Monday, October 24, 2016

ಬಾರೊ ಸಾಧನಕೇರಿಗೆ.......................ಬೇಂದ್ರೆ



ಬಾರೊ ಸಾಧನಕೇರಿಗೆ |
            ಮರಳಿ ನಿನ್ನೀ ಊರಿಗೆ ||

            ಮಳೆಯು ಎಳೆಯುವ ತೇರಿಗೆ
            ಹಸಿರು ಏರಿದೆ ಏರಿಗೆ
            ಹಸಿರು ಸೇರಿದೆ ಊರಿಗೆ
            ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
            ನೋಟ ಸೇರದು ಯಾರಿಗೆ? || ಬಾರೊ….

            ಮಲೆಯ ಮೊಗವೇ ಹೊರಳಿದೆ
            ಕೋಕಿಲಕೆ ಸವಿ ಕೊರಳಿದೆ
            ಬೇಲಿಗೂ ಹೂಬೆರಳಿದೆ
            ನೆಲಕೆ ಹರೆಯವು ಮರಳಿದೆ
ಭೂಮಿತಾಯ್ ಒಡಮುರಿದು ಎದ್ದಳೊ
            ಶ್ರಾವಣದ ಸಿರಿ ಬರಲಿದೆ || ಬಾರೊ…

            ಮೋಡಗಳ ನೆರಳಾಟವು
            ಅಡವಿ ಹೂಗಳ ಕೂಟವು
            ಕೋಟಿ ಜೇನ್ನೊಣಕೂಟವು
            ಯಕ್ಷಿ ಮಾಡಿದ ಮಾಟವು
ನೋಡು ಬಾ ಗುಂಪಾಗಿ ಪಾತರ-
            ಗಿತ್ತಿ ಕುಣಿಯುವ ತೋಟವು || ಬಾರೊ…

            ಮರವು ಮುಗಿಲಿಗೆ ನೀಡಿದೆ
            ಗಿಡದ ಹೊದರೊಳು ಹಾಡಿದೆ
            ಗಾಳಿ ಎಲ್ಲೂ ಆಡಿದೆ
            ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
            ತೆರೆದ ನೋಟವ ನೋಡಿದೆ? || ಬಾರೊ…

………………………………………………………

ಬಾರೊ ಸಾಧನಕೇರಿಗೆ |
            ಮರಳಿ ನಿನ್ನೀ ಊರಿಗೆ ||

ಬೇಂದ್ರೆಯವರ ಬದುಕು ಬಹುಕಾಲದವರೆಗೆ ಸ್ಥಿರವಾದ ಬದುಕಾಗಿರಲಿಲ್ಲ. ಈ ಸಮಯದಲ್ಲಿ ಅವರು ಧಾರವಾಡವನ್ನು ನೆನೆಸಿಕೊಂಡು ಬರೆದ ಕವನಗಳು ಅನೇಕ. ‘ನಾವು ಹೋಗ್ತೇವಿನ್ನ ತಾಯಿ, ನಂ ನಮಸ್ಕಾರ ನಿಮಗ’ ಎನ್ನುವುದು ಅವರು ಧಾರವಾಡವನ್ನು ಬಿಟ್ಟು ಹೋಗುವಾಗ ಹಾಡಿದ ಕವನ. ‘ಮಲ್ಲಾಡದ ಗಿಣಿಯೆ ನೀ’ ಎನ್ನುವುದು ಧಾರವಾಡದ ವಿರಹದಲ್ಲಿ ಬರೆದ ಕವನ. ‘ಬಂದಿರುವೆನಿದೊ ತಾಯಿ, ಧಾರವಾಡದ ಮಾಯಿ, ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ’ ಎನ್ನುವುದು ಅವರು ಧಾರವಾಡಕ್ಕೆ ಮರಳಿದಾಗ ಹಾಡಿದ ಪದ. ‘ನಿನ್ನ  ಕಣ್ಣ-ಕಡೆಗೋಲಿಂದ ನನ್ನಹೃದಯ ಕಡೆಯೇ ತಾಯಿ’  ಎನ್ನುವುದು ಅವರ ಧಾರವಾಡದ ರಕ್ಷಕ ದೇವತೆಯಾದ ಕೋಟೆಯ ದುರ್ಗಾದೇವಿಗೆ ಸಲ್ಲಿಸಿದ ನಮನ.

ಪುಣೆಯಲ್ಲಿ ಇದ್ದಂತಹ ಬೇಂದ್ರೆಯವರ ಕಕ್ಕ ಬಂಡೋಪಂತ ಬೇಂದ್ರೆಯವರು ೧೯೨೯ರಲ್ಲಿ ಸಾಧನಕೇರಿಯಲ್ಲಿ ಒಂದು ಮನೆಯನ್ನು ಬೇಂದ್ರೆಯವರಿಗೆ ಉಡುಗೊರೆಯಾಗಿ ನೀಡಿದರು. ಇಡೀ ಧಾರವಾಡವೇ ಆಗ ಒಂದು ಕಾಡಿನಂತಿತ್ತು. ಊರಿನಿಂದ ದೂರವಿದ್ದ ಸಾಧನಕೇರಿಯಂತೂ ದಟ್ಟ ಕಾಡೇ ಸೈ! ಆದರೆ ಬೇಂದ್ರೆಯವರಿಗೆ ಈ ನಿಸರ್ಗರಮ್ಯ ನಿವಾಸ ಅನೇಕ ರೀತಿಗಳಲ್ಲಿ ಒಂದು ವರದಾನ! ಧಾರವಾಡಕ್ಕೆ ಮರಳಿ ಬರುವ ಸನ್ನಿವೇಶದಲ್ಲಿ ಬೇಂದ್ರೆ ‘ಬಾರೊ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ’  ಎನ್ನುವ ಗೀತೆಯನ್ನು ಹಾಡಿದ್ದಾರೆ.  ಮಳೆಯಲ್ಲಿ ನೆನೆಯುವ ಸಾಧನಕೇರಿಯನ್ನು ನೆನೆಸಿಕೊಳ್ಳುತ್ತಿರುವುದು ಈ ಗೀತೆಯ ವೈಶಿಷ್ಟ್ಯವಾಗಿದೆ.

ಬಾರೊ ಸಾಧನಕೇರಿಗೆ |
            ಮರಳಿ ನಿನ್ನೀ ಊರಿಗೆ ||
           
            ಮಳೆಯು ಎಳೆಯುವ ತೇರಿಗೆ
            ಹಸಿರು ಏರಿದೆ ಏರಿಗೆ
            ಹಸಿರು ಸೇರಿದೆ ಊರಿಗೆ
            ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
            ನೋಟ ಸೇರದು ಯಾರಿಗೆ? || ಬಾರೊ….

