ಕ್ರಿ.ಶ. ೧೯೫೦ರಲ್ಲಿ ವಿನಾಯಕ ಕೃಷ್ಣ ಗೋಕಾಕರು ‘ನವ್ಯ ಕವಿತೆಗಳು’ ಎನ್ನುವ ಕವನಸಂಕಲನವನ್ನು ಹೊರತಂದರು. ೧೯೫೧ರಲ್ಲಿ ಮುಂಬಯಿಯಲ್ಲಿ ಜರುಗಿದ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ನವ್ಯಕಾವ್ಯದ ಲಕ್ಷಣಗಳನ್ನು ವಿವರಿಸಿ, ತಮ್ಮ ಕವಿತೆಗಳನ್ನು ನವ್ಯಕಾವ್ಯವೆಂದು ಘೋಷಿಸಿದರು. ಆದರೆ ಈ ಕವನಗಳು ಕೇವಲ ತಮ್ಮ ವಸ್ತುವಿನಲ್ಲಿ ಮಾತ್ರ ಆಧುನಿಕವಾಗಿದ್ದವೇ ಹೊರತು, ಭಾವನೆಯಲ್ಲಿ ಅಲ್ಲ. In fact ಈ ಕವನಗಳನ್ನು ಬಾಲಿಶ ಕವನಗಳೆಂದು ಕರೆಯುವದೇ ಯೋಗ್ಯವಾದೀತು.
ಗೋಕಾಕರ ‘ನವ್ಯ ಕವಿತೆಗಳು’ ಸಂಕಲನದಲ್ಲಿಯ ‘ರೇಡಿಯೋ’ ಕವನವು ಬಾಲಿಶತನಕ್ಕೊಂದು ಉತ್ತಮ ಉದಾಹರಣೆ. ಅದರ ಮೊದಲ ನುಡಿ ಹೀಗಿದೆ:
“ಕಾಡಿಯೊ, ಬೇಡಿಯೊ,
ತಂದೆನೊಂದು ರೇಡಿಯೊ;
ಮನೆ ತುಂಬಿಸಿಕೊಂಡ ಸೊಸೆ,
ಇಲ್ಲಿದೆ ಬಾ ಹೀಗೆ ಹಸೆ.”
ಇಲ್ಲಿಯವರೆಗೆ ನಿಸರ್ಗ, ದೇಶಪ್ರೇಮ, ಗೆಳೆತನ, ಆದರ್ಶ ಮೊದಲಾದ ವಸ್ತುಗಳ ಬಗೆಗೆ ಕವನಗಳು ಬರುತ್ತಿದ್ದು, ಈಗ ‘ರೇಡಿಯೊ’ ಎನ್ನುವ ಆಧುನಿಕ ವಸ್ತುವಿನ ಬಗೆಗೆ ಗೋಕಾಕರು ಕವನವನ್ನು ಬರೆದರು. ಆದರೆ ಈ ಕವನದ ಭಾವ ಹಾಗು ರಚನೆಗಳು ಭಾವಗೀತೆಯ ಭಾವ ಹಾಗು ರಚನೆಗಿಂತ ಬೇರೆಯಾಗಿಲ್ಲ. ಗೋಕಾಕರಲ್ಲಿ self-appreciation ಬಹಳ. ಹೀಗಾಗಿ ಅವರ ಸಾಹಿತ್ಯದಲ್ಲಿಯೂ ಸಹ ಅವರ ಈ ಮನೋಭಾವ ವ್ಯಕ್ತವಾಗುತ್ತಿರುತ್ತದೆ.
ಕನ್ನಡದ ಹೆಸರಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು, “ಸೂಕ್ಷ್ಮವಾಗಿ ನೋಡಿದರೆ ನಮ್ಮಲ್ಲಿ ನವ್ಯತೆ ಇಟಲಿಯ ನೃತ್ಯಮಂದಿರದಲ್ಲಿ ಹುಟ್ಟಿದ ಪೇಜಾವರ ಸದಾಶಿವರಾಯರ ಕಾವ್ಯದಿಂದ ಪ್ರಾರಂಭವಾಯಿತೆನ್ನಬಹುದು” ಎಂದು ಹೇಳುತ್ತಾರೆ. ಪೇಜಾವರ ಸದಾಶಿವರಾಯರ ಆ ಕವನ “ನಾಟ್ಯೋತ್ಸವ” ಹೀಗಿದೆ:
“ಲೋರೆನ್ಸೊ ಇಲ್ ಮನ್ನೀಫಿಕೊ
ಹಾಡನರ್ಪಿಸಿಹೆನು ತಕೊ!
. . . . . . . . . . . . . .
. . . . . . . . . . . . . .
ಕಾಯದಲ್ಲಿ ಕದನದಿಚ್ಛೆ
ಆದರದನು ಕೊಂಚ ಮುಚ್ಚೆ
ಅರಳುತಿರುವ ಮುಗುಳು ನಗೆ
ಸಾವಿರ ಸಿಗರೇಟ ಹೊಗೆ;
ಮಧುವಿನಲ್ಲಿ ಮಿಂದ ಮುದವು
ಮನಸ ಕೆದರಿದೆ!
. . . . . .. . . . . . . . . . . .
. . . . . . . . . . . . . . . . . ”
ಪೇಜಾವರರ ಈ ಕವನವು ಪಾಶ್ಚಾತ್ಯ ಮನೋವೃತ್ತಿಯ ವಿಜೃಂಭಣೆಯಂತೆ ಕಂಡು ಬರುತ್ತದೆ. ಕವನದ ರಚನೆಯೂ ಸಹ ಭಾವಗೀತೆಯ ರಚನೆಯನ್ನು ಬಿಟ್ಟು ಮುಕ್ತತೆಯ ಕಡೆಗೆ ವಾಲಿದೆ. ಇಷ್ಟರ ಮಟ್ಟಿಗೆ ಇದಕ್ಕೆ ನವ್ಯಕಾವ್ಯವೆನ್ನಬಹುದು.
ಬೇಂದ್ರೆಯವರನ್ನು ಬಿಟ್ಟರೆ, ನವೋದಯ ಕಾವ್ಯಪ್ರಕಾರದಲ್ಲಿ ಅತ್ಯುತ್ತಮ ಸಿದ್ಧಿಯನ್ನು ಮಾಡಿದವರು ಗೋಪಾಲಕೃಷ್ಣ ಅಡಿಗರು.
“ಕಟ್ಟುವೆವು ನಾವು ನಾಡೊಂದನು
ರಸದ ಬೀಡೊಂದನು” ಎನ್ನುವ ಅವರ ಕವನದ ಸಾಲುಗಳನ್ನು ರಾಜಕಾರಣಿಗಳೂ ಸಹ, ಇಂದಿಗೂ quote ಮಾಡುತ್ತಲೇ ಇರುತ್ತಾರೆ.
“ಯಾವ ಮೋಹನ ಮುರಲಿ ಕರೆಯಿತು, ದೂರ ತೀರಕೆ ನಿನ್ನನು?” ಎನ್ನುವ ಕವನವಂತೂ ಅವರ ಅತ್ಯಂತ ಜನಪ್ರಿಯ ಕವನವಾಗಿ ಉಳಿದಿದೆ.
ಆದರೆ ಸ್ವಾತಂತ್ರ್ಯಾನಂತರ ಆದರ್ಶವಾದಿ ಪರಿಸರವು ಶೀಘ್ರವಾಗಿ ಕುಸಿದು ಬೀಳುತ್ತಿದ್ದನ್ನು ಕಂಡು, ಅವರಲ್ಲಿ ಸಾಮಾಜಿಕ ಹಾಗೂ ರಾಜಕೀಯ ಭ್ರಮನಿರಸನವಾಯಿತು. ಬದಲಾಗುತ್ತಿರುವ ಸಂಸ್ಕೃತಿಯು ವ್ಯಕ್ತಿಯ ಮೇಲೆ ಮಾಡುತ್ತಿರುವ ಪರಿಣಾಮಗಳು, ಅದರಲ್ಲಿ ಯಾವುದು ಸರಿ ಯಾವುದು ತಪ್ಪು, ಯಾವುದು ಶ್ರೇಯಸ್ಸು, ಯಾವುದು ಪ್ರೇಯಸ್ಸು ಎನ್ನುವ ವೈಯಕ್ತಿಕ ತಳಮಳವು ಅಡಿಗರಲ್ಲಿ ಪ್ರಾರಂಭವಾಯಿತು. ಈ ತಳಮಳದ ಪರಿಣಾಮವು ಅವರ ಕಾವ್ಯಮಾರ್ಗದ ಮೇಲೂ ಆದದ್ದನ್ನು ನೋಡಬಹುದು. ನವೋದಯದ ಭಾವಗೀತೆಯ ಮಾರ್ಗವನ್ನು ಕಿತ್ತೆಸೆದು, ಅಡಿಗರು ನವ್ಯ ಮಾರ್ಗದಲ್ಲಿ ಚರಿಸಿದರು. ಅವರ ‘ಭೂಮಿಗೀತ’ ಕವನದಲ್ಲಿ ಬರುವ ಈ ಸಾಲುಗಳು ಅವರ ಕಾವ್ಯಮಾರ್ಗಕ್ಕೂ ಹೊಂದುತ್ತವೆ ಎನ್ನಬಹುದು:
“ತೆಗೆದುಕೊ ನೀ ಕೊಟ್ಟ ವಸ್ತ್ರವಿಲಾಸ, ಈ ಶರಟು, ಈ ಶರಾಯಿ,
ಈ ಭಗ್ನ ಜೋಪಡಿಯೂ ನಿನ್ನದೇ.
ಬತ್ತಲಾಗದೆ ಬಯಲು ಸಿಕ್ಕದಿಲ್ಲಿ!”
ಈ ಕಾರಣಗಳಿಂದಾಗಿ ಗೋಪಾಲಕೃಷ್ಣ ಅಡಿಗರನ್ನೇ ಕನ್ನಡದ ನವ್ಯಕಾವ್ಯ ಪ್ರವರ್ತಕರೆಂದು ಕರೆಯುವದು ಸರಿಯಾದ ಮಾತು. ಆದರೆ ಅಡಿಗರಿಂದ ಪ್ರಭಾವಿತರಾಗಿ ನವ್ಯಮಾರ್ಗವನ್ನು ಅನುಸರಿಸಿದ ಯಾವ ಕವಿಯೂ ಅಡಿಗರು ಏರಿದ ಎತ್ತರವನ್ನು ಮುಟ್ಟಿಲ್ಲ.
