Saturday, December 4, 2010

ಬೇದಾದ್, ಬೇಫಿಕೀರ್, ಬೇಶರಮ್’ ಆಗಿರುವ ಪತ್ರಿಕೆ: ಸಂಕಟ ಕರ್ನಾಟಕ

 ‘ಹಾಡಿದ್ದೆ ಹಾಡೊ ಕಿಸುಬಾಯಿ ದಾಸ’ ಅನ್ನುವಂತಾಗಿದೆ ನನ್ನ ಸ್ಥಿತಿ. ಆದರೆ ಈ ಘೋರ ವಿಷಯವನ್ನು ನಿಮ್ಮ ಎದುರಿಗೆ ಇಡದೆ ಹೋದರೆ, ನನ್ನ ಮನಸ್ಸಿನ ಒಳಕುದಿಗೆ ಸಮಾಧಾನವಿಲ್ಲದಂತಾಗುವದು.

‘ಸಂಯುಕ್ತ ಕರ್ನಾಟಕ’ವು ಓದುಗನಿಗೆ ಸರಿಯಾದ  ಸಮಾಚಾರವನ್ನು ಕೊಡುತ್ತಿಲ್ಲ. ಓದುಗರ ಬುದ್ಧಿಮತ್ತೆಯ ಬಗೆಗೆ ತೀವ್ರ ತಾತ್ಸಾರ ಭಾವನೆಯನ್ನು ತಾಳಿರಬಹುದಾದ ‘ಸಂ.ಕ’ ಪತ್ರಿಕೆಯು, ಓದುಗನಿಗೆ ಲದ್ದಿಯನ್ನು ತಿನ್ನಿಸಿದರೂ, ಓದುಗನು ಅದನ್ನು ಕಣ್ಣು ಮುಚ್ಚಿಕೊಂಡು ತಿನ್ನುತ್ತಾನೆ ಎಂದು ತಿಳಿದಿದೆಯೇನೊ? ಉದಾಹರಣೆಗೆ ದಿನಾಂಕ ೩-೧೨-೨೦೧೦ರಂದು ‘ಸಂ.ಕ.’ದಲ್ಲಿ ಪ್ರಕಟವಾದ ಈ ಸುದ್ದಿಯನ್ನು ನೋಡಿರಿ :

(೧)ಲೋಕಸಭೆಯಲ್ಲಿ ನಡೆಯುತ್ತಿರುವ ಪ್ರಸಂಗವನ್ನು ವಿಧಾನಸಭೆಯಲ್ಲಿ ಎಂದು  ಬರೆಯಲಾಗಿದೆ, ಒಮ್ಮೆ ಅಲ್ಲ, ಮೂರು ಸಲ! ಇದು ಕಣ್ತಪ್ಪಿನಿಂದಾಗುವ ದೋಷವೆ ಅಥವಾ ಸುದ್ದಿಗಾರನ ಅಜ್ಞಾನದಿಂದಾಗುವ ದೋಷವೆ? ಸುದ್ದಿಗಾರನು ತಪ್ಪಿದರೂ ಸಹ ಸಂಪಾದಕರು ಇದನ್ನು ಗಮನಿಸಬೇಡವೆ?

(೨) ಹನ್ನೊಂದು ವಿರೋಧಪಕ್ಷಗಳನ್ನು ಇಲ್ಲಿ ಹೆಸರಿಸಲಾಗಿದೆ. ಇವುಗಳಲ್ಲಿ ಎಲ್ಲವೂ ಎಡಪಕ್ಷಗಳಲ್ಲ. ಆದರೂ ಸಹ ಈ ಎಲ್ಲ ಪಕ್ಷಗಳನ್ನು ಸಾರಾಸಗಟಾಗಿ ಎಡಪಕ್ಷಗಳೆಂದು ಕರೆಯಲಾಗಿದೆ. ‘ಸಂ.ಕ.’ದವರಿಗೆ ಎಡಪಕ್ಷ ಅಂದರೆ ಏನು ಎನ್ನುವದು ಗೊತ್ತಿದೆಯೆ?

(೩) ಈ ಸಭೆಯನ್ನು ವಿರೋಧ ಪಕ್ಷಗಳ ಸಾಮಾನ್ಯ ವಾರ್ಷಿಕ ಸಭೆ ಎಂದು ಹೇಳಲಾಗಿದೆ. ಎನ್‍ಡಿ‍ಏ ಹೊರತಾಗಿ ವಿರೋಧ ಪಕ್ಷಗಳಲ್ಲಿಯೇ ಮೂರು ವಿಭಿನ್ನ ಗುಂಪುಗಳಿದ್ದು, ಈ ಗುಂಪುಗಳು ಒಂದು ಸಾಮಾನ್ಯ ವಾರ್ಷಿಕ ಸಭೆಯನ್ನು ಯಾವಾಗ ನಡೆಸಿದ್ದವು? ಈ ಸಭೆಗೆ ‘(ಆಳುವ ಪಕ್ಷದ) ಸಚಿವರು ಹಾಜರಾಗಲಿದ್ದಾರೆ’ ಎನ್ನುವದರ ಅರ್ಥವೇನು?

