Tuesday, December 28, 2010

‘ಹೂತsದ ಹುಣಸಿ’...............ದ.ರಾ.ಬೇಂದ್ರೆ

ಆಧುನಿಕ ನಾಗರಿಕತೆಯು  ಬಕಾಸುರನೂ ಹೌದು , ಭಸ್ಮಾಸುರನೂ ಹೌದು. ನಿಸರ್ಗದ ಸಂಪತ್ತನ್ನೆಲ್ಲ ಬಕಾಸುರನಂತೆ ನುಂಗುತ್ತಿರುವ ಈ ನಾಗರಿಕತೆಯು ಭಸ್ಮಾಸುರನಂತೆ ಸಾಂಸ್ಕೃತಿಕ ವಿನಾಶವನ್ನು ಮಾಡುತ್ತ ನಡೆದಿದೆ. ಇಂತಹ (ಅ)ನಾಗರಿಕ ವಾತಾವರಣದಲ್ಲಿ ಬದುಕುವ ಜೀವಿಯು ಪ್ರತಿ ದಿನವೂ ಉದ್ವಿಗ್ನತೆಯಲ್ಲಿ ಹಪಹಪಿಸುವದನ್ನು ನಾವು ಕಾಣುತ್ತಲೇ ಇದ್ದೇವೆ. ಈಗಿನ ನಗರಜೀವನವು ತನ್ನ ನಿವಾಸಿಗಳನ್ನು ಅನೇಕ ಮನೋವಿಕಾರಗಳಿಗೆ ಈಡು ಮಾಡಿದೆ ಎಂದು ಹೇಳಿದರ ತಪ್ಪಾಗಲಿಕ್ಕಿಲ್ಲ.

ಔದ್ಯೋಗೀಕರಣದ ಹಾಗು ನಗರೀಕರಣದ ಮೊದಲಿನ ಪರಿಸ್ಥಿತಿ ಹೀಗಿರಲಿಲ್ಲ. ಗ್ರಾಮೀಣ ಜೀವನವು ಪ್ರಶಾಂತವಾಗಿರುತ್ತಿತ್ತು. ಹಳ್ಳಿಗರು ಸುತ್ತಲಿನ ಪ್ರಕೃತಿಯೊಡನೆ ತಾದಾತ್ಮ್ಯತೆಯನ್ನು ಅನುಭವಿಸುತ್ತಿದ್ದರು. ವರಕವಿ ಬೇಂದ್ರೆಯವರು  ತಮ್ಮ ‘ಹೂತsದ ಹುಣಸಿ’ ಕವನದಲ್ಲಿ ಇಂತಹ ನೆಮ್ಮದಿಯ ಬದುಕಿನ ಒಂದು ಮುಖವನ್ನು ತೋರಿಸಿದ್ದಾರೆ.

‘ಹೂತsದ ಹುಣಸಿ’ ಕವನವು  ‘ಸಖೀಗೀತ’ ಸಂಕಲನದಲ್ಲಿ ಅಡಕವಾಗಿದೆ. ‘ಸಖೀಗೀತ’ವು ೧೯೩೭ರಲ್ಲಿ ಪ್ರಕಟವಾಯಿತು.  ಆ ಸಮಯದಲ್ಲಿ ಔದ್ಯೋಗಿಕ ನಾಗರಿಕತೆಯು ಭಾರತದಲ್ಲಿ ಇನ್ನೂ ಕಾಲಿಟ್ಟಿರಲಿಲ್ಲ. ವಿಶೇಷತಃ ಹಳ್ಳಿಯ ಜನರು ನಿರುಮ್ಮಳವಾದ ಬದುಕನ್ನು ನಡೆಯಿಸುತ್ತಿದ್ದರು. ಹಳ್ಳಿಯ ಹಾಡುಹಸೆಗಳು, ಪುರಾಣ ಪುಣ್ಯಕತೆಗಳು ಹಾಗು ಬಯಲಾಟದಂತಹ ಸಂಗತಿಗಳು ಅವರ ಮನರಂಜನೆಗೆ ಹಾಗು ಕಲಾಭಿವೃದ್ಧಿಗೆ ಪೂರಕವಾಗಿದ್ದವು. ಇಂತಹ ವಾತಾವರಣದಲ್ಲಿಬದುಕುತ್ತಿರುವ ಹಳ್ಳಿಗರ ದೈನಂದಿನ ಜೀವನವು ಪ್ರಕೃತಿಯೊಡನೆ ಸಮರಸವಾಗಿ ಸ್ಪಂದಿಸುತ್ತಿತ್ತು.

‘ಹೂತsದ ಹುಣಸಿ’ ಕವನವು ಇಂತಹ ಹಳ್ಳಿಯ ವ್ಯಕ್ತಿಯೊಬ್ಬನ ಚಿತ್ರವನ್ನು ಕೊಡುತ್ತದೆ. ಕಡುಬೇಸಿಗೆಯಲ್ಲಿ ತನ್ನ ಹೊಲದ ಕಡೆಗೆ ತೆರಳುತ್ತಿದ್ದ ಹಳ್ಳಿಗನೊಬ್ಬನು ಹೂವು ಬಿಟ್ಟಂತಹ ಹುಣಸಿಯ ಮರವನ್ನು ನೋಡಿದಾಗ, ಅದರಲ್ಲಿ ಚೆಲುವಿಕೆಯನ್ನು ಗುರುತಿಸುವ, ಆ ಚೆಲುವಿನಲ್ಲೇ ಪರವಶನಾಗುವ, ಹಾಗು ಹಗಲುಗನಸಿನಲ್ಲಿ ತೇಲಿ ಹೋಗುವ ಚಿತ್ರವನ್ನು ಈ ಕವನದಲ್ಲಿ ನೀಡಲಾಗಿದೆ.
-------------------------------------------------------
ಕವನದ ಪೂರ್ಣಪಾಠವು ಹೀಗಿದೆ:

ಹೂತsದ ಹುಣಸಿಯಾ ಚಿಗುರು
ಮದರಂಗಿ ಬಣ್ಣದುಗುರು
ರುಚಿಗೆ ಹುಳಿಯೊಗರು
ನೋಡ್ಯೆ ಜೀವಕ್ಕನಿಸಿತs ಹಗುರು ||ಹೂತsದ || ಪಲ್ಲ ||

ಉಗುರ್ಗೆಂಪು ಹಸಿರು ಬಿಳಿನಿಂಬಿ
ಹುಣಸಿಯಾ ರೆಂಬಿ
ಚಿಗತೀತೇನೊ ಎಂಬಿ
ಕಾಮsನ ಬಿಲ್ಲಿನಾ ಕೊಂಬಿ ||ಹೂತsದ

ಬ್ಯಾಸಿಗಿ ಹೊಡೆದsದ ಬಿಸಿಲಿನಾ ಡೇರೆ
ಮಧ್ಯಾಹ್ನದಾ ಪಾಹರೆ
ಯಾರಿಗಿಲ್ಲ ಹ್ವಾರೆ
ಸದ್ದು ಸುಳಿವು ಇಲ್ಲ ಬ್ಯಾರೆ ||ಹೂತsದ

ಸುಳ್ಳ ಸುಳ್ಳ ಗಾಳಿ ಹಾಕಿತ ಸಿಳ್ಳು
ಕಾಗಿ ಚುಂಚಿನ ಹಳ್ಳು
ಬಿದ್ದು ಆಂತ್ಯು “ಹೊಳ್ಳು”
ಮೈಚಾಚ್ಯsದ ಹುಣಸಿಯ ನೆಳ್ಳು ||ಹೂತsದ

ಅಡ್ಡಾಗತೇನಿ ನೆಳ್ಳಾಗ ಹೀಂಗ
ಹೂವು ಚಿಗುರು ಹ್ಯಾಂಗ
ಅವs ಹಾಸಿಧಾಂಗ
ಹುಳಿ ಚಿಗುರು ನುರಿಸಿ ನಾ ದಂಗ ||ಹೂತsದ

ಬಿಸಿಲ್ಗುದರಿ ಕುಣಿಯಲಿ ದೂರ
ಯಾರಿಗೆ ಬೇಕು ನೀರ
ಹೀಂಗ ನನ್ನಿದಿರ
ಕಣ್ಣಳತಿಯೊಳಗ ನೀ ಬಾರ ||ಹೂತsದ

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ಕಣಕಣ್ಣ ಚಕಮಕಿ ಇತ್ತ
ಕುಡಿಗಣ್ಣಿನತ್ತ
ತಾಕಿ ಹಾರಿತ್ತ
ಗಾಳಿಸವಾರಿಗ್ಹೊರಟಿತ್ತ ಚಿತ್ತ ||ಹೂತsದ

ಅಗೊ ಗಾಳಿ ಧೂಳಿಯಾ ಬಂಬಾ
ನಿಂತ್ಹಾಂಗ ಅದ ಖಂಬಾ
ಅಲ್ಲಿ ರೌದಿ ತುಂಬಾ
ಗಣಿ ಕುಣಿಧಾಂಗ ಡೊಂಬರ ರಂಭಾ ||ಹೂತsದ

ಮ್ಯಾಲೆ ಅಲ್ಲಿ ಪಾರಿವಾಳ ಜೋಡಿ
ಒಂದಕ್ಕೊಂದ ನೋಡಿ
ಬಿಸಿಲ ತೆರೆ ದೂಡಿ
ಹಾರ್ತsದ ನೀಲಿಮುಗಿಲ್ಕೂಡಿ  ||ಹೂತsದ

೧೦
ಕಂಡಂಗಾತು ನೀರಿನ ಕೊಳ
ನೀಲಿ ಮುಗಿಲ ಜಳಾ
ಎಂಥ ಝಳ ಝಳಾ
ಮುಳುಮುಳುಗಿ ಹೋತು ಮನದ ಧೂಳಾ ||ಹೂತsದ

೧೧
ಕಾಲ ಹೋಗತಿತ್ತ ಹಿಂದ ಸರಿದು
ಮನಸು ಆತ ಬರಿದು
ಮಧ್ಯಾನ ಬ್ಯಾಸರ ಮುರಿದು
ಬಿಸಿಲ ತಾನs ಹೋಗತಿತ್ತ ಹರಿದು ||ಹೂತsದ

೧೨
ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿಮರ ಸಾಕ ||ಹೂತsದ
------------------------------------------------------------

ಹುಣಸಿ ಮರವು ಚಿಗುರುವ ಕಾಲದಲ್ಲಿ ಅಂದರೆ ಬಹುಶಃ ವೈಶಾಖ ಮಾಸದಲ್ಲಿ ಈ ಹಳ್ಳಿಗನು ತನ್ನ ಹೊಲಕ್ಕೆ ಹೊರಟಿದ್ದಾನೆ. ಈ ಕಾಲದಲ್ಲಿ ಹೊಲದಲ್ಲಿ ಕೃಷಿ ಕೆಲಸವೇನೂ ಇರುವದಿಲ್ಲ. ಬಹಳವಾದರೆ ಸಣ್ಣ ಪುಟ್ಟ ದುರಸ್ತಿ ಕೆಲಸಗಳು, ನಟ್ಟು ಕಡಿಯುವದು, ಕಳೆ ಕೀಳುವದು ನಡೆಯುತ್ತಿರುತ್ತವೆ. ನಮ್ಮ ನಾಯಕನು ಹೀಗೇ ತನ್ನ ಹೊಲದ ಕಡೆಗೆ ನಡೆದಾಗ ಹೊಲದ ಒಂದು ಭಾಗದಲ್ಲಿ ಇರಬಹುದಾದ ಹುಣಸಿಯ ಮರವು ಇವನ ಕಣ್ಣಿಗೆ ಬೀಳುತ್ತದೆ. ಖಾಲಿಯಾದ ಹೊಲದಂತೆಯೇ ಖಾಲಿಯಾದ ಇವನ ಮನಸ್ಸು ಈಗಷ್ಟೇ ಹೂವು ಬಿಡುತ್ತಿರುವ ಹುಣಸಿಯ ಮರವನ್ನು ಕಂಡು ಬೆರಗಾಗುತ್ತದೆ. ಆಗ ಇವನ ಮನಸ್ಸಿನಲ್ಲಿ ಉಕ್ಕುವ ಭಾವ ಹೀಗಿದೆ:

ಹೂತsದ ಹುಣಸಿಯಾ ಚಿಗುರು
ಮದರಂಗಿ ಬಣ್ಣದುಗುರು
ರುಚಿಗೆ ಹುಳಿಯೊಗರು
ನೋಡ್ಯೆ ಜೀವಕ್ಕನಿಸಿತs ಹಗುರು ||ಹೂತsದ

ಭಾರತದ ಆದಿಕವಿ ವಾಲ್ಮೀಕಿಗೆ ಕಾವ್ಯಸ್ಫುರಣವಾಗಲು ಕ್ರೌಂಚವಧೆಯು ಕಾರಣವಾಯಿತು. ಬೇಂದ್ರೆಯವರ ಕವನದ ನಾಯಕನಾದರೊ ಒಬ್ಬ ಅತಿ ಸಾಮಾನ್ಯ ಗ್ರಾಮೀಣ ವ್ಯಕ್ತಿ. ಈತನು ನಗರಜೀವಿ ಅಲ್ಲದ್ದರಿಂದಲೇ ಇವನ ಪ್ರಕೃತಿ-ಸಂವೇದನೆ ಇನ್ನೂ ಸುಸ್ಥಿತಿಯಲ್ಲಿದೆ ! ಆದುದರಿಂದ ಈಗತಾನೆ ಹೂವು ಬಿಡುತ್ತಿರುವ ಹುಣಸಿಯ ಮರವನ್ನು ಕಂಡಾಗ ಇವನಿಗೆ ಸುಖವೆನಿಸುತ್ತದೆ. ಈ ಸಂಗತಿಯೇ ಇವನ ಭಾವಸ್ಫುರಣಕ್ಕೆ ಕಾರಣವಾಗುತ್ತದೆ. 

ಹುಣಸಿಯ ಚಿಗುರು ನಮ್ಮ ನಾಯಕನಿಗೆ ಮದರಂಗಿ ಬಣ್ಣ ಹಚ್ಚಿದ ಉಗುರಿನಂತೆ ಕಾಣುವದಂತೆ. ಇದರ ಕಾರಣವೇನು?  ಮನುಷ್ಯರ ಅಗ್ರಭಾಗದಲ್ಲಿ ಉಗುರುಗಳು ಇದ್ದಂತೆ, ಮರಗಳ ಅಗ್ರಭಾಗದಲ್ಲಿ ಚಿಗುರುಗಳು ಇರುತ್ತವೆ. ಆದುದರಿಂದ ಹಸಿರು ಎಲೆಗಳಿಂದ ತುಂಬಿದ ಹುಣಸಿಯ ಮರದಲ್ಲಿ ಮೂಡುತ್ತಿರುವಂತಹ  ಕೆಂಪು ಚಿಗುರುಗಳು ಇವನ ಕಣ್ಣಿಗೆ ಮೊದಲು ಬೀಳುತ್ತವೆ. ಇವುಗಳನ್ನು ಕಂಡಾಗಲೇ ಅವನಿಗೆ ಹುಣಸಿಯ ಮರವು ಹೂವು ಬಿಡುತ್ತಿರುವ ಅರಿವು ಆಗುತ್ತದೆ.

ಹಳ್ಳಿಯ ವ್ಯಕ್ತಿಯಾದ ಈತನಿಗೆ ಈ ಕೆಂಪು ಬಣ್ಣವು ಹಳ್ಳಿಯ ಹೆಣ್ಣುಗಳು ತಮ್ಮ ಉಗುರುಗಳಿಗೆ ಹಚ್ಚಿಕೊಂಡಂತಹ ಮದರಂಗಿಯ ಕೆಂಪು ಬಣ್ಣವನ್ನು ಸ್ಮರಣೆಯಲ್ಲಿ ತರುತ್ತವೆ. ಅಂದರೆ ಈತ ಬದುಕನ್ನು ತೆರೆದ ಕಣ್ಣುಗಳಿಂದ ನೋಡಬಲ್ಲ ಹಾಗು ಅನುಭವಿಸಬಲ್ಲ ರಸಿಕ ಮನುಷ್ಯ ಎನ್ನುವದು ಸ್ಪಷ್ಟವಾಗುತ್ತದೆ.
(ಬೇಂದ್ರೆಯವರು ಉಪಮೆಗಳನ್ನು ಬಳಸುವಾಗಲೂ ಸಹ, ವಾಸ್ತವತೆಯನ್ನು ಲಕ್ಷದಲ್ಲಿಟ್ಟಿರುತ್ತಿದ್ದರು ಹಾಗು ಆ ಉಪಮೆಯ ಅನೇಕ ಪ್ರಯೋಜನಗಳನ್ನು ಪಡೆಯುವ ಪ್ರತಿಭೆ ಉಳ್ಳವರು ಎನ್ನುವದು ಇದರಿಂದ ವೇದ್ಯವಾಗುತ್ತದೆ!)

ಇಂತಹ ರಸಿಕ ಮನುಷ್ಯ ಆ ಚಿಗುರನ್ನು ನೋಡಿ ಸುಮ್ಮನೆ ಹೋಗುತ್ತಾನೆಯೆ? ಮುಂದಿನ ಕ್ರಮವೆಂದರೆ, ಆ ಚಿಗುರು ಇವನ ಬಾಯಿಗೆ ಇಳಿಯುತ್ತದೆ ! ಆ ಚಿಗುರಿನ ರುಚಿಯನ್ನು ಈತ ಹುಳಿ ಹಾಗು ಒಗರು ಎಂದು ಅನುಭವಿಸುತ್ತಾನೆ. ಆದರೆ ಇಂತಹ ಕಡುರುಚಿಯಿಂದ ಅವನ ಸುಖ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವದಿಲ್ಲ. ಯಾಕೆಂದರೆ ಪ್ರಕೃತಿಧರ್ಮವನ್ನು ಅನುಸರಿಸುತ್ತಿರುವ ಹುಣಸಿಯ ಮರದ ಚಿಗುರು ಇರಬೇಕಾದದ್ದೇ ಹೀಗೆ! ಅದು ಹೀಗಿದ್ದರೇನೆ ಆತನಿಗೆ ಸಮಾಧಾನ ಸಿಗುವದು. ಆದುದರಿಂದಲೇ ಆತ ಹೇಳುವದು: ‘ನೋಡ್ಯೆ ಜೀವಕ್ಕನಿಸಿತs ಹಗುರು’. 
ಋತುಧರ್ಮವು ಸರಿಯಾಗಿ ಕ್ರಮಿಸುತ್ತಿದ್ದರೆ ಮಾತ್ರ ಹಳ್ಳಿಗನ ಮನಸ್ಸಿಗೆ ನೆಮ್ಮದಿಯಿರುತ್ತದೆ.

ಹುಣಸಿಯ ಚಿಗುರನ್ನು ನೋಡಿದ ಬಳಿಕ ಹಾಗು ಮೆಲ್ಲಿದ ಬಳಿಕ ಈತನ ನೋಟವು ಸಹಜವಾಗಿ, ಮುಂದಿನ ಮಜಲಿಗೆ ಅಂದರೆ ಹುಣಸಿಮರದ ರೆಂಬೆಗಳ ಕಡೆಗೆ ಹರಿಯುತ್ತದೆ. ಆ ರೆಂಬೆಗಳು ಈತನಿಗೆ ಕಾಣುವ ಪರಿ ಹೀಗಿದೆ:

ಉಗುರ್ಗೆಂಪು ಹಸಿರು ಬಿಳಿನಿಂಬಿ
ಹುಣಸಿಯಾ ರೆಂಬಿ
ಚಿಗತೀತೇನೊ ಎಂಬಿ
ಕಾಮsನ ಬಿಲ್ಲಿನಾ ಕೊಂಬಿ ||ಹೂತsದ

ಹುಣಸಿ ಮರದ ರೆಂಬೆಯ ಬಣ್ಣಗಳನ್ನು ಈತ ಎಷ್ಟು ಸೂಕ್ಷ್ಮ ವಿವರಗಳೊಡನೆ ಲಕ್ಷಿಸುತ್ತಾನೆ ಎನ್ನುವದನ್ನು ನೋಡಿರಿ. ಈ ರೆಂಬೆಗೆ ಉಗುರಿನ ಕೆಂಪಿದೆ ಹಾಗು ಇನ್ನೂ ಹಣ್ಣಾಗದಿರುವ ಬಿಳಿ-ಹಸಿರು ನಿಂಬಿಯ ಬಣ್ಣವಿದೆ. ಕಾಮನ ಬಿಲ್ಲಿನ ತುದಿಯು ಚಿಗಿತಂತೆ ಇವನಿಗೆ ಅದು ಭಾಸವಾಗುತ್ತದೆ. (ಈ ಬಿಲ್ಲು ಬಾನಿನಲ್ಲಿ ಮೂಡುವ ಕಾಮನ ಬಿಲ್ಲೂ ಹೌದು ; ಕಾಮದೇವನ ಬಿಲ್ಲೂ ಹೌದು !) ಕೆಂಪು, ಹಳದಿ ಹಾಗು ನೀಲಿ ಬಣ್ಣಗಳಿಂದ ಕೂಡಿದ ಕಾಮನ ಬಿಲ್ಲಿನ ವರ್ಣವ್ಯವಸ್ಥೆಯು ಈತನಿಗೆ ಹುಣಸಿಮರದ ರೆಂಬೆಯಲ್ಲಿ ಕಂಡರೆ ಆಶ್ಚರ್ಯವಿಲ್ಲ.
ಇಲ್ಲಿ ಅಡಗಿರುವ ಮತ್ತೊಂದು ಸೂಚನೆ ಎಂದರೆ, ಕಾಮದೇವನ ಬಿಲ್ಲು ಸೃಷ್ಟಿ ಸಂಕೇತವಾಗಿರುವದು. ಚಿಗುರಿನ ನಂತರ ಬರುವದು ಹೂವು, ಹೂವಿನ ನಂತರ ಬರುವದು ಹಣ್ಣು. ಇದು ಕಾಮದೇವನ ಸೃಷ್ಟಿಕ್ರಮ.

