ಪ್ರಜ್ಞಾವಂತ ನಾಗರಿಕನಿಗೆ ಸಾಹಿತ್ಯದಿಂದ ಸಿಗುವಷ್ಟು ಸುಖವು ಮತ್ತೆ ಯಾವ ಕಲೆಯಿಂದಲೂ ಸಿಗಲಾರದು. ಸಾಹಿತ್ಯಸುಖದಲ್ಲಿ ಎರಡು ಅಂಶಗಳಿವೆ. ಒಂದು ಸಾಹಿತ್ಯಕೃತಿಯ ಅಂತರಂಗ; ಎರಡನೆಯದು ಬಹಿರಂಗ. ಈ ಬಹಿರಂಗಕ್ಕೇ ಶೈಲಿ ಎಂದೂ ಕರೆಯಬಹುದು. ನಮ್ಮ ಪ್ರಾಚೀನ ಸಾಹಿತ್ಯದ ದಿಗ್ಗಜರಾದ ಕಾಲೀದಾಸ, ಭಾರವಿ, ದಂಡಿ ಹಾಗು ಮಾಘ ಇವರ ಶೈಲಿಯ ವೈಶಿಷ್ಟ್ಯದ ಬಗೆಗೆ ಹೀಗೊಂದು ಶ್ಲೋಕವಿದೆ:
‘ಉಪಮಾ ಕಾಲಿದಾಸಸ್ಯ, ಭಾರವೇರರ್ಥಗೌರಮಮ್;
ದಂಡಿನ: ಪದಲಾಲಿತ್ಯಮ್, ಮಾಘೇ ಸಂತಿ ತ್ರಯೋ ಗುಣಾ:’
ಈ ಗುಣಗಳಿಂದಲೇ
ಇವರು ಶ್ರೇಷ್ಠರಾದರು ಎಂದರ್ಥವಲ್ಲ ; ಅದರೆ ಈ ಗುಣಗಳು ಅವರ ಸಾಹಿತ್ಯಕ್ಕೆ ಮೆರಗು ಕೊಟ್ಟಿವೆ.
ಜಯಶ್ರೀ
ದೇಶಪಾಂಡೆಯವರು ರಚಿಸಿದ ‘ಹಲವು ನಾಡು, ಹೆಜ್ಜೆ ಹಾಡು’ ಕೃತಿಯನ್ನು ಓದುವಾಗ, ಈ ಶ್ಲೋಕ ನನ್ನ
ಮನದಲ್ಲಿ ಸುಳಿದಾಡಿತು. ಜಯಶ್ರೀ ದೇಶಪಾಂಡೆಯವರ ಕೃತಿಗೆ ಮೆರಗು ಕೊಟ್ಟಂತಹ ಅನೇಕ ಗುಣಗಳು ಇಲ್ಲಿವೆ. ಅವರ
ಕೃತಿಯ ಅಂತರಂಗದ ಬಗೆಗೆ ಈಗಾಗಲೇ ನಾನು ನನ್ನ ‘ಸಲ್ಲಾಪ’ದಲ್ಲಿ ಬರೆದಿದ್ದೇನೆ. (https://sallaap.blogspot.com/2022/07/blog-post.html) ಈಗ ಅವರ ಕೃತಿಯ ಬಹಿರಂಗಗುಣಗಳ ಬಗೆಗೆ ಅಂದರೆ ಶೈಲಿಯ ಬಗೆಗೂ ಒಂದಿಷ್ಟು ಮಾತನ್ನು
ಹೇಳದಿದ್ದರೆ, ನನಗೆ ಸಮಾಧಾನವಿರದು!
ಜಯಶ್ರೀ
ದೇಶಪಾಂಡೆಯವರ ತಾಯಿನುಡಿ ಕನ್ನಡ, ಮನೆಯಲ್ಲಿ ಸಂಸ್ಕೃತದ ದಟ್ಟ ಛಾಯೆ. ವ್ಯಾವಹಾರಿಕ ಪರಿಸರ ಹಾಗು
ಮರಾಠಿ ಸಂಗೀತವು ಇವರ ಮೇಲೆ ಆಳವಾದ ಪ್ರಭಾವ ಬೀರಿದೆ. ಇಂಗ್ಲಿಶ್ ಭಾಷೆ ಇವರ ಪ್ರೌಢ ಶಿಕ್ಷಣದ
ಮಾಧ್ಯಮ. ಹಿಂದೀ ಭಾಷೆಯು ಮಾಧ್ಯಮಿಕ ಶಾಲೆಯ ಉಪಭಾಷೆ ಹಾಗು ಚಲನಚಿತ್ರಗಳ ಕೊಡುಗೆ! ಈ ರೀತಿಯಾಗಿ ಪಂಚಭಾಷಾ ಪ್ರವೀಣರಾದ ಜಯಶ್ರೀಯವರ
ಶೈಲಿಯು ಅವರ ಕೃತಿಗಳಿಗೆ ವಿಶಿಷ್ಟವಾದ ಮೆರಗನ್ನು ನೀಡಿದೆ.