(೪) ಸಚಿವರು ರಾಜ್ಯಸಭೆಯ ಅಥವಾ ಲೋಕಸಭೆಯ ಸದಸ್ಯರಿರಬಹುದು. ಸಚಿವರಲ್ಲಿ ರಾಜ್ಯಸಚಿವರು ಹಾಗು ಸಂಪುಟ ಸಚಿವರು ಎನ್ನುವ ವರ್ಗಗಳಿವೆ. ಆದರೆ ರಾಜ್ಯಸಭೆಯ ಸಚಿವರು ಹಾಗು ಲೋಕಸಭೆಯ ಸಚಿವರು  ಎನ್ನುವ ಹೊಸ ಪ್ರಭೇದಗಳು ಎಲ್ಲಿಂದ ಬಂದವು? ಇವು ‘ಸಂ.ಕ.’ದವರ ಸ್ವಂತ ಆವಿಷ್ಕಾರವೆ?

(೫) ಒಂದು ಗಂಟೆಯ ಸುದೀರ್ಘ ಕಾಲದವರೆಗೆ ಚರ್ಚೆಯನ್ನು ನಡೆಸಲಾಗುವದು ಎಂದು (ವರದಿಗಾರರಿಗೆ) ತಿಳಿಸಲಾಗಿದೆಯಂತೆ. ಚರ್ಚೆ ಸುದೀರ್ಘವಾಗಿರಬಹುದು ಎನ್ನುವ ನಿರೀಕ್ಷಣೆಯನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಅದು ಒಂದು ಗಂಟೆಯ ಕಾಲ ಎಂದು ಊಹಿಸುವದು ಹಾಸ್ಯಾಸ್ಪದ. ಅಲ್ಲದೆ ಒಂದು ಗಂಟೆಯ ಚರ್ಚೆಯನ್ನು ಸುದೀರ್ಘ ಎಂದು ಕರೆಯಬಹುದೆ? ಇದು ‘ಸಂ.ಕ.’ದ ವರದಿಗಾರರ ಕಲ್ಪನೆಯೆ?

(೬) ಎನ್‍ಡಿ‌ಏಗೆ ಸೇರದ ಪ್ರತಿಪಕ್ಷಗಳು ಸಭೆ ಸೇರಲಿವೆ ಎಂದು ಹೇಳಲಾಗಿದೆ. ಅಂದ ಮೇಲೆ ಎನ್‍ಡಿ‍ಏಗೆ ಸೇರಿದ ಆರ್‍ಎಲ್‍ಡಿಯನ್ನು ಈ ಪಕ್ಷಗಳಲ್ಲಿ ಹೇಗೆ ಕೂಡಿಸಲಾಗಿದೆ?

(೭) ಪಿ‍ಐ ಎನ್ನುವ ಪಕ್ಷ ಇದೆಯೆ?

ಬೇಜವಾಬುದಾರಿ ಸಂಪಾದನೆಗೆ ಇವು ಕೆಲವು ಉದಾಹರಣೆಗಳು.
ಇನ್ನು ವ್ಯಾಕರಣ ದೋಷಗಳನ್ನಂತೂ ಕೇಳುವದೇ ಬೇಡ.
ಈ ಸಮಾಚಾರ ಸಂಪಾದನೆಯಲ್ಲಿಯ ತಪ್ಪು ಪದಗಳು ಹೀಗಿವೆ:
ತಪ್ಪು-----------------------------------ಸರಿ
(೧) ಬಿಕ್ಕಿಟ್ಟಿನ--------------------------ಬಿಕ್ಕಟ್ಟಿನ
(೨) ಎನ್‍ಡಿ‍ಎವಲ್ಲದ--------------------ಎನ್‍ಡಿಏ ಅಲ್ಲದ
(೩) ಒಂದು ಗಂಟೆಗಳ ಕಾಳ---------------ಒಂದು ಗಂಟೆ ಕಾಲ
(೪) ಸುಧೀರ್ಘ---------------------------ಸುದೀರ್ಘ
(೫) ಮುಂದುವರಿದೆರುವ-----------------ಮುಂದುವರೆದಿರುವ
(೬) ತೊರಿಸುತ್ತಿರುವ---------------------ತೋರಿಸುತ್ತಿರುವ
(೭) ಎಡಪಕ್ಷಗಳು….ಹೇಳಿದ್ದಾರೆ---------ಎಡಪಕ್ಷಗಳು…….ಹೇಳಿವೆ
(೮) ಹಾಜರಾಗಲಿದ್ದಾರೆ. ಎಂದು----------ಹಾಜರಾಗಲಿದ್ದಾರೆ ಎಂದು

ಸಮಾಚಾರದ ಒಟ್ಟು ೯೦ ಪದಗಳಲ್ಲಿ ೮ ದೋಷಗಳಿವೆ , ಅಂದರೆ ಸುಮಾರಾಗಿ ೯%. ನಿಜವಾಗಿಯೂ ಇದು ಎಲ್ಲ ಪತ್ರಿಕೆಗಳನ್ನು ಹಿಂದಿಕ್ಕುವ ಅತ್ಯುತ್ತಮ ಸಾಧನೆಯಾಗಿದೆ!
ವ್ಯಾಕರಣ ದೋಷಗಳನ್ನು ಹೇಗಾದರೂ ಸಹಿಸಬಹುದು. ಈ ಪತ್ರಿಕೆಯ ಸಿಬ್ಬಂದಿಯು ಪ್ರಾಥಮಿಕ ಶಾಲೆಯನ್ನು ದಾಟಿರಲಿಕ್ಕಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬಹುದು. ಆದರೆ ಲೋಕಸಭೆಗೆ ವಿಧಾನಸಭೆ ಎಂದು ವರದಿ ಮಾಡಿದರೆ ಏನೆಂದು ಸಮಾಧಾನ ಮಾಡಿಕೊಳ್ಳಬೇಕು? ಪಾಪ, ರಾತ್ರಿಯಲ್ಲಿ ನಿದ್ರೆಗೆ ಶರಣಾದ ಸಿಬ್ಬಂದಿ ಹಾಗು ಸಂಪಾದಕರಿಂದ ಇಂತಹ ತಪ್ಪುಗಳು ಆಗುವದು ಸಹಜ ಎಂದುಕೊಳ್ಳಬೇಕೆ?
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಕರ್ನಾಟಕದ ಇಂತಹ ಶ್ರೇಷ್ಠ ಪತ್ರಿಕೆಗೆ ಏನು ಬಿರುದು ಕೊಡಬೇಕು?
‘ಬೇದಾದ್, ಬೇಫಿಕರ್, ಬೇಶರಮ್’ ಪತ್ರಿಕೆ ಎನ್ನುವ ಬಿರುದನ್ನು ನಾನು ಸೂಚಿಸುತ್ತಿದ್ದೇನೆ.
‘ಬೇದಾದ್’ ಎಂದರೆ ದಾದ್ ಮಾಡದವನು = one who does not bother.
`ಬೇಫಿಕರ್’ ಎಂದರೆ ಕಾಳಜಿ ಇಲ್ಲದವನು = one who does not care.
`ಬೇಶರಮ್’ ಎಂದರೆ ನಾಚಿಕೆ ಇಲ್ಲದವನು = shameless.
ನಿಮ್ಮ ಸೂಚನೆಗಳೇನು?

