Tuesday, March 28, 2023

ಜೋತಯ್ಯನ ಬಿದಿರು ಬುಟ್ಟಿ..................................ತೇಜಸ್ವಿನಿ ಹೆಗಡೆ

ಮಾನವೀಯ ಅನುಕಂಪವು ತೇಜಸ್ವಿನಿ ಹೆಗಡೆಯವರ ಸಾಹಿತ್ಯದ ಮೂಲಸ್ರೋತವಾಗಿದೆ. ತೇಜಸ್ವಿನಿಯವರ ಕಥೆಗಳು ಸಂವೇದನಾಶೀಲ ಲೇಖನಿಯಿಂದ ಬಂದ ಕಥೆಗಳಾಗಿವೆ. ‘ಜೋತಯ್ಯನ ಬಿದಿರು ಬುಟ್ಟಿ’ಯೊಳಗಿರುವ ಹತ್ತೂ ಕಥೆಗಳಲ್ಲಿ ನಾವು ಅಂದರೆ ಓದುಗರು ಈ ಅನುಕಂಪವನ್ನು ದಟ್ಟವಾಗಿ ಅನುಭವಿಸುತ್ತೇವೆ. ವಾಸ್ತವದಲ್ಲಿ, ತೇಜಸ್ವಿನಿಯವರು ಈವರೆಗೆ ಬರೆದ ಎಲ್ಲ ಕಥೆಗಳೂ ಸಹಕಂಪನ ಮನೋಭಾವನೆಯ ಲೇಖಕಿ ಬರೆದ ಕಥೆಗಳೇ. ಹಾಗೆಂದು ಕಥೆಯು ಕರುಣೆಯಲ್ಲಿ ತೊಯ್ದು ತಪ್ಪಡಿಯಾಗಬಾರದಷ್ಟೇ! ಕಥೆಯನ್ನು ನೇರವಾಗಿ ಹೇಳಿದರೆ, ಇಂತಹ ಸಾಧ್ಯತೆ ಇರುತ್ತದೆ. ಆದುದರಿಂದ ತೇಜಸ್ವಿನಿಯವರು ಕಥೆಯನ್ನು ಹೆಣೆಯುವಾಗ,ಮುಖ್ಯ ಪಾತ್ರಗಳ ಜೊತೆಗೆ, ಮತ್ತೊಂದು ಪಾತ್ರದ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಈ ಪಾತ್ರವು ಲೇಖಕಿಯ ಒಳಮನಸ್ಸೇ ಆಗಿರಬಹುದು! ಕನ್ನಡದ ಕಥಾಬ್ರಹ್ಮ ಮಾಸ್ತಿಯವರ ಕಥೆಗಳಲ್ಲಿಯೂ ಸಹ ಮೂರನೆಯ ಪಾತ್ರವೊಂದು ತಟಸ್ಥವಾಗಿ, ನಿರುದ್ವಿಗ್ನವಾಗಿ, ಕಥೆಯಲ್ಲಿಯ ನೈತಿಕತೆಯನ್ನು ಓದುಗರಿಗೆ ಮನದಟ್ಟು ಮಾಡುತ್ತದೆ. ತೇಜಸ್ವಿನಿಯವರ ಕಥೆಗಳೂ ಸಹ ಇದೇ ರೀತಿಯಲ್ಲಿವೆ. ಈ ಮಾತಿಗೆ ಉತ್ತಮ ಉದಾಹರಣೆಯೆಂದರೆ, ಕಥಾಸಂಕಲನದ ಮೊದಲ ಕಥೆಯಾದ ‘ರತ್ನಗಂಧಾ’.

