ಇಪ್ಪತ್ತನೆಯ ಶತಮಾನದ ಪೂರ್ವಾರ್ಧವು
ಭಾರತದಲ್ಲಿ ಸ್ವಾತಂತ್ರ್ಯ ಕ್ರಾಂತಿಯು
ಪ್ರಾರಂಭವಾದ ಕಾಲ. ಉತ್ತರ ಭಾರತದಲ್ಲಿ ಸಶಸ್ತ್ರ ಕ್ರಾಂತಿಯ ಮೊಳಕೆ ಚಿಗುರಿತ್ತು. ಮಹಾರಾಷ್ಟ್ರದಲ್ಲಿ ಲೋಕಮಾನ್ಯ ತಿಲಕರು ‘ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು’ ಎಂದು ಗುಡುಗಿದ್ದರು.
ಬೇಂದ್ರೆಯವರಂತಹ ಸಂವೇದನಾಶೀಲ ಕವಿಯು ಈ ಸಂದರ್ಭದಲ್ಲಿ ಸುಮ್ಮನಿರಲು ಸಾಧ್ಯವೆ? ಬೇಂದ್ರೆಯವರು
ಸಹ ತಮ್ಮ ಕಾವ್ಯದ ಮೂಲಕ ರಣಕಹಳೆಯನ್ನು ಊದಿದರು. ‘ಆಹಹ ಸ್ವಾತಂತ್ರ್ಯದೇವಿ, ತರುಣ ತಪಸ್ವಿ, ಕನಸಿನೊಳಗೊಂದು ಕಣಸು, ೩೩೦೦೦೦೦೦’ ಮೊದಲಾದ ಕವನಗಳು ಬ್ರಿಟಿಶ್ ಆಳರಸರ
ಕಣ್ಣನ್ನು ಕೆಂಪಾಗಿಸಿದವು.
’೩೩೦೦೦೦೦೦೦’ ಯನ್ನು ಬೇಂದ್ರೆಯವರು ‘೩೩ ಕೋಟಿ’
ಎಂದು ಬರೆಯಬಹುದಾಗಿತ್ತು. ಆದರೆ ಹಾಗೆ ಬರೆಯದೆ, ೩೩ರ ಮುಂದೆ ಆರು ಸೊನ್ನೆಗಳನ್ನು
ಬರೆದದ್ದು, ಭಾರತೀಯರ ನಿರಭಿಮಾನವನ್ನು, ಅಧೈರ್ಯವನ್ನು
ತೋರಿಸುವ ಬಗೆಯಾಗಿದೆ. ‘ನರಬಲಿ’ ಹಾಗು
‘ಕನಸಿನೊಳಗೊಂದು
ಕಣಸು’ ಕವನಗಳು ಇಂತಹ ಭಾರತೀಯರನ್ನು
ಹೊಡೆದೆಬ್ಬಿಸಲು ಬೇಂದ್ರೆಯವರು ಕೊಟ್ಟ ಆಹ್ವಾನಗಳೇ ಆಗಿವೆ.
‘ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು
ನರಬಲಿಯೇ ಬೇಕು
ನರಬಲಿಯೇ ಬೇಕು
ಇದುವೆ ಕಾಳಿಯ ಪೂಜೆಯು ಶುದ್ಧ,
ಇದಕ್ಕೆ ಹುಂಬರು ಎಂಬರು ಯುದ್ಧ.’
ಇದಕ್ಕೆ ಹುಂಬರು ಎಂಬರು ಯುದ್ಧ.’
(---ನರಬಲಿ)
‘ಚಂಡಿ ಚಾಮುಂಡಿ ಪೇಳ್, ಬೇಕಾದುದೇನು?
‘ಗಂಡಸಾದರೆ ನಿನ್ನ ಬಲಿ ಕೊಡುವಿಯೇನು?’
ಈ ಕವನಗಳು ಬ್ರಿಟಿಶ್ ಆಳರಸರ ಕಣ್ಣುಗಳನ್ನು
ಕೆಂಪು ಮಾಡಿದವು. ೧೯೩೨ರಲ್ಲಿ ಬೇಂದ್ರೆಯವರ ಮೇಲೆ ರಾಜದ್ರೋಹದ ಆರೋಪ ಹೊರಿಸಲಾಯಿತು. ಧಾರವಾಡದ ಜಿಲ್ಲಾ ಕಲೆಕ್ಟರರ ಎದುರಿಗೆ ಬೇಂದ್ರೆಯವರ ವಿಚಾರಣೆ ನಡೆಯಿತು. ಬೇಂದ್ರೆಯವರಿಗೆ
ಎರಡು ವರ್ಷಗಳ ಜೇಲು ಶಿಕ್ಷೆ ವಿಧಿಸಲಾಯಿತು. ಇದರ ಜೊತೆಗೇ ಮತ್ತೊಂದು ಕಟ್ಟಾಣತಿ: ಆನಂತರ ಏಳು ವರುಷಗಳವರೆಗೆ
ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಕೂಡದು!