48 comments:

Subrahmanya said...

ಕಾಕಾಶ್ರೀ,

ರಾತ್ರಿ ಎರಡೂವರೆಗಂಟೆಯವರೆವಿಗೂ ಕೂತು ತಲೆಕೆಡಿಸಿಕೊಂಡು ಬರೆದಿರುವ ನಿಮ್ಮ ಕನ್ನಡ ಕಾಳಜಿಗೆ ನನ್ನ ಸಹಮತವಿದೆ. ಸಂ.ಕ. ಪತ್ರಿಕೆಯವರು ನಿಮ್ಮಷ್ಟು ಕಾಳಜಿ ತೋರಿಸಲಾರರೆಂದೇ ಭಾವಿಸುತ್ತೇನೆ. ಕಾರಣ, ನೀವು ನೀಡಿರುವ ತಲೆಬರಹಕ್ಕೆ ಅವರು ಅನ್ವರ್ಥವಾಗಿದ್ದಾರೆ. ತುಸು ಗರಂ ಆಗಿಯೇ ಬರೆದು ನಾನೂ ಒಂದು e-mail ಕಳುಹಿಸಿದ್ದೇನೆ ("ಕನ್ನಡ ಸರಿಪಡಿಸಿಕೊಳ್ಳಿ ಅಥವ ಪತ್ರಿಕೆ ನಿಲ್ಲಿಸಿ" !). ಸರಿಪಡಿಸಿಕೊಳ್ಳುತ್ತಾರೆಂಬ ನಂಬಿಕೆ ನನಗಿಲ್ಲ, ಕನಿಷ್ಟ ತಪ್ಪಿನ ಅರಿವಾದರೂ ಆದರೆ ಸಾಕು !.

ಸದ್ಯದಲ್ಲೇ ಅಶೊಕಹಾರನಹಳ್ಳಿಯವರು ನಾನು ಕಾರ್ಯನಿರ್ವಹಿಸುವ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಪತ್ರಿಕೆಯ ಈ ಎಲ್ಲಾ ಕಟಿಂಗ್ಸುಗಳನ್ನೂ ಅವರಿಗೆ ಕೊಟ್ಟು ವಿವರಿಸಬೇಕೆಂದುಕೊಂಡಿದ್ದೇನೆ...ನೋಡೋಣ..ಎನಾಗುತ್ತೆ ಅಂತ.

ಬಿಕ್ಕಿಟ್ಟಿನ.. ಹಹ..ನನ್ನ ಮಗನಿಗೆ ಬಿಸ್ಕತ್ತು ಎನ್ನುವುದಕ್ಕೆ ಹೀಗೇ ಹೇಳುತ್ತಿದ್ದೇನೆ :)

PARAANJAPE K.N. said...

ಸ್ವಾಮಿ, ಅವರಿಗೆ ಸರಳ ಕನ್ನಡದಲ್ಲಿ ಬಿರುದು ಕೊಡುವುದು ಒಳಿತು. "ಬೇದಾದ್" ಅ೦ದರೆ ಅದು "ಶಹಬ್ಬಾಸ್ ಗಿರಿ" ಅ೦ತ ತಿಳಿದು ಮತ್ತಷ್ಟು ಕನ್ನಡದ ಕೊಲೆ ಮಾಡುವ ಅಪಾಯವಿದೆ ಈ ಪತ್ರಿಕೆಯ ಜನರು. ನೀವು ಶ್ರಮ ವಹಿಸಿ ತಪ್ಪನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಲೇ ಬ೦ದಿದ್ದೀರಿ. ಆದರೆ ಅವರಿಗದು ತಲುಪುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅವರು ಕೊ೦ಚವಾದರೋ ತಿದ್ದಿಕೊ೦ಡರೆ ಆ ಪತ್ರಿಕೆಯ ಓದುಗರಿಗೆ, ಕನ್ನಡಕ್ಕೆ ಕ್ಷೇಮ.

sunaath said...

ಪುತ್ತರ್,
‘ಕನ್ನಡ ಸರಿಪಡಿಸಿಕೊಳ್ಳಿ ಅಥವಾ ಪತ್ರಿಕೆ ನಿಲ್ಲಿಸಿ"!--ಇದು ಯೋಗ್ಯವಾದ ನೋಟೀಸ್! ಹಾರನಹಳ್ಳಿಯವರು ಸಿಕ್ಕರೆ ಅವರಿಗೆ ಹೇಳಿ ನೋಡಿ.

sunaath said...