ಧಾರವಾಡವು ಮಲೆನಾಡ ಸೆರಗಿನಲ್ಲಿರುವ ಊರು. ಇಲ್ಲಿ ಉದ್ಭವಿಸುವ ಶಾಲ್ಮಲೆಯು ಮುಂದೆ ಸಾಗಿದಂತೆ ಬೇಡ್ತಿ ಹಾಗು ಗಂಗಾವಳಿ ಎನ್ನುವ ಹೊಸ ಹೆಸರುಗಳನ್ನು ಹೊತ್ತುಕೊಂಡು ಪಶ್ಚಿಮ ಸಮುದ್ರವನ್ನು ಸೇರುತ್ತಾಳೆ. ಇಲ್ಲಿಯ ಬೆಣ್ಣಿಹಳ್ಳವು ಪೂರ್ವಕ್ಕೆ ಸಾಗಿ ಮಲಪ್ರಭಾ ನದಿಯನ್ನು ಸೇರುತ್ತದೆ.
ಇಲ್ಲಿಯ ಮಳೆಯ ವರ್ಣನೆಯನ್ನು ಜಾನಪದ ಗೀತೆಯಲ್ಲಿ,--
‘ಧಾರವಾಡದ ಮ್ಯಾಗ, ಏರಿ ಬಂದಾವ ಮೋಡ
ದೊರೆಯೆ ನೋಡಪ್ಪ ಕಮಕಾಳ ಕಟ್ಟೀ ಮ್ಯಾಲೆ
ಭೋರ್ಯಾಡತಾನ ಮಳೆರಾಯ’
--ಎಂದು ಬಣ್ಣಿಸಲಾಗಿದೆ.

 ಬೇಂದ್ರೆಯವರಂತೂ ಶ್ರಾವಣಪ್ರಿಯರು. ಆದುದರಿಂದಲೇ ಈ ಕವನವು ಪ್ರಾರಂಭವಾಗುವುದು ‘ಮಳೆಯು ಎಳೆಯುವ ತೇರಿಗೆ’ ಎಂದು ಸಾಧನಕೇರಿಯನ್ನು ವರ್ಣಿಸುವ ಮೂಲಕ.

ಮತ್ತೊಂದು ವಿಷಯವನ್ನು ಗಮನಿಸಿರಿ. ತೇರು ಎನ್ನುವುದು ದೇವರ ರಥ. ಮಳೆಯು ದೈವದತ್ತವಾದದ್ದು. ಶ್ರಾವಣ ಮಾಸದಲ್ಲಿಯೇ ಶ್ರೀಕೃಷ್ಣ ಹಾಗು ಮಹರ್ಷಿ ಅರವಿಂದರು ಹುಟ್ಟಿದ್ದರಿಂದ, ಮಳೆಮಾಸದ ಬಗೆಗಿನ ಬೇಂದ್ರೆಯವರ ಪ್ರೀತಿಯಲ್ಲಿ ಭಕ್ತಿಯೂ ಬೆರೆತಿದೆ. ಆದುದರಿಂದ ಇಲ್ಲಿ ಮಳೆಯು ಎಳೆಯುತ್ತಿರುವ ರಥವು ಕೇವಲ ವಾಹನವಲ್ಲ; ಇದು ದೇವರ ‘ತೇರು’. (ತಮ್ಮಮತ್ತೊಂದು ಕವನದಲ್ಲಿ ಬೇಂದ್ರೆಯವರು ಮಳೆಯಲ್ಲಿ ತೊಯ್ದ ಬೆಟ್ಟಗಳನ್ನು ‘ಗುಡ್ಡ ಆಗ್ಯಾವ  ಸ್ಥಾವರಲಿಂಗ’ ಎಂದು ಬಣ್ಣಿಸಿದ್ದಾರೆ.) ಈ ಮಳೆಯು ಯಾವ ತೇರನ್ನು ಎಳೆಯುತ್ತಿದೆ ಎನ್ನುವದನ್ನು ಬೇಂದ್ರೆಯವರು ಹೇಳಿಲ್ಲ. ಆದರೆ ಅದು ಪ್ರಕೃತಿದೇವಿಯ ತೇರು ಎನ್ನುವುದು ಅಂತರ್ನಿಹಿತವಾಗಿದೆ. ಈ ತೇರು ಹಲಬಗೆಯ ಸಸ್ಯಸಂಕುಲದಿಂದ ಶೋಭಿತವಾಗಿದೆ. ಆದುದರಿಂದ ಕವನ ಪ್ರಾರಂಭವಾಗುವುದು ದೈವಿಕ ದರ್ಶನದೊಡನೆ!


ಧಾರವಾಡವು (ಆ ಕಾಲದಲ್ಲಿ) ಅನೇಕ ಮಡ್ಡಿಗಳಿಂದ,  ಕೊಳ್ಳಗಳಿಂದ ಕೂಡಿತ್ತು. ಆದುದರಿಂದ ಮಳೆಯು ಧಾರವಾಡಕ್ಕೆ ಢಿಕ್ಕಿ ಹೊಡೆದಾಗ, ಕಣ್ಣಿಗೆ ಮೊದಲು ಬೀಳುವುದು ಜನವಸತಿಯಿಂದ ದೂರದಲ್ಲಿರುವ ಏರಿಯ ಮೇಲಿರುವ ಹಸಿರು! ತನ್ನಂತರ ಸಿಗುವುದು ಕೆಳಭಾಗದಲ್ಲಿರುವ ಜನನಿಬಿಡ  ಊರು. ಆ ಊರಿನಲ್ಲಿಯೂ ಸಹ ಹಸಿರು ಸೇರಿಕೊಂಡಿದೆ. ಆ ಊರಿನ ದಾರಿಯ ಇಕ್ಕೆಲಗಳಲ್ಲಿ ಹಸಿರು ‘ಚಾಚಿಕೊಂಡಿದೆ’. (ಆ ಕಾಲದಲ್ಲಿ ಧಾರವಾಡದ ರಸ್ತೆಗಳೆಲ್ಲ ಮಣ್ಣು, ಕಲ್ಲುಗಳ ರಸ್ತೆಗಳಾಗಿದ್ದವು.)
ಆದುದರಿಂದ ಈ ವರ್ಣನೆಯಲ್ಲಿ ಕ್ರಮಬದ್ಧತೆ ಹಾಗು ವಾಸ್ತವ ಸಂಗತಿಗಳ ದಾಖಲಾತಿ ಇರುವುದು ಗಮನಾರ್ಹವಾಗಿದೆ. ಇದು ಬೇಂದ್ರೆಯವರ ಎಲ್ಲ ಕವನಗಳ ವೈಶಿಷ್ಟ್ಯವೂ ಆಗಿದೆ.

 ‘ಕವಿಗೇನ ಬೇಕ? ಹೂತ ಹುಣಸಿಮರ ಸಾಕ’ ಎಂದು ಹಾಡಿದ ಕವಿಗೆ, ಈ ಹಸಿರು ತುಂಬಿದ ನೋಟವು ಹೇಗೆ ಕಂಡಿರಬಹುದು? ಸ್ವರ್ಗಸದೃಶವಾಗಿಯೆ?....ಊಹೂಂ,  ಆ ನಂದನದ ಒಂದು ತುಣುಕೇ, ಕಳಚಿಕೊಂಡು ಧರೆಯ ಮೇಲೆ ಇಳಿದಿದೆ ಎಂದು ಬೇಂದ್ರೆಯವರಿಗೆ ಭಾಸವಾಗುತ್ತಿದೆ.

ಧಾರವಾಡದ ಭೌಗೋಲಿಕ ಪ್ರಾಕೃತಿಕತೆಯನ್ನು ವರ್ಣಿಸಿದ ಕವಿ ಇದೀಗ ಧಾರವಾಡದ ಜೀವಸಂಕುಲದ ಕಡೆಗೆ, ಈ ಜೀವಸಂಕುಲವನ್ನು ಹೊತ್ತ ಧರಿತ್ರಿಯ ಕಡೆಗೆ ತಮ್ಮ ಗಮನವನ್ನು ಹರಿಸುತ್ತಾರೆ. ಇಲ್ಲಿಯೂ ಸಹ ಮೊದಲು ಭೂವೈಶಿಷ್ಟ್ಯ, ಬಳಿಕ ಪಕ್ಷಿವೈಶಿಷ್ಟ್ಯ, ತನ್ನಂತರ ಸಸ್ಯವೈಶಿಷ್ಟ್ಯ ಇವು ವರ್ಣನೆಯ ಮಜಲುಗಳಾಗಿವೆ.

