Thursday, July 24, 2008

ಹುಬ್ಬಳ್ಳಿಯಾಂವಾ....ದ.ರಾ.ಬೇಂದ್ರೆ


ಹುಬ್ಬಳ್ಳಿಯಾಂವಾಇದು ಬೇಂದ್ರೆಯವರ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ಬೇಂದ್ರೆಯವರು ಬರೆಯಬಯಸಿದ ಒಂದು ನಾಟಕದಲ್ಲಿ ಈ ಹಾಡು ಬರುತ್ತದೆ. ಪ್ರಣಯಭಂಗದಿಂದ ಹುಚ್ಚಳಂತಾದ ಸೂಳೆಯೊಬ್ಬಳು ಹಾಡುವ ಹಾಡಿದು.
ಹಾಡಿನ ಪೂರ್ತಿಪಾಠ ಇಲ್ಲಿದೆ :

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ||


ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ
ಇನ್ನೂ ಯಾಕ……….


ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಇನ್ನೂ ಯಾಕ……….


ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ
ಇನ್ನೂ ಯಾಕ……….


ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ……….


ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ
ಇನ್ನೂ ಯಾಕ……….


ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ
ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?
ಇನ್ನೂ ಯಾಕ ಬರಲಿಲ್ಲಾ ?

ಬೇಂದ್ರೆಯವರು ಈ ಗೀತೆಯನ್ನು ೧೯೩೫ರಲ್ಲಿ ರಚಿಸಿದರು.
ಆ ಕಾಲದ ಸಮಾಜವ್ಯವಸ್ಥೆ ಹಾಗು ಜನರ ಜೀವನ ಪದ್ಧತಿಗಳು ಈ ಗೀತೆಗೆ ಹಿನ್ನೆಲೆಯಾಗಿ ನಿಂತಿವೆ.
ವ್ಯಾಪಾರ ಕೇಂದ್ರವಾದ ಹುಬ್ಬಳ್ಳಿಯಲ್ಲಿಯ ಒಬ್ಬ ಸಿರಿವಂತ ರಸಿಕ ಹುಡುಗ ವಾರದಲ್ಲಿ ಮೂರು ಸಾರೆ ಧಾರವಾಡಕ್ಕೆ ವ್ಯಾಪಾರದ ನೆವ ಮಾಡಿಕೊಂಡು ಹೋಗುತ್ತಿರುತ್ತಾನೆ. ಅಲ್ಲಿ ಅವನ ಶೋಕಿಯ ಹೆಣ್ಣುಇದ್ದಾಳೆ. ಆದರೆ ಈ ಹುಡುಗ ಕೇವಲ ಚಟಕ್ಕಾಗಿ ಹೆಣ್ಣುಗಳನ್ನು ಹುಡುಕುವವನಲ್ಲ ; ಈತನದು ರಸಿಕ ಹೃದಯ. ಒಮ್ಮೆ ಇವನಿಗೂ ಅವಳಿಗೂ ಯಾವುದೋ ಕಾರಣಕ್ಕಾಗಿ ಮನಸ್ತಾಪವಾಗುತ್ತದೆ. ಆತ ಇವಳಿದ್ದಲ್ಲಿ ಮತ್ತೆ ಕಾಲು ಹಾಕುವದಿಲ್ಲ. ಅವಳು ಈತನ ವಿರಹದಲ್ಲಿ ಹುಚ್ಚಿಯಂತಾಗಿ ಹಾಡಿದ ಹಾಡಿದು.

ಬೇಂದ್ರೆಯವರು ಬರೆಯುವ ಎಲ್ಲ ಕವನಗಳಲ್ಲಿಯೂ ಒಂದು ಕ್ರಮಬದ್ಧತೆ ಇರುತ್ತದೆ. ಈ ಕವನದಲ್ಲಿಯೂ ಸಹ ಅಂತಹ ಕ್ರಮಬದ್ಧತೆಯನ್ನು ಕಾಣಬಹುದು.

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರಸರತಿ ಬಂದು ಹೋದಾಂವಾ
ಎಂದು ಹಪಹಪಿಸುವ ವಿರಹಿಣಿಯ ವರ್ಣನೆಯಿಂದ ಕವನ ಪ್ರಾರಂಭವಾಗುತ್ತದೆ.

ಈ ಭ್ರಮಿಷ್ಠ ವಿರಹಿಣಿಯ ಒಳಗಣ್ಣಿಗೆ ಮೊದಲು ಕಾಣುವದು ಅವನ ಶಾರೀರಕ ನೋಟ.
ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ

ಈ ಸಾಲುಗಳು ಆ ಸೆಟ್ಟರ ಹುಡುಗನ ಡೌಲನ್ನು , ಅವನ ರಸಿಕತೆಯ ಬಾಹ್ಯಲಕ್ಷಣಗಳನ್ನು ತೋರಿಸುವವು.
ಆದರೆ ಅವನ ರಸಿಕತೆ ಕೇವಲ ಬಾಹ್ಯಲಕ್ಷಣಗಳಿಗೆ ಸೀಮಿತವಾಗಿಲ್ಲ. ಅವನಲ್ಲಿ ರಸಿಕಹೃದಯವಿದೆ. ಈ ಹೆಣ್ಣು ಅವನ ಪಾಲಿಗೆ ಕೇವಲ ಸೂಳೆಯಲ್ಲ. ಅವಳೊಡನೆ ಆತ ಚೇಷ್ಟೆಯಿಂದ ಮಾತನಾಡುತ್ತಾನೆ ; ಹಾಡು ಕಟ್ಟುತ್ತಾನೆ.

ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ

ಇಂತಹ ರಸಿಕತೆಗೆ ಯಾವ ಹೆಣ್ಣು ಮರಳಾಗಲಿಕ್ಕಿಲ್ಲ? ಇಂತಹ‘ಉದಾರ ಗಿರಾಕಿ’ಯಿಂದ ಒಬ್ಬ ಸೂಳೆ ಹಣಕ್ಕಿಂತ ಹೆಚ್ಚಾದ   ‘ಗೆಣೆತನ’ವನ್ನು ಬಯಸುವುದು ಸಹಜ. ಇವನೋ ಭರವಸೆಗಳ ಸರದಾರ! ಕನಸುಗಳ ಸೌದಾಗರ್!

ಈ ಕವನದ ನಾಯಕಿಯು ಸಾದಾ ಸೂಳೆಯೇನಲ್ಲ ; ಇವಳು ಯಲ್ಲಮ್ಮನ ಜೋಗತಿ”. ಆದರೇನು? ಇವಳು ಯಾರ ಹೆಂಡತಿಯೂ ಆಗಲಾರಳು. ಇಂಥವಳಿಗೆ ಈ ರಸಿಕ ಕಟ್ಟಿ ಕೊಡುವ ಕನಸನ್ನು ಅವಳು ಎರಡನೆಯ ನುಡಿಯಲ್ಲಿ ಹಾಡಿಕೊಂಡಿದ್ದಾಳೆ :
ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ

ಜೋಗತಿಯರು ಎಲ್ಲಮ್ಮನ ಹೆಸರಿನಲ್ಲಿ ತಾಳಿಯನ್ನು ಕಟ್ಟಿಕೊಳ್ಳುತ್ತಾರೆ. ತಾಳಿಯ ಮಧ್ಯದಲ್ಲಿರುವ ಎರಡು ಬೇಳೆಗಳು ಕೇವಲ ಮದುವೆಯಾದ ಗರತಿಯ ಸೊತ್ತು. ಗರತಿಯಾಗುವ ಈ ಅಸಾಧ್ಯ ಕನಸನ್ನು(ಹಾಸ್ಯದಲ್ಲಿಯೇ ಆಗಲಿ)ಆತ ಅವಳಿಗೆ ಕಟ್ಟಿಕೊಡುತ್ತಾನೆ.

ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ

ಈ ಜೋಗತಿಯರ ಸಂಪತ್ತೆಂದರೆ ಯಲ್ಲಮ್ಮನ ಗುಡಿಯಿಂದ ತಂದ ಭಂಡಾರ. (ಅರಿಶಿಣ, ಕುಂಕುಮಗಳು). ಆ ಭಂಡಾರವನ್ನು ಬಂಗಾರದ ಹುಡಿಯಿಂದ ತುಂಬುತ್ತೇನೆನ್ನುವ ಔದಾರ್ಯವನ್ನು ಆತ ತೋರುತ್ತಾನೆ. ಈ ಮಾತು ಚೇಷ್ಟೆಯಲ್ಲಿ ಆಡಿದ ಮಾತೇ ಆಗಿರಬಹುದು. ಆದರೆ ಅವಳಲ್ಲಿರುವ ಅವನ ಖಾಯಿಶ್ ಬರಿ ಚೇಷ್ಟೆಯದಲ್ಲ. ಮುಂದಿನ ಎರಡು ಸಾಲುಗಳಲ್ಲಿ ಇದು ವ್ಯಕ್ತವಾಗುತ್ತದೆ :

ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ

ತನ್ನ ಮೊದಲ ಅಡ್ಡಹೆಜ್ಜೆಗಳನ್ನು ಈ ಸಿರಿವಂತ ತರುಣನು ಕಸುಬಿನವರ (=professional prostitutes) ಮನೆಗಳಲ್ಲಿ ಇರಿಸಿದ್ದಾನೆ ; ಅವರಾದ ಮೇಲೆ ಅದಕ್ಕೂ ಹೆಚ್ಚಿನ ಸ್ತರದ ಬಸವಿಯರ (=ದೇವರಿಗೆ ಬಿಟ್ಟವರು) ಜೊತೆಯಲ್ಲಿ ರಾತ್ರಿಗಳನ್ನು ಕಳೆದಿದ್ದಾನೆ. ಇದೀಗ ಬಸವಿಯರಿಗಿಂತ ಹೆಚ್ಚಿನ ಸ್ತರದಲ್ಲಿರುವ ಜೋಗತಿಯರ ಜೊತೆಗೆ ಇವನ ಪ್ರಣಯ ಪ್ರಾರಂಭವಾಗಿದೆ.

ಅಂತಹ ಜೋಗತಿಯರೆಲ್ಲರಲ್ಲಿ ಇವಳೇ ಶ್ರೇಷ್ಠಳು ಎಂದು ಆತ ಇವಳನ್ನು ಉಬ್ಬಿಸುತ್ತಾನೆ. ಈ ರಸಿಕನಿಗೆ ಹೆಣ್ಣನ್ನು ಹೊಗಳಿ ಮರಳು ಮಾಡುವ ಕಲೆ ಚೆನ್ನಾಗಿ ಸಿದ್ಧಿಸಿದ ಹಾಗೆ ಕಾಣುತ್ತದೆ.

ಇಷ್ಟೆಲ್ಲ ಹೊಗಳುವ ಗಂಡಸಿನ ಮೇಲೆ (--ಆತ ಬರೇ ಗಿರಾಕಿಯಾಗಿದ್ದರೂ ಸಹ--) ಯಾವ ಹೆಣ್ಣಿಗೆ ಒಲುಮೆ ಮೂಡಲಿಕ್ಕಿಲ್ಲ? ಅಂತಲೇ ಅವಳು ಈತನನ್ನು ಇನ್ನೂ ಇರು, ಯಾತಕ್ಕೆ ಇಷ್ಟು ಬೇಗನೇ ಹೊರಡುತ್ತೀಯಾ?” ಅಂತ ಜುಲುಮೆ ಮಾಡುತ್ತಾಳೆ. 
("ಆಜ ಜಾನೇಕಿ ಜಿದ್ ನಾ ಕರೋ, ಆಜ ಪೆಹಲೂ ಮೇ ಐಸೇ ಹಿ ಬೈಠೇ ರಹೋ"...ಫರೀದಾ ಖಾನ್ನುಮ್ ಅವರು ಹಾಡಿದ ಗೀತೆ).

ಆತ ಘಾಟಿ ಹುಡುಗ ! ಇವಳ ಬಲುಮೆಗೆ care ಮಾಡದೆ ಎದ್ದು ಬಿಡುತ್ತಾನೆ. (ಅಥವಾ ಹಾಗೆ ನಟಿಸುತ್ತಾನೆ). ಅವಳು ಖಿನ್ನಳಾಗಿ ಅವನತ ಮುಖಳಾದ ಕ್ಷಣವೇ ಈತ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಪ್ರಸನ್ನಗೊಳಿಸುತ್ತಾನೆ.

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ
(ಹೆಣ್ಣಿನ ಮನಸ್ಸನ್ನು --ಅವಳು ಸೂಳೆಯೇ ಆಗಿರಲಿ--ಈತ ನೋಯಿಸಲಾರ.)

ಮುಂದಿನ ಸಾಲುಗಳಲ್ಲಿ ನಾಯಕಿಯು ಆತನ ರಸಿಕ ಚೇಷ್ಟೆಗಳನ್ನು ನೆನಪಿಸಿಕೊಳ್ಳುತ್ತಾಳೆ :
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ”.

ಬೇಂದ್ರೆ ಇಲ್ಲಿ ತಮ್ಮ ಅನ್ಯಾದೃಶ ಚಮತ್ಕಾರೋಕ್ತಿಯನ್ನು ತೋರಿಸಿದ್ದಾರೆ.
ತನ್ನ ಬಗಲಬಂಡಿಯ ಕಿಸೆಯಲ್ಲಿ ಕೈಹಾಕಿ ಹಿಡಿಗಟ್ಟಲೆ ರೊಕ್ಕ ತಗದಂತೆ ನಟಿಸುವ ನಾಯಕ, ಈ ಅಮಾಯಕ ಹೆಣ್ಣು ಕೈಮುಂದೆ ಮಾಡಿದಾಗ ತಟ್ಟನೆ ಅವಳ ಕೈಯನ್ನು ಹಿಡಿದುಕೊಳ್ಳುತ್ತಾನೆ.
ಬರೀ ಶಬ್ದಚಮತ್ಕಾರ ಮಾತ್ರವಲ್ಲ ; ಇದು ಕಲ್ಪನಾಚಮತ್ಕಾರದ ಪರಾಕಾಷ್ಠೆಯೂ ಹೌದು.
ಒಬ್ಬ ಸೂಳೆ ಮತ್ತು ಅವಳ ಗಿರಾಕಿಯ ನಡುವೆ ನಡೆಯುವ ಇಂತಹ ಪ್ರಣಯದೃಶ್ಯ ಯಾವ ಕವಿಯ ಕಲ್ಪನೆಗೆ ಹೊಳೆಯಲು ಸಾಧ್ಯ ?

ಏನೇ ಮಾಡಿದರೂ, ಏನೇ ಹೇಳಿದರೂ ಈಕೆ ಅವನಿಗೆಷ್ಟರವಳು? ಅವಳು ಕೇವಲ ವಿನೋದವಸ್ತು ಮಾತ್ರ ಎನ್ನುವದೆ ವಾಸ್ತವತೆ ಅಲ್ಲವೆ? ಈ ವಾಸ್ತವತೆಯನ್ನೆ ಆತ ಎಷ್ಟು ವಿನೋದದಿಂದ ಹೇಳುತ್ತಾನೆ !
ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ”.

ಹೀಗೆಂದರೆ ಅವಳಿಗೆ ಸಿಟ್ಟು ಬರದಿದ್ದೀತೆ?
ಮುನಿಸಿಕೊಂಡ ಇವಳನ್ನು ರಮಿಸುವದು ಅವನಿಗೊಂದು ಆಟ.
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ”.

ಆದರೆ ಇಷ್ಟಕ್ಕೆಲ್ಲ ಇವಳು ಒಲಿಯುವವಳಲ್ಲ. ಆಗ ಆತ ಅವಳಿಗೆ ಕೊಡುವದು , ಸೂಳೆಯೊಬ್ಬಳಿಗೆ ಸಿಗಬಹುದಾದ ಅತಿ ಹೆಚ್ಚಿನ ಬೆಲೆ :- ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ

ಹೆಣ್ಣಿನ ಬೆರಳಿಗೆ ಉಂಗುರ ತೊಡಸುವದು ಅವಳ ಮದುವೆ ನಿಶ್ಚಯವಾಗುವಾಗ. ಅವಳಿಗೆ ಮೂಗುತಿ ತೊಡಿಸುವದು ಅವಳ ಮದುವೆಯ ಸಮಯದಲ್ಲಿ.

