Saturday, September 12, 2020
ಉಮೇಶ ದೇಸಾಯಿಯವರ ‘ಅನುಪಮಾ ಆಖ್ಯಾನ’
ಶ್ರೀ ಉಮೇಶ ದೇಸಾಯಿಯವರ `ಅನುಪಮಾ ಆಖ್ಯಾನ’ವು ಶ್ರಾವ್ಯಕೃತಿಯಾಗಿ ಡಿಜಿಟಲ್ ರೂಪದಲ್ಲಿ ಹೊರಬಂದಿದೆ. ಈ ಪ್ರಯೋಗಶೀಲ ಸಾಹಿತ್ಯಕರ್ಮಿಯ ಹೊಚ್ಚ ಹೊಸ ಪ್ರಯೋಗವಿದು. ಇದಕ್ಕೂ ಮೊದಲು ಅವರು ಗಝಲ್‘ಗಳನ್ನು, ಕಥೆಗಳನ್ನು ಬರೆದಿದ್ದರು. ಅಷ್ಟಕ್ಕೇ ತೃಪ್ತರಾಗದ ದೇಸಾಯರು ‘ಮೈತ್ರಿ ಪ್ರಕಾಶನ’ ಎನ್ನುವ ತಮ್ಮದೇ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ತನ್ಮೂಲಕ ಹೊಸ ಲೇಖಕರ ರಚನೆಗಳನ್ನು ಸಂಕಲಿಸಿ ಹೊರತರುವ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದರು. ಬ್ಯಾಂಕ್ ಉದ್ಯೋಗಿಯಾಗಿ ನೌಕರಿ ಮಾಡುತ್ತಲೇ, ಸಾಹಿತ್ಯಕೃತಿಗಳನ್ನು ಬರೆಯುವುದು, ಬರೆಯಿಸುವುದು, ಪ್ರಕಾಶಿಸುವುದು ಇವುಗಳಲ್ಲಿ ನಿರತರಾದ, ಎಡವಯಸ್ಸಿನ ಈ ಸಾಹಸಜೀವಿಯನ್ನು ನಾನು ಬೆರಗಿನಿಂದ ನೋಡುತ್ತೇನೆ.
ಪ್ರತಿಯೋರ್ವ ಸಾಹಿತಿಯ ಒಳಗೆ ಒಂದು ಪ್ರೇರಕ ಶಕ್ತಿ ಕೆಲಸ ಮಾಡುತ್ತಿರುತ್ತದೆ. ಉಮೇಶ ದೇಸಾಯಿಯವರು ನಮ್ಮ ಸಮಾಜದ ಸಾಂಪ್ರದಾಯಿಕ ಮುಖವನ್ನು ಗಮನಿಸಿದವರು. ಅದರಂತೆಯೇ ಆಧುನಿಕ ಸಮಾಜದಲ್ಲಿ ಪ್ರವರ್ತಿಸುತ್ತ, ಹೊಸ ಮಾದರಿಯ ಮುಖವನ್ನೂ ನೋಡಿದವರು. ಮರಾಠೀ ಸಾಹಿತ್ಯದಲ್ಲಿಯೂ ಗತಿ ಇದ್ದವರು. ಹೀಗಾಗಿ ಸಮಾಜದ ವಿವಿಧ ಮುಖಗಳ ಒಳಿತು, ಕೆಡುಕಗಳ ಪರಿಚಯ ಅವರಿಗೆ ಮನೋಗತವಾಗಿದೆ; ಅವರ ಸಾಹಿತ್ಯಕ್ಕೆ ಇದು ಪ್ರಧಾನ ಪ್ರೇರಕ ಶಕ್ತಿಯಾಗಿದೆ. ‘ಅನುಪಮಾ ಆಖ್ಯಾನ’ವು ಈ ವಿವಿಧ ಶಕ್ತಿಗಳ ಘರ್ಷಣೆಯ ನಾಟಕವಾಗಿದೆ.
‘ನಾಟಕ’ ಎಂದೆನಲ್ಲವೇ ನಾನು? ‘ಅನುಪಮಾ ಆಖ್ಯಾನ’ವು ರಚನೆಯಲ್ಲಿ ನಾಟಕವಲ್ಲ. ಇದನ್ನು ಕಿರುಕಾದಂಬರಿ ಎನ್ನಬೇಕೊ ಅಥವಾ ನೀಳ್ಗತೆ ಎನ್ನಬೇಕೊ ಎನ್ನುವ ಸಂದಿಗ್ಧತೆಯಲ್ಲಿ ಸಿಲುಕಲು ನಾನು ಬಯಸುವುದಿಲ್ಲ. ಆದರೆ ‘ಅನುಪಮಾ ಆಖ್ಯಾನ’ವು ಒಂದು ಪ್ರಭಾವಶಾಲೀ, ಪರಿಣಾಮಕಾರೀ ಕಥಾನಕ ಎಂದಷ್ಟೇ ಹೇಳಲು ಇಚ್ಛಿಸುತ್ತೇನೆ.
