Saturday, August 22, 2009

ಬೇಂದ್ರೆಯವರ ‘ಬೆಳಗು’--ಇದು ಬರಿ ಹಾಡಲ್ಲೋ ಅಣ್ಣಾ!

ಬೇಂದ್ರೆಯವರ ಕವನಗಳನ್ನು ಪ್ರತಿ ಸಲ ಓದಿದಾಗಲೂ ಹೊಸ ಅರ್ಥ ‘ಹೊಳೆ’ಯುತ್ತಿರುತ್ತದೆ ಅವರ ಕವನಗಳನ್ನು ಈ ಹೊತ್ತು ನಾವು ಪೂರ್ಣವಾಗಿ ಅರಿತುಕೊಂಡಿದ್ದೇವೆ ಎಂದು ಹೇಳುವದು ಸಾಧ್ಯವಲ್ಲದ ಮಾತು. ಅವರ ಕವನಗಳಲ್ಲಿ ಅರ್ಥವಲ್ಲದೇ ಪರಮಾರ್ಥವೂ ಇರುತ್ತದೆ. ಉದಾಹರಣೆಗೆ ಅವರ ‘ಬೆಳಗು’ ಕವನವನ್ನೇ ತೆಗೆದುಕೊಳ್ಳಿರಿ. ಈ ಕವನದ ಕೊನೆಯ ನುಡಿಯ ಬಗೆಗೆ ಶ್ರೀ ವ್ಯಾಸ ದೇಶಪಾಂಡೆಯವರು ಇದೀಗ ಹೆಚ್ಚಿನ ವಿವರಣೆಯನ್ನು ಈ ರೀತಿಯಾಗಿ ಕೊಟ್ಟಿದ್ದಾರೆ.

ಕವನದ ಕೊನೆಯ ನುಡಿ ಹೀಗಿದೆ:
“ ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣಾ
ಕಣ್ಣಿಗೆ—ಕಾಣsದೋ ಬಣ್ಣಾ
ಶಾಂತೀರಸವೇ ಪ್ರೀತೀಯಿಂದಾ
ಮೈದೋರಿತಣ್ಣಾ
ಇದು ಬರಿ—ಬೆಳಗಲ್ಲೋ ಅಣ್ಣಾ”

ಕವನದ ಮೊದಲಿನ ಐದು ನುಡಿಗಳಲ್ಲಿ ಬೇಂದ್ರೆಯವರು ತಮ್ಮ ಪಂಚೇಂದ್ರಿಯಗಳಿಗಾದ ವಿಸ್ಮಯಭರಿತ ಅನುಭವವನ್ನು ವರ್ಣಿಸಿದ್ದಾರೆ. ಪಂಚೇಂದ್ರಿಯಗಳ ಆ ಅನುಭವವು ಮನಸ್ಸನ್ನು ಹೇಗೆ ‘ವಿಶ್ವಾತ್ಮ’ನಲ್ಲಿ ತನ್ಮಯಗೊಳಿಸಿತು ಎನ್ನುವದನ್ನೂ ಹೇಳಿದ್ದಾರೆ. (‘ದೇವರದೀ—ಮನಸಿನ ಗೇಹಾ’).

ಈ ಕೊನೆಯ ನುಡಿಯಲ್ಲಿ ಅವರು “ಅರಿಯದು ಅಳವು ತಿಳಿಯದು ಮನವು” ಎಂದು ಹೇಳುತ್ತಾರೆ. “ಅಳವು” ಅಂದರೆ ಸಾಮರ್ಥ್ಯ. ಬೇಂದ್ರೆಯವರು ‘ಬೆಳಗಿ’ ನ ಪೂರ್ಣ ಅನುಭವವು ತಮ್ಮ ಪಂಚೇಂದ್ರಿಯಗಳ ಅಳವಿಗೆ ಹೊರತಾದದ್ದು ಎಂದು ಹೇಳುತ್ತಿದ್ದಾರೆ. ಇದು ಮನುಷ್ಯನ ಪಂಚೇಂದ್ರಿಯಗಳ ಸಾಮರ್ಥ್ಯವನ್ನು ಮೀರಿದ್ದು. ಆದುದರಿಂದಲೇ ‘ತಿಳಿಯದು ಮನವು’. ತನ್ನ ಪಂಚೇಂದ್ರಿಯಗಳ ಸಂವೇದನೆಯಿಂದಲೇ ಲೋಕವನ್ನು ತಿಳಿಯುವ ಮನಸ್ಸಿಗೆ ‘ಬೆಳಗಿ’ನ ಪೂರ್ಣ ಅನುಭವವನ್ನು ತಿಳಿಯಲು ಸಾಧ್ಯವಾಗುವದಿಲ್ಲ. ಈ ಅನುಭವದ ಬಣ್ಣ ಹೊರಗಣ್ಣಿಗಾಗಲೀ ಒಳಗಣ್ಣಿಗಾಗಲೀ ಕಾಣದು. ಉದಾಹರಣೆಗೆ ಹೊರಗಣ್ಣಿಗೆ ಕಾಣುವದು ಕೇವಲ ಏಳೇ ಬಣ್ಣಗಳು. ಈ ಬಣ್ಣಗಳ ತರಂಗಾಂತರದ ಹೊರಗಿನ ಬಣ್ಣಗಳನ್ನು ನಮ್ಮ ಹೊರಗಣ್ಣು ಗ್ರಹಿಸಲಾರದು. ಆ ಕಾರಣದಿಂದ ನಮ್ಮ ಮನಸ್ಸೂ ಸಹ ಅದನ್ನು ಗ್ರಹಿಸಲಾರದು. ಅದರಂತೆ ಈ ಅನುಭವವೂ ಸಹ ಪಂಚೇಂದ್ರಿಯಗಳ ಹೊರಗಿನ ‘ಅಲೌಕಿಕ’ ಅನುಭವ.

ಉಪನಿಷತ್ತಿನಲ್ಲಿ ಭಗವಂತನನ್ನು ‘ಅತ್ಯತ್ತಿಷ್ಠದ್ದಶಾಂಗುಲಮ್’ ಎಂದು ವರ್ಣಿಸಲಾಗಿದೆ. ಭಗವಂತನು ತನ್ನ ಸೃಷ್ಟಿಯ ಒಳಗಲ್ಲದೆ, ಹೊರಗೂ ಸಹ ಹತ್ತು ಅಂಗುಲದವರೆಗೆ ವ್ಯಾಪಿಸಿದ್ದಾನೆ. ಅದರಂತೆ ಈ ಅನುಭವವೂ ಸಹ ಮನುಷ್ಯನ ಸಂವೇದನೆಯ ಅಳವಿನ ಹೊರಗೂ ವ್ಯಾಪಿಸಿದೆ. ಈ ಅಲೌಕಿಕ ವಿಸ್ಮಯವನ್ನು ಬಣ್ಣಿಸಲೇ ಬೇಕಾದರೆ, “ಶಾಂತೀರಸವೇ ಪ್ರೀತೀಯಿಂದಾ ಮೈದೋರಿತಣ್ಣಾ” ಎಂದಷ್ಟೇ ಹೇಳಬಹುದು.

ಭಗವಂತನು ಶಾಂತಿರಸದ ಅನಂತಸಮುದ್ರವಿದ್ದಂತೆ. ಅವನಲ್ಲಿ ಇರುವ ಪ್ರೀತಿಯೇ ಸೃಷ್ಟಿಯ ರೂಪವಾಗಿ ಮೈದೋರುತ್ತದೆ. ಈ ಮಾಂತ್ರಿಕನ ಪ್ರೀತಿಯ ಜಾದೂದಿಂದಲೇ ಸೃಷ್ಟಿಯ ರೂಪಗಳು ವ್ಯಕ್ತವಾಗುತ್ತವೆ. ಆದುದರಿಂದ ಈ ಬೆಳಗೆನ್ನುವದು ಭಗವಚ್ಚೈತನ್ಯದ ರೂಪ. ಹೀಗಾಗಿ ‘ಇದು ಬರಿ ಬೆಳಗಲ್ಲೊ ಅಣ್ಣಾ!’ ಎಂದು ಬೇಂದ್ರೆಯವರು ಹಾಡುತ್ತಾರೆ.
ಅದೇ ರೀತಿಯಾಗಿ ಬೇಂದ್ರೆಯವರ ಕವನದ ಬಗೆಗೆ ನಾವೂ ಹೇಳಬಹುದಲ್ಲವೆ :
“ಇದು ಬರಿ ಹಾಡಲ್ಲೋ ಅಣ್ಣಾ!”

(ಶ್ರೀ ವ್ಯಾಸ ದೇಶಪಾಂಡೆಯವರಿಗೆ ಕೃತಜ್ಞತೆಗಳು.)

Monday, August 17, 2009

ಕಾವ್ಯದಲ್ಲಿ ವಿಸ್ಮಯರಸ

ಸಹೃದಯ ಓದುಗನ ಮನಸ್ಸನ್ನು ಪರವಶಗೊಳಿಸುವದೇ ವಿಸ್ಮಯರಸದ ಪ್ರಯೋಜನವೆನ್ನಬಹುದು. ಭಾರತೀಯ ಕಾವ್ಯದಲ್ಲಿ ವಿಸ್ಮಯರಸದ ಉಗಮವನ್ನು ಹುಡುಕಿದರೆ, ಅದು ನಮ್ಮ ಪ್ರಪ್ರಥಮ ಮಹಾಕಾವ್ಯದಲ್ಲಿಯೇ ದೊರೆಯುತ್ತದೆ. ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಹನುಮಂತನು ಸಮುದ್ರಲಂಘನೆ ಮಾಡುವದು ಹಾಗು ಲಂಕೆಯಲ್ಲಿ ಅವನು ಮಾಡುವ ಸಾಹಸಗಳು ವಿಸ್ಮಯರಸದ ಉಜ್ವಲ ನಿದರ್ಶನಗಳಾಗಿವೆ.

ನಡುಗನ್ನಡ ಕನ್ನಡಸಾಹಿತ್ಯವನ್ನು ಅವಲೋಕಿಸಿದಾಗ, ಶರಣರ ವಚನಗಳಲ್ಲಿ ವಿಸ್ಮಯರಸದ ಅನೇಕ ನಿದರ್ಶನಗಳು ದೊರೆಯುತ್ತವೆ.
ಬಸವಣ್ಣನವರ ಈ ವಚನವನ್ನೇ ಉದಾಹರಣೆಗೆ ತೆಗೆದುಕೊಳ್ಳಿರಿ:
“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಲದಿಂದತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲ ಸಂಗಮ ದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!”
ಭಗವಂತನ ಮಹತಿಗೆ ಬೆರಗಾದ ಭಕ್ತನ ಉದ್ಗಾರವನ್ನು ನಾವು ಈ ವಚನದಲ್ಲಿ ಕಾಣುತ್ತೇವೆ.