ಅಡಿಗರ ‘ಭೂತ’ ಕವನವು ೧೯೫೯ರಲ್ಲಿ ಪ್ರಕಟವಾಯಿತು. ಆ ಕವನದ ಪೂರ್ತಿಪಾಠ ಹೀಗಿದೆ :
ಭೂತ
--೧--
ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು :
ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ
ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೇರಿ ತೆಕ್ಕಾಮುಕ್ಕಿ
ಹಾಯುತ್ತಿದೆ ಆಗಾಗ್ಗೆ ತುಳಸಿವೃಂದಾವನದ ಹೊದರಿಗೂ.
ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ
ಕತ್ತರಿಸಿದಿಲಿಬಾಲ ಮಿಡುಕುತ್ತದೆ.
ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ
ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ :
ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ.
--೨--
ವರ್ತಮಾನಪತ್ರಿಕೆಯ ತುಂಬ ಭೂತದ ಸುದ್ದಿ :
ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ ;
ಇದ್ದಕ್ಕಿದ್ದಂತಕಸ್ಮಾತ್ತಗ್ನಿನುಡಿಯುಗಿದ
ಮಂಜು ಮುಸುಕಿದ ಮುಗ್ಧ ಜ್ವಾಲಾಮುಖಿ.
ಪತ್ರಿಕೆಯ ಮುಚ್ಚಿದರು----
ಸದ್ದಿರದ ಖಾಲಿಕಂಕಾಲ ಕೋಣೆಗಳಲ್ಲಿ
ತಾಳವಿಲ್ಲದೆ ಮೂಕಸನ್ನೆ ಮುಲುಕುವ ತಿರುಗುಮುರುಗು ಪಾದದ ಪರಿಷೆ
ಅಂತರಾಳಗಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡೆವ ಬೀಜಾಣುಜಾಲ ;
ಕಾಳರಂಗಸ್ಥಳದ ಫರದೆ ಮುರಿಮರೆಯಲ್ಲಿ
ಮಾತು ಹೆಕ್ಕುವ ಮಿಣುಕು ಮೊನೆಯ ಬಾಲ----- ಇವು
ಬಯಸವೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?
---೩—
ನೀರು ನೆಲೆಯಿಲ್ಲದವರು ಪಿತೃಪಿತಾಮಹರು,
ಗಾಳಿಹೆದ್ದೆರೆಲಾಳಿಗಂಟಿ ನೆಲಸಿಕ್ಕಿಯೂ ದಕ್ಕದವರು.
ಉಚ್ಛಾಟನೆಯ, ತರ್ಪಣದ ತಂತ್ರ ಬಲ್ಲೆ ; ಆದರು ಮಂತ್ರ ಮರೆತೆ ;
ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ.
ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ ;
ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು.
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ;
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆ ಮಿರಿವ ಚಿನ್ನದದಿರು,
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು :
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ---
ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.
--೪—
ಬಾವಿಯೊಳಗಡೆ ಕೊಳೆವ ನೀರು ; ಮೇಲಕ್ಕಾವಿ ;
ಆಕಾಶದುದ್ದವೂ ಅದರ ಕಾರಣ ಬೀದಿ ;
ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ---
ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ---
ಭೂತರೂಪಕ್ಕೆ ಮಳೆ ವರ್ತಮಾನ ;
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;
ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,
ಗುಡಿಗೋಪುರಗಳ ಬಂಗಾರ ಶಿಖರ.
………………………………………………………………………………
ಈ ಕವನದಲ್ಲಿ ಬರುವ ಭೂತ ಪದಕ್ಕೆ ಎರಡು ಅರ್ಥಗಳನ್ನು ಮಾಡಬಹುದು. ಒಂದು past ; ಎರಡನೆಯದು ghost. ಕವಿ ತನ್ನ ಭೂತಕಾಲವನ್ನು ಅಂದರೆ ತನ್ನ ಪೂರ್ವಸಂಸ್ಕಾರಗಳನ್ನು, ಪೂರ್ವಪರಂಪರೆಯನ್ನು ಮರೆತಿದ್ದಾನೆ.ಇದು ವರ್ತಮಾನದ ಪರಿಣಾಮವಾಗಿರಬಹುದು; ಪರಸಂಸ್ಕೃತಿಯ ಆಕರ್ಷಣೆಯ ಪರಿಣಾಮವಾಗಿರಬಹುದು. ಇದರಿಂದ ಕವಿಯ ಮೇಲೆ Alienation Effect ಅಂತೂ ಆಗಿದೆ. ಕವಿಯು ಇಲ್ಲಿ ತನ್ನ ಜನಾಂಗದ ಪ್ರತಿನಿಧಿಯೂ ಹೌದು. ಆದುದರಿಂದ ಒಂದು ಜನಾಂಗವೇ ತನ್ನ ಪರಂಪರೆಯ ವಿಸ್ಮರಣೆಗೆ ಒಳಗಾಗಿದ್ದನ್ನು ಕವಿಯು ವೈಯಕ್ತಿಕವಾಗಿ ಅನುಭವಿಸುತ್ತಿದ್ದಾನೆ. ಆದರೆ ಓರ್ವ ವ್ಯಕ್ತಿಯ ಅಥವಾ ಒಂದು ಜನಾಂಗದ ಸುಪ್ತಪ್ರಜ್ಞೆಯಲ್ಲಿರುವ ಪರಂಪರೆಯ ನೆನಪಿನ ಗ್ರಂಥಿಗಳು ಸುಲಭವಾಗಿ ನಾಶವಾಗುವದಿಲ್ಲ. ಅವು ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಇರುವಿಕೆಯನ್ನು ವ್ಯಕ್ತಪಡಿಸುತ್ತವೆ. ಆದುದರಿಂದಲೇ ಕವಿಯು ಇವುಗಳನ್ನು ‘ಭೂತಕಾಲದ ಭ್ರೂಣ ಗೂಢಗಳು ’ ಎಂದು ಹೇಳುತ್ತಿದ್ದಾನೆ. ಪರಂಪರೆಯ ನೆನಪಿನ ಈ ಗ್ರಂಥಿಗಳು ಕವಿಗೂ ಸಹ ಗೂಢವಾಗಿಯೇ ಇವೆ. ಅವುಗಳನ್ನು ಗುರುತಿಸಲು ಆತ ಶಕ್ತನಾಗುತ್ತಿಲ್ಲ. ಆದರೆ ಅವು ನಿರ್ಜೀವ ಗೂಢಗಳಲ್ಲ. ಅವು ಭ್ರೂಣಾವಸ್ಥೆಯಲ್ಲಿವೆ. ಅಂದರೆ ಅವುಗಳಲ್ಲಿ ಜೀವವಿದೆ. ಅವು ಕವಿಯ ಸುಪ್ತ ಪ್ರಜ್ಞೆಯಿಂದ ಅವನ ಜಾಗೃತ ಪ್ರಜ್ಞೆಗೆ ಅಂದರೆ ಅವನ ಸಂಕಲ್ಪಾತ್ಮಕ ಪ್ರಜ್ಞೆಗೆ (Determining mind) ಬರಲು ತವಕಿಸುತ್ತವೆ. ಶಾಸ್ತ್ರೀಯ ಮನೋವಿಜ್ಞಾನದ ಪಿತಾಮಹನಾದ ಫ್ರಾ^ಯ್ಡನ ಭಾಷೆಯಲ್ಲಿ ಈ ಭ್ರೂಣಗೂಢಗಳು ಅಂದರೆ complexes in subconscious mind ಎಂದು ಹೇಳಬಹುದು. ಮತ್ತೊಬ್ಬ ಮನೋವಿಜ್ಞಾನಿ ಯೂಂಗನ ಭಾಷೆಯಲ್ಲಿ ಇವನ್ನು ಜನಾಂಗೀಯ ಪ್ರಜ್ಞೆಯ ಗ್ರಂಥಿಗಳು ಎಂದೂ ಹೇಳಬಹುದು. ಒಟ್ಟಿನಲ್ಲಿ ಈ ಭ್ರೂಣಗೂಢಗಳಿಂದಾಗಿ ಕವಿಯ ಮನಸ್ಸು ತೀವ್ರ ತಳಮಳಕ್ಕೊಳಗಾಗಿದೆ.
ಕವನದ ಮೊದಲ ಭಾಗದಲ್ಲಿ ಈ ಅಸ್ವಸ್ಥತೆಯ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಗುರುತಿಸಲಾಗದ ಈ ಭೂತಗಳ ವರ್ಣನೆ ಇದೆ. ಮೂರನೆಯ ಭಾಗದಲ್ಲಿ ಕವಿಯ ಸಂಕಲ್ಪವರ್ಣನೆ ಇದೆ. ನಾಲ್ಕನೆಯ ಭಾಗದಲ್ಲಿ ಆಶೆಯ ಮುನ್ನೋಟದ ಸಂಕೇತವಿದೆ. ನಿರಾಶೆಯಿಂದಲೇ ಪ್ರಾರಂಭವಾದ ಕವನವು ಸಂಕಲ್ಪದಲ್ಲಿ ಹಾಗೂ ಆಶಾವಾದದಲ್ಲಿ ಮುಕ್ತಾಯವಾಗುತ್ತದೆ.
--೧—
ಮೊದಲ ಭಾಗ ಹೀಗಿದೆ:
ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು :
ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ
ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೇರಿ ತೆಕ್ಕಾಮುಕ್ಕಿ
ಹಾಯುತ್ತಿದೆ ಆಗಾಗ್ಗೆ ತುಳಸಿವೃಂದಾವನದ ಹೊದರಿಗೂ.
ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ
ಕತ್ತರಿಸಿದಿಲಿಬಾಲ ಮಿಡುಕುತ್ತದೆ.
ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ
ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ :
ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ.