ಪರಾಂಜಪೆಯವರೆ,
ಯಾವ ಭಾಷೆಯಲ್ಲಿ ಬಿರುದು ಕೊಟ್ಟರೂ ಸಹ, ‘ಸಂ.ಕ.’ಕ್ಕೆ ಅರ್ಥವಾದೀತು ಎನ್ನಿಸುವದಿಲ್ಲ!

ಚುಕ್ಕಿಚಿತ್ತಾರ said...

ಕನ್ನಡಿಗರ ಕರ್ಮ....!!!

umesh desai said...

ಕಾಕಾ ಏನು ಯುದ್ಧನ ಶುರು ಮಾಡೀರಿ...ಈಗ ಅಲ್ಲಿ ಕನ್ನಡ ಬರದಿರೋರು ಡಿಟಿಪಿ ಮಾಡಿಕೊಂಡವ್ರು ಇಂಥಾವರ
ತುಂಬ್ಯಾರ ಅನಸ್ತದ..ಅವರಿಗೂ ನಿಮ್ಮ ಬ್ಲಾಗಿನಪ್ರತಿ ಮೇಲ್ ಮಾಡರಿ..

sunaath said...

ವಿಜಯಶ್ರೀ,
ಇದು ಕನ್ನಡಿಗರ ಪ್ರಾರಬ್ಧ ಕರ್ಮ!

sunaath said...

ದೇಸಾಯರ,
ಯುದ್ಧ ಏನೂ ಇಲ್ಲರಿ. ಓದಿದಾಗ ಆಗೋ ಬ್ಯಾಸರದ reaction ಇದು. ಕಟ್ಟಿಕೊಂಡಾಕೀ ಥರಾ ಇದs ಪೇಪರ ಓದತೇನಿ ನಾನು. ಆಮ್ಯಾಲೆ ಯಾಕರ ಓದಿದೆನೋ ಅನಸ್ತದ.

ಅನಂತ್ ರಾಜ್ said...

ಕಟ್ಟೊ೦ಡ್ ಮ್ಯಾಲ ಬ್ಯಾಸರ ಮಾಡ್ಕೊಳ್ಹಾ೦ಗ್ ಇಲ್ರೀ ಸರ್ರ...ಚಾಷ್ಟಿ ಮಾಡೀನಿ..ತಪ್ ತಿಳೀಬ್ಯಾಡ್ರೀ ಮತ್ತ..
" ಎಲ್ಲಾ ಕನ್ನಡ ಪತ್ರಿಗೆಗಳಲ್ಲೂ ತಪ್ಪುಗಳು ಸಾಮಾನ್ಯ.. ಆದರೆ ನೀವು ತೋರಿಸಿದ ಈ ಪತ್ರಿಕೆಯ ತಪ್ಪುಗಳು ಅಸಾಮಾನ್ಯ.."

ಅನ೦ತ್

sunaath said...

ಅನಂತರಾಜರೆ,
ಖರೆ ಹೇಳಿದಿರಿ. ಕಟ್ಟಿಕೊಂಡಾಕಿ ಜೊತಿಗೆ ಬಾಳೇ ಮಾಡಾಕ ಬೇಕು,ನೋಡ್ರಿ! ಆಕಿ ಏನು ಅಡಗಿ ಮಾಡಿ ಬಡಸ್ತಾಳ, ಅದನ್ನs ಉಣ್ಣಾಕ ಬೇಕರಿ,ಯಪ್ಪಾ!

Harsha Bhat said...

ayyappa sustagode saar aara tappu noodi

sunaath said...

ಹರ್ಷ,
ಈ ಪತ್ರಿಕೆಯನ್ನು ದಿನವೂ ಓದುತ್ತಿರುವ ನಾನೆಷ್ಟು ಸುಸ್ತಾಗಿರಬೇಡ!

ಮನಮುಕ್ತಾ said...

ಕಾಕಾ,
ಪತ್ರಿಕೆಯಲ್ಲಿ ಇಷ್ಟೊ೦ದು ತಪ್ಪುಗಳು..ನಿಜಕ್ಕೂ ಬೇಸರದ ಸ೦ಗತಿ..

ಜಲನಯನ said...

ಸುನಾಥಣ್ಣ ...ನೀವು ಎಣಿಸಿರುವುದು ನೋಡಿದರೆ ನಮ್ಮಂಥವರು ಬ್ಲಾಗ್ ಗಳಿಗೆ ಅವಸರವಸರದಲ್ಲಿ ಏನೋ ಗೀಚಿ ಹಾಕುವಾಗ ಇರುವ ತಪ್ಪುಗಳಿಗಿಂತಾ ಹೆಚ್ಚಾಗಿವೆ ಅನ್ಸುತ್ತೆ..ಬರೆದವರು, ಪ್ರೋಫ್ ರೀಡಿಂಗ್ ಸಂಪಾದನೆ ಎಲ್ಲಾ ಇರುವ ಒಂದು ಹೆಸರಾಂತ ಪತ್ರಿಕೆಯಿಂದ ಇದು ನಿರೀಕ್ಷೆಗೂ ಮೀರಿದ್ದು...
ಇದನ್ನು ತಾವು ಓದುಗರ ಕಾಲಂ ನಲ್ಲಿ ಹಾಕಿದ್ರೆ ಅಥವಾ ಸಂಬಂಧಪಟ್ಟವರ ಅವಗಾಹನೆಗೆ ತಂದರೆ ಮುಂದಾಗುವ ಅಚಾತುರ್ಯ ಕಡಿಮೆ ಆಗಬಹುದೇನೋ...??