ಈ ವಿಸ್ಮಯರಸದ ಬಗೆಗೆ ಇತ್ತೀಚೆಗೆ ಕನ್ನಡದ ಖ್ಯಾತ ನಾಟಕಕಾರ ವ್ಯಾಸ ದೇಶಪಾಂಡೆಯವರ ಜೊತೆಗೆ ಚರ್ಚೆ ನಡೆದಾಗ, ಅವರು ಸರ್ವಜ್ಞನ ವಚನವೊಂದರ ವಿವರಣೆಯನ್ನು ನೀಡಿದರು.
ಆ ವಚನ ಹಾಗು ಅವರ ವಿವರಣೆ ಹೀಗಿದೆ:
“ ಎಲುವಿಲ್ಲ ನಾಲಗೆಗೆ, ಬಲವಿಲ್ಲ ಬಡವಂಗೆ
ತೊಲೆ ಕಂಬವಿಲ್ಲ ಗಗನಕ್ಕೆ, ದೇವರಲಿ
ಕುಲ ಗೋತ್ರವಿಲ್ಲ ಸರ್ವಜ್ಞ”

ನಾಲಿಗೆಗೆ ಎಲುವಿಲ್ಲ ಎನ್ನುವದು ಎಲ್ಲರ ಅನುಭವಕ್ಕೂ ಬರುವ ಭೌತಿಕ ಸತ್ಯ. ಅದರಂತೆ ಬಡವನಿಗೆ ಬಲವಿಲ್ಲ ಎನ್ನುವದು ಒಂದು ಲೌಕಿಕ ಸತ್ಯ. ಮೊದಲಿಗೆ ಈ ಎರಡು ಅನುಭವವೇದ್ಯ ಸತ್ಯಗಳನ್ನು ಹೇಳುವ ಸರ್ವಜ್ಞ, ಆ ಬಳಿಕ ’ತೊಲೆ ಕಂಬವಿಲ್ಲ ಗಗನಕ್ಕೆ’ ಎಂದು ಹೇಳುವ ಮೂಲಕ ಒಂದು meta physical ಸತ್ಯವನ್ನು ಹೇಳುತ್ತಾನೆ. ಆ ಬಳಿಕ ‘ಕುಲ ಗೋತ್ರವಿಲ್ಲ ದೇವರಲಿ’ ಎನ್ನುವ ‘ಅ--ಲೌಕಿಕ’ ಸತ್ಯವನ್ನು ಉಸುರುವ ಮೂಲಕ ಕೇಳುಗರನ್ನು ಪ್ರಭಾವಿತರನ್ನಾಗಿ ಮಾಡುತ್ತಾನೆ. ಇದು ವಿಸ್ಮಯರಸದ ಪ್ರಯೋಜನ.

ಕನಕದಾಸರ ಕೀರ್ತನೆಯಲ್ಲಿಯೂ ಸಹ ಇದೇ ರೀತಿಯ ವಿಸ್ಮಯರಚನೆ ಇದೆ:
“ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳೊ ದೇಹವೊ ಹರಿಯೆ”
ದೇಹವನ್ನು ಸೃಷ್ಟಿಸಿದವನು ಭಗವಂತ. ಆದುದರಿಂದ ಭಗವಂತನಲ್ಲಿ ದೇಹವಿದೆ. ಆದರೆ ಅದೇ ದೇಹದಲ್ಲಿ ಭಗವಂತನೂ ಇದ್ದಾನೆ. ಕನಕದಾಸರು ಭಗವಂತನ ಮಹತಿಯನ್ನು ಅನುಭವಿಸಲು, ಅನುಭವಿಸಿದ್ದನ್ನು ಸಾರಲು ಈ ರೀತಿಯಾಗಿ ವಿಸ್ಮಯವನ್ನು ಪ್ರದರ್ಶಿಸುತ್ತಾರೆ.

ಇದೇ ರೀತಿಯಲ್ಲಿ ಪುರಂದರದಾಸರ ಕೆಲವು ಕೀರ್ತನೆಗಳಲ್ಲಿಯೂ ವಿಸ್ಮಯಭಾವನೆಯು ಕಾಣಸಿಗುತ್ತದೆ.
ಉದಾಹರಣೆಗೆ ಅವರ ಈ ಕೀರ್ತನೆಯನ್ನು ನೋಡಿರಿ:
“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಧರೆ ಜ-
ಗಂಗಳು ಚೈತನ್ಯ ಮರೆದು ಅಂಗಪರವಶವಾದವು ||ಪಲ್ಲ||
ತೀಡಿದ ಮಾರುತ ಮಂದಗತಿಗೈಯೆ ಬಾಡಿದ ಅರಲು ಫಲಗೊಂಚಲು ಬಿಡೆ
ಪಾಡಲೊಲ್ಲವಳಿಕುಲಗಳು ಬಾಡಿದ ಮಾಮರ ಚಿಗುರೊಡೆಯೆ
................................."
ಕೃಷ್ಣನು ಕೊಳಲು ಊದಿದೊಡನೆ, ಪ್ರಕೃತಿಯು ಹೇಗೆ ಪರವಶವಾಯಿತು ಎನ್ನುವದನ್ನು ಪುರಂದರದಾಸರು ಇಲ್ಲಿ ತೋರಿಸಿದ್ದಾರೆ.
ದೈವೀ ಚೈತನ್ಯದಿಂದ ಜರಗುವ ವಿಸ್ಮಯಸಾಧನೆಯ ವರ್ಣನೆ ಇಲ್ಲಿದೆ.

ಕನ್ನಡದ ನವೋದಯ ಕಾವ್ಯದಲ್ಲಂತೂ ವಿಸ್ಮಯರಸವು ಹೇರಳವಾಗಿ ಸಿಗುತ್ತದೆ. ಜಿ.ಪಿ.ರಾಜರತ್ನಮ್ ಅವರ ಸೃಷ್ಟಿಯಾದ ಯೆಂಡ್ಕುಡುಕ ರತ್ನನ ಈ ಉದ್ಗಾರವನ್ನು ನೋಡಿರಿ:
“ಎಲೆಲೆ ರಸ್ತೆ,
ಏನು ಅವ್ಯವಸ್ಥೆ!”
ಇಲ್ಲಿ ಅವ್ಯವಸ್ಥೆಯಾಗಿರುವದು ಯೆಂಡ್ಕುಡುಕನ ಬುದ್ಧಿ.
ತೋಲಾಡುತ್ತಿರುವ ಅವನಿಗೆ ರಸ್ತೆಯೇ ಅಡ್ಡಾದಿಡ್ಡಿಯಾಗಿ ಕಾಣುತ್ತದೆ.

ಕೆ.ಎಸ್. ನರಸಿಂಹಸ್ವಾಮಿಯವರ ದಾಂಪತ್ಯಗೀತೆಗಳಲ್ಲೂ ಸಹ ವಿಸ್ಮಯರಸದ ಸುರಸ ಸೃಷ್ಟಿಯಾಗಿದೆ.
ಪತಿಪತ್ನಿಯರ ಪರಸ್ಪರ ಒಲವು ನರಸಿಂಹಸ್ವಾಮಿಯವರಿಗೆ ಯಾವಾಗಲೂ ಕಾವ್ಯಸ್ಫೂರ್ತಿಯನ್ನು ಒದಗಿಸಿದೆ.
“ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ,
ನನಗದುವೆ ಕೋಟಿ ರೂಪಾಯಿ”
ಎನ್ನುವ ಸಾಲುಗಳು ಕೊನೆಯ ಪಕ್ಷ ಹೆಂಗಸರಲ್ಲಾದರೂ ವಿಸ್ಮಯ ಹುಟ್ಟಿಸಲಾರವೆ?

ನರಸಿಂಹಸ್ವಾಮಿಯವರ ಮತ್ತೊಂದು ಕವನವನ್ನು ನೋಡಿರಿ:
“ಇವಳು ಯಾರು ಬಲ್ಲೆ ಏನು?
ಇವಳ ದನಿಗೆ ತಿರುಗಲೇನು?
ಇವಳ ಹೆಸರ ಹೇಳಲೇನು?
ಇವಳು ಏತಕೊ, ಎನ್ನ ಬಳಿಗೆ ಸುಳಿದಳು!”
ಈ ಕವನದಲ್ಲಿಯ “ಇವಳು” ಬೇರೆ ಯಾರೂ ಅಲ್ಲ. ಇವಳು ನರಸಿಂಹಸ್ವಾಮಿಯವರ ಹೆಂಡತಿಯೇ.
ಇಲ್ಲಿ ಕವಿಗೆ ವಿಸ್ಮಯವನ್ನು ಹುಟ್ಟಿಸುತ್ತಿರುವದು ಗಂಡಹೆಂಡಿರ ನಡುವಿನ ಒಲವಿನ ಶಕ್ತಿ.
“ಅಂತಿಂಥ ಹೆಣ್ಣು ನೀನಲ್ಲ,
ನಿನ್ನಂಥ ಹೆಣ್ಣು ಇನ್ನಿಲ್ಲ”,
ಎನ್ನುವಾಗಲೂ ಕವಿಯಲ್ಲಿ ಇರುವದು ಬೆರಗಿನ ಭಾವನೆಯೇ.

ಬೇಂದ್ರೆಯವರ ಅನೇಕ ಕವನಗಳನ್ನು ಮನೋಜ್ಞವಾಗಿಸುವ ವಿಶಿಷ್ಟ ಗುಣವೆಂದರೆ ಆ ಕವನಗಳಲ್ಲಿರುವ ವಿಸ್ಮಯಭಾವ.ಬೇಂದ್ರೆಯವರ ಅತ್ಯಂತ ಸರಳ ಕವನದ ಉದಾಹರಣೆಯನ್ನೇ ತೆಗೆದುಕೊಳ್ಳಿರಿ:
‘ಪಾತರಗಿತ್ತಿ ಪಕ್ಕಾ
ನೋಡೀದೇನ ಅಕ್ಕಾ!’
ಈ ಮೊದಲೆರಡು ಸಾಲುಗಳೇ ಕವಿ ಅನುಭವಿಸುತ್ತಿರುವ ಬೆರಗನ್ನು ಓದುಗನಿಗೆ ಹೃದಯಾಂತರಿಸುತ್ತವೆ.
ಕವನದಲ್ಲಿ ಮುಂದುವರೆದಂತೆ ಬೆರಗು ಹುಟ್ಟಿಸುವ ಸಾಲುಗಳಿಗೆ ಏನೂ ಕೊರತೆಯಿಲ್ಲ.
“ ಗಾಳೀ ಕೇನೀಲೇನs
ಮಾಡಿದ್ದಾರ ತಾನ!
ನೂರು ಆರು ಪಾರು
ಯಾರು ಮಾಡಿದ್ದಾರು!”
ಇಂತಹ ಸಾಲುಗಳು ಬೆರಗನ್ನು ಹೆಚ್ಚಿಸುತ್ತಲೇ ಹೋಗುತ್ತವೆ.

ವಿಸ್ಮಯಭಾವವು ಬೇಂದ್ರೆಯವರ ನಿಸರ್ಗಕವನಗಳಿಗೆ ಮಾತ್ರ ಸೀಮಿತವಾಗಿಲ್ಲ.
ಮಕ್ಕಳಾಟವು ಬೇಂದ್ರೆಯವರಲ್ಲಿ ಸಹಜವಾಗಿಯೇ ವಿಸ್ಮಯವನ್ನು ಹುಟ್ಟಿಸುತ್ತಿತ್ತು.
ಆ ಬೆರಗನ್ನು ಅವರು ಸಹೃದಯರೊಡನೆ ಹಂಚಿಕೊಳ್ಳುತ್ತಿದ್ದರು.
“ ಯಾರವ್ವಾ ಇವ ಚೆಲುವಾ
ತನ್ನಷ್ಟಕ್ಕs
ತಾನs ನೋಡಿ ನಲಿವಾ!”
ಎಂದು ಬೇಂದ್ರೆ ನಲಿದಾಡುವ ಶಿಶುವನ್ನು ಕಂಡು ಬೆರಗುಬಡುತ್ತಿದ್ದರು.

ಬೇಂದ್ರೆಯವರ ಪುಟ್ಟ ಮಗಳು ಮಂಗಲಾ ನೀರು ತರಲು ಹೋದಾಗ, ಬೇಲಿಯ ಬದಿಗೆ ಬೆಳೆದಿದ್ದ ಹೂವಿನ ಬಳ್ಳಿಗಳು ಅಚ್ಚರಿಪಟ್ಟವಂತೆ.
ಅವು ಬೆರಗುಗೊಂಡು ತಮ್ಮತಮ್ಮಲ್ಲಿಯೆ ಮಾತನಾಡುವದನ್ನು ಕೇಳಿರಿ :
“ಗುಲಬಾಕ್ಷಿ-ಮಲ್ಲಿಗೆ | ಕೇಳತಾವ ಕಲ್ಲಿಗೆ |
ಕಳಿಸೋದೆ ನೀರಿಗೆ | ಇಂಥ ಸುಕುಮಾರಿಗೆ ||”

ಗೊಂಬೆಯಾಟವಾಡಿ ದಣಿದು ಮಲಗಿಕೊಂಡ ಮಗಳನ್ನು ಕಂಡಾಗ ಬೇಂದ್ರೆಯವರು ವಿಸ್ಮಯಪಡುತ್ತಿದ್ದದ್ದು ಹೀಗೆ:
“ಆಟದ ಗೊಂಬಿ, ನಿಜವೆಂದು ನಂಬಿ
ಮಗ್ಗಲಲಿ ಮಲಗಿಸಿಕೊಂಡ ದಿನವೇಸೊ!”

