Saturday, October 24, 2020

`ಕೂರ್ಗ ರೆಜಿಮೆಂಟ್’: ಮೇಜರ್ | ಡಾ˘ | ಕುಶ್ವಂತ್ ಕೋಳಿಬೈಲು

ಆಧುನಿಕ ಕನ್ನಡದಲ್ಲಿ ಸೈನಿಕಸಾಹಿತ್ಯವು ಬಂದದ್ದು ತೀರ ಕಡಿಮೆ. ಸೈನಿಕಸಾಹಿತ್ಯ ಎನ್ನುವ ಪ್ರಕಾರದಲ್ಲಿ ರಚನಾಕ್ರಮವನ್ನು ಅನುಸರಿಸಿ ನಾವು ಮೂರು ವಿಭಾಗಗಳನ್ನು ಮಾಡಬಹುದು:

 

() ಯುದ್ಧರಂಗದ ಸಾಹಿತ್ಯ.

() ಸೈನಿಕರ ಬದುಕಿನ ಬಗೆಗೆ ಬರೆದ ಸಾಹಿತ್ಯ,

() ಸೈನಿಕರು ಬರೆದ ಸಾಹಿತ್ಯ

 

ಯುದ್ಧರಂಗದ ಸಾಹಿತ್ಯದ ಬಗೆಗೆ ಹೇಳುವುದಾದರೆ, ಕನ್ನಡದಲ್ಲಿ ಈ ಪ್ರಕಾರದ ಸ್ವತಂತ್ರ ಕೃತಿಗಳು ಅತಿ ಕಡಿಮೆ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಇಂಗ್ಲಿಶ್ ಭಾಷೆಯಲ್ಲಿ ಜಾ˘ನ್ ದಳವಿಯವರು ಬರೆದಹಿಮಾಲಯನ್ ಬ್ಲಂಡರ್ಕೃತಿಯ ಕನ್ನಡ ಅನುವಾದವನ್ನು ರವಿ ಬೆಳಗೆರೆ ಮಾಡಿದ್ದಾರೆ. ಬಹುಶಃ  ಇದೊಂದೇ ಕೃತಿಯು ಯುದ್ಧರಂಗದ ಬಗೆಗೆ ಇರುವ ಕನ್ನಡ (ಅನುವಾದಿತ) ಕೃತಿ. ಇತರ ಭಾರತೀಯ ಭಾಷೆಗಳಲ್ಲಿಯೂ ಇದೇ ಪರಿಸ್ಥಿತಿ ಇರಬಹುದು. ನನ್ನ ಹೇಳಿಕೆಯಲ್ಲಿ ತಪ್ಪಿದ್ದರೆ ದಯವಿಟ್ಟು ತಿದ್ದಲು ವಿನಂತಿಸುತ್ತೇನೆ. ೧೯೪೭-೪೮ರ ಅವಧಿಯಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಿ ಗೆಲವನ್ನು ಸಂಪಾದಿಸಿದ ಬಗೆಗೆ ‘ರಣವೀಳ್ಯ’ ಎನ್ನುವ ಕೃತಿಯೊಂದನ್ನು ರಚಿಸಲಾಗಿದೆ. ಇದನ್ನು ಪ್ರಕಟಿಸಿದವರು ‘ರಾಷ್ಟ್ರೋತ್ಥಾನ ಪರಿಷತ್’ನವರು. ಈ ವಿಷಯವನ್ನು ಇದೀಗ ನನಗೆ ತಿಳಿಸಿದವರು ಶ್ರೀ ವಿ.ರಾ.ಹೆ. ಅವರು. ಅವರಿಗೆ ನನ್ನ ಧನ್ಯವಾದಗಳು.

 