ಆತ ಅವಳಿಗೆ ಇವನ್ನೇ ಕೊಡುತ್ತಾನೆ. ಅವಳಿಗೆ ಗೊತ್ತು : ಈ ಉಂಗುರ, ಈ ಮೂಗುತಿ ಅವಳ status ಅನ್ನು ಬದಲಾಯಿಸುವದಿಲ್ಲ. ಅವಳು ಸಾಯುವವರೆಗೂ ಸೂಳೆಯೇ.
ಆದರೂ ಸಹ, token ಅವನ ಬಗೆಗಿರುವ ಅವಳ ಒಲುಮೆಯನ್ನು ಗಾಢವಾಗಿಸುತ್ತದೆ.
ಅವನೀಗ ಅವಳ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ :ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ

ಬೇಂದ್ರೆಯವರು ಕನ್ನಡದ ಪಡೆನುಡಿಗಳನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಸಾಲು ಅತ್ಯುತ್ತಮ ನಿದರ್ಶನವಾಗಿದೆ.

ಅವನ ಬಗೆಗಿನ ಅವಳ ಒಲವಿನ ಭಾವನೆಗಳು ಈ ಮುಂದಿನ ನುಡಿಯಲ್ಲಿ ವ್ಯಕ್ತವಾಗುತ್ತವೆ :

ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ

ಈತ ಹುಟ್ಟುತ್ತಲೆ ನಗಿಕ್ಯಾದಗಿ ಮುಡಿಸಿಕೊಂಡು ಬಂದಂಥವನು, ಸತತ ನಗೆಮೊಗದವನು. ಹೆಣ್ಣುಗಳ ಪ್ರೀತಿ ಸಂಪಾದಿಸುವದು ಇವನಿಗೊಂದು ಆಟ.ಯಾಕೆಂದರೆ ಹೆಣ್ಣುಗಳೇ ಇವನ ಮೇಲೆ ಮುಗಿ ಬೀಳುತ್ತವೆ. ಇಂಥವನಿಂದ ಇಷ್ಟೊಂದು ಪ್ರೀತಿ ಪಡೆದದ್ದೇ ತನ್ನದೊಂದು ದೊಡ್ಡ ಭಾಗ್ಯ.
ಇವನ ಹೆಂಡತಿಯಾಗುವ ಭಾಗ್ಯ ತನಗೆ ಯಾವ ಜನ್ಮದಲ್ಲೂ ಸಾಧ್ಯವಿಲ್ಲ.
ಹಾಗಿದ್ದರೆ, next best?
ತನ್ನೆಲ್ಲ ಜನ್ಮಗಳಲ್ಲಿಯೂ ಈತನೇ ತನಗೆ ಗೆಣೆಯನಾಗಿ ಸಿಕ್ಕರೆ ಸಾಕು.
ಅದು ಆತ ಕೊಡುತ್ತಿರುವ ವಚನ !
ತನ್ನ ಅತ್ಯಂತ ಪ್ರೀತಿಯ ಗೆಣತಿಯ ಪಟ್ಟ ಇವಳಿಗೇ !
(ಶರೀರದ ಮೇಲಿನ ಕೆಂಪು ಅಥವಾ ಕಪ್ಪು moleಗೆ ಗೆಳತಿಎಂದು ಕರೆಯುತ್ತಾರೆ).

ಇಂತಹ ನೆಚ್ಚಿನ ಗೆಣೆಯನೊಡನೆ ಯಾವ ಕಾರಣಕ್ಕಾಗಿ ಮನಸ್ತಾಪ ಬಂತೊ ಏನೊ? ಆತ ಇವಳ ಕಡೆಗೆ ಬೆನ್ನು ತಿರುಗಿಸಿದ್ದಾನೆ. ಅವನ ದರುಶನವೇ ಇಲ್ಲ. ತನ್ನೆಲ್ಲ ಹ್ಯಾಂವ ಬಿಟ್ಟು ಅವಳು ಇವನಿಗಾಗಿ ಹಲಬುತ್ತಾಳೆ, ಹಂಬಲಿಸುತ್ತಾಳೆ. ಹುಚ್ಚಿಯಂತೆ ಹಾಡಿಕೊಳ್ಳುತ್ತ ಹಾದಿ-ಬೀದಿಗಳಲ್ಲಿ ತಿರುಗುತ್ತಾಳೆ :

ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತರೇ ಬಿಟ್ಟು ಎಲ್ಲ ಹ್ಯಾಂವಾ
ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?
ಇನ್ನೂ ಯಾಕ ಬರಲಿಲ್ಲಾ ?”

ಆತ ತನ್ನ ಮೇಲಿನ ಸಿಟ್ಟನ್ನು ಮರೆತು ಬಂದಾನೇ? ಇಲ್ಲಿ ಮತ್ತೊಂದು ವ್ಯಂಗ್ಯವನ್ನು ಗುರುತಿಸಬೇಕು. ಈತ ಸೆಟ್ಟರ ಹುಡುಗ. ಈತ ಸೆಡುವು ಮಾಡಿಕೊಂಡು ಹೋದರೆ ಈಕೆಯ ಬದುಕು ನಡೆಯುವದು ಹೇಗೆ? ಅದು ಕಟು ವಾಸ್ತವ. ಆತನ ಮೇಲೆ ಅವಳಿಗೆ ಇರುವ ನೆಚ್ಚು ಒಂದು ಭಾಗವಾದರೆ, ತನ್ನ ಉಪಜೀವನಕ್ಕಾಗಿ ಅಂತಹ ಗಿರಾಕಿ ಬೇಕಲ್ಲ ಎನ್ನುವ ದುಗುಡವು ಮತ್ತೊಂದು ಭಾಗವಾಗಿದೆ. ಆದುದರಿಂದಲೇ ಅವಳು ಹುಚ್ಚಿಯಾಗಿ ಹುಡುಕುತ್ತಿದ್ದಾಳೆ:

ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತರೇ ಬಿಟ್ಟು ಎಲ್ಲ ಹ್ಯಾಂವಾ


ಬೇಂದ್ರೆಯವರ ಕಲ್ಪನೆ ಅಗಾಧವಾಗಿದ್ದರೂ ಸಹ, ಅವರ ಕವನಗಳು ಯಾವಾಗಲೂ ವಾಸ್ತವತೆಯ ಅಂಚನ್ನು ದಾಟುವದಿಲ್ಲ. ಹೀಗಾಗಿ ಅವರ ಅನೇಕ ಕವನಗಳಿಗೆ documentary value ಬರುತ್ತದೆ.ಹುಬ್ಬಳ್ಳಿಯಾಂವಾಕವನದಲ್ಲಿ ವಾಸ್ತವತೆಯ ಇಂತಹ ನೋಟಗಳನ್ನು ಕಾಣಬಹುದು. ಉದಾಹರಣೆಗೆ ಸೂಳೆಯರ ಶ್ರೇಣೀಕರಣ:
ಮೊದಲಲ್ಲಿ ಕಸಬೆಯರು, ಅವರ ಮೇಲೆ ಬಸವಿಯರು, ಅವರಿಗಿಂತಲೂ ಮೇಲಿನ ಸ್ಥಾನದಲ್ಲಿ ಜೋಗತಿಯರು.

ಬೇಂದ್ರೆಯವರ ಕವನಗಳಲ್ಲಿ ಬರುವ ಆಡುನುಡಿಯ ಪದಪುಂಜಗಳು, ಅವರ ಕವನಗಳಿಗೆ ಹೆಚ್ಚಿನ ಸೊಬಗನ್ನು ಕೊಡುತ್ತವೆ. ಇದೇ ಕವನದಲ್ಲಿಯ ಕೆಲವು ಸಾಲುಗಳನ್ನು ಉದಾಹರಣೆಗಳೆಂದು ನೋಡಬಹುದು :

ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ

 ಹುಬ್ಬಳ್ಳಿಯಾಂವಾ ಕವನವು ತೋರಿಕೆಗೆ ರಂಜನೀಯ ಕವನವಾಗಿದೆ. ಬೇಂದ್ರೆಯವರ ಪದಚಮತ್ಕಾರ, ಅಸೀಮ ಕಲ್ಪನೆ ಇಲ್ಲಿಯೂ ಧಾರಾಳವಾಗಿ ಬಳಕೆಯಾಗಿವೆ. ಕಲ್ಪನೆಯು ಎಲ್ಲಿಯೂ ವಾಸ್ತವವನ್ನು ಅತಿಕ್ರಮಿಸದ ಎಚ್ಚರಿಕೆಯು ಇಲ್ಲಿದೆ. ಒಂದು ಕಾಲದ ಸಮಾಜವ್ಯವಸ್ಥೆಯ ದಾಖಲಾತಿ ಇಲ್ಲಿದೆ. ಆಡುನುಡಿಯನ್ನು ಸಮರ್ಥವಾಗಿ ಉಪಯೋಗಿಸುವ ಪ್ರತಿಭೆ ಇಲ್ಲಿದೆ. ಇದೆಲ್ಲವನ್ನೂ ಮೀರಿದ ಅಂಶವೆಂದರೆ ಈ ಗೀತೆಯ ಆಂತರ್ಯದಲಿ ಅಡಗಿದ ಸೂಳೆಯೊಬ್ಬಳ ಅಳಲು, ಬಳಸಿ ಬಿಸಾಡಬಹುದಾದ ಹೆಣ್ಣುಜೀವಿಯೊಂದು ತನ್ನ ಭಾವನೆಗಳಿಗೆ ಸ್ಪಂದಿಸುವ ಪರಿ.
ಹುಬ್ಬಳ್ಳಿಯಾಂವಾಕವನವು ಸಖೀಗೀತಕವನಸಂಕಲನದಲ್ಲಿ ಅಡಕವಾಗಿದೆ.

Saturday, July 12, 2008

ಬೇಂದ್ರೆ ಕಾವ್ಯ : “ನನ್ನವಳು ”

ಬೇಂದ್ರೆಯವರು ರಚಿಸಿದ ಪ್ರೇಮ ಕವನಗಳಲ್ಲಿ ಅಥವಾ ದಾಂಪತ್ಯಕವನಗಳಲ್ಲಿ (--ಬೇಂದ್ರೆಯವರ ಎಲ್ಲ ಪ್ರೇಮಕವನಗಳು ದಾಂಪತ್ಯಕವನಗಳೇ ಆಗಿವೆ.--) ನನಗೆ ಅತಿ ಮೆಚ್ಚುಗೆಯಾದ ಕವನವೆಂದರೆ : ನನ್ನವಳು ”.

ಬೇಂದ್ರೆಯವರ ಈ ಕವನದ ನಾಯಕಿ ನಿಸರ್ಗವೂ ಹೌದು, ಕವಿಯ ನಲ್ಲೆಯೂ ಹೌದು.
ಬೇಂದ್ರೆಯವರ ಈ ಕವನದಲ್ಲಿ ನಲ್ಲೆಯ ವರ್ಣನೆ ಹಾಗು ದಿನಮಾನದ ವರ್ಣನೆ ಒಂದರೊಳಗೊಂದು ಚಮತ್ಕಾರಪೂರ್ಣವಾಗಿ ಬೆಸೆದುಕೊಂಡಿವೆ.
ಕವನ ಹೀಗಿದೆ:

ನನ್ನವಳು
(ನಸುಕಿನ ಝುಳುಕು)


ತಂಬುಲದ ತುಟಿಯ ತೋರಿ
ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರs?
ಸಂಜಿ ಏನs?

ಮೇಲಸೆರಗು ಮೆಲ್ಲಗ ಸರಿಸಿ
ವಾರಿನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರs?
ಇರುಳು ಏನs?

ಅಲೆದುಗಿಲಿದು ಉಲಿದೂ ಉಲಿದೂ
ನೆಟ್ಟ ನೋಟಾ ಕೀಳಲಾರ್ದs
ತಣ್ಣಗಾಗಿ ನಿಂತವಳ್ಯಾರs?
ನಸುಕು ಏನs?

ಹೊತ್ತೊತ್ತಿಗೆ ಹೊಂದಿಕೆಯಾಗಿ
ಹಲವಾದಿ ಒಬ್ಬಾಕೆಯಾಗಿ
ಹೌದs ಚನ್ನಿ ಹೌದ ಚೆಲುವೀ
ನನ್ನವಳೇನs?

ಈ ಕವನದ ಮೊದಲನೆಯ ನುಡಿಯು ಪ್ರಾರಂಭವಾಗುವದು ಪ್ರೇಮಿಯು ಮಾಡುವ ನಲ್ಲೆಯ ವರ್ಣನೆಯಿಂದ :

ತಂಬುಲದ ತುಟಿಯ ತೋರಿ
ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರs?
ಸಂಜಿ ಏನs?

ಕವಿಯ ನಲ್ಲೆ ತಾಂಬೂಲ ಚರ್ವಣದಿಂದ ತುಟಿಗಳನ್ನು ಕೆಂಪಾಗಿಸಿಕೊಂಡು, ಮಲ್ಲಿಗೆ ಹೂವುಗಳನ್ನು ಮುಡಿದುಕೊಂಡು, ಮೆಲ್ಲಮೆಲ್ಲಗೆ ಆತನನ್ನು ಸಂಧಿಸಲು ಬರುತ್ತಿದ್ದಾಳೆ ಎನ್ನುವದು ಮೊದಲ ಮೂರು ಸಾಲುಗಳಲ್ಲಿ ತೋರುವ ಅಭಿಪ್ರಾಯ. ಆದರೆ, ಕೊನೆಯ ಸಾಲಿನಲ್ಲಿ ಬರುವ ಸಂಜಿ ಏನs? ” ಎನ್ನುವ ಪ್ರಶ್ನೆಯಿಂದಾಗಿ, ಈ ಕವನದ ನಾಯಕಿ ದಿನಮಾನದ ಸಂಧ್ಯಾಸಮಯವೆನ್ನುವ ಹೊಸ ಹೊಳಹು ವ್ಯಕ್ತವಾಗುತ್ತದೆ.

ತಾಂಬೂಲಚರ್ವಣದ ಕೆಂಪುವರ್ಣವು ಸಂಜೆಗೆಂಪಿನ ಬಣ್ಣ ; ಮಲ್ಲಿಗೆಯ ಹೂವುಗಳು ಒಂದೊಂದಾಗಿ ಕಾಣುತ್ತಿರುವ ತಾರೆಗಳು ; ಬೆಳಗು ಜಾರಿ ಕತ್ತಲೆ ಸಾವಕಾಶವಾಗಿ ಬರುತ್ತಿದೆ ಎನ್ನುವ ಹೊಸ ಅರ್ಥ ಇಲ್ಲಿ ಮೂಡುತ್ತದೆ.

ಎರಡನೆಯ ನುಡಿಯನ್ನು ನೋಡಿರಿ:

ಮೇಲಸೆರಗು ಮೆಲ್ಲಗ ಸರಿಸಿ
ವಾರಿನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರs?
ಇರುಳು ಏನs?

ಎರಡನೆಯ ನುಡಿಯ ಮೊದಲ ಮೂರು ಸಾಲುಗಳೂ ಸಹ ನಲ್ಲೆಯ ವರ್ಣನೆಯಂತೆಯೇ ಭಾಸವಾಗುವವು.
ನಲ್ಲನನ್ನು ಸಂಧಿಸಿದ ನಲ್ಲೆ ತನ್ನ ಸೆರಗನ್ನು ಮೆಲ್ಲಗೆ ಸರಿಸಿ, ಓರೆನೋಟವನ್ನು ತುಸುವೇ ಮೇಲಕ್ಕೆತ್ತಿ, ತೋರಿಕೆಗೆ ಮಳ್ಳಿಯಂತೆ ನಟಿಸುತ್ತ, ಬಿನ್ನಾಣ ಮಾಡುತ್ತ, ನಲ್ಲನನ್ನು ರಂಬಿಸುವ ಪರಿಯನ್ನು ವರ್ಣಿಸಿದಂತೆ ಭಾಸವಾಗುವದು.
ಆದರೆ ಕೊನೆಯಲ್ಲಿರುವ ಇರುಳು ಏನs? ” ಎನ್ನುವ ಸಾಲಿನಿಂದ ಕವನಕ್ಕೆ ಮತ್ತೊಂದು ದ್ವಂದ್ವಾರ್ಥ ಪ್ರಾಪ್ತವಾಗುವದು.

