್ರಳಯಕಾಳಿ ಏ ರುದ್ರಕಾಳಿ ಎಲೆ ಎಲೆಲೆ ಮಹಾಂಕಾಳಿ !
೨
ನಿಂದಿಹರಿದೊ ಇಗೊ !
ಎಕ್ಕಡ ಮೆಟ್ಟಿಹ ಎಕ್ಕಲ ಬಂಟರು
ಉಕ್ಕಡ ಗಾತ್ರದ ಉಕ್ಕಡದವರು
ಕಕ್ಕಡ ಹೊತ್ತಿಸಿ ಕಣ್ಣುಗಳಲ್ಲಿ
ಮಾಡಿಸೆ ಕೆನ್ನೀರ್ ಜಳಕವನು
ಏರಿಸಿ ರುಂಡದ ಹೂವುಗಳ
ಹಾಕಲು ಮದ್ದಿನ ಧೂಪವನು
ಬಾರಿಸೆ ಗುಂಡಿನ ಗಂಟೆಗಳ
ಬಂದಿತು ಬಂದಿತು ನೈವೇದ್ಯ
ನೀತಿಯ ಭೂತವೆ ಹೊರಡಿಲ್ಲಿಂದ
ದಯಯ ದೆವ್ವವೆ ನೀ ಹೊರಡು
ಕರುಳಿನ ಮರುಳೇ ಓಡಿಲ್ಲಿಂದ
ನ್ಯಾಯರಾಕ್ಷಸನೆ ನೀನೋಡು
ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು !
ಇದುವೆ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !
೩
ಮುಪ್ಪಿನ ತಾಯ್ಗಳೆ, ಹೊಟ್ಟೆಯ ಡೊಳ್ಳ
ಮುದಿ ತಂದೆಗಳೇ, ಕೈ ಕೈ ತಾಳ
ಬಡೆಯಿರಿ ಬಾರಿಸಿರಿ !
ಚಿಕ್ಕ ಮಕ್ಕಳೇ, ಚೀರು ಸನಾದಿಯ
ಅಕ್ಕ ತಂಗಿಯರೆ, ಅಳಿಲಿನ ಕೊಳಲ
ಊದಿರಿ, ಉಸಿರಿಸಿರಿ !
ಮಂಡೆ ಮೋಚಿದಾ ಹೆಂಡಿರ ದಂಡೇ
ವಿವಿಧಾಲಾಪ ಪ್ರಚಂಡ ಪ್ರಲಾಪದ
ಓಲಗ ಬಾಜಿಸಿರಿ !
ಬೊಬ್ಬೆಯ ಕುಟ್ಟಲೆ ಕರುಣಿಗಳರಸೇ !
ಮಾನವನೆಂಬಾ ನಿನ್ನೀ ಕುನ್ನಿಯು ಮಾಡಿದ ಮಾಟಕ್ಕೆ
ಇಂತಹ ಪಾಪಿಯ ಲೋಭಿಯ ಕೋಪಿಯ ಹುಟ್ಟಿಸಿದೇತಕ್ಕೆ !
೪
“ಮುಕ್ಕಣ್ಣನ ಆ ಮೂರೂ ಕಣ್ಣುಗಳು
ಕುರುಡೇ ಕುರುಡೇ ?
ಭೂ—ಶ್ರೀಪತಿಯಾ ನಾಲ್ಕೂ ಕೈಗಳು
ಮೊಂಡೇ ಮೊಂಡೇ !
ವೇದವುಸಿರಿದನ ನಾಲ್ಕೂ ಮುಖಗಳು
ಮೂಕೇ ಮೂಕೇ ?
ಅಮರರೆಂಬುವರು ಕೊಳೆಯದ ಹೆಣಗಳೊ ?
ಮುಚ್ಚದ ಕಣ್ಗಳು ಮುಚ್ಚಿದ ಕಣ್ಗಳೊ ?”
ಏನಿದು ಏನಿದು ಏನನ್ಯಾಯ ?
ಶಾಂತಂ ಪಾಪಂ ಒಳಿತೋ ಒಳಿತು
ದೇವಿಯ ಪೂಜೆಗೆ ಹೆಸರಿಡಬೇಕೇ ?
ಇಂತಹದೆಂದದು ತಾ ಕೆಡಬೇಕೇ ?
ನೆತ್ತರಹೇಡಿಯೆ, ಮುಚ್ಚೆಲೆ ಬಾಯ !
ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು !
ಇದುವೇ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !
೫
ಬಲವೆಂಬುದು ಇದು
ಬೆವರಿನ ಬಳ್ಳಿ
ಕಾಳಗವೆಂಬುದು ನೆತ್ತರ ಹೂವು
ಬಿಡುಗಡೆಯೆಂಬುದು
ಸಾವಿನ ಹಣ್ಣು
ಇನ್ನೂ ಇನ್ನೂ ಇನ್ನೂ ಇನ್ನೂ
ಪಂಚಮರಾದಿs ಪಂಚವರ್ಣವೇ
ಪುಟಿಸು ಪಾಂಚಜನ್ಯ !
ಭೂಮಿತಾಯಿಯೇ ಜ್ವಾಲಾಮುಖದಿಂದೂದು ಶಂಖವನ್ನು
ನಿಲ್ಲಲಿ ನಟರಾಜನ ನಾಟ್ಯ
ಭಂಗಪಡೆಯಲಿ ಬ್ರಹ್ಮಸಮಾಧಿ
ಹೋಗಲಿ ಹಾಲಿನ ಕಡಲಲಿ ಮಲಗಿದ
ದೇವನ ನಿದ್ದೆಯು ಹಾಳಾಗಿ !
ನೋಡಲಿ ನೋಡಲಿ ನೋಡಲಿ ಅವರು
ಮೂವರು ಕೂಡಿ, ರಚಿಸಿದ ಮೂರಾಬಟ್ಟೆಯ ನಾಟಕವ !
ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು !
ಇದುವೇ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !
೬
“ ಏನಿದು ಏನಿದು ಏನಿದು ” ಎಂದು
ದೇವರ ಜಂಗುಳಿ ಕಿರಿಚುವದೇಕೆ ?
ಇದು ಮಾನವತೆಯು ಮೊಳಗುವ ಕಾಲ !
ನಾಗರಿಕತೆಯೂ ಬೆಳಗುವ ಕಾಲ !
ಕ್ರೈಸ್ತನ ಬೋಧೆಯು ಉಬ್ಬಿಹ ಕಾಲ
ಬಿಳಿಛಾಯೆಯು ತಾ ಹಬ್ಬಿಹ ಕಾಲ !
ಜೀವದಯಾ ಸಂಘದ ಸುಳಿಗಾಲ !
ಹಿಂಸೆಯ ಕ್ರೌರ್ಯಕೆ ಇದು ಅಳಿಗಾಲ !
ಶಾಂತಿಪುರಾಣವ ಹೇಳುವ ಕಾಲ !
ಬುದ್ಧಚರಿತೆಯನು ಕೇಳುವ ಕಾಲ !
ಕೋಳಿಯ ಕೊಯ್ದರೆ ಕೆರಳುವರುಂಟು
ಕುರಿಯನು ಕೊಂದರೆ ಕೇಳುವರುಂಟು
ಕೋಣನ ಕಡಿದರೆ ಕಾಯುವರುಂಟು
ಗುಬ್ಬಿ ಮಾನವನ,
ಕೊಯ್ದರು, ಕೊಂದರು, ಕಡಿದರು ಏನು ?
ಕೊಂದನು ಆತನು ತನ್ನನೆ ತಾನು
ಸ್ವಾರ್ಥತ್ಯಾಗವಿದಾತ್ಮಹುತಿಯಿದು
ನರಬಲಿ ನರಮೇಧವು ಕೇಳು
ಅಶ್ವಮೇಧಕೂ ಸರಿಮೇಲು
ಇದುವೆ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !
ಬ್ರಿಟಿಶರು ಭಾರತವನ್ನು ಆಳುತ್ತಿದ್ದ ಕಾಲ. ತಮ್ಮ ಔದ್ಯೋಗಿಕ ಹಾಗು ಆರ್ಥಿಕ ಪ್ರಗತಿಗಾಗಿ ಬ್ರಿಟಿಶರು ಭಾರತೀಯರ ನೆತ್ತರನ್ನು ಹೀರಿದರು. ಯುದ್ಧಕಾಲದಲ್ಲಿ ಬ್ರಿಟಿಶ್ ಸೈನ್ಯಕ್ಕೆ ಆಹಾರ ಪೂರೈಸುವ ಸಲುವಾಗಿ, ಭಾರತದಲ್ಲಿ ಕೃತಕ ಆಹಾರ ಅಭಾವ ಸೃಷ್ಟಿಯಾಯಿತು. ಇದನ್ನೇ ಬೇಂದ್ರೆಯವರು ತಮ್ಮ ‘ತುತ್ತಿನ ಚೀಲ’ ಕವನದಲ್ಲಿ ಹೀಗೆ ಹೇಳಿದ್ದಾರೆ:
“ಕಿಕ್ಕಿರಿ ತುಂಬಿದೆ ಭೂಮಿಯ ಕಣಜ
ಕಕ್ಕಸ ಬಡುತಿದೆ ಬೊಕ್ಕಸದೊಡಲು
ಬಾಳಿಗಿಂತಲೂ ಕೂಳೇ ಮೇಲೊ?
ಬರಿದೊ ಬರಿದು ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲಾ.”