ಮಲೆಯ ಮೊಗವೇ ಹೊರಳಿದೆ
            ಕೋಕಿಲಕೆ ಸವಿ ಕೊರಳಿದೆ
            ಬೇಲಿಗೂ ಹೂಬೆರಳಿದೆ
            ನೆಲಕೆ ಹರೆಯವು ಮರಳಿದೆ
ಭೂಮಿತಾಯ್ ಒಡಮುರಿದು ಎದ್ದಳೊ
            ಶ್ರಾವಣದ ಸಿರಿ ಬರಲಿದೆ || ಬಾರೊ…

ಧಾರವಾಡವು ಪಶ್ಚಿಮಘಟ್ಟಗಳ ಕೊನೆಯಲ್ಲಿದೆ. ಆದುದರಿಂದ ಇಲ್ಲಿ ‘ಮಲೆಯಮೊಗವೇ ಹೊರಳಿದೆ.’ ಇನ್ನು ಧಾರವಾಡವು ಯಾವ ಕಾಲದಲ್ಲೂ ಮಾವಿನ ಕಾಡುಗಳ ನೆಲೆಯಾಗಿತ್ತು. ಇಂತಹ ಮಾವಿನ ಕಾಡುಗಳಲ್ಲಿ ಕೋಗಿಲೆಗಳಿಗೇನು ಕೊರತೆ? ಅವುಗಳ ಇಂಚರಕ್ಕೇನು ಕೊರತೆ?

ಪಂಪನು ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್, ಬನವಾಸಿ ದೇಶದೊಳ್’ ಎಂದು ಹಾಡಿದ್ದಾನೆ. ಕನ್ನಡಕವಿಪರಂಪರೆಯ ಬೇಂದ್ರೆಯವರೂ ಸಹ ಕೋಗಿಲೆಯನ್ನು ‘ಸವಿ ಕೊರಳಿನ’ ಕೋಗಿಲೆ ಎಂದು ಮುದ್ದಿಸುವುದರಲ್ಲಿ ಆಶ್ಚರ್ಯವಿಲ್ಲ. ಈ ಕೋಗಿಲೆಗಳು ಚೈತ್ರಮಾಸದಲ್ಲಿ ಕುಕಿಲುವಂತಹ ಹಕ್ಕಿಗಳು, ಅಂದರೆ ಶ್ರಾವಣ ಮಾಸದ ಪೂರ್ವಭಾವಿ ಹರಿಕಾರರು. ನಿಸರ್ಗದ ಎಲ್ಲ ಹಕ್ಕಿಗಳ ಪ್ರತಿನಿಧಿಯಾಗಿ ಕೋಗಿಲೆಯು ಇಲ್ಲಿ ಮೂಡಿ ಬಂದಿದೆ.

ಹಾಡುವ ಹಕ್ಕಿಗಳಷ್ಟೇ ಬೇಂದ್ರೆಯವರಿಗೆ ಪ್ರಿಯವೇನು?  ಮಾತಿಲ್ಲದೆ ನಿಸರ್ಗಕ್ಕೆ ಶೋಭೆಯನ್ನು ತರುವ ಸಸ್ಯಸಂಕುಲವೂ ಅವರಿಗೆ ಇಷ್ಟವಾದದ್ದೇ.  ಮನೆಯ ಸುತ್ತಲಿನ ಸಾದಾ ಬಳ್ಳಿಯ ಬೇಲಿಯನ್ನು ಅವರು ಕಾಣುವ ಬಗೆ ಹೇಗೆ? ‘ಬೇಲಿಗೂ ಹೂಬೆರಳಿದೆ !’
(ಆ ಕಾಲದಲ್ಲಿ ಬಹಳಷ್ಟು ಮನೆಗಳ ಸುತ್ತಲೂ ಇಟ್ಟಂಗಿಯ ಆವರಣದ ಬದಲು ಬಳ್ಳಿಗಳ ಬೇಲಿಗಳು, ವಿಶೇಷತಃ, tubular ಹೂವುಗಳ ಬಳ್ಳಿಗಳು ಇರುತ್ತಿದ್ದವು. ಆದುದರಿಂದ ಇಲ್ಲಿ documentation ಸಹ ಇದೆ.)

ಬೇಲಿಯು ಮನೆಯ ಕಾವಲುಗಾರ. ಇದರ ಕೆಲಸವೆಂದರೆ ಮನೆಯನ್ನು ಕಾಯುವುದು,  ಒಳನುಗ್ಗುವ ಆಕ್ರಮಣಕಾರಿಗಳನ್ನು ಹೊರಗಿಡುವುದು. ಆದುದರಿಂದಲೇ ಬೇಲಿಗೆ ಮುಳ್ಳುಗಳು ಇರುತ್ತವೆ.  The job of the fence is defense , sometimes with thorny offense; ಆದರೆ ಇಲ್ಲಿ ನಾವು ನೋಡುತ್ತಿರುವುದು reception with mense! ಧಾರವಾಡದಲ್ಲಿಯ  ಬೇಲಿಗಳು ತಮ್ಮ ಹೂಬೆರಳುಗಳಿಂದ ನಿಮ್ಮನ್ನು ಸ್ವಾಗತಿಸುತ್ತಿವೆ, ಸ್ವಾಗತಕಾರಿಣಿಯಂತೆ! ಅರ್ಥಾತ್, ಇಲ್ಲಿಯ ನಿವಾಸಿಗಳು ಸಹೃದಯರು, ಅತಿಥಿಸತ್ಕಾರಪ್ರಿಯರು ಎಂದು ಬೇಂದ್ರೆ ಹೇಳುತ್ತಿದ್ದಾರೆ.  ಅರ್ಥಾಂತರ ಅಲಂಕಾರಕ್ಕೆ ಇದೊಂದು ಸುಂದರ ಉದಾಹರಣೆಯಾಗಿದೆ.