ಹುಣಸಿಯ ಮರವು ಹೂವು ಬಿಟ್ಟು ಚೆಲುವಾಗಿದ್ದನ್ನು ಗ್ರಹಿಸಿದ ಇವನ ನೇತ್ರೇಂದ್ರಿಯಕ್ಕೆ ಖುಶಿಯಾಯಿತು. ಚಿಗುರನ್ನು ತಿಂದ ಇವನ ಜಿಹ್ವೇಂದ್ರಿಯಕ್ಕೆ ಖುಶಿಯಾಯಿತು. ಹುಣಸಿಯ ಚೆಲುವಿನಲ್ಲಿ ಪರವಶನಾಗಿದ್ದ ಈತನೀಗ ಬಹಿರ್ಮುಖನಾಗುತ್ತಾನೆ ಹಾಗೂ ಇವನ ಸ್ಪರ್ಶೇಂದ್ರಿಯಕ್ಕೆ ತನ್ನ ಸುತ್ತಲಿನ ಪ್ರಕೃತಿಯ ವಾಸ್ತವ ಮುಖದ ಅಂದರೆ ಬಿಸಿಲಿನ ಅನುಭವವಾಗುತ್ತದೆ :

ಬ್ಯಾಸಿಗಿ ಹೊಡೆದsದ ಬಿಸಿಲಿನಾ ಡೇರೆ
ಮಧ್ಯಾಹ್ನದಾ ಪಾಹರೆ
ಯಾರಿಗಿಲ್ಲ ಹ್ವಾರೆ
ಸದ್ದು ಸುಳಿವು ಇಲ್ಲ ಬ್ಯಾರೆ ||ಹೂತsದ

ವೈಶಾಖ ಮಾಸವೆಂದರೆ ಬಿರುಬೇಸಿಗೆಯ ಕಾಲ. (‘ಬೇಸಿಗೆ’ ಇದು ‘ವೈಶಾಖ’ದ ತದ್ಭವ ಎನ್ನುವದನ್ನು ಗಮನಿಸಬೇಕು.)  ಇದೇನು ಕಡೆತನಕ ಇರುವಂತಹ ಋತು ಅಲ್ಲ. ಎಲ್ಲ ಅಲೆಮಾರಿಗಳಂತೆ ಬೇಸಿಗೆಯೂ ಸಹ ಈತನ ಊರಿನಲ್ಲಿಇದೀಗ ಡೇರೆ ಹೊಡೆದುಕೊಂಡು ಕೂತಿದೆ.

ಗಮನಿಸತಕ್ಕ ಅಂಶವೆಂದರೆ ಡೇರೆಯನ್ನು ಹೊಡೆಯುವದು ಸಮತಟ್ಟಾದ ಬಯಲಿನಲ್ಲಿ. ಅಂದರೆ ಈ ವ್ಯಕ್ತಿಯ ಊರು ಬಯಲಸೀಮೆಯಲ್ಲಿರುವ ಹಳ್ಳಿ. ಅಲ್ಲೊ ಇಲ್ಲೊ ಇರುವ ಬೇವಿನ ಅಥವಾ ಹುಣಸಿಯ ಗಿಡಗಳನ್ನು ಮಾತ್ರ ಇಲ್ಲಿ ಕಾಣಬಹುದು.

ಡೇರೆಯನ್ನು ಹೊಡೆದಿರುವವರು ಇಂದಿಲ್ಲ ನಾಳೆ ಕಿತ್ತುಕೊಂಡು ಹೋಗುತ್ತಾರೆ. ಬೇಸಿಗೆಯೂ ಹೋಗುವಂತಹದೇ. ಈ ವ್ಯಕ್ತಿಯೂ ಆ ಕಾಲಕ್ಕಾಗಿ ಕಾಯುತ್ತಿದ್ದಾನೆ. ಆದರೆ ಬಿಸಿಲು ಮಾತ್ರ ಸದ್ಯದ ಗಳಿಗೆಯಲ್ಲಿ ತನ್ನ ಡೇರೆಯ ಹೊರಗೆ ಮಧ್ಯಾಹ್ನದ ಪಾಳಿಯ ಕಾವಲುಗಾರನಂತೆ ಪಹರೆ ಮಾಡುತ್ತಿದೆ !  ಬೇಸಿಗೆಯ ಬಿಸಿಲಿಗಾದರೊ ಪಹರೆ ಕಾಯುವ ಕೆಲಸವಿದೆ. ಆದರೆ ಈ ಸುಡುಬೇಸಿಗೆಯಲ್ಲಿ ಹಳ್ಳಿಯ ಜನರಿಗೇನು ಕೆಲಸ ? ಬಹುತೇಕ ಜನರು ಎಳೆಬಿಸಿಲಿನಲ್ಲಿಯೇ ಸಣ್ಣ ಪುಟ್ಟ ದುರಸ್ತಿ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಹೋಗಿ ಬಿಟ್ಟಿರುತ್ತಾರೆ. ಯಾರಿಗೂ ಈಗ ಹ್ವಾರೆ(=ಕೆಲಸ) ಇಲ್ಲ. ಆದುದರಿಂದಲೇ ಇಲ್ಲಿ ಯಾವುದೇ ಸದ್ದಿಲ್ಲ ; ಯಾತರದೂ ಸುಳಿವೂ ಇಲ್ಲ.

ಸುಳ್ಳ ಸುಳ್ಳ ಗಾಳಿ ಹಾಕಿತ ಸಿಳ್ಳು
ಕಾಗಿ ಚುಂಚಿನ ಹಳ್ಳು
ಬಿದ್ದು ಆಂತ್ಯು “ಹೊಳ್ಳು”
ಮೈಚಾಚ್ಯsದ ಹುಣಸಿಯ ನೆಳ್ಳು ||ಹೂತsದ

ಪಂಚೇಂದ್ರಿಯಗಳಲ್ಲಿ ನಾಲ್ಕಾದ ನೇತ್ರ,ಜಿಹ್ವೆ, ಘ್ರಾಣ ಹಾಗು ಸ್ಪರ್ಶದ ನಂತರ ಇದೀಗ ಐದನೆಯದಾದ ಕರ್ಣೇಂದ್ರಿಯದ ಸರದಿ. ಇಲ್ಲಿಯ ವರೆಗೆ ಸ್ತಬ್ಧವಾಗಿದ್ದ ವಾತಾವರಣದಲ್ಲಿ ಇದೀಗ ಗಾಳಿಯಿಂದ ಚಲನೆ ಮೂಡುತ್ತದೆ. ಎಲ್ಲರೂ ಊಟ ಮುಗಿಸಿಕೊಂಡು ಮಲಗಿರುವಾಗ, ಈ ಗಾಳಿ ಮಾತ್ರ ಹರಿದಾಡುತ್ತ ಸಿಳ್ಳು ಹಾಕುತ್ತಿದೆ. ಹುಣಸಿಮರದ ಎಲೆಗಳಲ್ಲಿ ಹಾಯ್ದು ಹೋಗುವಾಗ ಅದರಿಂದ ಉಂಟಾಗುವ ಧ್ವನಿ ಸಿಳ್ಳಿನಂತೆ ಕೇಳಿಸುತ್ತದೆ. ಇದು ಕೆಲಸವಿಲ್ಲದ ಉಂಡಾಡಿ ತರುಣನ ನಿಶ್ಚಿಂತ, ವಿನಾಕಾರಣ ಸಿಳ್ಳು ; ಯಾಕೆಂದರೆ ಸಿಳ್ಳು ಹಾಕುವಂತಹ ಯಾವ ಕಾರಣವೂ ಗಾಳಿಗಿಲ್ಲ. ಆದುದರಿಂದ ಬೇಂದ್ರೆ ಇದನ್ನು ‘ಸುಳ್ಳ ಸುಳ್ಳ ಸಿಳ್ಳು’ ಎಂದು ಬಣ್ಣಿಸುತ್ತಾರೆ.  

ಈ ಸಿಳ್ಳಿನ ಪರಿಣಾಮವಾಗಿ ಮರದ ಟೊಂಗೆಯ ಮೇಲೆ ಕುಳಿತ ಕಾಗೆಯೊಂದು ಬೆಚ್ಚಿ ಬೀಳುತ್ತದೆ. ಅದು ಚುಂಚಿನಲ್ಲಿ ಹಿಡಿದುಕೊಂಡಂತಹ ಸಣ್ಣ ಹಳ್ಳೊಂದು ದೊಪ್ಪನೆ ಕೆಳಗೆ ಬೀಳುತ್ತದೆ. ಬಿದ್ದ ಹಳ್ಳು (=ಕಲ್ಲಿನ ಸಣ್ಣ ತುಣುಕು) ನೆಟ್ಟಗೆ ನಿಲ್ಲಲಾರದೆ ಹೊರಳುತ್ತದೆ. ಇಂತಹ ಸಣ್ಣ ಘಟನೆಯೂ ಸಹ ನಮ್ಮ ನಾಯಕನ ಅರಿವಿನಲ್ಲಿ ಮೂಡುತ್ತದೆ. ಇಂತಹದೇ ಮತ್ತೊಂದು ವಿಷಯವನ್ನೂ ಅವನು ಗಮನಿಸುತ್ತಾನೆ. ಅದೇನೆಂದರೆ, ಹುಣಸಿ ಮರದ ನೆರಳೂ ಸಹ ಮೈ ಚಾಚಿ ಮಲಗಿಕೊಂಡಿದೆ! (ಬೇಂದ್ರೆಯವರು ಅಪರಾಹ್ನದ ಕಾಲವನ್ನು ಸೂಚಿಸುತ್ತಿದ್ದಾರೆ.) ಇದೆಲ್ಲದರ ಅರ್ಥವೆಂದರೆ, ಸಚರಾಚರ ಜಗತ್ತೆಲ್ಲ, ಬಿಸಿಲಿನ ಧಗೆಯನ್ನು ಪರಿಹರಿಸಿಕೊಳ್ಳಲು ಒರಗಿಕೊಂಡಿದೆ. ಇನ್ನು ನಾಯಕನಿಗೇನು ಕೆಲಸ? ಅವನೂ ಸ್ವಗತವೆಂಬಂತೆ ನುಡಿಯುತ್ತಾನೆ:

ಅಡ್ಡಾಗತೇನಿ ನೆಳ್ಳಾಗ ಹೀಂಗ
ಹೂವು ಚಿಗುರು ಹ್ಯಾಂಗ
ಅವs ಹಾಸಿಧಾಂಗ
ಹುಳಿ ಚಿಗುರು ನುರಿಸಿ ನಾ ದಂಗ ||ಹೂತsದ

ಇದೇ ಹುಣಸಿಯ ಮರದ ನೆರಳಿನ ಕೆಳಗೆ ತಾನೂ ಅಡ್ಡಾಗಬೇಕೆನ್ನುವ ಯೋಚನೆ ಅವನಲ್ಲಿ ಬರುತ್ತದೆ. ಮರದ ಕೆಳಗೆ ಒರಗಿದಾಗ, ಅವನಿಗೆ ಮೇಲೆ ಕಾಣುವದೇನು? ಮರದ ತುಂಬೆಲ್ಲ ಹರಡಿದ ಹೂವು ಹಾಗು ಚಿಗುರು ತನ್ನ ಮೇಲೆಯೇ ಹಾಸಿದಂತೆ ಅವನಿಗೆ ಕಾಣುತ್ತದೆ. ಅಲ್ಲಿ ಒರಗಿದಂತೆಯೇ, ಹುಳಿ ಹುಳಿ ಚಿಗುರನ್ನು ನುರಿಸುತ್ತ, ಆ ಕಡುರುಚಿಗೆ ಆತ ಮರುಳಾಗುತ್ತಾನೆ.

ಈಗ ಅವನ ದೃಷ್ಟಿ ಕೆಳಗೆ ಸರಿಯುತ್ತ ಬಯಲಿನ ಕಡೆಗೆ ಹೋಗುತ್ತದೆ. ಕಣ್ಣ ನೋಟವೇ ಮಿತಿಯಾಗಿರುವಂತಹ ವಿಶಾಲವಾದ ಈ ಬಯಲು ಪ್ರದೇಶದಲ್ಲಿ, ಈ ಬಿಸಿಲಿನ ಝಳಕ್ಕೆ ದೂರದಲ್ಲಿ ಮೃಗಜಲದ ಆಭಾಸವಾಗುವದು ಸಹಜ. ನಮ್ಮ ಕವನದ ನಾಯಕನ ಕಣ್ಣಿಗೂ ಇದು ಬೀಳುತ್ತದೆ. ಆದರೆ ಆರಾಮಾಗಿ ಮಲಗಿಕೊಂಡಿರುವ ನಮ್ಮ ನಾಯಕನು ಈ ಮೃಗಜಲಕ್ಕೆ ಗಮನ ಹರಿಸುವದಿಲ್ಲ. ಭ್ರಮೆಯಲ್ಲಿ ಕಾಣಿಸುವ ನೀರು ಆತನಿಗೆ ಬೇಕಾಗಿಲ್ಲ. ಆತನಿಗೆ ಬೇಕಾದದ್ದು ಪ್ರೀತಿಯ ನೀರು. ಬಿಸಿಲುಕುದುರಿ ಬೇಕಾದಷ್ಟು ಕುಣಿಯಲಿ, ಅದಕ್ಕೆ ಅವನು ಲಕ್ಷ್ಯ ಕೊಡಲಾರ. ಅವನನ್ನು  ತಣಿಸುವಂತಹದು ಅವನ ಕೆಳದಿಯ ಒಲವಿನ ಒಡನಾಟ ಮಾತ್ರ. ಆದರೆ ನಮ್ಮ ರಸಿಕ ನಾಯಕನ ಕೆಳದಿ ಇಲ್ಲಿಲ್ಲ. ಹೊಲದಲ್ಲಿ ಏನೂ ಕೆಲಸವಿಲ್ಲದಾಗ, ತನ್ನ ಗಂಡನಿಗೆ ಬುತ್ತಿಯನ್ನು ಕಟ್ಟಿಕೊಂಡು ಬರುವ ಪ್ರಸಂಗವು ಹೆಂಡತಿಗೆ ಬರುವದಿಲ್ಲ.ಅದಕ್ಕಾಗಿ ಆಕೆಯನ್ನು ಆತ ಕರೆಯುವದು ಹೀಗೆ :

ಬಿಸಿಲ್ಗುದರಿ ಕುಣಿಯಲಿ ದೂರ
ಯಾರಿಗೆ ಬೇಕು ನೀರ
ಹೀಂಗ ನನ್ನಿದಿರ
ಕಣ್ಣಳತಿಯೊಳಗ ನೀ ಬಾರ ||ಹೂತsದ

ನಾಯಕ ತನ್ನ ಕೆಳದಿಯನ್ನು  ‘ಕಣ್ಣಳತಿಯೊಳಗೆ ಬಾ’ ಎಂದು ಕರೆಯುತ್ತಾನೆಯೇ ಹೊರತು, ಮೈಗೆ ಮೈ ಹಚ್ಚಿ ಕೂಡುವಷ್ಟು ಹತ್ತಿರ ಕರೆಯುತ್ತಿಲ್ಲ. ಯಾಕೆಂದರೆ ಈ ರಸಿಕನಿಗೆ ಅವಳ ಚೆಲುವನ್ನು ಅಲ್ಪದೂರದಿಂದಲೇ ಕಂಡು ಸುಖಿಸಬೇಕಾಗಿದೆ. ಅದು ಯಾವ ರೀತಿಯ ಚೆಲುವು ಎನ್ನುವದು ಈ ನುಡಿಯಲ್ಲಿ ವ್ಯಕ್ತವಾಗಿದೆ :

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ಬಿಸಿಲಿನಿಂದಾಗಿ ಏಳುತ್ತಿರುವ  ಬಯಲಸೀಮೆಯ ಗಾಳಿಗೆ ಅವಳ ಬಿಚ್ಚಿದ ಹೆರಳು ಹಾರಾಡುತ್ತಿರುವದನ್ನು ಈತ ಕಲ್ಪಿಸಿಕೊಳ್ಳುತ್ತಾನೆ. ಆ ಹಾರುತ್ತಿರುವ ಕೂದಲನ್ನು ಸರಿಪಡಿಸಿಕೊಳ್ಳಲು ಅವಳು ಕೊರಳನ್ನು ಕೊಂಕಿಸಿ, ತನ್ನ ಬೆರಳುಗಳಿಂದ ಬಾಚಿಕೊಳ್ಳುವದನ್ನು ಆತ ಮನದಲ್ಲಿಯೇ ಚಿತ್ರಿಸಿಕೊಳ್ಳುತ್ತಾನೆ. ಅವಳಿಗಿಂತ ಮೊದಲೇ ಅವಳ ನೆರಳು ಇವನ ಹತ್ತಿರಕ್ಕೆ ಬರುವದರಿಂದ, ಅವಳ ಕವಿಯುತ್ತಿರುವ ನೆರಳಿನಿಂದಲೇ ಅವಳು ತನ್ನ ಸನಿಹಕ್ಕೆ ಬಂದದ್ದನ್ನು ಈತ ಊಹಿಸಿಕೊಳ್ಳುತ್ತಾನೆ. ಎಂತಹ ಕಲ್ಪನಾಚತುರನಾಗಿದ್ದಾನೆ ನಮ್ಮ ರಸಿಕ ನಾಯಕ! ಅವನ ಮುಂದಿನ ಕಲ್ಪನೆಯು ಇನ್ನಿಷ್ಟು ಪ್ರಣಯಮಧುರವಾಗಿದೆ.

ಕಣಕಣ್ಣ ಚಕಮಕಿ ಇತ್ತ
ಕುಡಿಗಣ್ಣಿನತ್ತ
ತಾಕಿ ಹಾರಿತ್ತ
ಗಾಳಿಸವಾರಿಗ್ಹೊರಟಿತ್ತ ಚಿತ್ತ ||ಹೂತsದ

ಈ ರಸಿಕ ನಾಯಕನ ರಸಿಕ ಕೆಳದಿಯು ತನ್ನ ನಲ್ಲನನ್ನು ಸಮೀಪಿಸುವದಿಲ್ಲ , ನೇರವಾಗಿ ನೋಡುವದಿಲ್ಲ. ಕೇವಲ ಕುಡಿಗಣ್ಣಿನ ನೋಟವನ್ನು ಬೀರುತ್ತಾಳೆ, ಮತ್ತೆ ನೋಟವನ್ನು ಹೊರಳಿಸುತ್ತಾಳೆ, ಮತ್ತೆ ಅವನೊಡನೆ ಕಣ್ಣುಗಳನ್ನು ಕೂಡಿಸುತ್ತಾಳೆ. ಅವನೂ ಅಷ್ಟೇ! ಬೇಂದ್ರೆಯವರು ಇದನ್ನು ‘ಕಣಕಣ್ಣ ಚಕಮಕಿ’ ಎಂದು ಬಣ್ಣಿಸುತ್ತಾರೆ. ಬೆಣಚುಕಲ್ಲುಗಳ  ಚಕಮಕಿಯಲ್ಲಿ ಕಿಡಿ ಹಾರುವಂತೆ ಈ ಕಣ್ಣುಗಳ ಚಕಮಕಿಯಲ್ಲಿಯೂ ಸಹ ‘ತಾಕಿ ಹಾರಿತ್ತ’. ಆದರೆ ಇಲ್ಲಿ ಹಾರಿದ್ದು ತುಂಟ ಪ್ರಣಯದ ಕಿಡಿ!

ಈ ರೀತಿಯಲ್ಲಿ ನಮ್ಮ ನಾಯಕನ ಚಿತ್ತವು ಗಾಳಿಸವಾರಿಯನ್ನು ಮಾಡುತ್ತಿದೆ. ಅಂದರೆ ಗಾಳಿ ಹೇಗೆ ಎತ್ತೆತ್ತಲೊ ಬೀಸುವದೋ, ಅದೇ ತೆರದಲ್ಲಿ ಈತನ ಚಿತ್ತವೂ ಸಹ ಹಗಲುಗನಸಿನಲ್ಲಿ ಎತ್ತೆತ್ತಲೊ ಹರಿಯುತ್ತಿದೆ.
ಕವನದ ನಾಯಕನು ಈಗ ಹಗಲುಗನಸಿನಿಂದ ಹೊರಬಂದು  ವಾಸ್ತವ ಜಗತ್ತನ್ನು ನೋಡುತ್ತಾನೆ. ಆತನ ದೃಷ್ಟಿಯು ಸಮೀಪದಿಂದ ಸ್ವಲ್ಪ ದೂರದೆಡೆಗೆ ಸಾಗುತ್ತದೆ. ಅಲ್ಲಿ ಅವನಿಗೆ ಕಾಣುವದೇನು?

ಅಗೊ ಗಾಳಿ ಧೂಳಿಯಾ ಬಂಬಾ
ನಿಂತ್ಹಾಂಗ ಅದ ಖಂಬಾ
ಅಲ್ಲಿ ರೌದಿ ತುಂಬಾ
ಗಣಿ ಕುಣಿಧಾಂಗ ಡೊಂಬರ ರಂಭಾ ||ಹೂತsದ

ಸುಂಟರಗಾಳಿಯು ಸೃಷ್ಟಿಸಿದ ಧೂಳಿಯ ಬಂಬು (=bumb, ಪೊಳ್ಳಾಗಿರುವ ಸಿಲಿಂಡರಾಕಾರದ ರಚನೆ) ನಾಯಕನ ಕಣ್ಣಿಗೆ ಗಾಳಿಯ ಕಂಬವೊಂದು ನಿಂತುಕೊಂಡಂತೆ ಕಾಣುತ್ತದೆ. ಅದರ ಒಳಗೆಲ್ಲ ರವದಿಯಂತಹ (=ದಂಟಿನ ಸಿಪ್ಪೆ , ಕಸದಂತಹ) ಕ್ಷುಲ್ಲಕ ವಸ್ತು ತುಂಬಿಕೊಂಡಿದೆ. ಆದರೆ ಇಂತಹ ಸಾಮಾನ್ಯ ನೋಟವೂ ಸಹ ನಮ್ಮ ರಸಿಕ ನಾಯಕನಲ್ಲಿ ಕೌತುಕವನ್ನು ಹುಟ್ಟಿಸಬಲ್ಲದು. ಈ ಗಾಳಿಗಂಬದ ತಿರುಗುವಿಕೆಯು ಇವನ ಕಣ್ಣಿಗೆ ‘ಡೊಂಬರ ರಂಭೆ’ ಕುಣಿದಂತೆ ಕಾಣುವದು. ಹಳ್ಳಿಯಲ್ಲಿ ಕಸರತ್ತು ಮಾಡಿ ಮನರಂಜನೆ ನೀಡುವ ಕೆಲಸವನ್ನು ಡೊಂಬರು ಮಾಡುತ್ತಿದ್ದರು. ಆ ಕಸರತ್ತಿನಲ್ಲಿ ಕುಣಿಯುವ ಹುಡುಗಿ, ಈ ಹಳ್ಳಿಗರ ಪಾಲಿಗೆ ರಂಭೆ! ಈ ರೀತಿಯಾಗಿ ಗಾಳಿಯ ಬಂಬು ಕುಣಿಯುವ ರಂಭೆಯಾಗಿದೆ. ಇದು ರಸಿಕನ ಮನೋಧರ್ಮ.

ಈ ರೀತಿಯಾಗಿ ದೂರಕ್ಕೆ ಹರಿದ ಇವನ ದೃಷ್ಟಿಯು ಅಲ್ಲಲ್ಲಿ ಹರಿದಾಡುತ್ತ ಮತ್ತೆ ತನ್ನ ಸನಿಹದ ಹುಣಿಸೆ ಮರದ ಸನಿಹಕ್ಕೇ ಬರುವದು. ಅಲ್ಲಿ ಮರದ ಮೇಲುಭಾಗದಲ್ಲಿ ಇವನಿಗೆ ಪಾರಿವಾಳದ ಜೋಡಿಯೊಂದು ಕಾಣುವದು. ಬಿಸಿಲು, ಮಳೆ, ಚಳಿ ಇವೆಲ್ಲ ಮನುಷ್ಯಮಾತ್ರರಿಗೆ ಸಹನೀಯವಾಗದಿರಬಹುದು. ಆದರೆ ನಿಸರ್ಗದ ಶಿಶುಗಳಾದ ಪಕ್ಷಿ, ಪ್ರಾಣಿಗಳಿಗೆ ಈ ವೈಪರೀತ್ಯದ ಪರಿವೆಯೇ ಇಲ್ಲ.