ವೈರುಧ್ಯಗುಣಗಳುಳ್ಳ ವಸ್ತುಗಳನ್ನು ಒಂದೇ ಕಡೆಯಲ್ಲಿ ಪೋಣಿಸುವದರ ಮೂಲಕ ವಿಸ್ಮಯವನ್ನು ಸೃಷ್ಟಿಸುವದು ವರಕವಿಗಳ ಅಪೂರ್ವ ಸಿದ್ಧಿಗಳಲ್ಲೊಂದು. ಉದಾಹರಣೆಗೆ ಅವರ ‘ಬಾರೊ ಸಾಧನಕೇರಿಗೆ’ ಕವನದಲ್ಲಿ ‘ ಬೇಲಿಗೂ ಹೂ ಬೆರಳಿದೆ ’ ಎನ್ನುವ ಸಾಲು ಬರುತ್ತದೆ.

ಬೇಲಿಯ ಕೆಲಸವೇನು? Job of fence is defense. ಆದುದರಿಂದ ಬೇಲಿಗೆ ಇರಬೇಕಾದದ್ದು ಮುಳ್ಳು. ಆದರೆ ಇಲ್ಲಿ ಬೇಲಿಗೆ ಇದ್ದದ್ದು ‘ ಹೂ ಬೆರಳು ’. ಅಂದರೆ ಇಲ್ಲಿ ಬೇಲಿಯು ನಮ್ಮನ್ನು ಸ್ವಾಗತಿಸುತ್ತಿದೆಯೇ ಹೊರತು ಹೊರಗಿಡುತ್ತಿಲ್ಲ. ಇದು ಬೆರಗನ್ನು ಹುಟ್ಟಿಸುವ ಬೇಂದ್ರೆ ಪರಿ.

ಬೇಂದ್ರೆಯವರ ‘ಬೆಳುದಿಂಗಳ ನೋಡs ’ ಕವನವು ವಿಸ್ಮಯಸೃಷ್ಟಿಯ ಅದ್ಭುತ ಕವನ. ಆ ಕವನದ ಕೆಲವು ಸಾಲುಗಳು ಹೀಗಿವೆ:
“ಮರ ಮರದ ಗೊನೀಗೆ ಕೂತು
ಹಾರಿ ಮೈ ಸೋತು
ತೆಪ್ಪಗs ಗಾsಳಿs
ತೆಪ್ಪಗs ಗಾಳಿ||
ತೂಕಡಸತsದ ತಾನೀಗ
ಜಂಪು ಬಂಧಾಂಗ
ಜಂಪು ಬಂಧಾಂsಗs
ಇದು ಅದರ ತುಪ್ಪಳದ ಗೂsಡs
ಬೆಳುದಿಂಗಳ ನೋಡs ||”

ಈ ಕವನದಲ್ಲಿ ಗಾಳಿಯು ಬೆಳದಿಂಗಳಿನಲ್ಲಿ ಸಮರಸವಾದಂತಹ ಒಂದು ಸಜೀವವಾದ ವಸ್ತುವಾಗುತ್ತದೆ. ಬೆಳದಿಂಗಳು ಈ ಗಾಳಿಯ ತುಪ್ಪಳದ ಗೂಡಾಗುತ್ತದೆ. ನಿರ್ಜೀವ ವಸ್ತುಗಳನ್ನು ಸಜೀವವಾಗಿಸುವ ಮೂಲಕ ಬೇಂದ್ರೆಯವರು ವಿಸ್ಮಯದ ಪರಾಕಾಷ್ಠೆಯನ್ನು ತಲಪುತ್ತಾರೆ.

ವಿಸ್ಮಯಭಾವವನ್ನು ಕವನದಲ್ಲಿ ಹಾಸುಹೊಕ್ಕಾಗಿ ನೇಯ್ದಂತಹ ಅವರ ಉತ್ಕೃಷ್ಟ ಕವನವೆಂದರೆ ‘ಬೆಳಗು’.
ಈ ಕವನದ ಮೊದಲ ಎರಡು ನುಡಿಗಳಲ್ಲಿ ಸೂರ್ಯೋದಯವಾಗುತ್ತಿರುವ ವರ್ಣನೆ ಇದೆ. ಮುಂದಿನ ಮೂರು ನುಡಿಗಳಲ್ಲಿ ಸೂರ್ಯೋದಯದ ಸಮಯದಲ್ಲಿಯ ನಿಸರ್ಗದ ವರ್ಣನೆ ಇದೆ. ಕೊನೆಯ ಎರಡು ನುಡಿಗಳಲ್ಲಿ ಕವಿಯ ಮನಸ್ಸಿನ ಮೇಲಾದ ಪರಿಣಾಮದ ವರ್ಣನೆ ಇದೆ.

ಈ ಕವನದ ಮೊದಲ ಎರಡು ನುಡಿಗಳನ್ನು ನೋಡಿರಿ:
==೧==
ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲು ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ

==೨==
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು

ನಿದ್ರಿಸುತ್ತಿರುವ ಜಗವು ತನ್ನ ಬಾಗಿಲನ್ನು ತೆರೆದಾಗ, ಬೆಳಕು ಹರಿದು ಬಂದು ಇಡಿ ಜಗತ್ತೇ ಆ ಬೆಳಕಿನಿಂದ ತೊಯ್ದು ಹೋಯಿತು ಎಂದು ಬೇಂದ್ರೆ ಹೇಳುತ್ತಾರೆ. ಬೇಂದ್ರೆಯವರು ತಾನು ಅನುಭವಿಸಿದ ಅಚ್ಚರಿಯನ್ನು ಓದುಗರಿಗೂ ಈ ರೀತಿಯಲ್ಲಿ ನೀಡುತ್ತಿದ್ದಾರೆ.

ಮೊದಲ ನುಡಿಯಲ್ಲಿ ಬೆಳಕು ಮುತ್ತಿನ ನೀರಿನಂತೆ ಸೌಮ್ಯವಾಗಿದ್ದರೆ, ಎರಡನೆಯ ನುಡಿಯಲ್ಲಿ ಅದು ರತ್ನದ ರಸದಂತೆ ಪ್ರಖರವಾಗಿದೆ. ಬೇಂದ್ರೆಯವರು ವಾಸ್ತವತೆಗೆ ಬದ್ಧರಾಗಿರುತ್ತಾರೆ ಎನ್ನುವದಕ್ಕೆ ಇದೊಂದು ನಿದರ್ಶನ.
ಈ ಬೆಳಕು ಹರಡುವ ಕ್ರಮವನ್ನು ಬೇಂದ್ರೆ “ಮುಗಿದ ಮೊಗ್ಗಿ ಪಟಪಟನೆ ಒಡೆದು” ಎಂದು ಬಣ್ಣಿಸುತ್ತಾರೆ.
ಅಂದರೆ ಬೆಳಕು ಕ್ಷಣಕ್ಷಣಕ್ಕೆ ಹೆಚ್ಚುತ್ತಿರುವದರ ವರ್ಣನೆ ಇದು. ವಿಶ್ವನಿಯಾಮಕ ಭಗವಂತನಿಗೆ ಕೈಮುಗಿದು ಹುಟ್ಟುತ್ತಿರುವ ಸೂರ್ಯನು “ಮುಗಿದ ಮೊಗ್ಗಿ” ಇದ್ದಂತೆ. ಹೂವು ತನ್ನ ಪಕಳೆಗಳನ್ನು ಬಿಚ್ಚುವಂತೆ (unfolding in quick succession) ಆತನು ಪಟಪಟನೆ ಒಡೆದು ಬೆಳಕನ್ನು ನೀಡುತ್ತಾನೆ. ಅದ್ಭುತವಾದ ಕ್ರಿಯೆಯನ್ನು ಅದ್ಭುತವಾಗಿ ವರ್ಣಿಸುವ ಈ ಸಾಲುಗಳು ಓದುಗನಲ್ಲಿ ಬೆರಗನ್ನು ಹುಟ್ಟಿಸುತ್ತವೆ.

[ಟಿಪ್ಪಣಿ: ಶ್ರೀ ಪ್ರಭುಶಂಕರ ಅವರು ಕನ್ನಡದ ಖ್ಯಾತ ವಿಮರ್ಶಕರು. ಯಾಕೋ ಏನೊ ಅವರಿಗೆ “ಪಟಪಟನೆ ಒಡೆದು” ಎನ್ನುವ ಸಾಲುಗಳು ಅರ್ಥವಾಗಲಿಲ್ಲ. ಅವರು ತಮ್ಮ ಗುರುಗಳಾದ ಕುವೆಂಪು ಅವರ ಬಳಿಗೆ ಹೋಗಿ “ಬೇಂದ್ರೆಯವರು ‘ಪಟಪಟನೆ ಒಡೆದು’ ಎಂದು ಬರೆದಿದ್ದಾರಲ್ಲ ; ಸೂರ್ಯೋದಯದ ವೇಳೆಗೆ ಪಟಪಟ ಎನ್ನುವ ಶಬ್ದವಾಗುತ್ತದೆಯೆ?” ಎಂದು ಟೀಕಿಸಿದರು. ಅದಕ್ಕೆ ಕುವೆಂಪುರವರು “ದೊಡ್ಡ ಕವಿಗಳಿಗೆ ಹಾಗೆಲ್ಲ ಅನ್ನಬೇಡಿರಿ; ಅದರ ಅರ್ಥ ನಿಮಗೆ ಆಗುವದಿಲ್ಲ” ಎಂದು ಹೇಳಿ ಕಳಿಸಿದರು. ಪ್ರಭುಶಂಕರರು ಹಿರಿಯ ವಿಮರ್ಶಕರು. ಅಂಥವರಿಗೆ ‘ಪಟಪಟನೆ ಒಡೆದು= unfolding in quick succession’ ಎಂದು ಇಂಗ್ಲೀಶಿನಲ್ಲಿ ತಿಳಿಸಬೇಕಾದದ್ದು ಕನ್ನಡಿಗರ ದೌರ್ಭಾಗ್ಯ! ]

‘ಬೆಳಗು’ ಕವನದ ಮೂರನೆಯ ನುಡಿಯನ್ನು ನೋಡಿರಿ:
==೩==
“ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-ಅಮೃತsದ ಬಿಂದು
ಯಾರಿರಿಸಿರುವರು ಮುಗಿಲs ಮೇಲಿಂ-
ದಿಲ್ಲಿಗೇ ತಂದು
ಈಗ-ಇಲ್ಲಿಗೇ ತಂದು.”

ಎಲೆಗಳ ಮೇಲೆ ಹಾಗೂ ಹೂವುಗಳ ಒಳಗೆ ಕಾಣುವ ಇಬ್ಬನಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಹೋಗುವ ವಸ್ತುಗಳು. ಇವು ಕವಿಗೆ ಅಮೃತದ ಬಿಂದುಗಳಂತೆ ಅಂದರೆ ಶಾಶ್ವತವಾದ ವಸ್ತುಗಳಂತೆ ಕಾಣುವವು. ಇಂತಹ ವೈರುಧ್ಯವು ಕವಿಯಲ್ಲಿ ಪ್ರಕೃತಿಯಲ್ಲಿಯ ಬೆರಗನ್ನು ತೋರಿಸುತ್ತದೆ. ಇದು ದೃಶ್ಯದ ಅನುಭವ.
ಇದರ ಮುಂದಿನ ನುಡಿಯಲ್ಲಿ ಸ್ಪರ್ಶದ ಹಾಗೂ ಗಂಧದ ಅನುಭವವಿದೆ.

=೪=
ತಂಗಾಳೀಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ.

