ಅನಿವಾಸಿ ಸಾಹಿತಿಯಾದ ಶ್ರೀ ಸುದರ್ಶನ ಗುರುರಾಜರಾವ ಇವರು ಗಿರೀಶ ಕಾರ್ನಾಡರ ಬಗೆಗೆ ಬರೆದ ಲೇಖನವನ್ನು ನನಗೆ ಕಳುಹಿಸಿ ಕೊಟ್ಟಿದ್ದಾರೆ. ಅವರ ಪರಿಚಯವನ್ನು ಅವರ ಮಾತುಗಳಲ್ಲಿಯೇ ನೋಡೋಣ:
“ವೃತ್ತಿಯಲ್ಲಿ ನಾನು ವೈದ್ಯ,ಅರಿವಳಿಕೆ ತಜ್ಞ. ಪ್ರವೃತ್ತಿಯಲ್ಲಿ ಕನ್ನಡದ ಪ್ರೇಮಿ,ಸನಾತನ
ಧರ್ಮದ ಅನುಯಾಯಿ, ಭಾರತೀಯ ಪರಂಪರೆಯ ಅಭಿಮಾನಿ. ಬೆಂಗಳೂರು ವೈದ್ಯಕೀಯ
ವಿದ್ಯಾಲಯದಿಂದ ಪದವಿ,ಚಂಡೀಗಢದಿಂದ ಸ್ನಾತಕೋತ್ತರ ಪದವಿ,ಇಂಗ್ಲೆಂಡ್ ನಲ್ಲಿ ತರಬೇತಿ ಹಾಗೂ ತಜ್ಞ ವೈದ್ಯನಾಗಿ ದುಡಿದು ಪ್ರಸ್ತುತ ಕೆನಡಾದ
ಮ್ಯಾನಿಟೋಬ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ತಜ್ಞ ವೈದ್ಯನಾಗಿ
ದುಡಿಯುತ್ತಿರುವೆ. ಆಗಾಗ ಲೇಖನ, ಕವಿತೆ ಇತ್ಯಾದಿ ಬರೆವುದುಂಟು.”
ನಿರುತ್ತರದಾಯಿತ್ವ ಘೋಷಣೆ(!):
........................................................
ಗಿರೀಶ್ ಕಾರ್ನಾಡ್ - ಉಳಿದವರು(ನು..?) ಕಂಡಂತೆ
ಕನ್ನಡ ಸಾರಸ್ವತ ಲೋಕ
ಇತ್ತೀಚಿಗೆ ಬಹುಮುಖ ಪ್ರತಿಭೆ ಎಂದು ಮಾಧ್ಯಮಗಳಲ್ಲಿ ಗುರುತಿಸಲ್ಪಡುವ ಗಿರೀಶ್ ಕಾರ್ನಾಡ ಅವರನ್ನು ಕಳೆದುಕೊಂಡಿದೆ. ಅವರನ್ನು
ನೆನೆದು ಹಲವಾರು ಲೇಖನಗಳು ಅಲ್ಲಲ್ಲಿ ಪ್ರಕಟವೂ ಆಗಿವೆ. ಅನಿವಾಸಿ ಎಂಬ ಇಂಗ್ಲೆಂಡಿನಲ್ಲಿ ಇರುವ
ಕನ್ನಡದ ಜಾಲಜಗುಲಿಯಯಲ್ಲಿಯೂ ಸಹ ಕಾರ್ನಾಡರ ಪ್ರತಿಭೆಯನ್ನ ಕಟ್ಟಿಕೊಡುವ ಪ್ರಯತ್ನ ಅಲ್ಲಿ
ನೆಲೆಸಿರುವ ಲೇಖಕರಿಂದ ಆಗಿದೆ. ಸಾರ್ವಜನಿಕ ಜೀವನದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಪ್ರಚಾರ
ಪಡೆದುಕೊಳ್ಳುತ್ತಿದ್ದ ಕಾರ್ನಾಡ ಎಂಬ ವಿವಾದಪೂರ್ಣ ವ್ಯಕ್ತಿತ್ವವನ್ನು ಸ್ತುತಿಸುವುದರಲ್ಲಿ ಈ
ಲೇಖನಗಳು ಸಮಾಧಾನ ಕಂಡುಕೊಂಡು ಅವರ ಬಹುಮುಖಗಳನ್ನೂ ಪರಿಚಯಿಸುವಲ್ಲಿ ತಾರತಮ್ಯ ತೋರಿಸಿವೆ ಎಂಬುದು
ಮೊದಲ ಓದಿಗೆ ಗೊತ್ತಾಗಿಹೋಗುತ್ತದೆ. ಆ ನ್ಯೂನತೆಗಳನ್ನು ಸ್ವಲ್ಪಮಟ್ಟಿಗೆ ಅವಲೋಕಿಸುವುದು ಈ
ಲೇಖನದ ಉದ್ದೇಶ; ಆದರೆ, ಈ ಲೇಖನವನ್ನು
ಪ್ರಕಟಿಸಲು ಅಲ್ಲಿನ ಗುಂಪು ಒಪ್ಪಿಕೊಳ್ಳಲಿಲ್ಲ!!