ಮ್ಯಾಲೆ ಅಲ್ಲಿ ಪಾರಿವಾಳ ಜೋಡಿ
ಒಂದಕ್ಕೊಂದ ನೋಡಿ
ಬಿಸಿಲ ತೆರೆ ದೂಡಿ
ಹಾರ್ತsದ ನೀಲಿಮುಗಿಲ್ಕೂಡಿ  ||ಹೂತsದ

ಪಾರಿವಾಳದ ಜೋಡಿಯು ಪ್ರೇಮದ ಸಂಕೇತವೇ ಆಗಿದೆ. ಇವುಗಳ ಕೆಳೆತನವನ್ನು ನೋಡಿರಿ. ಅವು ಕ್ಷಣ ಬಿಟ್ಟು ಕ್ಷಣ, ಗೋಣು ಹೊರಳಿಸುತ್ತ ಒಂದನ್ನೊಂದು ನೋಡುತ್ತಲೇ ಇರುತ್ತವೆ. ಈ ಬಿಸಿಲಿನ ಬಾಧೆ ತಮಗೆ ಏನೂ ಅಲ್ಲ ಎಂಬಂತೆ, ಬಿಸಿಲಿನ ತೆರೆಯನ್ನು ದೂಡಿ ಹಾರುತ್ತವೆ. ಎಲ್ಲಿಗೆ?... ಬೇಸಿಗೆಯ ನಿರಭ್ರ, ನೀಲಿ ಆಕಾಶಕ್ಕೆ!

ಅವು ಎಷ್ಟು ಸಮರೂಪವಾಗಿ ಹಾರುತ್ತಿವೆ ಎಂದರೆ, ಅವುಗಳ ಹಾರಾಟವನ್ನು ಪ್ರತ್ಯೇಕಿಸದೆ, ‘ಹಾರುತ್ತಿದೆ ಜೋಡಿ…..ಕೂಡಿ’ ಎಂದು ಬಣ್ಣಿಸಲಾಗಿದೆ ! ಹಾರುತ್ತಿರುವ ಈ ಜೋಡಿಯನ್ನು ಕಂಡಾಗ, ನಮ್ಮ ನಾಯಕನೂ ಸಹ ಮುಗಿಲನ್ನು ನಿಟ್ಟಿಸುತ್ತಾನೆ. ನೀಲಿ ಬಣ್ಣದ ಆಕಾಶದ ಆ ಡುಬರಿಯು ಆತನಿಗೆ ನೀರಿನ ಕೊಳದಂತೆ ಕಾಣುವದು.

ಕಂಡಂಗಾತು ನೀರಿನ ಕೊಳ
ನೀಲಿ ಮುಗಿಲ ಜಳಾ
ಎಂಥ ಝಳ ಝಳಾ
ಮುಳುಮುಳುಗಿ ಹೋತು ಮನದ ಧೂಳಾ ||ಹೂತsದ

ಡುಬರಿಬಿದ್ದ ನೀಲಿ ಆಕಾಶವು ಇವನಿಗೆ ‘ಜಳಾ’ ಅಂದರೆ ‘ಜಲ’ದಿಂದ (=ನೀರಿನಿಂದ) ತುಂಬಿದ ಕೊಳದಂತೆ ಕಾಣುವದು. ಜಳ ಪದಕ್ಕೆ ಸ್ವಚ್ಛ ಎನ್ನುವ ಅರ್ಥವೂ ಇದೆ. ಈ ನೀಲಾಕಾಶವೂ ಸಹ ಸ್ವಚ್ಛವಾದ ನೀರಿನ ಕೊಳದಂತೆ, ‘ಜಳಜಳ’ (=ಸ್ವಚ್ಛ)ವಾಗಿ ಆತನಿಗೆ ತೋರುವದು.
( ‘ಜಳ’ ಅಂದರೆ ಸ್ವಚ್ಛ ; ‘ಜಲ’ ಅಂದರೆ ನೀರು. ಈ ಪದಕ್ಕೆ ಇರುವ ಎರಡೂ ಅರ್ಥಗಳನ್ನು ಬೇಂದ್ರೆಯವರು ಇಲ್ಲಿ ಬಳಸಿಕೊಂಡಿದ್ದಾರೆ.) ಸ್ವಚ್ಛವಾದ ಮುಗಿಲು ಹಾಗು ಅದು ಸೂಸುವ ತಾಪ ಎರಡೂ ಅವನ ಅನುಭವಕ್ಕೆ ಬಂದಾಗ, ಆತ ‘ಎಂಥ ಝಳ ಝಳಾ’ ಎಂದು ಉದ್ಗರಿಸುತ್ತಾನೆ! (ಝಳ ಎಂದರೆ ತಾಪ, ಸೆಕೆ ; ಝಳಝಳ ಎಂದರೆ ಸ್ವಚ್ಛ !)

‘ಶುದ್ಧವಾದ ವಸ್ತುವನ್ನು ನೋಡಿದಾಗ ನಾವೂ ಶುದ್ಧವಾಗುತ್ತೇವೆ’ ಎಂದು ಶಾಸ್ತ್ರ ಹೇಳುತ್ತದೆ. ಹಳ್ಳಿಯ ಈ ಸಾಮಾನ್ಯ ವ್ಯಕ್ತಿಗೆ ಶಾಸ್ತ್ರ ಗೊತ್ತಿಲ್ಲ. ಆದರೆ ಝಳಝಳ ಆಕಾಶದಲ್ಲಿ ಅವನ ನೋಟ ನೆಟ್ಟಾಗ, ಅವನ ಮನಸ್ಸಿನಲ್ಲಿರಬಹುದಾದ ಧೂಳೆಲ್ಲ ಹೊರಟು ಹೋಗಿ ಅವನು ನಿರ್ಮಲ ಚಿತ್ತನಾಗುತ್ತಾನೆ.  ಈ ರೀತಿಯಾಗಿ ಸಮಯ ಸಾಗುತ್ತಿರಲು, ಮನಸ್ಸಿನ ಎಲ್ಲ ಉಪಾಧಿಗಳು ಮಾಯವಾಗಿ ಋಷಿಗಳು ಹೇಳುವ ‘ಶೂನ್ಯಮನೋಸ್ಥಿತಿ’ಯನ್ನು ಈತ ಮುಟ್ಟುತ್ತಾನೆ.

ಕಾಲ ಹೋಗತಿತ್ತ ಹಿಂದ ಸರಿದು
ಮನಸು ಆತ ಬರಿದು
ಮಧ್ಯಾನ ಬ್ಯಾಸರ ಮುರಿದು
ಬಿಸಿಲ ತಾನs ಹೋಗತಿತ್ತ ಹರಿದು ||ಹೂತsದ

ಬಿಸಿಲುಕಾಲದ ಮಧ್ಯಾಹ್ನದಲ್ಲಿ ಏನೂ ಕೆಲಸವಿಲ್ಲದೆ, ರಣರಣ ಹೊಡೆಯುವ ಬಿಸಿಲಿನಿಂದ ಬೇಸರಗೊಂಡ ಈತನ ಮನಸ್ಸು ಹೂತ ಹುಣಸಿಯ ಮರವನ್ನು ಕಂಡ ಬಳಿಕ, ಚಿತ್ತವಿಲಾಸದಲ್ಲಿ ತೊಡಗಿ, ಕೊನೆಗೆ ಅಲೆಗಳಿಲ್ಲದ ಸರೋವರದಂತಹ ನಿರ್ಭಾವವನ್ನು ಮುಟ್ಟುತ್ತದೆ. (ನಿರ್ವಾಣ ಸ್ಥಿತಿ ಎನ್ನೋಣವೆ?) ಇದೇ ರೀತಿ ಕಾಲ ಸರಿದು ಹೋಗುತ್ತಿದೆ, ಬಿಸಿಲು ಹರಿದು ಹೋಗುತ್ತಿದೆ. ಮನಸ್ಸು ನಿರಾಳಸುಖವನ್ನು ಅನುಭವಿಸುತ್ತಿದೆ.

ಪ್ರಕೃತಿಯಲ್ಲಿ ಭಾವಸಮಾಧಿ ಹೊಂದುವ ಇಂತಹ ಮನೋಸ್ಥಿತಿಯು ಸಮಾಧಾನ ಚಿತ್ತವುಳ್ಳ ವ್ಯಕ್ತಿಗೆ ಮಾತ್ರ ಸಾಧ್ಯ! ಇವನೇ ನಿಜವಾದ ಕವಿಹೃದಯ ಉಳ್ಳವನು. ಈತ ಪಂಡಿತನಿರಬೇಕಿಲ್ಲ, ನಾಗರಿಕನಿರಬೇಕಿಲ್ಲ. (ಇರದಿರುವದೇ ಉತ್ತಮ!?) ಅದಕ್ಕೆಂದೇ ಈ ಕವನದ ಕೊನೆಯ ಭರತವಾಕ್ಯವನ್ನು ವರಕವಿ ಬೇಂದ್ರೆಯವರು ರೀತಿ ಹೇಳುತ್ತಾರೆ :

ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿಮರ ಸಾಕ ||ಹೂತsದ

ಕವಿಜೀವದ ಬೇಸರವು ಹರಿದ ಬಳಿಕ, ಕವಿಯ ಸುಖವು ಹಾಡಿನ ರೂಪದಲ್ಲಿಯೇ ಹೊರಹೊಮ್ಮಬೇಕಲ್ಲವೆ? ಆಗ ಆತನು ಹಾಡಿದ ಹಾಡು ಕವಿಗೆ ಸುಖ ನೀಡುವಂತೆಯೆ ಕೇಳುಗರಿಗೂ ಸುಖ ನೀಡುವದು. ಕವಿಗೆ ಹಾಗು ರಸಿಕರಿಗೆ ಸುಖ ನೀಡಲು ಹೂವು ಬಿಟ್ಟ ಹುಣಸಿ ಮರವೇ ಸಾಕು!
-------------------------------------------------------------

ಕವನದ ವೈಶಿಷ್ಟ್ಯಗಳು:
ಕವನಕ್ಕೆ ಸಮರ್ಪಕವಾದ ಛಂದಸ್ಸನ್ನು ಬಳಸುವದರಲ್ಲಿ ಬೇಂದ್ರೆಯವರನ್ನು ಸರಿಗಟ್ಟಬಲ್ಲವರಿಲ್ಲ. ‘ಪಾತರಗಿತ್ತಿ ಪಕ್ಕಾ’ ಕವನದಲ್ಲಿ ಅವರು brief and fluttering ಛಂದಸ್ಸನ್ನು ಬಳಸಿ, ಪಾತರಗಿತ್ತಿಯ ಹಿಂದೆಯೇ ಹಾರುತ್ತಾರೆ. ‘ಹೂತದ ಹುಣಸಿ’ ಕವನದ ಛಂದಸ್ಸನ್ನು ನೋಡಿರಿ. ಹಳ್ಳಿಯ ಸಾಮಾನ್ಯ ವ್ಯಕ್ತಿಯೊಬ್ಬನು ತನ್ನಷ್ಟಕ್ಕೆ ರಾಗವಾಗಿ ಮಾತನಾಡಿಕೊಳ್ಳುತ್ತಿರುವ ಛಂದಸ್ಸು ಈ ಕವನಕ್ಕಿದೆ. ಇಲ್ಲಿ ಬಳಸಲಾದ ಎಲ್ಲ ಪದಗಳೂ ಹಳ್ಳಿಗರು ಬಳಸುವ ದೇಸಿ ಪದಗಳೇ ಆಗಿವೆ. ಅಂತಹ ಪದಗಳಲ್ಲಿಯೇ ವಿವಿಧಾರ್ಥಗಳನ್ನು (pun) ಹೊರಡಿಸಬಲ್ಲ ಸಾಮರ್ಥ್ಯವನ್ನು  ಬೇಂದ್ರೆ ತೋರಿಸಿದ್ದಾರೆ.

ಬೇಂದ್ರೆಯವರ ಚಿತ್ರಕ ಶಕ್ತಿಯೂ ಅದ್ಭುತವಾದದ್ದು. ಕವನವನ್ನು ಓದುತ್ತಿದ್ದಂತೆಯೇ ಹೂವು ಬಿಟ್ಟ ಹುಣಸಿ ಮರವು ಕಣ್ಣಿಗೆ ಕಟ್ಟುತ್ತದೆ. ಅಷ್ಟೇ ಏಕೆ, ಬಿಸಿಲು ಹಾಗು ಗಾಳಿಯಂತಹ ನಿರ್ಜೀವ ವಸ್ತುಗಳಿಗೆ ಬೇಂದ್ರೆ ಇಲ್ಲಿ ಜೀವ ಕೊಟ್ಟಿದ್ದಾರೆ. ಡೇರೆಯನ್ನು ಹೊಡೆದುಕೊಂಡು ಪಹರೆ ಮಾಡುವ ಕಾವಲುಗಾರನ ರೂಪವನ್ನು ಬಿಸಿಲು ತಾಳುತ್ತದೆ. ದಿಕ್ಕು ನೋಡದೆ ಹರಿಯುವ ಗಾಳಿಯು ಸಿಳ್ಳು ಹಾಕುವ ನಿಶ್ಚಿಂತ ತರುಣನ ವ್ಯಕ್ತಿತ್ವವನ್ನು ಪಡೆಯುತ್ತದೆ.  ಸುಂಟರಗಾಳಿಯ ಬಂಬನ್ನು ಅವರು ಬಣ್ಣಿಸುವಾಗ, ಆ ಬಂಬು ಕಣ್ಣೆದುರಿಗೇ ನಿಲ್ಲುತ್ತದೆ. ನಾಯಕನ ಕೆಳದಿಯು ಒನಪು-ವೈಯಾರದ, ಹಳ್ಳಿಯ ಬೆಡಗಿಯಾಗಿ ನಮ್ಮ ಮನದಲ್ಲಿ ನಿಲ್ಲುತ್ತಾಳೆ.

‘ಉಪಮಾ ಕಾಲಿದಾಸಸ್ಯ’ ಎಂದು ಹೇಳುತ್ತಾರೆ. ಉಪಮೆಗಳನ್ನು ಕೊಡುವದರಲ್ಲಿ ಬೇಂದ್ರೆಯವರು ಕಾಲಿದಾಸನಿಗೆ ಸರಿಸಾಟಿ ಎನ್ನಬಹುದು. ಹುಣಸಿಯ ಚಿಗುರುಗಳನ್ನು ಮದರಂಗಿ ಹಚ್ಚಿದ ಉಗುರುಗಳಿಗೆ ಹೋಲಿಸುವದರಲ್ಲಿ , ಹುಣಸಿಯ ರೆಂಬೆಯನ್ನು ಕಾಮನಬಿಲ್ಲಿನ ತುದಿಗಳಿಗೆ ಹೋಲಿಸುವದರಲ್ಲಿ ಅಥವಾ ಸುಂಟರಗಾಳಿಯ ಕುಣಿತವನ್ನು ಡೊಂಬರ ರಂಭೆಯ ಕುಣಿತಕ್ಕೆ ಹೋಲಿಸುವದರಲ್ಲಿ ಇವರ ವಾಸ್ತವಪ್ರಜ್ಞೆ ಹಾಗು ಉಪಮಾ ಪ್ರತಿಭೆ ವ್ಯಕ್ತವಾಗುತ್ತವೆ. ಆದರೆ ನಮ್ಮ ನಾಯಕನ ರಸಿಕ ವ್ಯಕ್ತಿತ್ವವನ್ನು ಬಯಲುಗೊಳಿಸುವದೇ ಈ ಉಪಮೆಗಳ ನೈಜ ಉದ್ದೇಶವಾಗಿದೆ.

ಇಲ್ಲಿ ಮತ್ತೊಂದು ಸಾಮ್ಯವನ್ನು ಗಮನಿಸಬೇಕು. ಚಿಗುರು ಬಿಟ್ಟ ಹುಣಸಿಯ ಮರವು ಫಲಿತವಾಗಲು ದುಂಬಿಗಾಗಿ ಕಾಯುತ್ತದೆ. ಅದರಂತೆಯೇ, ಉಗುರಿಗೆ ಮದರಂಗಿಯನ್ನು ಹಚ್ಚಿಕೊಂಡ ಹುಡುಗಿಯು ತನ್ನ ನಲ್ಲನಿಗಾಗಿ ಕಾತರಿಸುತ್ತಾಳೆ. ಈ ಎರಡೂ ಕ್ರಿಯೆಗಳು ಸೃಷ್ಟಿಗಾಗಿ ಇವೆ. ಆದುದರಿಂದಲೇ, ನಮ್ಮ ನಾಯಕನು ತನ್ನ ಕೆಳದಿಯ  ಹಗಲುಗನಸು ಕಾಣುವ ವರ್ಣನೆ ಮುಂದಿನ ನುಡಿಗಳಲ್ಲಿ ಬರುತ್ತದೆ.

ಉಮರ ಖಯ್ಯಾಮನ ‘ರುಬಾಯತ್’ ಕಾವ್ಯವು ಜೀವನಪ್ರೀತಿಯ ತತ್ವಕ್ಕಾಗಿ ತುಂಬ ಪ್ರಸಿದ್ಧವಾಗಿದೆ. ಆ ಕಾವ್ಯದಲ್ಲಿ ಬರುವ  ‘Come, fill the cup ಎನ್ನುವ ಸಾಲಂತೂ ಎಲ್ಲೆಲ್ಲೂ ಉದ್ಧೃತವಾಗಿದೆ:
ನಮ್ಮ ಹಳ್ಳಿಯ ಗೃಹಸ್ಥನಿಗೆ ಇದಕ್ಕಿಂತ ಹೆಚ್ಚಿನ ತತ್ವಜ್ಞಾನವು ತನ್ನ ಗ್ರಾಮೀಣ ಸಂಸ್ಕೃತಿಯ ಮೂಲಕವೇ ಅರಿವಾಗಿದೆ. ಅದಕ್ಕೆಂದೇ ಆತ ತನ್ನ ಕೆಳದಿಯನ್ನು ಒಲವಿನಿಂದ ನೋಡಬಯಸುವದು ಹೀಗೆ:

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು
ವಾರಿಯಿರಲಿ ಕೊರಳು
ಬಾಚತಿರಲಿ ಬೆರಳು
ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ರಚನೆಯ ವೈಶಿಷ್ಟ್ಯ:
ಹೂವು ಬಿಟ್ಟ ಹುಣಸಿಯ ಮರವು ಎಂತಹ ಮನೋವಿಲಾಸಕ್ಕೆ, ಎಂತಹ ನೆಮ್ಮದಿಗೆ ಕಾರಣವಾಗಬಹುದು ಎನ್ನುವದನ್ನು ಬೇಂದ್ರೆಯವರು ನುಡಿಗೆ ನುಡಿ ಜೋಡಿಸುತ್ತ ಅತ್ಯಂತ ಕ್ರಮಬದ್ಧವಾಗಿ ತೋರಿಸುತ್ತ ಹೋಗಿದ್ದಾರೆ. ನಿರುದ್ದಿಶ್ಯವಾಗಿ ಚಲಿಸುತ್ತಿರುವ ಮನಸ್ಸಿನ ವಿಲಾಸವನ್ನು ಚಿತ್ರಿಸುವ ಕಲ್ಪನಾಸಾಮರ್ಥ್ಯವು ಬೇಂದ್ರೆಯವರ ಕಾವ್ಯಪ್ರತಿಭೆಯ ಫಲವಾದರೆ, ಉದ್ದೇಶಪೂರ್ಣ ಕ್ರಮಬದ್ಧತೆಯು ಅವರ ಕಾವ್ಯರಚನಾಪ್ರತಿಭೆಯ ಫಲವಾಗಿದೆ. ಪ್ರತಿಭೆ ಹಾಗು ಪಾಂಡಿತ್ಯ ಇವೆರಡೂ ಬೇಂದ್ರೆಯವರಲ್ಲಿ ಸಮರಸವಾಗಿ ಮೇಳವಿಸಿರುವದರಿಂದಲೇ ‘ಹೂತದ ಹುಣಸಿ’ಯಂತಹ ಶ್ರೇಷ್ಠ ಕವನವು ಅವರ ಮನದಲ್ಲಿ ಮೂಡಲು ಸಾಧ್ಯವಾಗಿದೆ ಎನ್ನಬಹುದು.

‘ಒಂದು ಹೂತ ಹುಣಸಿಮರವನ್ನು ಕಂಡರೂ ಸಾಕು, ಪ್ರಕೃತಿಯಲ್ಲಿ ಭಾವಸಮಾಧಿ ಹೊಂದಬಲ್ಲ  ಸಾಮರ್ಥ್ಯ ಕವಿಜೀವಕ್ಕೆ ಇದೆ’, ಎಂದು ಬೇಂದ್ರೆ ಕೊನೆಯ ನುಡಿಯಲ್ಲಿ ಹೇಳುತ್ತಾರೆ. ಇಂತಹ ಕಾವ್ಯರಚನೆಯನ್ನು ಮಾಡುವ ಸಾಮರ್ಥ್ಯವು ಕಾವ್ಯದಲ್ಲಿ ಸಮಾಧಿಸ್ಥನಾಗಬಲ್ಲ ವರಕವಿಗೆ ಮಾತ್ರ ಸಾಧ್ಯ, ಅಲ್ಲವೆ!
------------------------------------------------------------
[ಟಿಪ್ಪಣಿ:
‘ಹೂತsದ ಹುಣಸಿ’ ಕವನದಲ್ಲಿ ಬೇಂದ್ರೆಯವರು ‘ಪ್ರಕೃತಿಸಮಾಧಿ’ಯನ್ನು ಬಣ್ಣಿಸಿದ್ದಾರೆ. ನಗರದ ವಾತಾವರಣದಿಂದಾಗಿ ಇಂತಹ ಪ್ರಕೃತಿಸಾಮರಸ್ಯಸುಖವು ಪಾಶ್ಚಾತ್ಯರಿಗೆ ಅಲಭ್ಯವಾಗಿದೆ. ಇದನ್ನು ಕೆಲವು ಹಳೆಯ ಪಾಶ್ಚಾತ್ಯ ಕವಿಗಳು ತಮ್ಮ ಕವನಗಳಲ್ಲಿ ಅಭಿವ್ಯಕ್ತಿಸಿದ್ದಾರೆ.

ಉದಾಹರಣೆಗೆಂದು W.H.Davies ಇವರು ಬರೆದ ಕವನವೊಂದರ ಮೊದಲ ನುಡಿಯನ್ನು ಗಮನಿಸಬಹುದು :

What is this life if full of care,
There is no time to stand and stare?
No time to stand beneath the boughs
And stare as long as sheep and cows.

