‘ವಿಶ್ವವಾಣಿ’ ದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಹೊಸದೊಂದು ಆಂಗ್ಲ ಪದವನ್ನು ಸೃಷ್ಟಿಸಿದ್ದಾರೆ. ಇದು `Pendemic’ ಎನ್ನುವ
ಪದ. ೧೫-೩-೨೦ರ
‘ವಿಶ್ವವಾಣಿ’ ದಿನಪತ್ರಿಕೆಯಲ್ಲಿ ಈ ಹೊಸ ಪದವು ಹುಟ್ಟಿಕೊಂಡಿದೆ.
Pendemic ಪದದ ಅರ್ಥವೇನು? Pen ಅಂದರೆ ಲೇಖನಿ
; demic ಎನ್ನುವುದು endemic ಪದದ ಹ್ರಸ್ವ ರೂಪ
; ಕನ್ನಡದಲ್ಲಿ ಇದಕ್ಕೆ ಪಿಡುಗು ಎನ್ನುತ್ತಾರೆ. ಆದುದರಿಂದ
Pendemic ಪದಕ್ಕೆ ಲೇಖನಿಯ ಪಿಡುಗು ಅಥವಾ ಲೇಖನಿಯ ಹಾವಳಿ ಎನ್ನುವ ಅರ್ಥವಿರಬಹುದೆ!?
ಅಥವಾ Pendemic ಪದದ ಮೂಲಕ ವಿಶ್ವೇಶ್ವರ ಭಟ್ಟರು ಆತ್ಮಶೋಧನೆಯನ್ನೇನಾದರೂ
ಮಾಡಿಕೊಳ್ಳುತ್ತಿದ್ದಾರೆಯೆ? ಛೆ! ಛೆ!
ಇರಲಾರದು; ಏಕೆಂದರೆ ಈ ಲೇಖನವನ್ನು ಕರೋನಾ ಪಿಡುಗಿನ ಸಂದರ್ಭದಲ್ಲಿ
ಬರೆಯಲಾಗಿದೆ ಹಾಗೂ ಜಾಗತಿಕ ಆರೋಗ್ಯ ಸಂಘಟನೆಯು ಕರೋನಾ ಪಿಡುಗನ್ನು Pandemic ಎಂದು ಕರೆದಿದೆ. ಬಹುಶಃ ಭಟ್ಟರ ಲೇಖನವನ್ನು ಅಚ್ಚಿಸುವಾಗ ಏನಾದರೂ
ಮುದ್ರಣದೋಷವಾಯಿತೆ? ಸಾಧ್ಯವಿಲ್ಲ, ಏಕೆಂದರೆ
Pandemic ಎನ್ನುವುದರ ಬದಲಾಗಿ Pendemic ಎನ್ನುವ ಪದವು
ಈ ಲೇಖನದಲ್ಲಿ ಎರಡು ಬಾರಿ ತನ್ನ ಮುಖವನ್ನು ತೋರಿಸಿದೆ!
ಹಾಗಿದ್ದರೆ ಹೊಸ ವರುಷದ ಆ˘ಕ್ಸಫರ್ಡ ಪದಕೋಶಕ್ಕೆ ವಿಶ್ವೇಶ್ವರ
ಭಟ್ಟರ ಕೊಡುಗೆಯೆಂದು Pendemic (=ಲೇಖನಿಯ ಪಿಡುಗು) ಎನ್ನುವ ಈ ಪದವನ್ನು ಸಮರ್ಪಿಸಬಹುದು! ಜೈ ಹೋ ವಿಶ್ವೇಶ್ವರ ಭಟ್ಟ!
ವಿಶ್ವೇಶ್ವರ ಭಟ್ಟರನ್ನು ತಿರುಚುಪದಗಳ ಬ್ರಹ್ಮ ಎಂದು ಕರೆಯಬಹುದು. ಅವರು ನಿರ್ಮಿಸಿದ ತಿರುಚು ಪದಗಳು ರಂಜಕವಾಗಿರುತ್ತವೆ. ಅವರ ‘ವಕ್ರತುಂಡೋಕ್ತಿ’ ಹಾಗು ‘ಭಟ್ಟರ ಸ್ಕಾ˘ಚ್’ ಇವು ನನಗೆ ಪ್ರತಿದಿನದ ವಿನೋದದ ಗುಳಿಗೆಗಳಾಗಿವೆ. ಆದರೆ ಬಂಧುಗಳೆ, ದುರ್ದೈವದಿಂದ ಪತ್ರಕರ್ತರ ಲೇಖನಿಯ ರಭಸದಲ್ಲಿ, ಕೆಲವೊಮ್ಮೆ ಪದಗಳಷ್ಟೇ ಅಲ್ಲ. ಭಾಷೆಯೂ ಸಹ ತಿರುಚಿ ಹೋಗುತ್ತದೆ. ಮೇಲೆ ಕೊಟ್ಟ Pendemic ಇದಕ್ಕೆ ಒಂದು ಉದಾಹರಣೆ. ‘ರಭಸ’ವು ‘ರಾಸಭ’ವಾಗಬಾರದಷ್ಟೆ!
ಭಟ್ಟರ ಪ್ರಭಾವವು ಕನ್ನಡದ ಅನೇಕ ಪತ್ರಿಕೆಗಳ ಮೇಲೆ ಆಗಿದೆ. ಆದುದರಿಂದ
ಇನ್ನೂ ಕೆಲವು ಪತ್ರಿಕೆಗಳು ತಿರುಚು ಪದಗಳನ್ನು ಹಾಗು ‘ಕತ್ತರಿಸಿ-ಕೂಡಿಸು’ ಪದಗಳ ಹೆರಿಗೆಯನ್ನು ಮಾಡುತ್ತಲೇ
ಇವೆ. ಕರ್ನಾಟಕದಲ್ಲಿ
ಅತಿವೃಷ್ಟಿ ಹಾಗು ನೆರೆಹಾವಳಿ ಆದಂತಹ ಸಂದರ್ಭದಲ್ಲಿ ‘ವಿಜಯವಾಣಿ’
ಪತ್ರಿಕೆಯು ‘ನೆರೆಕನ್ನ’ ಎನ್ನುವ
ಪದದ ಹುಟ್ಟು ಹಾಕಿತ್ತು. ನಿಮಗೆ ಈ ಪದವು ಅರ್ಥವಾಯಿತೆ?