ಹತ್ತನೇ ತರಗತಿಯವರೆಗೆ ಹಲವು ಹಳ್ಳಿಗಳಲ್ಲಿ ಹಾಗೂ
ಬರಗೂರು ಎಂಬ ಕುಗ್ರಾಮದಲ್ಲಿದ್ದ ನನಗೆ ಕಾರನಾಡರ ಪರಿಚಯ ಆಗಿದ್ದು ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ದೂರದರ್ಶನದಲ್ಲಿ “ಸ್ವಾಮಿ” ಎಂಬ ಹಿಂದೀ
ಚಲನಚಿತ್ರ ನೋಡಿದಾಗ. ಆಗ ನನಗೆ ೧೨-೧೩ ವರ್ಷ ಇದ್ದಿರಬೇಕು. ಹಲವರ ಮನೋಜ್ಞ ಅಭಿನಯವೂ ,ಒಳ್ಳೆಯ ಚಿತ್ರಕಥೆಯೂ ಇದ್ದ ಈ ಹಿಂದಿ ಚಿತ್ರದಲ್ಲಿ ಬಹಳ
ಕಡಿಮೆ ಮಾತಿರುವ ಗಿರೀಶರ ಪಾತ್ರ ನನಗೆ ಇಷ್ಟವಾಯಿತು. ಅದರಲ್ಲಿನ ಅವರ ಪಾತ್ರದ ಉದಾತ್ತಾತೆಯೂ
ನನ್ನ ಮೆಚ್ಚುಗೆಯ ಹಿಂದಿನ ಕಾರಣ ಇರಬಹುದು. ಮುಂದೆ ಅವರ ಹಲವಾರು ಸಿನೆಮಾಗಳನ್ನು ನೋಡಿದ್ದೇನೆ. “ಅಪ್ನೆ ಪರಾಯೇ” ಎಂಬ ಚಿತ್ರದಲ್ಲಿ
ಘಟಾನುಘಟಿಗಳಾದ ಉತ್ಪಲ್ ದತ್ತ್ ,ಅಮೋಲ ಪಾಳೇಕರ್, ಶಬಾನಾ ಅಜ್ಮಿ ಅವರ ಜತೆಗೆ ನಟಿಸಿದ್ದಾರೆ. ಅದರಲ್ಲಿ
ಇವರದ್ದು negative
ಸ್ವಾರ್ಥಪರ ವ್ಯಕ್ತಿತ್ವ. ಅಲ್ಲಿ ನಟನೆ ಅಷ್ಟಕ್ಕಷ್ಟೇ
ಎನಿಸಿದ್ದೂ ಇದೆ. ಇನ್ನು ಆನಂದ ಭೈರವಿಯಲ್ಲಿ ಉತ್ತಮ ನಟನೆ, ಎರಡು ಮಾತಿಲ್ಲ.
ಹೀಗೆ ಇವರ ಪಾತ್ರದ ಅಗಾಧತೆಯ ಮೇಲೆ ನಟನೆ ಇಷ್ಟ ಅಥವಾ ಇಲ್ಲ ಎಂದೆನಿಸಬಹುದಾದಂಥ ಏರಿಳಿತಗಳ ನಟ ಎಂದು ನನ್ನ ಅನಿಸಿಕೆ. ಹಿಂದಿಯ
ಸಂಜೀವಕುಮಾರನಂತೆ, ಕನ್ನಡದ ಅನಂತನಾಗ್,ರಾಜಕುಮಾರನಂತೆ, ಇಂಗ್ಲೀಷಿನ ಮಾರ್ಗನ್ ಫ್ರೀಮನ್ನಂತೆ ನೂರಕ್ಕೆ ನೂರು
ಎನ್ನುವಂಥ ನಟನಾ ಕೌಶಲ್ಯ ಇದ್ದಿತ್ತೆ ಇಲ್ಲವೇ ಎಂಬುದು ನನ್ನ ಜಿಜ್ಞಾಸೆ. ಎಲ್ಲಾ
ರೀತಿಯ ಪಾತ್ರಕ್ಕೆ ಕಾರ್ನಾಡ್ ಹೊಂದುತ್ತಿರಲಿಲ್ಲ; ಅಷ್ಟೇ ಅಲ್ಲ, ನವರಸಂಗಳ ಮುಖಭಾವಗಳನ್ನು ಬಿಂಬಿಸುವ ಪಾತ್ರಕ್ಕೆ ಎಷ್ಟು
ನ್ಯಾಯ ಒದಗಿಸಬಲ್ಲವರಾಗಿದ್ದರು ಎಂಬುದು ಹೇಳುವುದು ಕಷ್ಟ. ಸಾಧಾರಣ ನಟನೊಬ್ಬ ತನ್ನ ಪರಿಚಯ
ಪ್ರಸ್ತುತತೆ ಉಳಿಸಿಕೊಳ್ಳುವುದರ ಮೂಲಕ ಅಸಾಧಾರಣ ಎತ್ತರಕ್ಕೆ ಏರಬಹುದು ಎಂದು ನಮಗೆ
ತಿಳಿಯುತ್ತದೆ. ಇಷ್ಟಾಗಿಯೂ
ಕಾರ್ನಾಡರು ಕಡೆಯವರೆಗೆ ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿದ್ದರು ಎಂಬುದು ಗಮನಾರ್ಹ.
ಗಣಿತಶಾಸ್ತ್ರದಲ್ಲಿ ಪದವಿಗಳಿಸಿದ ಗಣಿತಜ್ಞ, ಸಾಹಿತ್ಯ-ಸಿನೆಮಾ ಕೃಷಿಯಲ್ಲಿಯೂ ಆ ಗಣಿತಶಾಸ್ತ್ರ ಬೇಡುವ ಶಿಸ್ತು,ಅಚ್ಚುಕಟ್ಟುತನಗಳನ್ನು ರೂಢಿಸಿಕೊಂಡಿದ್ದರು ಎಂಬುದು
ಪ್ರಶಂಸನೀಯ,ಅನುಕರಣೀಯ ಹಾಗೂ ಅಪರೂಪವಾದ ಗುಣ.