ಮೇಲಸೆರಗು ಅಂದರೆ ಮೋಡಗಳ ಸೆರಗು. ವಾರಿನೋಟವೆಂದರೆ ಮೋಡಗಳ ಮರೆಯಿಂದ ಆಗಾಗ ಹೊರಗಾಣುವ ಚಂದ್ರಾಮ. ಇಂತಹ ಬೆಳದಿಂಗಳ ರಾತ್ರಿಯ ಚೆಲುವನ್ನು ಅನುಭವಿಸುತ್ತ ಕೂತಿರುವ ರಸಿಕನಿಗೆ, ಇದು ಒಯ್ಯಾರ ಮಾಡುತ್ತಿರುವ ನಾರಿಯಂತೆ ಭಾಸವಾಗುವದು ಸಹಜವಾಗಿದೆ.

ಮೂರನೆಯ ನುಡಿಯನ್ನು ಗಮನಿಸಿರಿ :

ಅಲೆದುಗಿಲಿದು ಉಲಿದೂ ಉಲಿದೂ
ನೆಟ್ಟ ನೋಟಾ ಕೀಳಲಾರ್ದs
ತಣ್ಣಗಾಗಿ ನಿಂತವಳ್ಯಾರs?
ನಸುಕು ಏನs?

ಈ ಮೂರನೆಯ ನುಡಿಯ ಸಾಲುಗಳನ್ನೂ ಸಹ ನಲ್ಲೆಯ ಪ್ರೇಮದಾಟಗಳಿಗೆ ಹೋಲಿಸುವಂತೆಯೇ, ಇರುಳಿನಿಂದ ನಸುಕಿನವರೆಗಿನ ನಿಸರ್ಗದ ಕ್ರಿಯೆಗಳಿಗೂ ಹೋಲಿಸಬಹುದು.

ನಾಲ್ಕನೆಯ ನುಡಿಯು ಅದ್ಭುತವಾದ ರೀತಿಯಲ್ಲಿ, ಕವಿಗೆ ತನ್ನ ನಲ್ಲೆಯ ಬಗೆಗಿರುವ ಪ್ರೀತಿಯನ್ನು, ಹಾಗು ದಾಂಪತ್ಯರಹಸ್ಯವನ್ನು ಹೇಳುತ್ತದೆ:

ಹೊತ್ತೊತ್ತಿಗೆ ಹೊಂದಿಕೆಯಾಗಿ
ಹಲವಾದಿ ಒಬ್ಬಾಕೆಯಾಗಿ
ಹೌದs ಚನ್ನಿ ಹೌದ ಚೆಲುವೀ
ನನ್ನವಳೇನs?

ನಿಸರ್ಗದ ದೈನಂದಿನ ವ್ಯಾಪಾರದಲ್ಲಿ, ನಿಸರ್ಗ ಹೇಗೆ ಹಲವು ಬಣ್ಣಗಳನ್ನು ತಳೆಯುತ್ತದೆ, ಇವೆಲ್ಲ ಪ್ರಕಾರಗಳು ಹೇಗೆ ನಿಸರ್ಗದ ಚೆಲುವೇ ಆಗಿವೆ, ಈ ಎಲ್ಲ ಬಗೆಗಳು ಮನುಷ್ಯನಿಗೆ ಹೇಗೆ ಸುಖವನ್ನೇ ಕೊಡುತ್ತವೆ ಎಂದು ಹೇಳುತ್ತಲೆ, ಸಮರಸ ದಾಂಪತ್ಯವೂ ಸಹ ಇದೇ ತೆರನಾಗಿರುತ್ತದೆ ಎನ್ನುವ ತನ್ನ ಭಾವನೆಯನ್ನು ಕವಿ ಹೊರಗೆಡುವುತ್ತಿದ್ದಾನೆ. ದೈನಂದಿನ ವ್ಯವಹಾರದಲ್ಲಿ ಬಳಲಿದ ಮನುಷ್ಯ ಸಂಜೆಯಾಗುತ್ತಿದ್ದಂತೆ ವಿಶ್ರಾಂತಿಯನ್ನು ಬಯಸುತ್ತಾನೆ. ಇರುಳು ಆತನ ದಣಿವನ್ನು ತೊಡೆಯುತ್ತದೆ. ಬೆಳಗಾಗುತ್ತಿದ್ದಂತೆ ಆತ ಮರುದಿನದ ವ್ಯವಹಾರಕ್ಕೆ ಹುರುಪಿನಿಂದ ಅಣಿಯಾಗುತ್ತಾನೆ. ಅವನ ನಲ್ಲೆಯೂ ಸಹ ಈ ಸಂಧ್ಯಾಕಾಲದಂತೆ, ನಿಶಾಕಾಲದಂತೆ ಹಾಗೂ ಉಷಾಕಾಲದಂತೆ ಅವನ ದಣಿವನ್ನು ಪರಿಹರಿಸುತ್ತಾಳೆ, ತಣಿಸುತ್ತಾಳೆ, ಹೊಸ ಹುರುಪನ್ನು ತುಂಬುತ್ತಾಳೆ.

ಅವಳನ್ನು ಕವಿ ಚನ್ನಿ ಎಂದು ಕರೆಯುತ್ತಾರೆ. ಚನ್ನಿ ಯಾದವಳೇ ಚೆಲುವಿ ಯಾಗಿರಬಲ್ಲಳು, ಬರಿ ನೋಟಕ್ಕೆ ಚೆಲುವಿಯಾದವಳು ಚನ್ನಿಯಾಗಿರದಿದ್ದರೆ ಅವಳು ಚೆಲುವೆಯಾಗಲಾರಳು. ನಲ್ಲನಿಗೆ ಅವಳು ಎಲ್ಲಾ ಸಂದರ್ಭಗಳಲ್ಲೂ ಹೊಂದಿಕೆಯಾಗಬೇಕು . ಈ ಒಬ್ಬಳೇ ನಲ್ಲೆ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿಗಳಲ್ಲಿ ತೋರಿಬರುತ್ತಾಳೆ ಎನ್ನುವ ಅಭಿಪ್ರಾಯವನ್ನು ಬೇಂದ್ರೆ ವ್ಯಕ್ತ ಪಡಿಸುತ್ತಾರೆ.

ಬೇಂದ್ರೆಯವರ ಈ ಕವನ ಅವರ ಕಾಮಕಸ್ತೂರಿ ಕವನಸಂಗ್ರಹದಲ್ಲಿದೆ.
ಕಾಮಕಸ್ತೂರಿ ಸುಗಂಧವನ್ನು ಬೀರುವ ಒಂದು ಸಸ್ಯ. ಇದರ ಎಲೆಗಳನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ.
ಆದರೆ ಕಸ್ತೂರಿ ಮೃಗದಿಂದ ಪಡೆಯಲಾದ ಗಂಧವನ್ನು ಕಾಮೋದ್ದೀಪನಕ್ಕಾಗಿ ಬಳಸಲಾಗುತ್ತದೆ. ಗಂಡು ಹೆಣ್ಣಿನ ನಡುವಿರುವ ಕಾಮವೂ ಸಹ ಕಸ್ತೂರಿಯ ಗಂಧವಾಗದೆ, ಕಾಮಕಸ್ತೂರಿಯ ಸುಗಂಧವಾಗಬೇಕು ಎನ್ನುವದು ಬೇಂದ್ರೆಯವರ ಮನೀಷೆ.  
ಇದು ಸುಪ್ರಸಿದ್ಧ ವಿಮರ್ಶಕ ಸಾಕ್ಷಿ’ (ದಿವಂಗತ ಶ್ರೀ ಆರ್. ಜಿ. ಕುಲಕರ್ಣಿ) ಇವರ ಅಭಿಪ್ರಾಯವಾಗಿದೆ.

ಕೇವಲ ನಾಲ್ಕು ನುಡಿಗಳ ಈ ಕವನ, ಅತ್ಯಂತ ಸರಳ ಕನ್ನಡದಲ್ಲಿ ಬರೆದ ಈ ಕವನ, ಅತ್ಯಂತ ಚಮತ್ಕಾರಪೂರ್ಣವಾದ ಈ ಕವನ, ಅತಿ ಸುಂದರವಾದ ನಿಸರ್ಗ ಕವನವೂ ಹೌದು, ದಾಂಪತ್ಯಕವನವೂ ಹೌದು.