ಬೇಂದ್ರೆಯವರ ಶಿಷ್ಯಮಿತ್ರರಾದ ವ್ಹಿ.ಕೆ.ಗೋಕಾಕರು ೧೯೩೧ರಲ್ಲಿ ಪುಣೆಯ ವಿಲ್ಲಿಂಗ್ಡನ್ ಕಾ˘ಲೇಜಿನಲ್ಲಿ
ಪ್ರಾಧ್ಯಾಪಕರಾಗಿ ಸೇರಿಕೊಂಡಿದ್ದರು. ಅವರು ಧಾರವಾಡಕ್ಕೆ ಧಾವಿಸಿ ಕಲೆಕ್ಟರರನ್ನು ಭೆಟ್ಟಿಯಾಗಲು ಅನುಮತಿ ಪಡೆದರು. ಸೂಟು-ಬೂಟು ಹಾಕಿಕೊಳ್ಳುತ್ತಿದ್ದ, ಇಂಗ್ಲೀಶಿನಲ್ಲಿ ಪರಿಣತರಾದ ಪ್ರೊಫೆಸರ್
ಗೋಕಾಕರನ್ನು ಭೆಟ್ಟಿಯಾಗಲು ಕಲೆಕ್ಟರರು ಸಮ್ಮತಿಸಿದರು. ಗೋಕಾಕರು ‘ಬೇಂದ್ರೆಯವರು ಕನ್ನಡದ ದೊಡ್ಡ ಕವಿಗಳು;
ಅವರು ಬರೆದದ್ದು ಕೇವಲ ದೇಶಪ್ರೇಮದ ಕಾವ್ಯವೇ ಹೊರತು, ರಾಜದ್ರೋಹದ ಕಾವ್ಯವಲ್ಲ; ಅವರು ಸಶಸ್ತ್ರ ಕ್ರಾಂತಿಗೆ ಕರೆ ಕೊಟ್ಟಿಲ್ಲ;
ಅವರಿಗೆ ಈ
ತರಹದ ಶಿಕ್ಷೆ ಸಲ್ಲದು’ ಎಂದು ವಿನಂತಿಸಿಕೊಂಡರು. ಕಲೆಕ್ಟರರು ಒಪ್ಪಲಿಲ್ಲ. ಆದರೆ ಒಂದು ಶರ್ತಿನ ಮೇಲೆ, ಅಂದರೆ ಬೇಂದ್ರೆಯವರು ಮಾಫೀಪತ್ರವನ್ನು ಬರೆದುಕೊಟ್ಟರೆ, ಅವರನ್ನು ಕ್ಷಮಿಸುವದಾಗಿ ಕಲೆಕ್ಟರರು ಹೇಳಿದರು.
‘ಬದುಕಿದೆಯಾ ಬಡಜೀವವೇ’ ಎಂದುಕೊಳ್ಳುತ್ತಾ ಗೋಕಾಕರು ಬೇಂದ್ರೆಯವರ ಮನೆಗೆ ಹೋಗಿ, ಅವರಿಗೆ ವಿಷಯವನ್ನು ತಿಳಿಸಿದರು.
ಬೇಂದ್ರೆಯವರು ಅವರಿಗೆ
‘ನೀವು ನಾಳೆ ಬನ್ನಿ’ ಎಂದು ಹೇಳಿ ಕಳುಹಿಸಿದರು. ಮರುದಿನ ಗೋಕಾಕರು ಬೇಂದ್ರೆಯವರ ಮನೆಗೆ ಹೋದಾಗ, ಬೇಂದ್ರೆಯವರು ಅವರಿಗೆ ಹೇಳಿದ್ದು ಹೀಗೆ:
‘ನೋಡ್ರಿ, ಈ
ಕವನಗಳನ್ನು ಬರೆದವನು ಅಂಬಿಕಾತನಯದತ್ತ. ಅವನು ಬರೆದ ಕವನಗಳಿಗಾಗಿ ಕ್ಷಮಾಪಣೆಯನ್ನು ಕೋರಲು ಬೇಂದ್ರೇಗೆ ಹೇಗೆ ಸಾಧ್ಯವಾದೀತು? ಆದುದರಿಂದ ನಾನು ಅಂದರೆ ಬೇಂದ್ರೆ ಮಾಫೀಪತ್ರವನ್ನು ಬರೆದು ಕೊಡುವುದಿಲ್ಲ.’
