Wednesday, December 28, 2022

‘ಯಂಕ್ ಪೋಸ್ಟ್’.....................ಶ್ರೀದೇವಿ ಕಳಸದ

 ಕನ್ನಡದ ಆಧುನಿಕ ಕಥೆಗಳಲ್ಲಿ ಇಲ್ಲಿಯವರೆಗೆ ನಾವು ನಾಲ್ಕು ತಲೆಮಾರುಗಳನ್ನು ಗುರುತಿಸಬಹುದು. ಮೊದಲನೆಯ ತಲೆಮಾರನ್ನು ನಾನು ಮಾಸ್ತಿಯವರ ತಲೆಮಾರು ಎಂದು ಕರೆಯುತ್ತೇನೆ. ಎರಡನೆಯದು ಲಂಕೇಶರ ತಲೆಮಾರು; ಮೂರನೆಯದು ದೇವನೂರು ಮಹಾದೇವರ ತಲೆಮಾರು; ನಾಲ್ಕನೆಯದು ಅಮರೇಶ ನುಗಡೋಣಿಯವರ ತಲೆಮಾರು. ಇದೀಗ ಐದನೆಯ ತಲೆಮಾರೊಂದು ಪ್ರವೇಶಿಸಿದೆ. ಶ್ರೀದೇವಿ ಕಳಸದ ಅವರನ್ನು ನಾನು ಈ ತಲೆಮಾರಿನ ಪ್ರಾತಿನಿಧಿಕ ಕಥೆಗಾರ್ತಿ ಎಂದು ಗುರುತಿಸುತ್ತೇನೆ. 

ಈ ಮೊದಲಿನ ನಾಲ್ಕು ತಲೆಮಾರುಗಳ ಲೇಖಕರು ಅನೇಕ ಶ್ರೇಷ್ಠ ಕಥೆಗಳನ್ನು ಬರೆದಿದ್ದಾರೆ.  ಆದರೆ ಈ ಎಲ್ಲ  ಕಥೆಗಳು ಸರಳರೇಖೆಯ ಕಥೆಗಳು ಮಾತ್ರ ಎನ್ನುವುದನ್ನು ಗಮನಿಸಬೇಕು. ಈ ಕಥೆಗಳು ಎಂತಹ ರಹಸ್ಯಮಯ ಕಥೆಗಳೇ ಆಗಿರಲಿ ಅಥವಾ ಕೊನೆಯಲ್ಲಿ ತಿರುವು ಪಡೆದ ಕಥೆಗಳೇ ಆಗಿರಲಿ, ಅವುಗಳ ನಿರೂಪಣೆಯು ಮಾತ್ರ ಹಂತಾನುಹಂತವಾಗಿ ಸಾಗುತ್ತದೆ, ಹೆದ್ದಾರಿಯಲ್ಲಿ ಸುಲಭವಾಗಿ ಸಾಗುವ ರಥದ ಹಾಗೆ. ಆದರೆ ಶ್ರೀದೇವಿಯವರ ಕಥೆಗಳ ವಿಧಾನವೇ ಬೇರೆ. ಅವರ ಶೈಲಿಯನ್ನು ನಾನು ‘ಚಕ್ರಬಂಧ ಶೈಲಿ’ ಎನ್ನಲು ಇಷ್ಟಪಡುತ್ತೇನೆ. ಶ್ರೀದೇವಿಯವರ ಕಥೆಗಳನ್ನು ಓದುತ್ತಾ ಹೋದಂತೆಲ್ಲ, ಕಥೆಯಲ್ಲಿ ಅಡಕವಾಗಿರುವ ಹೊಸ ಹೊಸ ಒಳನೋಟಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ; ಇದು ಸರಳರೇಖೆಯಲ್ಲ, quizzical type ಬರವಣಿಗೆ! ಇಂತಹ ಬರವಣಿಗೆಗೆ ಪ್ರೇರಕವಾಗಿರುವ ವ್ಯಕ್ತಿತ್ವ ಎಂತಹದು ಎನ್ನುವ ಕುತೂಹಲ ಯಾರಲ್ಲಿಯಾದರೂ ಮೂಡುವುದು ಸಹಜವೇ. ನನಗೆ ತಿಳಿದ ಅಲ್ಪಸ್ವಲ್ಪ ಮಾಹಿತಿಯಂತೆ, ನಾನು ಊಹಿಸಿಕೊಂಡದ್ದು ಹೀಗೆ:

ಶ್ರೀದೇವಿಯವರು ಚಿಕ್ಕಂದಿನಿಂದಲೇ ಸಂಗೀತಕ್ಕೆ ಮರುಳಾದವರು. ಸಂಗೀತಕಛೇರಿಯ ಆಸ್ವಾದನೆಗಾಗಿ ತಮ್ಮ ತಂದೆಯವರ (ಡಾ^ ದೇವದಾಸರ) ಜೊತೆಗೆ ಕೋಲಕತ್ತೆಯವರೆಗೆ ಹೋದವರು. ‘ಆಲಾಪಿನಿ’ ಎನ್ನುವ ಹೆಸರುಳ್ಳ ಇವರ ಬ್ಲಾ^ಗ್ ಇವರ ಸಂಗೀತಪ್ರೇಮವನ್ನು ಸ್ಪಷ್ಟಪಡಿಸುತ್ತದೆ. ಇದು ಅಂತರ್ಮುಖೀ ವ್ಯಕ್ತಿತ್ವವನ್ನು ರೂಪಿಸಿದರೆ, ಇವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಉತ್ಸಾಹ ಚಿಮ್ಮುತ್ತಿರುವ Extravert ಮುಖ ಎಂದು ಕರೆಯಬಹುದು. ಜೊತೆಗೇ ತೀಕ್ಷ್ಣ ಬುದ್ಧಿಯ, ಸಂವೇದನಾಶೀಲವಾದ ಹಾಗು ಸಾಮಾಜಿಕಸ್ಪಂದನೆಯ ಮನಸ್ಸು ಇವರಿಗಿದೆ. ಆದುದರಿಂದ Mass communication and journalismಗಳಲ್ಲಿ M.Sc. ಮಾಡಿದ ಇವರಿಗೆ ಇಂತಹ ಕಥಾರಚನೆ ಸಹಜವೇ ಎನ್ನಬಹುದು. ಇವರ ಕಥಾನಿರೂಪಣೆ ಬಹಳ ಸೂಕ್ಷ್ಮವಾದದ್ದು. ಈ ಕಥೆಗಳಲ್ಲಿ ಬರುವ ಪಾತ್ರಗಳ ಮನಸ್ಸು ಎಷ್ಟು ಸೂಕ್ಷ್ಮವೋ, ಕಥೆಗಳ ನಿರೂಪಣೆಯೂ ಸಹ ಅಷ್ಟೇ ಸೂಕ್ಷ್ಮವಾಗಿದೆ. ಇದಕ್ಕೆ ಉದಾಹರಣೆ ಎಂದರೆ ಕಥಾಸಂಕಲನದ ಮೊದಲ ಕಥೆಯಾದ‘ಉಣಕಲ್ ತಂತ್ರ ಸೀಳಿದ ರಾಕೆಟ್’, ನಂತರ ‘ಶಿರಗುಪ್ಪಿ’, ‘ಬ್ರಾ ಕಳಚಿಟ್ಟ ಒಂದು ದಿನ’, ‘ಶಾಕಾಂಬರಿ ಮಹಾತ್ಮೆ’.... ಅಯ್ಯೋ, ಇದೇನು? ನಾನು ಈ ಕಥಾನಕದಲ್ಲಿರುವ ಹತ್ತೂ ಕಥೆಗಳನ್ನು ಉದಾಹರಿಸುತ್ತಿದ್ದೇನೆಯೆ? ಇದರಲ್ಲಿ ತಪ್ಪೇನೂ ಇಲ್ಲ ಬಿಡಿ! ಇಲ್ಲಿರುವ ಹತ್ತೂ ಕಥೆಗಳು ಹೀಗೇ ಇವೆ!