ನೆರೆಹಾವಳಿಯ ಸಂದರ್ಭದಲ್ಲಿ ಪ್ರವಾಹಪೀಡಿತರಿಗೆ ನೀಡಲಾದ ನೆರವಿಗೆ ಸರಕಾರಿ ಅಧಿಕಾರಿಗಳು ಹಾಕುತ್ತಿರುವ ಕನ್ನ
ಎನ್ನುವ ಅರ್ಥದಲ್ಲಿ, ವಿಜಯವಾಣಿ ಪತ್ರಿಕೆಯು ಈ ‘ನೆರೆಕನ್ನ’ ಪದವನ್ನು ಪ್ರಸೂತಿಸಿತ್ತು!
ಸಂಪಾದಕರೆ, ನಾವು ಪತ್ರಿಕೆಗಳನ್ನು ಓದುವುದು ಸಮಾಚಾರವನ್ನು ತಿಳಿಯಲಿಕ್ಕಾಗಿಯೇ
ಹೊರತು ಪದಬಂಧ ಕ್ವಿಝ್ ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕೆ ಅಲ್ಲ. ಇಂತಹ ತುಂಡು-ಮುಂಡ ಪದಗಳು, ತಿರುಚು ಪದಗಳು ಓದಿನ ಓಘವನ್ನು ತಡೆಯುತ್ತವೆ
; ಮುಖ್ಯವಾಗಿ ಬಾಲಕರಲ್ಲಿ ತಪ್ಪು ಭಾಷೆಯನ್ನು ಹರಡುತ್ತವೆ. ದಯವಿಟ್ಟು ಈ ಪಾಂಡಿತ್ಯಪ್ರದರ್ಶನವನ್ನು ನಿಮ್ಮ ಕಸದ ಬುಟ್ಟಿಯಲ್ಲಿ ಬಿಸಾಕಿ ಬಿಡಿ;
ಶುದ್ಧವಾದ ಪದಗಳನ್ನು ಹಾಗು ಶುದ್ಧವಾದ ಭಾಷೆಯನ್ನು ಬಳಸಲು ಕಲಿಯಿರಿ; ನಿಮ್ಮ ಸಿಬ್ಬಂದಿಗೂ ಕಲಿಸಿರಿ.
‘ವಿಜಯವಾಣಿ’ ಪತ್ರಿಕೆಯ ೧೮-೩-೨೦೨೦ರ ಸಂಚಿಕೆಯಲ್ಲಿ
‘ನಿಮ್ಮ ಮೊಬೈಲಿನಲ್ಲಿ ಕೀಟಾಣು ಇದೆಯೆ?’ ಎನ್ನುವ
ಲೇಖನವು ಪ್ರಕಟವಾಗಿದೆ. ‘virus’ ಎನ್ನುವ ಆಂಗ್ಲ ಪದಕ್ಕೆ ಸಂವಾದಿಯಾಗಿ ‘ಕೀಟಾಣು’ ಎನ್ನುವ ಪದವನ್ನು ಇಲ್ಲಿ ಬಳಸಲಾಗಿದೆ. ಈ ಲೇಖನವನ್ನು ಬರೆದವರು
ಟಿ.ಜಿ. ಶ್ರೀನಿಧಿ. ಇವರು ವಿಜ್ಞಾನ ಹಾಗು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ವಿಜಯವಾಣಿ ಪತ್ರಿಕೆಯಲ್ಲಿ
ಬರೆದಿದ್ದಾರೆ. ಸಾಮಾನ್ಯ ಓದುಗನಿಗೆ ಇದರಿಂದ ಬಹಳಷ್ಟು ಪ್ರಯೋಜನವಾಗುತ್ತಿದೆ.
ಆದರೆ, ಈ ಸಲ, ‘ಕೀಟಾಣು’
ಎನ್ನುವ ಪದವನ್ನು ಬಳಸುವ ಮೂಲಕ ಇವರು ಓದುಗನನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕೀಟ ಎಂದರೆ insect; ಅಣು ಎಂದರೆ atom. ಕೀಟಾಣು ಎಂದರೆ an insect as
small as an atom ಎಂದು ನಾವು ಅರ್ಥೈಸಿಕೊಳ್ಳಬೇಕೆ? ಅಥವಾ an atom which behaves like an insect ಎಂದು ತಿಳಿದುಕೊಳ್ಳಬೇಕೆ?
ಈಗಾಗಲೇ virus ಪದಕ್ಕೆ ವೈರಾಣು ಎನ್ನುವ ಸಮರ್ಪಕ ಪದ ಸಾರ್ವತ್ರಿಕವಾಗಿ ಬಳಕೆಯಲ್ಲಿ ಇರುವಾಗ ಬೇರೊಂದು ತಪ್ಪು
ಪದವನ್ನು ಸಾರ್ವಜನಿಕ ಬಳಕೆಯಲ್ಲಿ ತೂರಿಸುವುದರಲ್ಲಿ ಏನಾದರೂ ಅರ್ಥವಿದೆಯೆ? ಇದು ಅಕ್ಷಮ್ಯ; ಒಬ್ಬ ಜವಾಬುದಾರಿಯುತ ಓದುಗನಾಗಿ, ನಾನು ಇದನ್ನು ವಿರೋಧಿಸುತ್ತೇನೆ.
ವಿಶ್ವವಾಣಿ ಪತ್ರಿಕೆಯು ಪದಸಂಹಾರವನ್ನು
ಮಾಡುವಾಗ ಕನ್ನಡ, ಇಂಗ್ಲಿಶ್, ಹಿಂದೀ, ಸಂಸ್ಕೃತ ಎನ್ನುವ ಭೇದವನ್ನು ಮಾಡುವುದಿಲ್ಲ.
