Sunday, August 28, 2016

ತ್ರಿವೇಣಿಯವರ ‘ಮೊದಲ ಹೆಜ್ಜೆ’ಕನ್ನಡದಲ್ಲಿ ಕಾದಂಬರಿಯುಗವು ಪ್ರಾರಂಭವಾದಾಗಿನಿಂದ ಸಾವಿರಾರು ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಶಿವರಾಮ ಕಾರಂತರು ಮಾನವೀಯ ನೆಲೆಯ ವೈಚಾರಿಕ ಕಾದಂಬರಿಗಳನ್ನು ಸೃಷ್ಟಿಸಿದರೆ, ಶಾಂತಿನಾಥ ದೇಸಾಯಿಯವರು ‘ಮುಕ್ತಿ’ಯ ಮೂಲಕ ನವ್ಯ ಕಾದಂಬರಿಯ ಮಾದರಿಯನ್ನು ತೋರಿಸಿದರು. ನವ್ಯೋತ್ತರ ಸಾಹಿತಿಯಾದ ದೇವನೂರ ಮಹಾದೇವರು ‘ಕುಸುಮಬಾಲೆ’ಯ ಮೂಲಕ ಓದುಗರು ಬೆರಗಾಗುವಂತಹ ಕಾದಂಬರಿಯನ್ನು ಸೃಷ್ಟಿಸಿದರು! ಈ ಎಲ್ಲ ಕಾದಂಬರಿಗಳ ನಡುವೆ ತ್ರಿವೇಣಿಯವರು ಬರೆದ ‘ಮೊದಲ ಹೆಜ್ಜೆ’ ಎನ್ನುವ ಕಾದಂಬರಿಯು ತನ್ನ ವೈಶಿಷ್ಟ್ಯಗಳಿಂದಾಗಿ ಏಕಮೇವಾದ್ವಿತೀಯವಾಗಿದೆ.

ತ್ರಿವೇಣಿಯವರು ಈ ಕಾದಂಬರಿಯನ್ನು ೧೯೫೦ರ ದಶಕದಲ್ಲಿ ಬರೆದಿರಬಹುದು. ಅಂದರೆ ಇಂದಿಗೆ ಸುಮಾರು ೬೦ ವರ್ಷಗಳೇ ಕಳೆದು ಹೋಗಿವೆ. ಕನ್ನಡದ ಮೊದಲ ಕಾದಂಬರಿಯಿಂದ ಇತ್ತೀಚಿನ ಕಾದಂಬರಿಯವರೆಗೂ ಯಾವ ಘಟಾನುಘಟಿ ಕಾದಂಬರಿಕಾರನೂ ತ್ರಿವೇಣಿಯವರು ಈ ಕಾದಂಬರಿಯಲ್ಲಿ ಬಳಸಿದ ತಂತ್ರವನ್ನು ಬಳಸಿಲ್ಲ! ಆದುದರಿಂದ, ಆ ಹಳೆಯ ಕಾದಂಬರಿಯ ನವನವೀನ ರಚನಾವಿಧಾನವನ್ನು ಪ್ರಸ್ತಾಪಿಸಲು ಇಲ್ಲಿ ಪ್ರಯತ್ನಿಸಲಾಗಿದೆ.  

‘ಮೊದಲ ಹೆಜ್ಜೆ’ಯ ಕಥೆಯು ಬಹಳ ಸರಳವಾಗಿದೆ. ಕಾಲು ಜಾರಿದ ಹುಡುಗಿಯೊಬ್ಬಳು ಪಟ್ಟ ಸಂಕಷ್ಟಗಳ ಕಥೆ ಇದು. ಅ. ನ.ಕೃ, ತ.ರಾ.ಸು ಮೊದಲಾದ ಕಾದಂಬರಿಕಾರರಾಗಿದ್ದರೆ, ಏಕಪ್ರಕಾರವಾದ ಸರಳವರ್ಣನೆಯ ಮೂಲಕ ಕಥೆಯನ್ನು ಹೇಳಿ ಮುಗಿಸಿ ಬಿಡುತ್ತಿದ್ದರು. ಶಿವರಾಮ ಕಾರಂತರಾಗಿದ್ದರೆ ಕಾದಂಬರಿಯ ನಾಯಕಿಯು ತನ್ನ ಸಂಕಷ್ಟಗಳನ್ನು ಎದುರಿಸಿ ಬಾಳನ್ನು ಕಟ್ಟಿಕೊಂಡ ಕಥೆಯನ್ನು ಹೇಳುತ್ತಿದ್ದರು. ಅನಂತಮೂರ್ತಿಯವರಾಗಿದ್ದರೆ ನಾಯಕಿಯ existential dilemmaಅನ್ನು ಮನೋಹರವಾಗಿ ವರ್ಣಿಸುತ್ತಿದ್ದರು!

ತ್ರಿವೇಣಿ ಈ ಕಥೆಯನ್ನು ಏಕಪ್ರಕಾರವಾಗಿ ವರ್ಣಿಸಿಲ್ಲ. ಅವರ ಮನದಲ್ಲಿ ಮಿಡಿಯುತ್ತಿರುವ ನಾಯಕಿಯು ಎಲ್ಲ ಯುವತಿಯರಂತೆ ಕನಸುಗಳನ್ನು ಇಟ್ಟುಕೊಂಡವಳಲ್ಲ.  ಆದರೆ (ಸಂತಾನಸೃಷ್ಟಿಗಾಗಿ ನಿಸರ್ಗವು ನಿರ್ಮಿಸಿರುವ) ಕಾಮೇಚ್ಛೆಯು ಗಂಡಿಗೆ ಇರುವಂತೆ ಈ ಹೆಣ್ಣಿಗೂ ಇದ್ದೇ ಇರಬೇಕಲ್ಲವೆ? ಹಾಗೆಂದು ಅವಳು ಸುಲಭವಾಗಿ ಕಾಲು ಜಾರುವಂಥವಳೂ ಅಲ್ಲ.  ತಾನು ಅವಲಂಬಿಸಬಹುದಾದ, ವಿಶ್ವಾಸಪಾತ್ರನಾದ ಗಂಡಿಗೆ ಮಾತ್ರ ಅವಳು ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ. ಆದರೆ ಆ ಗಂಡು ಈ ಹೆಣ್ಣಿಗೆ ಕೈಕೊಟ್ಟು ಓಡಿದರೆ? ಇಂತಹ ನಾಯಕಿಯ ಕಥೆಯನ್ನು ಬರೆಯುವಾಗ, ತ್ರಿವೇಣಿಯವರು ಆವರೆಗಿನ ಕನ್ನಡ ಕಾದಂಬರಿಗಳ ನೇರ ವರ್ಣನಾಕ್ರಮವನ್ನು ಬಿಟ್ಟು, ಹೊಸದೊಂದು ಕ್ರಮವನ್ನು ರೂಪಿಸಿಕೊಂಡರು.

ಮೊದಲ ಹೆಜ್ಜೆಯ ಕಥಾನಕವನ್ನು ನಾಲ್ಕು ಭಾಗಗಳಲ್ಲಿ ರಚಿಸಲಾಗಿದೆ. ಮೊದಲನೆಯ ಭಾಗದ ಕಥೆಯು ನಾಯಕಿಯ ಹೇಳುವ ಕಥೆಯಾಗಿದೆ. ಈ ಭಾಗದಲ್ಲಿ ಅವಳ ಬಾಲ್ಯ ಹಾಗು ಅವಳು ತನ್ನ ತಂಗಿಯ ಬಾಣಂತನಕ್ಕಾಗಿ, ತಂಗಿಯ ಮನೆಗೆ ಬರುವ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಇವಳಿಗೆ ಮೋಸ ಮಾಡಿದ ಗಂಡು ಹೇಳುವ ಕಥೆ ಇದೆ.  ಮೂರನೆಯ ಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇವಳ ಬೇಡದ ಬಸುರಿಗೆ ಹೆರಿಗೆ ಮಾಡಿಸಿದ ನರ್ಸ ಒಬ್ಬಳು ಹೇಳುವ ಕಥೆ ಇದೆ. ಕೊನೆಯ ಭಾಗದಲ್ಲಿ ಇವಳ ಸೆರೆಮನೆಯ ಬದುಕಿನ ವರ್ಣನೆ ಇದೆ. ಈ ಯಾವ ಭಾಗದಲ್ಲಿಯೂ ನಾಯಕಿಯ ಹೆಸರು ಬರುವುದಿಲ್ಲ. ಇವಳಿಗೆ ಸಂಬಂಧಪಟ್ಟ ಉಳಿದೆಲ್ಲ ಪಾತ್ರಗಳ ಹೆಸರುಗಳು ಬರುತ್ತವೆ. ಇವಳು ಒಬ್ಬ ಅಸಹಾಯಕ, ಅನಾಮಿಕ, ಕಪ್ಪು ಹುಡುಗಿ ; ಹೆಸರಿನಿಂದ ಗುರುತಿಸುವ ಯೋಗ್ಯತೆ ಇದ್ದವಳಲ್ಲ!

ಈ ಕಥೆಯನ್ನು ಕಾದಂಬರಿಕಾರಳೇ ನೇರವಾಗಿ ಹೇಳಲು ಬರುತ್ತಿರಲಿಲ್ಲವೆ, ನಾಲ್ಕು ವಿಭಿನ್ನ ವ್ಯಕ್ತಿಗಳು ಹೇಳುವ ಕಾದಂಬರಿಯನ್ನಾಗಿ ಮಾಡುವ ಅವಶ್ಯಕತೆ ಏನಿತ್ತು ಎನ್ನುವ ಸಂದೇಹ ಯಾರಿಗಾದರೂ ಬಾರದೆ ಇರದು. ಆದರೆ ‘ಮೊದಲ ಹೆಜ್ಜೆ’ ಕಾದಂಬರಿಯನ್ನು ಓದಿದಾಗ, ಈ ತರಹದ ವಿಂಗಡಣೆಯಲ್ಲಿ ಇರುವ ಅನುಕೂಲತೆಯ ಹಾಗು ಲೇಖಕಿಯ ಚಾತುರ್ಯದ ಅರ್ಥವಾಗುವುದು.

ತ್ರಿವೇಣಿಯವರ ನಾಯಕಿಯರು ಸ್ವೇಚ್ಛಾಚಾರಿಗಳಲ್ಲ, ನೀತಿಯ ಗೆರೆಯನ್ನು ದಾಟುವವರಲ್ಲ. ಹಾಗಿದ್ದಾಗ ಕಾಲು ಜಾರಲು ಒಂದು ಕಾರಣ ಬೇಕಲ್ಲವೆ? ಅದಕ್ಕೆ ಪೂರ್ವಭಾವಿಯಾಗಿ, ಈ ಕಪ್ಪು ಹುಡುಗಿಯ ಬಾಲ್ಯದ ಹಾಗು ಯೌವನದ ಪರಿಸರವನ್ನು ಲೇಖಕಿಯೇ ವರ್ಣಿಸಿದ್ದರೆ ಅದು ಅತಿಶಯೋಕ್ತಿಯ ವರ್ಣನೆಯೋ ಅಥವಾ ನೀರಸ ವರ್ಣನೆಯೋ ಆಗುವ ಸಾಧ್ಯತೆ ಇತ್ತು. ನಾಯಕಿಯ ತಂದೆ ಬಡತನದಲ್ಲಿ ಬದಕುತ್ತಿರುವ ಒಬ್ಬ ಶಾಲಾಶಿಕ್ಷಕ. ಅವರಿಗೆ ಇಷ್ಟು ಬೇಗನೇ ಮಕ್ಕಳೇ ಬೇಕಿರಲಿಲ್ಲ. ಅಂತಹ ಸಮಯದಲ್ಲಿ ಮೊದಲಿನ ಹೆರಿಗೆಯಲ್ಲಿ ಒಬ್ಬ ಕಪ್ಪು ಹುಡುಗಿ ಹುಟ್ಟುತ್ತಾಳೆ.  ಈ ಹೆರಿಗೆಯೂ ಸಹ ದೊಡ್ಡಮ್ಮನ ಮನೆಯಲ್ಲಿ ಆಗುವ ಅನಿವಾರ್ಯತೆ. ಈ ಎಲ್ಲವನ್ನೂ ವರ್ಣಿಸುವಾಗ ನಮ್ಮ ಕಪ್ಪು ಹುಡುಗಿಯಲ್ಲಿ ಒಂದು ನಿರ್ಲಿಪ್ತತೆ ಕಾಣುತ್ತದೆ; ವಿಧಿಯನ್ನು ಒಪ್ಪಿಕೊಂಡಂತಹ ಒಬ್ಬ ಸಾಮಾನ್ಯಳ ಮನೋಧರ್ಮ ಕಾಣುತ್ತದೆ. ಇದು ಲೇಖಕಿಯೇ ಮಾಡುವ ವರ್ಣನೆಯಲ್ಲಿ ಸಂಕ್ಷಿಪ್ತವಾಗಿ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಕಪ್ಪು ಹುಡುಗಿಯು ಹೇಳುವ ರೀತಿಯನ್ನು ನೋಡಿರಿ: 

[ಸುಶೀಲಕ್ಕನ ಮಾತು ಕೇಳಿ ಸುಬ್ಬಿಗೆ ತನ್ನ ಅಸಹಾಯಕತೆ ನೆನೆದು ತುಂಬಾ ಅಳು ಬಂತಂತೆ. ಕೊನೆಗೆ ಬಡವರು; ಬಿಂಕ ಮಾಡಿದರೆ ನಡೆಯೋದಿಲ್ಲ ಎಂದು ಯೋಚಿಸಿ ಒಪ್ಪಿಕೊಂಡಳಂತೆ.
ನಾನು ಹೆಣ್ಣಾಗಿ ಹುಟ್ಟುವುದು ನನ್ನ ತಾಯಿ ತಂದೆಗೆ ಬೇಕಿರಲಿಲ್ಲ. ಮೊದಲನೆಯದಾಗಿ ನನ್ನ ಜನ್ಮವೇ ಅವರಿಗೆ ಬೇಕಿರಲಿಲ್ಲ.]  
(ಸೂಚನೆ: ನಮ್ಮ ಕಪ್ಪು ಹುಡುಗಿಯು ತನ್ನ ತಾಯಿಯನ್ನು ಅವಳ ಹೆಸರಿನಿಂದಲೇ ಎಂದರೆ ಸುಬ್ಬಿ ಎಂದೇ ಕರೆಯುತ್ತಿರುತ್ತಾಳೆ. ಸುಶೀಲಕ್ಕ ಎಂದರೆ ಸುಬ್ಬಿಯ ಅಕ್ಕ. ಸುಶೀಲಕ್ಕ ಸ್ವಲ್ಪ ಸ್ಥಿತಿವಂತಳು. ಆದುದರಿಂದ ಅವಳ ಹೆಸರಿಗೆ ಅಕ್ಕ ಎನ್ನುವ ಜೋಡಣೆ. ಸುಬ್ಬಿ ಕೇವಲ ಸುಬ್ಬಿ! ಸುಬ್ಬಿಗೆ  ಮೊದಲ ಹೆರಿಗೆಯನ್ನು ತವರು ಮನೆಯಲ್ಲಿ ಮಾಡಿಸುವುದು ಸಾಧ್ಯವಿರಲಿಲ್ಲ. ಆದುದರಿಂದ ಅವಳ ಅಕ್ಕನ ಮನೆಯಲ್ಲಿ ಹೆರಿಗೆ ಮಾಡಿಸುವುದು ಅನಿವಾರ್ಯವಾಯಿತು.)

ಈ ಶಾಲಾಶಿಕ್ಷಕನಿಗೆ ಒಂದರ ಮೇಲೊಂದರಂತೆ ಮಕ್ಕಳು ಹುಟ್ಟುತ್ತವೆ. ಆ ಎಲ್ಲ ಕೂಸುಗಳ ಜೋಪಾನ, ತಾಯಿಯ ಬಾಣಂತನ ಹಾಗು ಮನೆಯ ಕೆಲಸದ ಹೊರೆ ಈ ಪುಟ್ಟ ಬಾಲಕಿಯ ಮೇಲೆ ಬೀಳುವುದು ಅನಿವಾರ್ಯ. ಇವಳ ತಂಗಿ ಬೆಳ್ಳಗಿದ್ದು ಸುರೂಪಿಯಾಗಿದ್ದಳು. ಯಾವುದೋ ಮದುವೆಯಲ್ಲಿ ಅವಳನ್ನು ನೋಡಿದ ಒಬ್ಬ ಯುವಕ ಅವಳಿಗೆ ಮರುಳಾದ. ಹೀಗಾಗಿ ಅಕ್ಕನಿಗಿಂತಲೂ ಮೊದಲೇ ತಂಗಿಗೆ ಮದುವೆಯಾಯಿತು. ಶೀಘ್ರವೇ ಅವಳಿಗೆ ಹೆರಿಗೆಯೂ ಆಯಿತು. ತಾಯಿ ಬಾಣಂತಿ ಆದಾಗಲೊಮ್ಮೆ ಅವಳನ್ನು ಜೋಪಾನ ಮಾಡಿದ ಕಪ್ಪು ಹುಡುಗಿಗೆ, ಇದೀಗ ತಂಗಿಯ ಬಾಣಂತನಕ್ಕಾಗಿ ಅವಳ ಮನೆಗೆ ಹೋಗುವುದು ಅಗತ್ಯವಾಯಿತು. ಈ ಭಾಗದಲ್ಲಿ ಎಲ್ಲಿಯೂ ನಮ್ಮ ನಾಯಕಿಯು ತನ್ನ ಕಷ್ಟಗಳನ್ನು ಹೇಳಿಕೊಂಡಿಲ್ಲ. In fact ಅವಳು ವಾಸ್ತವವನ್ನು ಅರಿತುಕೊಂಡಂತಹ,ಅದಕ್ಕೆ ಒಗ್ಗಿಕೊಂಡಂತಹ ಒಬ್ಬ ಸಾಧಾರಣ ಹುಡುಗಿ.

ಇವಳ ತಂಗಿಯ ಮನೆಯ ಆವರಣದಲ್ಲಿರುವ ಕೋಣೆಯೊಂದರಲ್ಲಿ ಒಬ್ಬ ಕಾ^ಲೇಜ ಹುಡುಗನಿದ್ದಾನೆ. ಆತ ಶೋಕೀಲಾಲ. ನಮ್ಮ ಕಪ್ಪು ಹುಡುಗಿಗೆ ಅವನಲ್ಲಿ ಆಸಕ್ತಿಯೇನೂ ಇಲ್ಲ. ಇದಿಷ್ಟು ನಮ್ಮ ನಾಯಕಿಯು ಹೇಳುವ ಮೊದಲ ಭಾಗದ ಕಥೆ. ಈ ತರಹದ ತಂತ್ರದಿಂದಾಗಿ ಲೇಖಕಿಗೆ ಕಪ್ಪು ಹುಡುಗಿಯ ಸಾಮಾನ್ಯ ಪರಿಸರವನ್ನು ಅವಳ ಸಾಧಾರಣತೆಯನ್ನು ನಿರ್ಲಿಪ್ತವಾಗಿ ಚಿತ್ರಿಸುವದು ಸಾಧ್ಯವಾಗಿದೆ. ಈ ತಂತ್ರದ ಅತಿ ದೊಡ್ಡ ಲಾಭವೆಂದರೆ, ನಾಯಕಿಯ ಹೆಸರನ್ನು ಹೇಳುವ ಅಗತ್ಯವು ಎಲ್ಲೂ ಬಂದಿಲ್ಲ. ನಮ್ಮ ನಾಯಕಿಯು ಒಬ್ಬ ಅತಿ ಸಾಮಾನ್ಯ, ಅತಿ ಸಾಧಾರಣ, ಅನಾಮಿಕ ಕಪ್ಪು ಹುಡುಗಿ. 