Saturday, July 5, 2008

ಭಾಷೆ ಎನ್ನುವ ಉಪಕರಣ

ಮಾನವಶಾಸ್ತ್ರಜ್ಞರು ಮಾನವನನ್ನು Tool using Primate ಎಂದು ಬಣ್ಣಿಸುತ್ತಾರೆ. Primateಗಳ ಗುಂಪಿನಲ್ಲಿ ಒರಾಂಗ ಉಟುಂಗ, ಚಿಂಪಾಂಝಿ, ಗೋರಿಲ್ಲಾ, ಕಪಿ ಹಾಗು ಮಾನವ ಮೊದಲಾದ ಜೀವಿಗಳ ಸೇರ್ಪಡೆಯಾಗುತ್ತದೆ.
ಉಳಿದ primateಗಳಿಗೂ ಮಾನವನಿಗೂ ಇರುವ ವ್ಯತ್ಯಾಸವೆಂದರೆ, ಮನುಷ್ಯನು ಉಪಕರಣಗಳನ್ನು ಸೃಷ್ಟಿಸಿಕೊಳ್ಳಬಲ್ಲ ಹಾಗೂ ಉಪಯೋಗಿಸಬಲ್ಲ.

ಮಾನವನ ಬಳಿಯಿರುವ ಶ್ರೇಷ್ಠ ಉಪಕರಣ ಯಾವುದು?
ನಿಸ್ಸಂದೇಹವಾಗಿಯೂ ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ. ಕಾಡುಮಾನವನನ್ನು ನಾಡಮಾನವನನ್ನಾಗಿ ಸುಸಂಸ್ಕೃತಗೊಳಿಸಲು ಬೇಕಾಗುವ ಸಂವಹನ ಮಾಧ್ಯಮವೇ ಭಾಷೆ.
ಉಪಕರಣದ ಸಾಮರ್ಥ್ಯ ಹೆಚ್ಚಿದಷ್ಟೂ ಉಪಭೋಕ್ತಾನ ಸಾಮರ್ಥ್ಯ ಹೆಚ್ಚುತ್ತದೆ. ಶಿಲಾಯುಗದಲ್ಲಿ ಕಲ್ಲುಗಳನ್ನು ಆಯುಧಗಳನ್ನಾಗಿ ಬಳಸುತ್ತಿದ್ದ ಮಾನವ, ಆ ಬಳಿಕ ಕಬ್ಬಿಣ, ತಾಮ್ರಗಳ ಆಯುಧಗಳನ್ನು ಬಳಸತೊಡಗಿದ. ಇದೇ ರೀತಿಯಾಗಿ ಅವನ ಸಂವಹನ ಸಾಮರ್ಥ್ಯವೂ ಬೆಳೆಯಲಾರಂಭಿಸಿತು. ಭಿನ್ನ ಭಿನ್ನ ಸಮುದಾಯಗಳಲ್ಲಿ ಸಂಪರ್ಕ ಬಂದಂತೆಲ್ಲ, ಈ ಸಮುದಾಯಗಳಲ್ಲಿ ಪದಾರ್ಥ ವಿನಿಮಯ, ಆಯುಧ ವಿನಿಮಯ ಹಾಗು ಅತಿ ಮುಖ್ಯವಾಗಿ ಭಾಷಾ ವಿನಿಮಯ ಪ್ರಾರಂಭವಾಯಿತು. ಇದು ನಾಗರಿಕತೆ ಬೆಳೆಯುವ ರೀತಿ. ಭಾಷೆ ಬೆಳೆಯುವ ರೀತಿ.

ಸಂಸ್ಕೃತ ಭಾಷಿಕ ಸಮುದಾಯಗಳಿಗೆ ಹಾಗು ಕನ್ನಡ ಭಾಷಿಕ ಸಮುದಾಯಗಳಿಗೆ ಬಂದ ಸಂಪರ್ಕದಿಂದ ಎರಡೂ ಸಮುದಾಯಗಳಿಗೆ ಲಾಭವಾಗಿದೆ. ಹೆಚ್ಚೇನು, ಈ ಎರಡೂ ಸಮುದಾಯಗಳು ಒಂದರಲ್ಲೊಂದು ಕರಗಿ ಹೋಗಿವೆ. ಆ ಕಾರಣದಿಂದಲೇ, ಮರಾಠಿ ಭಾಷೆಯು ಕನ್ನಡದಿಂದ ಹುಟ್ಟಿದೆ ಎಂದು ಹೇಳುವದು; ಗುಜರಾತ ಭಾಷೆಗೆ ದ್ರಾವಿಡ (=ಕನ್ನಡ) ತಳಪಾಯವಿದೆ ಎಂದು ಹೇಳುವದು. ಸಂಸ್ಕೃತದಲ್ಲಿ ಕನ್ನಡದ ಹಾಗು ಕನ್ನಡದಲ್ಲಿ ಸಂಸ್ಕೃತದ ಅನೇಕ ಪದಗಳ ವಿನಿಮಯವಾಗಿರುವದು.

ದುರ್ದೈವದಿಂದ, ಸಂಸ್ಕೃತ ಭಾಷಿಕರ ಜೊತೆಗೆ ಅತಿ ಕಡಿಮೆ ಸಂಪರ್ಕ ಹೊಂದಿದ ತಮಿಳರು (-ಇದಕ್ಕೆ ಕಾರಣ ದುರಭಿಮಾನವೆ? ಅಥವಾ physical distanceಏ?-) ವಿನಿಮಯದ ಲಾಭವನ್ನು ಕಳೆದುಕೊಂಡರು. ಇದನ್ನೆಲ್ಲ ತಿಳಿಯದೆ, ಕನ್ನಡದ ಮೂಲಪದಗಳಲ್ಲಿ ಮಹಾಪ್ರಾಣವಿಲ್ಲವೆಂದು ಬೊಬ್ಬೆ ಹಾಕುವ ಅಲ್ಪಪ್ರಾಣಿಗಳಿಗೆ ಕನ್ನಡದ ಮೂಲಪದಗಳು ಎಷ್ಟಿವೆ ಎನ್ನುವದು ಗೊತ್ತೆ? ಆಧುನಿಕ ಜಗತ್ತಿನಲ್ಲಿ ಅಷ್ಟೇ ಪದಗಳು ಸಾಕೆ? ಯಾವುದೇ ಭಾಷೆಯಿರಲಿ, ಬೇರೆ ಭಾಷೆಗಳಿಂದ ಪದಗಳನ್ನು, ಧ್ವನಿಸಂಕೇತಗಳನ್ನು ಎರವಲಾಗಿ ತೆಗೆದುಕೊಳ್ಳದಿದ್ದರೆ, ಅದು ದರಿದ್ರ ಭಾಷೆಯಾಗಿಯೇ ಉಳಿಯುವದು.

ಕನ್ನಡಕ್ಕೆ ವಿದೇಶಿ ಪದಗಳು ಬೇಡ ಎನ್ನುವ ಪಂಡಿತರಿಗೆ, ಕನ್ನಡದಲ್ಲಿರುವ ವಿದೇಶಿ ಪದಗಳ ಸಂಖ್ಯೆ ಗೊತ್ತೆ? ಈಗ ಕುದುರೆ ಎನ್ನುವ ಪದವನ್ನೆ ತೆಗೆದುಕೊಳ್ಳಿ. ‘ಕುದುರೆ ಅನ್ನಲು ನಾವು ಅಶ್ವ ಅಥವಾ ಘೋಡಾ ಅನ್ನಕೂಡದು, ಇವು ಕನ್ನಡೇತರ ಪದಗಳು’ ಎಂದು ಕೆಲವರು ಹೇಳಬಹುದು. ಮಹನೀಯರೆ, ‘ಕುದುರೆ’ ಎನ್ನುವದೇ ಕನ್ನಡ ಪದವಲ್ಲ. ಕರುನಾಡಿನಲ್ಲಿ ಮೊದಲು ಕತ್ತೆಗಳೇ ತುಂಬಿದ್ದವು. (ಈಗಲೂ ಸಹ ಸಾಕಷ್ಟಿವೆ.) ತುಂಬಾ ಹಿಂದಿನ ಕಾಲದಲ್ಲಿ ಕನ್ನಡ ಕರಾವಳಿಗೆ ಈಜಿಪ್ತ ಜೊತೆಗೆ ವ್ಯಾಪಾರ ಸಂಪರ್ಕವಿತ್ತು. ಈಜಿಪ್ತಿನಿಂದ ಕುದುರೆಗಳು ಕರಾವಳಿಗೆ ಹಡಗಿನಲ್ಲಿ ಬರುತ್ತಿದ್ದವು. ಕುದುರೆಗೆ ಈಜಿಪ್ತ ಭಾಷೆಯಲ್ಲಿ ‘hytr’ ಎನ್ನುತ್ತಾರೆ. ಅದೇ ಕನ್ನಡಿಗರ ಕುದುರೆ! ಕೇವಲ ಕನ್ನಡ ಪದಗಳನ್ನು ಮಾತ್ರ ಉಪಯೋಗಿಸುತ್ತೇನೆ ಎನ್ನುವವರು ಕುದುರೆಯನ್ನು ಬಿಟ್ಟು ಕತ್ತೆಯನ್ನಷ್ಟೇ ಓಡಿಸಬೇಕಾದೀತು! ಇಂತಹದೇ ಬಡಾಯಿ ಕೊಚ್ಚಿದ ಆಂಡಯ್ಯ ಬರೆದದ್ದು “ಕಬ್ಬಿಗರ ಕಾವ”! ಹಾಗಂದರೇನು? ಸಂಸ್ಕೃತವನ್ನು ವಿರೂಪಗೊಳಿಸು……ಅದು ಕನ್ನಡವಾಗುತ್ತದೆ, ಎಂದೆ?