‘ವಿಮೆನ್ಸ್’ ಡೇ’ ಎನ್ನುವ ಇಂಗ್ಲಿಶ್
ಪದವನ್ನು ‘ವುಮೆನ್ಸ್ ಡೇ’ ಎಂದು ಬರೆಯಲಿಕ್ಕಾಗಲೀ,
‘ದೋಪಹರ’ ಎನ್ನುವ ಹಿಂದೀ ಪದವನ್ನು ‘ದೂಪಹರ್ ’ ಎಂದು ತಿರುಚಲಿಕ್ಕಾಗಲೀ ವಿಶ್ವವಾಣಿಯ ಸುದ್ದಿಗಾರರಿಗೆ
ಏನೂ ಮುಜುಗರವಾಗುವುದಿಲ್ಲ. ಇನ್ನು ‘ಸೃಷ್ಟಿ’
ಎನ್ನುವ ಸಂಸ್ಕೃತ ಪದವನ್ನು ‘ಸೃಷ್ಠಿ’ ಎಂದು ಬದಲಾಯಿಸುವುದು ಇವರ ಮೂಲಭೂತ ಹಕ್ಕು. ಏಕೆಂದರೆ ಮಹಾಪ್ರಾಣವು
ಸಂಸ್ಕೃತ ಭಾಷೆಯ ಜಾಯಮಾನ ಎಂದು ಈ ಕನ್ನಡ ಪಂಡಿತರು ನಿರ್ಣಯ ಕೊಟ್ಟಿದ್ದಾರಲ್ಲ! ಈ ಸಂಹಾರ ಕಾರ್ಯಕ್ರಮವು ಶೀರ್ಷಿಕೆಗಳನ್ನೂ ಬಿಟ್ಟಿಲ್ಲ. ಇವರ ಮೇರೆಗೆ
ನಮ್ಮ ಚಾಮುಂಡೇಶ್ವರಿಯು ಮಾಡಿರುವುದು ದುಷ್ಟರ ಮರ್ದನವಲ್ಲ ; ‘ದುಷ್ಟರ ಮರ್ಧನ’!
ಇವರ ಪತ್ರಿಕೆಗಳಲ್ಲಿ ಬಜರಂಗ ಪೂನಿಯಾ ಎನ್ನುವ ಕ್ರೀಡಾಪಟು ಭಜರಂಗನಾಗುತ್ತಾನೆ. ಮತ್ತೆ ಕರ್ನಾಟಕದಲ್ಲಿ ಎಲ್ಲರೂ ಭಜರಂಗ ಎಂದೇ ಹೇಳುತ್ತಾರಲ್ಲ ಎನ್ನುವ ಸಂಶಯವನ್ನು ನಮ್ಮ
ಪತ್ರಿಕಾಪಂಡಿತರು ವ್ಯಕ್ತಪಡಿಸಬಹುದು. ಸಾರ್ವಜನಿಕರು ತಾವು ಓದುವ ಪತ್ರಿಕೆಗಳನ್ನು
ಸಹಸಾ ನಂಬುತ್ತಾರೆ ; ನಂಬಿ ಕೆಡುತ್ತಾರೆ; ತಪ್ಪನ್ನೇ
ಸರಿ ಎಂದು ಭಾವಿಸಿ, ತಾವೂ ಅದನ್ನೇ ರೂಢಿಸಿಕೊಳ್ಳುತ್ತಾರೆ. ಸರಿಯಾಗಿ ಬರೆಯುವದು ಪತ್ರಿಕೆಗಳ ಕರ್ತವ್ಯ. ನೋಡಿ, ‘ವಜ್ರಾಂಗ’ ಎನ್ನುವ ಸಂಸ್ಕೃತ ಪದವು ಹನುಮಪ್ಪನ ಹೆಸರು.
ವಜ್ರಾಂಗ ಪದವು ಹಿಂದಿಯಲ್ಲಿ ‘ಬಜರಂಗ’ ಎಂದು ಬದಲಾಗುತ್ತದೆಯೆ ಹೊರತು ‘ಭಜರಂಗ’ ಎಂದಲ್ಲ. ಎರಡನೆಯದಾಗಿ ನೀವು ಉಲ್ಲೇಖಿಸುತ್ತಿರುವ ಬಜರಂಗ ಎನ್ನುವುದು
ಒಬ್ಬ ವ್ಯಕ್ತಿಯ (--ಬಜರಂಗ ಪೂನಿಯಾ, ಕುಸ್ತಿ
ಕ್ರೀಡಾಪಟು--) ಹೆಸರು. ನಿಮ್ಮ ಮನಸ್ಸಿಗೆ ಬಂದಂತೆ,
ನಿಮ್ಮ ಬುದ್ಧಿಗೆ ಎಟುಕಿದಂತೆ ಇದನ್ನು ಬದಲಾಯಿಸಲು ನಿಮಗೇನು ಅಧಿಕಾರವಿದೆ?
ಉದಾಹರಣೆಗೆ ವಿಶ್ವೇಶ್ವರ ಭಟ್ಟರ ಹೆಸರನ್ನು ‘ವಿಸವೇಸೂರ
ಬತ್ತ’ ಎಂದು ಯಾರಾದರೂ (=ಸಂಗರ ಬಟ್ಟರು)
ಬದಲಾಯಿಸಿದರೆ, ಭಟ್ಟರು ಸುಮ್ಮನಿರುತ್ತಾರೆಯೆ?
ಒಪ್ಪಿಕೊಳ್ಳುವೆ, ನಾವು ಬಳಸುವ ಭಾಷೆಯೇ ಅಸಮರ್ಥವಾಗಿದ್ದರೆ
ಇದು ಕ್ಷಮ್ಯ. ಉದಾಹರಣೆಗೆ, ‘ಕೃಪಾ’ ಎನ್ನುವ ಹೆಸರು ತಮಿಳರ ಬರಹದಲ್ಲಿ ಹಾಗು ಆ ಕಾರಣಕ್ಕಾಗಿ ಅವರ ಬಾಯಿಯಲ್ಲಿ ‘ಕಿರುಬಾ’ ಆಗಿ ಮಾರ್ಪಡುತ್ತದೆ. (ಇದೊಳ್ಳೇ
ಕತ್ತೇಕಿರುಬ!) ದಯವಿಟ್ಟು ತಮಿಳರನ್ನು ಕ್ಷಮಿಸಿರಿ, ಕೃಪಾ ಮೇಡಮ್! ಅವರು ನಿಮ್ಮ ಅವಹೇಳನವನ್ನು ಉದ್ದೇಶಪೂರ್ವಕವಾಗಿ
ಮಾಡುತ್ತಿಲ್ಲ!