ಎರಡನೆಯ ಭಾಗದ ಕಥೆಯನ್ನು ಹೇಳುವವನು ಈ ಕಪ್ಪು ಹುಡುಗಿಯನ್ನು ನಂಬಿಸಿ, ಮೋಸಗೊಳಿಸಿದ ಕಾ^ಲೇಜು ಹುಡುಗ. ಈತನಿಗೆ ಈ ಹುಡುಗಿಯ ಬಗೆಗೆ ಎಂತಹ ಅಭಿಪ್ರಾಯವಿದೆ ಎಂದರೆ, ‘ಹಿಟ್ಟು ಹಳಸಿತ್ತು, ನಾಯಿ ಹಸಿದಿತ್ತು’ ಎನ್ನುವುದು ತಮ್ಮ ಪ್ರಣಯದ ಬಗೆಗೆ ಇವನಿಗಿರುವ ಅಭಿಪ್ರಾಯ. ‘ತನ್ನ ತಂಗಿಯನ್ನು ನೋಡಲು ತನ್ನ ತಂದೆ-ತಾಯಿಯರು ಬರುತ್ತಿದ್ದಾರೆ. ಅವರೆದುರಿಗೆ ತಮ್ಮ ಮದುವೆಯ ಪ್ರಸ್ತಾಪವನ್ನುಮಾಡಿರಿ’ ಎಂದು ನಮ್ಮ ಕಪ್ಪು ಹುಡುಗಿ ದೈನ್ಯತೆಯಿಂದ ಕೇಳಿಕೊಂಡಾಗ, ಈ ಹುಡುಗ ಮನಸ್ಸಿನಲ್ಲಿಯೇ ನಗುತ್ತಾನೆ. ಮರುದಿನವೇ ತಾನಿದ್ದ ಆ ಕೋಣೆಯನ್ನು ಬಿಟ್ಟು, ಬೇರೊಂದು ಕೋಣೆಗೆ ಹೊರಟು ಹೋಗುತ್ತಾನೆ. ಈ ಸಂದರ್ಭದಲ್ಲಿ ಆ ಹುಡುಗಿಯ ಮನಸ್ಸಿನಲ್ಲಿ ಏನೇನು ನಡೆದಿರಬಹುದು ಎನ್ನುವುದನ್ನು ಆತ ಗ್ರಹಿಸುವುದು ಹೀಗೆ: ಆತ ಚಿಕ್ಕವನಿದ್ದಾಗ ಒಂದು ನಾಯಿ ಮರಿಯನ್ನು ನೀರಿನಲ್ಲಿ ಮುಳುಗಿಸಿದ್ದ. ಇದೀಗ ಕಪ್ಪು ಹುಡುಗಿಯ ನೋಟದಿಂದ ಅವನಿಗೆ ಆ ಪ್ರಸಂಗ ನೆನಪಿಗೆ ಬರುತ್ತದೆ:

[ನಾಯಿ ಮರಿ ನೀರಿನಲ್ಲಿ ಮುಳುಗುವದಕ್ಕೆ ಮುಂಚೆ ನನ್ನ ಕಡೆ ದೈನ್ಯದಿಂದ ನೋಡಿ ಮುಳುಗಿತು……ಮರಿಯನ್ನು ಈಚೆಗೆ ತೆಗೆದಾಗ ಅದಕ್ಕೆ ಪ್ರಾಣವಿರಲಿಲ್ಲ.ಆದರೆ ಅದು  ಮುಳುಗುವದಕ್ಕೆ ಮುಂಚೆ ನನ್ನ ಕಡೆ ನೋಡಿದುದನ್ನು ಮಾತ್ರ ಎಂದಿಗೂ ಮರೆಯಲಾರೆ.
ಅವಳು ನನ್ನ ಕಡೆ ದೃಷ್ಟಿ ಬೀರಿ ಒಳಗೆ ಹೋದಾಗ ನನಗೆ ನಾಯಿ ರಾಮಿಯ ನೆನಪು ಬಂದಿತು.]

ಈ ಭಾಗವನ್ನು ಸ್ವತಃ ಲೇಖಕಿಯೇ ನಿರೂಪಿಸಿದ್ದರೆ, ಕಾ^ಲೇಜು ಹುಡುಗನ ಹಿನ್ನೆಲೆಯನ್ನು ವಿವರಿಸಬೇಕಾಗುತ್ತಿತ್ತು.
ಕಪ್ಪು ಹುಡುಗಿಯು ಆ ಹುಡುಗನ ಬಲೆಗೆ ಬೀಳುವ ಸಂದರ್ಭವನ್ನು ವಿವರಿಸುವುದು ಲೇಖಕಿಯ ಅನಿವಾರ್ಯತೆಯಾಗುತ್ತಿತ್ತು. ಲೇಖಕಿಯು ಪಕ್ಷಪಾತ ಮಾಡುತ್ತಿದ್ದಾಳೆ  ಎಂದು ಓದುಗನಿಗೆ ಅನಿಸುವ ಸಾಧ್ಯತೆ ಇತ್ತು. ಇದೀಗ ಹುಡುಗನೇ ಮಾಡುವ ನಿರೂಪಣೆಯಿಂದಾಗಿ ಇತರ ವರ್ಣನೆಗಳನ್ನು ಬಿಟ್ಟು ಬಿಡುವುದು ಹಾಗು ಕಾದಂಬರಿಯ ಗಾತ್ರವನ್ನು ನಿಯಂತ್ರಿಸುವುದು ಲೇಖಕಿಗೆ ಸಾಧ್ಯವಾಗಿದೆ.

 ಮೂರನೆಯ ಭಾಗದ ಕಥೆಯನ್ನು ಹೇಳುವವಳು ಸಾರ್ವಜನಿಕ ಹೆರಿಗೆ ಆಸ್ಪತ್ರೆಯ ಒಬ್ಬ ನರ್ಸ. ಒಬ್ಬ ಕಪ್ಪು ಹುಡುಗಿ ಯಾರದೂ ಜೊತೆಯಿಲ್ಲದೆ, ಆಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿಕೊಳ್ಳುವ ಸಂದರ್ಭವನ್ನು ಇವಳು ಹೇಳುತ್ತಾಳೆ. ಆ ಹುಡುಗಿಯ ಹೆಸರನ್ನು ಕೇಳಿದಾಗ, ಅವಳು ಏನೋ ಒಂದು ಹೆಸರನ್ನು ಹೇಳುತ್ತಾಳೆ. ಹೆರಿಗೆಯ ಸಮಯದಲ್ಲಿ ಹಾಗು ಹೆರಿಗೆಯಾದ ಬಳಿಕ ಇವಳನ್ನು ನೋಡಲು ಯಾರೂ ಬರುವದಿಲ್ಲ. ಆ ಕಪ್ಪು ಹುಡುಗಿ ಹೆರಿಗೆ ಆಸ್ಪತ್ರೆಯಿಂದ ತನ್ನ ಮಗುವನ್ನು ಎತ್ತಿಕೊಂಡು ಒಬ್ಬಳೇ ಹೊರಟು ಹೋಗುತ್ತಾಳೆ.

[ಅವಳೊಡನೆ ಯಾರೂ ಇರಲಿಲ್ಲ. ಅವಳು ಆಸ್ಪತ್ರೆಯ ಲಂಗವನ್ನು ಕಳಚಿ ಮೊದಲ ದಿನ ತಾನುಟ್ಟುಕೊಂಡ ಬಂದಿದ್ದ ಹರಕು ಸೀರೆಯನ್ನು ಧರಿಸಿದ್ದಳು. ಮಗು ಅವಳ ಹೆಗಲ ಮೇಲೆ ಮಲಗಿ ನಿದ್ರಿಸುತ್ತಿತ್ತು.]
ಕೆಲವೇ ದಿನಗಳ ಬಳಿಕ ಆ ನರ್ಸ ಪತ್ರಿಕೆಯಲ್ಲಿ ಒಂದು ಸಮಾಚಾರವನ್ನು ಓದುತ್ತಾಳೆ:
[…ಈ ಸುದ್ದಿಯ ಪಕ್ಕದಲ್ಲೆ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ‘ಶಿಶುಹತ್ಯೆ ಎಂಬ ಶಿರೋನಾಮೆ ನನ್ನ ಗಮನವನ್ನು ಸೆಳೆಯಿತು…]

ತ್ರಿವೇಣಿಯವರು ನೇರ ನಿರೂಪಣೆಯನ್ನು ಅವಲಂಬಿಸಿದ್ದರೆ, ಈ ಕಪ್ಪು ಹುಡುಗಿಯು ಬಸಿರಾದ ಬಳಿಕ, ಅವಳ ಮನೆಯವರಿಗೆ ಅದು ತಿಳಿದ ಬಗೆ, ಅವಳು ಮನೆಯಿಂದ ಹೊರಬೀಳಬೇಕಾದ ಅಸಹಾಯಕತೆ, ಅವಳು ಎಲ್ಲಿ ಮತ್ತು ಹೇಗೆ ಬದುಕಿದಳು ಎನ್ನುವ ವಿವರಗಳನ್ನು ವರ್ಣಿಸಬೇಕಾಗುತ್ತಿತ್ತು. ಆಬಳಿಕ  ತನ್ನ ನವಜಾತ ಶಿಶುವನ್ನು ಹತ್ಯೆಗೈದ ವಿವರಗಳನ್ನು, ಆ ಸಂದರ್ಭದಲ್ಲಿಯ ಅವಳ ಮನಸ್ಸಿನಲ್ಲಿ ಏಳುಬೀಳುತ್ತಿರುವ ಭಾವನೆಗಳನ್ನು ಹೇಳಬೇಕಾಗುತ್ತಿತ್ತು. ಇದೀಗ ಇವಳಿಗೆ ಹೆರಿಗೆ ಮಾಡಿಸಿದ ನರ್ಸ ಕಣ್ಣಿಗೆ ಆ ಸುದ್ದಿ ಬಿಳುವ ಮೂಲಕ, ಉಳಿದೆಲ್ಲ ವರ್ಣನೆಗಳ ಅವಶ್ಯಕತೆಗಳನ್ನು ತ್ರಿವೇಣಿಯವರು ತೊಡೆದು ಹಾಕಿದ್ದಾರೆ. ಭಾವನೆಗಳಿಗೆ ಇಲ್ಲೆಲ್ಲಿಯೂ ಸ್ಥಾನವೇ ಇಲ್ಲ.

ನಾಲ್ಕನೆಯ ಭಾಗದಲ್ಲಿ ನಮ್ಮ ಕಪ್ಪು ಹುಡುಗಿಯೇ ಮತ್ತೊಮ್ಮೆ ತನ್ನ ಕಥೆಯನ್ನು ಹೇಳುತ್ತಾಳೆ. ಅವಳನ್ನು ಇರಿಸಲಾದ ಸೆರೆಮನೆಯ ವರ್ಣನೆಯಿಂದ ಕಥೆ ಪ್ರಾರಂಭವಾಗುತ್ತದೆ. ಶಿಕ್ಷೆಯ ಅವಧಿ ಮುಗಿದ ನಂತರ ಅವಳನ್ನು ಸೆರೆಮನೆಯಿಂದ ಬಿಡುಗಡೆ ಮಾಡುವ ದಿನದ ಅವಳ ಸ್ವಗತ ನಿರೂಪಣೆ ಹೀಗಿದೆ:

 [(ಜೇಲರ್ ಕೇಳುತ್ತಾರೆ:)....’ನಿಮ್ಮೋರು ಯಾರೂ ಇಲ್ಲವೇನು? ನಿಮ್ಮಪ್ಪ ಇದಾರಲ್ಲ….ಅಲ್ಲಿಗೆ ಯಾಕೆ ಹೋಗಬಾರದು?’
ನಾನು ಅವಮಾನದಿಂದ ನಾಲಿಗೆ ಕಚ್ಚಿ ಹೇಳಿದೆ: ‘ಅವರು ನನ್ನ ಮನೆಗೆ ಸೇರಿಸೋಲ್ಲ.’
‘ಯಾಕೆ?’
‘ನಾನು ಅವರ ವಂಶಕ್ಕೆ ಮಸಿ ಬಳಿದಿದೀನಿಂತ ಅವರ ಭಾವನೆ. ಅವರು ನನ್ನ ತಿರುಗಿ ಅವರ ಹತ್ತಿರ ಸೇರಿಸೋದಿಲ್ಲ. ನನಗೆ ಚೆನ್ನಾಗಿ ಗೊತ್ತು. ನಾನೊಬ್ಬಳೇ ಜಗತ್ತನ್ನು ಎದುರಿಸಿ ಹೋರಾಡಬೇಕು.’

ಮಳೆಯಿನ್ನೂ ನಿಂತಿರಲಿಲ್ಲ. ಹನಿಹನಿಯಾಗಿ ಬೀಳುತ್ತಲೇ ಇತ್ತು. ನಾನು ನಿಧಾನವಾಗಿ ಕಾಲೆಳೆದುಕೊಂಡು ಜೈಲಿನ ಕಾಂಪೌಂಡನ್ನು ದಾಟಿ ರಸ್ತೆಗೆ ಬಂದೆ. ಹೆಬ್ಬಾಗಿಲಿನ ಪಕ್ಕದಲ್ಲಿ ಮರವೊಂದರ ಆಶ್ರಯದಲ್ಲಿ  ಮುದುಕನೊಬ್ಬ ನಿಂತಿದ್ದ. ಮುಪ್ಪು ಅವನ ಮುಖದ  ಮೇಲೆ, ದೇಹದ ಮೇಲೆ ತನ್ನ ದಾಳಿ ನಡಿಸಿತ್ತು. ಮುಖದ ತೊಗಲು ಸುಕ್ಕುಗಟ್ಟಿತ್ತು. ಕಣ್ಣುಗಳು ಹೂತು ಹೋಗಿ ಮಂಕಾಗಿದ್ದವು. ಆರಿಸಿ ಹುಡುಕಿದರೂ ತಲೆಯಲ್ಲಿ ಒಂದೂ ಕಪ್ಪು ಕೂದಲು ಇರಲಿಲ್ಲ. ಮಳೆಯಲ್ಲಿ ನೆನೆಯುತ್ತಾ ನಿಂತಿರುವ ಮುದುಕನನ್ನು ನೋಡಿ ನನಗೆ ಮರುಕವುಂಟಾಯಿತು. ನಾನು ಕುತೂಹಲದಿಂದ ಅವನ ಕಡೆಗೆ ನೋಡಿದೆ.
’ಇನ್ನು ಹದಿನೈದಿಪ್ಪತ್ತು ವರ್ಷ ಕಳೆದರೆ ನಮ್ಮ ತಂದೇನೂ ಹೀಗೆ ಕಾಣಬಹುದು’ ಎಂದು ಮನಸ್ಸಿನಲ್ಲಿಯೇ ನಾನು ಹೇಳಿಕೊಂಡೆ.

ಮಳೆಯಲ್ಲಿ ನಡುಗುತ್ತಾ ನಿಂತಿದ್ದ ಮುದುಕನೂ ನನ್ನ ಕಡೆಗೆ ನೋಡಿದ. ಭಾವಾವೇಶದಿಂದ ಅವನ ತುಟಿಯಲುಗಿತು. ಕಾಂತಿಹೀನವಾಗಿದ್ದ ಅವನ ಕಣ್ಣುಗಳಲ್ಲಿ ಬೆಳಕು ಚಿಮ್ಮಿ ಬಂತು. ನಿರ್ಜೀವ ಪ್ರತಿಮೆಯಂತೆ ನಿಂತಿದ್ದ ಅವನ ಕಾಲುಗಳು ಚಲಿಸಿದವು.

ಯಾವುದೋ ಮೋಡಿಗೆ ಒಳಗಾದವಳಂತೆ ನಾನು ನಿಂತಲ್ಲಿಂದ ಅಲುಗದೆ, ರೆಪ್ಪೆ ಮಿಟುಕಿಸದೆ ಮುದುಕನನ್ನೇ ನೋಡಿದೆ. ಆ ಮುದುಕ ನಿಧಾನವಾಗಿ ನನ್ನ ಹತ್ತಿರ ಬಂದು ನನ್ನ ತೋಳು ಹಿಡಿದು, ಅತ್ಯಂತ ಮೃದುವಾದ ದನಿಯಲ್ಲಿ “ಬಾಮ್ಮ, ಮನೆಗೆ ಹೋಗೋಣ” ಎಂದ.]

‘ನಾನು ಅವರ ವಂಶಕ್ಕೆ ಮಸಿ ಬಳಿದಿದೀನಿಂತ ಅವರ ಭಾವನೆ. ಅವರು ನನ್ನ ತಿರುಗಿ ಅವರ ಹತ್ತಿರ ಸೇರಿಸೋದಿಲ್ಲ. ’ ಎಂದು ಕಪ್ಪು ಹುಡುಗಿಯು ಹೇಳುವ ಮೂಲಕ, ತ್ರಿವೇಣಿಯವರು ಕಪ್ಪು ಹುಡುಗಿಯು ಬಸಿರಾದದ್ದು ಅವಳ ಕುಟುಂಬಕ್ಕೆ ತಿಳಿದ ಬಳಿಕ ನಡೆದ ಘಟನೆಗಳನ್ನು, ಅವರು ಇವಳನ್ನು ತಿರಸ್ಕರಿಸಿದ್ದನ್ನು ಬರೆಯದೇನೆ ಓದುಗರಿಗೆ ತಿಳಿಸಿದ್ದಾರೆ. ಇವಳ ದುರಂತದಿಂದಾಗಿ ಇವಳ ತಂದೆಗಾದ ಸಂಕಟವನ್ನು, ಆತನಿಗೆ ಅಕಾಲದಲ್ಲಿ ಮುಪ್ಪು ಅಡರಿದ್ದನ್ನು ಕಪ್ಪು ಹುಡುಗಿಯ ಸ್ವಗತವು ನಮಗೆ ತಿಳಿಸುತ್ತದೆ. ತಂದೆಯ ಬಗೆಗೆ ಇವಳಿಗೆ ಇನ್ನೂ ಆರದ ಪ್ರೀತಿಯನ್ನು ಇದು ತೋರಿಸುತ್ತದೆ. ಇಷ್ಟೆಲ್ಲ ಇದ್ದರೂ ಸಹ ತಂದೆಯು ತನ್ನ ಮಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗುವ ಸಾಲು ಅವಳ ಬಗೆಗೆ ಅವನಿಗಿರುವ ಪ್ರೀತಿಯನ್ನು, ಮರುಕವನ್ನು ತೋರಿಸುತ್ತದೆ.

ತ್ರಿವೇಣಿಯವರು ಸರಸ, ಸುರಸ ಶೈಲಿಗೆ ಹೆಸರಾದವರು. ಈ ಕಾದಂಬರಿಯಲ್ಲಿ ತಮ್ಮ ರಚನಾಶೈಲಿಯನ್ನು ಅವರು ಬದಲಿಸಿದ್ದಾರೆ. ತಾವು ಹೇಳಬೇಕಾದದ್ದನ್ನು ಪದಗಳಲ್ಲಿ ವರ್ಣಿಸದೆ, ಓದುಗನ ಮನಸ್ಸನ್ನು ಮುಟ್ಟಲು ಅವರಿಗೆ ಸಾಧ್ಯವಾಗಿದೆ.