ಸೈನಿಕರ ಬಗೆಗೆ ಬರೆದ ಸಾಹಿತ್ಯದ ಬಗೆಗೆ ಹೇಳಬೇಕೆಂದರೆ ಶ್ರೀ ವೆಂ ಮು. ಜೋಶಿಯವರು ಇದಕ್ಕೆ ಶ್ರೀಕಾರ ಹಾಕಿದವರು. ಆಬಳಿಕ ಹೇಮಾತನಯ ಕಾವ್ಯನಾಮದ ಲೇಖಕರೊಬ್ಬರು ಸೈನ್ಯಾಧಿಕಾರಿಯೊಬ್ಬರ ಬಗೆಗೆ ಬರೆದ ಕಾದಂಬರಿಯೊಂದುಸಂಯುಕ್ತ ಕರ್ನಾಟಕಪತ್ರಿಕೆಯ ವಾರದ ಪುರವಣಿವಾಙ್ಮಯ ವಿಭಾಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ತನ್ನಂತರ ಶ್ರೀಮತಿ ಸಾರಾ ಅಬೂಬಕ್ಕರ ಅವರು ಬರೆದ ಕಾದಂಬರಿಯಲ್ಲಿ ಸೈನಿಕನೊಬ್ಬನು ಓರ್ವ ತರುಣಿಯನ್ನು ವಂಚಿಸಿ ಮದುವೆಯಾದ ಕಥೆ ಇದೆ

 

ಇನ್ನೀಗ ಸೈನಿಕರು ಬರೆದ ಸಾಹಿತ್ಯವನ್ನು ಗಮನಿಸೋಣ. ಲೆ|| ಶ್ರೀ.ಚಿ.ಸರದೇಶಪಾಂಡೆಯವರುನಾಗಾ ಜನಾಂಗ : ಖೆಮ್ನುಗನ್ನರುಎನ್ನುವ ಕೃತಿಯೊಂದನ್ನು ರಚಿಸಿದ್ದಾರೆ. ಭಾರತದ ಪೂರ್ವೋತ್ತರ ಪ್ರದೇಶದಲ್ಲಿ ವಾಸಿಸುತ್ತಿರುವ ಖೆಮ್ನುಗನ್ನರ ಬದುಕಿನ ಬಗೆಗೆ ಇರುವ ಕೃತಿಯು ಒಂದು ವೈಚಾರಿಕ ಕೃತಿಯಾಗಿದೆ. ಸರದೇಶಪಾಂಡೆಯವರುಗಡಿ ದಾಟಿದವರುಎನ್ನುವ ಕಾದಂಬರಿಯನ್ನೂ ಬರೆದಿದ್ದು, ಇವೆರಡೂ ಕೃತಿಗಳನ್ನು ಧಾರವಾಡದ ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ. ಕನ್ನಡಿಗರಾದ ಕರ್ನಲ್ ಆರ್. ಎಸ್. ಒಡೆಯರರು ಇಂಗ್ಲೀಶಿನಲ್ಲಿ ರಚಿಸಿದ ‘No Regrets' ಎನ್ನುವುದು ಅವರ ಆತ್ಮಚರಿತ್ರೆಯಾಗಿದೆ. ಇದನ್ನು ವಸಂತ ವಾಯಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ೨೦೧೨ರಲ್ಲಿ ಅನುವಾದವು ಪ್ರಕಟವಾಯಿತು.

 

ಈ ಸರಣಿಯಲ್ಲಿ ಇತ್ತೀಚಿನ ಕೃತಿಎಂದರೆ ಕೂರ್ಗ ರೆಜಿಮೆಂಟ್’. ಇದನ್ನು ಬರೆದವರು ಮೇಜರ್ | ಡಾ˘ | ಕುಶ್ವಂತ್ ಕೋಳಿಬೈಲು.  ಡಾ˘ | ಕುಶ್ವಂತರ ಶೈಲಿಯು ಸೈನಿಕಶೈಲಿ ; ನೇರ ಹಾಗು ಸರಳ. ಬಂದೂಕಿನಿಂದ ಗುಂಡು ಹಾರಿಸಿದ ಹಾಗೆ. ಯಾವುದೇ ವಕ್ರಮಾರ್ಗದಲ್ಲಿ ಚಲಿಸದೆ, ಯಾವುದೇ ಆಡಂಬರವಿಲ್ಲದೆ ಈ ಗುಂಡು ತನ್ನ ಗುರಿಯನ್ನು ನಿಖರವಾಗಿ ತಲುಪುತ್ತದೆ.

 

ಕೃತಿಯಲ್ಲಿ ೧೨ ಕಥೆಗಳಿವೆ. ಇವು ಕುಶ್ವಂತರ ಅನುಭವವನ್ನು ಆಧರಿಸಿ ರಚಿತವಾದ ಕಥೆಗಳು. ಈ ಕಥೆಗಳು ಕೊಡಗಿನ ವೈಶಿಷ್ಟ್ಯಪೂರ್ಣ ಬದುಕನ್ನು ತೆರೆದಿಟ್ಟ ಕಥೆಗಳಾಗಿವೆ. ಜೊತೆಗೇ ಇವು ಸೈನಿಕರ ಬದುಕಿನ ಕಥೆಗಳೂ ಹೌದು.