ಕೇವಲ ವ್ಯಕ್ತಿಗಳ ಹೆಸರುಗಳನ್ನಷ್ಟೇ
ಅಲ್ಲ, ರಾಜ್ಯಗಳ ಹೆಸರುಗಳನ್ನೂ ಸಹ ಈ ಪತ್ರಕರ್ತರು
ಬದಲಾಯಿಸಿ ಬಿಡುತ್ತಾರೆ. ಹಿಂದೀಯಲ್ಲಿ ‘ಝಾಡ’
ಎಂದರೆ ಪೊದೆ. ಈ ಪದದಿಂದಾಗಿಯೇ ಕಸಬರಿಗೆಗೆ ಝಾಡೂ ಎಂದೂ,
ಕಸ ಉಡುಗುವವನನ್ನು ಝಾಡಮಾಲೀ ಎಂದೂ ಕರೆಯುತ್ತಾರೆ. ‘ಝಾಡಖಂಡ’
ಎನ್ನುವ ರಾಜ್ಯಕ್ಕೆ ಆ ಹೆಸರು ಬಂದದ್ದು ಆ ಪ್ರದೇಶದಲ್ಲಿ ವಿಸ್ತಾರವಾಗಿ ಬೆಳೆಯುವ
ಝಾಡ (=ಪೊದೆ)ಗಳಿಂದಾಗಿ. ಈ ಹೆಸರಿರುವ ರಾಜ್ಯವನ್ನು ನಮ್ಮ ಪತ್ರಿಕಾಕರ್ತರು (ಹಾಗು ಕನ್ನಡ
ಟೀವಿ ಜಾಣರು) ‘ಜಾರ್ಕಂಡ್’ ಎಂದೇಕೆ ಕರೆಯುತ್ತಾರೆ,
ಬರೆಯುತ್ತಾರೆ ಎನ್ನುವುದು ನನಗೆ ಅರ್ಥವಾಗದ ವಿಷಯ! ಅಲ್ರೀ
ಸsರಗಳೇ, ನೀವು ನಿಮ್ಮ ತಪ್ಪು, ಒಪ್ಪುಗಳನ್ನು ತಿಳಿಯಲು ಒಂದೇ ಸೆಕೆಂಡು ಸಾಕು ; ವಿಕಿಪೀಡಿಯಾ
ನಿಮ್ಮ ಬೆರಳುಗಳ ತುದಿಯಲ್ಲೇ ನಿಮಗೆ ಬ್ರಹ್ಮಾಂಡಜ್ಞಾನವನ್ನೇ ಕೊಡುವುದು! ಒಬ್ಬ ವ್ಯಕ್ತಿಯ ಅಥವಾ ಒಂದು ಸ್ಥಳದ ಹೆಸರನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಾಶಿಸುವ ಮೊದಲು,
ದಯವಿಟ್ಟು ವಿಕಿಪೀಡಿಯಾವನ್ನು ಒಮ್ಮೆ ನೋಡಿ,ಸಾಕು.
ಈ ಕನ್ನಡ ಪಂಡಿತರ ಪ್ರಕಾರ ಅಲ್ಪಪ್ರಾಣವು
ಕನ್ನಡದ ಜಾಯಮಾನ; ಅಂದರೆ ಹುಟ್ಟುಡುಗೆ! ಆದುದರಿಂದ ‘ಅಲ್ಪಸಂಖ್ಯಾತರ ಅನುದಾನ’ವು ವಿಶ್ವವಾಣಿಯಲ್ಲಿ ‘ಕೋತಾ’ ಆಗುವುದೇ
ಹೊರತು ‘ಖೋತಾ’ ಆಗುವುದಿಲ್ಲ! ಕಾಮಾಖ್ಯ ದೇವಸ್ಥಾನವು ಕಾಮಾಕ್ಯ ದೇವಸ್ಥಾನವಾಗುವುದು! (ದೇವಿ, ಅವರು ನಿನ್ನ (ಮಹಾ)ಪ್ರಾಣವನ್ನು ತೆಗೆಯುತ್ತಿದ್ದಾರೆಂದು
ಅವರಿಗೆ ಗೊತ್ತಿಲ್ಲ; ಅವರ ಅಪರಾಧವನ್ನು ಕ್ಷಮಿಸು!)
ಕಾಗುಣಿತದ ದೋಷಗಳಷ್ಟೇ ವಿಶ್ವವಾಣಿಯ
ವೈಶಿಷ್ಟ್ಯ ಎಂದೇನಲ್ಲ. ವ್ಯಾಕರಣದೋಷಗಳೂ
ಇಲ್ಲಿ ಕಣ್ಣಿಗೆ ಹೊಡೆಯುತ್ತವೆ. ಒಂದು ಉದಾಹರಣೆಯನ್ನು ನೋಡಿರಿ:
‘ಕರೋನಾಗೆ ಕರ್ನಾಟಕದಲ್ಲಿ ಭಯ ಬೇಡ’. ಈ ವಾಕ್ಯದ ಸೌಂದರ್ಯವನ್ನು
ನೋಡಿದಿರಾ? ಇದಕ್ಕೆ ದ್ವಂದ್ವಾರ್ಥ ಅಲಂಕಾರ ಎನ್ನುವ ಹೆಸರನ್ನು ಕೊಡಬಹುದು!
ಕರೋನಾ ಎನ್ನುವ ರೋಗಕ್ಕೆ ಕರ್ನಾಟಕದಲ್ಲಿ ಯಾವುದೇ ಭಯವಿಲ್ಲ; ಇಲ್ಲಿ ಆರಾಮಾಗಿ ಪ್ರವೇಶಿಸಬಹುದು ಎನ್ನುವುದು ಮೇಲ್ನೋಟದ ಅರ್ಥ. ಬೇರೆ ಏನಾದರೂ ಅರ್ಥವಿದ್ದರೆ, ಬರೆದವರೇ ಹೇಳಬೇಕು.
(‘ಗಿರಿಬಸಕನೇವದರಿಬ’ ಈ ಪದಸಮುಚ್ಚಯವನ್ನು ತಿರುವುಮುರುವಾಗಿ
ಓದಿರಿ.)
ಇದಕ್ಕಿಂತ ಹೆಚ್ಚಿನ ಪ್ರತಿಭೆಯ ಮತ್ತೊಂದು
ಶೀರ್ಷಿಕೆ ಹೀಗಿದೆ: ‘ಅತ್ಯಾಚಾರ ಸಂತ್ರಸ್ತೆ
ತಂದೆ ಕೊಂದ ಆರೋಪಿ’. ಈ ವಾಕ್ಯದಲ್ಲಿ ಯಾರು ಯಾರನ್ನು ಕೊಂದರು?