Sunday, August 7, 2016

ದೊಂಗಲುನ್ನಾರೂsರೇ-ಜಾಗ್ರತs.....ದ.ರಾ. ಬೇಂದ್ರೆ


ದೊಂಗಲುನ್ನಾರೂsರೇ-ಜಾಗ್ರತs
ಎಚ್ಚರಿರು ಇದೊಂದೇ ಆಗಲಿ ವ್ರತಾ    ||ಪಲ್ಲ||

ಇನ್ನಾರು ನಿಮ್ಗss / ಎಚ್ಚರಾ ಕೊಡಾವ್ರಣ್ಣಾ
ಹಾದಿ ಐತಿ ಬಲೂ ಬಲೂ ದೂರಾ
ಗಂಟs ಬೀಳ್ತಾನ ಅಲ್ಲಿನೆ ಚೋರಾ
ನಿದ್ದೀ ಬ್ಯಾಡ್ರೆಪ್ಪಾ ಬಂದೀತು ಘೋರಾ || ದೊಂಗಲು…

ಕಳ್ಳಾ ಅಂಬಾವ / ಬ್ಯಾರೆ ಯಾರೂ ಇಲ್ಲಾ
ಅಂವಾ ನಮ್ಹಾಂಗ ನಿಮ್ಹಾಂಗs ಎಲ್ಲಾ
ಆದ್ರ ಧಂದೇನ ಮಾಡಿಕೊಂಡಾನ ಖುಲ್ಲಾ || ದೊಂಗಲು…

ಅಂದಾನು ಹೆದರ್ಬ್ಯಾಡೋ, ಹೆದರ್ಬ್ಯಾಡೋ ತಮ್ಮಾ
ಐತಿ, ರಾಜ್ಯಾನ ಇದು ನಮ್ಮ ನಿಮ್ಮಾ
ಬ್ಯಾರೆ ಬರ್ತಾರು ಯಾರು ?  ಮಕ್ಕೋ ಸುಮ್ಮಾ || ದೊಂಗಲು…

ಇದ್ದವ್ರ ಹರಕೊಳ್ಳಾಕ ಇಲ್ದವ್ರು ಬರ್ತಾರ
ಇದ್ದದ್ದು ಇಲ್ಲದ್ಯಾವ್ದೊ ಯಣ್ಣಾ
ಮನಸ್ಯಾರ s ಹೂಲಿ ಎಬಿಸಿ
ಮನಸ್ಯಾರ್ನ ತಿಂತಾರ
ದೇವ್ರs ತೆರೀಬೇಕೊ ಕಣ್ಣಾ
ಮುಚ್ಚಿಕೊಂಡೈತಿ | ಅಂತಃಕರ್ಣಾ

ಕರ್ಣನ ಕಿಸೇಕsನ ಹಾಕಾವ್ರು ಕನ್ನಾ
ಬಂದು ಎದ್ದೈತಿ ಅಲ್ಲಲ್ಲಿ ಹಾಹಾಕಾರ
ಸ್ವಾಹಾಕಾರಾನ ಬಲು | ದೊಡ್ಡ ಮಂತ್ರ ಆಗೈತಿ
ಬಂದೈತ್ಯೋ ಗೆಣೆಯಾ ಭಾಳ ಘೋರಾ
ಇಲ್ಲಿ ಪಾರಾದವ್ನs  ಖರೇ ಶೂರಾ || ದೊಂಗಲು…

ಅಂಬಿಕಾತನಯನಿಗು ಇತಿಮಿತಿ ಬಿದ್ದೈತಿ
ನೆಂಬಿಕ್ಯಾರೆ ಯಾರ್ದಪಾ ಇಲ್ಲಿ
ಪೂಜಾರೀನs ಕೂತು | ದೇವರ್ನ ಕದ್ದರ
ಇನ್ನ ಫಜೀತಿ, ಬ್ಯಾರೆ ಯಾವ್ದೈತಿ?
ಸೋದsರ ಭಾವ ಹೇಳೂವ
ಚೋದ್ಯರು ಚೋದರು ಮಾದರು ಕೂಡ್ಯಾರು
ಗ್ಯಾಂಗ, ಗ್ಯಾಂಗೀsಗೆ ಬ್ಯಾರೆ ಹೆಸರೈತಿ
ಯಾಲೀ ಧೂಲಾ ಅಂತ ಹೈದೋಸ ನಡಿಸ್ಯಾರ
ಮನಸ್ಯಾರ್ಕಿ ಒಳಗs ಕಸರೈತಿ
ಸಾಲಾs ಸಾಲೀ ಅಂತ| ನೆಂಟಸ್ತ್ಕಿ ಬೆಳಸ್ತಾರು
ಸೋದೇರು ಭಾನಚೋದ ಮಂದಿ | ಭಾಳ ಬೆರ್ಕಿ
ಅಲ್ಲಿ ತುರ್ಕಿ, ಇಲ್ಲಿ ತುರ್ಕಿ, ಹೊಡದಾರು ನಡವs ಗಿರ್ಕಿ
ತೂಕಡಿಸಬ್ಯಾಡೋ ಜೋಲಿ ತಪ್ಪಿ || ದೊಂಗಲು…

ಮನಸ್ಯಾರ್ಹಾಂಗ ಕಾಣ್ತಾರಂತ
ಮನಸ್ಯಾರs ಅಂತ ತಿಳ್ದು
ನಿದ್ದೀ ಮಾಡಾಕ ಒಪ್ಪಿಗಿಪ್ಪಿ
ಹುಶಾರ್, ಹುಶಾರ್ | ಗೆಣೆಯಾ, ತಮ್ಮಾ, ಅಣ್ಣಾ
ಜಂಪು ಹತ್ತೀತು ತಪ್ಪಿಸಿ ಕಣ್ಣಾ || ದೊಂಗಲು…

………………………………………………………………..
ಬೇಂದ್ರೆಯವರ ಒಂದು ಅಪರೂಪ ಕವನವಿದು. ಬಹುಶಃ ಅವರ ಒಂದು ರೇಲವೇ ಪ್ರಯಾಣದಲ್ಲಿ ಈ ಕವನ ಅವರಿಗೆ ಸ್ಫುರಿಸಿರಬಹುದು. ಆ ಕಾಲದಲ್ಲಿ ಕರ್ನಾಟಕವು ಮಹಾರಾಷ್ಟ್ರ, ಆಂಧ್ರ ಹಾಗು ತಮಿಳುನಾಡಿನ ರೇಲವೇ ವಿಭಾಗಗಳಲ್ಲಿ ತ್ರಿಭಾಗವಾಗಿ ಹೋಗಿತ್ತಲ್ಲ, ಬೇಂದ್ರೆಯವರು ಆಂಧ್ರವಿಭಾಗದಲ್ಲಿ ಹಾಯ್ದು ಹೋಗುತ್ತಿರುವ ರೇಲವೇದಲ್ಲಿ ಕುಳಿತಿದ್ದಾರೆ. ‘ದೊಂಗಲುನ್ನಾರು ಜಾಗ್ರತ’ ಎನ್ನುವ ತೆಲುಗು ಬರಹದಲ್ಲಿರುವ ಎಚ್ಚರಿಕೆ ಅವರ ಕಣ್ಣಿಗೆ ಬಿದ್ದಿದೆ.

ಬೇಂದ್ರೆಯವರು ಮಾತುಗಾರರು. ಅವರ ಎದುರಿಗಿರುವಾತ ನಿರಕ್ಷರ ಕುಕ್ಷಿಯೇ ಆಗಿರಲಿ, ಪ್ರಕಾಂಡ ಪಂಡಿತನೇ ಆಗಿರಲಿ, ಇವರ ಮಾತನ್ನು ಬಾಯಿ ಬಿಟ್ಟುಕೊಂಡು ಕೇಳುತ್ತ ಕುಳಿತಿರಬೇಕು, ಅಂತಹ ವಾಗ್ಝರಿ ಅವರದು. ಈ ಕವನವೂ ಸಹ ಸಹಪ್ರಯಾಣಿಕರನ್ನು ಎಚ್ಚರಿಸುವ ಧಾಟಿಯಲ್ಲಿಯೇ ಇದೆ. (ಇವರು ಮಾತಾಡುತ್ತಿರುವಾಗ ಯಾರಿಗೆ ತಾನೇ ನಿದ್ದೆ ಹತ್ತೀತು?... ಆ ಮಾತೇ ಬೇರೆ!)

ಈ ಕವನದ ವೈಶಿಷ್ಟ್ಯವೆಂದರೆ, ಬೇಂದ್ರೆಯವರ ಅಕ್ಕಪಕ್ಕದಲ್ಲಿ ಇರುವ ಸಹಪ್ರಯಾಣಿಕರು ಅತಿ ಸಾಮಾನ್ಯ ವ್ಯಕ್ತಿಗಳು. ತಮ್ಮ ಜೊತೆಗೆ ಸಲುಗೆಯಿಂದ ಮಾತನ್ನಾಡುವ ಯಾರನ್ನಾದರೂ ಪಕ್ಕನೇ ನಂಬಿ ಬಿಡುವಂಥ ಅಮಾಯಕರು. ಆದರೆ ಬೇಂದ್ರೆಯವರು ಸ್ವಲ್ಪ ಹೆಚ್ಚಿಗೆ ತಿಳಿವಳಿಕೆ ಇದ್ದವರಲ್ಲವೆ? ಅಲ್ಲದೇ, ದೊಂಗಲುನ್ನಾರು ಜಾಗ್ರತ ಎನ್ನುವ ರೇಲವೇಬರಹವನ್ನು ಸಹ ನೋಡಿದ್ದಾರೆ. ತಮ್ಮ ಸಹಪ್ರಯಾಣಿಕರಿಗೆ, ಅವರ ಆಡುನುಡಿಯ ಶೈಲಿಯಲ್ಲಿಯೇ ಎಚ್ಚರಿಕೆ ಕೊಡಬೇಕೆನ್ನುವ ಕರ್ತವ್ಯಪ್ರಜ್ಞೆ ಹಾಗು ಹುಕಿ ಬೇಂದ್ರೆಯವರಲ್ಲಿ ಸ್ಫುರಿಸಿದೆ. ತಗೋ, ಸುರುವಾಯಿತು ಕವನಗಂಗಾವತರಣ: ದೊಂಗಲುನ್ನಾರೂsರೇ- ಜಾಗ್ರತs!

ಕವನದ ಮೊದಲ ಸಾಲಿನ ಭಾಗವಾದ ‘ದೊಂಗಲುನ್ನಾರೂsರೇs’  ಎನ್ನುವ ವಾಕ್ಯವನ್ನು ಗಮನಿಸಿರಿ. ಇದು ‘ದೊಂಗಲುನ್ನಾರೂs+ ರೇ’ ಎನ್ನುವ ಎರಡು ಪದಗಳ ಕೂಡಿಕೆಯಿಂದಾಗಿದೆ. ಕೇವಲ ‘ದೊಂಗಲುನ್ನಾರು ಜಾಗ್ರತ’ ಎಂದು ಹೇಳಿದ್ದರೆ ಇದು ಕೇವಲ ಒಂದು statement ಆಗುತ್ತಿತ್ತು. `ರೇ’ ಎನ್ನುವ ಪದದ ಮೂಲಕ ಬೇಂದ್ರೆಯವರು ತಮ್ಮ ಸಹಪ್ರಯಾಣಿಕರನ್ನು ಸಂಬೋಧಿಸುತ್ತಿದ್ದಾರೆ, ಅವರಿಗೆ ತೀವ್ರವಾದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಅದರಂತೆಯೇ `ದೊಂಗಲುನ್ನಾರೂs’ ಹಾಗು ‘ಜಾಗ್ರತs’ ಎಂದು ಎಳೆದು ಹೇಳುವ ಮೂಲಕ ನಿದ್ರಿಸುತ್ತಿರುವ ಪ್ರಯಾಣಿಕರ ಕಿವಿಗಳಲ್ಲಿ ತಮಟೆ ಬಾರಿಸುತ್ತಿದ್ದಾರೆ.

ಇಷ್ಟಾದರೆ ಸಾಕೆ? ಉಂಹೂಂ! ಇದು ಆಂಧ್ರಕ್ಕೆ ಸೇರಿದ ರೇಲವೇ ವಿಭಾಗವಾಗಿರುವದರಿಂದ, ರೇಲವೇ ಅಧಿಕಾರಿಗಳು ಎಚ್ಚರಿಕೆಯನ್ನು ತೆಲುಗಿನಲ್ಲಿ ಬರೆದಿದ್ದಾರೆ. ಆದರೆ ನಮ್ಮ ಕನ್ನಡದ ದೊಂಬರಿಗೆ, ತೆಲುಗಿನ ‘ದೊಂಗ’ದ ಅರ್ಥವಾದೀತೆ? ಆದುದರಿಂದಲೇ, ಬೇಂದ್ರೆಯವರು ತಮ್ಮ ಎಚ್ಚರಿಕೆಯನ್ನು ಮತ್ತೊಮ್ಮೆ ಕನ್ನಡದಲ್ಲಿ ಪುನರುಚ್ಚರಿಸುತ್ತಾರೆ: ‘ಎಚ್ಚರಿರು,  ಇದೊಂದೇ ಆಗಲಿ ವ್ರತಾ’.  ಸತತ ಎಚ್ಚರಿಕೆಯೇ ಸುರಕ್ಷಿತ ಪ್ರಯಾಣದ ಕವಚ! ಈ ಕಠಿಣ ನಿದ್ರಾಬಹಿಷ್ಕಾರವನ್ನು ಒಂದು ವ್ರತದಂತೆ ಸಾಧಿಸಬೇಕು!

ಬೇಂದ್ರೆಯವರ ಈ ಎಚ್ಚರಿಕೆಯ ಗಂಟೆಯನ್ನು ಎಲ್ಲರೂ ಸ್ವಾಗತಿಸುತ್ತಾರೆ ಅಂತೇನಿಲ್ಲ. ‘ಈ ಮುದುಕ ತಾನೂ ಮಲಗೂದಿಲ್ಲಾ, ನಮಗೂ ಬಿಡೂದಿಲ್ಲಾ’ ಅನ್ನೋ ಅಂಥಾ ಖಬರಗೇಡಿ, ಮುಗ್ಗಲಗೇಡಿ ಪ್ರಯಾಣಿಕರೂ ಇರ್ತಾರಲ್ಲ. ತಾವು ಏಕೆ ಸಹಪ್ರಯಾಣಿಕರಿಗೆ ಕಿಟಿಕಿಟಿ ಕೊಡ್ತಾ ಇದ್ದೇನಿ ಅನ್ನೋದನ್ನ ಇಂಥವರಿಗೆ ಬೇಂದ್ರೆಯವರು ವಿವರಿಸಲೇ ಬೇಕಲ್ಲ! ಅದಕ್ಕಾಗಿ ಸ್ವಪ್ರೇರಿತ, ಸ್ವಯಂಸೇವಕರಾಗಿ ಬಿಟ್ಟಿರುವ ಬೇಂದ್ರೆ ಮತ್ತೇ ಹೇಳುತ್ತಾರೆ:
‘ಇನ್ನಾರು ನಿಮ್ಗss ಎಚ್ರಾ ಕೊಡಾವ್ರಣ್ಣಾ, ಹಾದಿ ಐತಿ ಬಲೂ ಬಲೂ ದೂರಾ’.
ಬೇಂದ್ರೆ ಒಬ್ಬರನ್ನ ಬಿಟ್ಟರ, ಈ ಡಬ್ಬಿ ಒಳಗಿರೋ ಎಲ್ಲಾರೂ ನಿದ್ದೀಬಡಕರs. ಎಚ್ಚರಿಸೋ ಹೊರಿ ಬೇಂದ್ರೆಯವರ ತಲೀ ಮ್ಯಾಲs ಬಿದ್ದsದ!

‘ಬಲೂ ಬಲೂ’ ಎನ್ನುವ ಪದಗಳನ್ನು ಗಮನಿಸಿರಿ. ಮಾತನಾಡುವಾಗ, ಒಂದು ಪದವನ್ನು emphasise ಮಾಡಬೇಕೆನಿಸಿದರೆ, ಆ ಪದದ ಸ್ವರಾಂತವನ್ನು ಎಳೆಯುವ ರೂಢಿ ಕನ್ನಡದಲ್ಲಿದೆ. (ಉದಾಹರಣೆಗೆ: ನಿಮ್ಮ ಕೈಅಡಗಿ ಭಾಳಾss ಭಾಳಾss ರುಚೀs ಆಗ್ತೈತ್ರಿ!’)

ಬೇಂದ್ರೆ ತಮ್ಮ ಸಹಪ್ರಯಾಣಿಕರೊಡನೆ (ಅವರಿಗೆ ನಿದ್ರೆ ಹತ್ತಿದ್ದರೂ ಸಹ) ಮಾತನಾಡುತ್ತಿದ್ದಾರೆ. ಆದುದರಿಂದಲೇ ಅವರಿಗೆ ‘ಬಲು ಬಲೂ’ ಎಂದು ಎಳೆದೆಳೆದು ಹೇಳುತ್ತಿದ್ದಾರೆ! ಈ ಪ್ರಯಾಣಿಕರನ್ನು ಸುಲಿಯಲು ಬರುವ ಚೋರನು ದರೋಡೆಖೋರರಲ್ಲ, ನಯವಂಚಕನು. ಆದುದರಿಂದಲೇ ಇವನನ್ನು ಬೇಂದ್ರೆ ‘ಗಂಟs ಬೀಳ್ತಾನ ಅಲ್ಲಿನ ಚೋರಾ ; ನಿದ್ದೀ ಬ್ಯಾಡ್ರೆಪ್ಪಾ ಬಂದೀತು ಘೋರಾ’ ಎಂದು ವರ್ಣಿಸುತ್ತಾರೆ.

ಈ ಕಳ್ಳನೂ ಸಹ ಸಾಮಾನ್ಯ ಪ್ರಯಾಣಿಕನಂತೆಯೇ ಒಳಗೆ ನುಸುಳುತ್ತಾನೆ. ಇವನನ್ನು ಪ್ರತ್ಯೇಕಿಸಿ ಗುರುತಿಸುವುದು ಅಸಾಧ್ಯ. ಆದರೆ ಒಮ್ಮೆ ಇವನ ಕೈಚಳಕ ಸುರುವಾಯಿತೊ, ಆಗ ನೋಡಿರಿ ‘ಎಲ್ಲಾ ಖುಲ್ಲಮ್ ಖುಲ್ಲಾ!’ ಈ ಸಾಮಾನ್ಯನು ಆಗ ಅಸಾಮಾನ್ಯನಾಗುತ್ತಾನೆ. ಅದಕ್ಕೆಂದೇ ಬೇಂದ್ರೆಯವರು ಸಹಪ್ರಯಾಣಿಕರಿಗೆ ಸಾರಿ ಸಾರಿ ಹೇಳುತ್ತಿದ್ದಾರೆ: ‘ದೊಂಗಲುನ್ನಾರೂsರೇ-ಜಾಗ್ರತs’!