ತನ್ನ ಸುಪ್ತಪ್ರಜ್ಞೆಯನ್ನು ಕವಿ ‘ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ’ ಎಂದು ಸಂಕೇತಿಸುತ್ತಾನೆ. ತಾಯಗರ್ಭದಲ್ಲಿರುವ ಭ್ರೂಣವು ಹೇಗೆ ತಲೆ ಕೆಳಗೆ ಮಾಡಿಕೊಂಡೇ ಹೊರಗೆ ಬರಲು ಪ್ರಯತ್ನಿಸುವದೋ, ಅದೇ ರೀತಿಯಲ್ಲಿ, ಈ ಭೂತಕಾಲದ ಗೂಢಭ್ರೂಣಗಳೂ ಸಹ ತಲೆಕೆಳಗು ಮಾಡಿಕೊಂಡು ತೆವಳುತ್ತ ಹೊರಬರಲು ಪ್ರಯತ್ನಿಸುತ್ತಿವೆ. ಅವುಗಳ ಪ್ರಯತ್ನಕ್ಕೆ ಅಲ್ಲೊಂದು ಆಶಾಕಿರಣವಿದೆ. ಅದೇ ಹೊರಪ್ರಜ್ಞೆಯಲ್ಲಿರುವ ’ಬಿಸಿಲುಕೋಲು’. ಆ ಬಿಸಿಲಕೋಲನ್ನು ಹಿಡಿದುಕೊಂಡು ಇವು ಹೊರಬಂದರೆ ಇವಕ್ಕೆ ಸಿಗುವದು ಜೀವನವನ್ನು ಪಾವನಗೊಳಿಸುವ ತುಳಸಿವೃಂದಾವನ !
ಆದರೆ ಈ ಪ್ರಯಾಣ ಸುಖಕರವಾಗಿಲ್ಲ. ಗೂಢಪ್ರಜ್ಞೆಯ ಗರ್ಭದಿಂದ ಹೊರಬಂದಾಗ ಇವು ಗರ್ಭದ ಜೊತೆಗೆ ಸಂಬಂಧ ನೀಡಿದ ಹೊಕ್ಕಳಹುರಿಯನ್ನು ಕಳಚಿಕೊಳ್ಳುತ್ತವೆ, ಕತ್ತರಿಸಿದ ಇಲಿಬಾಲ ಮಿಡುಕುವಂತೆ. ಇದು pain of separation ಅನ್ನು ಸೂಚಿಸುತ್ತದೆ.
ಈ ರೀತಿಯಾಗಿ ಗೂಢಭ್ರೂಣವು ಹೊರಗೆ ಪ್ರತ್ಯಕ್ಷವಾದಾಗ, ಅದನ್ನು ಗುರುತಿಸಲು ಕತ್ತಲಲ್ಲಿ ತಡಕಾಡುತ್ತಿರುವ ಕವಿಯ ಕಣ್ಣಿಗೆ ಮಿಂಚೊಂದು ಹೊಳೆದು ಅದು ಕಾಣುತ್ತದೆ. ಆ ಮಿಂಚಿನಲ್ಲಿ ಕವಿ ಕಾಣುವದು ಏನನ್ನು? ಈ ಭ್ರೂಣದ ಸ್ಥಿತಿಯನ್ನು :ಅದೊಂದು ಗರಿ ಸುಟ್ಟ ತಾರೆ ! ಅದು ತಾರೆಯೇನೋ ನಿಜ. ಆದರೆ ಅದರ ಗರಿ ಸುಟ್ಟಿದೆ. ಅದು ಹಾರಲಾರದೇ ಒದ್ದಾಡುತ್ತಿದೆ. ನಾವು ಕಳೆದುಕೊಂಡಿರುವ ನಮ್ಮ ಪರಂಪರೆಯ ಅಂಶಗಳು ಗರಿಸುಟ್ಟ ತಾರೆಯಂತಾಗಿವೆ ಎನ್ನುವದು ಕವಿಯ ಭಾವ.
ಈ ರೀತಿಯಾಗಿ ಮೊದಲ ಭಾಗದಲ್ಲಿ ಕವಿ ಸುಪ್ತಪ್ರಜ್ಞೆಯಲ್ಲಿರುವ ಪಾರಂಪರಿಕ ಅಂಶಗಳ ವಸ್ತುಸ್ಥಿತಿಯನ್ನು ಹಾಗೂ ಕವಿಯ ಜೊತೆಗೆ ಅವುಗಳಿಗಿರುವ ಸಂಬಂಧವನ್ನು ವರ್ಣಿಸಿದ್ದಾನೆ.
--೨—
ಎರಡನೆಯ ಭಾಗ ಹೀಗಿದೆ:
ವರ್ತಮಾನಪತ್ರಿಕೆಯ ತುಂಬ ಭೂತದ ಸುದ್ದಿ :
ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ ;
ಇದ್ದಕ್ಕಿದ್ದಂತಕಸ್ಮಾತ್ತಗ್ನಿನುಡಿಯುಗಿದ
ಮಂಜು ಮುಸುಕಿದ ಮುಗ್ಧ ಜ್ವಾಲಾಮುಖಿ.
ಪತ್ರಿಕೆಯ ಮುಚ್ಚಿದರು----
ಸದ್ದಿರದ ಖಾಲಿಕಂಕಾಲ ಕೋಣೆಗಳಲ್ಲಿ
ತಾಳವಿಲ್ಲದೆ ಮೂಕಸನ್ನೆ ಮುಲುಕುವ ತಿರುಗುಮುರುಗು ಪಾದದ ಪರಿಷೆ
ಅಂತರಾಳಗಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡೆವ ಬೀಜಾಣುಜಾಲ ;
ಕಾಳರಂಗಸ್ಥಳದ ಫರದೆ ಮುರಿಮರೆಯಲ್ಲಿ
ಮಾತು ಹೆಕ್ಕುವ ಮಿಣುಕು ಮೊನೆಯ ಬಾಲ----- ಇವು
ಬಯಸವೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?
ಎರಡನೆಯ ಭಾಗದಲ್ಲಿ ಕವಿ ತನ್ನ --(ಅಂದರೆ ತನ್ನ ಜನಾಂಗದ ಎನ್ನುವ ಅರ್ಥವೂ ಇಲ್ಲಿದೆ)—ವರ್ತಮಾನ ಸ್ಥಿತಿಗೂ ಹಾಗೂ ತನ್ನ ಪರಂಪರೆಗೂ ಇರುವ ಗಾಢ ಸಂಬಂಧವನ್ನು ವಿವರಿಸುತ್ತಾನೆ.
ವರ್ತಮಾನ ಪತ್ರಿಕೆ ಅಂದರೆ news paper. ಅದು ಜಗತ್ತಿನಲ್ಲಿ ಸದ್ಯಕ್ಕೆ ನಡೆಯುತ್ತಿರುವದನ್ನು (=ವರ್ತಮಾನವನ್ನು=present stateಅನ್ನು) ತಿಳಿಸಬೇಕು. ಆದರೆ ಈ ವರ್ತಮಾನ ಪತ್ರಿಕೆಯಲ್ಲಿ ಬಂದಿರುವದು ಸದ್ಯದ ಸುದ್ದಿಯಲ್ಲ ; ಅಲ್ಲಿರುವದು ಕೇವಲ ಭೂತದ ಸುದ್ದಿ.
ಅರ್ಥಾತ್ ವರ್ತಮಾನವನ್ನು ಭೂತಕಾಲವು control ಮಾಡುತ್ತಿದೆ.
ಇದರ ಕಾರಣವು ಖ್ಯಾತ ಮನೋವಿಜ್ಞಾನಿ ಫ್ರಾ^ಯ್ಡನ ಥಿಯರಿಯಲ್ಲಿ ಸಿಗುತ್ತದೆ.
ಮನಸ್ಸಿನಲ್ಲಿ ಮೇಲೆ ಕಾಣುವ ಜಾಗ್ರತ ಭಾಗ ಒಂದು ಮಡಿಯಾದರೆ, ಸುಪ್ತ ಭಾಗವು ಏಳು ಮಡಿಯಷ್ಟಿರುತ್ತದೆ. ಈ ಸುಪ್ತಭಾಗವು ಮಂಜು ಮುಸುಕಿದ, ತಣ್ಣನೆಯ ಜ್ವಾಲಾಮುಖಿ. ಯಾವದೋ ಸಂದರ್ಭದಲ್ಲಿ ಇದು ಸಿಡಿದೇಳಬಹುದು!
ಭೂತದ ಸುದ್ದಿಯನ್ನೇ ಹೇಳುವ ಈ ವರ್ತಮಾನ ಪತ್ರಿಕೆಯನ್ನು ಈಗ ಮುಚ್ಚಿ ಹಾಕಿದ್ದಾರೆ.
ಸರಿ, ಪತ್ರಿಕಾಲಯದ ಒಳಗಿನ ಖಾಲಿ ಕೋಣೆಗಳಲ್ಲಿ ಈಗ ಕಾಣುವದೇನು?
ಅಲ್ಲೂ ಭೂತಚಲನೆ !
ಆದರೆ, ವರ್ತಮಾನವು ಮಾಡುವಂತೆ, ಭೂತವು ಸದ್ದು ಮಾಡಲಾರದು, ಇದು ನಿಶ್ಶಬ್ದ ಜೀವಿ ! ಇದರದು ಏನಿದ್ದರೂ silent operation ! ಅದಕ್ಕೆಂದೇ ‘ಸದ್ದಿರದ ಕಂಕಾಲ (=skeleton)ಕೋಣೆ ಎಂದು ಕವಿ ಸುಪ್ತಪ್ರಜ್ಞೆಯನ್ನು ಬಣ್ಣಿಸುತ್ತಾನೆ. ಅಲ್ಲಿ ತಿರುಗು ಮುರುಗು ಪಾದವುಳ್ಳ (= ಭೂತಗಳ) ಪರಿಷೆ ಅಂದರೆ ಜಾತ್ರೆ ನಡೆದಿದೆ. ಅವು ತಾಳವಿಲ್ಲದ ಬೇತಾಳಗಳಾಗಿ, ಮೂಕಸನ್ನೆ ಮಾಡುತ್ತ ಚರಿಸುತ್ತಿವೆ. ಭೂತಗಳ ಪಾದಗಳು ತಿರುಗುಮುರುಗಾಗಿ ಇರುವದರಿಂದ ಅವು ಹಿಂದೆ ನಡೆದರೂ ಸಹ, ಅವುಗಳ ಚಲನೆ ಮುಂದಿನ ದಿಕ್ಕಿನಲ್ಲಿರುತ್ತದೆ. ಅರ್ಥಾತ್ ಅವು ಹೊರಬರಲು ಪ್ರಯತ್ನಿಸುತ್ತಿವೆ.
