ʼನೋಟ್ ಬುಕ್ಕಿನ ಕಡೆಯ ಪುಟʼ ಈ ಹಾಸ್ಯಪಂಚವಿಂಶತಿಯನ್ನು ಬರೆದ ಶ್ರೀಮತಿ ಜಯಶ್ರೀ ದೇಶಪಾಂಡೆಯವರಿಗೆ ಹಾಗು ಪ್ರಕಟಿಸಿದ ಶ್ರೀ ಅಣಕು ರಾಮನಾಥರಿಗೆ ಅಭಿನಂದನೆಗಳನ್ನು ಹಾಗು ಧನ್ಯವಾದಗಳನ್ನು ಮೊದಲಿಗೆ ಸಲ್ಲಿಸುತ್ತೇನೆ. ಇವರಿಂದಾಗಿ ಕನ್ನಡಿಗರಿಗೆ ಒಂದು ಉತ್ತಮ ಸಾಹಿತ್ಯಕೃತಿ ದೊರೆತಿದೆ.
ವೈಚಾರಿಕತೆ ಹಾಗು ಭಾವನಾತ್ಮಕತೆ ಜಯಶ್ರೀ ದೇಶಪಾಂಡೆಯವರ ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ರೀತಿಯನ್ನು ನೋಡಿದರೆ ಅವರ ಕಥೆಗಳನ್ನು ಕರಿಗಡಬಿಗೆ ಹೋಲಿಸುವುದು ಉಚಿತವೆನಿಸುತ್ತದೆ! ವೈಚಾರಿಕತೆಯು ಕರಿಗಡಬಿನ ಮೇಲ್-ಪದರದಂತೆ ಆಕರ್ಷಕವಾಗಿದ್ದರೆ ಒಳತಿರುಳು ಸಿಹಿಯಾದ ಭಾವನಾಪ್ರಪಂಚವಾಗಿದೆ....ಕರಿಗಡಬಿನ ಹೂರಣದಂತೆ! ಅವರ ಸಾಹಿತ್ಯವನ್ನು ಓದುವಾಗ (-ಅದು ಕತೆಯೇ ಇರಲಿ, ಲಲಿತ ಪ್ರಬಂಧವೇ ಇರಲಿ-) ಅದರಲ್ಲಿಯ ವೈಚಾರಿಕತೆಯಿಂದ ಆಕರ್ಷಿತನಾಗುವ ಓದುಗನು, ಓದುತ್ತ ಹೋದಂತೆ, ಕೃತಿಯನ್ನು ಸೊಗಸುಗೊಳಿಸುವ ಭಾವುಕತೆಗೆ ಮರಳಾಗುತ್ತಾನೆ. ಈ ಎರಡು ಅಂಶಗಳಲ್ಲದೇ ಅವರ ಸಾಹಿತ್ಯವನ್ನು ಸೀಕರಣೆಯಂತೆ ಸವಿ ಮಾಡುವ ಮೂರನೆಯ ಗುಣವೊಂದು ಅವರ ಕೃತಿಗಳಲ್ಲಿದೆ. ಅದು ಅವರ ಭಾಷಾವಿದ್ವತ್ತು. ಇಂಗ್ಲಿಶ್ ಭಾಷೆಯನ್ನೇನೊ ಅವರು ಕಾ^ಲೇಜಿನಲ್ಲಿ ಐಚ್ಛಿಕ ವಿಷಯವಾಗಿ ಕಲಿತರು. ಇದರ ಹೊರತಾಗಿ ಅವರ ಭಾಷೆಯಲ್ಲಿ ಹಿಂದೀ ಹಾಗು ಸಂಸ್ಕೃತ ಪದಗಳು ಅನಾಯಾಸವಾಗಿ ಇಣಿಕುತ್ತವೆ. ಇದು ಅವರ ತಾಯಿಮನೆಯಿಂದ ಹಾಗು ಪರಿಸರದಿಂದ ಅವರಿಗೆ ದೊರೆತ ಬಳುವಳಿ ಎನ್ನುವುದು ನನ್ನ ಊಹೆ. ಈ ಭಾಷೆಗಳು ಅವರಿಗೆ ಸಹಜಸಿದ್ಧಿಯಾದ ಭಾಷೆಗಳೇ ಆಗಿವೆ. ಇದರ ಪರಿಣಾಮವಾಗಿ, ಮಜ್ಜಿಗೆಯನ್ನು ಕಡೆದಾಗ ಬರುವ ಬೆಣ್ಣೆಯಂತೆ ಹೊಸ ಹೊಸ ಪದಗಳು ಅವರ ಕಥೆಗಳಲ್ಲಿ ಸಹಜವಾಗಿ ತೇಲಿ ಬರುತ್ತವೆ, ಉದಾಹರಣೆಗೆ ಹಿಂಪುಟ, ತೇಲುತೆಪ್ಪ, ಉಬ್ಬುಬೆನ್ನು, ತೀವ್ರವೇಗಿ. ರಾಗಾಧಾರೀ ಇತ್ಯಾದಿ.