ಸರಿಯಾದ ಉತ್ತರವನ್ನು ಥಟ್ಟನೆ ಹೇಳಿದವರಿಗೆ ವಿಶ್ವವಾಣಿ ಪತ್ರಿಕೆಯ ಒಂದು ಪ್ರತಿಯನ್ನು
ಉಚಿತವಾಗಿ ಕೊಡಲಾಗುವುದು! (ವಿಭಕ್ತಿ ಪ್ರತ್ಯಯಗಳು, ವ್ಯಾಕರಣ ಇವೆಲ್ಲ ಯಾರಿಗೆ ಬೇಕು?. ಪತ್ರಿಕಾಕರ್ತರ ಪ್ರಕಾರ ಅವರದು
ಸ್ವತಂತ್ರ ಪ್ರತಿಭೆ; ಅವರಿಗೆ ಕನ್ನಡ ವ್ಯಾಕರಣದ ನಿಯಮಗಳು ಅನ್ವಯಿಸುವುದಿಲ್ಲ.)
ವ್ಯಕ್ತಿಗಳ ಹೆಸರುಗಳನ್ನು ಬದಲಾಯಿಸಲು
ಯಾರಿಗಾದರೂ ಅಧಿಕಾರವಿದೆಯೆ? ನಮ್ಮ ಬುದ್ಧಿಜೀವಿಗಳಿಗೆ
ಇದು ದೇವದತ್ತ ಅಧಿಕಾರ. ನೋಬೆಲ್ ಬಹುಮಾನ ವಿಜೇತರಾದ ರಬೀಂದ್ರನಾಥ ಠಾಕೂರರು
ಭಾರತದ ಹೆಮ್ಮೆ. ಇವರ ಹೆಸರನ್ನು ಯಾರಾದರೂ ಸರಿಯಾಗಿ ಉಚ್ಚರಿಸದಿದ್ದರೆ,
ಭಾರತೀಯರು ಅಸಮಾಧಾನಗೊಳ್ಳಬೇಕು. ಆದರೆ ಜ್ಞಾನಪೀಠಸ್ಥರಾದ
ಅನಂತಮೂರ್ತಿಯವರು ಠಾಕೂರರನ್ನು ಯಾವಾಗಲೂ ‘ಟ್ಯಾಗೋರ್’ ಎಂದೇ ಬ(ಕ)ರೆದಿದ್ದಾರೆ. ಇತರ ಜ್ಞಾನಿಗಳು ಇವರನ್ನು
ಅನುಕರಿಸುವುದು ಸಹಜವೇ ಆಗಿದೆ. ಅಂದ ಮೇಲೆ ವಿಶ್ವವಾಣಿಯವರು ಸುಮ್ಮನಿದ್ದಾರೆಯೆ?
‘ಟ್ಯಾಗೋರ್ ಕಿನಾರೆಯ ಮೇಲೆ ಯುದ್ಧವಿಮಾನ’ವನ್ನು ಇಳಿಸಿಯೇ
ಬಿಟ್ಟರು! ನಮ್ಮ ಊರುಗಳ ತಪ್ಪು ತಪ್ಪು ಹೆಸರುಗಳನ್ನು ನಾವು ಪ್ರಯತ್ನಪೂರ್ವಕವಾಗಿ
ಸರಿಪಡಿಸಿದ್ದೇವೆ. ಉದಾಹರಣೆಗೆ: ಬ್ಯಾಂಗಲೋರ್>>ಬೆಂಗಳೂರು, ಬೆಳಗಾಮ್>>ಬೆಳಗಾವಿ,
ಕೂರ್ಗ್>>ಕೊಡಗು ಇತ್ಯಾದಿ. ಹಾಗಿರುವಾಗ ವ್ಯಕ್ತಿಗಳ ಹೆಸರುಗಳನ್ನು ತಪ್ಪಾಗಿ ಬರೆದು, ಉಚ್ಚರಿಸಿ,
ಆ ವ್ಯಕ್ತಿಗಳಿಗೆ ಏಕೆ ಅವಹೇಳನ ಮಾಡಬೇಕು? ಇಂಗ್ಲಿಶ್ ಮಾದರಿಯನ್ನು
ಹಿಂಬಾಲಿಸುವುದು ನಮಗೆ ಗಣ್ಯತೆಯ ಪ್ರಭಾವಳಿಯನ್ನು, ಬುದ್ಧಿವಂತನ ಮುಖವಾಡವನ್ನು
ಕೊಡುತ್ತದೆ ಎನ್ನುವ ಕಾರಣಕ್ಕಾಗಿಯೆ?!
ಈ ವಿಶ್ವವಾಣಿ ಪತ್ರಿಕೆಯವರಿಗೆ ಕನ್ನಡದಲ್ಲಿ
ಪದಗಳು ಸಿಗುವುದಿಲ್ಲವೇನೊ? ಅನವಶ್ಯಕ ಆಂಗ್ಲ
ಪದಗಳು ಪತ್ರಿಕೆಯಲ್ಲಿ ಎಲ್ಲೆಲ್ಲೂ ತುಂಬಿರುತ್ತವೆ, ಮುಖ್ಯವಾಗಿ ಶೀರ್ಷಿಕೆಗಳಲ್ಲಿ.
ಉದಾಹರಣೆಗೆ, ‘ಪ್ರಾತಿನಿಧ್ಯ ಪ್ರಾಬ್ಲಂ?’ ಎನ್ನುವ ಶೀರ್ಷಿಕೆಯನ್ನು ನೋಡಿರಿ. ‘ಪ್ರಾತಿನಿಧ್ಯ ಸಮಸ್ಯೆ’
ಎನ್ನುವದಕ್ಕೆ ಇವರಿಗೆ ಏನಿದೆ ಸಮಸ್ಯೆ? ಅನೇಕರು ತಾವು
ಸುಶಿಕ್ಷಿತರೆಂದು ತೋರಿಸಿಕೊಳ್ಳಲು, ತಮ್ಮ ಮಾತಿನಲ್ಲಿ ಇಂಗ್ಲೀಶ್ ಪದಗಳನ್ನು
ಬಳಸುತ್ತಿರುತ್ತಾರೆ. ಬಹುಶಃ ವಿಶ್ವವಾಣಿ ಪತ್ರಿಕೆಯವರೂ ತಮ್ಮನ್ನು ಸುಶಿಕ್ಷಿತರೆಂದು
ತೋರಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆಯೆ? ಬ್ಯಾಡರೀ, ಇದು ವ್ಯರ್ಥ ಪ್ರಯತ್ನ ಕಣ್ರೀ!