 

‘ರತ್ನಗಂಧಾ’ ಎಂದರೆ ಸುಮಧುರ ವಾಸನೆಯುಳ್ಳ ಕೆಂಪು ಬಣ್ಣದ (ಅಥವಾ ಹಳದಿ ಬಣ್ಣದ) ಒಂದು ಹೂವು. ‘ರತ್ನಗರ್ಭಾ’ ಎಂದರೆ ಭೂಮಿ. ಭೂಮಿಯ ಒಡಲಲ್ಲಿ ಅನೇಕ ರತ್ನಗಳಿರುತ್ತವೆ. ಆದುದರಿಂದ ಅವಳು ರತ್ನಗರ್ಭಾ. ರತ್ನಗಂಧಾ ಎಂದಾಗ ‘ರತ್ನಗರ್ಭಾ’ ಎನ್ನುವ ಪದದ ನೆನಪೂ ಆಗುತ್ತದೆ. ಭೂಮಿಗೂ ಸಹ ಒಂದು ವಾಸನೆ ಇರುತ್ತದೆ. ಮೊದಲ ಮಳೆಯಿಂದ ತೊಯ್ದ ಭೂಮಿಯ ವಾಸನೆಯು ಯಾರನ್ನು ಸೊಗಯಿಸಲಿಕ್ಕಿಲ್ಲ! ತೇಜಸ್ವಿನಿಯವರು ಭೂಮಿಯ ಒಳಗಿನ ಸುಗಂಧ ಬಗೆಗೆ ಹಾಗು ರತ್ನಗಂಧಾ ಹೂವಿನ ಸುವಾಸನೆಯ ಬಗೆಗೆ ಹೇಳುತ್ತಿದ್ದಾರೆ; ಯಾವುದೇ ಐಶ್ವರ್ಯದ ಬಗೆಗೆ ಅಲ್ಲ. ಆದುದರಿಂದ ಈ ಕಥೆಯನ್ನು ‘ರತ್ನಗಂಧಾ’ ಎಂದು ಕರೆದಿದ್ದಾರೆ. 

ಈ ಕಥೆಯ ನಾಯಕಿಯೂ ಸಹ ‘ರತ್ನಗಂಧಾ’. ಅರ್ಥಾತ್ ರತ್ನಿ! ಇವಳು ವಯಸ್ಸಾದವಳು ಹಾಗು ವಿಧವೆ. ಇವಳ ಮಗನು ಅಮೇರಿಕಾದಲ್ಲಿ ಆರಾಮಾಗಿ ಇದ್ದಾನೆ. ಒಂಟಿಜೀವವಾಗಿ ಬದುಕಲು ಇವಳಿಗೆ ಸಾಧ್ಯವೆ? ಇವಳಿಗೆ ಒಂದು ಜೋಡು ಬೇಡವೆ? ಇದು ಅವಳ ದೈಹಿಕ ಕಾಮನೆಯಲ್ಲ. ಆದರೆ ಇವಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಸಮಾಜದ ಕಟ್ಟುಪಾಡುಗಳಲ್ಲಿಯೇ ಬದುಕುತ್ತಿರುವ ಅಲ್ಪ ಮನಸ್ಸಿನ ಸಾಮಾನ್ಯರಿಗೆ ಅರ್ಥವಾಗಲಾರದು.

 