ಈ ಭೂತಗಳು ಜೀವ ಪಡೆಯಲು ಪ್ರಯತ್ನಿಸುತ್ತಿವೆ. ಆದುದರಿಂದ ಕವಿಯು ಇವುಗಳನ್ನು ಬೀಜಾಣುಜಾಲಕ್ಕೆ(=sperms) ಹೋಲಿಸುತ್ತಾನೆ. ಈ spermಗಳು ಇರುವ ಸುಪ್ತಪ್ರಜ್ಞೆಯ ಗರ್ಭ ಎಂತಹದು? ಅದು ನಿಂತ ನೀರು, stagnant pond. ಕವಿಯ ಅಂತರಾಳವು stagnant pond ಯಾಕೆ ಅನ್ನುವ ಪ್ರಶ್ನೆ ಇಲ್ಲಿ ಬರುತ್ತದೆ. ಕವಿಯು ಪೂರ್ವಪರಂಪರೆಯನ್ನು ಪೂರ್ಣವಾಗಿ ತ್ಯಜಿಸಿ ಪರಸಂಸ್ಕೃತಿಯನ್ನು ಅಪ್ಪಿಕೊಂಡದ್ದರಿಂದಲೇ, ಅವನ ಪರಂಪರೆಯು ನಿಂತ ನೀರಾಯಿತು. ಈಗ ಆ ನಿಂತ ನೀರಿನಲ್ಲಿಯೇ ಈ ಬೀಜಾಣುಗಳು ಕೈಬಡೆಯುತ್ತ ಚಲಿಸುತ್ತಿವೆ, ಹೊಸ ಜನ್ಮ ಪಡೆಯುವ ಉದ್ದೇಶದಿಂದ. ಭ್ರೂಣಾವಸ್ಥೆಗೆ ಬಂದು, ಆಬಳಿಕ ಜಾಗೃತ ಪ್ರಜ್ಞೆಗೆ ನುಗ್ಗುವ ಉದ್ದೇಶದಿಂದ ಅವು ನಿಂತ ನೀರಿನಲ್ಲಿಯೇ ಕೈಬಡೆಯುತ್ತ ಚಲಿಸುತ್ತಿವೆ.
ಕವಿ ಈಗ ಮತ್ತೆ ಕತ್ತರಿಸಿದಿಲಿಬಾಲವನ್ನು ನೆನಪಿಸುತ್ತಾನೆ. ಈ ಇಲಿಬಾಲವು ಕಾಳ(=dark;time)ರಂಗಸ್ಥಳದ ಪರದೆಯ ಹಿಂದಿರುವ ಇಲಿಬಾಲವಾಗಿದೆ. ಇದು ಮಾತನ್ನು ಹೆಕ್ಕುತ್ತಿದೆ. ಯಾವ ರೀತಿಯಲ್ಲಿ ರಂಗಸ್ಥಳದಲ್ಲಿ ಇರುವ ಪಾತ್ರಗಳು ಪರದೆಯ ಹಿಂದಿನಿಂದ ಬರುವ prompting ಅಂದರೆ ಸೂಚನಾಪದಗಳನ್ನು ಅನುಸರಿಸಿ ಮಾತನಾಡುತ್ತವೆಯೊ, ಅದೇ ರೀತಿಯಲ್ಲಿ ಈ ಭ್ರೂಣಗಳು ರಂಗಸ್ಥಳದ (=ಜಾಗೃತಾವಸ್ಥೆಯ) ಹಿಂದಿರುವ ಸುಪ್ತಪ್ರಜ್ಞೆಯಿಂದ ಸೂಚನೆಗಳನ್ನು ಅನುಸರಿಸುತ್ತವೆ.
ಈ ಎಲ್ಲ ಪ್ರಯತ್ನಗಳೊಂದಿಗೆ, ಈ ಎಲ್ಲ ಅವಸ್ಥೆಗಳನ್ನು ದಾಟಿ ಈ ಪಾರಂಪರಿಕ ಭ್ರೂಣಗೂಢಗಳು ಜಾಗೃತ ಪ್ರಜ್ಞೆಗೆ ಬರಲು ಬಯಸುತ್ತವೆ. ಅವುಗಳಿಗೆ ಅಲ್ಲಿ ಕಾಣಸಿಗುವುದು : ಹೊರ ಅಂಗಳದ(=ಜಾಗೃತ ಪ್ರಜ್ಞೆಯಲ್ಲಿ) ಇರುವ ಬಣ್ಣ ಬಣ್ಣದ ಹೂವು, ಪೊದರುಗಳು!
--೩—
ಮೂರನೆಯ ಭಾಗ ಹೀಗಿದೆ:
ನೀರು ನೆಲೆಯಿಲ್ಲದವರು ಪಿತೃಪಿತಾಮಹರು,
ಗಾಳಿಹೆದ್ದೆರೆಲಾಳಿಗಂಟಿ ನೆಲಸಿಕ್ಕಿಯೂ ದಕ್ಕದವರು.
ಉಚ್ಚಾಟನೆಯ, ತರ್ಪಣದ ತಂತ್ರ ಬಲ್ಲೆ ; ಆದರು ಮಂತ್ರ ಮರೆತೆ ;
ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ.
ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ ;
ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು.
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ;
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆ ಮಿರಿವ ಚಿನ್ನದದಿರು,
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು :
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ---
ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.
ಮೊದಲನೆಯ ಭಾಗದಲ್ಲಿ ಭ್ರೂಣಗೂಢಗಳ ಸ್ಥಿತಿಯನ್ನು ಹಾಗು ಎರಡನೆಯ ಭಾಗದಲ್ಲಿ ಅವುಗಳ ಚಲನಯತ್ನವನ್ನು ಸಾರಿದ ಕವಿ, ಮೂರನೆಯ ಭಾಗದಲ್ಲಿ ತನ್ನ ಅಂತರಂಗದ ( ಅಂದರೆ ಸಂಕಲ್ಪಪ್ರಜ್ಞೆಯ) ವಿಮರ್ಶೆಯಲ್ಲಿ ತೊಡಗಿದ್ದಾನೆ.
ತನ್ನ ಪಿತೃ ಪಿತಾಮಹರು ನೀರು, ನೆಲೆಯಿಲ್ಲದವರು. ಏಕೆಂದರೆ ತಾನು ಅವರ ಶ್ರಾದ್ಧಕರ್ಮಗಳನ್ನು ಮಾಡಿಲ್ಲ. ಏಕೆಂದರೆ ಪರಂಪರೆಯಲ್ಲಿ ತನಗೆ ಶ್ರದ್ಧೆ ಇಲ್ಲ.
(ಟಿಪ್ಪಣಿ: ಶ್ರದ್ಧೆಯಿಂದ ಶ್ರಾದ್ಧ ಪದ ಬಂದಿದೆ.)
ಕವಿಗೆ ಎರಡೂ ತರಹದ ತಂತ್ರಗಳು ಗೊತ್ತು. ಅಂದರೆ ಆತ ಈ ಪಿತೃಗಳ ಉಚ್ಚಾಟನೆಯನ್ನೂ ಮಾಡಬಲ್ಲ ಅಥವಾ ಅವರಿಗೆ ತರ್ಪಣವನ್ನೂ ಸಲ್ಲಿಸಬಲ್ಲ. ಆದರೆ ತಂತ್ರವನ್ನು (ಅಂದರೆ ಹೊರಗಿನ proceduresಗಳನ್ನು) ತಿಳಿದ ಕವಿ ಮಂತ್ರವನ್ನು (ಅಂದರೆ ಅಂತರಂಗ ರಹಸ್ಯವನ್ನು) ಮರೆತು ಬಿಟ್ಟಿದ್ದಾನೆ. ಬರಿದೆ ಮಂತ್ರದಂಡವನ್ನು ಆಡಿಸುತ್ತಿದ್ದಾನೆ. ಇದಕ್ಕೆ ಕಾರಣವೇನು? ಕವಿ ಇದಕ್ಕೆ ಪುರೋಹಿತರನ್ನು ದೂರುತ್ತಿದ್ದಾನೆ. ಪುರೋಹಿತರು ಓರ್ವ ವ್ಯಕ್ತಿಯ ಲೌಕಿಕ ಹಾಗು ಪಾರಲೌಕಿಕ ಶ್ರೇಯಸ್ಸಿಗೆ lead ಮಾಡುವಂಥವರು. ಆದರೆ ಈ ಪುರೋಹಿತರು ಕೇವಲ ಪಶ್ಚಿಮಬುದ್ಧಿಯನ್ನು ಕಲಿಸಿದ್ದಾರೆ. ಪಶ್ಚಿಮಬುದ್ಧಿ ಅಂದರೆ : Western thoughts, western culture.
ಇದನ್ನು ಕಲಿಸಿದವರು ಬ್ರಿಟಿಶ್ ಭಾರತದ rationalists. ಪಶ್ಚಿಮಬುದ್ಧಿಗೆ ಇನ್ನೂ ಒಂದು ಅರ್ಥವಿದೆ. ಪೂರ್ವಬುದ್ಧಿ ಎಂದರೆ ‘ಮೊದಲು ಇದ್ದಂತಹ ಬುದ್ಧಿ’ಅಂದರೆ ಪಾರಂಪರಿಕ ಬುದ್ಧಿ . ಪಶ್ಚಿಮಬುದ್ಧಿ ಎಂದರೆ ‘ಆ ಮೇಲೆ ಬಂದಂತಹ ಬುದ್ಧಿ’. ನಮ್ಮ ಪರಂಪರೆಯನ್ನು ಬಿಟ್ಟುಕೊಟ್ಟು , ಮತ್ತೊಂದು ಸಂಸ್ಕೃತಿಯನ್ನು ಅಪ್ಪಿಕೊಂಡಾಗ ಬಂದಂತಹ ಬುದ್ಧಿ. ಇನ್ನು ಮೇಲಾದರೂ ಸಹ ಪೂರ್ವಮೀಮಾಂಸೆ ಅಂದರ ನಮ್ಮ ಪಾರಂಪರಿಕ ಜ್ಞಾನವನ್ನು ನಾವು ತಿಳಿದುಕೊಳ್ಳಬೇಕು ಎಂದು ಕವಿ ಹೇಳುತ್ತಾನೆ.