ಭೂಮಿಯ ಮೇಲೆ ಎಲ್ಲಿಯೂ ಆಹಾರದ ಅಭಾವವಿಲ್ಲ ಎಂದು ಹೇಳುತ್ತಲೆ, ‘ಕಕ್ಕಸಬಡುತಿದೆ ಬೊಕ್ಕಸದೊಡಲು’
ಎಂದು ಹೇಳುವ ಮೂಲಕ ಬೇಂದ್ರೆಯವರು ಬ್ರಿಟಿಶ್ ಸರಕಾರದ ನೀತಿಯನ್ನು ಎಷ್ಟು ಕಟುವಾಗಿ ಟೀಕಿಸಿದ್ದಾರೆ ಎನ್ನುವುದನ್ನು ಗಮನಿಸಬೇಕು.
ಭಾರತೀಯರ ಈ ಸ್ಥಿತಿಗೆ ನಮ್ಮ ಪರಾಧೀನತೆಯೆ ಕಾರಣ ಎನ್ನುವುದು ಸುಸ್ಪಷ್ಟವಾಗಿತ್ತು. ಲೋಕಮಾನ್ಯ ತಿಲಕರು ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂದು ಬ್ರಿಟಿಶ್ ನ್ಯಾಯಾಧೀಶರ ಎದುರಿಗೆ ಗರ್ಜಿಸಿದರೆ, ಗಾಂಧೀಜಿಯವರು ಚಲೇಜಾವ್ ಚಳುವಳಿಯನ್ನು ಪ್ರಾರಂಭಿಸಿದರು. ಸುಭಾಸಚಂದ್ರ ಬೋಸರಂತೂ, ‘ಆಝಾದ ಹಿಂದ’ ಸೈನ್ಯವನ್ನು ಕಟ್ಟಿ ಬ್ರಿಟಿಶರ ವಿರುದ್ಧ ಯುದ್ಧವನ್ನೇ ಸಾರಿದರು.
ಈ ಹೋರಾಟವೆಲ್ಲ ಯಾತಕ್ಕಾಗಿ?
‘ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು !
ಇದುವೆ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !’
ಬ್ರಿಟಿಶರ ತಾಮಸೀ ಶಕ್ತಿಯನ್ನು ಬೇಂದ್ರೆಯವರು ರುದ್ರಕಾಳಿಗೆ ಹೋಲಿಸಿ ರಚಿಸಿದ ಕವನ ‘ನರಬಲಿ’. ಈ ರುದ್ರಕಾಳಿಯ ಬಲಗಾಲಿನ ಬುಡದಲ್ಲಿ ನಮ್ಮ ಬಿಡುಗಡೆಯು ಅಂದರೆ ಭಾರತೀಯರ ಸ್ವಾತಂತ್ರ್ಯವು ಸಿಕ್ಕು ನರಳುತ್ತಿದೆ. ಈ ತಾಮಸೀ ಶಕ್ತಿಗೆ ನಾವು ನರಬಲಿಯನ್ನು ಅಂದರೆ ನಮ್ಮ ಆತ್ಮಾಹುತಿಯನ್ನು ನೀಡಿದರೆ ಮಾತ್ರ, ನಮ್ಮ ಸ್ವಾತಂತ್ರ್ಯವನ್ನು ನಾವು ಮರಳಿ ಪಡೆಯಲು ಸಾಧ್ಯ. ಇದು
ಈ ಕವನದ ಉದ್ಘೋಷ.
ಬೇಂದೆಯವರು ‘ನರಬಲಿ’ ಕವನವನ್ನು ಆರು ಖಂಡಗಳಲ್ಲಿ ರಚಿಸಿದ್ದಾರೆ. ಕ್ಷುದ್ರಾಚಾರಿಗಳು ದೇವಿಗೆ ಪ್ರಾಣಬಲಿಯನ್ನು ಕೊಡುವುದು ಸಹಜ. ಕೆಲವೊಂದು ವಿಶೇಷ ಸಿದ್ಧಿಗಳಿಗಾಗಿ ನರಬಲಿಯನ್ನು ಕೊಡುವುದೂ ಉಂಟು. ಇಂತಹ ಒಬ್ಬ ಭೀಕರ ರುದ್ರಕಾಳಿ ದೇವಿಯ ಮೊದಲ ನೋಟವನ್ನು ಬೇಂದ್ರೆಯವರು ಮೊದಲ ಖಂಡದಲ್ಲಿ ನೀಡಿದ್ದಾರೆ.
ರುದ್ರಕಾಳಿಯ ಪೂಜೆ ಕರ್ನಾಟಕದಲ್ಲಿ ಬಹುಶಃ ಇಲ್ಲವೇ ಇಲ್ಲ. ಆದರೆ ಈ ಕಾಳಿಯ ಚಿತ್ರವು ಸಾಕಷ್ಟು ಸಾರ್ವತ್ರಿಕವಾಗಿದೆ.
ಕೊರಳಲ್ಲಿ ರುಂಡಮಾಲೆ, ಒಂದು ಕೈಯಲ್ಲಿ ನರಕಪಾಲ, ಉಗ್ರವಾಗಿ ಹೊರತೆಗೆದ ನಾಲಗೆ ಹಾಗು ಬಲಗಾಲಿನ ಅಡಿಯಲ್ಲಿ ಒಂದು ಪುರುಷಾಕೃತಿ ಇವು ಈ ಚಿತ್ರದ ಪ್ರಮುಖ ವಿವರಗಳು.
ಈ ಪುರುಷಾಕೃತಿಯು ಕಾಳಿಯಿಂದ ಸೋತು ಹೋದ ಒಬ್ಬ ರಾಕ್ಷಸನದು.
‘ನರಬಲಿ’ ಕವನದಲ್ಲಿ ಕಾಳಿಯ ಅಡಿಯಲ್ಲಿ ಸಿಕ್ಕು ನರಳುತ್ತಿರುವ ಆಕೃತಿ ರಾಕ್ಷಸನದಲ್ಲ. ಇದು ನಮ್ಮ ‘ಬಿಡುಗಡೆ’ ಅರ್ಥಾತ್ ಭಾರತದ ಸ್ವಾತಂತ್ರ್ಯಪುರುಷನದು. ಆದರೆ ಈ ತಾಮಸೀದೇವಿಯ ಸ್ತುತಿಪಾಠಕರು ಹಾಗು ಅವಳಿಂದ ಪ್ರಯೋಜನ ಪಡೆಯುತ್ತಿರುವವರು ಯಾರು? ಬೇಂದ್ರೆಯವರು ಅವರನ್ನು ‘ಶ್ವಾನಸೂಕರಾಳಿ’
ಎಂದು ಕರೆದಿದ್ದಾರೆ. ಈ ಶ್ವಾನ ಹಾಗು ಸೂಕರಗಳ ಅಳಿ
ಎಂದರೆ ನಾಯಿ ಹಾಗು ಹಂದಿಗಳ ಗುಂಪುಗಳು ದೇವಿಯ ಎಡಗಾಲನ್ನು ನೆಕ್ಕುತ್ತಿವೆ. ಯಾರನ್ನು ಪ್ರತಿನಿಧಿಸುತ್ತವೆ ಈ ಪಶುಗಳು? ಭಾರತವನ್ನು ಹಂತಹಂತವಾಗಿ ಆಕ್ರಮಿಸಿಕೊಂಡು, ಭಾರತೀಯರನ್ನು ಶೋಷಿಸಿದ ಬ್ರಿಟಿಶ್ ಆಳರಸರೇ ಈ ಹಂದಿಗಳು ಹಾಗು ನಾಯಿಗಳು…‘ಶ್ವಾನಸೂಕರಾಳಿ’!
ಇಷ್ಟು ಪ್ರಥಮ ಪರಿಚಯವನ್ನು ನೀಡಿದ ಬೇಂದ್ರೆಯವರು, ಇನ್ನು ಈ ರುದ್ರಕಾಳಿಯ ವಿಗ್ರಹದ ಚಿತ್ರಣವನ್ನು ಕೊಡುತ್ತಾರೆ:
ಯಾವುದೇ ಪ್ರಸನ್ನ ದೇವತಾವಿಗ್ರಹವನ್ನು ನೋಡಿದಾಗ ಕಾಣುವದೇನು? ಬಲಗೈಯನ್ನು ಮೇಲೆಕ್ಕೆತ್ತಿ ದೇವತೆಯು ಭಕ್ತರಿಗೆ ಅಭಯವನ್ನು ನೀಡುತ್ತಿದೆ.
ಎಡಗೈಯನ್ನು ಅಧೋಮುಖ ಮಾಡಿ, ನತಮಸ್ತಕರಾಗಿ ನಿಂತುಕೊಂಡ ಭಕ್ತರಿಗೆ ವರಗಳನ್ನು ಪ್ರಸಾದಿಸುತ್ತಿದೆ. ಕೆಲವೊಮ್ಮೆ ನಾಲ್ಕು ಕೈಗಳ ದೇವತೆ ಇರಬಹುದು. ಆಗ ಇನ್ನುಳಿದ ಎರಡು ಕೈಗಳಲ್ಲಿ ಅಕ್ಷಮಾಲೆ ಹಾಗು ಕಮಲ ಇರಬಹುದು. ಆದರೆ ಈ ಭೀಕರ ದೇವತೆಯ ಕೈಗಳಲ್ಲಿ ಇರುವದೇನು?