ಈ ಕಳ್ಳನ ಕ್ರಿಯಾವಿಧಾನ ಎಂಥಾದ್ದು? ಎಚ್ಚರಿರುವವರನ್ನು ಮಲಗಿಸುವುದು, ಅವರಲ್ಲಿ ಭದ್ರತೆಯ ಭಾವವನ್ನು ಹುಟ್ಟಿಸುವುದು, ಅವರು ಮಲಗಿಕೊಂಡ ಮೇಲೆ ಅವರನ್ನು ದೋಚುವುದು…..!
‘ಅಂದಾನು ಹೆದರ್ಬ್ಯಾಡೋ, ಹೆದರ್ಬ್ಯಾಡೋ ತಮ್ಮಾ
ಐತಿ, ರಾಜ್ಯಾನ ಇದು ನಮ್ಮ ನಿಮ್ಮಾ
ಬ್ಯಾರೆ ಬರ್ತಾರು ಯಾರು ?  ಮಕ್ಕೋ ಸುಮ್ಮಾ || ದೊಂಗಲು…’

ಪಾಪ, ಬೇಂದ್ರೆಯವರ ಎಚ್ಚರಿಕೆಗೆ ಯಾರೂ ಕಿವಿ ಕೊಟ್ಟಂತೆ ಕಾಣುವುದಿಲ್ಲ. ಇವರ ಕಂಠಶೋಷಣೆ ವ್ಯರ್ಥವಾಯಿತು.  ಕಳ್ಳನ ಕೈ ಮೇಲಾಯ್ತು. ಆಗ ಬೇಂದ್ರೆಯವರು ಕೈಚೆಲ್ಲಿದರು. ಅವರಲ್ಲಿ philosophic mood ಜಾಗೃತವಾಯಿತು. ನಮ್ಮ ಸಮಾಜದಲ್ಲಿ ನಡೆಯುವ ಈ ಕಳ್ಳಾಟದ ಮೂಲವನ್ನು ಬೇಂದ್ರೆಯವರು ಹುಡುಕಲು ಪ್ರಾರಂಭಿಸಿದರು. ಆಗ ಅವರಿಗೆ ಹೊಳೆದದ್ದನ್ನು ಅರೆಸ್ವಗತದಲ್ಲಿ ಬೇಂದ್ರೆಯವರು ಗುನುಗುಟ್ಟುತ್ತಾರೆ:
‘ಇದ್ದವ್ರ ಹರಕೊಳ್ಳಾಕ ಇಲ್ದವ್ರು ಬರ್ತಾರ
ಇದ್ದದ್ದು ಇಲ್ಲದ್ಯಾವ್ದೊ ಯಣ್ಣಾ
ಮನಸ್ಯಾರ s ಹೂಲಿ ಎಬಿಸಿ
ಮನಸ್ಯಾರ್ನ ತಿಂತಾರ
ದೇವ್ರs ತೆರೀಬೇಕೊ ಕಣ್ಣಾ
ಮುಚ್ಚಿಕೊಂಡೈತಿ | ಅಂತಃಕರ್ಣಾ’

ಸಮಾಜವ್ಯವಸ್ಥೆಯಲ್ಲಿ ಅಸಮಾನತೆ ಇರುವವರೆಗೂ ಈ ಕಳ್ಳಾಟ ನಡೆಯುವದೇ. ಇಲ್ಲದವರು ಇದ್ದವರಿಂದ ಕಸಿದುಕೊಳ್ಳುವರೇ. ಆದರೆ, ‘ಇದ್ದದ್ದು ಯಾವುದು? ಇಲ್ಲದ್ದು ಯಾವುದು? ನನ್ನದು ಯಾವದು? ಅವನದು ಯಾವದು?’ ಈ ತತ್ವವನ್ನು ನಮ್ಮ ಅನೇಕ ಸಂತರು ಪದೇ ಪದೇ ಹಾಡಿದ್ದನ್ನು ಕೇಳಿದ್ದೇವೆ. ಕನ್ನಡ ನಾಡಿನ ಹಳ್ಳಿಗರಲ್ಲಿ, ಸಾಮಾನ್ಯರಲ್ಲಿ ಈ ತತ್ವ ಮೈಗೂಡಿಕೊಂಡಿದೆ. ಆದರೆ, ದೋಚುವದೇ ವೃತ್ತಿಯಾದವರಿಗೆ ಈ ತತ್ವ ಬೇಡ. ಅವರಿಗೆ ಬೇಕು: ‘ಹೂಲಿ ಎಬ್ಬಿಸುವುದು’ ಅಂದರೆ ಗಲಾಟೆ ಎಬ್ಬಿಸುವುದು. ಇತ್ತೀಚಿನ ದಿನಗಳಲ್ಲಿ ಈ ‘ಹೂಲಿ ಎಬ್ಬಿಸುವ’ ಕೆಲಸ ಭಾರತದಲ್ಲಿ ಸಾರ್ವತ್ರಿಕವಾಗಿರುವದನ್ನು ನೋಡುತ್ತೇವೆ. ಎಲ್ಲಿ ನೋಡಿದಲ್ಲಿ ಗಲಾಟೆಗಳು, ಪ್ರತಿಭಟನೆಗಳು, ಬಂಧ್‍ಗಳು. ಅದಕ್ಕೆ ಬಲಿಯಾಗುವವರೂ ಮನುಷ್ಯರೇ, ಅದರ ಫಲಾನುಭವಿಗಳೂ (!) ಮನುಷ್ಯರೇ!
ಇದನ್ನೆಲ್ಲ ನೆನೆದ ಬೇಂದ್ರೆಯವರು ಕಣ್ಣುಗಳನ್ನು ನಿಮೀಲಿಸಿ ಹೇಳುತ್ತಾರೆ: ‘ದೇವ್ರs ತೆರೀಬೇಕೊ ಕಣ್ಣಾ’ ಈ ಮಾತೂ ಸಹ ಮುಗ್ಧ ಹಳ್ಳಿಗನ ಮಾತೇ, ಅವನಲ್ಲಿ ಹರಿಯುವ ದೈವನಂಬಿಗೆಯ ಮಾತೇ. ಆದರೆ ಇಲ್ಲಿ ಏಳುವ ಪ್ರಶ್ನೆ: ದೇವರು ತನ್ನ ಕಣ್ಣುಗಳನ್ನು ತೆಗೆಯಬೇಕೊ, ಅಥವಾ ಕಣ್ಣು ಮುಚ್ಚಿಕೊಂಡಂತಹ ಮನುಷ್ಯರ ಕಣ್ಣುಗಳನ್ನು ತೆಗೆಯಬೇಕೊ ಎನ್ನುವುದು. ಅದು ತಿಳಿಯುವುದು ಮುಂದಿನ ಸಾಲಿನಿಂದ: ‘ಮುಚ್ಚಿಕೊಂಡೈತಿ | ಅಂತಃಕರ್ಣಾ’
ದೇವರ ಅಂತಃಕರಣ ಮುಚ್ಚುವುದು ಅಸಾಧ್ಯ. ಆದುದರಿಂದ ಮನುಷ್ಯನ ಅಂತಃಕರಣ ಮುಚ್ಚಿದೆ. ಅವನ ಒಳಗಣ್ಣು ಮುಚ್ಚಿವೆ. ಆ ಕಣ್ಣುಗಳನ್ನು ದೇವರೇ ತೆಗೆಯಿಸಬೇಕು!

ನಮ್ಮ ಕಳ್ಳರಿಗೆ ಕಳ್ಳತನ ಸಹಜ ಸ್ವಭಾವವಾಗಿದೆ. ಸ್ವತಃ ದಾನಶೂರ ಕರ್ಣನೇ ಇವರಿಗೆ ಯಥೇಚ್ಛ ದಾನ ಕೊಡಲು ಕೈ ಎತ್ತಿ ನಿಂತಾಗಲೂ, ಅವನ ಕಿಸೆಗೆ ಕನ್ನ ಹಾಕಿದಾಗಲೇ ಇವರಿಗೆ ತೃಪ್ತಿ! ಸ್ವಾಹಾಕಾರವೇ ಇವರಿಗೆ ಸಿದ್ಧಿಸಿದ ಮಂತ್ರ! ಹಾಗಾಗಿ ಈ ಕಳ್ಳರ ಹಾವಳಿ ನಡೆದಲ್ಲೆಲ್ಲ ಹಾಹಾಕಾರ ಏಳುವುದು ಸಹಜವಾಗಿದೆ.
ಕರ್ಣನ ಕಿಸೇಕsನ ಹಾಕಾವ್ರು ಕನ್ನಾ
ಬಂದು ಎದ್ದೈತಿ ಅಲ್ಲಲ್ಲಿ ಹಾಹಾಕಾರ
ಸ್ವಾಹಾಕಾರಾನ ಬಲು | ದೊಡ್ಡ ಮಂತ್ರ ಆಗೈತಿ

ಬೇಂದ್ರೆಯವರ ಒಳಗಣ್ಣಿನ ಎದುರಿಗೆ ಈ ಚಿತ್ರಗಳು ಸರಿದಂತೆಲ್ಲ, ಅವರಿಗೆ ಅನಿಸುತ್ತದೆ:
ಬಂದೈತ್ಯೋ ಗೆಣೆಯಾ ಭಾಳ ಘೋರಾ
ಇಲ್ಲಿ ಪಾರಾದವ್ನs  ಖರೇ ಶೂರಾ || ದೊಂಗಲು…

ನಮ್ಮ ಹಳೆಯ ಪುರಾಣಕಥೆಗಳನ್ನು ಓದಿದವರು ಒಂದು ಮರುಕಳಿಸುವ ವಾಕ್ಯವನ್ನು ಅಲ್ಲಿ ಗಮನಿಸಿರಬಹುದು: ಕಲಿಯುಗವು ಘೋರವಾದದ್ದು. ಇನ್ನು ಮುಂದೆ ಇನ್ನೂ ಘೋರವಾದ ಕಾಲ ಬರುವುದು, ಇತ್ಯಾದಿ. ಬೇಂದ್ರೆಯವರೂ ಸಹ ಪುರಾಣದ ಭವಿಷ್ಯಕಾರನಂತೆ ಹೇಳುತ್ತಿದ್ದಾರೆ: ಇನ್ನು ಮುಂದೆ ಇನ್ನೂ ಘೋರವಾದ ಕಾಲ ಬರುತ್ತದೆ. ಆ ಹೊಡೆತದಲ್ಲಿ ಪಾರಾಗಿ ಹೋಗುವವನೇ ಖರೇ ಶೂರ! ಪುರಾಣಕಾರರಾದರೋ ಸರಳವಾದ ಉಪಾಯವನ್ನು ಹೇಳಿ ಬಿಡುತ್ತಾರೆ: ‘ದೇವರಲ್ಲಿ ನಂಬಿಕೆ ಇಟ್ಟು ಭಜನೆ ಮಾಡುತ್ತ ಇರಿ. ಅಂದರೆ ಸಂಸಾರಸಾಗರದಿಂದ ಪಾರಾಗಿ ಹೋಗುತ್ತೀರಿ.’
ಆದರೆ ಸ್ವತಃ ಬೇಂದ್ರೆಯವರಿಗೆ ಸಂಶಯಗಳು ಕಾಡುತ್ತಿವೆ. ದೇವರನ್ನ ನಂಬಬೇಕೊ ಬ್ಯಾಡೊ, ಬಾಜೂದವನ್ನ ನಂಬಬೇಕೊ ಬ್ಯಾಡೊ? ತಮ್ಮ ಎಚ್ಚರಿಕೆಯ ಬೋಧನಾ ಎಷ್ಟರ ಮಟ್ಟಿಗೆ ಉಪಯುಕ್ತ?
ಆದುದರಿಂದಲೇ ಅವರು ತಮ್ಮ ಸಹಪ್ರಯಾಣಿಕರೆದುರಿಗೆ ಹೇಳುತ್ತಾರೆ:
ಅಂಬಿಕಾತನಯನಿಗು ಇತಿಮಿತಿ ಬಿದ್ದೈತಿ
ನೆಂಬಿಕ್ಯಾರೆ ಯಾರ್ದಪಾ ಇಲ್ಲಿ
ಪೂಜಾರೀನs ಕೂತು | ದೇವರ್ನ ಕದ್ದರ
ಇನ್ನ ಫಜೀತಿ ಬ್ಯಾರೆ ಯಾವ್ದೈತಿ?

ಸಮಾಜವ್ಯವಸ್ಥೆಯಲ್ಲಿಯೇ ಮೋಸ ಅಡಗಿದೆ. ‘ನಾವೆಲ್ಲರೂ ಅಣ್ಣ ತಮ್ಮಂದಿರು’ ಎಂದು ಸೋದರಭಾವ ಹೇಳುವವರದೇ ಒಂದು ಗ್ಯಾಂಗು. ಇವರು ಚೋದ್ಯರು ಎಂದರೆ ವಿಚಿತ್ರವಾಗಿ ಇರುವವರು. ‘ಚೋದರು ಮಾದರು’ ಎನ್ನುವ ಪದಗಳನ್ನು ಬೇಂದ್ರೆ ಬಳಸಿದ್ದಾರೆ. ಕೀಳುಮಟ್ಟದ ಜನರು ಬೈದಾಡುವಾಗ ‘ಮಾದರಚೋತ್’ ಎಂದು ಬೈಯುವದನ್ನು ನೀವು ಕೇಳಿರಬಹುದು. ಇದರ ಕನ್ನಡ ಅನುವಾದವನ್ನು ‘ತಾಯಿಗ್ಗಂಡ’ ಎಂದು ಸುಧಾರಿಸಿ ಹೇಳಬಹುದು. ಇಂತಹ ಅನೇಕ ಗ್ಯಾಂಗುಗಳು ಇಲ್ಲಿವೆ. ಇವರು ಮೇಲ್ನೋಟಕ್ಕೆ ಸತ್ಯನಿಷ್ಠ ಹೋರಾಟಗಾರರು.

ಬೇಂದ್ರೆಯವರು ಬಹುಶಃ ಇದೀಗ ರಾಯಚೂರಿನ ಹತ್ತಿರ ಬಂದಿರಬಹುದು.  ಇಲ್ಲಿ ಮುಸಲ್ಮಾನ ಧರ್ಮೀಯರು ಬಹುಸಂಖ್ಯೆಯಲ್ಲಿ ಇರುವದರಿಂದ  ಮುಸ್ಲಿಮ್ ಧರ್ಮದ ಕೆಲವು ಸಂಕೇತಗಳನ್ನು ಬೇಂದ್ರೆ ಬಳಸಿಕೊಂಡಿದ್ದಾರೆ. ಕರ್ಬಲಾ ಕಾಳಗದ ಸಂದರ್ಭದಲ್ಲಿ ‘ಯಾ ಅಲೀ ಧೂಲಾ’ ಎನ್ನುವ ಘೋಷಣೆ ಕೇಳಿ ಬರುತ್ತದೆ. ಇದು ಪ್ರಾಮಾಣಿಕ ಹೋರಾಟಗಾರರ ಕೂಗು. ಆದರೆ ಇಲ್ಲಿ ಆ ಕೂಗು ಅಪ್ರಾಮಾಣಿಕರ ಕೈಯಲ್ಲಿ ಸಿಕ್ಕಿದೆ.  
ಸೋದsರ ಭಾವ ಹೇಳೂವ
ಚೋದ್ಯರು ಚೋದರು ಮಾದರು ಕೂಡ್ಯಾರು
ಗ್ಯಾಂಗ, ಗ್ಯಾಂಗೀsಗೆ ಬ್ಯಾರೆ ಹೆಸರೈತಿ
ಯಾಲೀ ಧೂಲಾ ಅಂತ ಹೈದೋಸ ನಡಿಸ್ಯಾರ

ಇದಕ್ಕೆ ಕಾರಣ ಎಂದರೆ ಮನುಷ್ಯತ್ವದಲ್ಲಿಯೇ ದೋಷವಿದೆ, ಹೊರಗೆ ಮನುಷ್ಯರೂಪ, ಒಳಗೆ ನರಿ, ತೋಳ ಇತ್ಯಾದಿ.
ಮನಸ್ಯಾರ್ಕಿ ಒಳಗs ಕಸರೈತಿ
ಸಾಲಾs ಸಾಲೀ ಅಂತ| ನೆಂಟಸ್ತ್ಕಿ ಬೆಳಸ್ತಾರು
ಸೋದೇರು ಭಾನಚೋದ ಮಂದಿ | ಭಾಳ ಬೆರ್ಕಿ
ಅಲ್ಲಿ ತುರ್ಕಿ, ಇಲ್ಲಿ ತುರ್ಕಿ, ಹೊಡದಾರು ನಡವs ಗಿರ್ಕಿ
ತೂಕಡಿಸಬ್ಯಾಡೋ ಜೋಲಿ ತಪ್ಪಿ || ದೊಂಗಲು…

ಈ ಗಂಟುಕಳ್ಳರು ಸಹಪ್ರಯಾಣಿಕರನ್ನು ‘ಸಾಲಾ, ಸಾಲೀ’ (=ಹೆಂಡತಿಯ ತಮ್ಮ/ತಂಗಿ) ಎಂದು ಪ್ರೀತಿಯಿಂದೆನ್ನುವಂತೆ ಮಾತನಾಡಿಸುತ್ತಾರೆ. ‘ಯಾಕಡೇರಿ, ಪೌಣ್ಯಾರ?’ ಎಂದು ನೆಂಟಸ್ತ್ಕಿಯನ್ನು ಬೆಳಸುತ್ತಾರೆ. ‘ಸೋದೇರು’ ಅನ್ನುವಲ್ಲಿ ಬೇಂದ್ರೆ ಶ್ಲೇಷೆಯನ್ನು ಬಳಸಿದ್ದಾರೆ. ಈ ಜನ ಸೋದರಭಾವನೆಯನ್ನು ಪ್ರದರ್ಶಿಸುತ್ತ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದರಿಂದ ಇವರು ಸೋದೇರು. ಎರಡನೆಯದಾಗಿ ಇವರು ‘ಸೌದಾ’ ಎಂದರೆ ತಮ್ಮ ಧಂಧೆ ನಡೆಯಿಸುವ ಪಕ್ಕಾ ವ್ಯಾಪಾರಿಗಳು. ಇವರನ್ನು ಬೇಂದ್ರೆ ಇವರು ಬಳಸುವ ಭಾಷೆಯಲ್ಲಿಯೇ ವರ್ಣಿಸುತ್ತಾರೆ: ‘ಭಾನಚೋದ ಮಂದಿ’ (=ಸೋದರಿಯ ಜೊತೆಗೆ ಹಾದರ ಮಾಡುವವ.) ಇವರು ಭಾಳಾ ಬೆರಕಿ. ಉತ್ತರ ಕರ್ನಾಟಕದಲ್ಲಿ ಬೆರಕಿ ಮನಷ್ಯಾ ಎಂದರೆ ಜಾಬಾಲ, street smart ಮನುಷ್ಯ. ದಕ್ಷಿಣ ಕರ್ನಾಟಕದಲ್ಲಿ ಇದರರ್ಥ hybrid. ರೇಲವೇ ಡಬ್ಬಿಯಲ್ಲಿ ಬೇಕೆಂತಲೇ ಗದ್ದಲ ಮಾಡಿ, ಜಾಗಾ ಸಿಕ್ಕಲ್ಲೆಲ್ಲ ಸೇರಿಕೊಳ್ಳುತ್ತ ಹೋಗುವವರು. ತುರ್ಕಿ ಎನ್ನುವ ಪದಕ್ಕೂ ವಿಭಿನ್ನ ಅರ್ಥಗಳನ್ನು ಮಾಡಬಹುದು. ಮುಸ್ಲಿಮ್ ಆಳಿಕೆ ಇದ್ದಾಗ, ಧರ್ಮೋಪದೇಶಕ್ಕಾಗಿ ಹಾಗು ಸೈನ್ಯದ ಉದ್ಯೋಗಕ್ಕಾಗಿ ಅನೇಕ ತುರ್ಕೀಯರು ಹಾಗು ಪಠಾಣರು ಇಲ್ಲಿಗೆ ಬರುತ್ತಿದ್ದರು. ಹೀಗಾಗಿ ಮುಸ್ಲಿಮ್ ವ್ಯಕ್ತಿಯನ್ನು ‘ತುರಕ’ ಎಂದು ಕರೆಯುವದೇ ಇಲ್ಲಿಯ ರೂಢಿಯಾಗಿದೆ.
ಈ ಗಂಟುಕಳ್ಳರು ಅಲ್ಲಲ್ಲಿ ತುರಕಿಕೊಂಡು, ತಮ್ಮ ಕೆಲಸವಾದ ತಕ್ಷಣ ‘ಗಿರ್ಕಿ’ ಹೊಡೆಯುತ್ತಾರೆ ಅಂದರೆ ಗರ್ರನೆ ತಿರುಗಿ ಕಾಣದಾಗುತ್ತಾರೆ.
ಆದುದರಿಂದ ಬೇಂದ್ರೆ ಹೇಳುತ್ತಾರೆ: ತಮ್ಮಾ, ಎಚ್ಚರಿರು ತೂಕಡಿಸಬ್ಯಾಡಾ; ನಿನ್ನ ಜೋಲಿ ತಪ್ಪಿದಾಗ, ನಿನ್ನ ಕಿಸೇಕ್ಕ ಕನ್ನ ಬಿದ್ದೀತು!