ಕಾರ್ನಾಡ್ರು ಹೆಚ್ಚು
ಹೆಸರು ಮಾಡಿದ್ದು ತಮ್ಮ ನಾಟಕಗಳ ಮೂಲಕ ಎಂದು ಓದಿ ತಿಳಿದಿದ್ದೇನೆ. ನಾನು ಖುದ್ದಾಗಿ ಅವರ
ನಾಟಕಗಳನ್ನು ನೋಡಿಲ್ಲವಾದರೂ ನಾನಾ ಸ್ನೇಹಿತರಿಂದ ಕೇಳಿದ್ದೇನೆ. ಮೆಚ್ಚುಗೆಯ ಮಾತುಗಳು
ಬಹುತೇಕರದ್ದು. ಆ ಮಟ್ಟಿಗೆ ಅವರೊಬ್ಬ ಯಶಸ್ವೀ ನಾಟಕಕಾರರೇ ಸರಿ ಎನ್ನಬಹುದು. . ಲೋಕಮೆಚ್ಚಿದ
ಬರಹಗಾರ!! ತಾವೇ ಹೇಳಿದಂತೆ ಅವರು ತಮ್ಮ ನಾಟಕಗಳನ್ನು ನಿರ್ದೇಶಿಸಿರಲಿಲ್ಲವಂತೆ. ಇದು ಒಂದು
ನಷ್ಟವೇ ಸರಿ. ಇತಿಹಾಸ ಪುರಾಣಗಳನ್ನು ತಳಹದಿ ಮಾಡಿಕೊಂಡು ನಾಟಕಗಳನ್ನು ರಚಿಸಿ ಹೆಸರು ಮಾಡಿದರು.
ನಮ್ಮ ಪುರಾಣಗಳ ಕಥೆಗಳನ್ನು ಯಥೇಚ್ಚವಾಗಿ ಬಳಸಿಕೊಂಡು ತಮಗೆ ಬೇಕಾದಂತೆ ಕಥಾವಸ್ತುವನ್ನು
ಪ್ರತ್ಯಾತ್ಮಕ-ನೇತಾತ್ಮ್ಯಕ ಬಣ್ಣಗಳನ್ನೂ ಕೊಟ್ಟು ನಿರೂಪಿಸಿದ ಕಾರ್ನಾಡರು, ಅಷ್ಟೊಂದು ಸ್ವಾತಂತ್ರ್ಯವನ್ನು ಕೊಟ್ಟ ಸನಾತನ ಧರ್ಮದ ಬಗ್ಗೆ, ಭಾರತೀಯ ಸಂಸ್ಕೃತಿಯ
ಬಗ್ಗೆ ತಿರಸ್ಕಾರ ಎನ್ನುವಂಥ
ಮನೋಭಾವನೆಯನ್ನೇ ತಮ್ಮ ಮಾತು ಕೃತಿಗಳಲ್ಲಿ ಕಡೆಯವರೆಗೂ ತೋರುತ್ತಾ ಬಂದಿದ್ದು
ವಿಪರ್ಯಾಸಕರ.ಕೃತಿಕಾರನಿಗೆ ತನಗೆ ಬೇಕಾದ ಸ್ವಾತಂತ್ರ್ಯ ಇರಬೇಕು ಎಂಬುದು ಬಹುತೇಕ ಕಾರ್ನಾಡು
ಹಾಗೂ ಅವರಂತಹ ಬಳಗದವರ ಅಂಬೋಣ. ಮೂಲ ಸತ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ತಮ್ಮ ನಿರೂಪಣೆಯನ್ನು
ಹೆಣೆಯಬೇಕು ಎಂಬ ಪ್ರಾಮಾಣಿಕ ಕಳಕಳಿ ಇವರಿಗಿರುವುದಿಲ್ಲ. ಒಂದು ಉದಾಹರಣೆ ನೋಡೋಣ: ಯಯಾತಿ ಎಂಬ
ಚಂದ್ರವಂಶದ ಚಕ್ರವರ್ತಿಯೊಬ್ಬ ಮಹಾ ಪರಾಕ್ರಮಿಯೂ ,ಧರ್ಮಿಷ್ಟನೂ, ಕಾಮ ಲೋಲುಪನೂ, ಮಗನ ಯೌವ್ವನ
ಕೇಳಬಲ್ಲ ಸ್ವಾರ್ಥಿಯೂ, ಕೊನೆಗೆ ಐಹಿಕ ಲೋಲುಪತೆಯ ನಿಕೃಷ್ಟತೆಯನ್ನು ಮನಗಂಡು,ಎಲ್ಲವನ್ನೂ ತ್ಯಜಿಸಿ ನಡೆವ ವಿರಾಗಿಯೂ ಆಗುವಂತಹ
ಅದ್ಬುತ ಮಾನವ ರೂಪಕವನ್ನು ಕೊಟ್ಟ ನಮ್ಮ ಧರ್ಮ-ಪರಂಪರೆಯು ಕಾರ್ನಾಡರಿಗೆ ಹಾಲು ಹಿಂಡಬಲ್ಲ