ಬಲಗೈಯಿಂದ ಅಭಯಮುದ್ರೆಯನ್ನು ತೋರಿಸುವ ಬದಲಾಗಿ, ಇವಳು ಭಯವನ್ನು ಹುಟ್ಟಿಸುವಂತೆ ಬಲಗೈಯನ್ನು ಚಾಚಿದ್ದಾಳೆ. ಶಾಪವನ್ನು ಕೊಡಲೆಂದೇ ಎಡಗೈಯನ್ನು ಎತ್ತಿ ಹಿಡಿದಿದ್ದಾಳೆ. ಮುಂದಿನ ಮತ್ತೊಂದು ಕೈಯಲ್ಲಿ ಪಾಶವನ್ನು ಹಿಡಿದುಕೊಂಡಿದ್ದಾಳೆ.
ಆದರೆ ಇದು ದುಷ್ಟರನ್ನು ಶಿಕ್ಷಿಸುವ ಪಾಶವಲ್ಲ. ಇದು ‘ದುಃ+ಶಾಸನ’ ಪಾಶ. ಅಂದರೆ ನಿರಂಕುಶ ಪ್ರಭುತ್ವದ ದಬ್ಬಾಳಿಕೆಯ ಪಾಶ. ಇದರ ಹಿಂದಿನ ಕೈಯಲ್ಲಿ ಇರುವುದು ದುರ್ಯೋಧನನ ಅಂಕುಶ. ಪ್ರಜೆಗಳನ್ನು ಕ್ರೂರವಾಗಿ ನಲುಗಿಸುವ, ಅವರನ್ನು ತಮ್ಮ ಅಂಕುಶದಿಂದ ತಿವಿದು ಹಿಡಿತದಲ್ಲಿ ಇಟ್ಟುಕೊಳ್ಳುವ ಕೌರವ ಆಡಳಿತ, ರೌರವ ಆಡಳಿತ.
ಯಾವುದೇ ದೇವತೆಯು ಜನುಮವೆತ್ತಿ ಬರಲು ಒಂದು ಯಜ್ಞ ಆಗಬೇಕಲ್ಲವೆ? (--ವಿಶಿಷ್ಟ ಉದ್ದೇಶಕ್ಕಾಗಿ ಉದ್ಭವಿಸುವ ದೇವತೆಗಳು ಯಜ್ಞಕುಂಡದಲ್ಲಿ
ಮೈದಾಳುತ್ತಾರೆ. ಉದಾಹರಣೆಗೆ ದಶರಥನ ಪುತ್ರಕಾಮೇಷ್ಟಿ ಯಜ್ಞ ಇತ್ಯಾದಿ--)
ಯಜ್ಞಕ್ಕಾಗಿ ರಚಿಸಿದ ಹೋಮಕುಂಡದಲ್ಲಿ ಮಂತ್ರಪೂತ ಅಗ್ನಿ ಬೇಕಲ್ಲವೆ? ಆ ಅಗ್ನಿಯನ್ನು ಗೃಹಿಣಿಯು ಸ್ವತಃ ತಾನೇ ಹೊತ್ತಿಸಿಕೊಂಡು ಬರಬೇಕು. ಆದರೆ ಈ ಅಗ್ನಿಯನ್ನು ಈ ದೇವತೆಯು ತನ್ನ ಹೊಟ್ಟೆಯುರಿಯಿಂದಲೇ ಸ್ವತಃ ಹೊತ್ತಿಸಿ ನೀಡುತ್ತಿದ್ದಾಳೆ! ಆ ಉರಿಯಲ್ಲಿ ಅಗ್ನಿಗಿಂತ ಕಣ್ಣುರಿಸುವ ಹೊಗೆಯೇ ಅಧಿಕವಾಗಿದ್ದು, ಎಲ್ಲೆಡೆಯೂ ತುಂಬಿಕೊಂಡಿದೆ.
(ಈ ಸಂದರ್ಭದಲ್ಲಿ ವಿನಾಯಕ ಗೋಕಾಕರು ಬರೆದ ವಿಷಾದಕವನದ ಒಂದು ನುಡಿಯು ನೆನಪಾಗುತ್ತಿದೆ:
“ಹೋಮಕುಂಡದಲಿ ಧೂಮವೆದ್ದಿದೆ
ಎಂಥ ಯಜ್ಞಶಾಲೆ;
ಇಲ್ಲ ಕೋಲ್ಮಿಂಚು, ಇಲ್ಲ ಸೆಳೆಮಿಂಚು,
ಬರಿಯ ಮೇಘಮಾಲೆ.”)
ಈ ಹೊಗೆಯ ನಡುವೆ, ಈ ದೇವಿಯ ಮುಖ ಮಿಂಚುತ್ತಿದೆ; ಹೇಗೆ? ಇದು ಸಫಲ ಆರಾಧಕರನ್ನು ಸಂತುಷ್ಟಗೊಳಿಸುವ ಬೆಳಕಲ್ಲ. ನೋಟಕರನ್ನು ಹೆದರಿಸುತ್ತ, ಭುಗಿಲ್ ಎಂದು ಮೇಲೆದ್ದ ಆ ಮೊಗದಲ್ಲಿ ಇರುವುದು ರಣರಣ ಬಿಸಿಲಿನ ಬೇಗೆ; ಇದು ನೋಡುಗರನ್ನು ಸುಡುವ ಬೇಗೆ.
ಈಗ ಈ ವಿಗ್ರಹವು ಹೋಮಕುಂಡದಿಂದ ಮೇಲೆಳುತ್ತದೆ. ಎದ್ದ ತಕ್ಷಣ ಇದಕ್ಕೆ ಆಗುತ್ತಿರುವುದು ಭಯಂಕರ ಹಸಿವೆ. ಈ ಹಸಿವೆಯನ್ನು ಹಿಂಗಿಸಲು ಇದಕ್ಕೆ ಬೇಕಾಗುವುದು ಸಜೀವ ಮನುಷ್ಯರು.
ಇದರ ನೀರಡಿಕೆಯನ್ನು ಹಿಂಗಿಸಲು ಬೇಕಾಗುವುದು ಈ ಮನುಷ್ಯರ ರಕ್ತ! ಈ ಭೀಕರ ದೇವತೆಗೆ ದೇಹವೊಂದು ದೊರೆತ ಕ್ಷಣದಲ್ಲಿ ಅದು ಉದ್ಭವಮೂರ್ತಿಯಂತೆ ನೆಲದೆದೆಯನ್ನು ಸೀಳಿ, ಪ್ರಳಯಕಾಳಿಯಂತೆ ಮೇಲೇಳುತ್ತದೆ.
ಭೂತಾಯಿಯ ಹೊಟ್ಟೆಯನ್ನೇ ಹರಿದು ಮೇಲೇಳುವ ಈ ತಾಮಸೀ ಶಕ್ತಿಯ ಎಷ್ಟು ಭೀಕರವಾಗಿರಬೇಡ!
(ಈ ಸಂದರ್ಭದಲ್ಲಿ ಮತ್ತೆ ಒಂದು ಅಜ್ಜಿಯ ಕಥೆ ನೆನಪಾಗುತ್ತಿದೆ: ಒಬ್ಬ ಅರಸಿಯ ಗರ್ಭದಲ್ಲಿ ಒಂದು ರಾಕ್ಷಸ ಸೇರಿಕೊಳ್ಳುತ್ತದೆ. ಅದು
ಹುಟ್ಟಿದ ತಕ್ಷಣ ಕೂಗಿಕೊಳ್ಳುತ್ತದೆ: ನನಗೆ ಹಸಿವು; ನಾನು ಯಾರನ್ನು ತಿನ್ನಲಿ?)
ಈ ಕ್ರೂರ ದೇವತೆಯ ದೇಹವೇ ಹೀಗಿದ್ದರೆ, ಮನಸ್ಸು ಎಷ್ಟು ಕ್ರೂರವಾಗಿರಬೇಡ? ತಾನು ನಾಳೆ ತಿನ್ನುವ ಬಲಿಗಳ ಗೋಳನ್ನು ಕಲ್ಪಿಸಿಕೊಳ್ಳಲೆಂದು, ಇದು
ತನ್ನ ಕಿವಿಗಳನ್ನು ಉದ್ದ ಚಾಚಿ, ಚಾಚಿ, ಗೋಳನ್ನು ಕೇಳಿ ಕೇಳಿ, ಆ ಕಿವಿಗಳು ತಾವೇ ಬತ್ತಿ ಹೋದವು. ತನಗೆ ಬಲಿ ಬೀಳುವ ಸಾವುಗಳನ್ನು ಊಹಿಸಿ, ಇನ್ನಿಷ್ಟು ನೋಡಲೆಂದು, ಈ ದೇವತೆಯು ತನ್ನ ಬಿರಿಗಣ್ಣುಗಳನ್ನು ತಾನೇ ಕಿತ್ತುಕೊಂಡು ನೋಡತೊಡಗಿದೆ.
ಉರಿಯುತ್ತಿರುವ ಈ
ತಾಮಸೀ ಮೂರ್ತಿಯ ಕ್ರೌರ್ಯವನ್ನು ಕಂಡ ಅಸಹಾಯಕರು ಆರ್ತರಾಗಿ ಒರಲುತ್ತಿದ್ದಾರೆ: ‘ ನೀ ಎಂದು ಆರುವೆ? ಎಂದು ತಣ್ಣಗಾಗುವೆ?’ ಈ ತಾಮಸೀ ಶಕ್ತಿಯು ನಮ್ಮ ನೆಲದ ಒಂದು ಮೂಲೆಗೆ ಸೀಮಿತವಾಗಿಲ್ಲ.