ಬೇಂದ್ರೆ ಇದೀಗ ಕೊನೆಯ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. ಈ ಕಳ್ಳರು ಸಾಮಾನ್ಯ ಮನುಷ್ಯರಂತೆಯೇ ಕಾಣುತ್ತಾರೆ. ಹಾಗಂತ ನೀನು ನಂಬಿ ಬಿಡಬ್ಯಾಡಾ. ಅವರ ಮಾತಿಗೆ ಮರುಳಾಗಿ ನಿದ್ದೀ ಮಾಡಲಿಕ್ಕೆ ಒಪ್ಪಬ್ಯಾಡಾ.  ತೂಕಡಿಕೆ ಬಂದೀತು, ಜಂಪು ಹತ್ತೀತು. ‘ತಪ್ಪೀಸಿ ಕಣ್ಣಾ’ ಎನ್ನುವ ಪದಗುಚ್ಛದಲ್ಲಿಯ ಇಬ್ಬಗೆಯ ಅರ್ಥಗಳನ್ನು ನೋಡಿರಿ. ಒಂದು ಅರ್ಥವೆಂದರೆ,  ಕಣ್ಣು ತೆಗೆದುಕೊಂಡಿದ್ದೇವೆ ಎಂದು ತಿಳಿದುಕೊಂಡಿರುವಂತೆಯೇ, ಕಣ್ಣು ಮುಚ್ಚಿಕೊಳ್ಳುವುದು. ಎರಡನೆಯದು ಎಚ್ಚರಿಕೆಯು ಮರವಾಗಿ, ಕಣ್ಣು ಮುಚ್ಚಿಕೊಳ್ಳುವುದು.
ಮನಸ್ಯಾರ್ಹಾಂಗ ಕಾಣ್ತಾರಂತ
ಮನಸ್ಯಾರs ಅಂತ ತಿಳ್ದು
ನಿದ್ದೀ ಮಾಡಾಕ ಒಪ್ಪಿಗಿಪ್ಪಿ
ಹುಶಾರ್, ಹುಶಾರ್ | ಗೆಣೆಯಾ, ತಮ್ಮಾ, ಅಣ್ಣಾ
ಜಂಪು ಹತ್ತೀತು ತಪ್ಪಿಸಿ ಕಣ್ಣಾ || ದೊಂಗಲು…

ಬೇಂದ್ರೆಯವರು ಇಷ್ಟು ಹೇಳುವವರೆಗೆ ಬಹುಶಃ ಅವರ ನಿಲ್ದಾಣ ಬಂದಿರಬಹುದು. ಹೀಗಾಗಿ ಅವರ ಕವನ ಇಲ್ಲಿಗೇ ಕೊನೆಗೊಂಡಿದೆ!

Friday, July 1, 2016

ಉಡತಾ ಜ್ಯುಡಿಶಿಯರಿಇದೆಲ್ಲಾ ಆಗಿದ್ದು ನನ್ನ ಅಜ್ಜಿಯಿಂದ.
ಸಾಯುವ ಮೊದಲು ‘ಸತ್ಯ ಹರಿಶ್ಚಂದ್ರ’ಸಿನೆಮಾವನ್ನು ನೋಡಿಯೇ ಸಾಯುವೆ ಎಂದು ನನ್ನ ಅಜ್ಜಿ ಹಟ ಹಿಡಿದಿದ್ದಳು. ‘ಅಣ್ಣಾವರ’ ಮೇಲೆ ಅಷ್ಟು ಪ್ರೀತಿ ಅವಳಿಗೆ. ಹಾಗೂ ಹೀಗೂ ‘ಸತ್ಯ ಹರಿಶ್ಚಂದ್ರ’ ಸಿನೆಮಾದ ರೀಲು ದೊರಕಿಸಿಕೊಂಡೆ. ಆಮೇಲೆ ತಿಳಿಯಿತು. ನಮ್ಮ ಸರ್ವೋಚ್ಚ ನ್ಯಾಯಾಲಯದವರು ನೀಡಿದ ಆದೇಶದ ಮೇರೆಗೆ ಇನ್ನು ಮೇಲೆ ಎಲ್ಲಾ ಸಿನೆಮಾಗಳನ್ನೂ ಸರ್ವೋಚ್ಚ ನ್ಯಾಯಾಲಯದ ಏಕಸದಸ್ಯಪೀಠದೆದುರಿಗೆ ಮೊದಲು ಪ್ರದರ್ಶನ ಮಾಡಬೇಕು ಎಂದು. ಇದನ್ನು ಚಿತ್ರೋದ್ಯಮದ ನಮ್ಮ ಗೆಳೆಯರೊಬ್ಬರು ತಿಳಿಸಿದರು.

‘ಎಂಥಾ ವಿಚಿತ್ರ ನಿಯಮ! ಸೆನ್ಸಾರ್ ಬೋರ್ಡಿನವರು ಈಗಾಗಲೇ ಈ ಸಿನೆಮಾಕ್ಕೆ U ಪ್ರಮಾಣಪತ್ರವನ್ನು ಕೊಟ್ಟಿದ್ದಾರಲ್ಲ’ ಎಂದು ನನ್ನ ಗೆಳೆಯನನ್ನು ಕೇಳಿದೆ.
‘ಅದೆಲ್ಲಾ ಹಳೆಯ ಕಥೆ. ‘ಉಡತಾ ಪಂಜಾಬ’ದ ಬಗ್ಗೆ ಕೇಳಿಲ್ಲವೇನು ನೀನು? ಸೆನ್ಸಾರ್ ಬೋರ್ಡಿನ ಮೇಲೆ ಸುಪ್ರೀಮ್ ಕೋರ್ಟಿನವರು ಕೆಂಡಾಮಂಡಲವಾಗಿದ್ದಾರೆ. ಹಳೆಯ ಸಿನೆಮಾ ಇರಲಿ, ಹೊಸ ಸಿನೆಮಾ ಇರಲಿ, ಎಲ್ಲಾ ಸಿನೆಮಾಗಳನ್ನೂ ಸುಪ್ರೀಮ್ ಕೋರ್ಟಿನವರು ಮೊದಲು ನೋಡುತ್ತಾರೆ. ತಮ್ಮ ಸಲಹೆಗಳನ್ನು ನೀಡುತ್ತಾರೆ.  ಸೆನ್ಸಾರ್ ಬೋರ್ಡಿನದು ಏನಿದ್ದರೂ ಪ್ರಮಾಣಪತ್ರ ಕೊಡುವ ಕೆಲಸ ಅಷ್ಟೇ!’

 ‘ಸತ್ಯ ಹರಿಶ್ಚಂದ್ರ’ ಸಿನೆಮಾದ ಡಬ್ಬಾ ಹಿಡಿದುಕೊಂಡು ದಿಲ್ಲಿಗೆ ಹೋದೆ. ದಿಲ್ಲಿಯಲ್ಲಿ ನನ್ನ ಹಳೆಯ ಗೆಳೆಯನೊಬ್ಬ ಇದ್ದಾನೆ. ಅವನ ಮನೆಯಲ್ಲಿಯೇ ಠಿಕಾಣಿ ಹೂಡಿದೆ. ನನ್ನ ಗೆಳೆಯನ ಮಗನು ಸಕಲಕಲಾವಲ್ಲಭ. ಅವನಿಂದಾಗಿ ಕೆಲಸ ಸುಲಭವಾಯಿತು. ಏಕಸದಸ್ಯಪೀಠದೆದುರಿಗೆ ಅವನೇ ನನ್ನನ್ನು ಕರೆದುಕೊಂಡು ಹೋದ.

ನನ್ನ ಸರದಿ ಬಂದೊಡನೆ ಡಬ್ಬಾ ಹಿಡಿದುಕೊಂಡು ಒಳಗೆ ಕಾಲಿಟ್ಟೆ. ಪೀಠದ ಮೇಲೆ ತಲೆಯನ್ನು ಬೋಳಿಸಿಕೊಂಡು, ತಲೆಯ ಎರಡೂ ಬದಿಗಳಲ್ಲಿ ಹಾಗು ನಡುಭಾಗದಲ್ಲಿ ಜುಟ್ಟನ್ನು ಬಿಟ್ಟುಕೊಂಡು, ಕೋತಿಯಂತೆ ಕಾಣುತ್ತಿದ್ದ ಜೀನ್ಸಧಾರಿ ತರುಣನೊಬ್ಬ ಕುಳಿತುಕೊಂಡಿದ್ದ. ಗದ್ದದ ಮೇಲೆ ಅರ್ಧ ಕತ್ತರಿಸಿದ ಗಡ್ಡ ಬೇರೆ. ಈತ ನ್ಯಾಯಾಧೀಶನೆ ಎಂದು ನನಗೆ ಆಶ್ಚರ್ಯವಾಯಿತು. ಆದರೆ ನನ್ನ ಗೆಳೆಯನ ಮಗನ ಸನ್ನೆಯನ್ನೆ ಅರಿತು, ನಾನು ಈ ಕೋತಿಗೇ ಒಂದು ನಮಸ್ಕಾರ ಮಾಡಿದೆ.

‘ಏನ್ರೀ, ನಿಮ್ಮ ಚಿತ್ರದ ಹೆಸರೇನು?’ ನ್ಯಾಯಾಧೀಶರು ಕೇಳಿದರು.
‘ಸತ್ಯ ಹರಿಶ್ಚಂದ್ರ, ಸsರ’, ನಾನು ಉತ್ತರಿಸಿದೆ.
ನ್ಯಾಯಾಧೀಶರು ಪಕಪಕನೆ ನಕ್ಕರು.
‘ನಿಮ್ಮ ಚಿತ್ರಕ್ಕೆ ಪ್ರಮಾಣಪತ್ರ ಕೊಡಲು ಸಾಧ್ಯವಿಲ್ಲ, ನಿಮ್ಮ ಡಬ್ಬಾ ಹೊತ್ತುಕೊಂಡು ಅಬೌಟ್-ಟರ್ನ ಮಾಡಿರಿ’, ಎಂದ ಆ ಪಡ್ಡೆ ಹುಡುಗ.
`ಸsರ್, ದಯವಿಟ್ಟು ನನಗೊಂದು ಅವಕಾಶ ಕೊಡರಿ. ಈ ಚಿತ್ರವನ್ನು ನೋಡಿಯೇ ಸಾಯುತ್ತೇನೆ ಎಂದು ನನ್ನ ಅಜ್ಜಿ ಹಟ ಮಾಡುತ್ತಿದ್ದಾಳೆ. ಅವಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಅವಳು ಹರಿಶ್ಚಂದ್ರನನ್ನು ನೋಡಿಯೇ ಸಾಯಬೇಕು’ ಎಂದು ನಾನು ಗೋಗರೆದು ಹೇಳಿದೆ.
ನ್ಯಾಯಾಧೀಶರ ಕಣ್ಣಲ್ಲಿ ಕರುಣೆ ಮಿಂಚಿತು.
‘ಅಲ್ಲಪ್ಪ, ನಾವು ಕಲಿಯುಗದಲ್ಲಿ ಇದ್ದೇವೆ ಎನ್ನುವುದು ನಿಮಗೆ ಗೊತ್ತಿಲ್ಲವೆ? ಇಂತಹ ಸತ್ಯಯುಗದ ಚಿತ್ರವನ್ನು ಏಕೆ ತೋರಿಸುತ್ತೀರಿ?’ ನ್ಯಾಯಾಧೀಶರು ಕೇಳಿದರು.
‘ಸsರ್, ಸತ್ಯ ಹರಿಶ್ಚಂದ್ರ ಭಾರತೀಯರಿಗೆ ಒಬ್ಬ role model. ಇಂತಹ ಚಿತ್ರಗಳನ್ನು ನೋಡುವದರಿಂದ ನಮ್ಮ ಯುವಪೀಳಿಗೆಯ ನೈತಿಕ ಮಟ್ಟ ಸುಧಾರಿಸಲಿ ಎನ್ನುವುದು ನಮ್ಮ ಉದ್ದೇಶ’ ಎಂದು ಬೊಗಳೆ ಬಿಟ್ಟೆ.

ನ್ಯಾಯಾಧೀಶರು ಕಣ್ಣುಗಳು ಕೋಪದಿಂದ ಕೆಂಪಾದವು. ‘ರೀ ಮಿಸ್ಟರ್, ವಾಸ್ತವತೆ ಏನು ಎನ್ನುವುದು ನಿಮಗೆ ಗೊತ್ತೇನ್ರಿ? ಈ ಕಾಲದಲ್ಲಿ ಯಾರಾದರೂ ಸತ್ಯವನ್ನು ಹೇಳುತ್ತಾರೆಯೆ? ಇಂತಹ ಅವಾಸ್ತವ ಚಿತ್ರವನ್ನು ತೋರಿಸುವದರಿಂದ, ಹದಿವಯಸ್ಸಿನ ಹುಡುಗರು ಮನೋರೋಗಿಗಳಾಗಲಿಕ್ಕಿಲ್ಲವೆ? ಸತ್ಯ ಹರಿಶ್ಚಂದ್ರ, ಮಹಾತ್ಮಾ ಗಾಂಧಿ ಇಂಥವರೆಲ್ಲ role model ಆದರೆ,ಭಾರತದ ಗತಿ ಏನು? ಆಧುನಿಕ ಕಾಲಕ್ಕೆ ಆಧುನಿಕ role model ಬೇಕಪ್ಪಾ. ಒಂದು ಸಲ ‘ಉಡತಾ ಪಂಜಾಬ’ ಚಿತ್ರವನ್ನು ನೋಡಿಕೊಂಡು ಬನ್ನಿರಿ. ನಿಮಗೇ ಅರ್ಥವಾಗುತ್ತದೆ. ಈಗಂತೂ  ಎತ್ತಿಕೊಂಡು ಹೋಗಿರಿ ಈ ಡಬ್ಬಾನ್ನ’, ನ್ಯಾಯಾಧೀಶರು ಗುಡುಗಿದರು.
ಥಟ್ಟನೆ ನ್ಯಾಯಾಧೀಶರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿದೆ. ‘ಸsರ್, ನೀವು ಬೇಕಾದಷ್ಟು ಕಟ್ಸ್‍ಗಳನ್ನು ಮಾಡಿರಿ. ಆದರೆ ಚಿತ್ರಕ್ಕೆ ಪ್ರಮಾಣಪತ್ರವನ್ನು ದಯವಿಟ್ಟು ಕೊಡಿಸಿರಿ’ ಎಂದು ವಿನಂತಿಸಿದೆ.

ಸರಿ, ನ್ಯಾಯಾಧೀಶರು ಚಿತ್ರವನ್ನು ವೀಕ್ಷಿಸಿದರು, ನಡುನಡುವೆ ಮುಖವನ್ನು ಸಿಂಡರಿಸುತ್ತಿದ್ದರು.
‘ಈ ಚಿತ್ರಕ್ಕೆ ಈಗಾಗಲೇ ಹಳೆಯ ಸೆನ್ಸಾರ್ ಬೋರ್ಡಿನವರು U ಪ್ರಮಾಣಪತ್ರ ಕೊಟ್ಟಿದ್ದಾರೆ. ನಿಮಗೆ ಎಲ್ಲರೂ ನೋಡಬಹುದಾದ ಪ್ರಮಾಣಪತ್ರ ಬೇಕಾದರೆ, ಈ ಚಿತ್ರಕ್ಕೆ ಕೆಲವೊಂದು addsಗಳನ್ನು ಹಾಗು replacementsಗಳನ್ನು ಮಾಡಬೇಕಾಗುತ್ತದೆ, ತಿಳಿಯಿತೊ?’
‘ಆಗಲಿ, ಸsರ್’, ಎಂದೆ.
‘ಮೊದಲನೆಯದಾಗಿ ಚಿತ್ರದ ಹೆಸರನ್ನು ‘ಉಡತಾ ಹರಿಶ್ಚಂದ್ರ’ ಎಂದು ಬದಲಾಯಿಸಬೇಕು. ದರಬಾರ್ ದೃಶ್ಯದೊಂದಿಗೆ ಚಿತ್ರವನ್ನು ಪ್ರಾರಂಭಿಸಿ, ಹರಿಶ್ಚಂದ್ರನು ಭಾಂಗ್ ಸೇವಿಸುತ್ತ ಕೂತಿರುವದನ್ನು ತೋರಿಸಬೇಕು. ಆತನ ಎದುರಿಗೆ ಆಸ್ಥಾನ ನರ್ತಕಿಯರು ಕ್ಯಾಬರೆ ಡಾನ್ಸ್ ಮಾಡುತ್ತಿರಲಿ. ಅವರ ಕುಣಿತ ಮುಗಿಯುತ್ತಿದ್ದಂತೆ, ಹರಿಶ್ಚಂದ್ರನೂ ಸಹ ಅವರ ಜೊತೆಗೆ ಕುಣಿಯುವದನ್ನು ತೋರಿಸಿರಿ.

‘ಆದರೆ ಸsರ್,…..ರಾಜಾ ಹರಿಶ್ಚಂದ್ರ ಹೀಗಿರಲಿಲ್ಲ..’ ಎಂದು ನಾನು ರಾಗವೆಳೆದೆ.
‘ವಾಸ್ತವತೆಯನ್ನು ತೋರಿಸಿರಿ, ಮಿಸ್ಟರ್! ಆತ ರಾಜಾ ಇದ್ದನಲ್ಲವೆ? ಹಾಗಿದ್ದಾಗ, ಆತ ಇಂತಹ ಎಲ್ಲವನ್ನೂ ಮಾಡುತ್ತಿರಲೇ ಬೇಕು.’
‘ಸsರ್, ಆತನ ಎದುರಿಗೆ ವಿಶ್ವಾಮಿತ್ರನು ಸೃಷ್ಟಿಸಿದ ಹುಡುಗಿಯರು ನಾಚು ಮಾಡುವ ದೃಶ್ಯವೊಂದು ಬರುತ್ತದೆ. ಆವಾಗಲೂ ಇಂತಹದೆ ಒಂದು ನಂಗಾ ನಾಚ್ ತೋರಿಸೋಣವೆ?’. ನಾನು ಕೇಳಿದೆ.
‘ಬೇಡ,ಅಲ್ಲಿ ಹುಡುಗಿಯರ ಕುಣಿತದ ಬದಲು ಬೆತ್ತಲೆ ಹುಡುಗರು ಕುಣಿಯುವ ಒಂದು ಸೀನ್ ಹಾಕಿರಿ’, ನ್ಯಾಯಾಧೀಶರು ಹೇಳಿದರು.
‘ಸsರ್, ಆದರೆ ಆ ಹುಡುಗಿಯರು ಹರಿಶ್ಚಂದ್ರನನ್ನು ಮದುವೆಯಾಗಲು ಬಂದಿದ್ದರು’, ನಾನು ಹೇಳಿದೆ.
‘ಅದಕ್ಕೇನೀಗ? ಈ ಹುಡುಗರೂ ಸಹ ಅದೇ ಡಿಮಾಂಡ್ ಮಾಡಲಿ, ತಪ್ಪೇನಿದೆ? LGBTಯನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ. ಹರಿಶ್ಚಂದ್ರನು ಮಂಗಳಮುಖಿಯರನ್ನು ಮದುವೆಯಾದನು ಎಂದು ತೋರಿಸುವದರಿಂದ ನಿಮ್ಮ ಚಿತ್ರಕ್ಕೆ ಇನ್ನಷ್ಟು ವಾಸ್ತವತೆ ಬರುತ್ತದೆ.’

ಈ ಸಿನೆಮಾದಲ್ಲಿ ನಮ್ಮ ನ್ಯಾಯಾಧೀಶರು ಮೆಚ್ಚಿಕೊಂಡು ಖುಶಿಪಟ್ಟ ದೃಶ್ಯವೂ ಇತ್ತು ಎಂದರೆ ಯಾರಿಗಾದರೂ ಆಶ್ಚರ್ಯವಾದೀತು. ಸ್ಮಶಾನದಲ್ಲಿ ಕಳ್ಳು ಕುಡಿಯುತ್ತ ಕುಳಿತ ಎಂ. ಪಿ. ಶಂಕರರ ಎದುರಿಗೆ ಇಬ್ಬರು ಹುಡುಗಿಯರು ಕುಣಿಯುವ ದೃಶ್ಯವದು.
‘ನಿನ್ನ ನಾನು, ನನ್ನ ನೀನು,
ಕಾದುಕೊಂಡು ಕೂತುಕೊಂಡ್ರೆ
ಈ ಆಸೇವು ತೀರೊದೆಂಗೆ ಚಂದಮಾಮಾ,
ಬೇಕಾದ್ದು ಕೊಡುತೀಯಾ ಚಂದಮಾಮಾ’
ಎನ್ನುವ ಹಾಡಿನ ದೃಶ್ಯವಿದು.
ಸಿನೆಮಾದಲ್ಲಿಯ ಎಮ್.ಪಿ.ಶಂಕರನಿಗಿಂತ ಮೊದಲು ನಮ್ಮ ನ್ಯಾಯಾಧೀಶರೇ ವ್ಯಾಸ ಮಹರ್ಷಿಯಂತೆ ಕೈಎತ್ತಿ ಕೂಗಿದರು: ‘ಕೊಡ್ತೀವಿ, ಕೊಡ್ತೀವಿ!’ (‘ಕೈ ಎತ್ತಿ ಕೂಗುತಿಹೆ ಕೇಳುವರೆ ಇಲ್ಲ’—ವ್ಯಾಸ ಮಹರ್ಷಿ)
‘ಅಹಾ! ಈ ದೃಶ್ಯವಾದರೆ ಪರವಾಗಿಲ್ಲ. ವಾಸ್ತವತೆಗೆ ಹತ್ತಿರವಾಗಿದೆ’ ಎಂದು ನ್ಯಾಯಾಧೀಶರು ಶಭಾಶಗಿರಿ ಕೊಟ್ಟರು.