ಎರಡನೆಯ ಉದಾಹರಣೆ ಎಂದರೆ ಪ್ರಸಿದ್ಧ ಇಂಗ್ಲಿಶ್ ಕವಿ ಯೇಟ್ಸನ ಸುಪ್ರಸಿದ್ಧ ಕವನ:
‘The Lake isle of Innisfree’.

I will arise and go now, and go to Innisfree,
And a small cabin build there, of clay and wattles made:
Nine bean-rows will I have there, a hive for the honey-bee,
And live alone in the bee-loud glade.

And I shall have some peace there, for peace comes dropping slow,
Dropping from the veils of the morning to where the cricket sings;
There midnight's all a glimmer, and noon a purple glow,
And evening full of the linnet's wings.

I will arise and go now, for always night and day
I hear lake water lapping with low sounds by the shore;
While I stand on the roadway, or on the pavements grey,
I hear it in the deep heart's core.

ಈ ಇಬ್ಬರೂ ಇಂಗ್ಲಿಶ್ ಕವಿಗಳು ಆಧುನಿಕ ನಾಗರಿಕತೆಯು ಕಳೆದುಕೊಂಡ ಪ್ರಕೃತಿಯ ಕೆಳೆತನಕ್ಕಾಗಿ ಹಲಬುವ ಕವನಗಳನ್ನು ಬರೆದಿದ್ದಾರೆ. ಬೇಂದ್ರೆಯವರು ಆ ಕೆಳೆತನವು ಹೇಗೆ ಇರುವದು ಎನ್ನುವದನ್ನು ತೋರಿಸಿದ್ದಾರೆ.]

------------------------------------------------------------

ಒಂದು ಘಟನೆ:
ಈ ಘಟನೆಯನ್ನು ನನಗೆ ಶ್ರೀ ವ್ಯಾಸ ದೇಶಪಾಂಡೆ ಹೇಳಿದರು :
ಗದಗಿನಲ್ಲಿ (?) ನಡೆಯುತ್ತಿದ್ದ ಒಂದು ಸಾಹಿತ್ಯಸಮಾರಂಭದ ವೇದಿಕೆಯ ಮೇಲೆ ಶ್ರೀ ಬೇಂದ್ರೆ, ಶ್ರೀ ಆರ್.ಸಿ. ಹಿರೇಮಠ ಹಾಗು ಶ್ರೀ ಧಾರವಾಡಕರ ಉಪಸ್ಥಿತರಿದ್ದರು. ಶ್ರೀ ಆರ್.ಸಿ.ಹಿರೇಮಠರು ಬೇಂದ್ರೆಯವರಿಗೆ ಚೇಷ್ಟೆ ಮಾಡುವ ಉದ್ದೇಶದಿಂದ, “ಬೇಂದ್ರೆ ಅವರು ಬೇಕಾದ್ದರ ಮ್ಯಾಲೆ ಕವನಾ ಬರೀತಾರ; ಇಕಾ ನೋಡರಿ, ಆ ಎದುರಿಗಿರೋ ಹುಣಸಿ ಮರದ ಮ್ಯಾಲೂ ಒಂದ ಕವನಾ ಕಟ್ಟತಾರ ಅವರು” ಎಂದು ಅಂದರಂತೆ. ತಕ್ಷಣವೇ ಬೇಂದ್ರೆಯವರು ಎದ್ದು ನಿಂತು, ಕೈ ಮೇಲೆತ್ತಿ, ಹಸ್ತಚಲನೆ ಮಾಡುತ್ತ ಉದ್ಗರಿಸಿದರಂತೆ :
“ಕವಿಗೇನು ಬೇಕs
ಹೂತ ಹುಣಸಿ ಮರ ಸಾಕs”
---------------------------------------------------------
ಸರ್ವರಿಗೂ ೨೦೧೧ನೆಯ ವರುಷದ ಶುಭಾಶಯಗಳು.
------------------------------------------------

Saturday, December 4, 2010

ಬೇದಾದ್, ಬೇಫಿಕೀರ್, ಬೇಶರಮ್’ ಆಗಿರುವ ಪತ್ರಿಕೆ: ಸಂಕಟ ಕರ್ನಾಟಕ

 ‘ಹಾಡಿದ್ದೆ ಹಾಡೊ ಕಿಸುಬಾಯಿ ದಾಸ’ ಅನ್ನುವಂತಾಗಿದೆ ನನ್ನ ಸ್ಥಿತಿ. ಆದರೆ ಈ ಘೋರ ವಿಷಯವನ್ನು ನಿಮ್ಮ ಎದುರಿಗೆ ಇಡದೆ ಹೋದರೆ, ನನ್ನ ಮನಸ್ಸಿನ ಒಳಕುದಿಗೆ ಸಮಾಧಾನವಿಲ್ಲದಂತಾಗುವದು.

‘ಸಂಯುಕ್ತ ಕರ್ನಾಟಕ’ವು ಓದುಗನಿಗೆ ಸರಿಯಾದ  ಸಮಾಚಾರವನ್ನು ಕೊಡುತ್ತಿಲ್ಲ. ಓದುಗರ ಬುದ್ಧಿಮತ್ತೆಯ ಬಗೆಗೆ ತೀವ್ರ ತಾತ್ಸಾರ ಭಾವನೆಯನ್ನು ತಾಳಿರಬಹುದಾದ ‘ಸಂ.ಕ’ ಪತ್ರಿಕೆಯು, ಓದುಗನಿಗೆ ಲದ್ದಿಯನ್ನು ತಿನ್ನಿಸಿದರೂ, ಓದುಗನು ಅದನ್ನು ಕಣ್ಣು ಮುಚ್ಚಿಕೊಂಡು ತಿನ್ನುತ್ತಾನೆ ಎಂದು ತಿಳಿದಿದೆಯೇನೊ? ಉದಾಹರಣೆಗೆ ದಿನಾಂಕ ೩-೧೨-೨೦೧೦ರಂದು ‘ಸಂ.ಕ.’ದಲ್ಲಿ ಪ್ರಕಟವಾದ ಈ ಸುದ್ದಿಯನ್ನು ನೋಡಿರಿ :

(೧)ಲೋಕಸಭೆಯಲ್ಲಿ ನಡೆಯುತ್ತಿರುವ ಪ್ರಸಂಗವನ್ನು ವಿಧಾನಸಭೆಯಲ್ಲಿ ಎಂದು  ಬರೆಯಲಾಗಿದೆ, ಒಮ್ಮೆ ಅಲ್ಲ, ಮೂರು ಸಲ! ಇದು ಕಣ್ತಪ್ಪಿನಿಂದಾಗುವ ದೋಷವೆ ಅಥವಾ ಸುದ್ದಿಗಾರನ ಅಜ್ಞಾನದಿಂದಾಗುವ ದೋಷವೆ? ಸುದ್ದಿಗಾರನು ತಪ್ಪಿದರೂ ಸಹ ಸಂಪಾದಕರು ಇದನ್ನು ಗಮನಿಸಬೇಡವೆ?

(೨) ಹನ್ನೊಂದು ವಿರೋಧಪಕ್ಷಗಳನ್ನು ಇಲ್ಲಿ ಹೆಸರಿಸಲಾಗಿದೆ. ಇವುಗಳಲ್ಲಿ ಎಲ್ಲವೂ ಎಡಪಕ್ಷಗಳಲ್ಲ. ಆದರೂ ಸಹ ಈ ಎಲ್ಲ ಪಕ್ಷಗಳನ್ನು ಸಾರಾಸಗಟಾಗಿ ಎಡಪಕ್ಷಗಳೆಂದು ಕರೆಯಲಾಗಿದೆ. ‘ಸಂ.ಕ.’ದವರಿಗೆ ಎಡಪಕ್ಷ ಅಂದರೆ ಏನು ಎನ್ನುವದು ಗೊತ್ತಿದೆಯೆ?

(೩) ಈ ಸಭೆಯನ್ನು ವಿರೋಧ ಪಕ್ಷಗಳ ಸಾಮಾನ್ಯ ವಾರ್ಷಿಕ ಸಭೆ ಎಂದು ಹೇಳಲಾಗಿದೆ. ಎನ್‍ಡಿ‍ಏ ಹೊರತಾಗಿ ವಿರೋಧ ಪಕ್ಷಗಳಲ್ಲಿಯೇ ಮೂರು ವಿಭಿನ್ನ ಗುಂಪುಗಳಿದ್ದು, ಈ ಗುಂಪುಗಳು ಒಂದು ಸಾಮಾನ್ಯ ವಾರ್ಷಿಕ ಸಭೆಯನ್ನು ಯಾವಾಗ ನಡೆಸಿದ್ದವು? ಈ ಸಭೆಗೆ ‘(ಆಳುವ ಪಕ್ಷದ) ಸಚಿವರು ಹಾಜರಾಗಲಿದ್ದಾರೆ’ ಎನ್ನುವದರ ಅರ್ಥವೇನು?

(೪) ಸಚಿವರು ರಾಜ್ಯಸಭೆಯ ಅಥವಾ ಲೋಕಸಭೆಯ ಸದಸ್ಯರಿರಬಹುದು. ಸಚಿವರಲ್ಲಿ ರಾಜ್ಯಸಚಿವರು ಹಾಗು ಸಂಪುಟ ಸಚಿವರು ಎನ್ನುವ ವರ್ಗಗಳಿವೆ. ಆದರೆ ರಾಜ್ಯಸಭೆಯ ಸಚಿವರು ಹಾಗು ಲೋಕಸಭೆಯ ಸಚಿವರು  ಎನ್ನುವ ಹೊಸ ಪ್ರಭೇದಗಳು ಎಲ್ಲಿಂದ ಬಂದವು? ಇವು ‘ಸಂ.ಕ.’ದವರ ಸ್ವಂತ ಆವಿಷ್ಕಾರವೆ?

(೫) ಒಂದು ಗಂಟೆಯ ಸುದೀರ್ಘ ಕಾಲದವರೆಗೆ ಚರ್ಚೆಯನ್ನು ನಡೆಸಲಾಗುವದು ಎಂದು (ವರದಿಗಾರರಿಗೆ) ತಿಳಿಸಲಾಗಿದೆಯಂತೆ. ಚರ್ಚೆ ಸುದೀರ್ಘವಾಗಿರಬಹುದು ಎನ್ನುವ ನಿರೀಕ್ಷಣೆಯನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಅದು ಒಂದು ಗಂಟೆಯ ಕಾಲ ಎಂದು ಊಹಿಸುವದು ಹಾಸ್ಯಾಸ್ಪದ. ಅಲ್ಲದೆ ಒಂದು ಗಂಟೆಯ ಚರ್ಚೆಯನ್ನು ಸುದೀರ್ಘ ಎಂದು ಕರೆಯಬಹುದೆ? ಇದು ‘ಸಂ.ಕ.’ದ ವರದಿಗಾರರ ಕಲ್ಪನೆಯೆ?

(೬) ಎನ್‍ಡಿ‌ಏಗೆ ಸೇರದ ಪ್ರತಿಪಕ್ಷಗಳು ಸಭೆ ಸೇರಲಿವೆ ಎಂದು ಹೇಳಲಾಗಿದೆ. ಅಂದ ಮೇಲೆ ಎನ್‍ಡಿ‍ಏಗೆ ಸೇರಿದ ಆರ್‍ಎಲ್‍ಡಿಯನ್ನು ಈ ಪಕ್ಷಗಳಲ್ಲಿ ಹೇಗೆ ಕೂಡಿಸಲಾಗಿದೆ?

(೭) ಪಿ‍ಐ ಎನ್ನುವ ಪಕ್ಷ ಇದೆಯೆ?

ಬೇಜವಾಬುದಾರಿ ಸಂಪಾದನೆಗೆ ಇವು ಕೆಲವು ಉದಾಹರಣೆಗಳು.
ಇನ್ನು ವ್ಯಾಕರಣ ದೋಷಗಳನ್ನಂತೂ ಕೇಳುವದೇ ಬೇಡ.
ಈ ಸಮಾಚಾರ ಸಂಪಾದನೆಯಲ್ಲಿಯ ತಪ್ಪು ಪದಗಳು ಹೀಗಿವೆ:
ತಪ್ಪು-----------------------------------ಸರಿ
(೧) ಬಿಕ್ಕಿಟ್ಟಿನ--------------------------ಬಿಕ್ಕಟ್ಟಿನ
(೨) ಎನ್‍ಡಿ‍ಎವಲ್ಲದ--------------------ಎನ್‍ಡಿಏ ಅಲ್ಲದ
(೩) ಒಂದು ಗಂಟೆಗಳ ಕಾಳ---------------ಒಂದು ಗಂಟೆ ಕಾಲ
(೪) ಸುಧೀರ್ಘ---------------------------ಸುದೀರ್ಘ
(೫) ಮುಂದುವರಿದೆರುವ-----------------ಮುಂದುವರೆದಿರುವ
(೬) ತೊರಿಸುತ್ತಿರುವ---------------------ತೋರಿಸುತ್ತಿರುವ
(೭) ಎಡಪಕ್ಷಗಳು….ಹೇಳಿದ್ದಾರೆ---------ಎಡಪಕ್ಷಗಳು…….ಹೇಳಿವೆ
(೮) ಹಾಜರಾಗಲಿದ್ದಾರೆ. ಎಂದು----------ಹಾಜರಾಗಲಿದ್ದಾರೆ ಎಂದು

ಸಮಾಚಾರದ ಒಟ್ಟು ೯೦ ಪದಗಳಲ್ಲಿ ೮ ದೋಷಗಳಿವೆ , ಅಂದರೆ ಸುಮಾರಾಗಿ ೯%. ನಿಜವಾಗಿಯೂ ಇದು ಎಲ್ಲ ಪತ್ರಿಕೆಗಳನ್ನು ಹಿಂದಿಕ್ಕುವ ಅತ್ಯುತ್ತಮ ಸಾಧನೆಯಾಗಿದೆ!
ವ್ಯಾಕರಣ ದೋಷಗಳನ್ನು ಹೇಗಾದರೂ ಸಹಿಸಬಹುದು. ಈ ಪತ್ರಿಕೆಯ ಸಿಬ್ಬಂದಿಯು ಪ್ರಾಥಮಿಕ ಶಾಲೆಯನ್ನು ದಾಟಿರಲಿಕ್ಕಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬಹುದು. ಆದರೆ ಲೋಕಸಭೆಗೆ ವಿಧಾನಸಭೆ ಎಂದು ವರದಿ ಮಾಡಿದರೆ ಏನೆಂದು ಸಮಾಧಾನ ಮಾಡಿಕೊಳ್ಳಬೇಕು? ಪಾಪ, ರಾತ್ರಿಯಲ್ಲಿ ನಿದ್ರೆಗೆ ಶರಣಾದ ಸಿಬ್ಬಂದಿ ಹಾಗು ಸಂಪಾದಕರಿಂದ ಇಂತಹ ತಪ್ಪುಗಳು ಆಗುವದು ಸಹಜ ಎಂದುಕೊಳ್ಳಬೇಕೆ?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಕರ್ನಾಟಕದ ಇಂತಹ ಶ್ರೇಷ್ಠ ಪತ್ರಿಕೆಗೆ ಏನು ಬಿರುದು ಕೊಡಬೇಕು?
‘ಬೇದಾದ್, ಬೇಫಿಕರ್, ಬೇಶರಮ್’ ಪತ್ರಿಕೆ ಎನ್ನುವ ಬಿರುದನ್ನು ನಾನು ಸೂಚಿಸುತ್ತಿದ್ದೇನೆ.
‘ಬೇದಾದ್’ ಎಂದರೆ ದಾದ್ ಮಾಡದವನು = one who does not bother.
`ಬೇಫಿಕರ್’ ಎಂದರೆ ಕಾಳಜಿ ಇಲ್ಲದವನು = one who does not care.
`ಬೇಶರಮ್’ ಎಂದರೆ ನಾಚಿಕೆ ಇಲ್ಲದವನು = shameless.
ನಿಮ್ಮ ಸೂಚನೆಗಳೇನು?

Wednesday, December 1, 2010

ಜೋಡಿ-ಕೊಲೆಗಳ ಸರಣಿ ಹಂತಕ : ಸಂಯುಕ್ತ ಕರ್ನಾಟಕ

ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ಕನ್ನಡದ ಕಗ್ಗೊಲೆಯನ್ನು ಮಾಡುತ್ತಿರುವ ಬಗೆಯನ್ನು ಇಲ್ಲಿ ಹಾಗು ಇಲ್ಲಿ  ಈಗಾಗಲೇ ಗಮನಿಸಿದ್ದೇವೆ. ‘ನಾಯಿಯ ಬಾಲ ಡೊಂಕು’ ಎನ್ನುವಂತೆ ಈ ಪತ್ರಿಕೆಯು ತನ್ನ ಮನೋವಿಕೃತ ಕೊಲೆಗಳ ಸರಣಿಯನ್ನು ಮುಂದುವರಿಸಿದೆ. ಇತ್ತೀಚೆಗೆ ಈ ಭಾಷಾಹನನದ ಹೊಸದೊಂದು ಮಾದರಿಯನ್ನು  ಈ ದಿನಪತ್ರಿಕೆ ಹೊರತಂದಿದೆ. ಈ ಮಾದರಿಯನ್ನು ಜೋಡಿ-ಕೊಲೆ ಎಂದು ಕರೆಯಬಹುದು. ಯಾಕೆಂದರೆ ಈ ಮಾದರಿಯಲ್ಲಿ ಒಂದೇ ಏಟಿಗೆ—ಇಂಗ್ಲಿಶ್ ಹಾಗು ಕನ್ನಡ— ಎರಡೂ ಭಾಷೆಗಳ ಕೊಲೆಗಳನ್ನು ಮಾಡಬಹುದು.
ಈ ಜೋಡಿ-ಕೊಲೆಗಿಂತಲೂ ಮೊದಲು, ಪ್ರತ್ಯೇಕ ಕೊಲೆಗಳ ಉದಾಹರಣೆಗಳನ್ನಷ್ಟು ನೋಡೋಣ:

(೧) ಇಂಗ್ಲಿಶ್ ಭಾಷೆಯ ಕೊಲೆ:
ಆಂಗ್ಲ ಬರಹವು ಕನ್ನಡದಂತೆ ‘ಧ್ವನಿ-ಅನುಕರಣ’ ಬರಹವಲ್ಲ. ಆಂಗ್ಲ ಭಾಷೆಯಲ್ಲಿ ಬರೆಯುವದೇ ಒಂದು, ಉಚ್ಚರಿಸುವದೇ ಒಂದು. ಆದರೆ ಕನ್ನಡ ಬರಹವು ‘ಧ್ವನಿ-ಅನುಕರಣ’ ಅಕ್ಷರಮಾಲೆಯನ್ನು ವಿಕಾಸಗೊಳಿಸಿಕೊಂಡಿದೆ. ಆದುದರಿಂದ ಆಂಗ್ಲ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದದ ಧ್ವನಿಯನ್ನು ಅನುಸರಿಸಿ ಬರೆಯಬೇಕೆ ಹೊರತು ಅಕ್ಷರಗಳನ್ನು ಅನುಸರಿಸಿ ಅಲ್ಲ. ಉದಾಹರಣೆಗೆ psychology ಪದವನ್ನು ಕನ್ನಡದಲ್ಲಿ ‘ಸೈಕಾ‍^ಲೊಜಿ’ ಎಂದು ಬರೆಯಬೇಕೆ ವಿನಃ ‘ಪ್ಸೈಚಾಲೊಗಿ’ ಎಂದಲ್ಲ. ಈಗ ಸಂಯುಕ್ತ ಕರ್ನಾಟಕವು ಮಾಡಿದ ಕೊಲೆಗಳನ್ನಷ್ಟು ಗಮನಿಸೋಣ:

ಭಾರತದಲ್ಲಿ ನಡೆದ ಕಾ‌^ಮನ್ ವೆಲ್ಥ ಸ್ಪರ್ಧೆಗಳಲ್ಲಿ Isle of man ಎನ್ನುವ ಪುಟ್ಟ ದೇಶವೂ ಸಹ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. Isle ಪದವನ್ನು ಆಂಗ್ಲರು ‘ಆಯ್ಲ್’ ಎಂದು ಉಚ್ಚರಿಸುತ್ತಾರೆ, ‘ಇಸ್ಲೆ’ ಎಂದು ಉಚ್ಚರಿಸುವದಿಲ್ಲ. [Isle (=island) ಪದದ ಅರ್ಥವು ‘ದ್ವೀಪ’ ಎಂದಾಗುತ್ತದೆ.] ಆ ದ್ವೀಪವಾಸಿಗಳು ತಮ್ಮ ದ್ವೀಪಕ್ಕೆ ‘ಲ’ಮನ್’ ಎಂದು ಕರೆಯುತ್ತಾರೆ.

ಹೊರಗಿನ ಜಗತ್ತಿನ ಕಡೆಗೆ ಕಣ್ಣು ಹಾಯಿಸದ ಕೂಪಮಂಡೂಕದಂತಹ ಪತ್ರಿಕೆಗೆ ಸರಿಯಾದ ಪದಪ್ರಯೋಗ ಹೇಗೆ ತಿಳಿದೀತು?  ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಈ ಪದವನ್ನು ‘ಇಸ್ಲೆ ಆಫ್ ಮ್ಯಾನ್’ ಎಂದು ಮುದ್ರಿಸಿದ್ದಾರೆ. ಬಹುಶಃ ಆಂಗ್ಲ ದೂರಮುದ್ರಣದ ವರದಿಯನ್ನು  ‘ಸಂ.ಕ.’ ಪತ್ರಿಕೆಯ ಪಂಡಿತರು ಯಥಾವತ್ತಾಗಿ ಕನ್ನಡ ವರ್ಣಮಾಲೆಗೆ ಅಕ್ಷರಾಂತರಿಸಿದ್ದಾರೆ. ಇದನ್ನು ಓದಿದಾಗ ‘ಭಾಷಾಂತರ ಪಾಠಮಾಲೆ’ಯನ್ನು ಓದಿ ಇಂಗ್ಲಿಶ್ ಕಲಿತ ಭಾಷಾಜ್ಞಾನಿಗಳು ಈ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಇರಬಹುದು ಎನ್ನುವ  ಅನುಮಾನ ನನಗೆ  ಬರುತ್ತಿದೆ. ಕೇವಲ ಒಂದು ಸಲವಲ್ಲ ; ಈ ಸ್ಪರ್ಧೆಗಳು ಮುಗಿಯುವವರೆಗೂ ಈ ಆಂಗ್ಲಭಾಷಾಹನನ ನಿರಂತರವಾಗಿ ನಡೆಯಿತು.