ಕಣ್ಣು ದಾಟುವಷ್ಟು ನೆಲವನ್ನೆಲ್ಲ ಇದರ ಉರಿ ವ್ಯಾಪಿಸಿದೆ. ಕಣ್ಣು ಕಾಣದಷ್ಟು ಮುಗಿಲಿಗೆ ಇದು ಚಾಚಿಕೊಂಡಿದೆ. ಬೇಂದ್ರೆಯವರು ಈ ಬೆಂಕಿಯನ್ನು ‘ಬಂಜೆಬೆಂಕಿ’ ಎಂದು ಕರೆಯುತ್ತಿದ್ದಾರೆ. ಹೋಮಕುಂಡದ ಬೆಂಕಿಯಂದರೆ ಯಾಜ್ಞಿಕರ ಆಶಯಗಳನ್ನು ಸಫಲಗೊಳಿಸುವ ಅಗ್ನಿದೇವತೆ. ಪಾಕಶಾಲೆಯಲ್ಲಿಯ ಬೆಂಕಿಯು ಆಹಾರವನ್ನು ಬೇಯಿಸುವ ಬೆಂಕಿ. ಆದರೆ ಈ ತಾಮಸೀ ಶಕ್ತಿಯ ಬೆಂಕಿಯು ಸುಫಲಗಳನ್ನು ಕೊಡುವ ಬೆಂಕಿಯಲ್ಲ. ಇದು ಎಲ್ಲವನ್ನೂ ಸುಟ್ಟುಹಾಕುವ ಬೆಂಕಿ. ಜನರನ್ನು ನಿರ್ಬೀಜಗೊಳಿಸುವ ಬೆಂಕಿ. ಆದುದರಿಂದ ಬೇಂದ್ರೆಯವರು ಇದನ್ನು ‘ಬಂಜೆಬೆಂಕಿ’ ಎಂದು ಕರೆಯುತ್ತಿದ್ದಾರೆ.
--೨—
ದೇವತಾಮೂರ್ತಿಯು ಉದ್ಭವಿಸಿದ
ನಂತರ, ಅದಕ್ಕೆ ಪಂಚೋಪಚಾರಗಳು ಆಗಬೇಕಲ್ಲವೆ? ಆದುದರಿಂದ ಎರಡನೆಯ ಖಂಡದಲ್ಲಿ ನೆಲದಾಯಿಯ ಹೊಟ್ಟೆಯನ್ನು ಬಗೆದು ಉದ್ಭವಗೊಂಡ ತಾಮಸೀಶಕ್ತಿಯ ಪಂಚೋಪಚಾರ ಪೂಜೆಯನ್ನು ಬೇಂದ್ರೆಯವರು ವರ್ಣಿಸಿದ್ದಾರೆ.
ದೇವತಾಪೂಜೆ ಮಾಡುವವನು ತನ್ನ ಮೂರು ದೇಹಗಳನ್ನು (-ಸ್ಥೂಲದೇಹ, ಸೂಕ್ಷ್ಮದೇಹ ಹಾಗು ಕಾರಣದೇಹಗಳನ್ನು) ಜಲಸ್ನಾನ ಹಾಗು ಮಂತ್ರಸ್ನಾನಗಳಿಂದ ಶುದ್ಧಗೊಳಿಸಿಕೊಳ್ಳಬೇಕು. ದೇವತೆಗೆ ಮೊದಲು ಕಾಕಡಾರತಿ ಎಂದರೆ ಬೆಳಗಿನ ದೀಪಾರಾಧನೆ ಮಾಡಿ, ಬಳಿಕ ಅಭಿಷೇಕಸ್ನಾನವನ್ನು ಮಾಡಿಸಬೇಕು,
ಆಬಳಿಕ ಪುಷ್ಪಾರ್ಚನೆ ಮಾಡಬೇಕು, ಸುಗಂಧಿತ ಧೂಪವನ್ನು ಅರ್ಪಿಸಬೇಕು, ಘಂಟಾನಾದವನ್ನು ಮಾಡಬೇಕು. ಕೊನೆಗೆ ನೈವೇದ್ಯವನ್ನು ತೋರಿಸಬೇಕು. ಇದು ದೇವಿಗೆ ಮಾಡಬೇಕಾದ ಪಂಚೋಪಚಾರಗಳು.
ಆದರೆ ಇಲ್ಲಿ ನಡೆಯುತ್ತಿರುವದೇನು?
‘ಎಕ್ಕಡ ಮೆಟ್ಟಿಹ ಎಕ್ಕಲ ಬಂಟರು’: ಎಕ್ಕಡ ಅಂದರೆ ಪಾದರಕ್ಷೆ. ಎಕ್ಕಲ ಅಂದರೆ ದೈತ್ಯಾಕಾರದವರು. ಈ ದೈತ್ಯದೇಹಿ ಪುಂಡರು ಪೂಜಾಸ್ಥಾನದಲ್ಲಿ ಎಕ್ಕಡಗಳನ್ನು ಧರಿಸಿಕೊಂಡೇ ಪೂಜೆಯನ್ನು ನಡೆಸುತ್ತಿದ್ದಾರೆ. ಇದು ನಿಷಿದ್ಧ; ಪೂಜೆಯ ಪಾವಿತ್ರ್ಯ ಇಲ್ಲಿಯೇ ನಷ್ಟವಾಯಿತು; ಅಥವಾ ತಾಮಸೀ ಶಕ್ತಿಗೆ
ಇಂತಹ ಪೂಜೆಯೇ ಸಮಂಜಸವೇನೊ?
ಉಕ್ಕಡ ಅಂದರೆ ಬಾವಿಯಿಂದ ನೀರು ಮೇಲೆತ್ತುವಾಗ ಕೊಡಕ್ಕೆ ಕಟ್ಟುವ ದಪ್ಪಳತೆಯ ಹಗ್ಗ. ಇಂತಹ ಹಗ್ಗವನ್ನು ಹಿಡಿದುಕೊಳ್ಳುವ ಸೇವಕರಿಗೆ ಉಕ್ಕಡದವರು ಎನ್ನಲಾಗುತ್ತದೆ.
ಈ ಉಕ್ಕಡಕ್ಕೆ ಮತ್ತೂ ಒಂದು ಅರ್ಥವಿದೆ. ಗಲ್ಲಿನ ಶಿಕ್ಷೆಗೆ ಗುರಿಯಾದ ಅಪರಾಧಿಗೆ ನೇಣು ಹಾಕುವಾಗ, ‘ಉಕ್ಕಡ ಗಾತ್ರದ’ ಹಗ್ಗವನ್ನೇ ಬಳಸುತ್ತಾರೆ!
(ಟಿಪ್ಪಣಿ: ಹರಿಹರ ತಾಲೂಕಿನಲ್ಲಿ ‘ಉಕ್ಕಡಗಾತ್ರಿ’ ಎನ್ನುವ ಊರೊಂದಿದೆ. ದೆವ್ವ ಬಿಡಿಸುವ ಕ್ರಿಯೆಗೆ ಈ ಊರು ಪ್ರಸಿದ್ಧವಾಗಿದೆ. ದೆವ್ವ ಹಿಡಿದವರನ್ನು ಇಲ್ಲಿ ಕರೆದುಕೊಂಡು ಬಂದು, ದೆವ್ವವನ್ನು ಓಡಿಸುವ ಕ್ರಿಯೆಗೆ ಒಳಪಡಿಸುತ್ತಾರೆ. ಆದುದರಿಂದ ಈ ತಾಮಸೀ ಶಕ್ತಿಯು ದೆವ್ವದ ಅಪರಾವತಾರ ಎಂದು ‘ಉಕ್ಕಡ’ದ ಮೂಲಕ ಬೇಂದ್ರೆಯವರು ಸೂಚಿಸುತ್ತಿದ್ದಾರೆ. )
ಕಕ್ಕಡ ಎನ್ನುವ ಕನ್ನಡ ಪದವು ಮರಾಠಿಯಲ್ಲಿ ‘ಕಾಕಡಾ’ ಎಂದಾಗಿದೆ. ಆದುದರಿಂದ ಬೆಳಗಿನ ದೀಪಾರಾಧನೆಗೆ ‘ಕಾಕಡಾರತಿ’ ಎಂದು ಹೇಳುತ್ತಾರೆ. ಆದರೆ ‘ಕಕ್ಕಡ’ ಪದಕ್ಕೆ ಕನ್ನಡದಲ್ಲಿ ‘ಪಂಜು’ ಎನ್ನುವ ಅರ್ಥವೂ ಇದೆ. ದೇವಿಗೆ ಕಾಕಡಾರತಿ ಮಾಡುವ ಈ ಬಂಟರು ತಮ್ಮ ಕಣ್ಣುಗಳಲ್ಲಿ ಉರಿಯುವ ಪಂಜುಗಳಿಂದಲೇ ದೇವಿಗೆ ಬೆಳಗಿನ ಕಾಕಡಾರತಿಯನ್ನು ಮಾಡುತ್ತಿದ್ದಾರೆ.
ಪಂಚೋಪಚಾರದ ಕ್ರಿಯಾವಿಧಿಗಳಲ್ಲಿ ಈಗ ಬರುವುದು ಅಭಿಷೇಕ ಸ್ನಾನ. ಈ ತಾಮಸೀ ಶಕ್ತಿಗೆ ಸಾಧಾರಣ ನೀರಿನಿಂದ ಸ್ನಾನ ಮಾಡಿಸಬಹುದೆ? ಅವಳಿಗೆ ಬೇಕು, ರಕ್ತಾಭಿಷೇಕ! ಅಲ್ಲಿ ಕಡಿದೊಗೆದ ರುಂಡಗಳಿಂದಲೇ ಅವಳಿಗೆ ಪುಷ್ಪಾರ್ಚನೆಯಾಗಬೇಕು. ಈ ರುಂಡಗಳು ಪ್ರಾಣಿಬಲಿಯ ರುಂಡಗಳಲ್ಲ; ಇವು ನರಕಪಾಲಗಳು.