‘ಸsರ್, ಚಿತ್ರದ ಕೊನೆಯಲ್ಲಿ ಸತ್ಯಕ್ಕೆ ಜಯವಾಗುತ್ತದೆ ಎಂದು ಹೇಗೆ ತೋರಿಸುವುದು?’, ನನ್ನ ಮತ್ತೊಂದು ಪ್ರಶ್ನೆ.
‘ಎಂಥಾ ಮೂರ್ಖರಪ್ಪಾ ನೀವು? ವಾಸ್ತವತೆಗೆ ಜಯವಾಗುತ್ತದೆ ಎನ್ನುವುದನ್ನು ತೋರಿಸಬೇಕೆ ಹೊರತು, ಸತ್ಯಕ್ಕೆ ಜಯವಾಗುತ್ತದೆ ಎಂದಲ್ಲ. ಹರಿಶ್ಚಂದ್ರನಿಂದ ಹೊಡೆದುಕೊಂಡ ದುಡ್ಡನ್ನೆಲ್ಲ ವಿಶ್ವಾಮಿತ್ರನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದ ಎಂದು ತೋರಿಸಿರಿ. ರಿಯೋ ಕಾರ್ನಿವಾಲ್‍ದಲ್ಲಿ ಮಜಾ ಮಾಡುತ್ತಿದ್ದ ಎನ್ನುವುದನ್ನು ತೋರಿಸಿರಿ’, ನ್ಯಾಯಾಧೀಶರು ಹೇಳಿದರು.
‘ಸsರ್, ವಿಶ್ವಾಮಿತ್ರನ ಜೊತೆಗೆ, ನಮ್ಮ ರಾಜ್ಯದ ಶಾಸಕರನ್ನೂ ತೋರಿಸಲೆ?’, ನಾನು ಕೇಳಿದೆ.
‘ಭಪ್ಪರೆ! ನೀವು ವಾಸ್ತವತೆಯ ಪಾಠವನ್ನು ಎಷ್ಟು ಬೇಗನೇ ಕಲಿತು ಬಿಟ್ಟಿರಲ್ಲ!’, ನ್ಯಾಯಾಧೀಶರು ಮುಗುಳಗುತ್ತ ಹೇಳಿದರು, ‘ನಾನು ಸೂಚಿಸಿದ addsಗಳನ್ನು ಮಾಡಿಕೊಂಡು, ಮತ್ತೆ ಬನ್ನಿ, ಒಂದು ತಿಂಗಳಿನ ನಂತರ’.

ನ್ಯಾಯಾಧೀಶರು ಸೂಚಿಸಿದ ಬದಲಾವಣೆಗಳನ್ನು ಮಾಡಿಕೊಂಡು, ಒಂದು ತಿಂಗಳಿನ ನಂತರ, ಮತ್ತೊಮ್ಮೆ ‘ಉಡತಾ ಜ್ಯುಡಿಶಿಯರಿ’ ನ್ಯಾಯಾಲಯಕ್ಕೆ ಹೋದೆ. ಬದಲಾವಣೆಗಳನ್ನು ನೋಡಿದ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದರು. ಮೂಲೆಯಲ್ಲಿ ಕುಳಿತುಕೊಂಡ, ಜೋಲು ಮೋರೆಯ ಒಬ್ಬ ಸಹಾಯಕನನ್ನು ಕರೆದು ಹೇಳಿದರು:
‘ಏ ನಿಹಲಾನಿ, ಈ ಚಿತ್ರಕ್ಕೆ S ಪ್ರಮಾಣಪತ್ರವನ್ನು ಕೊಡು’
‘S ಅಂದರೆ ಏನು, ಸsರ್?’ ಎಂದು ಕೇಳಿದೆ.
‘S ಅಂದರೆ sexy ಎಂದು ಅರ್ಥ. ಎಲ್ಲರೂ ನೋಡಬಹುದಾದ ಚಿತ್ರಗಳಿಗೆ S ಪ್ರಮಾಣಪತ್ರವನ್ನು ಕೊಡುತ್ತೇವೆ.
ಆದರ್ಶವಾದಿ ಚಿತ್ರಗಳಿಗೆ H ಪ್ರಮಾಣಪತ್ರ ಕೊಡುತ್ತೇವೆ. H ಅಂದರೆ horrible ಎಂದರ್ಥ. H ಚಿತ್ರಗಳನ್ನು ಹದಿನೆಂಟು ವರ್ಷದ ಒಳಗಿನ ಹುಡುಗರು ನೋಡಕೂಡದು. ಪಾಪ, impressionable ವಯಸ್ಸಿನ ಹುಡುಗರಲ್ಲವೇ ಅವರು. ಅವರ ಮೇಲೆ ಕೆಟ್ಟ ಪರಿಣಾಮ ಆಗಬಾರದು ನೋಡಿ.’
`‘ಸsರ್, U ಪ್ರಮಾಣಪತ್ರವನ್ನು ಈಗ ಕೊಡುತ್ತಿಲ್ಲವೆ?’ ಎಂದು ಧೈರ್ಯ ಮಾಡಿ ಕೇಳಿದೆ.
‘ಯಾಕಿಲ್ಲ? ಒಂದು ಉದಾಹರಣೆ ಕೊಡುತ್ತೇನೆ. ನಿಮಗಿಂತಲೂ ಮೊದಲು ಒಬ್ಬರು ‘ಸತ್ಯವಾನ್-ಸಾವಿತ್ರಿ’ ಚಿತ್ರವನ್ನು ತೆಗೆದುಕೊಂಡು ಬಂದಿದ್ದರು. ಅವರಿಗೆ U ಕ್ಕಿಂತ ಹೆಚ್ಚಿನ ಪ್ರಮಾಣಪತ್ರವನ್ನು ಕೊಟ್ಟಿದ್ದೇವೆ.’

ನನ್ನ ಮುಖದ ಮೇಲಿನ ದಿಗ್ಭ್ರಮೆಯನ್ನು ಕಂಡ ನ್ಯಾಯಾಧೀಶರು ವಿವರಿಸಿದರು. ‘ಸತ್ಯವಾನ್-ಸಾವಿತ್ರಿ’ ಚಿತ್ರದಲ್ಲಿ ಸತ್ಯವಾನನ ಸಾವಿನ ಮೊದಲು, ಅವರೀರ್ವರ ಬೆಡ್ ರೂಮ್ ದೃಶ್ಯಗಳನ್ನು ತೋರಿಸಬೇಕು, ವಾತ್ಸ್ಯಾಯನನ ಕಾಮಸೂತ್ರದ ವಿವಿಧ ಭಂಗಿಗಳನ್ನು ತೋರಿಸಬೇಕು ಎನ್ನುವ ಕಂಡಿಶನ್ ಹಾಕಿದ್ದೆವು. ಆದರೆ ನಮ್ಮ ನಿರ್ಮಾಪಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಸತ್ಯವಾನನಿಗೆ ಕೈಕೊಟ್ಟ ಸಾವಿತ್ರಿಯು ಯಮನ ಜೊತೆಗೆ ಕೋಣನ ಮೇಲೆ ಫರಾರಿಯಾದ ದೃಶ್ಯವನ್ನು  ತೋರಿಸಿದರು. ಆದುದರಿಂದ ಅವರಿಗೆ U ಸರ್ಟಿಫಿಕೇಟಿಗಿಂಗ ಹೆಚ್ಚಿನ ಪ್ರಮಾಣಪತ್ರ ಕೊಟ್ಟೆವು.’
‘ಯಾವುದು ಸsರ್, ಅದು’ ಎಂದು ಕುತೂಹಲದಿಂದ ಕೇಳಿದೆ.
‘ಅದಕ್ಕೆ FS ಪ್ರಮಾಣಪತ್ರ ಎನ್ನುತ್ತಾರೆ. FS ಅಂದರೆ F**k Shit’ ಎನ್ನುವದರ ಸಂಕ್ಷಿಪ್ತ ರೂಪ. ಈ ಚಿತ್ರವನ್ನು ಶಾಲಾಮಕ್ಕಳಿಗೆ ಪುಕ್ಕಟೆಯಾಗಿ ತೋರಿಸಬೇಕು ಎನ್ನುವ ಕಂಡಿಶನ್ ಇದೆ. ಇದರಿಂದ ಅವರಿಗೆ sex education ಕೊಟ್ಟಂತಾಗುವುದು,ಅಲ್ಲವೆ?

ನ್ಯಾಯಾಧೀಶರಿಗೆ ಧನ್ಯವಾದ ಹೇಳಿ, ಮೂಲೆಯಲ್ಲಿ ನೊಣ ಹೊಡೆಯುತ್ತ ಕುಳಿತ ನಿಹಲಾನಿಯ ಹತ್ತಿರ ಹೋದೆ.
ನಿಹಲಾನಿ ನಮ್ಮ ಚಿತ್ರದ ಮೇಲೆ S ಎಂದು ಬರೆದು, ಸೆನ್ಸಾರ್ ಬೋರ್ಡ ಎಂದು ಬರೆದ ಸಿಕ್ಕಾ ಒತ್ತಿ ಕೊಟ್ಟ.

ನ್ಯಾಯಾಧೀಶರು ತಮ್ಮ ವಿಶ್ರಾಂತಿ ಕೋಣೆಗೆ ಹೋದರು. ಅವರಿಗೆ ಧನ್ಯವಾದ ಹೇಳಲು ನಾನೂ ಅಲ್ಲಿಯೇ ಹೋದೆ. ‘ಕೂತುಕೊಳ್ಳಿ’ ಎಂದು ಹೇಳುತ್ತ, ನ್ಯಾಯಾಧೀಶರು ಸಾವಕಾಶವಾಗಿ ತಾವು ಹಾಕಿಕೊಂಡ ವಿಗ್ ತೆಗೆದರು. ತಲೆತುಂಬ ಬಿಳಿ ಕೂದಲುಗಳಿರುವ ಅವರನ್ನು ಕಂಡು ಆಶ್ಚರ್ಯಚಕಿತನಾದೆ. ಬಳಿಕ ತಮ್ಮ ಜೀನ್ಸ್ ತೆಗೆದು ಹಾಕಿ, ಒಂದು ದೊಗಳೆ ಪ್ಯಾಂಟ್ ಹಾಕಿಕೊಂಡರು. ನಾನು ಅಲ್ಲಿ ನೋಡಿದ ಆಧುನಿಕ ತರುಣನೆಲ್ಲಿ, ಈಗ ನೋಡುತ್ತಿರುವ ವಯೋವೃದ್ಧನೆಲ್ಲಿ?’

‘ಇದೇನು, ಸsರ್? ತಾವು ಪಡ್ಡೆ ಹುಡುಗ ಎಂದು ಮಾಡಿದ್ದೆ. ಈಗ ನೋಡಿದರೆ…..!’
ನ್ಯಾಯಾಧೀಶರು ಮುಗಳ್ನಕ್ಕರು.
‘ನೋಡಿ ಸ್ವಾಮಿ, ‘ಉಡತಾ ಪಂಜಾಬ’ ಚಿತ್ರವು ಸರ್ವೋಚ್ಚ ನ್ಯಾಯಾಲಯದ ಮೇಲೆ ಭಯಂಕರ ಪರಿಣಾಮವನ್ನು ಮಾಡಿತು. ನಲುವತ್ತು ವರ್ಷಗಳ ಕೆಳಗೆ ನ್ಯಾಯಾಂಗಕ್ಕೆ ‘ಸೋತಾ ಜ್ಯುಡಿಶಿಯರಿ’ ಎಂದು ಕರೆಯುತ್ತಿದ್ದರು. ಇಪ್ಪತ್ತು ವರ್ಷಗಳಿಂದೀಚೆಗೆ, ನ್ಯಾಯಾಂಗವು proactive ಆಯಿತು. ಅದನ್ನು ‘ಜಾಗತಾ ಜ್ಯುಡಿಶಿಯರಿ’ ಎಂದು ಕರೆದರು. ಇದೀಗ ಇಪ್ಪತ್ತೊಂದನೆಯ ಶತಮಾನ, ‘ಉಡತಾ ಪಂಜಾಬ’ದ ಕಾಲ. ನ್ಯಾಯಾಂಗವೂ ಸಹ ಕಾಲಕ್ಕೆ ತಕ್ಕಂತ ತಾಳ ಹಾಕಲು ನಿರ್ಣಯಿಸಿದೆ. ಅದರ ಫಲವಾಗಿ  ಅತ್ಯಾಧುನಿಕವಾಗಿದೆ. ಹಳೆಯ ಕಾಲದಲ್ಲಿ ನ್ಯಾಯಾಧೀಶರು ಬಿಳಿಯ ವಿಗ್ ಹಾಕಿಕೊಂಡು, ಕರಿಯ ಕೋಟಿನಲ್ಲಿ ನ್ಯಾಯಾಲಯಕ್ಕೆ ಬರುತ್ತಿದ್ದರಲ್ಲವೆ?  ಇದೀಗ ನಾವು ‘ಪಂಕ್ ವಿಗ್’ ಧರಿಸಿ, ಜೀನ್ಸ್ ಹಾಕಿಕೊಂಡು ನ್ಯಾಯಾಲಯಕ್ಕೆ ಬರುತ್ತೇವೆ. ಅರ್ಥವಾಯಿತೆ?
‘ಅರ್ಥವಾಯಿತು ಸsರ್, ‘ಉಡತಾ ಭಾರತ ಜೈ ಹೋ’ ಎಂದು ಅವರಿಗೆ ಸಲಾಮು ಹೊಡೆದು’ ಹೊರಬಂದೆ.

‘ಉಡತಾ ಹರಿಶ್ಚಂದ್ರ’ ಸಿನೆಮಾವನ್ನು ನಮ್ಮ ಅಜ್ಜಿಗೆ ತೋರಿಸಿದೆ.
ಅಜ್ಜಿ ಗೊಟಕ್ ಎಂದಳು.

Sunday, June 19, 2016

ಮೃಚ್ಛಕಟಿಕಮ್, ಶಾಕುಂತಲಮ್ ಹಾಗು ಸ್ವಪ್ನವಾಸವದತ್ತಾಶೂದ್ರಕನು ರಚಿಸಿದ ಮೃಚ್ಛಕಟಿಕಮ್ ಒಂದು ಅದ್ಭುತವಾದ ಸಂಸ್ಕೃತ ನಾಟಕ. ಈ ನಾಟಕಕ್ಕೆ ಸಂಸ್ಕೃತ ನಾಟಕ ಎಂದು ಕರೆಯಬಹುದೆ, ಎನ್ನುವ ಪ್ರಶ್ನೆ ಉದ್ಭವಿಸದೆ ಇರಲಾರದು. ಏಕೆಂದರೆ ಈ ನಾಟಕದಲ್ಲಿ ವಿವಿಧ ಪ್ರಾಕೃತಗಳನ್ನಾಡುವ ಅನೇಕ ಪಾತ್ರಗಳು ಬರುತ್ತವೆ. ಒಟ್ಟು ಹದಿನೆಂಟು ಬಗೆಯ ಪ್ರಾಕೃತಗಳನ್ನು ಇಲ್ಲಿ ಆಡಲಾಗಿದೆ ಎಂದು ಹೇಳಲಾಗುತ್ತದೆ. ನಾಟಕದ ಒಂದು ಪಾತ್ರವು ಕರ್ನಾಟಕದ ಪಶ್ಚಿಮಘಟ್ಟದಿಂದ ಬಂದಂತಹ ವ್ಯಕ್ತಿಯದೂ ಆಗಿದೆ. ಬಹುಶಃ ಉಜ್ಜಯಿನಿ ನಗರವು ಆ ಕಾಲದಲ್ಲಿ ಒಂದು ಅತಿ ದೊಡ್ಡ ಸಾಂಸ್ಕೃತಿಕ ಹಾಗು ವ್ಯಾಪಾರೀ ಕೇಂದ್ರವಾಗಿರಬಹುದು. ಭಾರತದ ವಿವಿಧ ಭಾಗಗಳಿಂದ ಉಜ್ಜಯಿನಿಗೆ ಜನರು ವಿದ್ಯಾಭ್ಯಾಸಕ್ಕಾಗಿ, ವ್ಯಾಪಾರಕ್ಕಾಗಿ, ಉದ್ಯೋಗವನ್ನು ಅರಸಿಕೊಂಡು ಅಥವಾ ಸುಖಭೋಗಕ್ಕಾಗಿ ಬರುತ್ತಿರಬಹುದು! ಇಂತಹ ಜನಸಮೂಹವನ್ನು ಬಳಸಿಕೊಂಡೇ ಶೂದ್ರಕನು ಒಂದು ಸಂಕೀರ್ಣವಾದ ನಾಟಕವನ್ನು ರಚಿಸಿದ್ದಾನೆ. ಹಾಗಿದ್ದರೂ ಸಹ ಈ ಮಹಾನಾಟಕದಲ್ಲಿ ಬರುವ ಎಲ್ಲ ಪಾತ್ರಗಳು, ಎಲ್ಲ ಘಟನೆಗಳು ,ಎಲ್ಲ ಸಂಭಾಷಣೆಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ, ಯಾವುದೂ ಇದರಲ್ಲಿ ಅನವಶ್ಯಕವೆನ್ನುವಂತಹದು ಇಲ್ಲ. ರಚನಾವಿಧಾನ, ಕಥಾನಕದ ಸಂಕೀರ್ಣತೆ, ರಂಗಕ್ರಿಯೆ ಹಾಗು ಪುಟ್ಟ ಪಾತ್ರಗಳಿಗೂ ಸಹ ಈ ನಾಟಕದಲ್ಲಿ ಬರುವ ಮಹತ್ವ ಇವೆಲ್ಲವನ್ನೂ ಗಮನಿಸಿದರೆ, ವಿಶ್ವನಾಟಕಗಳಲ್ಲಿಯೇ ಇಂತಹ ನಾಟಕವು ಬೇರಾವುದೂ ಇಲ್ಲವೆಂದು ಹೇಳಬಹುದು.

ಮೇಲ್ನೋಟಕ್ಕೆ ಈ ನಾಟಕದ ನಾಯಕನು ಚಾರುದತ್ತ ಎನ್ನುವ ಬ್ರಾಹ್ಮಣನು. ಮೊದಲು ಸಿರಿವಂತನಾಗಿದ್ದವನು ತನ್ನ ಉದಾರಬುದ್ಧಿಯಿಂದಾಗಿ ಸಂಪತ್ತನ್ನೆಲ್ಲ ಕಳೆದುಕೊಂಡು ಇದೀಗ ಬಡವನಾಗಿದ್ದಾನೆ. ಇವನ ಸದ್ಗುಣಗಳಿಗಾಗಿ ಉಜ್ಜಯಿನಿಯ  ಸಮಸ್ತ ಜನತೆ ಇವನನ್ನು ಆದರಿಸುತ್ತದೆ. ವಸಂತಸೇನೆ ಉಜ್ಜಯಿನಿಯ ಪ್ರಮುಖ ಗಣಿಕೆ. ಇವಳ ರೂಪಕ್ಕೆ ಲೋಭಗೊಂಡ, ಉಜ್ಜಯಿನಿಯ ರಾಜನ ಭಾವನಾದ ಭಂಡ ಶಕಾರನು ಇವಳ ಬೆನ್ನು ಹತ್ತಿದ್ದಾನೆ. ಆದರೆ ವಸಂತಸೇನೆಯು ಚಾರುದತ್ತನಿಗೆ ಮನಸೋತಿದ್ದಾಳೆ. ಶಕಾರನು ಈ ನಾಟಕದ ಖಳನಾಯಕ. ವಸಂತಸೇನೆಯ ಮೇಲೆ ಹಲ್ಲೆ ಮಾಡಿ, ಚಾರುದತ್ತನ ಮೇಲೆ ಕೊಲೆಯ ಆರೋಪವನ್ನು ಹೊರಿಸುತ್ತಾನೆ. ಆದರೆ ಕೊನೆಯಲ್ಲಿ ಶಕಾರನ ಆಟವು ಬಯಲಿಗೆ ಬಂದು ಚಾರುದತ್ತ ಹಾಗು ವಸಂತಸೇನೆ ಒಂದಾಗುತ್ತಾರೆ. ಇದಿಷ್ಟೇ ಮೃಚ್ಛಕಟಿಕಮ್ ನಾಟಕದ ಸರಳ ಕಥೆ.