 

ವಯಸ್ಸಿಗೆ ಬಂದ ಕೊಡವ ತರುಣನಿಗೆ ಮೂರು ಆಕರ್ಷಣೆಗಳಿವೆ:

() ಸೈನ್ಯ

() ಬೇಟೆ

() ಶರಾಬು

 

ಸೈನ್ಯವು ಕೊಡವರ ಪ್ರಪ್ರಥಮ ಆಕರ್ಷಣೆ. ಆದುದರಿಂದಲೇ ಈ ಸಂಕಲನವೂ ಸಹ ಕೂರ್ಗ್ ರೆಜಿಮೆಂಟ್ಎನ್ನುವ ಕಥೆಯಿಂದಲೇ ಪ್ರಾರಂಭವಾಗಿದೆ. ಕಥಾನಾಯಕನ ತಂದೆ ಯುದ್ಧರಂಗದಲ್ಲಿ ಮಡಿದಿದ್ದಾನೆ. ತಾಯಿನೆಲದಲ್ಲಿ ಈತನಿಗೆ ಸ್ವಲ್ಪ ಭೂಮಿ ಇದೆ. ಆದರೆ ಅದರ ದಾಖಲೆಗಳನ್ನು ಸರಿಪಡಿಸಬೇಕು, ಅತಿಕ್ರಮಣವನ್ನು ತೆಗೆಸಬೇಕು. ಮಗ ವಯಸ್ಸಿಗೆ ಬಂದು ಒಂದು ಕೆಲಸವನ್ನು ಹಿಡಿಯಲಿ, ಇದನ್ನೆಲ್ಲ ಆತ ಮಾಡಿಯಾನು ಎನ್ನುವುದು ಅವನ ತಾಯಿಯ ಆಸೆ. ಆದರೆ ಚಿಗುರು ಮೀಸೆಯ ಮಗ ತಾಯಿಗೂ ತಿಳಿಸದೆ ಸೈನ್ಯಕ್ಕೆ ಸೇರುತ್ತಾನೆ. ‘ಕೂರ್ಗ ರೆಜಿಮೆಂಟ್ಎಂದು ಬರೆದ ತನ್ನ ತಂದೆಯ ಟ್ರಂಕನ್ನು ಹೊತ್ತುಕೊಂಡು ಆತ ಮನೆ ಬಿಟ್ಟು ಹೊರಟು ಬಿಡುತ್ತಾನೆ. ಕೊಡವರ ರಕ್ತದಲ್ಲಿ ಹರಿಯುತ್ತಿರುವ ಸೈನ್ಯದ ಆಕರ್ಷಣೆ ಇದು! ಇದು ಕೊಡವರ ಪರಂಪರೆ! ಆದರೆ ತಾಯಿಯ ಎದೆಯಲ್ಲಿ ಪುಟಿಯುತ್ತಿರುವ ಭಾವನೆಗಳು…..ಏನು? ಈ ಕಥೆಯ ಕೊನೆಯಲ್ಲಿ ಲೇಖಕರು ಆ ಭಾವವನ್ನು ಅತಿ ಸುಂದರವಾಗಿ ವರ್ಣಿಸಿದ್ದಾರೆ:

 