ಈ ಕಾರ್ಯ ಹಗುರವಾದ ಕಾರ್ಯವೇನಲ್ಲ. ಈ ಪಾರಂಪರಿಕ ಜ್ಞಾನ ‘ಭೂತ’ದಲ್ಲಿ ಹುಗಿದು ಹೋಗಿದೆ. ಗುದ್ದಲಿಯೊತ್ತಿ, ಅದನ್ನು ಹೊರತೆಗೆಯಲು ಪ್ರಯತ್ನಿಸಿದರೆ, ‘ಚಿನ್ನದ ಅದಿರು’ ಕಂಡೀತು. ಆದರೆ ಇದು ಸುತ್ತಲೂ ಕಲ್ಮಶ ಮೆತ್ತಿದ ಅದಿರು ಮಾತ್ರ. ಆ ಅದಿರನ್ನು ಶೋಧಿಸಿ, ಚೊಕ್ಕ ಬಂಗಾರವನ್ನು ಮಾಡುವ ವಿದ್ಯೆಯನ್ನೂ ಕಲಿಯಬೇಕು. ಬಂಗಾರವನ್ನು ಶೋಧಿಸಿದ ಬಳಿಕ, ಆ ಬಂಗಾರದಿಂದ ಮಾಡುವದೇನು?----- ಇಷ್ಟದೇವತೆಯ ವಿಗ್ರಹವನ್ನು!
ಈ ಭಾಗದಲ್ಲಿ ಕಾಣುವ ಆತ್ಮವಿಮರ್ಶೆ ಹಾಗು ಸಮಾಧಾನಪೂರ್ಣ ಸಂಕಲ್ಪ ಇವು ಕವನಕ್ಕೆ ಶಿಖರಪ್ರಾಯವಾಗಿವೆ ಎನ್ನಬಹುದು.
--೪—
ಕವನದ ಕೊನೆಯ ಭಾಗ ಹೀಗಿದೆ:
ಬಾವಿಯೊಳಗಡೆ ಕೊಳೆವ ನೀರು ; ಮೇಲಕ್ಕಾವಿ ;
ಆಕಾಶದುದ್ದವೂ ಅದರ ಕಾರಣ ಬೀದಿ ;
ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ---
ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ---
ಭೂತರೂಪಕ್ಕೆ ಮಳೆ ವರ್ತಮಾನ ;
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;
ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,
ಗುಡಿಗೋಪುರಗಳ ಬಂಗಾರ ಶಿಖರ.
ಈ ನಾಲ್ಕನೆಯ ಭಾಗದಲ್ಲಿ ಒಂದೂ ಕ್ರಿಯಾಪದವು ಇಲ್ಲವೆನ್ನುವದನ್ನು ಗಮನಿಸಬೇಕು. ಯಾಕೆಂದರೆ ಈಗ ಕ್ರಿಯೆ ನಡೆಯುತ್ತಿರುವದು ಕವಿಯ ಒಳನೋಟದಲ್ಲಿ.
ಬಾವಿಯ ಕೆಳಗಡೆಗೆ ಇರುವ ಭೂಗತ ಜಲವು ಕೊಳವಿಯಿಂದ ಬಾವಿಯಲ್ಲಿ ಬರುತ್ತದೆ. ಅದು ಆವಿಯಾಗಿ ಮೇಲಕ್ಕೆ ಹೋಗುತ್ತದೆ. ಆಕಾಶವು ಅದಕ್ಕೆ ಮೇಘರೂಪವನ್ನು ಕೊಡುವ ಕಾರಣಪಥ. ಭೂಗತವೆನ್ನುವದು unconscious mind ಅನ್ನೂ, ಬಾವಿಯು conscious mind ಅನ್ನೂ ಪ್ರತಿನಿಧಿಸಿದರೆ ಆಕಾಶವೆನ್ನುವದು superconscious mind ಅನ್ನು ಅಂದರೆ ವಿವೇಕಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ. ಸುಪ್ತಪ್ರಜ್ಞೆಯ ಗೂಢಗಳಿಗೆ ವಿವೇಕಪ್ರಜ್ಞೆಯು ಸರಿಯಾದ ರೂಪವನ್ನು ಕೊಡಬೇಕೆನ್ನುವದು ಕವಿಯ ಆಶಯ. ಆಕಾಶಕ್ಕೇರಿದ ಈ ಸುಪ್ತಪ್ರಜ್ಞೆಯ ಗೂಢಗಳು ಅಲ್ಲಿ ಅಂತರಪಿಶಾಚಿಯಾಗಿ ನವಮಾಸಗಳವರೆಗೆ ಅಂದರೆ ಪರಿಪೂರ್ಣ ರೂಪವನ್ನು ಪಡೆಯುವವರೆಗೆ ಕಾಯಬೇಕು. ಗುಡುಗು ಸಿಡಿಲಿನ ಕಾಟವನ್ನು ಅಂದರೆ ವಿಭಿನ್ನ ವಿಚಾರಗಳ ಕಾಟವನ್ನು ಸೋಸಬೇಕು. ಆಗಲೇ ಈ ಭೂತರೂಪವು ಮಳೆಯಾಗಿ ವರ್ತಮಾನವನ್ನು ಅಂದರೆ ಜಾಗೃತ ಪ್ರಜ್ಞೆಯನ್ನು ತೋಯಿಸುವದು.
ಇನ್ನು ಮುಂದಿನ ಕಾರ್ಯ ಸಂಕಲ್ಪ ಪ್ರಜ್ಞೆಯದು. ತನ್ನೆದುರಿಗಿನ ಭೂಮಿಯನ್ನು (=ಕರ್ಮಭೂಮಿಯನ್ನು) ಅಗೆದು, ಉತ್ತಿ, ಉತ್ತಮ ಬೀಜಗಳನ್ನು ಬಿತ್ತಿದರೆ ಅಲ್ಲಿ ದೊರೆಯುವದು ಸುಧಾನ್ಯ, ಸುಫಲ ಹಾಗೂ ತನ್ನ ಜನಾಂಗದ ಪರಂಪರೆಯ ಪ್ರತೀಕವಾದ, aspirationಗಳ ಪ್ರತೀಕವಾದ ಗುಡಿಗೋಪುರಗಳ ಬಂಗಾರದ ಶಿಖರಗಳು.
……………………………………………………………
ಆಧುನಿಕ ವಿಚಾರಗಳಿಂದ ಹಾಗೂ ಶಾಸ್ತ್ರೀಯ ಮನೋವಿಜ್ಞಾನದಿಂದ ಪ್ರಭಾವಿತವಾದ ನವ್ಯಕಾವ್ಯವು ಸಂಪ್ರದಾಯವಿರೋಧಿಯಾಗಿದೆ ಎನ್ನುವದು ಸಾಮಾನ್ಯ ಗ್ರಹಿಕೆಯಾಗಿದೆ. ನವ್ಯಕಾವ್ಯದ ಬಹುತೇಕ ಕವಿಗಳು ಅಂತಹದೇ ಕವನಗಳನ್ನು ರಚಿಸಿದರು. ಕೆಲವು ಕವಿಗಳು sex ಬಗೆಗೆ ಬಿಚ್ಚಿ ಬರೆಯುವದೇ ನವ್ಯಕಾವ್ಯವೆಂದು ತಿಳಿದರು. ಈ ತಪ್ಪು ತಿಳಿವಳಿಕೆಯನ್ನು ಹೊತ್ತ ಗಂಗಾಧರ ಚಿತ್ತಾಳರು ತಮ್ಮ ‘ಕಾಮಸೂತ್ರ’ದಲ್ಲಿ ರತಿಕ್ರಿಯೆಯನ್ನು ಬಿಚ್ಚು ಬಿಚ್ಚಾಗಿ ವರ್ಣಿಸಿದ್ದಾರೆ. ಆದರೆ ಕನ್ನಡ ಪದಗಳ ಬದಲಾಗಿ ಅಲ್ಲಿ ಸಂಸ್ಕೃತ ಪದಗಳ ಬಳಕೆ ಇದೆ, ಅಷ್ಟೇ!
ಕನ್ನಡ ಪದಗಳನ್ನೇ ಬಳಸಿದ್ದರೆ ಚಿತ್ತಾಳರ ಕವನಗಳು ಹೋಳಿ ಹುಣ್ಣಿವೆಯ ಪೋಲಿ ಕವನಗಳಾಗುತ್ತಿದ್ದವು.
(ಈ ಕವನವನ್ನು ೨೦೦೭ ನವೆಂಬರ ೧೪ರ "ಮೋಟುಗೋಡೆಯಾಚೆ ಇಣುಕಿದಲ್ಲಿ" blogದಲ್ಲಿ(http://motugode.blogspot.com) ಓದಬಹುದು.)
ನವ್ಯಕಾವ್ಯದ ಮನೋಧರ್ಮವನ್ನು ಅರಿಯಲು ಅಡಿಗರ ಕವನಗಳನ್ನು ಓದಬೇಕು. ಅವರ ‘ಪ್ರಾರ್ಥನೆ’ ಕವನದಲ್ಲಿರುವದು ಒಬ್ಬ ಪ್ರಾಮಾಣಿಕನ, ಒಬ್ಬ ಆದರ್ಶವಾದಿಯ ತಳಮಳ. ಅದಕ್ಕೆಂದೇ, ಆ ಕವನದಲ್ಲಿ ಬರುವ ಅಂತಿಮ ಘೋಷಣೆ : “ತಕ್ಕ ತೊಡೆಗಳ ನಡುವೆ ಧಾತುಸ್ಖಲನದೆಚ್ಚರವ ” ಎನ್ನುವದು ಪೋಲಿ ಮಾತಾಗದೆ, ಪ್ರಾಮಾಣಿಕನ, ಆದರ್ಶವಾದಿಯ ಎಚ್ಚರಿಕೆಯ ಮಾತಾಗುತ್ತದೆ.
(ಈ ಕವನವನ್ನು ೨೦೦೯ ಜೂನ್ ೨೫ರ "ಮೋಟುಗೋಡೆಯಾಚೆ ಇಣುಕಿದಲ್ಲಿ" blogದಲ್ಲಿ(http://motugode.blogspot.com) ಓದಬಹುದು.)
ಅಡಿಗರೇ ತಮ್ಮ ಮತ್ತೊಂದು ಕವನದಲ್ಲಿ “ಗುರುವಿನ ಸಮಾನನಾಗುವತನಕ ದೊರೆಯದಣ್ಣ ಮುಕುತಿ” ಎಂದಿದ್ದಾರೆ. ಹೀಗೆನ್ನುವಾಗ “ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣ ಮುಕುತಿ” ಎನ್ನುವ ಪುರಂದರದಾಸರ ಅವಹೇಳನ ಮಾಡುತ್ತಿಲ್ಲ. ಆದರೆ ದಾಸ ಮನೋಭೂಮಿಕೆಯನ್ನು ಬಿಡಬೇಕು, ಕುರುಡು ವಿಚಾರಗಳನ್ನು ವಿರೋಧಿಸಬೇಕು ಎನ್ನುವ ವೈಚಾರಿಕ ಮನೋಭಾವವನ್ನು ತೋರಿಸುತ್ತಿದ್ದಾರೆ.