ಮುಂಜಾವಿನ ತಂಗಾಳಿ ಬೀಸಿದಾಗ ಹೂವು ಅಲುಗಾಡುತ್ತವೆ. ಇದು ಕವಿಯ ಕಣ್ಣಿಗೆ ಚಾಮರವನ್ನು ಬೀಸಿದಂತೆ ಕಾಣುತ್ತದೆ.
ಹೂವು ಅಲುಗಾಡಿದಾಗ ಅಲ್ಲಿ ಕುಳಿತ ತುಂಬಿಗಳು ಹಾರಿ ಬಿಡುತ್ತವೆ.
ತುಂಬಿಗಳ ಮೈಗೆ ಗಂಧ ಸವರಿ ಹಾರಿಸಿಬಿಟ್ಟರು ಎಂದು ಬೇಂದ್ರೆಯವರು ಹೇಳುತ್ತಾರೆ.
ಹೀಗೆ ಹಾರಿಸಿಬಿಟ್ಟವರು ಯಾರು? ಅದು ನಿಸರ್ಗಚೈತನ್ಯ. ಆ ಚೈತನ್ಯವನ್ನು ಭಗವಂತ ಎಂದು ಕರೆಯಬಹುದು.
ಈ ರೀತಿಯಾಗಿ ನಿಸರ್ಗಚೈತನ್ಯದ ಬಗೆಗೆ ಬೆರಗಿನ ಭಾವವನ್ನು ಬೇಂದ್ರೆಯವರು ಓದುಗನಲ್ಲಿ ಹುಟ್ಟಿಸುತ್ತಾರೆ.
ಇದೇ ರೀತಿಯಲ್ಲಿ ಇದರ ಮುಂದಿನ ನುಡಿಯಲ್ಲಿ ಶ್ರವಣದ ಅನುಭವವಿದೆ:

==೫==
“ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು-ಹಕ್ಕೀಗಳ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು ”
ಹಕ್ಕಿಗಳ ಹಾಡು ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು ಎಂದು ಹೇಳುವ ಮೂಲಕ ಬೇಂದ್ರೆಯವರು ಚರಾಚರ ಪ್ರಕೃತಿಯು ಸಜೀವವಾಗಿ ಎದ್ದು ಬರುವದನ್ನು ಅನುಭವಿಸುತ್ತಾರೆ ಹಾಗು ಹಾಡುತ್ತಾರೆ.
ಈ ರೀತಿಯಲ್ಲಿ ಪಂಚೇಂದ್ರಿಯಗಳ ಅನುಭವವು ಕಾಡಿನ ನಾಡನ್ನು ಗಂಧರ್ವರ ನಾಡನ್ನಾಗಿ ಮಾರ್ಪಡಿಸುತ್ತದೆ. ಆದರೆ ಈ ಎಲ್ಲ ಅನುಭವಗಳನ್ನು ಅನುಭವಿಸಬೇಕಾದದ್ದು ಮನಸ್ಸೇ ತಾನೆ? ಅದು ಎಂತಹ ಮನಸ್ಸು? ದೇವರು ನೀಡಿದ ಮನಸ್ಸು. ಆ ಅನುಭವವು ಆರನೆಯ ನುಡಿಯಲ್ಲಿದೆ.

==೬==
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.

ಈ ರೀತಿಯಾಗಿ ಪಂಚೇಂದ್ರಿಯಗಳ ಮೂಲಕ ಪಡೆದ ಲೌಕಿಕ ಅನುಭವವು ‘ಅ--ಲೌಕಿಕ’ ಅನುಭವವಾಗಿ ಮಾರ್ಪಡುವ ವಿಸ್ಮಯಜನಕ ಕ್ರಿಯೆಯನ್ನು ಕವಿಯು ಅನುಭವಿಸುತ್ತಾನೆ ಹಾಗು ಸಹೃದಯ ಓದುಗರೊಡನೆ ಹಂಚಿಕೊಳ್ಳುತ್ತಾನೆ.
ಆ ‘ಅಲೌಕಿಕತೆ’ಯ ವರ್ಣನೆ ಮುಂದಿನ ನುಡಿಯಲ್ಲಿದೆ.

==೬==
ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣಾ
ಕಣ್ಣಿಗೆ-ಕಾಣsದೋ ಬಣ್ಣಾ.
ಶಾಂತೀರಸವೇ ಪ್ರೀತೀಯಿಂದಾ
ಮೈದೋರಿತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.

ಈ ರೀತಿಯಾಗಿ ಪ್ರಕೃತಿಯಲ್ಲಿಯ ವಿಸ್ಮಯರಸವನ್ನು ತಾವು ಅನುಭವಿಸಿ, ತಮ್ಮ ಕವನದ ಮೂಲಕ ಸಹೃದಯ ಓದುಗನಲ್ಲಿ ರಸಾನುಭವ ಹುಟ್ಟಿಸುವದರ ಮೂಲಕ ಬೇಂದ್ರೆಯವರು ಕನ್ನಡ ಕಾವ್ಯಕ್ಕೆ ಅಪೂರ್ವ ಕಾಣಿಕೆಯನ್ನಿತ್ತಿದ್ದಾರೆಂದು ಹೇಳಬಹುದು.
ಕನ್ನಡ ಕವಿಗಳು ತಮ್ಮ ಕಾವ್ಯದಲ್ಲಿ ವಿಸ್ಮಯರಸವನ್ನು ಬಳಸಿಕೊಂಡು ಸಹೃದಯ ಓದುಗನ ಮನಸ್ಸನ್ನು ಪರವಶಗೊಳಿಸಿದ್ದಾರೆ ಹಾಗೂ ಕನ್ನಡ ಕಾವ್ಯಕ್ಕೆ ವೈಭವ ತಂದುಕೊಟ್ಟಿದ್ದಾರೆ ಎನ್ನಬಹುದು.

(ನನ್ನೊಡನೆ ಚರ್ಚಿಸಿ, ಈ ಲೇಖನಕ್ಕೆ ಕಾರಣರಾದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ಹಾಗು ಲೇಖನ ಸಿದ್ಧಪಡಿಸುವಾಗ ನೆರವು ನೀಡಿದ ನನ್ನ ನಿರಂತರ ವಿಮರ್ಶಕಿಯಾದ ನನ್ನ ಅರ್ಧಾಂಗಿನಿ ಶ್ರೀಮತಿ ವನಮಾಲಾ ಇವರಿಗೆ ಕೃತಜ್ಞನಾಗಿದ್ದೇನೆ.)

Wednesday, August 5, 2009

ಗೋಪಾಲಕೃಷ್ಣ ಅಡಿಗರ ‘ಭೂತ’

ಕ್ರಿ.ಶ. ೧೯೫೦ರಲ್ಲಿ ವಿನಾಯಕ ಕೃಷ್ಣ ಗೋಕಾಕರು ‘ನವ್ಯ ಕವಿತೆಗಳು’ ಎನ್ನುವ ಕವನಸಂಕಲನವನ್ನು ಹೊರತಂದರು. ೧೯೫೧ರಲ್ಲಿ ಮುಂಬಯಿಯಲ್ಲಿ ಜರುಗಿದ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ನವ್ಯಕಾವ್ಯದ ಲಕ್ಷಣಗಳನ್ನು ವಿವರಿಸಿ, ತಮ್ಮ ಕವಿತೆಗಳನ್ನು ನವ್ಯಕಾವ್ಯವೆಂದು ಘೋಷಿಸಿದರು. ಆದರೆ ಈ ಕವನಗಳು ಕೇವಲ ತಮ್ಮ ವಸ್ತುವಿನಲ್ಲಿ ಮಾತ್ರ ಆಧುನಿಕವಾಗಿದ್ದವೇ ಹೊರತು, ಭಾವನೆಯಲ್ಲಿ ಅಲ್ಲ. In fact ಈ ಕವನಗಳನ್ನು ಬಾಲಿಶ ಕವನಗಳೆಂದು ಕರೆಯುವದೇ ಯೋಗ್ಯವಾದೀತು.
ಗೋಕಾಕರ ‘ನವ್ಯ ಕವಿತೆಗಳು’ ಸಂಕಲನದಲ್ಲಿಯ ‘ರೇಡಿಯೋ’ ಕವನವು ಬಾಲಿಶತನಕ್ಕೊಂದು ಉತ್ತಮ ಉದಾಹರಣೆ. ಅದರ ಮೊದಲ ನುಡಿ ಹೀಗಿದೆ:

“ಕಾಡಿಯೊ, ಬೇಡಿಯೊ,
ತಂದೆನೊಂದು ರೇಡಿಯೊ;
ಮನೆ ತುಂಬಿಸಿಕೊಂಡ ಸೊಸೆ,
ಇಲ್ಲಿದೆ ಬಾ ಹೀಗೆ ಹಸೆ.”

ಇಲ್ಲಿಯವರೆಗೆ ನಿಸರ್ಗ, ದೇಶಪ್ರೇಮ, ಗೆಳೆತನ, ಆದರ್ಶ ಮೊದಲಾದ ವಸ್ತುಗಳ ಬಗೆಗೆ ಕವನಗಳು ಬರುತ್ತಿದ್ದು, ಈಗ ‘ರೇಡಿಯೊ’ ಎನ್ನುವ ಆಧುನಿಕ ವಸ್ತುವಿನ ಬಗೆಗೆ ಗೋಕಾಕರು ಕವನವನ್ನು ಬರೆದರು. ಆದರೆ ಈ ಕವನದ ಭಾವ ಹಾಗು ರಚನೆಗಳು ಭಾವಗೀತೆಯ ಭಾವ ಹಾಗು ರಚನೆಗಿಂತ ಬೇರೆಯಾಗಿಲ್ಲ. ಗೋಕಾಕರಲ್ಲಿ self-appreciation ಬಹಳ. ಹೀಗಾಗಿ ಅವರ ಸಾಹಿತ್ಯದಲ್ಲಿಯೂ ಸಹ ಅವರ ಈ ಮನೋಭಾವ ವ್ಯಕ್ತವಾಗುತ್ತಿರುತ್ತದೆ.

ಕನ್ನಡದ ಹೆಸರಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು, “ಸೂಕ್ಷ್ಮವಾಗಿ ನೋಡಿದರೆ ನಮ್ಮಲ್ಲಿ ನವ್ಯತೆ ಇಟಲಿಯ ನೃತ್ಯಮಂದಿರದಲ್ಲಿ ಹುಟ್ಟಿದ ಪೇಜಾವರ ಸದಾಶಿವರಾಯರ ಕಾವ್ಯದಿಂದ ಪ್ರಾರಂಭವಾಯಿತೆನ್ನಬಹುದು” ಎಂದು ಹೇಳುತ್ತಾರೆ. ಪೇಜಾವರ ಸದಾಶಿವರಾಯರ ಆ ಕವನ “ನಾಟ್ಯೋತ್ಸವ” ಹೀಗಿದೆ:

“ಲೋರೆನ್ಸೊ ಇಲ್ ಮನ್ನೀಫಿಕೊ
ಹಾಡನರ್ಪಿಸಿಹೆನು ತಕೊ!
. . . . . . . . . . . . . .
. . . . . . . . . . . . . .
ಕಾಯದಲ್ಲಿ ಕದನದಿಚ್ಛೆ
ಆದರದನು ಕೊಂಚ ಮುಚ್ಚೆ
ಅರಳುತಿರುವ ಮುಗುಳು ನಗೆ
ಸಾವಿರ ಸಿಗರೇಟ ಹೊಗೆ;
ಮಧುವಿನಲ್ಲಿ ಮಿಂದ ಮುದವು
ಮನಸ ಕೆದರಿದೆ!
. . . . . .. . . . . . . . . . . .
. . . . . . . . . . . . . . . . . ”

ಪೇಜಾವರರ ಈ ಕವನವು ಪಾಶ್ಚಾತ್ಯ ಮನೋವೃತ್ತಿಯ ವಿಜೃಂಭಣೆಯಂತೆ ಕಂಡು ಬರುತ್ತದೆ. ಕವನದ ರಚನೆಯೂ ಸಹ ಭಾವಗೀತೆಯ ರಚನೆಯನ್ನು ಬಿಟ್ಟು ಮುಕ್ತತೆಯ ಕಡೆಗೆ ವಾಲಿದೆ. ಇಷ್ಟರ ಮಟ್ಟಿಗೆ ಇದಕ್ಕೆ ನವ್ಯಕಾವ್ಯವೆನ್ನಬಹುದು.