ಹಸುವಾಯಿತೇ ಹೊರತು ಪೂಜನೀಯವಾದ ಗೋವು ಆಗಲೇ ಇಲ್ಲ!! ಇದು ಅವರಲ್ಲಿ ನನಗೆ (ಅವರಂಥ ಇನ್ನೂ ಎಷ್ಟೋ)
ಕಂಡು ಬರುವ ಬಹು ದೊಡ್ಡ ವಿರೋಧಾಭಾಸ. ಆದರೆ,ಇವರ ಘಾತಕ
ಇಬ್ಬಂದಿತನ
ತುಘಲಕ್ ಹಾಗೂ
ಟಿಪ್ಪುವನ್ನು ಕುರಿತು ಅವರು ರಚಿಸಿದ ನಾಟಕಗಳಲ್ಲಿ, ಆ ಇಬ್ಬರೂ ಮತಾಂಧ
ರಾಜರ ಕ್ರೌರ್ಯ ಅಸಹಿಷ್ಣುತೆ, ಪರಧರ್ಮ ಪೀಡನೆಯ ಕುರಿತಾಗಿ ಸಾಕಷ್ಟು ಐತಿಹಾಸಿಕ
ಪುರಾವೆಗಳಿದ್ದಾಗ್ಗ್ಯೂ ಅವುಗಳನ್ನು ಉದ್ದೇಶಪೂರ್ವಕ ನಿರ್ಲಕ್ಷಿಸಿ ಬೇರೆಯದೇ ಜಾಡಿನಲ್ಲಿ ನಾಟಕ
ಬರೆದಿರುವುದರಲ್ಲಿ ಕಾಣುತ್ತೇವೆ. ಅಲ್ಲಿ
ಸತ್ಯವನ್ನು ಹೇಳುವ ಆ ಧೈರ್ಯವಾಗಲೀ
ಪ್ರಾಮಾಣಿಕತೆಯಾಗಲೀ ಹಲವು “ಪ್ರಶಸ್ತಿಗಳಿಗೆ’ ಭಾಜನರಾಗಿರುವ
ಅವರಿಂದ ಕಾಣುವುದಿಲ್ಲ;ನಿರೀಕ್ಷಿಸುವುದು ಅವಾಸ್ತವೇ ಇರಬಹುದು. ಹಾಗೆಯೇ
ಬಹಮಣಿಯನ್ನು ಹಾದಿ ಹೊಗಳುತ್ತಲೇ ಭವ್ಯ ವಿಜಯನಗರದ, ಸಹಿಷ್ಣುತೆಯನ್ನು
ತೋರಿಯೇ ಅವಸಾನಕ್ಕೀಡಾದ ರಾಮರಾಯನ ವಿಡಂಬನೆಯಲ್ಲಿ ಕಾಣುತ್ತೇವೆ. ಇದೆ ಜಾಡನ್ನು ಹಿಡಿದು ಹೊರಟರೆ
ವಾಸ್ತವ ಜೀವನದಲ್ಲೂ ಗೋವಿನ ಮಾಂಸ ಭಕ್ಷಣೆಗೆ ತೋರಿದ ಆಸ್ಥೆಯನ್ನು ಹಂದಿಯ ಮಾಂಸದ ಭಕ್ಷಣೆಯಲ್ಲಿ
ತೋರಿಸಲಿಲ್ಲ ಎಂಬುದು ಅದೇ ವಿರೋಧಾಭಾಸದ ಇನ್ನೊಂದು ಮುಖ. ಎಷ್ಟೋ ಕಲಾವಿದರು ಈ ರೀತಿ ಇಲ್ಲ.
ಇಲ್ಲಿ ನಾವು ದೂರದರ್ಶನದ ಧಾರಾವಾಹಿಗಳಲ್ಲಿ ನಟಿಸಿ, ದಿಗ್ದರ್ಶಿಸಿ, ನಾಟಕಗಳನ್ನು ರಚಿಸಿ ರಂಗದಮೇಲೆ ನಟಿಸಿ ನಿರ್ದೇಶಿಸಿ
ಕಾಯಾ ವಾಚಾ ಮನಸಾ ಏಕರೂಪವಾಗಿ ಬದುಕಿ ಬಾಳಿ ಇತರರನ್ನು ಬೆಳೆಸಿ ಸಮಾಜಮುಖಿಯಾಗಿ ಹಲವಾರು
ಕಾರ್ಯಗಳನ್ನು ಮಾಡುತ್ತಿರುವ ನಾಟಕ ರಂಗದವರೇ ಆದ ಶ್ರೀ ಎಸ್.ಏನ್
ಸೇತೂರಾಂ ಅವರನ್ನು ಕಾರ್ನಾಡರ ಜತೆಗೆ ತೂಗಿ ನೋಡಬಹುದು.
ಕಾರ್ನಾಡರ ಮತ್ತೊಂದು ಕ್ಷೇತ್ರ ಸಿನೆಮಾ ನಿರ್ದೇಶನ.
ಹಿಂದಿಯ
ಉತ್ಸವ್ ನನ್ನ ಅಚ್ಚುಮೆಚ್ಚಿನ ಸಿನೆಮಾ. ಎಷ್ಟು ಸಾರಿ
ನೋಡಿದರೂ ಏನೋ ಒಂದು ಹೊಸ ಅಂಶ ಗೋಚರಿಸುತ್ತದೆ. ಶಶಿ ಕಪೂರನ ನಟನೆಗೆ ಕೆಲವು ಸಾರಿ ನೋಡಿದ್ದೇನೆ.