ಈ ಸರಳ ಕಥೆಯ ಮೂಲಕ, ನಾಟಕಕಾರನು ತನ್ನ ಕಾಲದ ಉಜ್ಜಯಿನಿಯ ಜನಜೀವನವನ್ನೇ ಬಿಚ್ಚಿಟ್ಟಿದ್ದಾನೆ. ಉಜ್ಜಯಿನಿಯ ಸಮಾಜವ್ಯವಸ್ಥೆ ಹೇಗಿತ್ತು, ಆಡಳಿತವ್ಯವಸ್ಥೆ  ಹಾಗು ನ್ಯಾಯವ್ಯವಸ್ಥೆಗಳು ಹೇಗಿದ್ದವು ಎನ್ನುವುದೇ ಈ ನಾಟಕದ ಮುಖ್ಯ ವಿಷಯಗಳಾಗಿವೆ. ತನ್ನ ಕಾಲದ ಕೊಳೆತುಹೋದ ಗಣ್ಯರ ಸಮಾಜಕ್ಕೆ, ಭ್ರಷ್ಟ ನ್ಯಾಯವ್ಯವಸ್ಥೆಗೆ ಹಾಗು ಅನೈತಿಕ  ರಾಜಕಾರಣಕ್ಕೆ ಶೂದ್ರಕನು ಈ ನಾಟಕದ ಮೂಲಕ ಕನ್ನಡಿ ಹಿಡಿದಿದ್ದಾನೆ. ಆದುದರಿಂದ, ಗರತಿಯಾಗುವ ಬದಲು ‘ಘರವಾಲಿ’ಯಾದ ಉಜ್ಜಯಿನಿ ನಗರವೇ ಈ ನಾಟಕದ ನಿಜವಾದ ನಾಯಕ ಹಾಗು ಖಳನಾಯಕ! ‘ಇವಳ ಹೊಟ್ಟೆ ಚರಂಡಿಗಾರು ಕುಕ್ಕಿದರಯ್ಯ ಕಳ್ಳಬಸುರಿನ ಯಾವ ಜಾಣ ರಂಭೆ’ ಎನ್ನುವ ಗೋಪಾಲಕೃಷ್ಣ ಅಡಿಗರ ‘ಭೂಮಿಗೀತೆ’ಯ ಸಾಲು ಇಲ್ಲಿ ಅನ್ವಯಿಸುತ್ತದೆ ಎನ್ನಬಹುದು.

ಈ ಕೊಳೆಯನ್ನು ತೋರಿಸುವದಕ್ಕಷ್ಟೇ ಶೂದ್ರಕನು ಸಂತೃಪ್ತನಾಗಿಲ್ಲ. ತಳಮಟ್ಟದ ಜನತೆಯು ಒಂದುಗೂಡಿ, ಬಂಡೆದ್ದು ಪ್ರಭುತ್ವವನ್ನು ಕಿತ್ತೊಗೆಯುವಲ್ಲಿ ನಾಟಕವು ಕೊನೆಗಾಣುತ್ತದೆ. ಇಷ್ಟೆಲ್ಲ ಕಠೋರ ಒಳತಿರುಳನ್ನು ಹೊಂದಿದ ಈ ನಾಟಕಕ್ಕೆ, ಶೂದ್ರಕನು ಕೋಮಲ ಪ್ರೇಮದ ನಯವಾದ ಹೊದಿಕೆಯನ್ನು ಹೊಚ್ಚಿದ್ದಾನೆ.                  (ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು.’-ಗೋಪಾಲಕೃಷ್ಣ ಅಡಿಗ)

 ಮೃಚ್ಛಕಟಿಕಮ್ದಲ್ಲಿ ಲೋಪದ ಭಾಸ ಇಲ್ಲ ಅಂತಲ್ಲ. ಕೊನೆಯಲ್ಲಿ ಸಾತ್ವಿಕತೆಗೆ ಸಿಗುವ ಜಯವು ಸಪ್ಪೆಯಾಗಿದೆ ಎಂದು ಭಾಸವಾಗುತ್ತದೆ. ಶಕಾರನಿಗೆ ಹಾಗು ಆತನ ಭಾವನಾದ ರಾಜನಿಗೆ ತಕ್ಕ ಶಿಕ್ಷೆ ದೊರೆಯಿತು ಎಂದು ಪರದೆಯ ಹಿಂದೆಯಾದರೂ ತೋರಿಸಿದ್ದರೆ, ಪ್ರೇಕ್ಷಕರಲ್ಲಿ ಮೂಡಿದ್ದ ಉದ್ವಿಗ್ನತೆಗೆ  ಒಂದಷ್ಟು ಸಮಾಧಾನವಾಗುತ್ತಿತ್ತು. (ಫ್ರೆಂಚ್ ಕ್ರಾಂತಿಯಲ್ಲಿ ಗಣ್ಯರನ್ನು ಗಲ್ಲುಕತ್ತಿಗೆ ಬಲಿಕೊಟ್ಟ ಮೇಲೆಯೇ,  ರೊಚ್ಚಿಗೆದ್ದ ಜನತೆಗೆ ಸಮಾಧಾನವಾಗಲಿಲ್ಲವೆ?) ಆದರೆ ಭಾರತೀಯ ಪರಂಪರೆಯಲ್ಲಿ ನಾಟಕವು ದುಃಖಾಂತವಾಗಲು ಅವಕಾಶವಿಲ್ಲ. ಅಲ್ಲದೆ ತಿತಿಕ್ಷೆಯು ಭಾರತೀಯರ ಆದರ್ಶವಾಗಿದೆ. ಆದುದರಿಂದ ಚಾರುದತ್ತನ ಕ್ಷಮಾಗುಣವನ್ನು ತೋರಿಸಿದಾಗಲೇ, ಸಾತ್ವಿಕತೆಗೆ ಜಯ ದೊರಕಿತು ಎನ್ನುವ ತರ್ಕ ಮೆರೆಯುತ್ತದೆ. ಆದುದರಿಂದ ಮೇಲ್ನೋಟದ ಈ ಆಭಾಸವು  ನಿಜವಾದ ಲೋಪವಲ್ಲ.

ಶೂದ್ರಕನಿಗಿಂತ ಮೊದಲಿನ ನಾಟಕಕಾರರಾದ ಭಾಸ ಹಾಗು ಕಾಲೀದಾಸರು ಸಂಸ್ಕೃತದ ಶ್ರೇಷ್ಠ ನಾಟಕಕಾರರು ಎನ್ನುವುದು ನಿಜ. ಆದರೆ ಅವರ ನಾಟಕಗಳು ಪುರಾಣ ಮತ್ತು ಇತಿಹಾಸಗಳನ್ನು ಆಧರಿಸಿದ ರಾಜಮಹಾರಾಜರ ರಮ್ಯ ಕಥೆಗಳಾಗಿವೆ. ನಿತ್ಯಜೀವನದ ಕಟು ವಾಸ್ತವತೆಯ ಬಗೆಗೆ ಬರೆದ ಶ್ರೇಯಸ್ಸು ಶೂದ್ರಕನಿಗೆ ಮಾತ್ರ ಸಲ್ಲುತ್ತದೆ.

ಹಾಗೆಂದ ಮಾತ್ರಕ್ಕೆ ಕಾಲೀದಾಸ ಹಾಗು ಭಾಸರ ನಾಟಕಗಳನ್ನು ಕಡೆಗಾಣಿಸಿದಂತಲ್ಲ. ಕಾಲೀದಾಸನ ಅಭಿಜ್ಞಾನಶಾಕುಂತಲಮ್ಹಾಗು ಭಾಸನ ಸ್ವಪ್ನವಾಸವದತ್ತಾಇವು ವಿಶ್ವದ ಶ್ರೇಷ್ಠ ನಾಟಕಗಳೇ ಆಗಿವೆ. ಮೃಚ್ಛಕಟಿಕಮ್ ಒಂದು ಸಂಕೀರ್ಣವಾದ ಹಾಗು ವಾಸ್ತವ ಜನಜೀವನದ ನಾಟಕವಾಗಿದ್ದರೆ, ‘ಅಭಿಜ್ಞಾನಶಾಕುಂತಲಮ್ಒಂದು ಸರಳವಾದ, ರಮ್ಯವಾದ ನಾಟಕವಾಗಿದೆ. ಆದರೆ ಇಲ್ಲಿಯೂ ಸಹ ನಗರಜೀವನದ ಡಾಂಭಿಕತೆಯನ್ನು ಹಾಗು ಆಶ್ರಮಜೀವನದ ಮುಗ್ಧತೆಯನ್ನು ಅಕ್ಕಪಕ್ಕದಲ್ಲಿಟ್ಟು ತೋರಿಸಲಾಗಿದೆ. ಶಾಕುಂತಲಮ್ ಪ್ರಾರಂಭವಾಗುವುದು ಕಣ್ವಾಶ್ರಮದ ಪರಿಸರದಲ್ಲಿ, ಕೊನೆಯಾಗುವುದು ಮಾರೀಚಾಶ್ರಮದಲ್ಲಿ.  ನಡುವೆ ಅಲ್ಪಕಾಲದವರೆಗೆ ಕಾಣುವುದು ನಾಗರೀಕ ಜೀವನದ ಬೆರಗು-ಬುರುಗು.

ಮೃಗಯಾವಿನೋದಕ್ಕಾಗಿ ಕಾಡನ್ನು ಹೊಕ್ಕ ದುಷ್ಯಂತ ಮಹಾರಾಜನು ಕಣ್ವಾಶ್ರಮದ ಸನಿಹಕ್ಕೆ ಬಂದಿದ್ದಾನೆ. ಹಿಂಸ್ರ ಮೃಗಗಳನ್ನು ಬೇಟೆಯಾಡುವ ಬದಲು ಆತನು ಆಶ್ರಮದ ಚಿಗರಿಗಳ ಮೇಲೆ ಬಾಣದ ಗುರಿಯನ್ನಿಟ್ಟಿದ್ದಾನೆ. ಇದು ವಿವೇಚನಾಶೂನ್ಯವಾದ ರಾಜಧರ್ಮವನ್ನು ತೋರಿಸುತ್ತದೆ. ಅತಿಕ್ರಮಿಸು, ಕೊಲ್ಲು, ಅಪಹರಿಸುಇದು ಎಲ್ಲಕಾಲದ ರಾಜಧರ್ಮವಾಗಿದೆ. ಇದರ ವಿರುದ್ಧವಾಗಿರುವುದು ಆಶ್ರಮಧರ್ಮ. ದುಷ್ಯಂತನು ಮೃಗಯಾವಿನೋದಕ್ಕಾಗಿ ಕಾಡಿನಲ್ಲಿಯ ಪ್ರಾಣಿಗಳನ್ನು ಬೇಟೆಯಾಡುತ್ತ ಹೊರಟಿರುವುದು ನಾಟಕದ ಮೊದಲ ಅಂಕದಲ್ಲಿದ್ದರೆ, ಆತನ ಮಗನಾದ ಪುಟ್ಟ ಬಾಲಕ ಭರತನು ಸಿಂಹದ ಮರಿಯನ್ನು ಪಳಗಿಸಿ, ಅದರ ಜೊತೆಗೆ ಆಟವಾಡುತ್ತಿರುವುದು ಕೊನೆಯ ಅಂಕದಲ್ಲಿದೆ. ಇದೇ ನಿಜವಾದ ರಾಜಧರ್ಮ ಎನ್ನುವುದು ಕಾಲೀದಾಸನ ಸಂದೇಶವಾಗಿದೆ. ಇದಲ್ಲದೆ, ಶಕುಂತಲೆಯೂ ಸಹ ನಿಸರ್ಗಧರ್ಮದ ಸಾಕಾರಮೂರ್ತಿಯೇ ಆಗಿದ್ದಾಳೆ. ಕಣ್ವಾಶ್ರಮದಲ್ಲಿ ಅವಳು ಸಾಕುಪ್ರಾಣಿಗಳನ್ನಷ್ಟೇ ಅಲ್ಲ, ತಾನು ಬೆಳೆಸಿದ ಹೂಬಳ್ಳಿಗಳನ್ನೂ ಸಹ ಪ್ರೀತಿಸುತ್ತಿದ್ದಳು. ಕಣ್ವಾಶ್ರಮವನ್ನು ಬಿಟ್ಟು, ದುಷ್ಯಂತನ ಅರಮನೆಗೆ ಹೋಗುವ ಸಂದರ್ಭದಲ್ಲಿ, ತಾನು ಬೆಳೆಸಿದ ಹೂಬಳ್ಳಿಗಳನ್ನು ಜೋಪಾನ ಮಾಡಲು ಅವಳು ತನ್ನ ಸಖಿಯರಿಗೆ ಹೇಳಿ ಹೋಗುತ್ತಾಳೆ. ಮಾರೀಚಾಶ್ರಮದಲ್ಲಿ ದುಷ್ಯಂತನ ಭೆಟ್ಟಿಯಾದಾಗ, ಪಶ್ಚಾತ್ತಾಪದಗ್ಧನಾದ ಅವನನ್ನು, ಶಕುಂತಲೆ ಉದಾರವಾಗಿ ಕ್ಷಮಿಸಿ ಸ್ವೀಕರಿಸುತ್ತಾಳೆ. ಇದು ಮಾನವಧರ್ಮ. ‘ಅಭಿಜ್ಞಾನಶಾಕುಂತಲಮ್’ ಎನ್ನುವ ಸರಳ ನಾಟಕದ ಮೂಲಕ ಕಾಲೀದಾಸನು ಬದುಕಿಗೆ ಯಾವುದು ಹಿತವಾದದ್ದು ಎನ್ನುವ ಸತ್ಯವನ್ನು ತೋರಿಸುತ್ತಿದ್ದಾನೆ.

ಶಾಕುಂತಲಮ್ ನಾಟಕದ ಪ್ರಾರಂಭ, ಮಧ್ಯಭಾಗ ಹಾಗು ಕೊನೆ ಈ ಮೂರು ಭಾಗಗಳಲ್ಲಿ ನಾವು ವಾಸ್ತವತೆಯನ್ನು ಮೀರಿದ, ರಮ್ಯ fantasyಯ ಸಂದರ್ಭಗಳನ್ನು ಕಾಣಬಹುದು. ಶಕುಂತಲೆಯ ಸುತ್ತಲೂ ಸುತ್ತುತ್ತಿದ್ದ ಭ್ರಮರವನ್ನು ಓಡಿಸುವ ಮೂಲಕ, ದುಷ್ಯಂತನು ತಾನೇ ಭ್ರಮರವಾಗಿ ಅವಳನ್ನು ಪ್ರೇಮಜಾಲದಲ್ಲಿ ಸಿಲುಕಿಸುತ್ತಾನೆ. ಶಕುಂತಲೆ ಕಮಲದ ಎಲೆಯ ಮೇಲೆ ತನ್ನ ಕಣ್ಣಿನ ಕಾಡಿಗೆಯಿಂದ ಪ್ರೇಮಪತ್ರವನ್ನು ಬರೆದು ತೊರೆಯಲ್ಲಿ ತೇಲಿಬಿಡುತ್ತಾಳೆ.  ಕೊನೆಯ ಅಂಕದಲ್ಲಿ ಭರತನು ಸಿಂಹದ ಮರಿಯ ಜೊತೆಗೆ ಆಟವಾಡುತ್ತಿದ್ದಾನೆ(ಬಾಯಿ ತೆರೆ ಸಿಂಹವೆ, ನಿನ್ನ ಹಲ್ಲುಗಳನ್ನು ಎಣಿಸುತ್ತೇನೆ’). ಆತನನ್ನು ಕಂಡ ದುಷ್ಯಂತನಲ್ಲಿ ಆಪತ್ಯಪ್ರೇಮ ಸ್ಫುರಣವಾಗುತ್ತದೆ. ಈ ಎರಡು ರಮ್ಯ fantasyಗಳ ನಡುವೆ ಶಕುಂತಲೆಗೆ ದುಷ್ಯಂತನು ಕೊಟ್ಟ ಮುದ್ರಿಕೆ ಕಳೆದು ಹೋಗುವುದು ಹಾಗು ದೂರ್ವಾಸ ಶಾಪದಿಂದಾಗಿ ದುಷ್ಯಂತನಿಗೆ ಶಕುಂತಲೆಯ ನೆನಪು ಹೋಗುವುದು ಎನ್ನುವಂತಹ ವಿಧಿನಿಯಮಿತ ವಿಪರ್ಯಾಸ ಘಟನೆಗಳು ನಡೆಯುತ್ತವೆ. ಹೀಗಾಗಿ ದುಷ್ಯಂತನಿಂದ ಪರಿತ್ಯಕ್ತಳಾದ ಶಕುಂತಲೆಯು ಭೂಗರ್ಭವನ್ನು ಸೇರಿಕೊಳ್ಳುತ್ತಾಳೆ. ಇವೆಲ್ಲವೂ ವಾಸ್ತವತೆಯನ್ನು ಮೀರಿದ ಘಟನೆಗಳು. ಹಾಗೆ ನೋಡಿದರೆ, ಶಕುಂತಲೆಯು ಸಹ ಭೂಲೋಕದ ತಂದೆ ಹಾಗು ದೇವಲೋಕದ ತಾಯಿಗೆ ಹುಟ್ಟಿದವಳಾಗಿ, ಶಕುಂತ ಪಕ್ಷಿಗಳಿಂದ ಪಾಲಿತಳಾದ ಶಿಶುವಾಗಿ ರಮ್ಯ fantasyಯನ್ನು ಮೈಗೂಡಿಸಿಕೊಂಡವಳೇ! ಈ ರಮ್ಯತೆ ಹಾಗು ಈ fantasyಗಳ ಮೂಲಕ, ಹಾಗು ಕೆಲವು ಅವಾಸ್ತವ ಘಟನೆಗಳ ಮೂಲಕ ಕಾಲೀದಾಸನು ವಾಸ್ತವದ  ಬದುಕು ಸುಮುಖವಾಗಿರಲು ಹೇಗಿರಬೇಕು ಎನ್ನುವುದನ್ನು ಬಿಂಬಿಸುತ್ತಿದ್ದಾನೆ.

ಸಂಸ್ಕೃತದ ಎರಡು ಶ್ರೇಷ್ಠ ನಾಟಕಗಳಾದ ಅಭಿಜ್ಞಾನಶಾಕುಂತಲಮ್ಹಾಗು ಮೃಚ್ಛಕಟಿಕಮ್ನಾಟಕಗಳು ಎಷ್ಟು ವಿಭಿನ್ನವಾಗಿವೆ ಎನ್ನುವದನ್ನು ಈ ರೀತಿಯಲ್ಲಿ ನಾವು ನೋಡಬಹುದು: ಮೊದಲನೆಯದು ವಾಸ್ತವತೆಯನ್ನು ಮೀರಿದ ನಾಟಕವಾದರೆ, ಎರಡನೆಯದು, ಕಟುವಾಸ್ತವತೆಯ ನಾಟಕವಾಗಿದೆ.