ಮಗನ ರಕ್ತದಲ್ಲಿ ಹರಿಯುತ್ತಿರುವ ಆ ವಿಚಿತ್ರ ಸೆಳೆತ ಯಾವುದದು ತಾಯಿಯ ಕಣ್ಣಿಗೂ ಕಾಣಿಸದ್ದು?...ಕೂರ್ಗ್ ರೆಜಿಮೆಂಟಿನವರ ಬಳಿಯಿರುವ ಮಾಯಾಜಾಲ ಯಾವುದದು, ತಾಯಿಯ ಬಳಿಯಿಲ್ಲದ್ದು ಎಂದು ಯೋಚಿಸುತ್ತಾ ಕಾವೇರಿ ಹೂವಿನ ಗಿಡಕ್ಕೆ ನೀರು ಹಾಕುತ್ತಿದ್ದಳು. ಮಗ ಬಂದು ಅವಳ ಕಾಲಿಗೆ ಬಿದ್ದಾಗ ಅವನ ಜೇಬಿನಿಂದ ಹೊರಬಿದ್ದ ಕೂರ್ಗ್ ರೆಜಿಮೆಂಟಿನ ಪತ್ರ ಎಲ್ಲವನ್ನೂ ಹೇಳಿತು. ಅಪ್ಪನ ಟ್ರಂಕ್ ಮತ್ತೆ ನವವಧುವಿನಂತೆ ಸಿಂಗಾರಗೊಂಡಿತು. ಅಪ್ಪನ ಭಾವಚಿತ್ರಕ್ಕೆ ಅಕ್ಕಿ ಹಾಕಿ, ಹುತ್ತರಿಗೆ ಬರುತ್ತೇನೆಂದು ಗೂಡು ಬಿಟ್ಟ ಹಕ್ಕಿಯ ಹಾಗೆ ಗದ್ದೆ ಬೈಲಿನ ನಡುವೆ ಸರಸರನೆ ಇಳಿದು ಮಗ ಹೋಗುತ್ತಿದ್ದ. ಅವನ ಹೆಗಲ ಮೇಲಿದ್ದ  ಕಪ್ಪು ಟ್ರಂಕ್ ಮೇಲೆ ಬಿಳಿ ಪೈಂಟಿನಲ್ಲಿ ಬರೆದಿದ್ದ  ಕೂರ್ಗ್ ರೆಜಿಮೆಂಟ್ ಕಾಣಿಸುವಷ್ಟು ಸಮಯ ಅವಳು ಮಗ ಹೋದ ದಾರಿಯನ್ನೇ ನೋಡುತ್ತಿದ್ದಳು. ಮಗನ ಮತ್ತು ಮಣ್ಣಿನ ವಿಷಯದಲ್ಲಿ ಯಾವುದರ ಮೇಲೆ ತನಗೆ ಜಾಸ್ತಿ ಹಕ್ಕು ಇತ್ತೆಂದು ಯೋಚಿಸುತ್ತಾ ಕಾವೇರಿ ಜಗುಲಿಗೊರಗಿದಳು.”

 

ಈ ಕೊನೆಯ ಪರಿಚ್ಛೇದವು ಸೈನ್ಯಕ್ಕೆ ಹೊರಟ ಮಗನ ಬಗೆಗಷ್ಟೇ ಹೇಳುತ್ತಿಲ್ಲ. ಅವನ ತಾಯಿಯ ಬಗೆಗೂ ಹೇಳುತ್ತದೆ. ಕೊಡವರ ಬದುಕಿನ ಬಗೆಗೂ ಹೇಳುತ್ತದೆ. ಯುದ್ಧರಂಗದಲ್ಲಿ ಮಡಿದ ವೀರ ಪತಿ, ತಂದೆಯ ಮಾರ್ಗವನ್ನೇ ಅನುಸರಿಸಿ ಹೊರಟ ವೀರ ಪುತ್ರ, ತನ್ನ ಭೂಮಿಗಾಗಿ ತಾನು ಹೊಡೆದಾಡಬೇಕಾದ ಒಂಟಿ ವೀರಮಾತೆ….ಇದು ಕೊಡವರ ಜೀವನ

ಕುಶ್ವಂತರು ಸಮಂಜಸ ಪದಗಳ ಬಳಕೆಯಲ್ಲಿ ನಿಷ್ಣಾತರು. ಅವರ ಈ ಪ್ರತಿಭೆಯನ್ನು ನಾವು ಇಲ್ಲಿರುವ ಅನೇಕ ಕಥೆಗಳಲ್ಲಿ ನೋಡುತ್ತೇವೆ. ಆದರೆ ಇಲ್ಲಿ ಉದ್ಧರಿಸಿದ ಪರಿಚ್ಛೇದದ ಒಂದು ಪದಗುಚ್ಛವನ್ನು ಮಾತ್ರ ನಾನು ಉದಾಹರಣೆಗೆ ಎತ್ತಿಕೊಳ್ಳುತ್ತೇನೆ:

 

ಅಪ್ಪನ ಭಾವಚಿತ್ರಕ್ಕೆ ಅಕ್ಕಿ ಹಾಕಿ, ಹುತ್ತರಿಗೆ ಬರುತ್ತೇನೆಂದು ಗೂಡು ಬಿಟ್ಟ ಹಕ್ಕಿಯ ಹಾಗೆ ಗದ್ದೆ ಬೈಲಿನ ನಡುವೆ ಸರಸರನೆ ಇಳಿದು ಮಗ ಹೋಗುತ್ತಿದ್ದ.”

