ಲಕ್ಷದ್ವೀಪವು ಇದೀಗ ತುಂಬಾ ಸುದ್ದಿಯಲ್ಲಿದೆ. ಜೊತೆಗೇ ‘ಲಕ್ಷದ್ವೀಪ’ ಪದದ ವ್ಯುತ್ಪತ್ತಿಯ ಬಗೆಗೂ ಖಚಿತ ಅಭಿಪ್ರಾಯವು ಹರಡುತ್ತಿದೆ. ಲಕ್ಷ (ಅಂದರೆ ಅನೇಕ) ದ್ವೀಪಗಳ ಸಮೂಹವೇ ಲಕ್ಷದ್ವೀಪ ಎನ್ನುವುದು, ಈ ಅಭಿಪ್ರಾಯದ ತಿರುಳು. ಈ ಅಭಿಪ್ರಾಯವನ್ನು ಭಾಷಾಶಾಸ್ತ್ರದ ಮೂಲಕ ಸ್ವಲ್ಪ ವಿವೇಚಿಸೋಣ.
ಬಂಗಾಲದ ಖ್ಯಾತ ಭಾಷಾವಿಜ್ಞಾನಿಗಳಾದ
ಸುನೀತಿಕುಮಾರ ಚಟರ್ಜಿಯವರು, ‘ಲಕ್’ ಈ ಪದವು ದ್ರಾವಿಡ ಪದವಾಗಿದ್ದು ಇದರ ಅರ್ಥ ನಡುಗಡ್ಡೆ ಎಂದು
ಹೇಳಿದ್ದರು. ಆದುದರಿಂದ, ಲಕ್ ಪದದ ರೂಪಾಂತರವಾದ ‘ಲಂಕಾ’ ಪದವು ‘ನಡುಗಡ್ಡೆ’ ಎಂದೇ ಆಗುತ್ತದೆ ಎನ್ನುವುದು
ಅವರ ಅಭಿಪ್ರಾಯವಾಗಿತ್ತು. ( ದ್ರಾವಿಡ ಎನ್ನುವುದು ಚಟರ್ಜಿಯವರು ಬಳಸಿದ ಪದ. ಅವರಿಗೆ ಕನ್ನಡದ
ಬಗೆಗೆ ವಿಶೇಷವಾಗಿ ಗೊತ್ತಿರಲಿಕ್ಕಿಲ್ಲ. ನನ್ನ ಅಭಿಪ್ರಾಯದ ಮೇರೆಗೆ, ‘ಲಕ್’ ಎನ್ನುವುದು ಕನ್ನಡ
ಪದ.)
ಲಕ್ಷದ್ವೀಪವು
‘ಲಖ್-ದೀವ್’ ಎನ್ನುವ ಕನ್ನಡ (ಅರ್ಥಾತ್ ದ್ರಾವಿಡ) ಪದದ ಸಂಸ್ಕೃತೀಕರಣ. ಇದರಲ್ಲಿಯ ಲಖ್
ಎನ್ನುವುದು ಕನ್ನಡ ಪದವಾದರೆ, ‘ದೀವ್’ ಎನ್ನುವುದು ‘ದ್ವೀಪ’ ಎನ್ನುವ ಸಂಸ್ಕೃತ ಪದದ ಪ್ರಾಕೃತ
ರೂಪ. ಅಂದರೆ, ಲಕ್ ಮತ್ತು ದೀವ್ ಎನ್ನುವ ಎರಡು ವಿಭಿನ್ನ ಭಾಷೆಯ ಪದಗಳನ್ನು ಜೋಡಿಸಿ,
‘ಲಖ್-ದೀವ್’ ಎನ್ನುವ ಜೋಡು ಪದದ ನಿರ್ಮಾಣವಾಗಿದೆ. ಇಂತಹ ಜೋಡು ಪದಗಳು ನಮ್ಮಲ್ಲಿ
ಸರ್ವೇಸಾಮಾನ್ಯವಾಗಿವೆ ಹಾಗು ಹೇರಳವಾಗಿವೆ. ಉದಾಹರಣೆಗಳು ಹೀಗಿವೆ: ‘ಗೇಟ್ ಬಾಗಿಲು, ಕ್ಯಾಚ್
ಹಿಡಿ, ಆಕಳ ಗೋಮೂತ್ರ ಇತ್ಯಾದಿ.’ ಒಂದು ಕಾಲದಲ್ಲಿ ವಿಭಿನ್ನ ಭಾಷೆಗಳ ಸಮುದಾಯಗಳು ಒತ್ತಟ್ಟಿಗೆ
ಬಂದಾಗ ಇಂತಹ ಜೋಡು ಪದಗಳ ನಿರ್ಮಾಣವು ಅನಿವಾರ್ಯವಾಗಿತ್ತು.