ನಾಲ್ಕನೆಯ ಉಪಚಾರವೆಂದರೆ ಧೂಪಾರಾಧನೆ. ಬಂದೂಕು ಹಾಗು ತೋಪುಗಳಿಂದ ಹಾರಿಸಿದ ಮದ್ದಿನಿಂದಲೇ ಈ ಶಕ್ತಿಗೆ ಧೂಪಾರಾಧನೆಯನ್ನು ಮಾಡಲಾಗುತ್ತಿದೆ. ಕೊನೆಯದಾಗಿ ಘಂಟಾನಾದ. ಗುಂಡುಗಳ ಸಪ್ಪಳವೇ ಇಲ್ಲಿ ಘಂಟಾನಾದ. ಈ ಎಲ್ಲ ಪಂಚೋಪಚಾರಗಳು ಮುಗಿದ ನಂತರ, ಕಾಳಿಗೆ ಈಗ ನೈವೇದ್ಯ ತೋರಿಸಬೇಕು. ಎಡೆ ಮಾಡುವ ಸಮಯದಲ್ಲಿ ಪೂಜಾರಿಯ ಹೊರತಾಗಿ ಅಲ್ಲಿ ಯಾರೂ ಇರುವದಿಲ್ಲ. ಆದುದರಿಂದ, ಅಲ್ಲಿ ನೆರೆದವರನ್ನು ಅಲ್ಲಿಂದ ಹೊರದೂಡಲಾಗುತ್ತಿದೆ. ಅಲ್ಲಿ ನೆರೆದವರು ಯಾರು?
ನೀತಿಯ ಭೂತ, ದಯೆಯ ದೆವ್ವ, ಕರುಳಿನ ಮರುಳು, ನ್ಯಾಯರಾಕ್ಷಸ ಇವರೇ ಅಲ್ಲಿ ನೆರೆದ ಭಕ್ತಗಣಗಳು. ಬೇಂದ್ರೆಯವರು, ಕಾಳಿಯನ್ನು ಸುತ್ತುವರಿದ ಭಕ್ತರೆಲ್ಲ ಅನೀತಿ, ನಿರ್ದಯೆ,
ನಿರ್ಮಮತೆ ಹಾಗು ಅನ್ಯಾಯ ಎಂದು ಹೇಳುವ ಬದಲಾಗಿ ಭೂತ, ದೆವ್ವ, ಮರುಳು, ರಾಕ್ಷಸ ಎನ್ನುವ ಪದಗಳನ್ನು ಬಳಸುತ್ತಾರೆ. ವರಕವಿಯ ಕ್ರಮಬದ್ಧತೆಯ ಬದ್ಧತೆಯನ್ನು ನಾವು ಇಲ್ಲಿ ಗಮನಿಸಬಹುದು: ಭೂತ, ದೆವ್ವ, ಮರುಳು ಹಾಗು ರಾಕ್ಷಸ ಇವು ಕ್ರಮವಾಗಿ ಹೆಚ್ಚೆಚ್ಚು ಸಾಮರ್ಥ್ಯವುಳ್ಳ ತಾಮಸ ಶಕ್ತಿಗಳು.
ಕೊನೆಯದಾಗಿ ಕಾಳಿಗೆ ಕೊಡಬೇಕಾದ ನೈವೇದ್ಯ ಯಾವುದು?.......
ನರಬಲಿ! ನರಬಲಿಯಿಂದ ಮಾತ್ರ ಕಾಳೀದೇವಿಯು ಪ್ರಸನ್ನಳಾಗುವಳು. ಅವಳು ಕೊಡುವ ಫಲ ಯಾವುದು: ತನ್ನ ಬಲಗಾಲಿನ ಬುಡದಲ್ಲಿ ಸಿಕ್ಕು ನರಳುತ್ತಿರುವ ‘ಬಿಡುಗಡೆ’ ಅಂದರೆ ಭಾರತದ ಸ್ವಾತಂತ್ರ್ಯ!
ಈ ರೀತಿಯಾಗಿ ಕಾಳೀದೇವಿಯನ್ನು ಒಲಿಸಿಕೊಳ್ಳುವದೇ ಸರಿಯಾದ ಪೂಜಾವಿಧಾನ. ಆದರೆ ಇದನ್ನು ತಿಳಿಯದ ಮೂಢರು, ‘ಯಾಕಪ್ಪಾ,
ಬ್ರಿಟಿಶ್ ಸರಕಾರದಂತಹ ಮಹಾಶಕ್ತಿಯೊಡನೆ ‘ಯುದ್ಧ’ ಮಾಡುತ್ತೀ?’ ಎನ್ನುತ್ತಾರೆ.
ಸುಭಾಸಚಂದ್ರ ಬೋಸರ ಸೈನಿಕ ಯುದ್ಧವೇ ಆಗಲಿ ಅಥವಾ ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿಯೇ ಆಗಲಿ, ಇವೆಲ್ಲ ಯುದ್ಧಗಳೇ. ನೇರ ಕಾಳಗದಲ್ಲಿ ಸೈನಿಕರು ಗುಂಡು ತಿಂದು ಸತ್ತರೆ, ಅಹಿಂಸಾತ್ಮಕ ಚಳುವಳಿಯಲ್ಲಿ ಪೋಲೀಸರ ಲಾಠೀ ಏಟುಗಳಿಗೆ ಬಲಿಯಾದವರೆಷ್ಟೊ? ಆಸ್ತಿಪಾಸ್ತಿಗಳನ್ನು ಕಳಕೊಂಡವರೆಷ್ಟೊ? ಸೆರೆಮನೆಗಳಲ್ಲಿ ಕೊಳೆತವರೆಷ್ಟೊ? ಇವೆಲ್ಲವೂ ಭಾರತೀಯರ ಆತ್ಮಾಹುತಿಯ ದಿವ್ಯ ನಿದರ್ಶನಗಳು. ಇವೆಲ್ಲ ನರಬಲಿಗಳೇ ಸೈ.
--೩—
ಪೂಜೆಯು ನಡೆಯುತ್ತಿರುವ ಸಮಯದಲ್ಲಿ, ಡೊಳ್ಳು, ತಾಳ, ಸನಾದಿ ,ಕೊಳಲು ಮೊದಲಾದ ವಿವಿಧ ವಾದ್ಯಗಳ ಸೇವೆ ನಡೆಯುತ್ತಿರುತ್ತದೆ. ಇದು ದೇವತೆಗೆ ಸಲ್ಲಿಸುವ ಗೌರವ. ನಮ್ಮ ತಾಮಸೀ ದೇವಿಗೆ ಯಾವ ತರಹದ ವಾದ್ಯಾಲಾಪವನ್ನು ಅರ್ಪಿಸಬೇಕು? ಬೇಂದ್ರೆಯವರು ಮಾಡುವ ವರ್ಣನೆ ಹೀಗಿದೆ:
ಯುವಕರ ತಂಡಗಳು ಆತ್ಮಾಹುತಿಯನ್ನು ಮಾಡಿದ ಬಳಿಕ, ಉಳಿಯುವರಾರು? ಮುದುಕ ತಂದೆ, ತಾಯಿಗಳು; ಚಿಕ್ಕ ಮಕ್ಕಳು, ಅಸಹಾಯಕ ಅಕ್ಕ, ತಂಗಿಯರು ಹಾಗು ಸತ್ತು ಹೋದ ಈ ಯುವಕರ ವಿಧವೆ ಹೆಣ್ಣುಗಳು. ಅವರು ಮಾಡುತ್ತಿರುವ ವಾದ್ಯಸೇವೆ ಎಂತಹದು?
ಮುದಿ ತಾಯಂದಿರು ಖಾಲಿಯಾದ ಹೊಟ್ಟೆಯ ಡೊಳ್ಳುಗಳನ್ನು ಬಾರಿಸಿದರೆ, ಮುದಿ ತಂದೆಯರು ನಿಶ್ಶಕ್ತ ಕೈಗಳಿಂದ ತಾಳ ಹಾಕುತ್ತಾರೆ. ಪೋಷಕರಿಲ್ಲದೆ, ಹಸಿವಿನಿಂದ ಕಂಗಾಲಾದ ಚಿಕ್ಕ ಮಕ್ಕಳ ಚೀರುವಿಕೆಯೆ ಸನಾದಿಯಾಗಿದೆ. ಇದನ್ನೆಲ್ಲ ನೋಡಿದರೂ ಅಸಹಯಾಕರಾದ ಅಕ್ಕ, ತಂಗಿಯರ ಅಳಲೇ ಕೊಳಲಿನ ನಾದ! ಇನ್ನು ಮಂಡೆ
ಮೋಚಿದಾ ಹೆಂಡಿರ ದಂಡು ಎಂದರೆ ಹುತಾತ್ಮರ ವಿಧವೆಯರ ಪ್ರಲಾಪ ಇವೇ ಈ ತಾಮಸೀ ಶಕ್ತಿಯ ದರಬಾರಿನ ಓಲಗ!