ಜಯಶ್ರೀಯವರು ತಮ್ಮ ಲೇಖನಗಳಲ್ಲಿ ಆಡುನುಡಿಯ ಪದಗಳನ್ನು ಬಳಸಿದ್ದಾರೆ ಹಾಗು ಬಳಸುತ್ತಾರೆ. ಈ ಆಡುನುಡಿಯು ಅವರ ಕತೆಗಳ ಕಾಲ ಹಾಗು ಪರಿಸರದ ನಿರ್ಣಾಯಕಗಳಾಗಿವೆ. ಇದರಿಂದಾಗಿ ಅವರ ಕತೆಗಳಿಗೆ ಅಥವಾ ಲೇಖನಗಳಿಗೆ ವಿಶಿಷ್ಟವಾದ ಕಾಲ-ದೇಶ ನಿರ್ಮಾಣವಾಗುತ್ತದೆ. ಉದಾಹರಣೆಗೆ ʻಸುಂಠಿʼಯ ಬಗೆಗೆ ಬರೆಯುವಾಗ ಕಾಢೆ, ಜಾಂಬು, ಗೌತಿ ಚಹಾ ಇವೆಲ್ಲ ತಮ್ಮ ಮುಖವನ್ನು ತೋರಿಸುತ್ತವೆ. ʻಅಲ್ಲೇಪಾಕʼವನ್ನು ಮಾರುವ ಮಾಮಡ್ಯಾನ ಕಥೆಯಂತೂ ಪರಿಸರಸೃಷ್ಟಿಗೆ ಉತ್ತಮ ನಿದರ್ಶನವಾಗಿದೆ. ಅಲ್ಲೇಪಾಕ ಹಾಗು ಮಾಮಡ್ಯಾನ ಬಗೆಗೆ ಹೇಳುತ್ತಲೇ ಜಯಶ್ರೀಯವರು ತಾವು ಬಾಲ್ಯದಲ್ಲಿ ನೋಡಿದ ಬೆಳಗಾವಿ ಕಿಲ್ಲೆಯ ಸಂದು ಸಂದುಗಳನ್ನು ಬಿಡದೆ ತೋರಿಸಿದ್ದಾರೆ. ಕಿಲ್ಲೆಯ ಮೇಲೆ ಹತ್ತಿ ದೂರದ ಲಕ್ಷ್ಮೀ ಟೇಕಡಿಯವರೆಗೂ ಕಣ್ಣು ಹಾಯಿಸಿದ್ದಾರೆ. ಓದುಗನೂ ಸಹ ಅನಾಯಾಸವಾಗಿ ಈ time machineದಲ್ಲಿ ಬೆಳಕಿನ ವೇಗದಲ್ಲಿ ಪಯಣಿಸುವುದು ಜಯಶ್ರೀಯವರ ಕಥನಕೌಶಲವನ್ನು ತೋರಿಸುತ್ತದೆ.