(ಕಾಲೀದಾಸನ ಪ್ರಖ್ಯಾತ ಕಾವ್ಯವಾದ ಮೇಘದೂತವೂ ಸಹ ಯಕ್ಷಲೋಕದ ಕಾವ್ಯವಾಗಿದೆ. ಶಾಪಗ್ರಸ್ತನಾಗಿ ಭೂಲೋಕಕ್ಕೆ ಇಳಿದ ಯಕ್ಷನು ಆಷಾಢದ ಮೊದಲ ಮೋಡವನ್ನು ನೋಡಿ, ಅದರೊಡನೆ ತನ್ನ ಕೆಳದಿಗೆ ಕಳುಹಿಸುವ ಸಂದೇಶವೂ ಸಹ ಒಂದು ರಮ್ಯವಾದ fantasy ಅಲ್ಲವೆ?)

ಕಾಲೀದಾಸನು ಶೂದ್ರಕನಿಗಿಂತ ಮೊದಲಿನವನು. ಭಾಸನು ಕಾಲೀದಾಸನಿಗಿಂತ ಮೊದಲನೆಯವನು. ನಾಟಕೀಯತೆಯಲ್ಲಿ ಭಾಸನನ್ನು ಮೀರಿಸಿದವರು ಬಹುಶಃ ಯಾರೂ ಇಲ್ಲ. ಭಾಸನು ಬರೆದ ಪ್ರತಿಮಾಗೃಹ, ಮಧ್ಯಮವ್ಯಾಯೋಗ ಹಾಗು ಸ್ವಪ್ನವಾಸವದತ್ತಾ ಇವು ನಾಟಕೀಯತೆಯ ಅತ್ಯುತ್ತಮ ಉದಾಹರಣೆಗಳಾಗಿವೆ.

ಪ್ರತಿಮಾಗೃಹದ ಕಥಾನಕ ಹೀಗಿದೆ:
ರಾಮಚಂದ್ರನು ಅಯೋಧ್ಯೆಯನ್ನು ತೊರೆದು ವನವಾಸಕ್ಕೆ ಹೋಗಿದ್ದಾನೆ. ಭರತನಿಗೆ ತಕ್ಷಣವೇ ಅಯೋಧ್ಯೆಗೆ ಬರಲು ಕರೆ ಹೋಗುತ್ತದೆ. ಆದರೆ ಆತನಿಗೆ ತನ್ನ ತಂದೆ ದಶರಥನು ಮರಣ ಹೊಂದಿದ ವಿಷಯ ತಿಳಿದಿಲ್ಲ. ಅಯೋಧ್ಯೆಯ ಹೊರವಲಯದವರೆಗೆ ಭರತ ಬಂದಿದ್ದಾನೆ. ಅಲ್ಲಿ ಕ್ಷಣ ಕಾಲದವರೆಗೆ ವಿಶ್ರಮಿಸಿಕೊಳ್ಳುವ ವಿಚಾರದಿಂದ, ಅಲ್ಲಿಯೇ ಇದ್ದ ಪ್ರತಿಮಾಗೃಹಕ್ಕೆ ಭರತ ಹಾಗು ಆತನ ರಥದ  ಸಾರಥಿ ಬರುತ್ತಾರೆ. ಪ್ರತಿಮಾಗೃಹದಲ್ಲಿ ರಘುವಂಶದ ರಾಜರ ಪುತ್ಥಳಿಗಳನ್ನು ಇಡಲಾಗಿದೆ. ಎಲ್ಲವನ್ನೂ ನೋಡುತ್ತ ಬಂದ ಭರತನಿಗೆ, ಕೊನೆಯಲ್ಲಿ ತನ್ನ ತಂದೆಯಾದ  ದಶರಥನ ಪ್ರತಿಮೆ ಕಾಣುತ್ತದೆ. ಚಕಿತನಾದ ಭರತನು ಇಲ್ಲಿ ಜೀವಂತವಿರುವ ರಾಜರ ಪುತ್ಥಳಿಗಳನ್ನೂ ಇಡಲಾಗುತ್ತದೆಯೆ’, ಎಂದು ಅಲ್ಲಿಯ ಮೇಲ್ವಿಚಾರಕನಿಗೆ ಕೇಳುತ್ತಾನೆ. ಇಲ್ಲ, ಇಲ್ಲಿ ಕೇವಲ ನಿಧನರಾದ ರಾಜರ ಪುತ್ಥಳಿಗಳನ್ನು ಮಾತ್ರ ಇಡಲಾಗುತ್ತದೆಎನ್ನುವುದು ಮೇಲ್ವಿಚಾರಕನ ಉತ್ತರ. ಭರತನಿಗೆ ಇದರಿಂದ ಬರಸಿಡಿಲು ಬಡಿದಂತಾಗುತ್ತದೆ.

ಮಧ್ಯಮವ್ಯಾಯೋಗವಂತೂ ನಾಟಕೀಯತೆಯ ಶಿಖರಸ್ಥಾನದಲ್ಲಿದೆ. ಪಾಂಡವರು ಮೊದಲೊಮ್ಮೆ ಅರಗಿನ ಅರಮನೆಯಿಂದ ಪಾರಾಗಿ, ಅಡವಿಯಲ್ಲಿ ಹಾಯ್ದು ಹೋಗುವಾಗ, ಭೀಮಸೇನನು ಹಿಡಿಂಬನನ್ನು ಕೊಂದು, ಅವನ ತಂಗಿಯಾದ ಹಿಡಿಂಬಿಯನ್ನು ಮದುವೆಯಾಗಿದ್ದನಷ್ಟೇ. ಇದೀಗ ಪಾಂಡವರು ಮತ್ತೊಮ್ಮೆ ಅಡವಿಯಲ್ಲಿ ಹಾಯ್ದು ಹೊರಟಿದ್ದಾರೆ. ಭೀಮಸೇನ ಹಾಗು ಹಿಡಂಬಿಯ ಮಗನಾದ ಘಟೋತ್ಕಚನು ತರುಣನಾಗಿ ಬೆಳೆದಿದ್ದಾನೆ. ತನ್ನ ತಾಯಿಯ ಆಣತಿಯ ಮೇರೆಗೆ, ಅವಳ ಭಕ್ಷಣೆಗಾಗಿ ಓರ್ವ ಮನುಷ್ಯನನ್ನು ಹುಡುಕುತ್ತ ಘಟೋತ್ಕಚನು ಅಡವಿಯಲ್ಲಿ ಸಂಚರಿಸುತ್ತಿದ್ದಾನೆ. ಆ ಸಮಯದಲ್ಲಿ ಓರ್ವ ಬ್ರಾಹ್ಮಣ,ಅವನ ಹೆಂಡತಿ ಹಾಗು ಅವರ ಮೂವರು ಗಂಡುಮಕ್ಕಳು ಸಹ ಅಡವಿಯ ಮೂಲಕ ಸಾಗುತ್ತಿದ್ದಾರೆ. ತಂದೆ, ತಾಯಿಯರಿಗೆ ನೀರಡಿಕೆಯಾದಾಗ, ನಡುವಿನ ಮಗನು ನೀರನ್ನು ಹುಡುಕುತ್ತ ಹೋಗಿದ್ದಾನೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಘಟೋತ್ಕಚನು, ಅಲ್ಲಿರುವ ಇಬ್ಬರು ಹುಡುಗರಲ್ಲಿ ಒಬ್ಬನು ತನ್ನ ತಾಯಿಯ ಭಕ್ಷಣೆಗಾಗಿ ಬೇಕಾಗಿದ್ದಾನೆ ಎಂದು ಗದರಿಸುತ್ತಾನೆ. ಮೊದಲಿನ ಮಗನನ್ನು ಕೊಡಲು ತಂದೆಗೆ ಮನಸ್ಸಿಲ್ಲ, ಕೊನೆಯ ಮಗನನ್ನು ಕೊಡಲು ತಾಯಿಗೆ ಮನಸ್ಸಿಲ್ಲ. ಆದುದರಿಂದ ನಡುವಿನ ಮಗನನ್ನು ಕೊಡಲು ಅವರು ಒಪ್ಪಲೇ ಬೇಕಾಗುತ್ತದೆ. ಆ ಮಗನನ್ನು ಕರೆಯಲು ಘಟೋತ್ಕಚನು ಆ ದಂಪತಿಗಳಿಗೆ ಸೂಚಿಸುತ್ತಾನೆ. ಮೃತ್ಯುಮುಖದಲ್ಲಿ ಹೋಗಲು ಬಾಎಂದು ಕರೆಯುವಾಗ, ತಮ್ಮ ಮಗನ ಹೆಸರು ಹಿಡಿದು ಕರೆಯಲು ಸಹ್ಯವಾಗದ ಬ್ರಾಹ್ಮಣನು, ‘ಮಧ್ಯಮಾ ಬಾಎಂದು ಕೂಗುತ್ತಾನೆ. ಅದೇ ಸಮಯದಲ್ಲಿ, ಅನತಿ ದೂರದಲ್ಲಿದ್ದ, ಮಧ್ಯಮಪಾಂಡವನಾದ ಭೀಮಸೇನನು ಮಧ್ಯಮಾಎಂದರೆ ತಾನೇ ಎಂದು ಅರ್ಥೈಸಿಕೊಂಡು ಅಲ್ಲಿಗೆ ಬರುತ್ತಾನೆ. ಆ ಕುಟುಂಬವನ್ನು ರಾಕ್ಷಸನಿಂದ ರಕ್ಷಿಸುವುದು ತನ್ನ ಕರ್ತವ್ಯವೆಂದು ಭಾವಿಸಿದ ಭೀಮಸೇನನು ಘಟೋತ್ಕಚನೊಡನೆ ಹೋರಾಡುತ್ತಾನೆ. ಘಟೋತ್ಕಚನಿಗೆ ಈತನು ತನ್ನ ತಂದೆ ಭೀಮಸೇನ ಎಂದು ಗೊತ್ತಿಲ್ಲ. ಆದರೆ ಘಟೋತ್ಕಚನ ಮಾತಿನಿಂದಾಗಿ ಭೀಮಸೇನನಿಗೆ ಈತನು ತನ್ನ ಮಗನು ಎನ್ನುವುದು ಗೊತ್ತಾಗುತ್ತದೆ. ಆತನ ಶೌರ್ಯವನ್ನು ನೋಡಿ ಸಂತೋಷವೂ ಆಗುತ್ತದೆ. ಕೊನೆಗೊಮ್ಮೆ ಭೀಮನು ಸೋತಂತೆ ನಟಿಸಿ, ಘಟೋತ್ಕಚನ ಬಂಧಿಯಾಗುತ್ತಾನೆ. ಘಟೋತ್ಕಚನು ಭೀಮಸೇನನನ್ನು ತನ್ನ ತಾಯಿಯ ಬಳಿಗೆ ಎಳೆದೊಯ್ಯುತ್ತಾನೆ. ಹಿಡಂಬಿಯು ಆಶ್ಚರ್ಯವನ್ನು ನಟಿಸಿ, ಬಳಿಕ ಇವನು ನಿನ್ನ ತಂದೆ, ಭೀಮಸೇನನುಎಂದು ಘಟೋತ್ಕಚನಿಗೆ ಹೇಳುತ್ತಾಳೆ. ಹಿಡಂಬಿಯು ಭೀಮಸೇನನ ಕಿವಿಯಲ್ಲಿ ಏನೋ ಉಸುರುತ್ತಾಳೆ. ಪ್ರೇಕ್ಷಕರಿಗೆ ಅದು ಕೇಳಲಾರದು. ಆದರೆ ಭೀಮಸೇನನು, ‘ಹಿಡಿಂಬೆ, ನೀನು ರಾಕ್ಷಸಕುಲದಲ್ಲಿ ಹುಟ್ಟಿದ್ದರೂ ಸಹ ಆರ್ಯಸ್ತ್ರೀಯಂತೆಯೇ ಇರುವಿಎನ್ನುತ್ತಾನೆ. ಈಗ ಬರುವ ಪ್ರಶ್ನೆ: ಹಿಡಿಂಬಿಯ ಭೀಮಸೇನನ ಕಿವಿಯಲ್ಲಿ ಏನನ್ನು ಪಿಸುಗುಟ್ಟಿದಳು? ಇದು ಪ್ರೇಕ್ಷಕರ ಊಹೆಗೆ ಬಿಟ್ಟಿದ್ದು. ಈ ರೀತಿಯಾಗಿ ಕೊನೆಗೊಳ್ಳುವ ನಾಟಕ ಬೇರೆಲ್ಲೆಯಾದರೂ ಸಿಕ್ಕೀತೆ?

ಈ ಕೊನೆಯ ಕ್ಷಣದಲ್ಲಿ ಪ್ರೇಕ್ಷಕನಿಗೆ ಹೊಳೆಯುವ ಸತ್ಯವೇನೆಂದರೆ: ಪಾಂಡವರು ಅರ್ಥಾತ್ ಭೀಮಸೇನನು ಅಡವಿಯಲ್ಲಿ ಬರುತ್ತಿರುವ ಸಂಗತಿಯು ಹಿಡಿಂಬಿಗೆ ಗೊತ್ತಾಗಿತ್ತು. ದೀರ್ಘವಿರಹದ ನಂತರ ಅವನನ್ನು ಸಂಧಿಸಲು ಅವಳು ಕಾತುರಳಾಗಿದ್ದಳು. ಆದರೆ ಆ ಪ್ರದೇಶದ ರಾಣಿಯಾದ ಅವಳು ತಾನೇ ಅವರಲ್ಲಿಗೆ ಹೋಗುವುದು ಶಿಷ್ಟಾಚಾರವಲ್ಲ ಎಂದು ಭಾವಿಸಿ, ತನ್ನ ಮಗ ಘಟೋತ್ಕಚನಿಗೆ ಒಂದು ನೆವ ಹೇಳಿ ಅಲ್ಲಿಗೆ ಕಳುಹಿಸಿದಳು. ಈ ರೀತಿಯಲ್ಲಿ ತಂದೆ ಮಕ್ಕಳ ಭೆಟ್ಟಿಯನ್ನು ಸಹ ಮಾಡಿಸಿದಳು. (ಭೀಮಸೇನ ಹಾಗು ಘಟೋತ್ಕಚರ ಹಣಾಹಣಿಯೂ ಸಹ ತುಂಬ ನಾಟಕೀಯವಾಗಿದೆ.) ಆ ಬಳಿಕ, ಹಿಡಿಂಬಿಯು ಭೀಮಸೇನನ ಜೊತೆಗೆ ಏಕಾಂತಮಿಲನದ ತನ್ನ ಕಾತುರತೆಯನ್ನು ಅವನ ಕಿವಿಯಲ್ಲಿ ಪಿಸುಗುಟ್ಟಿರಬಹುದು! 

ಇಡೀ ‘ಮಧ್ಯಮ ವ್ಯಾಯೋಗ’  ನಾಟಕವು ಒಂದೇ ಪರಿಸರದಲ್ಲಿ ಹಾಗು ಒಂದೇ ಕಾಲದಲ್ಲಿ ಜರಗುತ್ತದೆ. ನಾಟಕದಲ್ಲಿಯ ಮುಖ್ಯ ಕ್ರಿಯೆಯೂ ಒಂದೇ ಆಗಿದೆ. ಆದುದರಿಂದ ಗ್ರೀಕ್ ನಾಟಕಶಾಸ್ತ್ರದಲ್ಲಿ ಹೇಳಲಾದ, ‘ಸ್ಥಳೈಕ್ಯ’ ‘ಕಾಲೈಕ್ಯ’ ಹಾಗು ‘ಕ್ರಿಯೈಕ್ಯ’ಗಳು ಈ ನಾಟಕದಲ್ಲಿ ಕಂಡುಬರುವ ವಿಶೇಷತೆಗಳಾಗಿವೆ.

ಸ್ವಪ್ನವಾಸವದತ್ತಾಅಂತೂ ಭ್ರಮಾವಿಲಾಸದ ರಮ್ಯ ನಾಟಕವಾಗಿದೆ. ಒಂದು ಸಣ್ಣ ರಾಜ್ಯದ ರಾಜನಾದ ಉದಯನನಿಗೆ ತನ್ನ ಹೆಂಡತಿ ವಾಸವದತ್ತೆಯಲ್ಲಿ ಅತೀವ ಪ್ರೀತಿ ಇದೆ. ಉದಯನನ ಮುಖ್ಯ ಮಂತ್ರಿಯಾದ ಯೌಗಂಧರಾಯಣನಿಗೆ, ರಾಜಕೀಯ ಕಾರಣಗಳಿಗಾಗಿ ಉದಯನನಿಗೆ ನೆರೆಯ ರಾಜ್ಯದ ರಾಜಕುಮಾರಿಯ ಜೊತೆಗೆ ಎರಡನೆಯ ಮದುವೆ ಮಾಡಿಸುವ ವಿಚಾರವಿದೆ. ಆದರೆ ವಾಸವದತ್ತೆ ಇರುವವರೆಗೆ ಉದಯನನು ಎರಡನೆಯ ಮದುವೆಗೆ ಒಪ್ಪಲು ಸಾಧ್ಯವಿರಲಿಲ್ಲ. ಆ ಕಾರಣಕ್ಕಾಗಿ ಆತನು ವಾಸವದತ್ತೆಯು ಅಗ್ನಿಅವಘಡದಲ್ಲಿ ಮೃತಳಾದಳು ಎನ್ನುವ ಸುಳ್ಳನ್ನು ಹಬ್ಬಿಸಿ, ಅವಳನ್ನು ನೆರೆರಾಜ್ಯದ ರಾಜಕುಮಾರಿಯ ಆಶ್ರಯದಲ್ಲಿ ಅನಾಮಿಕಳನ್ನಾಗಿ ಇಡುತ್ತಾನೆ. ಉದಯನನು ಆನೆಯನ್ನು ಹಿಡಿಯಲು ಕಾಡಿಗೆ ಹೋದಾಗ, ಕೃತಕ ಆನೆಯನ್ನು ನಿಲ್ಲಿಸಿದ್ದ ಪಕ್ಕದ ರಾಜ್ಯದ ಸೈನಿಕರು ಈತನನ್ನು ಬಂಧಿಸಿ, ತಮ್ಮ ರಾಜ್ಯಕ್ಕೆ ಒಯ್ಯುತ್ತಾರೆ. ಅಲ್ಲಿಯ ರಾಜಕುಮಾರಿಯು ಇವನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಉದಯನನಿಗೆ ಹಗಲಿರುಳೂ ವಾಸವದತ್ತೆಯದೇ ಕನವರಿಕೆ. ಒಮ್ಮೆ ಉದಯನನು ಉಪವನದ ವಿಶ್ರಾಂತಿಗೃಹದಲ್ಲಿ ಮಲಗಿಕೊಂಡಿರುವಾಗ, ವಾಸವದತ್ತೆ ಅಲ್ಲಿಗೆ ಬರುತ್ತಾಳೆ. ಉದಯನನನ್ನು ನೋಡುತ್ತಾಳೆ. ಪ್ರೀತಿಯಿಂದ ಅವನನ್ನು ನೇವರಿಸಿ, ಥಟ್ಟನೆ ಮಾಯವಾಗುತ್ತಾಳೆ. ಎಚ್ಚತ್ತ ಉದಯನನು ಇದು ನನ್ನ ಭ್ರಮೆಯಲ್ಲ, ಸ್ವತಃ ವಾಸವದತ್ತೆಯೇ ನನ್ನನ್ನು ಮುಟ್ಟಿದ್ದಳುಎಂದುಕೊಳ್ಳುತ್ತಾನೆ. ಈ ಸನ್ನಿವೇಶವನ್ನು ಭಾಸನು ಅತ್ಯಂತ ನಾಟಕೀಯವಾಗಿ, ರಮ್ಯವಾಗಿ ನಿರೂಪಿಸಿದ್ದಾನೆ.

ಭಾಸ, ಕಾಲೀದಾಸ ಹಾಗು ಶೂದ್ರಕ ಈ ತ್ರಿಮೂರ್ತಿಗಳು ಸಂಸ್ಕೃತದ ಶ್ರೇಷ್ಠ ನಾಟಕಕಾರರು. ಭಾರತೀಯ ಸಾಹಿತ್ಯದ ಕೋಡುಗಳಾದ ಇವರಿಗೆ ನನ್ನ ವಿನೀತ ಪ್ರಣಾಮಗಳು.