ಮಾರ್ದವತೆ
ಜಯಶ್ರೀ ದೇಶಪಾಂಡೆಯವರ ಸಾಹಿತ್ಯದ ಪ್ರಧಾನ ಗುಣವಾಗಿದೆ. ಇವರ ಶೈಲಿಯು ದಟ್ಟ ಕಾನನದಲ್ಲಿ
ಜುಳುಜುಳು ಎಂದು ಹರಿಯುವ ತೊರೆಯಂತಿದೆ, ಅರ್ಭಟದ ಪ್ರವಾಹದಂತಲ್ಲ. ಇಂತಹ ತೊರೆಯಲ್ಲಿ ಚಾರಣಿಗನು
ಸುಖದಿಂದ ತೊರೆಯ ತಂಪನ್ನು ಅನುಭವಿಸಬಹುದು. ಅವನಿಗೆ ತೊರೆಯ ಜೊತೆಗೆ ಲಭಿಸುವ ಆತ್ಮೀಯತೆಯು
ಅರ್ಭಟದ ಪ್ರವಾಹದ ಜೊತೆಗೆ ಸಿಗಲಾರದು. ಇಂತಹ ಶೈಲಿಯು ಜಯಶ್ರೀ ದೇಶಪಾಂಡೆಯವರಿಗೆ ಸಹಜವಾದ
ಭಾಷಾಪ್ರೌಢಿಮೆಯಿಂದ ಸಾಧ್ಯವಾಗಿದೆ. ಮಾದರಿಗೆಂದು ಅವರ ಕೃತಿಯಿಂದ ಕೆಲವು ಸಾಲುಗಳನ್ನು
ಎತ್ತಿಕೊಂಡು ಇಲ್ಲಿ ಸಾದರಪಡಿಸುತ್ತೇನೆ:
(೧) ಸರೋವರದ ಎರಡೂ ದಂಡೆಗುಂಟ ಸ್ವಪ್ನ ಸದೃಶ ಕಿರುಚಿತ್ರಗಳ ಹಾಗೆ ಅಂಟಿಕೊಂಡ ಬಣ್ಣದ ಹೆಂಚಿನ ಮನೆಗಳ ರಾಶಿ ಪೇರಿಸಿಕೊಂಡ ಊರುಗಳು ಕೈಬೀಸಿ ಬೀಳ್ಕೊಟ್ಟವು.
(೨) ಪಕ್ಕನೆ
ನೆನಪಿನ ನೆರಳಿನಿಂದ ಎದ್ದು ಬಂದಳಾಕೆ, ಹಿಮದ ಹುಡುಗಿ!
(೩) ಭಾವ
ನಿರ್ಭಾವದ ನಡುವಿನ ಸಮಭಾವ ಅಚ್ಚೊತ್ತಿದ ಮುಖಗಳಲ್ಲಿ ಕಂಡೂ ಕಾಣದ ಕಿರುನಗು
(೪) ಬೆರಗಿಗೆ
ಹೊಸ ಅರ್ಥ ಕಂಡಂತಾಯಿತು.
(೫) ಸ್ವಚ್ಛ
ಶುಭ್ರ ಬಿಸಿಲಿನ ಆಕಾಶ ಕೆಲವೇ ಮೋಡಗಳಿಗೆ ಹಾದು ಹೋಗಲು ಅನುಮತಿ ನೀಡಿ ಉಳಿದೆಲ್ಲ ವಿಸ್ತಾರಕ್ಕೂ
ನೀಲಿಯನ್ನು ಹಾಸಿತ್ತು.
(೬) ಸ್ವಾಗತ ಪ್ರಾಂಗಣದಲ್ಲಿ ಎಡಬಲಕ್ಕೂ ಚಾಚಿದ
ಗೋಡೆಗುಂಟ ಅಸಂಖ್ಯಾತ ಕಿರುಗೂಡುಗಳ ಒಡಲುಗಳಲ್ಲಿ ನಾನಾ ಧ್ಯಾನಸ್ಥ ವಿನ್ಯಾಸಮುದ್ರೆಯಲ್ಲಿರುವ
ಬುದ್ಧ ಪ್ರತಿಮೆಗಳ ಪ್ರತಿಫಲಿತ ಮಿರುಗು............