ಇವೆಲ್ಲ ಜಯಶ್ರೀಯವರ ಬಾಲ್ಯದ ನೋಟಗಳು ಎನ್ನುವುದು ಓದುಗನಿಗೆ ಹೇಗೆ ತಿಳಿಯುತ್ತದೆ? ಜಯಶ್ರೀಯವರು ಬೆಳಗಾವಿಯ ಕಿಲ್ಲೆಯಲ್ಲಿ ತಮ್ಮ ಸೈಕಲ್ಲಿನ ಮೇಲೆ ಹೊಡೆಯುವ ಹನ್ನೆರಡು ಸುತ್ತುಗಳಿಂದಾಗಿ ಈ ವಿಷಯವು ಓದುಗನಿಗೆ ಸ್ಪಷ್ಟವಾಗುತ್ತದೆ! ಬರಿ ಪರಿಸರಸೃಷ್ಟಿಯು ಜಯಶ್ರೀಯವರ ಲೇಖನಗಳಲ್ಲಿ ಇದೆ ಅಂತಲ್ಲ; ʻಅಜ್ಜನ ಹೋಲ್ಡಾಲʼ ಲೇಖನವು ಆ ಕಾಲದ ವಾತಾವರಣದ ಬಗೆಗೆ ಹೇಳುವುದಲ್ಲದೆ, ಆ ಕಾಲದ ಜನರ ದೈವಭಕ್ತಿ, ತಾತ್ವಿಕ ಮನೋಸ್ಥಿತಿ ಇವುಗಳನ್ನೂ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ; ಈ ಹೋಲ್ಡಾಲಿನಲ್ಲಿ ಏನೆಲ್ಲ ಸಾಮಾನುಗಳನ್ನು ಅಜ್ಜ ಒಯ್ಯುತ್ತಿದ್ದರು ಎನ್ನುವದನ್ನು ನೋಡಿದರೆ ನೀವು ದಂಗಾಗುತ್ತೀರಿ. ಇವೆಲ್ಲುವುಗಳ ಜೊತೆಗೆ ಒಂದು ಪುಟ್ಟ ಗಂಗಾಗಿಂಡಿಯೂ ಆ ಹೋಲ್ಡಾಲಿನಲ್ಲಿ ಇರುತ್ತಿತ್ತು. ಇದರ ಕಾರಣ ತಿಳಿದಾಗ ಓದುಗನ ಕಣ್ಣಿನಲ್ಲಿಯೂ ಗಂಗೆ ಜಿನುಗುವದರಲ್ಲಿ ಸಂದೇಹವಿಲ್ಲ!
ಜಯಶ್ರೀಯವರ ಕಥನಕೌಶಲವು ಪದನಿರ್ಮಾಣಕ್ಕಷ್ಟೇ ಸೀಮಿತವಾಗಿಲ್ಲ. ವಸ್ತುವರ್ಣನೆಯ ಸಂದರ್ಭದಲ್ಲಿ ಅವರು ಬಳಸುವ ವಿಶೇಷಣಗಳು ವಸ್ತುವಿನ ಅಂತರಂಗ-ಬಹಿರಂಗದ ಪರಿಚಯವನ್ನು ಮಾಡಿಕೊಡುತ್ತವೆ. ಉದಾಹರಣೆಗೆ ʻಸಾಗರ ಸುಮನʼ ಲೇಖನದಲ್ಲಿರುವ ಈ ಸಾಲನ್ನು ನೋಡಿರಿ:
“ಅಮೇರಿಕ, ಇಂಗ್ಲೆಂಡ್ ನಡುವೆ ಅಂದಾಜು ಆರುಸಾವಿರದಾ ಎಂಟುನೂರ ಐವತ್ತು ಕಿಲೋಮೀಟರು ದೊಪ್ಪೆಂದು ಬಿದ್ದುಕೊಂಡ ನೀರು.”