ಶಿಶಿರಋತುವಿನಲ್ಲಿ  ಯೋಗನಿದ್ರೆಯಲ್ಲಿ ಲೀನಳಾದ ಭೂತಾಯಿಯು, ಶ್ರಾವಣಮಾಸದ ಆಗಮನದಿಂದ ಎಚ್ಚತ್ತುಕೊಳ್ಳುತ್ತಾಳೆ, ಮತ್ತೆ ಹರೆಯದವಳಾಗುತ್ತಾಳೆ. ಅವಳ ಮೈಕೈಯು ಹಸಿರಿನಿಂದ ತುಂಬಿಕೊಳ್ಳುತ್ತದೆ.   ಜಾಗ್ರತಿಗೆ ಮರಳಿದ ಅವಳು, ಈಗ ಮೈಕೈಗಳನ್ನು ಝಾಡಿಸಿಕೊಂಡು ಉತ್ಸಾಹದಿಂದ, ಉಲ್ಲಾಸದಿಂದ ಎದ್ದೇಳುತ್ತಾಳೆ. ಇದು ಸಮೃದ್ಧ ಶ್ರಾವಣದ ಆಗಮನದ ಸೂಚಕವಾಗಿದೆ. ಇಂತಹ ಧಾರವಾಡದ ಮಳೆಗಾಲವನ್ನು ಅನುಭವಿಸಲು ಬೇಂದ್ರೆ ‘ಬಾರೊ ಸಾಧನಕೇರಿಗೆ’ ಎಂದು ಕರೆಯುತ್ತಾರೆ. ಬೇಂದ್ರೆಯವರು ಯಾರನ್ನು ಕರೆಯುತ್ತಿದ್ದಾರೆ? ‘ಮರಳಿ ನಿನ್ನೀ ಊರಿಗೆ’ ಎನ್ನುವ ಉದ್ಗಾರವು ಅವರು ತಮ್ಮನ್ನೇ ಕರೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ‘ಶ್ರಾವಣದ ಸಿರಿ ಬರಲಿದೆ’ ಎನ್ನುವ ಅವರ ಉದ್ಗಾರವು ಸಮೃದ್ಧವಾದ ವರ್ಷಾಕಾಲದ ಹರ್ಷಕ್ಕಾಗಿ ಅವರು ಉತ್ಸುಕತೆಯಿಂದ ಕಾಯುತ್ತಿರುವದನ್ನು ಸೂಚಿಸುತ್ತದೆ. (ತಮ್ಮ ಮತ್ತೊಂದು ಕವನದಲ್ಲಿ ಬೇಂದ್ರೆಯವರು ಮಳೆಗಾಲದ ಭೂಮಿತಾಯಿಯನ್ನು  ‘ಹೂವ ಹಡಲಿಗೆಯನು ಹೊತ್ತ / ಭೂಮಿತಾಯಿ ಜೋಗಿತಿ’ಎಂದು ಕರೆದಿದ್ದಾರೆ. ಬೇಂದ್ರೆಯವರ ಪಾಲಿಗೆ ಭೂತಾಯಿ ಕೇವಲ ಕಲ್ಲು ಮಣ್ಣಲ್ಲ; ಅವಳು ಸಜೀವ ದೇವಿ. ಆದುದರಿಂದಲೇ  ‘ಭೂಮಿತಾಯ್ ಒಡಮುರಿದು ಎದ್ದಳೊ’ ಎನ್ನುವುದು ಅವರು ಅಂತಃಕರಣದಲ್ಲಿ ಕಂಡ ದರ್ಶನವಾಗಿದೆ.)


ಮೋಡಗಳ ನೆರಳಾಟವು
            ಅಡವಿ ಹೂಗಳ ಕೂಟವು
            ಕೋಟಿ ಜೇನ್ನೊಣಕೂಟವು
            ಯಕ್ಷಿ ಮಾಡಿದ ಮಾಟವು
ನೋಡು ಬಾ ಗುಂಪಾಗಿ ಪಾತರ-
            ಗಿತ್ತಿ ಕುಣಿಯುವ ತೋಟವು || ಬಾರೊ…

ಮಳೆಗಾಲದ ಪರಿಸರದಲ್ಲಿ ಬೇಂದ್ರೆ ಒಬ್ಬ ಹುಡುಗನಂತೆ ಆಗಿದ್ದಾರೆ. ನಿಸರ್ಗದ ಪ್ರತಿಯೊಂದು ಮುಖವೂ ಅವರಲ್ಲಿ ಉಲ್ಲಾಸವನ್ನು ಹುಟ್ಟಿಸುತ್ತಿದೆ. ಆಗಸದಲ್ಲಿಯ ಮೋಡಗಳು ಸೂರ್ಯನ ಕೆಳಗೆ ಸರಿದು ಹೋಗುವಾಗ ಭೂಮಿಯ ಮೇಲೆ ಕಾಣುವ ಬಿಸಿಲು-ನೆರಳಿನ ಆಟ, ಎಲ್ಲೆಡೆಯೂ ಬಣ್ಣಬಣ್ಣಗಳನ್ನು ತುಂಬಿದ, ಹೆಸರಿಲ್ಲದ ನೂರಾರು ಹೂವುಗಳು, ಈ ಹೂವುಗಳನ್ನು ಮುತ್ತಿಕ್ಕುವ ಬಗೆಬಗೆಯ ಚಿಟ್ಟೆಗಳು ಹಾಗು ಜೇನ್ನೊಣಗಳು ಇವೆಲ್ಲ ಸೇರಿ, ಒಂದು ರಮ್ಯವಾದ ಯಕ್ಷಲೋಕವನ್ನು ಸೃಷ್ಟಿಸಿವೆ. ಮಾಟ ಅಂದರೆ ಜಾದೂ. ಈ ನಿಸರ್ಗರಮ್ಯತೆಯು ಯಾರೋ ಒಬ್ಬ ಯಕ್ಷಿಯು ಮಾಡಿದ ಜಾದೂದಂತೆ ಭಾಸವಾಗುತ್ತಿದೆ. ಮಳೆಯನ್ನು ನೀಡುವ ಆಕಾಶ ಹಾಗು ಜೀವಸಂಕುಲವನ್ನು ಸೃಷ್ಟಿಸುವ ಭೂಮಿ ಇವೆರಡೂ ಒಟ್ಟಾಗಿ ನಿರ್ಮಿಸುತ್ತಿರುವ ಮಾಯಾಲೋಕವಿದು.

(ಪಾತರಗಿತ್ತಿಗಳ ಬಗೆಗೆ ಬೇಂದ್ರೆಯವರಿಗೆ ಬಾಲಮೋಹವಿದೆ. ಆದುದರಿಂದಲೇ ಅವರು ‘ಪಾತರಗಿತ್ತೀ ಪಕ್ಕಾ / ನೋಡೀದೇನs ಅಕ್ಕಾ!’ ಎಂದು ತಮ್ಮ ಅಕ್ಕನನ್ನು ಬೆರಗಿನಿಂದ ಕರೆಯಲು ಸಾಧ್ಯವಾಯಿತು. ಆದರೆ, ಬಾಲಮೋಹದ ಈ ವ್ಯಕ್ತಿಯಲ್ಲಿ ಅಸಾಮಾನ್ಯ ಕಲ್ಪನಾಸಾಮರ್ಥ್ಯದ ಕವಿಯೊಬ್ಬ ಹುದುಗಿಕೊಂಡಿದ್ದಾನೆ. ಆದುದರಿಂದಲೇ ‘ಪಾತರಗಿತ್ತೀ ಪಕ್ಕಾ’ ಅವರ ಅಪ್ರತಿಮ ದೀರ್ಘ ಕವನಗಳಲ್ಲಿ ಒಂದಾಗಿದೆ.)