(೭) ಸೃಷ್ಟಿ ಸ್ಥಿತಿಗಳ ಸಮೀಕರಣದ ಯೋಗಭಾಗವನ್ನು ತನ್ನ
ಪ್ರಖರತೆಯ ಉನ್ಮೀಲನದಲ್ಲಿ ತುಂಬಿ
ಚೆಲ್ಲುತ್ತಿದ್ದ ಸವಿತೃವಿನ ಆ ಕ್ಷಣದ ಅಸ್ತಿತ್ವ ನಮ್ಮ ಚಿತ್ತದಲ್ಲಿ ನೆಲೆಗೊಳ್ಳ ತೊಡಗಿತು.....
(೮)
ಇನ್ನುಳಿದಂತೆ ದಂಡೆಸಾಲು ಹಿಡಿದು ಉದ್ದುದ್ದಕ್ಕೆ ಸಾಲುಗಟ್ಟಿದ ಹಸಿರುಡುಗೆಯ ಮರಗಳು ಚೆಲ್ಲುವ
ನೆರಳಿನ ಚಿತ್ತಾರದ ವಿನ್ಯಾಸ
(೯) ನಿರಂತರ
ಗುಂಗೀಹುಳವಾಗಿ ಕಾಡಿದ್ದು ಮರೆಯಲಸದಳ
(೧೦) ....ಅವರ ಈ
ಗಂಗೆ ನೂರಾ ಎಪ್ಪತ್ತೈದು ಅಡಿಗಳೆತ್ತರದ ಹಿಂಭಾಗದಲ್ಲಿ
ಸಮಪಾತಳಿಯಲ್ಲಿ ಅಗಲವಾಗಿ ಹರಡಿ ಹಾಸಿ ಪ್ರಶಾಂತವಾದ ಜುಳು ಜುಳು ಗಾನಕ್ಕೆ ತನ್ನನ್ನೇ
ತಂತಿಯಾಗಿಸಿಕೊಳ್ಳುತ್ತ ಸಲಿಲಗಾನ ಗುನುಗುತ್ತ ಬಂದವಳು ತೇಲು ತೇಲುತ್ತ ತಟಾರನೆ ಬುಡ ಕಡಿದ
ಬಾಳೆಯಾಗಿ ಗರ್ಜಿಸುತ್ತ ಅಂಚಿನಿಂದ ಉರುಳುವಾಗ ಅಲ್ಲಿ ಜಗತ್ತೇ ಬೆರಗಾಗಿ ಕಣ್ಣರಸುವ ಅಚ್ಚರಿಯನ್ನು
ಹೆರುತ್ತಾಳೆ............
ಜಯಶ್ರೀ ದೇಶಪಾಂಡೆಯವರು ಅನೇಕ ಪದಗಳನ್ನು ಸಹಜವಾಗಿ, ಅನಾಯಾಸವಾಗಿ ಸೃಷ್ಟಿಸುತ್ತಾರೆ. ಅಂತಹ ಕೆಲವು ಪದಗಳು ಇಲ್ಲಿವೆ:
ಕಿರುಗರ್ವ
ನಿಸರ್ಗಪರ್ವ
ಹೆಗಲೆಣೆ
ಭಾಸ್ಕರನ ಉರಿಚೆಂಡಿನ ಉಪಸ್ಥಿತಿ
ಕಾಡುಮನೆ
ಚಾಚುಹಲಗೆ
ಸಪ್ತಮಾತೃಕೆಯರು
(ಏಳು ಗೊಂಬೆಗಳು)
ಸಮಯಸೂಚಿಯ
ಬೊಂಬೆಯಾಟ
ಸುಣ್ಣಗಲ್ಲಿನ
ಶಿಲ್ಪಗಳು
ಇರಸರಿಕೆ
ಆಕಾಶಕಿಂಡಿ
ಉರುಳುಬಂಡಿ
ಬೆಂಕಿಗೂಡು
ಹಂದಿಗೂಡು
ಕಿರುಗೂಡು
ಸ್ವಾಗತ ಪ್ರಾಂಗಣ
ದೇಗುಲಸೂಚೀ ಹೂವು
ವಧುವಿನ ಮುಸುಕು
ಜಲಧೂಮ
ಜಲಪಾತ ಗೀತೆ
ಸ್ಮಶಾನ ಪ್ರವಾಸ
ಕಂದರಾಗ್ರೇಸರ
ಮೃತಾವಾಸ
ಕನ್ನಡದ ವಿವಿಧ
ಲೇಖಕರು ಹಾಗು ವಿವಿಧ ಭಾಷೆಯ ಲೋಕನುಡಿಗಳನ್ನೂ ಸಹ ಸಹ ಜಯಶ್ರೀ ದೇಶಪಾಂಡೆಯವರು ಈ ಕೃತಿಯಲ್ಲಿ ಸಮಯೋಚಿತವಾಗಿ
ಉದ್ಧರಿಸಿದ್ದಾರೆ. ಬಂಗಾರಕ್ಕೆ ಕುಂದಣವನ್ನಿಟ್ಟಂತೆ ಈ ವಿಶೇಷಣಗಳು ಓದುಗನನ್ನು ರಂಜಿಸುತ್ತವೆ.