ಇನ್ನು ಕನ್ನಡದ
ಒಂದಾನೊಂದು ಕಾಲದಲ್ಲಿ, ತಬ್ಬಲಿಯು ನೀನಾದೆ ಮಗನೆ ಎರಡೂ ಚೆನ್ನಾಗಿ
ಮೂಡಿಬಂದಿವೆ. ಕಾಡು, ವಂಶವೃಕ್ಷ ನನಗೆ ಇಷ್ಟವಾಗಲಿಲ್ಲ. ಇಷ್ಟಾನಿಷ್ಟಗಳು
ವ್ಯಕ್ತಿಗತ. ಕೆಲವು ಇಷ್ಟವಾಗಬಹುದು ಕೆಲವು ಇಲ್ಲ. ಶ್ರೀ ಭೈರಪ್ಪನವರ ಕಾದಂಬರಿಯಾಧರಿಸಿದ
ಸಿನೆಮಾಗಳನ್ನು ಮಾಡಿ ಹೆಸರು, ಪ್ರಶಸ್ತಿ ಹಣ ಎಲ್ಲವು ಸಂದಮೇಲೆ ಅವರ ಸೈದ್ಧಾಂತಿಕ ವಿರೋಧಿಯಾಗಿ ಬದಲಾಗಿದ್ದೊಂದು ವಿಪರ್ಯಾಸ. ಹೊಳೆ ದಾಟಿದ ಮೇಲೆ
ಅಂಬಿಗನಿಗೇನೋ ಅಂದರು ಎಂದೆನ್ನುವ ಗಾದೆಯೊಂದು ನಿಮ್ಮ ಮನಸ್ಸಿನಲ್ಲಿ ಸುಳಿದುಹೋಗಬಹುದು.
ಟಿಪ್ಪುವಿನ ಕುರಿತಾದ ಸುದೀರ್ಘ ವಾದ ವಿವಾದದಲ್ಲಿ ಭೈರಪ್ಪನವರ ನೇರ, ಆಧಾರಸಹಿತವಾದ ಟಿಪ್ಪಣಿ ಟೀಕೆಗಳಿಗೆ ಉತ್ತರಿಸಲಾಗದ
ಕಾರ್ನಾಡು ವ್ಯಕ್ತಿ ನಿಂದನೆಯ ಹಂತಕ್ಕೆ ಇಳಿದ ವಿಪರ್ಯಾಸವನ್ನು, ಹೊಣೆಗೇಡಿತನವನ್ನು ಸುಮತೀಂದ್ರ ನಾಡಿಗರು ತಮ್ಮ
ಸಾಹಿತ್ಯ ಚರಿತ್ರೆ ಪುಸ್ತಕದ ಲೇಖನವೊಂದರಲ್ಲಿ ಸ್ಫುಟವಾಗಿ ವಿವರಿಸಿದ್ದಾರೆ. ಸನಾತನ ಧರ್ಮಕ್ಕೆ
ಅಪಚಾರ ಎಸಗಿದ ಹಾಗೆ ಭೈರಪ್ಪನವರನ್ನೂ ಬಳಸಿಕೊಂಡ ಕಾರ್ನಾಡರಿಗೆ, ಏಣಿ ಏರಿದಂತೆ ಯಾವ ಬಣದ ಜತೆಗೆ ಗುರುತಿಸಿಕೊಂಡರೆ ತಮಗೆ
ಸಲೀಸು ಎಂಬುದು ಅನಂತಮೂರ್ತಿಯಂತೆ ಇವರಿಗೂ ಕಂಡಿದ್ದಿರಬಹುದು!! ತಾವೇ ಹೇಳಿಕೊಂಡಂತೆ
ಜ್ಞಾನಪೀಠಕ್ಕೆ ಲಾಬಿ ಮಾಡಿ ಪಡೆಯಬೇಕೆಂದಿದ್ದರೆ ಆಯಾ ಬಣದ ಜತೆಗೆ ಗುರುತಿಸಿಕೊಳ್ಳುವುದು
ಅನಿವಾರ್ಯವಷ್ಟೇ.
ಕಲಾವಿದರನ್ನು ಕಲೆಯ
ಮಸೂರದ ಮೂಲಕವೇ ನೋಡಬೇಕು, ಅವರ ವೈಯಕ್ತಿಕ ಜೀವನವನ್ನಾಗಲೀ , ಕಲೆಯ ಆಚೆಗಿನ ಬದುಕನ್ನು ವಿಶ್ಲೇಷಿಸಲು ಹೋಗಬಾರದು. ಅದು ಅವರ ವ್ಯಕ್ತಿತ್ವಕ್ಕೆ
ಮಾಡುವ ಅಪಮಾನ-ಅನ್ಯಾಯ ಎಂಬ ವಾದವಿದೆ. ಅಂತಹ ಹಲವರ ಜತೆಗೆ ಚರ್ಚೆ, ವಾದ, ಜಗಳ ಎಲ್ಲವನ್ನೂ
ಮಾಡಿದ್ದೇನೆ. ಆದರೆ ಈ ಉದಾರವಾದಿಗಳು, ಪ್ರಶ್ನೆಯಲ್ಲಿರುವ
ಕಲಾವಿದನ ಬದುಕು ಕಲೆಯ ಕ್ಷೇತ್ರಕ್ಕೆ (ಸಾಹಿತ್ಯವೂ ಸೇರಿ) ಮಾತ್ರ ಮೀಸಲಾಗಿತ್ತೆ ಅಥವಾ ಅವರು ಸಮಾಜದೊಂದಿಗೆ ನೇರ ಅಥವಾ ಪರೋಕ್ಷ ಪರಿಣಾಮಗಳಲ್ಲಿ
ಭಾಗಿಯಾಗಿದ್ದಾರೆಯೇ ಎಂದು ಕೇಳಿದಾಗ ಅದಕ್ಕೆ ಕಿವಿಗೊಡರು. ಕೆ.ಎಸ್. ಅಶ್ವಥ್, ಬಾಲಕೃಷ್ಣ, ಸಿದ್ಧಲಿಂಗಯ್ಯ, ವಿಜಯಭಾಸ್ಕರ್, ಪಿ.ಬಿ. ಶ್ರೀನಿವಾಸ್, ಎಸ್ ಜಾನಕಿ, ಇತ್ಯಾದಿ ಕಲಾವಿದರು, ತಣ್ಣಗೆ ಸಾಹಿತ್ಯ ಕೃಷಿ ಮಾಡಿ ಮರೆಯಾದ ಪು.ತಿ.