ಮರವು ಮುಗಿಲಿಗೆ ನೀಡಿದೆ
            ಗಿಡದ ಹೊದರೊಳು ಹಾಡಿದೆ
            ಗಾಳಿ ಎಲ್ಲೂ ಆಡಿದೆ
            ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
            ತೆರೆದ ನೋಟವ ನೋಡಿದೆ? || ಬಾರೊ…

ಬೇಂದ್ರೆಯವರ ಕಾಲದಲ್ಲಿ ಧಾರವಾಡವು (ವಿಶೇಷತಃ ಸಾಧನಕೇರಿ, ವಿಶ್ವವಿದ್ಯಾಲಯ ಮೊದಲಾದ ದೂರದೂರದ ಪ್ರದೇಶವು) ಕಾಡಿನಿಂದ ತುಂಬಿತ್ತು. ಬೂರಲ ಮರ, ಅತ್ತಿ ಮರ, ಆಲದ ಮರ ಮೊದಲಾದ ಎತ್ತರದ ಮರಗಳು ತಮ್ಮ ಅಸಂಖ್ಯ ಶಾಖೆಗಳಿಂದ ಮುಗಿಲಿಗೆ ಕೈ ನೀಡಿದಂತೆ ಕಾಣುತ್ತಿದ್ದವು. ಈ ಗಿಡಗಳ ಹೊದರುಗಳಲ್ಲಿ ಹಕ್ಕಿಗಳು ಮನೆ ಮಾಡಿಕೊಂಡಿರುತ್ತಿದ್ದವು. ಮೊನ್ನೆ ಮೊನ್ನೆಯವರೆಗೂ, ಧಾರವಾಡದ ಮಧ್ಯಭಾಗದಲ್ಲಿರುವ ಪೋಲೀಸ ಠಾಣೆಯ ಪಕ್ಕದಲ್ಲಿರುವ ವಿಶಾಲವಾದ ಮರವೊಂದರಲ್ಲಿ ಮನೆ ಮಾಡಿಕೊಂಡಿದ್ದ ನೂರಾರು ಹಕ್ಕಿಗಳು ಸಂಜೆಯಾದೊಡನೆ ಕಲರವವನ್ನು ಎಬ್ಬಿಸುತ್ತಿದ್ದವು. ಈ ಚಿಲಿಪಿಲಿ ಹಾಗು ಈ ಶಾಖೆಗಳ ನಡುವಿನಿಂದ ಬೀಸುವ ತಂಗಾಳಿಯು ಪೇಟೆಯ ಮಧ್ಯದಲ್ಲಿ ಓಡಾಡುವ ಜನರಲ್ಲಿ ಖುಶಿಯನ್ನು ತುಂಬುತ್ತಿತ್ತು. ಪ್ರಕೃತಿಯೊಡನೆ ಒಂದಾದ ಜನರ ಚಿಂತೆಗಳು ದೂರವಾಗಿ ಅವರು ಸಂತಸವನ್ನು ತಾಳುತ್ತಿದ್ದರು.  ಆದುದರಿಂದಲೇ ಬೇಂದ್ರೆಯವರು ಕೇಳುತ್ತಾರೆ: ಇಂತಹ ನೋಟವನ್ನು ಬೇರೆಲ್ಲಾದರೂ ಕಾಣಲು ಸಾಧ್ಯವೆ?
ಈ  ಆನಂದದ ಅನುಭವಕ್ಕಾಗಿ ಒಂದೇ ಒಂದು ಮಾರ್ಗವಿದೆ. ಅದೆಂದರೆ:
ಬಾರೊ  ಸಾಧನಕೇರಿಗೆ,
          ಮರಳಿ ನಿನ್ನೀ ಊರಿಗೆ!

Monday, October 10, 2016

ಸೀಮೋಲ್ಲಂಘನ............................ಬೇಂದ್ರೆ


ಹೋಗೋಣ ಬಾ ! ಇನ್ನು ಸೀಮೆಯನು ದಾಟಿ !!

ಪಂಗಡವ ಪಂಗಡವ ವಿಂಗಡಿಸಿ ಕೆಟ್ಟು
ಸಂಗಡಿಸಿ ಕೂಡಿರುವ ಬಾಳುವೆಯ ಗುಟ್ಟು
ಕಂಗೊಳಿಸೆ ಹಾಗಿರುವ ಬಿರುದನ್ನು ತೊಟ್ಟು
ಹೋಗೋಣ ಬಾ ಇನ್ನು ಸೀಮೆಯನು ದಾಟಿ.

ಇಲ್ಲಸಲ್ಲದ ಕಾಲತೊಡರುಗಳ ಕಡಿದು
ಬಲ್ಲವರು ತೋರಿರುವ ಹಾದಿಯನು ಹಿಡಿದು
ಎಲ್ಲರೂ ಒಂದಾಗಿ ಒಂದಾಗಿ ನಡೆದು
ಹೋಗೋಣ ನಾವೆಲ್ಲ ಸೀಮೆಯನು ದಾಟಿ.

ಅಕ್ಕತಂಗೆಂದರಿಗೆಲ್ಲ ವಿದ್ಯೆಯನು ಕಲಿಸಿ
ಚಿಕ್ಕಮಕ್ಕಳ ಬುದ್ಧಿ ಮುದ್ದಾಡಿ ಬಲಿಸಿ
ನಕ್ಕು ನಲಿದಾಡಿ ಹಿರಿಕಿರಿಯರನು ಒಲಿಸಿ
ಅಡಿಗಡಿಗೆ ಹೋಗೋಣ ಸೀಮೆಯನು ದಾಟಿ.

ಮಾಡಿದರೆ ನನ್ನಿ ತಾ ಮಾಡುವರು ನನ್ನಿ
ನೋಡಿ ನೋಡಿದವರ್ಗೆ ಬನ್ನಿ ಬನ್ನೆನ್ನಿ
ಕೊಡಬನ್ನಿ-ಕೊಳಬನ್ನಿ-ಕೊಡುವೆನೀ ಬನ್ನಿ
ಹೀಗೆಂದು ಸಾಗೋಣ ಸೀಮೆಯನು ದಾಟಿ.

ಹಿಂದಿರುವ ಹಗೆಯೀಗ ಅಂಗಾರವಾಯ್ತು
ಮುಂದಿರುವ ಗೆಳೆತನವೆ ಸಿಂಗಾರವಾಯ್ತು
ಇಂದು ಮುಟ್ಟಿದ ಪತ್ರಿ ಬಂಗಾರವಾಯ್ತು
ಹೋಗೋಣ ಬಾ ಇನ್ನು ಸೀಮೆಯನು ದಾಟಿ.

ಒಂದೆ ತಾಯಿಯ ಮಕ್ಕಳಂತೆ ಒಂದಾಗಿ
ಅಂದಗೇಡನು ಕೆಡಿಸಿ ಚೆಲುವು ಚೆಂದಾಗಿ
ಮುಂದಿರುವ ಜನರ ಸರಿಮೇಲು ಮುಂದಾಗಿ
ಸಾಗೋಣ ಹೋಗೋಣ ಸೀಮೆಯನು ದಾಟಿ.

ಹೋಗಲಾಡಿಸಿಕೊಂಡು ತಿರುಕತನವನ್ನು
ನೀಗಲಾಡಿಸುತ ಮನೆಮುರುಕತನವನ್ನು
ಬೇಗದಿಂ ಕರುನಾಡ ಹರುಕತನವನ್ನು
ಕಳೆದು ಹಿರಿದಾಗೋಣ ಸೀಮೆಯನು ದಾಟಿ.

ಪಡುವಣದ ಶಕ್ತಿಯಲಿ ಮೂಡಣದ ಭಕ್ತಿ
ಬಡಗಣದ ಭುಕ್ತಿಯಲಿ ತೆಂಕಣದ ಮುಕ್ತಿ
ಒಡನೊಡನೆ ನೆರೆಬೆರೆತು ಹೊಸತಾಯ್ತು ಯುಕ್ತಿ
ಹೀಗೆ ಇಡಿಯಾಗೋಣ ಸೀಮೆಯನು ದಾಟಿ.