ಪ್ರವಾಸಕಥನದಲ್ಲಿ ಇಂತಹ ಉದ್ಧರಣೆಗಳು ಅನಿರೀಕ್ಷಿತವಾಗಿ, ಮೋದಕರವಾಗಿವೆ. ಅಂತಹ ಕೆಲವು
ಉದ್ಧರಣೆಗಳು ಹೀಗಿವೆ:
(೧) ‘ಈ
ಬಾನು.... ಈ ಹೂವು... ಈ ಹಕ್ಕಿ.... ಈ ಚುಕ್ಕಿ ತೇಲಿ ಸಾಗುವ ಈ ಮುಗಿಲು’... (ಎನ್. ಎಸ್.
ಲಕ್ಷ್ಮೀನಾರಾಯಣ ಭಟ್ಟರ ಕವನ).
(೨) ಮರಣದಿಂ
ಮುಂದೇನು? ಪ್ರೇತವೋ? ಭೂತವೋ? ಪರಲೋಕವೋ? ಪುನರ್ಜನ್ಮವೋ? ಅದೇನೋ!
ತಿರುಗಿ
ಬಂದವರಿಲ್ಲ, ವರದಿ ತಂದವರಿಲ್ಲ! ಧರೆಯ ಬಾಳ್ಗದರಿನೇಂ? ಮಂಕುತಿಮ್ಮ!
(೩) ಆಕಾಶಕ್ಕೆ ನೀಲಿ ಬಳಿದವನಾರೋ
(೪) ಜಿಸ್ಕೀ ಲಾಠೀ ಉಸ್ಕೀ ಭೈಂಸ್
(೫) ಖುದಾ ಜಬ್ ದೇತಾ ಹೈ ತೊ ಛಪ್ಪಡ್ ಫಾಡ್ ಕೇ ದೇತಾ ಹೈ
(೬) ಅಗರ್ಫಿರ್ದೌಸ್ ಬರೂ-ಎ-ಜಮೀನ್
ಅಸ್ತ, ಹಮೀನಸ್ತ,
ಹಮೀನಸ್ತ,ಹಮೀನಸ್ತ.
ಯಾವುದೇ ಲೇಖಕನ
ಒಂದು ಕೃತಿ ಓದುಗನಿಗೆ ಮೆಚ್ಚುಗೆಯಾಗಲು ಎರಡು ಕಾರಣಗಳಿವೆ: (೧) ಕೃತಿಯ ಅಂತರಂಗ (೨) ಕೃತಿಯ
ಬಹಿರಂಗ.
ಜಯಶ್ರೀ
ದೇಶಪಾಂಡೆಯವರ ‘ಹಲವು ನಾಡು ಹೆಜ್ಜೆ ಹಾಡು’
ಕೃತಿಯು ಅವರು ಸಂದರ್ಶಿಸಿದ ದೇಶಗಳ ನಿಸರ್ಗ, ಸಂಸ್ಕೃತಿ, ಸಾಹಿತ್ಯ ಹಾಗು ಜನಜೀವನಗಳ
ಪರಿಚಯವನ್ನು ಮಾಡಿಕೊಟ್ಟಿದೆ. ಇಲ್ಲಿ ಬಳಸಲಾದ ಸರಸ ಶೈಲಿಯು ಈ ಕೃತಿಯನ್ನು ಸುರಸ ಕೃತಿಯನ್ನಾಗಿ
ರೂಪಿಸಿದೆ. (https://sallaap.blogspot.com/2022/07/blog-post.html)
ಭಾಷೆಯನ್ನು ವಿವಿಧ ರೂಪಗಳಲ್ಲಿ ಸಲೀಲವಾಗಿ ಬಳಸುವ ಜಯಶ್ರೀ ದೇಶಪಾಂಡೆಯವರ ಈ ಸಾಮರ್ಥ್ಯ ಓದುಗನಿಗೆ ಸಾಹಿತ್ಯದ ಸುಖವನ್ನು ಕೊಡುವುದರಲ್ಲಿ ಆಶ್ಚರ್ಯವೇನಿದೆ?