V.R.BHAT said...

ಕನ್ನಡ ಶಬ್ದಗಳ ಅಪದ್ಧ ಪ್ರಯೋಗಗಳ ಬಗ್ಗೆ ಇವತ್ತು ವಿಜಯ ಕರ್ನಾಟಕದ ಸಂ. ಸ್ವಲ್ಪ ತಲೆಕೆಡಿಸಿಕೊಂಡಹಾಗಿದೆ! ಯಾರ್ಯಾರೋ ಪತ್ರಬರೆದಿದ್ದಾರಂತೆ. ಕನ್ನಡ ಪತ್ರಿಕೆಗಳು/ದಿನಪತ್ರಿಕೆಗಳು ಅಥವಾ ಟಿ.ವಿ ವಾಹಿನಿಗಳವರು ಇವರಿಗೆಲ್ಲಾ ಹೊಸದಾಗಿ ಭಾಷಾ ಕಲಿಕಾ ಕೇಂದ್ರವೊಂದನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸಿಕೊಡುವುದು ಮತ್ತು ಹುಚ್ಚುಚ್ಚು ಬಳಕೆಗೆ ಕಡ್ದಾಯವಾಗಿ ಪ್ರಕಟಿಸುವ ಮಾಲಕರಿಗೆ ದಂಡವಿಧಿಸುವುದು ಮಾಡಿದರೆ ಆಗಾದರೂ ಸ್ವಲ್ಪ ಸರಿಹೋಗಬಹುದು. ತಮ್ಮ ಕಾಳಜಿ ನಮ್ಮೆಲ್ಲರ ಕಾಳಜಿಯೂ ಕೂಡ. ಇದನ್ನು ತಕ್ಷಣಕ್ಕೆ ನೇರವಾಗಿ ಅಶೋಕ್ ಹಾರನಹಳ್ಳಿಯವರ ಲಕ್ಷ್ಯಕ್ಕಂತೂ ತರುವುದು ಒಳ್ಳೆಯದು. ರಾತ್ರಿಯೆಲ್ಲಾ ಕುಳಿತು ಆಸ್ಥೆಯಿಂದ ಬರೆದ ನಿಮಗೆ ಕನ್ನಡಿಗರೆಲ್ಲರ ಪರವಾಗಿ ನಮಿಸುತ್ತಿದ್ದೇನೆ.

sunaath said...

ಮನಮುಕ್ತಾ,
ನಾನು ಇದೇ ಪತ್ರಿಕೆಯ ಓದುಗನಾಗಿರುವದರಿಂದ,ಇದು ನನಗೆ ದೈನಂದಿನ ಬೇಸರದ ವಿಷಯ. ಹೇಗಿದ್ದ ಪತ್ರಿಕೆ ಹೇಗಾಯಿತಲ್ಲ ಎನ್ನುವ ಹಳಹಳಿ ಆಗುತ್ತಿದೆ.

sunaath said...

ಜಲನಯನ,
ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿಗಳೂ ಸಹ ಇಷ್ಟು ತಪ್ಪು ಮಾಡಲಿಕ್ಕಿಲ್ಲ. ‘ಸಂ.ಕ.’ದ ಕಚೇರಿಯಲ್ಲಿ ಎಲ್ಲರೂ ನಿದ್ರೆ ಮಾಡುತ್ತಿರುವರೇನೊ ಎಂದು ಅನಿಸುತ್ತದೆ.

sunaath said...

ಭಟ್ಟರೆ,
ಪತ್ರಕರ್ತರಿಗೆ ಕಡ್ಡಾಯವಾಗಿ ಕನ್ನಡ, ಸಂಸ್ಕೃತ ಹಾಗು ಇಂಗ್ಲಿಶ್ ತರಗತಿಗಳನ್ನು ನಡೆಯಿಸಬೇಕು. ಸಾಮಾನ್ಯ ಜ್ಞಾನದ ಒಂದು ಕೋರ್ಸ್ ಇಡಬೇಕು. ಇಲ್ಲದಿದ್ದರೆ, ಇಂತಹ ಪತ್ರಿಕೆಗಳನ್ನು ಓದುವ ಬಾಲಕರಲ್ಲಿ ತಪ್ಪು ತಿಳಿವಳಿಕೆಗಳು ಹುಟ್ಟಿಕೊಳ್ಳುವವು.

ಅನಿಕೇತನ ಸುನಿಲ್ said...

ನಿಮ್ಮಷ್ಟು ಹೇಳುವವರಿಲ್ಲ ..ಅವರಂತೆ ಕೇಳದವರಿಲ್ಲ ;-)ನನಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ;-)

sunaath said...

ಸುನೀಲ,
ವ್ಯಾಸ ಮಹರ್ಷಿಗಳು ನಿರಾಶೆಯಿಂದ ಕೂಗಿಕೊಂಡರಂತೆ:
"ಕೈಯೆತ್ತಿ ಕೂಗುತಿಹೆ,ಕೇಳುವರೆ ಇಲ್ಲ!"

ವಿ.ರಾ.ಹೆ. said...