ದೇವಿಯರ ನಾಡೆಂತು ಹಿಂದುಳಿಯಬಹುದು?
ಭಾವಭಕ್ತಿಯವೆಂತು ಹಗೆಯಾಗಲಹುದು?
ಹೇವದಿಂ ಗುರಿಯಿಟ್ಟು ಮೇಳ ಹೊರಟಿಹುದು
ಏರಿಕೆಯ ಕರಿನಾಡ ಸೀಮೆಯನು ದಾಟಿ.
********************************************

ವಿಜಯದಶಮಿಯಂದು ಬೇಂದ್ರೆಯವರು ‘ಸೀಮೋಲ್ಲಂಘನ’ದ ಕರೆ ನೀಡಿದ್ದಾರೆ. ಅವರ ಸೀಮೋಲ್ಲಂಘನವು ನಮ್ಮನ್ನೇ ನಾವು ಗೆಲ್ಲಿಕೊಳ್ಳುವ ಪರಾಕ್ರಮದಲ್ಲಿದೆಯೇ ಹೊರತು, ಪರರ ಆಕ್ರಮಣದಲ್ಲಿಲ್ಲ. ಈ ಕವನ ‘ಗರಿ’ ಸಂಕಲನದಲ್ಲಿದೆ. ಗರಿ ಮೊದಲು ಪ್ರಕಟವಾಗಿದ್ದು ೧೯೩೨ರಲ್ಲಿ. ಆಗಿನ್ನೂ ಕರ್ನಾಟಕದ ಏಕೀಕರಣ ಕನಸಿನ ಮಾತಾಗಿತ್ತು. ಆ ಕನಸು ಈ ಕವನದಲ್ಲೂ ಬಿಂಬಿಸಿದೆ. ಕರುನಾಡ ಏಳ್ಗೆಯನ್ನು ಈ ಕವನ ಕಾಣುತ್ತಿದೆ. 

ಬೇಂದ್ರೆಯವರ ಅಪಾರ ಕಲ್ಪನಾಪ್ರತಿಭೆಯು, ಪದಸಾಮರ್ಥ್ಯವು ಎಲ್ಲ ಸೀಮೆಗಳನ್ನು ದಾಟಿರುವುದನ್ನು ನಾವು ಈ ದೀರ್ಘ ಕವನದಲ್ಲಿ ನೋಡಬಹುದು.

ವಿಜಯದಶಮಿಯ ದಿನ ಬೇಂದ್ರೆಯವರ ಜೊತೆಜೊತೆಗೇ ನಾವೂ ಸಹ ಉಗ್ಗಡಿಸೋಣ, ಬನ್ನಿ : 

ಕೊಡಬನ್ನಿ-ಕೊಳಬನ್ನಿ-ಕೊಡುವೆನೀ ಬನ್ನಿ
ಹೀಗೆಂದು ಸಾಗೋಣ ಸೀಮೆಯನು ದಾಟಿ.

Saturday, September 17, 2016

ಬೇಂದ್ರೆ ಕನಸು-ಕಾವ್ಯ



  Bliss was it in that dawn to be alive,
          But to be young was very heaven!
                  -ವಿಲಿಯಮ್ ವರ್ಡ್ಸವರ್ಥ (ಫ್ರೆಂಚ ರಾಜ್ಯಕ್ರಾಂತಿಯ ಬಗೆಗೆ)

ಬೇಂದ್ರೆಯವರ ತಾರುಣ್ಯದ ಕಾಲವು ರಾಷ್ಟ್ರೀಯ ನವೋದಯದ ಕಾಲವಾಗಿತ್ತು. ಕನ್ನಡ ತರುಣರಿಗೆ ಒಂದೆಡೆ ಸ್ವಾತಂತ್ರ್ಯಸಮರದಲ್ಲಿ ಧುಮುಕುವ ಹುಮ್ಮಸ್ಸು, ಇನ್ನೊಂದೆಡೆ ಕನ್ನಡತಾಯಿಯ ಸೇವೆಯ ಹಂಬಲ, ಮಗುದೊಂದೆಡೆಗೆ ಆಧ್ಯಾತ್ಮದ ಒಲವು. ಬೇಂದ್ರೆಯವರ ಕಾವ್ಯದಲ್ಲಿ ಈ ಎಲ್ಲ ಆದರ್ಶಗಳ ಕನಸುಗಳನ್ನು ನೋಡಬಹುದು. ಅವರ ‘ನರಬಲಿ’ ಕವನವಂತೂ ಅವರನ್ನು ಸೆರೆಮನೆಗೆ ಅಟ್ಟಿತು. ಮೇಲಾಗಿ ಅವರಿಗೆ ಆರು ವರ್ಷಗಳವರೆಗೆ ನೌಕರಿ ಕೊಡಕೂಡದೆನ್ನುವ ಸರಕಾರೀ ಕಟ್ಟಾಜ್ಞೆ ಬೇರೆ. ಈ ಸಂಕಟಗಳಲ್ಲಿ ಬೇಂದ್ರೆ ಬೆಂದರು, ಬೇಂದ್ರೆಕಾವ್ಯವು ರಸಪಾಕವಾಯಿತು.

ನವೋದಯ ಕಾಲದಲ್ಲಿ ಬೇಂದ್ರೆಯವರು ದೇಶಪ್ರೇಮದ ಹಾಗು ಕನ್ನಡಸೇವೆಯ ಕನಸುಗಳನ್ನು ಕಂಡರು. ಅನೇಕ ಸಲ ಇವು ಅವರು ನಿಜವಾಗಿಯೂ ಕಂಡ ಕನಸುಗಳೇ ಆಗಿರುವುದು ವರಕವಿಯ ವೈಶಿಷ್ಟ್ಯವಾಗಿದೆ. ಅವರ ಆಧ್ಯಾತ್ಮಸಾಧನೆಯೂ ಸಹ ಈ ಕನಸುಗಳಲ್ಲಿ ಪ್ರತಿಬಿಂಬಿತವಾಗಿದೆ. 

ಇದರಲ್ಲಿ ಅಚ್ಚರಿಪಡುವಂತಹದೇನೂ ಇಲ್ಲ. ಮಾನವಜೀವಿಯ ನಿದ್ರಾವಸ್ಥೆಯನ್ನು ವಿಜ್ಞಾನಿಗಳು ಲಘುನಿದ್ರಾವಸ್ಥೆ , ಗಾಢ ನಿದ್ರಾವಸ್ಥೆ ಹಾಗು ಮತ್ತೊಮ್ಮೆ  ಲಘುನಿದ್ರಾವಸ್ಥೆ ಎಂದು ಮೂರು ಭಾಗಗಳಲ್ಲಿ ವಿಭಜಿಸಿದ್ದಾರೆ. ಗಾಢನಿದ್ರಾವಸ್ಥೆಯ ನಂತರದ ಲಘುನಿದ್ರಾವಸ್ಥೆಯಲ್ಲಿ ಮಾನವಜೀವಿಯು ಎಚ್ಚರಕ್ಕೆ ಹತ್ತಿರವಾಗಿ ಇರುವದರಿಂದ,ಆ ಅವಧಿಯ ಕನಸುಗಳು ಅವನ ನೆನಪಿನಲ್ಲಿ ಉಳಿಯುವುದು ಸಹಜವಾಗಿದೆ. ಈ ಸ್ಥಿತಿಯಲ್ಲಿ ಸಾಧಕನು ತನ್ನ ಆದರ್ಶಗಳ ಹಾಗು ಸಾಧನೆಯ ಕನಸುಗಳನ್ನು ಕಾಣಬಹುದು ಮತ್ತು ಕವಿಯು ತನ್ನ ಕಾವ್ಯರಚನೆಯ ಹೊಳಹುಗಳನ್ನು ಕಾಣಬಹುದು.