ʻ ಅಂದಾಜು ಆರುಸಾವಿರದಾ ಎಂಟುನೂರ ಐವತ್ತು ಕಿಲೋಮೀಟರುʼ ಎನ್ನುವದು ಆ ಸಾಗರದ ಬಹಿರಂಗದ ಪರಿಚಯವಾದರೆ, ʻ ದೊಪ್ಪೆಂದು ಬಿದ್ದುಕೊಂಡ ನೀರುʼ ಎನ್ನುವುದು, ಜಯಶ್ರೀಯವರ ಅಂತರಂಗದಲ್ಲಿ ಮೂಡಿದ ಭಾವನೆಯನ್ನು ಹೊರಹೊಮ್ಮಿಸುತ್ತದೆ! ʻಕಿರಿದರೊಳ್ಪಿರಿದರ್ಥವನ್ನು ಹೇಳುವುದುʼ ಎಂದರೇ ಇದೇ ಅಲ್ಲವೆ? ಇದೇ ಕಥನದಲ್ಲಿ ಅಟ್ಲಾಂಟಿಕ ಸಾಗರದಲ್ಲಿರುವ ಕ್ಲಿಫ್ ಹಾಗು ಬರ್ಮುಡಾ ತ್ರಿಕೋನಗಳ ಬಗೆಗೂ ಸ್ವಾರಸ್ಯಕರವಾಗಿ ಹೇಳುತ್ತ ಜಯಶ್ರೀಯವರು ತಮ್ಮ ಲೇಖನವನ್ನು ೩೬೦ ಡಿಗ್ರೀ ಪೂರ್ಣಗೊಳಿಸಿದ್ದಾರೆ.
ರಾಮಚಂದ್ರ ಕುಲಕರ್ಣಿಯವರ (ರಾ.ಕು.) ಹರಟೆಗಳ ಸಂಗ್ರಹವಾದ ʻಗಾಳಿಪಟʼದ ಮುನ್ನುಡಿಯಲ್ಲಿ ವರಕವಿ ಬೇಂದ್ರೆಯವರು ಒಂದು ಮಾತು ಹೇಳಿದ್ದಾರೆ: ʻಇವರ ಲೇಖನಗಳಲ್ಲಿ ಲಾಘವವಿದೆ, ಲಘುತ್ವವಿಲ್ಲʼ. ಜಯಶ್ರೀಯವರ ಲೇಖನಗಳ ಬಗೆಗೂ ಇದೇ ಮಾತನ್ನು ಹೇಳಬಹುದು. ʻಕೋಪಗೃಹ ವಾರ್ತೆಗಳು…ʼ ಎನ್ನುವ ಪ್ರಬಂಧವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಈ ಲೇಖನದಲ್ಲಿ ಅಂದರೆ ʻಕೋಪಗೃಹ..ʼದಲ್ಲಿ ಬರುವ, “ಬಿದರ್ದೆತ್ತಿ ಖಟ್ವಾಂಗಮಂಬರವು ಕವ್ವಳಿಸೆ…” ಎಂದು ಪ್ರಾರಂಭವಾಗುವ ಚೌಪದಿಯು ಮೊದಲಿಗೆ ನನ್ನನ್ನು ಹಳೆಗನ್ನಡದ ಬಲೆಯಲ್ಲಿ ಮಿಸುಕಾಡದಂತೆ ಸಿಲುಕಿಸಿತು.ಅವರು ಕೊಟ್ಟ ವಿವರಣೆಯಿಂದಾಗಿ ತಿಳಿವು ಮೂಡಿ, ಖುಶಿಯಾಯಿತು. ಮುಂದಿನ ಮೂರನೆಯ ಪರಿಚ್ಛೇದದಲ್ಲಿಯೇ ʻಪ್ರಾಣ ಜಾಯೇ ಪರ ವಚನ ನಾ ಜಾಯೇʼ ಎನ್ನುವ ಹಿಂದೀ ಸಿನೆಮಾದ ಹೆಸರಿನ ಪರಿಪಾಕ! ಮುಂದುವರೆದಂತೆ ಕನ್ನಡದ ಸಿನೆಮಾದ ಜನಪ್ರಿಯ ಹಾಡೊಂದು ನನ್ನನ್ನು ಹಿಡಿದು ಹಾಕಿತು:
“ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣಾ,
ಇಟ್ಟಾಯ್ತು ನಿನ ಮ್ಯಾಲೆ ನನ ಪ್ರಾಣಾ”
ಒಂದರ ಮೇಲೊಂದರಂತೆ, ಆದರೆ ಎಲ್ಲಿಯೂ ಸೂತ್ರವು ಶಿಥಿಲವಾಗದಂತೆ ಕೋಪದ ವಿವಿಧ ರೂಪಗಳನ್ನು, ವಿವಿಧ ಶೈಲಿಗಳಲ್ಲಿ ಚಿತ್ರಿಸಿದ ಜಯಶ್ರೀಯವರು ಈ ಲೇಖನಕ್ಕೆ ಭರತವಾಕ್ಯವನ್ನು ಹೇಳದಿರುವರೆ? ಇದಂತೂ ಎಲ್ಲರೂ ಪಾಲಿಸಲೇಬೇಕಾದ ಸದುಪದೇಶ.