ಇದೊಂದೇ ಉದಾಹರಣೆಯಾಗಿದ್ದರೆ ಇದನ್ನು ಕಣ್ತಪ್ಪಿನ ದೋಷವೆಂದು ‘ಕ್ಷಮಿಸಿ’’ ಬಿಡಬಹುದಾಗಿತ್ತು. ಆದರೆ ಈ ಉದಾಹರಣೆಯು ‘ಸರಣಿ ಕೊಲೆ’ಯ ಒಂದು ತುಣುಕು ಮಾತ್ರ. ಈಗ ಇಂತಹ ಇನ್ನೂ ಎರಡು ಕೊಲೆಗಳನ್ನು ಗಮನಿಸೋಣ :

(೧) Dengue : ಈ ಪದವನ್ನು ‘ಡೆಂಗೆ’ ಅಥವಾ ‘ಡೆಂಗೀ’ ಎಂದು ಉಚ್ಚರಿಸುತ್ತಾರೆ. ಆದುದರಿಂದ ಕನ್ನಡದಲ್ಲಿ ಈ ಪದವನ್ನು ಡೆಂಗೆ ಅಥವಾ ಡೆಂಗೀ ಎಂದು ಬರೆಯಬೇಕೆ ಹೊರತು ‘ಡೆಂಗ್ಯೂ’ ಎಂದಲ್ಲ.
(೨) Michelle : ಅಮೇರಿಕದ ಅಧ್ಯಕ್ಷ ಓಬಾಮಾರ  ಹೆಂಡತಿಯನ್ನು, ಅಲ್ಲಿ (ಓಬಾಮಾ ಸೇರಿದಂತೆ) ಎಲ್ಲರೂ ಕರೆಯುವದು ‘ಮಿಶೆಲ್’ ಎಂದು. ‘ಸಂ.ಕ.’ದ ಪಂಡಿತರು ‘ಮಕ್ಕೀ ಕಾ ಮಕ್ಕೀ’ ಅಕ್ಷರಾಂತರ ಮಾಡಿ ‘ಮಿಚೆಲ್ಲೆ’ ಎಂದು ಮುದ್ರಿಸಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ದೇಶಾಭಿಮಾನದಿಂದ ಪ್ರೇರಿತವಾಗಿ, ನಮ್ಮನ್ನಾಳಿದ ಆಂಗ್ಲರ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿಯಾಗಿ ಆಂಗ್ಲ ಭಾಷೆಯ ಕೊಲೆಯನ್ನು ಮಾಡುತ್ತಿದೆ ಎಂದು ಕಲ್ಪಿಸಿಕೊಂಡು ನಾವು ಈ ಸರಣಿ ಕೊಲೆಗಳನ್ನು ಮನ್ನಿಸಿ ಬಿಡಬಹುದೇನೊ! ಆದರೆ, ಇಂಗ್ಲಿಶ್-ಕನ್ನಡ ಭಾಷೆಗಳ ಜೊತೆಜೊತೆಗೆ ಬಂಗಾಲೀ ಭಾಷೆಯನ್ನೂ ಸಹ ಚಿತ್ರಹಿಂಸೆಯ ಮೂಲಕ ಛೇದಿಸುವ ಈ ವಿಧಾನವನ್ನು ನೋಡಿರಿ :

ಮಮತಾ ಬ್ಯಾನರ್ಜಿಯವರು ಕೇಂದ್ರ ಸರಕಾರದ ರೇಲ್ವೇ ಮಂತ್ರಿಗಳು. ಈ ವರ್ಷದ (೨೦೧೦-೧೧ರ) ರೇಲ್ವೇ ಮುಂಗಡಪತ್ರವನ್ನು ಮಂಡಿಸುವಾಗ, ‘ದುರಂತೊ ಎಕ್ಸ್‍ಪ್ರೆಸ್’ ಎನ್ನುವ ಹೊಸ ಪ್ರಸ್ತಾವನೆಯೊಂದನ್ನು ಅವರು ಮಂಡಿಸಿದರು. ಸಂಸ್ಕೃತದ ‘ತುರಂತ’ವು(=urgent, immediate) ಬಂಗಾಲೀ ಬಾಯಿಯಲ್ಲಿ ‘ದುರಂತೊ’ ಆಗುತ್ತದೆ. ಕರ್ನಾಟಕದ ಲೋಕಸಭಾ ಸದಸ್ಯರಾದ ಅನಂತಕುಮಾರರು ‘ದುರಂತ’ ಎಂದರೆ tragedy ಅಲ್ಲವೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಇರಲಿ, ಕನ್ನಡಿಗರ ಹೆಮ್ಮೆಯ(!) ದಿನಪತ್ರಿಕೆ ‘ಸಂಯುಕ್ತ ಕರ್ನಾಟಕ’ವು ರೇಲ್ವೇ ವೇಳಾಪತ್ರಿಕೆಯನ್ನು ತನ್ನ ಪುಟದಲ್ಲಿ ಪ್ರಕಟಿಸುವಾಗ, ಮಮತಾ ಬ್ಯಾನರ್ಜಿ ಉಚ್ಚರಿಸುವಂತೆ ‘ದುರಂತೊ ಎಕ್ಸ್ ಪ್ರೆಸ್’ ಎಂದು ಮುದ್ರಿಸಬೇಕಲ್ಲವೆ? ಇಂಗ್ಲೀಶ್ ವೇಳಾಪತ್ರಿಕೆಯಲ್ಲಿ Duranto Express ಎಂದು ಓದಿದ ‘ಸಂ.ಕ.’ ಪಂಡಿತರು ಇದನ್ನೇ ಕನ್ನಡಕ್ಕೆ ‘ಡುರಾಂಟೊ ಎಕ್ಸ್ ಪ್ರೆಸ್’ ಎಂದು ಅಕ್ಷರಾಂತರಿಸಿದ್ದಾರೆ.

ಇಂಗ್ಲಿಶ್, ಬಂಗಾಲಿ ಹಾಗು ಕನ್ನಡ ಈ ಮೂರೂ ಭಾಷೆಗಳ ಶಿರಚ್ಛೇದನ ಮಾಡುವ ಈ ಪ್ರಯೋಗವನ್ನು ನಾವು ತ್ರಿವಳಿ ಕೊಲೆ ಎಂದು ಕರೆಯಬಹುದು. ಇದು ಸಂಪಾದಕವರ್ಗದ ಅಜ್ಞಾನದಿಂದ ಆದ ಅಪರಾಧ ಎನ್ನುವದು ಮೇಲ್ನೋಟಕ್ಕೇ ಕಾಣುತ್ತದೆ. ಏನಾದರೇನು, ಕೊಲೆಯು ಕೊಲೆಯೇ ಅಲ್ಲವೆ?

ಇದಕ್ಕಿಂತಲೂ ಹೆಚ್ಚಿನದಾದ, ಅಕ್ಷಮ್ಯ ಅಪರಾಧವೊಂದನ್ನು ‘ಸಂ.ಕ.’ ಮಾಡಿದೆ.
ರಬೀಂದ್ರನಾಥ ಠಾಕೂರರ ಬಗೆಗೆ ಅರಿಯದ ಭಾರತೀಯರು ಯಾರಾದರೂ ಇರುವರೆ? ‘ಠಾಕೂರ’ ಎನ್ನಲು ಬಾರದ ಆಂಗ್ಲರು ಅವರನ್ನು ‘ಟ್ಯಾಗೋರ್’ ಎಂದು ಕರೆದರು. ಅವರಂತೆಯೇ ಆಂಗ್ಲವ್ಯಾಮೋಹಿಗಳಾದ ಭಾರತೀಯರೂ ಸಹ ಠಾಕೂರರನ್ನು ಟ್ಯಾಗೋರ್ ಎಂದು ಕರೆಯುತ್ತಾರೆ, ಬರೆಯುತ್ತಾರೆ. ಇದನ್ನೂ ಸಹಿಸೋಣ. ಆದರೆ ಠ್ಯಾಗೂರ್ ಎಂದು ಬರೆದರೆ ಇದು ಎಲ್ಲಿಯ ಹೆಸರು? ಈ ರೀತಿ ಹೆಸರು ಬದಲಾಯಿಸಲು ಇವರಿಗೆ ಅಧಿಕಾರ ಕೊಟ್ಟವರಾರು? ನೋಬೆಲ್ ಬಹುಮಾನ ಪಡೆದ ಮೊದಲ ಭಾರತೀಯನಿಗೆ ಹಾಗು ಏಕೈಕ ಸಾಹಿತಿಗೆ ಇದು ಅವಮಾನವಲ್ಲವೆ? ಸರ್ವಜ್ಞಾನಿಗಳು ಎಂದು ತಮ್ಮ ಡುಬ್ಬವನ್ನು ತಾವೇ ಚಪ್ಪರಿಸಿಕೊಳ್ಳುವ ಇಂತಹ ಪತ್ರಕರ್ತರಿಗೆ ಯಾವ ಸನ್ಮಾನ ಮಾಡಬೇಕು?

ಈ ತಪ್ಪುಗಳು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕವರ್ಗದ ಭಾಷಾ ಅಜ್ಞಾನವನ್ನು ತೋರಿಸುತ್ತಿದೆಯೋ ಅಥವಾ/ಮತ್ತು ಸಾಮಾನ್ಯ ಜ್ಞಾನದ ಅಭಾವವನ್ನು ತೋರಿಸುತ್ತಿದೆಯೋ ತಿಳಿಯದು. ಉದಾಹರಣೆಗೆ, ‘ಫ್ರೆಂಚ’ ಅನ್ನುವ ಪದವು ಭಾಷೆಯನ್ನು  ಹಾಗು ‘ಫ್ರಾನ್ಸ’ ಪದವು ಒಂದು ದೇಶವನ್ನು ಸೂಚಿಸುತ್ತದೆ ಎನ್ನುವದು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಸಹ ತಿಳಿದಿರುವ ವಿಷಯ. ಬಹುಶಃ ಇದು ‘ಸಂ.ಕ.’ದವರಿಗೆ ಗೊತ್ತಿಲ್ಲ. ‘ಫ್ರಾನ್ಸಿನಲ್ಲಿ ಅತ್ಯಾಚಾರ’ ಎನ್ನುವದಕ್ಕೆ ಬದಲಾಗಿ ‘ಫ್ರೆಂಚಲ್ಲಿ ಅತ್ಯಾಚಾರ’ ಎಂದಿದ್ದಾರೆ. ನನಗನಿಸುವ ಮಟ್ಟಿಗೆ ಇದು ‘ಸಂ.ಕ.’ದವರು ಕನ್ನಡದಲ್ಲಿ ಮಾಡುತ್ತಿರುವ ಅತ್ಯಾಚಾರ!


ಪತ್ರಕರ್ತರಿಗೆ ಸಂಸ್ಕೃತ ಬರಬೇಕೆಂದಿಲ್ಲ. ಆದರೆ ಗೊತ್ತಿರದಿದ್ದಾಗ, ಸರಿಯಾದ ಪದಗಳನ್ನು ತಿಳಿದುಕೊಂಡ ಬಳಿಕ ಉಪಯೋಗಿಸಬೇಕು. ‘ಷಷ್ಠಿ’ ಎಂದರೆ ‘ಆರನೆಯದು’ . ‘ಷಷ್ಟಿ’ ಎಂದರೆ ಅರವತ್ತನೆಯದು. ಅರವತ್ತು ತುಂಬಿದ ಸ್ವಾಮಿಗಳು ಈ ಪತ್ರಿಕೆಯ ಕೈಯಲ್ಲಿ ಆರು ತುಂಬಿದ ಬಾಲಕರಾಗಿದ್ದಾರೆ!

ಪುರಂದರ ದಾಸರಂತೂ ಎಲ್ಲರಿಗೂ ಗೊತ್ತು. ಇಲ್ಲಿ ಅವರು ಪುರಂಧರ ದಾಸರಾಗಿದ್ದಾರೆ. ‘ರಾಸ್ತಾ ರೋಕೋ’ ವನ್ನು ‘ರೋಖೋ’ ಮಾಡಿದರೆ ಹೆಚ್ಚಿನ ಜೋರು ಬರುವದೆಂದು ಇವರು ಭಾವಿಸಿದ್ದಾರೆಯೆ?

 ಅಲ್ಪಪ್ರಾಣವಿದ್ದಲ್ಲಿ ಮಹಾಪ್ರಾಣ ಪ್ರಯೋಗ ಮಾಡುವಂತೆಯೇ, ಮಹಾಪ್ರಾಣವನ್ನು ಅಲ್ಪಪ್ರಾಣವನ್ನಾಗಿ ಸಹ ಇವರು ಬದಲಿಸಬಲ್ಲರು. ಉದಾಹರಣೆಗೆ ‘ಅದ್ಧೂರಿ’ ಯಾಕೆ?-- ‘ಅದ್ದೂರಿ’ ಓಕೆ! ಅನ್ನುವದು ಈ ಪತ್ರಿಕೆಯ ಅಭಿಪ್ರಾಯವಾಗಿರಬಹುದು!

ಕೆಲವು ಸಂಸ್ಕೃತ ಪದಗಳು ಕನ್ನಡದಲ್ಲಿ ಚಾಲ್ತಿಯಲ್ಲಿವೆ. ಈ ಪದಗಳ ಅರ್ಥ ಎಲ್ಲರಿಗೂ ಗೊತ್ತು. ಉದಾಹರಣೆಗೆ, ‘ಛದ್ಮವೇಷ’.  ಇದು ಗುರುತು ತಿಳಿಯದಿರಲು ಹಾಕಿಕೊಳ್ಳುವ ವೇಷ (incognito). ಸಾಮಾನ್ಯವಾಗಿ ಪೋಲೀಸ ಪತ್ತೇದಾರರು ಅಪರಾಧಿಗಳ ಪತ್ತೆ ಮಾಡುವಾಗ ಬಳಸುವ ಗುಪ್ತವೇಷ. ಈ ಪದವನ್ನು ಈ ಪತ್ರಿಕೆಯು fancy dress ಅಂದರೆ ‘ವಿನೋದ ವೇಷ’ ಪದಕ್ಕೆ ಪರ್ಯಾಯವಾಗಿ ಬಳಸಿದೆ. ಎಂತಹ ದಡ್ಡತನ!

ನಿರ್ಧಾರ ಎನ್ನುವ ಪದವು ಸಂಸ್ಕೃತದಲ್ಲಿ ಇದೆ. ‘ನಿರ್ಧಾರಣಾ’ ಎನ್ನುವ ಪದವು ಸಂಸ್ಕೃತದಲ್ಲಿ ಇಲ್ಲ. ಒಂದು ವೇಳೆ ಬಳಸಿದರೂ ಸಹ ಅದರ ಅರ್ಥವು decisiveness ಎಂದು ಆಗುವದಿಲ್ಲ, ಧಾರಣಾಶಕ್ತಿಯ ಅಭಾವ ಎಂದಾಗುತ್ತದೆ. ಅರ್ಥಾತ್ ಗಣಪತಿಯ ಮೂರ್ತಿಯನ್ನು ಮಾಡಲು ಹೊರಟವನು ಹನುಮಂತನ ಮೂರ್ತಿಯನ್ನು ಮಾಡಿದಂತಾಗಿದೆ ಈ ಪದಪ್ರಯೋಗ!

ಇನ್ನು ಸಂಸ್ಕೃತ ವ್ಯಾಕರಣ ಗೊತ್ತಿರದಿದ್ದಾಗ , ಸಂಸ್ಕೃತ ವಾಕ್ಯವನ್ನು ತಪ್ಪಾಗಿ ಪ್ರಯೋಗಿಸಬಾರದು ಎನ್ನುವದು ಸಾಮಾನ್ಯ ತಿಳಿವಳಿಕೆಯ ಮಾತು. ‘ಗುರು’ ಎನ್ನುವ ಪ್ರಥಮಾ ವಿಭಕ್ತಿಯ ಪದವು ‘ಗುರುವಿಗೆ’ ಎನ್ನುವ ಚತುರ್ಥಿ ವಿಭಕ್ತಿಯಲ್ಲಿ ಪ್ರಯೋಗಗೊಳ್ಳುವಾಗ ‘ಗುರವೇ’ ಆಗುತ್ತದೆ. ‘ಸಂ.ಕ.’ದ ಸಂಸ್ಕೃತ ಪಂಡಿತರು ಒಂದು ಅಗ್ರಲೇಖನದ ಶೀರ್ಷಿಕೆಗೆ ‘ಗುರುವೆ ನಮಃ’ ಎನ್ನುವ ಪ್ರಯೋಗ ಮಾಡಿದ್ದಾರೆ. ಬಹುಶಃ ಇವರು ಸಂಸ್ಕೃತ ವ್ಯಾಕರಣವನ್ನೇ ತಿದ್ದಲು ಹೊರಟಿದ್ದಾರೆಯೋ?(--ಶಂಕರ ಭಟ್ಟರು ಕನ್ನಡ ಬರಹವನ್ನು ತಿದ್ದಲು ಹೊರಟಂತೆ!--) ಇಂಗ್ಲಿಶ್ ಹಾಗು ಸಂಸ್ಕೃತ ಪದಗಳಿಗಷ್ಟೇ ಈ ಅತ್ಯಾಚಾರ ಸೀಮಿತವಾಗಿಲ್ಲ. ‘ಛೋಟೇ ಮಿಯಾ (छॊटॆ मिया)’ ಎನ್ನುವ ಹಿಂದೀ ಪದವನ್ನು ‘ಛೋಟೆಮೀಯ’ ಎಂದು ಬರೆದು ಕನ್ನಡ, ಹಿಂದೀ ವ್ಯಾಕರಣಗಳ ಮೇಲೆ ಸಹ ಅತ್ಯಾಚಾರ ಮಾಡಿದ್ದಾರೆ!

‘ಸಂ.ಕ.’ದ ಪತ್ರಕರ್ತರು ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸುವ ಶಿಕ್ಷಕರಿಂದ ಶಿಕ್ಷೆ ಪಡೆದಿರಬಹುದೆ? ಈ ಅವಮಾನದ ಸೇಡನ್ನು ಕನ್ನಡ ವ್ಯಾಕರಣದ ಮೇಲೆ ತೀರಿಸಿಕೊಳ್ಳುತ್ತಿರಬಹುದೆ? ಉದಾಹರಣೆಗೆ ಈ ಪ್ರಯೋಗ ನೋಡಿರಿ: ‘ಸೋನಿ +ಇಂದ’ = ‘ಸೋನಿಯಿಂದ’ ಆಗಬೇಕಲ್ಲವೆ? ‘ಸೋನಿದಿಂದ’ ಎಂದರೆ ಏನು? ‘ಥ್ರೀ-ಡಿ’ ಎಂದು ಬರೆಯಬೇಕಾದಲ್ಲಿ ‘ತ್ರೀಡಿ’ ಎನ್ನುವ ಪದವು ಅರ್ಥವನ್ನು ಕೊಡುತ್ತದೆಯೆ?

(೨) ಕನ್ನಡದ ನಿರಂತರ ಕೊಲೆ:
‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಪುಟಗಳಲ್ಲಿ ಕಣ್ಣೋಡಿಸಿದಷ್ಟೂ, ತಪ್ಪುಗಳು ಕಣ್ಣಿಗೆ ಬೀಳುತ್ತವೆ. ಅಲ್ಪಪ್ರಾಣ, ಮಹಾಪ್ರಾಣ ಹಾಗು ವ್ಯಾಕರಣದ ತಪ್ಪುಗಳಂತೂ ಸೈ. ದೀರ್ಘವೂ ಸಹ ಈ ಪತ್ರಿಕೆಗೆ ತ್ಯಾಜ್ಯವಸ್ತುವಾಗಿದೆ. ಇಲ್ಲಿ ನೀಡಿರುವ ಎರಡು ಉದಾಹರಣೆಗಳು  ಸಾಕಲ್ಲವೆ?

ಮನೋವೈಕಲ್ಯದಿಂದ ಸರಣಿ-ಕೊಲೆ ಮಾಡುವ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ. ಭಾಷಾ ಹಂತಕನಿಗೆ ಯಾವ ಶಿಕ್ಷೆ ವಿಧಿಸಬೇಕು?

Thursday, November 25, 2010

ಮಳ್ಳ ಸ್ವಾಮಿ ಹಾಗು ಕಳ್ಳ ಶಿಷ್ಯರು

ಪ್ರಧಾನಿ ಮನಮೋಹನ ಸಿಂಗರನ್ನು ಮಠವೊಂದರ ಮಳ್ಳ ಸ್ವಾಮಿಗಳಿಗೆ ಹಾಗು ಅವರ ಸುತ್ತಲಿನ ರಾಜಕಾರಣಿಗಳನ್ನು ಕಳ್ಳ ಶಿಷ್ಯರಿಗೆ ಹೋಲಿಸಬಹುದೆ? ಮನಮೋಹನ ಸಿಂಗರು ಮಳ್ಳರಿದ್ದಾರೆ ಎಂದಲ್ಲ. ಅವರೂ ಸಹ ಚತುರ ರಾಜಕಾರಣಿಯೇ. ಆಳುವ ಪಕ್ಷಕ್ಕೆ ಗಂಡಾಂತರ ಬಂದಾಗಲೆಲ್ಲ ಅವರು ಆಕ್ರಮಿಕ ಅಥವಾ ನಿಷ್ಕ್ರಮಿಕ ತಂತ್ರಗಳನ್ನು ಪ್ರಯೋಗಿಸಿದ್ದಾರೆ. ಆಕ್ರಮಿಕ ತಂತ್ರವೆಂದರೆ ವಿರೋಧಿಗಳ ಮೇಲೆ ನಡೆಸುವ ಆದಾಯಕರ ಇಲಾಖೆಯ ಅಥವಾ ಕೇಂದ್ರ ಗುಪ್ತಚಾರ ಪಡೆಯ ದಾಳಿಗಳು ; ನಿಷ್ಕ್ರಮಿಕ ತಂತ್ರವೆಂದರೆ ಇಂತಹ ದಾಳಿಗಳನ್ನು ಸ್ಥಗಿತಗೊಳಿಸುವದು. ಅಂತರಂಗದಲ್ಲಿ ಇಷ್ಟೆಲ್ಲಾ ಜಾಣತನವಿದ್ದರೂ ಸಹ, ಬಹಿರಂಗದಲ್ಲಿ ಮನಮೋಹನ ಸಿಂಗರ ಮುಖದ ಮೇಲೆ ಒಂದು ಮಳ್ಳ ಕಳೆ ಕುಣಿದಾಡುತ್ತಿರುತ್ತದೆ.