ಕಾವ್ಯರೂಪವನ್ನು ಪಡೆದ ಬೇಂದ್ರೆಯವರ ಇಂತಹ ಕನಸುಗಳಲ್ಲಿ ಕೆಲವನ್ನು ನಾವು ಇಲ್ಲಿ ಗಮನಿಸಬಹುದು:
(೧) ತೇಲಾಡುವಾಗ (‘ಗಂಗಾವತರಣ’ ಕವನಸಂಕಲನ, ಪುಟ೧೬)
(೨) ಕನಸಿನ ಕಥೆ (‘ಗಂಗಾವತರಣ’ ಕವನಸಂಕಲನ, ಪುಟ೨೫)
(೩) ಬಾ ಕೈ ತಾ ( ‘ಸಖೀಗೀತ’ ಕವನಸಂಕಲನ..ಪುಟ ೫೬ )
(೪) ಏಳು ಕನ್ನಿಕೆಯರು ( ‘ನಾದಲೀಲೆ’ ಕವನಸಂಕಲನ.. ಪುಟ೬)


(೧) ತೇಲಾಡುವಾಗ:
ನಿದ್ರಾವಸ್ಥೆಯ ಕೊನೆಯ ಭಾಗದ ಅಂದರೆ REM (Rapid Eye Movement = ತೀವ್ರ ಅಕ್ಷಿ ಸಂಚಲನ) ಅವಧಿಯ ಸ್ಥಿತಿಯನ್ನು ಬೇಂದ್ರೆ ತಮ್ಮ‘ತೇಲಾಡುವಾಗ’ ಕವನದಲ್ಲಿ ಈ ರೀತಿಯಾಗಿ ಅನುಭವಿಸಿದ್ದಾರೆ:

“ ತೇಲಾಡುವಾಗ ಮನಸು
            ಮೇಲಾಡತಾವ ಕನಸು
   ತಾಕಾಡುವಾಗ ಇತ್ತ
            ತೇಕಾಡತಾವ ಚಿತ್ತ ”         

(ಮನಸ್ಸು ಕೆಳಪಾತಳಿಯಿಂದ ಮೇಲ್‍ಪಾತಳಿಗೆ ಸರಿದಾಗ, ಕನಸುಗಳು ಮೇಲಾಡುತ್ತವೆ ಎನ್ನುವುದು ಮನೋವೈಜ್ಞಾನಿಕ ವಾಸ್ತವವಾಗಿರುವದನ್ನು ಗಮನಿಸಿರಿ.) ಇಂತಹ ತಮ್ಮ ಕನಸುಗಳಲ್ಲಿ ಬೇಂದ್ರೆಯವರು ಕವನಗಳನ್ನು ‘ಕಾಣು’ತ್ತಾರೆ. ಎಚ್ಚರಕ್ಕೆ ಬಂದಾಗ ಈ ಕವನಗಳ ಕೆಲಭಾಗವಾದರೂ ಅವರಿಗೆ ಲಭ್ಯವಾಗುತ್ತದೆ. ಅದನ್ನು ಅವರು ಹೇಳುವುದು ಹೀಗೆ:

ಹಾಸಾದ ಮಿಂಚಿನಂದ
         ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
         ಉಳಿದಾವ ನಾಕು ಸಾಲು

ಎಚ್ಚರದಲ್ಲಿಯ ಚಿಂತೆಗೆ ಹಾಗು ಚಿಂತನೆಗೆ ಬೆಳಗಿನ ಜಾವದ ಕನಸುಗಳಲ್ಲಿ ಉತ್ತರ ಸಿಗುವುದು ಅನೇಕರಿಗೆ ಲಭಿಸಿದ ಅನುಭವವಾಗಿರಬಹುದು. ಇದರಲ್ಲಿ ವಿಶೇಷವೇನೂ ಇಲ್ಲ. (ಶಾಂತ ಅವಸ್ಥೆಯಲ್ಲಿ ಹಾಗು ಧ್ಯಾನಾವಸ್ಥೆಯಲ್ಲಿ ಮಿದುಳಿನ ಕೆಲ ಆವರ್ತಗಳ ಕಂಪನವು ತೀವ್ರವಾಗುವುದರಿಂದ ಆ ಭಾಗದ ಮಿದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ.) ಇಂತಹ ಸಮಯದಲ್ಲಿ ವರಕವಿಗೆ ವರಕಾವ್ಯವೇ ಸ್ಫುರಿಸುವುದು ಸ್ವಾಭಾವಿಕವೇ ಆಗಿದೆ. 

‘ತೇಲಾಡುವಾಗ’ ಕವನದಲ್ಲಿ ಕಂಡು ಬರುವ ಮತ್ತೊಂದು ಅಂಶ ಹೀಗಿದೆ:
ಬೇಂದ್ರೆಯವರು ತಮ್ಮ ಕವನಗಳಲ್ಲಿ ಬಳಸುವ ಪದಗಳು ಸಾಮಾನ್ಯ ಆಡುನುಡಿಯ ಪದಗಳೇ ಆಗಿರುತ್ತವೆ, ಆದರೆ ಅಲ್ಲಿ ಹುಟ್ಟುವ ಕವನಗಳು ಅಸಾಮಾನ್ಯವಾಗಿರುತ್ತವೆ. ಇದಕ್ಕೆ ನಿದರ್ಶನವಾಗಿ ಮೇಲಿನ ನುಡಿಯನ್ನೇ ನೋಡೋಣ. ಹಾಸಾದ ಮಿಂಚು ಅಂದರೆ ವಿಸ್ತಾರವಾದ ಮಿಂಚು. ಈ ಮಿಂಚಿನ ಹರಹಿಗೆ ಮಿತಿ ಇಲ್ಲ. ಆದರೆ ಇದು ಮಿಂಚಾಗಿರುವುದರಿಂದ  ನಮಗೆ ಇದರ ನೋಟ ಸಿಗುವುದು ಕ್ಷಣಕಾಲ ಮಾತ್ರ.
(ಟಿಪ್ಪಣಿ: ನೆಯ್ಗೆಯಲ್ಲಿ ಬರುವ ‘ಹಾಸು’ ಹಾಗು ‘ಹೊಕ್ಕು’ ಎನ್ನುವ ಪದಗಳನ್ನು ಗಮನಿಸಿರಿ. ಮಿಂಚೇ ಇಲ್ಲಿ ‘ಹಾಸು’ ಆಗಿದೆ.)

ಈ ಸೆರಗಿನ ಒಡತಿ ಬೇಂದ್ರೆಯವರ ಕಾವ್ಯಪ್ರತಿಭಾದೇವಿ! ಅವಳು ಬೀಸಿದ ಅಂಬರವ್ಯಾಪಿ ಸೆರಗಿನಿಂದ, ಬೇಂದ್ರೆಯವರು ಎಳೆದುಕೊಂಡದ್ದು ಎರಡು ಸಾಲು ಮಾತ್ರ! ಸಾಮಾನ್ಯ ಪದಗಳಲ್ಲಿ ಎಂತಹ ಅಸಾಮಾನ್ಯ ಅನುಭವವನ್ನು ಬೇಂದ್ರೆಯವರು ಹುದುಗಿಸಿದ್ದಾರೆ ಎನ್ನುವುದನ್ನು ಗಮನಿಸಿದಾಗ, ಅವರ ಕಾವ್ಯಪ್ರತಿಭೆಯ ಮಿಂಚು ನಮ್ಮ ದೃಗ್ಗೋಚರಕ್ಕೂ ಬರುವುದಷ್ಟೆ! (ಎರಡು ನೂಲುಗಳನ್ನು ಮಾತ್ರ ಎಂದು ಬೇಂದ್ರೆಯವರು ಹೇಳಿಕೊಂಡಿದ್ದಾರೆ. ಆದರೆ ಅವರ ಕವನಗಳ ದೀರ್ಘತೆಯನ್ನು ಹಾಗು ಅಪಾರ ಕಲ್ಪನಾಶಕ್ತಿಯನ್ನು ಕಂಡಾಗ, ಇವು ಎರಡು ನೂಲಲ್ಲ; ಇದು ಅಪಾರ ‘ಅಂಬರ’ ಎನ್ನುವ ಅರಿವು ನಮಗೆ ಮೂಡುವುದು.