ನರಸಿಂಹಾಚಾರ್, ಕೆ.ಎಸ. ನ ಇತ್ಯಾದಿ ನೇರವಾಗಿ ಸಮಾಜದ ಆಗು ಹೋಗುಗಳಲ್ಲಿ
ತಲೆ ಹಾಕಲಿಲ್ಲ, ಪ್ರಕ್ಷುಬ್ಧತೆ ಉಂಟುಮಾಡಲಿಲ್ಲ, ವಿವಾದಗಳಲ್ಲಿ ಕೈಹಾಕಿ ಉರಿ ಹಚ್ಚಲಿಲ್ಲ. (ಅವರೆಲ್ಲರೂ
ನೆಟ್ಟಗೆ ನೇರವಾಗಿ ಬದುಕಿದರು ಎಂಬುದು ಬೇರೆಯೇ ವಿಷಯ ,ಅದಿರಲಿ.) ಆದರೆ
ಗಿರೀಶ್ ಕಾರ್ನಾಡು ಇದ್ಯಾವುದಕ್ಕೂ ಹಿಂಜರಿಯಲಿಲ್ಲ. ಅದರಲ್ಲೂ ಅವರ ನಿಲುವು ಒಂದು ಬಣದ (ಒಂದು ಸಮುದಾಯದವರು, ಎಡಪಂಥೀಯರು, ದೇಶವಿರೋಧಿಗಳು,ನಗರ ನಕ್ಸಲರು,ಇತ್ಯಾದಿ) ಕಡೆಗೆ ಇದ್ದುದು
ಹಾಗೂ ಸನಾತನಧರ್ಮ
ವಿರೋಧಿಯಾಗಿದ್ದುದು ಎಲ್ಲರ ಅರಿವಿಗೂ
ಬಂದಿರುವುದೇ ಆಗಿದೆ. ಹಾಗಾಗಿ ಅವರ ನಂಬಿಕೆ ನಿಲುವುಗಳನ್ನು ತೂಗಿನೋಡುವುದು ಸಹಜವೂ ನ್ಯಾಯಪರವೂ
ಆಗಿದೆ..
ಕನ್ನಡದಿಂದ ಬದುಕು
ಕಟ್ಟಿಕೊಂಡ ಕಾರ್ನಾಡು ತಮ್ಮ ಬಳಗದ ಅನೇಕರಂತೆ ಅದನ್ನು ಹಾಲು ಹಿಂಡುವ ಹಸುವಾಗಿ (ಮಾಂಸದ ಆಕರ
ಎಂದಾದರೂ ಅನ್ನಿ)
ಬಳಸಿದರೇ ಹೊರತು ಅದಕ್ಕೆ ಮೇವು ಹಾಕಲಿಲ್ಲ. ಅವರ ಮೊದಲ ನಾಟಕ
ಯಯಾತಿಯಿಂದ ಮಾ ನಿಷಾದ ಎಂಬುವುದರವರೆಗೆ ಅಷ್ಟು ವರ್ಷಗಳಲ್ಲಿ ಕನ್ನಡ ನಿರಂತರ ಶಾಲೆ ಕಾಲೇಜುಗಳಲ್ಲಿ ಸೊರಗುತ್ತಲೇ
ಬಂತು. ಸಂವಹನದಲ್ಲಿ ಬೆರೆಕೆಯಾಗುತ್ತಲೇ ಹೋಯಿತು. ಅದರ ಬಗ್ಗೆ ಅವರಾಗಲೀ ಅವರ ಬಳಗವಾಗಲೀ ಯಾವ ಹೋರಾಟವನ್ನೂ ಮಾಡಲಿಲ್ಲ,ಜಾಗೃತಿಯನ್ನೂ ಮೂಡಿಸಲಿಲ್ಲ!! ನಕ್ಸಲರಿಗೆ ಮಿಡಿದ
ಕರುಳು ಕನ್ನಡಕ್ಕೆ ಮಿಡಿಯದೇ ಹೋಗಿದ್ದು ಹೇಗೆ?ಸರಕಾರದ ಆಯಕಟ್ಟಿನ
ಜಾಗಗಳಲ್ಲಿ ಇವರ ಮಾತು ಕೇಳುವ ಜನರಿದ್ದರೂ ಇವರು ಕನ್ನಡದ ದುಸ್ಥಿತಿಯನ್ನು ಕಂಡು ಕೊರಗಲಿಲ್ಲ,ಮರುಗಲಿಲ್ಲ,. ಜಾಗತಿಕ ರಂಗದಲ್ಲಿ ಕನ್ನಡಕ್ಕೆ ಸ್ಥಾನ ದೊರಕಿಸಿದರು ಎಂಬ ಹೊಗಳಿಕೆ ಕೇಳಿಬರುತ್ತದೆಯಾದರೂ
ಬೇರು ಸಾಯುವಾಗ ಮನಮೋಹಕ ಚಿಗುರಿನ ಪ್ರಯೋಜನವಾದರೂ ಏನು? ಕಾರನಾಡರದ್ದು ಆ
ಮಟ್ಟಿಗೆ
“elite” ಗುಂಪಿನ
ಕನ್ನಡವಷ್ಟೇ. ಇಲ್ಲಿ ಭೈರಪ್ಪನವರನ್ನು ನೆನೆಯಬೇಕು. ತಮ್ಮ ಪುಸ್ತಕದ ರಾಯಧನ ತಮ್ಮದು; ಅದಕ್ಕೆ ಗುರುತಿಸಿ ಬಂದ ಪ್ರಶಸ್ತಿ ಸಮಾಜದ್ದು ಎಂಬ ಭಾವ ಅವರದ್ದು (ಅಂತಹ
ಎಲೆಮೆರೆಯ ಕಾಯಿಯಂತಹ ಬಹಳ ಜನರಿದ್ದಾರೆ). ಶಾಲೆ, ಕಾಲೇಜು, ಗ್ರಂಥಾಲಯ, ಸಮುದಾಯ ಭವನ , ಪ್ರಶಸ್ತಿ, ಕನ್ನಡ ಅಭಿವೃದ್ಧಿ
