ನವೋದಯ ಕಾಲದ ಕನ್ನಡ ಲೇಖಕರು ಹೊಸಗನ್ನಡ ಭಾಷೆಯನ್ನು ಕಟ್ಟುವುದರ ಜೊತೆಗೇ, ತಿಳಿಹಾಸ್ಯದ ಹೊಳೆಯನ್ನೂ ಹರಿಸಿದರು. ಹಾಸ್ಯಬ್ರಹ್ಮ ‘ರಾ.ಶಿ.’ಯವರು ‘ಕೊರವಂಜಿ’ ಮಾಸಪತ್ರಿಕೆಯನ್ನು ಪ್ರಾರಂಭಿಸುವದರ ಮೂಲಕ ಅನೇಕ ವೈನೋದಿಕರಿಗೆ ಒಂದು ವೇದಿಕೆಯನ್ನು ಒದಗಿಸಿಕೊಟ್ಟರು. ಕೊರವಂಜಿಯ ಮಹಾನಿರ್ಯಾಣದ ನಂತರ, ‘ಅಪರಂಜಿ’ ಪ್ರಾರಂಭವಾಯಿತು. ಜೊತೆಗೇ ಕನ್ನಡದಲ್ಲಿ ಇನ್ನೂ ಅನೇಕ ನಿಯತಕಾಲಿಕಗಳು ಉದಯಿಸಿದವು.ಇದರಿಂದಾಗಿ, ನವೋದಯದ ನಂತರದ ಹಾಸ್ಯಲೇಖಕರಿಗೆ ಇನ್ನಷ್ಟು ಅವಕಾಶಗಳು ದೊರೆತವು. ಶ್ರೀಮತಿ ಸುಧಾ ಸರನೋಬತ್ ಅವರು ಈ ಎಲ್ಲ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಕನ್ನಡಿಗರಿಗೆ ಹಾಸ್ಯದೌತಣವನ್ನು ನೀಡುತ್ತ ಪರಿಚಿತರೇ ಆಗಿದ್ದಾರೆ.
ಸುಧಾಜೀಯವರು ರಚಿಸಿದ ‘ಹೆಸರಿನಲ್ಲೇನಿದೆ ಮಹಾ….’ ಕೃತಿಯಲ್ಲಿ ಹನ್ನೆರಡು ವಿನೋದ ಲೇಖನಗಳಿವೆ. ಪ್ರತಿ ಲೇಖನವೂ
ಹಾಸ್ಯದ ಪುಟ್ಟ ತೊರೆಯಾಗಿದೆ. ಅಂದರೆ, ಇವು ರಚನೆಯಲ್ಲಿ
ಪುಟ್ಟ ಲೇಖನಗಳು. ಆದರೆ ನಿಮ್ಮ ಮುಖದಲ್ಲಿ ದೊಡ್ಡ ಮುಗುಳುನಗೆಯೊಂದನ್ನು ಮೂಡಿಸದೆ ಬಿಡುವುದಿಲ್ಲ! ಇದು ಸುಧಾಜೀಯವರ ಸಾಧನೆ. ಇದನ್ನು ಅವರು ಹೇಗೆ ಸಾಧಿಸುತ್ತಾರೆ ಎನ್ನುವ ಕುತೂಹಲದಿಂದಲೇ ನಾನು ಈ ಲೇಖನಗಳ ಅಧ್ಯಯನವನ್ನು ಮಾಡಿದೆ.
ಓದುಗನನ್ನು ಒಂದು ಸ್ನೇಹಪೂರ್ಣ ಕೌಟಂಬಿಕ ವರ್ತುಲದಲ್ಲಿ
ಕೊಂಡೊಯ್ಯುವುದು ಅವರ ಮೊದಲ ಹೆಜ್ಜೆ. ಈ ವರ್ತುಲದಲ್ಲಿಯ ಪಾತ್ರಗಳು ಅಂದರೆ
ಲೇಖಕಿ, ಅವರ ಪತಿ, ಮಕ್ಕಳು ಹಾಗು ಆಪ್ತೇಷ್ಟರು.
ಅನೇಕ ಕುಟುಂಬಗಳಲ್ಲಿ ಇರುವಂತೆ ಇಲ್ಲಿಯ
ಪತಿರಾಯರೂ ಸಹ ಯಜಮಾನಿಯ ಮಾತಿಗೆ ಕಡ್ಡಾಯವಾಗಿ ಸಮ್ಮತಿ ಸೂಚಿಸುವವರೆ! (‘ಆಸ್ತಿ-ನಾಸ್ತಿ, ಮಾರ್ಜಾಲ ಪುರಾಣ’
ಇತ್ಯಾದಿ ಲೇಖನಗಳು ). ಎರಡನೆಯ ಹೆಜ್ಜೆ ಎಂದರೆ ಲೇಖನಗಳ ಸಹಜತೆ.