(೨) ಕನಸಿನ ಕಥೆ:
ಈ ಕವನದಲ್ಲಿ ಬೇಂದ್ರೆಯವರು ತಾವು ಕಂಡ ಕನಸೊಂದನ್ನು ತಮ್ಮ ಮಗಳು ಮಂಗಳಾಗೆ ಹೇಳುತ್ತಿದ್ದಾರೆ:
“ ಮಗಳೆ ಮಂಗಳೆ, ಬಾರೆ ಕೇಳು ಕಥೆಯ
ಹರುಷವೀಯುವುದು ಪರಿಹರಿಸಿ ವ್ಯಥೆಯ ”

ಕವನದ ಕೊನೆಕೊನೆಯಲ್ಲಿ ಬರುವ ನುಡಿ ಹೀಗಿದೆ:
“ಆಹಾ ಏನಿದು! ಎನುತ ನಾನು ಎದ್ದೆ
ನಿನಗಾಗ ಸಕ್ಕರೆಜೊಂಪು ನಿದ್ದೆ
ನಿನಗಾಗಿ ಈ ಕತೆಯ ನೆನಪು ಇಟ್ಟೆ
ಹೇಳುವಾಗಲೆ ಮಾತು ಬಿಗಿದು ಬಿಟ್ಟೆ.”

ತಮ್ಮ ಅಪ್ಪ ಹಾಡಿದ ಕಥೆಗೆ ಮಗಳ ಮಂಗಳಶ್ಲೋಕ ಹೀಗಿದೆ:
“ ಕಥೆ ಆಯಿತೇ ಅಣ್ಣ, ಬಹಳ ಸಣ್ಣ
ಕಥೆಯ ಮೈಗಿಂತ ಮಿಗಿಲಿದರ ಬಣ್ಣ.”

(೩) ಬಾ ಕೈ ತಾ:
ಬೇಂದ್ರೆಯವರು ಆದರ್ಶಗಳ ನಡುವೆ ಬದುಕಿದವರು ಎನ್ನುವುದನ್ನು ನೋಡಿದ್ದೇವೆ. ಈ ಆದರ್ಶಸಿದ್ಧಿಗೆ ಪರಮಾತ್ಮನ ಬೆಂಬಲವೂ ಬೇಕಷ್ಟೆ. ಬೇಂದ್ರೆಯವರಂತೂ ಬಾಲ್ಯದಿಂದಲೇ ಶ್ರದ್ಧೆಯ ವಾತಾವರಣದಲ್ಲಿ ಬೆಳೆದವರು. ತಮ್ಮ ಆದರ್ಶಗಳನ್ನು ಪಾಲಿಸಲು ಅವರು ಭಗವಂತನ ಸಹಾಯವನ್ನು ಯಾಚಿಸುತ್ತಾರೆ. ಅವರ ಭಕ್ತಿ ಸಖ್ಯರೂಪದ್ದು. ‘ಬಾ ಕೈ ತಾ’ ಕವನವು ಕನಸಿನಲ್ಲಿ ಹೊಳೆದ ಕವನವಲ್ಲದಿದ್ದರೂ ಸಹ, ಬೇಂದ್ರೆಯವರ ಕನಸುಮನಸುಗಳಲ್ಲಿ ಭಗವಂತನ ಅನುಗ್ರಹದ ಯಾಚನೆ ಇದ್ದದ್ದನ್ನು, ಈ ಕವನವು ಸ್ಪಷ್ಟಪಡಿಸುತ್ತದೆ:
೧
ಮನಸಿನಲ್ಲಿ ಹೊಳೆದವನೆ
ಕನಸಿನಲ್ಲಿ ಬೆಳೆದವನೆ
ಜೀವನವನೆ ತೊಳೆದವನೆ
ಎಲ್ಲಿರುವೆ ಬಾ!
ಚೆಲುವಿನಲ್ಲಿ ಮಾಗಿರುವೆ
ಒಲವಿನಲ್ಲಿ ಬಾಗಿರುವೆ
ಜಗದ ರೂಪವಾಗಿರುವೆ ಕೈಗೆ ಕೈಯ ತಾ!

(೪) ಏಳು ಕನ್ನಿಕೆಯರು:
ಬೇಂದ್ರೆಯವರು ಆಧ್ಯಾತ್ಮ ಸಾಧಕರು. ಅವರ ಸಾಧನೆಯ ತೀವ್ರತೆ ಎಷ್ಟಿತ್ತೆಂದರೆ, ಅವರ ಕನಸುಗಳೂ ಸಹ ಸಾಂಕೇತಿಕವಾಗಿರುತ್ತಿದ್ದವು. ಈ ಕವನವು ಕನಸಿನಲ್ಲಿ ನಡೆದದ್ದನ್ನು ನೇರವಾಗಿಯೇ ಹೇಳುತ್ತದೆ:

ನಿದ್ದೆಗಡಲಿನಲ್ಲಿ ನಾನು
ಎದ್ದೇಳುತಲಿದ್ದೆನಾಗ
ಏಳು ಕನ್ನಿಕೆಯರು ಬಂದು
ಏಳು ಎಂದು ಎಂದರೋ---
ಈ ಕನ್ನಿಕೆಯರು ಬಹುಶಃ ಸಪ್ತಮಾತೃಕೆಯರು ಇರಬಹುದು ಅಥವಾ ಸಾಧನೆಯ ಹಾದಿಯಲ್ಲಿಯ ಸಹಾಯಕ ದೇವತೆಗಳಾಗಿರಬಹುದು. ಬೇಂದ್ರೆಯವರನ್ನು ಪರೀಕ್ಷಿಸಿದ ಈ ಕನ್ನಿಕೆಯರು ಅವರ ಸಾಧನೆಯು ಇನ್ನೂ ಪಕ್ವವಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಬೇಂದ್ರೆಯವರು ಹೆಚ್ಚಿನ ಸಾಧನೆಯ ಸಂಕಲ್ಪವನ್ನು ಮಾಡುತ್ತಾರೆ.

ಆದಿ ಶಂಕರಾಚಾರ್ಯರು ತಮ್ಮ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿ ‘ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತಃ’ ಎಂದು ಪುರುಷನನ್ನು ಬಣ್ಣಿಸಿದ್ದಾರೆ. ಬೇಂದ್ರೆಯವರು ಸ್ವಪ್ನದಲ್ಲಿ ಅಥವಾ ಜಾಗೃತಾವಸ್ಥೆಯಲ್ಲಿ ಲೋಕಮಾಯೆಯಿಂದ ಅಲ್ಲ, ಆದರೆ ಕಾವ್ಯಮಾಯೆಯಿಂದಆವೃತವಾದವರು!