ನ್ಯಾಯಿಕ ಅಸಂವೇದನೆ.
ಬಂಧುಗಳೆ, ಅಪ್ರಾಪ್ತ ಹೆಂಡತಿಯ ಜೊತೆಗೆ ದೈಹಿಕ ಸಂಬಂಧ ಅತ್ಯಾಚಾರವಲ್ಲ! ಇದು ದೆಹಲಿ
ಉಚ್ಚ ನ್ಯಾಯಾಲಯದ ತೀರ್ಪು. ಯಾಕೆ? ಯಾಕೆಂದರೆ, ‘ಆ ಅಪ್ರಾಪ್ತ ಹುಡುಗಿ’ ಅತ್ಯಾಚಾರಿಯ ಹೆಂಡತಿ
ಅನ್ನುವ ಸಂಗತಿಯು ನ್ಯಾಯನಿರ್ಣಯದಲ್ಲಿಯ ಸವಲತ್ತಿಗೆ ಕಾರಣವಾಗಿದೆ.
ಬಂಧುಗಳೆ, ಹುಡುಗಿ ಹೆಂಡತಿಯಾದರೆ, ಅವಳ ಗಂಡನು ಮಾಡುವ ಹಿಂಸೆಗೆ ‘ಬಾರಾ ಖೂನ್ ಮಾಫ್’ ಎನ್ನಬೇಕೆ?
ಇದು ಹೊಡೆತ, ಬಡಿತ, ಅವಮಾನ, ಗುದಮೈಥುನ,
ಮುಖಮೈಥುನ ಮೊದಲಾದ ಅನೈಸರ್ಗಿಕ ಕಾಮಕ್ರೀಡೆಗಳಿಗೂ ಅನ್ವಯಿಸುವುದೆ? ಅಪ್ರಾಪ್ತ ವಯಸ್ಸಿನ ಸುಕೋಮಲ
ಹುಡುಗಿ, ಧಡಿಯ ಗಂಡನ ಎಲ್ಲ ತರಹದ ಬಲಾತ್ಕಾರಗಳನ್ನು ಸಹಿಸಿಕೊಳ್ಳಬೇಕೆ? ಇಲ್ಲಿ ಹೇಳಲಾದ
ಪ್ರಕರಣದಲ್ಲಿಯ ಅಪ್ರಾಪ್ತೆಯ ವಯಸ್ಸು ನನಗೆ ತಿಳಿದಿಲ್ಲ. ಆದರೆ ಬಂಧುಗಳೆ, ಹಳ್ಳಿಗಳಲ್ಲಿ
ಇನ್ನೂವರೆಗೂ ಶಿಶುವಿವಾಹಗಳು, ಬಾಲ್ಯವಿವಾಹಗಳು ನಡೆಯುತ್ತಿವೆ ಎನ್ನುವುದನ್ನು ನೀವು ಅರಿತೇ
ಇದ್ದೀರಿ. ಐದು ವರ್ಷದ ಬಾಲೆಯನ್ನು ಹದಿನೈದು ವರ್ಷದ ಹುಡುಗನಿಗೆ ಕೊಟ್ಟು ಮದುವೆ ಮಾಡುವುದು
ಇಲ್ಲಿ ಸಾಮಾನ್ಯ ರೂಢಿಯಾಗಿದೆ. ಆತ ಅವಳನ್ನು ಬಲಾತ್ಕರಿಸುವುದು ಸಹಜ ಹಾಗೂ ಸಹಜಮಾನ್ಯ
ಸಂಗತಿಯಾಗಿದೆ!
ನೋಡಿದಿರಾ,
ಬಂಧುಗಳೆ? ಈ ಆದೇಶವನ್ನು ನೀಡಿದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಪೋಕ್ಸೋ ಕಾಯದೆಯ
ಬಗೆಗೆ ಏನಾದರೂ ತಿಳಿದಿದೆಯೆ? ಪೋಕ್ಸೋ ಕಾಯದೆಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿ ಎಂದಷ್ಟೇ ಹೇಳಿದ್ದಾರೆ. ಅವಳಿಗೆ ಹಾಗು ಆರೋಪಿಗೆ ಇರಬಹುದಾದ ಸಂಬಂಧವನ್ನು
ಪರಿಗಣಿಸಿಲ್ಲ. ಆದರೆ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಇದು ಪ್ರಮುಖ ಮುದ್ದೆಯಾಗಿದೆ!
ಅಪ್ರಾಪ್ತ
ವಯಸ್ಸಿನ ಹುಡುಗಿಯ ಗಂಡನು ಅವಳನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದಾಗ, ಆ ಅಪ್ರಾಪ್ತೆಗೆ
ನಿರಾಕರಿಸಲು ಧೈರ್ಯವೇ ಆಗುವುದಿಲ್ಲ. ಇದಕ್ಕೆ ಕೆಲವು ಕಾರಣಗಳು ಹೀಗಿವೆ:
(೧) ‘ಒಲ್ಲೆ’
ಎನ್ನಲು ಇರುವ ವೈಯಕ್ತಿಕ ಅಂಜಿಕೆ,
(೨) ತನ್ನ ಅತ್ತೆಮನೆಯವರು
ಏನೆನ್ನುವರೋ ಎನ್ನುವ ಹೆದರಿಕೆ,
(೩) ಗಂಡನ
ಮಾತಿಗೆ ಮಣಿಯಲೇ ಬೇಕು ಎನ್ನುವ ಸಾಂಪ್ರದಾಯಿಕ ಮೂಢಭಾವನೆ.