ಕುಟುಂಬಗಳಲ್ಲಿ ಸಹಜವಾಗಿ ನಡೆಯುವ ಪ್ರಸಂಗಗಳು ಇವರ ಕಣ್ಣಿಗೆ ಬಿದ್ದಾಗ ಹಾಸ್ಯಪ್ರಸಂಗವಾಗಿ
ರೂಪ ಪಡೆಯುತ್ತವೆ. (ಆದರೆ ಇವರ ಹಾಸ್ಯವು ಅಪಹಾಸ್ಯವಲ್ಲ). ಸುಧಾಜೀಯವರ ಮೂರನೆಯ ಹೆಜ್ಜೆ ಎಂದರೆ ಲೇಖನಗಳ ಸರಳತೆ. (ಕೆಲವೊಬ್ಬ
ಲೇಖಕರ ಸಂಕೀರ್ಣ ಲೇಖನಗಳು ವಿನೋದರಸವನ್ನು ನುಂಗಿ ಹಾಕುತ್ತವೆ.) ಸುಧಾಜೀಯವರ
ಈ ಮೂರು ಹೆಜ್ಜೆಗಳು ಅಂದರೆ ಆಪ್ತತೆ, ಸಹಜತೆ ಹಾಗು ಸರಳತೆಗಳು ವಾಮನನ ಮೂರು
ಹೆಜ್ಜೆಗಳಂತೆ ಓದುಗನ ಮೂಲೋಕಗಳನ್ನು ಆಕ್ರಮಿಸಿಕೊಳ್ಳುತ್ತವೆ. ಆತ ಮನಃಪೂರ್ವಕವಾಗಿ
‘ಬಲಿ’ಯಾಗುತ್ತಾನೆ!
ಸುಧಾಜೀಯವರ ಲೇಖನಗಳು ಕೇವಲ ಹಾಸ್ಯಾಂತ ಲೇಖನಗಳಲ್ಲ. ‘ಗೌರಮ್ಮನ ದುಬೈ ಪ್ರ(ಯ)ವಾಸ’ ಕಣ್ಣಲ್ಲಿ ಒಂದು ಹನಿ ನೀರನ್ನು
ತರಿಸಿದರೆ, ‘ಗಂಡನ ಮೊದಲ ಪತ್ನಿ ಚೌಕಾಶಿ’ಯು ಹೆಂಡತಿಯ
ಬಗೆಗೆ ಸಹಾನುಭೂತಿಯನ್ನು ಹುಟ್ಟಿಸುತ್ತದೆ. ‘ಕೌನ ಬನೇಗಾ ರಮಾಪತಿ’ಯಲ್ಲಿ ಸಹಾನುಭೂತಿ ಹೊರಳುವುದು ಪತಿಯ ಕಡೆಗೆ!
ಸುಧಾಜೀಯವರ ಲೇಖನಗಳು ಸಂದರ್ಭಪ್ರೇರಿತ ಲೇಖನಗಳು. ಸಾಮಾನ್ಯನ ಕಣ್ಣಿಗೆ ಎಲ್ಲ ಸಂದರ್ಭಗಳೂ ಸಾಮಾನ್ಯವೇ. ಆದರೆ ಸುಧಾಜೀಯವರ ಕಣ್ಣುಗಳು ಹಾಸ್ಯದ ಕಣ್ಣುಗಳು. ಹೀಗಾಗಿ ಸಾಮಾನ್ಯ
ಸಂದರ್ಭವೆಂದು ಓದುಗನಿಗೆ ಅನಿಸುವುದರಲ್ಲಿ ಇವರು ಅಸಾಮಾನ್ಯ ವಿನೋದವನ್ನು ಹುಟ್ಟಿಸುತ್ತಾರೆ.
ಆದುದರಿಂದಲೇ ಇವರ ಕನಸಿನ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಕೋತಿ ತನ್ನ ಕಪಿಚೇಷ್ಟೆಗಳನ್ನು ತೋರಬಲ್ಲದು,( ‘ಮೇಟಿಗಿಂತ ಕೋಟಿ ಮೇಲು’). ‘ಮಹಿಳಾ ಮಂಡಳಿಯ ಗಂಭೀರ ಕ(ವಿ)ಲಾಪ’ದಲ್ಲಿ, ಮಂತ್ರಿಣಿ ರಮಾಶ್ರೀಯವರು ಸದಸ್ಯೆಯರ ತಕರಾರುಗಳನ್ನು ಕುಟುಕುವ ಚುಟುಕು ಉತ್ತರದಿಂದ
ಪರಿಹರಿಸಬಲ್ಲರು!
ಕೊನೆಯಲ್ಲಿ ಈ ಸಂಕಲನದಲ್ಲಿರುವ ಲೇಖನಗಳಿಗೆ ಮುಕುಟಪ್ರಾಯವಾಗಿರುವ ‘ಅಮ್ಮ’ ಲೇಖನವನ್ನು ಇಲ್ಲಿ ಉಲ್ಲೇಖಿಸಲೇಬೇಕು. ಇದು ವಿನೋದಲೇಖನವಲ್ಲ. ಸುಧಾಜೀಯವರು ತಮ್ಮ ತಾಯಿಯ ಬಗೆಗೆ ಪ್ರೀತಿಯಿಂದ ಬರೆದು, ಅರ್ಪಿಸಿದ ಪುಷ್ಪಾಂಜಲಿ.