ಈ ಮಳ್ಳ ಕಳೆಯನ್ನು ಹಾಗು ಅದರ ಹಿಂದೆ ಇರುವ ಕುಟಿಲ ತಂತ್ರಗಳನ್ನು ನೋಡಿದಾಗಲೆಲ್ಲ ನನಗೆ  ದೊಡ್ಡ ಮಠವೊಂದರ ನೆನಪು ಬರುತ್ತದೆ. ಈ ಮಠಕ್ಕೆ ಭಾರೀ ಆಸ್ತಿಯಿದೆ ; ಸಿಕ್ಕಾಪಟ್ಟೆ ಆದಾಯವೂ ಇದೆ. ಈ ಆದಾಯವನ್ನು ಕಬಳಿಸಲೆಂದೇ ಮಠವನ್ನು ಸೇರಿಕೊಂಡ ಶಿಷ್ಯವರ್ಗವಿದೆ. ಮಠದ ಮೊದಲಿನ ಸ್ವಾಮಿಗಳ ದೇಹಾಂತವಾದ ಬಳಿಕ, ಶಿಷ್ಯವರ್ಗವು ಹೊಸ ಸ್ವಾಮಿಯ ಬೇಟೆಯನ್ನು ಪ್ರಾರಂಭಿಸುತ್ತದೆ. ಈ ಶಿಷ್ಯರದು ಒಳ್ಳೆಯ ನಸೀಬು ಎನ್ನಬೇಕು. ದೊಡ್ಡ ದೊಡ್ಡ ಸರಕಾರಿ ಹುದ್ದೆಗಳಲ್ಲಿದ್ದು ನಿವೃತ್ತನಾದ ಪ್ರಾಮಾಣಿಕ ಸದ್ಗೃಹಸ್ಥನೊಬ್ಬ ಇವರ ಕಣ್ಣಿಗೆ ಬೀಳುತ್ತಾನೆ. ಯಾವದೂ ಆಮಿಷಕ್ಕೆ ಬಲಿಯಾಗದೆ ಬಾಳಿದ ಈ ಸಭ್ಯ ವ್ಯಕ್ತಿಗೆ, ಮಠದ ಸ್ವಾಮಿಯಾಗುವ ಆಮಿಷವನ್ನು ತಪ್ಪಿಸಿಕೊಳ್ಳುವದು ಸಾಧ್ಯವಾಗುವದಿಲ್ಲ. ಸರಿ, ಮಠದ ಸ್ವಾಮಿಯಾದ ಮೇಲೆ, ಈ ಪಟ್ಟವನ್ನು ಉಳಿಸಿಕೊಂಡು ಹೋಗಬೇಕಲ್ಲವೆ? ಅಂದ ಮೇಲೆ, ಮಠದ ಆಸ್ತಿಯನ್ನು ಮೇಯುತ್ತಿರುವ  ಶಿಷ್ಯ(ಹೆ)ಗ್ಗಣಕ್ಕೆ ಸ್ವಾಮಿಯು ಮೇವು ಹಾಕುತ್ತಲೇ ಇರಬೇಕು. ‘ಮಠಂ ರಕ್ಷತಿ ರಕ್ಷಿತಮ್.’ (ಮಠವನ್ನು ನೀನು ರಕ್ಷಿಸಿದರೆ, ಮಠವು ನಿನ್ನನ್ನು ರಕ್ಷಿಸುತ್ತದೆ!) ಇದು ಮನಮೋಹನ ಸಿಂಗರ ಧರ್ಮಸೂತ್ರ.
ಇಷ್ಟೇ ಆದರೆ, ‘ಹೋಗಲಿ ಬಿಡಪ್ಪ. ನಮ್ಮ ದೇಶದಲ್ಲಿ ಯಾವ ಸ್ವಾಮಿಗಳು ಶುದ್ಧರಿದ್ದಾರೆ?’ ಎಂದು ಅಂದು ಸುಮ್ಮನಾಗಬಹುದಿತ್ತು. ಆದರೆ ಈ ಸ್ವಾಮಿಗಳಿಗೆ ಜಾಗತಿಕ ಕೀರ್ತಿಯನ್ನು ಗಳಿಸುವ ತೆವಲು. ಅದಕ್ಕಾಗಿಯೇ ಅಮೆರಿಕಾ ಎನ್ನುವ ಮಠವೊಂದರ ಮರ್ಜಿಯನ್ನು ಕಾಯಲು, ಭಕ್ತರ ಲಂಗೋಟಿಯನ್ನೂ ಸಹ ಬಿಚ್ಚಿ, ಅಮೇರಿಕನ್ ಮಠದ ಸ್ವಾಮಿಗಳ ಪಾದಕ್ಕೆ ಹಾಸುತ್ತಿದ್ದಾರೆ. ವಿದೇಶದಲ್ಲಿ ನೆಲೆಸಿರುವ ನಮ್ಮ ಮಠದ ಭಕ್ತರ ಮೇಲೆ ದಾಳಿಗಳಾದಾಗ ಕಣ್ಣು ಮುಚ್ಚಿಕೊಂಡು ತಪಸ್ಸಿಗೆ ಕೂತು ಬಿಡುತ್ತಾರೆ. ನೆರೆಹೊರೆಯ ಮಠಗಳು ಈ ಮಠದ ಜಮೀನನ್ನು ಆಕ್ರಮಿಸಿಕೊಂಡರೆ, ‘ಮನುಜಕುಲಂ ತಾನೊಂದೆ ವಲಮ್!’ ಎಂದು ಶಾಂತಿಮಂತ್ರವನ್ನು ಜಪಿಸುತ್ತಾರೆ.

ಇತ್ತ ಮಠದ ಆಸ್ತಿಯನ್ನು ಮೇಯುತ್ತಿರುವ ಶಿಷ್ಯರಿಗೆ ಇದು ಸಮಾರಾಧನೆಯ ಕಾಲ.
ದಿನದಿನವೂ ಸುಗ್ಗಿ! ದಿನದಿನವೂ ಹುಗ್ಗಿ!!

ಈ ಮಠದ ಆಡಳಿತವನ್ನು ನೋಡಿಕೊಳ್ಳುತ್ತಿರುವ ಸರ್ವಾಧಿಕಾರಿಯೊಬ್ಬಳಿದ್ದಾಳೆ. ಮೊದಲು ತಾನೇ ಮಠದ ಸ್ವಾಮಿಯಾಗುವ ಪ್ರಯತ್ನದಲ್ಲಿದ್ದಳು. ಈಗಲಾದರೋ, ಈ ವ್ಯವಸ್ಥೆಯೇ ಇನ್ನೂ ಉತ್ತಮ ಎನ್ನುವ ಅರಿವಾಗಿದೆ ಇವಳಿಗೆ. ಏನಾದರೂ ಅಪಕೀರ್ತಿ ಬಂದರೆ ಮಠದ ಸ್ವಾಮಿಗೆ ; ಸೌಲಭ್ಯಗಳೆಲ್ಲ ತನಗೆ!
Power and privileges without any responsibility.

ತನ್ನ ಸಂತಾನವೇ ಮುಂದಿನ ಸ್ವಾಮಿಯಾಗಬೇಕೆನ್ನುವ  ಆಸೆ ಇವಳಿಗಿದೆ. ಇದು ಸಹಜವೇ. ಆದರೆ ಈ ಪುತ್ರರತ್ನನಿಗೆ ಸ್ವಪ್ರಕಾಶ ಎನ್ನುವದೇ ಇಲ್ಲ. ಪರಪ್ರಕಾಶದಲ್ಲಿಯೇ ಈತ ಕಂಗೊಳಿಸುತ್ತಿದ್ದಾನೆ. ಈತನಿಗೆ ಪರದೇಶದ (ಗುಪ್ತ)ಸಂಗಾತಿ ಒಬ್ಬಳು ಇರುವಳೆನ್ನುವ ಒಂದು ವದಂತಿಯೂ, ಈತನ ಪಟ್ಟಾಭಿಷೇಕಕ್ಕೆ ದೊಡ್ಡ ಅಡಚಣಿಯಾಗಿದೆ. ‘ಅತ್ತೆ ಇಟಲಿಯವಳು, ಸೊಸೆ ಸ್ಪೇನಿನವಳು’ ಎನ್ನುವ ಅಪಪ್ರಚಾರವು ರಾಜಕೀಯ ಜೀವನಕ್ಕೆ ಮುಳುವಾದೀತೆನ್ನುವ ಹೆದರಿಕೆಯಿಂದ ಈತ ಇನ್ನೂ ಮದುವೆಯಾಗದೇ ಉಳಿದಿರಬಹುದೆ?

ಈ ಸ್ವಾಮಿ ಹಾಗು ಈ ಸರ್ವಾಧಿಕಾರಿಣಿ ಇತ್ತೀಚೆಗೆ ಸಭೆಯೊಂದನ್ನು ನಡೆಯಿಸಿ, ಹೆಚ್ಚುತ್ತಿರುವ ಅಪ್ರಾಮಾಣಿಕತೆಯ ಬಗೆಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ. Best joke of the year!
ಈ ಕಳ್ಳ ಶಿಷ್ಯರಿಗೆಲ್ಲ ಈ ಮಳ್ಳ ಸ್ವಾಮಿಯ ಧರ್ಮಛತ್ರದ ರಕ್ಷಣೆ ಇದೆ.
ಕಳ್ಳ ಶಿಷ್ಯರನ್ನು ಹೇಗಾದರೂ ಓಡಿಸಬಹುದು. ಮಳ್ಳ ಸ್ವಾಮಿಯನ್ನು ಏನು ಮಾಡಬೇಕು?

Sunday, November 7, 2010

ಶಿಶುನಾಳ ಶರೀಫರ..............."ಅಗ್ಗದರವಿ ತಂದು.."

ಭಾರತೀಯರಿಗೆ ತತ್ವಜ್ಞಾನವು ರಕ್ತಗತವಾಗಿ ಬಂದಿದೆ. ಧರ್ಮಗ್ರಂಥಗಳನ್ನು ಓದದೇ ಇರುವ ಭಾರತೀಯರು ಸಹ ಪುನರ್ಜನ್ಮಗಳಲ್ಲಿ ನಂಬಿಕೆ ಇಡುತ್ತಾರೆ. ಭಗವದ್ಗೀತೆಯ ತಿರುಳನ್ನು ಭಾರತೀಯರು ಬಾಲ್ಯಸಂಸ್ಕಾರದ ಮೂಲಕವೇ ಬಲ್ಲರು. ಆ ಗ್ರಂಥದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶದಲ್ಲಿ ಪುನರ್ಜನ್ಮದ ವ್ಯಾಖ್ಯೆ ಈ ರೀತಿಯಾಗಿ ಬಂದಿದೆ:
“ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾ-
ನ್ಯನ್ಯಾನಿ ಸಂಯಾತಿ ನವಾನಿ ದೇಹೀ”
(=ಮನುಷ್ಯರು ಹಳೆಯ ಬಟ್ಟೆಗಳನ್ನು ತೆಗೆದುಬಿಟ್ಟು ಹೊಸ ಬಟ್ಟೆಗಳನ್ನು ತೊಟ್ಟುಕೊಳ್ಳುವಂತೆ, ಜೀವಿಗಳು ಹಳೆಯ ದೇಹವನ್ನು ತ್ಯಜಿಸಿ, ಹೊಸ ದೇಹಗಳನ್ನು ಪಡೆಯುತ್ತಾರೆ.)
ಇದೇ ತತ್ವಜ್ಞಾನವನ್ನು ಶಿಶುನಾಳ ಶರೀಫರು ತಮ್ಮ “ಅಗ್ಗದರವಿ ತಂದು…” ಎನ್ನುವ ಗೀತೆಯಲ್ಲಿ ಸರಳವಾಗಿ ಹಾಡಿದ್ದಾರೆ. ಈ ಗೀತೆಯ ಪೂರ್ಣಪಾಠ ಹೀಗಿದೆ:

ಅಗ್ಗದರವಿ ತಂದು
ಹಿಗ್ಗಿ ಹೊಲಸಿದೆನಂಗಿ
ಹೆಗ್ಗಣ ವೈತವ್ವ ತಂಗೀ ಈ ಅಂಗೀ ||ಪಲ್ಲ||

ಅಗಣಿತ ವಿಷಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿತವ್ವ ತಂಗೀ ಈ ಅಂಗೀ ||೧||

ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ ||೨||

ಕಳೆದೆನೀಪರಿ ರಾತ್ರಿ
ಬೆಳಗಾಗೊ ಸಮಯದಿ
ಚೆಲುವ ಶಿಶುನಾಳಾಧೀಶ-
ನುಳುವಿ ಕೊಟ್ಟಾನವ್ವ ತಂಗೀ ಈ ಅಂಗೀ ||೩||

ಈ ಗೀತೆಯ ಪಲ್ಲವನ್ನು ಗಮನಿಸೋಣ :
ಅಗ್ಗದರವಿ ತಂದು
ಹಿಗ್ಗಿ ಹೊಲಸಿದೆನಂಗಿ
ಹೆಗ್ಗಣ ವೈತವ್ವ ತಂಗೀ ಈ ಅಂಗೀ||ಪಲ್ಲ||

ಶರೀಫರು ಹೊಸದೊಂದು ಜನ್ಮ ಪಡೆಯುವದನ್ನು ಹೊಸ ಅಂಗಿಯನ್ನು ಹೊಲೆಯಿಸಿಕೊಳ್ಳುವದಕ್ಕೆ ಹೋಲಿಸುತ್ತಿದ್ದಾರೆ. ಆದರೆ ಈ ಹೊಸ ಅಂಗಿಗಾಗಿ ಅವರು ಉತ್ತಮ ಬಟ್ಟೆಯನ್ನು ಖರೀದಿಸಿಲ್ಲ. ಅಗ್ಗದ ಅರವಿಯನ್ನು ತಂದಿದ್ದಾರೆ. ಅಗ್ಗದ ಬಟ್ಟೆ ಎಂದರೇನು? ಅಗ್ಗದ ಬಟ್ಟೆ ಒರಟು ಒರಟಾಗಿರುತ್ತದೆ ; ಇದಕ್ಕೆ ಒಳ್ಳೆಯ ಗುಣಗಳು ಇರುವದಿಲ್ಲ. ಬಟ್ಟೆಗೆ ಒಳ್ಳೆಯ ಗುಣಗಳು ಬರಬೇಕಾದರೆ, ಆ ಬಟ್ಟೆಯನ್ನು ಸರಿಯಾಗಿ ಸಂಸ್ಕರಿಸಬೇಕಾಗುತ್ತದೆ.  ಅದರಂತೆ ಒಳ್ಳೆಯ ಜನäವನ್ನು ಪಡೆಯಲು ಒಳ್ಳೆಯ ಸಂಸ್ಕಾರ, ಒಳ್ಳೆಯ ಕರ್ಮಗಳ ನೆರವು ಬೇಕಾಗುತ್ತದೆ. ಆದರೆ ಅರಿವೆ ಎಂತಹದೇ ಇರಲಿ, ಹೊಸ ಅಂಗಿ ತೊಡುವದೇ ಹುರುಪಿನ ವಿಷಯವಾಗಿರುತ್ತದೆ. ಹಳೆಯ ಜನä ತ್ಯಜಿಸಿದ ಆತ್ಮವು ಹೊಸ ಜನäಕ್ಕಾಗಿ ಮಿಡುಕಾಡುತ್ತಲೇ ಇರುತ್ತದೆ. ತನ್ನ ಪೂರ್ವಕರ್ಮಗಳಿಗೆ ಹಾಗು ಪೂರ್ವಸಂಸ್ಕಾರಗಳಿಗೆ ತಕ್ಕಂತಹ ಹೊಸ ಜನä ದೊರೆತ ತಕ್ಷಣ ಅದು ಹಿಗ್ಗುತ್ತದೆ. ಇದನ್ನೇ ಶರೀಫರು ಹೊಸದಾದ ಅಂಗಿಯನ್ನು ಹಿಗ್ಗಿನಿಂದ ಹೊಲಿಸಿದೆ ಎಂದು ಹೇಳುತ್ತಾರೆ.

ಶರೀಫರೇನೊ ತಮ್ಮ ಕರ್ಮಗಳಿಗೆ ಹಾಗು ಸಂಸ್ಕಾರಕ್ಕೆ ಅನುಗುಣವಾದ ಅಗ್ಗದ ಅರಿವೆಯನ್ನು ಪಡೆದುಕೊಂಡರು. ದೈವವು ಅವರಿಗೆ ಹೊಸ ಅಂಗಿಯನ್ನು ಹೊಲೆದು ಕೊಟ್ಟಾಗ, ಶರೀಫರು ಹಿಗ್ಗಿದರು. ಆದರೆ ಈ ಅಂಗಿಯನ್ನು ಜೋಪಾನವಾಗಿ ಇಟ್ಟುಕೊಳ್ಳಲು ಅವರಿಂದ ಆಗಲಿಲ್ಲ. ಈ ಅಂಗಿಯನ್ನು ಹೆಗ್ಗಣವೊಂದು ಒಯ್ದು ಬಿಟ್ಟಿತಂತೆ. ಹೆಗ್ಗಣವು ಬಹಳ ಚಾಲಾಕು ಪ್ರಾಣಿ. ರಾತ್ರಿಯ ಸಮಯದಲ್ಲಿ ಯಜಮಾನನು ನಿದ್ರೆಯಲ್ಲಿರುವಾಗ ಹೆಗ್ಗಣವು ಮನೆಯ ಗೋಡೆಗೆ ಕನ್ನ ಹಾಕಿ, ಮನೆಯಲ್ಲಿಟ್ಟ ಪದಾರ್ಥಗಳನ್ನು ಹಾಳು ಮಾಡುವದು. ಹೆಗ್ಗಣದ ಉಪದ್ರವ ತಪ್ಪಿಸಬೇಕಾದರೆ, ಯಜಮಾನನು ತನ್ನ ಮನೆಯನ್ನು ಭದ್ರವಾಗಿಟ್ಟುಕೊಳ್ಳಬೇಕು. ಹೆಗ್ಗಣವು ಗುದ್ದು ತೋಡಿ ಒಳಗೆ ಬರದಂತೆ ಕಾಯಬೇಕು. ಅಂದರೆ ಮಾತ್ರ ಆತನು ತನ್ನ ಪ್ರೀತಿಯ ಅಂಗಿಯನ್ನು ಕಾಯಬಲ್ಲನು.

ಇದು ಯಾವ ಹೆಗ್ಗಣ? ಬಲಿಷ್ಠವಾದ ಅರಿಷಡ್ವರ್ಗಗಳ ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗು ಮತ್ಸರಗಳ ಸಮೂಹಕ್ಕೆ ಶರೀಫರು ಹೆಗ್ಗಣ ಎಂದು ಕರೆಯುತ್ತಾರೆ. ಮನಸ್ಸು ಎನ್ನುವ ಮನೆಗೆ ಈ ಅರಿಷಡ್ವರ್ಗಗಳು ಕಳ್ಳತನದಿಂದ ಕನ್ನ ಕೊರೆಯುತ್ತವೆ. ಆಗ ಮನಸ್ಸಿನಲ್ಲಿಯ ಒಳ್ಳೆಯ ಗುಣಗಳು ಹಾಗು ಉತ್ತಮ ಸಂಸ್ಕಾರಗಳು ನಾಶವಾಗುತ್ತವೆ. ನೀಚ ಕರ್ಮಗಳು ಘಟಿಸುತ್ತವೆ. ಈ ಜನ್ಮವೆಂಬ ಅಂಗಿಯನ್ನು ಈ ಅರಿಷಡ್ವರ್ಗಗಳು ಹೊತ್ತೊಯ್ದು ಹಾಳು ಮಾಡುತ್ತವೆ. ಹಾಲು ಉಕ್ಕಿದ ಮೇಲೆ ಹಳಹಳಸಿದಂತೆ, ‘ಹೆಗ್ಗಣವು ಈ ಅಂಗಿಯನ್ನು ಒಯ್ದಿತಲ್ಲ’ ಎಂದು ಶರೀಫರು ವ್ಯಥೆ ಪಡುತ್ತಾರೆ.ಇದೇ ಮಾತನ್ನು ಪುರಂದರದಾಸರೂ ಸಹ ಹೀಗೆ ಹೇಳಿದ್ದಾರೆ :
 “ಮಾನವ ಜನ್ಮ ಬಲು ದೊಡ್ಡದು
ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ!”

ಮೊದಲನೆಯ ನುಡಿ ಹೀಗಿದೆ:
ಅಗಣಿತ ವಿಷಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿತವ್ವ ತಂಗೀ ಈ ಅಂಗೀ||೧||

ಆರು ಗೇಣಿನ ಕವಚ ಎಂದರೆ ಸ್ಥೂಲ ದೇಹ. ಈ ಸ್ಥೂಲ ದೇಹಕ್ಕೆ ಸುಖ ಕೊಡುವ ವಿಷಯಗಳನ್ನಷ್ಟೇ ಮಾನವನು ಬಯಸುತ್ತಾನೆ. ಉದಾಹರಣೆಗೆ ಪರಿಶ್ರಮದಿಂದ ದುಡಿದು ತಿನ್ನುವದು ಮನುಷ್ಯನಿಗೆ ಬೇಡ. ಸೋಮಾರಿತನವೇ ಆತನ ದೇಹಕ್ಕೆ ಸುಖ ನೀಡುತ್ತದೆ. ಮಾದಕ ಪದಾರ್ಥಗಳ ಸೇವನೆಯು ಕೆಟ್ಟದ್ದೆಂದು ಗೊತ್ತಿದ್ದರೂ ಸಹ ದೇಹವು ಅದನ್ನು ಬಯಸುತ್ತದೆ. ಲೆಕ್ಕವಿಲ್ಲದಷ್ಟಿರುವ ಇಂತಹ ದೈಹಿಕ ಬಯಕೆಗಳಿಗೆ ಶರೀಫರು ‘ಅಗಣಿತ ವಿಷಯ’ ಎನ್ನುತ್ತಾರೆ. ಕೇವಲ ವಿಷಯಸುಖಕ್ಕೇ ಮನಸ್ಸು ನೀಡಿದರೆ, ಅದು ದೇಹವನ್ನು ಬೇಕಾರ ಮಾಡುತ್ತದೆ. ಶರೀಫರು ಅದನ್ನು ಬಗಲಿನಿಂದ ಬರುವ ಬೆವರಿಗೆ ಹೋಲಿಸುತ್ತಾರೆ. ಈ ಬಗಲ ಬೆವರು ಅರ್ಥಾತ್ ಕೊಳೆಯಾದ ಬಯಕೆಗಳು ಈ ಅಂಗಿಯನ್ನು ಕಡಿದು ಹಾಕುತ್ತವೆ. ನಮಗೆ ದೊರೆತ ಅಂಗಿಯ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೇ ನಾವು ‘ಸಿಗದೇ ಹೋಯಿತವ್ವ ತಂಗೀ’ ಎಂದು ವ್ಯಥೆ ಪಡಬೇಕಾಗುತ್ತದೆ.