ಇದೀಗ ಬೇಂದ್ರೆಯವರ ಸಿಟ್ಟು ಈ ತಾಮಸೀ ಶಕ್ತಿಯ ವಿರೋಧಿ ಎನ್ನಿಸಿಕೊಳ್ಳುವ ಸೃಷ್ಟಿಕರ್ತೃವಿನ ಕಡೆಗೆ ತಿರುಗುತ್ತದೆ. ದೇವನಿಗೆ
‘ಕರುಣಾಸಾಗರ’ ಎನ್ನುತ್ತಾರಷ್ಟೆ. ಬೇಂದ್ರೆಯವರು ಆತನಿಗೆ ‘ಕರುಣಾಸಾಗರನೇ, ನೀನು ಮಾಡಿದ ಘನಮದಾರಿ ಕಾರ್ಯವನ್ನು ನೋಡಿ ಬೊಬ್ಬೆಯನ್ನು ಕುಟ್ಟು’ ಎಂದು ವ್ಯಂಗ್ಯದಲ್ಲಿ ಹೇಳುತ್ತಾರೆ. ತಂದೆ ಅಥವಾ ತಾಯಿ ತೀರಿಕೊಂಡಾಗ, ಮಗನು ಸ್ಮಶಾನದಲ್ಲಿ ಬೊಬ್ಬೆಯನ್ನು
ಕುಟ್ಟಿ ತನ್ನ ಶೋಕವನ್ನು ತೋರಿಸುತ್ತಾನೆ. ಇಲ್ಲಿ ಎಲ್ಲವೂ ತಿರುವುಮುರುವಾಗಿದೆ.
ಪಾಪಿಗಳನ್ನು, ಲೋಭಿಗಳನ್ನು, ದರ್ಪಿಷ್ಠರನ್ನು ಹುಟ್ಟಿಸಿದ , ಅವರು ಮಾಡುತ್ತಿರುವ ಕುಕೃತ್ಯಗಳನ್ನು
ನೋಡುತ್ತಲಿರುವ ಕರುಣಾಸಾಗರ ದೇವನು ತಾನು ಮಾಡಿಸಿದ ಸೃಷ್ಟಿಕ್ರಿಯೆಗಾಗಿ ಬೊಬ್ಬೆಯನ್ನು ಹಾಕಲಿ ಎಂದು
ಬೇಂದ್ರೆಯವರು ಹೇಳುತ್ತಾರೆ. ಮಾನವನನ್ನು ‘ದೇವನ
ಕುನ್ನಿ’ ಎಂದು ಹೇಳಬೇಕಾದರೆ, ಬೇಂದ್ರೆಯವರಿಗೆ
ಎಂತಹ ಸಂತಾಪವಾಗಿರಬೇಕು! ‘ಮಾಟ’ ಪದಕ್ಕೆ ಎರಡು
ಅರ್ಥಗಳಿವೆ. ಮಾಡು ಎನ್ನುವ ಧಾತುವಿನಿಂದ ಬಂದ ನಾಮಪದ ಮಾಟ. ಅಭಿಚಾರ ಎನ್ನುವದು ಮಾಟದ ಎರಡನೆಯ ಅರ್ಥ.
--೪—
ತಾಮಸೀ ಶಕ್ತಿಯ ಬಲಿಷ್ಠತೆಯನ್ನು ನೋಡಿದ್ದಾಯಿತು. ಆದರೆ ಸಾತ್ವಿಕ ದೇವತೆಗಳಲ್ಲಿ ಬಲವೇ ಇಲ್ಲವೆ? ಈ ಸಾತ್ವಿಕ ದೇವತೆಗಳು ಏತಕ್ಕಾಗಿ ಮನುಕುಲವನ್ನು ಅಲಕ್ಷಿಸಿವೆ ಎನ್ನುವುದು ಬೇಂದ್ರೆಯವರ ಸಂತಾಪಕ್ಕೆ ಕಾರಣವಾಗಿದೆ. ತ್ರಿಮೂರ್ತಿಗಳೆಂದು ಖ್ಯಾತರಾದ ನಮ್ಮ ಮೂವರು ದೇವತೆಗಳು ಕುರುಡರೂ, ಕಿವುಡರೂ, ಮೂಕರು ಆಗಿದ್ದಾರೆಯೆ? ಮುಕ್ಕಣ್ಣನೆಂದು ಖ್ಯಾತನಾದ ಪರಮಶಿವನು ಇಲ್ಲಿ ನಡೆಯುತ್ತಿರುವ ಅನ್ಯಾಯಗಳಿಗೆ ಕುರುಡನಾಗಿದ್ದಾನೆಯೆ? ಭೂದೇವಿ ಹಾಗು ಶ್ರೀದೇವಿಯರ ಪತಿಯಾದ ವಿಷ್ಣುವಿನ ನಾಲ್ಕೂ ಕೈಗಳು ಮೊಂಡಾಗಿವೆಯೆ? ( ಭೂಮಿಯ ಮೇಲೆ ನಡೆಯುತ್ತಿರುವ ಅನ್ಯಾಯಗಳನ್ನು ನಿಲ್ಲಿಸಲಾರದವ ಈ ಭೂಪತಿ! ಮನುಕುಲದ ದಾರಿದ್ರ್ಯವನ್ನು ತೊಲಗಿಸಲಾರದವ ಈ ಶ್ರೀಪತಿ ಎನ್ನುವ ವ್ಯಂಗ್ಯ ಇಲ್ಲಿದೆ.) ಇನ್ನು ಸತ್ಯ, ನ್ಯಾಯ, ಧರ್ಮ ಇವುಗಳನ್ನು ಹೇಳುವವನಾದ, ನಾಲ್ಕು ಮುಖಗಳಿಂದ ನಾಲ್ಕು ವೇದಗಳನ್ನು ಹೇಳುವ ಬ್ರಹ್ಮನು ಈಗ ಮೂಕನಾಗಿದ್ದಾನೆಯೆ ಎಂದು ಬೇಂದ್ರೆಯವರು ಸಂಕಟ ಪಡುತ್ತಿದ್ದಾರೆ. ಈ ದೇವತೆಗಳನ್ನು ಸಾವಿಲ್ಲದವರು, ಅಮರರು ಎಂದು ಪೂಜಿಸುತ್ತೇವೆ. ಇವರು ಕೊಳೆಯದ ಹೆಣಗಳಿಗೆ ಸಮಾನರು; ಇವರು ಅನಿಮೇಷರು ಅಂದರೆ ‘ಕಣ್ಣುಗಳನ್ನು ಮುಚ್ಚದವರು’ ಎಂದು ಹೇಳುತ್ತೇವೆ. ಆದರೆ ಅನ್ಯಾಯವನ್ನು ಕಾಣದ ಇವರು ತಮ್ಮ ಕಣ್ಣುಗಳನ್ನು ಶಾಶ್ವತವಾಗಿ ಮುಚ್ಚಿಕೊಂಡಿದ್ದಾರೆ ಎಂದು ಬೇಂದ್ರೆಯವರು ಅವಹೇಳನೆಯನ್ನು ಮಾಡುತ್ತಾರೆ.
ಬೇಂದ್ರೆಯವರ ವ್ಯಂಗ್ಯ ಈಗ ಬೇರೊಂದು ದಿಕ್ಕಿನಲ್ಲಿ ತಿರುಗುತ್ತದೆ:
‘ಯಾರಪ್ಪಾ, ದೇವಿಯ ಪೂಜೆಗೆ ಕೆಟ್ಟ ಹೆಸರನ್ನಿಡುವ ಪಾಖಂಡಿಗಳು? ಇದು ಅನ್ಯಾಯ. ಈ ಪಾಪವು ಶಾಂತವಾಗಲಿ; ಎಲ್ಲವೂ ಸುಕ್ಷೇಮವಾಗಲಿ. ಪೂಜೆಯನ್ನು ಕೆಡಿಸದಿರಿ’ ಎಂದು ಬೇಂದ್ರೆ ಕುಟುಕುತ್ತಾರೆ. ಈ ತೀವ್ರ ಹೋರಾಟವನ್ನು ಅಂದರೆ ‘ಯುದ್ಧ’ವನ್ನು
ವಿರೋಧಿಸುವ ಸಹನಾಶೀಲರಿಗೆ, ಬೇಂದ್ರೆಯವರು ‘ನೆತ್ತರಹೇಡಿಯೆ, ಮುಚ್ಚೆಲೆ ಬಾಯ!’ ಎಂದು ತಿರುಗೇಟು ಕೊಡುತ್ತಾರೆ. ಏತಕ್ಕಾಗಿ ಇಷ್ಟೆಲ್ಲ ಸಂತಾಪ, ಆಕ್ರೋಶ, ಅಬ್ಬರ?
ಏತಕ್ಕೆಂದರೆ:
ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು !
ಇದುವೇ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !
--೫—
ಇಲ್ಲಿಯವರೆಗೆ ಬೇಂದ್ರೆಯವರು ತಾಮಸೀ ಶಕ್ತಿಯ ವರ್ಣನೆಯನ್ನು ಹಾಗು ಸಾತ್ವಿಕ ದೇವತೆಗಳೆಂದು ಎನ್ನಿಸಿಕೊಳ್ಳುವವರ ದುರ್ಬಲತೆಯನ್ನು ವರ್ಣಿಸಿದ್ದಾಯಿತು. ಇದೀಗ, ‘ನಾವೇ ಸ್ವತಃ ಬಲಿಷ್ಠರಾಗಬೇಕು, ದೇವತೆಗಳನ್ನು ಕಣ್ಣೆತ್ತಿ ನೋಡಬಾರದು’ ಎನ್ನುವ ಸಂದೇಶವನ್ನು ಬೇಂದ್ರೆ ಹೇಳುತ್ತಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ನಾವು ಮಾಡುತ್ತಿರುವ ಪರಿಶ್ರಮವನ್ನು ನಾವು ನಿಲ್ಲಿಸಬಾರದು. ಏಕೆಂದರೆ ನಮ್ಮ ಪರಿಶ್ರಮದ ಬೆವರಿನಿಂದಲೇ ಹುಟ್ಟುತ್ತದೆ ನಮ್ಮ ಬಲ. ಈ ಬಲವೆನ್ನುವ ಬಳ್ಳಿಯಲ್ಲಿ ಹುಟ್ಟುವ ಹೂವು ಯಾವುದು? ಇದು ಈ ಕಾಳಗದಲ್ಲಿ ನಾವು ಸುರಿಸುವ ರಕ್ತ. ಇನ್ನು ಈ ಹೂವು ಫಲವಾಗುವುದು ಹೇಗೆ?.....ನಮ್ಮ ಬಲಿದಾನವೇ ಈ ಹೂವಿನ ಫಲ. ಈ ಕಾಳಗದಲ್ಲಿ ನಾವು ಸಾಯುವದರಿಂದಲೇ, ನಮ್ಮ ನಾಡಿಗೆ ಬಿಡುಗಡೆ ಸಿಗುತ್ತದೆ; ‘ಆದುದರಿಂದ ಬಲಿದಾನಕ್ಕಾಗಿ ಸಿದ್ಧರಾಗಿರಿ’ ಎನ್ನುವುದು ಬೇಂದ್ರೆಯವರು ನಮ್ಮ ನಾಡವರಿಗೆ ಕೊಡುತ್ತಿರುವ ಕರೆ!
ಈ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕಲ್ಲವೆ? ಜಾತಿಭೇದ, ಮತಭೇದ, ಸಿದ್ಧಾಂತಭೇದವನ್ನು ಬದಿಗಿರಿಸಿ, ಪ್ರತಿಯೊಬ್ಬನೂ ಈ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಬೇಂದ್ರೆಯವರ ಆಶಯ. (ಟಿಪ್ಪಣಿ: ಸ್ವಾತಂತ್ರ್ಯಚಳುವಳಿಯನ್ನು ಕೆಲವರು ಜಾತಿಭೇದದಿಂದ, ಕೆಲವರು ಸಿದ್ಧಾಂತಭೇದದಿಂದ ವಿರೋಧಿಸಿದ್ದರು ಎನ್ನುವುದನ್ನುಪರಿಗಣಿಸಿದಾಗ, ಬೇಂದ್ರೆಯವರ ಸರ್ವಜನ ಕರೆಯ ಅರ್ಥ ಹೊಳೆಯುತ್ತದೆ.)
ಇದೀಗ, ‘ಧರ್ಮಕ್ಷೇತ್ರೆ, ಕುರುಕ್ಷೇತ್ರೆ’ ಎನ್ನುವ ಯುದ್ಧಾರಂಭವಾಗುತ್ತದೆ. ಪ್ರತಿಯೊಬ್ಬನು ತನ್ನ ಸಂಕಲ್ಪವನ್ನು ಪ್ರಕಟಿಸಲು ತನ್ನ ತನ್ನ ಪಾಂಚಜನ್ಯ ಶಂಖವನ್ನು ಬಲವಾಗಿ ಊದಬೇಕು. ಭೂಮಿತಾಯಿಯೂ ಸಹ ಜ್ವಾಲಾಮುಖಿಯ ಮೂಲಕ ತನ್ನ ಶಂಖಧ್ವನಿಯನ್ನು ಪ್ರಕಟಗೊಳಿಸಬೇಕು. ಇಂತಹ ಭೀಕರ ಪ್ರತಿಭಟನೆ ಇಲ್ಲದೆ, ಸ್ವಾತಂತ್ರ್ಯಕಾರ್ಯ ಸಿದ್ಧಿಸದು.ಇದರಿಂದ ನಮ್ಮ ಪರಂಪರಾಗತರ ದೇವತೆಗಳಾದ ತ್ರಿಮೂರ್ತಿಗಳಿಗಳಿಗೆ ಪೂಜಾಭಂಗವಾಗುವದಿಲ್ಲವೆ?
ಈ ಪ್ರಶ್ನೆಗೆ ಬೇಂದ್ರೆ ಹೀಗೆ ಹೇಳುತ್ತಾರೆ:
ನಟರಾಜ ಪರಮಶಿವನ ಕುಣಿತ ನಿಂತು ಹೋಗಲಿ, ಕ್ಷೀರಸಾಗರದಲ್ಲಿ ಸುಖನಿದ್ರೆಗೈಯುತ್ತಿರುವ ವಿಷ್ಣುವಿನ ನಿದ್ದೆ ಹಾಳಾಗಿ ಹೋಗಲಿ, ಬ್ರಹ್ಮನ ಸಮಾಧಿ ಭಂಗವಾಗಲಿ; ಎಚ್ಚತ್ತ ಅವರು ತಾವೇ ಸೃಷ್ಟಿಸಿದ ಪ್ರಪಂಚವು ಹೇಗೆ ಮೂರಾಬಟ್ಟೆಯಾಗುತ್ತಿದೆ ಎನ್ನುವುದನ್ನು ಸ್ವಲ್ಪ ಕಣ್ಣು ತೆರೆದು ನೋಡಲಿ. ನಮಗೆ ಇಂತಹ ಬಲಹೀನ, ಸಾತ್ವಿಕ ದೇವರುಗಳು ಬೇಡ. ನಾವು ರುದ್ರಕಾಳಿಯನ್ನೇ ನಮ್ಮ ಆತ್ಮಬಲಿದಾನದ ಮೂಲಕ ಪೂಜಿಸೋಣ. ಏತಕ್ಕೆ?
ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು !
ಇದುವೇ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !
--೬—
ಆರನೆಯ ಖಂಡದಲ್ಲಿ ಬೇಂದ್ರೆಯವರು ಆ ಕಾಲದ ಸಾಮಾಜಿಕ ಹಾಗು ರಾಜಕೀಯ ಪರಿಸ್ಥಿತಿಗಳ ಅವಲೋಕನವನ್ನು
ಮಾಡಿದ್ದಾರೆ. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿರುವ
ಸಮಯದಲ್ಲಿಯೇ, ಎರಡನೆಯ ಜಾಗತೀಕ ಯುದ್ಧವೂ ನಡೆಯುತ್ತಿತ್ತು.
ಜಗತ್ತಿನಲ್ಲಿ ನಡೆಯುತ್ತಿರುವ ಈ ಸಂಘರ್ಷಗಳನ್ನು ನೋಡಿದ ದೇವರ ಜಂಗುಳಿಯು ಭಯಭೀತರಾಗಿ
‘ಇದೇನು,
ಇದೇನು’
ಎಂದು ಕಿರಿಚುತ್ತಿದೆಯಂತೆ. ಇದು ಅಚ್ಚರಿ ಎನ್ನುವಂತೆ ಬೇಂದ್ರೆಯವರು ದೇವಸಮೂಹವನ್ನು ಅಣಕಿಸುತ್ತಿದ್ದಾರೆ.
‘ಎಲೈ ದೇವತೆಗಳೇ, ನಿಮಗೆ ತಿಳಿಯದೆ? ಇದು ಮಾನವತೆಯು ಮೊಳಗುವ ಕಾಲ; ನಾಗರಿಕತೆಯು ಬೆಳಗುವ ಕಾಲ; ಕ್ರೈಸ್ತನ
ಬೋಧೆಯು ಉಬ್ಬಿಹ ಕಾಲ!’ ಮೊಳಗು, ಬೆಳಗು ಹಾಗು ಉಬ್ಬು ಎನ್ನುವ ಪದಗಳಲ್ಲಿರುವ ವ್ಯಂಗ್ಯವನ್ನು ಗಮನಿಸಿರಿ.
‘ಬಿಳಿಛಾಯೆಯು ತಾ ಹಬ್ಬಿಹ ಕಾಲ’ ಎಂದು ಹೇಳುವಾಗ, ಯುರೋಪಿಯನ್ ದೇಶಗಳು, ಏಶಿಯದ ದೇಶಗಳನ್ನು ಆಕ್ರಮಿಸಿ,
ವಸಾಹತುಗಳನ್ನಾಗಿ ಮಾಡಿದ ಚರಿತ್ರೆಯನ್ನು ಹೇಳುತ್ತಿದ್ದಾರೆ.
ಇಷ್ಟೇ ಅಲ್ಲ, ತಮ್ಮ ವಸಾಹತುಗಳಲ್ಲಿರುವ ಮೂಲವಾಸಿಗಳು ಧರ್ಮಹೀನರು, ಅನಾಗರಿಕರು ಎನ್ನುವಂತೆ ಅವರನ್ನು
‘ಸುಧಾರಿಸುವ’ ಸೋಗನ್ನು ಬಿಳಿಯರು ಹಾಕಿದ್ದಾರೆ ಎಂದು ಬೇಂದ್ರೆ ಹೇಳುತ್ತಿದ್ದಾರೆ. ಈ ಯುರೋಪಿಯನ್
ನಾಗರಿಕತೆಯು ತಾನೇ ಸಾಕಷ್ಟು ಕ್ರೂರವಾಗಿದ್ದರೂ ಸಹ, ‘ಜೀವದಯಾಸಂಘ’ಗಳನ್ನು ಕಟ್ಟಿಕೊಂಡು ಪ್ರಚಾರಕ್ಕಿಳಿದಿದೆ.