ಹೀಗೆ ಅವರು ಎಲ್ಲ ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ವರಪುರುಷರು. ಆ ಉದಾತ್ತತೆಯನ್ನು
ಕಾರ್ನಾಡರಾಗಲೀ ಅನಂತಮೂರ್ತಿಯಾಗಲೀ, ಲಂಕೇಶ ಆಗಲೀ, ಆತನ ಮಗಳು ಗೌರಿಯಾಗಲೀ ಅಥವಾ ಆ ಬಣದ ಯಾರೇ ಅಗಲೀ
ಮಾಡಲಿಲ್ಲ ಎಂಬುದು ಗಮನಾರ್ಹ. ಪ್ರಗತಿಪರ ಎಂದು ತಮಗೆ ತಾವೇ ಕರೆದುಕೊಂಡು ಸಮಾಜ ಸ್ವಾಸ್ಥ್ಯಕ್ಕಿಂತ
ವ್ಯಕ್ತಿಸ್ವಾತಂತ್ರ್ಯವೇ ಪ್ರಮುಖವಾದದ್ದು ಎಂದು ಪ್ರತಿಪಾದಿಸುವ ಇವರು ನಿರ್ಲಕ್ಷಿಸುವ ಮತ್ತೊಂದು
ಅಂಶವೆಂದರೆ ಇವರುಗಳು ಯಾರೂ ಒಂದು ಭಯೋತ್ಪಾದನೆಯ ಅಥವಾ ಇನ್ಯಾವುದೇ ಅಪರಾಧ -ಅನಾಚಾರಗಳಿಗೆ
ಬಲಿಯಾದವರ ಪರವಾಗಿ ದನಿಯೆತ್ತದಿರುವುದು. ನಕ್ಸಲರೆಂದರೆ ಅಪ್ಯಾಯಮಾನವಾಗಿರುವ ಇವರು ಅವರ
ಕುಕೃತ್ಯಗಳಿಗೆ ಬಲಿಯಾದ ನಾಗರೀಕರಿಗಾಗಲಿ, ಸೈನಿಕರಿಗಾಗಲೀ
ಮಿಡಿಯಲಾರರು. ನಗರ ನಕ್ಸಲರ ಮೇಲೆ ದಾಳಿನಡೆದಾಗ ಮೂಗಿನಲ್ಲಿ ನಳಿಕೆಯಿದ್ದರೂ ಪ್ರತಿಭಟಿಸಿದ
ಕಾರ್ನಾಡ್ ಬೇರೆ ಯಾವ ಸಮಾಜಮುಖಿಯಾದ ಚಳುವಳಿಯಲ್ಲಿ ಸಕ್ರಿಯರಾಗಿದ್ದರು ಎಂಬುದು ದುರ್ಬಿನ್ ಹಾಕಿ
ಹುಡುಕಿದರೂ ಕಾಣಲಾರದು. ಸಮಾಜ ಪ್ರಜ್ಞೆ , ಸಮಾನತೆ ಇತ್ಯಾದಿ
ಮಣ್ಣು ಮಸಿ ಎಂದು ಬಡಬಡಿಸುವ ಇವರು ತಮ್ಮ ಐಷಾರಾಮಿ ಜೀವನ ಬಿಟ್ಟು ಬದುಕಲಾರರು. ವ್ಹಿಸ್ಕಿ, ಸ್ಕಾಚು,ರಮ್ಮು, ಎಲ್ಲಾ ಬೇಕು!! ಸರಕಾರದ ಸಂಬಳ,ಸವಲತ್ತು, ಬಂಡವಾಳಶಾಹಿಯ
ಸಿನೆಮಾ,ರಕ್ಷಣಾ ವ್ಯವಸ್ಥೆಯ ಪೋಲಿಸರ ಭದ್ರತೆ ಎಲ್ಲವೂ ಬೇಕು; ಆದರೂ ವ್ಯವಸ್ಥೆಯ ವಿರುದ್ಧದ ಚಟುವಟಿಕೆ
ನಡೆಸುತ್ತಿರಬೇಕು!! ನಕ್ಸಲರನ್ನು ಬೆಂಬಲಿಸಿದ ಕಾರ್ನಾಡ್ ತಮ್ಮ ಮಕ್ಕಳನ್ನು ವಿದೇಶೀ
ವಿದ್ಯಾಲಯಗಳಲ್ಲಿ ಓದಿಸಿ ಭದ್ರ ಮಾಡಿದರು ಎಂಬುದು ನೋವಿನ ಸಂಗತಿ. ಕಂಡವರ ಬಡವರ ಮಕ್ಕಳು ಕಾಡು
ಪಾಲಾಗಿ ಬಂದೂಕು ಎತ್ತಿಕೊಂಡು ಒಂದಲ್ಲಾ ಒಂದುದಿನ ಪೋಲೀಸರ ಬಂದೂಕಿಗೋ ಇಲ್ಲಾ ತಮ್ಮವರದ್ದೇ ಗುಂಡಿಗೋ ಬಲಿಯಾಗಿ ಮಣ್ಣು
ಪಾಲಾಗುತ್ತಿದ್ದರೆ ಈ ಎಲ್ಲ ನವ ಕಮ್ಮ್ಯುನಿಷ್ಟರ ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ-
ಬಂಡವಾಳಶಾಹಿಗಳ ಜಗತ್ತಿನಲ್ಲಿ!!.