The Language Barrier
ಚೀನಾ ಗೋಡೆಯನ್ನು ಹೇಗೊ ದಾಟಿ ಒಳಗೆ ನುಸಳಿದ ವಿದೇಶಿ ಪ್ರವಾಸಿಯೊಬ್ಬನು ಚೀನೀಯನೊಬ್ಬನಿಗೆ ಕೇಳಿದನಂತೆ: “ವಿದೇಶಿ ಆಕ್ರಮಣಕಾರರ ಹಾವಳಿ ತಪ್ಪಿಸಲು ಇಂತಹ ದೊಡ್ಡ ಗೋಡೆಯನ್ನು ಕಟ್ಟಿದಿರಾ?”
ಈ ಪ್ರಶ್ನೆಗೆ ಆ ಚೀನೀಯನು ಕೊಟ್ಟ ಉತ್ತರ:
“ಹಾಗಲ್ಲ. ವಿದೇಶೀಯರ ಸಂಸ್ಕೃತಿ ಚೀನಾದಲ್ಲಿ ಬರಬಾರದೆಂದು ಈ ಗೋಡೆ ಕಟ್ಟಿದ್ದೇವೆ.”

ನಮ್ಮಲ್ಲಿ ತಮಿಳರನ್ನು ನಾವು ಈ ಚೀನೀಯರಿಗೆ ಹೋಲಿಸಬಹುದು. ಆದರೆ ಇವರು ಕಟ್ಟಿಕೊಂಡ ಗೋಡೆ ಕಲ್ಲು ಮಣ್ಣಿನದಲ್ಲ; ಇದು language barrier.

“ಬೇರೆ ಭಾಷೆಗಳ ಪದಗಳು ನಮಗೆ ಬೇಡ, ಅವರ ಉಚ್ಚಾರ ನಮಗೆ ಬೇಡ; ಅವರ ಸಂಸ್ಕೃತಿ ನಮಗೆ ಬೇಡ. ನಾವು ಶಿಲಾಯುಗದ ನಾಗರಿಕರಾಗಿಯೇ ಉಳಿಯುತ್ತೇವೆ.”—ಇದು ತಮಿಳು ಧೋರಣೆ. ಹಾಗಂತ ಬೇರೆಯವರ ನಾಡುಗಳನ್ನು ಅತಿಕ್ರಮಿಸಿ, ಅಲ್ಲಿಯೂ ಸಹ “ ಕನ್ನಡ ತಿರಿಯಾದು” ಎಂದು ಹೇಳಲು ಇವರು ಹೇಸುವದಿಲ್ಲ. ನಾವು ಪರದೇಶಿ ಪದಗಳನ್ನು ಸ್ವೀಕರಿಸುವದಿಲ್ಲ ಎಂದು ಹೇಳುವ ತಮಿಳರು, ಸಂಸ್ಕೃತದ ಪದಗಳನ್ನೇ ವಿಕಾರಗೊಳಿಸಿ, ತಮಿಳೀಕರಿಸಿರುವದನ್ನು ನೋಡಬೇಕಾದರೆ, ಶಂಕರ ಭಟ್ಟರು ಬರೆದಿರುವ “ಕನ್ನಡ ಬರಹ ಸರಿಪಡಿಸೋಣ” ಪುಸ್ತಕದ (ಮೊದಲ ಮುದ್ರಣ) ೭೧ನೆಯ ಹಾಗು ೭೨ನೆಯ ಪುಟಗಳಲ್ಲಿ ಲೇಖಕರು ಕೊಟ್ಟ ಪಟ್ಟಿಗಳನ್ನು ನೋಡಬೇಕು.

ಇಂತಹ ತಮಿಳು ಸಂಸ್ಕೃತಿ ನಮ್ಮ ಶಂಕರ ಭಟ್ಟರಿಗೆ ಆದರ್ಶವಾಗಿದೆ. ತಮಿಳಿನಲ್ಲಿ ಕೇವಲ ೧೦ ವರ್ಗಾಕ್ಷರಗಳು ಮಾತ್ರ ಇವೆ. ಒಂದೂ ಮಹಾಪ್ರಾಣಾಕ್ಷರ ಇಲ್ಲ. (ಪುಟ ೬೯). ಅಂದ ಮೇಲೆ ಕನ್ನಡ ಲಿಪಿಯಲ್ಲೇಕೆ ೨೯ ವರ್ಗಾಕ್ಷರಗಳು ಬೇಕು?
ಕನ್ನಡದಲ್ಲಿ ೨೯ ವರ್ಗಾಕ್ಷರಗಳಿರುವದರಿಂದ ಹಾಗು ತಮಿಳಿನಲ್ಲಿ ಕೇವಲ ೧೦ ಇರುವದರಿಂದ ಕನ್ನಡದಲ್ಲಿ ತಾತ್ವಿಕವಾಗಿ ಸಾಧಿಸಬಹುದಾದ ಹೆಚ್ಚಿನ ಪದಗಳು (೨೯ factorial-೧೦ factorial=೧೯ factorial) ಎನ್ನುವ ಗಣಿತ ಮೇಲ್ನೋಟಕ್ಕೆ ಗೊತ್ತಾಗುವಂತಹದು.

ಈಗಂತೂ globalization ಯುಗ. ಕನ್ನಡದ ಧ್ವನಿಸಂಪತ್ತು ಹಾಗು ಧ್ವನಿಸಂಕೇತಗಳು ಹೆಚ್ಚಬೇಕೆ ಹೊರತು ಕಡಿಮೆಯಾಗಬಾರದು. ತಮಿಳರನ್ನು ಅನುಕರಿಸಿ ನಾವೂ ಸಹ ಮಹಾಪ್ರಾಣಗಳನ್ನು ಬಿಟ್ಟು ಬಿಟ್ಟೆವು ಅಂತ ಇಟ್ಕೊಳ್ಳಿ. ಆಗ ನಮ್ಮ ಹುಡುಗರು ಅಂತರ್ರಾಷ್ಟ್ರೀಯ ಭಾಷೆಗಳನ್ನು ಮಾತನಾಡುವಾಗಲೂ ಸಹ, ತಮಗೆ ರೂಢಿಯಾಗಿ ಬಿಟ್ಟಿರುವ ಅಲ್ಪಪ್ರಾಣೀಯ ಉಚ್ಚಾರವನ್ನೇ ಮಾಡುತ್ತಾರೆ. ನಮ್ಮಲ್ಲಿರುವ call centresಗಳನ್ನೆಲ್ಲ ಆಗ ಮುಚ್ಚಬೇಕಾದೀತು.