ಇನ್ನು ಕಥೆಗಳ ಭಾಷೆಯ ಬಗೆಗೆ ಒಂದು ಮಾತನ್ನು ಹೇಳಬೇಕು. ಶ್ರೀದೇವಿಯವರು ಪಾತ್ರಗಳ ಮಾತುಕತೆಗಳಲ್ಲಿ ಆಡುಭಾಷೆಯನ್ನು ಅವಶ್ಯವಿದ್ದಲ್ಲಿ ಬಳಸಿಯೇ ಇದ್ದಾರೆ. ಜೊತೆಗೆ ನಿರೂಪಣೆಯಲ್ಲಿಯೂ ಸಹ ಆಡುಮಾತಿನ ವಿಪುಲತೆಯನ್ನು ಕಾಣಬಹುದು. ಆದರೆ ಈ ಭಾಷೆ, ಈ ಶೈಲಿ ಇವೆಲ್ಲ ಕಥೆಯ ಹೊರಗಿನ ಉಡುಗೆ-ತೊಡುಗೆಗಳು.  ಕಥೆಯ ಅಂತರಾಳವೇ ಮುಖ್ಯವಾದದ್ದು. ಕಥೆಗಳಲ್ಲಿ ಬರುವ ಪಾತ್ರಗಳ ಮನಸ್ಸನ್ನು ಹುಡುಕುವ ಪ್ರಯತ್ನವೇ ಈ ಕಥೆಗಳ ಪ್ರಮುಖ ಅಂಶವಾಗಿದೆ. ಈ ಎಲ್ಲ ಕಥೆಗಳಲ್ಲಿಯ ಪಾತ್ರಗಳೆಲ್ಲವೂ ಮಾನಸಿಕ ತೊಳಲಾಟದಿಂದ ಬಳಲುತ್ತಿರುವ ಪಾತ್ರಗಳೇ.  ಬಹುಶಃ ಶ್ರೀದೇವಿಯವರನ್ನೂ ಸಹ ತಮ್ಮ ಕಥೆಗಳ ಪಾತ್ರಗಳ ಮನಃಸ್ಥಿತಿಯು ಸಾಕಷ್ಟು ಕಾಡಿರಬಹುದು. ಕಥೆಗಳನ್ನು ಬರೆದು ಮುಗಿಸಿದ ನಂತರ, ಶ್ರೀದೇವಿಯವರ ಮನಸ್ಸು ಹಗುರಾಗಿರಬಹುದು, ಮನೋರೋಗಿಯನ್ನು ಗುಣಪಡಿಸಿದ ಮನೋವೈದ್ಯರ ಹಾಗೆ!  

ಇನ್ನೊಂದು ಮಾತನ್ನು ಇಲ್ಲಿ ಹೇಳಿದರೆ ಅಪ್ರಸ್ತುತವಾಗಲಾರದು. ಶ್ರೀದೇವಿಯವರು ಕಥೆಗಾರ್ತಿಯಷ್ಟೇ ಅಲ್ಲ, ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದಾರೆ. ‘tv9’ರ ಸಾಹಿತ್ಯವಿಭಾಗದಲ್ಲಿ ಇವರು ನಿಯತವಾಗಿ ಸಂಪಾದಿಸಿ, ಪ್ರಕಟಿಸುವ ಕಥೆಗಳು, ಭಾಷಾಂತರಗಳು ಹಾಗು ಇತರ ಲೇಖನಗಳು ಮೌಲ್ಯಭರಿತವಾಗಿವೆ. ಇನ್ನು ಓರ್ವ ವ್ಯಕ್ತಿಯ ಸಂದರ್ಶನವನ್ನು ಹೇಗೆ ಮಾಡಬೇಕು ಎಂದು ತಿಳಿಯಬೇಕಾದರೆ ಇವರು ಮಾಡಿದ ರಾಜೀವ ತಾರಾನಾಥರ ಹಾಗು ಯು.ಆರ್. ಅನಂತಮುರ್ತಿಯವರ ಸಂದರ್ಶನಗಳನ್ನು ಓದಬೇಕು.

ಶ್ರೀದೇವಿಯವರ ಮೊಟ್ಟಮೊದಲ ಕಥಾಸಂಕಲನ ‘ಯಂಕ್ ಪೋಸ್ಟ್’ ಹತ್ತು ಕಥೆಗಳುಳ್ಳ ಕಥಾಸಂಕಲನ. ಇದನ್ನು ಧಾರವಾಡದಲ್ಲಿರುವ ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ‘ಮನೋಹರ ಗ್ರಂಥಮಾಲಾ’ ಪ್ರಕಟಿಸಿದೆ. ಈ ಎಲ್ಲ ಕಥೆಗಳು ಈಗಾಗಲೇ ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾದಂತಹ ಕಥೆಗಳೇ. ಶ್ರೀದೇವಿಯವರಿಂದ ಇಂತಹ ಉತ್ತಮ ಕಥೆಗಳು ಇನ್ನಷ್ಟು ಬರಲಿ ಹಾಗು ಓದುಗರನ್ನು ತಣಿಸಲಿ ಎಂದು ಆಶಿಸುತ್ತ, ಈ ಯುವ ಲೇಖಕಿಗೆ ಶುಭ ಹಾರೈಸುತ್ತೇನೆ!


ಹೆಚ್ಚಿನ ಮಾಹಿತಿಗಾಗಿ ಮನೋಹರ ಗ್ರಂಥಮಾಲಾ, ಕೆ.ಸಿ.ಸಿ.ಬ್ಯಾಂಕ ಹತ್ತಿರ, ಧಾರವಾಡ ಇವರನ್ನು ಸಂಪರ್ಕಿಸಬಹುದು.