ವಿಶ್ವವಾಣಿಯು ‘ಪ್ರತಿದಿನದ ಕ್ವಿಝ್’ ಅನ್ನುವ
ಮತ್ತೊಂದು ಕಾರ್ಯಕ್ರಮವನ್ನು ಓದುಗರ ಎದುರಿಗೆ ಇಡುತ್ತಿದೆ. ಅದೆಂದರೆ ಒಂದು
ಪದದ ಕೆಲವು ಅಕ್ಷರಗಳನ್ನು ಹಿಂದೆ ಮುಂದೆ ಮಾಡಿ ಅಥವಾ ಬದಲಾಯಿಸಿ , ಹೊಸ
ಪದವನ್ನು ನಿಮ್ಮೆದುರಿಗೆ ಇಡುತ್ತಾರೆ. ನೀವು ಸರಿಯಾದ ಪದಗಳನ್ನು ಊಹಿಸಬೇಕು:
ಕೆಲವು ಉದಾಹರಣೆಗಳು ಇಲ್ಲಿವೆ:
(೧) ಗಂಜೇದ್ರಗಡದಲ್ಲಿ ಮೂರು ದಿನ ಆಚರಣೆ
(೨) ಗುಬ್ಬಿ
ತಹಸೀಲ್ದಾರ ಮರ ನೇಮಕಕ್ಕೆ ಒತ್ತಾಯ
(೩) ಮೆಲೇಷ್ಯಾದಿಂದ ಸಕ್ಕರೆ ಖರೀದಿ
(೪) ನಮ್ಮ ದೇಶಕ್ಕೆ
ಬೇಕಿರುವುದು ತಾತ್ವಿತ ಜೀವಿಗಳು
(೫) ವಿಶ್ವ ಅರಣ್ಯ
ಮರಕ್ಷಣಾ ದಿನಾಚರಣೆ
ಸರಿಯಾದ ಉತ್ತರಗಳು ಇಲ್ಲಿವೆ:
(೧) ಗಜೇಂದ್ರಗಡದಲ್ಲಿ
ಮೂರು ದಿನ ಆಚರಣೆ
(೨) ಗುಬ್ಬಿ
ತಹಸೀಲ್ದಾರರ ಮರು ನೇಮಕಕ್ಕೆ ಒತ್ತಾಯ
(೩) ಮಲೇಶಿಯಾದಿಂದ
ಸಕ್ಕರೆ ಖರೀದಿ
(೪) ನಮ್ಮ ದೇಶಕ್ಕೆ
ಬೇಕಿರುವವರು ತಾತ್ವಿಕ ಜೀವಿಗಳು
(೫) ವಿಶ್ವ ಅರಣ್ಯ
ಮರ ರಕ್ಷಣಾ ದಿನಾಚರಣೆ
ಈ ಪದಗಳನ್ನು ಊಹಿಸಲು ನಿಮಗೆ ಕಷ್ಟವಾಗಿರಲಿಕ್ಕಿಲ್ಲ. ಆದರೆ ವಾಕ್ಯಗಳೇ ಅರ್ಥವಾಗದ ಕೆಲವು ಮಹಾಮಾದರಿಗಳು ಇಲ್ಲಿವೆ.
ಇವುಗಳನ್ನು ಸಾರ್ವಜನಿಕ ಮನರಂಜನೆಯ ಉದ್ದೇಶದಿಂದ ಇಲ್ಲಿ ಹೂಬಹೂ ನೀಡುತ್ತಿದ್ದೇನೆ:
(೧) ಕಲಾಕೃತಿಗಳನ್ನು
ಚಾಕ್ ಮೂಲಕ ಲಾಂಛನಗಳು, ಇಪ್ಪತ್ತನಾಲ್ಕು ಜೈನತೀರ್ಥಂಕರರ ಮೂರ್ತಿಗಳು,
ನಾಟ್ಯಗಣಪತಿ, ದುರ್ಗಾ, ಹನುಮಂತ,
ಶಿರಡಿಸಾಯಿ, ಕನ್ನಡದ ಜ್ಞಾನಪೀಠಪ್ರಶಸ್ತಿಪುರಸ್ಕೃತ ಡಾ.ರಾಜ್ ಕುಮಾರ್ , ಸರ್ ಎಂವಿ, ಸ್ವಾಮಿ
ವಿವೇಕಾನಂದ, ಶ್ರೀ ಶಿವಕುಮಾರ ಸ್ವಾಮೀಜಿ, ನರೇಂದ್ರ
ಮೋದಿ, ಪ್ರಣಬ್ ಮುಖರ್ಜಿ, ಸಚಿನ್ ತೆಂಡುಲ್ಕರ್,
ಅಮಿತಾ ಬಚ್ಚನ್, ರಜನಿಕಾಂತ್
ಈ ಸ್ವತಂತ್ರ ಪರಿಚ್ಛೇದದ ಅರ್ಥವೇನು? ಇಲ್ಲಿ ಕರ್ತೃ, ಕರ್ಮ,
ಕ್ರಿಯಾಪದಗಳು ಇಲ್ಲ. ಆದುದರಿಂದ ಇದನ್ನು ಒಂದು ವಾಕ್ಯವೆಂದು
ಕರೆಯುವುದು ಸಾಧ್ಯವಿಲ್ಲ. ಬಳಿಕ ಇಪ್ಪತ್ತುನಾಲ್ಕು ಎಂದು ಬರೆಯುವ ಬದಲಾಗಿ
ಇಪ್ಪತ್ತನಾಲ್ಕು ಎಂದು ಬರೆದಿದ್ದಾರೆ. ಮುಂದೆ ಬನ್ನಿರಿ. ಶಿರಡಿ ಸಾಯಿಬಾಬಾ ಎನ್ನುವ ಮಹಾನ್ ಚೈತನ್ಯಕ್ಕೆ ಶಿರಡಿಸಾಯಿ ಎಂದು ಬರೆದು ಅಪಮಾನ ಮಾಡಬಾರದು.
ಇರಲಿ ಬಿಡಿ, ಇವರು ಒಂದು ಒಳ್ಳೆಯ ಕೆಲಸವನ್ನೂ ಮಾಡಿದ್ದಾರೆ.
ಕನ್ನಡಿಗರೆಲ್ಲರ ನೆಚ್ಚಿನ ನಟ, ಪದ್ಮಭೂಷಣ ಡಾ˘.