ಬೇಂದ್ರೆಯವರಿಗೆ ಎರಡು ವರ್ಷದ ಕಾರಾವಾಸಕ್ಕಾಗಿ ಬೆಳಗಾವಿಯ ಹಿಂಡಲಗಿ ಜೇಲಿಗೆ ಕಳುಹಿಸಲಾಯಿತು. ಬೇಂದ್ರೆಯವರ ಧರ್ಮಪತ್ನಿ ಪುಣೆಯಲ್ಲಿರುವ ಬೇಂದ್ರೆಯವರ ಕಾಕಾನ ಮನೆಯನ್ನು ಸೇರಿಕೊಳ್ಳಬೇಕಾಯಿತು. ಕೆಲಕಾಲದ ನಂತರ ಬೇಂದ್ರೆಯವರ ಅನಾರೋಗ್ಯಸ್ಥಿತಿಯನ್ನು ಗಮನಿಸಿ,
ಬೇಂದ್ರೆಯವರನ್ನು ಮುಗದದಲ್ಲಿ ನಜರಬಂದಿಯಲ್ಲಿ ಇಡಲಾಯಿತು. ಆ ಸಮಯದಲ್ಲಿ ಮನೋಹರ ಗ್ರಂಥಮಾಲೆಯ ಸ್ಥಾಪಕರಾದ ಜಿ.ಬಿ.ಜೋಶಿಯವರು ಪ್ರತಿದಿನವೂ ಧಾರವಾಡದಿಂದ ಮುಗದದವರೆಗೆ ಸೈಕಲ್ಲಿನ ಮೇಲೆ ೧೫ ಕಿಲೋಮೀಟರ ದೂರವನ್ನು ಕ್ರಮಿಸಿ, ಬೇಂದ್ರೆಯವರಿಗೆ ಊಟವನ್ನು ತಂದುಕೊಡುತ್ತಿದ್ದರು.
ಒಂದು ದಿನ, ಬೇಂದ್ರೆಯವರು ಅಲ್ಲಿಯ ದೇವಿಯ ಗುಡಿಯೊಂದರಲ್ಲಿ
ಜೊಂಪಿಸುತ್ತ ಕುಳಿತಿದ್ದಾಗ ಸುತ್ತಮುತ್ತಲಿನ ಮೆಳೆಗಳಲ್ಲಿ ಒಂದು ಗುಂಗೀ ಹುಳವು ಹೊರಡಿಸುತ್ತಿದ್ದ ಧ್ವನಿಯನ್ನು ಕೇಳಿದರು. ಆ ನಾದದ ಗುಂಗು ಬೇಂದ್ರೆಯವರಿಂದ ಒಂದು ಅದ್ಭುತ
ಕವನ ಹೊರಹೊಮ್ಮುವುದಕ್ಕೆ ಕಾರಣವಾಯಿತು. ಆ ಕವನವೇ ‘ಭಾವಗೀತೆ’!
ಈ ಗೀತೆಯ ಮೊದಲ ಸಾಲು ಹೀಗಿದೆ:
‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ’.
‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ’.
ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ಅವರ ಈ ಅಗ್ನಿದಿವ್ಯದ
ಕಾಲದಲ್ಲಿಯೇ ರಚಿತವಾದವು.
(ಟಿಪ್ಪಣಿ: ಕಾಲೀದಾಸನ ‘ಶಾಕುಂತಲಮ್’ ನಾಟಕದಲ್ಲಿ ಶಕುಂತಲೆಯು ತನ್ನ ಮುಖದ ಬಳಿಯಲ್ಲಿ ಸುತ್ತುತ್ತಿರುವ ದುಂಬಿಯೊಂದರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಬಂದ ದುಷ್ಯಂತನು ಅವಳಿಗೆ ನೆರವಾಗುತ್ತಾನೆ. ಆದುದರಿಂದ ಶಾಕುಂತಲಮ್ ನಾಟಕವು ಭೃಂಗದ ಬೆನ್ನೇರಿ ಬಂದ ಕಲ್ಪನಾವಿಲಾಸವಾಗಿದೆ. ತಮ್ಮ ಕವನದ ಮೊದಲ ಸಾಲಿನ ಮೂಲಕ ಬೇಂದ್ರೆಯವರು ಕಾಲೀದಾಸನಿಗೆ ಗೌರವ ಸಲ್ಲಿಸುತ್ತಿದ್ದಾರೆ.)