ಆದುದರಿಂದ ಹಿಂಸೆ ಹಾಗು ಕ್ರೌರ್ಯಗಳು ಇನ್ನು ಮುಂದೆ ಭೂಮಿಯ ಮೇಲಿಂದ ಮಾಯವಾಗಿ ಬಿಡುತ್ತವೆ. ಭಾರತೀಯರು
ಇನ್ನೀಗ ‘ಶಾಂತಿಪುರಾಣ ಹಾಗು ಬುದ್ಧಚರಿತೆ’ಗಳನ್ನು ಪಠಿಸುತ್ತ, ತಮ್ಮ ಹೋರಾಟವನ್ನು ನಿಲ್ಲಿಸಿ ಕೂತುಕೊಳ್ಳುವುದು
ಒಳ್ಳೆಯದು! (ಶಾಂತಿಪುರಾಣವು ಆದಿಕವಿ ಪಂಪನ ಕೃತಿ.)
ಇವರೆಲ್ಲರ ಪ್ರವಚನಗಳ ಸಾರವೇನು:
‘ಪ್ರಾಣಿಹಿಂಸೆ ಮಾಡಬೇಡಿ; ಕೋಳಿ ಹಾಗು ಕುರಿಗಳನ್ನು ಕೊಲ್ಲಬೇಡಿ;
ಕೋಣವನ್ನು ಕಡಿಯಬೇಡಿ.’
ಆದರೆ ಹುಲುಮಾನವನನ್ನು ಕೊಂದರೆ ಕೇಳುವವರಾರು? ಬ್ರಿಟಿಶ ದಬ್ಬಾಳಿಕೆಯಿಂದ ಪ್ರಾಣ ನೀಡಿದ ಭಾರತೀಯರೆಷ್ಟೊ? ಜಾಗತಿಕ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರೆಷ್ಟೊ? ಇದೆಲ್ಲ ನಗಣ್ಯ. ಮಾನವನು ತನ್ನ ಮಾನವೀಯತೆಯನ್ನೇ ಕೊಂದು ಹಾಕಿದ್ದಾನೆ. ಇದೇ ಸ್ವಾರ್ಥತ್ಯಾಗ, ಇದೇ ಆತ್ಮಾಹುತಿಯೆಂದು ಬೇಂದ್ರೆಯವರು ವ್ಯಂಗ್ಯದಲ್ಲಿ ಹೇಳುತ್ತಾರೆ.
ಬೇಂದ್ರೆಯವರು ಯುರೋಪಿಯನ್ನರ ಈ ನರಮೇಧವನ್ನು ಪ್ರಾಚೀನ ಕಾಲದ ರಾಜರು ಮಾಡುತ್ತಿದ್ದ ಅಶ್ವಮೇಧಕ್ಕೆ ಹೋಲಿಸಿ, ಇದು ಅಶ್ವಮೇಧಕ್ಕಿಂತಲೂ ಹೆಚ್ಚಿನದು ಎಂದು ಅಣಕವಾಡುತ್ತಾರೆ. ಅಶ್ವಮೇಧವನ್ನು, ಚಕ್ರವರ್ತಿಗಳು ಸಾಮ್ರಾಜ್ಯವಿಸ್ತರಣೆಗಾಗಿ ಮಾಡುತ್ತಿದ್ದರು ಹಾಗು ಒಂದು ಅಶ್ವವನ್ನು ಮಾತ್ರ ಯಜ್ಞದಲ್ಲಿ ಬಲಿ ಕೊಡಲಾಗುತ್ತದೆ. ಆದರೆ, ಈ ನರಮೇಧದಲ್ಲಿ ಅಸಂಖ್ಯ ಮಾನವರ ಹತ್ಯೆಯಾಗುತ್ತಿದೆ. ಇದೇ ನಿಜವಾದ ಕಾಲೀದೇವಿಯ ಪೂಜೆ. ಬುದ್ಧಿಯಿಲ್ಲದವರು ಇದಕ್ಕೆ ‘ಯುದ್ಧ’ ಎಂದು ಕರೆಯುತ್ತಾರೆ ಎಂದು ಬೇಂದ್ರೆಯವರು ವ್ಯಂಗ್ಯವಾಡುತ್ತಿದ್ದಾರೆ.
ಇದುವೆ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !
ಜಾಗತಿಕ ಪರಿಸ್ಥಿತಿ ಹೀಗಿರುವಾಗ, ಭಾರತೀಯರು ಬ್ರಿಟಿಶ್ ಕಾಳಿಯ ಪದತಲದಿಂದ
ತಮ್ಮ ಬಿಡುಗಡೆಯನ್ನು ಪಡೆಯಲು ಒಂದೇ ಮಾರ್ಗವಿದೆ:
ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು !
ಇದುವೆ ಕಾಳಿಯ ಪೂಜೆಯು ಶುದ್ಧ !
ಇದಕ್ಕೆ ಹುಂಬರು ಎಂಬರು ಯುದ್ಧ !
ಬೇಂದ್ರೆಯವರು ತಮ್ಮ ‘ಕನಸಿನೊಳಗೊಂದು ಕಣಸು’ ಕವನದಲ್ಲಿಯೂ ಸಹ ಇದೇ ಮಾತನ್ನು
ಹೇಳಿದ್ದಾರೆ. ಅಲ್ಲಿ ಕವಿಯು ದೇವಿಗೆ ಕೇಳುವ ಮಾತು: ‘ಚಂಡಿ ಚಾಮುಂಡಿ ಪೇಳ್ ಬೇಕಾದುದೇನು?
ದೇವಿಯ ಉತ್ತರ: ‘ಗಂಡಸಾದರೆ ನಿನ್ನ ಬಲಿ ಕೊಡುವಿಯೇನು?’
ಬೇಂದ್ರೆಯವರು ಈ ಕವನದಲ್ಲಿ ಸೃಷ್ಟಿಸಿದ ಕೆಲವು ಪದಪುಂಜಗಳು ಎಷ್ಟು ಅರ್ಥವತ್ತಾಗಿವೆ
ಎನ್ನುವುದನ್ನು ನೋಡಿ:
ಬಂಜೆಬೆಂಕಿ, ಕರುಣಿಗಳರಸೇ, ನೆತ್ತರಹೇಡಿ, ಬೆವರಿನ ಬಳ್ಳಿ, ನೆತ್ತರಹೂವು,
ಸಾವಿನ ಹಣ್ಣು, ಗುಬ್ಬಿಮಾನವ ಇತ್ಯಾದಿ.
……………………………………………………………
ಟಿಪ್ಪಣಿ: ‘ನರಬಲಿ’ಯನ್ನು ಬರೆದದ್ದಕ್ಕಾಗಿ ಬೇಂದ್ರೆಯವರಿಗೆ ೧೯೩೨ರಲ್ಲಿ
ಹಿಂಡಲಗಿ ಸೆರೆಮನೆಗೆ ಕಳುಹಿಸಲಾಯಿತು.
ಬಳಿಕ ಮುಗದ ಎನ್ನುವ ಹಳ್ಳಿಯಲ್ಲಿ ಸ್ಥಾನಬದ್ಧತೆಯಲ್ಲಿಯಲ್ಲಿ ಇಡಲಾಯಿತು. ಈ ಘಟನೆಯನ್ನು ಬೇಂದ್ರೆಯವರು ತಮ್ಮ ‘ಸಖೀಗೀತ’ ಕಾವ್ಯದಲ್ಲಿ ‘ಹೆಳವನಿದ್ದಲ್ಲಿ
ಹೊಳೆ ಬಂದಿತು’ ಎಂದು ನೆನೆಸಿಕೊಂಡಿದ್ದಾರೆ.
ಬೇಂದ್ರೆಯವರು ಮುಗದದಲ್ಲಿ ಇದ್ದಾಗ, ‘ಮನೋಹರ ಗ್ರಂಥಮಾಲೆ’ಯ ಸ್ಥಾಪಕರಾದ ಜಿ.ಬಿ.ಜೋಶಿಯವರು ಪ್ರತಿ ದಿನವೂ ಊಟವನ್ನು ತೆಗೆದುಕೊಂಡು, ೧೩ ಕಿಲೋಮೀಟರ ದೂರದ ಮುಗದಕ್ಕೆ ಸೈಕಲ್ ಹೊಡೆದುಕೊಂಡು ಹೋಗಿ ಅವರಿಗೆ ಕೊಟ್ಟು ಬರುತ್ತಿದ್ದರು.
ಅಲ್ಲದೆ, ಆರು ವರ್ಷಗಳವರೆಗೆ ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಕೂಡದು ಎನ್ನುವ ಆದೇಶವನ್ನು ಸಹ ಹೊರಡಿಸಲಾಯಿತು. ಬೇಂದ್ರೆಯವರು ತಮ್ಮ ಹೆಂಡತಿಮಕ್ಕಳನ್ನು ಬಂಧುಗಳ ಮನೆಗೆ, ಪರಾಶ್ರಯಕ್ಕೆ ಕಳುಹಿಸಿ, ತಾವು ಹಿಂಡಲಗಿಗೆ ತೆರಳಿದರು. ಅದಕ್ಕೇ ಅಲ್ಲವೆ, ‘ಬೆಂದರೆ ಅದು ಬೇಂದ್ರೆ’ ಎಂದು ಅನ್ನುವುದು.