ಎರಡನೆಯ ನುಡಿ ಹೀಗಿದೆ :
ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ ||೨||

ಈ ರೀತಿಯಾಗಿ ಜೀವಿಯು ಪ್ರಾಪಂಚಿಕ ವಿಷಯಸುಖಗಳಲ್ಲೇ  ಮಗ್ನವಾದಂತಹ ಕಾಲವನ್ನು  ರಾತ್ರಿಗೆ ಹೋಲಿಸಲಾಗುತ್ತದೆ. ಬುದ್ಧಿವಂತ ಮಾನವನು ರಾತ್ರಿಯಲ್ಲಿ ನಿದ್ರಿಸಬೇಕು ಎಂದು ಶರೀಫರು ಹೇಳುತ್ತಾರೆ. ಇದರರ್ಥವೆಂದರೆ ಮಾನವನು ಪ್ರಾಪಂಚಿಕ ಸುಖಗಳನ್ನು ಬಯಸಬಾರದು. ಆದರೆ ಇದಕ್ಕೆ ವಿಪರೀತವಾಗಿ, ಬುದ್ಧಿಗೇಡಿ ಮಾನವನು ರಾತ್ರಿಯ ವ್ಯವಹಾರಗಳಲ್ಲಿ ಮುಳುಗುತ್ತಾನೆ.  ನಿದ್ರೆಯನ್ನು ಕೆಡಸಿಕೊಳ್ಳುತ್ತಾನೆ. ಅಂದರೆ ಆಧ್ಯಾತ್ಮಿಕ ವ್ಯವಹಾರದ ಬದಲಾಗಿ ಪ್ರಾಪಂಚಿಕ ವ್ಯವಹಾರದಲ್ಲಿ ಮುಳುಗುತ್ತಾನೆ.  ಬೆಳಗಾದ ಬಳಿಕ ಅಂದರೆ ಹೊಸ ಜನ್ಮ ಪಡೆಯುವ ಸಮಯದಲ್ಲಿ, ಅವನಿಗೆ ತನ್ನ ಕರ್ಮಫಲ ಕಾಣಿಸುವದಿಲ್ಲ. ಅದು ಅವನ ಮನೆಯ ಮೂಲೆಯಲ್ಲಿ ಗುದ್ದು ಮಾಡಿಕೊಂಡು, ಅಡಗಿಕೊಂಡು ಕೂತಿರುತ್ತದೆ. ಆತನು ಹೊಸ ಜನ್ಮವನ್ನು ಪಡೆಯಲು ಸಿದ್ಧನಾದಾಗ, ಅವನ ಪೂರ್ವಜನ್ಮದ ಈ ಕರ್ಮವು ಆತನನ್ನು ಬೆಂಬತ್ತಿ ಬರುತ್ತದೆ. (ಈ ಕರ್ಮಕ್ಕೆ ‘ಪ್ರಾರಬ್ಧ ಕರ್ಮವೆನ್ನುತ್ತಾರೆ.)
ಈ ಕರ್ಮಬಂಧನದ ಚಕ್ರದಿಂದ ಬಿಡುಗಡೆ ಇಲ್ಲವೆ? ಇದಕ್ಕೆ ಉತ್ತರ ಕೊನೆಯ ನುಡಿಯಲ್ಲಿದೆ.
ಕಳೆದೆನೀಪರಿ ರಾತ್ರಿ
ಬೆಳಗಾಗೊ ಸಮಯದಿ
ಚೆಲುವ ಶಿಶುನಾಳಾಧೀಶ-
ನುಳುವಿ ಕೊಟ್ಟಾನವ್ವ ತಂಗೀ ಈ ಅಂಗೀ||೩||

ಕೇವಲ ಒಂದು ಜನ್ಮದಲ್ಲಿ ಅಲ್ಲ, ಇಂತಹ ಅನೇಕ ಜನ್ಮಗಳಲ್ಲಿ ಪ್ರಾಪಂಚಿಕ ಆಮಿಷಗಳಿಗೆ ಕೆಲವೊಮ್ಮೆ ಬಲಿಯಾಗುತ್ತ, ಕೆಲವೊಮ್ಮೆ ಈ ಆಮಿಷಗಳ ವಿರುದ್ಧ ಹೋರಾಡುತ್ತ ಶರೀಫರು ರಾತ್ರಿ  ಎನ್ನುವ (=ಪ್ರಪಂಚದಲ್ಲಿ ಇರುವ ) ಅವಧಿಯನ್ನು ಕಳೆದಿದ್ದಾರೆ. ಈ ಹೋರಾಟದ ಫಲವಾಗಿ, ಈಗ ಪರಮಾತ್ಮನ ಅನುಗ್ರಹವಾಗುವ ಸಮಯ ಬಂದಿದೆ. ಇಂತಹ ಅನುಗ್ರಹ ಮಾಡುವ ಪರಮಾತ್ಮನು ನಿಷ್ಕಲಂಕನಾದವನು, ಹೀಗಾಗಿ ಆತನಲ್ಲಿ ದಿವ್ಯ ಸೌಂದರ್ಯವಿದೆ. ಆದುದರಿಂದಲೇ ಆತನು ‘ಚೆಲುವ’ನು. ಇಂತಹ ಚೆಲುವ ಶಿಶುನಾಳಾಧೀಶನು ಶರೀಫರ ಶ್ರದ್ಧೆಯಿಂದ ಪ್ರೀತನಾಗಿ ಅವರಿಗೆ ಅನುಗ್ರಹಿಸಿದ್ದಾನೆ. ಅವರಿಗೆ ಲಭ್ಯವಾದ ಈ ಅಂಗಿಯು (=ಜನ್ಮವು) ಹಾಳಾಗದಂತೆ ಅದನ್ನು ಅವರಿಗೆ ಪರಮಾತ್ಮನು ಉಳುವಿ (=ಉಳಿಸಿ) ಕೊಟ್ಟಿದ್ದಾನೆ. ಈ ಅಂಗಿಯು ವಿಕಾರಗಳಿಂದ ಕೂಡಿದ ಸ್ಥೂಲ ಶರೀರವಲ್ಲ. ಅರಿಷಡ್ವರ್ಗಗಳೆನ್ನುವ ಹೆಗ್ಗಣದಿಂದ ಬಾಧೆ ಪಡುತ್ತಿರುವ ಶರೀರವಲ್ಲ. ಪರಮಾತ್ಮನಲ್ಲಿಯೇ ಮಗ್ನವಾದ ಸೂಕ್ಷ ಶರೀರವಿದು.

ಶರೀಫರ ಗೀತೆಗಳ ವೈಶಿಷ್ಟ್ಯ:
ಶರೀಫರ ಅನೇಕ ಗೀತೆಗಳು ಒಂದು ಭೌತಿಕ ದೃಶ್ಯದ ವರ್ಣನೆಯೊಂದಿಗೆ ಪ್ರಾರಂಭವಾಗುತ್ತವೆ. ‘ಗಿರಣಿ ವಿಸ್ತಾರ ನೋಡಮ್ಮ’, ‘ಬಿದ್ದೀಯಬೆ ಮುದುಕಿ’, ‘ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ’, ‘ತೋಟವ ನೋಡಿದ್ಯಾ’ ಹಾಗು ‘ಅಗ್ಗದರವಿ ತಂದು’ ಮೊದಲಾದ ಗೀತೆಗಳು ಈ ವರ್ಗಕ್ಕೆ ಸೇರಿದವು. ಗೀತೆ ಮುಂದುವರಿದಂತೆ ಭೌತಿಕ ವರ್ಣನೆಯು ಪಾರಭೌತಿಕ ವರ್ಣನೆಯಲ್ಲಿ ಬದಲಾಗುತ್ತದೆ.

ಶರೀಫರ ಗೀತೆಗಳ ಮತ್ತೊಂದು ವೈಶಿಷ್ಟ್ಯವೆಂದರೆ ಗ್ರಾಮೀಣ ಪದಗಳ ಬಳಕೆ. ಉಚ್ಚತಮ ತತ್ವಜ್ಞಾನವನ್ನೂ ಸಹ ಶರೀಫರು ಹಳ್ಳಿಯ ದಿನಬಳಕೆಯ ಪದಗಳಲ್ಲಿಯೇ ಹೇಳುತ್ತಾರೆ. ಹೀಗಾಗಿ ಈ ತತ್ವಜ್ಞಾನವು ಕೇಳುಗರ ಮನಸ್ಸನ್ನು ನೇರವಾಗಿ ಪ್ರವೇಶಿಸುತ್ತದೆ ಹಾಗು ಗಾಢ ಪರಿಣಾಮವನ್ನು ಮಾಡುತ್ತದೆ.

ಮೂರನೆಯದಾಗಿ ಶರೀಫರು ತಮ್ಮ ಅನೇಕ ಗೀತೆಗಳಲ್ಲಿ ‘ತಂಗಿ’ ಎಂದು ಸಂಬೋಧಿಸಿರುವದನ್ನು ಕಾಣಬಹುದು. ಇದರ ಕಾರಣಗಳನ್ನು ಹೀಗೆ ಊಹಿಸಬಹುದು:
ಗಂಡಸರಿಗಿಂತ ಹೆಣ್ಣು ಮಕ್ಕಳಿಗೆ ಪ್ರಪಂಚದ ಜೊಂಜಾಟ, ವ್ಯಾಪ ಜಾಸ್ತಿಯಾಗಿರುತ್ತದೆ. ಆದರೂ ಸಹ ದೈವಿಕತೆಯ ಬಗೆಗಿನ ಒಲವು ಗಂಡಸರಿಗಿಂತ ಹೆಣ್ಣುಮಕ್ಕಳಲ್ಲಿಯೇ ಜಾಸ್ತಿ. ಅಲ್ಲದೆ ಅಣ್ಣ ಹಾಗು ತಂಗಿಯರಲ್ಲಿ ಇರುವ ಸತ್ತೆ ಹಾಗು ಅಕ್ಕರೆ ಇತರರಲ್ಲಿ ಕಂಡು ಬರುವದಿಲ್ಲ. ಆದುದರಿಂದ ಶರೀಫರು ತತ್ವಬೋಧನೆಯ ಪದಗಳನ್ನು ‘ತಂಗಿ’ಗೆ ಸಂಬೋಧಿಸಿ ಹಾಡಿದ್ದಾರೆ.

(ಟಿಪ್ಪಣಿ: ಈ ಗೀತೆಯ ವ್ಯಾಖ್ಯಾನ ಬರೆಯುವಾಗ ಸಲಹೆ, ಸೂಚನೆ ನೀಡಿದ ನನ್ನ ಅರ್ಧಾ೦ಗಿನಿ ಶ್ರೀಮತಿ ವನಮಾಲಾ ಇವರಿಗೆ ನಾನು ಕೃತಜ್ಞನಾಗಿದ್ದೇನೆ.)

Tuesday, October 26, 2010

ಬೇಂದ್ರೆಯವರ ‘ದೀಪ’

ಬೇಂದ್ರೆಯವರಿಗೆ ಪ್ರಣಯವು ಒಂದು ವೈಯಕ್ತಿಕ ಕಾಮನೆಯಲ್ಲ. ಇದೊಂದು ವಿಶ್ವಲೀಲೆ. ಅವರ ಅನೇಕ ಪ್ರಣಯಗೀತೆಗಳು ವಿಶ್ವಪ್ರಣಯವನ್ನು ತೋರಿಸುವ ಗೀತೆಗಳೇ ಆಗಿವೆ. ಅವರ ಸುಪ್ರಸಿದ್ಧ ಗೀತೆಯಾದ ‘ಅನಂತ ಪ್ರಣಯ’ವು (‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ….’) ವಿಶ್ವದ ಅಂತರಂಗದಲ್ಲಿ ಚಿಮ್ಮುತ್ತಿರುವ ಪ್ರಣಯವನ್ನು ತೋರಿಸುತ್ತದೆ. ಅವರ ‘ಕಾಮಕಸ್ತೂರಿ’ ಕವನಸಂಕಲನದಲ್ಲಿ ಇರುವ ‘ನನ್ನವಳು’ ಕವನವಂತೂ ಸಮಗ್ರ ಜಗತ್ತಿನ ಶ್ರೇಷ್ಠ ಪ್ರಣಯಕವನಗಳಲ್ಲಿ ಒಂದಾಗಿದೆ. ಈ ಕವನದಲ್ಲಿ ನಿಸರ್ಗದ ದೈನಂದಿನ ಬದಲಾವಣೆಗಳಾದ ಹಗಲು,ಸಂಜೆ ಹಾಗು ಇರುಳುಗಳ ಜೊತೆಗೆ ತನ್ನ ಕೆಳದಿಯನ್ನು ಸಮೀಕರಿಸಿ ಬೇಂದ್ರೆಯವರು ಹಾಡಿದ್ದಾರೆ. ತಮ್ಮ ವೈಯಕ್ತಿಕ ಪ್ರಣಯವನ್ನು ವಿಶ್ವಪ್ರಣಯದೊಂದಿಗೆ ಸಮೀಕರಿಸಿ ಅವರು ಹಾಡಿದ ಮತ್ತೊಂದು ಕವನವೆಂದರೆ ‘ದೀಪ’. ಈ ಕವನವು ‘ನಾದಲೀಲೆ’ ಸಂಕಲನದಲ್ಲಿದೆ. ಈ ಕವನದ ಪೂರ್ತಿಪಾಠ ಹೀಗಿದೆ:

                                    ಬಂತಿದೊ ಶೃಂಗಾರಮಾಸ
                                    ಕಂತು ನಕ್ಕ ಚಂದ್ರಹಾಸ
                                    ಎಂತು ತುಂಬಿತಾsಕಾಶ
                                                ಕಂಡವರನು ಹರಸಲು.

                                    ಕಿರಿಬೆರಳಲಿ ಬೆಳ್ಳಿಹರಳು
                                    ಕರಿಕುರುಳೊಳು ಚಿಕ್ಕೆ ಅರಳು
                                    ತೆರಳಿದಳಿದೊ ತರಳೆ ಇರುಳು
                                                 ತನ್ನರಸನನರಸಲು.

                                    ಗಂಗೆ ಯಮುನೆ ಕೂಡಿ ಹರಿದು
                                    ಸಂಗಮ ಜಲ ಬಿಳಿದು ಕರಿದು
                                    ತಿಂಗಳ ನಗೆ ಮೇರೆವರಿದು
                                                ಬೇರೆ ಮಿರುಗು ನೀರಿಗು.

                                    ಪಂಥದಿಂದ ಮನೆಯ ತೊರೆದು
                                    ಪಾಂಥ ನೆನೆದನತ್ತು ಕರೆದು :
                                    ಇಂಥ ಸಮಯ ಬೇರೆ ಬರದು
                                                 ದಂಪತಿಗಳಿಗಾರಿಗು !

                                    ನಾನು ನೀನು ಜೊತೆಗೆಬಂದು
                                    ಈ ನದಿಗಳ ತಡಿಗೆ ನಿಂದು
                                    ಸಾನುರಾಗದಿಂದ ಇಂದು
                                                 ದೀಪ ತೇಲಿಬಿಟ್ಟೆವೇ—
                                                ದೀಪ ತೇಲಿ ಬಿಟ್ಟೆವು.

ಬ್ರಾಹ್ಮೀ ಮುಹೂರ್ತದಲ್ಲಿ ನದಿಯಲ್ಲಿ ದೀಪಗಳನ್ನು ತೇಲಿ ಬಿಡುವದು ಧಾರಿäಕ ವಿಧಿಯ ಒಂದು ಭಾಗವಾಗಿದೆ. ಬೇಂದ್ರೆಯವರು ತಮ್ಮ ಹೆಂಡತಿಯೊಡನೆ ಪ್ರಯಾಗಕ್ಕೆ ಹೋದಾಗ ಅಲ್ಲಿ ಗಂಗಾ ಹಾಗು ಯಮುನಾ ನದಿಗಳ ಸಂಗಮದಲ್ಲಿ ದೀಪವನ್ನು ತೇಲಿ ಬಿಡುತ್ತಾರೆ. ಇದು ಈ ಕವನದ ಸಂದರã. ಗಂಡ,ಹೆಂಡತಿಯರು ಜೊತೆಯಾಗಿ ಯಾವುದೇ ಕಾರåವನ್ನು ಮಾಡಲಿ, ಆ ಸಂದರãವು ಅವರಿಗೆ ಸಹಜವಾಗಿಯೇ ಪ್ರೇಮಭಾವದ ಉದ್ದೀಪನದ ಕಾರಣವೂ ಆಗಬಲ್ಲದು.  ಇನ್ನೂ ನಸುಗತ್ತಲೆ ಇರುವ ಸಮಯದಲ್ಲಿ ಬೇಂದ್ರೆ ದಂಪತಿಗಳು ಒಂದು ಧಾರಿäಕ ವಿಧಿಯನ್ನು ನೆರವೇರಿಸಲು ಜೊತೆಯಾಗಿ ನದಿಯ ದಂಡೆಗೆ ಬಂದಿದ್ದಾರೆ. ಬೆಳದಿಂಗಳು ಇನ್ನೂ ತನ್ನ ಪೂರÚ ಪ್ರಭೆಯಲ್ಲಿದೆ. ನದಿಯಲ್ಲಿ ತೇಲುತ್ತಿರುವ ದೀಪಗಳು ಭಾವೋದ್ದೀಪನವನ್ನು ಮಾಡುತ್ತಿವೆ. ಹೀಗಾಗಿ ಜೊತೆಯಾಗಿರುವ ದಂಪತಿಗಳಿಗೆ ಇದು ಶೃಂಗಾರಮಾಸದಂತೆ ಭಾಸವಾದರೆ ಆಶÑåವಿಲ್ಲ. ಕವಿಯಲ್ಲಿ ಮೂಡಿದ ಆ ಭಾವನೆಯ ಫಲವೇ ಈ ಕವನ : ಶೃಂಗಾರ ಮಾಸ’. ಆದರೆ ಬೇಂದ್ರೆಯವರು ‘ಶೃಂಗಾರಮಾಸ’ವನ್ನು ಕೇವಲ ರೂಪಕವಾಗಿ ಬಳಸುತ್ತಿಲ್ಲ. ಋತುಮಾನವನ್ನು ಸೂಚಿಸಲೂ ಸಹ ಅವರು ಈ ಪದವನ್ನು ಪ್ರಯೋಗಿಸಿದ್ದಾರೆ. ‘ಶೃಂಗಾರಮಾಸ’ ಎಂದರೆ ಚೈತ್ರಮಾಸ. ವಸಂತ ಋತುವಿನ ಮೊದಲ ಮಾಸವಾದ ಚೈತ್ರದಲ್ಲಿಯೇ, ನಿಸರÎವು ತನ್ನನ್ನು ಹೂವುಗಳಿಂದ ಸಿಂಗರಿಸಿಕೊಳ್ಳುವದು ಹಾಗು ಫಲವತಿಯಾಗಲು ಕಾಯುವದು.
(ಬೇಂದ್ರೆಯವರ ಮತ್ತೊಂದು ಕವನವಾದ ‘ಯುಗಾದಿ’ಯಲ್ಲಿಯೂ ಸಹ ಇದೇ ಧ್ವನಿಯಿದೆ :
“ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.”)
ಆದುದರಿಂದ ಶೃಂಗಾರಮಾಸವೆಂದರೆ ಚೈತ್ರಮಾಸದ ಕಾಲ. ಮುಂದಿನ ಸಾಲುಗಳಲ್ಲಿ ಬೇಂದ್ರೆಯವರು ಇನ್ನೂ ನಿರಿÝಷ್ಟವಾದ ಕಾಲಸೂಚನೆಗಳನ್ನು ನೀಡುತ್ತಾರೆ. ಮೊದಲ ನುಡಿಯನ್ನು ಎಳೆಎಳೆಯಾಗಿ ಪರೀಕ್ಷಿಸಿದಾಗ ಈ ಸೂಚನೆಗಳು ಹೊಳೆಯುವವು:
                        ಬಂತಿದೊ ಶೃಂಗಾರಮಾಸ
                        ಕಂತು ನಕ್ಕ ಚಂದ್ರಹಾಸ
                        ಎಂತು ತುಂಬಿತಾsಕಾಶ
                                ಕಂಡವರನು ಹರಸಲು.

ಕಂತುವದು ಎಂದರೆ ಮುಳುಗುವದು. ‘ಕಂತು ನಕ್ಕ ಚಂದ್ರಹಾಸ’ ಎಂದರೆ, ಮುಳುಗುತ್ತಿರುವ ಚಂದ್ರ. ಬೆಳದಿಂಗಳು ಆಕಾಶವನ್ನೆಲ್ಲ ತುಂಬಿಕೊಂಡಾಗ, ಚಂದ್ರನು ಮುಳುಗುತ್ತಿದ್ದಾನೆ ಎಂದರೆ ಇದು ಹುಣ್ಣಿವೆಯ ದಿನ ಹಾಗೂ ಈ ಸಮಯವು ಸೂರೋåದಯಕ್ಕಿಂತ ಮೊದಲಿನ ಸಮಯ. ಆದುದರಿಂದ ಬೇಂದ್ರೆಯವರು ಚೈತ್ರಪೂರಿÚಮೆಯಂದು ಇರುಳಿನ ಕೊನೆಯ ಜಾವದಲ್ಲಿ ದೀಪಗಳನ್ನು ತೇಲಿಬಿಡಲು ಅಲ್ಲಿ ತೆರಳಿದ್ದರು ಎಂದು ಸೂಚಿಸುತ್ತಿದ್ದಾರೆ. ಇದು ಪೂರಿÚಮೆಯ ದಿನವಾದದ್ದರಿಂದಲೇ ಆಕಾಶವೆಲ್ಲ ಬೆಳದಿಂಗಳಿನಿಂದ ತುಂಬಿದೆ. ಅದನ್ನೇ ಬೇಂದ್ರೆಯವರು ‘ಎಂತು ತುಂಬಿತಾsಕಾಶ’ ಎಂದು ಹಾಡಿದ್ದಾರೆ. ಶೃಂಗಾರಮಾಸದ ವರÚನೆಯನ್ನು ಪರಿಪೂರÚಗೊಳಿಸುತ್ತಲೇ, ಬೇಂದ್ರೆಯವರು ಕಾಲವನ್ನು ಸೂಚಿಸುವ ಪರಿ ಇದು.