ರಾಜಕುಮಾರರಿಗೆ ‘ವಿಶ್ವವಾಣಿ’ ಪತ್ರಿಕೆಯು ‘ಜ್ಞಾನಪೀಠ ಪ್ರಶಸ್ತಿ’ಯನ್ನು
ನೀಡಿದೆ! ರಾಜಕುಮಾರರ ಯಾವ ಸಾಹಿತ್ಯಗ್ರಂಥಕ್ಕೆ ಈ ಪ್ರಶಸ್ತಿಯನ್ನು ಕೊಡಲಾಯಿತು
ಎನ್ನುವುದನ್ನು ವಿಶ್ವವಾಣಿಯ ಸಂಪಾದಕರು ನಮ್ಮಂತಹ ಅಜ್ಞಾನಿಗಳಿಗೆ ತಿಳಿಸಿದರೆ, ಕನ್ನಡಿಗರ ಸಂತೋಷಕ್ಕೆ ಮೇರೆ ಇರದು! ಇನ್ನು ಸಚಿನ ತೆಂಡೂಲಕರ ಇವರನ್ನು
ತೆಂಡುಲ್ಕರ್ ಎಂದು ಬರೆದರೆ, ಇವರಿಗೆ ತೆಂಡೂಲ ಹಾಗು ತೆಂಡುಲ ಎನ್ನುವ ಪದಗಳ
ನಡುವಿನ ವ್ಯತ್ಯಾಸ ತಿಳಿದಿಲ್ಲವೆನ್ನುವುದು ಜಗಜ್ಜಾಹೀರಾಗುತ್ತದೆ. ಮತ್ತೆ
ಅಮಿತಾ ಬಚ್ಚನ ಎನ್ನುವ ವ್ಯಕ್ತಿಯ ಹೆಸರು ಇಲ್ಲಿದೆ. ಇವರು ಯಾರೆಂದು ನಮಗೆ
ತಿಳಿದಿಲ್ಲ. ಇವರು ಅಮಿತಾಭ ಬಚ್ಚನರ ಸಂಬಂಧಿ ಇರಬಹುದೆ?
(೨) ಬನಹಟ್ಟಿಯ
ಹಿರೇಮಠದಲ್ಲಿ ಡಾ.ಡಿ.ಎ.ಬಾಗಲಕೋಟ ಅವರ ಕತ್ತಲೆಯೊಳಗಿನ ಮಹಾಬೆಳಗು ಶಿವಯೋಗಮೀಮಾಂಸೆ ಪುಸ್ತಕ ಬಿಡುಗಡೆ ಮಾಡಿದರು.
ಬಿಡುಗಡೆ ಮಾಡಿದ್ದು ಸಂತೋಷ. ಆದರೆ ಬಿಡುಗಡೆ ಮಾಡಿದವರು ಯಾರು ಎನ್ನುವುದನ್ನು ಇಲ್ಲಿ
ರಹಸ್ಯವಾಗಿ ಇಡಲಾಗಿದೆ. ಈ ವಿಷಯವನ್ನು ಪತ್ತೇದಾರ ಪುರುಷೋತ್ತಮನಿಗೋ,
ಶೆರ್ಲಾಕ್ ಹೋಮ್ಸನಿಗೋ ಬಿಡೋಣ.
(೩) ಈ ಕೆಳಗಿನ
ಸಮಾಚಾರದ ಬರವಣಿಗೆಗಂತೂ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲೇಬೇಕು:
“ಈ ಕುರಿತಂತೆ ಶಾಸಕ ಮುರಗೇಶ ನಿರಾಣಿ ಸಹೋದರ
ಸಂಗಂಮೇಶ ನಿರಾಣಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ವಿರುದ್ಧ ವಾಚಾಳಿ ಆರಂಭಿಸಿ ಯತ್ನಾಳರ ರಾಜಕೀಯ ಅಜ್ಞಾತ
ವಾಸದ ಸಂದಿಗ್ಧ ಸ್ಥಿತಿಯನ್ನು ಇಚೆ ಹಾಕಿದ್ದು ಗೊಂದಲಕ್ಕೆ ತುಪ್ಪ ಸುರಿದಂತಾಗಿದೆ.
ಇದೊಂದು ರಾಜಕೀಯ ಸವಾಲು-ಜವಾಬಿಗೆ ಇಂಬು ನೀಡಿದ್ದು, ವಿವಾದ ಯಾವ ರೀತಿ ತಿರುವು ಪಡೆಯುತ್ತೆ, ಯಾರ ಸುತ್ತ ಗಿರಕಿ ಹಾಕುತ್ತೆ
ಯಾರ ಭವಿಷ್ಯಕ್ಕೆ ಕಂಟಕವಾಗುತ್ತೆ ಎಂಬುದನ್ನು ಕಾಲವೆ ಉತ್ತರಿಸಲಿದೆ.
ಬಿಜೆಪಿ ವಲಯದಲ್ಲಿ ಸಾಕಷ್ಟು ಅಂತೆ-ಕಂತೆಗಳು ಆಚೆ-ಇಚೆ ಬರುತ್ತಿದ್ದು
ವರಿಷ್ಠರು ಪ್ರಕರಣಕ್ಕೆ ಏನೂ ಮುಲಾಮು ಹಾಕುವರು ಎಂಬುದನ್ನು ಕಾಯಬೇಕಿದೆ. ಯತ್ನಾಳ-ನಿರಾಣಿ ರಾಜಕೀಯ ಜಿದ್ದಿಗೆ ಬೀಳುತ್ತಾ…? ಈ ಕಿಚ್ಚಿನಲ್ಲಿ ಜಿಲ್ಲೆಯ ಮತ್ಯಾರಿಗೆ ಮಂತ್ರಿಗಿರಿ ಭಾಗ್ಯ ಲಭಿಸಲಿದೆ ಎಂದು ಜನರು ಕಾಯುತ್ತಿದ್ದಾರೆ.”
ಈ ವರದಿಗಾರರು ಅಲ್ಪವಿರಾಮ, ಅರ್ಧವಿರಾಮ ಮೊದಲಾದ ಚಿಹ್ನೆಗಳ ಬಗೆಗೆ ಬೇಫಿಕೀರ್ ಆಗಿದ್ದಾರೆ.
ಕಾಗುಣಿತಗಳಿಗೂ ಅದೇ ದುರ್ಗತಿ. ಕೆಲವು ನವೀನ ಪ್ರತಿಮೆಗಳಿವೆ.
ಉದಾಹರಣೆಗೆ, ‘ಗೊಂದಲಕ್ಕೆ ತುಪ್ಪ ಸುರಿದಂತಾಗಿದೆ.’
ನಾನು ಬೆಂಕಿಗೆ ತುಪ್ಪ ಸುರಿಯುತ್ತಾರೆ ಎಂದು ತಿಳಿದಿದ್ದೆ; ಗೊಂದಲಕ್ಕೆ ತುಪ್ಪ ಸುರಿಯುವುದು ನನಗೆ ಗೊತ್ತಿರಲಿಲ್ಲ!