ಗೂಡು ಬಿಟ್ಟ ಹಕ್ಕಿಯ ಹಾಗೆ ಎನ್ನುವ ಪದಗುಚ್ಛವನ್ನು ಗಮನಿಸಿರಿ. ಕೊಡಗು ಈ ತರುಣನ ಗೂಡು. ಆದರೆ ಸ್ವತಂತ್ರವಾಗಿ ಬಾನಿನಲ್ಲಿ ಹಾರುವುದು ಹಕ್ಕಿಯ ಸ್ವಭಾವ. ಈ ತರುಣನೂ ಸಹ ತನ್ನ ಗೂಡನ್ನು ಬಿಟ್ಟು ವಿಶಾಲವಾದ ಜಗತ್ತಿಗೆ ಹಾರಿ ಹೋಗುತ್ತಿದ್ದಾನೆ. ತನ್ನ ನಿವೃತ್ತಿಯ ನಂತರ ತಾನು ಮರಳಿ ತನ್ನ ಗೂಡಿಗೇ ಬರುತ್ತೇನೆ ಎನ್ನುವುದು ಈ ಹಕ್ಕಿಗೆ ಗೊತ್ತಿದೆ. ಇದೆಲ್ಲವನ್ನೂಗೂಡು ಬಿಟ್ಟ ಹಕ್ಕಿಯ ಹಾಗೆಎನ್ನುವ ಮೂರು ಪದಗಳಲ್ಲಿ ಕುಶ್ವಂತರು ಅಳವಡಿಸಿದ್ದಾರೆ! ಇದರಂತೆಯೇಸರಸರನೆ ಇಳಿದು ಹೋದಎನ್ನುವ ಪದಗುಚ್ಛವನ್ನೂ ಗಮನಿಸಿರಿ. ಇದು ಸೈನ್ಯ ಸೇರಲು ಹೊರಟ ಆ ತರುಣನ ಉತ್ಸಾಹವನ್ನೂ ತೋರುತ್ತದೆ. ತನ್ನ ಕರುಳಿನ ತೊಡಕನ್ನು ಆತ ಅಲ್ಲಿಯೇ ಎತ್ತಿಟ್ಟು ತನ್ನ ಬಯಕೆಯ ಭವಿಷ್ಯಕ್ಕಾಗಿ ಹಾತೊರೆದು ಹೊರಟಿದ್ದಾನೆ.

 

ಕುಶ್ವಂತರು ವೀರಸೈನಿಕರೇನೊ ಹೌದು. ವೀರತ್ವದ ಜೊತೆಗೆ ಅವರಲ್ಲಿ ವಿನೋದ ಪ್ರವೃತ್ತಿಯೂ ಇದೆ. ಆದುದರಿಂದಲೇ ಅವರುಬೊಳ್ಳಮ್ಮ, ಗಣಿ ಬೋಪಣ್ಣ, ಮುತ್ತಿನ ಹಾರದಂತಹ ಕಥೆಗಳನ್ನೂಬೊಳ್ಳದಂತಹ ಜೀವನೋಲ್ಲಾಸದ ಕಥೆಯನ್ನೂ ಬರೆಯಲು ಸಾಧ್ಯವಾಗಿದೆ.

ಸೈನ್ಯದಲ್ಲಿರುವವರೆಗೆ ಸೈನಿಕರು ತಮ್ಮ ನಾಡನ್ನು ಕಾಯುವ ಕಾರ್ಯದ ಅಭಿಮಾನದಲ್ಲಿ, ಆನಂದದಲ್ಲಿ ಇರುತ್ತಾರೆ. ನಿವೃತ್ತಿಯ ನಂತರ ಅವರಿಗೆ ತಾಯ್ನಾಡಿನಲ್ಲಿ ಸಿಗುವ ಸ್ವಾಗತ ಹಾಗು ಬದುಕು ಎಂತಹದು? ಇವರಿಗೆ ಸಿಗುವ ಮದ್ಯದ ಕೋಟಾದ ಭಾಗಕ್ಕಾಗಿ ಮಾತ್ರ ಇವರನ್ನು ಓಲೈಸುವ ಕೆಲವರು ಸಿಕ್ಕಾರು. ಅದರ ಹೊರತಾಗಿ ತಾವು ಬಿಟ್ಟು ಹೋದ ಭೂಮಿಯ ಸ್ವಾಮಿತ್ವಕ್ಕಾಗಿ ಇವರು ದಾಯಾದಿಗಳೊಡನೆ ಹಾಗು ಕಂದಾಯ ಇಲಾಖೆಯೊಡನೆ ಹೊಡೆದಾಡಬೇಕಾದ ಪರಿಸ್ಥಿತಿ ಇದೆ. (‘ಸ್ವರ್ಗಕ್ಕೆ ಏಣಿ’)