ನಮ್ಮ ಸಾಂಪ್ರದಾಯಿಕ ಸಮಾಜವು ಈ ವಿಷಯದಲ್ಲಿ ಪ್ರತಿಗಾಮಿ ಮನೋಭಾವವನ್ನೇ ಹೊಂದಿದೆ. ಈ ಮುದುಕಿಗೆ ದಾಂಪತ್ಯದ ಸಾಂಗತ್ಯ ಏಕೆ ಬೇಕು? ಕೊನೆಗೆ ಒಬ್ಬ ಒಳ್ಳೆಯ ಹುಡುಗನನ್ನು ಜೊತೆಯಲ್ಲಿ ಇಟ್ಟುಕೊಂಡು ಸಾಕಿದರೆ ಸಾಲದೆ? ಇದು ನಮ್ಮ ಸಮಾಜದ ಮನೋಭಾವ. ಆದರೆ ರತ್ನಿ ಹೇಳುವುದು ಹೀಗಿದೆ: ಇವಳಿಗೆ ಬೇಕಾಗಿರುವ ಜೊತೆಗಾರ ಇವಳಂತಹ ರುಚಿ ಇದ್ದವನೇ ಆಗಿರಬೇಕು, ಕೇವಲ ತಿನ್ನುಣ್ಣುವದರಲ್ಲಿ ಅಲ್ಲ; ಜೊತೆಜೊತೆಯಾಗಿ ಹೆಜ್ಜೆ ಹಾಕುವಂತಹ ಜೊತೆಗಾರನು ಬೇಕು; ಇವಳಂತೆಯೆ ವಯಸ್ಸಾದವನು ಇವಳಿಗೆ ಬೇಕು. (“ನಂಗೆ ನನ್ನದೇ ವಯಸ್ಸಿನ ಮುದಿಜೀವ ಬೇಕಾಗಿರುವುದು........................ನನ್ನಮನೆಯ ಯಜಮಾಂತಿ ನಾನೇ ಆಗಿರಬೇಕಲ್ವಾ?”) ಈ ಮಾತುಗಳು ಕೇವಲ ಓರ್ವ ವೃದ್ಧ ವಿಧವೆಯ ಮಾತುಗಳಲ್ಲ. ಸಾಮಾನ್ಯವಾಗಿ ನಮ್ಮೆಲ್ಲರ ಮನೋಭಾವವೂ ಇದೇ ಆಗಿರುತ್ತದೆ.

 

ರತ್ನಿಯನ್ನು ಎಲ್ಲರೂ ತಮಾಶೆ ಮಾಡುತ್ತಿದ್ದರೂ ಸಹ, ಇವಳು ಮಾತನಾಡಲು ಸಾಧ್ಯವಾಗುವ ಎರಡು ಜೀವಿಗಳು ಈ ಹಳ್ಳಿಯಲ್ಲಿದ್ದಾರೆ. ಈ ಮೂವರ ಮಾತುಕತೆಯ ಸುತ್ತಲೂ ಕಥೆಯ ಕೊನೆಯನ್ನು ಹೆಣೆಯಲಾಗಿದೆ. ಇಷ್ಟು ಹೇಳಿದರೆ ಕಥೆಯನ್ನು ಸರಳೀಕರಿಸಿದಂತಾಯಿತಲ್ಲವೆ? ತೇಜಸ್ವಿನಿಯವರು ಒಂದು ಒಣ ಪ್ರಬಂಧವನ್ನು ಇಲ್ಲಿ ಬರೆಯುತ್ತಿಲ್ಲ. ಅವರು ಮನಸ್ಸನ್ನು ತಟ್ಟುವ ಕಥೆಯನ್ನು ಹೇಳುತ್ತಿದ್ದಾರೆ. ಆದುದರಿಂದ ಕಥೆಯನ್ನು ವಿವರಗಳನ್ನು ಇಲ್ಲಿ ಬರೆಯುವುದು ಸರಿಯಲ್ಲ. ಅದು ಮೈಸೂರುಪಾಕಿನಲ್ಲಿ ಇಷ್ಟು ಸಕ್ಕರೆ ಇದೆ, ಇಷ್ಟು ತುಪ್ಪ ಇದೆ, ಇಷ್ಟು ಗೋದೀ ಹಿಟ್ಟು ಇದೆ ಎಂದೆಲ್ಲ ಹೇಳಿದಂತಾಗುವುದು. ಓದುಗರೆ, ಮೈಸೂರುಪಾಕಿನ ರುಚಿಯನ್ನು ಸ್ವತಃ ನೀವೇ ಬಾಯಲ್ಲಿಟ್ಟುಕೊಂಡು ಸವಿಯಿರಿ!