“ಉತ್ತಮೇಸ್ಯಾತ್ಕ್ಷಣಂಕೋಪಂ
ಮಧ್ಯಮೇ ಘಟಿಕಾದ್ವಯಮ್
ಅಧಮೇಸ್ಯಾದಹೋರಾತ್ರಂ
ಪಾಪಿಷ್ಠೇ ಮರಣಾಂತಿಕಮ್”
ಹಳೆಯ ನೆನಪುಗಳ ಮರುಕಳಿಕೆಯನ್ನು ಜಯಶ್ರೀಯವರು ಅಂತಃಕರಣದಿಂದ ಓದುಗರ ಎದುರಿಗೆ ಹರಡುತ್ತಾರೆ. ಡೇಲಿಯಾ, ವೋ ಕಾಗಜಕೀ ಕಶ್ತಿ ವೋ ಬಾರಿಶ್ಕಾ ಪಾನೀ, ಇಲಕಲ್ಆಯೀ ಇವೆಲ್ಲ ಇಂತಹ ಹಿನ್ನೋಟದ ಪ್ರಕರಣಗಳು. ಇನ್ನು ʻಒಂದು angry ಬರ್ಡ ಸಮಾಚಾರʼ, ʻಮುಂಬಯಿ ಮಳೆʼ, ʻಒಂದು ಪುಸ್ತಕವೂ, ನಾಲ್ಕು ನಕ್ಷತ್ರಗಳೂʼ, ʻಸೌನಾ ಸುಗ್ಗಿಯೂ ಹೆಸರು ಬೇಳೆ ಹುಗ್ಗಿಯೂʼ ಇವೆಲ್ಲ ಹೊಸ ಅನುಭವಗಳ ಲೇಖನಗಳು.
ಜಯಶ್ರೀಯವರ ಲೇಖನಗಳ ಮತ್ತೊಂದು ವೈಶಿಷ್ಟ್ಯವೆಂದರೆ ಪೂರ್ವಸೂರಿಗಳ ಅಪ್ರತ್ಯಕ್ಷ ಸ್ಮರಣೆ. ಬೇಂದ್ರೆಯವರ ಕವನಗಳಲ್ಲಿಯೂ ಸಹ ಪೂರ್ವಸೂರಿಗಳ ಪ್ರಭಾವದ ಛಾಯೆ ಉದ್ದೇಶಪೂರ್ವಕವಾಗಿಯೇ ಮೂಡಿರುತ್ತದೆ. ಜಯಶ್ರೀಯವರು ತಮ್ಮ ಲೇಖನಗಳ ಶೀರ್ಷಿಕೆಗಳಲ್ಲಿ ಅಥವಾ ಒಳಭಾಗಗಳಲ್ಲಿ ಪೂರ್ವಸೂರಿಗಳ ವಾಕ್ಯಗಳನ್ನು ಉದ್ಧರಿಸಿ, ಅವರ ಸುಖದಾಯಕ ಪ್ರಭಾವವನ್ನು ಸ್ಮರಿಸಿಕೊಳ್ಳುತ್ತಾರೆ. ಉದಾಹರಣೆಗೆ: ʻಪ್ರಾಣ ಜಾಯೇ ಪರ ವಚನ ನಾ ಜಾಯೇʼ, ʻವೋ ಕಾಗಜಕೀ ಕಶ್ತಿ ವೋ ಬಾರಿಶ್ಕಾ ಪಾನೀʼ, ʻಒಂದಿರುಳು ರೈಲಿನಲಿ..ʼ ಇವೆಲ್ಲ ಇಂತಹ ಉದಾಹರಣೆಗಳು. ಕೆ.ಎಸ್.ನರಸಿಂಹಸ್ವಾಮಿಯವರು ʻಒಂದಿರುಳು ಕನಸಿನಲಿ..ʼ ಎಂದಿದ್ದರೆ, ಜಯಶ್ರೀಯವರು, ʻಒಂದಿರುಳು ರೈಲಿನಲಿ..ʼ ಎಂದಿದ್ದಾರೆ. ಅಷ್ಟೇ ಫರಕು! ಇದು ನಮ್ಮ ಸಾಹಿತ್ಯಸಂಪ್ರದಾಯವನ್ನು, ಮರೆತು ಹೋಗದಂತೆ ಜೀವಂತವಾಗಿಡುವ ಸತ್ಕಾರ್ಯ.