ಇವೆಲ್ಲವುಗಳ
ಒಟ್ಟಾರೆ ಒತ್ತಾಸೆಯಿಂದ ಅಪ್ರಾಪ್ತೆಯು ಗಂಡನ ಬಲಾತ್ಕಾರಕ್ಕೆ ಬಾಯಿ ಮುಚ್ಚಿಕೊಂಡು ತನ್ನ
ದೇಹವನ್ನು ಒಪ್ಪಿಸುತ್ತಾಳೆ. ಒಂದು ವೇಳೆ, ಅವಳ ಸ್ವೇಚ್ಛಾಸಮ್ಮತಿ ಇದ್ದರೂ ಸಹ, ಪೋಕ್ಸೋ ಕಾಯದೆಯ ಪ್ರಕಾರ ಅದು ಬಲಾತ್ಕಾರವಾಗುತ್ತದೆ ಹಾಗು ಆ ಗಂಡಸು
ಶಿಕ್ಷಾರ್ಹ ಅಪರಾಧಿಯಾಗುತ್ತಾನೆ ಎನ್ನುವುದು ನಮ್ಮ ನ್ಯಾಯಾಧೀಶರ ನ್ಯಾಯಿಕ ಅರಿವಿಗೆ ಬರಲಿಲ್ಲವೆ?
ಇದು ನ್ಯಾಯಿಕ
ಅಸಂವೇದನೆಯಲ್ಲವೆ?
ಇಂತಹ ಇನ್ನೂ
ಹಲವು ಪ್ರಕರಣಗಳಿವೆ. ಮದ್ರಾಸ ಉಚ್ಚ ನ್ಯಾಯಾಲಯವು ಅತ್ಯಾಚಾರಕ್ಕೊಳಗಾದ ಯುವತಿಗೆ ಹೇಳಿದ
‘ಉಪದೇಶ’ವನ್ನಿಷ್ಟು ನೋಡಿರಿ. (ಅಹಾ, ಇದಕ್ಕೆ judicial advice ಎನ್ನಬೇಕೊ
ಅಥವಾ senior old man’s gentlemanly advice ಎನ್ನಬೇಕೊ ನನಗೆ ಗೊತ್ತಾಗುತ್ತಿಲ್ಲ!)
ಈ ಯುವತಿಯ ಮೇಲೆ
ಅತ್ಯಾಚಾರ ಮಾಡಿದ ಯುವಕನು ‘ತಾನು ಅವಳನ್ನು ಮದುವೆಯಾಗಲು ಸಿದ್ಧನಿದ್ದೇನೆ; ಬಲಾತ್ಕಾರದ
ಆರೋಪವನ್ನು ಕೈಬಿಡಬೇಕು’ ಎನ್ನುವ ಮನವಿಯನ್ನು ಮಾಡಿಕೊಂಡಿರಬೇಕು. ಆಗ ಘನತೆವೆತ್ತ ನ್ಯಾಯಾಧೀಶರು
ಅವಳಿಗೆ, “ಏನಮ್ಮಾ. ಆತನು ನಿನಗೆ ಹೊಸ ಬಾಳನ್ನು ಕೊಡಲು ಸಿದ್ಧನಿದ್ದಾನೆ; ಈ ಪ್ರಕರಣವನ್ನು
ಬಿಟ್ಟುಬಿಡೋಣ” ಎಂದು ಹೇಳಿರಬಹುದು!
ನೋಡಿದಿರಾ
ಬಂಧುಗಳೆ. ಇದೀಗ ಆ ಅತ್ಯಾಚಾರಿ ಯುವಕನಿಗೆ ಈ ಹುಡುಗಿಯ ಮೇಲೆ ದಿನವೂ ಅತ್ಯಾಚಾರ ಮಾಡಲು ಇದೀಗ judicial license ಸಿಕ್ಕಿತು. ತನ್ನನ್ನು ಸಾರ್ವಜನಿಕವಾಗಿ ನ್ಯಾಯಾಲಯಕ್ಕೆ ಎಳೆದ
ಈ ಅಪ್ರಾಪ್ತೆಗೆ ಬುದ್ಧಿ ಕಲಿಸೋಣವೆಂದು, ಆ ಅತ್ಯಾಚಾರಿ ಯುವಕನು ಅವಳಿಗೆ ದಿನವೂ ಎಂಥೆಂಥಾ ‘ಹೊಸ
ಬಾಳನ್ನು’ ಕೊಡುತ್ತಿರಬಹುದು ಎನ್ನುವುದು ಸಾಮಾನ್ಯನ ಊಹೆಗೆ ನಿಲುಕದ ವಿಷಯ!
ನಮ್ಮ
ಉದಾರಬುದ್ಧಿಯ ನ್ಯಾಯಾಧೀಶರಿಗೆ ಇದು ಆತ್ಮಸಂತೃಪ್ತಿಯನ್ನು ಕೊಟ್ಟಿರಬಹುದು!
ಇನ್ನು ನಾನು
ಮಾಡಿದ ಟೀಕೆಗಾಗಿ ನನಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದರೆ, ಅದೂ ಸಹ ನ್ಯಾಯಿಕ ಅಸಂವೇದನೆಯೇ
ಆಗಲಿಕ್ಕಿಲ್ಲವೆ!
God, do not
forgive them; they knew what they were passing out as justice!