 

ಇದರಂತೆಯೆ, ‘ಮುಸ್ಸಂಜೆಯ ಬೆಳಕು’ ಕಥೆಯು ಓರ್ವ ವೃದ್ಧನ ಇಳಿಗಾಲದ ಕಥೆಯಾಗಿದೆ. ಇಲ್ಲಿ ಈ ವೃದ್ಧನು ತನ್ನ ಗತಿಸಿದ ಜೊತೆಗಾತಿಯ ನೆನಪಿನಲ್ಲಿ ಜೀವಿಸುತ್ತಿದ್ದಾನೆ. ಈ ಕಥೆಯನ್ನು ನಿರೂಪಿಸುತ್ತಿರುವಳು ಆ ವೃದ್ಧನ ಹಳೆಯ ವಿದ್ಯಾರ್ಥಿನಿ. ಈ ನೆನಪುಗಳೇ ಅವನ ಸಂಜೆಗತ್ತಲಲ್ಲಿ ಅವನಿಗೆ ಬೆಳಕಾಗಿವೆ. ಎಂತಹ ಅರ್ಥಪೂರ್ಣ ಶೀರ್ಷಿಕೆಯಲ್ಲವೆ? 


ಮತ್ತೊಂದು ಕಥೆ, ‘ಹಸಿರು ಪತ್ತಲ’ವೂ ಸಹ ವೃದ್ಧನೋರ್ವನ ಕಥೆಯಾಗಿದೆ. ಆದರೆ ಇಲ್ಲಿಯ ವೃದ್ಧನು ತನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯ ನೆನಪು ನಿರೂಪಿಕೆಗೆ ಕೊನೆಯ ಕ್ಷಣದಲ್ಲಿ ಅರಿವಾಗುತ್ತದೆ!

 

‘ಬಾಳೆಮರ’ ಕಥೆಯು ಸಂಕೀರ್ಣ ಕಥೆಯಾಗಿದೆ. ಇಲ್ಲಿ ರಾಜೀವ ಹಾಗು ಸಕೀನಾ, ಮೋನಪ್ಪ ಮಾಸ್ತರು, ಸೀತಕ್ಕ, ಜಾನಕಿ ಇವರಲ್ಲಾ ಪಾತ್ರಧಾರಿಗಳಾಗಿದ್ದಾರೆ. ಇವರೆಲ್ಲರ ಬದುಕಿನ ತಳುಕನ್ನು ತೇಜಸ್ವಿನಿಯವರು ‘ಸು-ಸೂತ್ರ’ವಾಗಿ ನಮ್ಮೆದುರಿಗೆ ಹಿಡಿದಿದ್ದಾರೆ!

 

ಕೇವಲ ಮನುಷ್ಯರ ನಡುವಿನ ಪ್ರೀತಿಯಷ್ಟೇ ಇಲ್ಲಿಯ ಕಥೆಗಳಲ್ಲಿದೆ ಎಂದಲ್ಲ. ‘ಯಶವಂತಿ’ ಎನ್ನುವ ಕಥೆಯು ಒಂದು ಸೈನಿಕ ಉಡದ ಬಗೆಗೆ ಇದೆ! ಶಿವಾಜಿ ಮಹಾರಾಜರ ಸೇನಾಪತಿಯಾದ ತಾನಾಜಿ ಹಾಗು ಅವನು ಸಾಕಿದ ಉಡ ‘ಯಶವಂತಿ’ಯ ಹೃದಯವಿದ್ರಾವಕ ಕಥೆ ಇದು. ಪ್ರಾಣಿಗಳೂ ಸಹ ತಮ್ಮ ಒಡೆಯನನ್ನು ಮನಸಾರೆ ಪ್ರೀತಿಸುತ್ತವೆ ಹಾಗು ಅವನಿಗಾಗಿ ಪ್ರಾಣವನ್ನು ಕೊಡುತ್ತವೆ ಎನ್ನುವ ಕಥೆ ಇದು.