ಬೇಂದ್ರೆಯವರನ್ನು ಬಿಟ್ಟರೆ, ನವೋದಯ ಕಾವ್ಯಪ್ರಕಾರದಲ್ಲಿ ಅತ್ಯುತ್ತಮ ಸಿದ್ಧಿಯನ್ನು ಮಾಡಿದವರು ಗೋಪಾಲಕೃಷ್ಣ ಅಡಿಗರು.
“ಕಟ್ಟುವೆವು ನಾವು ನಾಡೊಂದನು
ರಸದ ಬೀಡೊಂದನು” ಎನ್ನುವ ಅವರ ಕವನದ ಸಾಲುಗಳನ್ನು ರಾಜಕಾರಣಿಗಳೂ ಸಹ, ಇಂದಿಗೂ quote ಮಾಡುತ್ತಲೇ ಇರುತ್ತಾರೆ.
“ಯಾವ ಮೋಹನ ಮುರಲಿ ಕರೆಯಿತು, ದೂರ ತೀರಕೆ ನಿನ್ನನು?” ಎನ್ನುವ ಕವನವಂತೂ ಅವರ ಅತ್ಯಂತ ಜನಪ್ರಿಯ ಕವನವಾಗಿ ಉಳಿದಿದೆ.
ಆದರೆ ಸ್ವಾತಂತ್ರ್ಯಾನಂತರ ಆದರ್ಶವಾದಿ ಪರಿಸರವು ಶೀಘ್ರವಾಗಿ ಕುಸಿದು ಬೀಳುತ್ತಿದ್ದನ್ನು ಕಂಡು, ಅವರಲ್ಲಿ ಸಾಮಾಜಿಕ ಹಾಗೂ ರಾಜಕೀಯ ಭ್ರಮನಿರಸನವಾಯಿತು. ಬದಲಾಗುತ್ತಿರುವ ಸಂಸ್ಕೃತಿಯು ವ್ಯಕ್ತಿಯ ಮೇಲೆ ಮಾಡುತ್ತಿರುವ ಪರಿಣಾಮಗಳು, ಅದರಲ್ಲಿ ಯಾವುದು ಸರಿ ಯಾವುದು ತಪ್ಪು, ಯಾವುದು ಶ್ರೇಯಸ್ಸು, ಯಾವುದು ಪ್ರೇಯಸ್ಸು ಎನ್ನುವ ವೈಯಕ್ತಿಕ ತಳಮಳವು ಅಡಿಗರಲ್ಲಿ ಪ್ರಾರಂಭವಾಯಿತು. ಈ ತಳಮಳದ ಪರಿಣಾಮವು ಅವರ ಕಾವ್ಯಮಾರ್ಗದ ಮೇಲೂ ಆದದ್ದನ್ನು ನೋಡಬಹುದು. ನವೋದಯದ ಭಾವಗೀತೆಯ ಮಾರ್ಗವನ್ನು ಕಿತ್ತೆಸೆದು, ಅಡಿಗರು ನವ್ಯ ಮಾರ್ಗದಲ್ಲಿ ಚರಿಸಿದರು. ಅವರ ‘ಭೂಮಿಗೀತ’ ಕವನದಲ್ಲಿ ಬರುವ ಈ ಸಾಲುಗಳು ಅವರ ಕಾವ್ಯಮಾರ್ಗಕ್ಕೂ ಹೊಂದುತ್ತವೆ ಎನ್ನಬಹುದು:
“ತೆಗೆದುಕೊ ನೀ ಕೊಟ್ಟ ವಸ್ತ್ರವಿಲಾಸ, ಈ ಶರಟು, ಈ ಶರಾಯಿ,
ಈ ಭಗ್ನ ಜೋಪಡಿಯೂ ನಿನ್ನದೇ.
ಬತ್ತಲಾಗದೆ ಬಯಲು ಸಿಕ್ಕದಿಲ್ಲಿ!”

ಈ ಕಾರಣಗಳಿಂದಾಗಿ ಗೋಪಾಲಕೃಷ್ಣ ಅಡಿಗರನ್ನೇ ಕನ್ನಡದ ನವ್ಯಕಾವ್ಯ ಪ್ರವರ್ತಕರೆಂದು ಕರೆಯುವದು ಸರಿಯಾದ ಮಾತು. ಆದರೆ ಅಡಿಗರಿಂದ ಪ್ರಭಾವಿತರಾಗಿ ನವ್ಯಮಾರ್ಗವನ್ನು ಅನುಸರಿಸಿದ ಯಾವ ಕವಿಯೂ ಅಡಿಗರು ಏರಿದ ಎತ್ತರವನ್ನು ಮುಟ್ಟಿಲ್ಲ.

ಅಡಿಗರ ‘ಭೂತ’ ಕವನವು ೧೯೫೯ರಲ್ಲಿ ಪ್ರಕಟವಾಯಿತು. ಆ ಕವನದ ಪೂರ್ತಿಪಾಠ ಹೀಗಿದೆ :

ಭೂತ
--೧--
ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು :
ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ
ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೇರಿ ತೆಕ್ಕಾಮುಕ್ಕಿ
ಹಾಯುತ್ತಿದೆ ಆಗಾಗ್ಗೆ ತುಳಸಿವೃಂದಾವನದ ಹೊದರಿಗೂ.
ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ
ಕತ್ತರಿಸಿದಿಲಿಬಾಲ ಮಿಡುಕುತ್ತದೆ.
ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ
ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ :
ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ.

--೨--
ವರ್ತಮಾನಪತ್ರಿಕೆಯ ತುಂಬ ಭೂತದ ಸುದ್ದಿ :
ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ ;
ಇದ್ದಕ್ಕಿದ್ದಂತಕಸ್ಮಾತ್ತಗ್ನಿನುಡಿಯುಗಿದ
ಮಂಜು ಮುಸುಕಿದ ಮುಗ್ಧ ಜ್ವಾಲಾಮುಖಿ.
ಪತ್ರಿಕೆಯ ಮುಚ್ಚಿದರು----
ಸದ್ದಿರದ ಖಾಲಿಕಂಕಾಲ ಕೋಣೆಗಳಲ್ಲಿ
ತಾಳವಿಲ್ಲದೆ ಮೂಕಸನ್ನೆ ಮುಲುಕುವ ತಿರುಗುಮುರುಗು ಪಾದದ ಪರಿಷೆ
ಅಂತರಾಳಗಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡೆವ ಬೀಜಾಣುಜಾಲ ;
ಕಾಳರಂಗಸ್ಥಳದ ಫರದೆ ಮುರಿಮರೆಯಲ್ಲಿ
ಮಾತು ಹೆಕ್ಕುವ ಮಿಣುಕು ಮೊನೆಯ ಬಾಲ----- ಇವು
ಬಯಸವೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?

---೩—
ನೀರು ನೆಲೆಯಿಲ್ಲದವರು ಪಿತೃಪಿತಾಮಹರು,
ಗಾಳಿಹೆದ್ದೆರೆಲಾಳಿಗಂಟಿ ನೆಲಸಿಕ್ಕಿಯೂ ದಕ್ಕದವರು.
ಉಚ್ಛಾಟನೆಯ, ತರ್ಪಣದ ತಂತ್ರ ಬಲ್ಲೆ ; ಆದರು ಮಂತ್ರ ಮರೆತೆ ;
ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ.
ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ ;
ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು.
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ;
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆ ಮಿರಿವ ಚಿನ್ನದದಿರು,
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು :
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ---
ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.

--೪—
ಬಾವಿಯೊಳಗಡೆ ಕೊಳೆವ ನೀರು ; ಮೇಲಕ್ಕಾವಿ ;
ಆಕಾಶದುದ್ದವೂ ಅದರ ಕಾರಣ ಬೀದಿ ;
ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ---
ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ---
ಭೂತರೂಪಕ್ಕೆ ಮಳೆ ವರ್ತಮಾನ ;
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;
ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,
ಗುಡಿಗೋಪುರಗಳ ಬಂಗಾರ ಶಿಖರ.
………………………………………………………………………………

ಈ ಕವನದಲ್ಲಿ ಬರುವ ಭೂತ ಪದಕ್ಕೆ ಎರಡು ಅರ್ಥಗಳನ್ನು ಮಾಡಬಹುದು. ಒಂದು past ; ಎರಡನೆಯದು ghost. ಕವಿ ತನ್ನ ಭೂತಕಾಲವನ್ನು ಅಂದರೆ ತನ್ನ ಪೂರ್ವಸಂಸ್ಕಾರಗಳನ್ನು, ಪೂರ್ವಪರಂಪರೆಯನ್ನು ಮರೆತಿದ್ದಾನೆ.ಇದು ವರ್ತಮಾನದ ಪರಿಣಾಮವಾಗಿರಬಹುದು; ಪರಸಂಸ್ಕೃತಿಯ ಆಕರ್ಷಣೆಯ ಪರಿಣಾಮವಾಗಿರಬಹುದು. ಇದರಿಂದ ಕವಿಯ ಮೇಲೆ Alienation Effect ಅಂತೂ ಆಗಿದೆ. ಕವಿಯು ಇಲ್ಲಿ ತನ್ನ ಜನಾಂಗದ ಪ್ರತಿನಿಧಿಯೂ ಹೌದು. ಆದುದರಿಂದ ಒಂದು ಜನಾಂಗವೇ ತನ್ನ ಪರಂಪರೆಯ ವಿಸ್ಮರಣೆಗೆ ಒಳಗಾಗಿದ್ದನ್ನು ಕವಿಯು ವೈಯಕ್ತಿಕವಾಗಿ ಅನುಭವಿಸುತ್ತಿದ್ದಾನೆ. ಆದರೆ ಓರ್ವ ವ್ಯಕ್ತಿಯ ಅಥವಾ ಒಂದು ಜನಾಂಗದ ಸುಪ್ತಪ್ರಜ್ಞೆಯಲ್ಲಿರುವ ಪರಂಪರೆಯ ನೆನಪಿನ ಗ್ರಂಥಿಗಳು ಸುಲಭವಾಗಿ ನಾಶವಾಗುವದಿಲ್ಲ. ಅವು ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಇರುವಿಕೆಯನ್ನು ವ್ಯಕ್ತಪಡಿಸುತ್ತವೆ. ಆದುದರಿಂದಲೇ ಕವಿಯು ಇವುಗಳನ್ನು ‘ಭೂತಕಾಲದ ಭ್ರೂಣ ಗೂಢಗಳು ’ ಎಂದು ಹೇಳುತ್ತಿದ್ದಾನೆ. ಪರಂಪರೆಯ ನೆನಪಿನ ಈ ಗ್ರಂಥಿಗಳು ಕವಿಗೂ ಸಹ ಗೂಢವಾಗಿಯೇ ಇವೆ. ಅವುಗಳನ್ನು ಗುರುತಿಸಲು ಆತ ಶಕ್ತನಾಗುತ್ತಿಲ್ಲ. ಆದರೆ ಅವು ನಿರ್ಜೀವ ಗೂಢಗಳಲ್ಲ. ಅವು ಭ್ರೂಣಾವಸ್ಥೆಯಲ್ಲಿವೆ. ಅಂದರೆ ಅವುಗಳಲ್ಲಿ ಜೀವವಿದೆ. ಅವು ಕವಿಯ ಸುಪ್ತ ಪ್ರಜ್ಞೆಯಿಂದ ಅವನ ಜಾಗೃತ ಪ್ರಜ್ಞೆಗೆ ಅಂದರೆ ಅವನ ಸಂಕಲ್ಪಾತ್ಮಕ ಪ್ರಜ್ಞೆಗೆ (Determining mind) ಬರಲು ತವಕಿಸುತ್ತವೆ. ಶಾಸ್ತ್ರೀಯ ಮನೋವಿಜ್ಞಾನದ ಪಿತಾಮಹನಾದ ಫ್ರಾ^ಯ್ಡನ ಭಾಷೆಯಲ್ಲಿ ಈ ಭ್ರೂಣಗೂಢಗಳು ಅಂದರೆ complexes in subconscious mind ಎಂದು ಹೇಳಬಹುದು. ಮತ್ತೊಬ್ಬ ಮನೋವಿಜ್ಞಾನಿ ಯೂಂಗನ ಭಾಷೆಯಲ್ಲಿ ಇವನ್ನು ಜನಾಂಗೀಯ ಪ್ರಜ್ಞೆಯ ಗ್ರಂಥಿಗಳು ಎಂದೂ ಹೇಳಬಹುದು. ಒಟ್ಟಿನಲ್ಲಿ ಈ ಭ್ರೂಣಗೂಢಗಳಿಂದಾಗಿ ಕವಿಯ ಮನಸ್ಸು ತೀವ್ರ ತಳಮಳಕ್ಕೊಳಗಾಗಿದೆ.