 ‘ಕಂತು’ ಪದಕ್ಕೆ ಕಾಮದೇವ ಎನ್ನುವ ಅರÜವೂ ಇದೆ. ಹೀಗಾಗಿ ‘ಕಂತು ನಕ್ಕ ಚಂದ್ರಹಾಸ’ ಎಂದರೆ ಕಾಮದೇವನ ನಗೆಯೇ ಬೆಳದಿಂಗಳಾಯಿತು ಎನ್ನುವ ಭಾವನೆಯೂ ಇಲ್ಲಿ ಬರುತ್ತದೆ.  ಪ್ರಣಯಭಾವನೆಯನ್ನು ಜಾಗೃತಗೊಳಿಸುವ ಈ ಕಾಮದೇವನ ಉದ್ದೇಶವೇನು? ಈತನು ಕೇವಲ ಸಾಧಾರಣ ಕಾಮನಲ್ಲ ; ಈತನು ದೇವನು ಎನ್ನುವದನ್ನು ಗಮನದಲ್ಲಿ ಇಟ್ಟುಕೊಳ್ಳಿ. (ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ’ದೇವಕಾಮವೆ ಕಾಮದೇವನಾಗಿ’ ಎಂದು ಹೇಳಿದ್ದಾರೆ.) ದೇವತೆಯಲ್ಲಿ ಸದಾಕಾಲವೂ ಅನುಗ್ರಹ ಭಾವನೆಯು ತುಂಬಿರುತ್ತದೆ. ಅದರಂತೆ ಕಾಮದೇವನೂ ಸಹ ತನ್ನ ಚಂದ್ರಹಾಸದಿಂದ ಅಂದರೆ ಬೆಳದಿಂಗಳಿನಿಂದ ಆಕಾಶವನ್ನೆಲ್ಲ ತುಂಬುವದು ಅನುಗ್ರಹ ನೀಡುವ ಕಾರಣಕ್ಕಾಗಿ. ಈ ಅನುಗ್ರಹವು ಕೇವಲ ಪ್ರಣಯಿಗಳಿಗಾಗಿ ಮಾತ್ರ ಅಲ್ಲ, ‘ಕಂಡವರನು ಹರಸಲು’.  ಇದರ ಅರÜ ಕಣ್ಣಿಗೆ ಬಿದ್ದ ಕೆಲವರನ್ನು ಮಾತ್ರ ಹರಸುವದು ಎಂದಲ್ಲ. ಆಕಾಶವನ್ನೆಲ್ಲ ಬೆಳದಿಂಗಳ ರೂಪದ ನಗೆಯಿಂದ ವ್ಯಾಪಿಸಿದ ಆ ಕಾಮದೇವನಿಗೆ ಕೆಳಗಿರುವ ಸೃಷ್ಟಿಯೆಲ್ಲ ಕಾಣದಿದ್ದೀತೆ? ಆದುದರಿಂದ ಸಕಲ ಚರಾಚರ ಜಗತ್ತನ್ನೆಲ್ಲ ಹರಸಲು ಕಾಮದೇವನು ಕಾತರನಾಗಿದ್ದಾನೆ ಎನ್ನುವದು ಈ ಸಾಲುಗಳ ಮರä.

ಮೊದಲನೆಯ ನುಡಿಯಲ್ಲಿ ಪ್ರಕೃತಿಯಲ್ಲಿ ಹರಡಿದ ಪ್ರಣಯ ಭಾವನೆಯನ್ನು ತೋರಿಸುತ್ತಲೇ ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ವಿಶ್ವಪ್ರಣಯದ ನಾಯಕ, ನಾಯಕಿಯರನ್ನು ತೋರಿಸುತ್ತಿದ್ದಾರೆ.  ಜೊತೆಜೊತೆಗೇ ಕಾಲಸೂಚನೆಯನ್ನೂ ಮಂಡಿಸುತ್ತಿದ್ದಾರೆ :
                        ಕಿರಿಬೆರಳಲಿ ಬೆಳ್ಳಿಹರಳು
                        ಕರಿಕುರುಳೊಳು ಚಿಕ್ಕೆ ಅರಳು
                        ತೆರಳಿದಳಿದೊ ತರಳೆ ಇರುಳು
                                  ತನ್ನರಸನನರಸಲು.
ಇರುಳು ಎಂಬ ಚಿಕ್ಕ ವಯಸ್ಸಿನ ಯುವತಿ (=ತರಳೆ) ತನ್ನ ಅರಸನನ್ನು ಅರಸಲು ಅಂದರೆ ಹುಡುಕಲು ಹೊರಟಿದ್ದಾಳೆ ಎನ್ನುವದು ಈ ನುಡಿಯ ತಿರುಳು. ರಾತ್ರಿ ಎನ್ನುವ ಈ ಯುವತಿ ಅನಾದಿಕಾಲದಿಂದಲೂ ತನ್ನ ಅರಸನನ್ನು ಅರಸುತ್ತಳೇ ಇದ್ದಾಳೆ. ಹೀಗಾಗಿ ಇವಳು ಚಿರಯೌವನೆ. ಆದುದರಿಂದಲೇ ಇವಳು ‘ತರಳೆ’. ಈ ತರಳೆಯ ಅರಸ ಯಾರು? ರಾತ್ರಿಕುಮಾರಿಯ ಅರಸನು ಚಂದ್ರನೇ ತಾನೆ? ಆದುದರಿಂದ ಚಂದ್ರನೇ ಇವಳು ಅರಸುತ್ತಿರುವ ಪ್ರಣಯಿ.  ಚಂದ್ರ ಎಲ್ಲಿದ್ದಾನೆ? ಆತನು ಕಂತು (=ಮುಳುಗು)ತ್ತಿದ್ದಾನೆ ಎಂದು ಬೇಂದ್ರೆಯವರು ಮೊದಲನೆಯ ನುಡಿಯಲ್ಲಿಯೇ ಹೇಳಿದ್ದಾರೆ. ಮುಳುಗುತ್ತಿರುವ ಚಂದ್ರನ ಹಿಂದೆಯೇ ಇರುಳೂ ಕೂಡ ಸರಿಯುತ್ತಿದೆ.  ಈ ರಾತ್ರಿಕುವರಿಯ ಒಡವೆಗಳನ್ನಷ್ಟು ನೋಡಿರಿ. ಇವಳು ಕಿರಿಬೆರಳಿನಲ್ಲಿ ಬೆಳ್ಳಿಹರಳಿರುವ ಉಂಗುರವನ್ನು  ಹಾಗು ಕಪ್ಪು ಕುರುಳಿನಲ್ಲಿ ಚಿಕ್ಕೆಗಳ ಅರಳು ಎಂದರೆ ಹೂವುಗಳನ್ನು ಧರಿಸಿದ್ದಾಳೆ. ಬೆಳ್ಳಿಹರಳು ಎಂದರೆ ಶುಕ್ರಗ್ರಹ. ಶುಕ್ರಗ್ರಹಕ್ಕೆ ಕನ್ನಡದಲ್ಲಿ ‘ಬೆಳ್ಳಿ ಚಿಕ್ಕಿ’ ಎಂದೇ ಕರೆಯುತ್ತಾರೆ. ಇವಳ ಕಪ್ಪು ಕುರುಳು ಎಂದರೆ ಆಕಾಶ. ಆಕಾಶದ ಅರಳುಗಳು ಎಂದರೆ ನಕ್ಷತ್ರಗಳು. ಇಷ್ಟು ಶೃಂಗಾರದೊಡನೆ ರಾತ್ರಿಕುಮಾರಿ ಚಂದ್ರನ ಬೆನ್ನು ಹತ್ತಿ ನಡೆದಿದ್ದಾಳೆ. ಇದಿಷ್ಟು ವಿಶ್ವಪ್ರಣಯಿಗಳ ವರÚನೆಯಾದರೆ, ಇದರಲ್ಲಿ ಅಡಗಿರುವ ಕಾಲಸೂಚನೆಯನ್ನಷ್ಟು ನೋಡೋಣ :

ಶುಕ್ರಗ್ರಹವು ಸೂರೋåದಯಕ್ಕಿಂತ ಮೊದಲು ಅಥವಾ ಸೂರಾåಸ್ತದ ನಂತರ ಕಾಣಿಸುತ್ತದೆ. 
ಈ ಸಂದರãದಲ್ಲಿ ಇದು ಸೂರೋåದಯದ ಮೊದಲಿನ ವರÚನೆ. ಇದನ್ನು ದೃಢೀಕರಿಸಲು ಬೇಂದ್ರೆಯವರು ‘ಕಿರಿಬೆರಳಲಿ ಬೆಳ್ಳಿಹರಳು’ ಎಂದು ಹೇಳುತ್ತಾರೆ. ರಾತ್ರಿಕುವರಿಯು ತನ್ನ ಯಾವುದೇ ನಾಲ್ಕು ಬೆರಳುಗಳಲ್ಲಿ ಉಂಗುರ ಧರಿಸಬಹುದಾಗಿತ್ತು. ಆದರೆ ಅವಳು ತನ್ನ ಕಿರಿಬೆರಳಲ್ಲಿ ಧರಿಸಿದ್ದಾಳೆ. ಈಗ ತೋರುಬೆರಳಿನಿಂದ  ಬೆರಳುಗಳನ್ನು ಎಣಿಸಿರಿ : (೧) ತೋರುಬೆರಳು, (೨) ನಡುವಿನ ಬೆರಳು, (೩) ಉಂಗುರ ಬೆರಳು ಹಾಗು (೪) ಕಿರಿಬೆರಳು. ಈ ಎಣಿಕೆಯಲ್ಲಿ ಕಿರಿಬೆರಳು ನಾಲ್ಕನೆಯ ಬೆರಳಾಗುತ್ತದೆ. ಆದುದರಿಂದ ಈ ಸಮಯವು ರಾತ್ರಿಯ ನಾಲ್ಕನೆಯ ಜಾಮ. ಆದರೆ ನಕ್ಷತ್ರಗಳು ಇನ್ನೂ ಕಾಣುತ್ತಲೇ ಇವೆ. ಆದುದರಿಂದ ಇದು ನಾಲ್ಕನೆಯ ಜಾಮದ ಪೂರಾéÞ ಅರಾÜತ್ ಬ್ರಾಹ್ಮೀ  ಮುಹೂರÛ.

ಮೂರನೆಯ ನುಡಿಯಲ್ಲಿ ಬೇಂದ್ರೆಯವರು ಆಕಾಶದಿಂದ ಭೂಮಿಗೆ ಇಳಿಯುತ್ತಾರೆ ಹಾಗು ಭೂಮಿಯ ಮೇಲಿನ ಪ್ರಣಯವನ್ನು ಅಂದರೆ ಗಂಗಾ-ಯಮುನಾ ನದಿಗಳ ಸಂಗಮವನ್ನು ವರಿÚಸುತ್ತಾರೆ :
                        ಗಂಗೆ ಯಮುನೆ ಕೂಡಿ ಹರಿದು
                        ಸಂಗಮ ಜಲ ಬಿಳಿದು ಕರಿದು
                        ತಿಂಗಳ ನಗೆ ಮೇರೆವರಿದು
                                ಬೇರೆ ಮಿರುಗು ನೀರಿಗು.

ಗಂಗೆಯ ನೀರಿನ  ಬಣ್ಣ ಬಿಳಿ ಹಾಗು ಯಮುನೆಯ ನೀರಿನ ಬಣ್ಣ ಕರಿ. ಈ ನದಿಗಳ ಸಂಗಮದ ಜಲವು ಬಿಳಿ ಹಾಗು ಕರಿಯ ಬಣ್ಣಗಳ ಮಿಶ್ರಣವಾಗುತ್ತದೆ. ಈ ಮಿಶ್ರಣದ ಮೇಲೆ ತಿಂಗಳಿನ ನಗೆ ಅಂದರೆ ಬೆಳದಿಂಗಳು ಬಿದ್ದಾಗ ಆ ನೀರಿಗೆ ಒಂದು ವಿಭಿನ್ನ ಮಿರುಗು ಬರುತ್ತದೆ. ದಾಂಪತ್ಯದಲ್ಲೂ ಸಹ ಗಂಡ ಹಾಗು ಹೆಂಡತಿಯ ಸ್ವಭಾವಗಳು ಭಿನ್ನವಾಗಿರುತ್ತವೆ. ಆದರೆ ಸರಸ ಪ್ರೇಮದ ಬೆಳದಿಂಗಳಿನಲ್ಲಿ ಮಿಂದಾಗ ಆ ದಾಂಪತ್ಯಕ್ಕೆ ಒಂದು ಹೊಸ ಸೊಬಗು ಬರುತ್ತದೆ ಎಂದು ಬೇಂದ್ರೆಯವರು ಅನ್ಯೋಕ್ತಿಯ ಮೂಲಕ ಹೇಳುತ್ತಿದ್ದಾರೆ.

ನಾಲ್ಕನೆಯ ನುಡಿ ಹೀಗಿದೆ :
                        ಪಂಥದಿಂದ ಮನೆಯ ತೊರೆದು
                        ಪಾಂಥ ನೆನೆದನತ್ತು ಕರೆದು :
                        ಇಂಥ ಸಮಯ ಬೇರೆ ಬರದು
                                  ದಂಪತಿಗಳಿಗಾರಿಗು !

ಮೇಲಿನ ಮೂರು ನುಡಿಗಳಲ್ಲಿ ಬೇಂದ್ರೆಯವರು ಆಕಾಶದಲ್ಲಿಯ ಪ್ರಣಯವನ್ನು ಹಾಗು ಭೂಮಿಯ ಮೇಲಿನ ಪ್ರಣಯವನ್ನು ಬಣ್ಣಿಸಿದರು. ಆದರೆ ತಮ್ಮದೇ ಸಂಸಾರದಲ್ಲಿ ಅವರು ಒಂದು ಮನಸ್ತಾಪವನ್ನು ಅನುಭವಿಸುತ್ತಿದ್ದಾರೆ. ಇದರ ಸುಳಿವು ಈ ನಾಲ್ಕನೆಯ ನುಡಿಯಲ್ಲಿದೆ.

ಪಂಥ ಎಂದರೆ ಜಿದ್ದು , ಹಟ. ಪಾಂಥ ಎಂದರೆ ದಾರಿಕಾರ, ಪ್ರಯಾಣಿಕ.  ಯಾವ ಕಾರಣಕ್ಕಾಗಿ ಬೇಂದ್ರೆ ದಂಪತಿಗಳಲ್ಲಿ ವಿರಸ ಹುಟ್ಟಿತು ಎನ್ನುವದನ್ನು ಬೇಂದ್ರೆಯವರು ತಿಳಿಸಿಲ್ಲ. ಒಟ್ಟಿನಲ್ಲಿ ಹಟಮಾರಿತನ, ಸಿಟ್ಟು, ಸೆಡವು ಇವೆಲ್ಲ ಭಾವನೆಗಳು ಇಬ್ಬರಲ್ಲೂ ಬಂದು ಹೋಗಿವೆ. ಇಬ್ಬರಿಗೂ ದುಃಖವಾಗಿದೆ ಎನ್ನುವದು ‘ಅತ್ತು ಕರೆದು’ ಎನ್ನುವದರ ಮೂಲಕ ಸ್ಪಷ್ಟವಾಗಿದೆ. ಇಂತಹ ಸಂದರãವು ಬೇರೆ ಯಾವ ದಂಪತಿಗಳಿಗೂ ಬಂದಿರಲಿಕ್ಕಿಲ್ಲ ಹಾಗು ಬರದಿರಲಿ ಎಂದು ಬೇಂದ್ರೆಯವರು ಹಾರೈಸುತ್ತಾರೆ. ಆದರೆ ಗಂಗೆ-ಯಮುನೆಗಳ ಸಂಗಮದ ತಟದಲ್ಲಿ ಇವರೀರéರೂ ಆ ಅಸುಖೀ ಭಾವನೆಯಿಂದ ಈಗ ಹೊರಬಂದಿದ್ದಾರೆ. ವಿಶ್ವಪ್ರಣಯದ ಬೆಳದಿಂಗಳಿನಲ್ಲಿ ಮಿಂದು, ಮತ್ತೆ ಸರಸ, ಸಮಾಧಾನದ ಭಾವಕ್ಕೆ ಮರಳಿದ್ದಾರೆ. ಈ ಭಾವನೆಯು ಅವರ ಮುಂದಿನ (ಕೊನೆಯ) ನುಡಿಯಲ್ಲಿ ವ್ಯಕ್ತವಾಗುತ್ತಿದೆ :
                        ನಾನು ನೀನು ಜೊತೆಗೆಬಂದು
                        ಈ ನದಿಗಳ ತಡಿಗೆ ನಿಂದು
                        ಸಾನುರಾಗದಿಂದ ಇಂದು
                                  ದೀಪ ತೇಲಿಬಿಟ್ಟೆವೇ—
                                  ದೀಪ ತೇಲಿ ಬಿಟ್ಟೆವು.

ಸಾನುರಾಗದಿಂದ ಎಂದು ಹೇಳುವಾಗ ಅವರೀರéರಲ್ಲಿ ಮತ್ತೆ ಅನುರಾಗ ಭಾವ ಬಂದಿರುವದನ್ನು ಬೇಂದ್ರೆಯವರು ಸ್ಪಷ್ಟ ಪಡಿಸುತ್ತಾರೆ. ದೀಪ ತೇಲಿ ಬಿಡುವ ವಿಧಿಯನ್ನು ಜೊತೆಯಾಗಿ ಮಾಡುವದರ ಮೂಲಕ ದಾಂಪತ್ಯ ಜೀವನದಲ್ಲಿ ಗಂಡ-ಹೆಂಡಿರ ಸಾಮರಸ್ಯವನ್ನು ಸೂಚಿಸುತ್ತಾರೆ. ಅಲ್ಲದೆ, ಈ ದೀಪವು ಬಾಳಿಗೆ ಬೆಳಕು ನೀಡುವ ದೀಪವೂ ಹೌದು ಎಂದು ಸೂಚಿಸುತ್ತಾರೆ.
……………………………………………………………….
ಟಿಪ್ಪಣಿ (೧):
ಬೇಂದ್ರೆಯವರ ಕವನಗಳಲ್ಲಿ ಪದಗಳ ಶ್ಲೇಷೆಯನ್ನು ಕಾಣುವದು ಅತಿ ಸಹಜ. ಉದಾಹರಣೆಗೆ ‘ಸಾವಿರದ ಮನೆಯಲೊಂದು ಮನೆಯ ಮಾಡಿದೆ’ ಎಂದು ಹೇಳುವಾಗ ‘ಸಾವಿರದ’ ಪದಕ್ಕೆ ‘ಅನೇಕ’ ಎನ್ನುವ ಅರÜ ಇರುವಂತೆಯೇ ‘ಸಾವು+ಇರದ’ ಎನ್ನುವ ಅರÜವೂ ಇದೆ. ಕೆಲವೊಮ್ಮೆ ವಿರುದ್ಧಾರÜದ ಶ್ಲೇಷೆಯನ್ನೂ ಅವರು ಮಾಡುತ್ತಾರೆ. ಉದಾಹರಣೆಗೆ, ಈ ಸಾಲು ನೋಡಿರಿ: ‘ಅಮೃತಂತ ಬಾಯಿ ಚಪ್ಪರಿಸತಾವ, ಕೇಳಿ ಕಣ್ಣು ಮಿಟಕತದ ರಾತ್ರಿ.’
ನಲ್ಲ, ನಲ್ಲೆಯರು ಮುತ್ತು ಕೊಟ್ಟುಕೊಳ್ಳುವಾಗ ‘ಇದು ಅಮೃತ’ ಎನ್ನುತ್ತ ಬಾಯಿ ಚಪ್ಪರಿಸುತ್ತಾರೆ. ಇದನ್ನು ಕೇಳಿದ ರಾತ್ರಿಯು ಕಣ್ಣು ಹೊಡೆಯುತ್ತದೆ ಎನ್ನುವದು ಒಂದು ಅರÜ. ಮತ್ತೊಂದು ಅರÜ ಹೀಗಿದೆ: ಇದು ಅಮೃತ ಎಂದರೆ ನಿರಂತರ ಎಂದು ಪ್ರಣಯಿಗಳು ಭಾವಿಸುತ್ತಾರೆ. ಆದರೆ ಇದರ ಅವಧಿ ಅತ್ಯಲ್ಪ ಅರ್ಥಾತ್ ಕಣ್ಣು ಮಿಟುಕಿಸುವ ಸಮಯದಷ್ಟು ಮಾತ್ರ.

‘ದೀಪ’ ಕವನದಲ್ಲಿ ಮೊದಲಿನ ಎರಡೂ ನುಡಿಗಳೇ ಶ್ಲೇಷೆಯಿಂದ ಕೂಡಿರುವದು ಈ ಕವನದ ಒಂದು ಹೆಚ್ಚುಗಾರಿಕೆ. ಈ ನುಡಿಗಳು ವಿಶ್ವಪ್ರಣಯವನ್ನು ಹಾಗು ನಾಯಕ, ನಾಯಕಿಯರನ್ನು ವರಿÚಸುವದರ ಜೊತೆಗೇ ಕಾಲಸೂಚನೆಯನ್ನೂ ಮಾಡುವದು ಬೇಂದ್ರೆಯವರ ಶ್ಲೇಷಪ್ರತಿಭೆಯ ನಿದರêನವಾಗಿದೆ.
…………………………………………………………………………….
ಅಕ್ಟೋಬರ ೨೬ ಬೇಂದ್ರೆಯವರ ಪುಣ್ಯತಿಥಿ. ೧೯೮೧ ಅಕ್ಟೋಬರ ೨೬ರಂದು ಬೇಂದ್ರೆಯವರು ಮುಂಬಯಿಯಲ್ಲಿ ನಿಧನರಾದರು. ಅಂದು ನರಕಚತುರÝಶಿಯ ದಿನವಾಗಿತ್ತು. ಅವರು ಕಾಲವಶರಾಗಿ ಇಂದಿಗೆ ಎರಡು ದಶಕಗಳು ಸಂದವು.
……………………………………………………………
ಟಿಪ್ಪಣಿ (೨):
ಇದು ಬ್ಲಾಗಿಗರೆಲ್ಲ ಖುಶಿ ಪಡುವ ಹಾಗು ಹೆಮ್ಮೆ ಪಟ್ಟುಕೊಳ್ಳುವ ತಿಂಗಳಾಗಿದೆ. ಮೂರು ಜನ ಬ್ಲಾಗಿಗರು ಸಾಹಿತ್ಯಸಮ್ಮಾನವನ್ನು ಪಡೆದದ್ದನ್ನು ಈ ತಿಂಗಳಿನಲ್ಲಿ ಕೇಳುತ್ತಿದ್ದೇವೆ. ಮೊದಲನೆಯವರು ‘ಛಾಯಾಕನ್ನಡಿ’ಯ ಶಿವು. ಇವರಿಗೆ ಬೇಂದ್ರೆ ಸ್ಮಾರಕ ಟ್ರಸ್ಟಿನ ಪ್ರಶಸ್ತಿಯು ಲಲಿತ ಪ್ರಬಂಧಗಳ ವಿಭಾಗದಲ್ಲಿ ದೊರಕಿದೆ. ಎರಡನೆಯವರು ‘ಮೌನಗಾಳದ’ ಸುಶ್ರುತ ದೊಡ್ಡೇರಿ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ದೊರೆತಿದೆ. ಮೂರನೆಯವರು ‘ಕಂಡೆ ನಾನೊಂದು ಕನಸು’ ಎನ್ನುವ ಸುಷ್ಮಾಸಿಂಧು. ಇವರ ಕತೆಗೆ ಕಾರವಾರದ ‘ಹಣತೆ’ ಸಂಘಟನೆಯ ಪ್ರಥಮ ಬಹುಮಾನ ದೊರೆತಿದೆ. ಕಳೆದ ತಿಂಗಳಿನಲ್ಲಿ ಕನ್ನಡದ ಖ್ಯಾತ ವಿಮರêಕ ರಹಮತ್ ತರೀಕೆರೆಯವರು ಭಾಷಣ ಮಾಡುತ್ತ ಬ್ಲಾಗ್ ಸಾಹಿತ್ಯದ ಬಗೆಗೆ ಲಘುವಾಗಿ ಮಾತನಾಡಿದ್ದರು. ನಮ್ಮ ಬ್ಲಾಗಿಗರು ಅವರಿಗೆ ಸತ್ಯವನ್ನು ತೋರಿಸಿದ್ದಾರೆ.
ಮೂವರಿಗೂ ಶುಭಾಶಯಗಳು.