 

ಈ ಸಂಕಲನದ ಕಿರೀಟಪ್ರಾಯವಾದ ಕಥೆ ಎಂದರೆ ‘ಜೋತಯ್ಯನ ಬಿದಿರು ಬುಟ್ಟಿ.’ ಜೋತಯ್ಯನ ಬಾಲ್ಯಸ್ನೇಹಿತನಾದ ಅನಂತನು ಇದೀಗ ನಗರವಾಸಿಯಾಗಿದ್ದಾನೆ. ಅವನ ಹಾಗು ಜೋತಯ್ಯನ ಸಂಪರ್ಕ ಕಡಿಮೆಯಾಗಿದೆ. ಆದರೆ ಅನಂತನಿಗೆ ಜೋತಯ್ಯನ ಮೇಲಿರುವ ಬಾಲ್ಯದ ಒಲವು ಕಡಿಮೆಯಾಗಿಲ್ಲ. ಜೋತಯ್ಯ,-ಸಮಾಜದ ಕೆಳಸ್ತರದಲ್ಲಿರುವ ಒಬ್ಬ ವ್ಯಕ್ತಿ  ತನ್ನ ಅಂಗವಿಕಲ ಮಗನಿಗೆ ಏನು ಶುಶ್ರೂಷೆಯನ್ನು ಕೊಡಲು ಸಾಧ್ಯ--ಬುಟ್ಟಿಯಲ್ಲಿ ಹೊತ್ತುಕೊಂಡು ತಿರುಗುವದನ್ನು ಬಿಟ್ಟರೆ? ಇದಕ್ಕಾಗಿ ಆತನು ಪಡುವ ಸಂಕಷ್ಟವನ್ನು ಅನಂತನು ನಿರೂಪಿಸುತ್ತಿದ್ದಾನೆ. ತೇಜಸ್ವಿನಿಯವರು  ನಮ್ಮ ಅಂತಃಕರಣ ಮಿಡಿಯುವಂತೆ ಆದರೆ ಕಥೆಯು ಎಲ್ಲೂ melodrama ಆಗದಂತೆ ಎಚ್ಚರಿಕೆ ವಹಿಸುತ್ತ ರಚಿಸಿದ್ದಾರೆ. ತೇಜಸ್ವಿನಿಯವರು ಮನೋವಿಜ್ಞಾನವನ್ನು ಚೆನ್ನಾಗಿ ಅರಿತವರು. ಅವರ ಕಥೆಗಳಲ್ಲಿಯ ಪಾತ್ರಗಳು ಈ ಮಾತಿಗೆ ಒಳ್ಳೆಯ ನಿದರ್ಶನಗಳಾಗಿವೆ.

ಅವರಿಗೆ ಅನೇಕ ಅಭಿನಂದನೆಗಳು.  ಇಂತಹ ಉತ್ತಮ ಕಥೆಗಳು ಅವರ ಲೇಖನಿಯಿಂದ ಇನ್ನಿಷ್ಟು ಬರಲಿ ಎಂದು ಹಾರೈಸುತ್ತೇನೆ.

4 comments:

Anonymous said...

ಅಭಿನಂದನೆಗಳು ವಿಮರ್ಶಕರು ಸ್ತ್ರೀ ಯಾಪುರಷಎಂಬುದು ತಿಳಿದಿಲ್ಲ.

sunaath said...

Anonymusರೆ, ವಿಮರ್ಶಕರು ಯಾರಾದರೇನು? Third gender ಅಂತೂ ಅಲ್ಲ!

ತೇಜಸ್ವಿನಿ ಹೆಗಡೆ said...

ಎಷ್ಟು ಆಪ್ತವಾಗಿ ನಿಮ್ಮ ಅನಿಸಿಕೆ ಹಂಚಿಕೊಂಡಿರುವಿರಿ! ವಿನೀತ ಭಾವ ನನ್ನೊಳಗೆ. ತುಂಬು ಮನದ ಕೃತಜ್ಞತೆಗಳು ನಿಮಗೆ. 😍🙏

sunaath said...

ನಿಮ್ಮ ಕಥೆಗಳು ಓದುಗರನ್ನು ಆಪ್ತಗೊಳಿಸುತ್ತವೆ!