ಇನ್ನು ‘ಮಾಲ್ದೀವ್ಸ’ ಪದಕ್ಕೆ ಬರೊಣ. ನಮ್ಮ ಸಂಸ್ಕೃತ ಪಂಡಿತರು, ‘ಮಾಲ್ದೀವ್ಸ್’ ಇದು ‘ಮಾಲಾದ್ವೀಪ’ ಎನ್ನುವ ಸಂಸ್ಕೃತ ಪದದ ಅಪಭ್ರಂಶ ಎನ್ನುವ ನಿರ್ಣಯಕ್ಕೆ ತಟ್ಟನೆ ಜಿಗಿದು ಬಿಡುತ್ತಾರೆ! ಒಂದು ಕಾಲದಲ್ಲಿ ‘ಮಲ್ಲ’ ಎನ್ನುವ ಸಮುದಾಯವು ಭಾರತದ ತುಂಬೆಲ್ಲ ಹರಡಿತ್ತು. ‘ಮಲ್ಲ’ರು ನೇಪಾಳದಲ್ಲಿ ಅರಸರಾಗಿ ಆಳಿದ್ದರು ಹಾಗು ಕುರುಕ್ಷೇತ್ರದ ಯುದ್ಧದಲ್ಲಿ ಭಾಗವಹಿಸಿದ್ದರು ಎನ್ನುವ ಆಖ್ಯಾಯಿಕೆಯನ್ನು ಮಹಾಭಾರತದಲ್ಲಿ ಓದಬಹುದು. ಹೆಸರಾಂತ ದರೋಡೆಖೋರಳಾದ ಫೂಲನ್ ದೇವಿಯು ಮಲ್ಲ ಸಮುದಾಯದವಳು. ಈ ಮಲ್ಲರು ನೀರಿನಲ್ಲಿ ಬೆಳೆಯುವ ನಾರಿನಿಂದ ‘ನಾರುಮಡಿ’ಯನ್ನು ತಯಾರಿಸುತ್ತಿದ್ದರು. ಬಹುಶಃ, ಶ್ರೀರಾಮಚಂದ್ರ, ಲಕ್ಷ್ಮಣ ಹಾಗು ಸೀತಾದೇವಿಯವರಿಗೆ, ವನವಾಸಗಮನ ಸಂದರ್ಭದಲ್ಲಿ ಮಲ್ಲರೇ ನಾರುಮಡಿಯನ್ನು ಕೊಟ್ಟಿರಬಹುದೇನೊ! ಕೇರಳ ರಾಜ್ಯದ ಒಂದು ಜಿಲ್ಲೆಗೆ ಮಲಪ್ಪೂರ ಎನ್ನುವ ಹೆಸರೇ ಇದೆಯಲ್ಲ! ಕರ್ನಾಟಕದಲ್ಲಿಯೇ ‘ಮಲ್ಲ’ ಪದದಿಂದ ಪ್ರಾರಂಭವಾಗುವ ೩೮೫ ಸ್ಥಳಗಳಿವೆ. ಮಹಾರಾಷ್ಟ್ರದಲ್ಲಿ ಮುಂಬಯಿಯ ಹತ್ತಿರ ಇರುವ ‘ಮಲಾಡ’ವು, ಕನ್ನಡದ ‘ಮಲ್ಲಹಾಡಿ’ಯೇ ಹೌದು!. ಅಷ್ಟೇ ಏಕೆ, ನನ್ನ ಅಜ್ಜಿಯು ನಾನು ಚಿಕ್ಕವನಿದ್ದಾಗ, ನನಗೆ ‘ಮಲಪೂರಿ’ ಎನ್ನುವ ಯಕ್ಷಿಣಿಯೊಬ್ಬಳ ಕಥೆಯನ್ನು ಹೇಳುತ್ತಿದ್ದಳು. ಈ ಮಲ್ಲರೇ, ‘ಮಾಲ್ದೀವ್ಸ್’ದ ಮೂಲನಿವಾಸಿಗಳು. ಇವರಿಂದಲೇ ‘ಮಲ್ಲದ್ವೀಪ’ವು ಬಂದಿದ್ದು, ಅದನ್ನು ಸಂಸ್ಕೃತ-ಉತ್ಸಾಹಿಗಳು ‘ಮಾಲಾದ್ವೀಪ’ ಎಂದು ಘೋಷಿಸಿದ್ದಾರೆ. ಆದುದರಿಂದ, ವಿವೇಚನಾಶೀಲರಾದ ನನ್ನ ಕನ್ನಡ ಬಾಂಧವರೇ, ಸಂಸ್ಕೃತದ ಈ ಬಲೆಯಲ್ಲಿ ಕಣ್ಣು ತೆರೆದುಕೊಂಡೇ ಬೀಳದಿರಿ! ಲಕ್ಷದ್ವೀಪವು ‘ಲಕ್-ದೀವ್’ ಹಾಗು ಮಾಲ್ದೀವ್ಸ್ ಇದು ಮಲ್ಲದ್ವೀಪ ಎನ್ನುವುದನ್ನು ಅರಿಯಿರಿ!