ಸುಳ್ಳು ಯಾಕೆ ಬರೆಯುತ್ತೀರಿ?
(೧) ವಿಶ್ವವಾಣಿ
ಪತ್ರಿಕೆಯಲ್ಲಿ ಸುಳ್ಳು ಮಾಹಿತಿಗಳು ಯಾಕೆ ಪ್ರಕಟವಾಗುತ್ತಿವೆ ಎನ್ನುವುದು ಒಡೆಯಲಾರದ ಒಗಟಾಗಿದೆ!
ಈ ಸಮಾಚಾರವನ್ನು ಓದಿರಿ:
ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ
ಅವರು ಭಾರತ-ಪಾಕ್ ಯುದ್ಧದ ವೇಳೆ ಭಾರತದಲ್ಲಿ ತಲೆದೋರಿದ್ದ
ಆಹಾರ ಕ್ಷಾಮವನ್ನು ನಿವಾರಿಸಲು, ಪ್ರತಿಯೊಬ್ಬರೂ ಶನಿವಾರ ಒಂದು ಹೊತ್ತು
ಊಟ ಬಿಡಬೇಕು ಎಂದು ಕರೆ ನೀಡಿದ್ದರು.
ಶಾಸ್ತ್ರಿಯವರು ಸೋಮವಾರದಂದು ಒಪ್ಪತ್ತು
ಊಟವನ್ನು ಬಿಡಲು ಹೇಳಿದ್ದರೇ ಹೊರತು ಶನಿವಾರದಂದು ಅಲ್ಲ. ಬಹುಶಃ ಈ ವರದಿಯನ್ನು ತಯಾರಿಸಿದವರು ಮಾರುತಿಯ ಭಕ್ತರೇನೊ? ಆದುದರಿಂದ ಶನಿವಾರ ಎಂದು ಹೇಳಿದ್ದಾರೇನೊ?!
ಎರಡನೆಯದಾಗಿ ಮೇಲಿನ ವರದಿಯನ್ನು
ನಾನು ಹೂಬಹೂ ನಕಲು ಮಾಡಿದ್ದೇನೆ. ಇದರಲ್ಲಿ ಭಾಷಾದೋಷಗಳು ಏನಾದರೂ ಇದ್ದರೆ, ಅವು ವಿಶ್ವವಾಣಿಯವು.
(೨) ಈಗ ವಿಶ್ವೇಶ್ವರ ಭಟ್ಟರ ವಿಶ್ಲೇಷಣೆಯೊಂದನ್ನು ನೋಡಿರಿ:
"ಭಾಷೆ ವಿಷಯದಲ್ಲಿ ಫ್ರೆಂಚ ಮಂದಿ
ಮಹಾ ಮಡಿವಂತರು. ಇಂಗ್ಲಿಷರಂತೆ ಉದಾರಿಗಳಲ್ಲ.
ಹೀಗಾಗಿ ಫ್ರೆಂಚ್ ಭಾಷೆ ದೇಶವನ್ನು ಬಿಟ್ಟು ಹೊರಗೆ ಹೋಗಿಲ್ಲ. ಆದರೆ ಇಂಗ್ಲಿಷ್ ಹಾಗಲ್ಲ. ಇಡೀ ಜಗತ್ತನ್ನು ಸುತ್ತು ಹಾಕುತ್ತಿದೆ."
ಇಂಗ್ಲಿಶರು ಹಾಗು ಫ್ರೆಂಚರು ಜಗತ್ತಿನ
ಅನೇಕ ದೇಶಗಳನ್ನು ಆಕ್ರಮಿಸಿದಾಗ, ಅವರ ಭಾಷೆಗಳು
ಅಲ್ಲೆಲ್ಲ ಪ್ರಚಲಿತವಾದವು. ಫ್ರೆಂಚ್ ಭಾಷೆಯು ದಕ್ಷಿಣಪೂರ್ವ ಏಶಿಯಾದಲ್ಲಿ ಪ್ರಚಲಿತವಾದರೆ,
ಇಂಗ್ಲೀಶು ಭಾರತ ಹಾಗು ಆಫ್ರಿಕಾದ ಕೆಲ ಭಾಗಗಳಲ್ಲಿ ಪ್ರಚಲಿತವಾಯಿತು. ಈ ಭಾಷೆಗಳ ಪ್ರಸರಣಕ್ಕೆ ಪ್ರಭುತ್ವ ಕಾರಣವೇ ಹೊರತು ಮಡಿವಂತಿಕೆ ಅಲ್ಲ.
ಪ್ರಭುತ್ವದ ಭಾಷೆಯೇ ಪ್ರಜೆಗಳ ಭಾಷೆಯಾಗುವುದು
ಒಂದು ಕಹಿ ಸತ್ಯ. ಉತ್ತರ ಕರ್ನಾಟಕದ ಪ್ರಜೆಗಳು ಒಂದು ಕಾಲಕ್ಕೆ
ಮರಾಠಿಯನ್ನು ಸ್ವೀಕರಿಸಿದ್ದೂ ಸಹ ಇದೇ ಕಾರಣದಿಂದ . ಆದುದರಿಂದ ಫ್ರೆಂಚ್
ಮಡಿವಂತ ಭಾಷೆ; ಇಂಗ್ಲೀಶ್ ಹಾಗಲ್ಲ ಎನ್ನುವುದು ಒಂದು ವಿಚಿತ್ರ ತರ್ಕವಷ್ಟೆ!
ಇದೆಲ್ಲವನ್ನು ನೋಡಿದಾಗ ಒಂದೆರಡು
ಮಾತುಗಳು ಅರ್ಥಗಳಾಗುವುವು. ವಿಶ್ವವಾಣಿಯವರಿಗೆ
ಸರಿಯಾದ ಸಮಾಚಾರವನ್ನು ಶುದ್ಧ ಭಾಷೆಯಲ್ಲಿ ಕೊಡಬೇಕೆನ್ನುವ ದರ್ದು ಇಲ್ಲ. ಓದುಗರಿಂದ ಬರುವ ದುಡ್ಡಿಗಿಂತ ಹೆಚ್ಚು ಹಣವು ಜಾಹೀರಾತುಗಳಿಂದ ಬರುವಾಗ, ಯಾರಿಗೆ ಬೇಕು ಇದೆಲ್ಲ ತಲೆನೋವು!