ಹಾಗೆಂದು ಅಡಿಗರು ಸತ್-ಪರಂಪರೆಯ ವಿರೋಧಿಯಲ್ಲ. ಪಾಶ್ಚಾತ್ಯರ ಅಂಧಾನುಕರಣೆಯಿಂದ ನಮ್ಮ ಜನಜೀವನ ಹಾಳಾಗುತ್ತಿರುವದನ್ನು ಕಂಡಿದ್ದರಿಂದಲೇ ಅವರು ಈ ಸತ್-ಪರಂಪರೆಯ ಅಂಶಗಳನ್ನು ಮತ್ತೊಮ್ಮೆ ನಮ್ಮಲ್ಲಿ ಅಳವಡಿಸಿಕೊಳ್ಳುವದರ ಅವಶ್ಯಕತೆಯನ್ನು ಈ ಕವನದಲ್ಲಿ ತೋರುತ್ತಿದ್ದಾರೆ. ಆದರೆ ಅವರ ಎಲ್ಲ ಕವನಗಳಲ್ಲಿಯೂ ಅವರ ಸಾಮಾಜಿಕ, ಸಾಂಸ್ಕೃತಿಕ ತೊಳಲಾಟವು ಅವರ ವೈಯಕ್ತಿಕ ತೊಳಲಾಟವಾಗಿ ಬಿಂಬಿತವಾಗುತ್ತದೆ.
ಇದೇ ಅವರ ಪ್ರಾಮಾಣಿಕತೆಯ ಪ್ರತೀಕವಲ್ಲವೆ?!
ಆಡಿಗರ ಭಾಷೆಯು ಕನ್ನಡಕಾವ್ಯದಲ್ಲಿಯೇ ಅತ್ಯಂತ ಸುಂದರವಾದ ಭಾಷೆ. ಅವರ ಭಾಷೆಯನ್ನು ಅಪ್ಸರೆಯ ಚೆಲುವಿಗೆ ಹೋಲಿಸಬಹುದು. ಅವರ ನವೋದಯ ಮಾರ್ಗದ “ಯಾವ ಮೋಹನ ಮುರಲಿ ಕರೆಯಿತು…” ಕವನವೇ ಆಗಲಿ, ಅಥವಾ ನವ್ಯಮಾರ್ಗದ ‘ಭೂತ’ ಕವನವೇ ಆಗಲಿ, ನಮ್ಮ ಮನಸ್ಸನ್ನು ತಕ್ಷಣವೇ ಸೆರೆ ಹಿಡಿಯುವದು ಆ ಭಾಷೆಯ ಚೆಲುವಿನಿಂದ.
Wednesday, August 5, 2009
Subscribe to:
Post Comments (Atom)
44 comments:
ಗೋಪಾಲಕೃಷ್ಣ ಅಡಿಗರ ಕವಿತೆಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ನಿಮಗೆ ಧನ್ಯವಾದಗಳು .
ಅಡಿಗರ ಕವಿತೆಗಳ ವರ್ಣನೆ ಮನಮೋಹಕವಾಗಿದೆ. ಎಷ್ಟೋ ವಿಚಾರಗಳು ತಿಳಿಯಿತು. ಧನ್ಯವಾದಗಳು ತಿಳಿಸಿದ್ದಕ್ಕೆ
ಕುಲಕರ್ಣಿಯವರೆ,
ಅಡಿಗರ ಕವಿತೆಗಳು ಕನ್ನಡ ಕಾವ್ಯದ ಮಹತ್ವದ ಘಟ್ಟವಾಗಿವೆ.
ಅವುಗಳನ್ನು ಅರಿತುಕೊಳ್ಳಲು ನಾನು ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೇನೆ.
ಗುರುಮೂರ್ತಿಯವರೆ,
ಅಡಿಗರ ಕವನಗಳೇ ಮನಮೋಹಕ (ನವೋದಯ ಕವನಗಳಿರಲಿ ಅಥವಾ ನವ್ಯ ಕವನಗಳಿರಲಿ)!ನನಗೆ ಕಂಡಷ್ಟನ್ನು ನಾನು ಬಣ್ಣಿಸಿದ್ದೇನೆ!
ಅಡಿಗರ ಕಾವ್ಯದ ಸಮಗ್ರ ವಿಶ್ಲೇಷಣೆಯನ್ನು ಮಾಡುತ್ತಾ ಮಾಡುತ್ತಾ, ನನಗೆ ತಿಳಿದಿರದ ಎಷ್ಟೋ ವಿಷಯಗಳನ್ನು ತಿಳಿಸಿದ್ದೀರಿ. past ಮತ್ತು ghost ನಡುವಿನ ನಿಮ್ಮ ವಿಮರ್ಶೆಯ೦ತೂ ಸುಪರ್ .
ಕಾಕಾ,
ಸುಂದರ ಕವಿತೆ ಮತ್ತು ಸುಂದರ ವಿವರಣೆ. ಅಡಿಗರ ಕವನಗಳನ್ನು ಓದುವುದೇ ಒಂದು ಸೊಗಸು.
ಧನ್ಯವಾದಗಳು.
ಪರಾಂಜಪೆಯವರೆ,
ಅಡಿಗರ ನವ್ಯಕಾವ್ಯಗಳಲ್ಲಿ ಈ ತರಹದ ಶ್ಲೇಷೆಯ ಪದಗಳು ಸಹಜವೇ ಆಗಿವೆ.
ಮಧು,
ನೀವೂ ಸಹ ಅಡಿಗರ fan ಎಂದಂತಾಯ್ತು. ಅಡಿಗರ-ನವೋದಯ ಯಾ ನವ್ಯಕಾವ್ಯಗಳು ಮೋಹಕವಾಗಿರುತ್ತವೆ.
ಕಾಕಾ ಹೌದು ಹಿಂಗ ನಿಮ್ಮನ್ನು ಕರೀಬೇಕ ಅನಿಸೇದ ನಿಮ್ಮನ್ನ ಪ್ರತ್ಯಕ್ಷ ನೋಡಿದಮ್ಯಾಲ. ಅಡಿಗರ ಬೆನ್ನ ಹತ್ತೀರಿ ಸಂತೋಷ ಆತು
ನಿಮ್ಮ ವಿಶ್ಲೇಷಣಾ ಎಷ್ಟು ಪ್ರಖರ ಅದ ಆದ್ರೂ ಅಡಿಗರು ಒಂದು ನಮೂನಿ ಕಬ್ಬಿಣದ ಕಡಲೆ ನಮ್ಮ ಹಲ್ಲಿಗೆ ಆಗಿ ಬರೂದಿಲ್ಲ ಬಿಡ್ರಿ...!
ಕಾಕಾ, ಕವಿತೆಯ ವಿವರಣೆಗೆ ಧನ್ಯವಾದಗಳು. ಇನ್ನೂ ಪೂರ್ತಿ ಅರ್ಥಮಾಡಿಕೊಳ್ಳಬೇಕಾಗಿದೆ.
ದೇಸಾಯರ,
ಕಾಕಾ ಅಂತ ನಮ್ಮಲ್ಲೇ ಕರೀಬಹುದಾಗಿತ್ತಲ್ರೀ!
ತ್ರಿವೇಣಿ,
ಅಡಿಗರ ಕವನಗಳನ್ನ ತಿಳಿಯೋದಕ್ಕ ಸ್ವಲ್ಪ time ಹತ್ತಬಹುದು. ಬೇಂದ್ರೆಯವರ ಕವನಗಳನ್ನ ಎಷ್ಟ time ಓದಿದರೂ ಅರ್ಥ ಹೆಚ್ಚಿಕೋತನ ಹೋಗ್ತದ, ಅಲ್ಲ?
ಸುನಾಥ ಕಾಕಾ,
ಅಡಿಗರ 'ಭೂತ' ಕವನದ ವಿಮರ್ಶೆ ಭಾಳ ಛಂದ ಮಾಡಿರೀ.. ಅವರ 'ಯಾವ ಮೋಹನ ಮುರಳಿ ಕರೆಯಿತೋ..' ಕವನ ನಾ ಸಣ್ನಾಂವ್ ಇದ್ದಾಗಿಂದ ನನ್ನ ಫೇವರಿಟ್ ರಿ.
ಕಾಕಾ, ನನ್ನ ಬ್ಲಾಗ್ ಕಡೆ ಸೊಲ್ಪ ದಯಮಾಡಿಸಿ ಆಶೀರ್ವಾದ ಮಾಡ್ರೀ...
-ಉಮೇಶ್
ಉಮೇಶ,
ಅಡಿಗರು ನನ್ನ ಮೆಚ್ಚಿನ ಕವಿ ನೀವೂ ಸಹ ಅವರ ಕವನ ಮೆಚ್ಚಿದ್ದಕ್ಕಾಗಿ ಸಂತೋಷವಾಯಿತು.
ನಿಮ್ಮ blog ನೋಡಿ ಖುಶಿಯಾಯ್ತು. ಇನ್ನು ನಿಮ್ಮಲ್ಲಿಗೆ ಬರ್ತಾ ಇರ್ತೇನಿ.
ಶ್ರೀ ವಿ.ಕೃ. ಗೋಕಾಕರಿಗೆ ಬೌದ್ಧಿಕ ಪ್ರಾಮಾಣಿಕತೆ ( intellectual honesty ) ಯ ಕೊರತೆ ಇತ್ತು ಎಂಬ ಅಭಿಪ್ರಾಯವನ್ನು ಎಲ್ಲಿಯೋ ಓದಿದ ಹಾಗೆ ನೆನಪು. ಅವರು ತಮ್ಮ ಕೊನೆಯ ದಿನಗಳಲ್ಲಿ ಪುಟ್ಟಪರ್ತಿಯ ಸಾಯೀಬಾಬಾರವರನ್ನು ವೈಭವೀಕರಿಸುವ ಸಾಹಿತ್ಯವನ್ನು ಹಣಕ್ಕಾಗಿ ರಚಿಸಿದರು ಎಂಬ ಅಭಿಪ್ರಾಯ ಸತ್ಯವೆ ?