ಬೇದಾದ್, ಬೇಫಿಕೀರ್, ಬೇಶರಮ್ ಅನ್ನುವ ಬದಲು ಕನ್ನಡದಲ್ಲೇ ಏನಾದರೂ ಬಿರುದು ಕೊಡಿ. ಬೈಯುವುದರಲ್ಲೂ ಕನ್ನಡ ಉಳಿಯಲಿ ;)

ದಿನಕರ ಮೊಗೇರ said...

namage sariyaada kannaDa kalisabekaada patrikeye hige maaDidare yaaranna dUrabeku sir..

nimma kaaLajiya jote namma sahamatavide...

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಯಾವ ತಿಂಗಳ ಸಂ.ಕ ಕನ್ನಡದ ಕೊಲೆ ಮಾಡದೇ ಪತ್ರಿಕೆ ಹೊರತರುತ್ತೋ, ಅಂದು ನಾವೆಲ್ಲರೂ ಆ ಖುಷಿಯನ್ನು ಆಚರಿಸೋಣಾ..

ಅಲ್ಲಿಯವರೆಗೆ ಈ ಸಾತ್ವಿಕ ಕೋಪ ಹೀಗೆ ಇರಲಿ ಮತ್ತು ಇರುತ್ತೆ.

ಸೀತಾರಾಮ. ಕೆ. / SITARAM.K said...

sudhaarisadashttu mattige patrike adhapatanakkilidiruvadu nodi vishadavenisitu

sunaath said...

ವಿ.ರಾ.ಹೆ,
‘ಸಂ.ಕ.’ಕ್ಕೆ ಕೊಡಬಹುದಾದ ಕನ್ನಡ ಬಿರುದನ್ನು ನೀವೇ ಸೂಚಿಸಿ!

sunaath said...

ದಿನಕರ,
‘ಸಂ.ಕ’ ಪತ್ರಿಕೆಯು ತಪ್ಪು ಕನ್ನಡವನ್ನೇ ಕಲಿಸುತ್ತ ಹೋಗುತ್ತಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಿ, ಈ ಪತ್ರಿಕೆಯನ್ನು ಮುಚ್ಚಿಸುವದು ಕನ್ನಡ ಭಾಷೆಗೆ ಕ್ಷೇಮಕರವಾಗಿದೆ!

sunaath said...

ಅಪ್ಪ-ಅಮ್ಮ,
ಉತ್ತಮ ಸಲಹೆ ನೀಡಿರುವಿರಿ. ಆ ದಿನಕ್ಕಾಗಿ ಕಾಯುವೆ. ಆದರೆ ನನ್ನ ಜೀವಮಾನದಲ್ಲಿ ಆ ದಿನ ಬಂದೀತೆ?

sunaath said...

ಸೀತಾರಾಮರೆ,
ಈ ಪತ್ರಿಕೆ ತಾನು ತಳ ಕಂಡಿರುವದಲ್ಲದೇ, ಕನ್ನಡವನ್ನೂ ತಳ ಕಾಣಿಸಿದೆ!

AntharangadaMaathugalu said...

ಸುನಾತ್ ಕಾಕಾ...

ತಡರಾತ್ರಿಯವರೆಗೂ ಕುಳಿತು ಎಲ್ಲಾ ತಪ್ಪುಗಳನ್ನೂ ಹುಡುಕಿ ತೋರಿಸಿರುವ ನಿಮ್ಮ ಕಾಳಜಿಗೆ ನನ್ನದೊಂದು ನಮನ. ಅದೆಷ್ಟೊಂದು ತಪ್ಪುಗಳಿವೆ.. ನಿಜ ಸಂಯುಕ್ತ ಕರ್ನಾಟಕದ ಕನ್ನಡ ಸಹಿಸಲಸಾಧ್ಯವಾಗಿದೆ....

ಶ್ಯಾಮಲ

sunaath said...

ಶ್ಯಾಮಲಾ,
ಸಂಯುಕ್ತ ಕರ್ನಾಟಕ ಪತ್ರಿಕೆಯು ಸಹಿಸಲು ಅಸಾಧ್ಯವಾದ ಪತ್ರಿಕೆಯಾಗಿದೆ.

prabhamani nagaraja said...

ಒ೦ದು ಕಾಲಕ್ಕೆ ಉತ್ತಮ ಹೆಸರು ಗಳಿಸಿದ್ದ ರಾಜ್ಯಮಟ್ಟದ ಪತ್ರಿಕೆಯಲ್ಲಿ ಈ ಮಟ್ಟಕ್ಕೆ ತಪ್ಪುಗಳಿರುವುದನ್ನು ನೋಡಿ ಬೇಸರವಾಯಿತು. ಇತ್ತೀಚೆಗೆ ಉಚ್ಛಾರ ದೋಷ, ಬರಹ ದೋಷಗಳು ಮೇರೆ ಮೀರುತ್ತಿವೆ. ಒಂದು ಪ್ರತಿಯನ್ನು ಪತ್ರಿಕೆಗೂ ಕಳುಹಿಸಿದ್ದರೆ ಒಳಿತಿತ್ತು. ನಿಮ್ಮ ಕಾಳಜಿಗೆ ಧನ್ಯವಾದಗಳು ಸರ್.

sunaath said...

ಪ್ರಭಾಮಣಿಯವರೆ,
ಈಗ ಉಳಿದಿರುವದು ಸಂಯುಕ್ತ ಕರ್ನಾಟಕದ ಭೂತ ಮಾತ್ರ!

ಶ್ರೀನಿವಾಸ ಕಟ್ಟಿ said...