ಕವನದ ಮೊದಲ ಭಾಗದಲ್ಲಿ ಈ ಅಸ್ವಸ್ಥತೆಯ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಗುರುತಿಸಲಾಗದ ಈ ಭೂತಗಳ ವರ್ಣನೆ ಇದೆ. ಮೂರನೆಯ ಭಾಗದಲ್ಲಿ ಕವಿಯ ಸಂಕಲ್ಪವರ್ಣನೆ ಇದೆ. ನಾಲ್ಕನೆಯ ಭಾಗದಲ್ಲಿ ಆಶೆಯ ಮುನ್ನೋಟದ ಸಂಕೇತವಿದೆ. ನಿರಾಶೆಯಿಂದಲೇ ಪ್ರಾರಂಭವಾದ ಕವನವು ಸಂಕಲ್ಪದಲ್ಲಿ ಹಾಗೂ ಆಶಾವಾದದಲ್ಲಿ ಮುಕ್ತಾಯವಾಗುತ್ತದೆ.

--೧—
ಮೊದಲ ಭಾಗ ಹೀಗಿದೆ:

ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು :
ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ
ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೇರಿ ತೆಕ್ಕಾಮುಕ್ಕಿ
ಹಾಯುತ್ತಿದೆ ಆಗಾಗ್ಗೆ ತುಳಸಿವೃಂದಾವನದ ಹೊದರಿಗೂ.
ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ
ಕತ್ತರಿಸಿದಿಲಿಬಾಲ ಮಿಡುಕುತ್ತದೆ.
ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ
ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ :
ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ.

ತನ್ನ ಸುಪ್ತಪ್ರಜ್ಞೆಯನ್ನು ಕವಿ ‘ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ’ ಎಂದು ಸಂಕೇತಿಸುತ್ತಾನೆ. ತಾಯಗರ್ಭದಲ್ಲಿರುವ ಭ್ರೂಣವು ಹೇಗೆ ತಲೆ ಕೆಳಗೆ ಮಾಡಿಕೊಂಡೇ ಹೊರಗೆ ಬರಲು ಪ್ರಯತ್ನಿಸುವದೋ, ಅದೇ ರೀತಿಯಲ್ಲಿ, ಈ ಭೂತಕಾಲದ ಗೂಢಭ್ರೂಣಗಳೂ ಸಹ ತಲೆಕೆಳಗು ಮಾಡಿಕೊಂಡು ತೆವಳುತ್ತ ಹೊರಬರಲು ಪ್ರಯತ್ನಿಸುತ್ತಿವೆ. ಅವುಗಳ ಪ್ರಯತ್ನಕ್ಕೆ ಅಲ್ಲೊಂದು ಆಶಾಕಿರಣವಿದೆ. ಅದೇ ಹೊರಪ್ರಜ್ಞೆಯಲ್ಲಿರುವ ’ಬಿಸಿಲುಕೋಲು’. ಆ ಬಿಸಿಲಕೋಲನ್ನು ಹಿಡಿದುಕೊಂಡು ಇವು ಹೊರಬಂದರೆ ಇವಕ್ಕೆ ಸಿಗುವದು ಜೀವನವನ್ನು ಪಾವನಗೊಳಿಸುವ ತುಳಸಿವೃಂದಾವನ !

ಆದರೆ ಈ ಪ್ರಯಾಣ ಸುಖಕರವಾಗಿಲ್ಲ. ಗೂಢಪ್ರಜ್ಞೆಯ ಗರ್ಭದಿಂದ ಹೊರಬಂದಾಗ ಇವು ಗರ್ಭದ ಜೊತೆಗೆ ಸಂಬಂಧ ನೀಡಿದ ಹೊಕ್ಕಳಹುರಿಯನ್ನು ಕಳಚಿಕೊಳ್ಳುತ್ತವೆ, ಕತ್ತರಿಸಿದ ಇಲಿಬಾಲ ಮಿಡುಕುವಂತೆ. ಇದು pain of separation ಅನ್ನು ಸೂಚಿಸುತ್ತದೆ.
ಈ ರೀತಿಯಾಗಿ ಗೂಢಭ್ರೂಣವು ಹೊರಗೆ ಪ್ರತ್ಯಕ್ಷವಾದಾಗ, ಅದನ್ನು ಗುರುತಿಸಲು ಕತ್ತಲಲ್ಲಿ ತಡಕಾಡುತ್ತಿರುವ ಕವಿಯ ಕಣ್ಣಿಗೆ ಮಿಂಚೊಂದು ಹೊಳೆದು ಅದು ಕಾಣುತ್ತದೆ. ಆ ಮಿಂಚಿನಲ್ಲಿ ಕವಿ ಕಾಣುವದು ಏನನ್ನು? ಈ ಭ್ರೂಣದ ಸ್ಥಿತಿಯನ್ನು :ಅದೊಂದು ಗರಿ ಸುಟ್ಟ ತಾರೆ ! ಅದು ತಾರೆಯೇನೋ ನಿಜ. ಆದರೆ ಅದರ ಗರಿ ಸುಟ್ಟಿದೆ. ಅದು ಹಾರಲಾರದೇ ಒದ್ದಾಡುತ್ತಿದೆ. ನಾವು ಕಳೆದುಕೊಂಡಿರುವ ನಮ್ಮ ಪರಂಪರೆಯ ಅಂಶಗಳು ಗರಿಸುಟ್ಟ ತಾರೆಯಂತಾಗಿವೆ ಎನ್ನುವದು ಕವಿಯ ಭಾವ.
ಈ ರೀತಿಯಾಗಿ ಮೊದಲ ಭಾಗದಲ್ಲಿ ಕವಿ ಸುಪ್ತಪ್ರಜ್ಞೆಯಲ್ಲಿರುವ ಪಾರಂಪರಿಕ ಅಂಶಗಳ ವಸ್ತುಸ್ಥಿತಿಯನ್ನು ಹಾಗೂ ಕವಿಯ ಜೊತೆಗೆ ಅವುಗಳಿಗಿರುವ ಸಂಬಂಧವನ್ನು ವರ್ಣಿಸಿದ್ದಾನೆ.

--೨—
ಎರಡನೆಯ ಭಾಗ ಹೀಗಿದೆ:

ವರ್ತಮಾನಪತ್ರಿಕೆಯ ತುಂಬ ಭೂತದ ಸುದ್ದಿ :
ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ ;
ಇದ್ದಕ್ಕಿದ್ದಂತಕಸ್ಮಾತ್ತಗ್ನಿನುಡಿಯುಗಿದ
ಮಂಜು ಮುಸುಕಿದ ಮುಗ್ಧ ಜ್ವಾಲಾಮುಖಿ.
ಪತ್ರಿಕೆಯ ಮುಚ್ಚಿದರು----
ಸದ್ದಿರದ ಖಾಲಿಕಂಕಾಲ ಕೋಣೆಗಳಲ್ಲಿ
ತಾಳವಿಲ್ಲದೆ ಮೂಕಸನ್ನೆ ಮುಲುಕುವ ತಿರುಗುಮುರುಗು ಪಾದದ ಪರಿಷೆ
ಅಂತರಾಳಗಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡೆವ ಬೀಜಾಣುಜಾಲ ;
ಕಾಳರಂಗಸ್ಥಳದ ಫರದೆ ಮುರಿಮರೆಯಲ್ಲಿ
ಮಾತು ಹೆಕ್ಕುವ ಮಿಣುಕು ಮೊನೆಯ ಬಾಲ----- ಇವು
ಬಯಸವೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?

ಎರಡನೆಯ ಭಾಗದಲ್ಲಿ ಕವಿ ತನ್ನ --(ಅಂದರೆ ತನ್ನ ಜನಾಂಗದ ಎನ್ನುವ ಅರ್ಥವೂ ಇಲ್ಲಿದೆ)—ವರ್ತಮಾನ ಸ್ಥಿತಿಗೂ ಹಾಗೂ ತನ್ನ ಪರಂಪರೆಗೂ ಇರುವ ಗಾಢ ಸಂಬಂಧವನ್ನು ವಿವರಿಸುತ್ತಾನೆ.
ವರ್ತಮಾನ ಪತ್ರಿಕೆ ಅಂದರೆ news paper. ಅದು ಜಗತ್ತಿನಲ್ಲಿ ಸದ್ಯಕ್ಕೆ ನಡೆಯುತ್ತಿರುವದನ್ನು (=ವರ್ತಮಾನವನ್ನು=present stateಅನ್ನು) ತಿಳಿಸಬೇಕು. ಆದರೆ ಈ ವರ್ತಮಾನ ಪತ್ರಿಕೆಯಲ್ಲಿ ಬಂದಿರುವದು ಸದ್ಯದ ಸುದ್ದಿಯಲ್ಲ ; ಅಲ್ಲಿರುವದು ಕೇವಲ ಭೂತದ ಸುದ್ದಿ.
ಅರ್ಥಾತ್ ವರ್ತಮಾನವನ್ನು ಭೂತಕಾಲವು control ಮಾಡುತ್ತಿದೆ.
ಇದರ ಕಾರಣವು ಖ್ಯಾತ ಮನೋವಿಜ್ಞಾನಿ ಫ್ರಾ^ಯ್ಡನ ಥಿಯರಿಯಲ್ಲಿ ಸಿಗುತ್ತದೆ.
ಮನಸ್ಸಿನಲ್ಲಿ ಮೇಲೆ ಕಾಣುವ ಜಾಗ್ರತ ಭಾಗ ಒಂದು ಮಡಿಯಾದರೆ, ಸುಪ್ತ ಭಾಗವು ಏಳು ಮಡಿಯಷ್ಟಿರುತ್ತದೆ. ಈ ಸುಪ್ತಭಾಗವು ಮಂಜು ಮುಸುಕಿದ, ತಣ್ಣನೆಯ ಜ್ವಾಲಾಮುಖಿ. ಯಾವದೋ ಸಂದರ್ಭದಲ್ಲಿ ಇದು ಸಿಡಿದೇಳಬಹುದು!
ಭೂತದ ಸುದ್ದಿಯನ್ನೇ ಹೇಳುವ ಈ ವರ್ತಮಾನ ಪತ್ರಿಕೆಯನ್ನು ಈಗ ಮುಚ್ಚಿ ಹಾಕಿದ್ದಾರೆ.
ಸರಿ, ಪತ್ರಿಕಾಲಯದ ಒಳಗಿನ ಖಾಲಿ ಕೋಣೆಗಳಲ್ಲಿ ಈಗ ಕಾಣುವದೇನು?
ಅಲ್ಲೂ ಭೂತಚಲನೆ !
ಆದರೆ, ವರ್ತಮಾನವು ಮಾಡುವಂತೆ, ಭೂತವು ಸದ್ದು ಮಾಡಲಾರದು, ಇದು ನಿಶ್ಶಬ್ದ ಜೀವಿ ! ಇದರದು ಏನಿದ್ದರೂ silent operation ! ಅದಕ್ಕೆಂದೇ ‘ಸದ್ದಿರದ ಕಂಕಾಲ (=skeleton)ಕೋಣೆ ಎಂದು ಕವಿ ಸುಪ್ತಪ್ರಜ್ಞೆಯನ್ನು ಬಣ್ಣಿಸುತ್ತಾನೆ. ಅಲ್ಲಿ ತಿರುಗು ಮುರುಗು ಪಾದವುಳ್ಳ (= ಭೂತಗಳ) ಪರಿಷೆ ಅಂದರೆ ಜಾತ್ರೆ ನಡೆದಿದೆ. ಅವು ತಾಳವಿಲ್ಲದ ಬೇತಾಳಗಳಾಗಿ, ಮೂಕಸನ್ನೆ ಮಾಡುತ್ತ ಚರಿಸುತ್ತಿವೆ. ಭೂತಗಳ ಪಾದಗಳು ತಿರುಗುಮುರುಗಾಗಿ ಇರುವದರಿಂದ ಅವು ಹಿಂದೆ ನಡೆದರೂ ಸಹ, ಅವುಗಳ ಚಲನೆ ಮುಂದಿನ ದಿಕ್ಕಿನಲ್ಲಿರುತ್ತದೆ. ಅರ್ಥಾತ್ ಅವು ಹೊರಬರಲು ಪ್ರಯತ್ನಿಸುತ್ತಿವೆ.