ಕನ್ನಡ ಒಂದು
ಸಮೃದ್ಧವಾದ ಭಾಷೆ. ಕಾರ್ನಾಡರಿಗೆ ಮೊದಲೂ , ಅನಂತರವೂ ಸದ್ಯದ
೩೦-೬೦ ವರ್ಷದ ಪೀಳಿಗೆ ಇರುವವರೆಗೆ ಸಾಹಿತ್ಯ, ಕಲೆ, ಸಂಗೀತ, ನಾಟ್ಯ, ನಾಟಕ,ಚಲನಚಿತ್ರಗಳಲ್ಲಿ
ಹೊಸ ಪ್ರತಿಭೆಗಳು, ಸಾಧಕರು ಬಂದು ಹೋಗುತ್ತಾರೆ. ಕಾರ್ನಾಡರ ಸಾವು ಒಂದು
ನಷ್ಟವಾದರೂ ತುಂಬಲಾರದ್ದಲ್ಲ; ಒಬ್ಬರಲ್ಲಾ ಒಬ್ಬರು ಬಂದಾರು. ಆದರೆ ಇವರುಗಳ ನಿಲುವು
ನಡತೆಗಳು ಮಾಡಿರುವ ಹಾನಿ ದೀರ್ಘಕಾಲಿಕವಾದದ್ದು. ಯಾವುದೇ ವ್ಯಕ್ತಿಯ ಚಿತ್ರಣವನ್ನು ನೀಡುವಾಗ
ಸಮಗ್ರ ಪರಿಗಣನೆ ಅತಿ ಅವಶ್ಯಕ;ಆದ್ದರಿಂದಲೇ ಕಾರ್ನಾಡ್ ಎಂಬ ಕಲಾವಿದನನ್ನು ಅವೇ
ಮೌಲ್ಯಗಳ ತೂಗುಕಲ್ಲಿನಲ್ಲಿ ತಕ್ಕಡಿಯಲ್ಲಿಟ್ಟು ತೂಗಿನೋಡುವುದು ಅವರು ಮರೆಯಾದ ಈ ಸಂದರ್ಭದಲ್ಲಿ
ಆದ್ಯತೆಯಾಗಬೇಕಿದೆ. ಬದುಕಿನುದ್ದಕ್ಕೂ ಹಿಂದೂಧರ್ಮವನ್ನು ಬೈಯುತ್ತಲೇ ವಾಯುಸ್ತುತಿ ಪಠಿಸಿ, ಮಾಧ್ವಸಂಪ್ರದಾಯದ ಪ್ರಕಾರ ಗಂಧದ ಕೊರಡುಗಳ ಜತೆಗೆ
ಪರಂಧಾಮಗೈದ
ಅನಂತಮೂರ್ತಿಯಷ್ಟು ಆಷಾಢಭೂತಿಯಲ್ಲದ, ಮಾತಿನಲ್ಲಿಯೇ ಮನೆ ಕಟ್ಟಡ ಕಾರ್ನಾಡರಿಗೆ ಒಂದು
ಗಾಂಭೀರ್ಯತೆ ಜತೆಗೆ ಎತ್ತರದ ನಿಲುವು, ಸ್ಫುರದ್ರೂಪ, ತೀಕ್ಷ್ಣಮತಿ ಎಲ್ಲವೂ
ಇತ್ತು ಹಾಗೂ ಅವುಗಳನ್ನು
ಚೆನ್ನಾಗಿ ಬಳಸಿಕೊಂಡರು ಸಹ. ಕಾಲಕಾಲಕ್ಕೂ ಒಂದಲ್ಲಾ ಒಂದು ಪ್ರಶಸ್ತಿ, ಪುರಸ್ಕಾರ, ಹುದ್ದೆ, ಅಧಿಕಾರ ಅನುಭವಿಸುತ್ತಲೇ ನಡೆದ ಕಾರ್ನಾಡರು
ಕೊಟ್ಟದ್ದಕ್ಕಿಂತಲೂ ಪಡೆದದ್ದೇ ಹೆಚ್ಚು. ಆ ಲೆಕ್ಕದಲ್ಲಿ ಅವರೂ ಸಹ ಒಬ್ಬ ಸಮಾಜ ಎಂಬ ಪುರುವಿನಿಂದ
ಯೌವ್ವನವನ್ನು ಹೆಚ್ಚು ಹೆಚ್ಚು ಆಗ್ರಹಿಸಿದ “ಯಯಾತಿ”ಯೇ ಸರಿ !!