ಸಂಯುಕ್ತ ಕರ್ನಾಟಕ ತಂತಾನೆ ಸಾಯಹತ್ತಿದೆ. ಅದನ್ನು ಉಳಿಸುವದು ಬಹುಶಃ ಧನ್ವಂತರಿಗೂ ಅಸಾಧ್ಯ. ಮೋಹರೆ ಹನುಮಂತರಾಯರು, ಪುರೋಹಿತರು ತಮ್ಮ ತನು-ಮನ-ಧನ ಗಳನ್ನು ತ್ಯಾಗಮಾಡಿ ಬೆಳೆಸಿದ ಪತ್ರಿಕೆಯನ್ನು ಈ ಸ್ಥಿತಿಯಲ್ಲಿ ನೋಡಿದರೆ ಕಣ್ಣು ತೇವವಾಗುತ್ತವೆ. ಸಂಯುಕ್ತ ಕರ್ನಾಟಕದ ಅವನತಿ ದಿವಾಕರ ರಂಗರಾಯರಿಂದ ತಮ್ಮ ಪುತ್ರ ಅನಂತನನ್ನು ಮುಂದೆ ತರುವ ಪ್ರಯತ್ನದಿಂದ ಆರಂಭವಾಯಿತು. ರಾಮಸ್ವಾಮಿಯವರು ಅದನ್ನು ಉಳಿಸಲು ಶತಪ್ರಯತ್ನ ಮಾಡಿದರು. ಆದರೆ ಅವರ ಪ್ರಯತ್ನ ಫಲ ಕೊಡಲಿಲ್ಲ.

ಅದಿರಲಿ. ತಾವು ಶುದ್ಧ ಉರ್ದುವಿನಲ್ಲಿ ಬೈದಿದ್ದೀರಲ್ಲ ? ಕನ್ನಡದಲ್ಲಿ ಬೈಗಳು ಕಡಿಮೆಯೆ ಅಥವಾ ಪ್ರಭಾವಿಯಾಗಿಲ್ಲವೆ ? "ಬೆಫಿಕ್ರ" ಆಗಬೇಕಾಗಿದ್ದು "ಬೆಫಿಕೀರ್" ಆಗಿದೆ !

sunaath said...

ಸಂಯುಕ್ತ ಕರ್ನಾಟಕವನ್ನು ಕಟ್ಟಿ,ಬೆಳೆಸಿದ ಮೊಹರೆ ಹಣಮಂತರಾಯರನ್ನು ಹಾಗು ಹ.ರಾ.ಪುರೋಹಿತರನ್ನು ತಂಪು ಹೊತ್ತಿನಲ್ಲಿ ನೆನಸಬೇಕು. ನೀವು ಬೊಟ್ಟು ಮಾಡಿ ತೋರಿಸಿದ್ದು ಸರಿಯಾಗಿದೆ. ರಂಗನಾಥ ದಿವಾಕರರ ‘ಅನಂತ’ ತಪ್ಪುಗಳು
ಸಂಯುಕ್ತ ಕರ್ನಾಟಕದ ಅವನತಿಗೆ ಕಾರಣವಾದವು. ತನ್ನಂತರ ಧರ್ಮದರ್ಶಿಗಳ ಕೈಯಲ್ಲಿ ಸಿಲುಕಿದ ಪತ್ರಿಕೆಯು ಅವರ ಪ್ರಚಾರಕ್ಕೆ ಮೀಸಲಾದ ಹ್ಯಾಂಡ್ ಬಿಲ್ ಆದಂತಾಯಿತು.
ಈ ಪತ್ರಿಕೆಯನ್ನು ಉರ್ದುವಿನಲ್ಲಿ ಬೈಯಲು ಕಾರಣವೆಂದರೆ, ಪರಭಾಷೆಯಲ್ಲಿ ಬೈದಾಗ, ಪೆಟ್ಟು ಕಡಿಮೆ ಹತ್ತುತ್ತದೆ ಎನ್ನುವದಕ್ಕಾಗಿ! ಬೇಫಿಕೀರ್ ಅನ್ನುವ ತಪ್ಪು ಪ್ರಯೋಗವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಸರಿ ಪಡಿಸುತ್ತಿದ್ದೇನೆ.

Shashi Dodderi said...

great post

ಶ್ರೀನಿವಾಸ ಮ. ಕಟ್ಟಿ said...

ಸಂಯುಕ್ತ ಕರ್ನಾಟಕದ ಸಂಪಾದಕೀಯ ಸಿಬ್ಬಂದಿಗೆ ಯಾವ ಭಾಷೆಯಲ್ಲಿ ಬರೆದರೂ ಪೆಟ್ಟು ಹತ್ತುವದೇ ಇಲ್ಲ ! ಕಾರಣ, ಸಂಯುಕ್ತ ಕರ್ನಾಟಕ ಸುಧಾರಿಸುವದೇ ಇಲ್ಲ ! ನಿಮ್ಮ ಪ್ರಯತ್ನ ಬಂಡೆಗಲ್ಲಿನ ಮೇಲೇ ಮಳೆ ಸುರಿದಂತೆ ! ಇದರ ಪರಿಹಾರಕ್ಕೆ ನಾನು ಏನು ಮಾಡಿದೆ ಗೊತ್ತೆ ? ಸಂಯುಕ್ತ ಕರ್ನಾಟಕ ಓದುವದನ್ನು ನಿಲ್ಲಿಸಿ ಬಿಟ್ಟೆ.

Ittigecement said...

ಸುನಾಥ ಸರ್...

ಬ್ಲಾಗುಗಳಲ್ಲಿ ಕನ್ನಡ ಸರಿಯಾಗಿರುವದಿಲ್ಲ ಅಂತ ಹೇಳುವ ಪತ್ರಿಕೆಗಳೇ ಹೀಗೆ ಮಾಡಿದರೆ ಹೇಗೆ?