ಈ ಭೂತಗಳು ಜೀವ ಪಡೆಯಲು ಪ್ರಯತ್ನಿಸುತ್ತಿವೆ. ಆದುದರಿಂದ ಕವಿಯು ಇವುಗಳನ್ನು ಬೀಜಾಣುಜಾಲಕ್ಕೆ(=sperms) ಹೋಲಿಸುತ್ತಾನೆ. ಈ spermಗಳು ಇರುವ ಸುಪ್ತಪ್ರಜ್ಞೆಯ ಗರ್ಭ ಎಂತಹದು? ಅದು ನಿಂತ ನೀರು, stagnant pond. ಕವಿಯ ಅಂತರಾಳವು stagnant pond ಯಾಕೆ ಅನ್ನುವ ಪ್ರಶ್ನೆ ಇಲ್ಲಿ ಬರುತ್ತದೆ. ಕವಿಯು ಪೂರ್ವಪರಂಪರೆಯನ್ನು ಪೂರ್ಣವಾಗಿ ತ್ಯಜಿಸಿ ಪರಸಂಸ್ಕೃತಿಯನ್ನು ಅಪ್ಪಿಕೊಂಡದ್ದರಿಂದಲೇ, ಅವನ ಪರಂಪರೆಯು ನಿಂತ ನೀರಾಯಿತು. ಈಗ ಆ ನಿಂತ ನೀರಿನಲ್ಲಿಯೇ ಈ ಬೀಜಾಣುಗಳು ಕೈಬಡೆಯುತ್ತ ಚಲಿಸುತ್ತಿವೆ, ಹೊಸ ಜನ್ಮ ಪಡೆಯುವ ಉದ್ದೇಶದಿಂದ. ಭ್ರೂಣಾವಸ್ಥೆಗೆ ಬಂದು, ಆಬಳಿಕ ಜಾಗೃತ ಪ್ರಜ್ಞೆಗೆ ನುಗ್ಗುವ ಉದ್ದೇಶದಿಂದ ಅವು ನಿಂತ ನೀರಿನಲ್ಲಿಯೇ ಕೈಬಡೆಯುತ್ತ ಚಲಿಸುತ್ತಿವೆ.

ಕವಿ ಈಗ ಮತ್ತೆ ಕತ್ತರಿಸಿದಿಲಿಬಾಲವನ್ನು ನೆನಪಿಸುತ್ತಾನೆ. ಈ ಇಲಿಬಾಲವು ಕಾಳ(=dark;time)ರಂಗಸ್ಥಳದ ಪರದೆಯ ಹಿಂದಿರುವ ಇಲಿಬಾಲವಾಗಿದೆ. ಇದು ಮಾತನ್ನು ಹೆಕ್ಕುತ್ತಿದೆ. ಯಾವ ರೀತಿಯಲ್ಲಿ ರಂಗಸ್ಥಳದಲ್ಲಿ ಇರುವ ಪಾತ್ರಗಳು ಪರದೆಯ ಹಿಂದಿನಿಂದ ಬರುವ prompting ಅಂದರೆ ಸೂಚನಾಪದಗಳನ್ನು ಅನುಸರಿಸಿ ಮಾತನಾಡುತ್ತವೆಯೊ, ಅದೇ ರೀತಿಯಲ್ಲಿ ಈ ಭ್ರೂಣಗಳು ರಂಗಸ್ಥಳದ (=ಜಾಗೃತಾವಸ್ಥೆಯ) ಹಿಂದಿರುವ ಸುಪ್ತಪ್ರಜ್ಞೆಯಿಂದ ಸೂಚನೆಗಳನ್ನು ಅನುಸರಿಸುತ್ತವೆ.
ಈ ಎಲ್ಲ ಪ್ರಯತ್ನಗಳೊಂದಿಗೆ, ಈ ಎಲ್ಲ ಅವಸ್ಥೆಗಳನ್ನು ದಾಟಿ ಈ ಪಾರಂಪರಿಕ ಭ್ರೂಣಗೂಢಗಳು ಜಾಗೃತ ಪ್ರಜ್ಞೆಗೆ ಬರಲು ಬಯಸುತ್ತವೆ. ಅವುಗಳಿಗೆ ಅಲ್ಲಿ ಕಾಣಸಿಗುವುದು : ಹೊರ ಅಂಗಳದ(=ಜಾಗೃತ ಪ್ರಜ್ಞೆಯಲ್ಲಿ) ಇರುವ ಬಣ್ಣ ಬಣ್ಣದ ಹೂವು, ಪೊದರುಗಳು!

--೩—
ಮೂರನೆಯ ಭಾಗ ಹೀಗಿದೆ:

ನೀರು ನೆಲೆಯಿಲ್ಲದವರು ಪಿತೃಪಿತಾಮಹರು,
ಗಾಳಿಹೆದ್ದೆರೆಲಾಳಿಗಂಟಿ ನೆಲಸಿಕ್ಕಿಯೂ ದಕ್ಕದವರು.
ಉಚ್ಚಾಟನೆಯ, ತರ್ಪಣದ ತಂತ್ರ ಬಲ್ಲೆ ; ಆದರು ಮಂತ್ರ ಮರೆತೆ ;
ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ.
ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ ;
ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು.
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ;
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆ ಮಿರಿವ ಚಿನ್ನದದಿರು,
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು :
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ---
ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.

ಮೊದಲನೆಯ ಭಾಗದಲ್ಲಿ ಭ್ರೂಣಗೂಢಗಳ ಸ್ಥಿತಿಯನ್ನು ಹಾಗು ಎರಡನೆಯ ಭಾಗದಲ್ಲಿ ಅವುಗಳ ಚಲನಯತ್ನವನ್ನು ಸಾರಿದ ಕವಿ, ಮೂರನೆಯ ಭಾಗದಲ್ಲಿ ತನ್ನ ಅಂತರಂಗದ ( ಅಂದರೆ ಸಂಕಲ್ಪಪ್ರಜ್ಞೆಯ) ವಿಮರ್ಶೆಯಲ್ಲಿ ತೊಡಗಿದ್ದಾನೆ.
ತನ್ನ ಪಿತೃ ಪಿತಾಮಹರು ನೀರು, ನೆಲೆಯಿಲ್ಲದವರು. ಏಕೆಂದರೆ ತಾನು ಅವರ ಶ್ರಾದ್ಧಕರ್ಮಗಳನ್ನು ಮಾಡಿಲ್ಲ. ಏಕೆಂದರೆ ಪರಂಪರೆಯಲ್ಲಿ ತನಗೆ ಶ್ರದ್ಧೆ ಇಲ್ಲ.
(ಟಿಪ್ಪಣಿ: ಶ್ರದ್ಧೆಯಿಂದ ಶ್ರಾದ್ಧ ಪದ ಬಂದಿದೆ.)
ಕವಿಗೆ ಎರಡೂ ತರಹದ ತಂತ್ರಗಳು ಗೊತ್ತು. ಅಂದರೆ ಆತ ಈ ಪಿತೃಗಳ ಉಚ್ಚಾಟನೆಯನ್ನೂ ಮಾಡಬಲ್ಲ ಅಥವಾ ಅವರಿಗೆ ತರ್ಪಣವನ್ನೂ ಸಲ್ಲಿಸಬಲ್ಲ. ಆದರೆ ತಂತ್ರವನ್ನು (ಅಂದರೆ ಹೊರಗಿನ proceduresಗಳನ್ನು) ತಿಳಿದ ಕವಿ ಮಂತ್ರವನ್ನು (ಅಂದರೆ ಅಂತರಂಗ ರಹಸ್ಯವನ್ನು) ಮರೆತು ಬಿಟ್ಟಿದ್ದಾನೆ. ಬರಿದೆ ಮಂತ್ರದಂಡವನ್ನು ಆಡಿಸುತ್ತಿದ್ದಾನೆ. ಇದಕ್ಕೆ ಕಾರಣವೇನು? ಕವಿ ಇದಕ್ಕೆ ಪುರೋಹಿತರನ್ನು ದೂರುತ್ತಿದ್ದಾನೆ. ಪುರೋಹಿತರು ಓರ್ವ ವ್ಯಕ್ತಿಯ ಲೌಕಿಕ ಹಾಗು ಪಾರಲೌಕಿಕ ಶ್ರೇಯಸ್ಸಿಗೆ lead ಮಾಡುವಂಥವರು. ಆದರೆ ಈ ಪುರೋಹಿತರು ಕೇವಲ ಪಶ್ಚಿಮಬುದ್ಧಿಯನ್ನು ಕಲಿಸಿದ್ದಾರೆ. ಪಶ್ಚಿಮಬುದ್ಧಿ ಅಂದರೆ : Western thoughts, western culture.
ಇದನ್ನು ಕಲಿಸಿದವರು ಬ್ರಿಟಿಶ್ ಭಾರತದ rationalists. ಪಶ್ಚಿಮಬುದ್ಧಿಗೆ ಇನ್ನೂ ಒಂದು ಅರ್ಥವಿದೆ. ಪೂರ್ವಬುದ್ಧಿ ಎಂದರೆ ‘ಮೊದಲು ಇದ್ದಂತಹ ಬುದ್ಧಿ’ಅಂದರೆ ಪಾರಂಪರಿಕ ಬುದ್ಧಿ . ಪಶ್ಚಿಮಬುದ್ಧಿ ಎಂದರೆ ‘ಆ ಮೇಲೆ ಬಂದಂತಹ ಬುದ್ಧಿ’. ನಮ್ಮ ಪರಂಪರೆಯನ್ನು ಬಿಟ್ಟುಕೊಟ್ಟು , ಮತ್ತೊಂದು ಸಂಸ್ಕೃತಿಯನ್ನು ಅಪ್ಪಿಕೊಂಡಾಗ ಬಂದಂತಹ ಬುದ್ಧಿ. ಇನ್ನು ಮೇಲಾದರೂ ಸಹ ಪೂರ್ವಮೀಮಾಂಸೆ ಅಂದರ ನಮ್ಮ ಪಾರಂಪರಿಕ ಜ್ಞಾನವನ್ನು ನಾವು ತಿಳಿದುಕೊಳ್ಳಬೇಕು ಎಂದು ಕವಿ ಹೇಳುತ್ತಾನೆ.
ಈ ಕಾರ್ಯ ಹಗುರವಾದ ಕಾರ್ಯವೇನಲ್ಲ. ಈ ಪಾರಂಪರಿಕ ಜ್ಞಾನ ‘ಭೂತ’ದಲ್ಲಿ ಹುಗಿದು ಹೋಗಿದೆ. ಗುದ್ದಲಿಯೊತ್ತಿ, ಅದನ್ನು ಹೊರತೆಗೆಯಲು ಪ್ರಯತ್ನಿಸಿದರೆ, ‘ಚಿನ್ನದ ಅದಿರು’ ಕಂಡೀತು. ಆದರೆ ಇದು ಸುತ್ತಲೂ ಕಲ್ಮಶ ಮೆತ್ತಿದ ಅದಿರು ಮಾತ್ರ. ಆ ಅದಿರನ್ನು ಶೋಧಿಸಿ, ಚೊಕ್ಕ ಬಂಗಾರವನ್ನು ಮಾಡುವ ವಿದ್ಯೆಯನ್ನೂ ಕಲಿಯಬೇಕು. ಬಂಗಾರವನ್ನು ಶೋಧಿಸಿದ ಬಳಿಕ, ಆ ಬಂಗಾರದಿಂದ ಮಾಡುವದೇನು?----- ಇಷ್ಟದೇವತೆಯ ವಿಗ್ರಹವನ್ನು!
ಈ ಭಾಗದಲ್ಲಿ ಕಾಣುವ ಆತ್ಮವಿಮರ್ಶೆ ಹಾಗು ಸಮಾಧಾನಪೂರ್ಣ ಸಂಕಲ್ಪ ಇವು ಕವನಕ್ಕೆ ಶಿಖರಪ್ರಾಯವಾಗಿವೆ ಎನ್ನಬಹುದು.

--೪—
ಕವನದ ಕೊನೆಯ ಭಾಗ ಹೀಗಿದೆ:

ಬಾವಿಯೊಳಗಡೆ ಕೊಳೆವ ನೀರು ; ಮೇಲಕ್ಕಾವಿ ;
ಆಕಾಶದುದ್ದವೂ ಅದರ ಕಾರಣ ಬೀದಿ ;
ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ---
ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ---
ಭೂತರೂಪಕ್ಕೆ ಮಳೆ ವರ್ತಮಾನ ;
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;
ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,
ಗುಡಿಗೋಪುರಗಳ ಬಂಗಾರ ಶಿಖರ.

ಈ ನಾಲ್ಕನೆಯ ಭಾಗದಲ್ಲಿ ಒಂದೂ ಕ್ರಿಯಾಪದವು ಇಲ್ಲವೆನ್ನುವದನ್ನು ಗಮನಿಸಬೇಕು. ಯಾಕೆಂದರೆ ಈಗ ಕ್ರಿಯೆ ನಡೆಯುತ್ತಿರುವದು ಕವಿಯ ಒಳನೋಟದಲ್ಲಿ.
ಬಾವಿಯ ಕೆಳಗಡೆಗೆ ಇರುವ ಭೂಗತ ಜಲವು ಕೊಳವಿಯಿಂದ ಬಾವಿಯಲ್ಲಿ ಬರುತ್ತದೆ. ಅದು ಆವಿಯಾಗಿ ಮೇಲಕ್ಕೆ ಹೋಗುತ್ತದೆ. ಆಕಾಶವು ಅದಕ್ಕೆ ಮೇಘರೂಪವನ್ನು ಕೊಡುವ ಕಾರಣಪಥ. ಭೂಗತವೆನ್ನುವದು unconscious mind ಅನ್ನೂ, ಬಾವಿಯು conscious mind ಅನ್ನೂ ಪ್ರತಿನಿಧಿಸಿದರೆ ಆಕಾಶವೆನ್ನುವದು superconscious mind ಅನ್ನು ಅಂದರೆ ವಿವೇಕಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ. ಸುಪ್ತಪ್ರಜ್ಞೆಯ ಗೂಢಗಳಿಗೆ ವಿವೇಕಪ್ರಜ್ಞೆಯು ಸರಿಯಾದ ರೂಪವನ್ನು ಕೊಡಬೇಕೆನ್ನುವದು ಕವಿಯ ಆಶಯ. ಆಕಾಶಕ್ಕೇರಿದ ಈ ಸುಪ್ತಪ್ರಜ್ಞೆಯ ಗೂಢಗಳು ಅಲ್ಲಿ ಅಂತರಪಿಶಾಚಿಯಾಗಿ ನವಮಾಸಗಳವರೆಗೆ ಅಂದರೆ ಪರಿಪೂರ್ಣ ರೂಪವನ್ನು ಪಡೆಯುವವರೆಗೆ ಕಾಯಬೇಕು. ಗುಡುಗು ಸಿಡಿಲಿನ ಕಾಟವನ್ನು ಅಂದರೆ ವಿಭಿನ್ನ ವಿಚಾರಗಳ ಕಾಟವನ್ನು ಸೋಸಬೇಕು. ಆಗಲೇ ಈ ಭೂತರೂಪವು ಮಳೆಯಾಗಿ ವರ್ತಮಾನವನ್ನು ಅಂದರೆ ಜಾಗೃತ ಪ್ರಜ್ಞೆಯನ್ನು ತೋಯಿಸುವದು.
ಇನ್ನು ಮುಂದಿನ ಕಾರ್ಯ ಸಂಕಲ್ಪ ಪ್ರಜ್ಞೆಯದು. ತನ್ನೆದುರಿಗಿನ ಭೂಮಿಯನ್ನು (=ಕರ್ಮಭೂಮಿಯನ್ನು) ಅಗೆದು, ಉತ್ತಿ, ಉತ್ತಮ ಬೀಜಗಳನ್ನು ಬಿತ್ತಿದರೆ ಅಲ್ಲಿ ದೊರೆಯುವದು ಸುಧಾನ್ಯ, ಸುಫಲ ಹಾಗೂ ತನ್ನ ಜನಾಂಗದ ಪರಂಪರೆಯ ಪ್ರತೀಕವಾದ, aspirationಗಳ ಪ್ರತೀಕವಾದ ಗುಡಿಗೋಪುರಗಳ ಬಂಗಾರದ ಶಿಖರಗಳು.
……………………………………………………………
ಆಧುನಿಕ ವಿಚಾರಗಳಿಂದ ಹಾಗೂ ಶಾಸ್ತ್ರೀಯ ಮನೋವಿಜ್ಞಾನದಿಂದ ಪ್ರಭಾವಿತವಾದ ನವ್ಯಕಾವ್ಯವು ಸಂಪ್ರದಾಯವಿರೋಧಿಯಾಗಿದೆ ಎನ್ನುವದು ಸಾಮಾನ್ಯ ಗ್ರಹಿಕೆಯಾಗಿದೆ. ನವ್ಯಕಾವ್ಯದ ಬಹುತೇಕ ಕವಿಗಳು ಅಂತಹದೇ ಕವನಗಳನ್ನು ರಚಿಸಿದರು. ಕೆಲವು ಕವಿಗಳು sex ಬಗೆಗೆ ಬಿಚ್ಚಿ ಬರೆಯುವದೇ ನವ್ಯಕಾವ್ಯವೆಂದು ತಿಳಿದರು. ಈ ತಪ್ಪು ತಿಳಿವಳಿಕೆಯನ್ನು ಹೊತ್ತ ಗಂಗಾಧರ ಚಿತ್ತಾಳರು ತಮ್ಮ ‘ಕಾಮಸೂತ್ರ’ದಲ್ಲಿ ರತಿಕ್ರಿಯೆಯನ್ನು ಬಿಚ್ಚು ಬಿಚ್ಚಾಗಿ ವರ್ಣಿಸಿದ್ದಾರೆ. ಆದರೆ ಕನ್ನಡ ಪದಗಳ ಬದಲಾಗಿ ಅಲ್ಲಿ ಸಂಸ್ಕೃತ ಪದಗಳ ಬಳಕೆ ಇದೆ, ಅಷ್ಟೇ!
ಕನ್ನಡ ಪದಗಳನ್ನೇ ಬಳಸಿದ್ದರೆ ಚಿತ್ತಾಳರ ಕವನಗಳು ಹೋಳಿ ಹುಣ್ಣಿವೆಯ ಪೋಲಿ ಕವನಗಳಾಗುತ್ತಿದ್ದವು.
(ಈ ಕವನವನ್ನು ೨೦೦೭ ನವೆಂಬರ ೧೪ರ "ಮೋಟುಗೋಡೆಯಾಚೆ ಇಣುಕಿದಲ್ಲಿ" blogದಲ್ಲಿ(http://motugode.blogspot.com) ಓದಬಹುದು.)

ನವ್ಯಕಾವ್ಯದ ಮನೋಧರ್ಮವನ್ನು ಅರಿಯಲು ಅಡಿಗರ ಕವನಗಳನ್ನು ಓದಬೇಕು. ಅವರ ‘ಪ್ರಾರ್ಥನೆ’ ಕವನದಲ್ಲಿರುವದು ಒಬ್ಬ ಪ್ರಾಮಾಣಿಕನ, ಒಬ್ಬ ಆದರ್ಶವಾದಿಯ ತಳಮಳ. ಅದಕ್ಕೆಂದೇ, ಆ ಕವನದಲ್ಲಿ ಬರುವ ಅಂತಿಮ ಘೋಷಣೆ : “ತಕ್ಕ ತೊಡೆಗಳ ನಡುವೆ ಧಾತುಸ್ಖಲನದೆಚ್ಚರವ ” ಎನ್ನುವದು ಪೋಲಿ ಮಾತಾಗದೆ, ಪ್ರಾಮಾಣಿಕನ, ಆದರ್ಶವಾದಿಯ ಎಚ್ಚರಿಕೆಯ ಮಾತಾಗುತ್ತದೆ.
(ಈ ಕವನವನ್ನು ೨೦೦೯ ಜೂನ್ ೨೫ರ "ಮೋಟುಗೋಡೆಯಾಚೆ ಇಣುಕಿದಲ್ಲಿ" blogದಲ್ಲಿ(http://motugode.blogspot.com) ಓದಬಹುದು.)
ಅಡಿಗರೇ ತಮ್ಮ ಮತ್ತೊಂದು ಕವನದಲ್ಲಿ “ಗುರುವಿನ ಸಮಾನನಾಗುವತನಕ ದೊರೆಯದಣ್ಣ ಮುಕುತಿ” ಎಂದಿದ್ದಾರೆ. ಹೀಗೆನ್ನುವಾಗ “ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣ ಮುಕುತಿ” ಎನ್ನುವ ಪುರಂದರದಾಸರ ಅವಹೇಳನ ಮಾಡುತ್ತಿಲ್ಲ. ಆದರೆ ದಾಸ ಮನೋಭೂಮಿಕೆಯನ್ನು ಬಿಡಬೇಕು, ಕುರುಡು ವಿಚಾರಗಳನ್ನು ವಿರೋಧಿಸಬೇಕು ಎನ್ನುವ ವೈಚಾರಿಕ ಮನೋಭಾವವನ್ನು ತೋರಿಸುತ್ತಿದ್ದಾರೆ.
ಹಾಗೆಂದು ಅಡಿಗರು ಸತ್-ಪರಂಪರೆಯ ವಿರೋಧಿಯಲ್ಲ. ಪಾಶ್ಚಾತ್ಯರ ಅಂಧಾನುಕರಣೆಯಿಂದ ನಮ್ಮ ಜನಜೀವನ ಹಾಳಾಗುತ್ತಿರುವದನ್ನು ಕಂಡಿದ್ದರಿಂದಲೇ ಅವರು ಈ ಸತ್-ಪರಂಪರೆಯ ಅಂಶಗಳನ್ನು ಮತ್ತೊಮ್ಮೆ ನಮ್ಮಲ್ಲಿ ಅಳವಡಿಸಿಕೊಳ್ಳುವದರ ಅವಶ್ಯಕತೆಯನ್ನು ಈ ಕವನದಲ್ಲಿ ತೋರುತ್ತಿದ್ದಾರೆ. ಆದರೆ ಅವರ ಎಲ್ಲ ಕವನಗಳಲ್ಲಿಯೂ ಅವರ ಸಾಮಾಜಿಕ, ಸಾಂಸ್ಕೃತಿಕ ತೊಳಲಾಟವು ಅವರ ವೈಯಕ್ತಿಕ ತೊಳಲಾಟವಾಗಿ ಬಿಂಬಿತವಾಗುತ್ತದೆ.
ಇದೇ ಅವರ ಪ್ರಾಮಾಣಿಕತೆಯ ಪ್ರತೀಕವಲ್ಲವೆ?!

ಆಡಿಗರ ಭಾಷೆಯು ಕನ್ನಡಕಾವ್ಯದಲ್ಲಿಯೇ ಅತ್ಯಂತ ಸುಂದರವಾದ ಭಾಷೆ. ಅವರ ಭಾಷೆಯನ್ನು ಅಪ್ಸರೆಯ ಚೆಲುವಿಗೆ ಹೋಲಿಸಬಹುದು. ಅವರ ನವೋದಯ ಮಾರ್ಗದ “ಯಾವ ಮೋಹನ ಮುರಲಿ ಕರೆಯಿತು…” ಕವನವೇ ಆಗಲಿ, ಅಥವಾ ನವ್ಯಮಾರ್ಗದ ‘ಭೂತ’ ಕವನವೇ ಆಗಲಿ, ನಮ್ಮ ಮನಸ್ಸನ್ನು ತಕ್ಷಣವೇ ಸೆರೆ ಹಿಡಿಯುವದು ಆ ಭಾಷೆಯ ಚೆಲುವಿನಿಂದ.