ಕಾವ್ಯವು ಕಾವ್ಯವೇ ! ಅದರಲ್ಲಿ ನವ್ಯ, ಪುರಾತನ ಎಂಬ ಭೇದ-ಭಾವ ನನಗೆ ಇನ್ನೂ ಅರ್ಥವಾಗಿಲ್ಲ. ಇಂದಿನ ಕಾವ್ಯ ನಾಳೆಗೆ ಪುರಾತನ. ನಾಳಿನ ಕಾವ್ಯ ಇಂದಿಗೆ ನವೀನ ! ಕಾವ್ಯದ ಉದಯ ಹೃದಯ-ಮನಸ್ಸುಗಳ ಮಂಥನದಿಂದ. ಕಾವ್ಯದಲ್ಲಿ ಮಾನವೀಯ ಮೌಲ್ಯಗಳಿದ್ದರೆ ಅದು ನಿತ್ಯ ನೂತನ. ಶಬ್ದ ರಚನೆ, ಕಾವ್ಯದ ಚೌಕಟ್ಟು, ಹೊಸದಾಗಿರಬಹುದು. ಅಷ್ಟೇ. ಉದಾಹರಣೆ : ವ್ಯಾಸ, ವಾಲ್ಮೀಕಿ, ವೇದಗಳ ದೃಷ್ಟಾರರು, ಕುಮಾರವ್ಯಾಸ, ಸರ್ವಜ್ಞ, ತಿರುವಳ್ಳುವರ್, ಕಬೀರ, ಶರೀಫ್, ಬೇಂದ್ರೆ..............ಇಲ್ಲದಿದ್ದರೆ ಅಂಥ ಕಾವ್ಯ ಸ್ವಯಂ ಅಂತರ್ಧಾನವಾಗುವದು.
ಕಟ್ಟಿಯವರೆ,
ಗೋಕಾಕರ ಸಾಹಿತ್ಯದ ಬಗೆಗೆ ಎರಡು ಅಭಿಪ್ರಾಯಗಳಿರಬಹುದು. ಆದರೆ ಗೋಕಾಕರ ಪ್ರಾಮಾಣಿಕತೆಯ ಬಗೆಗೆ ಎರಡು ಅಭಿಪ್ರಾಯಗಳಿಲ್ಲ. ಅವರು All India ಸ್ತರದಲ್ಲಿ ಅನೇಕ ವರ್ಷ ಕೆಲಸ ಮಾಡಿದ್ದು, ಅವರ ಸಂಪರ್ಕದಲ್ಲಿ ಬಂದ
ಎಲ್ಲರೂ ಗೋಕಾಕರ ಪ್ರಾಮಾಣಿಕತೆ ಹಾಗೂ ಅವರು ಸಲ್ಲಿಸಿದ ಸೇವೆಯ ಬಗೆಗೆ high regard ಹೊಂದಿದ್ದಾರೆ.
ನೀವು ಹೇಳಿದಂತೆ ಕಾವ್ಯ ಕಾವ್ಯವೇ. ಅದರಲ್ಲಿ ಪುರಾತನ, ನೂತನ ಎನ್ನುವ ಭೇದಗಳು ಸರಿಯಲ್ಲ. ಆದರೆ ಕೆಲವು ಕಾವ್ಯಗಳು temporary ಕಾವ್ಯಗಳಾಗಿರುತ್ತವೆ. ಕೆಲವು
all time ಆಗಿರುತ್ತವೆ!
ಸುನಾಥ್,
ಅಡಿಗರ ಭೂಮಿಗೀತ, ಯಾವ ಮೋಹನ ಮುರಳಿ ಕರೆಯಿತು ನನ್ನ ಅಚ್ಚು ಮೆಚ್ಚಿನ ಗೀತೆಗಳಲ್ಲಿ ಅಗ್ರಸ್ಥಾನದಲ್ಲಿವೆ.
ಅದರಲ್ಲೋ "ಕಟ್ಟುವೆವು ಹೊಸ ನಾಡೊಂದನು ರಸದ ಬೀದೊಂದನ್ನು ಬಿಸಿ ರಕ್ತ ಆರುವ ಮುನ್ನ " ಅಬ್ಬ... ನಿಜಕ್ಕೋ ಅಮೋಘ.. ದುರಾದ್ರುಷ್ಟಕರವೆಂದರೆ ಬಿಸಿ ರಕ್ತ ಆರಿ ದಶಕ ಕಳೆದರೂ ರಸದ ಬೀಡು ಇನ್ನೂ ಕನಸಾಗೆ ಉಳಿದಿದೆ. ನಿಜಕ್ಕೋ ಅಮೋಘ ಪ್ರಯತ್ನ. ಅಡಿಗರನ್ನು ಮತ್ತೊಮ್ಮೆ ಸ್ಮ್ರಿತಿ ಪಟಲದಲ್ಲಿ ತಂದಿದ್ದಕ್ಕೆ ತುಂಬಾ ಧನ್ಯವಾದಗಳು.
ಬರವಣಿಗೆ ನಿರಂತರವಾಗಿರಲಿ
ನಿಮ್ಮ
ಅವೀನ್
ಅವೀನ,
ನೀವು ಅಡಿಗರ ಸಾಹಿತ್ಯಪ್ರೇಮಿ ಎಂದಾಯ್ತು. ಬೇಂದ್ರೆ ಹಾಗೂ ಅಡಿಗರು ಕನ್ನಡ ಕಾವ್ಯಲೋಕದ ಎರಡು ಉಜ್ವಲ ತಾರೆಗಳು. ಅವರ ಸಾಹಿತ್ಯವನ್ನು ನಾವು ಮತ್ತೆ ಮತ್ತೆ ಸವಿಯುತ್ತಿರೋಣ.
ತಡವಾಗಿ ಬರೆಯುತ್ತೀದ್ದೇನೆ, ಕ್ಷಮಿಸಿ. ತುಂಬ ಚೆನ್ನಾಗಿ ಬರೆದಿದ್ದೀರಿ. ಅಡಿಗರ ಕವನಗಳು ಕಬ್ಬಿಣದ ಕಡಲೆ ಎನ್ನುವವರಿಗೆ ನಿಮ್ಮ ಬರಹಗಳು ತುಂಬ ಉಪಯುಕ್ತವಾಗುವುದರಲ್ಲಿ ಸಂಶಯವೇ ಇಲ್ಲ.
ಅಡಿಗರ "ಭೂತ" ನನ್ನನ್ನು ತುಂಬ ಕಾಡಿದ ಕವನಗಳಲ್ಲಿ ಒಂದು. "ಭೂಮಿಗೀತ" ಮತ್ತು "ಹಿಮಗಿರಿಯ ಕಂದರ" ತುಂಬ ಸಲ ಓದಿಸಿಕೊಂಡ ಕವನಗಳು.
ಈ ಜವಿತೆಯ ಮೇಲೆ ಏಟ್ಸ್ ನ ಪ್ರಭಾವವನ್ನು ಧಾರಾಳವಾಗಿ ಗಮನಿಸಬಹುದು. ಏಟ್ನ್ ನ Sailing to Byzantium ನಲ್ಲೂ "ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ---
ವಿಗ್ರಹಕ್ಕೊಗ್ಗಿಸುವ ಅಸಲು ಕಸಬಿ" ನ ವರ್ಣನೆ ಬರುತ್ತದೆ, "But such a form as Grecian goldsmiths make
Of hammered gold and gold enamelling".
ಅಡಿಗರ "ಆಗಬೋಟಿ"ಯಲ್ಲಿ ಭಾರತದ ಸಂಸ್ಕೃತಿ ಪಶ್ಚಿಮದ ಸಂಸ್ಕೃತಿಯ ಬಿರುಗಾಳಿಯಿಂದ ಅಲ್ಲೋಲ ಕಲ್ಲೋಲವಾಗುತ್ತಿರುವ ವರ್ಣನೆಯಿದ್ದರೆ, ಈ ಪದ್ಯ ಭೂತವನ್ನು ಭವಿಷ್ಯಕ್ಕೆ ಒಗ್ಗಿಸಿಕೊಳ್ಳುವ ಗಹನ ಚಿಂತನೆಯಿದೆ. ಎರಡೂ ಪದ್ಯಗಳು ಆಶಾವಾದದಲ್ಲೇ ಮುಗಿಯುವುದರಲ್ಲಿ ಅಡಿಗರ ದರ್ಶನ ಕಾಣತ್ತದೆ.
ಅಡಿಗರ ಇನ್ನಷ್ಟು ಕವಿತೆಗಳು ಬರಲಿ.
- ಕೇಶವ
ಕೇಶವ,
ಏಟ್ಸ್ ಕವಿಯ ಕವನದ ಪ್ರಭಾವವನ್ನು ಈ ಕವಿತೆಯಲ್ಲಿ ತೋರಿಸಿದ್ದಕ್ಕಾಗಿ ಧನ್ಯವಾದಗಳು.
ಪೂರ್ವದ ಕವಿಗಳ ಪ್ರಭಾವವನ್ನು ಅರಗಿಸಿಕೊಂಡ ನಂತರದ ಕವಿಗಳು ಹೊಸದಾದ ರಸಪಾಕವನ್ನು ನಿರ್ಮಿಸಿದಾಗ ಖುಶಿಯಾಗುತ್ತದೆ.
ಇಂತಹ ಒಂದು remote connection ಅನ್ನು ಬೇಂದ್ರೆಯವರ ಒಂದು ಕವನದಲ್ಲಿ ನೋಡಬಹುದು:
"ಚಳಿ ಇರಲಿ, ಮಳೆ ಬರಲಿ,
ಮಂಜು ಸುರಿಯುತಲಿರಲಿ,
ಬಿಸಿಲು ಕುದಿಸುತಲಿರಲಿ,
ಮುಮ್ಮುಖದ ಋತುಮಾನ ಹೇಗು ಇರಲಿ,
ನಗುತ ಒಲಿವೆವು ನಾವು, ನಗುತ ಒಲಿಸುವೆವು."
ಈ ಕವನಕ್ಕೂ ಶೇಕ್ಸಪಿಯರನ ಈ ಕವನಕ್ಕೂ ಇರುವ ಸಾಮ್ಯತೆಯನ್ನು ನೋಡಿರಿ:
"Under the greenwood tree
Who wants to lie with me,
Come here, come here, come here.
Here shall he see
No enemy, but
Winter and rough weather."
ಸುನಾಥ ಸರ್....
ಅಡಿಗರ ಸಾಹಿತ್ಯ ನನಗೆ ಅಷ್ಟಾಗಿ ಗೊತ್ತಿಲ್ಲ...
ಯಾವ ಮೋಹನ ಮುರಳಿ" ಹಾಡು ಬಹಳ ಸಾರಿ ಕೇಳಿದ್ದೇನೆ...