ಕೇವಲ ೭೧೮೯ ಪದಗಳನ್ನು ಒಳಗೊಂಡ ಈ ಕಥಾನಕವನ್ನು ನಾಲ್ವರು ವ್ಯಕ್ತಿಗಳು ನಿರೂಪಿಸಿದ್ದಾರೆ. ಈ ತಂತ್ರದಿಂದಾಗಿ ಅವರವರು ಭಾವಿಸುವ ಸತ್ಯವನ್ನು ಅವರವರ ಬಾಯಿಯಿಂದಲೇ ಹೇಳಿಸಲು ದೇಸಾಯರಿಗೆ ಸಾಧ್ಯವಾಗಿದೆ. ಇವರೆಲ್ಲರನ್ನು ಸಾಕ್ಷಿರೂಪದಲ್ಲಿ ನೋಡುವ ಮತ್ತೊಂದು ವ್ಯಕ್ತಿ ಇಲ್ಲಿದೆ. ಆದರೆ ಅವಳು ನ್ಯಾಯಾಧಿಶನ ಪಾತ್ರವನ್ನು ವಹಿಸಲು ಬಯಸುವದಿಲ್ಲ. ಅವಳ ಕೆಲಸವೆಂದರೆ ಇವರೆಲ್ಲರಿಗೂ ವಾಸ್ತವತೆಯನ್ನು ತೋರಿಸುವ ಹಾಗು ಆ ಮೂಲಕ ಇವರ ತೊಡಕುಗಳನ್ನು ಬಿಡಿಸುವ ಕಾರ್ಯ. ಇದರಿಂದಾಗಿ ಸತ್ಯದ ವಿವಿಧ ಮುಖಗಳನ್ನು ಯಾವುದೇ ಪಕ್ಷಪಾತವಿಲ್ಲದೇ ನಿರೂಪಿಸಲು ಲೇಖಕರಿಗೆ ಸಾಧ್ಯವಾಗಿದೆ.ಇದು ನಮ್ಮ ಸಮಾಜದ ಸಮಸ್ಯೆ. ತಲೆಮಾರುಗಳ ನಡುವೆ ನಡೆಯುವ ತಿಕ್ಕಾಟದ ಸಮಸ್ಯೆ. ಈ ತಿಕ್ಕಾಟವನ್ನು ಬಗೆಹರಿಸುವ ಜಾಣ್ಮೆಯ ಅಗತ್ಯತೆಯ ಕಥೆ.
ಲೇಖಕನೋರ್ವನು ತನ್ನ ಭಾವನೆಯನ್ನು ಹೇಳಲು, ತನ್ನ ಕಾಣ್ಕೆಯನ್ನು ಇತರರಿಗೆ ಕಾಣಿಸಲು ಕಥೆಗಳನ್ನು ಹೆಣೆಯುತ್ತಾನೆ. ಈ ಹೆಣಿಕೆಗೆ ಅಗತ್ಯವೆನಿಸುವ ಪಾತ್ರಗಳನ್ನು ರೂಪಿಸಲು, ಘಟನೆಗಳನ್ನು ನಿರೂಪಿಸಲು ಆತನು ಸರ್ವತಂತ್ರ ಸ್ವತಂತ್ರನು. ದೇಸಾಯರ ‘ಅನುಪಮಾ ಆಖ್ಯಾನ’ದಲ್ಲಿ ನಾಲ್ಕೇ ನಾಲ್ಕು ಪ್ರಧಾನ ಪಾತ್ರಗಳಿವೆ. ಅನುಪಮಾ ಬುದ್ಧಿವಂತೆ; ಅತ್ಯಾಧುನಿಕ ಮನೋಭಾವದ ತರುಣಿ. ಅವಳ ತಂದೆ ಮಗಳನ್ನು ಅಚ್ಛೆಯಿಂದ ಬೆಳೆಸಿದ್ದಾರೆ. ಮೂಲತಃ ಧಾರವಾಡದವಳಾದ ಇವಳು ಬೆಂಗಳೂರಿನ ಒಂದು ದೊಡ್ಡ I.T.ಕಂಪನಿಯಲ್ಲಿ ಮಹತ್ವದ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳು ಮ್ಯಾಟ್ರಿಮೋನಿಯಲ್ ಸಂಸ್ಥೆಯೊಂದರ ಮೂಲಕ ಅನಿಯನ್ನು ಮದುವೆಯಾಗುತ್ತಾಳೆ. ಇವರಿಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡೇ ಮದುವೆಯಾಗಿದ್ದಾರೆ. ಆದರೆ ಅನುಪಮಾಳ ಗಂಡ ತಂದೆಯಾಯಿಯರಿಗೆ ಅತ್ಯಂತ ವಿಧೇಯನಾಗಿ ನಡೆಯುತ್ತಿರುವ ಹುಡುಗ. ಇವನ ಅಪ್ಪ ಸರ್ವಾಧಿಕಾರಿ ವರ್ತನೆಯ, ಸಂಪ್ರದಾಯನಿಷ್ಠ ಮನುಷ್ಯ. ಸರಿ, ಇವರ ನಡುವೆ ತಿಕ್ಕಾಟ ನಡೆಯಲು ಇಷ್ಟು ಸಾಕಲ್ಲವೆ? ಲೇಖಕರ ಪ್ರತಿಭೆ ಇರುವುದು ಇಂತಹ ಘಟನೆಗಳಿಗೆ ಸರಿಯಾದ ಸಾಮಗ್ರಿಯನ್ನು ಹುಡುಕುವದರಲ್ಲಿ ಹಾಗು ನಿರೂಪಿಸುವದರಲ್ಲಿ. ದೇಸಾಯರಲ್ಲಿ ಈ ಪ್ರತಿಭೆ ಹೇರಳವಾಗಿದೆ. ಹಾಗಾಗಿಯೇ ಈ ಸಾಹಿತ್ಯಕೃತಿಯು ರೋಚಕವಾಗಿದೆ ಹಾಗು convincing ಆಗಿದೆ.
ದೇಸಾಯರ ಕೃತಿಗಳ ವೈಶಿಷ್ಟ್ಯವೆಂದರೆ, ಅವರ ಕಥೆಗಳಲ್ಲಿಯ ಪಾತ್ರಗಳು. ಅವರ ಪಾತ್ರಗಳು ಜೀವಂತಿಕೆ ತುಂಬಿದ ಪಾತ್ರಗಳು. ಅವುಗಳ ಓಡಾಟಗಳನ್ನು ನಾವು ನೋಡಬಲ್ಲೆವು; ಅವುಗಳ ಭಾವನೆಗಳು ನೇರವಾಗಿ ನಮ್ಮ ಹೃದಯದಲ್ಲಿ ಇಳಿಯುತ್ತವೆ.
ಅವರ ಪಾತ್ರಗಳಲ್ಲಿ ಚಲನಶೀಲತೆ ಇರುತ್ತದೆ. ಅವರ ಭಾಷೆಯೂ ಹಾಗೇ ಇದೆ. ನಿಸ್ಸತ್ವ ಪಾತ್ರವನ್ನು ಹಾಗು ನಿಸ್ಸತ್ವ ಭಾಷೆಯನ್ನು ದೇಸಾಯರ ಕೃತಿಗಳಲ್ಲಿ ನಾವು ಕಾಣಲಾರೆವು.ಇದರಂತೆಯೇ ವಾತಾವರಣವನ್ನು ನಿರ್ಮಿಸುವದರಲ್ಲಿಯೂ ದೇಸಾಯರ ಪ್ರತಿಭೆಯನ್ನು ನಾವು ನೋಡಬಹುದು. ಕಥಾನಕಕ್ಕೆ ಅವಶ್ಯವಾದ ವಿವಿಧ ಪ್ರಸಂಗಗಳ ವಿವರಗಳು ಸಹಜವಾಗಿವೆ.
ಈ ಕೃತಿಯ ವಿವರಗಳನ್ನು ನಾನು ಮುಂಗಡವಾಗಿಯೇ ನೀಡುವುದು ಸರಿಯಲ್ಲ. ಈ ಕೃತಿಯನ್ನು ಓದಬಯಸುವ ಓದುಗರ ಆಸಕ್ತಿಯನ್ನು ಹಾಗು ಕುತೂಹಲವನ್ನು ಖಿಲಗೊಳಿಸದೇ ಇಡುವುದು ನನ್ನ ಕರ್ತವ್ಯ. ಆದುದರಿಂದ ಇಷ್ಟಕ್ಕೇ ನಾನು ವಿರಮಿಸುತ್ತೇನೆ. ದೇಸಾಯರ ಕೃತಿಗಳನ್ನು ಮೆಚ್ಚುವ ಓದುಗರಿಗೆ, ‘ಇಗೋ ಇಲ್ಲಿದೆ ಅವರ ಮತ್ತೊಂದು ರೋಚಕ ಕೃತಿ’ ಎಂದಷ್ಟೇ ಹೇಳಬಯಸುತ್ತೇನೆ.
Subscribe to:
Posts (Atom)