ಕನ್ನಡದ ಹಾಸ್ಯಬ್ರಹ್ಮರಾದ ರಾ.ಶಿಯವರು ʻಹಾಸ್ಯವು subtleದಲ್ಲಿಯ ʻbʼಯ ಹಾಗೆ ಇರಬೇಕುʼ ಎಂದು ಹೇಳಿದ್ದರು. ಜಯಶ್ರೀಯವರ ವಿನೋದವು ಹಾಗೆಯೇ ಇದೆ. ಆದರೆ ಇದು ಕೇವಲ ಹಾಸ್ಯವಲ್ಲ; ಹಾಸ್ಯರಸಾಯನ. ಈ ರಸಾಯನದಲ್ಲಿ ನೀವು ವಿವಿಧ ರೀತಿಯ ರಸಗಳನ್ನು ಸವಿಯುತ್ತೀರಿ. ಕೋಮಲತೆ ಜಯಶ್ರೀಯವರ ಲೇಖನಗಳ ಮತ್ತೊಂದು ವೈಶಿಷ್ಟ್ಯ. ಈ ಲೇಖನಗಳನ್ನು ಆ ಕಾರಣಕ್ಕಾಗಿ ʻಹೂಗೊಂಚಲುʼ ಎಂದು ಕರೆಯುವುದು ಉಚಿತವಾದೀತು. ಆದರೆ ಜಯಶ್ರೀಯವರು ತಮ್ಮ ʻನೋಟ್ ಬುಕ್ಕಿನ ಕಡೆಯ ಪುಟʼದವರೆಗೂ ಲೇಖನಗಳ ನಗೆತೊರೆಗಳನ್ನೇ ಹರಿಸಿರುವ ಕಾರಣದಿಂದ, ʻನೋಟ್ ಬುಕ್ಕಿನ ಕಡೆಯ ಪುಟʼ ಎನ್ನುವುದೇ ಸಮುಚಿತವಾದ ಶೀರ್ಷಿಕೆಯಾಗಿದೆ.
ಆತ್ಮೀಯತೆಯು ಜಯಶ್ರೀ ದೇಶಪಾಂಡೆಯವರ ಮನಸೆಳೆವ ಗುಣ. ತಮ್ಮ ʻನೋಟ್ ಬುಕ್ಕಿನ ಕಡೆಯ ಪುಟʼ ಸಂಕಲನದಲ್ಲಿ ಜಯಶ್ರೀ ದೇಶಪಾಂಡೆಯವರು ೨೫ ಕರಿಗಡಬುಗಳನ್ನು ತಮಗೆ ಸಹಜವಾದ ನಿಸ್ಸಂಕೋಚ ಆತ್ಮೀಯತೆಯಿಂದ ಓದುಗರಿಗೆ ಹಂಚಿದ್ದಾರೆ. ಇಕೋ, ಸವಿಯಿರಿ!