ಅವರ ಭಾಷೆ ತುಂಬ ಕಷ್ಟ ನನಗೆ...
ನಿಮ್ಮ ವಿವರಣೆಯಿಂದಾಗಿ ಬಹಳ ಸುಲಭವಾಯಿತು...
ಅವರ ಇನ್ನಷ್ಟು ಸಾಹಿತ್ಯ ರಸದೂಟವನ್ನು ನನ್ನಂಥವರಿಗೆ ನೀಡಿ...
ಹೀಗೆ ಆಳವಾದ, ಪ್ರಸಿದ್ದರ ಸಾಹಿತ್ಯವನ್ನು ಪರಿಚಯಿಸಿತ್ತಿರುವ ನಿಮಗೆ
ಎಷ್ಟು ಧನ್ಯವಾದ ಹೇಳಿದರೂ ಕಡಿಮೆ...
ಪ್ರಕಾಶ,
"ಯಾವ ಮೋಹನಮುರಲಿ ಕರೆಯಿತು..." ಇದು ಅಡಿಗರ ಅತ್ಯಂತ ಮನೋಹರವಾದ ಕವನ. ಕೆಲಕಾಲದ ನಂತರ ಅಡಿಗರು
ನವ್ಯಕಾವ್ಯದ ರಚನೆಯನ್ನು ಪ್ರಾರಂಭಿಸಿ,ಕನ್ನಡದಲ್ಲಿ ನವ್ಯಕಾವ್ಯದ ಪಿತಾಮಹರೆಂದು ಪ್ರಸಿದ್ಧರಾದರು.
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net
ಭೂತ ದ ವಿಮರ್ಶೆ ತುಂಬ ಚೆನ್ನಾಗಿ ಮಾಡಿದ್ದಿರಿ. ಯಾವ ಮೋಹನ ಮುರಳಿ ಕರೆಯಿತು... ನನ್ನ ಆಲ್ ಟೈಮ್ ಫೆವರಿಟ್.
ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬಿಡೋ0ದನು.. ಇದನ್ನ ಇಗಲೂ ರಾಜಕಾರಣಿಗಳು ಉದಾಹರಿಸುತ್ತಾರೆ. ಅಂದರೆ ನಾವು ಕನಸುಗಳ ಬೆನ್ನೆತ್ತಿ ಇನ್ನು ಹೋಗಿಲ್ಲ ಅಂತ ಅರ್ಥ ನ ....
ಕವಿತೆಗಳ ವರ್ಣನೆ ತುಂಬಾ ಚೆನ್ನಾಗಿದೆ
ಬಾಲು,
ನಿಮಗೆ ಸ್ವಾಗತ ಹಾಗು ಧನ್ಯವಾದಗಳು. ಬರುತ್ತಾ ಇರಿ.
Ram,
Thank you so much for the tip.
ಭೃಂಗಮೋಹಿ,
ಧನ್ಯವಾದಗಳು. ನಿಮಗೆ ಸ್ವಾಗತ. ಮತ್ತೆ ಮತ್ತೆ ಬನ್ನಿ.
ಸುನಾಥ್ ಸರ್,
ಊರೂರು ಸುತ್ತಾಟ, ಜೊತೆಗೆ ಕೆಲಸಗಳಿಂದಾಗಿ ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ..
ನವ್ಯದ ಪ್ರಕಾರಗಳ ಬಗ್ಗೆ ಗೋಪಾಲಕೃಷ್ಣ ಅಡಿಗರ ಬಗ್ಗೆ ತುಂಬಾ ಚೆನ್ನಾಗಿ ಅವರ ಕವನದ ಮೂಲಕವೇ ವಿವರಿಸಿದ್ದೀರಿ...
past and ghost ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ...
“ಯಾವ ಮೋಹನ ಮುರಲಿ ಕರೆಯಿತು, ದೂರ ತೀರಕೆ ನಿನ್ನನು?”
ಈಗಲೂ ನನ್ನ ಮೆಚ್ಚಿನ ಕವಿತೆ..
ಶಿವು,
"ಯಾವ ಮೋಹನ ಮುರಲಿ ಕರೆಯಿತು" ಕವನವು ಕನ್ನಡದಲ್ಲಿ ಓಂದು ಅತ್ಯಂತ ಮನಮೋಹಕ ಕವನವೆನ್ನಬಹುದು. ಇದು ನನ್ನ
favourite ಕವನವೂ ಹೌದು.
ಸುನಾಥ್ ಸರ್,
ಇದು ಅಡಿಗರ ‘ಭೂತ’ ಕವನದ ಬಗ್ಗೆ ಬಂದ ಸಮಗ್ರ ವಿಶ್ಲೇಷಣಾತ್ಮಕ ಲೇಖನಗಳಲ್ಲೇ ಅತ್ಯುತ್ತಮವಾದದ್ದು. ‘ಶ್ರೀರಾಮನವಮಿಯ ದಿವಸ’ದ ಬಗ್ಗೆ ಅನಂತಮೂರ್ತಿಯವರು ಬರೆದ ಲೇಖನದ ಮಾದರಿಯಲ್ಲಿದೆ. ತುಂಬಾ ಇಷ್ಟವಾಯಿತು.
- ಹರೀಶ್ ಕೇರ
ಹರೀಶ,
ಧನ್ಯವಾದಗಳು.
ಅನಂತಮೂರ್ತಿಯವರು ದೊಡ್ಡ ಲೇಖಕರು. ನಾನೊಬ್ಬ ಸಾಮಾನ್ಯ ಒದುಗ!
ದಯವಿಟ್ಟು ಆಡಿಗರ ಪ್ರಾರ್ಥನೆ ಸ್ವಲ್ಪ ಹೇಳ್ಕೊತ್ತೀರ?
ನೀವಂದಂತೆ ಯಾರ ಕವನವೂ ಅಡಿಗರ ಕವನದ ಶಬ್ಧಗಾಂಭೀರ್ಯತೆಯನ್ನ ಹೊಂದಿಲ್ಲ. "ಭೂತ" ಕವನದ ಒಳಗನ್ನ ಚೆನ್ನಾಗಿ ಮನವರಿಕೆ ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು .
ನಮಸ್ತೆ ಕಾಕಾ , ಬಹಳ ದಿನವಾಗಿತ್ತು ನಿಮ್ಮ ಬರಹ ಓದಿ . ಭೂತ ಎಂದರೆ ಏನೆಲ್ಲಾ ಎಷ್ಟೆಲ್ಲಾ ? ಒಳಗೆ ಥಣ್ಣನೆ ಬಾವಿ ಮೇಲೆಕ್ಕೆಳುವುದು ಬರೀ ಆವಿ . ಕಣ್ಣಿಗೆ ಕಾಣದು , ಅನುಭವದ ಸಾಮರ್ಥ್ಯವಿದ್ದವರಿಗೆ ಅನುಭವಕ್ಕೆ ಸಿಗಬಹುದು . ಕವಿತೆ ಮತ್ತು ನಿಮ್ಮ ಬರಹ ಯಾವುದೋ ಲೋಕಕ್ಕೆ ಕರೆದೊಯ್ದಿತು . ಓದಿನ ಲೋಕಕ್ಕೆ ಮರಳುವಂತೆ ಮಾಡಿದ ನಿಮಗೆ ನಮಸ್ಕಾರಗಳು, ಸ್ವರ್ಣಾ
ಸ್ವರ್ಣಾ,
ಬೇಂದ್ರೆಯವರು ‘ತಂಗಿ ಜಾನಕಮ್ಮ’ ಎನ್ನುವ ಕವನದಲ್ಲಿ ತಮ್ಮ ಹಾಗು ಜಾನಕಮ್ಮನವರ ಸಂಬಂಧವನ್ನು ‘ವೈದೇಹದೊಲವು’ ಎಂದು ಕರೆದಿದ್ದಾರೆ. ಬಹುಶಃ ಅವರ ಹಾಗು ಜಾನಕಮ್ಮನವರ ಭೇಟಿ ಆಗಿರಲೇ ಇಲ್ಲ ಎಂದು ಕಾಣುತ್ತದೆ. ನನಗೂ ಸಹ ನನ್ನ ಮಗಳಂತಿರುವ ನಿಮ್ಮ ಮೇಲೆ ‘ವೈದೇಹದೊಲವೇ’ ಇದೆ. (ಆದರೆ ನಾನು ಹಾಗು ನೀವು ಒಂದೇ ಒಂದು ಸಲ, ಒಂದು ಕ್ಷಣಮಾತ್ರ ಭೇಟಿಯಾಗಿದ್ದೇವೆ.)ಆದುದರಿಂದ ಈ ದಿನ ನಿಮ್ಮ ಪ್ರತಿಕ್ರಿಯೆಯೆನ್ನು ಓದಿ ತುಂಬ ಸಂತೋಷವಾಯಿತು. ಶುಭಾಶಯಗಳು.
ಸರ್ ವರ್ಧಮಾನದ ವಿಮರ್ಶೆ ಇದ್ದರೆ ಕಳಿಸಿ.
Kannada Saurabha, ವರ್ಧಮಾನದ ವಿಮರ್ಶೆಯನ್ನು ನಾನು ಸದ್ಯಕ್ಕೆ ಮಾಡಿಲ್ಲ.
ವಿಮರ್ಶೆ ಬಹಳ ಚೆನ್ನಾಗಿ ಮೂಡಿಬಂದಿದೆ.
ಧನ್ಯವಾದಗಳು, ಚಂದ್ರಶೇಖರರೆ.
ಭೂತ ಪದ್ಯದ ಕುರಿತು ತೃಪ್ತಿ ತಂದ ವಿಮರ್ಶೆ ಸರ್. ಇದುವರೆಗೂ ಅನೇಕ ಬಾರಿ ಓದಿ ಇದೇ ಅಂತಿಮ ಎಂದು ಹೇಳಿಕೊಳ್ಳಲಿಕ್ಕಾಗದೆ ಒದ್ದಾಡಿದ್ದೇನೆ. ನಿಮ್ಮ ಈ ವಿಮರ್ಶಾ ಬರಹ ತುಂಬಾ ಸಹಾಯ ಮಾಡಿತು. ಧನ್ಯವಾದಗಳು
Anonymusರೆ, ಕವನದ ರುಚಿಯನ್ನು ಸವಿಯುವ ನಿಮಗೂ ಧನ್ಯವಾದಗಳು.
Post a Comment