ಈ ಸಂಕಲನದ ಅತ್ಯಂತ ಹೃದಯಸ್ಪರ್ಶಿ ಕತೆ ಎಂದರೆಒಂದು ಬೊಗಸೆ ಮಣ್ಣು’. ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿದ್ದ ತನ್ನ ಊರಿನಿಂದ ಓಡಿ ಬಂದ ಹುಡುಗನೊಬ್ಬನು. ಸೈನ್ಯದಲ್ಲಿ ಸೇರಿದ ನಂತರ, ಪಾಕಿಸ್ತಾನದ ವಿರುದ್ಧ ನಡೆದ ಹೋರಾಟದಲ್ಲಿ ಶತ್ರುಸೈನಿಕರನ್ನು ಸೋಲಿಸುತ್ತ ತನ್ನ ಊರಿನವರೆಗೆ ಬಂದಿದ್ದಾನೆ. ಆ ಹಾಳೂರಿನ ಮಣ್ಣುಗುಪ್ಪೆಯ ಮೇಲೆ ಆತ ಕುಳಿತುಕೊಂಡು, ಒಂದು ಬೊಗಸೆ ಮಣ್ಣನ್ನು ಆತ ಕೈಯಲ್ಲಿ ಹಿಡಿದುಕೊಂಡು ರೋದಿಸುತ್ತಾನೆ

 

ಈ ಸಂಕಲನದ ಮೊದಲನೆಯ ಕಥೆಯು ಸೈನ್ಯವನ್ನು ಸೇರಲು ಆತುರಿಸಿದ ತರುಣನ ಕಥೆಯಾದರೆ, ಕೊನೆಯ ಕಥೆಯು ನಿವೃತ್ತಿಯನ್ನು ಹೊಂದಿದ ಕುಶಾಲಪ್ಪ ಎನ್ನುವ ಸೈನಿಕನೋರ್ವನ ಕೊನೆಯ ದಿನದ ಕಥೆಯಾಗಿದೆ. ತನ್ನ ಕೂರ್ಗ ರೆಜಿಮೆಂಟಿನ ಬಾಂಧವರು ನೀಡುತ್ತಿರುವವಿದಾಯ ಸಮಾರಂಭದಲ್ಲಿ ಈತ ಮಾತನಾಡಬೇಕು. ಆದರೆ ಸೈನಿಕರಿಗೆ ಬಂದೂಕಿನ ಗುಂಡು ಹಾರಿಸಲು ಬರುವುದೇ ಹೊರತು ಮಾತಿನ ಗುಂಡನ್ನಲ್ಲ. ಕುಶಾಲಪ್ಪ ಭಾರತೀಯ ಸೈನಿಕರ ಘೋಷವಾಕ್ಯವಾದ ಒಂದೇ ಮಾತನ್ನು ನುಡಿಯುತ್ತಾನೆ: ‘ಸರ್ವರತ ಇಝತ್ ಓ ಇಕ್ಬಾಲ್’ (ಹೋದಲ್ಲೆಲ್ಲವೂ ಘನತೆ ಮತ್ತು ಗೌರವದಿಂದ ಕೆಲಸ ಮಾಡಿದ್ದೇವೆ.)

 

ಮೇಜರ್ | ಡಾ˘ | ಕುಶ್ವಂತ್ ಕೋಳಿಬೈಲು ಇವರಿಗೂ ಸಹ ಈ ಕಥಾಸಂಕಲನದ ಬಗೆಗೆ ನಾವು ಹೀಗೇ ಹೇಳಬಹುದು:

ಸರ್ವರತ ಇಝತ್ ಓ ಇಕ್ಬಾಲ್’ (ನಿಮ್ಮ ಎಲ್ಲ ಕಥೆಗಳೂ ಸುಸಂಪನ್ನವಾಗಿವೆ)!