ನಾವು ಮತನಾಡುವ, ಓದುವ ನಮ್ಮ ಭಾಷೆ ಶುದ್ಧವಾಗಿರಬೇಕೆನ್ನುವದು ನಮ್ಮ ಆಶಯ..

ಇಂಥಹ ತಪ್ಪುಗಳು ಅಕ್ಷಮ್ಯ ಅಪರಾಧ..

ಇದಕ್ಕೆ ಕೊನೆ ಎಲ್ಲಿ?

sunaath said...

nostalgia,
ಧನ್ಯವಾದಗಳು.

sunaath said...

ಕಟ್ಟಿಯವರೆ,
(೧)ಮರಳಿ ಯತ್ನವ ಮಾಡು.
(೨)ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ!

sunaath said...

ಪ್ರಕಾಶ,
ನಮ್ಮ ಪತ್ರಕರ್ತರು ಕನ್ನಡ, ಸಂಸ್ಕೃತ ಹಾಗು ಇಂಗ್ಲೀಶ ಭಾಷೆಗಳಲ್ಲಿ ಪರಿಣತರಾಗಬೇಕು;ವಿಶ್ವದ ವಿವಿಧ ಜ್ಞಾನಪ್ರಕಾರಗಳಲ್ಲಿ ಸಾಮಾನ್ಯ ಜ್ಞಾನವನ್ನು ಪಡೆದವರಾಗಬೇಕು. ಮುಖ್ಯವಾಗಿ ಉದ್ಯೋಗನಿಷ್ಠೆಯುಳ್ಳವರಾಗಬೇಕು. ಆಗ ಪರಿಸ್ಥಿತಿಯು ಸುಧಾರಿಸೀತು.

shivu.k said...

ಸುನಾಥ್ ಸರ್,

ಸಂಯುಕ್ತ ಕರ್ನಾಟಕ ಪತ್ರಿಕೆಯ ಅದೆಷ್ಟು ತಪ್ಪುಗಳನ್ನು ನೀವು ಹುಡುಕಿಕೊಟ್ಟರೂ ಅವರು ತಿದ್ದಿಕೊಳ್ಳುವುದಿಲ್ಲ. ನಾವು ಬ್ಲಾಗಿಗರು ಮಾಡುವ ತಪ್ಪು ಗೊತ್ತಾಗುವುದು ಕೆಲವರಿಗೆ. ಆದ್ರೆ ಒಂದು ಪತ್ರಿಕೆಯಲ್ಲಿನ ತಪ್ಪು ಲಕ್ಷಾಂತರ ಜನಕ್ಕೆ ತಲುಪುತ್ತೆ. ಇಷ್ಟಾದರೂ ಅವರಿಗೆ ಈ ವಿಚಾರದಲ್ಲಿ ಕಾಳಜಿ ಬೇಡವೇ..

sunaath said...

ಶಿವು,
ಕಣ್ಣು ಮುಚ್ಚಿಕೊಂಡವರಿಗೆ ಏನು ತೋರಿಸಬಹುದು?
ಕಿವಿ ಮುಚ್ಚಿಕೊಂಡವರಿಗೆ ಏನು ಹೇಳಲಾದೀತು?

Badarinath Palavalli said...

Sir,
avasanada anchalliruva patrike!
Eye opener article sir.
I have suggested this article to my all face book friends. Thanks for visiting my blog sir.
My number is 9972570061

sunaath said...

ಬದರಿನಾಥರೆ,
ನಿಮ್ಮ ಪ್ರೀತಿಗೆ ನಾನು ಋಣಿಯಾಗಿದ್ದೇನೆ.

Anonymous said...

ಸುನಾಥರೆ, ಮರಳಿ ಮರಳಿ ಯತ್ನಿಸಿ. ನಿಮಗೆ ಯಶಸ್ಸು ಸಿಗಲಿ. ಉತ್ತರ ಕರ್ನಾಟಕದ ಹಳೆಯ, ಹೆಮ್ಮೆಯ ದಿನಪತ್ರಿಕೆ " ಸಂಯುಕ್ತ ಕರ್ನಾಟಕ" ಮತ್ತೆ ತನ್ನ ಪೂರ್ವ ವೈಭವ ಗಳಿಸಲಿ.

ನನ್ನ ಆಶೆ ‘ಮೃಗಜಲ’ಎಂದು ಗೊತ್ತಿದ್ದೂ ಆಶಿಸುತ್ತಿದ್ದೇನೆ. ನಿಮ್ಮ ಪ್ರಯತ್ನಕ್ಕೆ ಜಯ ದೊರೆಯಲಿ!

sunaath said...

Anonymusರೇ,
ಬಿಸಿಲುಗುದುರೆಯ ಬೆನ್ನು ಹತ್ತು ಎನ್ನುವಿರಾ? ಆಗಲಿ, ನಿಮ್ಮ ಹಾರೈಕೆಗಾಗಿ ಧನ್ಯವಾದಳು.

Kalavatimadhisudan said...

ಸುನಾಥ್ ಸರ್ ರವರೆ ಮಧ್ಯರಾತ್ರಿಯವರೆಗೂ ಪಟ್ಟ ನಿಮ್ಮ ಶ್ರಮದತ್ತ ಗಮನ ಹರಿಸಿ ಸುಧಾರಿಸಲೆಂಬುದು ನಮ್ಮ ಆಶಯ.ನಿಮ್ಮಕಳಕಳಿಗೆ ಧನ್ಯವಾದಗಳು

sunaath said...

ಕಲರವ,
Let us hope for the best!