ಹಾಗಿದ್ದರೆ, ಶಂಕರ ಭಟ್ಟರು ಕನ್ನಡದ ವರ್ಣಮಾಲೆಗೆ ಕತ್ತರಿ ಹಾಕಲು ಏಕಿಷ್ಟು ಹಪಾಪಿಸುತ್ತಿದ್ದಾರೆ?
ತಮ್ಮ ಪುಸ್ತಕದ opening paraದಲ್ಲಿ ಅವರು ಈ ರೀತಿ ಹೇಳಿಕೊಂಡಿದ್ದಾರೆ:

“ ಕನ್ನಡ ಬರಹ ಮೇಲ್ವರ್ಗದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗಬೇಕು ಮತ್ತು ಕನ್ನಡ ಬರಹದ ಬಳಕೆಯ ಮೂಲಕ ಇವತ್ತು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿರುವ ಹಲವು ರೀತಿಯ ಪ್ರಯೋಜನಗಳನ್ನು ಎಲ್ಲಾ ವರ್ಗದ ಕನ್ನಡಿಗರೂ ಸಮಾನವಾಗಿ ಪಡೆಯುವ ಹಾಗಾಗಬೇಕು ಎಂಬ ಕಳಕಳಿಯಿಂದ ಈ ಪುಸ್ತಕವನ್ನು ಬರೆಯಲು ಹೊರಟಿದ್ದೇನೆ.”

ಯಾರನ್ನೇ ಆಗಲಿ, ‘ಕೆಳವರ್ಗ’ದವರು ಎಂದು ಕರೆಯಲು ನನ್ನ ಮನಸ್ಸು ಒಪ್ಪುವದಿಲ್ಲ. ಇರಲಿ, ಶಂಕರ ಭಟ್ಟರು ಸೂಚಿಸುವ ಈ ಕೆಳವರ್ಗದವರಿಗೆ ಭಾಷೆಯನ್ನು (ಅವರು ಹೇಳುವಂತೆ) ಸರಳೀಕರಿಸಿ ಕಲಿಸಿದರೆ, ಭಾಷೆ ಆಗ ಎಲ್ಲರ ಸೊತ್ತಾಗುವದು. ಇದೇ ತರ್ಕವನ್ನು ಅನುಸರಿಸಿ ಗಣಿತವನ್ನು ಕಲಿಸಿದರೆ, ಇನ್ನೂ ಹೆಚ್ಚು ಜನರಿಗೆ ಸರಳ ಗಣಿತದ ಪ್ರಯೋಜನವಾಗಬಹುದಲ್ಲವೆ? ಅಂದರೆ, ೦ದಿಂದ ೯ರವರೆಗಿನ ೧೦ ಅಂಕಿಗಳ ಬದಲಾಗಿ, ೦ದಿಂದ ೫ರವರೆಗಿನ ೫ ಅಂಕಿಗಳನ್ನು ಮಾತ್ರ ಕಲಿಸೋಣ! ಗಣಿತ ಈಗ ಬರೀ ಪಂಡಿತರ ಸೊತ್ತಲ್ಲ!!


ಕೇವಲ ತಮಿಳು ಭಾಷೆಯನ್ನೇ ಉದಾಹರಣೆಯಾಗಿ ನೀಡುವ ಶಂಕರ ಭಟ್ಟರು ತೆಲಗು ಭಾಷೆಯ ಉದಾಹರಣೆ ಏಕೆ ಕೊಡುವದಿಲ್ಲ? ಏಕೆಂದರೆ, ತೆಲಗು ಭಾಷೆಯಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳಿವೆ! ಹಾಗಾದರೆ, ತೆಲಗು ಭಾಷೆಯೂ ಸಹ ಅಲ್ಲಿಯ ‘ಮೇಲ್ವರ್ಗ’ದವರ ಸೊತ್ತಾಗಿದೆಯೆ? ಯಾವ ತೆಲಗು ಭಾಷಿಕನೂ ಹಾಗೇ ಹೇಳಿಲ್ಲವಲ್ಲ! ತೆಲಗು ಭಾಷಿಕರೂ ಸಹ ಮಹಾಪ್ರಾಣ ಪದಗಳನ್ನು ಅನಾಯಾಸವಾಗಿ ಉಚ್ಚರಿಸುತ್ತಾರಲ್ಲ! ಇದಕ್ಕೆ ಕಾರಣವೆಂದರೆ, ಅವರೂ ಸಹ ಕನ್ನಡಿಗರಂತೆ ಸಂಸ್ಕೃತ ಭಾಷಿಕರ ಜೊತೆಗೆ ಸಂಪರ್ಕ ಪಡೆದದ್ದು.

ಕನ್ನಡ ವರ್ಣಮಾಲೆಗೆ ಕತ್ತರಿ ಹಾಕಲು ಶಂಕರ ಭಟ್ಟರು ತಾಂತ್ರಿಕ ಕಾರಣ ನೀಡುತ್ತಿಲ್ಲ. ವರ್ಗಭೇದ ನೀತಿಯನ್ನು ಅನುಸರಿಸುತ್ತಾರೆ. ಹೋಲಿಕೆಗಾಗಿ ಕೇವಲ ತಮಿಳು ಭಾಷೆಯನ್ನು ತೋರಿಸುತ್ತಿದ್ದಾರೆಯೆ ಹೊರತು, ತೆಲಗು ಭಾಷೆಯನ್ನು ತೋರಿಸುತ್ತಿಲ್ಲ. ಇದು hypocrisy ಅಲ್ಲವೆ?

ವಂಚನೆಯ ಜಾಲ:
ಶಂಕರ ಭಟ್ಟರು ಮುಂದುವರೆದು ಹೀಗೆ ಬರೆದಿದ್ದಾರೆ:
“ ಸಂಸ್ಕೃತ ಭಾಷೆಯ ಗ್ರಂಥಗಳನ್ನು ಬರೆಯುವದಕ್ಕಾಗಿ ತಮಿಳು ನಾಡಿನ ಸಂಸ್ಕೃತ ವಿದ್ವಾಂಸರು ಬೇರೆಯೇ ಒಂದು ಲಿಪಿಯನ್ನು ಬಳಕೆಗೆ ತಂದಿದ್ದರು. ಈ ಲಿಪಿಗೆ ‘ಗ್ರಂಥ ಲಿಪಿ’ (ಎಂದರೆ ಸಂಸ್ಕೃತ ‘ಗ್ರಂಥ’ಗಳನ್ನು ಬರೆಯಲು ಬಳಸುವ ಲಿಪಿ) ಎಂಬ ಹೆಸರಿದೆ. (ಪುಟ ೭೩).

ಇದರರ್ಥವೇನು? ತಮಿಳು ವಿದ್ವಾಂಸರು ಜನಸಾಮಾನ್ಯರನ್ನು ಸಂಸ್ಕೃತ ಜ್ಞಾನದಿಂದ ಶಾಶ್ವತವಾಗಿ ದೂರವಿಡುವದಕ್ಕಾಗಿಯೇ ಒಂದು ‘ಗ್ರಂಥಲಿಪಿ’ಯನ್ನು ರೂಪಿಸಿದ್ದರು ಎಂದಲ್ಲವೆ? ಆದರೆ, ಕನ್ನಡದಲ್ಲಿ ಇಂತಹ ವಂಚನೆ ಜರುಗಲಿಲ್ಲ. ಒಂದೇ ಸಾಮಾನ್ಯ ಲಿಪಿ ಇಲ್ಲಿ ಬಳಕೆಯಲ್ಲಿತ್ತು- -ಇದೆ. ಈ ಸಾಮಾನ್ಯ ಕನ್ನಡ ಲಿಪಿಯ ಸಾಮರ್ಥ್ಯ ಅದ್ಭುತವಾದದ್ದು. ಭಾರತದ ಎಲ್ಲ ಧ್ವನಿಗಳನ್ನೂ ಅದು ಲಿಪಿಸುವ ಸಾಮರ್ಥ್ಯ ಪಡೆದಿದೆ. ಅದಕ್ಕಾಗಿ ಕನ್ನಡಿಗರು ಹೆಮ್ಮೆ ಪಡಬೇಕು.

ಅಂತಹ ಕನ್ನಡ ಲಿಪಿಯನ್ನು incapacitate ಮಾಡುವ ಹುಮ್ಮಸ್ಸು ಏತಕ್ಕೆ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು. ‘ಕೆಳವರ್ಗ’ದವರೆಂದು ಯಾರನ್ನು ಶಂಕರಭಟ್ಟರು ಕರೆಯುತ್ತಿದ್ದಾರೊ ಅವರನ್ನು ಶಾಶ್ವತವಾಗಿ ಲಿಪಿಹೀನರನ್ನಾಗಿ ಮಾಡುವ ಹುನ್ನಾರವೆ ಇದು?